ಕಮಲಮ್ಮನವರಿಗೆ ಕಸಿವಿಸಿಯಾಯಿತು. ತನ್ನ ಮಗಳ ಸೌಂದರ್ಯದ ಬಗ್ಗೆ ಇಡೀ ಕಾಲೇಜು, ನಮ್ ಏರಿಯಾದವರು ಮಾತನಾಡುತ್ತಾರೆಂದರೆ ನಮ್ಮ ಮನೆಯ ಮೇಲೆ ಅವರ ಕಣ್ಣು ಬಿದ್ದಿದೆ ಎಂದೇ ಅರ್ಥ. ನಾನಂತು ಕೆಲಸಕ್ಕೆ ಹೋಗಿ ಬಿಡುತ್ತೇನೆ, ಇವನು ಹೊರಗೆ ಹೊರಟರೆ ಮನೆಯಲ್ಲಿ ಕಾವ್ಯ ಒಬ್ಬಳೇ ಉಳಿದು ಬಿಡುತ್ತಾಳೆ. ಇಂದು ಸಂಜೆ ಮಹಡಿ ಮೇಲಿದ್ದಾಗ ಎದುರುಗಡೆ ಮನೆಯ ಹುಡುಗ ಇಣುಕಿಣುಕಿ ತನ್ನ ಮನೆಯನ್ನು ದೃಷ್ಟಿಸುತ್ತಿದ್ದುದು ಕಂಡು ಬಂದಿತ್ತು.
ಲಲಿತಾ ಪವಾರ ಹೊಸ ಕಾದಂಬರಿ “ಒಂಟಿ ನಡಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

ಕೆಲಸ ಮಾಡುತ್ತಿದ್ದ ಕಮಲಮ್ಮ ಗಡಿಯಾರದ ಕಡೆಗೆ ಗಮನ ಹರಸಿದಾಗ ಸಮಯ ಐದು ಗಂಟೆಯಾಗಿತ್ತು. ಆಫೀಸ್ ಮುಗಿಯಲು ಇನ್ನೂ ಅರ್ಧ ಗಂಟೆಯಿದೆ ಎಂದುಕೊಂಡವರೇ ಮತ್ತೊಮ್ಮೆ ಫೈಲಿನೊಳಗೆ ಮುಳುಗಿ ಹೋದರು. ಪಕ್ಕದ ಟೇಬಲ್‌ನಲ್ಲಿಯೇ ಕೆಲಸ ಮಾಡುತ್ತಿದ್ದ ವಸಂತ ಅವರ ಕಡೆಗೆ ನೋಡಿ, “ಏನಿವತ್ತು ಬಹಳ ಬೇಗ ಗಡಿಯಾರದ ಕಡೆ ನೋಡ್ತಾ ಇದೀರಲ್ಲ” ಎಂದು ಕೇಳಿದರು. ಅವರು ಹಾಗೆ ಕೇಳುವುದಕ್ಕೂ ಒಂದು ಕಾರಣವಿತ್ತು. ಕಮಲಮ್ಮ ಎಂದೂ ಗಡಿಯಾರದ ಕಡೆ ನೋಡಿ ಕೆಲಸ ಮಾಡಿದವರಲ್ಲ. ಅವರ ಸಂಪೂರ್ಣ ಗಮನ ಕೆಲಸದ ಮೇಲಷ್ಟೆ ಕೇಂದ್ರಿಕೃತವಾಗಿರುತ್ತಿತ್ತು. ಇಂದು ಮಾತ್ರ ಆ ಕಡೆ ಹರಿದಿದ್ದರಿಂದ ಈ ರೀತಿಯಾಗಿ ಕೇಳಿದ್ದರು.

“ಏನಿಲ್ಲ ಸ್ವಲ್ಪ ಆಯಾಸವಾಗಿತ್ತು. ಅದಕ್ಕೆ ಮನೆಗೆ ಹೋಗೋಣ ಎಂದುಕೊಂಡು ನೋಡಿದೆ ಅಷ್ಟೇ” ಎಂದು ನಸುನಗುತ್ತಾ ಹೇಳಿ ಮತ್ತೆ ತಮ್ಮ ಕೆಲಸದಲ್ಲಿ ಮಗ್ನರಾದರು.

ಕಮಲಮ್ಮನವರ ಸ್ವಭಾವವೇ ಅಂತಹದ್ದು. ಯಾರೊಂದಿಗೂ ಅತಿ ಎನಿಸುವಷ್ಟು ಮಾತನಾಡುವವರಲ್ಲ. ಅವಶ್ಯಕತೆ ಎಷ್ಟಿದೆಯೋ ಅಷ್ಟೆ ಮಾತುಕತೆ. ಅವರ ಆಫೀಸ್‌ನಲ್ಲಿ 20 ಜನರಿದ್ದರೂ ಯಾರೊಂದಿಗೂ ಅವರು ಸಲುಗೆಯಿಂದ ವರ್ತಿಸಿದವರಲ್ಲ. ಅವರು ಗಂಡಸರೇ ಅಗಲಿ, ಹೆಂಗಸರೇ ಆಗಲಿ ಎಲ್ಲರೊಂದಿಗೂ ಬೆರೆಯುವುದು ಅಷ್ಟಕಷ್ಟೆ. ಅದಕ್ಕೆ ಹಲವರು ಆಕೆಯೊಂದಿಗೆ ಮಾತನಾಡುವ ಗೋಜಿಗೆ ಹೋಗುತ್ತಿರಲಿಲ್ಲ. ಇದು ಐದು ವರ್ಷದಿಂದಲೂ ಆಕೆಯನ್ನು ನೋಡುತ್ತಿರುವವರು ಹೇಳುವ ಮಾತುಗಳು.

(ಲಲಿತಾ ಪವಾರ)

ಕಮಲಮ್ಮ ಈಗ ನಡು ವಯಸ್ಸಿಗೆ ಬಂದಿದ್ದಾರೆಂಬುದಕ್ಕೆ ಆಕೆಯ ಮುಖದ ಮೇಲಿನ ಚರ್ಮ ಸಣ್ಣದಾಗಿ ಸುಕ್ಕುಗಟ್ಟಲು ಆರಂಭಿಸಿದರುವುದೇ ಸಾಕ್ಷಿ. ಜೊತೆಗೆ ಬಿಳಿ-ಕೂದಲುಗಳ ಸರಮಾಲೆಯೂ ಗೋಚರಿಸ ತೊಡಗಿದ್ದವು. ಭಾರವಾದ ಹೃದಯವಿದ್ದರೂ ನಸುನಗುವ ಮಂದಸ್ಮಿತ ಮುಖಾರವಿಂದ ಅವರದು. ನಲವತ್ತೈದು ವರ್ಷ ಆಗಿರಬಹುದೆಂದು ಅಕ್ಕ-ಪಕ್ಕದವರು ಊಹೆ ಮಾಡುತ್ತಾರೆ. ಹೆಂಗಸಿನ ಸರಿಯಾದ ವಯಸ್ಸು ಹೇಳಲು ಆಗುವುದಿಲ್ಲ. ಕೇಳುವುದಂತೂ ಮಹಾ-ಘೋರ ಅಪರಾಧವೆಂದುಕೊಂಡು ಪ್ರತಿಯೊಬ್ಬರು ತಮಗಿಷ್ಟ ಬಂದ ವಯಸ್ಸು ಹೇಳುತ್ತಿದ್ದರು. ಆಫೀಸ್‌ನವರ ಪ್ರಕಾರದಂತೆಯೇ ಆಕೆಯ ಸರಾಸರಿ ವಯಸ್ಸು ನಲವತ್ತೈದು ಎಂದು ತೀರ್ಮಾನಿಸಬಹುದಿತ್ತು ಅಷ್ಟೆ.

ಈ ಆಫೀಸ್‌ನಲ್ಲಿ ಕೆಲಸ ಮಾಡುತ್ತೇನೆಂದು ಕನಸು-ಮನಸಿನಲ್ಲಿಯೂ ಕಮಲಮ್ಮ ಮದುವೆಯಾದಾಗ ಯೋಚಿಸಿರಲಿಲ್ಲ. ತನ್ನನ್ನು ಅತಿಯಾಗಿ ಪ್ರೀತಿಸುವ ಗಂಡ ಮತ್ತು ಆತನ ಪ್ರೀತಿಯ ಕಾಣಿಕೆಯೆಂಬಂತೆ ಮುದ್ದಾದ ಇಬ್ಬರು ಮಕ್ಕಳು. ತನ್ನದು ಸುಖೀ ಸಂಸಾರವೆಂದೇ ಭಾವಿಸಿ ಆ ಸುಖ ಸಾಗರದಲ್ಲಿ ತೇಲಾಡುತ್ತಿದ್ದರು. ಒಮ್ಮೊಮ್ಮೆ ಸಾಗರದಲ್ಲೂ ಅಲೆಗಳು, ಸುನಾಮಿಗಳು ಅಬ್ಬರಿಸುತ್ತವೆ ಎಂಬಂತೆ ಅವರ ಬದುಕಿನಲ್ಲಿಯೂ ಬಿರುಗಾಳಿ ಅಬ್ಬರಿಸಿ ಸುಖ-ಸಾಗರವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಎಲ್ಲರೊಂದಿಗೆ ನಗು-ನಗುತ್ತಾ ಮಾತನಾಡುತ್ತಾ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ ಈಕೆಯ ಪತಿ ಆ್ಯಕ್ಸಿಡೆಂಟ್ ಒಂದರಲ್ಲಿ ಮರಣ ಹೊಂದಿದ್ದು ಆರು ವರ್ಷದ ಕೆಳಗೆ ಆಗ ಆಕೆಗೆ ಮೂವತ್ತೊಂಭತ್ತರ ಹರೆಯ ಜೊತೆಗೆ ಆಗಷ್ಟೆ ವಯಸ್ಸಿಗೆ ಬರುತ್ತಿರುವ ಇಬ್ಬರು ಮಕ್ಕಳು. ಗಂಡನ ಕೆಲಸ ಈಕೆಗೆ ದೊರತು ಆಕೆ ಜೀವನ ನಡೆಸುವಂತಾಗಿತ್ತು.

ಪ್ರತಿಯೊಬ್ಬ ಮಾನವನ ಬದುಕು ಯಾವ ಗಳಿಗೆಯಲ್ಲಿ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನ ಯಾರಿಂದಲೂ ತಿಳಿಸಲು ಸಾಧ್ಯವಿಲ್ಲ. ತಿರುವು ಬಂದಾಗ ಅದರಂತೆಯೇ ಸಾಗುತ್ತಾ ಹೋಗಬೇಕಾದುದಷ್ಟೇ ನಮ್ಮ ಕೆಲಸ. ಮೊದಲೆರಡು ವರ್ಷ ಗಂಡನ ಸವಿನೆನಪು ಆಕೆಯ ಮನಸ್ಥಿತಿಯನ್ನ ಅಲುಗಾಡಿಸಿಬಿಟ್ಟಿತು. ಕೆಲಸದ ಒತ್ತಡ ಹೆಚ್ಚಾದಂತೆ ನೆನಪುಗಳು ಕೊಂಚ ಕೊಂಚ ಮರೆಯಾಗ ತೊಡಗಿತು. ತಾನಾಯಿತು ತನ್ನ ಕೆಲಸವಾಯಿತು ಇಬ್ಬರು ಮಕ್ಕಳ ಯೋಗಕ್ಷೇಮವಾಯಿತು ಎಂದುಕೊಂಡು ಜೀವನ ನಡೆಸತೊಡಗಿದ್ರು ಕಮಲಮ್ಮ.

ಇಬ್ಬರು ಮಕ್ಕಳಲ್ಲಿ ಹಿರಿಯವಳು ಕಾವ್ಯ ತಾಯಿ ತಮಗೋಸ್ಕರ ಪಡುವ ಕಷ್ಟವನ್ನು ನೆನಪಿಸಿಕೊಂಡು ಅದಕ್ಕೆ ತಕ್ಕನಾಗಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಾವ್ಯ ಈಗಷ್ಟೆ ಡಿಗ್ರಿ ಎಕ್ಸಾಂ ಬರೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾಳೆ. ಆಕೆ ಖಂಡಿತವಾಗಿಯೂ ಪಾಸ್ ಆಗುತ್ತಾಳೆಂಬ ಭರವಸೆ ಕಮಲಮ್ಮನವರಿಗಿತ್ತು. ಕಾವ್ಯ ಸಹ ತಾಯಿಯಂತೆ ಮೃದು ಮಾತಿನ ಹುಡುಗಿ. ಸೌಂದರ್ಯಕ್ಕೇನೂ ಕೊರತೆಯಿಲ್ಲ. ತಂದೆ-ತಾಯಿಯರ ಸಮಾಗಮದಿಂದ ಸೃಷ್ಟಿಯಾದ ಸೌಂದರ್ಯ ಪುತ್ಥಳಿಯಂತೆ ಆಕೆ ಕಂಗೊಳಿಸುತ್ತಾಳೆ. ಜೊತೆಗೆ ಈಗಿನ್ನು ಹದಿಹರೆಯ. ಮನದ ಬಯಕೆಗಳು ಅರಳುವ ಸಮಯ. ನೋಡಿದವರು ಮತ್ತೆ ಮತ್ತೆ ತಿರುಗಿ ನೋಡಬೇಕೆನ್ನುವ ಅಪರೂಪದ ಸೌಂದರ್ಯ ರಾಣಿ ಅವಳು. ಅದರ ಜೊತೆಗೆ ವಿದ್ಯೆಯೂ ಸೇರಿದ್ದರಿಂದ ಚೆಲುವು ಇಮ್ಮುಡಿಯಾದಂತೆ ಭಾಸವಾಗುತ್ತದೆ. ಆ ವಯಸ್ಸಿನಲ್ಲಿ ಇರಬೇಕಾದ ಚಂಚಲತೆ ಅವಳಲ್ಲಿರಲಿಲ್ಲ. ಶಾಂತ ಮನೋಭಾವ, ಯೋಚನೆ ಮಾಡಿ ಮುಂದಡಿಯಿಡುವ ರೀತಿ ದೊಡ್ಡವರನ್ನು ನಾಚಿಸುವಂತಿತ್ತು.

ಇನ್ನೂ ಎರಡನೆಯ ಮತ್ತು ಕೊನೆಯವ ಕಿರಣ. ತಂದೆ ಬದುಕಿದ್ದಾಗ ಮೂರು ಜನರೂ ಸೇರಿ ಅಮೃತಧಾರೆಯನ್ನೇ ಇವನ ಮೇಲೆ ಸುರಿಯುವಷ್ಟು ಪ್ರೀತಿ ತೋರಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿತ್ತು. ಕೊನೆಯವನಾದರೂ ಮನೆಯ ಪರಿಸ್ಥಿತಿ ಅರ್ಥವಾಗದ ವಯಸ್ಸೇನಲ್ಲ. ಪಿ.ಯು.ಸಿ ಮುಗಿಸಿ ಡಿಗ್ರಿಗೆ ಕಾಲಿಟ್ಟಿದ್ದನು. ಅಕ್ಕನದೇ ಪುಸ್ತಕಗಳು ನೋಟ್ಸ್‌ಗಳು ಇದ್ದುದರಿಂದ ಯಾವುದೇ ರೀತಿಯಲ್ಲೂ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗುತ್ತಿರಲಿಲ್ಲ. ಸ್ವಭಾವ ಮಾತ್ರ ಅವರಿಗೆ ವಿಭಿನ್ನ ತುಸು ಹೆಚ್ಚು ಮಾತಿನ ತುಂಟಾಟದ ಹುಡುಗನಾಗಿದ್ದ ಕಿರಣ. ಇದು ಕಮಲಮ್ಮನವರಿಗೆ ಬೇಸರ ತರಿಸುತ್ತಿರಲಿಲ್ಲ. ನೋವಲ್ಲೆ ದಿನ ಕಳೆಯುವುದಕ್ಕಿಂತ ಮಗನ ಮಾತಿಗಾದರೂ ನಕ್ಕು ಹಗುರಾಗುತ್ತಿದ್ದರು.

“ಕಮಲಮ್ಮ ಆಗಲೇ ಗಡಿಯಾರ ನೋಡ್ತಾ ಇದ್ದಿ. ಈಗ ಟೈಮಾಗಿದೆ. ನೋಡಿ” ಎಂದು ಎಚ್ಚರಿಸಿದರು ವಸಂತ.

“ನೋಡಲಿಲ್ಲ ನಾನು” ಎಂದವರೇ ಫೈಲ್ ಎಲ್ಲಾ ಮುಚ್ಚಿಟ್ಟು, ಬೀರುವಿನಲ್ಲಿ ಹಾಕಿ ಕೀ ತಗೆದುಕೊಂಡು ಹೊರಟರು.

“ಬನ್ನಿ ಇವತ್ತು ನಾನೇ ಡ್ರಾಪ್ ಕೊಡ್ತಿನಿ” ಎಂದರು ವಸಂತ.

“ನೀವ್ ಒಳ್ಳೆ ಚೆನ್ನಾಗಿ ಹೇಳ್ತೀರಾ! ಐದು ವರ್ಷದಿಂದ ಯಾರ್ ಹತ್ರಾನೂ ಡ್ರಾಪ್ ತಗೆದುಕೊಂಡಿಲ್ಲ. ಇವತ್ತು ನಿಮ್ಮ ಹತ್ರ ತಗೋತಾರಾ? ಅವರಿಗೆ ಬಸ್ ಮೇಲೆ ಪ್ರೀತಿ ಜಾಸ್ತಿ ಅನ್ಸುತ್ತೆ” ಎಂದರು ಮತ್ತೊಬ್ಬ ಸಹೋದ್ಯೋಗಿ.

“ಹಾಗಂತ ಅಲ್ಲ, ಬೇರೆಯವರಿಗೆ ತೊಂದ್ರೆ ಯಾಕೆ ಅಂತ?”

“ಒಂದೇ ಆಫೀಸ್‌ನಲ್ಲಿ ಕೆಲಸ ಮಾಡೋರು ನಾವು, ಬೇರೆಯವರು ಹೇಗೆ ಆಗ್ತೀವಿ ಹೇಳಿ ನೋಡೊಣ” ಎಂದರು ವಂಸತ.
ಕಮಲಮ್ಮ ಮೌನವಾದರು.

“ಅಯ್ಯೋ ಇಷ್ಟಕ್ಕೆಲ್ಲಾ ಬೇಜಾರ್ ಮಾಡ್ಕೋತಾರಾ? ನೀವು ಬಸ್‌ನಲ್ಲಿ ಹೋಗಿ ಪರವಾಗಿಲ್ಲ” ಎಂದರು ನಗುತ್ತಾ ವಸಂತ.

ಕಮಲಮ್ಮನವರಿಗೆ ಬೇರೆಯವರೊಂದಿಗೆ ಮಾತನಾಡಬಾರದು ಎಂದು ತಮಗೆ ತಾವೇ ನಿರ್ಧಾರ ಮಾಡಿಕೊಂಡದ್ದು ಗಂಡ ಸತ್ತ ನಂತರವೇ. ಹೆಚ್ಚು ಹೊತ್ತು ಮಾತನಾಡುತ್ತಾ ನಿಂತರೂ ಸಮಾಜ ಏನೆಂದು ತಿಳಿದುಕೊಂಡು ಬಿಡುತ್ತದೆಯೋ ಎಂಬ ಚಿಂತೆ ಅವರನ್ನು ಬಹುವಾಗಿ ಕಾಡತೊಡಗಿತ್ತು. ಅದರ ಜೊತೆಗೆ ವಯಸ್ಸಿಗೆ ಬಂದ ಮಗಳು ಮನೆಯಲ್ಲಿರುವಾಗ ತಾನು ಅವರಿವರೊಂದಿಗೆ ಹೊರಗಡೆಯಲ್ಲ ಸುತ್ತಾಡುವುದು ಕಂಡರೆ ಆಕೆಯ ಭವಿಷ್ಯ ಏನಾಗಬೇಡ ಎಂಬ ಚಿಂತೆಯೂ ಕಾಡತೊಡಗಿತ್ತು. ಇವೆಲ್ಲದರ ಸಲುವಾಗಿ ತನ್ನ ಮನಸ್ಸಿಗೆ ತಾನೇ ಬೇಲಿ ಹಾಕಿಕೊಂಡು ಬದುಕು ನಡೆಸಲು ಶುರು ಮಾಡಿದರು. ಅವರ ಮನದಲ್ಲಿದ್ದ ಚಿಂತೆಯೆಂದರೆ ಆಕೆಯ ಮದುವೆಯನ್ನು ಮಾಡಿ ಮುಗಿಸುವುದು ಅಷ್ಟೇ.

ಬಸ್ಸಿನಿಂದ ಇಳಿದು ತಮ್ಮ ಮನೆಯೊಳಗೆ ಬಂದರು. ಒಂದೆಡೆ ಕುರ್ಚಿಯ ಮೇಲೆ ಕುಳಿತುಕೊಂಡೊಡನೆ ಮಗಳು ಕಾವ್ಯ ಕಾಫಿ ಮಾಡಿಕೊಂಡು ಬಂದು,
“ತಗೊಳ್ಳಮ್ಮ ಕುಡಿ” ಎಂದಳು.
“ಮನೆಯಲ್ಲಿಯೇ ಇದಿಯೇನೆ? ರಿಸಲ್ಟ್ ನೋಡೋಕೆ ಹೊಗ್ತೀನಿ ಅಂದೆ”
“ಹೋಗಿ ಬಂದೆ ಅಮ್ಮ” ಎಂದಳು.
“ಏನಾಯ್ತು?”
ನಿನ್ ಮಗಳು ಯಾವತ್ತಾದ್ರೂ ಫೇಲ್ ಆಗಿದಾಳಾ? ಎಂದು ನಕ್ಕಳು.
“ನನಗೆ ಗೊತ್ತು ಕಣೊ ಬಂಗಾರ ನೀನ್ಯಾವತ್ತೂ ಅಮ್ಮನಿಗೆ ನಿರಾಸೆ ಮಾಡೋದಿಲ್ಲ. ಅಂತ” ಎಂದರು.
ಅವರು ಕಾಫಿ ಕುಡಿಯುವದನ್ನ ನೋಡುತ್ತಾ ಕುಳಿತಳು ಕಾವ್ಯ.
“ಅವನೆಲ್ಲಿ ಹೋದನೆ?”
“ಫ್ರೆಂಡ್ಸ ಜೊತೆ ಹೋದ”

“ಮೂರು ಹೊತ್ತು ಅಲೆಯೋಕೆ ಶುರು ಮಾಡಿದಾನೆ. ನನಗ್ಯಾಕೋ ಅವನ ಬಗ್ಗೇನೆ ಯೋಚನೆ ಶುರುವಾಗ್ತಿದೆ. ತಂದೆ ಇಲ್ಲದೆ ಇರೋನ್ನ ಯಾವ್ ತರ ಬೆಳಸಿದಾಳೆ ನೋಡು ಅಂತ ಜನ ನನಗೆ ಬೈಯ್ಯೋತರ ಎಲ್ಲಿ ಮಾಡಿ ಬಿಡ್ತಾನೋ ಅನ್ನೋ ಭಯ ಶುರುವಾಗಿದೆ” ಎಂದರು.

“ಮಗಳ ಮೇಲೆ ನಂಬಿಕೆ ಇಟ್ಕೊಂಡಿದೀಯಾ! ಮಗನ ಮೇಲೆ ಇಟ್ಕೋಬಾರದ?” ಎಂದು ಮನೆಯೊಳಗೆ ಬಂದ ಕಿರಣ.

“ಇತ್ತೀಚೆಗೆ ನೀನು ಆ ತರ ವರ್ತಿಸ್ತಾ ಇಲ್ವಲ್ಲಪ್ಪ” ಎಂದರು.

“ಫ್ರೆಂಡ್ಸ ಜೊತೆ ಹೋಗಿದೀನಿ ಅಂದ್ರೆ ಸುತ್ತಾಡೋಕೆ ಅಂತ ಯಾಕ ತಿಳ್ಕೊಬೇಕು. ಅವರ ಮನೆಯಲ್ಲಿ ಕುಳಿತುಕೊಂಡು ನೋಟ್ಸ್ ಮಾಡಿಕೊಂಡು ಓದ್ತಾ ಇದಾನೆ ಅಂದಕೋಬಾರದಾ?”

“ನಿನ್ನಲ್ಲಿ ಆ ಲಕ್ಷಣ ಕಾಣ್ತಾ ಇಲ್ವಲ್ಲ” ಎಂದಳು. ಕಾವ್ಯ ನಗುತ್ತಾ.

“ಅಂದ್ರೆ ನನಗೆ ನಿನ್ನಷ್ಟು ಓದೋಕೆ ಬರಲ್ಲ ಅಂತಾನ? ನೀನು ಫಸ್ಟ್‌ಕ್ಲಾಸ್‌ನಲ್ಲಿ ಪಾಸ್ ಆದ್ರೆ ನಾನು ಜಸ್ಟ್ ಪಾಸ್ ಆದ್ರು ಆಗ್ತೀನಿ ನೋಡ್ತಾ ಇರು” ಎಂದನು.

“ಇದು ದೊಡ್ಡ ಸಾಧನೇನಾ?” ಎಂದ್ರು ಕಮಲಮ್ಮ.

“ನೋಡಮ್ಮ ಅವಳು ದೊಡ್ಡವಳು ಜಾಸ್ತಿ ಮಾರ್ಕ್ಸ ತೆಗಿಯಬೇಕು. ನಾನು ಚಿಕ್ಕವನು ಕಡಿಮೆ ಮಾರ್ಕ್ಸ ತೆಗಿಯಬೇಕು ಅಲ್ವಾ?” ಎಂದ.
“ನಿನಗೆ ಬುದ್ಧಿ ಹೇಳೋರಿಗೆ ಬುದ್ಧೀ ಇಲ್ಲ” ಎಂದಳು ಕಾವ್ಯ.

“ಅಕ್ಕಾ ನನಗೊಂದು ಲೋಟ ಕಾಫಿ ಮಾಡು. ಮುಖ ತೊಳೆದುಕೊಂಡು ಬಂದು ಬಿಡ್ತಿನಿ” ಎಂದನು.
ಅವಳು ಅಡುಗೆ ಮನೆಗೆ ಹೋದಳು. ಕಮಲಮ್ಮ ಒಣಗಿ ಹಾಕಿದ ಬಟ್ಟೆ ತಗೆದುಕೊಂಡು ಬರಲೆಂದು ಮೇಲೆ ಬಂದರು.

“ಅಕ್ಕಾ ರಿಸಲ್ಟ್ ಬಂತೇನೆ?” ಎಂದ ಕಿರಣ.
“ಬಂತು ಕಣೊ” ಎಂದಳು.
“ಮತ್ತೆಲ್ಲಿ ನನಗೆ ಸ್ವೀಟ್ಸ್?”
“ಅಮ್ಮನ್ನ ಕೇಳು”
“ಪಾಸಾಗಿರೋದು ನೀನು ತಾನೆ?”
“ದುಡ್ಡು ಕೊಡೋದು ಅಮ್ಮಾ ತಾನೆ?”
“ಹೋಗಲಿ ಕಾಫಿ ಕೊಡು”
ಅವಳು ಅವನಿಗೆ ಕಾಫಿ ನೀಡಿದಳು
“ಅಮ್ಮ ಎಲ್ಲೋ?”
“ಮೇಲುಗಡೆ ಇರಬೇಕು” ಎಂದನು.
ಆಕೆ ಮೇಲುಗಡೆ ಬಂದಳು.

ಕಮಲಮ್ಮನವರು ಎದುರುಗಡೆ ಮನೆಯ ಹುಡುಗ ಹೊರಗೆ ನಿಂತಿರುವುದನ್ನು ಗಮನಿಸುತ್ತಿದ್ದರು. ಅವಳಿಗೆ ಒಂದು ಕ್ಷಣ ಅಚ್ಚರಿಯಾಯಿತು.
ರಾತ್ರಿ ಮೂವರೂ ಊಟ ಮಾಡುತ್ತಾ ಕುಳಿತ್ತಿದ್ದರು. ಕಮಲಮ್ಮ ಯಾವುದೋ ಯೋಚನೆಯಲ್ಲಿ ಮಗ್ನರಾಗಿದ್ದಂತೆ ಕಂಡು ಬಂದಿತು.
“ಏನ್ ಯೋಚನೆ ಮಾಡ್ತಿದೀಯಮ್ಮ?” ಎಂದಳು ಕಾವ್ಯ.

“ಏನಿಲ್ಲ ಕಣೆ, ಊಟ ಮಾಡು” ಎಂದರು.

“ನೀವು ನಮಗೆ ಬಿಟ್ರೆ ಬೇರೆ ಯಾರಿಗೆ ಹೇಳೋಕೆ ಆಗುತ್ತೆ? ಅದೇನು ಹೇಳಮ್ಮ ಪರವಾಗಿಲ್ಲ” ಎಂದ ಕಿರಣ.

“ಅಲ್ಲಾ ನಾವು ಇಷ್ಟು ವರ್ಷದಿಂದ ಮೂವರೇ ಕಷ್ಟಪಡ್ತಾ ಇದೀವಿ. ಬೇರೆ ಯಾರು ತಿರುಗಿ ನೋಡ್ತಾ ಇಲ್ವಲ್ಲ” ಎಂದರು.

“ಓಹ್! ಅದಾ ನಿನ್ ಸಮಸ್ಯೆ. ಈ ಕಾಲದಲ್ಲಿ ಯಾವ ಬಂಧು-ಬಳಗದವರು ಕಷ್ಟಕ್ಕೆ ಸ್ಪಂದಿಸೋದಿಲ್ಲ ಅಂತ ಗೊತ್ತಿಲ್ವ. ಅದೂ ಅಲ್ಲದೆ ಬಡತನದಲ್ಲಿರುವಾಗ ಬಂಧುಗಳ ಮನೆಗೆ ಹೋಗಬಾರದು ಅನ್ನೋ ಗಾದೆ ಇದೆ ಅಂತ ಗೊತ್ತಿದೆ ತಾನೆ?” ಎಂದಳು ಕಾವ್ಯ.

“ಸರಿಯಾಗಿ ಹೇಳಿದೆ ಅಕ್ಕ. ಸಂಬಂಧಗಳು ಯಾವತ್ತಿದ್ರು ಬಂಧನಕ್ಕೆ ಮಾತ್ರ ಸರಿ. ಬೇರೆ ಯಾವುದಕ್ಕೂ ಅವರು ಬರೋದಿಲ್ಲ” ಎಂದ ಕಿರಣ.
“ಹಾಗಲ್ಲ ಕಣ್ರೊ.. .. ಅದೂ.. ..”

“ಅಮ್ಮಾ ಆಫಿಸ್ ಕೆಲಸ ಹೇಗಿದೆ?” ಎಂದ ಕಿರಣ.

“ಚೆನ್ನಾಗಿದೆ ಕಣೋ”

“ಆ ಕೆಲಸ ನನಗೆ ಕೊಡಿಸಿದ್ರೆ ಆಗ್ತಾ ಇರಲಿಲ್ವಾ? ನೀನ್ಯಾಕೆ ಕಷ್ಟ ಪಡಬೇಕಿತ್ತು ಈಗ?” ಎಂದ.

“ಆಗ ನೀನು ಚಿಕ್ಕವನಲ್ವೇನೋ” ಎಂದರು ಕಮಲಮ್ಮ.

“ಅವನಿಗೆ ಅದನ್ನೆಲ್ಲ ಯೋಚನೆ ಮಾಡುವ ಶಕ್ತಿ ಎಲ್ಲಿದೆಯಮ್ಮ. ಬೇಕಾದ್ರು ತಿನ್ನೋದೇಳು. ಹೊರಗಡೆ ಸುತ್ತಾಡೋದೇಳು ಚೆನ್ನಾಗಿ ಮಾಡ್ತಾನೆ ಅಲ್ವೇನೋ” ಎಂದಳು ಕಾವ್ಯ.

“ಅಕ್ಕಾ ಸುಮಸುಮ್ನೆ ಈ ಅಮಾಯಕ ಹುಡುಗನ ಮೇಲೆ ಅಪವಾದ ಹೊರಿಸ್ತಾ ಇದೀಯಾ!” ನಕ್ಕಳು ಕಾವ್ಯ.

“ಏ ಕಿರಣ್ ಕಾಲೇಜ ಶುರುವಾಗೋಕೆ ಇನ್ನ ಹತ್ತು ದಿನ ಟೈಮ್ ಇದೆ. ಹೊರಗಡೆ ಎಲ್ಲೂ ಸುತ್ತ ಬೇಡ. ಅಕ್ಕನ ಜೊತೆ ಮನೆಯಲ್ಲೇ ಇರು.” ಎಂದರು ಕಮಲಮ್ಮ.

“ನಾನು ಯಾವಾಗ್ಲು ಮನೆಯಲ್ಲೇ ಇರ್ತೀನಮ್ಮ” ಎಂದ.

“ನೀನು ಆ ಕಡೆ ಕಲಸಕ್ಕೆ ಹೋದ ಮೇಲೆ ಇವನು ಈ ಕಡೆ ತನ್ನ ಕೆಲಸಕ್ಕೆ ಹೋಗ್ತಾನೆ ಕಣಮ್ಮ” ಎಂದಳು.
“ಅಕ್ಕಾ ಹೇಳಲ್ಲ ಅಂತ ಪ್ರಾಮಿಸ್ ತಗೊಂಡು ಹೇಳ್ತಾ ಇದೀಯಾ. ನಿನಗೆ ಒಳ್ಳೇದಾಗಲ್ಲ ನೋಡು” ಎಂದ.
“ಏನ್ ಮಾತು ಅಂತ ಆಡ್ತೀಯಾ! ಮೊದಲು ಸಾರಿ ಕೇಳು” ಎಂದರು ಕಮಲಮ್ಮ
ಕಿರಣ ಅವಳ ಮುಖವನ್ನು ನೋಡಿ
“ಇವಳನ್ನ ನೋಡಿದ್ರೆ ಸಾರಿ ಕೇಳೋಕೆ ಮನಸ್ಸಾಗಲ್ಲಮ್ಮ” ಎಂದ.
“ಯಾಕಪ್ಪ?” ಎಂದರು.
“ನೋಡೋಕೆ ಒಳ್ಳೆ ದೇವತೆ ತರ ಎಷ್ಟು ಸುಂದರವಾಗಿ ಕಾಣ್ತಾಳೆ ಕ್ಷಮಿಸೋದಿಲ್ವ ನನ್ನ” ಎಂದ.

“ಇವತ್ತು ಮಾತ್ರ ಏನು? ಇಡೀ ಕಾಲೇಜಿನವರೇ ನೀನು ಚೆನ್ನಾಗಿದೀಯಾ ಅಂತಾ ಹೇಳ್ತಾರಂತೆ. ನಮ್ ಏರಿಯಾದವರು ಅಂತಾರೆ. ಇಂತ ಮಕ್ಕಳು ಪಡೆಯೋಕೆ ಪುಣ್ಯ ಮಾಡಿರಬೇಕು ಅಂತ” ಎಂದ ಕಿರಣ.

ಕಾವ್ಯಳಿಗೆ ತನ್ನ ಸೌಂದರ್ಯವನ್ನು ಹೊಗಳಿದ್ದಕ್ಕೆ ಹೆಮ್ಮೆ ಎನಿಸಿತು.

ಆದರೆ ಕಮಲಮ್ಮನವರಿಗೆ ಕಸಿವಿಸಿಯಾಯಿತು. ತನ್ನ ಮಗಳ ಸೌಂದರ್ಯದ ಬಗ್ಗೆ ಇಡೀ ಕಾಲೇಜು, ನಮ್ ಏರಿಯಾದವರು ಮಾತನಾಡುತ್ತಾರೆಂದರೆ ನಮ್ಮ ಮನೆಯ ಮೇಲೆ ಅವರ ಕಣ್ಣು ಬಿದ್ದಿದೆ ಎಂದೇ ಅರ್ಥ. ನಾನಂತು ಕೆಲಸಕ್ಕೆ ಹೋಗಿ ಬಿಡುತ್ತೇನೆ, ಇವನು ಹೊರಗೆ ಹೊರಟರೆ ಮನೆಯಲ್ಲಿ ಕಾವ್ಯ ಒಬ್ಬಳೇ ಉಳಿದು ಬಿಡುತ್ತಾಳೆ. ಇಂದು ಸಂಜೆ ಮಹಡಿ ಮೇಲಿದ್ದಾಗ ಎದುರುಗಡೆ ಮನೆಯ ಹುಡುಗ ಇಣುಕಿಣುಕಿ ತನ್ನ ಮನೆಯನ್ನು ದೃಷ್ಟಿಸುತ್ತಿದ್ದುದು ಕಂಡು ಬಂದಿತ್ತು. ಅವನ ಕಂಗಳು ಕಾವ್ಯಳನ್ನ ಹುಡುಕುತ್ತಿದ್ದವು ಎಂಬುದು ಕಮಲಮ್ಮನವರಿಗೆ ತಿಳಿದು ಹೋಗಿತ್ತು. ನಾನಿರುವ ಸಮಯದಲ್ಲಿಯೇ ಈ ರೀತಿ ಮನೆಯ ಕಡೆ ನೋಡುವವರು ನಾನಿರದ ಸಂದರ್ಭದಲ್ಲಿ ಎಷ್ಟು ಬಾರಿ ನೋಡಿರಬೇಡ? ಕಿರಣಗಂತೂ ಗೆಳೆಯರ ಸಂಖ್ಯೆ ಜಾಸ್ತಿ. ಅವನಿಲ್ಲದ ಸಮಯದಲ್ಲಿ ಹುಡುಕಿಕೊಂಡು ಮನೆಗೆ ಬಂದು ವಿಚಾರಿಸಿದರೆ ಮಗಳ ಗತಿ ಏನಾಗಬೇಡ? ಇಷ್ಟು ದಿನ ತಾನಾಗೀಯೇ ನಿರ್ಲಕ್ಷ್ಯ ಮಾಡಿದೆನೇನೋ? ಎಂಬ ಯೋಚನೆಯಿಂದ ಅವರ ತಲೆ ತಿರುಗತೊಡಗಿತು.

(ಕೃತಿ: ಒಂಟಿ ನಡಿಗೆ (ಕಾದಂಬರಿ), ಲೇಖಕರು: ಲಲಿತಾ ಪವಾರ್‌, ಪ್ರಕಾಶಕರು: ಕನ್ನಡ ಪ್ರಕಾಶನ, ಗಜೇಂದ್ರಗಡ, ಬೆಲೆ: 120/-)