ಆಸ್ಟ್ರೇಲಿಯಾದಲ್ಲಿ ನಡು-ಚಳಿಗಾಲದ ಜುಲೈ ತಿಂಗಳು ಮುಗಿಯುತ್ತಾ ಇರುವಾಗ ಹಗಲು ಬೆಳಕಿನ ಅವಧಿ ಹೆಚ್ಚುತ್ತಿದೆ. ಅತ್ತ ಬ್ರಿಟನ್ನಿನಲ್ಲಿರುವ ನಮ್ಮ ಬಂಧುಗಳು ಅವರ ‘ಸೂರ್ಯ ಮುಳುಗದ’ ಬೇಸಿಗೆ ದಿನಗಳ ಬಗ್ಗೆ ಉತ್ಸಾಹದಿಂದ ಮಾತನಾಡುವಾಗ ಇತ್ತ ನಾನು ಆಸ್ಟ್ರೇಲಿಯಾದ ನಮ್ಮ ರಾಣಿರಾಜ್ಯದಲ್ಲಿ ಕೂಡ ದಿನಕರನ ಕೃಪೆ ಜಾಸ್ತಿಯಾಗುತ್ತಿದೆ, ಎನ್ನುತ್ತೀನಿ. ಅವರು ಆಸ್ಟ್ರೇಲಿಯಾ ಬ್ರಿಟನ್ನಿನ ಯಥಾವತ್ ತುಣುಕು ಅಲ್ಲವೇ ಎಂದು ನಗಾಡುತ್ತಾರೆ. ಈಗಾಗಲೆ ಆಸ್ಟ್ರೇಲಿಯಾದ ಉತ್ತರ ಭಾಗಗಳಲ್ಲಿ ವಾತಾವರಣದ ಶಾಖ ರವೆಯಷ್ಟು ಹೆಚ್ಚಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ಆಸ್ಟ್ರೇಲಿಯಾದಲ್ಲಿ ನಡು-ಚಳಿಗಾಲದ ಜುಲೈ ತಿಂಗಳು ಮುಗಿಯುತ್ತಾ ಇರುವಾಗ ಹಗಲು ಬೆಳಕಿನ ಅವಧಿ ಹೆಚ್ಚುತ್ತಿದೆ. ಅತ್ತ ಬ್ರಿಟನ್ನಿನಲ್ಲಿರುವ ನಮ್ಮ ಬಂಧುಗಳು ಅವರ ‘ಸೂರ್ಯ ಮುಳುಗದ’ ಬೇಸಿಗೆ ದಿನಗಳ ಬಗ್ಗೆ ಉತ್ಸಾಹದಿಂದ ಮಾತನಾಡುವಾಗ ಇತ್ತ ನಾನು ಆಸ್ಟ್ರೇಲಿಯಾದ ನಮ್ಮ ರಾಣಿರಾಜ್ಯದಲ್ಲಿ ಕೂಡ ದಿನಕರನ ಕೃಪೆ ಜಾಸ್ತಿಯಾಗುತ್ತಿದೆ, ಎನ್ನುತ್ತೀನಿ. ಅವರು ಆಸ್ಟ್ರೇಲಿಯಾ ಬ್ರಿಟನ್ನಿನ ಯಥಾವತ್ ತುಣುಕು ಅಲ್ಲವೇ ಎಂದು ನಗಾಡುತ್ತಾರೆ. ಈಗಾಗಲೆ ಆಸ್ಟ್ರೇಲಿಯಾದ ಉತ್ತರ ಭಾಗಗಳಲ್ಲಿ ವಾತಾವರಣದ ಶಾಖ ರವೆಯಷ್ಟು ಹೆಚ್ಚಿದೆ. ಇದನ್ನು ಕೇಳಿ ಹೊಟ್ಟೆಕಿಚ್ಚು ಪಟ್ಟುಕೊಂಡ ನನ್ನ ದಕ್ಷಿಣದ ಸ್ನೇಹಿತರು ಅವರಲ್ಲೂ ಕೂಡ ಹಗಲು ಉದ್ದವಾಗುತ್ತಿದೆ, ನಾಲ್ಕೂವರೆಗೆಲ್ಲಾ ಆವರಿಸುತ್ತಿದ್ದ ಕತ್ತಲು ಈಗ ನಾಲ್ಕು ಮುಕ್ಕಾಲು ಗಂಟೆಗೆ ಜಾರಿದೆ, ಎಂದು ಸಂಭ್ರಮಿಸಿದರು. ಏನೇ ಹೇಳಿ, ಕತ್ತಲೆಂದರೆ ಮನುಷ್ಯರಿಗೆ ಅದೇನೋ ಆತಂಕ.

ಚಳಿಗಾಲದ ಕೊನೆ ತಿಂಗಳಿನ ಹೊಸ್ತಿಲಿನಲ್ಲಿ ನಿಂತಿರುವ ಆಸ್ಟ್ರೇಲಿಯನ್ನರಲ್ಲಿ ಸಂಚಲನ ಮೂಡಿದೆ. ಸೆಪ್ಟೆಂಬರಿನಲ್ಲಿ ಶುರುವಾಗುವ ವಸಂತಋತುವನ್ನು ಬರಮಾಡಿಕೊಳ್ಳಲು ಅವರವರ ಮಟ್ಟಿಗೆ ಎಲ್ಲರೂ ತಯಾರಾಗುತ್ತಿದ್ದಾರೆ. ಎರಡು ವಾರಾಂತ್ಯಗಳ ಹಿಂದೆ ನಾವು ಸಮುದಾಯ ಕೈತೋಟ ಸದಸ್ಯರು ಸೇರಿ ನಮ್ಮ ಎಡಿಬಿಲ್ ಎಕ್ಸ್ಚೇಂಜ್ ಹಟ್ ಹುಟ್ಟುಹಬ್ಬವನ್ನು ಆಚರಿಸುವಾಗ ಗಿಡ, ಬಳ್ಳಿ, ಬೀಜಗಳ ವಿನಿಮಯ ಮಾಡಿಕೊಂಡು ಕಾಂಪೋಸ್ಟಿಂಗ್, ಎಲೆ ಗೊಬ್ಬರ ಹೊದಿಕೆ (mulching) ಇತ್ಯಾದಿಗಳ ಬಗ್ಗೆ ಮಾತನಾಡಿದ್ದೆವು. ನಮ್ಮ ಗುಂಪಿನ ಮುಂದಾಳುಗಳಲ್ಲಿ ಒಬ್ಬರು ಸಾಂಘಿಕವಾಗಿ ಕಬ್ಬು ಒಣಗೊಬ್ಬರವನ್ನು (ಶುಗರ್ ಕೇನ್ ಮಲ್ಚ್) ಕೊಂಡು, ಹಂಚಿಕೊಳ್ಳುವ ಏರ್ಪಾಡು ಮಾಡಿದರು. ಗುಂಪಾಗಿ ಸೇರಿ ದೊಡ್ಡದೊಂದು ಪ್ರಮಾಣದಲ್ಲಿ ಗೊಬ್ಬರವನ್ನು ಕೊಂಡುಕೊಂಡರೆ ತಲಾ ನಮಗೆ ಕಡಿಮೆಬೆಲೆ ಬೀಳುತ್ತದೆ. ಗೊಬ್ಬರವನ್ನು ಒದಗಿಸುವ ರೈತನಿಗೂ ನೆಮ್ಮದಿ.

ಹೀಗೆ ನಾವು ಸುಮಾರು ಹದಿನಾಲ್ಕು ಸದಸ್ಯರು ಸೇರಿ ಇನ್ನೂರ ಎಂಭತ್ತೆರಡು ಕಬ್ಬು ಒಣಗೊಬ್ಬರದ bales ‘ಬಲ್ಕ್ ಆರ್ಡರ್’ ಮಾಡಿದೆವು. ನಮ್ಮಗಳ ಐದು ಸದಸ್ಯರ ಮನೆಗಳಿಗೆ ನಿನ್ನೆ ಅದರ ಡೆಲಿವೆರಿ ಕೂಡ ಆಯ್ತು. ಒಬ್ಬರ ಮನೆಯಂಗಳ ದೊಡ್ಡದು ಎಂದು ಅಲ್ಲಿ ಎಂಭತ್ತೈದು bales ಇಟ್ಟು ನಾಲ್ಕು, ಏಳು, ಹತ್ತು ಎಂಬಂತೆ ಬೇಕಿದ್ದ ಸದಸ್ಯರು ಅವರಲ್ಲಿಗೆ ಹೋಗಿ ಪಡೆಯುವ ವ್ಯವಸ್ಥೆಯಾಗಿತ್ತು. ಈ ಇಡೀ ವ್ಯವಹಾರವನ್ನು ಎರಡು ವಾರಗಳಿಗೂ ಕಡಿಮೆ ಸಮಯದಲ್ಲಿ ಚೊಕ್ಕವಾಗಿ ಏರ್ಪಡಿಸಿ, ನಿರ್ವಹಿಸಿ, ಮುಗಿಸಿ ನಾವು ಖುಷಿಪಟ್ಟೆವು. ನಾನು ಮೂವತ್ತು bales ಕೊಂಡಿದ್ದೀನಿ. ಈಗ ನನ್ನ ಮುಂದಿರುವ ಸವಾಲೆಂದರೆ ಅವುಗಳಲ್ಲಿ ಇಪ್ಪತ್ತನ್ನು wheelborrow ದಲ್ಲಿ (ಮೂರು ಚಕ್ರಗಳ ಕೈಗಾಡಿ) ಇಟ್ಟು ಮನೆ ಮುಂದಿನಂಗಳದಿಂದ ಹಿಂದಿನಂಗಳಕ್ಕೆ ಸಾಗಿಸಬೇಕು. ತಲಾ ಐದು bales ಸಾಗಣೆ ಎಂದು ಗಂಡ, ಮಕ್ಕಳಿಗೆ ಹೇಳಿದ್ದೀನಿ. ಬೋಳಾಗಿರುವ ನೆಲಕ್ಕೆ ಒಂದಿಷ್ಟು ವಿಗ್ ಮತ್ತು ಬಟ್ಟೆ ಹೊದಿಸಬೇಕಿದೆ.

ನಾವು ಕಾಂಪೋಸ್ಟ್ ಕುರಿತು ಮಾತನಾಡುತ್ತಿದ್ದಾಗ ಹೊಸ ಸದಸ್ಯರೊಬ್ಬರು ಆಸಕ್ತಿ ತೋರಿದರು. ಇವರು ಏಷ್ಯಾ ಖಂಡದ ಮೂಲದವರು. ಮಾಮೂಲಿನಂತೆ ನಮ್ಮ ಕೈತೋಟಗಾರರ ಗುಂಪಿನ ಮುಂದಾಳು ಮತ್ತು ಕಾಂಪೋಸ್ಟ್ ತಜ್ಞೆ ಮಾಹಿತಿ ಕೊಟ್ಟು ತಮ್ಮ ಮನೆಗೆ ಬಂದು ಕಾಂಪೋಸ್ಟ್ ಎರೆಹುಳುಗಳನ್ನು ಪಡೆಯುವಂತೆ ಪ್ರೋತ್ಸಾಹಿಸಿದರು. ಅವರು ಕಸ ನಿರ್ವಹಣೆ (waste management) ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಎಲ್ಲೆಲ್ಲೂ ಹೆಚ್ಚುತ್ತಿರುವ ಸಾಂಘಿಕ ಪ್ರಜ್ಞೆಯ ಕುರಿತು ನಾವು ಚರ್ಚಿಸಿದೆವು. ಉದಾಹರಣೆಗೆ, ಹೋದ ವರ್ಷ ನಮ್ಮ ವಿಶ್ವವಿದ್ಯಾಲಯದಲ್ಲಿ ಫುಡ್ ವೇಸ್ಟ್-ಕಾಂಪೋಸ್ಟ್ ಮತ್ತು Containers ಫಾರ್ Change ಬಿನ್ ಅಥವಾ ಪೆಟ್ಟಿಗೆಗಳನ್ನಿಟ್ಟಿದ್ದಾರೆ. ಸರಕಾರವು ಸ್ಥಳೀಯ ನಗರಪಾಲಿಕೆಗಳ ಮೂಲಕ Containers ಫಾರ್ Change ಎನ್ನುವ ಮತ್ತೊಂದು ಸಾರ್ವಜನಿಕ ಅಭಿಯಾನವನ್ನು ನಡೆಸುತ್ತಿದೆ. ಬಗೆಬಗೆಯ ಪಾನೀಯಗಳ ಕ್ಯಾನ್, ಆಹಾರ sauce, ಮತ್ತು ಆಹಾರ ಶೇಖರಣೆ ಕ್ಯಾನ್‌ಗಳು ಮಿತಿಮೀರಿದ ಪ್ರಮಾಣದಲ್ಲಿ ಬಳಕೆಯಾಗುತ್ತಾ, ಜನರು ಅವನ್ನು ಎಲ್ಲೆಡೆ ಚೆಲ್ಲಾಡುವುದನ್ನು ನಿಯಂತ್ರಿಸಲು ಈಗ ಅಲ್ಲಲ್ಲಿ Containers ಫಾರ್ Change ಪೆಟ್ಟಿಗೆಗಳಿವೆ. ಮತ್ತು ಬಡಾವಣೆಗೊಂದು ಕೇಂದ್ರವಿದೆ. ನಾವು ಕ್ಯಾನ್, ಗ್ಲಾಸ್, ಪ್ಲಾಸ್ಟಿಕ್ ಕಂಟೈನರ್ಸ್ ಸಂಗ್ರಹಣೆ ಮಾಡಿ ಅವನ್ನು ಆ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಕೊಟ್ಟು, ಪ್ರತಿಯಾಗಿ ಒಂದು ಕಂಟೇನರ್‌ಗೆ ಐದು ಅಥವಾ ಹತ್ತು ಸೆಂಟ್ ಪಡೆಯಬಹುದು. ಕೆಲ ಸ್ವಯಂಸೇವಾ ಸಂಸ್ಥೆಗಳು ಜನರನ್ನು ಕಂಟೈನರ್ಸ್ ದಾನ ಮಾಡಲು ಕೇಳುತ್ತಿವೆ. ಅದರಿಂದ ಹುಟ್ಟುವ ಹಣವನ್ನು ಸಂಸ್ಥೆಯು ತನ್ನ ಚಾರಿಟಿ ಕೆಲಸಗಳಿಗೆ ಬಳಸುತ್ತದೆ.

ಆಸ್ಟ್ರೇಲಿಯಾದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಡೆ ಕಾಣುವುದು ಎರಡು ಬಗೆಗಳ ಕಸ ವಿತರಣೆ ಪೆಟ್ಟಿಗೆಗಳು. ಒಂದು, landfill ಕಸ ಪೆಟ್ಟಿಗೆ. ಇದರಲ್ಲಿ ಶೇಖರಣೆಯಾಗುವ ಕಸವನ್ನು ನಾಶಪಡಿಸುವ ವೈಜ್ಞಾನಿಕ ಕ್ರಮಗಳು, ಪದ್ಧತಿ ನಿಗದಿತ ಸ್ಥಳಗಳಲ್ಲಿ ಇವೆ. ಎರಡನೆಯದು ಮರುಬಳಕೆ (recycling) ಕಸ ಪೆಟ್ಟಿಗೆ. ಇದರಲ್ಲಿ ಸೇರುವ ಕಸವನ್ನು ಸ್ಥಳೀಯವಾಗಿ ಸ್ಥಾಪಿಸಲಾಗಿರುವ ಘಟಕಗಳಲ್ಲಿ ವಿತರಣೆ ಮಾಡುವುದು ನಗರಪಾಲಿಕೆಗೆ ಸೇರಿದ್ದು. ಇವೆರಡೂ ಬಗೆಗಳ ಕಸ ಪೆಟ್ಟಿಗೆಗಳು ಎಲ್ಲರ ಮನೆಗಳಲ್ಲೂ ಇರುತ್ತವೆ. ನಗರಪಾಲಿಕೆಯು ಮನೆಮನೆಗೆ ಪೆಟ್ಟಿಗೆಗಳನ್ನು ಕೊಡುತ್ತದೆ. ವಾರಕ್ಕೊಮ್ಮೆ ಕಸ ಸಂಗ್ರಹ ಟ್ರಕ್ ಬಂದು, ಟ್ರಕ್‌ನಿಂದ ಚಿಕ್ಕದೊಂದು ಕ್ರೇನ್ ಕೈ ಹೊರಚಾಚಿ, ಮನೆ ಮುಂದೆ ನಾವು ಇಟ್ಟಿರುವ ಕಸ ಪೆಟ್ಟಿಗೆಯನ್ನು ಮೇಲಕ್ಕೆತ್ತಿ ಅದನ್ನು ಟ್ರಕ್ ಹೊಟ್ಟೆಯತ್ತ ಸಾಗಿಸಿ, ಬಗ್ಗಿಸಿ ಹೊಟ್ಟೆಯೊಳಗೆ ಕಸವನ್ನು ಸುರಿಯುತ್ತದೆ. ಖಾಲಿಯಾದ ಕಸ ಪೆಟ್ಟಿಗೆಯನ್ನು ನಾವು ವಾಪಸ್ ಅಂಗಳಕ್ಕೆ ತಂದಿಡುತ್ತೀವಿ. ಪ್ರತಿವಾರವೂ landfill ಕಸ ಸಂಗ್ರಹಣೆ ಟ್ರಕ್ ಬರುತ್ತದೆ. ಎರಡು ವಾರಕ್ಕೊಮ್ಮೆ recycling ಟ್ರಕ್ ಬರುತ್ತದೆ.

ಆಸ್ಟ್ರೇಲಿಯಾದಲ್ಲಿ ನೀರು ಸರಬರಾಜು, ಕೊಳಕುನೀರು ಶುದ್ಧೀಕರಣ ಮತ್ತು ಮರುಬಳಕೆ ವ್ಯವಸ್ಥೆಯ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳಿಗೆ ಸೇರಿದ್ದಾದರೆ, ಸ್ಥಳೀಯ ನಗರಪಾಲಿಕೆಗಳು ಕಸ ವಿತರಣೆ, ಒಳ ಚರಂಡಿ ವ್ಯವಸ್ಥೆಗಳನ್ನು ವಹಿಸಿಕೊಂಡಿವೆ. ಈ ಎಲ್ಲಾ ವ್ಯವಸ್ಥೆಗಳ ಸುವ್ಯವಸ್ಥಿತ ಮತ್ತು ಸುಗಮ ನಿರ್ವಹಣೆಗೆ ನಾವು ನಾಗರಿಕರು ಪ್ರತಿ ತಿಂಗಳೂ ತೆರಿಗೆ ಕಟ್ಟುತ್ತೀವಿ.

ಮತ್ತೆ ಹವ್ಯಾಸಿ ಕೈತೋಟಗಾರರ ವಿಷಯಕ್ಕೆ ಬರುತ್ತೀನಿ. ಎರಡು ವಾರಗಳ ಹಿಂದೆ ನಾನು ನಡೆಸಿದ ಪ್ರಾತ್ಯಕ್ಷಿಕೆಯ ಸಮಯದಲ್ಲಿ ಗಮನಿಸಿದ ವಿಷಯವೆಂದರೆ ಆಸ್ಟ್ರೇಲಿಯನ್ನರಲ್ಲಿ ಅರಿಶಿನ, ತುಳಸಿ, ಬೇವು, ಒಂದೆಲಗ, ನುಗ್ಗೆಕಾಯಿ ಇತ್ಯಾದಿ ಗಿಡ-ಎಲೆ-ಕಾಯಿಗಳ ಬಗ್ಗೆ ಮತ್ತು ಅವುಗಳಲ್ಲಿನ ಆರೋಗ್ಯವನ್ನು ವೃದ್ಧಿಪಡಿಸುವ ಗುಣಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಜನರು ಆಯುರ್ವೇದ-ಆಧಾರಿತ ಮಾಹಿತಿಗೆ ಹಾತೊರೆಯುತ್ತಿದ್ದಾರೆ. ಈಗಂತೂ turmeric chai latte ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಆರು ಡಾಲರ್ ಕೊಟ್ಟು ಅರಿಶಿನವಿರುವ ಟೀ ಬ್ಯಾಗ್ ಹಾಕಿಕೊಂಡು ಟೀ ಕುಡಿಯುತ್ತ ಖುಷಿಪಡುವುದು. ನಮಗೆಲ್ಲ ಬಾಲ್ಯದಲ್ಲಿ ನೆಗಡಿಯಾದರೆ, ಗಂಟಲುನೋವು ಬಂದರೆ ದೊಡ್ಡವರು ರಾತ್ರಿ ಮಲಗುವ ಸಮಯಕ್ಕೆ ಬಿಸಿ ಹಾಲಿಗೆ ಅರಿಶಿನ, ಮೆಣಸು ಹಾಕಿ ಕುಡಿಸುತ್ತಿದ್ದರು. ಅದು ಕೂಡ turmeric chai latte ಅಲ್ಲವೇ ಎಂದೆನಿಸಿ ನಗು ಬರುತ್ತದೆ. ನುಗ್ಗೆಕಾಯಿ ಮರದ ಎಲೆಗಳನ್ನು ಒಣಗಿಸಿ ಅದನ್ನು ಟೀ ಬ್ಯಾಗ್ ಮಾಡುತ್ತಿದ್ದಾರೆ. ಬಗೆಬಗೆಯ ಹರ್ಬಲ್ ಟೀ ಕುಡಿಯುವುದು ದೊಡ್ಡದೊಂದು ಸಂಸ್ಕೃತಿಯಾಗುತ್ತಿದೆ.

ಅಂದ ಹಾಗೆ, ಆಸ್ಟ್ರೇಲಿಯಾದಲ್ಲಿ ಸಮುದಾಯ ತೋಟ ಕ್ರಾಂತಿಯಲ್ಲಿರುವವರು ಹೆಚ್ಚಿನಮಟ್ಟಿಗೆ ಹೆಂಗಸರು. ನಮ್ಮ ‘ಎಡಿಬಿಲ್ ಎಕ್ಸ್‌ಚೇಂಜ್ ಹಟ್’ ಹುಟ್ಟುಹಬ್ಬದ ಸಮಯದಲ್ಲಿ ನನ್ನನ್ನೂ ಸೇರಿಸಿ ನಾಲ್ಕು ಭಾರತೀಯ ಹೆಂಗಸರು ಇದ್ದೆವು. ಅವರು ಮೂವರಲ್ಲಿ ಒಬ್ಬರು ಆಂಧ್ರ ಮತ್ತು ಇಬ್ಬರು ಬೆಂಗಳೂರಿನವರು. ಅವರಲ್ಲೊಬ್ಬರು ಕನ್ನಡ ಭಾಷೆ ಮಾತನಾಡುವವರು. ನಾನು ಅವರ ಅಪ್ಪಟ ಭಾರತೀಯ ಹೆಸರನ್ನು ಉಪಯೋಗಿಸಿದಾಗ ‘ನೀವೊಬ್ಬರೇ ನನ್ನ ಹೆಸರನ್ನು ಪೂರ್ತಿಯಾಗಿ ಹೇಳುವುದು, ಎಲ್ಲರೂ ನನ್ನ ಹೆಸರನ್ನು ಮೊಟಕು ಮಾಡಿ ಆಂಗ್ಲೀಕರಣ ಮಾಡಿದ್ದಾರೆ,’ ಎಂದು ಹೇಳುತ್ತಾ ಹರ್ಷಿಸಿದರು. ಈಕೆ sourdough ಬ್ರೆಡ್ ಮಾಡುವುದನ್ನು ಕಲಿತು ಅದರಲ್ಲಿ ನಿಷ್ಣಾತರಾಗಿದ್ದಾರೆ. ತಾವೇ ಮಾಡಿದ್ದ ಫ್ರೂಟ್ ಅಂಡ್ ನಟ್ sourdough ಬ್ರೆಡ್ ತಂದಿದ್ದರು. ನಾನು ಕಾಬೂಲಿ ಚನ್ನಮಸಾಲಾ ಮಾಡಿಕೊಂಡು ಹೋಗಿದ್ದೆ. ಇನ್ನೊಬ್ಬರು ಇಡ್ಲಿ ತಂದಿದ್ದರು. ಇವರು ಬೆಂಗಳೂರಿನ ಆಂಗ್ಲೋ-ಇಂಡಿಯನ್, ಹಾಗಾಗಿ ತನ್ನದು ಇಂಗ್ಲಿಷ್ ಹೆಸರು, ಆದರೆ ಈ ಗುಂಪಿನ ಮಟ್ಟಿಗೆ ಭಾರತೀಯ ಹೆಸರನ್ನು ಇಟ್ಟುಕೊಂಡಿರುವುದಾಗಿ ಹೇಳುತ್ತಾ ಪರಿಚಯಿಸಿಕೊಂಡರು. ಆಂಧ್ರದ ಹೆಂಗಸು ತಾನು ಬಹಳ ಹಿಂದೆಯೇ ಆಸ್ಟ್ರೇಲಿಯಾಕ್ಕೆ ಬಂದಿದ್ದು, ಹೆಚ್ಚುಕಡಿಮೆ ಆಸ್ಟ್ರೇಲಿಯನ್ ಆಗಿದ್ದೀನಿ, ಎಂದರು. ಹೀಗೇ ಹೋಗುತ್ತಾ ಭಾರತೀಯ ಸದಸ್ಯರ ಸಂಖ್ಯೆ ಹೆಚ್ಚಾಗಲಿ, ಎಂದು ಮನಸ್ಸು ಪಿಸುಗುಟ್ಟಿತ್ತು. ಅವರ ಮೂಲಕ ನನಗೆ ಭಾರತೀಯ ತರಕಾರಿ, ಹಣ್ಣುಗಳ ಬೀಜಗಳು ಸಿಗಬಹುದೆಂಬ ದೂರಾಲೋಚನೆ ಕೂಡ ಇತ್ತು.

ನಮ್ಮ ಕೇವಲ ನಾಲ್ಕು ಜನ ಭಾರತೀಯರ ಕಿರಿ-ಮರಿ ಗುಂಪಿನಲ್ಲಿದ್ದ ಭಿನ್ನತೆ, ಅನೇಕತ್ವಗಳು ನನ್ನಲ್ಲಿ ಭಾರಿ ಕುತೂಹಲ ಹುಟ್ಟಿಸಿತ್ತು. ಅದೇ ವಾರಾಂತ್ಯ ನಮ್ಮಲ್ಲಿ ತಂಗಿದ್ದ ಆಸ್ಟ್ರೇಲಿಯನ್ ಕುಟುಂಬ ಸ್ನೇಹಿತರ ಬಳಿ ಇದನ್ನೆಲ್ಲಾ ಹೇಳುತ್ತಿದ್ದಾಗ ಅಲ್ಲೊಂದಷ್ಟು ಖಂಡಾಂತರ, ಬಹುಸಂಸ್ಕೃತಿಗಳ ಉಪಕಥೆಗಳು ಹುಟ್ಟಿದ್ದವು.