ಇವತ್ತು ಅವ್ವ ಕೂಲಿಗೆ ಹೋದಳು. ಇದನ್ನ ಬಿಟ್ಟು ಬಂದರೆ ನಾಯಿ ಹದ್ದು ತಿಂದು ಬಿಡುತ್ತವೆ. ಅದಕ್ಕೆ ಅವ್ವ ನನ್ನ ಶಾಲೆಗೆ ರಜಾ ಹಾಕಿ ಕೋಳಿ ನೋಡಿಕೋ. ನಾಡಿದ್ದು ಕೋಳಿ ಕುಯ್ದು ಹೊಲದ ಬಳಿ ಹಸಿರು ಚಪ್ಪರ ಹಾಕಿ ಹಬ್ಬ ಮಾಡೋಣ ಅಂದಳು. ನನಗೆ ಶಾಲೆ ತಪ್ಪಿಸಿಕೊಂಡರೆ ಪಾಠ ಗೊತ್ತಾಗಲ್ಲ ಅಂತ ರಜಾ ಹಾಕಲು ಮನಸ್ಸಾಗಲಿಲ್ಲ. ಅದಕ್ಕೆ ಕೋಳಿಯನ್ನ ನನ್ನೊಟ್ಟಿಗೇ ಶಾಲೆಗೆ ತಂದೆ. ಗೊತ್ತಾದರೆ ನೀವು ಬೈತೀರಾ ಅಂತ ಬಚ್ಚಿಟ್ಟಿದ್ದೆ.. ಸಾರಿ ಮಿಸ್ ಅಂದ. ಆ ವಿಷಯ ಕೇಳಿ ನನಗೆ ದಿಗ್ಭ್ರಮೆಯಾಯಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಪ್ರಾರ್ಥನೆ ಮುಗಿಸಿ ಮಕ್ಕಳೆಲ್ಲಾ ತರಗತಿಗೆ ಬಂದರು. ಎಂದಿನಂತೆ ಹಾಜರಾತಿ ತೆಗೆದುಕೊಳ್ಳಲಾಯಿತು. ಸಾಮಾನ್ಯವಾಗಿ ಶಾಲೆಯಲ್ಲಿ ಯಾವಾಗಲೂ ಪ್ರಥಮ ಅವಧಿ ಕನ್ನಡಕ್ಕೆ ಮೀಸಲು. ಅಂದು ಕನ್ನಡ ವಿಷಯದ ಪಾಠಗಳು ಮುಗಿದಿದ್ದವು. ಹಾಗಾಗಿ ಪರಿಸರ ಅಧ್ಯಯನ ವಿಷಯ ಪಾಠ ಬೋಧಿಸುತ್ತಿದ್ದೆ. ಪ್ರಾಣಿ ಪ್ರಪಂಚ ಪಾಠಕ್ಕೆ ಪೂರಕವಾಗಿ ಪ್ರಾಣಿ-ಪಕ್ಷಿಗಳ ಕೂಗುಗಳನ್ನು ಅನುಕರಣೆ ಮಾಡುವ ಚಟುವಟಿಕೆ ಮಾಡಿಸುತ್ತಿದ್ದೆ.
“ಮಿಯಾಂವ್ ಮಿಯಾಂವ್ ಬೆಕ್ಕು
ಬೌ ಬೌ ನಾಯಿ
ಕಾಕಾ ಕಾಗೆ
ಬುಸ್ ಬುಸ್ ಹಾವು
ಕ್ಕೊ ಕ್ಕೊ ಕೋಳಿ”

ಎಂದು ಪ್ರಾಸಬದ್ಧವಾಗಿ ಮಕ್ಕಳು ಪ್ರಾಣಿ ಪಕ್ಷಿಗಳ ಧ್ವನಿಗಳನ್ನು ಅನುಕರಣೆ ಮಾಡುತ್ತಿದ್ದರು. ಈ ಮಕ್ಕಳ ದನಿಯನ್ನು ಮೀರಿದ ಮತ್ತೊಂದು ಶಬ್ದ ಕಿವಿಗೆ ಬೀಳುತ್ತಿತ್ತು. ಇದು ಯಾರ ಧ್ವನಿ ಅಂತ ಮಕ್ಕಳನ್ನು ಕೇಳಿದೆ. ನಮ್ಮದೇ ಮಿಸ್ ಅಂದರು. ನನಗೆ ನಂಬಲು ಆಗಲಿಲ್ಲ. ಅದು ನೈಜತೆಯಿಂದ ಕೂಡಿದ ಧ್ವನಿ. ಅನುಕರಣೆಯ ಶಬ್ದ ಅಲ್ಲ ಎನಿಸಿತು. ನಿಜ ಹೇಳಿ ಮಕ್ಕಳೇ ಇದು ಯಾರ ಧ್ವನಿ ಎಂದು ಕೇಳಿದೆ. “ನಿಜವಾಗಲೂ ನಮ್ಮದೇ ಮಿಸ್” ಅಂತ ಕೂಗಿದರು. ಆದರೂ ನನಗೆ ನಂಬಲಾಗದೇ ಶಾಲೆಯ ಅಕ್ಕಪಕ್ಕದ ಮನೆಯ ಕೋಳಿಗಳು ಇರಬಹುದಾ ಅಂತ ಅನುಮಾನ ಬಂತು. ತರಗತಿ ಆಚೆ ಹೋಗಿ ನೋಡಿದೆ. ಏನೂ ಕಾಣಲಿಲ್ಲ. ಮತ್ತೆ ಪಾಠ ಶುರು ಮಾಡಿದೆ. ತರಗತಿಯ ಹಿಂದಿನ ಮೂಲೆಯಲ್ಲಿ ಇದ್ದ ಬುಕ್ಸ್ ಶೆಲ್ಫ್ ಕಡೆಯಿಂದ ಕೋಳಿ ಕೂಗಿದ ಶಬ್ದ ಮತ್ತೊಮ್ಮೆ ಕಿವಿಗೆ ಬಿತ್ತು. ಈಗ ಕ್ಕೋ ಕ್ಕೋ ಎಂಬ ಶಬ್ದ ನನಗೆ ಮತ್ತೆ ಕೇಳಿಸಿತು. “ನಿಮಗೆ ಕೋಳಿ ಕೂಗಿದ ಸದ್ದು ಕೇಳಿಸಿತಾ ಮಕ್ಕಳೇ?” ಎಂದಾಗ ಒಬ್ಬ ಹುಡುಗ ಎದ್ದು ನಿಂತು ಮಿಸ್ ಅದು… ಅದು…. ನೀವು…. ಬೈತೀರಾ ಅಂತ ಗೊಣಗುತ್ತಿದ್ದ. ಅವನ ತಡವರಿಕೆ ನೋಡಿ, ಇಲ್ಲ ಹೇಳು. ನಿನಗೆ ಯಾಕೆ ಬೈಲಿ… ಎಂದೆ.

ಮಿಸ್ ಬೈರೇಶಿ ಇದ್ದಾನಲ್ಲ ಅವನು ಕೋಳಿನಾ ಚಿಕ್ಕ ಬುಟ್ಟಿಯಲ್ಲಿ ಹಾಕೊಂಡು ಬಂದು ಶೆಲ್ಫ್ ಕೆಳಗೆ ಬಚ್ಚಿಟ್ಟಿದ್ದಾನೆಂಬ ಸತ್ಯ ಬಾಯ್ಬಿಟ್ಟ. ನಾನು ಅದನ್ನು ಹೊರಗೆ ತೆಗಿಸಿದೆ. ಬೈರೇಶಿ ಶಾಲೆ ಇರೋದು ಓದು ಬರಹ ಕಲಿಯಲು. ನೀನು ಕೋಳಿ ಸಾಕಣೆ ಮಾಡಲು ಅಲ್ಲ. ಇದನ್ನೇನು ಕೋಳಿ ಫಾರಂ ಅಂದುಕೊಂಡಿದ್ದೀಯಾ? ಎಂದು ಗದರಿದೆ.

ಬೈರೇಶಿ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದ. ನಾನು ಸ್ವಲ್ಪ ಗಡುಸು ದನಿಯಿಂದ “ಮಾತಾಡು, ಕೋಳಿ ಏಕೆ ಶಾಲೆಗೆ ತಂದೆ. ಅದು ನನಗೆ ಗೊತ್ತಿಲ್ಲದಂತೆ ಬಚ್ಚಿಟ್ಟಿದೀಯಾ ಬೇರೆ‌. ಟೀಚರ್‌ಗೆ ಮೋಸ ಮಾಡುತ್ತೀಯಾ? ಇದೇನಾ ನಾನು ಇಷ್ಟು ದಿನ ನಿನಗೆ ಕಲಿಸಿದ್ದು. ನೀನು ಸಾಲದು ಎಂಬಂತೆ ನಿನ್ನ ಗೆಳೆಯರು ಗೆಳತಿಯರು ಕೂಡ ನಿನಗೆ ಸಪೋರ್ಟ್ ಮಾಡಿಕೊಂಡು ನನಗೆ ಸುಳ್ಳು ಹೇಳಿದ್ದಾರೆ. ನನ್ನ ಮಕ್ಕಳೆಲ್ಲ ನನಗೆ ಸುಳ್ಳು ಹೇಳಿಬಿಟ್ಟರು. ನನ್ನನ್ನು ಫೂಲ್ ಮಾಡಿದಿರಿ ನೀವೆಲ್ಲ” ಎಂದು ಸ್ವಲ್ಪ ಅಸಮಾಧಾನದಿಂದ ಹೇಳಿದೆ. ಅವನು ಅಳಲು ಶುರು ಮಾಡಿದ. ನನಗೆ ಕರುಳು ಚುರುಕು ಎಂದಿತು. ನಾನು ಒಬ್ಬ ತಾಯಿಯಲ್ಲವೇ? ಮಕ್ಕಳು ಅತ್ತರೆ ಸಹಿಸಲು ಆಗದು. ಕೋಪವನ್ನು ತಹಬದಿಗೆ ತಂದುಕೊಂಡೆ. ಬೇಜಾರು ಮಾಡ್ಕೋಬೇಡ ಪುಟ್ಟ. ನೀನು ಕೋಳಿ ತಂದರೆ ಶಾಲಾ ವಾತಾವರಣ ಬದಲಾಗುತ್ತೆ. ನಾಳೆಯಿಂದ ಶಾಲೆಗೆ ಕೋಳಿ ತರಬೇಡ. ಮನೆಯಲ್ಲಿ ಬಿಟ್ಟು ಬಾ.

ನಾವು ಇರೋದು ಶೆಡ್ಡು ಮಿಸ್. ನಮ್ಮಪ್ಪ ಕಡ್ಡಿ, ಹುಲ್ಲು, ಟಾರ್ಪಲ್‌ನಿಂದ ಕಟ್ಟಿದ್ದಾರೆ. ಅದಕ್ಕೆ ಕಡ್ಡಿಗಳನ್ನ ಅಡ್ಡ ಇಟ್ಟು ಸೀರೆ ಅಡ್ಡ ಬಿಡ್ತಾಳೆ ಅವ್ವ. ಇವತ್ತು ಅವ್ವ ಕೂಲಿಗೆ ಹೋದಳು. ಇದನ್ನ ಬಿಟ್ಟು ಬಂದರೆ ನಾಯಿ ಹದ್ದು ತಿಂದು ಬಿಡುತ್ತವೆ. ಅದಕ್ಕೆ ಅವ್ವ ನನ್ನ ಶಾಲೆಗೆ ರಜಾ ಹಾಕಿ ಕೋಳಿ ನೋಡಿಕೋ. ನಾಡಿದ್ದು ಕೋಳಿ ಕುಯ್ದು ಹೊಲದ ಬಳಿ ಹಸಿರು ಚಪ್ಪರ ಹಾಕಿ ಹಬ್ಬ ಮಾಡೋಣ ಅಂದಳು. ನನಗೆ ಶಾಲೆ ತಪ್ಪಿಸಿಕೊಂಡರೆ ಪಾಠ ಗೊತ್ತಾಗಲ್ಲ ಅಂತ ರಜಾ ಹಾಕಲು ಮನಸ್ಸಾಗಲಿಲ್ಲ. ಅದಕ್ಕೆ ಕೋಳಿಯನ್ನ ನನ್ನೊಟ್ಟಿಗೇ ಶಾಲೆಗೆ ತಂದೆ. ಗೊತ್ತಾದರೆ ನೀವು ಬೈತೀರಾ ಅಂತ ಬಚ್ಚಿಟ್ಟಿದ್ದೆ.. ಸಾರಿ ಮಿಸ್ ಅಂದ. ಆ ವಿಷಯ ಕೇಳಿ ನನಗೆ ದಿಗ್ಭ್ರಮೆಯಾಯಿತು. ಆಗ ಸಂಕೋಚ, ನಾಚಿಕೆ ಪಡುವ ಪರಿಸ್ಥಿತಿ ನನ್ನದು ಎನಿಸಿತು! ಶಿಕ್ಷಕರು ಮಕ್ಕಳಿಗೆ ಕಲಿಸಬೇಕಾದರೇ ಅವರಿಗೆ ಮಕ್ಕಳ ಕೌಂಟುಂಬಿಕ ಹಿನ್ನೆಲೆ ಕೂಡ ಚೆನ್ನಾಗಿ ಗೊತ್ತಿರಬೇಕು. ಬೈರೇಶಿ ಕೋಳಿ ಶಾಲೆಗೆ ತಂದಿದ್ದು ತಪ್ಪು ಎಂದು ನಾನು ಕೋಪಿಸಿಕೊಂಡೆನು. ಆದರೆ ಕಲಿಕೆಯ ಅವಕಾಶ ವಂಚಿತನಾಗಬಾರದು ಎಂದು ಅವನು ಶಾಲೆಗೆ ಕೋಳಿ ತಂದ. ಅವನ ಮುಂದೆ ನಾನೇ ಸಣ್ಣವಳಾದೆ ಎಂಬ ಅಪರಾಧಿ ಭಾವ ಕಾಡಿದಂತಾಯಿತು. ಆದರೂ ಶಾಲೆಯೆಂದ ಮೇಲೆ ಶಾಲಾ ನಿಯಮಗಳನ್ನ ಪಾಲಿಸುವುದು ಶಿಕ್ಷಕಿಯಾಗಿ ನನ್ನ ಕರ್ತವ್ಯವೂ ಹೌದು. ಕೆಲವೊಮ್ಮೆ ಕರ್ತವ್ಯಗಳನ್ನೇ ಮುಂದೆ ಮಾಡಿಕೊಂಡು ಮುಗ್ಧ ಮಕ್ಕಳ ಮನಸ್ಸನ್ನು ನೋಯಿಸಲು ಆಗದು. ಇಂತಹ ಸಂದಿಗ್ಧ ಪರಿಸ್ಥಿತಿಗಳು ಶಿಕ್ಷಕರನ್ನ ಹಲವಾರು ಬಾರಿ ಕಾಡುವುದುಂಟು.

ಆಗ “ನೋಡ್ರಿ ಮಕ್ಕಳ, ಬೈರೇಶಿಗೆ ಶಿಕ್ಷಣದ ಮೇಲೆ ಎಷ್ಟೊಂದು ಆಸಕ್ತಿ ಇದೆ. ಶಾಲೆಗೆ ತಪ್ಪಿಸಬಾರದು ಅಂತ ಕೋಳಿಯನ್ನ ಹಿಡಿದು ತಂದಿದ್ದಾನೆ” ಎಂದು ಅವನ ಬಗ್ಗೆ ಅಭಿಮಾನ ಮಾತುಗಳನ್ನು ಆಡಿ ಖುಷಿಯಿಂದ ಅವನ ನಿರ್ಧಾರವನ್ನು ಶ್ಲಾಘಿಸಿ ಅಭಿನಂದಿಸಿದೆ. ಅವನಿಗೆ ಎಲ್ಲ ಮಕ್ಕಳಿಂದ ಚಪ್ಪಾಳೆ ಹಾಕಿಸಿದೆ.

ಮರುದಿನ ಎಂದಿನಂತೆ ಶಾಲಾ ಆವರಣ ಪ್ರವೇಶಿಸಿದೆ. ನನಗೊಂದು ಆಶ್ಚರ್ಯ ಕಾದಿತ್ತು. ಶಾಲೆಯ ಕಾರಿಡಾರ್‌ನಲ್ಲಿ ಐದಾರು ಬುಟ್ಟಿಗಳನ್ನು ಬೋರಲು ಹಾಕಲಾಗಿತ್ತು. ದ್ರಾಕ್ಷಿಗಳನ್ನು ಮಾರುವ ಪುಟ್ಟ ಬ್ಯಾಸ್ಕೆಟ್‌ಗಳಂತೆ ಇದ್ದವು. ಬೆರಗು ಗಣ್ಣಿನಿಂದಲೇ ಶಾಲೆ ಆವರಣ ಪ್ರವೇಶಿಸಿದೆ. ಏನ್ರೋ ಮಕ್ಳ ಇವತ್ತು ಇಷ್ಟೊಂದು ದ್ರಾಕ್ಷಿ ಬುಟ್ಟೀ ತಂದಿದ್ದೀರಾ? ಎಲ್ಲ ದ್ರಾಕ್ಷಿ ತಿಂದುಬಿಟ್ಟರಾ ನನಗೂ ಉಳಿಸಿದೀರಾ ಅಥವಾ ಖಾಲಿ ಬುಟ್ಟಿಯನ್ನು ಬೋರಲ್ ಹಾಕಿದ್ದೀರಾ ಎಂದಾಗ ಮಿಸ್ ಇವು ದ್ರಾಕ್ಷಿಗಳಲ್ಲ. ಕೋಳಿ ಮರಿಗಳು ಎಂದು ಬೋರಲು ಹಾಕಿದ ಬುಟ್ಟಿ ಎತ್ತಿದ. ಅದರೊಳಗೆ ಇರುವ ಕೋಳಿ ಪಿಳ್ಳೆಗಳು ಹೊರಬಂದವು. ಈ ಶಾಲೆಯಲ್ಲಿ ನೆನ್ನೆಯಿಂದ ಏನು ನಡೆಯುತ್ತಿದೆ. ಇದೊಳ್ಳೆ ರಾಮಾಯಣ ಆಯ್ತಲ್ಲ ಎಂದುಕೊಂಡು ಇವೆಲ್ಲ ಯಾರವೋ, ಯಾಕ್ರೋ ತಂದ್ರಿ ಸ್ಕೂಲ್ಗೆ. ನೀವು ಬನ್ನಿ ಅಂದ್ರೆ ಕೋಳಿ ಮರಿ ತರ್ತೀರಾ ನೀವೇನ್ ಕೋಳಿ ಮೇಯಿಸಲು ಬಂದಿದ್ದೀರಾ ಎಂದು ಗದರಿದೆ. ಆ ವೇಳೆಗೆ ಪೋಷಕರೊಬ್ಬರು ಶಾಲೆ ಕಡೆಗೆ ಬಂದರು. ಅವರು ಬಂದ ವಿಷಯ ಏನೆಂದು ವಿಚಾರಿಸಿದೆ. ನಿನ್ನೆ ಬೈರೇಶಿ ಕೋಳಿ ತಂದಿದ್ದಕ್ಕೆ ನೀವೇನೋ ಅವನನ್ನು ಬುದ್ಧಿವಂತ ಅಂತ ಚೆನ್ನಾಗಿ ಹೊಗಳಿ ಮುದ್ದಿಸಿದರಂತೆ. ಅದಕ್ಕೆ ಇವತ್ತು ಮಕ್ಕಳು ನಾವು ಕೋಳಿ ತಗೊಂಡು ಹೋಗ್ಬೇಕು, ಮಿಸ್ ಕಡೆಯಿಂದ ಗುಡ್ ಹೇಳಿಸಿಕೋಬೇಕು ಅಂತ ಇವರೆಲ್ಲಾ ಕೋಳಿ ಹಿಡಿದುಕೊಂಡು ಬಂದಿದ್ದಾರೆ. ನಮ್ಮ ಹುಡುಗನು ಕೋಳಿ ಮರಿ ತಂದಿದ್ದಾನೆ. ಅವನೇನಾದರೂ ನಾಯಿ ಬಾಯಿಗೆ ಇಟ್ಟಗಿಟ್ಟನಾ ಅಂತ ನೋಡಲು ಸ್ಕೂಲ್ ಕಡೆ ಬಂದೆ ಎಂದರು. ಇಂತಹ ಸವಾಲುಗಳು ಶಿಕ್ಷಕರಿಗೆ ಹೊಸದಲ್ಲ.

ಒಂದು ವಿಷಯವನ್ನ ನಾವೊಂದು ದೃಷ್ಟಿಕೋನದಿಂದ ಹೇಳಿದರೆ, ಮಕ್ಕಳು ಅವರದೇ ಬೇರೊಂದು ದಾರಿಯಲ್ಲಿ ಆಲೋಚಿಸುತ್ತಾರೆ. ನಾನು ಬೈರೇಶಿಗೆ ಬೈಯ್ಯದೆ ಹೊಗಳಿದ್ದು ಇತರೆ ಮಕ್ಕಳು ಹೀಗೆ ವರ್ತಿಸಲು ಅವಕಾಶ ಮಾಡಿ ಕೊಡ್ತು. ಅಲ್ಲಿ ಬೈರೇಶಿಯ ಅಸಹಾಯಕತೆ ಇತ್ತು, ಕ್ಷಮಿಸಿದೆ. ಅಷ್ಟು ಪ್ರಭುದ್ಧವಾಗಿ ಯೋಚಿಸುವ ಶಕ್ತಿ ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ಶಿಕ್ಷಕರ ಪ್ರತಿ ಮಾತು ಮೌಲ್ಯಯುತವಾದದ್ದು. ನಮ್ಮ ವಿಚಾರವನ್ನು ತುಂಬಾ ವಿವೇಚನಾ ಪೂರ್ವವಾಗಿ ಮಕ್ಕಳ ಮುಂದೆ ಮಂಡಿಸಬೇಕು. ಆ ಸನ್ನಿವೇಶದಲ್ಲಿ ಬೈರೇಶಿಯ ತಪ್ಪಿಲ್ಲ. ಈ ಮಕ್ಕಳದು ಕೂಡ ತಪ್ಪಿಲ್ಲ. ಶಿಕ್ಷಕಿಯಾಗಿ ನಾನು ಮಾಡಿದ್ದು ಕೂಡ ಸರಿಯೇ. ಇಂತಹ ಸಂದಿಗ್ಧತೆಗಳು ಆಗಾಗ ಸವಾಲುಗಳಾಗಿ ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಶಿಕ್ಷಕರು ಅತ್ಯಂತ ಸೂಕ್ಷ್ಮವಾಗಿ ವಿಚಾರವನ್ನು ಗ್ರಹಿಸಿ ಜಾಣ್ಮೆಯಿಂದ ಅವುಗಳನ್ನು ಬಗೆಹರಿಸಿಕೊಳ್ಳಬೇಕು. ಅಲ್ಲಿ ಇತರ ಮಕ್ಕಳಿಗೂ ಕೂಡ ಮನಸ್ಸಿಗೆ ನೋವಾಗಬಾರದು, ಅದರ ಜೊತೆಗೆ ಅವರ ತಪ್ಪಿನ ಅರಿವು ಆಗಬೇಕು. ಅಂತಹ ನಿರ್ಣಯಗಳನ್ನು ಶಿಕ್ಷಕರು ತೆಗೆದುಕೊಳ್ಳಬೇಕು. ಮಕ್ಕಳಿಗೆ ವಿಚಾರವನ್ನು ಬಿಡಿಸಿ ಹೇಳಿದೆ. ಶಾಲೆಗೆ ತಪ್ಪಿಸಲು ಇವನಿಗೆ ಇಷ್ಟ ಇರಲಿಲ್ಲ. ಅದಕ್ಕೆ ಕ್ಷಮಿಸಿದೆ. ನಿಮಗೆಲ್ಲ ಮನೆ ಇದೆ. ಕೋಳಿಯನ್ನು ನೋಡಿಕೊಳ್ಳುವವರು ಇದ್ದಾರೆ. ಅವನು ತಂದ ಎಂದು ನೀವು ಹಾಗೆ ಮಾಡುವುದು ತಪ್ಪಲ್ಲವೇ? ಬೈರೇಶಿಯ ಪರಿಸ್ಥಿತಿಯನ್ನ ನಾವು ದುರುಪಯೋಗಪಡಿಸಿಕೊಳ್ಳಬಾರದು. ಉಳ್ಳವರು, ಬಲಿಷ್ಠರು ಇಲ್ಲದವರಿಗೆ, ಅಸಹಾಯಕರಿಗೆ ಕೈಲಾದ ಸಹಾಯ ಮಾಡಬೇಕು ಅಲ್ಲವೇ ಮಕ್ಕಳೇ ಎನ್ನುತ್ತಿದ್ದಂತೆ ಹೌದು ಮಿಸ್ ಎಂದು ಎಲ್ಲಾ ಮಕ್ಕಳು ಖುಷಿಯಿಂದ ಸಂಭ್ರಮಿಸಿದರು. ಮಿಸ್ ಇವತ್ತೊಂದಿನ ಹೇಗೂ ಕೋಳಿ ತಂದಿದ್ದೇವೆ. ಆಟ ಆಡುತೀವಿ ಮಿಸ್ ಎಂದರು. ಆಗಲಿ ಮಕ್ಕಳೆ ಇವತ್ತು ಅವುಗಳ ಜೊತೆ ಆಟ ಆಡೋಣ. ಅಡುಗೆ ಆಂಟಿ ಇವುಗಳನ್ನೆಲ್ಲ ಅವರ ಮನೆಯಲ್ಲಿ ಸಾಕಲಿ ಅವು ಮೊಟ್ಟೆ ಇಟ್ಟಾಗ ಎಲ್ಲಾ ಸೇರಿ ತಿನ್ನಬಹುದು ಎಂದೆ ಅಷ್ಟೇ.. ಮಿಸ್ ಕೋಳಿ ಮನೆಗೆ ಬಿಟ್ಟು ಬರುತ್ತೀವಿ ಅಂತ ಮನೆ ಕಡೆಗೆ ಓಡಿದರು.

ಇದು ಕೋಳಿ ಕಥೆಯಾದರೆ ನಾಯಿ, ಬೆಕ್ಕು, ಕುರಿ, ಕರುಗಳ ಕಥೆಯು ಉಂಟು…

ಶಾಲೆಗೆ ಬರುವಾಗ ಮಕ್ಕಳನ್ನು ಬೀಳ್ಕೊಡಲು ಕೆಲವೊಮ್ಮೆ ನಾಯಿ ಬೆಕ್ಕುಗಳು ಶಾಲೆಗೆ ಬರುತ್ತವೆ. ಅವು ಸಾಕಿದವರ ಮಾತು ಬಿಟ್ಟು ನಮ್ಮ ಯಾರ ಮಾತನ್ನೂ ಕೇಳುವುದಿಲ್ಲ. ತುಂಬಾ ಸಲ ಮಕ್ಕಳಿಗೆ ಎಚ್ಚರಿಕೆ ಕೊಟ್ಟಿರುತ್ತೇವೆ. ಸಾಕು ಪ್ರಾಣಿಗಳನ್ನ ಶಾಲಾ ಆವರಣದೊಳಗೆ ತರುವಂತಿಲ್ಲ. ಅವು ನಿಮಗೆ ಮಾತ್ರ ರೂಢಿಯಾಗಿರುತ್ತವೆ. ಇತರ ಮಕ್ಕಳಿಗೆ ತೊಂದರೆ ಮಾಡುತ್ತವೆಂದು‌. ಆದರೂ ಆ ಮಕ್ಕಳಿಗೆ ತಮ್ಮ ನಾಯಿಗಳನ್ನು ಶಾಲೆಯ ಬಳಿ ಕರೆ ತರುವುದು, ಅವುಗಳನ್ನು ಫ್ರೆಂಡ್ಸ್‌ಗೆ, ಯಾ ಟೀಚರ್ಸ್‌ಗೆ ತೋರಿಸಿ ಅವುಗಳ ಗುಣಗಾನ ಮಾಡೋದು ಅಂದ್ರೆ ತುಂಬಾನೇ ಖುಷಿ ಮತ್ತು ಹೆಮ್ಮೆ. ಇಂದು ಜನ ಪ್ರಾಣಿಗಳನ್ನು ತುಂಬಾ ಪ್ರೀತಿಯಿಂದ ಸಾಕಿರುತ್ತಾರೆ. ಅವು ಮನುಷ್ಯರಂತೆ ಆತ್ಮೀಯತೆ ಬೆಳೆಸಿಕೊಂಡು ಆ ಮಕ್ಕಳನ್ನ ಬಿಟ್ಟು ಇರೋದೆ ಇಲ್ಲ. ಒಮ್ಮೊಮ್ಮೆ ಮನುಷ್ಯನಿಗಿಂತ ಈ ಪ್ರಾಣಿಗಳದೇ ನಿಸ್ವಾರ್ಥ ಪ್ರೀತಿ ಎನಿಸುತ್ತದೆ. ಆ ಪ್ರಾಣಿಗಳಿಗೂ ಜನರಂತೆ ಕೆಲವು ಹವ್ಯಾಸಗಳನ್ನು ರೂಢಿಸಿರುತ್ತಾರೆ. ಒಮ್ಮೆ ಒಬ್ಬ ವಿದ್ಯಾರ್ಥಿಯ ತಂದೆ ತಾಯಿಗಳ ಜೊತೆ ನಾಯಿಯು ಶಾಲೆಗೆ sdmc ಸಭೆಗೆ ಬಂದಿತ್ತು. ಅದನ್ನು ಗೇಟಿನಿಂದ ಹೊರಗೆ ಬಿಟ್ಟು ಬನ್ನಿ ಎಂದರೂ ಆ ಪೋಷಕರು ಏನು ಆಗಲ್ಲ ಸುಮ್ನೆ ಇರಿ ಮಿಸ್, ಅದೇನು ಕಚ್ಚಲ್ಲ ಅಂದವರು ನನ್ನ ಮಾತು ಕೇಳಿಸಿಕೊಳ್ಳುವ ಮೊದಲೇ ಕೋಣೆಯೊಳಗೆ ಕರೆತಂದರು. ಒಳಗೆ ಬರುತ್ತಿದ್ದಂತೆ ಆ ನಾಯಿ ನನ್ನ ಉದ್ದಕ್ಕೂ ಹಾರಿತು‌. ಅನಿರೀಕ್ಷಿತ ದಾಳಿಗೆ ನನ್ನ ಹೃದಯದ ಬಡಿತವೇ ನಿಂತಂತೆ ಭಾಸವಾಯಿತು. ಮೊದಲೇ ನನಗೆ ನಾಯಿ ಕಂಡ್ರೆ ಎಲ್ಲಿಲ್ಲದ ಭಯ. ಅದು ನನ್ನ ತಲೆಯಲ್ಲಿ ಮುಡಿದಿದ್ದ ಗುಲಾಬಿ ಹೂವನ್ನು ಕಿತ್ತುಕೊಂಡು ಹೋಗಿ ಅದರ ಪೋಷಕರಿಗೆ ನೀಡಿತು. ಈ ಅಚ್ಚರಿಗೆ ಬೆರಗಾಗಿ ಅವರನ್ನು ನೋಡುತ್ತಿದ್ದಾಗ ಇದು ಹೀಗೆ ಮಾಡೋದು ಮೇಡಮ್. ನಮ್ಮ ಗಿಡದಲ್ಲಿ ಹೂವನ್ನು ಕಿತ್ತು ತಂದು ದಿನ ನನಗೆ ಕೊಡುತ್ತೆ ಅಂದಾಗ ಅದು ಖುಷಿಯಿಂದ ತಲೆ ಅಲ್ಲಾಡಿಸಿತು.

ಸವಿತಳ ಮನೆಯ ಬೆಕ್ಕು ಸರಿ ಇಲ್ಲ ಅನ್ನುವ ಮತ್ತೊಂದು ಆರೋಪ ಮಗದೊಂದು ದಿನ ಕೇಳಿ ಬಂತು. ಪಾಪ ಯಾಕ್ರೋ ಇವತ್ತು ನೀವೆಲ್ಲ ಆ ಬೆಕ್ಕಿನ ರಾಶಿಗೆ ಹೋಗಿದ್ದೀರಾ ಎಂದೆ. ನೋಡಿ ಮಿಸ್ ಸವಿತಳ ಬೆಕ್ಕು ಇದು ಎಂದು ರಮೇಶ ತನ್ನ ಕೈಯಲ್ಲಿ ಇದ್ದ ಬೆಕ್ಕಿನ ಮರಿಯನ್ನು ಮುಂದೆ ಚಾಚಿದ. ಅದನ್ನ ಯಾಕೆ ಶಾಲೆಗೆ ತಂದರೋ ಎಂದು ಕೇಳಿದರೆ, ನಿಮಗೆ ತೋರಿಸಲಿಕ್ಕೆ ಮಿಸ್ ಎಂದವನೇ ಓಡಿ ಹೋದ. ಮರಳಿ ಬಂದಾಗ ರಮೇಶ ಸವಿತಾಳನ್ನೇ ಕರೆತಂದಿದ್ದ. ಏನಮ್ಮ ಸವಿತಾ ಇವರ ರಂಪಾಟ ಎಂದಾಗ ಸವಿತಾಳ ತಲೆ ನೋಡಿ ಎಂದು ಮಕ್ಕಳೆಲ್ಲ ಅವಳನ್ನು ಹಿಂದೆ ತಿರುಗಿಸಿದರು. ಅಯ್ಯೋ ಏನಾಯ್ತಮ್ಮ ನಿನ್ನ ಕೂದಲಿಗೆ. ಇಷ್ಟೊಂದು ಕೂದಲು ತುಂಡಾಗಿವೆ. ಅದು ಕತ್ತರಿಯಲ್ಲಿ ಕತ್ತರಿಸಿದ್ದಾರೆ ಎಂದು ಹೆಚ್ಚು ಮೊರೆ ಹಾಕಿ ಕೇಳಿದೆ. ಅದೇ ಮಿಸ್ ಸವಿತಾ ಮಲಗಿದ್ದಾಗ ಇದೇ ಬೆಕ್ಕು ಅವಳ ಕೂದಲು ಕತ್ತರಿಸಿದೆ. ಅದಕ್ಕೆ ನಾನು ಕೋಪ ಮಾಡಿಕೊಂಡಿರುವುದು. ಸವಿತಾ ಮಾತ್ರ ಅದರ ಮೇಲೆ ಕೋಪ ಮಾಡಿಕೊಂಡಿಲ್ಲ ನೋಡಿ. ಈಗ್ಲೂ ಅದನ್ನ ಇಷ್ಟೊಂದು ಮುದ್ದಿಸ್ತಾಳೆ ಎಂದು ತುಸು ಅಸಮಾಧಾನ ಹೊರಹಾಕಿದನು.

ನೋಡಿ ಮಕ್ಕಳೆ ಪ್ರೀತಿ ಅನ್ನೋದೆ ಹಾಗೆ; ನಾವ್ ಯಾರನ್ನಾದರೂ ಪ್ರೀತಿಸ್ತೀವಿ, ಹಚ್ಕೊಂಡಿದೀವಿ ಅಂದ್ರೆ ಅದನ್ನ ಅಷ್ಟು ಸುಲಭವಾಗಿ ಮರೆಯಲು ಆಗಲ್ಲ. ಇಷ್ಟು ದಿನ ಅವಳು ತುಂಬಾ ಪ್ರೀತಿಯಿಂದ ಅದನ್ನು ಸಾಕಿದ್ದಾಳೆ. ಈಗ ತಪ್ಪು ಮಾಡ್ತು ಅಂತ ಅದನ್ನು ಶಿಕ್ಷಿಸುವ ಮನಸ್ಸು ಅವಳಿಗೆ ಇಲ್ಲ. ಅವಳು ಉದಾರತೆಯಿಂದ ಕ್ಷಮಿಸಿದ್ದಾಳೆ ಎನ್ನುತ್ತಿದ್ದಂತೆ ಮಕ್ಕಳೆಲ್ಲ ಮೌನಕ್ಕೆ ಶರಣಾದರು.

ಇನ್ನಾದರೂ ಪಾಠ ಮಾಡೋಣವಾ ಮಕ್ಕಳೇ ಅಂದಾಗ ಮಕ್ಕಳೆಲ್ಲ ಪಾಠದ ಕಡೆಗೆ ಬಂದರು. ನಾನು ಪಾಠ ಶುರು ಮಾಡಿದೆ