ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ. ಕರೊಡೋ ಮೇ ಏಕ್ ಅಂತಾರಲ್ಲಾ ಹಾಗೆ…. ಇದು ಸೌ ಕರೊಡೋ ಮೇ ಏಕ್ ಕಹಾನಿ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಕಳೆದ ಸಂಚಿಕೆಯಲ್ಲಿ ಯಶವಂತ ಪುರ ಹೆಸರು ಬಂದದ್ದು ಹೇಳಿದೆ, ಸುಬೇದಾರ ಪಾಳ್ಯ ಬಂತು. ನಾನು ಬೆಳೆದ ರಾಜಾಜಿನಗರ ಮತ್ತು ಯಶವಂತಪುರದ ಅಂತರ ಹತ್ತು ಕಿಲೋಮೀಟರು ಅಂತ ಹೇಳಿ ಅದ್ಯಾಕೋ ಅಷ್ಟು ಭೇಟಿ ಮಾಡಿರಲಿಲ್ಲ ಯಶವಂತಪುರವನ್ನು ಅಂತ ಸೇರಿಸಿದ್ದೆ. ಗೆಳೆಯ ನಟರಾಜ ಹೀಗೆ ಕಾಮೆಂಟಿಸಿದ..
ರಾಜಾಜಿನಗರ ಮತ್ತು ಯಶವಂತಪುರದ ಅಂತರ ಹತ್ತು ಕಿಲೋಮೀಟರು ಅಲ್ಲ, ಬರೀ ಮೂರು ಮತ್ತು ಅರ್ಧ ಕಿಲೋಮೀಟರು ಅಂತ ಸರಿಪಡಿಸಿದ. ಮೂರು ಅರ್ಧ ಇರಲಾರದು ಅಂತ ಚೆಕ್ ಮಾಡಿದೆ, ಆರು ಅಂತ ತಿಳಿಯಿತು. ಖಾಲಿ ಜಾಗದಲ್ಲಿ ಹೋದರೆ ಅಂತರ ಹೆಚ್ಚಿದ್ದ ಹಾಗೇ ಕಾಣಿಸುತ್ತಂತೆ!
ಗೆ. ಪ್ರಕಾಶ್, ಕಡಲೆ ಪುರಿ, ಬೆಲ್ಲ, ಕಾರಾಸೇವ್ ಕಾಂಬೋ ಬಗ್ಗೆ ಬರೀತಾ ಕಡಲೆ ಕಾಯಿ, ಕೊಬ್ಬರಿ ಬೆಲ್ಲದ ಕಾಂಬೋ ನೆನೆದ. ಈ ಕಾಂಬೋಗಳದ್ದು ಒಂದು ದೊಡ್ಡ ವಿಚಿತ್ರ ಕಣ್ರೀ. ಅವೆನ್ಯೂ ರಸ್ತೆಯಲ್ಲಿ ಯಾವುದೋ ಸಂದಿಯಲ್ಲಿ ಅದ್ಯಾರೋ ಮಸಾಲೆ ದೋಸೆ ಒಳಗೆ ಚಿತ್ರಾನ್ನ ಇಟ್ಟು ಸರ್ವ್ ಮಾಡ್ತಾರಂತೆ. ದಿವಸಾ ಬೆಳಿಗ್ಗೆ ಎಂಟರಿಂದ ಅವರ ವ್ಯಾಪಾರ. ನೂರು ದೋಸೆ ಅವರ ಮಿತಿ ಮತ್ತು ಈ ರೀತಿಯ ಕಾಂಬೋ ಅವರ ವ್ಯಾಪಾರ. ಮಂತ್ರಿಗಳ ಮನೆ ಹೆಂಗಸರು ಕಾರಲ್ಲಿ ಬಂದು ಕ್ಯೂ ನಿಂತು ಈ ದೋಸೆ ಒಯ್ತಾರೆ ಅಂತ ಕೇಳಿದ್ದೆ. ಈಗಿನ ನಮ್ಮ ಕಾಂಗ್ರೆಸ್ ಅಧ್ಯಕ್ಷರೂ ಹೀಗೆ ಕ್ಯೂ ನಲ್ಲಿ ನಿಂತು ಅದನ್ನು ಸವಿಯುತ್ತಿದ್ದರು ಅಂತಲೂ ಕೇಳಿದ್ದೆ! ಯಾವುದೋ ಊರಿನಲ್ಲಿ ಪ್ರತಿ ದಿವಸ ಅನ್ನ ಸಂತರ್ಪಣೆಯಲ್ಲಿ ಎಲೆಗೆ ಅನ್ನ ಸಾಂಬಾರು ಪಲ್ಯ ಚಟ್ನಿ ಒಬ್ಬಟ್ಟು ತುಪ್ಪ ಪಲ್ಯ ಮೊಸರು…. ಇದೆಲ್ಲಾ ಒಟ್ಟಿಗೆ ಸೇರಿಸಿ ಕಾಂಬೋ ಮಾಡಿಕೊಂಡು ಹೊಟ್ಟೆಗೆ ಇಳಿಸುತ್ತಾರೆ ಅಂತಾ ನನ್ನ ಗೆಳೆಯ ಹೇಳಿದ್ದರು! ಈ ಸುಖಕ್ಕೆ ಬೇರೆ ಬೇರೆ ಅಡುಗೆ ಯಾಕೆ ಮಾಡಿ ಬಡಿಬೇಕು ಅಂತ ನಿಮಗೆ ಅನಿಸಿದ್ದರೆ, ನನ್ನ ಸಹಮತ ನಿಮ್ಮ ಅನಿಸಿಕೆಗೆ. ಬ್ರೆಡ್ ತುಂಡಿನ ಮಧ್ಯೆ ಹಸಿ ತರಕಾರಿ ಇಟ್ಟು ತಿನ್ನೋದು ಕೆಲ ವರ್ಷದ ಹಿಂದೆ ಫ್ಯಾಶನ್ ಆಗಿತ್ತು. ವಡಪಾವ್ ಅಂತಾರೆ ನೋಡಿ ಅದು ಬನ್ ಮಧ್ಯೆ ವಡೆ ಇಟ್ಟು ತಿನ್ನೋದು ಅಷ್ಟೇ. ಹೇಳೋದು ಮರೆತೆ.. ಕಳೆದ ತಿಂಗಳು ಗಾಂಧಿ ಬಝಾರ್‌ನ ಒಂದು ಫೇಮಸ್ ರಸ್ತೆಯ ಫೆಮಸ್ ಬೇಕರಿಗೆ ಹೋಗಿದ್ದೆ. ಅಲ್ಲಿನ ಸ್ಪೆಶಲ್ ಏನು ಗೊತ್ತಾ? ಬನ್ ಅನ್ನು ಟೇಬಲ್ ಮೇಲೆ ಇಟ್ಟು ಭೂಮಿಗೆ ಪ್ಯಾರಲಲ್ ಆಗಿ ಬನ್ ಅನ್ನು ಅರ್ಧಕ್ಕೆ ಸರಿಯಾಗಿ ಕೊಯ್ಯೋದು, ಅದರೊಳಗೆ ಕಾಂಗ್ರೆಸ್ ಕಳ್ಳೆ ಬೀಜ ತುಂಬಾ ತುಂಬಿ ಎರಡೂ ಕೈಲಿ ಹಿಡಕೊಂಡು ಬಾಯಿ ಅಗಲಿಸಿ ಅರ್ಧ ಬನ್ ಬಾಯೊಳಗೆ ಇರಿಸಿ ಕಚ್ಚಿಕೊಂಡು ತಿನ್ನೋದು. ಕಾಲೇಜು ಹುಡುಗಿರು ಬರ್ಗರು ತಿಂತಾರಲ್ಲಾ ಹಾಗೇ…! ನಾಲ್ಕೈದು ಜನ ಕಾಲೇಜು ಹುಡುಗ ಹುಡುಗಿಯರು ಇದನ್ನು ಖುಶಿಯಿಂದ ತಿನ್ನುತ್ತಿದ್ದರು. ಕಡ್ಲೆ ಬೀಜ ಇಂಡಿಯನ್, ಬನ್ ಇಂಗ್ಲಿಷ್… ವಾಹ್ ಅನಿಸಿತು. ಫಸ್ಟ್ ಕ್ಲಾಸ್ ಆಂಗ್ಲೋ ಇಂಡಿಯನ್ ತಿಂಡಿ.. ಅಂಗಡಿ ಅವನನ್ನು ಪಕ್ಕಕ್ಕೆ ಕರೆದು ಕೋಡುಬಳೆ, ಚಕ್ಕಲಿ ನಿಪ್ಪಟ್ಟು.. ಉಪ್ಪಿಟ್ಟು..ಈ ರೀತಿ ಕುರ್ಖೂರುಗಳನ್ನು ಬನ್ ಒಳಗೆ ಇಟ್ಟು ಕಾಂಬೋ ಮಾಡು ವ್ಯಾಪಾರ ವೃದ್ಧಿಸುತ್ತೆ ಅಂತ ಐಡಿಯಾ ತುಂಬಿದ್ದೀನಿ!
ಸರ್ಕಾರೀ ಕಾಲೇಜಿನ ಬಗ್ಗೆ ನೆನಪನ್ನು ಹಂಚಿಕೊಂಡಿರುವ ವಿದೇಶದಲ್ಲಿರುವ ಗೆಳೆಯ ಶಾಮ ಪ್ರಸಾದ್ ಅಂದಿನ ಡೊನೇಷನ್ ಮತ್ತು ಉಳ್ಳವರು ಇಲ್ಲದವರು (haves and have nots… ನಾನು ಕಮ್ಯೂನಿಸ್ಟ್ ಥಿಂಕರ್ ಆಗಿದ್ದಾಗ ಈ ಪದಗಳು ನನಗೆ ಅಚ್ಚುಮೆಚ್ಚು, ಪ್ರತಿದಿನದಲ್ಲಿ ಕನಿಷ್ಠ ಹತ್ತು ಬಾರಿ ಬರ್ತಿತ್ತು) ನಡುವಿನ ಕಂದರದ ಬಗ್ಗೆ ಬರೆಯುತ್ತಾನೆ. ಸರ್ಕಾರಿ ಕಾಲೇಜು ಸ್ವಾತಂತ್ರ ದೇವತೆಯ ಪ್ರತಿಮೆ ನೆನಪಿಗೆ ತರುತ್ತದೆ…..
ಈಗಲೂ ಬೆಂಗಳೂರಿಗೆ ಬಂದಾಗಲೆಲ್ಲ GAS ಕಾಲೇಜಿಗೆ ಭೇಟಿ ಕೊಟ್ಟು ಅಲ್ಲಿನ ಸಹೃದಯ ಸಿಬ್ಬಂದಿ ಮತ್ತು ಪ್ರಿನ್ಸಿಪಾಲ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಕಾಲೇಜಿನ ಬಗ್ಗೆ ತಮ್ಮ ಅಭಿಮಾನ ತೋರಿದ್ದಾನೆ. ಅವನ ಮಾತಲ್ಲೇ ಹೇಳಬೇಕು ಅಂದರೆ…
,…” Excellent explanation about college selection for our time. So true about donation and seats between haves and have nots. GAS college was like Statue of Liberty. Accept the down trodden and unwanted. I and many of my then classmates still love that college. Every visit to Bengaluru I go inside the college and meet the staff and the principal. The quality of the staff there is very impressive and as good as they were during our time…….”
ಹಿಂದಿನ ಕಂತು ಮುಗಿಸಬೇಕಾದರೆ ಹೀಗೆ ಬರೆದಿದ್ದೆ ಮತ್ತು ಕತೆಗೆ ಇನ್ನೂ ಇದೆ ಎಂದು ಮುಕ್ತಾಯ ಹಾಡಿದ್ದೆ.
ರಾಮಯ್ಯ ಕಾಲೇಜಿಂದ ಎಲ್ಲಿಗೋ ತುಂಬಾ ದೂರ ಹಾರಿಬಿಟ್ಟೆ ತಾನೇ?
ಸುಬೇದಾರ್ ಪಾಳ್ಯ ದಾಟಿ ಮುಂದೆ ರಸ್ತೆ ಕವಲು ಒಡೆಯುತ್ತೆ. ಮುಂದೆ ಬಂದರೆ ಬಲ ತಿರುವು ಒಂದು ನೂರು ಗಜ ಮುನ್ನಡೆದರೆ ಅದೇ ಎಂ ಎಸ್ ರಾಮಯ್ಯ ಅವರ ಸಾಮ್ರಾಜ್ಯ…. ಅಂತ ಹೇಳಿದ್ದೆ ತಾನೇ. ಮೊದಲಿಗೆ ಆಗ ಅರವತ್ತರ ದಶಕದ ಮಧ್ಯ ಭಾಗದಲ್ಲಿ ರಾಮಯ್ಯ ಎಂಜಿನಿಯರಿಂಗ್ ಕಾಲೇಜು ಆಗ ತಾನೇ ಹುಟ್ಟಿ ಎರಡು ಮೂರು ವರ್ಷ ಆಗಿತ್ತು. ಆಗ ಎಂಜಿನಿಯರಿಂಗ್‌ನಲ್ಲಿ ಮೂರು ವಿಭಾಗ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್ ಅಷ್ಟೇ. ಇನ್ನೂ ಈಗಿನ ಹಾಗೆ ಕೋರ್ಸುಗಳು ಇರುತ್ತವೆ ಎಂದು ಕಲ್ಪನೆಯೇ ಹುಟ್ಟಿರಲಿಲ್ಲ. ಆಗ ರಾಮಯ್ಯ ಕಾಲೇಜಿನಲ್ಲಿ BE ಗೆ ಮೂರು ಸಾವಿರ ಡೊನೇಷನ್ ಇತ್ತು. ಮೂರು ಸಾವಿರ ಅಂದರೆ ಆಗ ಆಗಿನ ಜೀವನದ ಮಟ್ಟಕ್ಕೆ ಮಧ್ಯಮ ವರ್ಗದವರ ಎರಡು ಎರಡೂವರೆ ತಿಂಗಳ ಸಂಬಳ! ಆದ್ದರಿಂದ ಕೆಳ ಮಧ್ಯಮ ವರ್ಗದ ಹುಡುಗರು BE ಓದುವ ಕನಸನ್ನೇ ಕಾಣುತ್ತಿರಲಿಲ್ಲ…
ರಾಮಯ್ಯ ತಮ್ಮ ಉದ್ಯೋಗ ಆರಂಭಿಸಿದ್ದು ಮಲ್ಲೇಶ್ವರದ ಒಂದು ಸಣ್ಣ ಕೈಗಾರಿಕೆಯಲ್ಲಿ ಹೆಲ್ಪರ್ ಆಗಿ. ಅವರು ಇಷ್ಟು ಎತ್ತರಕ್ಕೆ ಬೆಳೆದು ಬಂದದ್ದು, ಅತ್ಯುತ್ತಮ ದರ್ಜೆಯ ಶೈಕ್ಷಣಿಕ ಸಂಸ್ಥೆಗಳ ಸಮೂಹ ಹುಟ್ಟುಹಾಕಿದ್ದು, ಅವರ ಜೀವನ, ಮನಸು ಒಂದಿದ್ದರೆ ಏನೆಲ್ಲಾ ಸಾಧಿಸಬಹುದು….. ಇದೆಲ್ಲವೂ ಜನಸಾಮಾನ್ಯರು ಊಹಿಸಲೂ ಸಹ ಸಾಧ್ಯವಿಲ್ಲದ ರೋಚಕ ಪ್ರಸಂಗಗಳ ರಸದೌತಣ.
ಅದು ಮುಂದೆ ಹೇಳುತ್ತೇನೆ..
ಈಗ ಮುಂದಕ್ಕೆ ಹೋಗೋಣ
ಯಶವಂತಪುರದ ಆಗಿನ (೧೯೧೦-೩೦)ಹೆಸರು ಯಶಮಾಂಜಿಪುರ. ಯಶವಂತಪುರ ಟೋಲ್ ಗೇಟ್ ರಸ್ತೆಯ ಪಕ್ಕ ಬಂದು ನೇರ ನಡೆದರೆ ಮೊದಲು ದಿವಾನರ ಪಾಳ್ಯ, ನಂತರ ಸುಬೇದಾರ್ ಪಾಳ್ಯ ಇನ್ನೂ ಮುಂದೆ ಬಂದರೆ ರಸ್ತೆ ಕವಲು. ನೇರ ಹೋದರೆ ರಾಮಯ್ಯ ಕಾಲೇಜು ಒಳಕ್ಕೆ ದಾರಿ. ಈಗ ಒಳಗಡೆ ಹೊಕ್ಕು ಹಣಿಕಿ ನೋಡೋಣ…
ಇದು ಕಳೆದ ತಿಂಗಳು ನೋಡಿದ್ದ ದೃಶ್ಯ. ಅದನ್ನೇ ಹೇಳುತ್ತಾ ಹೇಳುತ್ತಾ ಹಿಂದಿನ ನೆನಪಿಗೂ ಜಾರುತ್ತೇನೆ, ಸರಿ ತಾನೇ.
ರಾಮಯ್ಯ ಕಾಲೇಜಿನ ದಾರಿಗೆ ಬಂದರೆ ನಿಮಗೆ ರಸ್ತೆಯ ಎರಡೂ ಕಡೆ ಅಂಗಡಿಗಳ ಸಾಲು ಸಾಲು. ಅದರಲ್ಲಿ ಸ್ಟೇಷನರಿ, ನಾರ್ಥ್ ಇಂಡಿಯನ್ ತಿಂಡಿಗಳು, ಟೀ ಕಡೆ (ಕಡೆ ಅಂದರೆ ಅಂಗಡಿ), ಬೀಡಿ ಸಿಗರೇಟು (ಊಹೂಂ ಸಾರಿ, ಇಲ್ಲಿ ಬೀಡಿ ಸಿಗುಲ್ಲ. ಕಾರಣ ಈಗ ಬೀಡಿ ಸೇದುವವರ ಜನಸಂಖ್ಯೆ ಕ್ಷೀಣಿಸಿದೆ) ಅಂಗಡಿ, ಬ್ರೌಸಿಂಗ್ ಸೆಂಟರ್, ಮೊಬೈಲ್ ಅಂಗಡಿ, ಫ್ಯಾನ್ಸಿ ಸ್ಟೋರ್ಸ್, ಅಂಡರ್ ಗಾರ್ಮೆಂಟ್ಸ್….. ಹೀಗೆ ಆಗ ತಾನೇ ಕಾಲೇಜು ಮೆಟ್ಟಿಲು ಹತ್ತಿರುವ ಯುವಕರಿಗೆ ಬೇಕಾದ ಸಕಲವೂ ಲಭ್ಯವಿರುವ ಅಲ್ಲಾವುದ್ದೀನ್ ರಸ್ತೆ (ಅಲ್ಲಾವುದ್ದೀನ್ ದೀಪ ಇದ್ದ ಹಾಗೇ.. ದೀಪ ಉಜ್ಜಿದರೆ ಭೂತ ಪ್ರತ್ಯಕ್ಷ ಆಗಿ ಎದುರುನಿಂತು ಕ್ಯಾ ಹೊನಾ..! ಅಂತ ಕೇಳುತ್ತಿಂತತ್ತೆ!). ಕೆಲವು ರಸ್ತೆಗಳು ನನಗೆ ಅಲ್ಲಾವುದ್ದೀನ್ ನೆನಪು ತರುತ್ತೆ. ಬೆಂಗಳೂರಿನ ವಿಶ್ವೇಶ್ವರ ಪುರದಲ್ಲಿ ಒಂದು ಬೀದಿಗೆ ತಿಂಡಿ ರಸ್ತೆ ಅಂತ ಕನ್ನಡದಲ್ಲಿ ಫುಡ್ ಸ್ಟ್ರೀಟ್ ಅಂತ ಇಂಗ್ಲೀಷಿನಲ್ಲಿ ಕರೆಯುತ್ತಾರೆ. ಇಲ್ಲಿ ಯಾವ ತಿಂಡಿ ಕೇಳ್ತೀರಿ? ಅದು ಎದುರಿಗೆ ಪ್ರತ್ಯಕ್ಷ ಆಗುತ್ತೆ. ರಾಮಯ್ಯ ಕಾಲೇಜು ರಸ್ತೆಯಲ್ಲಿ ಅಕ್ಕಿಬೇಳೆ ಅಂಗಡಿ ಇಲ್ಲ, ಯಾಕೆ ಅಂದರೆ ಇದು ಕಾಲೇಜು ವಿದ್ಯಾರ್ಥಿಗಳ ಪ್ಯಾಲೇಸ್!
ಹಾಗೇ ಕೊಂಚ ಮುಂದೆ ಬಂದು ಎದುರಿಗೇ ಕಾಣಿಸುತ್ತಾ ಇರುವ ಮುಚ್ಚಿದ ದೊಡ್ಡ ಗೇಟಿನ ಪಕ್ಕ ಬಂದರೆ ಅಲ್ಲಿ ಒಂದು ಪುಟ್ಟ ದಾರಿ ಒಳಕ್ಕೆ ಹೋಗಲು. ಗೇಟ್ ಪಕ್ಕ ಒಂದು ಸ್ಮಾರ್ಟ್ ಸೆಕ್ಯೂರಿಟಿ. ನಿಮ್ಮ ವಯಸ್ಸು ಅರವತ್ತು ದಾಟಿದ್ದರೆ, ನೋಡಲು ಕೊಂಚ ಸುಸಂಸ್ಕೃತರು ಅಂತ ಅನಿಸಿದರೆ ಸಾರ್ ಅಂತ ಒಂದು ಸೆಲ್ಯೂಟ್ ನಿಮಗೆ. ಒಳಕ್ಕೆ ಬಂದಿರಾ.. ನಿಧಾನಕ್ಕೆ ಅಕ್ಕ ಪಕ್ಕ ನೋಡುತ್ತಾ ಗಮನಿಸುತ್ತಾ ಮುಂದೆ ಬನ್ನಿ. ಎಡಗಡೆ ನಿಮಗೆ ಒಂದು ಫ್ರೀ ಹಾಸ್ಟೆಲ್ ಬೋರ್ಡು ಕಾಣುತ್ತೆ, ಅದಕ್ಕೆ ಅಂಟಿದ ಹಾಗೆ ಒಂದು ಅನಾಥಾಶ್ರಮ ಬೋರ್ಡ್… ರಾಮಯ್ಯ ಬಿಲ್ಡರ್ಸ್ ಅನ್ನುವ ಬೋರ್ಡು…. ಹಾಗೇ ಮುಂದೆ ಬಂದರೆ ಎಡಕ್ಕೆ ಲಾ ಕಾಲೇಜು, ಸೈನ್ಸ್ ಕಾಲೇಜು…. ಹೀಗೆ ಸುಮಾರು ವಿದ್ಯಾ ಸಂಸ್ಥೆಗಳು. ಜತೆಗೆ ಅಡ್ವಾನ್ಸ್ಡ್ ಸ್ಟಡೀಸ್ ಬೋರ್ಡುಗಳು. ಮುಂದೆ ರಸ್ತೆ ವಿಶಾಲ ಆಗುತ್ತೆ. ಬಲಭಾಗದಲ್ಲಿ ಅದೇನೋ ಕಟ್ಟಡ ನಿರ್ಮಾಣ ಕಾರ್ಯ. ಅದರ ಹಿಂದೆ ಕಾಂಪೌಂಡು ಅದರ ಮೇಲೆ ನಲವತ್ತು ಐವತ್ತು ವರ್ಷ ಹಿಂದಿನ ಕಾಲೇಜು ಮುಂಭಾಗದ ಡಿಸೈನ್ ಗೋಡೆಗಳು…. ವಿಶಾಲದ ರಸ್ತೆಯಲ್ಲಿ ಹಾಗೇ ಸಾಗಿದರೆ ನಿಮಗೆ ಮತ್ತೊಂದು ವಿಶ್ವ ಅಲ್ಲಿ ಪ್ರತ್ಯಕ್ಷ. ಹಲವಾರು ಕಾಲೇಜುಗಳ ನೀವು ಮೊದಲ ಬಾರಿಗೆ ಕೇಳುವ ಹೆಸರುಗಳು ಉಳ್ಳ ಬೋರ್ಡುಗಳು. ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು. ಡೆಂಟಲ್ ಕಾಲೇಜು ಮತ್ತು ಹಾಸ್ಪಿಟಲ್, ಅದಕ್ಕೆ ಸೇರಿದ ರಿಸರ್ಚ್ ಸೆಂಟರ್‌ಗಳು, ಅದಕ್ಕೆ ಮೊದಲು ಬಲಗಡೆ ಆಯುರ್ವೇದ ಕಾಲೇಜು, ಅದಕ್ಕೆ ಮೊದಲು ಇಂಡೋಲಜಿ ಡಿಪಾರ್ಟ್ಮೆಂಟ್…… ಇದು ಇಲ್ಲಿರಲಿ ಈ ವಿವರಣೆ ಇನ್ನೂ ಇದೆ. ಈಗ ಈ ದೊಡ್ಡ ಕನಸನ್ನು ನನಸಾಗಿ ಮಾಡಿದ ದೊಡ್ಡ ಶಕ್ತಿ ಕುರಿತು..
*****
ಮತ್ತಿಕೆರೆ ಆಗ ಬೆಂಗಳೂರು ಪೇಟೆಯ ಹೊರವಲಯದ ಒಂದು ಪುಟ್ಟ ಹಳ್ಳಿ. ಸಂಪಂಗಪ್ಪ ಅವರು ಚಿಕ್ಕ ಪುಟ್ಟ ಗಾರೆ ಕೆಲಸ ಮಾಡಿಕೊಂಡು ಸಂಸಾರ ತೂಗುತ್ತಿದ್ದರು. ಅವರ ಮಗ ರಾಮಯ್ಯ. ರಾಮಯ್ಯ ಎಲ್ ಎಸ್ ಪರೀಕ್ಷೆಯಲ್ಲಿ ಫೇಲ್ ಆದ. ಮತ್ತೆ ಸ್ಕೂಲಿಗೆ ಸೇರದೆ ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿದ್ದ ಗಂಧದ ಕೋಟೆ ಎನ್ನುವಲ್ಲಿ ಒಂದು ಕಾರ್ಖಾನೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ. ಮೈಸೂರು ಸರ್ಕಾರದ ಇಂಡಿಯನ್ ಟೆಸ್ಟಿಂಗ್ ಲ್ಯಾಬೋರೇಟರಿ ಹೆಸರಿನ ಸಂಸ್ಥೆ ಅದು. ಅರವತ್ತರ ದಶಕದಲ್ಲಿ ಈ ಬೋರ್ಡು ನೋಡಿದ, ಬಿಲ್ಡಿಂಗ್ ನೋಡಿದ ಮಸಕು ಮಸಕು ನೆನಪು ನನಗಿದೆ. ಗ್ಲೂಕೋಸ್ ಇವರ ತಯಾರಿಕೆಯ ಪ್ರಮುಖ ವಸ್ತು. ಬೇಡಿಕೆ ಹೆಚ್ಚು ಇತ್ತು ಮತ್ತು ಸರಬರಾಜಿಗೆ ನೆರವಾಗುವ ಹಾಗೆ ಪಾಕೆಟ್ ಸಿದ್ಧವಾಗಬೇಕಿತ್ತು. ರಾಮಯ್ಯ ಅಲ್ಲಿ ಪ್ಯಾಕೇಜಿಂಗ್ ಕೆಲಸಕ್ಕೆ ಸೇರಿದ. ಕೆಲವೇ ತಿಂಗಳುಗಳಲ್ಲಿ ಅಧಿಕಾರಿಗಳ ಮತ್ತು ತನ್ನ ಸಹೋದ್ಯೋಗಿಗಳ ವಿಶ್ವಾಸ ಗಳಿಸಿದ. ಇವನ ಈ ಬೆಳವಣಿಗೆ ಕೆಲವರ ಹೊಟ್ಟೆಕಿಚ್ಚು ಹೆಚ್ಚಲು ನೆರವಾಯಿತು. ಮಸಲತ್ತು ಮಾಡಿ ಇವನ ಟಿಫಿನ್ ಬಾಕ್ಸ್‌ನಲ್ಲಿ ಗ್ಲೂಕೋಸ್ ಪಾಕೆಟ್ ಇಟ್ಟು ಸೆಕ್ಯೂರಿಟಿ ಅವರು ಇವನನ್ನು ಹಿಡಿದು ಕಳ್ಳತನದ ಆರೋಪ ಹೊರಿಸುತ್ತಾರೆ. ತಾನು ಕದ್ದಿಲ್ಲ ಎನ್ನುವ ಇವನ ಮಾತು ಸಂಬಂಧ ಪಟ್ಟವರ ಮೇಲೆ ಪರಿಣಾಮ ಬೀರದಿದ್ದಾಗ ರೋಷ ಉಕ್ಕುತ್ತದೆ. ಕೆಲಸ ತ್ಯಜಿಸಿ ಆಚೆ ಬರುತ್ತಾನೆ. ಇಂತಹ ಹತ್ತು ಸಂಸ್ಥೆ ಹುಟ್ಟು ಹಾಕುತ್ತೇನೆ ಎಂದು ಗೇಟಿನ ಎದುರು ನಿಂತು ಶಪಥ ಮಾಡುತ್ತಾನೆ.
ನಂತರ ಈತನ ಕೆಲಸ ಯಶವಂತ ಪುರದ ರೈಲ್ವೆಯಲ್ಲಿ. ಮೈಸೂರು ರೈಲ್ವೇಸ್ ಕಂಪನಿಯಲ್ಲಿ ಫೈರ್ ಮೆನ್ ಕೆಲಸ. ಇದೂ ಟೆಂಪರರಿ ಉದ್ಯೋಗ. ರೈಲ್ವೆ ಎಂಜಿನುಗಳಿಗೆ ಕಲ್ಲಿದ್ದಲು ತುಂಬುವ ಕೆಲಸ. ಇದು ಕೆಲವು ತಿಂಗಳು ನಡೆಯುತ್ತದೆ. ಅಷ್ಟರಲ್ಲಿ ಇಟ್ಟಿಗೆಗೆ ಬೇಡಿಕೆ ಇರುವುದು ತಿಳಿಯುತ್ತದೆ. ಮತ್ತಿಕೆರೆ ಆಸುಪಾಸಿನ ಕೆಲವು ಇಟ್ಟಿಗೆ ಗೂಡಿನ ಮಾಲಿಕರ ಸಂಪರ್ಕ ಬೆಳೆದು ಅದರ ವ್ಯವಹಾರದಲ್ಲಿ ತೊಡಗುತ್ತಾನೆ. ಆಗ ರಾಮಯ್ಯನಿಗೆ ಇನ್ನೂ ಹದಿನೇಳು ವರ್ಷ.
ನಂತರ ಹರಿಹರದ ಪಾಲಿಫೈಬ್ರೆಸ್‌ಗೆ ಇಟ್ಟಿಗೆ ಸರಬರಾಜು ಪ್ರಾರಂಭಿಸುತ್ತಾನೆ. ಇದರಲ್ಲಿ ಯಶಸ್ವಿ ಆಗಿ ದೊಡ್ಡ ಪ್ರಮಾಣದ ಸ್ವಂತ ಕಾಮಗಾರಿ ಅತ್ತ ಮನಸು ಓಡುತ್ತದೆ. ಇಷ್ಟರಲ್ಲಿ ಮದುವೆ ಆಗಿರುತ್ತೆ ಮತ್ತು ತಂದೆ ನಿಧನರೂ ಆಗಿರುತ್ತಾರೆ. ಸಂಸಾರದ ಸಂಪೂರ್ಣ ಜವಾಬ್ದಾರಿ ಈತನ ಮೇಲೆ ಬೀಳುತ್ತದೆ. ಮುಂಬೈ ಕರ್ನಾಟಕದ ರಾಧಾನಗರಿ ಅಣೆಕಟ್ಟು ಕಾಮಗಾರಿ ಕೈಗೆ ತೆಗೆದುಕೊಳ್ಳುತ್ತಾನೆ. ಅದರ ನಂತರ ಘಟಪ್ರಭಾ ಎಡದಂಡೆ ಕಾಲುವೆ ಕೆಲಸ.
ಈ ನಡುವೆ ಮನೆ ಹತ್ತಿರವೇ ಇದ್ದ ಅಪ್ಪ ಗಾರೆಕೆಲಸ ಮಾಡಿದ್ದ ಗೋಕುಲ ಹೌಸ್ ಮಾರಾಟಕ್ಕೆ ಬರುತ್ತದೆ. ಹದಿನೈದು ಎಕರೆಯ ಇದನ್ನು ಕೊಳ್ಳುತ್ತಾನೆ. ಇದೇ ವೇಳೆಗೆ ದೇವನಹಳ್ಳಿಯಲ್ಲಿ ಆರುನೂರು ಎಕರೆ ಜಮೀನು ಕೊಳ್ಳುತ್ತಾನೆ. ಇಷ್ಟು ಹೊತ್ತಿಗೆ ರಾಜಕೀಯದವರ ನಂಟು ಬೆಳೆದಿರುತ್ತದೆ. ಯಾವುದೇ ಕೆಲಸ ಕೈಗೆ ತೆಗೆದುಕೊಳ್ಳಬೇಕಾದರೂ ಅದರ ಸಂಪೂರ್ಣ ವಿವರ ಆಗುಹೋಗುಗಳನ್ನು ಪರಾಮರ್ಶಿಸಿ ನಿರ್ಧರಿಸುವ ಅಪರೂಪದ ಗುಣ ಬೆಳೆದಿರುತ್ತದೆ. ಇದೇ ಸಮಯದಲ್ಲಿ. ಆಗಿನ ಪತ್ರಿಕೆಗಳ ಗುಂಪಿನಲ್ಲಿ ಹೆಸರು ಮಾಡಿದ್ದ ತಾಯಿನಾಡು ಪತ್ರಿಕೆ ಇವರ ಸುಪರ್ದಿಗೆ ಬರುತ್ತದೆ. ಮರುವರ್ಷದಲ್ಲಿಯೇ ತಾಯಿನಾಡು ಸೋದರ ಪತ್ರಿಕೆಗಳಾದ ಕೈಲಾಸ ಮತ್ತು ಗೋಕುಲ ಶುರುವಾಗುತ್ತದೆ. ಕೈಲಾಸ ಮಾಸಪತ್ರಿಕೆಯಾದರೆ ಗೋಕುಲ ವಾರಪತ್ರಿಕೆ. ಇದು ಕೊಂಡಾಗ ಅವರ ವಯಸ್ಸು ಇನ್ನೂ ಮೂವತ್ತೈದು. ಜೊತೆಗೆ ಕಬ್ಬನ್ ರಸ್ತೆಯಲ್ಲಿ ಆಸ್ತಿ ಕೊಳ್ಳುತ್ತಾರೆ. ಶರಾವತಿ ತಲಕಳಲೇ ಅಣೆಕಟ್ಟಿನ ಕಾಮಗಾರಿ ಕೆಲಸ ಒಪ್ಪಿಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಧರ್ಮ ಪ್ರಾಜೆಕ್ಟ್ ಕೆಲಸ ಇದೇ ವೇಳೆಗೆ ಬರುತ್ತದೆ.
೧೯೫೮ರಲ್ಲಿ ಅವರಿಗೆ ೩೫ವರ್ಷ ಆಗಿದ್ದಾಗ ಮತ್ತಿ ಕೆರೆಯಲ್ಲಿ ೧೩೦ ಎಕರೆ ಜಮೀನು ಕೊಳ್ಳುತ್ತಾರೆ. ಇದು ನಂತರ ವಿದ್ಯಾ ಸೌಧ.
ನಂತರದ ವರ್ಷಗಳಲ್ಲಿ ಊಹಿಸಲೂ ಸಹ ಆಗದ ಮಟ್ಟಿಗೆ ಅಪೂರ್ವ ಬೆಳವಣಿಗೆ ಈ ಸ್ಥಳದಲ್ಲಿ ಪವಾಡದ ಹಾಗೆ ನಡೆಯಿತು.
ಗೋಕುಲ ಶಿಕ್ಷಣ ಪ್ರತಿಷ್ಠಾನ Gokul Education Foundation ಶುರು ಆಗುತ್ತೆ. ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಊಹೆಗೂ ಮೀರಿ ಬೆಳವಣಿಗೆ ಇಲ್ಲಿ ನಡೆಯುತ್ತದೆ. ಶಿಕ್ಷಣ, ವೈದ್ಯಕೀಯ ಹಾಗೂ ಸಮಾಜ ಸೇವೆಯ ಕ್ಷೇತ್ರದಲ್ಲಿ ಊಹೆಗೂ ಮೀರಿದ ಕೆಲಸ ಕಾರ್ಯಗಳಿಗೆ ಈ ಪ್ರತಿಷ್ಠಾನ ಬೆನ್ನೆಲುಬು ಆಗಿ ನಿಲ್ಲುತ್ತದೆ. ಮುಂದಿನ ಹಲವು ವರ್ಷಗಳಲ್ಲಿ ಈ ನೂರಾಮೂವತ್ತು ಎಕರೆ ಜಗತ್ತಿನ ಭೂಪಟದಲ್ಲಿ ಒಂದು ಪ್ರತಿಷ್ಠಿತ ಸ್ಥಾನ ಪಡೆದುಕೊಳ್ಳುತ್ತದೆ.
*****
ರಾಮಯ್ಯ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್‌ಗೆ ಪ್ರವೇಶ ಇನ್ನೊಂದು ರಸ್ತೆ ಮೂಲಕ. ಈಗ ಆ ಕತೆಗೆ ಹೊರಳುತ್ತೇನೆ. ಎಂಬತ್ತರ ದಶಕದ ಅಂತ್ಯದಲ್ಲಿ bel ಆಡಳಿತ ವರ್ಗಕ್ಕೆ ಒಂದು ಸಮಸ್ಯೆಯ ದೀರ್ಘ ಪರಿಣಾಮ ಗೋಚರವಾಗುತ್ತದೆ. ಅದೆಂದರೆ ಮತ್ತೀಕೆರೆ ಮೂಲಕ ಕಾರ್ಖಾನೆಗೆ ಬರುವ ಹೋಗುವ ರಸ್ತೆ. ಈ ರಸ್ತೆಯಲ್ಲಿ ಎರಡು ರೈಲು ಲೈನ್‌ಗಳು ಮತ್ತು ಎರಡಕ್ಕೂ ಲೆವೆಲ್ ಕ್ರಾಸಿಂಗ್‌ಗಳು ಇದ್ದವು. ಕಾರ್ಖಾನೆ ಶಿಫ್ಟ್‌ಗಳು ಆರಂಭವಾಗುವ ಅರ್ಧ ಗಂಟೆ ಇಪ್ಪತ್ತು ನಿಮಿಷ ಮೊದಲು ರೈಲು ಹೋಗುತ್ತಿತ್ತು. ಆಗ ಲೆವೆಲ್ ಕ್ರಾಸಿಂಗ್ ಗೇಟು ಮುಚ್ಚುತ್ತಿತ್ತು. ಬಸ್ಸುಗಳು ಕಿಲೋಮೀಟರು ಉದ್ದ ನಿಲ್ಲುತ್ತಿದ್ದವು. ಸಹಜವಾಗಿ ಕಾರ್ಮಿಕರು ಪ್ರತಿದಿನ ಹತ್ತು ಹದಿನೈದು ನಿಮಿಷ ತಡವಾಗಿ ಪಂಚ್ ಮಾಡುತ್ತಿದ್ದರು. ಅಂದರೆ ಅಷ್ಟು ಸಮಯ ವ್ಯರ್ಥ ಆಗುತ್ತಿತ್ತು. ಕಾರ್ಖಾನೆ ಮೆಶೀನ್ ಮುಂದೆ ನಿಂತು ದೇಶಕ್ಕೆ ದುಡಿಯ ಬೇಕಿದ್ದ ವರ್ಕ್ ಫೋರ್ಸ್ ರಸ್ತೆಯಲ್ಲಿ ರೈಲು ಹೋಗುವುದನ್ನು ಕಾಯುತ್ತಾ ನಿಲ್ಲುವುದು… ಎಷ್ಟೊಂದು ಮಾನವ ಗಂಟೆಗಳ ವ್ಯರ್ಥ! ಇದಕ್ಕೆ ವೆಸ್ಟೇಜ್ ಆಫ್ ಮ್ಯಾನ್ ಹವರ್ಸ್ ಅಂತ ನಮ್ಮ ಪಾರಿಭಾಷಿಕ ಪದ. ಹಿರಿಯ ತಲೆಗಳು ಕೂತು ಚಿಂತನೆ ಮಂತನೆ ನಡೆಸಿದವು. ಹದಿನೈದು ಸಾವಿರ ಕೆಲಸಗಾರರು, ದಿವಸಕ್ಕೆ ಒಬ್ಬ ಸರಾಸರಿ ಹತ್ತು ನಿಮಿಷ ತಡ ಅಂದರೆ ವರ್ಷಕ್ಕೆ ಎಷ್ಟು, ಎರಡು ವರ್ಷಕ್ಕೆ ಎಷ್ಟು, ಹತ್ತು ವರ್ಷಕ್ಕೆ ಎಷ್ಟು ನಿಮಿಷ ಗಂಟೆಗಳು ಹೀಗೆ ವ್ಯರ್ಥ ಆಗುತ್ತವೆ ಎಂದು ಲೆಕ್ಕ ಹಾಕಿದರು. ಒಟ್ಟಾರೆ ರೈಲು ಅಂಡರ್ ಪಾಸ್‌ನಲ್ಲಿ ಹೋಗುವ ವ್ಯವಸ್ಥೆ ಇದ್ದು ಬಸ್ಸುಗಳು ಮೇಲಿನ ಬ್ರಿಡ್ಜ್ ಮೇಲೆ ಹೋದರೆ ವ್ಯರ್ಥ ಆಗುತ್ತಿರುವ ಮಾನವ ಗಂಟೆಗಳನ್ನು ಸದುಪಯೋಗ ಪಡಿಸಬಹುದು ಎನ್ನುವ ತೀರ್ಮಾನಕ್ಕೆ ಬಂದರು. bel ಡಿಫೆನ್ಸ್ ಕಾರ್ಖಾನೆ ಎಂದು ಹೆಸರು ಮಾಡಿತ್ತು ಹಾಗೂ ಡಿಫೆನ್ಸ್ ಪದ ಹೇಳಿದರೆ ಸರ್ಕಾರದ ಎಲ್ಲ ಹಂತಗಳಲ್ಲೂ ಕೆಲಸ ಸುಲಭವಾಗಿ ಸಾಗುತ್ತದೆ ಎನ್ನುವ ಅನುಭವ ಆಗಿತ್ತು. ರಸ್ತೆ ನಿರ್ಮಾಣ ಹಾಗೂ ರೈಲುಗಳಿಗೆ ಅಂಡರ್ ಪಾಸ್ ವ್ಯವಸ್ಥೆ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಮಾತುಕತೆ ನಡೆದವು. ರೈಲು ಬ್ರಿಡ್ಜ್ ಕಟ್ಟಲು ಆರ್ಥಿಕ ಸಂಪನ್ಮೂಲ bel ಒದಗಿಸುವುದು ಮತ್ತು ರಸ್ತೆ ನಿರ್ಮಾಣ ಸರ್ಕಾರದ ಜವಾಬ್ದಾರಿ ಎಂದು ಒಪ್ಪಿಗೆ ಆಯಿತು. ಒಂದೆರೆಡು ವರ್ಷದಲ್ಲಿ ಈ ಬ್ರಿಡ್ಜ್ ರೆಡಿ ಆಯಿತು. ಹಾಗೂ ಬೆಂಗಳೂರಿನ ಅತಿ ಉದ್ದದ ರಸ್ತೆಗಳಲ್ಲಿ ಒಂದು ಎಂದು ಮುಂದೆ ಹೆಸರು ಮಾಡಿದ ಒಂದು ರಸ್ತೆ ಸಹ ನಿರ್ಮಾಣ ಆಯಿತು. bel ನ್ಯೂ ರೋಡ್ ಎನ್ನುವ ಹೆಸರು ಈ ರಸ್ತೆಗೆ ಅಲ್ಲಿನ ಕಮ್ಯೂಟರ್ಸ್‌ಗಳೇ ನಾಮಕರಣ ಮಾಡಿದರು. ಈಗ ಅದು ಸದಾಶಿವ ನಗರ ಪೊಲೀಸ್ ಸ್ಟೇಶನ್‌ವರೆಗೂ ಇದ್ದು ಮುಂದೆ ಸರ್ ಸಿ ವಿ ರಾಮನ್ ರಸ್ತೆಗೆ ಸೇರುತ್ತದೆ. ಈ ರಸ್ತೆಯ ಬಗ್ಗೆ ನನಗೆ ನೆನಪು ಹೆಚ್ಚು ಮತ್ತು ಈ ರಸ್ತೆಗೆ ಒಬ್ಬ ಕಾರ್ಮಿಕ ಧುರೀಣರ ಹೆಸರು ಬರುವುದು ತಪ್ಪಿದ ಬಗೆಗೂ ಖೇದವುಂಟು.
ಇದೇ ರಸ್ತೆಯಲ್ಲಿ ಹಲವು ಪ್ರತಿಷ್ಠಿತರ ಮನೆಗಳು ಇವೆ. ಡಾಲರ್ಸ್ ಕಾಲೋನಿ ಇಲ್ಲಿಯದು. ಈಗ ಸಂಪೂರ್ಣ ಮರೆತು ಹೋಗಿರುವ ಚಿಕ್ಕ ಮಾರನ ಹಳ್ಳಿ bda ಇಂದ ನಾಮಾವಶೇಷ ಹೊಂದಿ ಅಲ್ಲಿನ ಬಡ ಕಾರ್ಮಿಕರ ಗುಡಿಸಲುಗಳ ಮೇಲೆ ಭವ್ಯ ಸೌಧಗಳು ಬಂದಿವೆ. ಅದರ ಪಕ್ಕದಲ್ಲೇ ಲೊಟ್ಟೆಗೊಳ್ಳಹಳ್ಳಿ ರೈಲ್ವೆ ಸ್ಟೇಶನ್ ಇದೆ. ಅದು ದಾಟಿ ಬಂದರೆ ದೇವಸಂದ್ರ ಎನ್ನುವ ಬಡಾವಣೆ.
Bel ಗೃಹ ನಿರ್ಮಾಣ ಸಂಘ ಈ ಪ್ರದೇಶದಲ್ಲಿ ಒಂದು ಬಡಾವಣೆ ನಿರ್ಮಿಸಿತ್ತು. ಅದರ ನಿವೇಶನಗಳು bel ಕಾರ್ಮಿಕರು ತಮ್ಮ ಜೀವಮಾನದ ಸೇವಿಂಗ್ಸ್ ಜತೆಗೆ ಸಾಲ ಸೋಲ ಮಾಡಿಕೊಂಡಿದ್ದರು. ಕೆಲವರು ಮನೆ ನಿರ್ಮಿಸಿದ್ದರು. ಬ್ರಿಡ್ಜ್ ಕೆಲಸ ಮುಗಿದು ರಸ್ತೆ ಯಾವಾಗ ಮುಕ್ತ ಸಂಚಾರಕ್ಕೆ ತೊಡಗಿತೋ ಆಗ ಇಲ್ಲಿನ ನಿವೇಶನಗಳು ಭಾರೀ ಬೆಲೆ ತರುವಂತೆ ಆದವು. ರಸ್ತೆ ವಿಸ್ತಾರ ಆಗಿ ಮನೆಗಳು ಅಂಗಡಿಗಳು ಬಂದವು. ಅದೇ ಸಮಯದಲ್ಲಿ MS ರಾಮಯ್ಯ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್‌ನ ಮುಂಭಾಗ ಈ ರಸ್ತೆಯ ಮೂಲಕ ಆಯಿತು.
ಮತ್ತಿಕೆರೆ ಮೂಲಕ ಕಾಲೇಜು ಒಳಹೊಕ್ಕು ಕೆಲವು ಭಾಗ ವಿವರಿಸಿದ್ದೆ ತಾನೇ? ಮುಖ್ಯ ರಸ್ತೆಯಿಂದ ಈಗ ಒಳಕ್ಕೆ ಹೋಗುವ. ನ್ಯೂ ಬಿಇಎಲ್ ರಸ್ತೆಯಲ್ಲಿ ನೀವು ಬಿಇಎಲ್ ಕಡೆಯಿಂದ ಬನ್ನಿ. ಈ ರಸ್ತೆ ಸದಾಶಿವನಗರ ಪೊಲೀಸ್ ಸ್ಟೇಶನ್‌ವರೆಗೆ ಸುಮಾರು ಮೂರು ಕಿಮೀ ಉದ್ದ. ಎರಡನೇ ಕಿಮೀ ಸಮೀಪ ಬಂದ ಹಾಗೆ ಬಲಗಡೆ ಹೋದರೆ MS ರಾಮಯ್ಯ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್. ಎಡಕ್ಕೆ ಹೋದರೆ ಇಸ್ರೋ ISRO. ಭಾರತದ ಅಂತರಿಕ್ಷ ಯಾನದ ಪ್ರತಿಷ್ಠಿತ ಸರ್ಕಾರಿ ಸಂಸ್ಥೆ ಇದು. ಇದರ ಮುಖ್ಯ ಕಚೇರಿ ಮೊದಲು ತಿರುವನಂತಪುರ. ಈಗ ಬೆಂಗಳೂರಿನಲ್ಲಿಯೇ ಕೆಲವೆಡೆ ಇದರ ಕಚೇರಿಗಳು ಇವೆ. ಈ ವಿವರ ಮುಂದೆ ತಿಳಿಸುತ್ತೇನೆ. ಈಗ ರಸ್ತೆ ಯ ಬಲಕ್ಕೆ ತಿರುಗಿ ದೊಡ್ಡ ಗೇಟ್ ದಾಟಿ ಒಳ ಬನ್ನಿ. ಒಂದು ಹತ್ತು ಹೆಜ್ಜೆ ಮುಂದೆ ಬಂದರೆ ಎಡಭಾಗದಲ್ಲಿ ರಾಮಯ್ಯ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗ. ತುರ್ತು ಪರಿಸ್ಥಿತಿ ಘಟಕ. ಅದರ ಮುಂದೆ ಹಲವು ಆಂಬ್ಯುಲೆನ್ಸ್ ವಾಹನಗಳು. ಕೊಂಚ ಮುಂದೆ ಬಂದರೆ ಅಲ್ಲಿ ಫಾರ್ಮಸಿ. ಅದರ ಪಕ್ಕ ರಾಮಯ್ಯ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್. ಭಾರೀ ದೊಡ್ಡ ಕಟ್ಟಡ.
ಫಾರ್ಮಸಿ ಎದುರು ಮುಖ್ಯರಸ್ತೆಯಿಂದ ನೀವು ಬಂದಾಗ ನಿಮ್ಮೆದುರು ಎಂ ಎಸ್ ರಾಮಯ್ಯ ಅವರ ದೊಡ್ಡ ಲೋಹದ ಪ್ರತಿಮೆ ಎದ್ದು ಕಾಣಿಸುತ್ತದೆ. ಬಿಲ್ಡಿಂಗ್ ದಾನ ಮಾಡಿ ಅದರಲ್ಲಿ ಶಾಲೆ ಕಾಲೇಜು ನಿರ್ಮಿಸಲು ಅವಕಾಶ ಮಾಡಿಕೊಟ್ಟ ಹಿರಿಯ ದಾನಿಗಳ ಪ್ರತಿಮೆ ಇಲ್ಲದಿರುವ ಕಡೆ ನಾವೆಂತಹ ಕೃತಘ್ನರು ಎನ್ನುವ ಬೇಸರ ಇಂತಹ ಪ್ರತಿಮೆ ನೋಡಿದಾಗ ಮರೆಯುತ್ತದೆ. ಪ್ರತಿಮೆ ದಾಟಿ ಮುಂದೆ ಬಂದರೆ ರಸ್ತೆ ಮಟ್ಟ ಕೊಂಚ ಕೊಂಚ ಕಡಿಮೆ ಆಗುತ್ತಾ ಬರುತ್ತದೆ. ಎಡ ಸಾಲಿನಲ್ಲಿ ಸಣ್ಣ ಪುಟ್ಟ ಹೋಟಲ್ಲುಗಳು, ಜೆರಾಕ್ಸ್ ಅಂಗಡಿ.. ಹೀಗೆ. ಬಲಗಡೆ ರಾಮಯ್ಯ ಡೆಂಟಲ್ ಕಾಲೇಜ್ ಮತ್ತು ಹಾಸ್ಪಿಟಲ್. ಅದರ ಪಕ್ಕ ಹಾಸ್ಪಿಟಲ್ ವಾರ್ಡ್. ಮೆಟ್ಟಲು ಹತ್ತಿ ರಸ್ತೆಗೆ ಬಂದು ಮುಂದುವರೆದರೆ ಆಯುರ್ವೇದ ಆಸ್ಪತ್ರೆ, ಅದರೆದುರು ನರ್ಸಿಂಗ್ ಕಾಲೇಜು….. ಹೀಗೆ. ನಿಮಗೆ ಯಾವುದು ಬೇಕೋ ಅದೆಲ್ಲಾ ಇಲ್ಲಿದೆ.
ಪ್ರತಿ ಮುಖ್ಯ ವಿಭಾಗದಲ್ಲೂ ರಾಮಯ್ಯ ಅವರ ಎದೆ ಮಟ್ಟದ ಕಂಚಿನ ಪ್ರತಿಮೆ. ಎಲ್ಲಾ ವಿಭಾಗದಲ್ಲೂ ರಾಮಯ್ಯ ಅವರ ಆಳೆತ್ತರದ ಫೋಟೋ…. ನೋಡುತ್ತಿದ್ದ ಹಾಗೇ ಎಂತಹ ವಿಶನರಿ, ದೂರ ದೃಷ್ಟಿಯ ಚೇತನ ಅನಿಸಬೇಕು ಹಾಗೆ.
ರಾಮಯ್ಯ ಅವರ ಈ ವಿದ್ಯಾ ಸೌಧದಲ್ಲಿ ಈಗ ಇರುವ ಶೈಕ್ಷಣಿಕ ಸಂಸ್ಥೆಗಳು ಅಂದರೆ ಒಟ್ಟು ೨೯ ಮತ್ತು ಈ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಮುಂದಿನ ಕತೆ ಹೇಳುವ ಮುನ್ನ ಕೆಲವು ವಿಶೇಷಗಳು. ಒಬ್ಬ ವ್ಯಕ್ತಿ ಒಂದು ಜೀವಮಾನದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವೇ ಎಂದು ಆಶ್ಚರ್ಯ ಪಡುವ ಮಟ್ಟಿಗೆ ಇವರ ಸಾಧನೆ ಎದ್ದು ಕಾಣುತ್ತದೆ. ಇಡೀ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವುದು ನಮಗೆ ಹೆಮ್ಮೆ ತರಿಸುತ್ತದೆ.
ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ. ಕರೊಡೋ ಮೇ ಏಕ್ ಅಂತಾರಲ್ಲಾ ಹಾಗೆ…. ಇದು ಸೌ ಕರೊಡೋ ಮೇ ಏಕ್ ಕಹಾನಿ!
ಸಪ್ನ ಬುಕ್ ಹೌಸ್‌ನ ನೀತಿನ ಷಾ ಅವರು ಮೊದಲು ರೈಲಿನ ಪೋರ್ಟರ್ ಆಗಿದ್ದರು ಮತ್ತು ಪುಸ್ತಕ ಮಾರಾಟ ಹಾಗೂ ಪ್ರಕಾಶನ ಸಂಸ್ಥೆ ಹುಟ್ಟುಹಾಕಿ ಈಗ ಹತ್ತೋ ಹದಿನೈದೋ ಮಳಿಗೆಗಳನ್ನು ಹೊಂದಿದ್ದಾರೆ ಎಂದು ಓದಿದ್ದೆ. ಆದರೆ ಅಲ್ಲಿನ ಕತೆಗೂ ಇಲ್ಲಿನದಕ್ಕೂ ಅಜಗಜಾಂತರ.
(ಇಲ್ಲಿನ ಕೆಲವು ವಿವರಗಳನ್ನು ಶ್ರೀ ಪಾಲಾಕ್ಷ ಬಾಣದ ಅವರ ಸಂಶೋಧನೆ ಸಂಗ್ರಹದ ಮೂಲಕ ಧೀಮಂತ ಸಾಹುಕಾರರು (ಡಾ. ಎಂ ಎಸ್ ರಾಮಯ್ಯನವರ ವಿಜಯಗಾಥೆ… ರಚನೆ ಶ್ರೀ ಬ. ಲ. ಸುರೇಶ ಅವರ ಕೃತಿಯಿಂದ ಪಡೆದಿದ್ದೇನೆ)
ಮುಂದುವರೆಯುವುದು…
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.