ಬದುಕೆಂದರೆ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಸುಲಭವಾಗಿ ಸಾಗುವ ಸರಳರೇಖೆಯಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದುಕಿನಲ್ಲಿ ಸಂತಸದ ಕ್ಷಣ ಬರುತ್ತದೆ. ಅತ್ಯಂತ ದುಃಖದ ಗಳಿಗೆಯೂ ಬರುತ್ತದೆ. ಅತ್ಯುತ್ಕರ್ಷದ ಬೆನ್ನಿಗೇ ಮಹಾಪತನವೂ ಸಂಭವಿಸುತ್ತದೆ. ಬದುಕಿನಲ್ಲಿ ಏರಿಳಿತ ಎನ್ನುವುದು ಅತ್ಯಂತ ಸಹಜವಾದ ವಿದ್ಯಮಾನ. ಇಂತಹ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವುದು ಪ್ರಾಥಮಿಕ ಶಾಲೆಯಲ್ಲಿ ಕುಳಿತು ಕಲಿತ ಸರಳ ಗಣಿತ. ಸಂತಸದ ಕ್ಷಣ ಎದುರಾದಾಗ ಅದನ್ನು ಇನ್ನೊಂದು ಸಂತಸದ ಕ್ಷಣದ ಜೊತೆಗೆ ಕೂಡಿಸಬೇಕು.
ಬದುಕಿನ ಲೆಕ್ಕಾಚಾರದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

ನಾನಾಗ ಪದವಿ ಓದುತ್ತಿದ್ದೆ. ತರಗತಿಯಲ್ಲಿದ್ದ ಉಪನ್ಯಾಸಕರು ಸ್ವಲ್ಪ ತಮಾಷೆಯ ಸ್ವಭಾವದವರು. ವಿದ್ಯಾರ್ಥಿಗಳೆಲ್ಲರಿಗೂ ಅವರೆಂದರೆ ಅಚ್ಚುಮೆಚ್ಚು. ಜೀವನ ಎಂದರೇನೆಂದು ವಿವರಿಸಿಹೊರಟ ಅವರು ಹೇಳಿದ್ದಿಷ್ಟೇ- “ಲೈಫ್ ಈಸ್ ಲೈಕ್ ಎ ಪಿ.ವಿ.ಸಿ. ಪೈಪ್” ತರಗತಿ ತುಂಬ ಜೋರಾದ ನಗುವಿನ ಸದ್ದು. ಹೆಂಡ ಕುಡಿದ ಕಪಿಗಳಂತಿದ್ದ ನಾವೆಲ್ಲಾ ಅವರು ಮುಂದೇನು ಹೇಳುತ್ತಾರೆ ಎನ್ನುವುದನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧರಾದೆವು. ನಮ್ಮ ನಗುವಿಗೆ ಜೊತೆಯಾಗುತ್ತಲೇ ಆ ಉಪನ್ಯಾಸಕರು ತಾವು ಹಾಗೇಕೆ ಹೇಳಿದ್ದು ಎನ್ನುವುದನ್ನು ವಿವರಿಸಲಾರಂಭಿಸಿದರು- “ನೋಡಿ ಪಿ.ವಿ.ಸಿ. ಪೈಪ್‌ನಲ್ಲಿ ನೀವು ಒಳ್ಳೆಯ ನೀರನ್ನೂ ಹರಿಸಬಹುದು. ಗಲೀಜು ನೀರನ್ನೂ ಹರಿಸಬಹುದು. ಒಳ್ಳೆಯ ನೀರು ಹರಿಸಿದರೆ ಪೈಪ್ ಸ್ವಚ್ಛವಾಗಿರುತ್ತದೆ. ಗಲೀಜು ನೀರು ಹರಿಸಿದ ಪೈಪ್ ಗಲೀಜಾಗಿಹೋಗಿರುತ್ತದೆ” ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಂಡರೆ ಬದುಕು ಚೆನ್ನಾಗಿರುತ್ತದೆ ಎನ್ನುವುದನ್ನು ಉಪನ್ಯಾಸಕರು ಕೆಲವೇ ಕೆಲವು ಮಾತುಗಳಲ್ಲಿ ತಿಳಿಸಿಕೊಟ್ಟಿದ್ದರು.

ನಮ್ಮ ಬದುಕಿನಲ್ಲಿ ನಮ್ಮನ್ನು ಅತ್ಯಂತ ಹೆಚ್ಚು ಕಾಡುವ ಸಂಗತಿ ಎಂದರೆ ನಮ್ಮ ಬದುಕೇ. ಬದುಕನ್ನು ಉತ್ತಮಪಡಿಸಿಕೊಳ್ಳುವತ್ತ ಮನುಷ್ಯರು ಯಾವಾಗಲೂ ದೃಷ್ಟಿ ನೆಟ್ಟಿರುತ್ತಾರೆ. ಬದುಕೆಂದರೇನು? ಎನ್ನುವುದನ್ನು ತಿಳಿಸುವ ಹಲವು ವ್ಯಾಖ್ಯಾನಗಳಿವೆ. ಬದುಕನ್ನು ತೀರಾ ಸಾಮಾನ್ಯ ರೀತಿಯಲ್ಲಿ, ಅತಿ ಸರಳವಾಗಿ ಕಾಣುವ ಪ್ರಯತ್ನ ಝೆನ್ ಸಿದ್ಧಾಂತದಲ್ಲಿ ಕಂಡುಬರುತ್ತದೆ. ಬದುಕಿನಲ್ಲಿ ಬಂದದ್ದೆಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಮೂಲಕ ಬದುಕನ್ನು ಸುಂದರಗೊಳಿಸುವ ಆಶಯವನ್ನು ‘ಸಿದ್ಧ ಸಮಾಧಿ ಯೋಗ’ ಪದ್ಧತಿ ಒಳಗೊಂಡಿದೆ. ಬಿಂದಾಸ್ ಆಗಿರುವ ವ್ಯಕ್ತಿಯೊಬ್ಬನಲ್ಲಿ ಬದುಕಿನ ಬಗ್ಗೆ ವಿಚಾರಿಸಿದರೆ ಇಷ್ಟ ಬಂದಂತೆ ಇರುವುದೇ ಬದುಕು ಎಂಬ ಉತ್ತರ ದೊರೆಯಬಹುದು. ಅದೇ ತಲೆ ಹಣ್ಣಾದ ಅಜ್ಜಿಯೊಬ್ಬಳಲ್ಲಿ ಕೇಳಿದರೆ ಬದುಕೆಂದರೆ ಏನಿಲ್ಲ ಎಂದು ಕೈಚೆಲ್ಲುವ ಮನಃಸ್ಥಿತಿಯನ್ನು ಅರಿಯಬಹುದು. ಅವರವರ ಜೀವನದ ಅನುಭವಗಳು ಬದುಕಿನ ಕುರಿತಾದ ಜೀವನದೃಷ್ಟಿಯನ್ನು ಮೂಡಿಸಿರುತ್ತವೆ. ಆದ್ದರಿಂದಲೇ ಬದುಕೆಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸುತ್ತದೆ. ನನ್ನ ಪ್ರಕಾರ ಬದುಕು ಎನ್ನುವುದು ಸರಳ ಗಣಿತ.

***

ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಇಂತಹ ಸರಳ ಗಣಿತವನ್ನು ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಕಲಿತಿದ್ದೇವೆ. ಪಠ್ಯಪುಸ್ತಕದಲ್ಲಿದ್ದ ಇದಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನೆಲ್ಲ ಮಾಡಿ ಖುಷಿಪಟ್ಟಿದ್ದೇವೆ. ಈ ಬಗೆಯ ಸರಳ ಗಣಿತವನ್ನು ನಮ್ಮ ವ್ಯಕ್ತಿತ್ವಕ್ಕೂ ಅನ್ವಯಿಸಿಕೊಂಡರೆ ನಮ್ಮ ಬದುಕು ಸರಳವಾಗುತ್ತದೆ; ಸುಲಭವಾಗುತ್ತದೆ. ಬದುಕೆಂದರೆ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಸುಲಭವಾಗಿ ಸಾಗುವ ಸರಳರೇಖೆಯಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದುಕಿನಲ್ಲಿ ಸಂತಸದ ಕ್ಷಣ ಬರುತ್ತದೆ. ಅತ್ಯಂತ ದುಃಖದ ಗಳಿಗೆಯೂ ಬರುತ್ತದೆ. ಅತ್ಯುತ್ಕರ್ಷದ ಬೆನ್ನಿಗೇ ಮಹಾಪತನವೂ ಸಂಭವಿಸುತ್ತದೆ. ಬದುಕಿನಲ್ಲಿ ಏರಿಳಿತ ಎನ್ನುವುದು ಅತ್ಯಂತ ಸಹಜವಾದ ವಿದ್ಯಮಾನ. ಇಂತಹ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವುದು ಪ್ರಾಥಮಿಕ ಶಾಲೆಯಲ್ಲಿ ಕುಳಿತು ಕಲಿತ ಸರಳ ಗಣಿತ. ಸಂತಸದ ಕ್ಷಣ ಎದುರಾದಾಗ ಅದನ್ನು ಇನ್ನೊಂದು ಸಂತಸದ ಕ್ಷಣದ ಜೊತೆಗೆ ಕೂಡಿಸಬೇಕು. ದುಃಖದ ಗಳಿಗೆಯನ್ನು ಸಂತಸದ ಕ್ಷಣಗಳಿಂದ ಕಳೆಯಬೇಕು. ಸಣ್ಣ ಗೆಲುವನ್ನು ಇನ್ನೊಂದು ಗೆಲುವಿನೊಂದಿಗೆ ಗುಣಿಸಬೇಕು. ಸಂಕಷ್ಟದ ಹಂತವನ್ನು ನೆಮ್ಮದಿಯ ಹಂತದಿಂದ ಭಾಗಿಸಬೇಕು. ಈಗ ನಮಗೆ ದೊರಕುವ ಉತ್ತರ ನೆಮ್ಮದಿಯ ಬದುಕು ಎನ್ನುವುದೇ ಆಗಿರುತ್ತದೆ.

ಬದುಕೆನ್ನುವುದು ಇಂತಹ ಸರಳ ಗಣಿತವೇ ಆಗಿದ್ದರೂ ಈ ಸರಳ ಗಣಿತದಲ್ಲಿ ಪರಿಣತರಾಗುವುದೇನೂ ಸರಳ ವಿಷಯವಲ್ಲ; ಅದು ಅತೀ ಸಂಕೀರ್ಣ ಸಂಗತಿ.

 

ಬದುಕಿನ ಸರಳ ಗಣಿತವನ್ನು ಅರ್ಥಮಾಡಿಕೊಂಡು ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸಿ, ಸಾರ್ಥಕತೆಯಿಂದ ಬದುಕು ನಡೆಸಿದ ಮಹಾನ್ ಸಾಧಕರು ಹಲವರಿದ್ದಾರೆ. ವರಕವಿ ದ.ರಾ.ಬೇಂದ್ರೆಯವರು ಅದೆಂತಹ ನೋವನ್ನು ಬದುಕಿನಲ್ಲಿ ಅನುಭವಿಸಿದ್ದರು ಅನ್ನುವುದು ಬಹುತೇಕರಿಗೆ ಗೊತ್ತಿರುವಂಥದ್ದೇ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಅವರು ತಾರುಣ್ಯದಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ಒಂಭತ್ತು ಮಕ್ಕಳಿದ್ದರು. ಅವರಲ್ಲಿ ಆರು ಜನ ಮಕ್ಕಳು ಅಕಾಲಿಕವಾಗಿ ಮರಣ ಹೊಂದುತ್ತಾರೆ. ಆದರೂ ಜೀವನಾಸಕ್ತಿಯನ್ನು ಉಳಿಸಿಕೊಂಡಿದ್ದ ಬೇಂದ್ರೆಯವರು, “ಬೆಂದ್ರೆ ಬೇಂದ್ರೆ ಆಗ್ತಾನ” ಎಂಬ ಅವರದೇ ಮಾತಿಗೆ ಅತ್ಯುತ್ತಮ ನಿದರ್ಶನ. ಗಳಗನಾಥರ ಬಡತನದ ಬದುಕು ನಿಜಕ್ಕೂ ಬೇಸರ ಮೂಡಿಸುತ್ತದೆ. ಜೀವನದುದ್ದಕ್ಕೂ ಸಾಹಿತ್ಯ ಪರಿಚಾರಿಕೆ ನಡೆಸಿದವರು ಅವರು. ಇಂಥವರು ತೀರಿಕೊಂಡಾಗ ಅವರ ಪಾರ್ಥಿವ ಶರೀರವನ್ನು ದಹಿಸುವುದಕ್ಕೆ ಕಟ್ಟಿಗೆಗಳನ್ನು ಹೊಂದಿಸುವಷ್ಟು ಆರ್ಥಿಕ ಅನುಕೂಲತೆಯೂ ಇರಲಿಲ್ಲವಂತೆ. “ಇವರನ್ನು ಸುಡಬೇಕಾದರೆ ಈ ಪುಸ್ತಕಗಳಿಂದಲೇ ಸುಡಬೇಕಷ್ಟೇ” ಎಂದು ಅವರ ಮನೆಯವರು ಅತೀವ ಬೇಸರದಿಂದ ಹೇಳಿದ್ದರಂತೆ. ಕಡುಬಡತನವೂ ಕೂಡಾ ಗಳಗನಾಥರ ಬದುಕಿನ ಓಘಕ್ಕೆ ತಡೆಯೊಡ್ಡಿರಲಿಲ್ಲ ಎನ್ನುವುದು ಸತ್ಯ. ದಾರಿದ್ರ್ಯವನ್ನು ಬಗಲಲ್ಲಿರಿಸಿಕೊಂಡೇ ಸಾಹಿತ್ಯ ಪ್ರೀತಿಯನ್ನು ಜನಮಾನಸದಲ್ಲಿ ಜೀವಂತವಾಗಿರಿಸುವ ಕಾಯಕವನ್ನು ಕೊನೆವರೆಗೂ ಉಳಿಸಿಕೊಂಡ ಅವರ ದಿಟ್ಟತನ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸಮಾಜವನ್ನು ಗಮನಿಸಿಕೊಂಡಾಗ ಇಂತಹ ಅಗಣಿತ ನಿದರ್ಶನಗಳು ಸಿಗುತ್ತವೆ.

ಸಾಧಕರೆನಿಸಿಕೊಂಡವರು ಮಾತ್ರವೇ ಬದುಕಿನ ಸರಳ ಗಣಿತವನ್ನು ಅನ್ವಯಿಸಿಕೊಂಡಿದ್ದಾರೆಂದಲ್ಲ. ಅಕ್ಷರದ ಸಹವಾಸವೇ ಇಲ್ಲದೆ ಬದುಕಿದ ಜನಸಾಮಾನ್ಯರ ಬದುಕಿನಲ್ಲಿಯೂ ಇದನ್ನು ಕಾಣಬಹುದು. ನಾನು ಚಿಕ್ಕವನಿದ್ದಾಗ ನಮ್ಮ ಮನೆಗೆ ಜಯಂತಿ ಎನ್ನುವ ಕೆಲಸದವಳು ಬರುತ್ತಿದ್ದಳು. ನನ್ನಮ್ಮನಿಗೆ ಆರೋಗ್ಯ ಸಮಸ್ಯೆ ಇದ್ದುದರಿಂದ ಮನೆಗೆಲಸ ಮಾಡಲಾಗುತ್ತಿರಲಿಲ್ಲ. ಆದಕಾರಣ ನನ್ನ ಅಜ್ಜನ ಮನೆಯವರು ಈ ಮನೆಗೆಲಸದವಳನ್ನು ಗೊತ್ತುಮಾಡಿದ್ದರು. ಇವಳ ಗಂಡ ತೀರಿಹೋಗಿದ್ದ. ವಿಪರೀತ ಕುಡುಕನಾಗಿದ್ದ ಅವನಿಗೆ ಬೇರೆ ಹೆಣ್ಣಿನ ಸಹವಾಸವೂ ಇತ್ತಂತೆ. ಪ್ರತಿದಿನ ಕುಡಿದುಬಂದು ಹೆಂಡತಿ, ಮಕ್ಕಳಿಗೆ ಹೊಡೆಯುತ್ತಿದ್ದವ ಅದೊಂದು ದಿನ ತೀರಿಹೋಗಿದ್ದ. ಮೂರು ಮಕ್ಕಳ ಜವಾಬ್ದಾರಿಯನ್ನು ಜಯಂತಿಯೇ ನಿಭಾಯಿಸಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮನೆಗೆಲಸಕ್ಕೆ ಬರುತ್ತಿದ್ದ ಜಯಂತಿಯಲ್ಲಿ ನಿಜಕ್ಕೂ ದಿಟ್ಟತನವಿತ್ತು. ಒಂದು ದಿನವೂ ಅವಳು ಕಣ್ಣೀರು ಹಾಕಿದ್ದನ್ನು ನಾನು ನೋಡಿಲ್ಲ. ತಿಂಗಳಿಗೆ ಬರುತ್ತಿದ್ದದ್ದು ಕಡಿಮೆ ಕೂಲಿಹಣ. ಅದರಲ್ಲಿಯೇ ಕಂತು ಕಂತು ಹಣ ಕಟ್ಟಿ ಮನೆಗೆ ಬೇಕಾದ ಟಿ.ವಿ., ಪ್ರಿಜ್ ಎಲ್ಲವನ್ನೂ ಹಂತಹಂತವಾಗಿ ಮಾಡಿಸಿಕೊಂಡಳು. ಮೂವರು ಮಕ್ಕಳನ್ನೂ ಶಾಲೆಗೆ ಸೇರಿಸಿದ್ದಳು. ಮಕ್ಕಳು ದೊಡ್ಡವರಾಗಿ ದುಡಿಯಲು ಶುರು ಮಾಡಿದ ಮೇಲೆ ಪುಟ್ಟದಾದ ಹೊಸ ಮನೆಯೂ ಅವರದ್ದಾಯಿತು. ಹೊಸ ಮನೆ ನೋಡುವುದಕ್ಕೆ ಹೋದ ನನ್ನಮ್ಮನನ್ನು ಕಂಡ ಆ ಜಯಂತಿಯ ಕಣ್ಣಲ್ಲಿದ್ದದ್ದು ಹನಿ ನೀರು.

ಮೊದಲು ನಾನೊಂದು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಯ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಪ್ರತಿದಿನ ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗುತ್ತಿದ್ದರು. ವಿಪರೀತ ಬಿಸಿಲು ಇದ್ದ ಒಂದು ಮಧ್ಯಾಹ್ನ ಅವರು ಮನೆಯಿಂದ ಕಾಲೇಜಿಗೆ ನಡೆದುಕೊಂಡು ಬರುತ್ತಿದ್ದರು. ಇಷ್ಟು ಬಿಸಿಲಿದ್ದರೂ ಇವರು ಮನೆಗೆ ಹೋಗಿ ಊಟ ಮಾಡಿ ಬರುವುದೇಕೆ? ಯಾಕಿಷ್ಟು ತೊಂದರೆ ತೆಗೆದುಕೊಳ್ಳುತ್ತಿದ್ದಾರೆ? ಎನಿಸಿತು. ಅದನ್ನೇ ಅವರಿಗೆ ಹೇಳಿದೆ. ಆಗ ಅವರು ಹೇಳಿದ ವಿಷಯ ಕೇಳಿ ನನ್ನ ಬಾಯಿ ಮಾತನ್ನೇ ಮರೆಯಿತು. ಅವರ ಗಂಡನಿಗೆ ಹುಷಾರಿಲ್ಲ. ಕಳೆದ ಮೂರು ವರ್ಷದಿಂದ ಹಾಸಿಗೆ ಬಿಟ್ಟು ಮೇಲೆದ್ದಿಲ್ಲ. ಅವರ ಎಲ್ಲಾ ಬೇಕು ಬೇಡಗಳನ್ನು ಇವರೇ ನೋಡಿಕೊಳ್ಳಬೇಕು. ಬೆಳಗ್ಗೆ ತಿಂಡಿ ತಿನ್ನಿಸಿ, ಮಾತ್ರೆ ಕೊಟ್ಟು ಬರುವ ಇವರು ಮತ್ತೆ ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿಸಿ, ಮಾತ್ರೆ ಕೊಟ್ಟು ಬರಬೇಕಿತ್ತು. ಆದ್ದರಿಂದ ಮಧ್ಯಾಹ್ನ ಬಿಸಿಲಿದ್ದರೂ ಮಳೆಯಿದ್ದರೂ ಮನೆಗೆ ಹೋಗದೆ ಇವರಿಗೆ ಬೇರೆ ಆಯ್ಕೆ ಇರಲಿಲ್ಲ. ನನಗಂತೂ ನಿಜಕ್ಕೂ ಆಶ್ಚರ್ಯವೆನಿಸಿತು. ನಾನು ಪ್ರತೀ ಬಾರಿ ಆಫೀಸಿಗೆ ಕಾಲಿಟ್ಟ ತಕ್ಷಣ “ಹ್ಞಾ ಕನ್ನಡ ಮಾಸ್ಟ್ರು ಬಂದ್ರು” ಎಂದು ತಮಾಷೆಯ ಧಾಟಿಯಲ್ಲಿ ಹೇಳಿ, ನಗಾಡುತ್ತಿದ್ದ ಅವರು ಇಂತಹ ಒತ್ತಡದ ಬದುಕನ್ನು ನಡೆಸುತ್ತಿದ್ದಾರೆ ಎನ್ನುವ ಸಣ್ಣ ಸೂಚನೆಯೂ ನನಗೆ ಸಿಕ್ಕಿರಲಿಲ್ಲ. ಏನು ಹೇಳಲಿ ಅವರಿಗೆ ಎಂದೇ ತಿಳಿಯಲಿಲ್ಲ ಮಾತು ಮರೆತು ಮೂಕವಾಗಿದ್ದ ನನ್ನ ಬಾಯಿಗೆ. ಇವರಿಗೆಲ್ಲ ಬದುಕಿನ ಸರಳ ಗಣಿತವನ್ನು ಬೋಧಿಸಿದ ಜೀವನಾನುಭವವೆಂಬ ಮಹಾನ್ ಗುರುವಿಗೆ ನಮಿಸುವುದಷ್ಟೇ ನಾನು ಮಾಡಬಹುದಾಗಿದ್ದ ಕೆಲಸ. ಅದನ್ನೇ ಮಾಡಿದೆ.