ಮನುಷ್ಯರ ಉಳಿಕೆಗೆ ಅತ್ಯಗತ್ಯವಾದ ಪ್ರಕೃತಿಯ ಅಸ್ತಿತ್ವವನ್ನು ಉಳಿಸುವ ನೆಲೆಯಲ್ಲಿ ತಾಂಜಾನಿಯಾ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ತಾಂಜಾನಿಯಾದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು 30 ಪ್ರತಿಶತ ಭಾಗವನ್ನು ಸಂರಕ್ಷಿತ ರಾಷ್ಟ್ರೀಯ ಉದ್ಯಾನವನಗಳು ಆವರಿಸಿವೆ. ಪ್ರಪಂಚದಲ್ಲೇ ಅತ್ಯಂತ ದಟ್ಟವಾದ ಮರಗಳ ಹೊದಿಕೆಯನ್ನು ಹೊಂದಿದೆ ಎಂಬ ಹೆಗ್ಗಳಿಕೆ ತಾಂಜಾನಿಯಾದ್ದು. ವಿಪರ್ಯಾಸವೆಂದರೆ, ಅರಣ್ಯ ನಾಶ ಹೆಚ್ಚಾಗಿ ನಡೆಯುತ್ತಿರುವುದೂ ಇಲ್ಲಿಯೇ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ ವಿಶ್ವದ ಕುತೂಹಲಕಾರಿ ಸಂಗತಿಗಳ ಹೊಸ ಸರಣಿ “ವಿಶ್ವ ಪರ್ಯಟನೆ” ಇಂದಿನಿಂದ, ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಪರಂಪರೆ ಆಧುನಿಕತೆಗಳ ಸಮ್ಮಿಶ್ರಿತ ರಸಪಾಕ ತಾಂಜಾನಿಯಾ

ಹೆಚ್ಚೂ ಕಡಿಮೆ ಆರು ಕೋಟಿ ಜನರಿರುವ ದೇಶ ತಾಂಜಾನಿಯಾ. ಪೂರ್ವ ಆಫ್ರಿಕಾದ ಅತಿದೊಡ್ಡ ದೇಶವೆಂಬ ಹೆಗ್ಗಳಿಕೆ ಇದರದ್ದು. ಸ್ವಾಹಿಲಿ ಮತ್ತು ಇಂಗ್ಲಿಷ್ ಇಲ್ಲಿಯ ಅಧಿಕೃತ ಭಾಷೆಗಳು. ಹೆಸರಿಗೆ ಅಧಿಕೃತ ಭಾಷೆಯಾಗಿದ್ದರೂ ಆಂಗ್ಲ ಭಾಷೆಯ ಕಾರುಬಾರು ಸ್ವಾಹಿಲಿ ನಂತರದ ಎರಡನೆಯ ಸ್ಥಾನದಲ್ಲಿದೆ. ಜನಜೀವನದಲ್ಲಿ ಸ್ವಾಹಿಲಿ ಭಾಷೆಗೇ ಮೊದಲ ಸ್ಥಾನ. ಜನಾಂಗಗಳ ದೃಷ್ಟಿಯಲ್ಲಿ ಸಮೃದ್ಧವಾಗಿರುವ ದೇಶವಿದು. ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು ಜನಾಂಗೀಯ ಸಮುದಾಯಗಳು ಇಲ್ಲಿವೆ. ಇವುಗಳಲ್ಲಿ ಬಂಟು ಜನಾಂಗ ಆದ್ಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸುಕುಮಾ ಎನ್ನುವುದು ಅತಿ ದೊಡ್ಡ ಗುಂಪು. ಜನಸಂಖ್ಯೆಯ ಸುಮಾರು ಹದಿನೈದು ಪ್ರತಿಶತ ಜನರು ಈ ಗುಂಪಿಗೆ ಸೇರಿದವರು. ಗೊಗೊ, ಹಯಾ, ತುಂಬುಕಾ, ನ್ಯಾಮ್ವೆಜಿ ಇಂತಹ ಗುಂಪುಗಳೂ ಸಹ ಪ್ರಾಮುಖ್ಯತೆ ಪಡೆದುಕೊಂಡಿವೆ. ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಪಾಲು ಕೇವಲ ಒಂದು ಶೇಕಡಾ ಮಾತ್ರ. ಕ್ರೈಸ್ತ ಧರ್ಮದ ಪ್ರಾಬಲ್ಯ ಇರುವ ತಾಂಜಾನಿಯಾದಲ್ಲಿ ಸುಮಾರು 61% ಜನರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ಮುಸ್ಲಿಮರು ಇದರ ಅರ್ಧದಷ್ಟಿದ್ದರೆ, ಸ್ಥಳೀಯ ಸಂಪ್ರದಾಯಗಳನ್ನು ಪಾಲಿಸುವವರು ಅತೀ ಸೀಮಿತ ಸಂಖ್ಯೆಯಲ್ಲಿದ್ದಾರೆ. ಧರ್ಮ- ದೇವರುಗಳ ಬಗ್ಗೆ ನಂಬಿಕೆಯನ್ನೇ ಇಟ್ಟುಕೊಳ್ಳದ ನಾಸ್ತಿಕರೂ ಇಲ್ಲಿದ್ದು, ಅವರ ಪ್ರಮಾಣ ಶೇಕಡಾ 1.8ರಷ್ಟು ಮಾತ್ರ.

ತಾಂಜಾನಿಯಾದ ಇತಿಹಾಸ ಬಹು ಪ್ರಾಚೀನವಾದದ್ದು. ತಾಂಜಾನಿಯಾದ ಇತಿಹಾಸದ ಕಡೆಗೆ ದೃಷ್ಟಿ ಹಾಯಿಸುವುದೆಂದರೆ ಅದು ಮಾನವ ನಾಗರಿಕತೆಯ ಆರಂಭದ ಕಾಲಘಟ್ಟದ ಕಡೆಗೊಮ್ಮೆ ಕಣ್ಣು ಹಾಯಿಸಿದಂತೆಯೇ. ಅಷ್ಟು ಪ್ರಾಚೀನವಾದ ಪರಂಪರೆಯನ್ನು ಹೊತ್ತುನಿಂತಿದೆ ತಾಂಜಾನಿಯಾ. ಪುರಾತತ್ವಶಾಸ್ತ್ರಜ್ಞರ ಅಭಿಪ್ರಾಯವೊಂದನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಪ್ರಪಂಚದ ಅತೀ ಹಳೆಯ ಮಾನವ ನಿರ್ಮಿತ ವಸಾಹತುಗಳಲ್ಲಿ ಒಂದು ವಸಾಹತು ತಾಂಜಾನಿಯಾದಲ್ಲಿದೆ. ತಾಂಜಾನಿಯಾ ಅಧಿಕೃತವಾಗಿ ಜನ್ಮತಾಳಿದ್ದು 1964ರಲ್ಲಿ; ಎರಡು ರಾಷ್ಟ್ರಗಳ ಒಕ್ಕೂಟವಾಗಿ. ಟ್ಯಾಂಗನಿಕಾ ಮತ್ತು ಜಂಜಿಬಾರ್ ಎಂಬ ಎರಡು ರಾಷ್ಟ್ರಗಳು ಸೇರಿಕೊಂಡದ್ದರ ಫಲವೇ ಆಧುನಿಕ ತಾಂಜಾನಿಯಾ. ಇಲ್ಲಿಯ ಸಂಸ್ಕೃತಿಯನ್ನು ಸ್ವಾಹಿಲಿ ಸಂಸ್ಕೃತಿ ಎಂದು ಗುರುತಿಸಲಾಗುತ್ತದೆ. ಆಫ್ರಿಕಾದ ಪೂರ್ವ ಕರಾವಳಿಯ ಬಂಟು ಜನಾಂಗದ ಜನರು ಮತ್ತು ಅರಬ್ ವ್ಯಾಪಾರಿಗಳ ನಡುವಿನ ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಮ್ಮಿಶ್ರಣದ ಪರಿಣಾಮವಾಗಿ ಈ ಸ್ವಾಹಿಲಿ ಸಂಸ್ಕೃತಿ ರೂಪುಗೊಂಡಿದೆ.

ಅಂತಾರಾಷ್ಟ್ರೀಯ ವ್ಯಾಪಾರದ ಮಧ್ಯವರ್ತಿಯಂತೆ ಮೊದಲಿನಿಂದಲೂ ಕಾರ್ಯಾಚರಿಸುತ್ತಿದ್ದ ತಾಂಜಾನಿಯಾ ಈ ಕಾರಣದಿಂದಲೇ ವಿದೇಶೀಯರ ಆಕ್ರಮಣಗಳಿಗೆ ಒಳಗಾಗಿದೆ; ವಸಾಹತೀಕರಣದ ಅಪಾಯವನ್ನೂ ಕಂಡಿದೆ. ಭಾರತ ಮತ್ತು ಚೀನಾದ ವ್ಯಾಪಾರಿಗಳು ಆಫ್ರಿಕಾ ಮತ್ತು ಯುರೋಪ್‌ನ ವ್ಯಾಪಾರ ಕೇಂದ್ರಗಳ ಜೊತೆಗೆ ವಾಣಿಜ್ಯ ಸಂಪರ್ಕ ಏರ್ಪಡಿಸಿಕೊಳ್ಳಲು ಜಂಜಿಬಾರ್ ದ್ವೀಪಸಮೂಹವನ್ನು ಬಳಸಿಕೊಳ್ಳುತ್ತಿದ್ದರು. ಹದಿನಾರನೇ ಶತಮಾನದಲ್ಲಿ ತಾಂಜಾನಿಯಾದ ಕರಾವಳಿ ಪ್ರದೇಶ ಪೋರ್ಚುಗೀಸರ ಆಕ್ರಮಣಕ್ಕೆ ತುತ್ತಾಯಿತು. ಈ ಸಂದರ್ಭದಲ್ಲಿ ಒಮಾನಿ ಅರಬ್ಬರು ಪೋರ್ಚುಗೀಸರನ್ನು ಹೊರಹಾಕಿದರು. ಪೋರ್ಚುಗೀಸರಿಂದ ವಿಮುಕ್ತಿ ದೊರಕಿಸಿಕೊಟ್ಟ ಅರಬ್ಬರು ತಮ್ಮ ತಳವನ್ನು ಭದ್ರಪಡಿಸಿಕೊಂಡರೆಂದರೆ ತಪ್ಪಿಲ್ಲ. 1840ರ ವೇಳೆಗೆ ಅವರು ತಾಂಜಾನಿಯಾದ ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಉಂಗುಜಾವನ್ನು ತಮ್ಮ ರಾಜಧಾನಿಯಾಗಿಸಿಕೊಂಡ ಅರಬ್ಬರು ಈ ಮೂಲಕ ತಾಂಜಾನಿಯಾವನ್ನು ವಸಾಹತೀಕರಣಕ್ಕೆ ಒಳಗುಮಾಡಿದರು. ಇಂಗ್ಲೆಂಡ್ ಮತ್ತು ಜರ್ಮನ್ ದೇಶಗಳೂ ಸಹ ಈ ಬಗೆಯ ಪ್ರಯತ್ನವನ್ನು ನಡೆಸಿ ಯಶಸ್ವಿಯಾಗಿವೆ. 1890ರಲ್ಲಿ ನಡೆದ ‘ಹೆಲಿಗೋಲ್ಯಾಂಡ್-ಜಾಂಜಿಬಾರ್ ಒಪ್ಪಂದ’ವು ತಾಂಜಾನಿಯಾದ ಭೂಭಾಗಗಳನ್ನು ವಿಭಜಿಸಿಕೊಳ್ಳುವ ಉದ್ದೇಶವನ್ನು ಹೊಂದಿತ್ತು. ಈ ಒಪ್ಪಂದದ ಪ್ರಕಾರ, ಜಂಜಿಬಾರ್ ಪ್ರದೇಶವು ಇಂಗ್ಲೆಂಡ್ ಪಾಲಾದರೆ, ತಾಂಜಾನಿಯಾ ಭೂಭಾಗವನ್ನು ಜರ್ಮನಿ ಪಡೆದುಕೊಂಡಿತು.

ತಮಗೆ ಸೇರಿದ ಪ್ರದೇಶಗಳನ್ನು ಬೇರೆಯವರು ವಶಪಡಿಸಿಕೊಂಡಾಗ ಆಗುವ ನೋವು, ಅದರ ಬೆನ್ನಲ್ಲೇ ನಡೆಯುವ ಹಿಂಸೆ, ಅಪಾರ ಪ್ರಮಾಣದ ಸಾವು ಇವುಗಳನ್ನೆಲ್ಲಾ ತಾಂಜಾನಿಯಾದ ಮೂಲನಿವಾಸಿಗಳು ಹಲವಾರು ಸಲ ಅನುಭವಿಸಿದ್ದಾರೆ. ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿಯ ಜನರು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಡೆಸಿದ ದಂಗೆಗಳನ್ನು ಜರ್ಮನಿ ಅಮಾನುಷವಾಗಿ ಹತ್ತಿಕ್ಕಿದೆ ಎನ್ನುವುದು ತಾಂಜಾನಿಯಾದ ಇತಿಹಾಸ ನುಡಿಯುವ ಅತೀ ಕ್ರೂರ ಸತ್ಯ. ಇದರಲ್ಲಿ ಮೊದಲ ದಂಗೆ ನಡೆದದ್ದು 1890ರಲ್ಲಿ. ಹೆಹೆ ಗುಂಪಿನ ಜನರು ತಮ್ಮ ಅಸ್ಮಿತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜರ್ಮನಿಯ ವಿರುದ್ಧ ಬಂಡಾಯವೆದ್ದಿದ್ದರು. ಆ ಬಳಿಕ 1905 ಮತ್ತು 1907ರ ನಡುವೆ ಮಜಿ ಮಜಿ ಜನರೂ ಸಹ ಇದೇ ಬಗೆಯ ಪ್ರಯತ್ನ ನಡೆಸಿದರು. ಈ ದಂಗೆಗಳ ಅಂತಿಮ ಪರಿಣಾಮವೆಂದರೆ, ತಲೆಗಳನ್ನು ಲೆಕ್ಕವಿಡದೆಯೇ ದಂಗೆಯೆದ್ದವರ ಬಿಸಿ ನೆತ್ತರನ್ನು ಭೂಮಿಗೆ ಚೆಲ್ಲಲಾಯಿತು.

ವಸಾಹತುಶಾಹಿತ್ವದ ಪರಿಣಾಮವಾಗಿಯೇ ತಾಂಜಾನಿಯಾ ವಿಶ್ವದ ಎರಡು ಮಹಾಯುದ್ಧಗಳಲ್ಲಿ ಪಾಲು ಪಡೆಯುವಂತಾಗಿದೆ. 1914ರಲ್ಲಿ ನಡೆದ ಮೊದಲ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಮತ್ತು ಬ್ರಿಟಿಷ್ ಸೇನೆಗಳು ಹೋರಾಡಿದ್ದು ತಾಂಜಾನಿಯಾದಲ್ಲಿ. ಇದರಲ್ಲಿ ಜರ್ಮನಿ ಸೋಲನ್ನು ಕಂಡು, ವರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕಿತು. ಕದನದಲ್ಲಿ ಸೋತ ಜರ್ಮನಿ ತಾಂಜಾನಿಯಾವನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಅರ್ಹತೆ ಎರಡನ್ನೂ ಕಳೆದುಕೊಂಡಿತ್ತು. ಇದರಿಂದಾಗಿ ಇಂದಿನ ತಾಂಜಾನಿಯಾದ ಮುಖ್ಯ ಭೂಪ್ರದೇಶವಾದ ಟ್ಯಾಂಗನಿಕಾ ಇಂಗ್ಲೆಂಡ್ ಪಾಲಾಯಿತು.
ಈಗ ತಾಂಜಾನಿಯಾದ್ದು ಹುಲಿಯ ಬಾಯಿಯಿಂದ ಪಾರಾಗಿ ಸಿಂಹದ ಬಾಯಿಗೆ ಸಿಲುಕಿಕೊಂಡ ಪರಿಸ್ಥಿತಿ. ವಸಾಹತುಶಾಹಿತ್ವದ ಮತ್ತೊಂದು ಪ್ರಮುಖ ಆಯಾಮವನ್ನು ಅದು ಕಾಣುವಂತಾಯಿತು. ಇಷ್ಟರವರೆಗೂ ಇದ್ದ ಸಂಘರ್ಷದಿಂದಾಗಿ ದೇಶವು ಸಂಕಷ್ಟದ ಸನ್ನಿವೇಶದಲ್ಲಿತ್ತು. ರಕ್ಷಣೆಯ ನೆಪವೊಡ್ಡಿ ಕೆಲವು ಪ್ರದೇಶಗಳನ್ನು ಇಂಗ್ಲೀಷರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರೆ, ಜಂಜಿಬಾರ್ ದ್ವೀಪಸಮೂಹದಲ್ಲಿ ಅರಬ್ ಸುಲ್ತಾನರ ಪ್ರಾಬಲ್ಯವಿತ್ತು. ಆಂಗ್ಲರು ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡರು. ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಟ್ಯಾಂಗನಿಕಾವು ಮಿತ್ರರಾಷ್ಟ್ರಗಳ ಪರವಾಗಿ ನಿಂತಿತು. ಈ ಮೂಲಕ ಜರ್ಮನಿಯ ವಿರುದ್ಧದ ಹೋರಾಟಕ್ಕೆ ಕೊಡುಗೆಯನ್ನು ಸಲ್ಲಿಸಿದೆ.

ತಾಂಜಾನಿಯಾದ ಸ್ವಾತಂತ್ರ್ಯದ ಕನಸು ಬಲಿಷ್ಠವಾದದ್ದು 1953ರ ವೇಳೆಗೆ. ಟ್ಯಾಂಗನಿಕಾ ಆಫ್ರಿಕನ್ ನ್ಯಾಷನಲ್ ಯೂನಿಯನ್(TANU) ಪಕ್ಷ ಮತ್ತು ಅಧ್ಯಕ್ಷರಾಗಿ ಆಯ್ಕೆಯಾದ ಜೂಲಿಯಸ್ ನೈರೆರೆಯವರ ಪ್ರಯತ್ನ ಈ ನೆಲೆಯಲ್ಲಿ ಶ್ಲಾಘನೀಯವಾದದ್ದು. 1954ರಲ್ಲಿ ಟಾಂಜಾನಿಯಾ ಆಫ್ರಿಕನ್ ನ್ಯಾಷನಲ್ ಯೂನಿಯನ್ ಎಂಬ ಹೊಸ ಹೆಸರನ್ನು ಪಡೆದ ಈ ಪಕ್ಷ ಬ್ರಿಟನ್ ಆಡಳಿತವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡತೊಡಗಿತು. ವಸಾಹತುಶಾಹಿತ್ವದ ಕಪಿಮುಷ್ಟಿಯಿಂದ ಬಿಡುಗಡೆಗೊಳ್ಳುವ ಕನಸನ್ನು ಬಿತ್ತಿದ್ದು ‘ಸ್ವಾತಂತ್ರ್ಯ ಮತ್ತು ಏಕತೆ’ ಎನ್ನುವ ಪರಿಕಲ್ಪನೆಗಳ ಮೂಲಕ. ತಾಂಜಾನಿಯಾದ ಈ ಬಗೆಯ ಹೋರಾಟ ಪ್ರತಿಫಲವನ್ನು ನೀಡಿದ್ದು 1961ರಲ್ಲಿ. ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆಗೊಂಡು ಸ್ವತಂತ್ರ ದೇಶವಾಗಿ ಮಾನ್ಯತೆ ಪಡೆದುಕೊಂಡಿತು. ನೈರೆರೆಯವರ ನಾಯಕತ್ವವು 1985ರವರೆಗೂ ಮುಂದುವರೆಯಿತು. ಈ ಅವಧಿಯಲ್ಲಿ ತಾಂಜಾನಿಯಾ ಹಲವಾರು ಬಗೆಯ ಪಲ್ಲಟಗಳಿಗೆ ಸಿಲುಕಿಕೊಂಡಿದೆ; ಏರಿಳಿತಗಳನ್ನು ಕಂಡಿದೆ. ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಿಕೊಡುವ ಮೂಲಕ ಒಟ್ಟು ಜೀವನಮಟ್ಟವನ್ನು ಸುಧಾರಿಸಲಾಗಿದೆ. ದೇಶದ ಹಣಕಾಸು ಸ್ಥಿತಿಯನ್ನು ಅಭಿವೃದ್ಧಿಪಡಿಸುವ ದಿಶೆಯಲ್ಲಿ ಭಾಗಶಃ ಯಶಸ್ಸು ದೊರಕಿದೆ. ಆದರೆ ಸಮಾಜವಾದದ ಕಡೆಗಿನ ತುಡಿತದಿಂದಾಗಿ ದೇಶದ ಜನರ ಜೀಬಿನ ತೂಕ ಕಡಿಮೆಯಾದದ್ದು ಮತ್ತು ಸಮಾಜದ ಮಧ್ಯೆ ಕಂದಕ ಏರ್ಪಟ್ಟದ್ದು ಬಹುದೊಡ್ಡ ಹಿನ್ನಡೆಯಾಗಿದೆ.

ಪ್ರಮುಖ ನಾಯಕತ್ವವೊಂದು ಪರ್ಯಾವಸಾನಗೊಂಡಾಗ ರಾಷ್ಟ್ರದಲ್ಲಿ ಏರ್ಪಡುವ ಅತಂತ್ರ ವಾತಾವರಣವನ್ನು ತಾಂಜಾನಿಯಾ ಸಮರ್ಥವಾಗಿಯೇ ನಿರ್ವಹಿಸಿದೆ. ನೈರೆರೆ ಅವರ ರಾಜಕೀಯ ನಿವೃತ್ತಿಯ ನಂತರ ತಾಂಜಾನಿಯಾವನ್ನು ಮರು ಏಕೀಕರಣಗೊಳಿಸಲಾಗಿದೆ. ಬಹುಪಕ್ಷಗಳಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಈಗ ಗುರುತಿಸಿಕೊಂಡಿರುವ ತಾಂಜಾನಿಯಾದ ಮುಂದೆ ಹಲವು ಸವಾಲುಗಳೂ ಇವೆ; ಸಾಧ್ಯತೆಗಳೂ ಇವೆ.

ಹಿಂದಿನ ಕಾಲಘಟ್ಟದಿಂದಲೂ ಪ್ರಪಂಚದ ಇತರ ದೇಶಗಳಿಗೆ ತನ್ನನ್ನು ತಾನು ತೆರೆದುಕೊಂಡ ದೇಶವಾಗಿರುವುದರಿಂದ ತಾಂಜಾನಿಯಾದ ಜನರು ಸ್ನೇಹಪರ ಮನೋಭಾವವನ್ನು ಇಟ್ಟುಕೊಂಡಿದ್ದಾರೆ. ಪರಂಪರೆಯಿಂದ ಬಂದ ಶಿಷ್ಟಾಚಾರಗಳನ್ನು ಗೌರವದಿಂದ ಪರಿಪಾಲಿಸುವ ಜನರಿದ್ದಾರೆ. ಹಿರಿಯರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಮನೋಭಾವ ಇವರದ್ದು. ಇಲ್ಲಿನ ಜನರು ತಮ್ಮನ್ನು ತಾವು ‘ವನಾಂಚಿ’ ಎಂದು ಕರೆದುಕೊಳ್ಳುತ್ತಾರೆ. ವನಾಂಚಿ ಎಂದರೆ ಸ್ವಾಹಿಲಿ ಭಾಷೆಯಲ್ಲಿ ಜನರು ಎಂದರ್ಥ. ಅರಬ್ ಸುಲ್ತಾನರ ಅಧೀನತೆಯ ಪರಿಣಾಮವಾಗಿಯೋ ಏನೋ ಜಂಜಿಬಾರಿ ಜನಾಂಗದವರಲ್ಲಿ ಮುಸ್ಲಿಂ ಪ್ರಾಧಾನ್ಯತೆ ಕಂಡುಬರುತ್ತದೆ. ಅನೇಕ ಮಹಿಳೆಯರು ಮುಸುಕು ಧರಿಸುತ್ತಾರೆ. ಮಹಿಳೆಯರು ತಮ್ಮ ಸಂಪೂರ್ಣ ಶರೀರವನ್ನು ಮುಚ್ಚಿಕೊಳ್ಳಬೇಕು ಎನ್ನುವುದು ಇಲ್ಲಿರುವ ಕಟ್ಟುನಿಟ್ಟಾದ ನಿಯಮವಾಗಿದೆ. ಜಂಜಿಬಾರ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಪ್ರದಾಯವಾದಿ ಮಹಿಳೆಯರು ಮೊಣಕಾಲುಗಳು ಮತ್ತು ಭುಜಗಳನ್ನು ಮುಚ್ಚಿದ ಉದ್ದನೆಯ ಸ್ಕರ್ಟ್‌ಗಳನ್ನು ಧರಿಸುತ್ತಾರೆ. ಇಲ್ಲಿಯ ಕರಾವಳಿ ಪ್ರದೇಶಗಳ ಜನರು ಹಲವು ಬಣ್ಣಗಳಿಂದ ಕೂಡಿದ ಕಿಕೋಯ್ ಮತ್ತು ಕಂಗಾ ಎನ್ನುವ ಉಡುಪುಗಳನ್ನು ಧರಿಸಿಕೊಂಡಿರುತ್ತಾರೆ.

ಆಹಾರದ ವಿಷಯದಲ್ಲಿ ತಾಂಜೇನಿಯನ್ನರು ಸರಳರು. ತಾಂಜಾನಿಯಾದ ಜನಸಂಖ್ಯೆಯಲ್ಲಿ ಶೇಕಡಾ ಒಂದು ಪ್ರತಿಶತದಷ್ಟಿರುವ ಭಾರತೀಯರು ಮತ್ತು ಅರಬ್ಬರು ಅಲ್ಲಿಯ ಆಹಾರ ಶೈಲಿಯ ಮೇಲೆ ಪ್ರಭಾವ ಬೀರಿದ್ದಾರೆ. ಮಸಾಲೆಯುಕ್ತ ಪಾಕಪದ್ಧತಿ ಅಲ್ಲಿ ರೂಪುಗೊಂಡಿರುವುದು ಭಾರತೀಯ ಮತ್ತು ಅರಬ್ ಆಹಾರ ವಿಧಾನಗಳ ಪ್ರಭಾವದಿಂದಲೇ. ಉಗಾಲಿ ಎನ್ನುವುದು ಬಹಳ ಜನಪ್ರಿಯವಾದ ಖಾದ್ಯ ವಿಶೇಷವಾಗಿದೆ. ಇದು ತಾಂಜಾನಿಯಾದ ರಾಷ್ಟ್ರೀಯ ಭಕ್ಷ್ಯ. ಹಿಟ್ಟು ಮತ್ತು ನೀರನ್ನು ಬೇಯಿಸಿ ತಯಾರಿಸಿದಂತಿರುವ ಇದನ್ನು ತರಕಾರಿಗಳ ಜೊತೆಗೆ ಇಲ್ಲವೇ ಮಾಂಸದ ಜೊತೆಗೆ ಸೇರಿಸಿ ತಿನ್ನಲಾಗುತ್ತದೆ. ಜಂಜಿಬಾರ್ ಕರಾವಳಿ ತೀರಪ್ರದೇಶದಲ್ಲಿ ಕಂಡುಬರುವ ಪಾಕಪದ್ಧತಿಯು ಸ್ವಾಹಿಲಿ ಎನ್ನುವ ಹೆಸರನ್ನು ಪಡೆದುಕೊಂಡಿದೆ. ಜಂಜಿಬಾರ್‌ನಲ್ಲಿ ಮುರ್ಟಾಬಾಕ್ ಎನ್ನುವುದು ವಿಶಿಷ್ಟ ಆಹಾರವಾಗಿದೆ. ಇದು ಜಂಜಿಬಾರ್ ಪಿಜ್ಜಾ ಎಂದೇ ಪ್ರಸಿದ್ಧವಾಗಿದೆ. ಮಸಾಲೆಯಿಂದ ಕೂಡಿದ ಮಾಂಸ, ಚೀಸ್ ಮತ್ತು ತರಕಾರಿಗಳಿಂದ ಕೂಡಿದ ಖಾದ್ಯವಿಶೇಷವಿದು.

ನೂರಿಪ್ಪತ್ತಕ್ಕಿಂತಲೂ ಹೆಚ್ಚು ಭಾಷೆಗಳು ತಾಂಜಾನಿಯಾದಲ್ಲಿ ಅಸ್ತಿತ್ವದಲ್ಲಿದ್ದು, ಇವುಗಳಲ್ಲಿ ನಲುವತ್ತಕ್ಕಿಂತ ಹೆಚ್ಚಿನ ಭಾಷೆಗಳು ಅಳಿವಿನಂಚಿನಲ್ಲಿವೆ. ಸ್ವಾಹಿಲಿ ಭಾಷೆಯು ಹಲವಾರು ಬಂಟು ಭಾಷೆಗಳು ಮತ್ತು ಅರೇಬಿಕ್ ಭಾಷೆಯ ಮಿಶ್ರಣವಾಗಿದೆ. ದೇಶ ಸ್ವಾತಂತ್ರ್ಯವನ್ನು ಪಡೆದ ಸಂದರ್ಭದಲ್ಲಿ ಜನಾಂಗೀಯ ಏಕತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಸ್ವಾಹಿಲಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ರೂಪುಗೊಳಿಸಲಾಗಿತ್ತು. ಈ ಪ್ರಯತ್ನ ಆ ಬಳಿಕದ ಕಾಲಘಟ್ಟದಲ್ಲಿಯೂ ಮುಂದುವರಿದಿದೆ. ಸ್ವಾಹಿಲಿ ಭಾಷೆಯು ತಾಂಜಾನಿಯಾದ ಆಡಳಿತ, ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ದೈನಂದಿನ ಜೀವನಕ್ರಮದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ. ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಜನಾಂಗದ, ಬುಡಕಟ್ಟಿನ ಭಾಷೆಯನ್ನು ಮಾತನಾಡುವ ಜನರು ಮನೆಯ ಹೊರಗಿನ ವ್ಯವಹಾರದ ಸಂದರ್ಭದಲ್ಲಿ ಸ್ವಾಹಿಲಿಯನ್ನೇ ಬಳಸುತ್ತಾರೆ. ಇಂಗ್ಲಿಷ್ ಅವರ ಪಾಲಿಗೆ ಮೂರನೇ ಭಾಷೆಯಾಗಿದೆ.

ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿಯ ಜನರು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಡೆಸಿದ ದಂಗೆಗಳನ್ನು ಜರ್ಮನಿ ಅಮಾನುಷವಾಗಿ ಹತ್ತಿಕ್ಕಿದೆ ಎನ್ನುವುದು ತಾಂಜಾನಿಯಾದ ಇತಿಹಾಸ ನುಡಿಯುವ ಅತೀ ಕ್ರೂರ ಸತ್ಯ. ಇದರಲ್ಲಿ ಮೊದಲ ದಂಗೆ ನಡೆದದ್ದು 1890ರಲ್ಲಿ. ಹೆಹೆ ಗುಂಪಿನ ಜನರು ತಮ್ಮ ಅಸ್ಮಿತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜರ್ಮನಿಯ ವಿರುದ್ಧ ಬಂಡಾಯವೆದ್ದಿದ್ದರು.

ತಾಂಜಾನಿಯಾದಲ್ಲಿ ಹಲವು ಜನಾಂಗಗಳು ಕಂಡುಬಂದರೂ ಸಹ ಅವುಗಳಲ್ಲಿ ಸಾಂಸ್ಕೃತಿಕವಾಗಿ ಮಹತ್ವಪೂರ್ಣವೆನಿಸುವ ಜನಾಂಗಗಳು ಎರಡು. ಮಾಸಾಯಿ ಮತ್ತು ಹಡ್ಜಬೆ. ದೇಶದ ಉತ್ತರ ಭಾಗದಲ್ಲಿ ಮಾಸಾಯಿ ಬುಡಕಟ್ಟಿನ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿಯೂ ಸಹ ಸಾಂಪ್ರದಾಯಿಕತೆಯ ಕಡೆಗಿನ ತುಡಿತವನ್ನು ಕಳೆದುಕೊಳ್ಳದ ಪ್ರಮುಖ ಜನಾಂಗವಿದು. ಈ ಜನಾಂಗದವರು ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ. ಆಧುನಿಕ ಜೀವನ ಶೈಲಿಯ ಪ್ರಮುಖ ಲಕ್ಷಣಗಳಲ್ಲಿ ಒಂದಾದ ಭೌತಿಕ ಪರಿಕರಗಳನ್ನು ಉಪಯೋಗಿಸುತ್ತಾರೆ. ಜೊತೆಜೊತೆಗೆ ತಮ್ಮ ಸಂಪ್ರದಾಯಗಳ ಕುರಿತಾದ ನಿಷ್ಠೆಯನ್ನು ಉಳಿಸಿಕೊಂಡಿದ್ದಾರೆ. ಅಲೆಮಾರಿ ಪಶುಪಾಲನೆ ಎನ್ನುವುದು ಇವರ ಜೀವನೋಪಾಯವಾಗಿದೆ. ತಮ್ಮ ಜಾನುವಾರುಗಳನ್ನು ಮೇಯಿಸುವುದಕ್ಕಾಗಿಯೇ ಬಹಳ ದೂರದ ಸ್ಥಳಗಳಿಗೆ ತೆರಳಿ, ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಎಂಕೈ ಹೆಸರಿನ ದೇವರು ತಮ್ಮನ್ನು ರಕ್ಷಿಸುವುದಕ್ಕಾಗಿ ಜಾನುವಾರುಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂಬ ನಂಬಿಕೆ ಈ ಜನಾಂಗದವರದ್ದು. ಜಾನುವಾರುಗಳು ಇವರ ಪಾಲಿಗೆ ಸಂಪತ್ತಿನ ಮಾನದಂಡವಾಗಿದೆ. ಹೆಚ್ಚು ಜಾನುವಾರುಗಳು ಇದ್ದಷ್ಟೂ ಹೆಚ್ಚು ಸಂಪತ್ತು ಎಂಬ ನಂಬಿಕೆ ಇವರದ್ದು. ಹಡ್ಜಬೆ ಎನ್ನುವುದು ಬೇಟೆಗಾರಿಕೆಯನ್ನು ಪ್ರಧಾನವಾಗಿರಿಸಿಕೊಂಡ ತಾಂಜಾನಿಯಾದ ಒಂದು ಜನಾಂಗ. ಹಲವು ಗುಂಪುಗಳಾಗಿ ಚದುರಿಹೋಗಿರುವ ಇವರು ಹುಲ್ಲಿನಿಂದ ರಚಿಸಿದ ಗುಮ್ಮಟಗಳಲ್ಲಿ ವಾಸಿಸುತ್ತಾರೆ. ಒಂದು ಗುಂಪಿನಲ್ಲಿ ಸುಮಾರು ಇಪ್ಪತ್ತು ಜನರಿರುತ್ತಾರೆ. ಬೇಟೆಯಾಡುವುದರ ಜೊತೆಜೊತೆಗೆ ಗೆಡ್ಡೆ ಗೆಣಸು, ಜೇನುತುಪ್ಪಗಳನ್ನು ಸಂಗ್ರಹಿಸುವುದು ಇವರ ಪ್ರವೃತ್ತಿ. ಗುಂಪಿನಲ್ಲಿ ಘರ್ಷಣೆ ಸಂಭವಿಸಿದಾಗ, ಮರಣಗಳುಂಟಾದಾಗ ತಮ್ಮ ನೆಲೆಯನ್ನು ಬದಲಾಯಿಸುವ ಇವರು ಕಥೆಗಳ ರೂಪದಲ್ಲಿ ತಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ರವಾನಿಸುತ್ತಿದ್ದಾರೆ. ಈ ಜನಾಂಗಕ್ಕೆ ಸೇರಿದ ಸಾವಿರದಿನ್ನೂರರಷ್ಟು ಜನರು ತಾಂಜಾನಿಯಾದಲ್ಲಿದ್ದರೂ ಅವರಲ್ಲಿ ಮೂರನೇ ಒಂದರಷ್ಟು ಜನರು ಮಾತ್ರವೇ ಸಾಂಪ್ರದಾಯಿಕವಾದ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.

ಮನುಷ್ಯರ ಉಳಿಕೆಗೆ ಅತ್ಯಗತ್ಯವಾದ ಪ್ರಕೃತಿಯ ಅಸ್ತಿತ್ವವನ್ನು ಉಳಿಸುವ ನೆಲೆಯಲ್ಲಿ ತಾಂಜಾನಿಯಾ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ತಾಂಜಾನಿಯಾದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು 30 ಪ್ರತಿಶತ ಭಾಗವನ್ನು ಸಂರಕ್ಷಿತ ರಾಷ್ಟ್ರೀಯ ಉದ್ಯಾನವನಗಳು ಆವರಿಸಿವೆ. ಪ್ರಪಂಚದಲ್ಲೇ ಅತ್ಯಂತ ದಟ್ಟವಾದ ಮರಗಳ ಹೊದಿಕೆಯನ್ನು ಹೊಂದಿದೆ ಎಂಬ ಹೆಗ್ಗಳಿಕೆ ತಾಂಜಾನಿಯಾದ್ದು. ವಿಪರ್ಯಾಸವೆಂದರೆ, ಅರಣ್ಯ ನಾಶ ಹೆಚ್ಚಾಗಿ ನಡೆಯುತ್ತಿರುವುದೂ ಇಲ್ಲಿಯೇ. ಆಫ್ರಿಕಾ ಖಂಡದಲ್ಲಿಯೇ ಅತೀ ಎತ್ತರದ ಪರ್ವತ ಎಂಬ ಖ್ಯಾತಿ ಹೊಂದಿದ ಮೌಂಟ್ ಕಿಲಿಮಂಜಾರೋ ಪರ್ವತ ಇರುವುದು ಈ ದೇಶದಲ್ಲಿ. ಇಲ್ಲಿನ ಲೇಕ್ ಮಾನ್ಯರಾ ರಾಷ್ಟ್ರೀಯ ಉದ್ಯಾನವನವು ಮರ ಹತ್ತುವ ಸಿಂಹಗಳಿಗೆ ಪ್ರಸಿದ್ಧವಾಗಿದ್ದು, ಇಡೀ ವಿಶ್ವದಲ್ಲಿ ಈ ಬಗೆಯ ಉದ್ಯಾನವನ ಇರುವುದು ಇದೊಂದೇ.

ತಾಂಜಾನಿಯಾದ ಗ್ರಾಮೀಣ ಜನಜೀವನವು ಸೃಜನಶೀಲತೆಯನ್ನು ಪ್ರಚುರಪಡಿಸುವ ನೆಲೆಯಿಂದ ಮುಖ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಬುಟ್ಟಿ ಹೆಣೆಯುವುದು, ಕುಂಬಾರಿಕೆ ಮತ್ತು ಸಂಗೀತ ವಾದ್ಯ ತಯಾರಿಕೆ ಕಂಡುಬರುತ್ತದೆ. ಮೌಖಿಕ ರೂಪದಲ್ಲಿ ಕಥೆ ಹೇಳುವ ಸಂಪ್ರದಾಯ ಮತ್ತು ಕೆಲವು ಬುಡಕಟ್ಟು ನೃತ್ಯಗಳು ಈ ಮಾದರಿಯಲ್ಲಿಯೇ ಬೆಳೆದುಬಂದಿವೆ. ದಾರ್ ಎಸ್ ಸಲಾಮ್ ವಿಶ್ವವಿದ್ಯಾನಿಲಯವು ರಂಗಭೂಮಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಎಬೊನಿ ಶಿಲ್ಪಕಲೆಯ ಸೊಗಸನ್ನು ಕಾಣಬೇಕಾದರೆ ದಕ್ಷಿಣ ತಾಂಜಾನಿಯಾಕ್ಕೆ ಹೋಗಬೇಕು. ತಾಂಜಾನಿಯಾದಲ್ಲಿ ಸಂಗೀತ ಕಲೆ ವ್ಯಾಪಿಸಿದ್ದು ಇಪ್ಪತ್ತನೇ ಶತಮಾನದಲ್ಲಿ. ಸಂಪ್ರದಾಯಬದ್ಧವಾದ ಸಂಗೀತ ಶೈಲಿಗಳು ಜನಸಮೂಹವನ್ನು ಪ್ರಭಾವಿಸಿವೆ. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಕ್ಯೂಬನ್ ಸಂಗೀತ ಜನಪ್ರಿಯವಾಗಿತ್ತು. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಾಂಗೋಲೀಸ್ ಸಂಗೀತ ಮೆಚ್ಚುಗೆ ಗಳಿಸಿಕೊಂಡಿತು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸ್ಪಂದಿಸುತ್ತಿರುವ ತಾಂಜೇನಿಯನ್ ಸಂಗೀತ ಕ್ಷೇತ್ರವು ಪ್ರಸ್ತುತ ಕಾಲಮಾನದಲ್ಲಿ ರಾಪ್ ಮತ್ತು ರೆಗ್ಗೀ ಸಂಗೀತ ಪ್ರಕಾರಗಳನ್ನು ಬಲವಾಗಿ ಅಪ್ಪಿಕೊಂಡಿದೆ.

ತಾಂಜಾನಿಯಾದಲ್ಲಿ ಸೃಷ್ಟಿಯಾಗಿರುವ ಸಾಹಿತ್ಯವನ್ನು ಸ್ವಾಹಿಲಿ ಸಾಹಿತ್ಯ, ಕಿಸ್ವಾಹಿಲಿ ಸಾಹಿತ್ಯ ಎನ್ನುವ ಎರಡು ಹೆಸರುಗಳಿಂದ ಗುರುತಿಸಲಾಗುತ್ತದೆ. ಇಲ್ಲಿ ಅರೇಬಿಕ್ ಲಿಪಿಯ ಬಳಕೆಯಿದೆ. ಹದಿನೆಂಟನೇ ಶತಮಾನದಿಂದ ತೊಡಗಿ ಇಪ್ಪತ್ತನೇ ಶತಮಾನದವರೆಗೂ ತಾಂಜಾನಿಯಾ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಸ್ವಾಹಿಲಿ ಭಾಷೆಯದ್ದೇ ಪಾರುಪತ್ಯ. ಆದರೆ 1930ರ ವೇಳೆಗೆ ಕಿಮ್ವಿತಾ, ಕಿಅಮು ಮತ್ತು ಕಿಯುಂಜುಗ ಎಂಬ ಉಪಭಾಷೆಗಳು ಮುನ್ನೆಲೆಗೆ ಬಂದವು. ಆರಂಭದ ಕಾದಂಬರಿಗಳು ಪ್ರಾದೇಶಿಕವಾದ ಸಂಸ್ಕೃತಿಯನ್ನು, ಅರೇಬಿಕ್ ಕಥೆಗಳನ್ನು ಮತ್ತು ಯುರೋಪಿಯನ್ ಬರವಣಿಗೆಗಳ ಅನುವಾದಗಳನ್ನು ಆಧರಿಸಿಕೊಂಡಿತ್ತು. ಜೇಮ್ಸ್ ಎಂಬೋಟೆಲಾ, ಶಾಬನ್ ರಾಬರ್ಟ್, ಮುಹಮ್ಮದ್ ಸಲೇಹ್ ಫಾರ್ಸಿ, ಮುಹಮ್ಮದ್ ಸೈದ್ ಅಬ್ದುಲ್ಲಾ ಮೊದಲಾದವರ ಪ್ರಯತ್ನದಿಂದಾಗಿ 1960ರ ನಂತರ ತಾಂಜಾನಿಯಾ ಸಾಹಿತ್ಯ ಕ್ಷೇತ್ರವು ವಿಸ್ತಾರವಾಗಿ ಬೆಳೆಯಿತು. ಪ್ರಣಯ, ಪತ್ತೇದಾರಿಕೆ, ಕಲ್ಪನೆ ಮತ್ತು ಸಂಪ್ರದಾಯ ತಾಂಜೇನಿಯನ್ ಸಾಹಿತ್ಯವನ್ನು ರೂಪಿಸಿದ ಪ್ರಮುಖ ಅಂಶಗಳಾಗಿವೆ. ಇವುಗಳ ಜೊತೆಗೆ ಇತಿಹಾಸ, ಸಮಾಜ ಮತ್ತು ರಾಜಕೀಯ ಇಂತಹ ವಿಚಾರಗಳೂ ಸೇರಿಕೊಂಡಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಅನೇಕ ಆಫ್ರಿಕನ್ ಮತ್ತು ಪಾಶ್ಚಿಮಾತ್ಯ ಬರಹಗಾರರ ಕೃತಿಗಳು ಸ್ವಾಹಿಲಿ ಭಾಷೆಗೆ ಅನುವಾದಗೊಳ್ಳುತ್ತಿವೆ. ಸ್ವಾಹಿಲಿ ಭಾಷೆಯ ಕೃತಿಗಳು ಮತ್ತು ಸಾಹಿತಿಗಳು ಅಂತಾರಾಷ್ಟ್ರೀಯವಾಗಿ ಗುರುತಿಸುವಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ನೆಲೆಯಲ್ಲಿ ಯುಫ್ರೇಸ್ ಕೆಝಿಲಾಬಿ, ಮೊಹಮ್ಮದ್ ಎಸ್. ಮೊಹಮ್ಮದ್, ಇಬ್ರಾಹಿಂ ಹುಸೇನ್, ಪೆನಿನಾ ಒ. ಮ್ಲಾಮಾ, ಅಲಿ ಜೆಮಾದರ್ ಅಮೀರ್, ಕಟಮಾ ಮ್ಕಾಂಗಿ ಮತ್ತು ಪಿಎಂ ಕರೇತಿ ಇವರನ್ನು ಗುರುತಿಸಬಹುದು.

(ಕಿಲಿಮಂಜಾರೋ ಪರ್ವತ)

ಬ್ರಿಟನ್, ಅರಬ್, ಜರ್ಮನಿ ರಾಷ್ಟ್ರಗಳ ವಸಾಹತೀಕರಣ ಪ್ರಕ್ರಿಯೆಯ ಬಿಗಿಹಿಡಿತಕ್ಕೆ ಸಿಲುಕಿ ನಲುಗಿದ ತಾಂಜಾನಿಯಾ ವರ್ತಮಾನ ಕಾಲಘಟ್ಟದಲ್ಲಿ ತನ್ನದೇ ಆದ ಕೆಲವು ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುತ್ತಿದೆ. 1990ನೇ ಇಸವಿಯ ನಂತರ ತೀವ್ರವಾಗಿ ಕಾಡಲಾರಂಭಿಸಿದ ಆರ್ಥಿಕ ಸಮಸ್ಯೆ ಈಗಲೂ ತಾಂಜಾನಿಯಾದ ಪಾಲಿಗೆ ಬಗೆಹರಿಸಲಾಗದ ತಾಪತ್ರಯವೇ ಆಗಿದೆ. ಆಹಾರಕ್ಕಾಗಿ ಹತ್ತು ಕೈಗಳು ಕಾದಿದ್ದರೆ ಮೂರು ನಾಲ್ಕು ಕೈಗಳನ್ನು ಮಾತ್ರವೇ ಸಂತೃಪ್ತಿಗೊಳಿಸಬಲ್ಲಷ್ಟು ಆಹಾರ ಪೂರೈಕೆಯಿದೆ. ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ನೆರೆಯ ದೇಶಗಳಿಂದ ಆಗಮಿಸುವ ನಿರಾಶ್ರಿತರನ್ನು ಪೊರೆಯಬೇಕಾದ ಜವಾಬ್ದಾರಿಯೂ ತಾಂಜಾನಿಯಾದ ಹೆಗಲೇರಿದೆ. ಇಂತಹ ನಿರಾಶ್ರಿತರಿಗೆ ಮತ್ತೆ ಬದುಕನ್ನು ಕಟ್ಟಿಕೊಡುವುದಕ್ಕಾಗಿ ತಾಂಜಾನಿಯಾ ಅಂತಾರಾಷ್ಟ್ರೀಯ ಸಹಕಾರವನ್ನೂ ಕೋರಿತ್ತು. ಆದರೆ ಅಂತಹ ಪ್ರಯೋಜನವೇನೂ ದೊರೆತಿಲ್ಲ. 1998ರಲ್ಲಿ ತಾಂಜಾನಿಯಾದ ದಾರ್ ಎಸ್ ಸಲಾಮ್‌ನಲ್ಲಿರುವ ಅಮೇರಿಕಾದ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ನಡೆದು ಹನ್ನೊಂದು ಮಂದಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಈ ಮೂಲಕ ತಾಂಜಾನಿಯಾ ಭಯೋತ್ಪಾದಕ ಚಟುವಟಿಕೆಯ ತಾಣ ಎಂಬ ಕುಖ್ಯಾತಿಯನ್ನೂ ಬೆನ್ನಿನ ಮೇಲೇರಿಸಿಕೊಂಡಿದೆ. ಮುಖ್ಯವಾಗಿ ಜಂಜಿಬಾರ್ ಪ್ರದೇಶವು ಮುಸ್ಲಿಂ ಉಗ್ರಗಾಮಿತ್ವದ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಚುನಾವಣೆಗಳು ನಡೆದಾಗ ಅಕ್ರಮಗಳು ನಡೆದಿದೆ ಎಂಬ ಆರೋಪ, ಜನಸಮೂಹದ ವಿರೋಧ, ದಮನಕಾರಿ ನೀತಿಗಳು, ಸಾವು-ನೋವು ಇದೆಲ್ಲವೂ ತಾಂಜಾನಿಯಾ ಕಾಣುತ್ತಲೇ ಇರುವ ವಿದ್ಯಮಾನಗಳು. ಪ್ರಭುತ್ವವು ವೈಯಕ್ತಿಕ ಹಿತಾಸಕ್ತಿಗಳನ್ನು ಅಷ್ಟಾಗಿ ಇರಿಸಿಕೊಳ್ಳದೆ ಪ್ರಜೆಗಳ ಪರವಾಗಿರಲು ಪ್ರಯತ್ನಿಸಿದರೂ ದೇಶದ ಕೆಲವು ಮನಸ್ಸುಗಳಲ್ಲಿರುವ ಪ್ರತ್ಯೇಕತೆಯ ಭಾವನೆಯಿಂದಾಗಿ ಪ್ರಜಾಪ್ರಭುತ್ವದ ಮೌಲ್ಯ-ಆಶಯಗಳು ಮಂಕಾಗಿಬಿಡುವ ಅಪಾಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇಪ್ಪತ್ತೊಂದನೇ ಶತಮಾನದ ತಾಂಜಾನಿಯಾ ಅತ್ಯುತ್ತಮ ನಿದರ್ಶನವಾಗಿದೆ. ಇಡೀ ದೇಶವನ್ನು ಪ್ರತಿನಿಧಿಸುವ ಒಂದು ಸರ್ಕಾರ ಇದ್ದರೆ ಸಾಕು ಎಂದು ತಾಂಜಾನಿಯಾದ 66 ಪ್ರತಿಶತ ಮತದಾರರು ಬಯಸುತ್ತಿದ್ದರೆ, ಉಳಿದವರು ಹೆಚ್ಚಿನ ಸ್ವಾತಂತ್ರ್ಯವನ್ನು ಅಪೇಕ್ಷಿಸುತ್ತಿದ್ದಾರೆ; ಪ್ರತ್ಯೇಕ ರಾಷ್ಟ್ರಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ತಾಂಜಾನಿಯಾವು ದಾರ್ ಎಸ್ ಸಲಾಮ್ ಮತ್ತು ಡೊಡೊಮಾ ಎಂಬ ಎರಡು ರಾಜಧಾನಿಗಳನ್ನು ಹೊಂದಿದೆ ಎನ್ನುವ ವಿಚಾರವೇ ದೇಶವು ಮಾನಸಿಕ ಏಕತೆಯನ್ನು ಹೊಂದಿಲ್ಲ ಎನ್ನುವುದನ್ನು ದೃಢಪಡಿಸುತ್ತದೆ. ಪ್ರಸ್ತುತ ಸಮಿಯಾ ಸುಲುಹು ಹಾಸನ್ ಅಧ್ಯಕ್ಷೆಯಾಗಿ ತಾಂಜಾನಿಯಾವನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿಯೇ ಮಹಿಳೆಯೊಬ್ಬರು ಈ ಹುದ್ದೆಯನ್ನು ಮೊದಲ ಬಾರಿಗೆ ಅಲಂಕರಿಸಿದಂತಾಗಿದೆ.

ಒಟ್ಟಾಗಿ ತಾಂಜಾನಿಯಾ ದೇಶವನ್ನು ಅವಲೋಕಿಸಿಕೊಂಡಾಗ, ಪರಂಪರೆ ಮತ್ತು ಆಧುನಿಕತೆಗಳೆರಡನ್ನೂ ಒಳಗೊಂಡ ಸಮ್ಮಿಶ್ರಿತ ರಸಪಾಕದಂತೆ ತೋರುತ್ತದೆ. ಸಂಪ್ರದಾಯಗಳನ್ನು ಹಾಗೆಯೇ ಉಳಿಸಿಕೊಂಡಿದೆ, ನಿಜ. ಆದರೆ ಆಧುನಿಕತೆಯ ಜೊತೆಗೆ ಸಂಘರ್ಷಕ್ಕೆ ಇಳಿದಿಲ್ಲ. ಆಧುನಿಕತೆಯನ್ನು ಆಗುಮಾಡಿಕೊಂಡಿದೆ. ಹಾಗೆಂದು ಪರಂಪರೆಯನ್ನು ತಿರಸ್ಕರಿಸಿಲ್ಲ. ಪರಂಪರೆ ಆಧುನಿಕತೆಗಳೆರಡೂ ಸಾಮರಸ್ಯದಿಂದ ಅದಾವ ಬಗೆಯಲ್ಲಿ ಸಹಗಮನ ನಡೆಸಬಹುದು ಎನ್ನುವುದನ್ನು ತಿಳಿಸುವಂತಿದೆ ತಾಂಜಾನಿಯಾ.