ಹಳ್ಳಿಯೂರ ಬದುಕು ಹಗಲು-ರಾತ್ರಿಯ ಪರಿವಿಲ್ಲದೆ ಕತೆ ನೇಯುವ ಕಥಾಕಣಜ. ಸುಮಾ ಸತೀಶ್ ಇಂಥ ಕಣಜದ ಹತ್ತು ಹಲವು ಕತೆಗಳನ್ನು‌ “ರಂಗಿನ ರಾಟೆ” ಸರಣಿಯಲ್ಲಿ ಪ್ರತೀ ಬುಧವಾರ ಕೆಂಡಸಂಪಿಗೆಯ ಓದುಗರ ಮುಂದೆ ಇಡಲಿದ್ದಾರೆ. ಈ ಹೊಸ ಸರಣಿಯ ಮೊದಲ ಕಂತು ಇಲ್ಲಿದೆ

ಬೆಂಕಿಪೆಟ್ಟಿಗೆ

ಅಯ್ ಬೆಂಕಿಪೆಟ್ಟಿಗೇನಾ ಅಂತ ಸಲೀಸಾಗಿ ತಕಳಾಕೆ ಬಡಪೆಟ್ಟಿಗೆ ಯೋನೂ ಆಗಿರ್ನಿಲ್ಲ ಅದು ನಮ್ ಪಾಲ್ಗೆ. ಅದೊಂತರಾ ಮಾಯಾಪೆಟ್ಟಿಗೆ. ಅಲ್ಲಾವುದ್ದೀನನ ದೀಪ್ವ ತಿಕ್ಕಿದ್ರೆ ಯೋನು ಕ್ಯೋಳಿದ್ರೂ ಸಿಕ್ಕೋ ಅಂಗೆ ನಾವ್ ಚಿಕ್ಕೋರಿದ್ದಾಗ ಈ ಪುಟಾಣಿ ಪೆಟ್ಟಿಗೇನಾಗೆ ಯಾಪಾಟಿ ಸಂಪತ್ತು ಅಡಕಿರ್ತಿದ್ವಿ ಅಂಬೋದು ಸಿವಂಗೇ ಗೊತ್ತು. ನಮ್ ಕಾಲುದ್ ಐಕ್ಳ ಚಿನ್ನಿ ಚಿನ್ನಿ ಆಸೆ ಪೂರೈಸಾಕೆ ಅಲ್ಲಾವುದ್ದೀನನ ದೀಪ ಬ್ಯಾಡಾಗಿತ್ತೋ. ಬೆಂಕಿಪಟ್ನ ಜೊತ್ಯಾಗಿದ್ರೆ ಸಾಕಿತ್ತೋ. ಆವಾಗ ನಮ್ಗೆ ಪರ್ಸು ಅನ್ನಾ ಪದ್ವೇ ಗೊತ್ತಿರ್ಲಿಲ್ಲ ಕಣೇಳಿ. ಕವರ್ ಅಂಬೋದು ರೂಡಿನೇ ಇರಲಿಲ್ಲ.‌ ನಮ್ ಲಂಗಗಳಾಗೆ ಜೋಬಿರ್ತಿರಲಿಲ್ಲ. ನಮ್ಗೆ ಜೋಬು, ಕವರ್ರೂ, ಪರ್ಸೂ ಎಲ್ಲ ಇದೇಯಾ. ಒಂತರಾ ಅಕ್ಷಯ ಪಾತ್ರೆ. ಈ ಬುಡ್ಡ ಕಡಲೇಕಾಯಿ ಹೊಟ್ಟೆ ಉಬ್ಬಿಕೊಂಡಿರ್ತೈತಲ್ಲ ಅಂಗೆ ನಮ್ ತಾವಿರೋ ಪೆಟ್ಗೆ ಡುಬ್ಬಕ್ಕೆ ಊದುಕೊಂಡಿರ್ತಿತ್ತು. ಮೆಲ್ಲಕೆ ಮ್ಯಾಗಿನ ರಟ್ಟು ಸರುಗಿಸಿದ್ರೆ ಒಳುಗ್ ನಿಂದ ತುಪತುಪಾಂತ ಸಾಮಾನು ಬೀಳ್ತಿದ್ವು. ಜೀಬಿ ಜೀಬಿ ಒಂದಂಗಲಕ್ಕೆ ಬಂದಿರೋ ಹಳೇ ಸೀಸದಕಡ್ಡಿ, ಪುಸ್ತಕ ಅಳಿಸೋ ರಬ್ರು, ಜಡೆಗೆ ಹಾಕ್ಕಣೋ ರಬ್ರು, ಬಟ್ಟೆ ಪಿನ್ನು, ಕುಂಟೆ ಬಿಲ್ಲೆ ಆಡಾಕೆ ಮಡಗಿಕೊಂಡಿರೋ ಬಚ್ಚಾಗಳು, ಬೋಕಿ ಪಿಂಚು, ಇದ್ರ ಸಂದೀನಾಗೇ ತುಕ್ಕಿಡ್ದು ತುಂಡಾಗಿರೋ ಬಿಲೇಡು, ಶುಕ್ರವಾರದ್ ಶಾರದಾ ಪೂಜೆ ಮುಗಿದ ಮ್ಯಾಗೆ ಕೊಡಾ ತೌಡು ಬಿಸ್ಕತ್ತು, ಶುಂಠಿ ಪೆಪ್ಪರುಮೆಂಟು, ಕಿತ್ತಲೆ ಪೆಪ್ಪರುಮೆಂಟು.. ಒಂದಾ ಎಲ್ಡಾ, ನೆಪ್ಪಿರಾಕೆ ? ಒಟ್ನಾಗೆ ಈ ಪೆಟ್ಟಿಗೇನಾಗೆ ನಾವು ಮಡಗ್ದೆ ಇರೋ ಸಾಮಾನೇ ಇಲ್ವೇನೋ. ಅದೆಂಗ್ ಆ ಸಾಮಾನುಗೋಳು ನಮ್ ಪ್ರಾಣ್ವೇ ಆಗಿದ್ವು ಅಂಬೋದಕ್ಕೆ ಒಂದೆಲ್ಡು ಇಸ್ಯಾವಾ ಯೋಳ್ತೀನಿ..

ಬಿಲೇಡು ಯಾಕೇಂತೀರಾ ? ಅದ್ರ ಉಪ್ಯೋಗ್ವ ಎಷ್ಟೂಂತ‌ ಯೋಳಾಣ. ಇಸ್ಕೂಲಾಗೆ ಸೀಸದಕಡ್ಡಿ ಜೀವಾಕೆ ಬೇಕು. ಯಾರಾನಾ ಪೀಚು ಮಾವುಂಕಾಯಿ ತಂದಿದ್ರೆ ಕುಯ್ಯಾಕೆ ಬೇಕು, ಕಸಕಟ್ಟೇ ಕಸಗಾಯ ತರ ಇರೋ ಚೇಪೇಕಾಯಿ ಬಾಗಾ ಮಾಡಾಕೆ, ಇಸ್ಕೂಲ್ ಬ್ಯಾಗ್ನಿಂದ ಇಳೇ ಬೀಳೋ ದಾರದ ಜೂಲುಗಳ್ನ ಕಸಕಸ ಕತ್ತರಿಸಾಕೆ ಬೇಕಾಗಿರೋ ಆಯುಧ್ವೇ ಅದು. ನಮ್ಮಮ್ಮಂಗೆ ಬಲು ಭಯ. ಕೈ ಕುಯ್ಕೋಬ್ಯಾಡ್ವೇ ಅಂಬ್ತ ಒತ್ತಿ ಯೋಳೋರು. ಅದ್ರ ಕತೇಯಾ ಯೋನ್ ಯೋಳಾಣ. ನಮಪ್ಪ ಗಡ್ಡ ಕೆರ್ಕೊಣಾವಾಗಾ ಪೂರ್ತಿ ಇರ್ತಿತ್ತಾ, ಹಳೇದಾಗಿ ನಮ್ಮ ಕೈಗೆ ಬಂದ ಮ್ಯಾಕೆ, ನಾವು ಎರ್ರಾಬಿರ್ರಿ ಬಳಸೋ ಆಟಕ್ಕೆ ಆ ಬಿಲೇಡು ಮಂಡ ಬಿದ್ದೋಗಿ ಎರಡು ತುಂಡಾಗಿ ಅದ್ರಾಗೂ ಆಕಡೆ ಈಕಡೆ ಮುಕ್ಕಾಗಿ, ಯಾವ ತಾತರಾಯನ ಕಾಲುದ್ದೋ ಅಂಬಂಗಿತ್ತು. ಪೆಪ್ಪರಮೆಂಟಿನ ಬಂಕೆ ಮೆತ್ತಿ ಮ್ಯಾಣದ ತರ ಆದಾಗ ಬಿಲೇಡು ಕೈಗೆ ಅಂಟ್ರಸತಿತ್ತಲ್ಲ ಆವಾಗ, ಅಲ್ಲೇ ನೆಲದ ಮ್ಯಾಗಿರೋ ಮಣ್ಣ ವಸಿ ತಕಂಡು ಬರಬರನೆ ಉಜ್ಜಿ ಲಂಗದಾಗೆ ಒರೆಸಿದ್ರೆ ಕಿಲೀನ್ ಆಗೋಯ್ತು. ಅದು ಎಷ್ಟು ಚೂಪ ಇರ್ತಿತ್ತು ಅಂದ್ರೆ ಯಾರಾನಾ ಪೀಚು ಮಾವಿಂಕಾಯಿ ತಂದ್ರೆ, ಕುಯ್ಯೋಕೆ ಆಯುಧಾಂತ ಕೊಟ್ರೆ ನಮ್ಗೂ ಒಂದು ಪಾಲು ಸಿಕ್ತೈತಲ್ಲಾ ಅಂಬೋ ಆಸೇಗೆ ಬಿಲೇಡು ಕೊಡೋದು. ಆಕಡೆ ಒಬ್ರು ಈಕಡೆ ಒಬ್ರು ಗರಗಸದ ತರ ಬೆಳ್ಳಾಗೆ ಇಡ್ಕೊಂಡು ಗರಗರಾಂತ ಕುಯ್ಯೋದು. ಒಂದು ಬೆರಳಷ್ಟು ಒಳೀಕ್ ಇಳಿಯೋ ಹೊತ್ಗೆ ಉಸಿರು ಬಿಡ್ತಿತ್ತು. ಕಡೀಕೆ ಆ‌ ಮಾವಿಂಕಾಯ್ನ ಲಂಗದಾಗೆ ಸುತ್ತಿ ಬಾಯಾಗೆ ಕಡಿದು ಚೂರು ಮಾಡೋದಾಗ್ತಿತ್ತು.

ಇಂಗಿರ್ಬೇಕಾರೆ ಇನ್ನಾ ನಮ್ಮ ಬೆರಳು ಕುಯ್ಯೋ ಸಕ್ತಿ ಎಲ್ಲಿಂದ ಬಂದಾತು ಆ ಪಾಪದ್ ಬಿಲೇಡ್ಗೆ. ಇನ್ನಾ ಈ ಮೋಟು ಪೆನ್ಸಿಲ್ಲಿನ‌ ಕತೆ ಕ್ಯೋಳಿ. ಅದ್ನ ಬಿಸಾಕ್ದೆ ಇಟ್ಕಣಾದ್ ಯಾಕೇಂದ್ರೆ, ಯಾರಾನಾ ಪೆನ್ಸಿಲ್ಲು ಮರೆತು ಬಂದ್ರೆ ಸಾಲಾ ಕೊಟ್ಟು, ಅವ್ರಿಂದ ಎಲಚಿಕಾಯಿ, ಕಾರೆಕಾಯಿ, ನೇರಳಣ್ಣು ಅದ್ಲುಬದ್ಲು ಮಾಡ್ಕಂತಿದ್ವು. ಮೇಷ್ಟ್ರು ಪಾಠ ಮಾಡಾವಾಗ ಮೆಲ್ಲಕೆ ಎಲಚಿಕಾಯಿ ಬಾಯಾಗೆ ಎಸ್ಕೊಂಡು ಚೀಪೋದು. ಬೀಜ ಉಗೀಬೇಕಲ್ಲ. ಬೆಂಚಡಿನಾಗೆ ಉಗಿದ್ರೆ ಮೇಷ್ಟ್ರು ಕಂಡಿಡ್ದು ನಮ್ಗೇ ಉಗೀತಾರೆ. ಅದ್ಕೇಯಾ ಬೆಂಕಿಪೆಟ್ಟಿಗೇನಾಗೇ ಒಂದು ಮೂಲೇಗೆ ಬಿಸಾಕೋದು. ಆವಾಗ ಒಂತರಾ ಕಸದ ಪೆಟ್ಟಿಗೇನೂ ಆಗ್ತಿತ್ತು ಇದು. ಬೋ ಕೆಲ್ಸಕ್ಕೆ ಉಪ್ಯೋಗ್ಸೋ ಸಾಮಾನು ಈ ಬೆಂಕಿಪೊಟ್ನ. ಇದರ ಮಾತ್ಮ್ಯೆ ವಸಿ ಅಲ್ಲ ಬುಡಿ ಇನ್ನೂ ಸ್ಯಾನೆ ಐತೆ.

ನಮ್ತಾವ ಒಂದೇ ಪೆಟ್ಟಿಗೆ ಇರ್ತಿರ್ಲಿಲ್ಲ. ಯಾವಾಗ್ಲೂ ಇಸ್ಕೂಲ್ ಬ್ಯಾಗಿನಾಗೆ ಇರ್ತಿದ್ದಿದ್ದು ಒಂದೊ ಎಲ್ಡೊ ಆದ್ರೆ, ಮನ್ಯಾಗೆ ಎಂಟೊ ಅತ್ತೋ ಗುಡ್ಡೆ ಹಾಕ್ಕೊಂಡಿರ್ತಿದ್ವಿ. ದಂಡಿಯಾಗಿರುತಿದ್ವಲ್ಲ, ಒಂದ್ರಾಗೆ ಜೀರಂಗಿ ಉಳ ಆಕೋದು. ಅದರ ಮೈಯಿ ಕರ್ರಗೆ, ಡುಮ್ಮಗೆ, ರೇಷ್ಮೆ ತರಾ ಮಿರಿ ಮಿರಿ ಮಿಂಚ್ತಿತ್ತು. ಮೈಮ್ಯಾಗೆ ಹಸ್ರು ಬಣ್ಣದ ಚುಕ್ಕೆ ಚುಕ್ಕೆ ಇರ್ತಿದ್ವು. ಅದೆಂತದೋ ಸೊಪ್ಪು ತಂದು ಆಕ್ದಿದ್ವಿ. ತಿನ್ ಕೊಂಡು ಇರ್ತಿದ್ವು. ಅಂಗೇ ಇನ್ನೊಂದು ಪೆಟ್ಟಿಗೇನ್ಯಾಗೆ ರೇಷ್ಮೆ ಉಳಾ ಬಿಡ್ತಿದ್ವಿ. ಅದ್ಕೆ ವಸಿ ರೇಷ್ಮೆ ಸೊಪ್ಪು ಆಕಿ ಮುಚ್ಚಿಕ್ಕೋದು. ರೇಷ್ಮೆ ಸೊಪ್ಪು ತರ್ಕೊಂಡು ಬರಾಕೆ ಯಾರ್ದಾನಾ ಹೊಲ್ದಾಗೆ ನುಗ್ಗೋದು. ಸೊಪ್ಪಿನ ಜೊತ್ಯಾಗೆ ಅದ್ರ ಗಿಡ್ದಾಗೆ ಬಿಡ್ತಿದ್ದ ಕೆಂಪು, ನೀಲಿ ಬಣ್ಣದ ರೇಷ್ಮೆ ಹಣ್ಣು ಕೀಳೋದು. ನಮ್ ಕೈತುಂಬೋಗಂಟ ಕಿತ್ಕೊಂಡು ಅಲ್ಲಿಂದ ಪರಾರಿ. ಲಂಗದಾಗೆ ಸೊಪ್ಪು, ಹಣ್ಣು ತುಂಬ್ಕೊಂಡು, ಒಂದೊಂದೇ ಹಣ್ಣು ಚಪ್ರುಸ್ಕೊಂಡು ತಿಂತಿದ್ರೆ ಸ್ವರ್ಗ್ವೇ ಇಳ್ದಂಗೆ. ಆಸೊಂದು ರುಚಿ ಅವು. ಮುಷ್ಟಿ ಸೊಪ್ಪು ಕಿತ್ಕೊಂಡು ಬಂದ್ರೆ, ಪೆಟ್ಟಿಗೇಲಿ ನಾಕೆಲೆಗೆ ಮಾತ್ರ ಜಾಗ ಇರ್ತಿತ್ತು. ಆ ಹುಳುಗ್ಳು ಮರಿ ಹಾಕ್ತವೆ ಅಂತ ನಂಬ್ಕೊಂಡು ಇಂತಾ ಕೆಲ್ಸ ಮಾಡ್ತಿದ್ವು. ಮೊದಮೊದ್ಲು ಗೊತ್ತಾಗ್ದಂಗೆ ಪಾಪ ಸ್ಯಾನೆ ದಿನಾ ಪೆಟ್ಟಿಗೇನಾಗೆ ಮುಚ್ಚಿಕ್ಕಿ ಬಿಡ್ತಿದ್ವು. ಅವು ಸತ್ತೋಗ್ತಿದ್ವು. ತುಂಬಾ ಅಳು ಬರ್ತಿತ್ತು. ಸಾಯಿಸಿ ಬಿಟ್ವಲ್ಲ ಅಂತ. ಆಮ್ಯಾಲೆ ಒಂದೇ ದಿನಕ್ಕೆ ಇಲ್ಲಂದ್ರೆ ಎಲ್ಡು ದಿನಕ್ಕೆ ಬಿಟ್ಟು ಬಿಡ್ತಿದ್ವಿ. ಬಿಡಾಕೆ ಮುಂಚೆ ಜೀರಂಗಿ ಜೊತ್ಯಾಗೆ ಆಟ ಆಡ್ತಿದ್ವಿ. ಅದ್ರ ಕಾಲಿಗೆ ದಾರ ಕಟ್ಟಿ ಪೆಟ್ಟಿಗೆ ತೆಗೆಯೋದು, ಅದು ಸರ್ ಅಂಬ್ತ ಹಾರೋವಾಗ, ದಾರ ಎಳೆಯೋದು. ತಿರ್ಗಾ ಸೊಲ್ಪೊತ್ತು ಪೆಟ್ಟಿಗೇಲಿ ಮುಚ್ಚಿಕ್ಕೋದು. ಸೊಪ್ಪು ಹಾಕೋದು. ಇಂಗೇ ಸೊಲ್ಪ ಆಡಿ ಬಿಡ್ತಿದ್ವಿ.

ಅದು ಎಷ್ಟು ಚೂಪ ಇರ್ತಿತ್ತು ಅಂದ್ರೆ ಯಾರಾನಾ ಪೀಚು ಮಾವಿಂಕಾಯಿ ತಂದ್ರೆ, ಕುಯ್ಯೋಕೆ ಆಯುಧಾಂತ ಕೊಟ್ರೆ ನಮ್ಗೂ ಒಂದು ಪಾಲು ಸಿಕ್ತೈತಲ್ಲಾ ಅಂಬೋ ಆಸೇಗೆ ಬಿಲೇಡು ಕೊಡೋದು. ಆಕಡೆ ಒಬ್ರು ಈಕಡೆ ಒಬ್ರು ಗರಗಸದ ತರ ಬೆಳ್ಳಾಗೆ ಇಡ್ಕೊಂಡು ಗರಗರಾಂತ ಕುಯ್ಯೋದು. ಒಂದು ಬೆರಳಷ್ಟು ಒಳೀಕ್ ಇಳಿಯೋ ಹೊತ್ಗೆ ಉಸಿರು ಬಿಡ್ತಿತ್ತು. ಕಡೀಕೆ ಆ‌ ಮಾವಿಂಕಾಯ್ನ ಲಂಗದಾಗೆ ಸುತ್ತಿ ಬಾಯಾಗೆ ಕಡಿದು ಚೂರು ಮಾಡೋದಾಗ್ತಿತ್ತು.

ಇನ್ನೊಂದು ಪೆಟ್ಟಿಗೇನಾಗೆ ಚಕ್ಕಾಬಾರ ಆಡಾಕೆ ಬೇಕಾಗೋ ಹುಣಿಸೆ ಪಿತ್ತ, ಕಡಲೆಬೇಳೆ, ಕಡಲೆಬೀಜ, ಹಲಸಂದಿ ಕಾಳು ಇಂತಾವೆಲ್ಲ ಇರ್ತಿದ್ವು. ಹುಣಿಸೆ ಬೀಜ್ವ ಕಲ್ಲಿನ ಮ್ಯಾಕೆ ಹಾಕಿ ರಪರಪನೆ ತಿಕ್ಕಿ ತಿಕ್ಕಿ ಅರ್ಧ ಮಾಡ್ತಿದ್ವಿ. ವಸಿ ಜಾಸ್ತೀನೇ ಮಾಡಿ ಕೂಡಿಕ್ಕೊಂತಿದ್ವಿ. ಇನ್ನೊಂದ್ರಾಗೆ ಕಾಸು ಕೂಡಿಕ್ಕೋದು. ಐದು ಪೈಸೆ, ಹತ್ತು ಪೈಸೆ ಕೂಡಿಕ್ಕಣಾದು. ನಾಕಾಣೆ, ಎಂಟಾಣೆ ಆದೇಟ್ಗೆ ಬಾಯಿಬಣ್ಣ, ಹಾಲ್ಕೋವ, ಹಾಲೈಸು, ಬೊಂಬಾಯಿ ಮಿಠಾಯಿ, ಲೆಡ್ ಪೆನ್ನು ತಕೊಂಡು ಖುಸಿ ಪಡೋದು. ಆಲೆಮನೆ ಇಕ್ಕಿದಾಗಂತೂ ಬೆಂಕಿಪಟ್ನಕ್ಕೆ ಸ್ಯಾನೆ ಡಿಮಾಂಡು. ಎಳೆಬೆಲ್ಲಾನ ಕಡಲೆಪೊಪ್ಪಿನ ಜೊತ್ಯಾಗೆ ಸೇರ್ಸಿ, ಬೆಂಕಿಪಟ್ನದಾಗೆ ಅದುಮೋದು. ರವಷ್ಟು ಹೊತ್ತಾದ ಮ್ಯಾಲೆ ತೆಗುದ್ರೆ ಅದು ಚೌಕಾಕಾರದಾಗೆ ಬೆಲ್ಲದ ಮಿಠಾಯಿ ಆಗ್ತಿತ್ತು. ಹಿಂಗೇ ಇಸ್ಕೂಲಿಗೆ ಹೋಗೋವಾಗ, ಒಂದ್ರಾಗೆ ಉಪ್ಪು ತಕೊಂಡು ಹೋಗ್ತಿದ್ವು. ಯಾರಾನಾ ಮಾವಿಂಕಾಯಿ, ಚೇಪೇಕಾಯಿ ತಂದ್ರೆ ನಂಚಿಕೊಣಾಕೆ. ಅಂಗೇ ಕುಟ್ಟುಣಿಸೇ ಹಣ್ಣು ಮಾಡ್ಕೊಂಡು, ಸಣ್ಣ ಗುಂಡು ಮಾಡಿ, ಉರಿಸಿದ ಮ್ಯಾಲೆ ಬಿಸಾಕೋ ಬೆಂಕಿ ಕಡ್ಡೀಗೆ ಸಿಗಿಸಿ, ಚೀಪೋದು. ಎಲ್ಲ ಹುಡುಗ್ರಿಗೆ ತೋರ್ಸಿ, ನಾಲ್ಗೇಲಿ ನೀರು ಬರ್ಸಬೇಕಲ್ಲ, ಅದ್ಕೆ ಸ್ವಲ್ಪ ಚೀಪಿ ಪೆಟ್ಟಿಗೇಲಿ ಮುಚ್ಚಿಕ್ಕೋದು. ಆಟಾಡಾಕೆ ಓದಾಗ ಎಲ್ರ ಮುಂದೆ ತೆಗೆದು ತಿನ್ನೋದು. ತಿನ್ನಾ ಪದಾರ್ಥ್ವ ಅದ್ರಾಗೆ ಇಕ್ಬಾರ್ದು ಅಂತ ನಮ್ ಕಾಲ್ದಾಗೆ ದೊಡ್ಡೋರ್ಗೂ ವೊಳೀತಿರ್ಲಿಲ್ಲಪ್ಪ. ನಮ್ಗಂತೂ ಅದ್ರ ನೆದ್ರು ಸುತ ಇರ್ಲಿಲ್ಲ ಬುಡಿ. ಬೇವಿನಕಾಯಿ ಮಾಗಾಕಿ ಅಣ್ಣು ಮಾಡಾಕೆ, ಕಾರೆಕಾಯಿ ಜೊತ್ಯಾಗೆ ಸಣ್ಣ ಕಲ್ಲು ಹಾಕಿ ಮಾಗಾಕಾಕೆ, ನವಿಲುಗರಿ ಮರಿ ಆಕ್ದಾಗ ಇಕ್ಕಾಕೆ ಇಂತಾ ಪೆಟ್ಟಿಗೆಗಳು ಬೋ ಬೇಕಾಗ್ತಿತ್ತು.

ಅವುನ್ನ ಸಂಪಾದ್ಸೋಕೇ ತಿಣುಕ್ತಾ ಇದ್ವಿ. ಪ್ರಾಣೇಶಪ್ಪನ ಅಂಗಡಿ, ಆದಿನಾರಾಯಣಪ್ಪನ ಅಂಗಡಿ ತಾವ್ಕೆ ವಡ್ಡಾಡೋದು. ಅಂಗಡಿ ತಾವ ಬಂದೋರ್ನ ಯಾರ್ನಾರಾ ಕಾಡಿ ಬೇಡಿ ಇಸ್ಕೋಳ್ಳೋದು. ನಮ್ಮ‌ ಮನ್ಯಾಗೆ ಕೆಲ್ಸಕ್ಕೆ ಬರೋ ರಾಮಪ್ಪಂಗೆ ಬೀಡಿ ಕಾಸಾಕೇಂತ ಅಪ್ಪ ಕಾಸು ಕೊಡ್ತಿದ್ರು. ನಾನು ರಾಮಪ್ಪಂಗೆ ಯೋಳ್ತಿದ್ದೆ, ನೋಡಪ್ಪ ನಿಂಗೆ ಕಾಸು ಕೊಡ್ಬೇಕೂಂದ್ರೆ ನಂಗೆ ಕಾಲಿ ಬೆಂಕಿಪಟ್ನ ತಂದುಕೊಡ್ಬೇಕು ಅಂಬ್ತ ಪೀಡ್ಸಿ ವಸೂಲಿ ಮಾಡ್ತಿದ್ದೆ. ಪರೀಕ್ಸೆನಾಗೆ ಯೋಳ್ ಕೊಟ್ಟು ಪಾಸ್ ಮಾಡ್ಸಾಕೆ ಅಂತ ಹುಡುಗೀರತ್ರ ಹೊಸ ನಮೂನಿ ಪೆಟ್ಟಿಗೆ ಲಂಚ ತಕಂಬೋದೂ ನಡೀತಿತ್ತು‌ ಬುಡಿ. ನಾವ್ ಸಣ್ಣೋರಿದ್ದಾಗ ಬೆಂಕಿಪಟ್ನದ ಮ್ಯಾಗೆ ದ್ಯಾವ್ರು ದಿಂಡರ ಚಿತ್ರ, ಊವಿನ ಚಿತ್ರ, ಬೀಗದ ಕೈ, ಚಿರತೆ, ಸೂರ್ಯ ಹಿಂಗೆ ನಮನಮೂನಿ ಇರ್ತಿದ್ವು. ನಮ್ಗೆಲ್ಲಾ ಅವುನ್ನ ಗುಡ್ಡೆ ಆಕ್ಕಣೊ ಆಸೆ.

ಬೀಡಿ ಕಾಸೋರು ಅಂಗಡೀನಾಗೆ ಪಟ್ನವೇ ತಕಾಬೇಕು ಅಂಬೋದಿರ್ಲಿಲ್ಲ. ನಾಲಕ್ ಕಡ್ಡೀನೂ ಕೊಡ್ತಿದ್ರು. ಹಳೇ ಪೆಟ್ಟಿಗೇನಾಗೇ ಅವ್ರು ಮಡಿಕ್ಕೊಂತಿದ್ರು. ಬಿರಬಿರನೆ ಬಿಸಾಕ್ತಿರಲಿಲ್ಲ. ಒಂದೊಂದು ಪೆಟ್ಟಿಗೆ ಗುಡ್ಡಾಕೋಕೂ ನಮ್ ಎಣಾ ಬೀಳ್ತಿದ್ವೋ. ಏಸ್ ದಿನಾ ಕಾಯ್ಬೇಕಿತ್ತು. ಇನ್ನೊಂದು ಇಸ್ಯಾ ಯೋಳ್ಬೇಕು. ಆವಾಗ ಈ ಬೆಂಕಿಕಡ್ಡಿ ತಲೆ ಕೆಂಪುಬಣ್ಣ ಇರ್ತಿತ್ತು. ಉರ್ಸಿ ಬಿಸಾಕಿರೋ ಅವುನ್ನೂ ಕೂಡಿಟ್ಕೊಂಡು ಆಟ ಆಡ್ತಿದ್ವಿ. ಆ ಕಡ್ಡೀಯಾ ಪುಸ್ತಕದಾಗೆ ಗುರ್ತಿಗೇಂತ ಇಕ್ಕೋದು, ಅದ್ನ ನೆಲುದ್ ಮ್ಯಾಗೆ ಜೋಡ್ಸಿ ಮನೆ ಕಟ್ಟಾದು, ಬಾಯ್ನಾಗೆ ಆ ತುದೀಗೆ ಈ ತುದೀಗೆ ಒನೊಂದು ಕಡ್ಡಿ ಸಿಗಿಸಿ, ರಾಕ್ಷಸರ ತರ ಮುಖ ಮಾಡಿ ಕುಣಿಯೋದು, ಉಪ್ಪುಪ್ಪು ಕಡ್ಡೀ ಆಟದಾಗೆ ಮರಳಾಗೆ‌ ಬಚ್ಚಿಕ್ಕೋಕೂ ಬೆಂಕಿ ಕಡ್ಡೀನೇ ಬೇಕಿತ್ತು. ಒನೊಂದ್ ಕಿತ ಯೋನೂ ಸಿಗ್ದೆ ಓದ್ರೆ ಚಕ್ಕಾಬಾರದಾಗೆ ನಮ್ಮ ಕಾಯಿಗ್ಳೂ ಆಗ್ತಿದ್ವು.

ಇನ್ನಾ ಈ ಪೆಟ್ಟಿಗೆ ಉಪ್ಯೋಗ್ಸಿ ಏಸೊಂದು ಆಟ ಆಡ್ತಿದ್ವಿ. ಪೆಟ್ಟಿಗೆಗಳ್ನ ಸಾಲೂಕೂ ಜೋಡ್ಸೋದು. ಗುಡ್ಲು ಆಕಾರ, ಚೌಕ, ಗುಂಡಕೆ ಬ್ಯಾರೆ ಬ್ಯಾರೆ ರಕ ಜೋಡ್ಸಿ, ಮೆಲ್ಲಕೆ ತಳ್ಳಿದ್ರೆ ಒಂದಾದ್ ಮ್ಯಾಗೊಂದು ಪುಸಪುಸಾಂತ ಬೀಳ್ತಿದ್ರೆ ಮಜ್ವೋ ಮಜಾ. ಪೆಟ್ಟಿಗೇ ಮದ್ಯಕ್ಕೆ ತೂತ ಇಕ್ಕಿ ದಾರ ತೂರಿಸೋದು. ಅದ್ನ ಕಡ್ಡೀಗೆ ಕಟ್ಟಿ ಗಿರಗಿಟ್ಲೆ ತರ ತಿರುಗುಸುದ್ರೆ ಗಿರಗಿರಾಂತ ತಿರುಗ್ತಿತ್ತು.‌ ಪಟ್ನ ಕತ್ರಿಸಿ ಎಲ್ಡು ಬಾಗ ಮಾಡಿ ಆ ರಟ್ಟುಗಳ್ನ ಮಣ್ಣಿನ ಗುಡ್ಡೆ ಮ್ಯಾಗೆ ಜೋಡ್ಸಿ, ಆಟು ದೂರಕ್ಕೋಗಿ, ಅಗುಲ್ವಾಗಿರೋ ಕಲ್ ತಕೊಂಡು ಬೀಸೋದು, ಗುಡ್ಡೆ ಮ್ಯಾಗ್ಲಿಂದ ಆ ರಟ್ಟುಗ್ಳು ಚಕ್ ಅಂಬ್ತ ಎಗರಿ ಬೀಳೋವು. ಯಾರು ಜಾಸ್ತಿ ಎಗುರ್ಸ್ತಾರೆ ಅಂಬೋದು ಪೈಪೋಟಿ ಇಸ್ಯ ಆಗಿತ್ತು.

ಇಂಗೆ ಪೆಟ್ಟಿಗೆ ಸ್ಯಾನೆ ಉಪ್ಯೋಗುಕ್ಕೆ ಬರ್ತಿತ್ತಲ್ಲ. ಸುಲ್ಬುಕ್ಕೆ ಸಿಗ್ತಿರ್ಲಿಲ್ಲ. ಆಸೇಗ್ ಬಿದ್ದು ಕದೀತಿದ್ವಿ.‌ ಹೂ ಕಣೇಳಿ.‌ ಮನ್ಯಾಗೆ ನಾನೊಂದು‌ ಮೂಲ್ಯಾಗೆ, ನಮ್ಮಕ್ಕ ಒಂದು ಮೂಲ್ಯಾಗೆ ಅವ್ರವ್ರ ಪೆಟ್ಟಿಗೆ ಬಚ್ಚಿಕ್ಕಿರ್ತಿದ್ವಿ. ಅವ್ಳು ಆಡಾಕೋದಾಗ ನಾನು, ನಾನ್ ಇಲ್ದಾಗ ಅವ್ಳು ಪೆಟ್ಟಿಗೆ ಎಗುರ್ಸೋದು. ನಾವೂ ಸುಮ್ಕೆ ಬುಟ್ಟೇವಾ. ಎಣುಸ್ಕೊಂಡೇ ಮಡಗಿರ್ತಿದ್ವಿ. ಆಮ್ಯಾಕೆ ರಾಮಾಣ್ಯ ಮಾಬಾರ್ತ ಸುರು ಅಚ್ಕಂಡು ಮೊದ್ಲು ಬಾಯಾಗೆ ಬೈದಾಟ ನಡೀತಿತ್ತು. ಕೈ ಎತ್ತೋ ವೊತ್ಗೆ ನಮ್ಮಮ್ಮ ಕೋಲು ಇಡ್ಕಂತಿದ್ಲು. ನಾವೂ ಬ್ಯಾರೆ ಗತಿ ಇಲ್ದೆ ಸಾಂತಿ ಬಾವುಟ ಆರ್ಸಿ ತಿಂಬಾಕೇನಾರೂ ಇದ್ರೆ ಉಡೀಕ್ಕೊಂಡು ಹೋಗ್ತಿದ್ವಿ.‌

ಇಂಗೇ ಬೆಂಕಿಪೆಟ್ಟಿಗೆ ನಮ್ ಬಾಲ್ಯಕಾಲ್ದಾಗೆ ಅಷ್ಟೈಶ್ವರ್ಯ ಮಡಗೋ ತಿಜೋರೀನೂ ಆಗಿತ್ತು. ಆಟುದ್ ಸಾಮಾನೂ ಆಗಿತ್ತು. ಉರಿಸಿ ಬಿಸಾಕಿರೋ ಕಡ್ಡೀನೂ ಬಿಡ್ದಂಗೆ ಕೂಡಿಕ್ಕೊಂತಿದ್ದ ಆ ಎಳೆ ವಯಸು ಚೆಂದಾನೋ ಚೆಂದ ಇತ್ತು.