‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್‌ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ. ‘ಹಿಡಿದ ಕಾರ್ಯವನ್ನು ಬೇಗನೆ’ ಸರಿಯಾಗಿ ಮಾಡಿಯೇ ಬಿಟ್ಟೆ’ ಎನ್ನುವ ಸಂದರ್ಭದಲ್ಲಿಯೂ ‘ಧಮ್ ಕಟ್ಟಿ ಮಾಡಿದೆ’ ಎನ್ನುವುದಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎರಡನೆಯ ಬರಹ

ನಮ್ ವಾಣಿ ಮದುವೆ ಮಿಸ್ ಮಾಡೋಕ್ಕಾಗತ್ತ? ನಮ್ ಮನೆ ಪಕ್ಕ ಅಲ್ಲಾ ಅದರ ಪಕ್ಕ ಅವರ ಮನೆ. ವಾಣಿ ಮದುವೆ ಗದ್ದಲ ಶುರು ಅದಾಗಿಂದ ಶಾಪಿಂಗ್, ಫೋಟೊ ಶೂಟಿಂಗ್ ಎಲ್ಲದ್ರು ಬಗ್ಗೆನು ಅಪ್ಡೇಟ್ಸ್ ಕೊಡ್ತನೆ ಇದ್ಲು. ಗೊತ್ತಲ್ಲ ಮದುವೆ ಅಂದರೆ ಮೊದ ಮೊದಲು‌ ಮಧು ಆಮ್ಯಾಲೆ ವ್ಯಾ ಅಂತ. ಇರಲಿ ಎಲ್ಲರಿಗೂ ಹಾಗಾಗ್ಬೇಕು ಅಂತಿಲ್ಲವಲ್ಲ. ನಮ್ ವಾಣಿ ಮದುವೆ ಅಲ್ವಾ ಅಂತ ನಾವೂ ಶಾಪಿಂಗ್, ಪಾರ್ಲರ್ ಅಂತ ಎಲ್ಲ ವ್ಯವಸ್ಥೆ ಮಾಡ್ಕೊಂಡ್ವಿ. ಚಪ್ರ, ಮೆಹೆಂದಿ, ಅರಿಶಿಣ ಶಾಸ್ತ್ರ ಎಲ್ಲದಕ್ಕೂ ಅಟೆಂಡ್ ಮಾಡಿದ್ವಿ. ಎಂಥಾ ಗೌಜಿನ್ ಮದುವೆ ಗೊತ್ತಾ? ಊಟೋಪಚಾರ ಎಲ್ಲಾ ಪರ್ಫೆಕ್ಟ್! ಮದುವೆ ದಿನ ಮದುವೆ ಹುಡುಗಿಗಿಂತ ಗ್ರ್ಯಾಂಡ್ ಆಗಿ ಡ್ರೆಸ್ ಮಾಡ್ಕೊಂಡು ಫೋಟೋಶೂಟ್ ಮಾಡಿಸಿಕೊಳ್ಳೋ ಹುಡುಗಿಯರಿಗೆ ಏನು ಕಮ್ಮಿನೆ ಎಲ್ಲರೂ ಅದಕ್ಕೆ ಅಂತ ಯೂನಿಕ್ ಆಗಿ ಮಾಡಿದ್ದ ಸೆಲ್ಫಿ ಸ್ಟ್ಯಾಂಡಲ್ಲಿ ಫೋಟೋ ತೆಗೆಸ್ಕೊಳ್ಳೋದೇ ತೆಗೆಸ್ಕೊಳೋದು. ಅಯ್ಯೋ ರಾಮ! ಇಷ್ಟೊಂದು ಹುಚ್ಚ….! ಫೋಟೋಕ್ಕೆ? ಮದುವೆ ರಿಸೆಪ್ಶನಲ್ ಮದುವೆ ಹುಡುಗ ಹುಡುಗಿ ಆಚೆ ನಿಲ್ಲಿಸಿ ಈಚೆ ನಲ್ಸಿ ಎಲ್ಲಾ ಫೋಟೋ ತೆಗೆಸ್ಕೊತಾ ಇದ್ರು, ಪಾಪ ವಯಸ್ಸಾದವರು ಒಬ್ಬರು ಬಂದು ಓದಿಸ್ಬೇಕಿತ್ತು.

ಈ ಹುಡ್ಗೀರ್ ಫೋಟೋ ಹುಚ್ಚು ಆ ವೃದ್ಧನ್ನ ಕೆರಳಿಸಿ “ಏನು ಸಿನಿಮಾ ತಾರೆರ್ ಇದ್ದಂಗ್ ಇದ್ದೀನಿ ಅಂತ ಅಲ್ಲು ಇಲ್ಲು ಫೋಟೋ ತಗುಸ್ಕೊಳೋದೆ ತಗುಸ್ಕೊಳೋದು, ಬನ್ರಮ್ಮ ಈ ಕಡೆ… ನಾನೂ ಒಂಚೂರು ತಗುಸ್ಕೊತಿನಿ” ಅಂತ ಮೆಲ್ಲಗೆ ಗದರದ್ರು. ಒಂದಿಬ್ರು ಸುಮ್ನೆ ಇದ್ದರೂ ಇನ್ನೊಬ್ಬಳು “ಹೂ ತಾತ! ನಾವೇನೋ ಹೀರೋಯಿನ್ಸೆ!!! ಹಾಗೆ ತಿಳ್ಕೊಳಿ….. ನೀವು ಹೇಗಿದ್ದೀರಾ ತಾತ ನೀವೇನ್ ಹೀರೋನಾ? ನೀವು ನಮ್ ತರಾನೇ ಫೋಟೋ ತೆಗೆಸಿಕೊಳ್ಳೋಕೆ ಬಂದಿದ್ದೀರಾ…..? ನೀವು ಹೀರೋ ಇರಬೇಕು ಅಲ್ವಾ! ನಿಮ್ ಫ್ಯಾನ್ಸು ಎಲ್ಲ ಬಂದಿರಬೇಕು! ಅದಕ್ಕೆ ಪಾಪ ಅಜ್ಜಿ ಬಂದಿಲ್ಲ!” ಅಂತ ನಗ್ತಾನೆ ಉತ್ತರ ಕೊಟ್ಳು. ಪಾಪ.! ಆ ವೃದ್ಧರಿಗೆ ಒಂದ್ ಕ್ಷಣಕ್ಕೆ ಹಾಗೆ ಹೊರಟೋಗ್ಬಿಡ್ಲಾ ಅನ್ನಿಸ್ಬಿಡ್ತು, ಮುಜುಗರನ‌ ಅನುಭವಿಸಬಹುದು ಆದರೆ ಜನರೆದ್ರು ತೋರಿಸಿಕೊಳ್ಳಕಾಗುತ್ತಾ? ನನಗೇನು ಕೇಳ್ಸಿಲ್ಲ ಅಂತಾನೆ ಓದಿಸಿ ಎಲ್ ಹೋದ್ರು ಗೊತ್ತೇ ಆಗ್ಲಿಲ್ಲ? ಎಂದು ಒಂದೇ ಸಮನೆ ನಮ್ಮ ಪಕ್ಕದ ಮನೆಯವರು ಹೇಳುತ್ತಿದ್ದರು. ಸರಿ! ಇಲ್ಲಿ ‘ಓದಿಸೋದು’ ಅಂದ್ರೆ ಏನು ಅಂದ್ರೆ ನಮ್ಮಲ್ಲಿ ಪ್ರಸೆಂಟೇಶನ್ ಕೊಡೋದು ಗಿಫ್ಟ್ ಕೊಡುವುದು ಕವರ್ ಮಾಡುವುದು. ಮುಯ್ ಹಾಕುವುದು ಅಂತಾರಲ್ಲ ಹಾಗೆ.

‘ಓದಿಸೋದು’ ಅಂದ್ರೆ ಉಡುಗೊರೆ ಕೊಡುವುದು ಎಂದರ್ಥ. ‘ಉಡುಗೊರೆ’ ಉಡುವ ಕೋರಿ ಅಥವಾ ಬಟ್ಟೆಯೇ ಉಡುಗೊರೆ. ‘ಕ’ಕಾರ ‘ಗ’ಕಾರ ಆಗಿದೆ ‘ಕೋರಿ’ ಎಂದರೆ ‘ಸೀರೆ ಎನ್ನುವ ಅರ್ಥವಿದೆ ಆದರೆ ಇಂದು ಬ್ಲೌಸ್ ಪೀಸ್ ಕೊಟ್ಟರೂ ಅಥವಾ ಇನ್ಯಾವುದೇ ವಸ್ತು ಕೊಟ್ಟರೂ ಉಡುಗೊರೆ ಇಲ್ಲವೆ ಗಿಫ್ಟ್ ಎನ್ನುತ್ತಾರೆ. ‘ಮುಯ್ಯಿ’ ಎಂದರೆ ಪ್ರೆಸೆಂಟಶನ್ ಕೊಡುವುದು ಎಂದರ್ಥ. ‘ನಾನು ಕವರಿಗೆ ಸಾವಿರದ ಒಂದು ರೂಪಾಯಿ ಹಾಕಿದ್ದೆ ಅವರು ನೋಡಿದರೆ ಐನೂರೇ ರುಪಾಯಿ’ ಎಂದು ಕವರ್ ತೆಗೆಯುವಾಗ ಆಡುವ ಮಾತುಗಳಿಗೇನು ಕಡಿಮೆಯಿಲ್ಲ! ಒಂಥರಾ ಡಿ… ಕೋಡಿಂಗ್ ಇದ್ದಹಾಗೆ ಈ ಕವರ್ ಲೆಕ್ಕಾಚಾರ. ನಮ್ಮೀ ಕೊಡುಕೊಳ್ಳುವಿಕೆ ಇದ್ದ ಹಾಗೆ ಹೊಲ-ಗದ್ದೆಗಳ ಕೆಲಸಕ್ಕೆ ಜನ ಸಿಗದೆ ಇದ್ದಾಗ ಅಥವಾ ಕೂಲಿ ದುಬಾರಿ ಕೊಟ್ಟು ಕೆಲಸಕ್ಕೆ ಕರೆಯುವುದಕ್ಕಿಂತ ಕೆಲಸಕ್ಕೆ ಕೆಲಸವನ್ನೇ ಮಾಡುವ ಪದ್ಧತಿಗೆ ಮುಯ್ಯಿಆಳು ಎನ್ನುವರು. ಹೀಗೆ ಮುಯ್ಯಿ ಆಳಿಗೆ ಒಪ್ಪಿದರೆ ಎಂಥ ಕೆಲಸವಿದ್ದರು ಬಿಟ್ಟು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ.

ಗಿಫ್ಟಿಗೆ ಪ್ರತಿಯಾಗಿ ರಿಟರ್ನ್ ಗಿಫ್ಟ್ ಎನ್ನುವ ರೂಢಿ ಇದ್ದೇ ಇದೆ. ಇದು ಖಂಡಿತಾ ಹೊಸದಲ್ಲ. ನಮ್ಮಲ್ಲಿ ಮದುವೆ ಮೊದಲಾದ ಶುಭಕಾರ್ಯಗಳಲ್ಲಿ ಊಟದ ನಂತರ ಹೆಣ್ಣು ಮಕ್ಕಳಿಗೆ ಉಡುಗೊರೆಯನ್ನು ಗಂಡು ಮಕ್ಕಳಿಗೆ ಫಲತಾಂಬೂಲವನ್ನೂ ತೀರಾ ಹತ್ತಿರದವರಾದರೆ ವಸ್ತ್ರ ಇತರೆ ವಸ್ತುಗಳನ್ನು ಕೊಡುವ ಪದ್ಧತಿ ಇತ್ತು. ಈಗಲೂ ಇದೆ ಇಲ್ಲಿ. ಕುತೂಹಲ ಹೆಚ್ಚಿ ಎಂಜಿಲು ಕೈ ಸರಿಯಾಗಿ ತೊಳೆಯುತ್ತಾರೋ ಇಲ್ಲವೋ ಗಿಫ್ಟ್ ತೆರೆದು ನೋಡಿ ಅದಕ್ಕೆ ಕಮೆಂಟ್ ಕೊಟ್ಟು ಆನಂತರ ಬೀಡವೋ ಇಲ್ಲವೋ ಐಸ್ಕ್ರೀಮ್ ಸರತಿಗೆ ಹೋಗುವುದು ಇರಲಿ. ಆನಂತರ ಸೆಲ್ಫಿ ಸ್ಟ್ಯಾಂಡಲ್ಲಿ ದಂಪತಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು.

ಈ ವರ್ಷ ಮಳೆ ಹೆಚ್ಚೇ ಇತ್ತು ನೋಡಿ! ಮಳೆ ಇನ್ನೂ ಕಡಿಮೆ ಆಗಿರಲಿಲ್ಲ. ಶ್ರಾವಣ ಬಂದಂತೆಯೇ ಮದುವೆ, ಗೃಹಪ್ರವೇಶ ಮೊದಲಾದ ಶುಭಕಾರ್ಯಗಳು ಪ್ರಾರಂಭವಾಗಿಬಿಟ್ಟವು. ನಾವು ಹೋಗಿದ್ದಲ್ಲಿಗೇ ಶೀತ- ನೆಗಡಿಯಿಂದ ಬಳಲುತ್ತಿದ್ದವರೊಬ್ಬರು ಕೆಮ್ಮುತ್ತಲೇ ಸೆಲ್ಫಿ ಸ್ಟ್ಯಾಂಡಿಗೆ ಬಂದು ನಿಂತರು. ಇನ್ನೇನು ಫೋಟೊ ತೆಗೆಯಬೇಕು ಎನ್ನುವಾಗಲೆ ಕೆಮ್ಮು ಬಂದೇ ಬಿಡುತ್ತಿತ್ತು. ಎರಡು ಮೂರು ಬಾರಿ ಹೀಗೆ ಆಯಿತು. ಕೆಮ್ಮಿದರೆ ಗೊರ ಗೊರ ಸದ್ದೂ ಬರುತ್ತಾ ಇತ್ತು. ಅಂದರೆ ಅಸ್ತಮಾ ಅಂತ ಅರ್ಥ ಅಲ್ವ! ಇರಲಿ ಕೆಮ್ಮು- ದಮ್ಮು ಹೆಚ್ಚಿದ್ದ ಕಾರಣ ಆ ದಿನ ನನಗೆ ಇವರೆ ನಿಜವಾದ ‘ದಂಪತಿ ‘ಅನ್ನಿಸಿತು.

‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್‌ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ. ‘ಹಿಡಿದ ಕಾರ್ಯವನ್ನು ಬೇಗನೆ’ ಸರಿಯಾಗಿ ಮಾಡಿಯೇ ಬಿಟ್ಟೆ’ ಎನ್ನುವ ಸಂದರ್ಭದಲ್ಲಿಯೂ ‘ಧಮ್ ಕಟ್ಟಿ ಮಾಡಿದೆ’ ಎನ್ನುವುದಿದೆ. ಇನ್ನು ಇಂಡಿಯಾ ಪಾಕಿಸ್ಥಾನ ಒನ್ ಡೇ ಮ್ಯಾಚ್ ಇದ್ದು ಸೆಕೆಂಡ್ ಬ್ಯಾಟಿಂಗ್ ಇಂಡಿಯಾ ಕಡೆಯ ಓವರ್….. ಎರಡು ಬಾಲ್ ಮೂರು ರನ್ ಬೇಕಾಗಿದೆ ಎನ್ನುವಾಗ ಉಸಿರು ಬಿಗಿ ಹಿಡಿದುನೋಡುವುದಕ್ಕೂ ‘ಧಂ ಕಟ್ಟಿ ಮ್ಯಾಚ್ ನೋಡಿದೆ’ ಎಂದೇ ಹೇಳುವುದು. ಹಾಗೆ ಸಿಗರೇಟ್ ಸೇದುವವರು ಇದ್ದಾರೆ. ಗೊತ್ತಿಲ್ಲದೆ ಇದ್ದವರಿಗೆ ಒಂದು ಧಂ ಎಳಿ ನೋಡೋಣ ಎಂದು ದುರಾಭ್ಯಾಸ ಮಾಡಿಸುವವರೂ ಇದ್ದಾರೆ. ಕೆಲವರಿಗೆ ಒಂದಾದರ ನಂತರ ಐದಾರು ಸಿಗರೇಟ್‌ಗಳನ್ನು ರೇಟ್ ಎಷ್ಟಾದರೂ ಎಳೆಯುವವರು ಇದ್ದಾರೆ. ಇವರೂ ನಿಜವಾದ ‘ಧಂ ಪತಿ’ಗಳು ಎನ್ನಬಹುದೆ.

ಗಿಫ್ಟ್ ವಿಚಾರ ಹೇಳುವಾಗ ಎಂಜಿಲು ಕೈ ವಿಚಾರ ಬಂತು. ಜಿಪುಣರಿಗೆ ಹೇಳುವ ‘ಎಂಜಿಲು ಕೈಯಲ್ಲಿ ಕಾಗೆಯನ್ನೂ ಓಡಿಸುವುದಿಲ್ಲ’ ಎಂಬ ಗಾದೆ ಎಲ್ಲರಿಗೂ ತಿಳಿದಿರುವಂಥದ್ದೆ. ಜಾನಪದ ತ್ರಿಪದಿಗಳಲ್ಲಿ
ಕಣ್ಣೆಂಜಲ ಕಾಡೀಗಿ ಬಾಯೆಂಜಲವೀಳ್ಯಾವ|
ಯಾರೆಂಜಲುಂಡು ನನಮನವ| ಹಡೆದೌವ್ನ|
ಬಾಯೆಂಜಲುಂಡು ಬೆಳೆದೇನ||… ಎಂಬ ಸಾಲುಗಳು ಇವೆ ‘ಎಂಜಿಲು’ ಎಂದರೆ ಬಳಸಿದ, ರುಚಿ ನೋಡಿದ ಅಥವಾ ಊಟ ಮಾಡಿದ ಕೈ ಎನ್ನುವ ಅರ್ಥ ಬರುತ್ತದೆ. ಕಾಡಿಗೆ ಎಂದರೆ ಅರಣ್ಯ, ಕಾನನ, ವನ ಎಂಬ ಪದಗಳು ಸುಳಿದು ತಕ್ಷಣ ಇದು ಕಾಡು ಅಲ್ಲ ಕಾಡಿಗೆ ಕಣ್ಣಿಗೆ ಹಚ್ಚುವ ಕಣ್ಣುಕಪ್ಪು ಎನ್ನುವ ಅರ್ಥ ಬರುತ್ತದೆ.

ಇಂದಿಗೆ ಕಾಡಿಗೆ ಪೆನ್ಸಿಲ್, ಬ್ರಷ್‌ಗಳಲ್ಲಿ ಬಂದಿದೆ ನಮ್ಮ ಅಮ್ಮಂದಿರೆಲ್ಲ ಕಿರುಬೆರಳಲ್ಲೆ ಕಾಡಿಗೆಯನ್ನು ದೃಷ್ಟಿ ಬೊಟ್ಟನ್ನು ಇಡುತ್ತಿದ್ದವರು ಅಲ್ಲವೆ.. 1980ರ ದಶಕದ ಹಿಂದಿನ ಯಾವುದೇ ಮಕ್ಕಳ ಫೋಟೋಗಳನ್ನು ತೆಗೆದುಕೊಂಡರೂ ಕಾಡಿಗೆಯ ಕಡುಕಪ್ಪನ್ನು ನೋಡಬಹುದು. ನಂದಿಬಟ್ಟಲುಹೂ, ಹರಳೆಣ್ಣೆ ಉಪಯೋಗಿಸಿ ಕಾಡಿಗೆ ಮಾಡುತ್ತಿದ್ದರು. ಕಣ್ಣಿನ ಕಸ ತೆಗೆಯಲು ಕಾಡಿಗೆ ಉಪಯುಕ್ತ ಕೆಲವರು ಕಾಡಿಗೆ ಹಾಕಿಕೊಂಡರೆ ಸಂಜೆ ಆದರೂ ಹಾಗೆ ಇರುತ್ತಾರೆ. ಕೆಲವರಿಗೆ ಕಾಡಿಗೆ ಬೇಗ ಸ್ಪ್ರೆಡ್ ಆಗಿ ರಾರ ಡ್ಯಾನ್ಸರ್ಸ್ ಆಗಿ ತಕ್ಷಣಕ್ಕೆ ಕಂಡು ಬಿಡುತ್ತಾರೆ. ಅದಕ್ಕೆ ಈಗ ವಾಟರ್‌ಪ್ರೂಫ್ ಕಾಡಿಗೆ ಬಂದಿರುವುದು. ಈ ಕಾಡಿಗೆ ಹಚ್ಚುವುದರಿಂದ ಕಣ್ಣಿನ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸುವುದರಲ್ಲಿ ಸಂಶಯವಿಲ್ಲ. ಚಂದ್ರಹಾಸನ ಕತೆಯಲ್ಲಿ ದುಷ್ಟಬುದ್ಧಿ ತನ್ನ ಮಗನಿಗೆ ಈ ಯುವಕನಿಗೆ ಬೆಳಗಾಗುವುದರೊಳಗೆ ವಿಷವನ್ನು ಕೊಡತಕ್ಕದ್ದು ಎಂದು ಕಾಗದ ಬರೆದು ಅವನ ಕೈಯಲ್ಲೆ ಕೊಟ್ಟಿರುತ್ತಾನೆ. ಚಂದ್ರಹಾಸ ಕುದುರೆ ಏರಿ ಬಂದು ಸುಸ್ತಾಗಿ ಮಲಗಿಕೊಂಡಿರುತ್ತಾನೆ. ಅದನ್ನು ಕಂಡ ದುಷ್ಟಬುದ್ಧಿಯ ಮಗಳು ವಿಷಯೆ ಆ ಪತ್ರವನ್ನು ಅವನಿಗೆ ತಿಳಿಯದಂತೆ ಓದಿ ಇಷ್ಟು ಸುಂದರನಿಗೆ ವಿಷವನ್ನು ಕೊಡುವುದೆ ಖಂಡಿತಾ ಇಲ್ಲ ಎಂದು ತನ್ನ ಕಾಡಿಗೆಯಿಂದಲೆ ವಿಷವನ್ನು ಇದ್ದದ್ದನ್ನು ವಿಷಯೆಯನ್ನು ಎಂದು ತಿದ್ದಿಬಿಡುತ್ತಾಳೆ. ಅವನನ್ನು ಮದುವೆಯಾಗುತ್ತಾಳೆ. ಇದು ಕಾಡಿಗೆ ಮಾಡಿದ ಉಪಕಾರ ಅಲ್ವೆ! ಮಂತ್ರಿ ಚಂದ್ರಹಾಸನ ತಂದೆಯನ್ನು ಕೊಂದಿದ್ದ ಆದರೆ ಚಂದ್ರಹಾಸ ಅವನ ಮೇಲೆ ಸೇಡು ಇಲ್ಲವೆ ಮುಯ್ಯಿ ತೀರಿಸಿಕೊಳ್ಳಲೇ ಇಲ್ಲ.. ಎಲ್ಲಾ ಸುಖಾಂತ್ಯವಾಯಿತು.

‘ಕಣ್ಣೆಂಜಲ ಕಾಡಿಗೆ’ ಎಂದರೆ ಅಮ್ಮ ಬಳಸಿದ ಕಾಡಿಗೆಯಲ್ಲಿ ಎಷ್ಟು ಜನರು ದೃಷ್ಟಿ ಬೊಟ್ಟು ಇರಿಸಿಕೊಂಡಿಲ್ಲ ಹೇಳಿ! ಕಾಡಿಗೆ ಅಷ್ಟೇ ಅಲ್ಲ… ಅಮ್ಮ ಬಳಸಿದ ಎಲ್ಲವನ್ನೂ ನಾವು ಬಳಸಿದ್ದೇವೆ ಮತ್ತು ಬಳಸುತ್ತಿದ್ದೇವೆ. ನನ್ನ ಮಗ ಆರೇಳು ತಿಂಗಳಿನವನು ಆಗಷ್ಟೆ ರಾಗಿ ಮಾಲ್ಟ್ ಕೊಡಲು ಪ್ರಾರಂಭಿಸಿದ್ದೆ. ಅವನಿಗೆ ಹೊಟ್ಟೆ ಉಬ್ಬರವಾಗಿ ಒಂದೇ ಸಮನೆ ಅಳಲು ಪ್ರಾರಂಭಿಸಿದ. ಅತ್ತು ಸುಸ್ತಾಗುತ್ತಾನೇನೋ ಅನ್ನುವ ಭಯದಿಂದ ಗೆಳತಿ ಡಾಕ್ಟರ್ ವಿಶಾಲಾಕ್ಷಿಗೆ ಫೋನ್ ಮಾಡಿದಾಗ ಆಕೆ ಅಜವೈನನ್ನು ನೀವು ಜಗಿದು ಅದರ ಗಾಳಿಯನ್ನು ಅವನ ಬಾಯಿಗೆ ಊದಿ ಎಂದರು. ಹಾಗೆ ಮಾಡಿದ್ದೇ ಕಟ್ಟಿದ ಮಗುವಿನ ಹೊಟ್ಟೆ ಭಾರೀ ಸದ್ದಿನೊಂದಿಗೇ ಬಿಟ್ಟಿತು. ಆರಾಮಾದ ಇಂಥ ರೆಮಿಡಿಗಳನ್ನು ಹಿರಿಯರು ಎಷ್ಟೋ ಮಾಡಿರುತ್ತಾರೆ. ‘ಹಡೆದೌವ್ನ ಬಾಯೆಂಜಲುಂಡು ಬೆಳೆದೇನ’’ ಎನ್ನುವ ತ್ರಿಪದಿಯ ಸಾಲು ಎಷ್ಟು ಸರಿ ಅಲ್ವ! ವಿಪರ್ಯಾಸ ಅಂದರೆ ತಿಳಿವಳಿಕೆ ಇದ್ದವರೂ ಕೆಲವೊಮ್ಮೆ ಎಷ್ಟು ವಯಸ್ಸಾದರೂ ಎಂಜಿಲು ಹಚ್ಚಿ ಪುಟ ತಿರುಗಿಸುವುದು, ನೋಟು ಎಣಿಸುತ್ತಾರೆ. ಹೀಗೆ ಮಾಡಬಾರದು ಅನ್ನುವುದಕ್ಕಿಂತ ಸಭ್ಯತೆ ಅಲ್ಲ ಅನ್ನಿಸುತ್ತದೆ. ಇನ್ನೂ ಅಸಭ್ಯ ಎಂದರೆ ಅಸಂಬದ್ಧ ಉತ್ತರಗಳನ್ನು ಬರೆದು ಉತ್ತರ ಪತ್ರಿಕೆಗಳಲ್ಲಿ ಪು.ತಿ.ನೋ ಎಂದು ಬರೆದಿರುತ್ತಾರೆ ಕೆಲ ವಿದ್ಯಾರ್ಥಿಗಳು. ಕೋಪ ನೆತ್ತಿಗೇರುತ್ತದೆ! ಉತ್ತರ ಪತ್ರಿಕೆಗಳ ಉತ್ತರವನ್ನೆ ಇರಿಸಿಕೊಂಡು ನಮ್ಮ ಪದ ಕ್ಯಾತೆ ಮುಂದಿನ ಕಂತು ಮುಂದುವರೆಯಲಿದೆ…