ದೊಡ್ಡಪ್ಪ ಬಂದು ಹೋಗಿದ್ದರ ವಿಚಾರದಲ್ಲಿ ಮನಸ್ಸು ಸುತ್ತಿ ಸುತ್ತಿ ನಿಲ್ಲುತ್ತಿತ್ತು. ರಾತ್ರಿಯಾದರೂ ದೊಡ್ಡಪ್ಪ ಊರು ಮುಟ್ಟಿದ ಬಗ್ಗೆ ಫೋನ್ ಬರಲಿಲ್ಲ. ಆಯಾಸದಲ್ಲಿ ಮರೆತು ಹೋಗಿರಬೇಕೆಂದು ಸಮಾಧಾನಿಸಿಕೊಂಡೆ. ರಾತ್ರಿ ಎಷ್ಟೊ ಹೊತ್ತಿನವರೆಗೂ ನಿದ್ದೆ ನನ್ನ ಬಳಿ ಸುಳಿಯಲಿಲ್ಲ. ಇಂಥ ವಿಷಯಗಳಲ್ಲಿ ನಿದ್ದೆಯೆಂದೂ ಕೂಡ ಜೊತೆಗಾರನಾಗಿರುವುದಿಲ್ಲ. ಕಣ್ಣಿಗೆ ನಿದ್ದೆ ಹತ್ತಿಕೊಳ್ಳುವ ಹೊತ್ತಿಗೆ ಮುಂಜಾವು ಬಂದಿತ್ತು. ಇನ್ನೂ ಅರೆ ಮಂಪರು. ಗಾಢ ನಿದ್ದೆಯೇನ್ನಲ್ಲ. ಮೊಬೈಲ್ ರಿಂಗಣಸಿತು. ಹರೀಶ ಕಾಲ್ ಮಾಡ್ತಿದ್ದಾನೆ. ಏನು ಇಷ್ಟೊತ್ತಲ್ಲಿ ಫೋನ್? ಯಾಕೊ ಸಣ್ಣಗೆ ಭಯವಾಯಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸದಾಶಿವ್ ಸೊರಟೂರು ಕತೆ “ಮುಗಿಲ ದುಃಖ” ನಿಮ್ಮ ಓದಿಗೆ
ನೆನಪುಗಳು ರಚ್ಚೆ ಹಿಡಿದಿವೆ. ಮಳೆಯೇಕೆ ನೆನಪುಗಳನ್ನು ಕಚ್ಚಿಕೊಂಡೆ ಬರುತ್ತದೊ ಗೊತ್ತಿಲ್ಲ. ಈಗೀಗ ನೆನಪುಗಳಂತೆ ಮಳೆಗೂ ಗೊತ್ತು ಗುರಿ ಇದ್ದಂತಿಲ್ಲ. ಸುರಿಯತೊಡಗಿದರೆ ಬಿಡದಂತೆ ಸುರಿಯುತ್ತವೆ. ಇಲ್ಲವೆಂದರೆ ಇಲ್ಲವೇ ಇಲ್ಲ. ಆದರೆ ಇಂದು ಭೂಮಿಯ ದಾಹ ತೀರಿದರೂ, ಆಕೆ ತೃಪ್ತಿಯಿಂದ ಬಿಗಿ ಹಿಡಿತದ ಕೈ ಸಡಿಲಿಸಿದರೂ ಬಿಡುತ್ತಿಲ್ಲ ಮಳೆ. ನಸುಕಿನಿಂದಲೂ ಬೋರ್ ಅನ್ನುವ ಸದ್ದು. ಮಳೆಗೆ ಸವಾಲೊಡ್ಡಿ ಏಳುತ್ತಿದ್ದ ನೆನಪುಗಳನ್ನು ಅದುಮಿಟ್ಟುಕೊಂಡೆ ರೂಮಿನಿಂದ ಆಚೆ ಬಂದೆ.
ಮಗ ಟಿವಿ ಮುಂದೆ ಕೂತಿದ್ದ. ಇಂದು ಮಳೆ ಕಾರಣಕ್ಕೆ ಶಾಲೆಗೆ ರಜೆಯಂತೆ. ಅವನು ‘ಕಾರ್ಟೂನ್ ವಾದಿ’ ಯಾವುದೊ ಕಾರ್ಟೂನ್ ಚಿತ್ರದಲ್ಲಿ ಕಣ್ಣು ಕೀಳಿಸದೆ ಮುಳುಗಿ ಹೋಗಿದ್ದ. ನಾಯಿ ನೋಡಿದ ಬೆಕ್ಕೊಂದು ನನ್ನ ಮರಿಗಳನ್ನು ಕಚ್ಚಿಕೊಂಡು ಓಡಿ ಹೋಗುತ್ತಿತ್ತು ಸಾಗುತ್ತಿರುವ ಚಿತ್ರದಲ್ಲಿ. ಮಗನನ್ನು ಕೂಗಿದೆ ಅವನಿಗೆ ನನ್ನ ಮಾತಿನ ಲಕ್ಷ್ಯವೇ ಇಲ್ಲ. ಹೆಂಡತಿಯ ತಿಂಡಿ ತಯಾರಿ ಅಂತಿಮ ಹಂತದಲ್ಲಿತ್ತು, ಕಳ್ಳ ಹೆಜ್ಜೆ ಇಟ್ಟು ಮೆಲ್ಲನೆ ಅಡುಗೆ ಮನೆ ಸೇರಿ ಅವಳನ್ನು ಹಿಂದಿನಿಂದ ತಬ್ಬಿಕೊಂಡೆ. “ಏನ್ರೀ ಇದು, ಮಗಾ ಇದಾನೆ ಗೊತ್ತಾಗಲ್ವಾ?” ಅಂತ ಛೇಡಿಸಿದಳು. ಆದರೂ ಮುತ್ತಿಡದೇ ಬಿಡಲಿಲ್ಲ. “ತಿಂಡಿ ರೆಡಿ, ಬೇಗ ಸ್ನಾನ ಮುಗಿಸಿ” ಅಂತ ಒತ್ತಾಯಿಸಿದಳು.
ಸ್ನಾನದ ಮನೆಗೆ ನುಗ್ಗಿ ಬೆಚ್ಚನೆಯ ನೀರು ಹೂಯ್ದುಕೊಂಡೆ. ಟಿವಿಯಲ್ಲಿ ತನ್ನ ಮರಿಯನ್ನು ಕಚ್ಚಿಕೊಂಡು ಹೋಗುತ್ತಿದ್ದ ಬೆಕ್ಕು ನೆನಪಾಯ್ತು. ಅದನ್ನು ನೆನಪಾಗಿಟ್ಟುಕೊಂಡು ನೆನಪುಗಳು ಮತ್ತೆ ನುಗ್ಗಿದವು. ನೀರಿನೊಂದಿಗೆ ಹರಿದು ಹೋಗದೆ ಮುತ್ತಿಕೊಳ್ಳುತ್ತಿದ್ದವು. ಕೊಡವಿಕೊಂಡು ಆಚೆ ಬಂದೆ. ಮಗ ಇನ್ನೂ ಟಿವಿಯಲ್ಲಿ ಮುಳುಗಿಯೇ ಇದ್ದ. ಬಟ್ಟೆ ತೊಟ್ಟು ಆಚೆ ಬಂದವನಿಗೆ ಪಲಾವ್ ಕಾದಿತ್ತು. ತಿಂಡಿಯನ್ನು ಮಗನ ಪಕ್ಕಕ್ಕೆ ಎತ್ತಿಕೊಂಡು ಹೋಗಿ ಅವನಿಗೂ ತಿನ್ನಿಸುತ್ತಾ ತಿನ್ನಲು ಆರಂಭಿಸಿದೆ. ಆಕೆ ಇನ್ನೂ ಅದೇನೇನೊ ಮಾಡುತ್ತಾ ಅಡುಗೆ ಮನೆಯಲ್ಲಿಯೇ ಇದ್ದಳು.
ಯಾಕೊ ಬೆಳಗ್ಗೆಯಿಂದ ಊರು ನೆನಪಾಗುತ್ತಿದೆ. ಆ ನೆನಪುಗಳಿಗೆ ನಾನು ಮೌನಿಯಾಗುತ್ತೀನಿ. ಒಂಟಿಯಾಗಿ ಬಿಡ್ತೀನಿ. ಮನಸ್ಸು ಭಾರವಾಗುತ್ತದೆ. ಇಂತಹ ಮಳೆಯಲ್ಲಿ ಅವ್ವ ಗೊಪ್ಪೆ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಅವರವರ ಬಳಿ ನನ್ನ ಬಗ್ಗೆ ಆಕೆ ಕಟ್ಟಿಕೊಂಡು ಕನಸುಗಳನ್ನು ಹೇಳಿಕೊಳ್ಳುತ್ತಿದ್ದಳಂತೆ! ಆದರೆ ಅವ್ವ ಯಾವಂತೂ ಮಗನೇ ನೀನು ಇದೇ ಆಗ್ಬೇಕು ಅಂತ ಹೇಳಲೇ ಇಲ್ಲ. ಬಾಗಿಲು ಬಡಿತದ ಸದ್ದು! ನೆನಪುಗಳ ಲಹರಿಗೆ ಭಂಗ ಬಂತು. ಬಾಗಿಲನ್ನು ಯಾರೊ ದಪದಪ ಬಡಿಯುತ್ತಲೇ ಇದ್ದಾರೆ. ಕಾಲಿಂಗ್ ಬೆಲ್ ಸರಿಯಿದ್ದರೂ ಬಾಗಿಲು ಬಡಿಯುತ್ತಿರುವವರು ಯಾರು? ಅದರಲ್ಲೂ ಇಂತಹ ಮಳೆಯಲ್ಲಿ ಬರುವ ಅವಸರವೇನಿತ್ತು ಅವರಿಗೆ? ಯಾರಿರಬಹುದು? ಒಮ್ಮೆಲೆ ಹತ್ತಾರು ಪ್ರಶ್ನೆಗಳ ಹೆರಿಗೆಯಾಯಿತು.
ಹೆಂಡತಿ ಅಡುಗೆ ಮನೆಯಿಂದಲೇ ಕೂಗಿದಳು.
“ಕಿವಿ ಕೇಳುಸ್ತಾ ಇಲ್ವಾ? ಅದೇನ್ ಸದ್ದು ನೋಡ್ರಿ” ಅವಳ ದನಿಯಲ್ಲಿ ಅಸಹನೆ ಇತ್ತು.
ಯಾವತ್ತೂ ಕೂಡ ಯಾರೂ ಕೂಡ ಅಚಾನಕ್ಕಾಗಿ ಬಂದು ಬಾಗಿಲು ಬಡಿದಿದ್ದರ ನೆನಪಿಲ್ಲ. ಕಿಟಕಿಯಲ್ಲಿ ನೋಡಿ ಕರೆದು ಗುರುತಿಸಿ ಆಮೇಲೆ ಬಾಗಿಲು ತೆಗೆಯುವ ನಗರ ಸಂಪ್ರದಾಯ ನನಗೇಕೊ ಒಗ್ಗಿಕೊಂಡಿರಲಿಲ್ಲ. ತಿನ್ನುತಿದ್ದ ಪಲಾವ್ ಎತ್ತಿಟ್ಟು ಬಾಗಿಲ ಕಡೆ ಹೊರಟೆ. ಬಡಿತದ ಸದ್ದು ಬರುತ್ತಲೇ ಇತ್ತು. ಬಾಗಿಲ ಚಿಲಕ ಸಡಿಲಿಸಿ ತೆಗೆದೆ. ಬಾಗಿಲು ತುಂಬಿಕೊಂಡ ವ್ಯಕ್ತಿಯನ್ನು ನೋಡಿ ಒಂದು ಕ್ಷಣ ಕಾಲವೇ ನಿಂತಂತಾಯ್ತು. ಆಶ್ಚರ್ಯ ಮತ್ತು ಖುಷಿಗಳು ಒಮ್ಮೆಲೆ ಅಪ್ಪಳಿಸಿದವು.
“ದೊಡ್ಡಪ್ಪ..!!” ಹೀಗೆ ಆಚೆ ಬಂದ ನನ್ನ ಮಾತಿನಲ್ಲಿ ಯಾವ ಭಾವವಿತ್ತೊ ಗುರುತಿಸಿಕೊಳ್ಳಲು ಕೂಡ ನನಗೆ ಆಗಲಿಲ್ಲ. ನಾನಷ್ಟು ಸಂಭ್ರದಲ್ಲಿದ್ದೆ!
“ದೊಡ್ಡಪ್ಪ, ಯಾಕೆ ಅಲ್ಲೇ ನಿಂತೆ ಇದ್ದೀರಿ ಬನ್ನಿ ಒಳಗೆ, ಏ ದೊಡ್ಡಪ್ಪ ಬಂದಿದ್ದಾರೆ ಕಣೇ ಬಾ ಇಲ್ಲಿ” ಅಂತ ಅವಳನ್ನು ಕೂಗಿದೆ. ಮಳೆಗೆ ಯಾವ ಭಂಗವಿಲ್ಲದೆ ತನ್ನ ಪಾಡಿಗೆ ತಾನು ಸುರಿಯುತ್ತಿತ್ತು. ಮೋಡಗಳ್ಯಾಕೊ ಮತ್ತಷ್ಟು ಕಪ್ಪಾಗತೊಡಗಿದ್ದವು.
ನನ್ನವಳು ಆಚೆ ಬಂದಿದ್ದೆ. ದೊಡ್ಡಪ್ಪ ಬಂದಿದ್ದ ಕಂಡು ಖುಷಿ ಪಟ್ಟು ಹತ್ತಿರ ಬಂದು “ಹೇಗಿದ್ದೀರಿ ಮಾವ!?” ಅನ್ನುತ್ತಾ ಕಾಲು ಮುಟ್ಟಿ ನಮಸ್ಕರಿಸಿದಳು. ನಾನು ದೊಡ್ಡಪ್ಪನನ್ನು ಕರೆದುಕೊಂಡು ಒಳಗೆ ಬಂದೆ. ಬಟ್ಟೆಗಳು ಒಂದಿಷ್ಟು ಒದ್ದೆಯಾಗಿದ್ದವು. “ಆಟೋ ಇಳಿದು ಬರುವಷ್ಟಲ್ಲೇ ಇಷ್ಟು ಬಟ್ಟೆ ತೋಯ್ತು ನೋಡು..” ಅನ್ನುತ್ತಾ ದೊಡ್ಡಪ್ಪ ಒಳಗೆ ಬಂದರು.
ಹೆಂಡತಿ ಟವಲ್ ತಂದುಕೊಟ್ಟಳು. ದೊಡ್ಡಪ್ಪ ತಲೆಯನ್ನು ಒರೆಸಿಕೊಳ್ಳದೆ ಹಾಗೆ ಕೂತರು. ನನ್ನ ಮಗ ದೊಡ್ಡಪ್ಪನನ್ನು ನೋಡುತ್ತಲೇ ಇದ್ದ. ಕೂಸಿದ್ದಾಗ ಊರಿಗೆ ಹೋಗಿದ್ದಾಗ ನೋಅವನನ್ನು ನೋಡಿದ್ರು ಬಿಟ್ರೆ ಇತ್ತೀಚಿಗೆ ನೋಡಿದ್ದೆ ನೆನಪಿಲ್ಲ.
“ಮಗನೇ ಹೇಗಿದೀಯಪ್ಪ ಕಂದಾ?” ಅಂದ್ರು ದೊಡ್ಡಪ್ಪ. ಮಗ ನಾಚಿಕೆಯಿಂದಲೋ, ಅಪರಿಚಿತ ಮುಖದ ಭಯದಿಂದಲೊ ನನ್ನ ಬಳಿ ಬಂದ. “ದೊಡ್ಡಪ್ಪ ಕಣೋ, ಮಾತಾಡ್ಸು ಮಗಾ..” ಅಂದೆನಾದರೂ ಅವನು ಅದರ ಕಡೆ ಗಮನ ಕೊಡಲಿಲ್ಲ. ನನ್ನವಳು ಟೀ ತಂದು ದೊಡ್ಡಪ್ಪನಿಗೆ ಕೊಟ್ಟಳು.
“ಚೆನ್ನಾಗಿದೀಯಾ ಮಗಳೇ..!?” ಕೇಳಿದರು ದೊಡ್ಡಪ್ಪ.
“ಎಲ್ಲದೂ ನಿಮ್ಮ ಆರ್ಶೀವಾದ ಮಾವ. ನಿಮ್ಮ ಹಾರೈಕೆಯಿಂದ ಚೆನ್ನಾಗಿದ್ದೀವಿ. ಹರೀಶ, ಅರ್ಪಿತ, ಮನೋಹರ ಎಲ್ಲಾ ಹೇಗಿದ್ದಾರೆ ಮಾವ?” ಕೇಳಿದಳು ಹೆಂಡತಿ.
ಟಿವಿಯ ಕಾರ್ಟೂನ್ ಚಿತ್ರದಲ್ಲಿ ಬೆಕ್ಕಿನ ಕತೆ ಮುಗಿದು ಹೋಗಿ ತುಂಬಾ ಹೊತ್ತಾಗಿತ್ತು. ಈಗ ಯಾವುದೊ ವಿಚಿತ್ರ ಪಾತ್ರಗಳು ಬರುತ್ತಿದ್ದವು. ಯಾರು ಯಾರನ್ನು ಹೊಡೆಯುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿರಲಿಲ್ಲ, ತಮ್ಮವರು ತಮ್ಮವರನ್ನೆ ಹೊಡೆದುಕೊಳ್ಳುತ್ತಿದ್ದರು. ಮಳೆ ಈ ಹೊತ್ತಿಗೆ ಕಡಿಮೆಯಾಗುವ ಲಕ್ಷಣಗಳಿರಲಿಲ್ಲ.
ಗಂಭೀರವಾಗಿಯೇ ಇದ್ದ ದೊಡ್ಡಪ್ಪ ನನ್ನವಳ ಮಾತು ಕೇಳಿ ಮತ್ತೊಷ್ಟು ಗಂಭೀರವಾದರು.
“ಹೂಂ ಮಗಳೇ ಎಲ್ಲಾ ಚೆನ್ನಾಗಿದ್ದಾರೆ..” ಅಂದು ಅಲ್ಲಿಗೆ ಆ ಮಾತಿನ ಸರಣೆಯನ್ನು ತುಂಡರಿಸಿದರು.
“ದೊಡ್ಡಪ್ಪ, ಅಡ್ರೆಸ್ ಗೊತ್ತಿರಲಿಲ್ವಲ್ಲ ಹೇಗೆ ಬಂದ್ರಿ?” ಉಳಿಸಿಕೊಂಡಿದ್ದ ಕುತೂಹಲ ಆಚೆ ಬಿದ್ದು ಕೇಳಿತು.
“ದೊಡ್ಡಕೇರಿ ಬಸಪ್ಪ ಕೊಟ್ಟ. ನೀನು ಸಿಕ್ಕಿದ್ದೆಯಂತಲ್ಲ ಕಳೆದ ತಿಂಗಳು” ಅಂದರು ದೊಡ್ಡಪ್ಪ. ದೊಡ್ಡಪ್ಪನಿಗೆ ಸ್ನಾನ ಮಾಡಲು ಹೇಳಿದೆವು. ದೊಡ್ಡಪ್ಪ ನಿತ್ಯ ಸ್ನಾನ ಮಾಡದೇ ಊಟ ಮಾಡುತ್ತಿರಲಿಲ್ಲ. ಆದರೆ ಯಾಕೋ ನಿರಾಕರಿಸಿದರು. ನನ್ನವಳು ತಿಂಡಿ ಎತ್ತಿಕೊಂಡೆ ಬಂದಳು. ದೊಡ್ಡಪ್ಪ ತಿಂಡಿಯನ್ನೂ ಕೂಡ ನಿರಾಕರಿಸಿದರು. ನನ್ನ ಬಲವಂತಕ್ಕೆ ಎರಡು ತುತ್ತು ತಿಂದರು. ದೊಡ್ಡಪ್ಪ ವರ್ತನೆಗಳು ನನ್ನ ಗಮನಕ್ಕೆ ಬಂತು. ಎಲ್ಲದಕ್ಕೂ ಶಬ್ದಗಳ ಲೇಪನವೇ ಬೇಕಿಲ್ಲ. ಉಸಿರೇ ಕಲೆಗಳನ್ನು ಹೇಳುತ್ತದೆ. ಇಷ್ಟು ದಿನಕ್ಕೆ ಎಂದೂ ಬರದ ದೊಡ್ಡಪ್ಪ ನನ್ನನ್ನ ಹುಡುಕಿಕೊಂಡು ಬಂದಿದ್ದಾರೆ. ಅಸಲಿಗೆ ಅವರು ತಮ್ಮ ಹಳ್ಳಿಯನ್ನು ಬಿಟ್ಟು ಹೆಚ್ಚು ಆಚೆಗೆ ಹೋದವರೇ ಅಲ್ಲ. “ಯಾಕೇ ದೊಡ್ಡಪ್ಪ ಒಂಥಾರ ಇದೀರಿ. ಏನಾದರೂ ಸಮಸ್ಯೆಯಾ?” ಕೇಳಿಬಿಡೋಣ ಅನಿಸಿತು. ಹೇಗೆ ಕೇಳುವುದು ಇವನ ಮನೆಗೆ ಬಂದಿದ್ದಕ್ಕೆ ಹೀಗೆ ಕೇಳ್ತಿದ್ದಾನೆ ಅಂದುಕೊಂಡು ಬಿಟ್ಟರೆ? ಮನಸ್ಸು ತಡೆಯಿತು.
“ಒಂದು ಚಾಪೆ ಇದ್ರೆ ಕೊಡಪ್ಪ ಸ್ವಲ್ಪ ಹೊತ್ತು ಮಲಗ್ತೀನಿ” ಅಂದ್ರು ದೊಡ್ಡಪ್ಪ. ಅವರನ್ನು ನನ್ನ ರೂಮಿಗೆ ಕರೆದುಕೊಂಡು ಹೋಗಿ ನನ್ನ ಬೆಡ್ ತೋರಿಸಿ ಇಲ್ಲಿ ಮಲಗಿ ಅಂತ ಹೇಳಿ ಆಚೆ ಬಂದೆ. ಮನಸ್ಸು ಭಾರವಾದಂತಾಗಿತ್ತು. ನನ್ನವಳು ತಿಂಡಿ ತಿನ್ನುತಿದ್ದಳು. ಅವಳ ಕಣ್ಣುಗಳನ್ನು ನೋಡಿದೆ. ಕಣ್ಣುಗಳೇ ಏನೇನೊ ಮಾತಾಡಿಕೊಂಡವು. ದೊಡ್ಡಪ್ಪನ ವರ್ತನೆಗಳು ಭಿನ್ನವಾಗಿರುವುದಕ್ಕೆ ನಮ್ಮ ಕಣ್ಣುಗಳಲ್ಲಿ ಭಯವಿತ್ತು.
ಬೆಳಗ್ಗೆಯಿಂದ ಕದ್ದು ನುಸುಳುತ್ತಿದ್ದ ನೆನಪುಗಳು ಆಣೆಕಟ್ಟು ಹೊಡೆದು ಧುಮಿಕ್ಕುವಂತೆ ಅಬ್ಬರಿಸತೊಡಗಿದವು. ಯಾಕೊ ಒಳಗೆ ಕೂರಲು ಮನಸ್ಸಾಗಲಿಲ್ಲ. ವರಾಂಡದಲ್ಲಿ ಬಂದು ನಿಂತೆ. ಮಳೆ ಸುರಿಯುತ್ತಲೇ ಇತ್ತು ನೆನಪುಗಳಂತೆ. ಒಳಗೆ ಮಗ ಟಿವಿಯಲ್ಲಿ ಮುಳುಗಿ ಹೋಗಿದ್ದ.
ನನ್ನಪ್ಪ ಸತ್ತು ಹೋಗಿದ್ದು ನನಗೆ ಗೊತ್ತಿಲ್ಲ. ಮೂರು ವರ್ಷದವನು ಇದ್ನಂತೆ ನಾನು. ಹಾಗಂತ ಅವ್ವ ಹೇಳ್ತಿದ್ಲು. ಆಮೇಲೆ ನನ್ನ ಪಾಲಿಗೆ ದೊಡ್ಡಪ್ಪನೇ ಅಪ್ಪ. ನಾನು ಹರೀಶ, ಮನೋಹರ ಒಟ್ಟಿಗೆ ಆಡಿಕೊಂಡೆ ಇರ್ತಿದ್ವಿ. ನನ್ನ ದೊಡ್ಡವ್ವ ಅದೆಷ್ಟು ಒಳ್ಳೆಯವರು. ನನ್ನನ್ನು ತಮ್ಮ ಮಗನಂತೆ ನೋಡಿಕೊಂಡರು. ದೊಡ್ಡಪ್ಪ ನನ್ನ ಮತ್ತು ಅವ್ವನ ಜವಾಬ್ದಾರಿ ತೆಗೆದುಕೊಂಡರು. ಇಪ್ಪತ್ತು ಎಕರೆ ಹೊಲವಿತ್ತು. ದೊಡ್ಡಪ್ಪ ನಮ್ಮನ್ನೆಲ್ಲಾ ಓದಿಗೆ ಹಾಕಿದರು. ಅವ್ವನದು ಹೊಲದ ಕೆಲಸ. ದೊಡ್ಡವ್ವನದು ಮನೆಯ ಕೆಲಸ. ಆದರೆ ಅವ್ವ ನನ್ನ ಜೀವನದಲ್ಲಿ ಬಹಳ ದಿನ ಇರಲಿಲ್ಲ. ಮಳೆಯ ಮಧ್ಯೆಯೇ ಅವತ್ತೊಂದಿನ ಸತ್ತು ಹೋದಳು. ಹೊಲದಲ್ಲಿದ್ದ ಆಕೆಯನ್ನು ಸಿಡಿಲು ಬಂದು ಬಡಿದು ಅಪ್ಪನ ಬಳಿ ಕರೆದೊಯ್ದಿತ್ತು. ನಾನಾಗ ಮೂರನೇ ಕ್ಲಾಸ್ ಓದ್ತಿದ್ದೆ. ದೊಡ್ಡಪ್ಪ, ದೊಡ್ಡವ್ವನೇ ನನ್ನ ಪಾಲಿಗೆ ತಂದೆ ತಾಯಿಯಾದರು. ಕಾಲೇಜಿಗೆ ಹೋಗುವ ದಿನಗಳಲ್ಲಿ ಜನ ಹೇಳ್ತಿದ್ರು “ನಿಮ್ ಅವ್ವಗೆ ನೀನು ಬಾಳ ಓದಿ ಗೌರ್ನಮೆಂಟ್ ಕೆಲಸಕ್ಕೆ ಹೋಗಬೇಕು ಅಂತ ಆಸೆ ಇತ್ತು ಕಣಪ. ಅದ್ನ ನಮ್ಮತಾವ ಯಾವಾಗ್ಲೂ ಹೇಳೋರು” ಅನ್ನೋರು ಜನ. ದೊಡ್ಡಪ್ಪ ನನ್ನ ಚೆನ್ನಾಗಿಯೇ ಓದಿಸಿದರು. ನನ್ನ ಬಗ್ಗೆ ದೊಡ್ಡಪ್ಪನಿಗೆ ವಿಶೇಷವಾದ ಕಾಳಜಿಯಿತ್ತು. ನನ್ನೆಲ್ಲಾ ಕ್ರೆಡಿಟ್‌ಗಳು ಅವ್ವನಿಗಿಂತ ದೊಡ್ಡಪ್ಪನಿಗೇ ಸೇರಬೇಕು.
ಕಾಲೇಜಲ್ಲಿ ಪಾಠ ಹೇಳುವ ಕೆಲಸ ಸಿಕ್ಕ ಮೇಲೆ ನಾನು ಊರು ಬಿಟ್ಟು ಬಂದೆ. ದೊಡ್ಡಪ್ಪನೇ ನಿಂತು ಮದುವೆ ಮಾಡಿಸಿದರು. ಹರೀಶ ಹೆಚ್ಚು ಓದಲಿಲ್ಲ. ಮನೋಹರ ಓದಿದ್ದಾನೆ ಕೆಲಸ ಸಿಗದೇ ಮನೆಯಲ್ಲಿಯೇ ಇದ್ದಾನೆ. ಹರೀಶನಿಗೂ ಅರ್ಪಿತನಿಗೂ ಮದುವೆಯಾಗಿ ಒಂದು ಮಗುವಿದೆ. ನಾಲ್ಕು ವರ್ಷದ ಹಿಂದೆ ದೊಡ್ಡವ್ವ ತೀರಿ ಹೋದರು. ಮನೋಹರ ಆಸ್ತಿ ಭಾಗ ಮಾಡು ಅಂತ ದೊಡ್ಡಪ್ಪನ ಹತ್ರ ಹಠಕ್ಕೆ ಬಿದ್ದಿದಾನಂತೆ. ಕಳೆದ ಬಾರಿ ಊರಿಗೆ ಹೋದಾಗ ಬಹಳ ಬೇಸರ ಮಾಡಿಕೊಂಡು ದೊಡ್ಡಪ್ಪ ಈ ಮಾತು ಹೇಳಿದ್ದರು.
“ನನಗೆ ನೀವೆ ಓದಿಸಿ, ಕೊಡಿಸಿದ ನೌಕರಿ ಇದೆ. ಎಲ್ಲಾ ಆಸ್ತಿಯನ್ನು ಇಬ್ಬರಿಗೂ ಹಂಚಿಬಿಡಿ” ಅಂತ ಹೇಳಿದ್ದೆ. ಊರಿಗೆ ಹೋದಾಗಲೆಲ್ಲಾ ದೊಡ್ಡಪ್ಪ ಸೊಸೆ, ಮಕ್ಕಳ ಬಗ್ಗೆ ಸಾಕಷ್ಟು ಅಸಮಾಧಾನದ ಮಾತುಗಳನ್ನು ಆಡುತ್ತಿದ್ದರು. ನಮ್ಜೊತೆ ಬಂದು ಇರೀ ದೊಡ್ಡಪ್ಪ ಅಂತ ತುಂಬಾ ಸರಿ ಒತ್ತಾಯಿಸಿದ್ದೆ. ಅವರು ಸುತಾರಂ ಒಪ್ಪಿರಲಿಲ್ಲ. ಊರು ಬಿಟ್ಟು ಒಂದು ದಿನವೂ ಆಚೆ ಇರುತ್ತಿರಲಿಲ್ಲ. ಊರಿನಿಂದ ಮುನ್ನೂರು ಕಿಲೋಮೀಟರ್ ದೂರವಿರುವ ನಮ್ಮಲ್ಲಿಗೆ ಬಂದು ಹೋಗುವುದು ಅವರಿಗೆ ಒಗ್ಗದ ವಿಷಯವೇ ಆಗಿತ್ತು. ಒಮ್ಮೆಯೂ ಬಂದಿರಲಿಲ್ಲ.
ನುಗ್ಗುತ್ತಿದ್ದ ನೆನಪುಗಳು ಅಡೆತಡೆಯಿಲ್ಲದೆ ಸುರಿದವು. ಸತ್ತ ದಿನಗಳ ನೆನೆದರೆ ಏನು ಪ್ರಯೋಜನ. ನೋಟವನ್ನು ನಾಳೆಗೆ ನೆಡಬೇಕು. ಗೋರಿಗ್ಹೋದ ದಿನಗಳಿಂದ ಏನಾದರೂ ಎತ್ತಿಕೊಂಡು ಬಂದಿದ್ದರೆ ನಾಳೆಗಳಿಗೆ ಬಳಸಿಕೊಳ್ಳಬಹುದು. ನನ್ನ ಪಾಲಿಗೆ ಕಳೆದ ಹೋದ ದಿನಗಳು ಸಾಕಷ್ಟು ಕೊಟ್ಟಿದೆ. ಇಂದಿಗೂ ಅದು ನನಗೊಂದು ಅದ್ಭುತ ಬಂಡವಾಳ.
ನನಗೆ ತುಂಬಾನೇ ಕಾಡಿದ್ದು ದೊಡ್ಡಪ್ಪನ ಧಿಡೀರ್ ಆಗಮನ. ಎಷ್ಟು ಕರೆದರೂ ಬರದವರು ವಿಳಾಸ ಹುಡುಕಿಕೊಂಡು ಬಂದರೆಂದರೆ ಏನೊ ವಿಷಯವಿರಬೇಕು. ದೊಡ್ಡಪ್ಪ ಮರುಕದಂತೆ ಕಾಣುತ್ತಿದ್ದರು. ಕಣ್ಣುಗಳು ಏನನ್ನೊ ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದರೂ ಬದಲಾಗಿ ಅಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಸ್ವಾಭಿಮಾನವೂ ಕೆಲವೊಮ್ಮೆ ನೆಲಕಚ್ಚುತ್ತದಾ? ಯಾರ ವಿಷಯದಲ್ಲಿ ಹೇಗೊ ಆದರೆ ಅದು ದೊಡ್ಡಪ್ಪನ ವಿಷಯದಲ್ಲಿ ಸಾಧ್ಯವೇ ಇರಲಿಲ್ಲ.
ಮಳೆ ಒಂದಿಷ್ಟು ಬಿಡುವು ಕೊಟ್ಟರೆ ದೊಡ್ಡಪ್ಪನನ್ನು ಸಂಜೆ ಆಚೆ ಕರೆದುಕೊಂಡು ಹೋಗಬೇಕು. ಮೌನವಾಗಿ ಕೂತು ಅವರ ಮನಸ್ಸನ್ನು ಮಾತಾಡಿಸಬೇಕು ಅಂದುಕೊಂಡೆ. ಬೆಳಗ್ಗೆ ಏಳುವಾಗಲೇ ಕೈಗೆತ್ತಿಕೊಂಡ ಗಿಬ್ರಾನ್‌ನ ಪ್ರೊಪೆಟ್ ಪುಸ್ತಕ ಈಗ ಒಂದು ಸಮಾಧಾನದ ಗೆಳೆಯನಂತೆ ಅನಿಸತೊಡಗಿತು. ಆದರೆ ಅದನ್ನು ಹಿಡಿದು ಆ ಕ್ಷಣಕ್ಕೆ ಓದಲು ಸಾಧ್ಯವಿರಲಿಲ್ಲ. ಎತ್ತಿಟ್ಟು ಹೆಂಡತಿಯ ಬಳಿ ಬಂದೆ. ಅಡುಗೆಯ ಮನೆಯ ಕ್ಲೀನಿಂಗ್ ಸಾಗಿತ್ತು. ಅವಳು ಹೀಗೆಯೆ ಏನಾದರೂ ಒಂದು ಮಾಡುತ್ತಲೇ ಇರುತ್ತಾಳೆ. ಸುಮ್ಮನೆ ಕೂರುವುದು ಹೆಣ್ಣು ಮಕ್ಕಳಿಗೆ ಒಗ್ಗದ ವಿಷಯ.
ಅವಳಲ್ಲೂ ದೊಡ್ಡಪ್ಪನ ಆಗಮನದ ಬಗ್ಗೆ ಆಶ್ಚರ್ಯವಿತ್ತು. ದೊಡ್ಡಪ್ಪನ ವಿಷಯ ಎತ್ತುತ್ತಿದಂತೆ “ಹರೀಶ, ಅರ್ಪಿತ ಏನಾದರೂ ಬೇಜಾರು ಮಾಡಿರಬೇಕು ರೀ. ಮನೋಹರ ಶುದ್ಧ ಉಡಾಳ, ದೊಡ್ಡಪ್ಪನಿಗೆ ಕೇರ್ ಮಾಡಲ್ಲ. ಅಲ್ಲೇನೊ ಹೆಚ್ಚು ಕಡಿಮೆ ಆಗಿರಬೇಕು ಅನಿಸುತ್ತೆ” ಅಂದಳು. ನಾನು ಅದನ್ನು ನಂಬಲಿಲ್ಲ. ದೊಡ್ಡಪ್ಪ ಅವರಿಗೇನು ಕಡಿಮೆ ಮಾಡಿರಲಿಲ್ಲ. ಹೀಗೆ ಆಗಲು ಸಾಧ್ಯವಿಲ್ಲ ಅಂದುಕೊಂಡೆ.
ಈ ಮಳೆ ಯಾವ ಕೇಡಿಗೆ ಸುರಿತದೊ ಅಂದುಕೊಂಡು ನಡುಮನೆಗೆ ಬಂದು ಕೂತೆ. ಟಿವಿ ನೋಡುತ್ತಾ ನೋಡುತ್ತಾ ಮಗ ಮಲಗಿದ್ದ. ಟಿವಿಯಲ್ಲಿ ಇನ್ನೂ ಯಾವುದೊ ಕಾರ್ಟೂನ್ ಸಾಗಿತ್ತು. ನನ್ನ ಯೋಚನೆಗಳ ಮಧ್ಯೆ ಅದೇನೆಂದು ಗಮನಿಸಲಿಲ್ಲವಾದರೂ ಯಾರು ಯಾರನ್ನೊ ನೂಕುವ, ತಳ್ಳುವ, ಆಚೆ ಕಳುಹಿಸುವುದು ಯಾವುದೊ ಮಂಪರಿನಲ್ಲಿ ಕಾಣಿಸಿದಂತಾಯ್ತು. ಆ ಕಡೆ ಹೆಚ್ಚು ಗಮನ ಕೊಡದೆ ಕೂತೆ.
ಬೆಳಗ್ಗೆಯಿಂದ ಕದ್ದು ನುಸುಳುತ್ತಿದ್ದ ನೆನಪುಗಳು ಆಣೆಕಟ್ಟು ಹೊಡೆದು ಧುಮಿಕ್ಕುವಂತೆ ಅಬ್ಬರಿಸತೊಡಗಿದವು. ಯಾಕೊ ಒಳಗೆ ಕೂರಲು ಮನಸ್ಸಾಗಲಿಲ್ಲ. ವರಾಂಡದಲ್ಲಿ ಬಂದು ನಿಂತೆ. ಮಳೆ ಸುರಿಯುತ್ತಲೇ ಇತ್ತು ನೆನಪುಗಳಂತೆ. ಒಳಗೆ ಮಗ ಟಿವಿಯಲ್ಲಿ ಮುಳುಗಿ ಹೋಗಿದ್ದ.
ಕೂತೆ ಇದ್ದವನು ದೊಡ್ಡಪ್ಪ ಮಲಗಿದ್ದಾರಾ ನೋಡೋಣವೆಂದು ರೂಮಿನತ್ತಾ ಹೋದೆ. ದೊಡ್ಡಪ್ಪ ಕೆಳಗೆ ಚಾಪೆ ಹಾಸಿಕೊಂಡು ಮಲಗಿದ್ದರು. ನಾನು ಬೆಡ್ ತೋರಿಸಿ ಹೋದರೂ ಅದರ ಮೇಲೆ ಮಲಗಿರಲಿಲ್ಲ. ನಿದ್ದೆ ಆವರಿಸಿದ್ದ ದೊಡ್ಡಪ್ಪನ ಮುಖ ನೋಡಿದೆ. ನಿದ್ದೆಯಲ್ಲೂ ಮುಖದ ಮೇಲೆ ಯಾವುದೊ ದುಗುಡ ಕಾಣಿಸುವಂತಿತ್ತು. ದೊಡ್ಡಪ್ಪನನ್ನು ಎಬ್ಬಿಸುವ ಗೋಜಿಗೆ ಹೋಗಲಿಲ್ಲ. ಮತ್ತೆ ಮೊದಲ ಜಾಗಕ್ಕೆ ಬಂದು ಕೂತೆ. ಹೊರಗೆ ಮಳೆ ಸುರಿಯುತ್ತಲೇ ಇತ್ತು. ಹಠ ಹಿಡಿದ ಮಗುವಿನಂತೆ ಬಿಕ್ಕಳಿಸುತ್ತಲೇ ಇತ್ತು. ಇಂದೇಕೆ ಮುಗಿಲಿಗೆ ಈ ಪರಿಯ ದುಃಖ ನನಗೆ ಅರ್ಥವಾಗಲಿಲ್ಲ. ನಮ್ಮ ಆಚೆಯ ಜಗತನ್ನು ಮನುಷ್ಯ ಅರ್ಥಮಾಡಿಕೊಳ್ಳುವಂತಿದ್ದರೆ ಹೀಗಿರುತ್ತಿದ್ದನೆ? ಸಂಜೆ ಆಚೆಗೆ ಹೋಗುವುದು ಸಾಧ್ಯವಾಗಲಿಕ್ಕಿಲ್ಲ ಅನಿಸಿತು.
ದೊಡ್ಡಪ್ಪನನ್ನು ವಾರಗಳ ಕಾಲ ಉಳಿಸಿಕೊಂಡು ಸಮಸ್ಯೆ ಏನಾದರೂ ಇದ್ದರೆ ತಿಳಿದುಕೊಳ್ಳಬೇಕು ಎಂದು ಯೋಚಿಸಿದೆ. ದೊಡ್ಡಪ್ಪ ಈ ಯಾವುದಕ್ಕೂ ಈ ಪರಿ ಸೋಲುವವರೇ ಅಲ್ಲ. ತಲೆ ಕೆಡಿಸಿಕೊಳ್ಳುವವರೇ ಅಲ್ಲ. ಹಾಗಾದರೆ ಇನ್ನೇನು ಆಗಿರಬಹುದು? ಕಲ್ಪನೆಗಳಿಗೆ ಜಗತ್ತಿನಲ್ಲಿರುವ ಅಷ್ಟೂ ಬಣ್ಣಗಳು ಸಾಲುವುದಿಲ್ಲ. ಮನಸ್ಸು ಅತ್ತ ಇತ್ತ ಅಲೆದು ಕಾರಣ ಕಟ್ಟಿಕೊಳ್ಳುವುದನ್ನು ಬಲವಂತವಾಗಿ ನಿಲ್ಲಿಸಿದೆ. ಬರೀ ಲಹರಿಯಲ್ಲೇ ಸಂಜೆ ಮುಟ್ಟಿಬಿಟ್ಟೆ!
ದೊಡ್ಡಪ್ಪ ರೂಮಿನಿಂದ ಹೊರಬಂದಾಗ ಆತ ತಾನೇ ಕತ್ತಲು ಸಂಜೆಯನ್ನು ನುಂಗಿತ್ತು. ಕತ್ತಲಿಗೆ ಹೆದರಿಯೇನೊ ಮಳೆ ನಿಂತಿತ್ತು. ಮುಖ ತೊಳೆದುಕೊಂಡು ಬಂದು ದೊಡ್ಡಪ್ಪ ಕೂತರು. ನಾನೇ ಮಗನನ್ನು ಬಲವಂತ ಮಾಡಿ ಅವರ ಬಳಿ ಕಳುಹಿಸಿದೆ. ಮೊಮ್ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದು ಮಾಡಿದರು. ನನ್ನವಳು ತಂದುಕೊಟ್ಟ ಕಾಫಿಯನ್ನು ಹೀರುತ್ತಾ ಮೊಮ್ಮಗನೊಂದಿಗೆ ಮಾತಾಡತೊಡಗಿದರು. ಮಗ ಹೊಸಬರೆಂಬ ಭಯವನ್ನು ತೊರೆದು ಆಗಲೇ ಪಟಾಪಟ್ ಮಾತಾಡತೊಡಗಿದ್ದ. ಮಗನ ಮಾತುಗಳು ಆಚೆ ಬಿದ್ದಿದ್ದರಿಂದ ಬೆಳಗ್ಗೆಯಿಂದ ಬಿಗುವಾಗಿದ್ದ ವಾತಾವರಣ ಮೆಲ್ಲನೆ ಸಡಿಲವಾಗತೊಡಗಿತು. ದೊಡ್ಡಪನನ್ನು ನಾನೇನು ಕೇಳಲು ಹೋಗಲಿಲ್ಲ. ದೊಡ್ಡಪ್ಪ ನನ್ನ ಕೆಲಸ ಬಗ್ಗೆ ಅದು ಇದು ಕೇಳತೊಡಗಿದರು.
*****
ಬೆಳಗ್ಗೆ ಏಳುವ ಹೊತ್ತಿಗಾಗಲೇ ದೊಡ್ಡಪ್ಪ ಹೊರಟು ನಿಂತಿದ್ದರು. ನಾವು ಎಷ್ಟು ಬಲವಂತ ಮಾಡಿದರೂ ಉಳಿಯುವ ಮನಸ್ಸು ಮಾಡಲಿಲ್ಲ. “ನಿಮ್ಮನ್ನೆಲ್ಲಾ ನೋಡ್ಬೇಕು ಅನಿಸಿತ್ತು. ಬಂದೆ ನೋಡಿದೆ. ಹೋಗ್ತೀನಿ ಊರಲ್ಲಿ ಕೆಲಸ ಇದೆ. ಮತ್ತೆ ಎಂದಾದರೂ ಬರ್ತೀನಿ ಅಂತ ಹೋಗಲು ಹಠ ಹಿಡಿದರು. ಬಲವಂತಕ್ಕೆ ತಿಂಡಿಯಾಗುವವರೆಗೂ ಇದ್ದು ತಿಂಡಿ ಮುಗಿಸಿಕೊಂಡೆ ಹೊರಟರು. ನನ್ನ ಮಗನನ್ನು ಹತ್ತಿರ ಕರೆದು ಮುದ್ದಿಸಿ ಅವನ ಜೇಬಿನಲ್ಲಿ ಒಂದೆರಡು ನೂರರ ನೋಟುಗಳನ್ನಿಟ್ಟು “ಚೆನ್ನಾಗಿ ಓದು ಕಂದಪ್ಪ” ಅಂತ ಹೇಳಿ ಹೊರಡಲು ಅನುವಾದರು. ನನ್ನವಳು ಕೂಡ ತುಂಬಾ ಕೇಳಿಕೊಂಡರು ದೊಡ್ಡಪ್ಪ ಯಾಕೊ ಹೊರಡುವ ನಿರ್ಧಾರದಿಂದ ಹಿಂದೆ ಸರಿಯಿಲಿಲ್ಲ.
“ನೀ ಬರೋದು ಬೇಡ ನಾನು ಆಟೋದಲ್ಲಿ ಹೋಗ್ತೀನಿ” ಅಂದ ದೊಡ್ಡಪ್ಪನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದೇ ನಾನು ಕಾರನ್ನು ಆಚೆ ತೆಗೆದೆ. ಬಲವಂತ ಮಾಡಿ ದೊಡ್ಡಪ್ಪನನ್ನು ಹತ್ತಿಸಿಕೊಂಡೆ. ಮಳೆ ಸಣ್ಣ ವಿರಾಮ ನೀಡಿದಂತಿತ್ತು. ನಾನು ದೊಡ್ಡಪ್ಪ ಮನೆಯಿಂದ ಹೊರಟೆವು. ದೊಡ್ಡಪ್ಪ ಬಂದ ವಿಷಯವನ್ನು ಕೇಳಬೇಕೆಂದು ಮನಸ್ಸು ಒಂದೇ ಸಮನೆ ಕಾಡುತ್ತಿದ್ದರೂ ಮಾತುಗಳು ಆಚೆ ಬರಲು ಹಿಂದೇಟು ಹಾಕಿದವು. ಹೇಗೆ ಕೇಳುವುದು? ದೊಡ್ಡಪ್ಪ ಸುಮ್ಮನೆ ನಮ್ಮನ್ನು ನೋಡಿ ಹೋಗಲು ಬಂದಿದ್ದರೆ ನನ್ನ ಮಾತನ್ನು ಕೇಳಿ ಅವರಿಗೆಷ್ಟು ಬೇಸರವಾಗಬಹುದು? ಯಾಕೆ ಬಂದಿದ್ರಿ ಅಂತ ಕೇಳುವುದು ತೀರಾ ಸಭ್ಯವಲ್ಲವೆಂದು ಮೌವವಹಿಸಿದೆ. ರೈಲ್ವೇ ನಿಲ್ದಾಣ ತಲುಪಿದಾಗ ರೈಲು ಇಂದು ಅರ್ಧ ಗಂಟೆ ತಡವಾಗಿ ಬರುವುದೆಂದು ತಿಳಿಯಿತು. ಎಲ್ಲಾ ಸೇರಿ ಇನ್ನೂ ಮುಕ್ಕಾಲು ಗಂಟೆಯಿತ್ತು. ದೊಡ್ಡಪ್ಪ ನನಗೆ ಮನೆಗೆ ಹೋಗಲು ಹೇಳಿದರು. ನಾನು ರೈಲು ಬಂದ ನಂತರವೇ ಹೋಗುವುದೆಂದು ಹೇಳಿದರು ಬಲವಂತ ಮಾಡಿ ನನ್ನನ್ನು ಕಳಿಸಿದರು. ಯಾಕೊ ಇಂದು ದೊಡ್ಡಪ್ಪ ವಿಚಿತ್ರವೆನಿಸತೊಡಗಿದರು. ಯಾಕೆ ದೊಡ್ಡಪ್ಪ ಹೀಗೆ ಆಡ್ತಿದಾರೆ ಅನಿಸಿತು. ಈಗ ಊರಿಗೆ ಹೋಗಲಿ ಭಾನುವಾರ ನಾನೇ ಊರಿಗೆ ಹೋಗಿ ಮಾತಾಡಿಸಿಕೊಂಡು ಬರೋಣ ಎಂದು ಯೋಚಿಸಿದೆ. ಟಿಕೆಟ್ ತಗ್ದು ದೊಡ್ಡಪ್ಪನ ಕೈಯಲ್ಲಿಟ್ಟು ಹುಷಾರು ಅಂತ ಹೇಳಿ. ಊರು ಮುಟ್ಟಿದ ಕೂಡಲೇ ಫೋನ್ ಮಾಡಲು ತಿಳಿಸಿ ಅಲ್ಲಿಂದ ಹೊರಟೆ. ಕಾರು ಓಡಿಸಲಾಗದಷ್ಟು ಮಳೆ ಸುರಿಯತೊಡಗಿತು. ಮನೆಗೆ ಬಂದು ಡ್ಯೂಟಿಗೆ ಹೊರಡಲು ತಯಾರಿ ನಡೆಸಿದೆ. ದಿನವೆಲ್ಲಾ ದೊಡ್ಡಪ್ಪನ ಯೋಚನೆಯಲ್ಲಿಯೇ ಕಳೆಯಿತು.
*****
ದೊಡ್ಡಪ್ಪ ಬಂದು ಹೋಗಿದ್ದರ ವಿಚಾರದಲ್ಲಿ ಮನಸ್ಸು ಸುತ್ತಿ ಸುತ್ತಿ ನಿಲ್ಲುತ್ತಿತ್ತು. ರಾತ್ರಿಯಾದರೂ ದೊಡ್ಡಪ್ಪ ಊರು ಮುಟ್ಟಿದ ಬಗ್ಗೆ ಫೋನ್ ಬರಲಿಲ್ಲ. ಆಯಾಸದಲ್ಲಿ ಮರೆತು ಹೋಗಿರಬೇಕೆಂದು ಸಮಾಧಾನಿಸಿಕೊಂಡೆ. ರಾತ್ರಿ ಎಷ್ಟೊ ಹೊತ್ತಿನವರೆಗೂ ನಿದ್ದೆ ನನ್ನ ಬಳಿ ಸುಳಿಯಲಿಲ್ಲ. ಇಂಥ ವಿಷಯಗಳಲ್ಲಿ ನಿದ್ದೆಯೆಂದೂ ಕೂಡ ಜೊತೆಗಾರನಾಗಿರುವುದಿಲ್ಲ. ಕಣ್ಣಿಗೆ ನಿದ್ದೆ ಹತ್ತಿಕೊಳ್ಳುವ ಹೊತ್ತಿಗೆ ಮುಂಜಾವು ಬಂದಿತ್ತು. ಇನ್ನೂ ಅರೆ ಮಂಪರು. ಗಾಢ ನಿದ್ದೆಯೇನ್ನಲ್ಲ. ಮೊಬೈಲ್ ರಿಂಗಣಸಿತು. ಹರೀಶ ಕಾಲ್ ಮಾಡ್ತಿದ್ದಾನೆ. ಏನು ಇಷ್ಟೊತ್ತಲ್ಲಿ ಫೋನ್? ಯಾಕೊ ಸಣ್ಣಗೆ ಭಯವಾಯಿತು. ಹೊತ್ತಲ್ಲದ ಹೊತ್ತಿನಲ್ಲಿ ಬರುವ ಫೋನ್ ಗಳು ಭಯವನ್ನು ಹೆಚ್ಚಿಸುತ್ತವೆ. ರಿಸಿವ್ ಮಾಡಿ ಕಿವಿಗಿಟ್ಟುಕೊಂಡೆ. ಅತ್ತ ಹರೀಶನ ಧನಿ. “ಅಣ್ಣಾ ಬೇಗ ಬಾ.. ಅಪ್ಪಾ ಅಪ್ಪಾ..” ಅನ್ನುವುದಷ್ಟೇ ಕೇಳಿಸಿತು. ಮಾತು ತೊದಲುತಿತ್ತು. ಏನೇನೊ ತುಂಬಾ ಗಲಾಟೆಯಿತ್ತು. ಹಲೋ ಹಲೋ ಅಂದು ಫೋನ್ ಕಟ್ ಮಾಡಿ ಮತ್ತೆ ಮಾಡಿದೆ. ಯಾರೂ ಕೂಡ ತೆಗೆಯಲಿಲ್ಲ.
ನನ್ನಾಕೆಯನ್ನು ಎಬ್ಬಿಸಿಕೊಂಡು ಕಾರಿನ ಕೀಲಿ ತಿರುವಿ ಊರಿನ ಕಡೆ ಹೊರಟೆ. ನನ್ನಲ್ಲಿ ಮಾತುಗಳು ಮುದುಡಿ ಹೋಗಿದ್ದವು. ದೊಡ್ಡಪ್ಪ ನಿನ್ನೆ ಬೆಳಗ್ಗೆ ತಾನೇ ಊರಿಗೆ ಹೋಗಿದ್ದರು. ಏನಾಯ್ತು ಅಂತ ಯೋಚನೆಗಳು ತಲೆ ತುಂಬಾ ಬರತೊಡಗಿದವು. ತಲೆಕೊಡವಿ ಕಾರಿನ ವೇಗ ಹೆಚ್ಚಿಸಿದೆ. ಮಳೆಯ ಲೆಕ್ಕವನ್ನು ಇಂದು ನನ್ನ ವೇಗ ಲೆಕ್ಕಿಸಲಿಲ್ಲ.
ವೇಗಕ್ಕೆ ಸೋತು ಊರು ಬೇಗನೇ ಬಂದಿತು. ಅಗಸಿಯ ದಾಟಿ ದೊಡ್ಡ ಕೇರಿಯಲ್ಲಿ ಕಾರು ನುಗ್ಗಿಸಿದೆ. ನಮ್ಮ ಮನೆಯ ಮುಂದೆ ಜನ ಸೇರಿತ್ತು. ದೂರದಲ್ಲೇ ಕಾರು ನಿಲ್ಲಿಸಿ ಲಗುಬಗೆಯಿಂದ ಅತ್ತ ನಡೆದೆ. ಅಳುವ ಧನಿಗಳು, ಸಮಾಧಾನಿಸುವವರ ಧನಿಗಳು ಕೇಳುತ್ತಿದ್ದವು. ಮಳೆಯನ್ನು ಲೆಕ್ಕಿಸದೆ ಜನ ಸೇರುತ್ತಿದ್ದರು. ಜನರ ಗುಂಪಿನಲ್ಲಿ ನುಗ್ಗಿ ಮುಂದೆ ಹೋದೆ. ದೊಡ್ಡಪ್ಪ ನಿಶ್ಚಲವಾಗಿ ಮಲಗಿದ್ದರು. ಅವರ ಮೈಮೇಲೆ ಹೂವಿನ ಹಾರಗಳಿದ್ದವು. ಎಲ್ಲವೂ ಅರ್ಥವಾಯಿತು. ಯಾಕೊ ನನಗೆ ಅಳುವೇ ಬರಲಿಲ್ಲ. ಹೆಜ್ಜೆ ಹಿಂದೆ ಕಿತ್ತು ಈಚೆ ಬಂದೆ. ಮಳೆಯಲ್ಲಿ ನೆನೆಯುತ್ತಾ ಯಾರದೊ ಮನೆಯ ಅಂಗಳದಲ್ಲಿ ಮಳೆಯೊಂದಿಗೆ ಕೂತೆ. ಮಳೆಯೂ ಮತ್ತಷ್ಟು ಬಿಕ್ಕಳಿಸುತ್ತಿತ್ತು. ಯಾರ್ಯಾರೊ ಮಾತಾಡಿಸಲು, ಸಮಾಧಾನಿಸಲು ಬರುತ್ತಿದ್ದರು. ದೂರದಿಂದಲೇ ಅವರನ್ನು ಅಟ್ಟಿದೆ. ನಿನ್ನೆಯಿಂದ ರಚ್ಚೆ ಹಿಡಿದಂತೆ ಅಳುತ್ತಿದ್ದ ಮುಗಿಲ ಕಾರಣ ಈಗ ಸ್ಪಷ್ಟವಾಗಿತ್ತು.
ಮಕ್ಕಳಿಬ್ಬರು ಸೇರಿಕೊಂಡು ಅಪ್ಪನನ್ನು ಹೊರಗೆ ಹಾಕಿದ್ರಂತೆ. ಬೇಜಾರಾಗಿ ನಿನ್ನೆ ಊರು ಬಿಟ್ಟು ಹೋದವರು ಇವತ್ತು ಹೊಳೆಯಲ್ಲಿ ಸಿಕ್ಕಿದಾರೆ. ಎಂಥವರಿಗೆ ಎಂತಹ ಸಾವು. ಇಂತಹ ಮಕ್ಕಳು ಹುಟ್ಟೋದಕ್ಕಿಂತ ಬಂಜೆಯಾಗಿರುವುದೇ ಮೇಲು. ಮಳೆಯ ಸದ್ದಿನ ಮಧ್ಯೆಯೂ ಜನರ ಮಾತುಗಳು ಇಷ್ಟಿಷ್ಟೆ ಕೇಳಿಸುತ್ತಿದ್ದವು. ಮಳೆಯ ಮೀರಿ ಅದರ ಸದ್ದನ್ನು ಮೀರಿ ನನ್ನ ದುಃಖದ ಕಟ್ಟೆ ಒಡೆಯಿತು. ಮನದ ದುಃಖ ಮುಗಿಲ ದುಃಖ ಒಂದಾದವು.
*****
ಕತೆ ಬರೆಯುವ ಮುನ್ನ, ಬರೆಯುವಾಗ ಮತ್ತು ಬರೆದು ಆದ ಮೇಲೂ ತುಂಬಾ ತೊಳಲಾಡಿದ್ದೀನಿ. ನನ್ನಿಂದ ಕತೆಯಲ್ಲಿ ಪಾತ್ರಗಳು ತೊಳಲಾಡಿದವೊ, ಆ ಪಾತ್ರಗಳಿಂದ ನಾನೇ ತೊಳಲಾಡಬೇಕಾಯ್ತೊ ಗೊತ್ತಿಲ್ಲ! ಕತೆಯೂ ಅರ್ಧದವರೆಗೂ ಬೆಳೆದು ನಿಂತು ಮುಂದೆ ಹೋಗಲು ಹಠ ಹಿಡಿಯಿತು. ದೊಡ್ಡಪ್ಪನ ಪಾತ್ರ ಇಲ್ಲಿ ಸಾಯುವುದು ಅದು ನನ್ನ ಆಯ್ಕೆಯಲ್ಲ. ಅದು ಸಮಾಜದ್ದು! ಪೂರ್ಣಕತೆಯೂ ನಮ್ಮ ಬೀದಿಯದ್ದೆ. ನಿಮ್ಮ ಬೀದಿಯದು ಇರಬಹುದು. ಈ ಮನುಷ್ಯರೊಂದಿಗೆ ಎಷ್ಟು ಬೀದಿಗಳಿದ್ದಾವೊ ಒಂಚೂರು ಹೆಚ್ಚು ಕಡಿಮೆ ಅಲ್ಲಿಯದು ಇರಬಹುದು. ದೊಡ್ಡಪ್ಪನ ಪಾತ್ರ ಸಾಯಲೇಬೇಕು ಅನ್ನುವುದನ್ನು ಕತೆಯ ಬದಲು, ಬೀದಿಯ ಬೆಳೆಯುತ್ತಿರುವ ಹೊಸ ಬದುಕು ನಿರ್ಧರಿಸಿದಂತಿದೆ.
ಮತ್ತೆ ಕತೆಯನ್ನು ಅರ್ಧದಿಂದ ಬೆಳೆಸಿಕೊಂಡ ನನಗೆ ಪಾತ್ರವನ್ನು ಉಳಿಸುವ ಪ್ರಯತ್ನಗಳು ಫಲಿಸಲಿಲ್ಲ. ಬಹುಶಃ ಉಳಿಸಿದ್ದರೆ ಬಲವಂತದಿಂದ ಪದಗಳಲ್ಲಿ ತಂದು ನಿಲ್ಲಿಸಿ ಒಂದು ಮಂಗಳ ಹಾಡಿ ಕೈ ಮುಗಿಯುತ್ತಿದ್ದೆ! ಅಲ್ಲಿಗೆ ಅದು ಓದುವವರ ಪಾಡಿಗೆ ಬಿಟ್ಟು ಕೂರಬಹುದಿತ್ತು. ಆದರೆ ಇಲ್ಲಿ ನಮ್ಮ ಬೀದಿಯ ಕತೆಯಾದ್ದರಿಂದ ಇರುವಂತ ಬರೆಯುವುದು ಅನಿವಾರ್ಯವಾಗಿತ್ತು.
ನಾನು ಬರೆದಂತೆ ನನಗೆ ಇಷ್ಟವಾಗಿದ್ದು ಕತೆಯ ನಾಯಕ (ನಿರೂಪಕ) ನ ಪಾತ್ರ. ಅವನ ತೊಳಲಾಟ ಗೊತ್ತಿಲ್ಲದೆ ಮೂಡಿವೆ. ಇದ್ದಕ್ಕಿದ್ದಂತೆ ಆಗಮಿಸುವ ದೊಡ್ಡಪ್ಪ. ಅಚ್ಚರಿಯನ್ನು ತೋರ್ಪಡಿಸಿಕೊಳ್ಳಲಾಗದ ನಾಟಕ, ಯಾಕೆ ಬಂದಿದ್ದಾರೆ ಕೇಳಲಾಗದ ಸಂಕಟ, ದೊಡ್ಡಪ್ಪ ಇದ್ದು ಹೋಗುವವರೆಗೂ ಅವನ ಮತ್ತು ಅವನ ಹೆಂಡತಿ ಅನುಭವಿಸುವ ಒಂದು ವಿಚಿತ್ರ ನನಗೆ ಕೆಲವೊಮ್ಮೆ ಉಸಿರುಗಟ್ಟಿಸುತ್ತೆ! ನನಗೆ ನಾಯಕನನ್ನು ರೂಪಿಸುವಾಗ ಸಹಾಯಕ್ಕೆ ಬಂದಿದ್ದು ಮಳೆ ಮತ್ತು ಟಿವಿಯಲ್ಲಿ ಬರುತ್ತಿದ್ದ ಕಾರ್ಟೂನ್ ಚಿತ್ರಗಳು. ಅವೆಷ್ಟು ಕತೆಗೆ ಪೂರಕವಾದವು ಎಂಬುದನ್ನು ಓದುಗರು ಹೇಳಬೇಕು. ನನ್ನ ಎಲ್ಲಾ ಕತೆಗಳ ಪೈಕಿ ನನಗೆ ಈ ಕತೆ ಕಾಡಿದ್ದು ಸತ್ಯ!
ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ (ಕವನ ಸಂಕಲನ) ಹಾಗೂ ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.
ಸರಾಗವಾಗಿ ಓದಿಸಿಕೊಳ್ಳುವ ಗುಣವೂ, ಓದಿದ ನಂತರ ಬಹಳಷ್ಟು ಕಾಡುವ ಸತ್ವವೂ ಇರುವ ಒಂದು ಸೊಗಸಾದ ಕಥೆ. ಎಲ್ಲವೂ ಸಹಜವೆನಿಸುವ ಬರಹ. ಅಭಿನಂದನೆಗಳು.