ಮುತ್ತುಗದೆಲೆಯ ಮೇಲಿನ ಬೆಲ್ಲ

ಇತ್ತಿತ್ತಲಾಗೆ ವೃಷ್ಟಿ ಎಂದರೆ ಎದೆಯೊಳಗೆ
ಭತ್ತ ಕುಟ್ಟಿದ ಹಾಗೆ
ಬಂತೋ ಬರೋಬ್ಬರಿ
ಇಲ್ವೋ ಕಣ್ಣೀರ ಬೆವರ ಹನಿ ಖಾತರಿ

ಸುರಿದು ಸುರಿಯದೆ ಹರಿದು ಹರಿಯದೆ
ಅದೆಷ್ಟು ಮಂದಿಯ
ತೇಲಿಸಿತೋ ಮುಳುಗಿಸಿತೋ ಈ ಮಳೆ
ಬಯಲು ತೊಯ್ಯಲಿ ಕಾಲುವೆ ಉಕ್ಕಲಿ
ನೆರೆ ಬಂದು ಹೋಗಲಿ
ಕೆರೆ ಕೋಡಿ ಬೀಳಲಿ ಬೆಳೆ ಸಮೃದ್ಧವಾಗಲಿ
ಜಲಾಶಯಗಳಲ್ಲಿ ನೀರು ಭರ್ತಿಯಾಗಲಿ

ನಿಲ್ಲಲಿ ಎಂದರೂ ನಿಲ್ಲದೀ ಮಳೆ
ಹೊಯ್ಯುತಿದೆ ನದಿ ಹಾದಿ ಒಂದಾಗುತಿದೆ
ಹೊಡಸಲ ಕಾವು ಕಂಬಳಿಗೆ
ಕಾದ ಮನದ ಮೇಲೆ ಸೋರುತಿಹ ಮನೆಯ
ಮಾಡಿನಿಂದ ಬಿದ್ದ ಒಂದು ಹನಿ ‘ಚುರ್’
ಚೂರು ಬಿರುಕಿನ ಮಣ್ಣಿನ ಗೋಡೆ
ಬಾಯಿ ಬಿಟ್ಟಿದೆ ಹೆಚ್ಚು ಹಸಿದು
ಪೈರು ಬರಲಿನ್ನೂ ಇದು ಮುಂಗಾರು

ಹೊನ್ನ ಹೊಗೆಯಾಡಲು ಕಾರಣವಾದ
ಹೊಲವೀಗ ಅಸ್ಥಿರ
ಕಳೆದಿವೆ ಕೃತ್ತಿಕಾ ರೋಹಿಣಿ ಮೃಗಶಿರ
ಕಣಜ ಕಾಣೆಯಾದ ಜಾಗದಲ್ಲಿ ಪಾಸ್ ಬುಕ್ಕು
ನಗದು ರಹಿತ ಚಲಾವಣೆ
ಮುಂಗಡ ಸುಸ್ತಿ ಸಾಲದ ಸುಸ್ತು

ಮಳೆಯ ಕಾರಿಡಾರಿನಲ್ಲಿ ಮನುಷ್ಯ
ಕಾಲಿಟ್ಟು ಗಂಧರ್ವ ಲೋಕ ಸೃಷ್ಟಿ
ಅತಿವೃಷ್ಟಿಗೆ ಕೃತಕ ಜಗತ್ತು ಮಣ್ಣುಪಾಲು
ಸವಾಲಿನಲ್ಲಿ ಪ್ರಕೃತಿಯ ಕೈಮೇಲು

ಕಾಡಿ ಕಾಡಿ ಪಡೆದ ಕಾಡಿನ ಭೂಮಿ
ದೈತ್ಯ ಯಂತ್ರಗಳೆದುರು ದೀನ
ಬೆಂಗಾಡಾದ ಮಲೆನಾಡಿಗೀಗ
ಮಳೆ ಬೇಡದ ಅತಿಥಿಯಲ್ಲ

ಒಂದು ಗಿಡ ನೆಡದ ಸ್ವಾರ್ಥ
ನಿತ್ಯ ಹರಿದ್ವರ್ಣ ವನವು ಸುಡುಗಾಡು
ಮಸಣದಲ್ಲಿ ಅರಳದ ಹೂವು
ಬದುಕ ತುಂಬಾ ಬರೀ ಬೇವು