ಒಂದು ಮಗು ದಿನದ 24 ಗಂಟೆಯಲ್ಲಿ ಶಾಲೆಯಲ್ಲಿ ಬರೀ 8 ಗಂಟೆ ಇರುತ್ತಾನೆ. ಆದರೆ ಇನ್ನುಳಿದ 16 ಗಂಟೆ ಮನೇಲಿ ಇರುತ್ತಾನೆ. ಸಮಾಜದಲ್ಲಿರುವ ಉಳಿದವರೂ ಕೂಡ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ‘ಸಂಗದಂತೆ ಬುದ್ಧಿ ಊಟದಂತೆ ಲದ್ಧಿ’ ಎಂಬಂತೆ ಸಹವಾಸವೂ ಕೂಡ ಮುಖ್ಯ. ಆದ್ದರಿಂದ ಮಕ್ಕಳಿಗೆ ಕೇಳಿದ್ದನ್ನು ಕೊಡಿಸುವುದಷ್ಟೇ ಕೆಲಸ ಅಲ್ಲ ಅವರ ಜೊತೆ ಸಮಯ ಕಳೆಯುವ ಜೊತೆಗೆ ಉತ್ತಮ ಪರಿಸರ ಕೊಡುವುದು ಮುಖ್ಯ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ
ಸಾಮಾನ್ಯವಾಗಿ ಹಿಂದೆ ಮೇಷ್ಟ್ರು ಮಕ್ಕಳು ಸರಿಯಾಗಿ ಓದಲಿಲ್ಲ ಅಂದ್ರೆ ಶಿಕ್ಷೆ ಕೊಡುತ್ತಿದ್ದರು. ಆ ಶಿಕ್ಷೆ ಹೊಡೆಯೋದು, ಕೆಲವೊಮ್ಮೆ ಅಂಗೈ ತಿರುಗಿಸಿ ಹೊಡೆಯೋದು, ರೂಲರ್‌ನಿಂದ ಹೊಡೆಯೋದು, ಕಿವಿ ಹಿಡಿಸೋದು (ಬೆನ್ನು ಮಂಡಿ ಬಾಗಿಸಿ, ಕೈಗಳನ್ನು ಕಾಲೊಳಗಿನಿಂದ ತೆಗೆದುಕೊಂಡು ಕಿವಿ ಹಿಡಿಯೋದು), ಒಂಟಿ ಕಾಲಲ್ಲಿ ನಿಲ್ಲಿಸೋದು, ಮಂಡಿಯಲ್ಲಿ ತುಸು ದೂರ ನಡೆಸೋದು, ಓಡಿಸುವುದು ಹೀಗೆ ಕೊಡುವ ಶಿಕ್ಷೆ ತುಂಬಾ ನೋವು ಕೊಡುವಂತಹವೇ ಆಗಿದ್ದವು. ಎಲ್ಲಾ ಮೇಷ್ಟ್ರು ಹೀಗೆ ಶಿಕ್ಷೆ ಕೊಡುತ್ತಿದ್ರು ಅಂತಾ ಅಲ್ಲ. ಕೆಲವೊಬ್ರು ಕೊಟ್ರೆ ಇನ್ನೂ ಕೆಲವರು ಬಯ್ಗುಳದ ಶಿಕ್ಷೆ ಕೊಡುತ್ತಿದ್ದರು. ಆದರೆ ಯಾವತ್ತೂ ನಮ್ಮ ಪೋಷಕರು ಇದರ ಬಗ್ಗೆ ವಿರೋಧ ವ್ಯಕ್ತಪಡಿಸ್ತಾ ಇರಲಿಲ್ಲ. ಒಂದೊಮ್ಮೆ ಮೇಷ್ಟ್ರು ಹೊಡೆದದ್ದರ ಬಗ್ಗೆ ನಮ್ಮ ಪೋಷಕರಿಗೆ ತಿಳಿಸಿದರೆ ಅವರೂ ಸಹ “ನೀನೇನಾದ್ರೂ ತಪ್ಪು ಮಾಡಿರ್ತೀಯಾ, ಅದ್ಕೆ ಶಿಕ್ಷೆ ಕೊಟ್ಟಿದ್ದಾರೆ” ಅಂತಾ ಅವರೇ ನಮಗೆ ಗದರಿಸುತ್ತಿದ್ದರು. ಕೆಲ ಮಕ್ಕಳಿಗೆ ಪೋಷಕರೂ ಬಾರಿಸುತ್ತಿದ್ದರು. ಇದನ್ನು ನೋಡಿ ಮಕ್ಕಳ್ಯಾರು ಶಿಕ್ಷೆ ಬಗ್ಗೆ ಮನೆಯಲ್ಲಿ ಚಕಾರ ಎತ್ತುತ್ತಿರಲಿಲ್ಲ.
ಮಲ್ಲಾಡಿಹಳ್ಳೀಲಿ ಮಕ್ಕಳ ಸಂಖ್ಯೆ ಜಾಸ್ತಿ ಇದ್ದದ್ರಿಂದ ಅವರನ್ನು ಕಂಟ್ರೋಲ್ ಮಾಡೋದು ಮೇಷ್ಟ್ರು, ವಾರ್ಡನ್‌ಗಳಿಗೆ ಬಹಳ ಕಷ್ಟ ಆಗ್ತಿತ್ತು ಅನಿಸುತ್ತೆ. ಅದಕ್ಕೆ ಶಿಕ್ಷೆ ಅವರಿಗೆ ಅನಿವಾರ್ಯವಾಗಿತ್ತು. ‘ಜಾಣರಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು’ ಎಂಬಂತೆ ಕೆಲವರು ಮೇಷ್ಟ್ರ ಬುದ್ಧಿ ಮಾತಿಗೆ ಸುಮ್ಮನಾದ್ರೆ ಹಲವಾರು ಮಕ್ಕಳು ಮತ್ತದೇ ತಪ್ಪು ಮಾಡ್ತಿದ್ರು. ತಪ್ಪಂದ್ರೆ ದೊಡ್ಡ ತಪ್ಪು ಅಂತಾ ಅಲ್ಲ. ಸುಖಾ ಸುಮ್ಮನೆ ಹರಟೆ ಹೊಡೆಯೋದು, ವಾರ್ಡನ್ ಕಣ್ತಪ್ಪಿಸಿ ಊರಿಗೆ ಹೋಗೋದು, ಭಜನೆ ಸೂರ್ಯ ನಮಸ್ಕಾರ ತಪ್ಪಿಸೋದು. ಶಾಲೆಯಲ್ಲಾದರೆ ಹೋಂ ವರ್ಕ್ ಬರೆಯದೇ ಇರೋದು. ಹಾಸ್ಟೆಲ್ಲಿನಲ್ಲಿ ನಮ್ಮ ವಾರ್ಡನ್ ಗಲಾಟೆ ಮಾಡುವವರನ್ನು ಕಂಡು ಹಿಡಿಯಲು ಅಸಾಧ್ಯ ಆದ್ದರಿಂದ ಸಾಮೂಹಿಕ ಶಿಕ್ಷೆ ಕೊಡುತ್ತಿದ್ದರು. ಹೇಗೆ ಅಂದ್ರೆ ರೂಂ ನಂಬರ್ 10 ಹತ್ತಿರ ಶಬ್ದ ಬಂದರೆ ಆ ರೂಮಿನಲ್ಲಿ ಇರುವವರಿಗೆಲ್ಲ ಹೊಡೆತ ಕೊಡ್ತಿದ್ರು. ಅದರಲ್ಲೂ ಮಲ್ಲಪ್ಪ ವಾರ್ಡನ್ ನಾಳೆ ಹತ್ತನೇ ರೂಮಿನವರಿಗೆ ಬಕೆಟ್ ಛಾರ್ಜ್ ಅಂದ್ರೆ ಮುಗೀತು. ಹತ್ತನೇ ರೂಮಿನವರು ಎರಡ್ಮೂರು ಚಡ್ಡಿಗಳನ್ನು ಹಾಕ್ಕೋಂಡು ಸೂರ್ಯ ನಮಸ್ಕಾರಕ್ಕೆ ಹೋಗ್ತಾ ಇದ್ರು. ಕಾರಣವಿಷ್ಟೇ; ಬಕೆಟ್ ಛಾರ್ಜ್ ಅಂದ್ರೆ ಅವರ ‘ಕೋಡ್ ವರ್ಡ್’ ಅಂದ್ರೆ ಕುಂಡೆ ಮೇಲೆ ಹೊಡೆಯೋದು! ಸೂರ್ಯನಮಸ್ಕಾರ ಮುಗಿದ ನಂತರ ಅವರು ಹೇಳಿದ ರೂಮಿನವರು ಬಗ್ಗಿ ನಿಲ್ಲಬೇಕಿತ್ತು. ಅವರು ರೂಲರ್‌ನಿಂದ ಏಟು ಕೊಡುತ್ತಾ ಹೋಗುತ್ತಿದ್ದರು. ಎಷ್ಟು ನೋವಾಗ್ತಿತ್ತು ಅಂದ್ರೆ ಅದನ್ನು ಹೇಳ್ಕೋಳ್ಳೋಕು ಆಗ್ತಾ ಇರಲಿಲ್ಲ. ಹಲವು ಸಲ ‘ಸುಖಾ ಸುಮ್ನೆ ಹೊಡೆತಾ ತಿನ್ನಬೇಕಲ್ಲಪ, ಯಾರೋ ತಪ್ಪು ಮಾಡಿದ್ದು ನಾವು ಹೊಡೆತ ತಿನ್ನಬೇಕಲ್ಲಪ್ಪ. ಇವರಿಗೆ ಅಷ್ಟೂ ಗೊತ್ತಾಗಲ್ವ?’ ಎಂದು ನಾವು ಮನದಲ್ಲಿ ಗೊಣಗಿಕೊಳ್ತಾ ಇದ್ವಿ.
ಇನ್ನು ಶಾಲೇಲಿ ಆಗ ನಮಗೆ ಕನ್ನಡ ಮೇಷ್ಟ್ರಾಗಿದ್ದವರು ಹೆಚ್.ಎಸ್.ಪಿ (ಹೆಚ್.ಎಸ್.ಪ್ರಭಾಕರ್) ಅಂತಾ. ನೋಡೋಕೆ ಟೈಗರ್ ಪ್ರಭಾಕರ್‌ರಂತೆ ಎತ್ತರವಾಗಿದ್ದು ದೈಹಿಕವಾಗಿ ಸದೃಢರಾಗಿದ್ದರು. ಅವರ ಘನಗಾಂಭೀರ್ಯ ನಡೆ, ಅವರ ಮಾತು, ನಿರೂಪಣೆ, ಪಾಠ ಮಾಡುವ ಶೈಲಿ, ಅವರ ಕಂಚಿನ ಕಂಠ, ಹಳೇ ಗನ್ನಡ ಪದ್ಯಗಳನ್ನು ಅವರು ಹಾಡುತ್ತಿದ್ದ ರೀತಿ ನಮ್ಮನ್ನು ಅವರೆಡೆಗೆ ಸೂಜಿಗಲ್ಲಿನಂತೆ ಆಕರ್ಷಿಸಿತ್ತು. ನಮ್ಮ ಆಶ್ರಮದ ಯಾವುದೇ ಸಭೆ ಸಮಾರಂಭಗಳಿಗೆ ಇವರೇ ನಿರೂಪಣೆ ಮಾಡುತ್ತಿದ್ದರು. ಬಂದಂತಹ ಅತಿಥಿಗಳ ಸಮೇತ ಇವರ ಆಸ್ಖಲಿತ ನುಡಿ, ಭಾಷಣದಲ್ಲಿ ಬಳಸುತ್ತಿದ್ದ ಸುಂದರ ಉಪಮೆಗಳಿಗೆ ನೆರೆದಿದ್ದ ಸಭಿಕರು ಫೀದಾ ಆಗುತ್ತಿದ್ದರು. ನಂತರ ಅವರೇ ಸ್ವತಃ ‘ಆಶ್ರಮಕ್ಕೆ ಏನಾದ್ರೂ ಡೊನೇಟ್ ಮಾಡುತ್ತೇವೆ’ ಎಂದು ಹೇಳುವಷ್ಟರ ಮಟ್ಟಿಗೆ ಇವರ ಮಾತು, ಬಂದವರನ್ನು ಪ್ರೇರೇಪಿಸುತ್ತಿತ್ತು. ‘ಮೃದು ವಚನ ಮೂಲೋಕ ಗೆಲ್ಲುವುದು ತಿಳಿಯಾ’ ಎಂಬಂತೆ ಸಾಂದರ್ಭಿಕವಾಗಿ ಇವರು ಬಳಸುತ್ತಿದ್ದ ಉಕ್ತಿಗಳು, ಶ್ಲೋಕಗಳು, ನಿದರ್ಶನಗಳು ಮುಖ್ಯ ಭಾಷಣಕಾರರಿಗಿಂತ ಇವರ ನಿರೂಪಣೆಯನ್ನೆ ಕೇಳಬೇಕು ಅನ್ನುವಷ್ಟರ ಮಟ್ಟಿಗೆ ಒಬ್ಬ ಉತ್ತಮ ನಿರೂಪಣಾಕಾರ ಆಗಿದ್ದರು.
ಒಮ್ಮೆ ನಮ್ಮ ಕ್ಲಾಸ್ ಮೇಟ್ ಒಬ್ಬ ಇವರ ಮಿಮಿಕ್ರಿ ಮಾಡಿ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ. ಇವರು ಅಂದು ಶಾಲೆಗೆ ಬಂದಿರಲಿಲ್ಲ. ಅದು ಹೇಗೋ ಏನೋ ಇವರ ಗಮನಕ್ಕೆ ಬಂದಿದೆ. ಮಾರನೇ ದಿನ ಶಾಲೆಗೆ ಬಂದು ನಮ್ಮ ಕ್ಲಾಸಿಗೆ ಬಂದ್ರು. ಬಂದ ಕೂಡಲೇ “ಯಾವನಲೋ ಅವನು ನನ್ನನ್ನೇ ಮಿಮಿಕ್ರಿ ಮಾಡಿದ್ದು?” ಅಂತಾ ಕೇಳಿದ್ರು. ತಕ್ಷಣ ಒಬ್ಬನು ಎದ್ದು ನಿಂತು ‘ಸಖತ್ತಾಗಿ ಮಾಡಿದ ಸರ್’ ಎಂದ. ಆಗ ಅವರಿಗೆ ಸಿಟ್ಟು ಬಂದು ‘ಅವನದ್ದನ್ನ ತಿನ್ನು ಹೋಗು’ ಎಂದು ಬಯ್ದರಲ್ಲದೆ “ನೋಡ್ರೋ ನಾನು ಮನಸ್ಸು ಮಾಡಿದ್ರೆ ಚಲನಚಿತ್ರ ನಟ ಕಲ್ಯಾಣ್ ಕುಮಾರ್ ರೀತಿ ಇರಬಹುದಿತ್ತು. ಅವರೇ ನನ್ನ ಅಭಿನಯ ಮೆಚ್ಚಿ ಚಿತ್ರರಂಗಕ್ಕೆ ಕರೆದರು. ಆದರೆ ನಾನು ಆಶ್ರಮದ ಮೇಲಿನ ಪ್ರೀತಿ, ರಾಘವೇಂದ್ರ ಸ್ವಾಮೀಜಿಯವರ ಮೇಲಿನ ಭಕ್ತಿಯಿಂದಾಗಿ ಇಲ್ಲೇ ಉಳಿದುಕೊಂಡೆ” ಎಂದಾಗ ನನಗೆ ತುಂಬಾ ಅಚ್ಚರಿಯಾಯ್ತು. ಆಶ್ರಮದ ಮೇಲೆ ಇವರಿಗಿರುವ ಅಭಿಮಾನ ಕಂಡು ನನಗೆ ಇವರ ಮೇಲೆ ಗೌರವ ದುಪ್ಪಟ್ಟಾಗಿತ್ತು. ಇವರು ಬಯ್ಯುವಾಗ ‘ಬೇಕೂಪ.. ಬೇಕೂಪ…’ ಎಂದು ಬಯ್ಯುತ್ತಾ ಇದ್ರು. ಕೈಯ ಹಿಂಬದಿಯ ಗೆಣ್ಣಿಗೆ ಮರದ ಡಸ್ಟರ್‌ನಿಂದ ಹೊಡೆಯುತ್ತಿದ್ದರು. ಇವರ ಬಳಿ ಅತ್ತು ಸಮಸ್ಯೆ ಹೇಳಿಕೊಂಡರೆ ಸಾಕು ಮಂಜಿನಂತೆ ಕರಗಿ ಬಿಡ್ತಾ ಇದ್ರು. ಈ ಟೆಕ್ನಿಕ್ ಅನ್ನ ನಮ್ಮ ಕ್ಲಾಸ್ ಮೇಟ್ ಸುನೀಲ ಚೆನ್ನಾಗಿ ತಿಳಿದುಕೊಂಡಿದ್ದ. ಅವನು ಪದೇ ಪದೇ ಕ್ಲಾಸಿಗೆ ಗೈರಾದಾಗ ಹೆಚ್.ಎಸ್ಪಿ. ಸರ್ ಹೊಡೆಯೋಕೆ ಕರೆದಾಗ ಕಣ್ಣಲ್ಲಿ ನೀರು ಸುರಿಸುತ್ತ ‘ನನಗೆ ಅಪೆಂಡೆಕ್ಸ್ ಆಪರೇಷನ್ ಆಗಿದೆ ಸರ್’ ಅಂತಾ ಅಳ್ತಾ ಇದ್ದ. ತಕ್ಷಣ ಅವರು “ಬಿಡ್ತು ಅನ್ನು ಬಿಡ್ತು ಅನ್ನು..… ನೋವಲ್ಲಿ ಅಳಬಾರದು. ಖುಷಿಯಲ್ಲೇ ಅದನ್ನು ಅನುಭವಿಸಬೇಕು” ಅಂತಾ ಅವನಿಗೆ ಹೊಡೆಯದೇ ಹಾಗೆ ಕಳಿಸಿ ಬಿಡ್ತಾ ಇದ್ರು.
ಇವರು ನಮ್ಮ ಕ್ಲಾಸ್ ಟೀಚರ್ ಆಗಿದ್ರು. ಸಂಜೆ ಐದೂವರೆವರೆಗೂ ಕ್ಲಾಸ್ ಮಾಡ್ತಿದ್ರು. ನೋಟ್ಸ್ ಬರೆಸ್ತಾ ಇರಲಿಲ್ಲ. ನೋಟ್ಸ್ ಅನ್ನೋ ಕಲ್ಪನೇನೂ ಇವರ ಬಳಿ ಇರಲಿಲ್ಲ. ಪಠ್ಯಪುಸ್ತಕವನ್ನು ಓದೋಕೆ ಹೇಳ್ತಾ ಇದ್ರು. ನಾವೂ ಅಷ್ಟೇ ಕನ್ನಡ ನೋಟ್ಸ್ ಇಟ್ಟಂತೆ ಮಾಡಿ ಬರೀ ಪಠ್ಯಪುಸ್ತಕ ಓದ್ತಾ ಇದ್ವಿ. ಇನ್ನು ಅಕ್ಷರ ದುಂಡಾಗಿ ಬರೆಯುವಂತೆ ಮಾಡಿದ ಇವರ ಪ್ರಯತ್ನ ವಿಶೇಷವಾಗಿತ್ತು. ಇವರು ನಮಗೆ ಹತ್ತನೇ ತರಗತಿ ಮುಗಿಯೋವರೆಗೂ ಸೊನ್ನೆ, ಅರ್ಧ ಸೊನ್ನೆ ಬರೆಯೋಕೆ ಕೊಡ್ತಾ ಇದ್ರು! ಇದಕ್ಕವರು “ಕನ್ನಡ ವರ್ಣಮಾಲೆಯ ಅಕ್ಷರಗಳೆಲ್ಲವೂ ಸೊನ್ನೆಯಿಂದ ಶುರುವಾಗುತ್ತವೆ. ಯಾರಿಗೆ ಸೊನ್ನೆ ಚೆನ್ನಾಗಿ ಬರೆಯೋಕೆ ಬರುತ್ತೋ ಅವರ ಕನ್ನಡ ಬರೆವಣಿಗೆ ಉತ್ತಮವಾಗುತ್ತದೆ” ಎಂದು ಹೇಳ್ತಾ ಇದ್ರು. ನಮ್ಮ ಬರೆವಣಿಗೆಯಲ್ಲಿ ಆದ ಪ್ರಗತಿ ನೋಡಿದಾಗ ಇದು ನಿಜ ಎನಿಸುತ್ತೆ. ಇಂಥಾ ಸೃಜನಶೀಲ ಕಲಿಕಾತಂತ್ರಗಳನ್ನು ಅನುಸರಿಸ್ತಾ ಇದ್ದವರು ನಮ್ಮ ಹೆಚ್ಚೆಸ್ಪಿ!
ಇಂದು ಪೋಷಕರು ‘ಅಂಕವಾದಿ’ಗಳಾಗಿ ಮಕ್ಕಳನ್ನು ಅಂಕ ತೆಗೆಸುವುದಕ್ಕಾಗಿ ಒತ್ತಡ ಹಾಕುತ್ತಿರುವುದರಿಂದ ಶಿಕ್ಷಕರೂ ಇದೇ ದಾರಿ ಹಿಡಿದಿದ್ದಾರೆ. ಆದರೆ ಹೆಚ್ಚೆಸ್ಪಿ ಸರ್ ಎಂದೂ ಈ ಪಾಠ, ಪ್ರಶ್ನೆ ಪರೀಕ್ಷೆಗೆ ಇಂಪಾರ್ಟೆಂಟ್ ಇದನ್ನು ಓದಿಕೊಳ್ಳಿ ಎಂದು ಹೇಳಿದ್ದನ್ನು ನಾವು ಕೇಳಲಿಲ್ಲ. ಪಾಠದ ಮಧ್ಯೆ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳ್ತಾ ಇದ್ರು. ಇವರ ವ್ಯಕ್ತಿತ್ವ ನಮ್ಮಲ್ಲೂ ನಾವೂ ಉತ್ತಮ ಭಾಷಣಕಾರರಾಗುವ ಆಸೆಯನ್ನು ಬೆಳೆಸಿದ್ದಂತೂ ಸುಳ್ಳಲ್ಲ. ನಮಗೆ ಆಗ ಹೆಚ್ಚು ಕ್ಲಾಸ್ ತೆಗೆದುಕೊಳ್ಳುವಾಗ ‘ಯಾಕಪ್ಪಾ ಇವರು ಹೀಗೆ ಕೊರೀತಾರೆ’ ಎಂದು ಮನಸ್ಸಲ್ಲೇ ಬಯ್ದುಕೊಂಡಿದ್ದುಂಟು. ಆದರೆ ಇಂದು ಇವರನ್ನು ನೆನೆಸಿಕೊಂಡ್ರೆ ಇವರ ಬಗ್ಗೆ ಗೌರವ ಇನ್ನೂ ಹೆಚ್ಚು ಮೂಡುತ್ತೆ. ಇವರ ಬಾಯಲ್ಲಿ ಬೇಕೂಪ ಅನ್ನೋದೊಂದು ಬಿಟ್ರೆ ಬೇರೆ ಯಾವ ಬಯ್ಗುಳಗಳನ್ನು ನಾವು ಕೇಳಿದ್ದಿಲ್ಲ!
ಇವರಂತೆ ನನ್ನ ಮೇಲೆ ಪ್ರಭಾವ ಬೀರಿದ ಮತ್ತೋರ್ವ ಮೇಷ್ಟ್ರು ಇದ್ದರು. ಅವರೇ ಗುರುಮೂರ್ತಿ ಸರ್. ಇವರಿಗೆ ಜಿ.ಎಂ.ಜಿ. ಎಂದು ಕರೆಯುತ್ತಿದ್ದೆವು. ಇವರು ನಮಗೆ ಸಂಸ್ಕೃತ ತೆಗೆದುಕೊಳ್ಳುತ್ತಿದ್ದರು. ಇಂಗ್ಲೀಷ್ ಮೀಡಿಯಂ ಓದುವವರು ಸಂಸ್ಕೃತವನ್ನು ಕಡ್ಡಾಯವಾಗಿ ಓದಬೇಕಿತ್ತು. ನಮಗೆ ಹಿಂದಿ ಇರಲಿಲ್ಲ. ಇವರು ಆಶ್ರಮದಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಇವರು ಸಂಸ್ಕೃತ ಪ್ರಶ್ನೋತ್ತರಗಳನ್ನು ಪ್ರತಿಯೊಬ್ಬರಿಗೂ ಕಲಿಸಿ ಎಲ್ಲರಿಗೂ ಬರುವ ತನಕವೂ ಮುಂದಿನ ಪಾಠಕ್ಕೆ ಹೋಗುತ್ತಿರಲಿಲ್ಲ. ಹಾಗಂತ ಸಿಲೆಬಸ್ ಅನ್ನು ಮುಗಿಸದೇ ಇರುತ್ತಿರಲಿಲ್ಲ. ತುಂಬಾ ಡೆಡಿಕೇಟೆಡ್ ಆಗಿ ಪಾಠ ಮಾಡ್ತಾ ಇದ್ರು. ಇವರು ಕಲಿಸಿದ ಶ್ಲೋಕಗಳು ಇಂದೂ ಸಹ ನನ್ನ ಸ್ಮೃತಿಪಟಲದಲ್ಲಿವೆ. ವ್ಯಾಕರಣದಲ್ಲಿ ಬರುವ ಸಂಧಿಗಳ ಅರ್ಥ ಇಂದಿಗೂ ನನಗೆ ನೆನಪಿದೆ. ಭಾಷಣ ಮಾಡುವಾಗ ಸಂಸ್ಕೃತ ಶ್ಲೋಕಗಳನ್ನು ಇಂದೂ ನಾನು ಬಳಸುತ್ತಿರುವುದು ಇವರ ದೆಸೆಯಿಂದಾಗಿಯೇ. ಇವರು ಆಗ ಅವಿವಾಹಿತರಾಗಿದ್ದರು. ಒಮ್ಮೆ ನಾನು ಶಾಲೆಯಲ್ಲಿ ಇಟ್ಟ ಆಶು ಭಾಷಣ ಸ್ಪರ್ಧೆಯಲ್ಲಿ ಒಂದು ಬಯ್ಗುಳದ ಪದ ಬಳಸಿದ್ದಕ್ಕಾಗಿ ಇವರು ನನ್ನನ್ನು ಒಂದೆರಡು ತಿಂಗಳು ನನ್ನನ್ನು ಮಾತನಾಡಿಸುವುದಿರಲಿ ನನ್ನ ಕಡೆ ನೋಡಿಯೇ ಇರಲಿಲ್ಲ! ಇವರೂ ಅಷ್ಟೇ ಕೈಯ ಗೆಣ್ಣಿಗೆ ಹೊಡೆಯುತ್ತಿದ್ದರು. ತಲೆಕೂದಲು ಒಂಚೂರು ಉದ್ದ ಬಿಟ್ಟರೆ ಸಾಕು ‘ಎಂಥಾ ಇದು, ಕೂದಲು ಉದ್ದ? ಸೀಮೆಎಣ್ಣೆ ಹಾಕಿ ಬೆಂಕಿ ಹಾಕ್ತೀನಿ’ ಎಂದು ಹೇಳ್ತಾ ಇದ್ರು.
ಇನ್ನು ಗಣಿತ ಮೇಷ್ಟ್ರು ‘ಎವಿ ಸರ್’ ತುಂಬಾ ಸ್ಟ್ರಿಕ್ಟ್ ರೀತಿ ನಮಗೆ ಕಾಣ್ತಾ ಇದ್ರು. ಇವರಿಗೆ ಸಿಟ್ಟು ಬಂದ್ರೆ ಕಪಾಳಮೋಕ್ಷ ಮಾಡ್ತಾ ಇದ್ದರು. ಎಲ್ಲಿಯವರೆಗೂ ಎಂದ್ರೆ ನಾವು ಸಮವಸ್ತ್ರವೆಂದು ಹಾಕುತ್ತಿದ್ದ ಗಾಂಧೀ ಟೋಪಿ ಬೀಳುವವರೆಗೂ! ಒಂದೊಮ್ಮೆ ಆ ಟೋಪಿ ಕೆಳಕ್ಕೆ ಬಿತ್ತಾ; ಆಗ ಅವರು ಹೊಡೆಯೋದನ್ನು ನಿಲ್ಲಿಸಿ ಬಿಡ್ತಾ ಇದ್ರು. ಈ ಟೆಕ್ನಿಕ್ ನನಗೆ ಗೊತ್ತಿರಲಿಲ್ಲ. ಒಮ್ಮೆ ಗಣಿತ ಹೋಂ ವರ್ಕ್‌ನಲ್ಲಿ ನಾನು ಲೆಕ್ಕದಲ್ಲಿ ಸಮ ಚಿಹ್ನೆ ಹಾಕಿಲ್ಲವೆಂದು ಕಪಾಳಮೋಕ್ಷ ಮಾಡೋಕೆ ಶುರುಮಾಡಿದ್ರು. ನಾನು ನೇರವಾಗಿ ನಿಂತಿದ್ದರಿಂದ ಕಪಾಳಕ್ಕೆ ಹೊಡೀತಾನೆ ಇದ್ರು. ಸ್ವಲ್ಪ ಹೊತ್ತಾದ ಮೇಲೆ ಟೋಪಿ ಕೆಳಕ್ಕೆ ಬಿದ್ದ ತಕ್ಷಣ ಹೊಡೆಯುವುದನ್ನು ನಿಲ್ಲಿಸಿಬಿಟ್ರು. ಆಗ ಕ್ಲಾಸ್ ಮುಗಿದ ಮೇಲೆ ನನ್ನ ರೂಂಮೇಟ್ಸ್, ಅವರಿಂದ ಹೊಡೆತ ತಪ್ಪಿಸಿಕೊಳ್ಳೋ ತಂತ್ರಾನ ಹೇಳಿದ್ರು. ‘ನನಗೆ ಮೊದಲೇ ಹೇಳಬಾರದಿತ್ತ. ಗೊತ್ತಿದ್ದಿದ್ರೆ ಹೆಚ್ಚಿನ ಹೊಡೆತದಿಂದ ತಪ್ಪಿಸಿಕೊಳ್ಳಬಹುದಿತ್ತು’ ಅಂತ ಅವರಿಗೆ ಹೇಳಿದೆ. ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು? ಎಂದುಕೊಂಡು ನಾನೇ ಸುಮ್ಮನಾಗ್ತಿದ್ದೆ. ಇಂದಿಗೂ ಸಹ ಲೆಕ್ಕ ಮಾಡುವಾಗ ಸಮಚಿಹ್ನೆ ಬಂದಾಗಲೆಲ್ಲ ಎವಿ ಸರ್ ನೆನಪು ಬರ್ತದೆ. ಇವರ ಮೀಸೆ ಸ್ಟೈಲು ಚಿಕ್ಕದಾಗಿದ್ರಿಂದ ಯಾರಿಗೂ ಗೊತ್ತಾಗದಂತೆ ನಾವೇ ಹಾಸ್ಟೆಲ್ಲಿನಲ್ಲಿ ‘ಚಾರ್ಲಿ’ ಅಂತಿದ್ವಿ. ಶಾಲೆಯಲ್ಲಿ ಅಪ್ಪಿ ತಪ್ಪಿಯೂ ಈ ಪದ ಬಳಸ್ತಾ ಇರಲಿಲ್ಲ. ಕಾರಣ ಇವರ ಮಗ ನಮ್ಮ ಕ್ಲಾಸ್ ಮೇಟ್ ಆಗಿದ್ದ! ಇವರು ಅಂಕಗಣಿತ, ಬೀಜಗಣಿತದ ಎಕ್ಸ್ ಪರ್ಟ್.
ಇನ್ನು ಬಯಾಲಜಿ ಮೇಷ್ಟ್ರ್ರು ಎಪಿಎನ್ ಸರ್.(ಅ.ಪು.ನಾರಾಯಣಪ್ಪ ಸರ್) ಇದ್ದರು. ಇವರ ಬಯಾಲಜಿ ಪಾಠ ತುಂಬಾ ಇಷ್ಟವಾಗ್ತಿತ್ತು. ಇವರನ್ನು ಕಂಡರೆ ಇಡೀ ಶಾಲೆಯ ಎಲ್ಲಾ ಮಕ್ಕಳು ಹೆದರುತ್ತಿದ್ದರು. ಪ್ರಾರ್ಥನಾ ಸಮಯದಲ್ಲಿ ಇವರ ಆಗಮನವಾದ ತಕ್ಷಣ ಮಕ್ಕಳೆಲ್ಲಾ ‘ಗಪ್ ಚುಪ್’ ಆಗ್ತಾ ಇದ್ರು. ಇವರು ಅಪ್ಪಟ ದೇಶಪ್ರೇಮಿ ಆಗಿದ್ರು. ದೇಶದ ಇತಿಹಾಸದ ಕಥೆಗಳನ್ನು ತುಂಬಾ ರಸವತ್ತಾಗಿ ಹೇಳ್ತಾ ಇದ್ರು. ಕೇಳುಗರಲ್ಲಿ ದೇಶಭಕ್ತಿಯ ಕಿಚ್ಚು ಹತ್ತಿಸುತ್ತಿದ್ದರು. ಇವರು ಹೊಡೆಯುತ್ತಿರಲಿಲ್ಲ. ಮಕ್ಕಳಿಗೆ ಹೊಡೆಯದೇ ಇದ್ರೂ ಇವರಿಗೆ ಮಕ್ಕಳು ಸಾಕಷ್ಟು ಹೆದರುತ್ತಿದ್ದರು. ಗೌರವಮಿಶ್ರಿತ ಭಯ. ಸಾಮಾನ್ಯವಾಗಿ ಮಕ್ಕಳು ಹೆಚ್ಚು ನಾಲೆಡ್ಜ್ ಇರುವ ಶಿಕ್ಷಕರನ್ನು ಕಂಡರೆ ಈ ರೀತಿ ಹೆದರುತ್ತಾರೆ. ಆಶ್ರಮದ ಸಭೆ ಸಮಾರಂಭಗಳಲ್ಲಿ ಇವರು ಮುಖ್ಯ ಭಾಷಣಕಾರರಾಗುತ್ತಿದ್ದರು. ಇವರು ಆಶ್ರಮದ ಗುರುಗಳು, ಆಶ್ರಮ ಕಟ್ಟಿದ ರೀತಿ ಹಾಗೂ ಅವರ ಜೀವನದ ಕೆಲ ನಿದರ್ಶನಗಳನ್ನು ಹೇಳುವಾಗ ಕೇಳುಗರೆಲ್ಲರೂ ಸಾವಧಾನವಾಗಿ ಮೈಯೆಲ್ಲಾ ಕಿವಿಯನ್ನಾಗಿಸಿಕೊಂಡು ಕೇಳುತ್ತಿದ್ದರು. ಇವರು ನಮಗೆ ಸಿಕ್ಕಿದ್ದು ಎಂಟನೆಯ ತರಗತಿಯಲ್ಲಿ ಮಾತ್ರ. ಮುಂದೆ ಕಾಲೇಜಿನ ಪ್ರಾಂಶುಪಾಲರಾಗಿ ಸಿಕ್ಕರು. ಅದರ ಬಗ್ಗೆ ಮುಂದೆ ಬರೆಯುತ್ತೇನೆ.
ಹಲವರ ವ್ಯಕ್ತಿತ್ವಗಳ ಮೇಲೆ ಅವರ ಮೇಷ್ಟ್ರು ಅಥವಾ ಮೇಡಂ ಗಳ ಪ್ರಭಾವ ಬಿದ್ದಿರುತ್ತದೆ. ‘ಶಿಕ್ಷಕರು ಪ್ರಜ್ಞಾಪೂರಕವಾಗಿ ತಮಗೇನು ತಿಳಿದಿದೆಯೋ ಅದನ್ನು ಬೋಧಿಸುತ್ತಾರೆ. ಆದರೆ ಅಪ್ರಜ್ಞಾಪೂರಕವಾಗಿ ತಾವೇನು ಎಂಬುದನ್ನು ಬೋಧಿಸುತ್ತಾರೆ!” ಎಂಬ ಮಾತು ಶಿಕ್ಷಕರ ವ್ಯಕ್ತಿತ್ವ ಹೇಗಿರಬೇಕು ಎಂದು ತಿಳಿಸುತ್ತದೆ. ಆದ್ದರಿಂದ ಶಿಕ್ಷಕರಾದವರು ತಾವೇನು ಹೇಳುತ್ತಾರೋ ಅದನ್ನು ಮೊದಲು ತಾವು ಅನುಸರಿಸಬೇಕು. ಹಾಗಿದ್ದಲ್ಲಿ ಮಾತ್ರ ಅವರ ಮಾತನ್ನು ಮಕ್ಕಳು ನಂಬಿ ಅದನ್ನು ಅವರು ಅನುಸರಿಸುತ್ತಾರೆ. ಅದನ್ನು ಬಿಟ್ಟು ‘ಪುರಾಣ ಹೇಳೋಕೆ ಬದನೆಕಾಯಿ ತಿನ್ನೋಕೆ’ ಎಂಬಂತೆ ಬರೀ ಮೌಲ್ಯಗಳನ್ನು ಹೇಳಿದರಷ್ಟೇ ಮಕ್ಲಳಲ್ಲಿ ಬದಲಾವಣೆ ಕಾಣೋಕೆ ಸಾಧ್ಯವಿಲ್ಲ. ‘Values are not taught, but can be caught’ ಎಂಬಂತೆ ಮೊದಲು ಆಚರಣೆಗೆ ಒತ್ತು ಕೊಡಬೇಕು. ನಂತರ ಅದರ ಬಗ್ಗೆ ಸ್ವಲ್ಪವೇ ಹೇಳಿದರೆ ಸಾಕು ಅಥವಾ ಹೇಳದಿದ್ದರೂ ನಡೆದೀತು. ಈ ಮಾತು ಕೇವಲ ಕಲಿಸುವ ಶಿಕ್ಷಕರಿಗೆ ಅಷ್ಟೇ ಅಲ್ಲ. ಮನೆಯ ಪೋಷಕರಿಗೂ ಅನ್ವಯವಾಗುತ್ತದೆ. ಏಕೆಂದರೆ ಒಂದು ಮಗು ದಿನದ 24 ಗಂಟೆಯಲ್ಲಿ ಶಾಲೆಯಲ್ಲಿ ಬರೀ 8 ಗಂಟೆ ಇರುತ್ತಾನೆ. ಆದರೆ ಇನ್ನುಳಿದ 16 ಗಂಟೆ ಮನೇಲಿ ಇರುತ್ತಾನೆ. ಸಮಾಜದಲ್ಲಿರುವ ಉಳಿದವರೂ ಕೂಡ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ‘ಸಂಗದಂತೆ ಬುದ್ಧಿ ಊಟದಂತೆ ಲದ್ಧಿ’ ಎಂಬಂತೆ ಸಹವಾಸವೂ ಕೂಡ ಮುಖ್ಯ. ಆದ್ದರಿಂದ ಮಕ್ಕಳಿಗೆ ಕೇಳಿದ್ದನ್ನು ಕೊಡಿಸುವುದಷ್ಟೇ ಕೆಲಸ ಅಲ್ಲ ಅವರ ಜೊತೆ ಸಮಯ ಕಳೆಯುವ ಜೊತೆಗೆ ಉತ್ತಮ ಪರಿಸರ ಕೊಡುವುದು ಮುಖ್ಯ.
ಈಗ ನಾನು ಭಾಷಣವನ್ನು ಮಾಡ್ತೇನೆ, ಚೂರು ಬರೀತೀನಿ ಅಂದ್ರೆ ಇದಕ್ಕೆ ನಮ್ಮ ಪ್ರೈಮರಿ ಶಾಲೆಯ ಲೋಕಪ್ಪ ಮೇಷ್ಟ್ರು, ಹೆಚ್‌ಎಸ್ಪಿ ಸರ್, ಗುರುಮೂರ್ತಿ ಸರ್ ಕಾರಣ ಎಂದು ಹೇಳ್ತಾ ಅವರಿಗೆ ಮತ್ತೊಮ್ಮೆ ಮಗದೊಮ್ಮೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಶಿಕ್ಷಣ ಹಾಗೂ ಶಿಕ್ಷಕರ ಕುರಿತ ತಮ್ಮ ಬರವಣಿಗೆ ತುಂಬ ಉತ್ತಮವಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾದರಿ.
ನಿರೂಪಣೆ ಸ್ವಲ್ಪ ನೀರಸ ಅನಿಸ್ತು. ಎಲ್ಲ ಶಿಕ್ಷಕರ ಹೆಸರನ್ನು ನಮೂದಿಸಿದರೆ ಚೆನ್ನಾಗಿತ್ತು. ಇನ್ನೂ ವಿವರವಾಗಿ ಬರೆಯಬಹುದಾಗಿತ್ತು. ಇರೋದು ತುಂಬಾ ಚೆನ್ನಾಗಿದೆ.
Super sir
ಬಾಲ್ಯದ ಗುರು ಪರಂಪರೆಯ….ನೆನಪುಗಳ ಚಿತ್ರಣ ಚೆನ್ನಾಗಿ ಮೂಡಿದೆ.
ಫೀದಾ ಎಂದು type ಆಗಿದೆ. ಅದು
ಫಿದಾ ಆಗಬೇಕು.
ಶಿಕ್ಷಕರ ವ್ಯಕ್ತಿತ್ವ ಶಾಲೆಯಲ್ಲಿ ಹೇಗಿರಬೇಕು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ವರ್ಣಿಸಿದ್ದೀರಿ. ಅದೂ ಅಲ್ಲದೆ ಪೋಷಕರಾದ ನಮ್ಮ ಪ್ರಾಮಾಣಿಕ ನಡೆ ಮಕ್ಕಳ ಬೆಳವಣಿಗೆಗೆ ಯಾವ ರೀತಿ ಕಾರಣವಾಗುತ್ತದೆ ಎಂಬುದನ್ನು ಬಹಳ ಮಾರ್ಮಿಕವಾಗಿ ತಿಳಿಸಿದ್ದಿರಿ. ಶಾಲಾ ದಿನಗಳ ಸಿಹಿಯಾದ ನೆನಪಿನ ಬುತ್ತಿಯನ್ನು ಉಣಬಡಿಸುತ್ತಿದ್ದಿರಿ,ನಾವು ಸವಿಯುತ್ತಿದ್ದೇವೆ. ಧನ್ಯವಾದಗಳು ತಮಗೆ.
How a teacher can influence a student, we are lucky that we had a such a wonderful teacher.
Thank you all my teachers