ಇಂಗೆಬೋಗ್ ಬಾಖ್‌ಮಾನ್ ಅವರ ಸಾಹಿತ್ಯ ವೈಯಕ್ತಿಕ ಗಡಿಗಳು, ಸತ್ಯದ ಸ್ಥಾಪನೆ ಮತ್ತು ಭಾಷೆಯ ತತ್ವಶಾಸ್ತ್ರದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಅವರ ಅನೇಕ ಗದ್ಯ ಕೃತಿಗಳು ಮಹಿಳೆಯರು ತಮ್ಮ ಬದುಕಿಗಾಗಿ ನಡೆಸುವ ಹೊರಾಟಗಳು ಹಾಗೂ ಯುದ್ಧಾನಂತರದ ಸಮಾಜದಲ್ಲಿ ತಮ್ಮ ಧ್ವನಿಯನ್ನು ಹುಡುಕುವ ಹೋರಾಟಗಳನ್ನು ಪ್ರತಿನಿಧಿಸುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಆಸ್ಟ್ರಿಯಾ ದೇಶದ ಜರ್ಮನ್ ಭಾಷಾ ಕವಿ ಇಂಗೆಬೋಗ್ ಬಾಖ್‌ಮಾನ್ -ರವರ (Ingeborg Bachmann, 1926-1973) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

“ಒಬ್ಬ ಉಚ್ಛ ಶ್ರೇಣಿಯ ಆಧುನಿಕ ಕವಿ ತನ್ನ ಸಾಹಿತ್ಯ ಪಯಣದ ಆರಂಭದಲ್ಲೇ ಇಷ್ಟು ಸಂಭ್ರಮದೊಂದಿಗೆ ಸನ್ಮಾನಿಸಲ್ಪಡುವುದು ಅಪರೂಪವೇ ಸರಿ. ಇಷ್ಟು ಸಂಭ್ರಮದೊಂದಿಗೆ ಸನ್ಮಾನಿಸಲ್ಪಟ್ಟವರು ಆಸ್ಟ್ರಿಯಾ ದೇಶದ ಆಧುನಿಕ ಕವಿ ಇಂಗೆಬೋಗ್ ಬಾಖ್‌ಮಾನ್. 1953-ರಲ್ಲಿ, ಅವರ ಮೊದಲ ಕವನ ಸಂಕಲನ ಪ್ರಕಟವಾದ ವರ್ಷ, ಅವರು “ಗ್ರೂಪ್ 47” (Gruppe 47) ಸಾಹಿತಿಗಳ ಒಕ್ಕೂಟದಿಂದ ಎರಡನೆಯ ವಿಶ್ವಯುದ್ಧದ ನಂತರದ ಜರ್ಮನಿಯ ಅತ್ಯಂತ ಅಪೇಕ್ಷಿತ ಸಾಹಿತ್ಯ ಪ್ರಶಸ್ತಿಯನ್ನು ಪಡೆದರು. ಒಂದು ವರ್ಷದ ನಂತರ, ಖ್ಯಾತ ಜರ್ಮನ್ ಪತ್ರಿಕೆ ‘ಡೆರ್ ಸ್ಪೀಗೆಲ್’ (Der Spiegel), ಆಗ ರೋಮ್ ನಗರದಲ್ಲಿ ವಾಸವಾಗಿದ್ದ ಈ ಯುವ ಆಸ್ಟ್ರಿಯನ್ ಕವಿಯ ಬಗ್ಗೆ ಮುಖಪುಟ ಲೇಖನವನ್ನು ಪ್ರಕಟಿಸಿ ಅವರನ್ನು ಸಾರ್ವಜನಿಕರ ಗಮನಕ್ಕೆ ತಂದಿತು. ಎರಡು ವರ್ಷಗಳ ನಂತರ, ಅವರ ಎರಡನೇ ಕವನ ಸಂಕಲನದ ಪ್ರಕಟಣೆಯೊಂದಿಗೆ, ಸಾರ್ವಜನಿಕ ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಇನ್ನೂ ಹೆಚ್ಚಾಯಿತು. ಆಗಿನ ಜರ್ಮನಿಯ ಅತ್ಯಂತ ಪ್ರಸಿದ್ಧ ವಿಮರ್ಶಕರು ಮತ್ತು ಕವಿಗಳಲ್ಲಿ ಒಬ್ಬರು ತಮ್ಮ ಆಧುನಿಕ ಕಾವ್ಯದ ಬಗ್ಗೆ ಬರೆದ ಪುಸ್ತಕದ ಒಂದು ಅಧ್ಯಾಯವನ್ನು ಬಾಖ್‌ಮಾನ್-ರ ಕಾವ್ಯಕ್ಕೆ ಮೀಸಲಿಟ್ಟು, ಬಾಖ್‌ಮಾನ್-ರನ್ನು ಎಲಿಯಟ್, ರಿಲ್ಕ ಮತ್ತು ಗಾಟ್‌ಫ಼್ರಿಡ್ ಬೆನ್‌-ರಂತಹ ಕವಿಗಳ ದರ್ಜೆಗೆ ಸೇರಿಸಿ ಬಾಖ್‌ಮಾನ್-ರ ಅಂತಸ್ತು ಮತ್ತು ಈ ಕವಿಗಳ ಜತೆ ಅವರ ಸಂಬಂಧವನ್ನು ಸ್ಪಷ್ಟವಾಗಿ ಸ್ಥಾಪಿಸಿದರು. ಮೂರು ವರ್ಷಗಳ ನಂತರ, 1959-ರಲ್ಲಿ, ಫ಼್ರಾಂಕ್ಫ಼ರ್ಟ್ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಸ್ಥಾಪಿಸಿದ ಹುದ್ದೆಗಾಗಿ ಆಧುನಿಕ ಕಾವ್ಯಶಾಸ್ತ್ರದ ಕುರಿತು ಉಪನ್ಯಾಸಗಳ ಸರಣಿಯನ್ನು ನೀಡಲು ಬಾಖ್‌ಮಾನ್-ರನ್ನು ಆಹ್ವಾನಿಸಲಾಯಿತು. ಇದರಿಂದ ಅವರಿಗೆ ಮತ್ತೂ ಹೆಚ್ಚಿನ ಪ್ರಚಾರ, ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರಶಂಸೆ ದೊರೆಯಿತು. ಒಂದು ಹೊಸ ತಾರೆಯ ಉದಯವಾಯಿತು, ಯುದ್ಧೋತರ ಜರ್ಮನಿಯ ಸಾಹಿತ್ಯಿಕ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗಿತು.” ಹೀಗೆಂದು ಬಾಖ್‌ಮಾನ್-ರ ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಮಾರ್ಕ್ ಆ್ಯಂಡರ್ಸನ್ ತಾವು ಸಂಪಾದಿಸಿದ ಬಾಖ್‌ಮಾನ್-ರ ಆಯ್ದ ಕವನಗಳ ಸಂಕಲನದ ಪ್ರಸ್ತಾವನೆಯಲ್ಲಿ ಬರೆಯುತ್ತಾರೆ . (In the Storm of Roses – Selected Poems of Ingeborg Bachmann. Translated and edited by (Mark Anderson). Princeton, New Jersey: Princeton University Press, 1986.)

ಮುಂದುವರೆಯುತ್ತಾ ಆ್ಯಂಡರ್ಸನ್ ಹೇಳುತ್ತಾರೆ, “ಆದರೆ ಈ ಆರೋಹಣ ಬಾಖ್‌ಮಾನ್-ರ ಕಾವ್ಯ ಜೀವನಕ್ಕೆ ಒಂದು ತರಹದ ದುರದೃಷ್ಟವಾಗಿತ್ತು ಎಂದೇ ಹೇಳಬೇಕು. ನಿರಂತರವಾಗಿ ಸಾರ್ವಜನಿಕರ ಗಮನದಲ್ಲಿರುವುದು, ತನ್ನ ಪ್ರತಿಯೊಂದು ಹಾವಭಾವ ಮತ್ತು ಮಾತನ್ನು ಜನರು ಪರಿಶೀಲಿಸುವುದು, ವಿಶ್ಲೇಷಿಸುವುದು, ಸಾರ್ವಜನಿಕವಾಗಿ ಚರ್ಚಿಸುವುದು, ಮೌನಪ್ರವೃತ್ತಿಯ ಮತ್ತು ಮಿತಭಾಷಿಯಾದ ಬಾಖ್‌ಮಾನ್-ರಿಗೆ ಬಹಳ ಮುಜುಗರವುಂಟಾಗುತ್ತಿತ್ತು ಮತ್ತು ಅವರ ಕಾವ್ಯಕ್ಕೆ ಸಂಕೋಲೆ ಕಟ್ಟಿದಂತಾಗಿತ್ತು. ಹೀಗೆ, ಪ್ರಸಿದ್ಧ ಕವಿಯ ಪಾತ್ರಕ್ಕೆ ಬಲವಂತವಾಗಿ ನೂಕಲ್ಪಟ್ಟ ಬಾಖ್‌ಮಾನ್-ರ ಕಾವ್ಯ ಬರವಣಿಗೆ ಕಡಿಮೆಯಾಗುತ್ತಾ ಬಂತು. ಅವರ ಎರಡನೆಯ ಸಂಗ್ರಹ ಅವರು ಬರೆದ ಕೊನೆಯ ಸಂಗ್ರಹವಾಯಿತು. ನಂತರ ಅವರು ಕೇವಲ ಬೆರಳೆಣಿಕೆಯಷ್ಟು ಬಿಡಿ ಕವನಗಳನ್ನು ಪ್ರಕಟಿಸಿದರು. ಈ ಕವನಗಳು ಅವರ ಅತ್ಯುತ್ತಮ ಮತ್ತು ಅತ್ಯಂತ ಶಕ್ತಿಯುತ ಕವನಗಳೆಂದೇ ಹೇಳಬೇಕು. ಆದರೆ ಈ ಕವನಗಳನ್ನು ಓದಿದಾಗ ಅವರು ಮೌನದ ಬಗ್ಗೆ ಹಾಗೂ ಕವನ ಬರೆಯುವ ಅಸಾಧ್ಯತೆಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು ಎಂದು ತೋರುತ್ತದೆ. ಈ ಕಾಲದಲ್ಲಿ ಬರೆದ ಅವರ ಸುಮಾರು ಬಿಡಿ ಕವನಗಳು ಅವರ ಸ್ನೇಹಿತರಿಗೆ ಮತ್ತು ಸಹ ಕಲಾವಿದರಿಗೆ ಸಮರ್ಪಿತವಾಗಿತ್ತು; ಅಂದರೆ ಈ ಕವನಗಳಿಗೆ ತಾನಾಗಿ ನಿಲ್ಲಲು ತಮ್ಮ ಸ್ವಂತ ಅಸ್ತಿತ್ವದ ಜತೆಗೆ ಬಾಹ್ಯ ಸಮರ್ಥನೆ ಸಹ ಬೇಕಾಗುತ್ತವೆ ಎಂದು ಸೂಚಿಸುವಂತಿದೆ.

1964-ರಲ್ಲಿ, ಅವರು ಗೆಯೊರ್ಗ್ ಬುಷ್ಣರ್ (Georg Büchner) ಪ್ರಶಸ್ತಿಯನ್ನು ಸ್ವೀಕರಿಸಿದ ವರ್ಷದಲ್ಲಿ, ಬಾಖ್‌ಮಾನ್ ಅವರು ತಮ್ಮ ಕೊನೆಯ ಕವನವನ್ನು ಪ್ರಕಟಿಸಿದರು. ಇದು ಕಾವ್ಯಕ್ಕೆ ಅವರ ವಿದಾಯವೂ ಆಗಿತ್ತು. ’No Delicacies’ ಎಂಬ ಶೀರ್ಷಿಕೆಯ ಈ ಕವನ ಹೀಗೆ ಪ್ರಾರಂಭವಾಗುತ್ತೆ (ನನ್ನ ಕನ್ನಡ ಅನುವಾದದಲ್ಲಿ):

ಯಾವುದೂ ಖುಷಿ ಕೊಡಲ್ಲ ನನಗೆ ಈಗ

ರೂಪಕವೊಂದಕ್ಕೆ ಬಾದಾಮಿ ಹೂವು
ಮುಡಿಸಿ ಅಲಂಕರಿಸಲಾ?
ಬೆಳಕಿನ ಚಳಕದ ಮೇಲೆ ವಾಕ್ಯರಚನೆಯ
ಕ್ರೂಶಾರೋಹಣ ಮಾಡಲಾ?
ಇಂತಹ ಅನಗತ್ಯ ವಿಷಯಗಳ ಬಗ್ಗೆ ಯಾರು
ತಲೆಕೆಡಿಸಿಕೊಳ್ಳುತ್ತಾರೆ –

ಹಾಗೂ ಹೀಗೆ ಕೊನೆಗೊಳ್ಳುತ್ತೆ …

ನಾನೇನು
ಈ ಹಾಳೆಯನ್ನು ಹರಿದು ಹಾಕಲಾ,
ರಚಿತ ಪದ-ಗೀತನಾಟಕಗಳನ್ನು ಅಳಿಸಿ ಹಾಕಲಾ,
ಹಾಗೆ ಮಾಡುತ್ತಾ ನಾಶ ಮಾಡಲಾ …
ನನ್ನನ್ನು ನಿನ್ನನ್ನು ಹಾಗೂ ಅವನನ್ನು ಅವಳನ್ನು ಅದನ್ನು
ನಮ್ಮನ್ನು ನಿಮ್ಮನ್ನು??

(ಆದರೂ ಮಾಡಬೇಕು. ಇತರರು ಮಾಡಬೇಕು.)

ಇದರಲ್ಲಿ ನನ್ನ ಪಾಲೋ, ಚದುರಿ ಹೋಗಲಿ ಅದು.”

ಇಪ್ಪತನೆಯ ಶತಮಾನದ ಜರ್ಮನ್ ಭಾಷಾ ಸಾಹಿತ್ಯದ ಮುಖ್ಯ ಧ್ವನಿಗಳಲ್ಲಿ ಒಬ್ಬರಾದ ಇಂಗೆಬೋಗ್ ಬಾಖ್‌ಮಾನ್ ಆಸ್ಟ್ರಿಯಾ ದೇಶದ ಕ್ಲ್ಯಾಗೆನ್‌ಫ಼ರ್ಟ್ ನಗರದಲ್ಲಿ 1926-ರಲ್ಲಿ ಜನಿಸಿದರು. ಅವರು ಇನ್ಸ್‌ಬ್ರಕ್, ಗ್ರಾಜ಼್ ಮತ್ತು ವಿಯೆನ್ನಾ ವಿಶ್ವವಿದ್ಯಾಲಯಗಳಲ್ಲಿ ತತ್ವಶಾಸ್ತ್ರ, ಮನೋವಿಜ್ಞಾನ, ಜರ್ಮನ್ ಭಾಷಾಶಾಸ್ತ್ರ ಮತ್ತು ಕಾನೂನನ್ನು ಅಧ್ಯಯನ ಮಾಡಿದರು, ಹಾಗೂ 1949-ರಲ್ಲಿ, ವಿಯೆನ್ನಾ ವಿಶ್ವವಿದ್ಯಾಲಯದಿಂದ ತಮ್ಮ ಡಾಕ್ಟರೇಟ್ ಪದವಿ ಪಡೆದರು. ಪದವಿ ಪಡೆದ ನಂತರ, ಬಾಖ್‌ಮಾನ್-ರು ಅಲೈಡ್ ರೇಡಿಯೊ ಸ್ಟೇಷನ್ ‘Rot-Weiss-Rot’-ನಲ್ಲಿ (Red-White-Red; ‘ಕೆಂಪು-ಬಿಳಿ-ಕೆಂಪು’ – ಆಸ್ಟ್ರಿಯಾ ದೇಶದ ಧ್ವಜದ ಬಣ್ಣಗಳು) ಸ್ಕ್ರಿಪ್ಟ್-ರೈಟರ್ ಮತ್ತು ಸಂಪಾದಕರಾಗಿ ಕೆಲಸ ಮಾಡಿದರು. ಇದು ಅವರಿಗೆ ಸಮಕಾಲೀನ ಸಾಹಿತ್ಯದ ಅವಲೋಕನವನ್ನು ಪಡೆಯಲು ಅನುವು ಮಾಡಿಕೊಟ್ಟಿತು ಹಾಗೂ ಈ ಕೆಲಸದ ಸಂಬಳದಿಂದ ಅವರ ಸಾಹಿತ್ಯಿಕ ಕೆಲಸವೂ ಸಾಂಗವಾಗಿ ಜರಗಿತು. ಆಕೆಯ ಮೊದಲ ರೇಡಿಯೋ ನಾಟಕಗಳನ್ನು ಇದೇ ರೇಡಿಯೋ ಸ್ಟೇಷನ್ ಪ್ರಕಟಿಸಿತು. “ಗ್ರೂಪ್ 47” (Gruppe 47) ಸಾಹಿತಿಗಳ ಒಕ್ಕೂಟದ ಸಂಪರ್ಕಕ್ಕೆ ಬರುವ ಮೂಲಕ ಅವರ ಸಾಹಿತ್ಯಿಕ ವೃತ್ತಿಜೀವನದಲ್ಲಿ ಗಮನಾರ್ಹ ಬೆಳವಣಿಗೆಯಾಯಿತು. “ಗ್ರೂಪ್ 47″ ಸಾಹಿತಿಗಳ ಒಕ್ಕೂಟದಲ್ಲಿ ಜರ್ಮನ್ ಭಾಷೆಯ ಹೆಸರಾಂತ ಸಾಹಿತಿಗಳಾದ ಇಲ್ಸಾ ಐಖಿಂಗರ್, ಪಾಲ್ ಸೆಲಾನ್, ಹಾಯ್ನ್‌ರಿಷ್ ಬೋಲ್, ಮಾರ್ಸೆಲ್ ರಾಯ್ಖ್-ರಾನಿತ್ಸಿಕಿ ಮತ್ತು ಗುಂಟಾರ್ ಗ್ರಾಸ್ ಸದಸ್ಯರಾಗಿದ್ದರು.

ಇಂಗೆಬೋಗ್ ಬಾಖ್‌ಮಾನ್ ಅವರ ಸಾಹಿತ್ಯ ವೈಯಕ್ತಿಕ ಗಡಿಗಳು, ಸತ್ಯದ ಸ್ಥಾಪನೆ ಮತ್ತು ಭಾಷೆಯ ತತ್ವಶಾಸ್ತ್ರದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಅವರ ಅನೇಕ ಗದ್ಯ ಕೃತಿಗಳು ಮಹಿಳೆಯರು ತಮ್ಮ ಬದುಕಿಗಾಗಿ ನಡೆಸುವ ಹೊರಾಟಗಳು ಹಾಗೂ ಯುದ್ಧಾನಂತರದ ಸಮಾಜದಲ್ಲಿ ತಮ್ಮ ಧ್ವನಿಯನ್ನು ಹುಡುಕುವ ಹೋರಾಟಗಳನ್ನು ಪ್ರತಿನಿಧಿಸುತ್ತವೆ. ಅವರು ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸಂನ ಇತಿಹಾಸಗಳನ್ನು, ನಿರ್ದಿಷ್ಟವಾಗಿ, ಪ್ರಸ್ತುತ ಸಮಯದಲ್ಲಿ ಸಾಮ್ರಾಜ್ಯಶಾಹಿ ಕಲ್ಪನೆಗಳ ನಿರಂತರತೆಯ ಬಗ್ಗೆಯೂ ಬರೆದರು.

‘ಫ್ಯಾಸಿಸಂ’ ಅವರ ಬರಹಗಳಲ್ಲಿ ಮರುಕಳಿಸುವ ವಿಷಯವಾಗಿತ್ತು. ತನ್ನ ಕಾದಂಬರಿ Der Fall Franza-ದಲ್ಲಿ (The Case of Franza) ಫ್ಯಾಸಿಸಂ 1945-ರಲ್ಲಿ ಸಾಯಲಿಲ್ಲ, ಅದು 1960-ರ ದಶಕದ ಜರ್ಮನ್ ಭಾಷಾ ಜಗತ್ತಿನ ಮಾನವ ಸಂಬಂಧಗಳಲ್ಲಿ ಮತ್ತು ವಿಶೇಷವಾಗಿ ಪುರುಷರ ದಬ್ಬಾಳಿಕೆಯಲ್ಲಿ ಉಳಿದುಕೊಂಡಿದೆ ಎಂದು ಬಾಖ್‌ಮಾನ್ ವಾದಿಸಿದರು.

ಜರ್ಮನಿಯಲ್ಲಿ 19-ನೇ ಶತಮಾನದ ಕೊನೆಯಲ್ಲಿ ಮತ್ತು 20-ನೇ ಶತಮಾನದ ಆರಂಭದಲ್ಲಿ ಮಹಿಳಾ ಹಕ್ಕುಗಳ ಅಭಿಯಾನದ ಸಾಧನೆಗಳನ್ನು 1930-ರ ದಶಕದಲ್ಲಿ ಫ್ಯಾಸಿಸ್ಟ್ ನಾಜಿ ಆಡಳಿತವು ವ್ಯವಸ್ಥಿತವಾಗಿ ರದ್ದುಗೊಳಿಸಿತು. ಜರ್ಮನ್ ಭಾಷಾ ಜಗತ್ತಿನ ಯುದ್ಧಾನಂತರದ ಅವಧಿಯಲ್ಲಿ ಮಹಿಳೆಯ ದೃಷ್ಟಿಕೋನದಿಂದ ಫ್ಯಾಸಿಸಂ ಜತೆ ಬೌದ್ಧಿಕವಾಗಿ ಸೆಣಸಾಡಿದ ಮಹಿಳಾ ಬರಹಗಾರರಾದ ಆ್ಯನಾ ಸೆಘರ್ಸ್, ಇಲ್ಸಾ ಐಖಿಂಗರ್, ಇಂಗೆಬೋಗ್ ಡ್ರೆವಿಟ್ಜ್ ಮತ್ತು ಕ್ರಿಸ್ಟಾ ವುಲ್ಫ್-ರ (Anna Seghers, Ilse Aichinger, Ingeborg Drewitz and Christa Wolf). ಸಾಲಿಗೆ ಬಾಖ್‌ಮಾನ್-ರು ತಮ್ಮ ಸಾಹಿತ್ಯ ಕಾರ್ಯದ ಮೂಲಕ ಸೇರುತ್ತಾರೆ. ತಮ್ಮ ಖಾಸಗಿ ಜೀವನದಲ್ಲಿ ರಾಜಕೀಯ ವಾಸ್ತವಗಳನ್ನು ಕಂಡುಹಿಡಿದು, ಅದರಿಂದ ವಿಮೋಚನೆಯನ್ನು ಸಾಧಿಸಲು ಪ್ರಯತ್ನಿಸಿದ ಆಸ್ಟ್ರಿಯನ್ ಮಹಿಳಾ ಬರಹಗಾರರ ಮುಂಚೂಣಿಯಲ್ಲಿದ್ದರು ಬಾಖ್‌ಮಾನ್. ಬಾಖ್‌ಮಾನ್-ರ ಬರಹಗಳು ಹಾಗೂ ಆಸ್ಟ್ರಿಯಾದ ಇತರ ಮಹಿಳಾ ಬರಹಗಾರರಾದ ಬಾರ್ಬರಾ ಫ್ರಿಶ್‌ಮತ್, ಬ್ರಿಜಿಟ್ ಶ್ವೇಗರ್ ಮತ್ತು ಆ್ಯನಾ ಮಿಟ್‌ಗುಟ್ಷ್‌-ರ (Barbara Frischmuth, Brigitte Schwaiger, Anna Mitgutsch) ಬರಹಗಳು ಜರ್ಮನಿಯಲ್ಲಿ ವ್ಯಾಪಕವಾಗಿ ಪ್ರಕಟವಾದವು.

ಇಂಗೆಬೋಗ್ ಬಾಖ್‌ಮಾನ್-ರ ಕಾವ್ಯದ ಧ್ವನಿ ನಿಧಾನವಾಗಿ ಕಡಿಮೆಯಾಗುತ್ತಾ ಮೌನವಾಗುವುದನ್ನು ಅವರ ಕಾವ್ಯವು ಎತ್ತುವ ಅತ್ಯಂತ ಮೂಲಭೂತ ಮತ್ತು ತುರ್ತು ಪ್ರಶ್ನೆಗಳೆಂದು ಪರಿಗಣಿಸಬಹುದು. ಆದರೆ ಅವರ ಕಾವ್ಯದ ಮೌನ ಇತರ ಸಾಹಿತ್ಯ ಪ್ರಕಾರಗಳು ಮತ್ತು ಸಾಹಿತ್ಯ ಅಧ್ಯಯನಗಳಿಗೆ ಅವರ ನಂತರದ ಕೊಡುಗೆಗಳ ಪ್ರಾಮುಖ್ಯತೆಯನ್ನು ಮರೆಮಾಡಲು ಬಿಡಬಾರದು. ಏಕೆಂದರೆ, ನೈತಿಕತೆ ಮತ್ತು ತಾತ್ವಿಕತೆಯಿಂದ ಕೂಡಿದ ಅವರ ವಿಶಿಷ್ಟವಾದ ಪರಿಶೋಧನೆಯ ಧ್ವನಿಯು ಅಂತಿಮವಾಗಿ ಕಾವ್ಯದಿಂದ ತನ್ನನ್ನು ತಾನೇ ಹೊರಹಾಕಿಸಿಕೊಂಡಿತಾದರೂ, ಆ ಧ್ವನಿ ಹೆಚ್ಚು ಸಾರ್ವಜನಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸ್ಪಷ್ಟವಾಗಿ ಕೇಳುವಂತೆ ಮಾಡಿಕೊಂಡಿತು: ಫ಼್ರಾಂಕ್ಫ಼ರ್ಟ್ ವಿಶ್ವವಿದ್ಯಾಲಯದಲ್ಲಿ ಆಧುನಿಕ ಯುರೋಪಿಯನ್ ಸಾಹಿತ್ಯದಲ್ಲಿ “ಸಮಕಾಲೀನ ಕಾವ್ಯದ ಸಮಸ್ಯೆಗಳು” ವಿಷಯದ ಬಗ್ಗೆ ಉಪನ್ಯಾಸಗಳ ಸರಣಿಯಲ್ಲಿ; ದಿ ಗುಡ್ ಗಾಡ್ ಆಫ಼್ ಮ್ಯಾನ್‌ಹ್ಯಾಟನ್- ನಂತಹ (The Good God of Manhattan, 1958) ರೇಡಿಯೋ ನಾಟಕಗಳಲ್ಲಿ; ದಿ ಥರ್ಟಿಯತ್ ಇಯರ್ ಮತ್ತು ಸಾಯ್ಮಲ್ಟೇನಿಯಸ್ (The Thirtieth Year, 1961; Si¬multaneous, 1972) ಎಂಬ ಸಣ್ಣ-ಕಥಾ ಸಂಗ್ರಹಗಳಲ್ಲಿ; ಹ್ಯಾನ್ಸ್ ವರ್ನರ್ ಹೆನ್ಜ಼್ ಅವರ ದಿ ಪ್ರಿನ್ಸ್ ಆಫ್ ಹೋಂಬರ್ಗ್ ಮತ್ತು ದಿ ಯಂಗ್ ಲಾರ್ಡ್ (The Prince of Homburg, 1960; The Young Lord, 1965) ಒಪೆರಾಗಳ ಲಿಬ್ರೆಟ್ಟಿ-ಗಳಲ್ಲಿ (Libretto-ಗೀತನಾಟಕದ ಯಾ ಸಂಗೀತಕೃತಿಯ ಸಾಹಿತ್ಯಭಾಗ); ಮತ್ತು ಸಂಕೀರ್ಣವಾದ ಹಾಗೂ ಸವಾಲೆಸೆಯುವ, ಆದರೆ ಪ್ರಕಟವಾದ ಒಂದು ವರ್ಷದೊಳಗೆ ಜರ್ಮನಿಯಲ್ಲಿ ‘ಬೆಸ್ಟ್‌ಸೆಲರ’ ಆದ ಅವರ ಮೊದಲ ಕಾದಂಬರಿ ಮಲಿನಾ-ದಲ್ಲಿ (Malina, 1971). ಆದರೆ 26 ಸೆಪ್ಟೆಂಬರ್ 1973-ರಂದು ಬಾಖ್‌ಮಾನ್-ರ ಅಪಾರ್ಟ್ಮೆಂಟ್-ಗೆ ಬೆಂಕಿಹತ್ತಿಕೊಂಡಾಗ ಅವರ ಬರವಣಿಗೆಯ ಅಂತ್ಯವಾಯಿತು. ಅಪಘಾತದಲ್ಲಿ ಉಂಟಾದ ಸುಟ್ಟಗಾಯಗಳಿಂದ ಅವರು ಅಕ್ಟೋಬರ್ 17 ರಂದು ಕೊನೆಯುಸಿರೆಳೆದರು. ಅವರಿಗೆ ಆಗ ನಲವತ್ತೇಳು ವರ್ಷ ವಯಸ್ಸು.

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಇಂಗೆಬೋಗ್ ಬಾಖ್‌ಮಾನ್-ರ ಎಲ್ಲಾ ಏಳು ಕವನಗಳನ್ನು ಮಾರ್ಕ್ ಆ್ಯಂಡರ್ಸನ್-ರವರು (Mark Anderson ಮೂಲ ಜರ್ಮನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.

****


ಗಾಳಿಗೀತ
ಮೂಲ: Aria I

ಈ ಗುಲಾಬಿಹೂಗಳ ಬಿರುಗಾಳಿಯ ಒಳಗೆ
ನಾವು ಯಾವ ಕಡೆ ತಿರುಗಿ ನೋಡಿದರೂ,
ಮುಳ್ಳುಗಳು ಬೆಳಗಿಸಿದ ರಾತ್ರಿಯ ಕಾಣುವೆವು.
ಹಿಂದೊಮ್ಮೆ ಪೊದೆಗಳಲ್ಲಿ ಸದ್ದಿಲ್ಲದೆ ಕೂತಿದ್ದ
ಆ ಸಾವಿರ ಎಲೆಗಳ ಗುಡುಗು
ಈಗ ನಮ್ಮನ್ನು ಅಟ್ಟಿಸಿಕೊಂಡು ಬರುತ್ತಿದೆ.

ಎಲ್ಲೆಲ್ಲಿ ಗುಲಾಬಿಹೂಗಳ ಅಗ್ನಿ ಆರಿಸಲ್ಪಟ್ಟಿದೆಯೋ
ಅಲ್ಲಲ್ಲಿ ಮಳೆ ನಮ್ಮನ್ನು ನದಿಗೆ ಕೊಚ್ಚಿಬಿಡುತ್ತದೆ.
ಓ ದೂರದ ರಾತ್ರಿಯೇ!
ಆದರೂ, ನಮ್ಮನ್ನು ಮುಟ್ಟಿದ ಎಲೆಯೊಂದು
ಈಗ ಅಲೆಗಳ ಮೇಲೆ ತೇಲುತ್ತಿದೆ,
ನಮ್ಮನ್ನು ಹಿಂಬಾಲಿಸುತ್ತಿದೆ ಕಡಲಿನತ್ತ.


ಏಯ್ ಪದಗಳೇ
ಮೂಲ: You Words

ಏಯ್ ಪದಗಳೇ, ಬನ್ನಿ, ನನ್ನ ಹಿಂದೆ!
ನಾವು ದೂರ, ಬಹು ದೂರ, ಪಯಣಿಸಿದ್ದರೂ,
ನಾವು ನಡೆಯುತ್ತಲಿರಬೇಕು,
ನಾವು ಕೊನೆಯನ್ನೆಂದೂ ಮುಟ್ಟಲಾರೆವು.

ಆಕಾಶ ತಿಳಿಯಾಗುತ್ತಿಲ್ಲ.

ಪದವೊಂದು
ಮತ್ತಿತರ ಪದಗಳನ್ನು ಮಾತ್ರ
ತನ್ನ ಹಿಂದೆ ಎಳೆಯಬಲ್ಲುದು,
ವಾಕ್ಯವೊಂದು,
ಮತ್ತೊಂದು ವಾಕ್ಯವನ್ನು.
ಆದ್ದರಿಂದ, ಲೋಕವು ಕೊನೆಗೆ
ತನ್ನ ಮಧ್ಯೆ ತಾನೇ ಬರಲಿಚ್ಛಿಸುವುದು,
ಹೇಳಲಾಗಿದೆ ಇದನ್ನು ಆಗಲೇ.
ಹೇಳಬೇಡ ಇದನ್ನು.

ಪದಗಳೇ, ಬನ್ನಿ ನನ್ನ ಹಿಂದೆ,
ಏಕೆಂದರೆ ಪದಗಳ, ಹೇಳಿಕೆಗಳ,
ಎದುರುಹೇಳಿಕೆಗಳ ಈ ಹಸಿವು
– ಇದೇ ಕೊನೆಯಂತಾಗಬಾರದು.

ಕೆಲ ಹೊತ್ತಿನವರೆಗೆ
ಇಂದ್ರಿಯಗಳೆಲ್ಲವೂ ಸುಮ್ಮನಿರಲಿ,
ಹೃದಯದ ಸ್ನಾಯುಗಳು ಬೇರೆ ರೀತಿ ಬಡಿಯಲಿ.

ಇರಲಿ ಬಿಡಿ, ಹೇಳುವೆ ನಾನು, ಇರಲಿ ಬಿಡಿ.
ಉದಾತ್ತ ಕಿವಿಯೊಳಗೆ ಸುರಿಯಲಿಕಲ್ಲ, ಏನೂ ಇಲ್ಲ,
ಹೇಳುವೆ ನಾನು, ಪಿಸುಮಾತಿನಲ್ಲಿ,
ಸಾವಿನ ಬಗ್ಗೆ ಯಾವ ಅನಿಸಿಕೆಗಳೂ ಇಲ್ಲ,
ಇರಲಿ ಬಿಡಿ, ಮತ್ತೆ ಬನ್ನಿ ನನ್ನ ಹಿಂದೆ,
ಮೃದುವಾಗಲ್ಲ, ಕಹಿಯಾಗೂ ಅಲ್ಲ,
ಸಮಾಧಾನವಿಲ್ಲದ ಸಾಂತ್ವನವಾಗಲ್ಲ,
ನಿಯುಕ್ತವಾಗಿಸುವಂಥದ್ದಲ್ಲ,
ಅಂದರೆ ಚಿಹ್ನೆಗಳಿಲ್ಲದೆಯೂ ಅಲ್ಲ –

ಮತ್ತೆ ಎಲ್ಲಕ್ಕಿಂತ ಮೇಲಾಗಿ ಇದಲ್ಲ:
ಧೂಳಿನ ಜಾಲದಲ್ಲಿರುವ ಪ್ರತಿಮೆ,
ಅಕ್ಷರಗಳ ಟೊಳ್ಳು ಹೊರಳಾಟ, ಕೊನೆಯ ಮಾತುಗಳು.

ಸಾಯುವಾಗಿನ ಮಾತುಗಳಲ್ಲ, ಏಯ್ ಪದಗಳೇ.


ಹರಿವು
ಮೂಲ: Stream

ಬದುಕಿನಲ್ಲಿ ಎಷ್ಟು ದೂರ
ಹಾಗೂ ಸಾವಿಗೆ ಎಷ್ಟು ಹತ್ತಿರ
ಬಂದಿದ್ದೇನೆಂದರೆ,
ನಾನು ಇನ್ನೆಂದೂ ವಾದಿಸಲಾರೆ.
ಭೂಮಿಯಿಂದ ಕಿತ್ತು ತೆಗೆಯುವೆ ನಾನು ನನ್ನ ಅಂಶವನ್ನು;

ಸ್ತಬ್ಧ ಸಾಗರದೊಳಗೆ, ಅದರ ಹೃದಯದೊಳಕ್ಕೆ
ನನ್ನ ಹಸಿರು ಬೆಣೆಯನ್ನು ಇರಿಯುವೆ,
ನಂತರ ದಡಕ್ಕೆ ಬಂದು ನಾ ಮೀಯುವೆ.

ತಗಡಿನ ಹಕ್ಕಿಗಳು ಏರುತ್ತವೆ ಮೇಲೆ,
ಜತೆಗೆ ದಾಲ್ಚಿನ್ನಿಯ ಪರಿಮಳ!
ನನ್ನ ಕೊಲೆಗಾರ ಕಾಲನ ಜತೆ ಇದ್ದೇನೆ ನಾನು ಒಂಟಿಯಾಗಿ.
ಈ ಮಂಪರಿನಲ್ಲಿ, ಈ ನೀಲತೆಯಲ್ಲಿ ಹೊಸೆಯುವೆವು ನಾವು
ನಮ್ಮ ರೇಷಿಮೆಗೂಡನ್ನು.


ಈ ಪ್ರಳಯದ ನಂತರ
ಮೂಲ: After this Deluge

ಈ ಪ್ರಳಯದ ನಂತರ
ನೋಡಲು ಬಯಸುವೆ ನಾನು ಪಾರಿವಾಳವನ್ನು,
ಬೇರಾವುದನ್ನೂ ಅಲ್ಲ, ಪಾರಿವಾಳವನ್ನು,
ಮತ್ತೊಮ್ಮೆ ಬಚಾವಾದ ಪಾರಿವಾಳವನ್ನು.

ನಾನು ಈ ಸಮುದ್ರದಲ್ಲಿ ಮುಳುಗಿ ಹೋಗುತ್ತಿದ್ದೆ!
ಅವಳು ಹಾರಿಹೋಗದೆ ಇದ್ದಿದ್ದರೆ,
ಅವಳು ಮರಳಿ ತರದಿದ್ದರೆ, ತರದೇ ಇದ್ದಿದ್ದರೆ
ಕೊನೆಯ ಗಳಿಗೆಯಲ್ಲಿ,
ಆ ಎಲೆಯನ್ನು.


ಇಲ್ಲ ಯಾವುದೇ ನಯ-ನಾಜೂಕುಗಳು
ಮೂಲ: No Delicacies

ಯಾವುದೂ ಖುಷಿ ಕೊಡಲ್ಲ ನನಗೆ ಈಗ

ರೂಪಕವೊಂದಕ್ಕೆ ಬಾದಾಮಿ ಹೂವು
ಮುಡಿಸಿ ಅಲಂಕರಿಸಲಾ?
ಬೆಳಕಿನ ಚಳಕದ ಮೇಲೆ ವಾಕ್ಯರಚನೆಯ
ಕ್ರೂಶಾರೋಹಣ ಮಾಡಲಾ?
ಇಂತಹ ಅನಗತ್ಯ ವಿಷಯಗಳ ಬಗ್ಗೆ ಯಾರು
ತಲೆಕೆಡಿಸಿಕೊಳ್ಳುತ್ತಾರೆ –

ಇರುವ ಪದಗಳ ಜತೆ ನಾನು
ಉದಾರವಾಗಿರಲು
ಕಲಿತಿರುವೆ
(ಕನಿಷ್ಠ ದರ್ಜೆಯ ಪದಗಳ ಜತೆ)

ಹಸಿವು
ಅವಮಾನ
ಕಣ್ಣೀರು
ಮತ್ತೆ
ಕತ್ತಲೆ

ಅಶುದ್ಧ ಬಿಕ್ಕಳಿಕೆಗಳು,
ಈ ಅಗಾಧ ಬೇಗುದಿಯ ಬಗ್ಗೆ
ಹತಾಶೆ
(ಹತಾಶೆಯ ಬಗ್ಗೆಯೂ ಹತಾಶೆ ಪಡುವೆ ನಾನು),
ಖಾಯಿಲೆಬಿದ್ದವರು, ಜೀವನವೆಚ್ಚ –
ಇವೆಲ್ಲ ಇದ್ದಾಗ್ಯೂ
ನಾನು ಹೇಗೋ ಸಂಭಾಳಿಸುವೆ.

ನಾನು ಶಬ್ದವನ್ನು ನಿರ್ಲಕ್ಷಿಸಲ್ಲ
ನಾನು ನನ್ನನ್ನು ನಿರ್ಲಕ್ಷಿಸಿರುವೆ.
ಮಿಕ್ಕವರು,
ದೇವರು ಬಲ್ಲ ಇದು,
ಶಬ್ದಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದವರು.
ನಾನು ನನ್ನ ಕೈಯಾಳಲ್ಲ.

ಒಂದು ವಿಚಾರವನ್ನು ಬಂಧಿಸಿ, ಅದನ್ನು ಒಂದು
ಪ್ರಕಾಶಿತ ವಾಕ್ಯಕೋಶದೆಡೆಗೆ ನಡೆಸಿಕೊಂಡು ಹೋಗಲಾ?
ಅದರ ಕಿವಿ ಕಣ್ಣುಗಳಿಗೆ ರುಚಿಯಾದ ಪದ ತುತ್ತುಗಳನ್ನು ಉಣಿಸಿಲಾ?
ಸ್ವರಾಕ್ಷರವೊಂದರ ರತಿಯಾಸೆಯ ಬಗ್ಗೆ ತನಿಖೆ ನಡೆಸಲಾ,
ನಮ್ಮ ವ್ಯಂಜನಾಕ್ಷರಗಳ ಪ್ರೇಮ-ಮೌಲ್ಯದ ಬಗ್ಗೆ ವಿಚಾರಿಸಲಾ?

ಮುಗಿಲ್ಗಲ್ಲುಗಳಿಂದ ಚಚ್ಚಿಹೋಗಿರುವ ಈ ತಲೆ,
ಬರೆದು ಬರೆದು ಸೆಡೆಹೊಡೆದು ಜಡವಾಗಿರುವ ಈ ಕೈಯಿ,
ಮುನ್ನೂರು ರಾತ್ರಿಗಳ ಒತ್ತಡದಡಿಯಲ್ಲಿ,
ನಾನೇನು
ಈ ಹಾಳೆಯನ್ನು ಹರಿದು ಹಾಕಲಾ,
ರಚಿತ ಪದ-ಗೀತನಾಟಕಗಳನ್ನು ಅಳಿಸಿ ಹಾಕಲಾ,
ಹಾಗೆ ಮಾಡುತ್ತಾ ನಾಶ ಮಾಡಲಾ …
ನನ್ನನ್ನು ನಿನ್ನನ್ನು ಹಾಗೂ ಅವನನ್ನು ಅವಳನ್ನು ಅದನ್ನು
ನಮ್ಮನ್ನು ನಿಮ್ಮನ್ನು??

(ಆದರೂ ಮಾಡಬೇಕು. ಇತರರು ಮಾಡಬೇಕು.)

ಇದರಲ್ಲಿ ನನ್ನ ಪಾಲೋ, ಚದುರಿ ಹೋಗಲಿ ಅದು.


ಸಂದೇಶ
ಮೂಲ: Message

ಸ್ವರ್ಗದ ಪಡಸಾಲೆಯ ಬಡಕಲು ಉಷ್ಣತೆಯಿಂದ
ಉದ್ಭವಿಸುತ್ತಾನೆ ಸೂರ್ಯ.
ಇಲ್ಲ ಅಲ್ಲಿ ಮೇಲೆ ಅಮರ ಆತ್ಮಗಳು,
ಯುದ್ಧದಲ್ಲಿ ಮಡಿದವರು ಮಾತ್ರ.
ಹಾಗಂತ ನಾವು ಕೇಳ್ಪಟ್ಟಿದ್ದೇವೆ.
ಮತ್ತೆ, ಅಳಿವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಬೆಳಕು.
ನಮ್ಮ ಪರಮೇಶ್ವರನಾದ ಇತಿಹಾಸ
ನಮಗಾಗಿ ಕಾದಿರಿಸಿದೆ
ಪುನರುತ್ಥಾನವಿಲ್ಲದ
ಗೋರಿಯೊಂದನ್ನು.


ನೆರಳ ಗುಲಾಬಿಗಳ ಛಾಯೆ
ಮೂಲ: Shadow roses shadow

ಅನ್ಯ ಆಕಾಶವೊಂದರ ಅಡಿಯಲ್ಲಿ
ನೆರಳ ಗುಲಾಬಿಗಳ
ಛಾಯೆ,
ಅನ್ಯ ನೆಲದ ಮೇಲೆ.
ಗುಲಾಬಿಗಳ ಮತ್ತು ಛಾಯೆಗಳ ಮಧ್ಯೆ
ಅನ್ಯ ನೀರಿನ ಮೇಲೆ
ನನ್ನ ನೆರಳು.