ಮೈನಾ ಸತ್ಯನಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅದನ್ನು ಕಂಡು ಬೇಸರದಿಂದ ಇದೆಂಥಾ ಉಡುಗೊರೆ ಎಂದು ಸತ್ಯ ಎಸೆಯುತ್ತಾನೆ. ಅನಂತರ ಕಾಲಿಲ್ಲದೇ ನೆಲಕ್ಕೆ ಕೈಯ್ಯಿಟ್ಟು ನಡೆಯುವಾಗ ನೋವನುಭವಿಸಬಾರದು ಎಂದು ಇದನ್ನು ನೀಡಿದ್ದಾಳೆ ಎಂದು ತಿಳಿದು ಖೇದಗೊಳ್ಳುತ್ತಾನೆ ಆತ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಥೆಯು ಸೆರೆ ಹಿಡಿದ ಸೂಕ್ಷ್ಮತೆ. ಈ ದೃಶ್ಯವೇನೂ ಕಥೆಯ ಮುಖ್ಯ ಭಾಗವಲ್ಲದಿದ್ದರೂ, ಅದೆಷ್ಟು ಅಧ್ಯಯನದ ದೃಷ್ಟಿಕೋನ ಈ ದೃಶ್ಯದಲ್ಲಿ ಅಡಗಿದೆ ಎಂಬುದು ಅಚ್ಚರಿಯ ಸಂಗತಿ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ನಾಗಶೇಖರ್ ನಿರ್ದೇಶನದ ‘ಮೈನಾ’ ಸಿನಿಮಾದ ವಿಶ್ಲೇಷಣೆ

ಮೊದಲ ಮಳೆಯಂತೆ
ಎದೆಗೆ ಇಳಿದೆ ಮೆಲ್ಲಗೆ
ಮೊದಲ ಕನಸಂತೆ
ಒಲವೇ ಒಲಿದೆ ಮೆಲ್ಲಗೆ…..
-ಜಯಂತ ಕಾಯ್ಕಿಣಿ

ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ನಿಖರ ಟಿಪ್ಪಣಿಯಿಲ್ಲ. ಕಣ್ಣುಗಳಿಂದ ಕಣ್ಣುಗಳಿಗೆ, ಹೃದಯದಿಂದ ಹೃದಯಕ್ಕೆ ಆ ರೂಪಕ ಥರಾವರಿಯಾಗಿ ಬದಲಾಗುತ್ತದೆ. ಘಟ್ಟದ ಮಡಿಲಲ್ಲಿ ಸಿಗುವ ಮಳೆ, ಹಣೆಯಲ್ಲಿ ಮಾಯವಾಗಿ ಕೆಂಪಗಿನ ಕೆಂದಾವರೆಯ ದರ್ಶನವಾದಂತೆ, ಹನಿಗಳ ಕಿರುನಗೆಯಿಂದ ಆರಂಭವಾಗಿ ಎಕರೆಗಟ್ಟಲೆ ಆಪೋಶನ ತೆಗೆದುಕೊಳ್ಳುವ ನದಿಯಂತೆಯೇ ಪ್ರೀತಿ, ಕನ್ನಡಿ ಸೆರೆಹಿಡಿಯಲಾಗದ ಪ್ರತಿಬಿಂಬ. ಅನಂತ ಅಲಗುಗಳು, ತಿರುವುಗಳಿರುವ ರಾಗಮಾಲಿಕೆ. ಪದಗಳು ಒಲಿಯದ ಕವಿತೆ. ಒಲವಿನ ಜನನವೇ ಜಗದಲ್ಲಿರುವ ಒಂದು ಸುಂದರ ಬೆರಗು. ವಿಭಿನ್ನ ಕಾರಣಗಳು, ವೈವಿಧ್ಯಮಯ ಅನುಭಾವಗಳು. ಅನೂಹ್ಯತೆ, ಅಚ್ಚರಿಗಳ ಮೂಟೆಯದು. ಎಲ್ಲವುಗಳ ಆಚೆ, ಪ್ರೀತಿ ಎಂದರೆ ಭಾವನೆಗಳಿಗೆ ಮೀಸಲಾದ ಶಬ್ದವೆಂದರೆ ಅತಿಶಯೋಕ್ತಿಯಲ್ಲ. ಇಂತಹ ಒಂದು ದೇಹದ ಭಾಷೆಗೂ ಮಿಗಿಲಾದ, ಪರಿಶುದ್ಧ ಭಾವಗಳ ಅತ್ಯಂತಿಕ ಚಿತ್ರಣವೇ ನಾಗಶೇಖರ್ ನಿರ್ದೇಶನದ ‘ಮೈನಾ’.

ಅವನು ಸತ್ಯ. ಕಾಸಲ್ ರಾಕ್ ಬಳಿ ಮಲಗಿರುವ ರೈಲ್ವೆ ಹಳಿಯ ಮಗ್ಗುಲಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋವೊಂದರ ಸ್ಪರ್ಧಿ. ಮಳೆಯ ಮಧ್ಯೆ ಹಾಲಿನ ಅಭಿಷೇಕ ಮಾಡುತ್ತಿದ್ದ ಜಲಪಾತದ ನಾಭಿಯ ಮೇಲೆ ಉಗಿಬಂಡಿ ಓಡುತ್ತಿದ್ದಂತಹ, ಪರಿಸರವೇ ಪರವಶಗೊಳಿಸುವ ಭೂರಮೆಯದು. ಆ ರೈಲಿನಲ್ಲಿ ಸ್ಪರ್ಧೆಯೊಂದರ ಸಲುವಾಗಿ, ಭಿಕ್ಷುಕನ ನೆಪದಲ್ಲಿ ಬಂದಾಗ ಅವಳ ಕಣ್ಣುಗಳು ಕಾಣುತ್ತವೆ ಸತ್ಯನಿಗೆ. ಸುಳ್ಳಿಗೂ ಹೃದಯಘಾತವಾಗುವಂತಹ ನೋಟವದು. ಅವಳು ಮೈನಾ. ಪ್ರತಿ ದಿನ ಅದೇ ರೈಲಿನಲ್ಲಿ, ಅದೇ ಸೀಟಿನಲ್ಲಿ ಪಯಣ ಬೆಳೆಸುವುದು ಅವಳ ದಿನಚರಿ. ಅವಳ ಹುಮ್ಮಸ್ಸು, ಉತ್ಸುಕತೆ ಎಲ್ಲವೂ ನಿಲ್ಲದ ಮಳೆಯ ಹೆಗಲು ಹಚ್ಚಿ ಸುರಿವ ಜಲಪಾತದಂತೆಯೇ. ಅವಳ ಕಣ್ಣುಗಳಿಗೆ ಎಲ್ಲವೂ ಸುಂದರ, ಸಂಭ್ರಮ. ಸತ್ಯ ಅವಳ ಜೀವಂತಿಕೆಗೆ ಸೋತು ಹೋಗುತ್ತಾನೆ. ರಿಯಾಲಿಟಿ ಶೋ ಸಹವಾಸ ತೊರೆದು, ಕಾಲಿಲ್ಲದ ವ್ಯಕ್ತಿಯಂತೆ ರೈಲಿನಲ್ಲಿ ದಿನಂಪ್ರತಿ ಭಿಕ್ಷೆಯನ್ನು ಬೇಡುತ್ತಾನೆ, ಅವಳನ್ನು ನೋಡುವ ನೆಪದಲ್ಲಿ. ಅವಳು ಇವನಿಗೆ ಒಂದಿಷ್ಟು ಹಣವನ್ನು ನೀಡಿ, ಬೇಡುವ ಕಾಯಕದ ಬದಲು, ಕೆಲಸವನ್ನು ಮಾಡಿ ಸ್ವಾಭಿಮಾನದ ಬದುಕನ್ನು ಬಾಳಬೇಕು ಎಂದು ತಿಳಿ ಹೇಳುತ್ತಾಳೆ. ಅದರಂತೆಯೇ, ಆತ ಅದೇ ರೈಲಿನಲ್ಲಿ ಪತ್ರಿಕೆ ಮಾರಾಟವನ್ನು ಆರಂಭಿಸುತ್ತಾನೆ. ಅವರಿಬ್ಬರ ಮಧ್ಯೆ ಮಾತು ದ್ವಿಗುಣಗೊಂಡು ಒಲವಿನ ವಿನಿಮಯಕ್ಕೆ ಮುನ್ನುಡಿ ಬರೆಯುತ್ತದೆ. ಇನ್ನೇನು ಮುಂಜಾನೆ ನೇಸರ ಅರಳುವಂತೆಯೇ, ಪ್ರೇಮಧಾರೆಯೆರೆಯಬೇಕು ಅನ್ನುವಾಗಲೇ, ಮೈನಾಳ ಕೈಚೀಲವನ್ನು ಕಳ್ಳನೊಬ್ಬ ಕದಿಯುತ್ತಾನೆ. ಆತನನ್ನು ಹಿಡಿಯಲು, ಸತ್ಯ ತಾನು ಕಾಲಿಲ್ಲದ ವ್ಯಕ್ತಿಯಂತೆ ನಟಿಸುತ್ತಿದ್ದೇನೆ ಎಂಬುವುದನ್ನು ಮರೆತು ಅವನ ಹಿಂದೆ ಓಡುತ್ತಾನೆ. ಆತನನ್ನು ಬೆನ್ನಟ್ಟಿ, ಕೈಚೀಲ ವಶಪಡಿಸಿ, ಮರಳುತ್ತಿರಬೇಕಾದರೆ, ಮೈನಾ ರೈಲಿನಿಂದ ಇಳಿಯುತ್ತಿರುವ ದೃಶ್ಯ ಕಾಣಿಸುತ್ತದೆ. ಕಣ್ಣುಗಳು ಅರೆಕ್ಷಣ ಆಘಾತದ ಹನಿಗಳಲ್ಲಿ ಮಿಂದೇಳುತ್ತದೆ. ಕಾರಣ ಅವಳಿಗೂ ಕಾಲಿನ ಶಕ್ತಿ ತೊರೆದು ಹೋಗಿರುತ್ತದೆ. ಕೈಗಳನ್ನು ಭೂಮಿಗೆ ಒತ್ತಿ ಮುಂದೆ ಸಾಗುತ್ತಿರುತ್ತಾಳೆ ಅವಳು. ಮುಂದೆ ಈರ್ವರ ಮಧ್ಯೆ ಒಲವು ಖಾಯಂಗೊಳ್ಳುತ್ತದೆ. ಇಬ್ಬರೂ ಕಾಯಕದ ದಾರಿ ಹಿಡಿಯುತ್ತಾರೆ. ಆಕೆಯ ಕಾಲಿನ ಶಕ್ತಿಯ ಪುನರಪಿ ತುಂಬಲು, ವೈದ್ಯರೊಬ್ಬರು ಮುಂದೆ ಬರುತ್ತಾರೆ. ಬಹಳಷ್ಟು ನಂಬಿಕೆಯಿಟ್ಟು ಚಿಕಿತ್ಸೆಗೆಂದು ಮುಂದುವರೆದಾಗ, ಆ ಡಾಕ್ಟರ್ ಬಹುದೊಡ್ಡ ವಿಶ್ವಾಸದ್ರೋಹವನ್ನು ಮಾಡುತ್ತಾನೆ. ಮೈನಾಳ ಖಾಸಗಿ ಕ್ಷಣಗಳನ್ನು ಸೆರೆ ಹಿಡಿಯುತ್ತಾನೆ ಮತ್ತು ಅಂತರ್ಜಾಲದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಾನೆ. ಮುಂದೆ ಪ್ರೇಮದ ಕೆಂಪು ನೆತ್ತರಿನ ರೂಪ ಧರಿಸುತ್ತದೆ. ಬದುಕು ಘೋರ ತಿರುವಿನ ಕಣಿವೆಗೆ ಬಿದ್ದು ನಜ್ಜು ಗುಜ್ಜಾಗುತ್ತದೆ. ಮಾತ್ರವಲ್ಲ, ಅಂತ್ಯವೇ ಇಲ್ಲದ ಚಿರಂಜೀವಿ ಸ್ವರೂಪವನ್ನು ತಾಳುತ್ತದೆ ಅವರಿಬ್ಬರ ಒಲವು. ಉಸಿರು ನಿಂತರೂ, ಪ್ರೇಮಧಾರೆ ಹಸಿರಾಗಿ ಸುಶೋಭಿಸುತ್ತಲೇ ಇರುತ್ತದೆ. ಒಟ್ಟಾರೆಯಾಗಿ, ಎಲ್ಲಾ ಇರುವಿಕೆ-ಇಲ್ಲದಿರುವಿಕೆಗಳ ಮಧ್ಯೆ, ಅವಳು ನನ್ನವಳು, ಅವನು ನನ್ನವನು ಎಂದು ಯಾವ ಸಂದೇಹಗಳ ಸುಳಿವೇ ಇಲ್ಲದೇ, ಪರಿಧಿಯ ಮೀರಿ, ಆತ್ಮಾನುಸಂಧಾನಗೊಂಡ ಜೇವವೆರಡರ, ಭಾವ ತೇರ ಪಯಣವೇ ‘ಮೈನಾ’

ನಾಗಶೇಖರ್ ಎಂದರೆ ಕನ್ನಡ ಚಿತ್ರ ಜಗತ್ತಿನ ಭಾವಪೂರಿತ ಪ್ರೇಮ ಕಥೆಗಳ ಸರದಾರ. ‘ಅರಮನೆ’, ‘ಮೈನಾ’ ಮತ್ತು ‘ಸಂಜು ಮತ್ತು ಗೀತಾ’ ಅದಕ್ಕೆ ಸಾದೃಶ್ಯ. ಅವರ ಬರವಣಿಗೆಯಲ್ಲಿ ಅರಳುವ ದೃಶ್ಯಗಳು ಬಿರಿಯುವ ಹೂವಿನಂತೆಯೇ ಅತೀ ಮಧುರ. ಬಿಡುವಿಲ್ಲದೆ ಓಟ ಕೀಳುವ ಮಳೆ, ಗಾಢ ಹಸಿರು ವಸ್ತ್ರ ಧರಿಸಿ ಮಿಂಚುವ ಪ್ರಕೃತಿ, ಬದುಕನ್ನು ಗಾಢವಾಗಿ ಪ್ರೀತಿಸುವ ನಾಯಕಿ, ತುಸು ಭಾವುಕತೆಯ ನೆರಳಿನಲ್ಲಿಯೇ ಕನಸು ಕಾಣುವ ನಾಯಕ ಇವೆಲ್ಲವೂ ಅವರ ಚಿತ್ರಗಳಲ್ಲಿ ಗೈರು ಹಾಜರಾಗದ ಸಂಗತಿಗಳು. ‘ಮೈನಾ’ ಚಿತ್ರವೊಂದು ಪ್ರಥಮಾರ್ಧದಲ್ಲಿ ಸುಂದರ ಪ್ರೇಮ ಕವಿತೆಯಾಗಿ, ಮಧ್ಯಂತರ ದಾಟುತ್ತಿದ್ದಂತೆಯೇ ಕೆಂಪು ಸಮುದ್ರವಾಗುತ್ತದೆ. ಅಂತ್ಯದಲ್ಲಿ ನೋವಿನ ಆರ್ತನಾದ ಕಾಡುತ್ತದೆ. ಚಿತ್ರದ ಮುಗಿತಾಯ ನೀಡುವುದು ನಿರ್ಮಾನುಷ ಬೀದಿಯಲ್ಲಿನ ಪಯಣದ ಭಾವ. ಈ ತೆರನಾದ ಭಾವಗಳ ಹದವಾದ ಮಿಶ್ರಣದಿಂದಾಗಿ, ಕಾಡುವ ಕಥನವಾಗಲು ಸಾಧ್ಯವಾಗಿದೆ ಮೈನಾ.

(ನಾಗಶೇಖರ್)

ಚಿತ್ರದಲ್ಲಿ ಮೈನಾ ಸತ್ಯನಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅದನ್ನು ಕಂಡು ಬೇಸರದಿಂದ ಇದೆಂಥಾ ಉಡುಗೊರೆ ಎಂದು ಸತ್ಯ ಎಸೆಯುತ್ತಾನೆ. ಅನಂತರ ಕಾಲಿಲ್ಲದೇ ನೆಲಕ್ಕೆ ಕೈಯ್ಯಿಟ್ಟು ನಡೆಯುವಾಗ ನೋವನುಭವಿಸಬಾರದು ಎಂದು ಇದನ್ನು ನೀಡಿದ್ದಾಳೆ ಎಂದು ತಿಳಿದು ಖೇದಗೊಳ್ಳುತ್ತಾನೆ ಆತ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಥೆಯು ಸೆರೆ ಹಿಡಿದ ಸೂಕ್ಷ್ಮತೆ. ಈ ದೃಶ್ಯವೇನೂ ಕಥೆಯ ಮುಖ್ಯ ಭಾಗವಲ್ಲದಿದ್ದರೂ, ಅದೆಷ್ಟು ಅಧ್ಯಯನದ ದೃಷ್ಟಿಕೋನ ಈ ದೃಶ್ಯದಲ್ಲಿ ಅಡಗಿದೆ ಎಂಬುದು ಅಚ್ಚರಿಯ ಸಂಗತಿ. ಇನ್ನು ನಾಯಕಿಯ ಪಾತ್ರಧಾರಿಯಲ್ಲಿರುವ ‘ನಾಗಶೇಖರ್’ ಮ್ಯಾಜಿಕ್. ‘ಸಂಜು ಮತ್ತು ಗೀತಾ’ ಚಿತ್ರದಲ್ಲಿ ‘ಬ್ಯೂಟಿ’ ಎಂಬ ಪದ ಸಂತಸದ ಉತ್ಕಟತೆಗೆ ಬಳಕೆಯಾಗಿದ್ದರೆ, ಮೈನಾ ‘ಕಲರ್ಫುಲ್’ ನಿಂದ ತುಂಬಿದೆ. ಕಥೆಯ ಎರಡು ಭಾಗ ಅಂದರೆ ಪ್ರೇಮಗಾಥೆ ಮತ್ತು ಕ್ರೈಮ್ ಸರಣಿಯು ಭಾವ ಉದ್ದೀಪನ ಮಟ್ಟದಲ್ಲಿ ಒಂದೇ ಸೇತುವೆಯಲ್ಲಿ ಚಲಿಸುವುದರಿಂದ ಕಥೆಯ ತೀವ್ರತೆ ಗಾಢವಾಗಿ ನೋಡುಗನ ಮನಸ್ಸಿಗೆ ವರ್ಗಾವಣೆಗೊಳ್ಳುತ್ತದೆ.

ಕರ್ನಾಟಕ ಕಂಡ ದಕ್ಷ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಅನುಭವದಿಂದ ಆಯ್ದ ಸಾಲಿನ ವಿಸ್ತೃತ ರೂಪವಾದ ಈ ಚಿತ್ರದ ಆವರಿಸುವಿಕೆಗೆ ಇನ್ನೊಂದು ಮುಖ್ಯ ಕಾರಣ ಜೆಸ್ಸಿ ಗಿಫ್ಟ್ ಸಂಗೀತ. ಜಯಂತ ಕಾಯ್ಕಿಣಿ ಸಾಹಿತ್ಯದ ‘ಮೊದಲ ಮಳೆಯಂತೆ’ ಹಾಡು ಚಂದಿರನಿಗೆ ಉಡಿಸಿದ ಶ್ವೇತವಸ್ತ್ರ. ‘ಮೈನಾ’ ಹಾಡು ಹೂದೋಟಕ್ಕೆ ಪ್ರಜ್ಞೆ ತಪ್ಪಿಸುವ ಸುಗಂಧ. ಹಿನ್ನೆಲೆ ಸಂಗೀತದಲ್ಲಿ ವಿಶೇಷತಃ, ರಾಗ ಮಾಲಿಕೆಯೊಂದರ ಬಳಕೆ ತೀರಕ್ಕೊಂದು ಸಿಹಿ ನೀರಿನ ಅಭಿಷೇಕ. ಮುಂದೆ ನಟನೆಯಲ್ಲಿ ಚೇತನ್ ಗಮನ ಸೆಳೆದರೆ ‘ನಿತ್ಯಾ ಮೆನನ್’ ಭಾವ ನಡಿಗೆಯು ತನಗೆ ನಿತ್ಯ ನೂತನ ಎನ್ನುವಂತೆಯೇ ಜೀವಿಸಿದ್ದಾರೆ ಮೈನಾ ಪಾತ್ರದಲ್ಲಿ. ಈ ಎರಡು ದಶಕ ಕಂಡ, ಅತ್ಯುತ್ತಮ ನಟಿ ಅವರು… ಭಾಷೆ, ಪ್ರಾಂತ್ಯಗಳೆಲ್ಲದರ ಎಲ್ಲೆ ಮೀರಿ, ಎಂದರೆ ಅತಿ ವರ್ಣನೆಯಲ್ಲ. ಸಿಹಿ ವಾಸ್ತವ. ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಆಗಿ ಶರತ್ ಕುಮಾರ್ ಗಂಭೀರ, ತೂಕಬದ್ಧ ನಟನೆ. ಇನ್ನುಳಿದಂತೆ ಮಾಳವಿಕಾ ಅವಿನಾಶ್, ಸಾಧು ಕೋಕಿಲ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಸೇರಿದಂತೆ ಎಲ್ಲರದ್ದೂ ಪಾತ್ರೋಚಿತ ಅಭಿವ್ಯಕ್ತಿ.

ಮುಗಿಸುವ ಮುನ್ನ :
ಮೈನಾಳ ಕಾಲಿಗೆ ಶಕ್ತಿ ಇರಲಿಲ್ಲ. ಅವಳ ಹೆಜ್ಜೆಯಾದದ್ದು ಸತ್ಯನ ತೋಳುಗಳು. ಅವನಿಗೆ ಅವಳನ್ನು ಹೊರತುಪಡಿಸಿದ ಬದುಕು ಇರಲಿಲ್ಲ. ಹಲವು ನ್ಯೂನ್ಯತೆಗಳಿದ್ದರೂ, ನಿಷ್ಕಲ್ಮಶ ಪ್ರೇಮದ ಮುಂದೆ ಅದೆಲ್ಲವೂ ಮಾಯವಾಗುವ ಇಬ್ಬನಿಯ ಗುಳ್ಳೆಗಳೇ ಸರಿ. ಹಣ, ಅಸ್ತಿ, ಅಂತಸ್ತು, ರೂಪ, ಹವ್ಯಾಸಗಳು ಇವೆಲ್ಲವೂ ಪ್ರೀತಿಯನ್ನು ವ್ಯಾಖ್ಯಾನಿಸುವ, ತನ್ನ ಹದ್ದುಬಸ್ತಿಗೆ ತೆಗೆದುಕೊಳ್ಳುತ್ತಿರುವ ಈ ಸಂಕ್ರಮಣ ಕಾಲದಲ್ಲಿ, ಭೌತಿಕ ಸಂಗತಿಗಳೆಲ್ಲವ ಉಪೇಕ್ಷೆ ಮಾಡಿ, ಭಾವಗಳ ಕನಸಿಗೆ ಬಣ್ಣ ಹಚ್ಚಿ ಸಂಭ್ರಮಿಸುವ ಈ ಜೋಡಿಯ ಒಲವು ಇಂದಿನ ನಿಲ್ಲದ ಮನಸ್ಸುಗಳಿಗೊಂದು ದಿಕ್ಕು ತೋರಿಸುವ ಸಾಕ್ಷ್ಯ ಚಿತ್ರ….