“ಊರಾಗ ಜಾತ್ರೆ ಉತ್ಸವ ಮದುವೆ ಮುಂಜಿ ಏನಾದರು ಇದ್ದಾಗಾದ್ರು ಗಂಗಣ್ಣ ಬಂದು ಹೋಗಬಾರದಾ? ಎಂಥಹ ಮನುಷ್ಯ? ಆಗಾಗ ಬಂದು ಹೋದರೆ ಮನೆ ಕೂಡ ಸ್ವಚ್ಛವಾಗಿರ್ತಾದೆ, ಜನ ಕೂಡ ಗುರುತು ಹಿಡೀತಾರೆ, ಇಲ್ಲದಿದ್ದರೆ ಯಾರು ಗುರುತು ಹಿಡೀತಾರೆ? ಅವನ ಮನ್ಯಾಗ ಯಾವುದೇ ಶುಭ ಅಶುಭ ಕಾರ್ಯಗಳಿದ್ದರೆ ಯಾರು ಬರ್ತಾರೆ? ಆಗ ತೊಂದರೆ ಪಡಬೇಕಾಗುತ್ತದೆ” ಅಂತ ಗುಂಡಪ್ಪ ನಡು ಊರ ಕಟ್ಟೆಗೆ ಕುಳಿತು ಹೇಳಿದ.
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ಸುಮಾರು ಇಪ್ಪತ್ತು ವರ್ಷಗಳಿಂದಲೂ ಆ ಮನೆ ಹಾಳು ಬಿದ್ದಿತ್ತು. ಅಲ್ಲಿ ಯಾರೂ ವಾಸ ಮಾಡುತ್ತಿರಲಿಲ್ಲ ಸಹಜವಾಗಿ ಮನೆಯ ಸುತ್ತಲೂ ಗಿಡಗಂಟಿ, ಹುಲ್ಲು, ಬೆಳೆದು ಮುಚ್ಚಿ ಹೋಗಿತ್ತು. ಬಾಗಿಲು ಕಿಟಕಿ ಅಲ್ಲಲ್ಲಿ ಮುರಿದು ಅಸ್ತವ್ಯಸ್ತವಾಗಿ ಕಾಣುತಿತ್ತು. ಆ ಕಡೆ ಸುಳಿಯಲು ಕೂಡ ಜನ ಹೆದರುತಿದ್ದರು. ಕತ್ತಲೆ ಮನೆಯಲ್ಲಿ ಹಾವು ಚೇಳು ಹುಳ, ಹುಪ್ಪಟೆ ಸೇರಿಕೊಂಡದ್ದರಿಂದ ವಿಚಿತ್ರವಾದ ಸದ್ದು ಕೇಳಿ ಬರುತಿತ್ತು. ಬೀದಿ ನಾಯಿಗಳ ಆಶ್ರಯ ತಾಣವಾಗಿಯೂ ಮಾರ್ಪಟ್ಟಿತ್ತು.

“ಆ ಮನೆ ಕಡೆ ಹೋಗಬೇಡಿ” ಅಂತ ಜನ ತಮ್ಮ ಮಕ್ಕಳಿಗೆ ತಾಕೀತು ಮಾಡಿ ಎಚ್ಚರಿಸುತಿದ್ದರು. ಇದರಿಂದ ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಜನರ ಓಡಾಟವಿಲ್ಲದ ಹಾಗಾಗಿ ಮನೆಯ ಮುಂದಿನ ರಸ್ತೆ ಕೂಡ ಬಿಕೋ ಅನ್ನುತಿತ್ತು.

ಅದು ಗಂಗಣ್ಣನ ಮನೆ. ಮೊದಲು ಆ ಮನೆ ಸರಿಯಾಗೇ ಇತ್ತು. ಒಂದು ಕೋಣೆಯಿದ್ದರು ಮಜಬೂತಾಗಿತ್ತು. ಸುಣ್ಣ ಬಣ್ಣ ಬಳಿದುಕೊಂಡು ಆಕರ್ಷಕವಾಗಿ ಕಾಣುತಿತ್ತು. ಗಂಗಣ್ಣ ಆ ಮನೆ ಕಟ್ಟಲು ಬಹಳ ಶ್ರಮವಹಿಸಿದ್ದ. ಕೂಲಿ ಮ್ಯಾಲ ಮನೆ ಕಟ್ಟಿಸಿದ್ದಾನೆ ಅಂತ ಜನ ಆತನಿಗೆ ತಾರೀಫ ಮಾಡಿದ್ದರು. ಮನೆ ಸಣ್ಣದಾಗಿದ್ದರು ಪರವಾಗಿಲ್ಲ. ಊರಾಗೇ ನಿನ್ನ ಮನೆ ಛೊಲೊ ಕಾಣಸ್ತಾದೆ ಅಂತ ಜನ ಹೇಳುತ್ತಿದ್ದರು. ಆಗ ಗಂಗಣ್ಣನಿಗೆ ಖುಷಿಯಾಗುತಿತ್ತು.

ಗಂಗಣ್ಣ ಕೂಲಿ ಕೆಲಸ ಮಾಡುವವನು, ಮುಂಜಾನೆ ಹೊಲದ ಕಡೆ ಹೋದರೆ ಸಾಯಂಕಾಲವೇ ಮನೆಗೆ ಬರುತಿದ್ದ. ಹೆಂಡತಿ ಕೂಡ ಮನೆಗೆಲಸ ಮಾಡಿ ಗಂಡನ ಜೊತೆ ಕೂಲಿ ಕೆಲಸಕ್ಕೆ ಹೋಗುತಿದ್ದಳು. ಅದರಿಂದಲೇ ಇವರ ಬದುಕು ಸಾಗುತಿತ್ತು. ಇಬ್ಬರೂ ಶ್ರಮಜೀವಿಗಳು. ಒಂದಿನ ಕೂಡ ಕೈಕಟ್ಟಿ ಮನೆಯಲ್ಲಿ ಕೂಡುತ್ತಿರಲಿಲ್ಲ. ಅವರ ಕೆಲಸ ಕಾರ್ಯ ನೋಡಿ ಊರು ಕೇರಿ ಜನ ಕೂಡ ಮೆಚ್ಚಿಕೊಳ್ಳುತಿದ್ದರು. ಯಾವ ಕೆಲಸವಿದ್ದರೂ ಮೊದಲು ಅವರನ್ನೇ ಕರೆಯುತ್ತಿದ್ದರು.

ಸ್ವಲ ದಿನಗಳ ನಂತರ ಊರಲ್ಲಿ ಕ್ರಮೇಣ ಕೂಲಿ ಕೆಲಸ ಕಡಿಮೆಯಾದವು. ಹೊಲಗದ್ದೆ ಇದ್ದವರು ಸ್ವತಃ ತಾವೇ ಕೆಲಸ ಮಾಡಿಕೊಳ್ಳತೊಡಗಿದರು. ಆಗ ಗಂಗಣ್ಣನಿಗೆ ಯೋಚನೆ ಶುರುವಾಯಿತು. ದಿನಾಲೂ ಕೆಲಸ ದೊರೆಯದೆ ವಾರದಲ್ಲಿ ಒಂದೆರಡು ಬಾರಿ ಮಾತ್ರವೇ ಕೆಲಸ ದೊರೆಯತೊಡಗಿತು. ಇದರಿಂದ ಸಂಸಾರ ತೂಗಲು ಅಡಚಣೆಯಾಗಿ ಮುಂದೇನು ಅಂತ ಚಿಂತಿಸತೊಡಗಿದ.

“ಕೆಲಸಾ ಇಲ್ಲ ಅಂತ ಯಾಕೆ ಚಿಂತೆ ಮಾಡೋದು ಸ್ವಲ್ಪ ದಿನ ಪಟ್ಟಣದ ಕಡೆ ಹೋಗಿ ಕೆಲಸ ಮಾಡಿದರಾಯಿತು. ರೊಕ್ಕದ ಅಡಚಣೆ ದೂರಾಗ್ತದೆ ಒಂದೆರಡು ವರ್ಷದ ನಂತರ ಮತ್ತೆ ವಾಪಸ್ ಬಂದರಾಯಿತು” ಅಂತ ಹೆಂಡತಿ ಸಲಹೆ ನೀಡಿ ಧೈರ್ಯ ತುಂಬಿದಳು. ಆಗ ಅವಳ ಮಾತಿಗೆ ಗಂಗಣ್ಣ ತಲೆಯಾಡಿಸಿ, ಒಂದಿನ ಅಗತ್ಯವಿರುವ ಸಾಮಾನು ಸರಂಜಾಮು ತೆಗೆದುಕೊಂಡು ಮನೆಗೆ ಹೊರಗೀಲಿ ಹಾಕಿ ಮುಂಬೈ ನಗರದ ಕಡೆ ಗುಳೆ ಹೊರಟು ಹೋದ. ಅಲ್ಲಿ ಕಟ್ಟಡ ಕೆಲಸಕ್ಕೆ ಸೇರಿ ಕೆಲಸ ಮಾಡತೊಡಗಿದ. ಯಾವುದೇ ಬಾಡಿಗೆ ಇಲ್ಲದೇ ಅವರೇ ಒಂದು ಶೆಡ್ ಹಾಕಿಕೊಟ್ಟರು. ದಿನಗಳು ಉರುಳತೊಡಗಿದವು. ಮಗನಿಗೆ ಸಮೀಪದ ಸರಕಾರಿ ಶಾಲೆಗೂ ಸೇರಿಸಿದ.

ಗಂಗಣ್ಣ ಮನೆ ಬಿಟ್ಟು ಹೋದ ಮೇಲೆ ಸಹಜವಾಗೇ ಆತನ ಮನೆ ಖಾಲಿ ಬಿದ್ದು ದೀಪ ಹಚ್ಚುವವರಿಲ್ಲದೆ ಕತ್ತಲೆ ಕೋಣೆಯಾಗಿ ಮಾರ್ಪಟ್ಟಿತು. ಸ್ವಚ್ಛಗೊಳಿಸದಿದ್ದಾಗ ಕಸಕಡ್ಡಿ ಸಂಗ್ರಹವಾಗಿ ತಿಪ್ಪೆಯಂತಾಯಿತು. ಜಾಸ್ತಿ ಮಳೆ ಬಂದರೆ ಅಲ್ಲಲ್ಲಿ ಮೇಲ್ಛಾವಣಿ ಸೋರಿ ಗೋಡೆಯ ಸುಣ್ಣ ಬಣ್ಣವೂ ಹೋಗಿ ವಿಚಿತ್ರವಾಗಿ ಕಾಣತೊಡಗಿತು. ಮನೆಗೆ ಮೊದಲಿನ ಲಕ್ಷಣವೇ ಇಲ್ಲದಂತಾಯಿತು, ಹ್ಯಾಂಗ ಇದ್ದ ಮನೆ ಹ್ಯಾಂಗಾಯಿತು ನೋಡಿ ಅಂತ ಊರ ಜನ ಮಾತಾಡಿಕೊಂಡರು.

“ಊರಾಗ ಜಾತ್ರೆ ಉತ್ಸವ ಮದುವೆ ಮುಂಜಿ ಏನಾದರು ಇದ್ದಾಗಾದ್ರು ಗಂಗಣ್ಣ ಬಂದು ಹೋಗಬಾರದಾ? ಎಂಥಹ ಮನುಷ್ಯ? ಆಗಾಗ ಬಂದು ಹೋದರೆ ಮನೆ ಕೂಡ ಸ್ವಚ್ಛವಾಗಿರ್ತಾದೆ, ಜನ ಕೂಡ ಗುರುತು ಹಿಡೀತಾರೆ, ಇಲ್ಲದಿದ್ದರೆ ಯಾರು ಗುರುತು ಹಿಡೀತಾರೆ? ಅವನ ಮನ್ಯಾಗ ಯಾವುದೇ ಶುಭ ಅಶುಭ ಕಾರ್ಯಗಳಿದ್ದರೆ ಯಾರು ಬರ್ತಾರೆ? ಆಗ ತೊಂದರೆ ಪಡಬೇಕಾಗುತ್ತದೆ” ಅಂತ ಗುಂಡಪ್ಪ ನಡು ಊರ ಕಟ್ಟೆಗೆ ಕುಳಿತು ಹೇಳಿದ.

“ದೂರದ ದಾರಿ, ಪಾಪ ಆತ ಕೆಲಸ ಬಿಟ್ಟು ಎಲ್ಲಿ ಬರ್ತಾನೆ? ಬರಲು ಒಂದಿನ, ಹೋಗಲು ಒಂದಿನ ಬೇಕು. ಸಮೀಪಿದ್ದರೆ ಬಂದು ಹೋಗುತಿದ್ದ ಅಲ್ಲಿಂದ ಬರಬೇಕಾದರೆ ಸುಮ್ಮನೆನಾ? ಸಾವಿರಾರು ರುಪಾಯಿ ಖರ್ಚಾಗ್ತವೆ, ಆತ ಹೋಗಿದ್ದೇ ಕೂಲಿ ಮಾಡಿ ನಾಲ್ಕು ದುಡ್ಡು ಸಂಪಾದನೆ ಮಾಡಲು, ಆತ ಬರದೇ ಇರೋದೇ ಒಳ್ಳೆಯದು” ಅಂತ ನಾಗಪ್ಪ ಆತನ ಪರ ವಹಿಸಿ ಮಾತನಾಡಿದ. ಆತನ ಮಾತಿಗೆ ಕೆಲವರು ತಲೆಯಾಡಿಸಿದರು.

“ಗಂಗಣ್ಣನ ಮಗ ಸಧ್ಯ ದೊಡ್ಡವನಾಗಿರಬೇಕು. ಹೋಗುವಾಗ ಒಂದು ವರ್ಷದವನಿದ್ದ ಈಗ ಆತ ಏನು ಮಾಡ್ತಾನೋ ಏನೋ ಗೊತ್ತಿಲ್ಲ” ಅಂತ ಶೇಖಪ್ಪ ಅನುಮಾನ ಹೊರ ಹಾಕಿದ.

“ಆತ ದೊಡ್ಡವನಾಗಿರಬೇಕು ಅವನು ನನ್ನ ಮಗನ ವಾರಿಗೆಯವನು, ಮದುವೆ ವಯಸ್ಸಿಗೆ ಬಂದಿದ್ದಾನೆ ಅಂತ ನಾನು ನನ್ನ ಮಗನ ಮದುವೆ ಮಾಡಿಲ್ಲವೇ?” ಅಂತ ಗುಂಡಪ್ಪ ಪ್ರಶ್ನಿಸಿದ.

“ಗಂಗಣ್ಣ ಇನ್ನೂ ತನ್ನ ಮಗನ ಮದುವೆ ಮಾಡಿರ್ಲಿಕ್ಕಿಲ್ಲ, ನಮಗೆಲ್ಲ ಬಿಟ್ಟು ಹ್ಯಾಂಗ ಮಾಡ್ತಾನೆ? ಅವನಿಗಾದರು ಯಾರಿದ್ದಾರೆ? ಬಂಧು ಬಳಗ ಸಂಬಂಧಿಕರು ಎಲ್ಲಾ ನಾವೇ ಇದ್ದೀವಿ, ಎಲ್ಲಿಗೆ ಹೋದರೂ ಇಲ್ಲಿಗೆ ಬರಲೇಬೇಕು” ಅಂತ ನಾಗಪ್ಪ ಮಾತು ಮುಂದುವರಿಸಿದ.

“ದೂರಿದ್ದವನ ಸುದ್ದಿ ದೇವರೇ ಬಲ್ಲ, ಆತನ ಬಗ್ಗೆ ಯಾವದೂ ಹೇಳಲು ಬರೋದಿಲ್ಲ. ಆತನ ಜೊತೆ ಮಾತಾಡಬೇಕು ಕೆಲಸ ಕಾರ್ಯದ ಬಗ್ಗೆ ವಿಚಾರಿಸಬೇಕೆಂದರೆ ಆತನ ಬಳಿ ಮೊಬೈಲೂ ಇಲ್ಲ. ಮುದ್ದಾಮ ಹೋದರೂ ಆತ ಮುಂಬೈದಾಗ ಯಾವ ಏರಿಯಾದಲ್ಲಿದ್ದಾನೋ ಗೊತ್ತಿಲ್ಲ” ಅಂತ ರಾಮಣ್ಣ ಮುಖ ಸಪ್ಪಗೆ ಮಾಡಿ ಹೇಳಿದ.

“ನಾವು ರಾತ್ರಿ ಗಾಡೀಗಿ ಮುಂಬೈಗೆ ಹೋಗ್ತೀವಿ. ನಮ್ಮ ಮನೆ ಕಡೆ ಸ್ವಲ್ಪ ನಿಗಾ ಇರಲಿ ಅಂತ ಗಂಗಣ್ಣ ಹೋಗುವಾಗ ಹೇಳಿ ಹೋಗಿದ್ದ ಅದನ್ನು ಬಿಟ್ಟು ಬೇರೆ ಯಾವದೂ ಹೇಳಿಲ್ಲ” ಅಂತ ಮಲ್ಲಿಕಾರ್ಜುನ ವಾಸ್ತವ ವಿವರಿಸಿದ.

“ಆತ ಹೋದ ಮೇಲೆ ಇಲ್ಲಿಯ ತನಕ ಯಾರಿಗೂ ಫೋನೇ ಮಾಡಿಲ್ಲ ಯಾರಿಗೂ ವಿಚಾರಿಸಿಲ್ಲ ನಾವೇ ಅವನ ಬಗ್ಗೆ ಯೋಚನೆ ಮಾಡ್ತೀವಿ ಹೂರತು ಆತ ಯೋಚನೆ ಮಾಡ್ತಿಲ್ಲ, ನಮ್ಮ ನೆನಪಾದರು ಆತನಿಗೆ ಇದೆಯೋ ಇಲ್ಲವೋ ಯಾರಿಗೆ ಗೊತ್ತು” ಅಂತ ರಾಮಣ್ಣ ಕೋಪ ತಾಪ ಹೊರ ಹಾಕಿದ.

“ಕೈಯಾಗ ಹಣ ಓಡಾಡಿದರ ಹಂಗೇ ಆಗೋದು, ನಮ್ಮ ನೆನಪ ಹ್ಯಾಂಗ ಬರ್ತಾದೆ? ಹಣ ಎಲ್ಲವನ್ನೂ ಮರೆಸಿ ಬಿಡ್ತಾದೆ ಹಣಕ್ಕೆ ಸೋಲದವರು ಯಾರೂ ಇಲ್ಲ ಅಂತ ರಾಚಪ್ಪ ಗಂಭೀರ ಆರೋಪ ಮಾಡಿದ.

“ಗಂಗಣ್ಣ ಅಂಥಹ ಮನುಷ್ಯ ಅಲ್ಲವೇ ಅಲ್ಲ, ಆತನ ಸ್ವಭಾವ ನಮಗೆ ಸರಿಯಾಗಿ ಗೊತ್ತು. ಆದರೆ ಯಾಕೋ ಏನೋ ಯಾರಿಗೂ ಸಂಪರ್ಕ ಮಾಡ್ತಿಲ್ಲ” ಅಂತ ನಾಗಪ್ಪ ಆತನ ಪರ ವಹಿಸಿ ಹೇಳಿದ, ಕೆಲವರು ಆತನ ಮಾತಿಗೆ ಸಹಮತ ವ್ಯಕ್ತಪಡಿಸಿದರು.

‘ಗಂಗಣ್ಣನ ಮನೆಯಲ್ಲಿ ಯಾರೋ ಅಪರಿಚ ವ್ಯಕ್ತಿ ಬಂದು ಸೇರಿದ್ದಾನೆʼ ಅಂತ ಫಕೀರಪ್ಪ ನಡು ಊರ ಕಟ್ಟೆಯ ಕಡೆ ಅವಸರವಾಗಿ ಬಂದು ಹೇಳಿದ. ವಿಷಯ ತಿಳಿದು ಎಲ್ಲರಿಗೂ ಆಶ್ಚರ್ಯದ ಜೊತೆ ಗಾಬರಿಯೂ ಆಯಿತು. ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು.

ಅಪರಿಚಿತ ಯಾರಿರಬಹುದು? ಗಂಗಣ್ಣನ ಮನೆಯಲ್ಲಿ ಯಾಕೆ ಸೇರಿಕೊಂಡಿದ್ದಾನೆ? ಏನಾದರು ಕೆಟ್ಟ ಕೆಲಸ ಮಾಡಿ ಬಚಾವ ಆಗಲು ಬಂದಿದ್ದಾನಾ? ಅಂತ ನಾಗಪ್ಪ ಗಂಭೀರವಾಗಿ ಆಲೋಚಿಸಿ ಪ್ರಶ್ನಿಸಿದ.

“ಅತ್ತ ಕಡೆ ಹೋಗಲು ನಾವು ಕೂಡ ಭಯ ಪಡುತ್ತೇವೆ ಆದರೆ ಆತನಿಗೆ ಎಷ್ಟು ಧೈರ್ಯ ಇರಬೇಕು? ಹಾಳು ಮನೆಗೆ ಬಂದು ಸೇರಲು ಅಂತ ಗುಂಡಪ್ಪನೂ ಗರಂ ಆಗಿ ಪ್ರಶ್ನಿಸಿ ಧನಿಗೂಡಿಸಿದ.

ಈ ವಿಷಯ ಗಂಗಣ್ಣನಿಗೆ ತಿಳಿಸಲು ಆಗೋದಿಲ್ಲ. ನಾವೇ ಏನಾದರು ಪರಿಹಾರ ಹುಡುಕಬೇಕು, ಸುಮ್ಮನೆ ಕುಳಿತುಕೊಂಡರೆ ಆಗೋದಿಲ್ಲ, ಆತ ಯಾರು? ಯಾಕೆ ಬಂದಿದ್ದಾನೆ ಅಂತ ಮೊದಲು ತಿಳಿಯಬೇಕು ಆತನಿಂದ ಸರಿಯಾದ ಉತ್ತರ ಬರದಿದ್ದರೆ ಪೋಲೀಸರಿಗೆ ತಿಳಿಸಬೇಕು ಅಂತ ಹಿರಿಯ ವ್ಯಕ್ತಿ ಸೋಮಣ್ಣ ಸಲಹೆ ನೀಡಿದ ಆತನ ಮಾತಿಗೆ ಎಲ್ಲರೂ ಸಮ್ಮತಿ ಸೂಚಿಸಿ ತಲೆಯಾಡಿಸಿದರು.

“ಸಧ್ಯ ಆತ ಮನೆಯಲ್ಲಿಲ್ಲ ರಾತ್ರಿ ಬಂದು ನಸುಕಿನಲ್ಲೇ ಹೊರಟು ಹೋಗಿದ್ದಾನೆ. ಎಲ್ಲಿಗೆ ಹೋಗಿದ್ದಾನೆ ಅಂತ ಗೊತ್ತಿಲ್ಲ ಇವತ್ತು ರಾತ್ರಿ ಮತ್ತೆ ಬಂದ್ರು ಬರಬಹುದು ಅಂತ ಫಕೀರಪ್ಪ ಹೇಳಿದ.

ಇವತ್ತು ನಾವ್ಯಾರೂ ಮಲಗೋದೇ ಬೇಡ ಆತನ ಬಗ್ಗೆ ತಿಳಿಯಲೇಬೇಕು ಅಂತ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದು ಆತನಿಗಾಗಿ ದಾರಿ ಕಾಯತೊಡಗಿದರು.

ರಾತ್ರಿ ಹನ್ನೊಂದು ಗಂಟೆಗೆ ಅಪರಿಚಿತ ವ್ಯಕ್ತಿ ಆ ಹಾಳು ಮನೆ ಪ್ರವೇಶಿಸಿದ. ಆಗ ಎಲ್ಲರೂ ಒಟ್ಟುಗೂಡಿ ಆ ಮನೆ ಸುತ್ತುವರೆದರು, ಕೆಲವರು ಜೋರಾಗಿ ಕೂಗಲು ಆರಂಭಿಸಿದರು. ಜನರ ಕೂಗಾಟ ಗದ್ದಲ ಕೇಳಿ ಆತ ಹೊರ
ಬಂದು ಗಾಬರಿಯಾಗಿ ನಿಂತುಕೊಂಡ.

“ನೀನು ಯಾರು? ಇಲ್ಲಿಗೆ ಯಾಕೆ ಬಂದಿದ್ದಿಯಾ? ನಿನಗೆ ನಾವು ಒಮ್ಮೆಯೂ ನೋಡಿಲ್ಲವಲ್ಲ…” ಅಂತ ಸೋಮಣ್ಣ ಖಡಕ್ಕಾಗಿ ಪ್ರಶ್ನಿಸಿದ ಆಗ ಆತ ಸ್ವಲ್ಪ ಸುಧಾರಿಸಿಕೊಂಡು,

“ನಾನು ಗಂಗಣ್ಣನ ಮಗ ಚಿನ್ನಣ್ಣ. ಸಧ್ಯ ಅಪ್ಪನಿಗೆ ವಯಸ್ಸಾಗಿದೆ. ಆತನಿಂದ ಯಾವ ಕೆಲಸವೂ ಆಗುತ್ತಿಲ್ಲ. ಊರಿಗೆ ಹೋಗೋಣ ಅಂತ ಹಠ ಹಿಡಿದಿದ್ದಾನೆ. ಸುಮಾರು ವರ್ಷಗಳಿಂದ ಬಿಟ್ಟು ಹೋದ ಮನೆ ಅಸ್ತವ್ಯಸ್ತವಾಗಿರುತ್ತದೆ, ಸ್ವಚ್ಛಗೊಳಿಸಿ ಆಮೇಲೆ ಕರೆದುಕೊಂಡ ಬಂದರಾಯಿತು ಅಂತ ನಾನೇ ಬಂದೆ ಅಂತ ವಾಸ್ತವ ಬಿಚ್ಚಿಟ್ಟ. ಆತನ ಮಾತು ಕೇಳಿ ಎಲ್ಲರಿಗು ಆಶ್ಚರ್ಯ ತರಿಸಿತು ಪರಸ್ಪರ ಒಬ್ಬರ ಮುಖ ಒಬ್ಬರು ಗಾಬರಿಯಿಂದ ನೋಡತೊಡಗಿದರು.