ನೆರಳಗುಂಟ ನಡೆವ ಉಮೇದು

ಏಳು ಸಮುದ್ರ ದೂರವೆನಿಸಲಿಲ್ಲ
ಅವನ ನೆರಳಗುಂಟ ನಡೆವ
ಉಮೇದಿನ ಮುಂದೆ

ಲೋಕದ ಸೋಜಿಗಕೆ ಅವನದೆ ಹೆಸರಿಡಬೇಕು
ಮಾತಲ್ಲಿ ಬೆಣ್ಣೆ ತೋಳಲ್ಲಿ ಮುಲಾಮು ಹೊತ್ತವನಿಗೆ

ಬಯಲಲ್ಲಿ ಸ್ಥಾವರಂತೆ
ಮನಸಿಗೆ ತೋಚಿದ್ದು ಗೀಚುತ್ತಾನೆ
ಎದೆಯ ತುಂಬ ಅವನದೇ
ಗೋಚರ ಅಗೋಚರ ರೇಖೆಗಳೆ

ಮೌನಗೌರಿಯ ಮಾತ ಮಳೆಗರೆಸುವುದು
ಇಳಿಸಂಜೆ ಬಾನಿಗೆ ರಂಗು ಬಳಿಯುವುದು
ಕತ್ತಲ ದಾರಿಗೆ ಕಣ್ಣದೀಪ ಕಾವಲಿರಿಸಿ
ಒಲವ ಹಾಸಿನಲ್ಲಿ
ಬದುಕಿನ ಮೈಲುಗಲ್ಲು ದಾಟಿಸುತ್ತಾನೆ
ಎದೆಗೆದೆಯ ಮುದ್ರೆಯೊತ್ತಿ
ಏನೊಂದು ನುಡಿಯೊಡೆಯದೆ ಆತ್ಮದ ಆಣೆಯಿಟ್ಟು.

*****

ನಿವೇದನೆ

ಮತ್ತೆ ಮತ್ತೆ ಕರಗಿ ಹೋಗುತ್ತೇನೆ
ಮಾತಿಗಲ್ಲ
ಪ್ರೀತಿಗೂ ಅಲ್ಲ
ತುಟಿವರೆಗೂ ಬಂದ ಉಸಿರು ನುಂಗಲು ಅವ ಪಡುವ ಕಷ್ಟಕ್ಕೆ

ಇಷ್ಟಿಷ್ಟೇ ಕನಲಿಬಿಡುತ್ತೇನೆ
ಮುತ್ತಿಗಲ್ಲ
ಗತ್ತಿಗೂ ಅಲ್ಲ
ಕಣ್ಣು ತುಂಬಿಕೊಂಡ ತವಕ ತಡೆಯಲು
ಅವ
ಶತಾಯ ಗತಾಯ ಹರಸಾಹಸ ಪಡುವಾಗ

ಸೋತು ನಿಲ್ಲುತ್ತೇನೆ
ಬ್ರಹ್ಮಾಂಡದಂತೆ ಮುತ್ತಿರುವ
ಬಯಕೆಗಳು
ತೂಗಿ ತೊನೆವ ಅವ
ಬೊಗಸೆ ಪ್ರೀತಿ ಬಯಸಿ ಮಂಡಿಯೂರಿ
ಮತ್ತದೆ ಮೌನಕ್ಕೆ ಶರಣಾದಾಗ

ಸಾವಿರ ಸಂಜ್ಞೆ ಸೂಸುವ
ಕಂಗಳಲಿ ಎಂಥದೊ
ಅಮಾಯಕತೆ ಮನೆಮಾಡಿದಾಗ

ಶಿಲ್ಪಾ ಮ್ಯಾಗೇರಿ ಗದಗಿನ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟು ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ.