ಅಂತೂ ಇಂತೂ ಟಿಕೆಟ್‌ಗಳು ಆಗಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ಭಾರವಾದ ಮನಸ್ಸಿನಿಂದ ಭಾರತಕ್ಕೆ ಪಯಣ ಬೆಳೆಸಿದೆವು. ದೇವರು ನೀಡುವ ಈ ಅನಿರೀಕ್ಷಿತ ತಿರುವುಗಳಿಗೆ ಯಾರೂ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಬೆಂಗಳೂರಿಗೆ ನಾವೆಲ್ಲ ಬಂದು ಇಳಿದಾಗ, ನನ್ನ ಮಾವ ತೀರಿಕೊಂಡು ನಾಲ್ಕು ದಿನಗಳು ಆಗಿತ್ತು. ಕೂಡಲೇ ನಾವು ಅತ್ತೆಯನ್ನು ಕಾಣಲು ಶಿರಸಿಗೆ ಹೋಗಬೇಕಿತ್ತು. ಬೆಂಗಳೂರಿನಲ್ಲಿದ್ದ ನನ್ನ ಅಪ್ಪನಿಗೂ ವಿಷಯ ತಿಳಿಸಿದ್ದೆ. ಅವರೂ ಕೂಡ ನಾವು ಬರುವುದನ್ನೇ ಕಾಯುತ್ತಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾರನೆಯ ಬರಹ

ಅವತ್ತು ರವಿವಾರ ಬೆಳಿಗ್ಗೆ ನಾವು ಗೆಳೆಯರೊಬ್ಬರ ಮನೆಯಲ್ಲಿ ಇದ್ದೆವು. ಭಾರತದಿಂದ ಆಶಾಳ ಚಿಕ್ಕಮ್ಮನ ಮಗ ಸಂತೋಷ ನನಗೆ ಫೋನ್ ಮಾಡಿದ್ದ. ಅವನಿಗೆ ಅಲ್ಲಿ ತಡ ರಾತ್ರಿ. ಅಂತಹ ವೇಳೆಯಲ್ಲಿ ಫೋನ್ ಬಂದರೆ ಸ್ವಲ್ಪ ಕಳವಳವೆ. ಉಭಯಕುಶಲೋಪರಿಗಳು ಆದವು. ಅವನ ದನಿಯಲ್ಲಿ ಯಾಕೋ ದುಗುಡ ಇದ್ದಿದ್ದನ್ನು ಗಮನಿಸಿದೆ. ಏನಾಯ್ತು ಎಲ್ಲರೂ ಹೇಗಿದ್ದಾರೆ ಅಂತ ಕೇಳಿದಾಗ, ನಿಮ್ಮ ಮಾವನಿಗೆ ಹುಷಾರಿಲ್ಲ ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ ಹೇಳಿದ. ಆಶಾಳಿಗೆ ನಾನು ಮಾತಾಡುತ್ತಿರುವಾಗಲೆ ವಿಷಯ ಗೊತ್ತಾಗಿ ಅವಳ ಕಣ್ಣಲ್ಲಿ ನೀರು ಜಿನುಗಲು ಶುರುವಾಗಿತ್ತು. ಅವರಿಗೆ 80 ರ ಇಳಿ ವಯಸ್ಸು. ಈಗಾಗಲೇ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ಆಗಿತ್ತಾದರೂ ತಮ್ಮಷ್ಟಕ್ಕೆ ತಾವು ಅಡ್ಡಾಡಿಕೊಂಡು ಊರಲ್ಲಿ ತಕ್ಕಮಟ್ಟಿಗೆ ಆರಾಮಾಗೆ ಇದ್ದರು. ಈಗ ಧಿಡೀರ್‌ ಅಂತ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎಂಬ ಸುದ್ದಿ ತಿಳಿದು ಸ್ವಲ್ಪ ಆತಂಕ ಆಯ್ತು. ಏನಾದರೂ ಹೆಚ್ಚು ಕಡಿಮೆ ಆದರೆ ಅಂತ ಯೋಚನೆ ಬಂತು. ಅಮೆರಿಕೆಗೆ ಬಂದು ಬರಿ ಎಂಟು ತಿಂಗಳು ಆಗಿತ್ತು. ಮಾವನಿಗೆ ಹುಷಾರಿಲ್ಲ ಅಂತ ಒಂದೆರಡು ದಿವಸ ಹೋಗಿ ಬರಲು ಅದೇನು ಹತ್ತಿರದ ಊರೇ? ಕನಿಷ್ಟ ನಲವತ್ತು ಗಂಟೆಗಳ ಪಯಣ. ವಿದೇಶದಲ್ಲಿ ಆಪ್ತೆಷ್ಟರಿಂದ ದೂರ ಇರುವ ಬಗ್ಗೆ ಮೊದಲೇ ಒಂದು ರೀತಿಯ ಅಸಮಾಧಾನದಲ್ಲಿದ್ದ ನನಗೆ ಇದೊಂದು ತರಹದ ಅಸಹಾಯ ಸ್ಥಿತಿ ಅನಿಸಿತು. ನನ್ನ ಮಾವನಿಗೆ ಮಗಳ ಮೇಲೆ ತುಂಬಾ ಪ್ರೀತಿ. ಇಂತಹ ಸ್ಥಿತಿಯಲ್ಲಿ ಅವರ ಜೊತೆಗೆ ಅವಳು ಇದ್ದರೆ ಒಳ್ಳೆಯದು ಅನಿಸಿತು. ಆಶಾ ಒಬ್ಬಳನ್ನೇ ಭಾರತಕ್ಕೆ ಕಳಿಸುವ ಧೈರ್ಯ ನನಗೆ ಇರಲಿಲ್ಲ. ನಾವು ಭಾರತಕ್ಕೆ ಬಂದುಬಿಡುತ್ತೇವೆ ಅಂದೆ.

“ಬೇಡ ಸಧ್ಯಕ್ಕೆ ಅಂತಹ ಸೀರಿಯಸ್ ಏನೂ ಇಲ್ಲ. ಪರಿಸ್ಥಿತಿ ಸುಧಾರಿಸಬಹುದು, ನಾನು ಪ್ರತಿ ದಿನ ನಿಮಗೆ ಅವರ ಪ್ರಕೃತಿಯ ಬಗ್ಗೆ ತಿಳಿಸುತ್ತೇನೆ” ಅಂತ ಅವನು ಹೇಳಿದಾಗ ಸ್ವಲ್ಪ ಸಮಾಧಾನ ಆಯ್ತು. ಆದರೂ ಒಂದು ಅಳುಕು ಇತ್ತು.

ನನ್ನ ಅಪ್ಪನೂ ಬೆಂಗಳೂರಿನಲ್ಲೇ ಇದ್ದರು. ಅವರೂ ಕೂಡ ಹೆಚ್ಚು ಕಡಿಮೆ ನನ್ನ ಮಾವನ ವಾರಿಗೆಯವರು. ಅವರಿಗೂ ಹೀಗೆಲ್ಲಾ ಆಗಿಬಿಟ್ಟರೆ ಏನು ಗತಿ ಅನಿಸಿತು. ಮತ್ತೆ ವಾಪಸ್ಸು ಹೋಗಿಬಿಡೋಣ ಎಂಬ ಗೊಣಗಾಟ ಶುರು ಮಾಡಿದೆ. ನೀನು ಯಾವಾಗ ಹೋಗೋಣ ಅಂತ ಹೇಳು, ಅವತ್ತೇ pack ಮಾಡುತ್ತೇನೆ ಅಂತ ಆಶಾ ಅಂದಳು. ಹಾಗಂತ ನಾವು ಅಂದುಕೊಂಡ ತಕ್ಷಣ ಪ್ರಾಜೆಕ್ಟ್ ಅರ್ಧಕ್ಕೆ ಬಿಟ್ಟು ಹೋಗಲು ಹೇಗೆ ಸಾಧ್ಯ? ಒಟ್ಟಿನಲ್ಲಿ ಬಾಯಲ್ಲಿಯ ಬಿಸಿ ತುಪ್ಪದ ಪರಿಸ್ಥಿತಿ ಅದು!

ಹೀಗೆ ಒಂದೆರಡು ದಿನ ಕಳೆದ ಮೇಲೆ, ಮಾವ ಅವರ ಪರಿಸ್ಥಿತಿ ಸುಧಾರಿಸಿದೆ ಅಂತ ಗೊತ್ತಾಗಿ ಸ್ವಲ್ಪ ಸಮಾಧಾನ ಆಯ್ತು. ಇವತ್ತು ಸ್ವಲ್ಪ ಗಂಜಿಯನ್ನು ಕುಡಿದರು ಅಂತಲೂ ಅವನು ಹೇಳಿದಾಗ ಇನ್ನೂ ಖುಷಿಯಾಯಿತು. ಇನ್ನೆರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಅಂತ ಸಂತೋಷ ತಿಳಿಸಿದ. ಇದಾಗಿ ಒಂದೆರಡು ದಿನಗಳು ಕಳೆದಿತ್ತು. ಅವತ್ತು ಶನಿವಾರ ಬೆಳಿಗ್ಗೆ ಮತ್ತೆ ಸಂತೋಷನ ಫೋನ್ ಬಂತು.

“ಬಾವಾ, ಇವತ್ತು ನಿಮ್ಮ ಮಾವ ಹೋಗಿ ಬಿಟ್ಟರು” ಅಂದುಬಿಟ್ಟ. ನಮಗೆ ದೊಡ್ಡ ಆಘಾತ ಅದು. ಮೊನ್ನೆ ತಾನೇ ಹುಷಾರಾಗಿದ್ದರು ಎಂಬ ಸುದ್ದಿ ಕೇಳಿ ನಿರಂಬಳವಾಗಿದ್ದ ನಮಗೆ ಈ ಒಂದು ಸುದ್ದಿಯನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಅವರಿಗೆ ವಯಸ್ಸಾಗಿತ್ತು, ತುಂಬು ಜೀವನವನ್ನು ಅನುಭವಿಸಿದ್ದರು ಎಲ್ಲ ಸರಿ ಆದರೆ, ಅವರು ಸಾವಿನ ಹೊಸ್ತಿಲಲ್ಲಿ ಇರುವಾಗ ಮಗಳು ಅವರ ಬಳಿ ಇರಲೇ ಇಲ್ಲವಲ್ಲ! ಕೂಡಲೇ ಅಲ್ಲಿಗೆ ಹೋಗಿ ಅವರ ಅಂತಿಮ ದರ್ಶನ ಮಾಡಲಾಗದ ನಮ್ಮ ಅಸಹಾಯಕ ಪರಿಸ್ಥಿತಿ ಇತ್ತಲ್ಲ, ಅದು ಯಾವ ಶತ್ರುವಿಗೂ ಬರಬಾರದು.

ನಾವು ಕೂಡಲೇ ಭಾರತಕ್ಕೆ ಹೋಗಲು ತಯಾರಿ ಶುರು ಮಾಡಿದೆವು. ನಾನು ನನ್ನ ಬಾಸ್‌ಗೆ ಫೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸಿ ನನಗೆ ಮೂರು ವಾರಗಳ ರಜೆ ಮಂಜೂರು ಮಾಡಿಕೊಂಡೆ. ನಾವು ಎಷ್ಟೇ ಪ್ರಯತ್ನ ಪಟ್ಟರೂ ಎರಡು ದಿವಸಗಳಿಗೂ ಮುಂಚೆ ಹೋಗುವುದು ಸಾಧ್ಯವೇ ಇರಲಿಲ್ಲ. ನಮಗಾಗಿ ಕಾಯದೆ ಅಂತಿಮ ಸಂಸ್ಕಾರವನ್ನು ಮುಗಿಸಲು ತಿಳಿಸಿದೆವು. ಆಶಾಳಿಗೆ ಯಾವ ರೀತಿ ಸಮಾಧಾನ ಹೇಳಬೇಕು ಅಂತ ಗೊತ್ತಾಗದೆ ಒದ್ದಾಡಿದ್ದೆ. ಕೂಡಲೇ ಬೇಗನೆ ಲಭ್ಯ ಇರುವ flight ಗೆ ಮೂರು ಟಿಕೆಟ್ book ಮಾಡಲು ಒಬ್ಬ ಏಜೆಂಟ್‌ಗೆ ತಿಳಿಸಿದೆ. ಅಲ್ಲಿಗೆ ನಾವು ಹೋದರೂ ಮಾವನ ಮುಖ ನೋಡಲು ಸಾಧ್ಯವಿರಲಿಲ್ಲವಾದರೂ ಇಂತಹ ಸಮಯದಲ್ಲಿ ಆಶಾ ತನ್ನ ಅಮ್ಮನ ಜೊತೆಗಾದರೂ ಇದ್ದರೆ ಅವರಿಗೂ ಒಂದಿಷ್ಟು ಸಮಾಧಾನ ಆದೀತು ಅಂತ ಯೋಚಿಸಿದ್ದೆವು. ಜೊತೆಗೆ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದೆವು. ಅಲ್ಲಿನ ಕೆಲವು NRI ಗಳ ಮನೆಗಳಲ್ಲಿ ಬೆಂಕಿ ಅವಗಢಗಳು ಆಗಿ ಇದ್ದ ಬದ್ದ ದಾಖಲೆಗಳು ಸುಟ್ಟು ಭಸ್ಮ ಆದ ಕತೆಗಳನ್ನು ಸಾಕಷ್ಟು ಕೇಳಿದ್ದೆವು. ಹೀಗಾಗಿ ನಮ್ಮ ಬಹು ಮುಖ್ಯ ದಾಖಲೆಗಳನ್ನೆಲ್ಲ ಅಲ್ಲಿನ ಒಂದು ಬ್ಯಾಂಕ್‌ನ ಲಾಕರ್‌ನಲ್ಲಿ ಈಗಾಗಲೇ ಸುರಕ್ಷಿತವಾಗಿ ಇಟ್ಟಿದ್ದೆವು. ಅವುಗಳಲ್ಲಿ ನಮ್ಮೆಲ್ಲರ passport ಗಳು ಕೂಡ ಇದ್ದವು. ಇನ್ನೆರಡು ದಿನಗಳು ಬ್ಯಾಂಕ್ ರಜೆ ಇತ್ತಾದ್ದರಿಂದ ಅದು ಸಿಗುವವರೆಗೂ ಕಾಯಲೇ ಬೇಕಿತ್ತು. ಅದು ಊರಿಗೆ ಹೋಗಲು ನಮಗೆ ಇನ್ನಷ್ಟು ತಡ ಆಗುವಂತೆ ಮಾಡಿತು.

ಅಂತೂ ಇಂತೂ ಟಿಕೆಟ್‌ಗಳು ಆಗಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ಭಾರವಾದ ಮನಸ್ಸಿನಿಂದ ಭಾರತಕ್ಕೆ ಪಯಣ ಬೆಳೆಸಿದೆವು. ದೇವರು ನೀಡುವ ಈ ಅನಿರೀಕ್ಷಿತ ತಿರುವುಗಳಿಗೆ ಯಾರೂ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಬೆಂಗಳೂರಿಗೆ ನಾವೆಲ್ಲ ಬಂದು ಇಳಿದಾಗ, ನನ್ನ ಮಾವ ತೀರಿಕೊಂಡು ನಾಲ್ಕು ದಿನಗಳು ಆಗಿತ್ತು. ಕೂಡಲೇ ನಾವು ಅತ್ತೆಯನ್ನು ಕಾಣಲು ಶಿರಸಿಗೆ ಹೋಗಬೇಕಿತ್ತು. ಬೆಂಗಳೂರಿನಲ್ಲಿದ್ದ ನನ್ನ ಅಪ್ಪನಿಗೂ ವಿಷಯ ತಿಳಿಸಿದ್ದೆ. ಅವರೂ ಕೂಡ ನಾವು ಬರುವುದನ್ನೇ ಕಾಯುತ್ತಿದ್ದರು. ಎಂಟು ತಿಂಗಳ ಬಳಿಕ ಬಂದಿದ್ದೆನಾದ್ದರಿಂದ ಅಲ್ಲಿ ಇರುವಷ್ಟು ದಿನ ನನ್ನ ಅಪ್ಪನ ಜೊತೆಗೂ ಸಮಯ ಕಳೆಯಬೇಕಿತ್ತು. ಹೀಗಾಗಿ ಅಪ್ಪನನ್ನೂ ನಮ್ಮ ಜೊತೆಗೆ ಕರೆದುಕೊಂಡೆ ಶಿರಸಿಗೆ ಹೊರಟುಬಿಟ್ಟೆ.

ಮಗಳನ್ನು ಕಂಡು ಅತ್ತೆಗೆ ಸ್ವಲ್ಪ ಸಮಾಧಾನವಾಯ್ತು. ಒಂದಿಷ್ಟು ದಿನಗಳು ಅಲ್ಲಿಯೇ ಇದ್ದುಕೊಂಡು ಕೆಲವು ಮರಣ ನಂತರದ ಕರ್ಮಗಳನ್ನು ಮುಗಿಸಿದೆವು. ಅಪ್ಪನಿಗೂ ವಯಸ್ಸಾಗಿದ್ದರಿಂದ ಅವರನ್ನು ಹತ್ತಿರದಲ್ಲಿಯೇ ಇರುವ ಆಶಾಳ ಮತ್ತೊಬ್ಬ ಚಿಕ್ಕಮ್ಮನ ಮಗ ಶೇಖರ ಅವರ Pragati Homestay ನಲ್ಲಿ ಇರಿಸಿದ್ದೆ. ಅಲ್ಲಿ ಅವರಿಗೆ ಹಳ್ಳಿಯ ಮನೆಗಿಂತಲೂ ಹೆಚ್ಚು ಅನುಕೂಲಕರ ಸೌಲಭ್ಯಗಳು ಇದ್ದವು. ನಾನೂ ಅಲ್ಲಿಗೆ ಹೋಗಿ ಬಂದು ಮಾಡುತ್ತಾ ಅಪ್ಪನ ಜೊತೆಗೂ ಆದಷ್ಟು ಸಮಯ ಕಳೆಯುತ್ತಿದ್ದೆ. ಅಪ್ಪ ತುಂಬಾ ದಿನಗಳ ನಂತರ ನಮ್ಮನ್ನು ಕಂಡು ತುಂಬಾ ಗೆಲುವಾಗಿದ್ದರು. ನಾನು ಕೆಲವೇ ದಿನಗಳಿಗೆ ಬಂದಿರುವೆ ಅಂತ ಅವರಿಗೆ ಗೊತ್ತಿತ್ತು. ವಾಪಸ್ಸು ಬೆಂಗಳೂರಿಗೆ ಬಂದು ಅಲ್ಲಿಯೂ ಒಂದಿಷ್ಟು ದಿನಗಳು ಕಳೆದು ಅಮೆರಿಕೆಗೆ ಮರಳಿದೆವು. ಈಗ ನನ್ನ ಮನಸ್ಸು ಭಾರವಾಗಿತ್ತು. ನನ್ನ ಅಪ್ಪನೂ ಹೀಗೆ ಒಂದು ದಿನ ಹೋಗಿಬಿಟ್ಟರೆ? ನನಗೂ ಅವನನ್ನು ಕೊನೆಯ ಕ್ಷಣದಲ್ಲಿ ನೋಡಲು ಸಾಧ್ಯವಾಗದಿದ್ದರೆ ಎಂಬಂತಹ ಕೆಟ್ಟ ಯೋಚನೆಗಳೇ ತಲೆಯಲ್ಲಿ ಗಿರಕಿ ಹೊಡೆದವು. ಆದಷ್ಟು ಬೇಗ ವಾಪಸ್ಸು ಬರಲೇಬೇಕು ಅಂತ ಮತ್ತೆ ಅಂದುಕೊಂಡೆ!

ಮಾವನವರ ಸಾವು ಬಹಳ ದಿನಗಳವರೆಗೂ ಕಾಡಿತು. ಅಲ್ಲಿದ್ದ ಹಲವರಿಗೆ ಈ ವಿಷಯ ತಿಳಿದು ತುಂಬಾ ಬೇಜಾರು ಪಟ್ಟುಕೊಂಡರು. ಹಾಗೆ ಮಾತಾಡುವಾಗ ಕೆಲವು ವಿಷಯಗಳು ತಿಳಿದು ದಂಗಾಗಿ ಹೋದೆ. ಒಬ್ಬ NRI ಹೇಳುತ್ತಿದ್ದ. ಭಾರತದಲ್ಲಿದ್ದ ಅವರ ಅಪ್ಪ ತೀರಿಕೊಂಡರಂತೆ ಇವನು ಅವರ ಅಣ್ಣನಿಗೆ “ಬರಬೇಕಾ?” ಅಂತ ಕೇಳಿದನಂತೆ. ಅಣ್ಣ “ಸುಮ್ಮನೆ ಯಾಕೆ ಬರುತ್ತೀಯ ಬಿಡು. ಅಲ್ಲಿಗೆ ಹೋಗಿ ಬರಿ ಆರು ತಿಂಗಳು ಆಗಿದೆ ಅಂದನಂತೆ” ಇವನು “ಆಯ್ತು ಅಣ್ಣ” ಅಂತ ಅವನ ಆಜ್ಞೆಯನ್ನು ಪಾಲಿಸಿದನಂತೆ!

ಇನ್ನೊಬ್ಬರು ಹೇಳ್ತಾ ಇದ್ರು. ಅವರ ಅಮ್ಮನಿಗೆ ತುಂಬಾ ಸೀರಿಯಸ್ ಆಗಿತ್ತಂತೆ. Flight charges ಆಗ ತುಂಬಾ ಜಾಸ್ತಿ ಇತ್ತು ಅಂತ ಇವರು ಹೋಗೋಕೆ ಆಗಲಿಲ್ಲವಂತೆ. ಮುಂದೆ ಸ್ವಲ್ಪ ದಿವಸಗಳಲ್ಲಿ ತೀರಿಕೊಂಡರಂತೆ. ಅರೆ ಡಾಲರ್ ಮುಂದೆ ಸಂಬಂಧಗಳು ಗೌಣ ಆಗಿಬಿಡುತ್ತವೆಯೇ? ಅಮೆರಿಕಾ ನಮ್ಮನ್ನು ಅಷ್ಟು ಆಳಲು ಶುರು ಮಾಡಿದೆಯೇ? ಅಲ್ಲಿಗೆ ಹೋದ ಎಲ್ಲರೂ ಹಾಗೆ ಯೋಚಿಸಿರಲಿಕ್ಕಿಲ್ಲ ಆದರೂ..!

ಭಾರತದಿಂದ ಮರಳಿ ಬಂದ ಮೇಲೆ ಅಪ್ಪ ನನಗೆ ಇನ್ನೂ ಜಾಸ್ತಿ ಮಿಸ್ ಆಗತೊಡಗಿದರು. ಅಪ್ಪನನ್ನು ಅಮೆರಿಕೆಗೆ ಕರೆದುಕೊಂಡು ಬಂದುಬಿಡಲೆ ಎಂಬ ಯೋಚನೆಯನ್ನೂ ಮಾಡಿ ಅವರಿಗೆ ಪಾಸ್ಪೋರ್ಟ್ ಕೂಡ ಮಾಡಿಸಿದ್ದೆ. ಆದರೂ ಈ ಇಳಿ ವಯಸ್ಸಿನಲ್ಲಿ ಅವರನ್ನು, ಇಂತಹ ಅತಿರೇಕದ ಚಳಿಯ ಪ್ರದೇಶಕ್ಕೆ ಕರೆದುಕೊಂಡು ಬರುವುದು ತುಂಬಾ ಅಪಾಯಕಾರಿ ಅನಿಸಿತು. ಅದಕ್ಕಿಂತ ಇನ್ನೊಂದು ವರ್ಷದ ಒಳಗೆ ಮರಳಿ ಹೋದರಾಯ್ತು ಅಂತ ಸಮಾಧಾನ ಪಟ್ಟುಕೊಂಡೆ. ಆಗಲೇ ನನಗೆ ಅಪ್ಪಂದಿರ ಬಗ್ಗೆ ಒಂದು ಪುಸ್ತಕ ಯಾಕೆ ಮಾಡಬಾರದು ಎಂಬ ಯೋಚನೆ ಬಂತು. ವಿಶೇಷವಾಗಿ ಅಮೆರಿಕೆಯಲ್ಲಿ ಇರುವವರ ಹತ್ತಿರ ಅವರ ಅಪ್ಪಂದಿರ ಬಗ್ಗೆ ಬರೆಸಿ, ಆ ಲೇಖನಗಳ ಸಂಕಲವನ್ನು ಒಂದು ಪುಸ್ತಕ ರೂಪದಲ್ಲಿ ಪ್ರಕಟ ಮಾಡಬೇಕು ಎಂಬ ಯೋಜನೆಯೊಂದಿಗೆ ಶಂಕರ್ ಅಜ್ಜಂಪುರ ಸರ್ ಅವರ ಸಹಕಾರದೊಂದಿಗೆ ಅದಕ್ಕೊಂದು ರೂಪ ಕೊಡುವ ಪ್ರಯತ್ನ ಶುರು ಮಾಡಿದೆ. ಅಲ್ಲಿನ ಕೆಲವು ಸ್ನೇಹಿತರು ತುಂಬಾ ಖುಷಿಯಿಂದ ತಾವು ಬರೆದುಕೊಡುವುದಾಗಿ ಹೇಳಿದರು. ಕೆಲವರು ಆಂಗ್ಲ ಭಾಷೆಯಲ್ಲಿಯೇ ಬರೆಯಲು ಸಾಧ್ಯ ಅಂತ ಹೇಳಿದಾಗ ಅದನ್ನು ಅಜ್ಜಂಪುರ ಸರ್ ಅಚ್ಚುಕಟ್ಟಾಗಿ ಕನ್ನಡಕ್ಕೆ ಭಾವಾಂತರ ಕೂಡ ಮಾಡಿ ಕೊಟ್ಟರು. ಅದಕ್ಕೆ “ಎಲ್ಲರಂತವನಲ್ಲ ನನ್ನಪ್ಪ“ ಎಂಬ ಹೆಸರೂ ಇಟ್ಟಾಯಿತು.

ಭಾರತದಲ್ಲಿದ್ದ ಕೆಲವು ಸ್ನೇಹಿತರ ಬಳಿ ಕೂಡ ಲೇಖನ ಬರೆದುಕೊಡಿ ಅಂತ ಕೇಳಿಕೊಂಡೆ. ಕೆಲವರು ತಮ್ಮ ಅಪ್ಪನ ಬಗ್ಗೆ ಕವನವನ್ನೂ ಬರೆದರು. ಮುಂದೆ ಕೆಲವು ದಿನಗಳಲ್ಲಿ 35 ಜನರು ಬರೆದ ಅದ್ಭುತ ಬರಹಗಳು ಹಾಗೂ ಪದ್ಯಗಳು ತಯಾರಾಗಿ “ಅಪ್ಪ ಪುಸ್ತಕ” ಪ್ರಕಟಣೆಗೆ ಕಾಯುತ್ತಿತ್ತು. ಪುಸ್ತಕವನ್ನು ಬೆಂಗಳೂರಿನಲ್ಲಿ ನನ್ನ ಅಪ್ಪನ ಕೈಯಲ್ಲಿಯೇ ಬಿಡುಗಡೆ ಮಾಡಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಹೀಗಾಗಿ ಅದಕ್ಕೆ ಸಧ್ಯಕ್ಕೆ ಇನ್ನೂ ಕಾಲ ಕೂಡಿ ಬಂದಿರಲಿಲ್ಲ!

ಕೆಲವು ದಿನಗಳು ಕಳೆದು ಅಲ್ಲಿನ ಚಳಿ ಸ್ವಲ್ಪ ಕಡಿಮೆಯಾಗತೊಡಗಿತ್ತು. ಪೂರ್ತಿ ಬೇಸಿಗೆ ಇನ್ನೂ ಶುರು ಆಗಿರಲಿಲ್ಲ. ಅವತ್ತು ಚಂದ್ರು ಫೋನ್ ಮಾಡಿದ್ದ. “ಮತ್ತೇನ ಲಾ, ಸಮಾಚಾರ? Florida ಕ್ಕ ಬರ್ತಿ ಏನು” ಅಂದ. ಅವನು ಪ್ರತಿ ವರ್ಷವೂ ಎಲ್ಲೋ ಒಂದು ಕಡೆ ಕುಟುಂಬ ಸಮೇತ ಪ್ರವಾಸಕ್ಕೆ ಹೋಗುತ್ತಿರುವ ವಿಷಯ ನನಗೆ ಗೊತ್ತಿತ್ತು. ನಾನು ಬರಲಿಕ್ಕಿಲ್ಲ ಅಂತ ಅಂದುಕೊಂಡೆ ಕೇಳಿದ್ದನೋ ಏನೋ. ಯಾಕೆಂದರೆ ಹೊಸದಾಗಿ ಅಲ್ಲಿಗೆ ಹೋದ ಬಹುತೇಕ ಭಾರತೀಯರು ಅಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಅಡ್ಡಾಟ ಮಾಡಲು ಹಿಂದೇಟು ಹಾಕುತ್ತಾರಂತೆ. ಅಷ್ಟೇ ದುಡ್ಡಿನಲ್ಲಿ ಇಂಡಿಯಾಕ್ಕೆ ಹೋಗಬಹುದು ಎಂತಲೋ, ಒಂದಿಷ್ಟು ಸಾಲ ತೀರಿಸಬಹುದು ಎಂಬಂತಹ ಲೆಕ್ಕಾಚಾರಗಳು, ಅವರು ಹಾಗೆ ಅಡ್ಡಾಟ ಮಾಡಲು ತಡೆ ಒಡ್ಡುತ್ತವೆ. ಆದರೆ ನಾವು ಅಲ್ಲಿಗೆ ಹೋಗಿದ್ದೆ ತಿರುಗಾಡಲು!

“ಏ ಬರತೀವ್ ಲೇ ದೋಸ್ತ. ನಿಮ್ಮ ಫ್ಲೊರಿಡ ಹೆಂಗ ಐತಿ ನೋಡೇ ಬಿಡೋಣ” ಅಂದೆ..

(ಮುಂದುವರಿಯುವುದು…)

(ಹಿಂದಿನ ಕಂತು: ದಿಗಂಬರ ಸತ್ಯ!)