ಮಳೆಗಾಲ ಮುಗಿದ ಮೇಲೆ ಊರಿನ ಬೀದಿ ಶಾಲೆಯ ಅಂಗಳ, ದೇವಸ್ಥಾನದ ಮುಂದಿನ ಬಯಲು ಎಲ್ಲವೂ ನಮ್ಮ ಆಟಕ್ಕೆ ಸೂಕ್ತ ಎಂದು ಭಾವಿಸಿ ಆಡುತ್ತಿದ್ದೆವು. ಮುಟ್ಟಾಟ ಅಥವಾ ಹಿಡಿಯೋ ಆಟಕ್ಕೆ ಬಹಳ ಪ್ರಾಧಾನ್ಯವಿತ್ತು. ಅಟ್ಟಿಸಿಕೊಂಡು ಹೋಗಿ ಹಿಡಿಯುವುದು ಒಂಥರಾ ಖುಶಿ ಕೊಡುತ್ತಿತ್ತು. ಇದರ ಇನ್ನೊಂದ ರೂಪವೇ ʻಕೂತು ಹಿಡಿತಿಯೋ ನಿಂತು ಹಿಡಿತಿಯೋʼ ಎನ್ನುವುದು. ಕೇಳಿದಾಗ ನಿಂತು ಎಂದರೆ ನಿಂತಾಗ, ಇಲ್ಲವೆ ಕುಳಿತು ಎಂದರೆ ಕುಳಿತಾಗ ಅವರನ್ನು ಮುಟ್ಟಬೇಕು, ಆಗ ಅವರು ಆಟದಿಂದ ಹೊರಕ್ಕೆ. ನಿಂತ ಆಟ ಎಂದವರು ನಿಂತಿರುವಾಗ ಹತ್ತಿರ ಹೋಗುತ್ತಲೇ ಕುಳಿತುಬಿಡುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ಮೂರನೆಯ ಕಂತು
ಅವಳಿಗೆ ಯಾರೋ ಹೇಳುತ್ತಿದ್ದರು ʻನೀನು ನಮ್ಮ ಬೀದಿಗೆ ಬಂದಾಗ ಇಷ್ಟೇ ಚಿಕ್ಕ ಮಗುʼ ಅಂತ. ಅವಳ ಮಗುವಿಗೆ ಈಗ ಆರು ತಿಂಗಳು. ಅದಕ್ಕೆ ಅವಳು ನಗುತ್ತ ಹೇಳಿದಳು, ʻಹೌದಂತೆ ಅಮ್ಮ ಕೂಡ ಹಾಗೇ ಹೇಳಿದರು. ನಾನು ಇಲ್ಲಿ ಬೀದಿಯ ಎಲ್ಲ ಮಕ್ಕಳೊಂದಿಗೆ ಆಡುತ್ತ ದೊಡ್ಡವಳಾದೆ. ಆದರೆ ನನ್ನ ಮಗುವಿಗೆ ಆ ದೇಶದಲ್ಲಿ ಅಂತಹ ಅದೃಷ್ಟವಿಲ್ಲʼ ಈಗ ವಿಶ್ವವೇ ಒಂದು ಹಳ್ಳಿ ಎನ್ನುವ ಪರಿಕಲ್ಪನೆ ಬೆಳೆಯುತ್ತಿದ್ದು ಅನೇಕರು ತಮ್ಮ ಬದುಕನ್ನು ಅರಸಿಕೊಂಡು ಯಾವ್ಯಾವುದೋ ದೇಶಗಳಿಗೆ ಹೋಗುವುದು ಸಾಮಾನ್ಯ ಎಂದಾಗಿಬಿಟ್ಟಿದೆ. ಹೀಗೆ ಹೋದವರು ಆಯಾ ದೇಶದ ಅನುಕೂಲಗಳಿಗೆ ಒಗ್ಗಿಕೊಂಡಂತೆ ಅನನುಕೂಲಗಳನ್ನು ಇದ್ದಂತೆ ಸ್ವೀಕರಿಸಲೇ ಬೇಕಾಗುತ್ತದೆ.
ನಮ್ಮ ದೇಶದಲ್ಲಿ ಮಹಾನಗರಗಳನ್ನು ಬಿಟ್ಟರೆ ನಗರ, ಪಟ್ಟಣಗಳಲ್ಲಿ ಮಕ್ಕಳು ಬೀದಿಗಳಲ್ಲಿ ತಮ್ಮ ವಾರಿಗೆಯವರೊಂದಿಗೆ ಆಡುವುದನ್ನು ಈಗಲೂ ಕಾಣಬಹುದು. ದೊಡ್ಡ ದೊಡ್ಡ ನಗರಗಳಲ್ಲಿ ಮನೆಯ ಬಾಗಿಲಿಗೇ ಹಲವು ಸವಲತ್ತುಗಳು ಒದಗಿ ಬರುತ್ತವೆ. ಹಾಗಂತ ಎಲ್ಲವೂ ಅನುಕೂಲಗಳೇ ದೊರಕುತ್ತವೆ ಎನ್ನಲಾಗದು. ಅನೇಕ ಅನುಕೂಲಗಳನ್ನು ಕಳೆದುಕೊಳ್ಳುವುದೂ ಇದೆ. ಅವುಗಳಲ್ಲಿ ಬಹಳ ಮುಖ್ಯವಾದವು ಮಕ್ಕಳಿಗೆ ಸಿಗುವ ಆಡುವ ಸೌಭಾಗ್ಯ. ಮಕ್ಕಳಿಗೆ ಆಡಲೆಂದೇ ಇರುವ ಉದ್ಯಾನವನಗಳು ತೀರ ವಿರಳ. ಇರುವ ಪಾರ್ಕುಗಳು ಹಿರಿಯರಿಗೇ ಸಾಲದು. ಇವನ್ನೆಲ್ಲ ಗಮನಿಸುತ್ತಿದ್ದರೆ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ.
ಸುಮಾರು ಅರವತ್ತು ವರ್ಷಗಳ ಹಿಂದೆ ಗ್ರಾಮೀಣ ಭಾಗದ ಮಕ್ಕಳಿಗೆ ಆಡಲು ಯಾವ ಪರಿಕರಗಳೂ ಇರಲಿಲ್ಲ. ನಗರದ ಮಕ್ಕಳಿಗೆ ಹೋಲಿಸಿದರೆ ಈಗಲೂ ಅವು ಕಡಿಮೆಯೇ. ನಾವಾಗ ಪ್ರಕೃತಿಯಲ್ಲಿ ಸಿಗುತ್ತಿದ್ದ ವಸ್ತುಗಳನ್ನು ಬಳಸಿಯೇ ಆಡುವುದನ್ನು ರೂಢಿಸಿಕೊಂಡಿದ್ದೆವು. ಮಣ್ಣು, ಕಲ್ಲು, ಎಲೆ, ಕೋಲು, ಹಗ್ಗ ಇವುಗಳೇ ನಮಗೆ ಸಿಗುತ್ತಿದ್ದ ಪರಿಕರಗಳು. ಆದರೆ ಆಡುವ ಜೊತೆಗಾರರಿಗೆ ಹುಡುಕುವ ಪ್ರಮೇಯವಿರಲಿಲ್ಲ. ಮನೆಯಲ್ಲಿ ಸಾಕಷ್ಟು ಮಕ್ಕಳು ಇರುತ್ತಿದ್ದೆವು. ಅಕ್ಕಪಕ್ಕದ ಮನೆಯಲ್ಲಿಯೂ ಮಕ್ಕಳಿರುತ್ತಿದ್ದುದರಿಂದ ಆಡುತ್ತ ಬೆಳೆದೆವು. ನಾವು ಆಡುವ ಆಟಗಳು ಮಳೆಗಾಲ ಮತ್ತು ಬೇಸಿಗೆಯಲ್ಲಿ ಭಿನ್ನವಾಗಿರುತ್ತಿದ್ದವು. ಜೋ ಎಂದು ಸುರಿಯುತ್ತಿರುವ ಮಳೆಯಲ್ಲಿ ಒಳಾಂಗಣದ ಆಟಗಳನ್ನು ಆಡುವುದು ಅನಿವಾರ್ಯವಾಗಿತ್ತು. ಹೆಣ್ಣುಮಕ್ಕಳು ಪಗಡೆ, ಕಲ್ಲು, ಚನ್ನೆಮಣೆ, ಉಬುಸುವ ಹರಳು ಮುಂತಾದ ಆಟಗಳನ್ನು ಆಡಿದರೆ ಗಂಡುಮಕ್ಕಳು ಗೋಲಿ, ಬುಗುರಿ, ಹುಲಿ-ದನ ಆಟಗಳನ್ನು ಆಡುವುದಿತ್ತು. ಪಗಡೆ ಆಡುವುದಕ್ಕೆ ನಮಗೆ ಪಗಡೆ ಕಾಯಿಗಳು ಸಿಗುತ್ತಿರಲಿಲ್ಲ. ಕಲ್ಲುಗಳನ್ನು ಇಟ್ಟುಕೊಂಡು ಆಡುತ್ತಿದ್ದೆವು. ಚೌಕದ ಮನೆಗಳನ್ನು ಹಾಕಲು ನಾವು ಬರೆಯುತ್ತಿದ್ದ ಬಳಪವೇ ನಮ್ಮ ಸಾಮಗ್ರಿಯಾಗಿತ್ತು. ಹೀಗೆಯೇ ಆಡುವ ಹುಲಿ, ದನದ ಆಟದ ಗೆರೆಗಳನ್ನು ಬಳಪದಲ್ಲಿಯೇ ಎಳೆಯಲಾಗುತ್ತಿತ್ತು. ಹುಲಿ ದನದ ಆಟವನ್ನು ಗಂಡು, ಹೆಣ್ಣು ಎನ್ನದೆ ಎಲ್ಲರೂ ಸೇರಿ ಆಡಲಾಗುತ್ತಿತ್ತು.
ಮಕ್ಕಳನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಂಡು ಕುಂಟು ಕುಂಟು ಕುಲ್ಲಕ್ಕಿ ಎನ್ನುವ ಆಟವನ್ನು ಆಡುತ್ತಿದ್ದೆವು. ಒಂದು ಗುಂಪಿನ ಯಜಮಾನ ಕುಂಟುತ್ತ ಹೋಗಿ ಇನ್ನೊಂದು ಗುಂಪಿನ ಯಜಮಾನನ ಬಳಿ ನಿಂತು ʻಕುಂಟು ಕುಂಟು ಕುಲ್ಲಕ್ಕಿʼ ಎನ್ನುತ್ತಿದ್ದಂತೆ ಅವನು ಕೇಳುತ್ತಿದ್ದ ʻಏನ್ ಬಂದೆ ಬೆಳ್ಳಕ್ಕಿʼ ಅಂತಲೋ ʻಗಡಗಡಾಸ್ ಪೈʼ ಅಂದರೆ ʻಏನ್ಬಂದೆ ಬೀಸ್ ಪೈʼ ಅಂತಲೋ ಕೇಳಲಾಗುತ್ತಿತ್ತು. ಅದಕ್ಕೆ ಬಂದವನು(ಳು) ʻಹಬ್ಬಕ್ಕೊಂದು ಕುರಿ ಬೇಕಾಗಿತ್ತುʼ ಎನ್ನುವ ಬೇಡಿಕೆಯನ್ನು ಇಡುತ್ತಿದ್ದಂತೆ ತಮ್ಮ ಬಳಿ ಇರುವ ಒಬ್ಬರನ್ನು ಕಳಿಸುತ್ತಿದ್ದರು. ಇವರ ಬಳಿಯಲ್ಲಿರುವವರು ಖರ್ಚಾಗುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಟ ಪ್ರಾರಂಭವಾಗುತ್ತಿತ್ತು. ಈ ಆಟಕ್ಕೆ ಕೊನೆ ಮೊದಲು ಅಂತ ಇರದೆ ಎಷ್ಟು ಹೊತ್ತು ಬೇಕಾದರೂ ಆಡಬಹುದಿತ್ತು.
ಎಲ್ಲರೂ ಸೇರಿ ಆಡುತ್ತಿದ್ದ ಟೋಪಿ ಆಟವೂ ನಮಗೆ ಖುಶಿಕೊಡುತ್ತಿತ್ತು. ಎಲ್ಲರೂ ವೃತ್ತಾಕಾರದಲ್ಲಿ ಕುಳಿತುಕೊಳ್ಳುತ್ತಿದ್ದರು. ಒಬ್ಬರು ಕುಳಿತವರ ಸುತ್ತಲೂ ತಿರುಗುತ್ತ ಟೋಪಿಯನ್ನು ಒಬ್ಬರ ಹಿಂದೆ ಗೊತ್ತಾಗದಂತೆ ಇಟ್ಟರೆ ಅದನ್ನು ಅರಿತು ಆ ವ್ಯಕ್ತಿ ಎದ್ದು ಓಡಬೇಕಿತ್ತು. ಇಲ್ಲದಿದ್ದರೆ ಅವರನ್ನು ಎಬ್ಬಿಸಿ ಟೋಪಿ ಇಟ್ಟವರು ಅವರನ್ನು ಟೋಪಿಯಲ್ಲಿ ಹೊಡೆಯುತ್ತ ಸುತ್ತಿಸುತ್ತಿದ್ದರು. ಅವರ ಜಾಗವನ್ನು ಆಕ್ರಮಿಸುತ್ತಿದ್ದರು. ʻಬಲ್ಲವನೆ ಬಲ್ಲ ಬೆಲ್ಲದ ಸವಿಯʼ ಎನ್ನುವಂತೆ ಇಂತಹ ಆಟಗಳನ್ನು ಆಡಿದವರಿಗೇ ಗೊತ್ತು ಅದರ ಮಜಾ ಏನೆಂದು.
ನಾವಾಗ ಪ್ರಕೃತಿಯಲ್ಲಿ ಸಿಗುತ್ತಿದ್ದ ವಸ್ತುಗಳನ್ನು ಬಳಸಿಯೇ ಆಡುವುದನ್ನು ರೂಢಿಸಿಕೊಂಡಿದ್ದೆವು. ಮಣ್ಣು, ಕಲ್ಲು, ಎಲೆ, ಕೋಲು, ಹಗ್ಗ ಇವುಗಳೇ ನಮಗೆ ಸಿಗುತ್ತಿದ್ದ ಪರಿಕರಗಳು. ಆದರೆ ಆಡುವ ಜೊತೆಗಾರರಿಗೆ ಹುಡುಕುವ ಪ್ರಮೇಯವಿರಲಿಲ್ಲ. ಮನೆಯಲ್ಲಿ ಸಾಕಷ್ಟು ಮಕ್ಕಳು ಇರುತ್ತಿದ್ದೆವು. ಅಕ್ಕಪಕ್ಕದ ಮನೆಯಲ್ಲಿಯೂ ಮಕ್ಕಳಿರುತ್ತಿದ್ದುದರಿಂದ ಆಡುತ್ತ ಬೆಳೆದೆವು.
ಗುಂಪಾಗಿ ಆಡುವಷ್ಟು ಮಕ್ಕಳಿಲ್ಲದಿದ್ದರೆ ಹೆಣ್ಣುಮಕ್ಕಳು ಮಣ್ಣಿನಿಂದ ಪಾತ್ರೆ, ತುಳಸಿಕಟ್ಟೆ ಇತ್ಯಾದಿಯಾಗಿ ಮನೆಯಲ್ಲಿ ಬಳಸುತ್ತಿದ್ದ ಪರಿಕರಗಳನ್ನು ಅನುಕರಣೆ ಮಾಡುತ್ತ ಅಮ್ಮಂದಿರ ಹತ್ತಿರ ʻಈ ರೀತಿ ಮಣ್ ಮಾಡಕ್ಯಂಡು ಬಂದ್ರೆ ಮಣ್ ಬಟ್ಟೆನ ಯಾರು ತೊಳಿತಾರೆ? ನಿನ್ ಗಂಡ ಬತ್ನಾ?ʼ ಅಂತ ಮಂತ್ರಾಕ್ಷತೆಯನ್ನು ಹಾಕಿಸಿಕೊಳ್ಳುತ್ತ ಬೇಸರ ಮಾಡಿಕೊಳ್ಳದೆ ಮತ್ತೆ ನಾಳೆಗೆ ತಯಾರಾಗುತ್ತಿದ್ದೆವು. ಇನ್ನೊಂದು ಆಸಕ್ತಿದಾಯಕ ಆಟವಿತ್ತು. ಆಡಮಣ್ಣಿ ಮಾಡುವುದು. ಮಣ್ಣಿ ಅಂದರೆ ಹಲ್ವದ ರೀತಿಯಲ್ಲಿ ಸೊಪ್ಪಿನಿಂದ ಮಾಡುವುದು. ಆಡಗಡ್ಡೆ ಅಥವಾ ಹಾಡಗಡ್ಡೆ ಸೊಪ್ಪು ಅಂತ ಒಂದು ಜಾತಿಯ ಗಿಡದ ಸೊಪ್ಪು. ಅದನ್ನು ಕಿವುಚಿ ನೀರಿನಲ್ಲಿ ನೆನೆಸಿಟ್ಟರೆ ಆರೇಳು ತಾಸಿನಲ್ಲಿ ಅದು ಹಲ್ವದಂತೆ ಗಟ್ಟಿಯಾಗಿ ಮಿರಿಮಿರಿ ಮಿಂಚುತ್ತಿತ್ತು. ಅದನ್ನು ಕೆನ್ನೆಗೋ ಕೈಗೋ ಒತ್ತಿಕೊಂಡು ಖುಶಿಪಡುತ್ತಿದ್ದೆವು. ಆ ಸೊಪ್ಪನ್ನು ಕಿವಿಚಲು ನಮಗೆ ದೊರಕುತ್ತಿದ್ದುದು ತೆಂಗಿನ ಕರಟ ಮಾತ್ರ. ಅದರಲ್ಲಿಯೇ ತಯಾರಿಸಿ ಯಾರು ತಯಾರಿಸಿದ್ದು ಎಷ್ಟು ದೊಡ್ಡದು ಎಂದೋ ಎಷ್ಟು ಹೊಳೆಯುತ್ತಿದೆ ಎಂದೋ ನೋಡುತ್ತ ಸಂತೋಷಿಸುತ್ತಿದ್ದ ನೆನಪು ಈಗಲೂ ಹಸಿರಾಗಿಯೇ ಇದೆ.
ಚನ್ನೆಮಣೆ (ಅಡಗುಳಿ ಮಣೆ) ಆಡಲಿಕ್ಕೆ ಬಳಸುತ್ತಿದ್ದುದು ಚನ್ನೆಕಾಳು ಅಥವಾ ಹರಳು. ಒಮ್ಮೆ ಚನ್ನೆಕಾಳು ಇಲ್ಲದಿದ್ದರೆ ಬದಲಿಗೆ ಹುಣಸೆಬೀಜ. ಆಡುವುದು ಇಬ್ಬರಾದರೂ ಸುತ್ತಲೂ ಕುಳಿತು ಉಳಿದವರು ಕುತೂಹಲದಿಂದ ನೋಡುತ್ತ ಉತ್ಸಾಹ ತುಂಬುತ್ತಿದ್ದರು. ಇದೇ ಹರಳುಗಳನ್ನು ಕೈಯಲ್ಲಿ ಹಿಡಿದು ಸರಿಯೋ ಬೆಸವೋ ಎಂದೂ ಆಡುವುದಿತ್ತು. ಬೆಸ ಎಂದಾಗ ಕೈಯಲ್ಲಿ ಹಿಡಿದಿರುವ ಹರಳುಗಳು ಬೆಸಸಂಖ್ಯೆಯಲ್ಲಿದ್ದರೆ ಅದಷ್ಟನ್ನೂ ಎದುರುಗಡೆ ವ್ಯಕ್ತಿಗೆ ಕೊಡಬೇಕಾಗಿತ್ತು. ಅವರು ಹೇಳಿದುದು ತಪ್ಪಾದರೆ ಅದಷ್ಟೇ ಹರಳನ್ನು ಅವರು ಇವರಿಗೆ ಕೊಡಬೇಕಿತ್ತು. ಇನ್ನೊಂದು ಉಬಸೋ ಹರಳು ಎನ್ನುವ ಆಟ. ಹರಳುಗಳನ್ನು ಒಟ್ಟಾಗಿ ರಾಶಿಯಂತೆ ಜೋಡಿಸಿ ಬಾಯಿಯಿಂದ ಜೋರಾಗಿ ಊದುವುದು. ಹೀಗೆ ಊದಿದಾಗ ಗುಂಪಿನಿಂದ ಹೊರಗೆ ಬರುವ ಹರಳುಗಳನ್ನು ತಮ್ಮ ಖಜಾನೆಗೆ ಹಾಕಿಕೊಳ್ಳುವುದು. ಕೊನೆಯಲ್ಲಿ ಯಾರಿಗೆ ಎಷ್ಟು ಹರಳುಗಳು ಬಂದಿವೆ ಎನ್ನುವುದನ್ನು ಎಣಿಸಿ ಕಡಿಮೆ ಹರಳುಗಳು ಬಂದಿರುವಷ್ಟು ಹರಳನ್ನು ಹೆಚ್ಚು ಪಡೆದವರು ಸೇರಸಿ ಆಟವನ್ನು ಮುಂದುವರಿಸುವುದು. ಕೊನೆಯಲ್ಲಿ ಯಾರು ʻಪಾಪರ್ʼ ಆಗುತ್ತಾರೆ ಅವರು ಸೋತಂತೆ. ಬುಗುರಿ, ಕಂಬದಾಟ ಹೀಗೆ ಹಲವು ಬಗೆಯ ಒಳಾಂಗಣ ಆಟಗಳನ್ನು ಆಡುತ್ತಿದ್ದೆವು.
ಮನೆಯ ಸುತ್ತಲಿನಲ್ಲಿ ಸಿಗುತ್ತಿದ್ದ ವಸ್ತುಗಳನ್ನು ಬಳಸಿ ಖುಶಿಪಡುತ್ತಿದ್ದವುಗಳಲ್ಲಿ ತೆಂಗಿನಗರಿಗಳಿಂದ ಮಾಡುತ್ತಿದ್ದ ವಾಚು ಮತ್ತು ಗಿರಗಿಟ್ಟಿಗೆ ಪ್ರಾಧಾನ್ಯ. ಗರಿಯನ್ನು ಕತ್ತರಿಸಿ ವಾಚು ತಯಾರಿಸಿ ಕಟ್ಟಿಕೊಂಡು ಸಂತೋಷಿಸುವಂತೆಯೇ ಗಿರಿಗಿಟ್ಟಿ ಕೂಡ. ಎರಡು ಗರಿಯ ತುಂಡನ್ನು ಸೇರಿಸಿ ನಡುವೆ ತೂತನ್ನು ಮಾಡಿ ಅದಕ್ಕೆ ತೆಂಗಿನ ಕಟ್ಟಿಯನ್ನು ಪೋಣಿಸಿ ಬತ್ತದ ಹುಲ್ಲಿನ ಕಡ್ಡಿಯನ್ನು ಹೊರಕವಚವಾಗಿ ಪೋಣಿಸಿ ಅದನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಓಡಿದರೆ ಅದು ಚಕ್ರದಂತೆ ತಿರುಗುತ್ತಿತ್ತು. ಕೆಲವರ ಮನೆಯಲ್ಲಿ ಮರದಿಂದ ತಯಾರಿಸಿದ ಚಿಕ್ಕ ಗಾಡಿ ಇರುತ್ತಿತ್ತು. ಇಲ್ಲದಿದ್ದರೆ ತೆಂಗಿನ ಮರದಿಂದ ಕೆಳಗೆ ಬಿದ್ದಿರುವ ತೆಂಗಿನ ಪೆಂಟೆಯ ತುದಿಯನ್ನು ಕತ್ತರಿಸಿ ಅದರ ಬುಡದ ಭಾಗದಲ್ಲಿ ಒಬ್ಬರು ಕುಳಿತು ಇನ್ನೊಬ್ಬರು ಅದನ್ನು ಎಳೆಯುವುದೇ ನಮಗೆ ಗಾಡಿಯಾಗಿತ್ತು. ಇನ್ನೊಂದು ಹಲ್ಪೆ ಆಟ. ಮನೆಯನ್ನು ಬರೆದು ಆಡುವ ಕುಂಟಾಟದ ಹಲ್ಪೆಯೂ ಅಲ್ಲಿಯೇ ಸಿಗುತ್ತಿದ್ದ ಅಗಲವಾದ ಕಲ್ಲಿನ ಚೂರು. ಕೆಲವೊಮ್ಮೆ ಒಡೆದ ಬಳಪದ ಪಾಟಿಯ ತುಂಡು ಹಲ್ಪೆಯಾಗಿ ಬಳಕೆಯಾಗುತ್ತಿತ್ತು.
ಮಳೆಗಾಲ ಮುಗಿದ ಮೇಲೆ ಊರಿನ ಬೀದಿ ಶಾಲೆಯ ಅಂಗಳ, ದೇವಸ್ಥಾನದ ಮುಂದಿನ ಬಯಲು ಎಲ್ಲವೂ ನಮ್ಮ ಆಟಕ್ಕೆ ಸೂಕ್ತ ಎಂದು ಭಾವಿಸಿ ಆಡುತ್ತಿದ್ದೆವು. ಮುಟ್ಟಾಟ ಅಥವಾ ಹಿಡಿಯೋ ಆಟಕ್ಕೆ ಬಹಳ ಪ್ರಾಧಾನ್ಯವಿತ್ತು. ಅಟ್ಟಿಸಿಕೊಂಡು ಹೋಗಿ ಹಿಡಿಯುವುದು ಒಂಥರಾ ಖುಶಿ ಕೊಡುತ್ತಿತ್ತು. ಇದರ ಇನ್ನೊಂದ ರೂಪವೇ ʻಕೂತು ಹಿಡಿತಿಯೋ ನಿಂತು ಹಿಡಿತಿಯೋʼ ಎನ್ನುವುದು. ಕೇಳಿದಾಗ ನಿಂತು ಎಂದರೆ ನಿಂತಾಗ, ಇಲ್ಲವೆ ಕುಳಿತು ಎಂದರೆ ಕುಳಿತಾಗ ಅವರನ್ನು ಮುಟ್ಟಬೇಕು, ಆಗ ಅವರು ಆಟದಿಂದ ಹೊರಕ್ಕೆ. ನಿಂತ ಆಟ ಎಂದವರು ನಿಂತಿರುವಾಗ ಹತ್ತಿರ ಹೋಗುತ್ತಲೇ ಕುಳಿತುಬಿಡುತ್ತಿದ್ದರು. ಕುಳಿತು ಎಂದವರನ್ನು ಸಮೀಪಿಸುತ್ತಿದ್ದಂತೆ ಅವರು ಎದ್ದು ಓಡುತ್ತಿದ್ದರು. ಅಟ್ಟಿಸಿಕೊಂಡು ಹೋಗುವುದು ಕೂಗುವುದು ಮಾಡುತ್ತ ಗದ್ದಲ ಎಬ್ಬಿಸುತ್ತಿದ್ದೆವು. ಇಂತಹ ಆಟಗಳಿಗೆ ಯಾವುದೇ ಪರಿಕರಗಳ ಅಗತ್ಯವಿರುವುದಿಲ್ಲ. ನಾವು ಆಡುತ್ತಿದ್ದ ತೂರ್ಚೆಂಡು ಒಂದು ವಿಶಿಷ್ಟ ಆಟವಾಗಿತ್ತು. ಸುತ್ತಮುತ್ತ ಇರುವ ಎಲೆಗಳನ್ನು ಕೊಯ್ದು ಅವುಗಳನ್ನು ಚೆಂಡಿನಾಕಾರದಲ್ಲಿ ಸುತ್ತಿ ಬಾಳೆನಾರು ಅಥವಾ ಯಾವುದಾದರೂ ಬಳ್ಳಿಗಳನ್ನು ಕಟ್ಟುತ್ತಿದ್ದೆವು. ಒಳಗೆ ಎರಡೋ ಮೂರೋ ಪುಟ್ಟ ಪುಟ್ಟ ಕಲ್ಲುಗಳನ್ನು ಹಾಕಿ ಅದು ಗಾಳಿಗೆ ಹಾರದಂತೆ ಮಾಡುತ್ತಿದ್ದೆವು. ಅದನ್ನು ಒಬ್ಬರು ಇನ್ನೊಬ್ಬರಿಗೆ ಎಸೆಯುವ ಮೂಲಕ ಆಟಕ್ಕೆ ಕಳೆಯೇರುತ್ತಿತ್ತು. ತಪ್ಪಿಸಿಕೊಳ್ಳಲು ಓಡಿದರೂ ಮೈಗೆ ತಾಗಿದವರು ಅದನ್ನು ಹಿಡಿದು ಇನ್ನೊಬ್ಬರಿಗೆ ಎಸೆಯತ್ತ ಆಟವನ್ನು ಮುಂದುವರಿಸುತ್ತಿದ್ದರು.
ಚಿನ್ನಿಕೋಲು ಅಥವಾ ಚಿನ್ನಿದಾಂಡು ಆಡುವುದು ಹೆಚ್ಚಾಗಿ ಗಂಡುಮಕ್ಕಳೇ ಆಗಿತ್ತು. ಕೆಲವೊಮ್ಮೆ ನಮ್ಮನ್ನು ಸೇರಿಸಿಕೊಳ್ಳುತ್ತಿದ್ದರು. ಇದನ್ನು ದೇಶೀಯ ಆಟ, ಜನಪದ ಆಟ ಎಂದು ಕರೆಯುತ್ತಿದ್ದರೂ ಈ ಆಟ ಬಹಳ ಪ್ರಾಚೀನವಾದುದು ಮತ್ತು ಪೂರ್ವ ಪಶ್ಚಿಮ ಎನ್ನದೆ ಅನೇಕ ದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಇದು ರೂಢಿಯಲ್ಲಿತ್ತು. ಇದನ್ನು ಆಡುವ ರೀತಿಯಲ್ಲಿ ಕೆಲಮಟ್ಟಿನ ಭಿನ್ನತೆಯಿದೆ. ಆದರೆ ಎಲ್ಲ ಬಗೆಯಲ್ಲಿಯೂ ಒಂದು ಉದ್ದದಾದ ಕೋಲು ಮತ್ತು ಎರಡೂ ಕಡೆಯಲ್ಲಿ ಚೂಪಾಗಿರುವ ಚಿಕ್ಕದಾಗಿರುವ ಚಿನ್ನಿ. ಇದರ ಸ್ವರೂಪದಲ್ಲಿ ವ್ಯತ್ಯಾಸ ಕಾಣದು. ಈ ಆಟದಲ್ಲಿ ಗುಂಡಿಯಲ್ಲಿ ಚಿನ್ನಿಯನ್ನಿಟ್ಟು ದಾಂಡಿನಿಂದ ಹೊಡೆದಾಗ ಮಧ್ಯದಲ್ಲಿ ಹಿಡಿದರೆ ಆಟಗಾರ ಆಟದಿಂದ ಹೊರಕ್ಕೆ. ಅದು ಹೋಗುವ ದೂರವನ್ನು ಲೆಕ್ಕಾಚಾರದಲ್ಲಿ ನಿರ್ಧರಿಸುವ ಬದಲು ದಾಂಡಿನಿಂದ ಅಳೆಯುತ್ತಿದ್ದರು. ಅದನ್ನು ಅಳೆಯುವಾಗ ʻಗಿಡಬಿಡಿ ಎಡಗಾಲ್ ಮೂರಮುದ್ದೆ ನಾಕಬೆಟ್ಟು ಅಜ್ಜಿತೊಟ್ಟು ಆರಮಾರ್ಯ ಹೊಂಡಿʼ ಎಂದು ಹೇಳುತ್ತ ಅಳೆಯಬೇಕಿತ್ತು. ಏಳು ಕೋಲಿನ ಅಳತೆಗೆ ಒಂದು ಗುಂಪು. ಗುಂಪಿಗಿಂತ ಕಡಿಮೆ ಇದ್ದರೆ ಅದು ಸೂಚಿಸುವ ದೇಹದ ಅಂಗದ ಮೇಲೆ ಚಿನ್ನಿಯನ್ನಿಟ್ಟು ದಾಂಡಿನಿಂದ ಹೊಡೆಯಬೇಕಿತ್ತು. ಉದಾ: ನಾಕಬೆಟ್ಟು ಅಂದರೆ ಎಡಗೈಯನ್ನು ಮಗುಚಿ ಅದರ ನಾಲ್ಕು ಬೆರಳಿನ ಮೇಲೆ ಚಿನ್ನಿಯನ್ನು ಇರಿಸಿ ಸದನ್ನು ಹಾರಿಸಿ ಬಲಗೈಯಲ್ಲಿರುವ ದಾಂಡಿನಿಂದ ಹೊಡೆಯಬೇಕು. ಅದು ಕ್ರಮಿಸುವ ದೂರವನ್ನು ಮತ್ತೆ ಅಳೆಯುವುದು.
ʻಇವರ್ ಬಿಟ್ಟ್ ಇವರ್ಯಾರುʼ ಎನ್ನುವ ಆಟ ಎಲ್ಲ ಕಡೆಯಲ್ಲಿಯೂ ಇರುವಂಥದು. ʻಅದಲು ಬದಲು ಕಂಚಿ ಕದಲುʼ ಎನ್ನುವುದಕ್ಕೆ ಬದಲಾಗಿ ಎದುರಲ್ಲಿ ನಿಂತವರಿಗೆ ʻಅಡಕೆ ಕೊಡ್ತೇನೆ ಅದಲು ಬದಲಾಗಿʼ ಎಂದು ಹೇಳುತ್ತಿದ್ದೆವು. ಹೋಗಿ ಅವತಿರುವುದ ಅವರನ್ನು ಹುಡುಕುವುದು ಎಲ್ಲವೂ ಒಂದೇ ರೀತಿಯದು.
ಪುಟ್ಟ ಮಕ್ಕಳನ್ನು ಆಡಿಸುವ ಆಟದಲ್ಲಿ ವೈವಿಧ್ಯತೆ ಇದ್ದವು. ಅಲ್ಲಿ ಹೇಳುತ್ತಿದ್ದ ಸಾಲುಗಳು ಮಕ್ಕಳನ್ನು ನಗಿಸುವಂತೆ ಇದ್ದವು. ಮೂರು ಅಥವಾ ನಾಲ್ವರು ತಮ್ಮ ಕಾಲುಗಳನ್ನು ಒಂದರ ಮೇಲೆ ಇನ್ನೊಂದ ಪೇರಿಸಿಟ್ಟು ʻಅಪ್ಪಡ ತಪ್ಪಡ ತಂಬಾಳೆ ಜಾಯಿಕಾಯಿ ತಂಬಾಳೆ ಭೀಮರಾಯ ಬೆಟ್ಟಕ್ಕೆ ಹೋದʼ ಎಂದು ಮುಂದುವರಿಯುವ ಶಿಶುಗೀತೆಯಿಂದ ಆಟಕ್ಕೆ ಕಳೆಕಟ್ಟುತ್ತಿತ್ತು. ತೀರ ಪುಟ್ಟಮಕ್ಕಳನ್ನು ಆಡಿಸುವ ಆಟವೆಂದರೆ ʻಹತ್ತಂಬಾಲೆ ಹಲಗೆ ತಟ್ಟಿ ಎಪ್ಪತ್ತು ಕಾಲ ಚೌಲಬೀಸಿʼ ಎನ್ನುತ್ತ ಒಬ್ಬೊಬ್ಬರ ತಲೆಯನ್ನು ಮುಟ್ಟುತ್ತ ಮುಂದುವರಿದು ಕೊನೆಯಲ್ಲಿ ʻತಾಟ್‌ಬೈಟ್ ಕೂರ್ ಗುಬ್ಬಿ ಕುಕ್ಕರ ಬಸ್ವಿ ಕೂರಬಸ್ವಿ ಬಾಳೆಕಂಬ ಬೈಟ್‌ಗುಬ್ಬಿʼ ಎಂದು ಮುಗಿಸುವುದು.
ಮಕ್ಕಳು ಸುತ್ತಲೂ ಕುಳಿತು ಕೈಗಳನ್ನು ಮಗುಚಿ ನೆಲದ ಮೇಲಿಟ್ಟು ಆಡುವ ಆಟ ಇನ್ನೊಂದು ಬಗೆಯದು. ಇದರಲ್ಲಿಯೂ ಭಿನ್ನತೆ ಇತ್ತು. ಬೆರಳುಗಳು ಮುಖ್ಯವಾದ ಆಟದ ಸಾಲುಗಳು ʻಅಡ್ಡಂ ಪಿಡ್ಡಂ ಮದಲೆ ಚಿದಲೆ ಮಕ್ಕ ಚಿಕ್ಕ ಪ್ರಾಯ ಲಾಟಿಂ ಲೋಟಿಂ ಚಲ್ʼ ಎನ್ನುತ್ತ ಹನ್ನೊಂದನೇ ಬೆರಳನ್ನು ಮಡಚಬೇಕಿತ್ತು. ಹೀಗೆ ಒಂದೊಂದು ಬೆರಳು ಕಡಮೆಯಾಗುತ್ತ ಕೊನೆಯಲ್ಲಿ ಉಳಿಯುವವರ ಕೈಗೆ ತುಪ್ಪ ಕಾಯಿಸುವುದರೊಂದಿಗೆ ಆಟ ಮುಗಿಯುತ್ತಿತ್ತು. ಇದೇ ಬಗೆಯದು ಇಡಿಯಾಗಿ ಕೈಯನ್ನು ಕುರಿತದ್ದು. ʻಕೊಲ್ಲೂರಂ ಮಲ್ಲೂರಂ ತಾಟಕಿ ಹೊನ್ನರಕಿ ಕೈದಂಡ್ಯೋʼ ಎನ್ನುತ್ತಿದ್ದಂತೆ ಮಗುಚಿರುವ ಐದನೆಯ ಕೈಯನ್ನು ಮುಷ್ಟಿಯಾಗಿ ಇಡಬೇಕಿತ್ತು. ಇದರಲ್ಲಿ ಒಟ್ಟು ಮೂರುಹಂತ ಮುಗಿದ ಮೇಲೆ ಕೈಯನ್ನು ಬೆನ್ನ ಹಿಂದೆ ಇಟ್ಟುಕೊಂಡು ಆಟ ಮುಗಿಯುವವರೆಗೆ ಕಾಯಬೇಕು. ಈ ಆಟವೂ ತುಪ್ಪ ಕಾಯಿಸುವುದರೊಂದಿಗೆ ಕೊನೆಯಾಗುತ್ತಿತ್ತು. ತುಪ್ಪಕಾಯಿಸುವುದು ಎಂದರೆ ಕೊನೆಯಲ್ಲಿ ಉಳಿಯುವವರು ಎರಡೂ ಕೈಗಳನ್ನೂ ಜೋಡಿಸಿ ಎದುರಿನವರಿಗೆ ಅವರ ಕೈಮೇಲೆ ಹೊಡೆಯಲು ಅನುವುಮಾಡಿಕೊಡಬೇಕು. ಹೀಗೆ ಹೊಡೆಯುವುದನ್ನು ತಪ್ಪಿಸಿಕೊಳ್ಳುವವರೆಗೆ ಆಟ ಮುಂದುವರಿಯುತ್ತಿತ್ತು. ಈಗಿನಂತೆ ಆಡಲು ಬೇಕಿದ್ದ ಸಿದ್ಧಪರಿಕರಗಳ ಲಭ್ಯತೆ ತೀರ ಕಡಿಮೆಯಾಗಿತ್ತು. ಇರುವ ಹತ್ತಾರು ಮಕ್ಕಳ ಹೊಟ್ಟೆಬಟ್ಟೆಯ ಅಗತ್ಯಗಳನ್ನು ಪೂರೈಸುವುದೇ ಹೆತ್ತವರಿಗೆ ಕಷ್ಟವಾಗಿದ್ದ ದಿನಗಳವು. ʻಇರುವುದೆಲ್ಲವ ಬಿಟ್ಟು ಇರದುದರೆಡೆಗೆʼ ತುಡಿಯದೆ, ಹಂಬಲಿಸದೆ ಮಕ್ಕಳು ಇರುವುದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಆಡುತ್ತ ದೊಡ್ಡವರಾಗುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.