ಇಂತಹದೇ ಆಯ್ಕೆ ವಾಟ್ಸ್ಯಾಪ್‌ಗೆ ಬರಲು ಬಹಳ ಸಮಯವೇನೂ ಬೇಕಾಗಿಲ್ಲ ಎಂದು ಕಳೆದ ವಾರವಷ್ಟೇ ಮನೆಯಲ್ಲಿ ಚರ್ಚೆ ನಡೆದಿತ್ತು. ಅರೇ.. ಇಷ್ಟು ಬೇಗ ಆ ಆಯ್ಕೆ ಬಂದೇ ಬಿಟ್ಟಿತಲ್ಲ ಅಂದುಕೊಂಡು ರಿಪ್ಲೈ ಮಾಡುವ ಬದಲು ಲೈಕ್ ಒತ್ತಿ ‘ಆಲ್ರೈಟ್… ಮುಂದಕ್ಕೆ ಹೋಗೋಣ’ ಎಂದು ಮತ್ತೊಂದು ಸ್ಟೇಟಸ್ ನೋಡತೊಡಗಿದೆ. ನನ್ನದೊಂದು ರಿಪ್ಲೈನಿಂದ ಶುರುವಾಗಬಹುದಾಗಿದ್ದ ಸಂಭವನೀಯ ಸಂಭಾಷಣೆಯೊಂದು ಚಿಗುರೊಡೆಯುವ ಮುನ್ನವೇ ಕನಲಿ ನರಳಿದ್ದು ನನಗೆ ಆ ಕ್ಷಣ ಗೊತ್ತಾಗಲಿಲ್ಲ!
ಇಷ್ಟುದ್ದ ಸಂಭಾಷಣೆಯನ್ನು ಹೆಣೆಯಬಹುದಾದ ಸಾಧ್ಯತೆಗಳನ್ನು ಆರಂಭದಲ್ಲೇ ಚಿವುಟುವ “ಲೈಕ್…‌ ಲವ್…”ಗಳ ಫೀಚರ್‌ಗಳ ಕುರಿತು ಕಾರ್ತಿಕ್‌ ಕೃಷ್ಣ ಬರಹ ನಿಮ್ಮ ಓದಿಗೆ

ಮೊನ್ನೆ ಹೀಗೇ ವಾಟ್ಸ್ಯಾಪ್ ಸ್ಟೇಟಸ್‌ಗಳನ್ನು ನೋಡುತ್ತಾ ಕೂತಿದ್ದೆ. ಕೃಷ್ಣನ ಕೊಳಲಿನ ಹಿನ್ನೆಲೆ ಸಂಗೀತಕ್ಕೆ ತಾಳಹಾಕುವ ಪದಗಳು, ಮೋಟಿವೇಷನಲ್ ಮಾತುಗಳು, ಹೂವುಗಳು, ರೆಸಾರ್ಟು ಸುತ್ತಿದ ನೆನಪಿನ ಸೆಲ್ಫಿಗಳು… ಹೀಗೆ ವೈವಿಧ್ಯಮಯ ಸ್ಟೇಟಸ್‌ಗಳು ಸಾಲಾಗಿ ಬರತೊಡಗಿದವು. ಇವೆಲ್ಲದರಲ್ಲಿ ಸನ್ಮಿತ್ರನೊಬ್ಬ ಲಡಾಕಿಗೆ ಬೈಕಿನಲ್ಲಿ ತೆರಳಿ, ಅಲ್ಲಿನ ಕಣಿವೆಯೊಂದರ ಕಡಿದಾದ ದಾರಿಯಲ್ಲಿ ತನ್ನ ಬೈಕಿನೊಂದಿಗೆ ಪೋಸು ಕೊಟ್ಟಿದ್ದ ಫೋಟೋ ನನ್ನ ಗಮನ ಸೆಳೆಯಿತು. ಕಾಲೇಜಿನ ಜಿಗರಿ ದೋಸ್ತುಗಳಾಗಿದ್ದ ನಮ್ಮಿಬ್ಬರ ಸ್ನೇಹ, ತಮ್ಮದೇ ತಿರುವು ಪಡೆದುಕೊಂಡ ಜೀವನ ಪ್ರವಾಹದ ದೆಸೆಯಿಂದ ಈಗ ವಾಟ್ಸಪ್‌ನ ಮಾತುಕತೆಯಲ್ಲಷ್ಟೇ ಜೀವಂತವಾಗಿತ್ತು. ಲಡಾಕ್‌ಗೆ ಇಬ್ಬರೂ ಜೊತೆಯಾಗಿಯೇ ಹೋಗಬೇಕು ಎನ್ನುವ ಹಳೆಯ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತಾ ‘ಸೂಪರ್ ಕಣೋ’ ಎಂದು ರಿಪ್ಲೈ ಮಾಡಬೇಕೆನ್ನುವಷ್ಟರಲ್ಲಿ ರಿಪ್ಲೈ ಬಾಕ್ಸಿನ ಪಕ್ಕದಲ್ಲಿ ಒಂದು ಹೃದಯದ ಐಕಾನ್ ಇರುವುದು ಕಂಡಿತು. ಇನ್ಸ್ಟಾಗ್ರಾಮಿನಲ್ಲಿ ಸ್ಟೋರಿಗಳಿಗೆ ರಿಪ್ಲೈ ಮಾಡುವುದರ ಜೊತೆಗೆ ಅವುಗಳನ್ನು ಲೈಕ್ ಮಾಡುವ ಆಯ್ಕೆ ಬಂದು ಬಹಳ ದಿನಗಳೇ ಕಳೆದಿವೆ. ಇಂತಹದೇ ಆಯ್ಕೆ ವಾಟ್ಸ್ಯಾಪ್‌ಗೆ ಬರಲು ಬಹಳ ಸಮಯವೇನೂ ಬೇಕಾಗಿಲ್ಲ ಎಂದು ಕಳೆದ ವಾರವಷ್ಟೇ ಮನೆಯಲ್ಲಿ ಚರ್ಚೆ ನಡೆದಿತ್ತು. ಅರೇ.. ಇಷ್ಟು ಬೇಗ ಆ ಆಯ್ಕೆ ಬಂದೇ ಬಿಟ್ಟಿತಲ್ಲ ಅಂದುಕೊಂಡು ರಿಪ್ಲೈ ಮಾಡುವ ಬದಲು ಲೈಕ್ ಒತ್ತಿ ‘ಆಲ್ರೈಟ್… ಮುಂದಕ್ಕೆ ಹೋಗೋಣ’ ಎಂದು ಮತ್ತೊಂದು ಸ್ಟೇಟಸ್ ನೋಡತೊಡಗಿದೆ. ನನ್ನದೊಂದು ರಿಪ್ಲೈನಿಂದ ಶುರುವಾಗಬಹುದಾಗಿದ್ದ ಸಂಭವನೀಯ ಸಂಭಾಷಣೆಯೊಂದು ಚಿಗುರೊಡೆಯುವ ಮುನ್ನವೇ ಕನಲಿ ನರಳಿದ್ದು ನನಗೆ ಆ ಕ್ಷಣ ಗೊತ್ತಾಗಲಿಲ್ಲ!

ವಾಟ್ಸ್ಯಾಪ್ ಎಂಬ ಕಮ್ಯುನಿಕೇಷನ್ ಮಾಧ್ಯಮವೊಂದು ನಮ್ಮ ಫೋನುಗಳನ್ನು ಸೇರಿಕೊಂಡಾಗ ನಾನು ಇಂಜಿನಿಯರಿಂಗ್ ಓದುತ್ತಿದ್ದೆ. ಆಂಡ್ರಾಯ್ಡ್ ಕೂಡ ಆಗಷ್ಟೇ ಹೊಸ ಹೊಸ ಅಪ್ಡೇಟ್‌ಗಳೊಂದಿಗೆ ಪ್ರತಿ ಫೋನುಗಳನ್ನು ಸ್ಮಾರ್ಟ್ ಆಗಿಸುತ್ತಿದ್ದ ಕಾಲವದು. ಆಂಡ್ರಾಯ್ಡ್ ಮೇಲೆ ನಡೆಯುವ ಸ್ಯಾಮ್ಸಂಗ್ ಫೋನು ಬಳಸುತ್ತಿದ್ದ ಸ್ನೇಹಿತನೊಬ್ಬ ಅವನ ಫೋನಿನೊಳಗಿಳಿದಿದ್ದ ವಾಟ್ಸ್ಯಾಪ್ ಎಂಬ ಹೊಸ ಅಪ್ಲಿಕೇಶನ್‌ನಲ್ಲಿ ಇಂಟರ್ನೆಟ್ ಬಳಸಿಕೊಂಡು ಸಂದೇಶ, ಫೋಟೋ, ವಿಡಿಯೋಗಳನ್ನು ಹೇಗೆಲ್ಲಾ ಕಳುಹಿಸಬಹುದು ಎಂಬುದರ ಡೆಮೋ ಕೊಟ್ಟಿದ್ದ. ನೂರು ಎಸ್ ಎಂ ಎಸ್ ಗಳನ್ನು ನೀರಿನಂತೆ ಮಿತವಾಗಿ ಬಳಸುತ್ತಿದ್ದ ನಮಗೆ ಅದೊಂದು ವಿಸ್ಮಯದಂತೆ ಕಂಡಿತ್ತು. ನೋಕಿಯಾದ ಬೇಸಿಕ್ ಮಾಡೆಲ್ ಫೋನು ಬಳಸುತ್ತಿದ್ದ ನಮಗೆ ವಾಟ್ಸ್ಯಾಪ್, ದೂರದ ನಕ್ಷತ್ರದಂತೆ ಗೋಚರಿಸಿತ್ತು. ಕ್ಲಾಸುಗಳು ಮುಗಿದೊಡನೆ ಅವನ ರೂಮಿನಲ್ಲಿ ಹಾಜರಾಗುತ್ತಿದ್ದ ನಾವು, ಅವನ ವಾಟ್ಸ್ಯಾಪ್‌ಗೆ ಬಂದು ಬೀಳುತ್ತಿದ್ದ ತಮಾಷೆಯ ವಿಡಿಯೋಗಳನ್ನು ನೋಡಿ ಗಹಗಹಿಸಿ ನಗುತ್ತಿದ್ದೆವು. ಬಿಡುಗಡೆಯಾಗುತ್ತಿದ್ದ ಹೊಸ ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದೆವು. ದಶಕದ ಹಿಂದೆ ವೈರಲ್ ಆಗಿದ್ದ ಕೊಲವೆರಿ ಡೀ, ಗಂಗ್ನಮ್ ಸ್ಟೈಲ್ ಹಾಡುಗಳು ನಮಗೆ ದಕ್ಕಿದ್ದು ಅವನ ವಾಟ್ಸ್ಯಾಪ್ ಮೂಲಕವೇ.

2010-2015ರ ಕಾಲಘಟ್ಟವು ತಂತ್ರಜ್ಞಾನದ ಕ್ರಾಂತಿಯ ಕಾಲ. ವೆಬ್ಸೈಟ್‌ಗಳಲ್ಲಿ ತೆರೆದುಕೊಳ್ಳುತ್ತಿದ್ದ ಫೇಸ್ಬುಕ್ಕು, ಜಿ-ಮೇಲ್‌ಗಳು ತ್ವರಿತ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಾ ಕಾಂಪ್ಯಾಕ್ಟ್ ರೂಪದಲ್ಲಿ ಒಂದೊಂದಾಗಿ ಫೋನಿಗಿಳಿಯುತ್ತಿದ್ದವು. ಇದೇ ಸಮಯದಲ್ಲಿ ವಾಟ್ಸ್ಯಾಪ್ ಎಂಬ ಮಾಯೆಯೂ ಹುಟ್ಟಿಕೊಂಡಿತು. ನಾವು ಸಂವಹನ ನಡೆಸಲು ಬಳಸುತ್ತಿದ್ದ ಸಾಂಪ್ರದಾಯಿಕ ವಿಧಾನವನ್ನು ನಮ್ಮ ಊಹೆಗೂ ನಿಲುಕದಷ್ಟು ವೇಗವಾಗಿ ಬದಲಾಯಿಸಿ, ಮೊದಲು ಆಂಡ್ರಾಯ್ಡ್ ಫೋನಿಗೆ ಕಾಲಿರಿಸಿ ನಂತರ ಸಿಂಬಿಯನ್ ಆಪರೇಟಿಂಗ್ ಸಿಸ್ಟಮ್ ಮೇಲೆ ನಡೆಯುತ್ತಿದ್ದ ಜನಸಾಮಾನ್ಯರ ಫೋನಿನಲ್ಲೂ ಈ ವಾಟ್ಸಪ್ ಕಾಣಿಸಿಕೊಂಡಿತು. ಆಗೆಲ್ಲ ನಮಗೆಷ್ಟು ಹಿಗ್ಗೆಂದರೆ, ಮನೆಗೆ ಬಂದ ಹೊಸ ಸದಸ್ಯನಂತೆಯೇ ಅದನ್ನು ಬರಮಾಡಿಕೊಂಡಿದ್ದೆವು. ಗಂಟೆಗೊಮ್ಮೆ ಡಿಸ್ಪ್ಲೇ ಪಿಕ್ಚರ್ (ಡಿಪಿ) ಬದಲಾಯಿಸುತ್ತಿದ್ದೆವು. ಗೆಳೆಯರ ಹುಟ್ಟುಹಬ್ಬಕ್ಕೆ ನಮ್ಮ ಡಿಪಿಯಲ್ಲಿ ಅವರ ಫೋಟೋವನ್ನು ಹಾಕಿ ಸಂಭ್ರಮಿಸುತ್ತಿದ್ದೆವು. ಸ್ಟೇಟಸ್ ಎಂದು ಕರೆಯಲ್ಪಡುತ್ತಿದ್ದ ಟೆಕ್ಸ್ಟ್ ಬಾಕ್ಸಿನಲ್ಲಿ ಅವರಿಗೆ ಶುಭ ಕೋರುವ ಸಂದೇಶವಿರುತ್ತಿದ್ದವು. ನಮ್ಮ ಹುಟ್ಟುಹಬ್ಬದಂದು ಈ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಕರಿಸಿದವನು ಮಾತ್ರ ನಿಜವಾದ ಸ್ನೇಹಿತನೆಂಬ ಅಲಿಖಿತ ನಿಯಮವೊಂದು ಆಗ ಚಾಲ್ತಿಗೆ ಬಂದಿತ್ತು. ದಿನದ ಕೊನೆಯಲ್ಲಿ ಹೀಗೆ ಡಿಪಿ ಬದಲಾಯಿಸಿದ ಗೆಳೆಯರ ಕಾಂಟ್ಯಾಕ್ಟ್‌ನ ಸ್ಕ್ರೀನ್ ಶಾಟ್ ತೆಗೆದು, ಕೊಲಾಜ್ ಮಾಡಿ, ನಮ್ಮ ಡಿಪಿಗೆ ಹಾಕುವುದರಿಂದ ಹುಟ್ಟುಹಬ್ಬ ಸಂಪನ್ನವಾಗುತ್ತಿತ್ತು.

ಹೀಗೆ ಸಂವಹನ ಮಾಧ್ಯಮವಾಗಿ ಹುಟ್ಟಿಕೊಂಡ ವಾಟ್ಸ್ಯಾಪ್ ಹಂತ ಹಂತವಾಗಿ ಅಪ್ಡೇಟ್ ಆಗುತ್ತಾ ಸಾಮಾಜಿಕ ಜಾಲತಾಣದಂತೆ ಬದಲಾಯಿತು. ಇನ್ಸ್ಟಾಗ್ರಾಮಿನ ಸ್ಟೋರಿಗಳಂತೆ ಒಂದು ದಿನವಷ್ಟೇ ವ್ಯಾಲಿಡಿಟಿ ಇರುವ “ಸ್ಟೇಟಸ್” ಗಳು ಶುರುವಾದಮೇಲಂತೂ ಜನರಿಗೆ ಹಬ್ಬವೋ ಹಬ್ಬ. ರೆಸಾರ್ಟಿನ ಹಗ್ಗದ ಉಯ್ಯಾಲೆಯಲ್ಲಿ ತೂಗಾಡುವ ಫೋಟೋ, ಗೋವಾದ ಮರಳಿನ ಮೇಲೆ ಕೂತು ತಣ್ಣನೆ ಬೀರು ಹೀರುವ ಫೋಟೋ, ಆಫೀಸಿನ ಪಾರ್ಟಿಯಲ್ಲಿ ಹಲ್ಲುಗಿಂಜುವ ಫೋಟೋ, ಪ್ರಾಣ ಸ್ನೇಹಿತನಿಂದ ಹಿಡಿದು ಲೋಕದ ಯಾವುದೋ ಮೂಲೆಯಲ್ಲಿ ಕೂತಿರುವ ನೆಚ್ಚಿನ ನಟ- ನಟಿಯರಿಗೆ ಶುಭಾಶಯ ತಿಳಿಸುವ ಫೋಟೋ, ಹುಷಾರಿಲ್ಲದಿರುವುದನ್ನು ಸಾಂಕೇತಿಕವಾಗಿ ತಿಳಿಸುವ ಥರ್ಮೋ ಮೀಟರ್ ಎಮೋಜಿ, ಮನಸಿಗೆ ಬೇಜಾರಾದಾಗ ಒಂದು ಕೋಟ್, ಖುಷಿಯಾದಾಗ ಇನ್ನೊಂದು ಕೋಟ್, ಇನ್ನೊಬ್ಬರನ್ನು ಚುಚ್ಚಲು ಮತ್ತೊಂದು ಕೋಟ್! ವಾಟ್ಸಾಪ್ ಹೀಗೆ ಫೋಟೋ ಆಲ್ಬಮ್ ಆಗಿ ಬದಲಾಗುತ್ತದೆ ಎಂದು ಕನಸಿನಲ್ಲೂ ಯಾರೂ ಯೋಚಿಸಿರಲಿಕ್ಕಿಲ್ಲ. ಆಪ್ತಮಿತ್ರ ಸ್ಟೈಲ್‌ನಲ್ಲಿ ಹೇಳುವುದಾದರೆ, “ನೋಡು… ನಿನ್ನ ಸಂವಹನ ಮಾಧ್ಯಮ, ಸಾಮಾಜಿಕ ಜಾಲತಾಣವಾಗಿ ಬದಲಾಗುವುದನ್ನು ನೋಡು” ಎಂದರೆ ಸಮಂಜಸವೆನಿಸಬಹುದು.

ಎಮೋಜಿಗಳೇ ಇಲ್ಲದ ಕಾಲವೊಂದಿತ್ತು. ಮುಗುಳ್ನಗುವಿನಿಂದ ಹಿಡಿದು ಗಹಗಹಿಸುವ ನಗುವಿನ ತನಕ ಪ್ರತಿಯೊಂದು ಭಾವನೆಯೂ ಅಕ್ಯುರೇಟ್ ಆಗಿ ಮತ್ತೊಬ್ಬನನ್ನು ತಲುಪುವ ಈ ಕಾಲವೆಲ್ಲಿ, ಅರ್ಧ ವಿರಾಮ, ಆವರಣ, ಕೋಲನ್‌ಗಳನ್ನು ಸರಿಯಾಗಿ ಸಂಯೋಜಿಸಲು ಹೆಣಗಾಡುತ್ತಿದ್ದ “ಎಮೋಟಿಕಾನ್” ಗಳ ಕಾಲವೆಲ್ಲಿ! ಒಂದು ದಶಕದಲ್ಲಿ ಎಷ್ಟೊಂದು ಬದಲಾವಣೆ. ವಾಟ್ಸ್ಯಾಪ್‌ನಲ್ಲಿ ಮೊದಲೆಲ್ಲ ಫೋಟೋ ವಿಡಿಯೋ ಹಂಚಿಕೊಂಡರೆ, ಅದಕ್ಕೆ ತಕ್ಕನಾದ ಇಷ್ಟುದ್ದದ ರಿಪ್ಲೈ ಅತ್ತ ಕಡೆಯಿಂದ ಬರುತ್ತಿತ್ತು. ಈ ನಿಯಮ ನಾವು ಹಾಕುವ ಸ್ಟೇಟಸ್‌ಗಳಿಗೂ ಅನ್ವಯಿಸುತ್ತಿತ್ತು. ವಾಟ್ಸಪ್ ತ್ವರಿತವಾಗಿ ಬದಲಾಗುತ್ತಾ ಹೋದಂತೆ ಹೊಸ ಹೊಸ ಎಮೋಜಿಗಳೂ ಸೇರ್ಪಡೆಗೊಂಡು, ಮಾರುತ್ತರದ ಬದಲಾಗಿ, ನಮ್ಮ ಭಾವಕ್ಕೆ ತಕ್ಕನಾದ ಎಮೋಜಿಗಳನ್ನು ಕಳುಹಿಸಲು ಆರಂಭಿಸಿದೆವು. ಸ್ಟೇಟಸ್ ಅಥವಾ ಸಂದೇಶ ಇಷ್ಟವಾದರೆ ‘ಹೃದಯ’ ಇಲ್ಲವಾದರೆ ‘ಸಪ್ಪೆ ಮೋರೆ’! ಇದು ಇಷ್ಟಕ್ಕೇ ನಿಂತಿದ್ದರೆ ಹೇಗೋ ಒಪ್ಪಿಕೊಳ್ಳಬಹುದಿತ್ತು. ಬದಲಾವಣೆಯೇ ಜಗದ ನಿಯಮ ಎನ್ನುವ ಮಾತಿನಂತೆ ‘ರಿಯಾಕ್ಟ್ʼ ಎಂಬ ಫೀಚರನ್ನು ವಾಟ್ಸಾಪ್ ಪರಿಚಯಿಸಿತು. ಹಿಂದೊಮ್ಮೆ ಮಾರುದ್ದ ಇರುತ್ತಿದ್ದ ಸಂಭಾಷಣೆಗಳನ್ನು ಗೇಣುದ್ದಕ್ಕೆ ತಂದ ಶ್ರೇಯಸ್ಸು ಇದಕ್ಕೇ ಸಲ್ಲಬೇಕು. ಇದರಿಂದ ಸೂಕ್ತ ಪದಗಳನ್ನು ಜೋಡಿಸುವ, ಸಮಂಜಸವಾದ ಎಮೋಜಿಯನ್ನು ಹುಡುಕುವ ಕೆಲಸದಿಂದ ಬಳಕೆದಾರನು ವಿಮುಕ್ತನಾಗಿ, ಬಂದ ಸಂದೇಶವನ್ನು ಅರೆ ಕ್ಷಣ ಒತ್ತಿದರೆ, ಥಂಬ್ಸ್ ಅಪ್, ಹೃದಯ, ಕೈ ಮುಗಿಯುವ, ಗಹಗಹಿಸಿ ನಗುವ, ಆಶ್ಚರ್ಯದಿಂದ ಬಾಯ್ದೆರೆದಿರುವ, ಕಣ್ಣೀರು ಹಾಕುವ ಎಮೋಜಿಗಳು ದುತ್ತನೆ ಮೇಲೆ ಬರುತ್ತವೆ. ಮಾನವನ ಭಾವನೆಗಳು ಇವಿಷ್ಟರಲ್ಲೇ ವ್ಯಕ್ತವಾಗುತ್ತವೆಯೆಂದು ಬಹುಶಃ ವಾಟ್ಸ್ಯಾಪ್‌ಗೂ ಗೊತ್ತಿರಬೇಕು.

ಇವೆಲ್ಲಕ್ಕೂ ಕಳಶಪ್ರಾಯವಾಗಿ ಈಗ “ಸ್ಟೇಟಸ್ ಲೈಕ್” ರಾರಾಜಿಸುತ್ತಿದೆ. ನಮ್ಮ ಸಂವಹನವನ್ನು ಸುಲಭವಾಗಿಸಲು ಬಂದ ವಾಟ್ಸ್ಯಾಪ್ ನಾಗವಲ್ಲಿಯಾಗಿ ಬದಲಾಗುತ್ತಿರುವುದನ್ನು ಗಮನಿಸಿ. ಅವರು ನಿಮ್ಮ ಸ್ಟೇಟಸ್‌ಗೆ ಪ್ರತ್ಯುತ್ತರ ನೀಡಿದರು, ಅವರು ನಿಮ್ಮ ಸ್ಟೇಟಸ್ ಗೆ ರಿಯಾಕ್ಟ್ ಮಾಡಿದರು, ಅವರು ನಿಮ್ಮ ಸ್ಟೇಟಸನ್ನು ಲೈಕ್ ಮಾಡಿದರು! ಸರಳವಾಗಿ ಶುರುವಾಗುತ್ತಿದ್ದ ಸಂಭಾಷಣೆಯೊಂದು ಹುಟ್ಟುವ ಮೊದಲೇ ಕಗ್ಗೊಲೆಯಾಗುತ್ತಿದೆ. ಭಾವನೆಗಳ ವಿನಿಮಯವಾಗುತ್ತಿದ್ದ ಸುಂದರ ತಾಣವಿಂದು ಸುಳ್ಸುದ್ದಿಗಳ ಜನುಮಸ್ಥಳವಾಗಿತ್ತದೆ. ಮನದ ಲಹರಿ ಎತ್ತೆತ್ತಲೋ ಸಾಗಿ ಮತ್ತೆ ವಾಸ್ತವಕ್ಕೆ ಬಂದಾಗ, ಗೆಳೆಯನ ಸ್ಟೇಟಿಸ್ಸಿಗೆ “ಲೈಕ್” ಒತ್ತಿದ್ದು ನೆನಪಾಯಿತು. ಕೂಡಲೇ “ಸೂಪರ್ ಮಗಾ… ride safe” ಎಂದು ಟೈಪಿಸಿ ಕಳುಹಿಸಿದೆ. “ಮಿಸ್ ಯು ಬ್ರೋ..” ಅತ್ತ ಕಡೆಯಿಂದ ಪ್ರತ್ಯುತ್ತರ ಬಂತು. ಕೊನೆಯುಸಿರೆಳೆಯುತ್ತಿದ್ದ ಸಂಬಂಧವೊಂದು ಮೆಲ್ಲಗೆ ಉಸಿರಾಡಿತು.