ನನ್ನ ಹೆದರಿಕೆ ಏನೆಂದರೆ ನಾನು ಟಾಯ್ಲೆಟ್ಟಿನಲ್ಲಿದ್ದಾಗಲೋ ಇಲ್ಲಾ ಸ್ನಾನ ಮಾಡಬೇಕಾದರೋ ಭೂಕಂಪವಾದರೆ ಏನು ಮಾಡೋದು ಅಂತ. ಆ ಅವಸ್ಥೆಯಲ್ಲಿ ಹೊರಗೆ ಓಡುವುದು ಎಷ್ಟು ಮುಜುಗರದ ಸನ್ನಿವೇಶ ಅಂತ ಯೋಚಿಸಿ. ನಾನು ಗೆಳೆಯನೊಟ್ಟಿಗೆ ಮಾತನಾಡುತ್ತಾ ಇದೇ ವಿಷಯ ಹೇಳಿದೆ. ಸ್ನಾನ ಮಾಡುತ್ತಿರುವಾಗ ಭೂಕಂಪ ಶುರುವಾದರೆ ಹಾಗೇ ಟವೆಲ್ ಸುತ್ತಿಕೊಂಡು ಓಡಬೇಕಾಗತ್ತೆ ಅಂತ. ಆಗ ಅವನು ಕೈಗೆ ಟವೆಲ್ ಕೂಡಾ ಸಿಗದಿದ್ದರೆ ಏನು ಮಾಡ್ತೀಯಾ, ಇಲ್ಲಾ ಟಾಯ್ಲೆಟ್ಟಲ್ಲಿ ಕೂತಿದ್ದಾಗ ತೊಳೆಯದೇ ಓಡಬೇಕಾಗಿ ಬಂದರೆ ಏನು ಮಾಡ್ತೀಯಾ? ಅಂದ.
ಕ್ಯಾಲಿಫೋರ್ನಿಯಾದಲ್ಲಾದ ಭೂಕಂಪದ ಅನುಭವಗಳ ಕುರಿತು ಗಿರಿಧರ್ ಗುಂಜಗೋಡು ಬರಹ
ಎರಡು ತಿಂಗಳುಗಳ ಹಿಂದೆ ಒಂದು ದಿನ ಸಂಜೆ ಮನೆಯಲ್ಲಿ ಕೂತಿದ್ದಾಗ ಅಚಾನಕ್ಕಾಗಿ ಭೂಮಿ ಕಂಪಿಸಿದ ಅನುಭವವಾಯಿತು. ಆಗ ಸ್ವಲ್ಪ ಗಾಬರಿಯಿಂದಲೇ ಓಡಿ ಬಂದು ಭೂಕಂಪವಾಗಿದ್ದನ್ನು ಗಮನಿಸಿದಿರಾ ಎಂದು ಮನೆಯ ಓನರ್ ಹತ್ತಿರ ಕೇಳಿದೆ. ಆಗ ಅವರು, ಇದೆಲ್ಲಾ ಇಲ್ಲಿ ಸಾಮಾನ್ಯ ಅಂದರು. ಅದಾದ ತಿಂಗಳ ಒಳಗೆ ಇನ್ನೊಮ್ಮೆ ಸಂಸ್ಥೆಯಲ್ಲಿ ಕೆಲಸದ ಸಮಯದಲ್ಲಿ ನೆಲ ನಡುಗಿತ್ತು. ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6ರಷ್ಟಿತ್ತು. ಕಳೆದ ವಾರ ನಾನು ದೀಪ್ತಿಯೊಡನೆ ಮಾತನಾಡಲು ಫೋನ್ ತೆಗೆಯುತ್ತಾ ಇದ್ದಾಗ ಫೋನಿನಲ್ಲಿ ಇನ್ನು ಕೆಲವೇ ಸೆಕೆಂಡುಗಳಲ್ಲಿ ಮಧ್ಯಮಗಾತ್ರದ ಭೂಕಂಪವಾಗಲಿದೆ ಅನ್ನುವ ಎಚ್ಚರಿಕೆಯ ಓಲೆ ಬರಲು ಶುರುವಾಯಿತು. ಮನೆಯಿಂದ ಹೊರನಡೆಯಬೇಕೇ ಅನ್ನುವ ಯೋಚನೆಯಲ್ಲಿದ್ದಾಗಲೇ ನೆಲ ನಡುಗಲು ಶುರುವಾಯಿತು. ಕೆಳಗಿಳಿಯಲು ಶುರು ಮಾಡಿದಾಗ ನೆಲನಡುಗುವುದು ನಿಂತಿತು. ಅದಾಗಿ ವಾರದಲ್ಲಿ ಆಫೀಸಿದಲ್ಲಿ ಮಧ್ಯಾಹ್ನ ಊಟಕ್ಕೆ ಕೂತಾಗ ಗಡಗಡನೇ ಭೂಮಿ ನಡುಗಲು ಶುರುವಾಯಿತು, ಇಂದಾಗಿದ್ದು (ಈ ಬರಹ ಬರೆಯುವಾಗ) 4.7ರ ಭೂಕಂಪವಾದರೂ ಅದರ ಕೇಂದ್ರ ನಾನಿದ್ದ ಜಾಗದಿಂದ ಬರೀ ಎರಡು ಕಿಲೋಮೀಟರ್ ದೂರದಲ್ಲಿ ಇದ್ದ ಕಾರಣ ಸ್ವಲ್ಪ ಮೀಟರ್ ಆಫ್ ಆಗೋ ತರವೇ ಇತ್ತು.
ಕ್ಯಾಲಿಫೋರ್ನಿಯಾ ರಾಜ್ಯ ಭೂಕಂಪ ವಲಯದಲ್ಲಿ ಬರುತ್ತದೆ ಅನ್ನುವುದನ್ನು 2017ರಲ್ಲೊಮ್ಮೆ ಕೆಲ ತಿಂಗಳುಗಳ ಕಾಲ ಇಲ್ಲಿದ್ದಾಗ ಓದಿದ್ದು ನೆನಪಾಯಿತು. ಆದರೆ ಆಗ ಒಮ್ಮೆಯೂ ಭೂಕಂಪವಾದುದು ನನ್ನ ಅನುಭವಕ್ಕೆ ಬಂದಿರಲಿಲ್ಲ. ಈ ಭಾಗದಲ್ಲಿ ಭೂಕಂಪವಾಗದೇ ಹತ್ತಾರು ವರ್ಷಗಳೇ ಕಳೆದಿದ್ದವಂತೆ. ಆದರೆ ಈ ಬಾರಿ ಕಳೆದ ಮೂರು ತಿಂಗಳಿನಲ್ಲಿ ನಾಲ್ಕು ಬಾರಿ ಈ ಮಧ್ಯಮಗಾತ್ರದ ಭೂಕಂಪನಗಳ ಅನುಭವವಾಗಿದೆ, ಚಿಕ್ಕ ಭೂಕಂಪಗಳಂತೂ ಆಗಾಗ ಆಗುತ್ತದೆ. ಅದರಲ್ಲೂ ಕೊನೆಯ ಭೂಕಂಪದ ಕೇಂದ್ರ ಲಾಸ್ ಎಂಜಿಲಿಸ್ ಮಹಾನಗರದ ವ್ಯಾಪ್ತಿಯಲ್ಲಿಯೇ ಬರುವ ಕಾರಣ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ಇಲ್ಲಿನ ಪ್ರಸಿದ್ಧ ಭೂಗೋಳ ಮತ್ತು ಖಗೋಳ ವಸ್ತುಸಂಗ್ರಹಾಲಯವಾದ ಗ್ರಿಫಿತ್ ವೀಕ್ಷಣಾಲಯದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ಭಾಗದ ಭಗೋಳಿಕ ರಚನೆಯ ಬಗ್ಗೆ ವಿವರವಾಗಿ ತಿಳಿಸಿ ಯಾಕೆ ಭೂಕಂಪ ವಲಯದಲ್ಲಿ ಬರುತ್ತದೆ ಎಂದು ಹೇಳಲಾಗಿದೆ. ಅಲ್ಲಿ ಭೂಕಂಪದ ತೀವ್ರತೆಯನ್ನು ತಿಳಿಸುವ ಸಿಸ್ಮೋಗ್ರಾಫನ್ನು ಕೂಡಾ ಇಡಲಾಗಿದೆ. ನಾವೇ ಕುಣಿದು ಕುಪ್ಪಳಿಸಿ ಕಂಪನಗಳು ಹೇಗೆ ಅದರಲ್ಲಿ ರಿಕ್ಟರ್ ಮಾಪನದ ಕಂಪನಗಳು ದಾಖಲಾಗುತ್ತದೆಯೆಂದು ಕಣ್ಣಾರೆ ನೋಡಬಹುದು. ಇಂದು ಗ್ರಿಫಿತ್ ವೀಕ್ಷಣಾಲಯ, ಪ್ಯಾಸಡಿನಾ ಸಿವಿಕ್ ಸೆಂಟರ್ ಸೇರಿದಂತೆ ಹಲವಾರು ಐತಿಹಾಸಿಕ ಕಟ್ಟಡಗಳ ಅಡಿಪಾಯವನ್ನೇ ಮೇಲಕ್ಕೆ ಎತ್ತಿ, ಅದರಡಿ ಭದ್ರವಾದ ಇನ್ನೊಂದು ಪಾಯ ಹಾಕಿ ಯಾವ ಭೂಕಂಪಕ್ಕೆ ಕೂಡಾ ಜಗ್ಗದಂತೆ ಕಾಪಿಡಲಾಗಿದೆ. ಇದಕ್ಕೆ ಮಿಲಿಯನ್ನುಗಟ್ಟಲೇ ಡಾಲರುಗಳ ವೆಚ್ಚವಾಗಿದೆ ಅನ್ನುವುದನ್ನು ಕೂಡಾ ಬಿಡಿಸಿ ಹೇಳಬೇಕಾಗಿಲ್ಲ. ಶ್ರೀಮಂತ ದೇಶ, ಇದಕ್ಕೆ ಇದನ್ನು ಭರಿಸುವ ಶಕ್ತಿಯಿದೆ.
ಇಲ್ಲಿನ ಭೂಕಂಪಗಳ ಬಗ್ಗೆ ಬರೆಯಬೇಕೆಂದು ಸುಮಾರು ಬಾರಿ ಪ್ರಯತ್ನಪಟ್ಟರೂ ಕೂಡಾ ಹೇಗೆ ಶುರುಮಾಡಬೇಕು, ಕಷ್ಟದ ವಿಷಯಗಳನ್ನು ಅರ್ಥಮಾಡಿಕೊಂಡು ಅದನ್ನು ಆದಷ್ಟು ಸರಳವಾಗಿಸುವುದು ಹೇಗೆ ಅನ್ನುವ ಗೊಂದಲಲ್ಲಿದ್ದಾಗಲೇ ಕಿರಿಯ ಗೆಳೆಯ ಮಂಡ್ಯದ ಶಿವು ನನಗೆ, ಶಾಂತಸಾಗರದ ಕರಾವಳಿಗಳ ಹೆಚ್ಚಿನ ಭಾಗ ‘Ring of Fire’ ವಲಯದಲ್ಲಿ ಬರುತ್ತದೆ ಅನ್ನುವ ಕುತೂಹಲಕರ ಸಂಗತಿಯನ್ನು ಹೇಳಿದರು. ಈ ಶಬ್ದ ನನಗೆ ಸಂಪೂರ್ಣ ಹೊಸತು, ಕೇಳಲೂ ಆಕರ್ಷಕವಾಗಿದೆ. ಹಾಗಿದ್ದರೆ ಇಲ್ಲಿಂದಲೇ ಮೊದಲುಮಾಡುವುದು ಒಳ್ಳೆಯದು ಅಂತ ಅನ್ನಿಸಿತು. ಹಾಗೆಯೇ ಭೂಗರ್ಭಶಾಸ್ತ್ರಜ್ಞರಾದ ನನ್ನ ಸೋದರ ಮಾವನ ಹತ್ತಿರ ಕೇಳಿದಾಗ ಅವರು ಕೆಲ ಅಮೂಲ್ಯ ಮಾಹಿತಿಗಳನ್ನು ಕೊಟ್ಟರು.
ಈ Ring of Fire ಅಥವಾ ಬೆಂಕಿಯುಂಗುರ ಅನ್ನುವುದು ಶಾಂತಸಾಗರದ ಕರಾವಳಿ ಪ್ರದೇಶಗಳ ಸುತ್ತಲೂ ಹಬ್ಬಿರುವ ಟೆಕ್ಟಾನಿಕ್ ವಲಯ. ಟೆಕ್ಟಾನಿಕ್ ವಲಯ ಅಂದರೆ ಭೂಮಿಯ ಕ್ರಸ್ಟ್ ಅಥವಾ ಹೊರಪದರವು ಪ್ರಮುಖವಾಗಿ ಏಳು ಪ್ಲೇಟ್ ಅಥವಾ ಫಲಕಗಳಿಂದ ಆಗಿದೆ. ಅವು ಯಾವವೆಂದರೆ ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ, ಯುರೇಶಿಯನ್, ಆಫ್ರಿಕಾ, ಪ್ಯಾಸಿಫಿಕ್, ಅಂಟಾರ್ಟಿಕಾ ಮತ್ತು ಇಂಡೋ ಆಸ್ಟ್ರೇಲಿಯನ್ ಫಲಕಗಳು. ಈ ಫಲಕಗಳ ವಲಯಗಳನ್ನೇ ಟೆಕ್ಟಾನಿಕ್ ವಲಯಗಳು ಅನ್ನುತ್ತಾರೆ. ಈ ಭೂಫಲಕಗಳು ತನ್ನ ಸುತ್ತಮುತ್ತಲಿನ ಭೂಫಲಕಗಳ ಜೊತೆ ಯಾವಾಗಲೂ ಘರ್ಷಣೆಯಲ್ಲಿರುತ್ತವೆ. ಆದರೆ ಎಲ್ಲಾ ಭೂಫಲಕಗಳ ಗಡಿಗಳೂ ಅಪಾಯಕಾರಿಯಲ್ಲ. ಕನ್ವರ್ಜಂಟ್ ಮತ್ತು ಟ್ರಾನ್ಸ್‌ಫಾರ್ಮ್ ಮಾದರಿಯ ಗಡಿಗಳು ಅಪಾಯಕಾರಿಯಾಗಿವೆ. ಶಾಂತಸಾಗರದ ವಲಯ ಕನ್ವರ್ಜಂಟ್ ಮಾದರಿಯ ಗಡಿಯಲ್ಲಿ ಬರುತ್ತದೆ. ಅದಕ್ಕೇ ಈ ಭಾಗಗಳಲ್ಲಿ ಜ್ವಾಲಾಮುಖಿಗಳು, ಭೂಕಂಪನಗಳೆಲ್ಲಾ ಸಾಮಾನ್ಯ ಸಂಗತಿಗಳಾಗಿವೆ. ಸದಾ ಭೂಕಂಪ, ಜ್ವಾಲಾಮುಖಿಗಳ ಸ್ಫೋಟ, ಸುನಾಮಿಗಳ ಉಪಟಳಗಳನ್ನು ಅನುಭವಿಸುವ ಜಪಾನ್ ಕೂಡಾ ಇದೇ ವಲಯದಲ್ಲಿದೆ ಅನ್ನುವುದನ್ನು ಗಮನಿಸಿ. ಶಾಂತಸಾಗರದ ಉಳಿದ ಭಾಗದ ಬಗ್ಗೆ ಗೊತ್ತಿಲ್ಲ. ಆದರೆ ಅಮೆರಿಕಾದ ಪಶ್ಚಿಮ ಭಾಗದ ಶಾಂತಸಾಗರದ ತೀರವಂತೂ ಬಹಳ ಚಂದ. ಸಾಗರದ ಹೆಸರು ಕೂಡಾ ‘ಶಾಂತ’ ಸಾಗರ. ಆದರೆ ಈ ಶಾಂತ ಸೌಂದರ್ಯದ ಗಣಿಯ ಒಡಲಲ್ಲಿ ವಿನಾಶಕಾರಿ ಚಟುವಟಿಕೆಗಳು ನಡೆಯುತ್ತಿರುವುದು ಮಾತ್ರ ವಿಪರ್ಯಾಸ.
ಈಗ ನಾನಿರುವ ಪ್ರದೇಶವಾದ ದಕ್ಷಿಣ ಕ್ಯಾಲಿಫೋರ್ನಿಯಾ ಭಾಗವನ್ನೇ ತೆಗೆದುಕೊಂಡರೆ, ಇದು ಶಾಂತಸಾಗರ ಮತ್ತು ಉತ್ತರ ಅಮೆರಿಕಾದ ಟೆಕ್ಟಾನಿಕ್ ಪ್ಲೇಟುಗಳ ಗಡಿಭಾಗವಾಗವಾಗಿದೆ. ಅಂದರೆ ಒಂದು ಸಾಗರದ ಪ್ಲೇಟ್ ಮತ್ತು ಇನ್ನೊಂದು ಭೂಖಂಡದ ಪ್ಲೇಟ್. ಈ ಪ್ಲೇಟುಗಳ ನಡುವೆ ಸಾಕಷ್ಟು ಬಿರುಕುಗೆರೆಗಳು ಅಥವಾ ಫಾಲ್ಟ್ ಲೈನುಗಳು ಇವೆ. ಈ ಬಿರುಕುಗಳು ಎರಡು ಪ್ಲೇಟುಗಳು ಪರಸ್ಪರ ಘರ್ಷಿಸಲು ಅವಕಾಶ ಮಾಡಿಕೊಡುತ್ತವೆ. ಇದರಿಂದ ಇಲ್ಲಿ ಭೂಕಂಪನಗಳು ಜಾಸ್ತಿ. ಈ ಬಿರುಕುಗಳಲ್ಲಿ ಮುಖ್ಯವಾಗಿದ್ದು ಸ್ಯಾನ್ ಆಂಡ್ರೆಯಾಸ್ ಫಾಲ್ಟ್. ಸುಮಾರು 1200 ಕಿಲೋಮೀಟರ್ ಉದ್ದದ ಈ ಮಹಾ ಫಾಲ್ಟ್ ಅಥವಾ ಬಿರುಕಿನ ವಲಯ ಹಲವಾರು ಭೂಕಂಪಗಳಿಗೆ ಕಾರಣವಾಗಿದೆ. ಆದರೆ ಈಗ ಆದ ಹೊಸ ಭೂಕಂಪ ಅತ್ಯಂತ ಅಪಾಯಕಾರಿ ಪ್ಯುಂಟ್ ಹಿಲ್ ಫಾಲ್ಟ್‌ಲೈನಲ್ಲಿ ಆಗಿದೆ. ಈ ಬಿರುಕು ಬರೀ 40 ಕಿಮೀ ಇದ್ದರೂ ಕೂಡಾ ಬಿರುಕಿನ ದೊಡ್ಡ ಭಾಗ ಮಹಾನಗರ ವ್ಯಾಪ್ತಿಯಲ್ಲಿ ಬರುತ್ತದೆ. ಈ ಫಾಲ್ಟಿನಲ್ಲಿ ಇಷ್ಟರವರೆಗೆ ಅಪಾಯಕಾರಿ ಭೂಕಂಪವಾಗದ ಕಾರಣ ಹಾಗೂ ಚಿಕ್ಕ ಬಿರುಕಾದ ಕಾರಣ ಅದರ ಕಡೆ ಅಷ್ಟು ಗಮನ ಹೋಗಿರಲಿಲ್ಲ. ಆದರೆ ಮೊನ್ನೆಯ ಭೂಕಂಪ ಈ ಬಿರುಕಿಗೆ ಹಾನಿಯನ್ನುಂಟು ಮಾಡಿದೆ ಅನ್ನುವ ಸಂದೇಹವಿದೆ. ಇದು ಮುಂದೆ ದೊಡ್ಡ ಭೂಕಂಪಕ್ಕೆ ಎಡೆಮಾಡಿಕೊಡಬಹುದೋ ಅನ್ನುವ ಹೆದರಿಕೆ ಕೂಡಾ ಇದೆ. ಬರಬಹುದಾದ ಭೂಕಂಪವನ್ನು ಎದುರಿಸಲು ಹಾಗೂ ನಗರದ ದೊಡ್ಡ ಕಟ್ಟಗಳ ಉಳಿವಿಗೆ ಈಗಾಗಲೇ ಯೋಜನೆಗಳನ್ನು ರೂಪಿಸಲು ತೊಡಗಿದ್ದಾರೆ.
ಈ ಭೂಕಂಪಗಳು ಹೇಗೆ ಆಗುತ್ತವೆ ಅಂತ ಸರಳವಾಗಿ ವಿವರಿಸಿ ಹೇಳಬೇಕೆಂದರೆ. ಉದಾಹರಣೆಗೆ ನೀವು ಮಧ್ಯಾಹ್ನ ಊಟದ ಬುತ್ತಿಯನ್ನು ಸ್ಟೀಲಿನ ಡಬ್ಬದಲ್ಲಿ ತೆಗೆದುಕೊಂಡು ಬೈಕಿನಲ್ಲೋ ಕಾರಿನಲ್ಲೋ ಹೋಗಬೇಕಾದರೆ ಡಬ್ಬಿಯ ಮುಚ್ಚಳ ಸರಿಯಾಗಿ ಕೂತಿದ್ದರೆ ಎಷ್ಟೇ ಜೋರಾಗಿ ಗಾಡಿಯೋಡಿಸಿದರೂ ಏನೂ ಶಬ್ದವಾಗುವುದಿಲ್ಲ. ಅದೇ ಮುಚ್ಚಳ ಸರಿಯಾಗಿ ಕೂತಿಲ್ಲ ಅಂದುಕೊಳ್ಳಿ. ಮುಚ್ಚಳ ಸರಿಯಾಗಿ ಕೂರದ್ದು ಯಾವಾಗ? ಡಬ್ಬಿಯ ಮತ್ತು ಮುಚ್ಚಳದ ನಡುವೆ ಅಂತರವಿದ್ದಾಗ (ಆ ಅಂತರವನ್ನೇ ಇಲ್ಲಿ ಫಾಲ್ಟ್ ಲೈನ್ ಎಂದು ಊಹಿಸಬಹುದು). ಆಗ ಗಾಡಿಯ ಕುಲುಕಾಟಕ್ಕೆ ಸರಿಯಾಗಿ ಕೂರದ ಮುಚ್ಚಳ ಡಬ್ಬಿಗೆ ತಾಗಿ ತಾಗಿ ಶಬ್ದವಾಗಲು ಶುರುವಾಗುತ್ತದೆ. ಶಬ್ದ ಬರುವುದು ಹೇಗೆ? ಡಬ್ಬಿಯ ಮುಚ್ಚಳ ಮತ್ತು ಡಬ್ಬಿ ತಾಗಿ ಮಾಡಿದ ಕಂಪನದಿಂದ ತಾನೇ. ಹೆಚ್ಚು ಕಮ್ಮಿ ಅದೇ ರೀತಿ ಭೂಮಿಯಾಳದಲ್ಲಿ ಎರಡು ಪದರಗಳು ಘರ್ಷಣೆ ಮಾಡುವುದನ್ನು ಊಹಿಸಿಕೊಳ್ಳಿ ಅಷ್ಟೇ. ಆದರೆ, ಭೂಮಿಯೊಳಗಣ ಪ್ರಕ್ರಿಯೆಗಳು ಬಹಳ ನಿಧಾನ. ಪ್ರತಿದಿನ ಪ್ರತಿಕ್ಷಣ ನಮ್ಮ ಅನುಭವಕ್ಕೆ ಬರುವಂತದ್ದಲ್ಲ. ಇಲ್ಲಾಗುವ ಕ್ರಿಯೆಗಳು ಕೋಟ್ಯಂತರ ವರ್ಷಗಳ ಕಾಲಮಾನದ ಘಟ್ಟದಲ್ಲಿ ಜರುಗುವಂತವುಗಳು.
ನಾನಿರುವ ಈ ಭಾಗದಲ್ಲಿ ಹಲವಾರು ದೊಡ್ಡ ದೊಡ್ಡ ಭೂಕಂಪಗಳಾಗಿವೆ. ಅವುಗಳಲ್ಲಿ ಮುಖ್ಯವಾಗಿ 1906 ರ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಉಂಟಾದ 7.8 ರಿಕ್ಟರ್ ಮಾಪಕದ ಭೂಕಂಪ ಈ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭೀಕರವಾದುದು. ಅದನ್ನು ಬಿಟ್ಟರೆ 1994ರ ನಾರ್ಥ್ ರಿಡ್ಜ್ ಭಾಗದಲ್ಲಿ ಉಂಟಾದ ಭೂಕಂಪ. ಇಲ್ಲಿ ನಿರಂತರ ಭೂಕಂಪಗಳಾಗುವ ಕಾರಣಕ್ಕೆ ಇಲ್ಲಿನ ಮನೆಗಳನ್ನು ಹಗುರವಾದ ಮರದ ಹಲಗೆಗಳಿಂದ ಕಟ್ಟಲಾಗುತ್ತದೆ. ಯಾವುದೇ ದೊಡ್ಡ ಕಟ್ಟಗಳನ್ನಾಗಲೀ ಅಥವಾ ಚಿಕ್ಕ ಮನೆಗಳನ್ನೇ ಆಗಲಿ ವಿನ್ಯಾಸಗೊಳಿಸುವಾಗ ಸಾಧಾರಣ ಭೂಕಂಪಕ್ಕೆಲ್ಲಾ ಜಗ್ಗದಂತೆಯೇ ರೂಪಿಸಿರುತ್ತಾರೆ. ಮೇಲೆ ಹೇಳಿದಂತೆಯೇ ಭೂಕಂಪವಾಗುತ್ತಿದ್ದ ಕ್ಷಣಾರ್ಧದಲ್ಲಿ ಪ್ರತಿಯೊಂದು ಫೋನುಗಳಿಗೂ ತುರ್ತು ಸಂದೇಶ ಬರುತ್ತದೆ. ಅದಾದ ಕೆಲ ನಿಮಿಷಗಳಲ್ಲಿ ಭೂಕಂಪಾನಂತರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಸಂದೇಶ ಬರುತ್ತದೆ. ಆದರೆ ಈ ತಂತ್ರಜ್ಞಾನಗಳು ಎಷ್ಟು ಪರಿಣಾಮಕಾರಿ ಎಂಬುದು ಪ್ರಕೃತಿ ದೊಡ್ಡ ಪರೀಕ್ಷೆಯನ್ನಿಟ್ಟಾಗಲೇ ತಿಳಿಯುವುದು.
ನನ್ನ ಹೆದರಿಕೆ ಏನೆಂದರೆ ನಾನು ಟಾಯ್ಲೆಟ್ಟಿನಲ್ಲಿದ್ದಾಗಲೋ ಇಲ್ಲಾ ಸ್ನಾನ ಮಾಡಬೇಕಾದರೋ ಭೂಕಂಪವಾದರೆ ಏನು ಮಾಡೋದು ಅಂತ. ಆ ಅವಸ್ಥೆಯಲ್ಲಿ ಹೊರಗೆ ಓಡುವುದು ಎಷ್ಟು ಮುಜುಗರದ ಸನ್ನಿವೇಶ ಅಂತ ಯೋಚಿಸಿ. ನಾನು ಗೆಳೆಯನೊಟ್ಟಿಗೆ ಮಾತನಾಡುತ್ತಾ ಇದೇ ವಿಷಯ ಹೇಳಿದೆ. ಸ್ನಾನ ಮಾಡುತ್ತಿರುವಾಗ ಭೂಕಂಪ ಶುರುವಾದರೆ ಹಾಗೇ ಟವೆಲ್ ಸುತ್ತಿಕೊಂಡು ಓಡಬೇಕಾಗತ್ತೆ ಅಂತ. ಆಗ ಅವನು ಕೈಗೆ ಟವೆಲ್ ಕೂಡಾ ಸಿಗದಿದ್ದರೆ ಏನು ಮಾಡ್ತೀಯಾ, ಇಲ್ಲಾ ಟಾಯ್ಲೆಟ್ಟಲ್ಲಿ ಕೂತಿದ್ದಾಗ ತೊಳೆಯದೇ ಓಡಬೇಕಾಗಿ ಬಂದರೆ ಏನು ಮಾಡ್ತೀಯಾ? ಅಂದ. ದಿನ ಕಳೆದಹಾಗೇ ಪೋಲಿ ಆಗ್ತಿದೀಯಾ ನೀನು ಅಂತ ಬೈದು ಮಾತು ಮುಗಿಸಿದೆ.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.