ಮನೆಯಲ್ಲಿನ ಹೆಂಡತಿಯ ಮೇಲೆ ಮುನಿದಿದ್ದ ಮಾಮ ತನಗೆ ಇನ್ನೊಂದು ಮದುವೆ ಮಾಡಬೇಕೆಂದು ತನ್ನ ಹೆಂಡತಿಯನ್ನೇ ಬಲವಂತಿಸಿದ, ನಿರ್ಮಲತ್ತೆಯ ವಿದ್ಯಾರ್ಥಿನಿಯೊಬ್ಬರನ್ನು ಮದುವೆಯಾದ ಕೂಡ. ಅದೂ ಸರಿ ಹೋಗದೆ ಮೂರನೇ ಮದುವೆಯನ್ನೂ ಆಗಿ ಅವಳಿಗೆ ಒಂದು ಮಗುವನ್ನು ಕರುಣಿಸಿದ. ಇವನ ಈ ಎಲ್ಲ ಸಾಹಸಗಳಿಂದಾಗಿ ಸಧವೆಯಾಗಿದ್ದರೂ, ವಿಧವೆಯಾದರೂ ನಿರ್ಮಲತ್ತೆಗೆ ಕಷ್ಟಗಳು ತಪ್ಪಲಿಲ್ಲ. ಅವರ ಮುಂದಿನ ಜೀವನ ದೇವರಿಗೇ ಪ್ರೀತಿ ಎಂಬಂತಾಯಿತು. ಹೆಸರಿಗೆ ಮಾತ್ರವಾದರೂ ಇದ್ದಾನೆ ಎಂಬಂತಿದ್ದ ಗಂಡ ಸತ್ತುಹೋದ.
ಡಾ. ಎಲ್.ಜಿ. ಮೀರಾ ಬರೆದ ಈ ಭಾನುವಾರದ ಕತೆ “ಪರದೇಸಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

“ನಿನ್ನ ಚಿಂಗುಮಾಮ ನನ್ನ ಬಿಟ್ಟು ಹೋಗ್ಬಿಟ್ರಲ್ಲೇ ರಾಧೀ..” ಮೂಳೆಮೂಳೆಯಾಗಿದ್ದ ತಮ್ಮ ಅಂಗೈಯ ಹಿಂಭಾಗದಿಂದ ಮತ್ತೆ ಮತ್ತೆ ಕಣ್ಣೊರೆಸಿಕೊಳ್ಳುತ್ತಾ ನಿರ್ಮಲತ್ತೆ ಹೇಳಿದಾಗ ನನ್ನ ಹೊಟ್ಟೆಯಲ್ಲಿ ಹೇಳತೀರದ ಸಂಕಟವಾಯಿತು.
ಸಾವಿನ ಮನೆ. ಒಳಗೆ ಹೊರಗೆ ಓಡಾಡುತ್ತಿದ್ದ ಜನ. ನಲವತ್ಮೂರು ವರ್ಷಕ್ಕೆಯೇ ಈ ಲೋಕಕ್ಕೆ ವಿದಾಯ ಹೇಳಿ, ನಿರ್ಮಲತ್ತೆಗೆ ವಿಧವೆಯ ಪಟ್ಟ ಹೊರಿಸಿ ಹೊರಟುಬಿಟ್ಟಿದ್ದ ನನ್ನ ದಿವಸ್ಪತಿ ಮಾಮ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಚಿಂಗು ಅಂತ ಕರೆಯುತ್ತಿದ್ದರು ಅವನನ್ನ. ನನ್ನ ತಾಯಿಯ ಕಡೆಯ ತಮ್ಮ. `ಯಾವಾಗ ತಾನೇ ನಿಮ್ಮ ಜೊತೆಗಿದ್ದ ನಿರ್ಮಲತ್ತೆ ಅವ್ನು, ಈಗ ಬಿಟ್ಟು ಹೋಗಕ್ಕೆ?…’ ಅಂತ ನನ್ನ ಮನಸ್ಸು ರೋಧಿಸಿದರೂ ಏನೂ ಮಾತಾಡದೆ ಸುಮ್ಮನೆ ಅತ್ತೆಯ ಹೆಗಲು ತಬ್ಬಿದೆ.
ಚಿಂಗುಮಾಮನದು ತುಂಬ ಪ್ರೀತಿವಂತ ಮನಸ್ಸು ಆದರೆ ಅಷ್ಟೇ ಅವಿವೇಕದ ವ್ಯಕ್ತಿತ್ವ. ತನ್ನ ತಾಯಿ-ತಂದೆ, ಅಕ್ಕಂದಿರು, ಅಕ್ಕಂದಿರ ಮಕ್ಕಳಾದ ನಾವುಗಳು ಎಲ್ಲರ ಮೇಲೆ ಧಾರೆಧಾರೆಯಾಗಿ ಪ್ರೀತಿ ಸುರಿಯುತ್ತಿದ್ದ. ಅದರಲ್ಲೂ ಅವರ ಕುಟುಂಬದ ಮೊದಲ ಮೊಮ್ಮಗುವಾದ ನನ್ನ ಮೇಲೆ ಅವನಿಗೆ ವಿಶೇಷ ಅಕ್ಕರೆ. ಕಡುಬಡತನದಲ್ಲಿ ಬೆಳೆದ ಅವನು, ಅವನ ಹಿರಿಯಕ್ಕ ಅಂದರೆ ನನ್ನ ಅಮ್ಮ ಕಷ್ಟ ಪಟ್ಟು ತನ್ನನ್ನು ಇಂಜಿನಿಯರಿಂಗ್ ಓದಿಸುತ್ತಿದ್ದಾಗ, ಸಿನಿಮಾ ಥಿಯೇಟರುಗಳಲ್ಲಿ, ರೇಸ್‌ಕೋರ್ಸುಗಳಲ್ಲಿ ಟಿಕೇಟು ಕೊಡುವ ಕೆಲಸ ಮಾಡಿ ತನ್ನ ಕಾಲೇಜು ಶುಲ್ಕಕ್ಕೊಂದಷ್ಟು ದುಡ್ಡು ಸಂಪಾದಿಸುತ್ತಿದ್ದವನು. ಇಂಥವನಿಗೆ ಕೆಇಬಿಯಲ್ಲಿ ಸರ್ಕಾರಿ ಕೆಲಸ ಸಿಕ್ಕಿದಾಗ ನನ್ನಮ್ಮ ನೆಮ್ಮದಿಯ ನಿಟ್ಟುಸಿರಿಟ್ಟಿದ್ದಳು. ಇನ್ನು ಅವನ ಜೀವನ ನೆಲೆ ಕಾಣುತ್ತೆ ಅಂತ ನಂಬಿ ತುಸು ನಿರಾಳವಾಗಿದ್ದಳು.
ಆದರೆ ಜೀವನ ಯಾವಾಗ ತಾನೇ ನಮ್ಮ ಲೆಕ್ಕಾಚಾರದ ಪ್ರಕಾರ ನಡೆಯುತ್ತೆ! ಮೊದಮೊದಲು ಚೆನ್ನಾಗಿಯೇ ಕೆಲಸ ಮಾಡುತ್ತ ತನ್ನ ಇಲಾಖೆಯಲ್ಲಿ ಒಳ್ಳೆ ಹೆಸರು ತಗೊಂಡ ಮಾಮ ತನ್ನೂರು ಹಾಸನದಿಂದ ಚಿಕ್ಕಮಗಳೂರಿಗೆ ವರ್ಗಾವಣೆಯಾದಾಗ ನಿಧಾನಕ್ಕೆ ಬದಲಾದ. ತಾನು ಗಳಿಸುತ್ತಿದ್ದ ಸಂಬಳ ತಂದುಕೊಟ್ಟ ಸ್ವಾತಂತ್ರ್ಯವೋ, ಸಹವಾಸ ದೋಷವೋ ಇನ್ನೇನು ಸುಡುಗಾಡೋ…. ಒಟ್ಟಿನಲ್ಲಿ ನಿಧಾನಕ್ಕೆ ಕೆಟ್ಟ ಸಹವಾಸಕ್ಕೆ ಬಿದ್ದು ಕುಡಿಯುವುದನ್ನು ಕಲಿತ. ನೋಡಲು ಹಿಂದಿ ಸಿನಿಮಾನಟ ರಿಷಿಕಪೂರ್‌ನಂತೆ ಚೆಲುವ ಚೆನ್ನಿಗನಾಗಿದ್ದು ಚಂದ ಚಂದದ ಬಟ್ಟೆ ಧರಿಸುತ್ತಿದ್ದ. ಜೊತೆಗೆ ಜೂಲು ನಾಯಿ ಸಾಕುವ ಹವ್ಯಾಸ ಅವನಿಗೆ. ಅವನ ಒಂದು ವಿಚಿತ್ರ ಬುದ್ಧಿ ಎಂದರೆ ತಾನು ಸಾಕುವ ನಾಯಿಗಳಿಗೆಲ್ಲ ರಾಧಾ ಎಂದು ನನ್ನ ಹೆಸರನ್ನೇ ಇಡುತ್ತಿದ್ದ! “ಎಂಥದಿದು ಇಂಜಿನಿಯರ್ ಸಾಹೇಬ್ರೇ? ಯಾರಾದ್ರೂ ನಾಯಿಗೆ ರಾಧಾ ಅಂತ ಹೆಸರಿಡ್ತಾರಾ?” ಅಂತ ಪರಿಚಿತರು ಕೇಳಿದ್ರೆ, “ಅದು ನಮ್ಮ ಮನೆಯ ಮೊದಲ ಮೊಮ್ಮಗು ಹೆಸರು ರೀ. ನಂಗೆ ತುಂಬ ಇಷ್ಟ. ಮತ್ತೆ ಮತ್ತೆ ಕರೀತಾ ಇರೋಣ ಅಂತ ಆ ಹೆಸರಿಡ್ತೀನಿ ನಾಯಿಗೆ” ಎಂದು ಉತ್ತರಿಸಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸುತ್ತಿದ್ದ. ಕಾಫಿ ಬಣ್ಣದ ಅರ್ಧ ತೋಳಿನ ಶರಟು ಧರಿಸಿ, ಕಪ್ಪು ಕನ್ನಡಕವನ್ನು ಸ್ಟೆöÊಲಾಗಿ ಹಾಕಿಕೊಂಡು ಬಿಳಿ-ಕಂದು ಬಣ್ಣದ ರಾಧಾ ನಾಯಿಯನ್ನು ಎಡಗೈಯಲ್ಲಿ ಎತ್ತಿಕೊಂಡು ಅವನು ತೆಗೆಸಿಕೊಂಡಿದ್ದ ಚಿತ್ರ! ಅಬ್ಬ! ನೋಡಿದವರು ಮತ್ತೊಂದು ಸಲ ನೋಡುವಂತಿತ್ತು.
ಹೀಗೆ ಖುಷಿಖುಷಿಯಾಗಿ ಬದುಕುತ್ತಿದ್ದವನು ಕುಡಿತ ಕಲಿತದ್ದು ಮಾತ್ರವಲ್ಲ, ಇನ್ನೂ ಹಲವು ಭಂಡ ಸಾಹಸಗಳನ್ನು ಮಾಡುತ್ತಿದ್ದಿರಬೇಕು. ಇದರಿಂದಾಗಿಯೇ ನಿರ್ಮಲತ್ತೆ ಅವನ ಜೀವನದಲ್ಲಿ ಬಂದಿರಬೇಕು ಅಥವಾ ಅವನು ನಿರ್ಮಲತ್ತೆಯ ಜೀವನದಲ್ಲಿ ಧೂಮಕೇತುವಿನಂತೆ ಧುಮುಕಿರಬೇಕು.
******
ಗತಕಾಲದ ಆಲೋಚನೆಗಳಲ್ಲಿ ಕಳೆದು ಹೋಗಿದ್ದ ನನ್ನನ್ನು “ಅಯ್ಯೋ ಪಾಪ, ಚಿಕ್ಕ ವಯಸ್ಸು. ಸಾಯೋ ವಯಸ್ಸೇ ಅಲ್ಲ ನೋಡಿ, ಇಂಜಿನಿಯರ್ ಸಾಹೇಬರು ಹೋಗ್ಬಾರದಿತ್ತು ಇಷ್ಟು ಬೇಗ” ಎಂಬ ಮಾತುಗಳು ಎಚ್ಚರಿಸಿದವು. ನೆಂಟರಿಷ್ಟರು, ಮಾಮನ ಸಹೋದ್ಯೋಗಿಗಳು, ಅಕ್ಕ ಪಕ್ಕದವರು ಸಪ್ಪೆ ಮುಖ ಹೊತ್ತು ನಿರ್ಜೀವ ಚಿಂಗುಮಾಮನ ದೇಹವನ್ನು ನೋಡಿ, ನಮಸ್ಕರಿಸಿ ಹೂವಿಟ್ಟು ಹೋಗುತ್ತಿದ್ದರು. ತನ್ನನ್ನು ಸಂತೈಸಬಂದವರ ಮಾತುಗಳನ್ನು ಕೇಳಿದಾಗ ನಿರ್ಮಲತ್ತೆಯ ಮುಖ ಮತ್ತಷ್ಟು ಸಣ್ಣದಾಗುತ್ತಿತ್ತು. ಆಗ ಬಂದಳು ಸುಮಾರು ಮೂವತ್ತು ವರ್ಷದ ಒಬ್ಬ ಹೆಂಗಸು, ಒಂದೂವರೆ-ಎರಡು ವರ್ಷದ ಒಂದು ಗಂಡು ಮಗುವನ್ನೆತ್ತಿಕೊಂಡು. ಯಾರೊಂದಿಗೂ ಒಂದೇ ಒಂದು ಶಬ್ದವನ್ನೂ ಮಾತನಾಡದೆ ಮಾಮನ ದೇಹವನ್ನು ನೋಡಿ ನಮಸ್ಕರಿಸಿ, ಒಮ್ಮೆ ನಿಟ್ಟುಸಿರಿಟ್ಟು ಮನೆಯನ್ನೆಲ್ಲ ಅಳೆಯುವಂತೆ ಒಮ್ಮೆ ನೋಡಿ ಹೊರಟು ಹೋದಳು. ಯಾರು ಗಮನಿಸಿದರೋ ಇಲ್ಲವೋ, ಮೊದಲೇ ಮಂಕಾಗಿದ್ದ ನಿರ್ಮಲತ್ತೆಯ ಮುಖ ಮತ್ತಷ್ಟು ಇಳಿದುಹೋಗಿದ್ದು ಅವರ ಹತ್ತಿರವೇ ಇದ್ದ ನನ್ನ ಗಮನಕ್ಕೆ ಬಂತು. “ಅವ್ಳು ಯಾರೂಂತ ಗೊತ್ತಾಯ್ತಾ ರಾಧೀ? ನಿನ್ನ ಮಾಮನ ಮೂರನೆಯ ಹೆಂಡತಿ. ಆ ಮಗು ನಿನ್ನ ಮಾಮಂದು” ಎಂದು ನನಗೆ ಮಾತ್ರ ಕೇಳಿಸುವಂತೆ ಹೇಳಿದರು ಅತ್ತೆ. ಚಿಂಗುಮಾಮನ ಎರಡನೇ ಹೆಂಡತಿ, ಮೂರನೇ ಹೆಂಡತಿ, ಅವಳ ಮಗು… ಇಂತಹ ವಿಷವಿಷಯಗಳು ನನ್ನ ಕಿವಿ ಮೇಲೆ ಆಗೀಗ ಬಾಣಗಳಂತೆ ಬಿದ್ದು ಎದೆಯನ್ನಿರಿದಿದ್ದರೂ ಎಂದೂ ನಾನು ಅವರನ್ನೆಲ್ಲ ಕಣ್ಣಲ್ಲಿ ನೋಡಿರಲಿಲ್ಲ. `ನೀನು ಸಾಯುವ ಎಷ್ಟೋ ಮುಂಚೆಯೇ ಅತ್ತೆಯನ್ನ ಸಾಯಿಸಿಬಿಟ್ಟೆಯಲ್ಲೋ ಚಿಂಗುಮಾಮ’ ಎಂದು ನನ್ನ ಮನಸ್ಸು ಚೀರಿತು.
******
      ಹಿಂದಿನ ವರ್ಷವೇ ತೀರಿಕೊಂಡಿದ್ದ ನನ್ನಮ್ಮ ಆಗಾಗ ಬಳಸುತ್ತಿದ್ದ `ಪ್ರಾರಬ್ಧ ಕರ್ಮ’ ಎಂಬ ಪದದ ಪರಿಣಾಮವೋ, ಯೋಗಾಯೋಗವೋ, ಆಕಸ್ಮಿಕವೋ, ಈ ಬದುಕಿನ ನಿಗೂಢ ಚಲನೆಗಳೋ ಹೇಗೆ ಹೇಳುವುದು? ಆಗಿನ್ನೂ ಮಾಲಿನ್ಯಕ್ಕೊಳಗಾಗದಿದ್ದ ಚಿಕ್ಕಮಗಳೂರಿನ ಭುವನಸುಂದರ ಪರಿಸರದಲ್ಲಿ ಹೈಸ್ಕೂಲು  ಟೀಚರ್ ಆಗಿದ್ದರು ನಿರ್ಮಲ. ಎಲ್ಲರ ಮನಗೆದ್ದು ಒಳ್ಳೆಯ ಟೀಚರ್ ಎಂಬ ಹೆಸರು ಪಡೆದಿದ್ದರು. ಬೇರೆ ಬೇರೆ ವಿನ್ಯಾಸವಿದ್ದರೂ ಬಣ್ಣ ಮಾತ್ರ ಸದಾ ಕಡ್ಡಾಯವಾಗಿ ಬಿಳಿಯೇ ಆಗಿದ್ದ ಸೀರೆಗಳನ್ನುಡುತ್ತಿದ್ದರು. `ಈ ಟೀಚರಮ್ಮ ಮದುವೆಯಾಗಲ್ಲವಂತೆ. ಸನ್ಯಾಸಿ ಥರಾ ಇರ್ತಾರಂತೆ’ ಎಂಬ ಗುಸುಗುಸು ಮಾತು ಅವರ ಶಾಲೆಯಲ್ಲಿ ಮಾತ್ರವಲ್ಲದೆ ಊರಲ್ಲೆಲ್ಲ ಹಬ್ಬಿತ್ತು. ಆಗಲೇ ಮೂವತ್ತೇಳು-ಮೂವತ್ತೆಂಟು ವರ್ಷವಾಗಿದ್ದರೂ ಅವಿವಾಹಿತೆಯಾಗಿಯೇ ಉಳಿದಿದ್ದ ನಿರ್ಮಲಾರ ಮನಸ್ಸಿನಲ್ಲೂ ಮದುವೆ ಬೇಡವೆಂದೇ ಇತ್ತೇನೋ ಅರಿಯೆ. ಆದರೆ ಚಿಂಗುಮಾಮ ಅವರ ಪಕ್ಕದ ಮನೆಗೆ ಬಾಡಿಗೆದಾರನಾಗಿ ಹೋದಾಗಿನಿಂದ ಅವರಿಬ್ಬರ ಬದುಕಿನ ಗತಿಸ್ಥಿತಿಗಳೇ ಬದಲಾದವು. ಮೊದಲು ಪರಿಚಯ, ನಂತರ ಹರಟೆ, ನಂತರ ಸ್ನೇಹ, ನಂತರ ಆಕರ್ಷಣೆ ಹೀಗೆ ಒಂದೊಂದಾಗಿ ಸಂಬಂಧತಂತುಗಳು ಸೇರುತ್ತಾ ಹೋಗಿರಬೇಕು. ಅದ್ಯಾವ ಘಳಿಗೆಯಲ್ಲೋ ಮೈಬಯಕೆ ಮುಂದಾಗಿ ವಿವೇಕ ಹಿಂದಾಗಿ ಅವರ ಆಪ್ತಸಮಾಗಮ ಘಟಿಸಿಯೇ ಹೋಯಿತು. ಇದಕ್ಕಿಂತ ಕಸಿವಿಸಿ ತಂದ ವಿಷಯವೇನೆಂದರೆ, ತುಂಬ ಇಷ್ಟದ ಟೀಚರ್ ಎಂದು ಸದಾ ಇವರ ಮನೆಗೆ ಬಂದು ಹೋಗಿ ಮಾಡುತ್ತಿದ್ದ ಅವರ ವಿದ್ಯಾರ್ಥಿನಿಯರೇ ಇವರಿಬ್ಬರನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿಬಿಟ್ಟದ್ದು. ಇದು ಊರಲ್ಲೆಲ್ಲ ಗುಲ್ಲಾಗುತ್ತೆ ಅನ್ನುವಾಗ ಚಿಂಗುಮಾಮ ತುಸು ಹೆದರಿದನೇನೋ. ಮುಂದೆ ತಾನು ಎದುರಿಸಬೇಕಾಗುವ  ನಿಂದೆ, ಟೀಕಾಸ್ತçಗಳ ಬಿರುಮಳೆ ನೆನೆದು ಗಾಬರಿಯಾಗಿ ತನ್ನ ಮನೆಯವರ‍್ಯಾರಿಗೂ ತಿಳಿಸದೆ ನಿರ್ಮಲಾರನ್ನು  ಮದುವೆ ಮಾಡಿಕೊಂಡುಬಿಟ್ಟ!
*****
      ಪಕ್ಕದಲ್ಲಿ ನೆಂಟರೊಬ್ಬರು ಬಂದು ಕುಳಿತಿದ್ದರಿಂದ ನನ್ನ ನೆನಪುಗಳ ಸರಣಿಯ ಓಟಕ್ಕೆ ಕಡಿವಾಣ ಬಿದ್ದು ಮತ್ತೆ ವರ್ತಮಾನದಲ್ಲಿ ಮನಸ್ಸು ನೆಟ್ಟಿತು. ಮೌನವಾಗಿ ಮಾಮನ ದೇಹಕ್ಕೆ ಕೈ ಮುಗಿದು ಹೋಗುತ್ತಿದ್ದ ಜನಗಳನ್ನು, ಅತ್ತೆ ತಮ್ಮ ಕೈತೋಟದಲ್ಲಿ ಬೆಳೆಸಿದ್ದ ಹೂಗಳು ಅಷ್ಟೇ ಮೌನವಾಗಿ ನೋಡುತ್ತಿದ್ದವು. ಗೋಡೆ, ಕಿಟಕಿ, ಬಾಗಿಲು ಅನ್ನದೆ ಮನೆಯು ಪ್ರತಿಯೊಂದು ಇಂಚನ್ನೂ ಕಲಾತ್ಮಕವಾಗಿ, ಸುಂದರವಾಗಿ ಒಂದು ಹದದಲ್ಲಿ ಅಲಂಕರಿಸಲಾಗಿತ್ತಲ್ಲ, ಆ ಅಲಂಕಾರಗಳೆಲ್ಲವೂ ಇಂದು ವಿಹ್ವಲಗೊಂಡಂತೆ ಕಾಣುತ್ತಿದ್ದವು. ಮುಂದೆ ನಡೆಯಲಿದ್ದ ಘೋರವೊಂದರ ಮುನ್ಸೂಚನೆಯು ಆ ಪರದೆಗಳಿಗೆ, ಚಿತ್ರಪಟಗಳಿಗೆ, ತೋರಣಗಳಿಗೆ ಇತ್ತೇನೋ ಎಂಬಂತೆ ಎಲ್ಲವೂ ಮ್ಲಾನವಾಗಿದ್ದವು.
“ಎಲ್ರೂ ಬಂದಾಯ್ತಾ? ತಡ ಆಯ್ತು, ಮುಂದಿನ ಕಾರ್ಯಗಳಾಗ್ಬೇಕು. ಬಾಡೀನ ಹೊರಗಡೆ ತನ್ನಿ” ಎಂದು ಯಾರೋ ಕೂಗಿದರು. ಹೊರಗಡೆ ತಂದಿಡಲಾದ ದೇಹದ ಮೇಲೆ ನೀರು ಹೊಯ್ದು, ಹೊಸ ಬಿಳಿಬಟ್ಟೆ ಹೊದಿಸಿ, ಎಲ್ಲರೂ ಪ್ರದಕ್ಷಿಣೆ ಬಂದು, ಹೆಣದ ಬಾಯಿಗೆ ಅಕ್ಕಿಕಾಳು ಹಾಕಿ….. ದೇವರೇ, ಒಬ್ಬ ಮನುಷ್ಯನ ಅಂತ್ಯ ಎಷ್ಟು ವಿಷಾದ ಹುಟ್ಟಿಸುತ್ತಲ್ಲ ……

ನೋಡಲು ಹಿಂದಿ ಸಿನಿಮಾನಟ ರಿಷಿಕಪೂರ್‌ನಂತೆ ಚೆಲುವ ಚೆನ್ನಿಗನಾಗಿದ್ದು ಚಂದ ಚಂದದ ಬಟ್ಟೆ ಧರಿಸುತ್ತಿದ್ದ. ಜೊತೆಗೆ ಜೂಲು ನಾಯಿ ಸಾಕುವ ಹವ್ಯಾಸ ಅವನಿಗೆ. ಅವನ ಒಂದು ವಿಚಿತ್ರ ಬುದ್ಧಿ ಎಂದರೆ ತಾನು ಸಾಕುವ ನಾಯಿಗಳಿಗೆಲ್ಲ ರಾಧಾ ಎಂದು ನನ್ನ ಹೆಸರನ್ನೇ ಇಡುತ್ತಿದ್ದ!

ನನ್ನ ಮನಸ್ಸಿನಲ್ಲಿ ಮಾಮನೊಂದಿಗಿನ ಬಾಲ್ಯದ ನೆನಪುಗಳು ಛಿಲ್ಲನೆ ಚಿಮ್ಮಿದವು. ಪ್ರತಿ ಬೇಸಗೆ ರಜೆಯಲ್ಲೂ ದೊಡ್ಡಕ್ಕನ ಮಕ್ಕಳೆಂದು ನನ್ನನ್ನು ಮತ್ತು ನನ್ನ ತಮ್ಮನನ್ನು ಚಿಂಗುಮಾಮ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ. ತನ್ನ ಆಫೀಸು  ಕಾರಿನಲ್ಲಿ, ಸರ್ವೆ ಕೆಲಸಕ್ಕೆ  ಎಲ್ಲಾದರೂ ದೂರ ಹೋಗುವಾಗ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದ. ಚಾಕಲೇಟು, ಐಸ್‌ಕ್ರೀಮು, ಹೊಸ ಬಟ್ಟೆ ಎಲ್ಲ ಕೊಡಿಸಿ ನಮ್ಮ ಬಾಲ್ಯಕ್ಕೆ ರೆಕ್ಕೆ ಬರಿಸುತ್ತಿದ್ದ. ಮೊಬೈಲು ಫೋನುಗಳು ಇನ್ನೂ ಬರದಿದ್ದ ಆ ಕಾಲದಲ್ಲಿ ಸ್ಟುಡಿಯೊ ಒಂದರಲ್ಲಿ ತೆಗೆಸಿದ್ದ ಭಾವಚಿತ್ರವೊಂದರಲ್ಲಿ ನನ್ನನ್ನು, ನನ್ನ ತಮ್ಮನನ್ನು ತನ್ನ ಅಕ್ಕಪಕ್ಕ ನಿಲ್ಲಿಸಿಕೊಂಡು, ತಾನು ಹಸನ್ಮುಖಿಯಾಗಿ ಕುಳಿತಿದ್ದ. “ಏನೇ ರಾಧೀ, ಯಾವ ಹೊಸ ಹಾಡು ಕಲಿತ್ಯೆ? ಹೇಳೇ, ಕೇಳಿಸಿಕೊಳ್ಳೋಣ” ಎಂದು ಸಂಭ್ರಮದಿಂದ ನನ್ನನ್ನು ಕೇಳುತ್ತಿದ್ದ. ಅಂತಹ ಮಾಮ ಇಂದು ಅಂಗಳದಲ್ಲಿ ನನ್ನನ್ನು ಮಾತಾಡಿಸದೆ ತಣ್ಣಗೆ ಮಲಗಿಬಿಟ್ಟಿದ್ದ. ಜೀವ ಇರದಿದ್ದ ಅವನ ಬಾಯಿಗೆ ಅಕ್ಕಿಕಾಳು ಹಾಕಿ ಕೈಮುಗಿಯುವಾಗ `ಹೊರಟುಬಿಟ್ಟೆಯಾ ಚಿಂಗು ಮಾಮʼ ಎಂದು ನನ್ನ ಮನಸ್ಸು ರೋದಿಸಿತು. ಪ್ರೀತಿಯ ಒಂದೊಂದೇ ಗೂಡುಗಳನ್ನು ಸಾವು ಎಷ್ಟು ನಿಷ್ಕರುಣವಾಗಿ ಛಿದ್ರ ಮಾಡುತ್ತಲ್ಲ ………
ಹೆಣವನ್ನು ದಹನಕ್ಕಾಗಿ ಎತ್ತಿಕೊಂಡು ಹೋದ ಮೇಲೆ ಮನೆಯನ್ನು ತೊಳೆಯುವ, ಎಲ್ಲರೂ ಸ್ನಾನ ಮಾಡಿಕೊಳ್ಳುವ, ಹೆಣದ ತಲೆ ಇದ್ದ ಭಾಗದಲ್ಲಿ ದೀಪವೊಂದನ್ನು ಹಚ್ಚಿಡುವ ಆಚರಣೆಯ ಕ್ರಿಯೆಗಳು ಯಾಂತ್ರಿಕವಾಗಿ ನಡೆಯುತ್ತಿದ್ದಂತೆ ನನ್ನ ಮನಸ್ಸು ಮತ್ತೆ ಹಳೆಯ ನೆನಪುಗಳ ಕಡೆ ಜಾರಿತು.
                              ******
      ಒಂದು ತರಹದ ಗಡಿಬಿಡಿಯಲ್ಲೆಂಬಂತೆ ನಿರ್ಮಲತ್ತೆಯನ್ನು ಚಿಂಗುಮಾಮ ಮದುವೆಯಾಗಿದ್ದು ನಮ್ಮ ಕುಟುಂಬದ ಹಿರಿಯರಿಗೆ ಸ್ವಲ್ಪವೂ ಒಪ್ಪಿಗೆ ಇರಲಿಲ್ಲ. “ತನಗಿಂತ ಏಳೆಂಟು ವರ್ಷ ದೊಡ್ಡವಳನ್ನು ಮದುವೆ ಮಾಡಿಕೊಳ್ಳುವ ಕರ್ಮ ಇವನಿಗ್ಯಾಕೆ ಬೇಕಿತ್ತು!?’’ ಎಂದು ನನ್ನ ಅಮ್ಮ ಸದಾ ಗೊಣಗುತ್ತಿದ್ದರು. ಚಿಂಗುಮಾಮನ ಅಣ್ಣ, ನಾವೆಲ್ಲ ಮನೆಯಲ್ಲಿ ದೊಡ್ಡ ಮಾಮ ಎಂದು ಕರೆಯುತ್ತಿದ್ದ ವಾಚಸ್ಪತಿ ಮಾಮ “ಛಿ, ಈ ಚಿಂಗುಗೇನು ರೋಗ ಬಂದಿತ್ತು! ಮುದುಕಿಯನ್ನು ಮದುವೆಯಾಗಿದ್ದಾನೆ!’’ ಎಂದು ಸದಾ ಹಲ್ಲು ಕಡಿಯುತ್ತಿದ್ದ.
    ಮನೆಯ ಹಿರಿಯರಿಗೆ ಒಪ್ಪಿಗೆಯಿಲ್ಲದ್ದು ಹಾಗಿರಲಿ, ಸ್ವತಃ ಚಿಂಗುಮಾಮನಿಗೇ ತನ್ನ ಮದುವೆ ಇಷ್ಟವಿರಲಿಲ್ಲ. ನಿರ್ಮಲತ್ತೆಯನ್ನು ಅವನು ಎಲ್ಲೂ ಹೊರಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಯಾವುದಾದರೂ ಕೌಟುಂಬಿಕ ಸಮಾರಂಭಕ್ಕೆ ಹೆಂಡತಿಯನ್ನು ಕರೆದುಕೊಂಡು ಹೋಗಲೇಬೇಕಾಗಿ ಬಂದರೆ ನೆಂಟರ ಅಥವಾ ಪರಿಚಯದವರ ಯಾರಾದರೂ ತನಗಿಂತ ಚಿಕ್ಕ ವಯಸ್ಸಿನ ಯುವತಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ನೋಡಿದ ಅಪರಿಚಿತ ಜನ ಆ ಯುವತಿಯನ್ನೇ ತನ್ನ ಹೆಂಡತಿ ಅಂದುಕೊಳ್ಳಲಿ ಎಂಬುದು ಅವನ ಒಳ ಉದ್ದೇಶವಾಗಿರುತ್ತಂತೆ! ಎಲಾ ಎಲಾ ಚಿಂಗುಮಾಮ.. ನಿನ್ನ ವಿಪರೀತ ಬುದ್ಧಿಯನ್ನು ಮೆಚ್ಚಿಕೋಬೇಕೋ ತಲೆತಲೆ ಚಚ್ಚಿಕೋಬೇಕೋ ಗೊತ್ತಾಗಲ್ಲ ಕಣೋ …
   ಇಂತಹ ಭಯಂಕರ ಅವಮಾನಗಳನ್ನು ಎದುರಿಸುತ್ತಿದ್ದ ನಿರ್ಮಲತ್ತೆ ತನ್ನ ನೋವನ್ನು ಒಳಗೇ ನುಂಗಿಕೊಳ್ಳುತ್ತಿದ್ದರು. ಅವರ ಕೆಲಸದ ಅಚ್ಚುಕಟ್ಟುತನಕ್ಕೆ ಮಾರು ಹೋಗದವರೇ ಇರಲಿಲ್ಲ. ಒಂದು ಸೀರೆ ಉಡುವುದರಲ್ಲಿ, ಹೂ ಜೋಡಿಸುವುದರಲ್ಲಿ, ಮನೆಯನ್ನು ಸ್ವಲ್ಪವೂ ಧೂಳಿಲ್ಲದಂತೆ ಸುಂದರವಾಗಿ ಇಟ್ಟುಕೊಳ್ಳುವುದರಲ್ಲಿ, ರುಚಿಯಾಗಿ ಅಡುಗೆ ಮಾಡುವುದರಲ್ಲಿ ಅವರನ್ನು ಯಾರೂ ಮೀರಿಸಲು ಸಾಧ್ಯ ಇರಲಿಲ್ಲ. ನನಗೆ ಚೆನ್ನಾಗಿ ನೆನಪಿದೆ. ನಾವು ನೆಂಟರೆಲ್ಲ ಅವರ ಮನೆಗೆ ಹೋಗಿದ್ದೆವೆಂದು ಒಂದು ಸಂಜೆ, ಪುಟ್ಟ ಪುಟ್ಟ ಪೂರಿಗಳೂ ಸೇರಿದಂತೆ ಪಾನಿಪೂರಿಗೆ ಸಂಬಂಧಿಸಿದ ಎಲ್ಲವನ್ನೂ ಮನೆಯಲ್ಲೇ ಮಾಡಿ, ಎಲ್ಲರಿಗೂ ಉಪಚರಿಸಿ ಬಡಿಸಿ ಆ ಸಮಯವನ್ನು ಅತ್ತೆ ಅತ್ಯಂತ ರುಚಿಕರಗೊಳಿಸಿದ್ದರು. ಆದರೆ … ಎಲ್ಲವನ್ನೂ ಒಪ್ಪ ಓರಣವಾಗಿಡುತ್ತಿದ್ದ ಅವರ ಬದುಕನ್ನೇ ವಿಧಿರಾಯ ಚಿಂದಿಚೂರು ಮಾಡಿಬಿಟ್ಟನಲ್ಲ.
ಮನೆಯಲ್ಲಿನ ಹೆಂಡತಿಯ ಮೇಲೆ ಮುನಿದಿದ್ದ ಮಾಮ ತನಗೆ ಇನ್ನೊಂದು ಮದುವೆ ಮಾಡಬೇಕೆಂದು ತನ್ನ ಹೆಂಡತಿಯನ್ನೇ ಬಲವಂತಿಸಿದ, ನಿರ್ಮಲತ್ತೆಯ ವಿದ್ಯಾರ್ಥಿನಿಯೊಬ್ಬರನ್ನು ಮದುವೆಯಾದ ಕೂಡ. ಅದೂ ಸರಿ ಹೋಗದೆ ಮೂರನೇ ಮದುವೆಯನ್ನೂ ಆಗಿ ಅವಳಿಗೆ ಒಂದು ಮಗುವನ್ನು ಕರುಣಿಸಿದ. ಇವನ ಈ ಎಲ್ಲ ಸಾಹಸಗಳಿಂದಾಗಿ ಸಧವೆಯಾಗಿದ್ದರೂ, ವಿಧವೆಯಾದರೂ ನಿರ್ಮಲತ್ತೆಗೆ ಕಷ್ಟಗಳು ತಪ್ಪಲಿಲ್ಲ. ಅವರ ಮುಂದಿನ ಜೀವನ ದೇವರಿಗೇ ಪ್ರೀತಿ ಎಂಬಂತಾಯಿತು. ಹೆಸರಿಗೆ ಮಾತ್ರವಾದರೂ ಇದ್ದಾನೆ ಎಂಬಂತಿದ್ದ ಗಂಡ ಸತ್ತುಹೋದ. ಅಮ್ಮಾ ಎಂದು ಅಕ್ಕರೆಯಿಂದ ಕರೆಯಲು ಮಕ್ಕಳಿರಲಿಲ್ಲ. ಅವರು ಹೆಂಡತಿಯಾಗಿ ಕಾಲಿಟ್ಟು ಬಾಳಿ ಬದುಕಿದ ಮನೆಯನ್ನು, ಗಂಡುಮಗುವನ್ನು ಹಡೆದಿದ್ದ ಮೂರನೆಯ ಹೆಂಡತಿ ಕಿತ್ತುಕೊಂಡಳು. ದೇವರೇ… ಏನಿದು ಅನ್ಯಾಯ! ನಿರ್ಮಲತ್ತೆಯ ಬಾಳು ಹೀಗೇಕಾಯಿತು? ನ್ಯಾಯಾಲಯದಲ್ಲಿ ಹೋರಾಡಿ, ಗುದ್ದಾಡಿ ಅಂತೂಇಂತೂ ಮಾಮನ ಪುಡಿಗಾಸು ಕುಟುಂಬಪಿಂಚಣಿ ಸಿಕ್ಕಿತು ಅವರಿಗೆ ಅಷ್ಟೆ.
ಮಾಮ ಸತ್ತಾಗ ಹಿಂಗೈಯಿಂದ ಮತ್ತೆ ಮತ್ತೆ ಕಣ್ಣೀರೊರೆಸಿಕೊಳ್ಳುತ್ತಿದ್ದ ನಿರ್ಮಲತ್ತೆಯನ್ನು ನೆನೆದಾಗಲೆಲ್ಲ ನನ್ನ ಕಣ್ಣು ಒದ್ದೆಯಾಗುತ್ತೆ. ಈಗಿನ ತಮ್ಮ ಪುಟ್ಟ ಬಾಡಿಗೆಗೂಡಿನಲ್ಲಿ ಒಂಟಿಯಾಗಿ ಜೀವಿಸುತ್ತಿದ್ದಾರೆ. ರಾಧಾ ನಾಯಿಯನ್ನು ಹಿಡಿದ ಚಿಂಗುಮಾಮನ ಭಾವಚಿತ್ರವನ್ನು ದೊಡ್ಡದಾಗಿ ಹಾಕಿಕೊಂಡಿದ್ದಾರೆ. ಆಗಾಗ ಅದನ್ನು ತದೇಕಚಿತ್ತರಾಗಿ ನೋಡುತ್ತ ಕುಳಿತಿರುವುದನ್ನು ಗಮನಿಸಿರುವೆ ನಾನು. ಹಾಗೆ ನೋಡುವಾಗ ಏನು ಯೋಚಿಸುತ್ತಿರಬಹುದು ಆ ಜೀವ?; “ನೀನು ನೀನೇ ಈ ಪ್ರಪಂಚದ ನಿರ್ಮಾತೃ ಮತ್ತು ನಿವಾಸಿ…… ನಾನೊಬ್ಬಳು ಪರದೇಸಿ” ಎಂದುಕೊಳ್ಳುತ್ತಿರಬಹುದೇ? ಎಷ್ಟು ಸಲ ಒರೆಸಿದರೂ ಎಂದಾದರೂ ಆ ಕಣ್ಣುಗಳಿಂದ ಹರಿಯುವ ನೀರು ನಿಲ್ಲಬಹುದೇ?