ದೀರ್ಘ ಕಾಲದಿಂದಲೂ ಸ್ವಿಟ್ಜರ್ಲೆಂಡ್ ತಟಸ್ಥತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಜಗತ್ತಿನ ಎಲ್ಲಾ ದೊಡ್ಡ ಬ್ಯಾಂಕ್‌ಗಳ ಮುಖ್ಯಕೇಂದ್ರಗಳು ಇಲ್ಲಿ ನೆಲೆಗೊಂಡಿದ್ದು ಸ್ವಿಸ್ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರ ಅಭಿವೃದ್ಧಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್ ಎರಡು ವಿಶ್ವ ಮಹಾಯುದ್ಧಗಳಲ್ಲಿ ಪಾಲ್ಗೊಳ್ಳಲಿಲ್ಲ, ಯುರೋಪಿಯನ್ ಒಕ್ಕೂಟದ ಸದಸ್ಯತ್ವವನ್ನೂ ಪಡೆದುಕೊಳ್ಳಲಿಲ್ಲ ಮತ್ತು 2002 ರವರೆಗೂ ವಿಶ್ವಸಂಸ್ಥೆಯ ಸದಸ್ಯತ್ವವನ್ನು ತೆಗೆದುಕೊಂಡಿರಲಿಲ್ಲ. ಪ್ರಸ್ತುತ ವಿದೇಶಗಳ (ಆಫ್‌ಶೋರ್ ಫಂಡ್) ಸುಮಾರು 28% ನಿಧಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಇದೆ ಎನ್ನಲಾಗಿದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹದ ಎರಡನೆಯ ಭಾಗ ಇಲ್ಲಿದೆ

ದೇಶ/ವಿದೇಶಗಳಲ್ಲಿ ಸುಶೀಲ ಸಾಕಷ್ಟು ಓಡಾಡಿದ್ದರೂ ಹಿಮ ಬೀಳುವುದನ್ನು ನೋಡಿರಲಿಲ್ಲ. ಶ್ರೀನಗರ ನೋಡಿಬಂದಿದ್ದರೂ ಅದೇಕೋ ಆಕೆಯ ಆಸೆ ಈಡೇರಿರಲಿಲ್ಲ. ಸರಿ ಧೈರ್ಯ ಮಾಡಿಕೊಂಡು ಮೂರನೇ ಫ್ಲೋರ್ ಹತ್ತಿ ಹೊರಕ್ಕೆ ಇಣುಕಿನೋಡುತ್ತೇವೆ! ಎವರೆಸ್ಟ್ ಶಿಖರವೇ ನಮ್ಮ ಮುಂದೆ ಇರುವಂತೆ ಕಾಣಿಸಿಬಿಟ್ಟಿತು. ಬೆಳ್ಳನೆ ಬಿಳುಪಿನ ಹಿಮರಾಶಿ/ಹಿಮಚ್ಛಾದಿತ ಬೆಟ್ಟಗಳು. ನಾವಿದ್ದ ಕಟ್ಟಡದಿಂದ ಒಂದು ಸಣ್ಣ ಪ್ಯಾಸೇಜ್ ದಾಟಿಹೋಗಿದ್ದೆ ಎರಡೂ ಐಸ್ ಬೆಟ್ಟಗಳು ತೆರೆದುಕೊಂಡುಬಿಟ್ಟವು. ಮಾತು ಕಳೆದುಕೊಂಡಿದ್ದ ಸುಶೀಲ ಈಗ ಇನ್ನೊಂದು ಷಾಕ್ ಹೊಡೆಸಿಕೊಂಡಂತೆ ನನ್ನ ಕಡೆಗೆ ನೋಡುತ್ತ ಗುಟರು ಹಾಕಿದಳು. ಅದೃಷ್ಟವೆಂದರೆ ಶುಭ್ರ ಆಕಾಶ, ನಿಧಾನವಾಗಿ ಪ್ಯಾಸೇಜ್‌ನಲ್ಲಿ ನಡೆದುಹೋಗಿ ಹಿಮದ ಕಣಿವೆ ಸೇರಿಕೊಂಡೆವು. ನಮ್ಮ ಎದುರಿಗೆ ಒಂದಿಬ್ಬರು ಇಳಿಜಾರಿನಲ್ಲಿ ಜಾರಿಜಾರಿ ಬಿದ್ದರು. ಪಕ್ಕದ ಹಿಮದ ರಾಶಿಯ ಮೇಲಿಂದ ಯುವಕರು ಕಾಲುಗಳನ್ನು ಚಾಚಿ ಕುಳಿತು ಆಕಾಶದಿಂದ ಹಕ್ಕಿಗಳಂತೆ ಜಾರಿ ಬರುತ್ತಿದ್ದರು.

(ಜಂಗ್‌ಫ್ರೌಜೊಚ್ ಹಿಮಚ್ಛಾದಿತ ಶಿಖರದ ಮೇಲೆ ಐಸ್ ಜೊತೆಗೆ)

ಪ್ಯಾಸೇಜ್‌ನ ಎರಡೂ ಕಡೆ ಹಗ್ಗಗಳನ್ನು ಕಟ್ಟಿದ್ದು ನಿಧಾನವಾಗಿ ಹಗ್ಗಗಳನ್ನು ಹಿಡಿದುಕೊಂಡು ಸಮತಟ್ಟು ಪ್ರದೇಶಕ್ಕೆ ಹೋಗಿಬಿಟ್ಟೆವು. ಬೆಳಿಗ್ಗೆ 10 ಗಂಟೆಗೆಲ್ಲ ನಾವು ಅಲ್ಲಿ ತಲುಪಿದ್ದು, ಜನಜಂಗುಳಿ ತೀರಾ ಕಡಿಮೆ ಇದ್ದು, ನನಗಂತೂ ಎವರೆಸ್ಟ್‌ ಪರ್ವತ ಏರಿದಷ್ಟೇ ರೋಮಾಂಚನವಾಯಿತು. ಸುಶೀಲ ಬೆಕ್ಕಸಬೆರಗಾಗಿ ಆಶ್ಚರ್ಯಗೊಂಡು ಸುತ್ತಲೂ ನೋಡತೊಡಗಿದಳು. ಅನಂತರ ಸಾಕಷ್ಟು ಫೋಟೋಗಳನ್ನು ಹಿಡಿದುಕೊಂಡು ಕೊನೆಗೆ ಶರಪಂಜರದ ಕಲ್ಪನಾಳಂತೆ ಉರುಳಾಡುತ್ತ ಐಸ್‌ಅನ್ನು ಎತ್ತಿಎತ್ತಿ ತನ್ನ ಮೇಲೆ ಸುರಿದುಕೊಂಡಳು. ಕೊನೆಗೆ ಕೈಹಿಡಿದು ಎತ್ತಿ ನಿಲ್ಲಿಸಲು ಹೋದಾಗ ಏಳಲಾರದೆ ಜಾರಿ ಜಾರಿ ಬೀಳತೊಡಗಿದಳು. ಒಬ್ಬರ ಸಹಾಯದಿಂದ ಎತ್ತಿಹಿಡಿದು ನಿಲ್ಲಿಸಬೇಕಾಯಿತು. ಶಿಖರದ ಇನ್ನೊಂದು ಕಡೆಗೆ ನೋಡಿದಾಗ ಇನ್ನೂ ಎತ್ತರದಲ್ಲಿ ಐಸ್‌ನಲ್ಲಿ ಮುಳುಗಿದ್ದ ಒಂದು ಉಕ್ಕು ಕಟ್ಟಡ ಕಾಣಿಸುತ್ತಿತ್ತು. ಅದು ಜಂಗ್‌ಫ್ರೌಜೋಚ್ ಜಾಗತಿಕ ವೀಕ್ಷಣಾಲಯ, ಜಾಗತಿಕ ವಾತಾವರಣದ ಸಂಶೋಧನಾ ಕೇಂದ್ರ ಮತ್ತು ರೇಡಿಯೊ ರಿಲೇ ನಿಲ್ದಾಣವಿದ್ದ ಕಟ್ಟಡ. ಅದಕ್ಕೆ ಎಲಿವೇಟರ್‌ನಲ್ಲಿ ಮೇಲಕ್ಕೆ ಹೋಗಬಹುದಾಗಿತ್ತು. ಆದರೆ ಸುಶೀಲ ಇನ್ನೂ ಉಸಿರಾಡಲಾಗದೇ ಗುಟುರು ಹಾಕುತ್ತಿದ್ದು ನಾನೂ ಕೂಡ ಹಿಂಜರಿದು ರೆಸ್ಟೋರೆಂಟ್ ಪ್ರಾಂಗಣಕ್ಕೆ ಹಿಂದಿರುಗಿದೆವು. ಎಲ್ಲರೂ ಬಂದ ಮೇಲೆ ಅಲ್ಲಿಂದ ಹಿಂದಿರುಗಿಬಂದೆವು. ಸ್ವಿಟ್ಜರ್ಲೆಂಡ್‌ನ ಹಸಿರು ಒಂದು ಕಡೆಯಾದರೆ ಹಿಮಚ್ಛಾದಿಕ ಶಿಖರಗಳು ಇನ್ನೊಂದು ಕಡೆ ನನ್ನನ್ನ ಕಾಡತೊಡಗಿದವು.

ಅಭಿವೃದ್ಧಿ ಮತ್ತು ಆರ್ಥಿಕತೆಯ ಸೂತ್ರಗಳು

ಸ್ವಿಟ್ಜರ್ಲೆಂಡ್‌ನ ಆರ್ಥಿಕತೆ ವಿಶ್ವದ ಅತ್ಯಂತ ಮುಂದುವರಿದ, ಹೆಚ್ಚು ಅಭಿವೃದ್ಧಿ ಹೊಂದಿದ ಮುಕ್ತ ಮಾರುಕಟ್ಟೆಯ ಆರ್ಥಿಕತೆಯನ್ನು ಹೊಂದಿದೆ. ದೇಶ 2015 ರಿಂದ ಜಾಗತಿಕ ನಾವೀನ್ಯತೆ ಸೂಚ್ಯಂಕ ಮತ್ತು 2020ರ ಜಾಗತಿಕ ಸ್ಪರ್ಧಾತ್ಮಕತೆಯ ವರದಿಯಲ್ಲಿ ಮೂರನೇ ಸ್ಥಾನದಲ್ಲಿದೆ. 2016ರ ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಲಿಚ್ಚೆನ್‌ಸ್ಟೈನ್ (ಯುರೋಪ್‌ನ ನಾಲ್ಕನೇ ಸಣ್ಣ ದೇಶ), ಲಕ್ಸೆಂಬರ್ಗ್ (ಯುರೋಪ್‌ನ ಏಳನೇ ಸಣ್ಣ ದೇಶ) ಮತ್ತು ಸ್ವಿಟ್ಜರ್ಲೆಂಡ್ ವಿಶ್ವದ ಮೂರನೇ ಲ್ಯಾಂಡ್‌ಲಾಕ್ ದೇಶವಾಗಿದೆ. ಸ್ವಿಟ್ಜರ್ಲೆಂಡ್ ತನ್ನದೇ ಆದ ಆರ್ಥಿಕತೆಯು ವಿಶಿಷ್ಟ ಅಭಿವೃದ್ಧಿ ಮಾದರಿಯನ್ನು ಅನುಸರಿಸುತ್ತಾ ಬಂದಿದೆ. ಹೆಚ್ಚಿನ 71% ಜನರು ಸೇವಾವಲಯದಲ್ಲಿ ತೊಡಗಿಕೊಂಡಿದ್ದರೆ, 27% ಜನರು ಉತ್ಪಾದನಾ ವಲಯದಲ್ಲಿ ಮತ್ತು ಕೇವಲ 1.3% ಜನರು ಮಾತ್ರ ಕೃಷಿ ವಲಯದಲ್ಲಿ ತೊಡಗಿಕೊಂಡಿದ್ದಾರೆ. 230,494 ಕಂಪನಿಗಳು ಸೇವಾವಲಯದಲ್ಲಿದ್ದು, ನಂತರ ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಕ್ರಮವಾಗಿ ತೊಡಗಿಕೊಂಡಿವೆ.

ಜಗತ್ತಿನಲ್ಲಿಯೇ ಅತ್ಯುನ್ನತ ಮಟ್ಟದ ಗಡಿಯಾರಗಳನ್ನು ತಯಾರಿಸಿ ರಫ್ತು ಮಾಡುತ್ತದೆ. ಬ್ರೈಟ್ಲಿಂಗ್, ಎಬೆಲ್, ರೋಲೆಕ್ಸ್, ಪಾಟೆಕ್ ಫಿಲಿಪ್, ಸ್ವಾಚ್, ರಿಶ್‌ಮಾಂಟ್, ಶೋಪಾ, ಒಮೆಗಾ, ರೇಮಂಡ್ ವೇಲ್ ಹೀಗೆ ಹಲವಾರು ಕಂಪನಿಗಳಿವೆ. ಬೆರ್ನ್, ಜಿನೀವಾ, ಬಾಸೆಲ್, ಝ್ಯೂರಿಕ್ ನಗರಗಳಲ್ಲಿ ಗಡಿಯಾರ ಅಂಗಡಿಗಳ ಬೀದಿಗಳೆ ಇವೆ. ಒಂದು ವಾಚ್ ಬೆಲೆ ಐದು ದಶಲಕ್ಷ ಡಾಲರ್‌ಗಳವರೆಗೂ ಇದೆ. ಬ್ರೆಗೇ ಮೇರಿ-ಆಂಟೊನಿಯೆಟ್ ಗ್ರಾಂಡೆ ಕಾಂಪ್ಲಿಕೇಷನ್ ಪಾಕೆಟ್ ವಾಚ್ ಬೆಲೆ 30 ದಶಲಕ್ಷ ಡಾಲರುಗಳು. ವಿವಿಧ ಬಣ್ಣಗಳ 874 ವಜ್ರಗಳನ್ನು ಹೊಂದಿರುವ ಸ್ವಿಸ್ ಐಷಾರಾಮಿ ವಾಚ್‌ಕಂಪನಿ ಶೋಪಾ ತಯಾರಿಸಿರುವ ಈ ವಾಚ್ ಬೆಲೆ 25 ದಶಲಕ್ಷ ಡಾಲರ್ ಅಂತೆ.

ಏಷ್ಯಾ 55%, ಯುರೋಪ್ 29% ಮತ್ತು ಅಮೆರಿಕಾಗೆ 14% ಗಡಿಯಾರಗಳನ್ನು ರಫ್ತು ಮಾಡಲಾಗುತ್ತದೆ. ಆರೋಗ್ಯ ಮತ್ತು ಔಷಧೀಯ ಉದ್ಯಮ ಮತ್ತು ವಿವಿಧ ಕೈಗಾರಿಕಾ ವಲಯಗಳನ್ನು ಜಾಗತಿಕವಾಗಿ ಸ್ಪರ್ಧಿಸುವ ಕಂಪನಿಗಳನ್ನು ಹೊಂದಿದೆ. ನೆಸ್ಲೆಯಂತಹ ಆಹಾರ ಸಂಸ್ಕರಣೆ, ಎಬಿಬಿ, ಬಾಬ್ಸ್ಟ್‌, ಎಸ್‌ಎ ಮತ್ತು ಸ್ಟಾಡ್ಲರ್ ರೈಲು ಯಂತ್ರಗಳು ಮತ್ತು ರೋಬೋಟ್ ತಯಾರಿಕೆ, ಸಿಕಾ ಏಜಿಯಂತಹ ಕೈಗಾರಿಕಾ ಮತ್ತು ನಿರ್ಮಾಣ ಬಳಕೆಗಾಗಿ ರಾಸಾಯನಿಕಗಳು ಮತ್ತು ಮಿಲಿಟರಿ ಉಪಕರಣಗಳನ್ನು ತಯಾರಿಸುತ್ತದೆ.

ನಮ್ಮ ಜೊತೆಗಿದ್ದವರಲ್ಲಿ ಹಲವರು ಮೂಲವಾಗಿ ಬೆಂಗಳೂರಿನ ಹಳ್ಳಿಗಳಿಗೆ ಸೇರಿದವರಾಗಿದ್ದು, ಅವರ ಹೊಲಗದ್ದೆಗಳು ಬೆಂಗಳೂರು ನಗರಕ್ಕೆ ಸೇರಿಕೊಂಡಾಗ ಸಾಕಷ್ಟು ಹಣ ಸಿಕ್ಕಿ ಕುಬೇರರಾಗಿದ್ದವರು. ಇನ್ನು ಮಂಡ್ಯ-ರಾಮನಗರದ ಕಡೆಯಿಂದ ಬಂದಿದ್ದವರೂ ಅದೇ ರೀತಿ ನೆಲದಿಂದ ಕುಬೇರರಾಗಿದ್ದವರು. ಅವರು ಜಿನೀವಾ ಮತ್ತು ಜ್ಯೂರಿಚ್ ನಗರಗಳಿಗೆ ಹೋಗುವ ಮುಂಚೆಯೇ ನಮಗೆ ಶಾಪಿಂಗ್ ಮಾಡಲು ಸಮಯಬೇಕು ಎಂದು ಗೈಡ್‌ಗೆ ದುಂಬಾಲು ಬಿದ್ದಿದ್ದರು. ಜಿನೀವಾ ಸಿಟಿ-ಸೆಂಟರ್-ಬ್ಯಾಂಕಿಂಗ್ ಜಿಲ್ಲೆಯಿಂದ ಇವಕ್ಸ್ ವೈವ್ಸ್ವರೆಗೂ ವಿಸ್ತರಿಸಿರುವ ಬೀದಿಗಳು, ರೂ ಡು ಮಾರ್ಚೆಯ ಸಮಾನಾಂತರ ಬೀದಿಗಳು ಜಿನೀವಾದ ಅತ್ಯಂತ ಪ್ರಸಿದ್ಧ ಶಾಪಿಂಗ್ ಜಿಲ್ಲೆಯಾಗಿದೆ. ನಾವೆಲ್ಲ ಆ ಪ್ರದೇಶದ ಬೀದಿಗಳಿಗೆ ಹೋದಾಗ ಬೀದಿಬೀದಿಗಳೆ ವಿಶ್ವ ಪ್ರಸಿದ್ಧ ವಾಚ್ ತಯಾರಿಕ ಅಂಗಡಿಗಳು ತುಂಬಿಕೊಂಡಿದ್ದವು. ಕಿಟಕಿಗಳಲ್ಲಿ ಇಟ್ಟಿದ್ದ ಕೆಲವು ವಾಚ್‌ಗಳ ಬೆಲೆಯನ್ನು ಸ್ವಿಸ್ ಸ್ವಿಸ್ ಪ್ರಾಂಕ್‌ಗಳಲ್ಲಿ ನೋಡಿ ನಮ್ಮ ರೂಪಾಯಿಗಳಿಗೆ ಹೋಲಿಕೆ ಮಾಡಿಕೊಂಡೆವು. ಒಂದು ಸ್ವಿಸ್ ಪ್ರಾಂಕ್‌ ಎಂದರೆ ಹೆಚ್ಚು ಕಡಿಮೆ ನಮ್ಮ ನೂರು ರೂಪಾಯಿಗಳಿಗೆ ಸಮ.

ಒಂದು ವಾಚ್ ಮೇಲೆ ಅದರ ಬೆಲೆಯನ್ನು 1600 ಅಥವಾ 5000 ಸ್ವಿಸ್ ಪ್ರಾಂಕ್ ಎಂದು ಬರೆದಿದ್ದಾಗ ಅದು ಭಾರತೀಯ ರೂಪಾಯಿಗಳಲ್ಲಿ ಎಷ್ಟು ಎಂದು ಎಲ್ಲರೂ ಲೆಕ್ಕ ಹಾಕತೊಡಗಿದರು. ನಾನು, `ಅಯ್ಯೋ ಅದು ತುಂಬಾ ಸರಳ. ಒಂದು ಸ್ವಿಸ್ ಫ್ರಾಂಕ್ ಎಂದರೆ ಹೆಚ್ಚೂಕಡಿಮೆ ನಮ್ಮ ನೂರು ರೂಪಾಯಿಗಳು. ವಾಚ್ ಮೇಲೆ ಬರೆದಿರುವ ಸ್ವಿಸ್ ಪ್ರಾಂಕ್ ಮುಂದೆ ಎರಡು ಝೀರೋಗಳನ್ನು ಸೇರಿಸಿಕೊಳ್ಳಿ ಅಷ್ಟೇ ಅದರ ಬೆಲೆ’ ಎಂದೆ. 1600 ಸ್ವಿಸ್ ಪ್ರಾಂಕ್ ಎಂದರೆ ನಮ್ಮ ರೂಪಾಯಿಗಳಲ್ಲಿ 1,60,000 ರೂಪಾಯಿಗಳು. ಇನ್ನು 5000 ಸ್ವಿಸ್ ಪ್ರಾಂಕ್ ಎಂದರೆ 5,00,000 ರೂಪಾಯಿಗಳು. ಹೌದಲ್ಲ! ಎಂದವರು ಅನಂತರ ಲೀಲಾಜಾಲವಾಗಿ ವಾಚ್‌ಗಳ ವ್ಯಾಪಾರ ಕೈಗೊಂಡರು. ಮೂರು ನಾಲ್ಕು ಜನರು ಒಂದರಿಂದ ಎರಡು ಲಕ್ಷಗಳ ಬೆಲೆಯ ವಾಚ್‌ಗಳನ್ನು ಕೊಂಡುಕೊಂಡರೆ, ಕೆಲವರು 50 ರಿಂದ 60 ಸಾವಿರದಲ್ಲಿ ಮೂರುನಾಲ್ಕು ವಾಚ್‌ಗಳನ್ನು ಕೊಂಡುಕೊಂಡರು. ನಾವು ಅವರ ಜೊತೆಜೊತೆಗೆ ನಡೆದಾಡುತ್ತ ವಾಚ್‌ಗಳನ್ನು ನೋಡುತ್ತಿದ್ದೆವು. ಮಾತುಮಾತಿನಲ್ಲಿ `ವಾಚ್ ಎಷ್ಟೇ ದುಬಾರಿಯಾದರೂ ಅದೇ ಸಮಯ ತಾನೆ ತೋರಿಸುವುದು’ ಎಂದು ತಮಾಷೆ ಮಾಡಿದೆ.

ಕೃಷಿ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ಅಂದರೆ 70% ಸಬ್ಸಿಡಿ ನೀಡಿ ತನ್ನ ದೇಶದ 60% ಆಹಾರವನ್ನು ಉತ್ಪಾದಿಸುತ್ತದೆ. ಚೀಸ್ ಮತ್ತು ಡೈರಿ ಉತ್ಪನ್ನಗಳು ಜಗತ್‌ಪ್ರಸಿದ್ಧಿ ಮತ್ತು ವೈನ್ ಕೂಡ. 90-100% ಆಲೂಗೆಡ್ಡೆ, ತರಕಾರಿಗಳು, ಹಂದಿಮಾಂಸ, ಜಾನುವಾರು ಮತ್ತು ಹೆಚ್ಚಿನ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ರೈತರು ಸಬ್ಸಿಡಿಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅವರು ಪರಿಸರ ನಿರ್ವಹಣಾ ವ್ಯವಸ್ಥೆಗಳ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಗೊಬ್ಬರಗಳ ಸಮತೋಲಿತ ಬಳಕೆ ಮತ್ತು ವಾರ್ಷಿಕ ರೊಟೇಷನಲ್ ಬೆಳೆಗಳನ್ನು ಬೆಳೆಸುವ ಕ್ರಮಗಳನ್ನು ಅನುಸರಿಸಬೇಕು. ಪಕ್ಷಿ-ಪ್ರಾಣಿಗಳು ಮತ್ತು ಮಣ್ಣನ್ನು ರಕ್ಷಿಸಲು, ಕೀಟ ನಾಶಕಗಳ ಸೀಮಿತ ಮತ್ತು ಉದ್ದೇಶಿತ ಬಳಕೆಯನ್ನು ಮಾಡಬೇಕು. ಈಗ ಫಾರ್ಮ್‌ಗಳನ್ನು ನಿಧಾನವಾಗಿ ನಿಲ್ಲಿಸುತ್ತಾ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಪರ್ವತ ಪ್ರದೇಶಗಳು ಮತ್ತು ನಗರಗಳಲ್ಲಿ ವಿಶೇಷ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ. ಗ್ರೀಸನ್ ಪಟ್ಟಣದಲ್ಲಿ 14%, ವಾಲೈಸ್ ಮತ್ತು ಪೂರ್ವ ಸ್ವಿಟ್ಜರ್ಲೆಂಡ್‌ನಲ್ಲಿ ತಲಾ 12%, ಮಧ್ಯ ಸ್ವಿಟ್ಜರ್ಲೆಂಡ್‌ನಲ್ಲಿ 11%, ಬರ್ನೀಸ್ ಒಬರ್‌ಲ್ಯಾಂಡ್‌ನಲ್ಲಿ 9% ಹೋಟಲುಗಳಿವೆ. ಪ್ರವಾಸಿಗರಲ್ಲಿ ಹೆಚ್ಚಾಗಿ 16.5% ಜರ್ಮನಿ, 6.3% ಯು.ಕೆ, 4.8% ಯು.ಎಸ್.ಎ, 3.6% ಫ್ರಾನ್ಸ್ ಮತ್ತು 3% ಜನರು ಇಟಲಿಯಿಂದ ಬರುತ್ತಾರೆ. 2023ರಲ್ಲಿ ಭಾರತದಿಂದ ಸುಮಾರು 2.7 ದಶಲಕ್ಷ ಜನರು ಸ್ವಿಟ್ಜರ್ಲೆಂಡ್ ಪ್ರವಾಸ ಮಾಡಿದ್ದಾರೆ. ಕೆಲವು ಹಿಂದಿ ಸಿನಿಮಾಗಳು ಇದಕ್ಕೆ ಕಾರಣವಾಗಿದ್ದು, `ದಿಲ್ ವಾಲೆ ದುಲನಿಯಾ ಲೆ ಜಾಯಾಂಗೆ’ ಸಿನಿಮಾ ನಿರ್ದೇಶಕ ಆದಿತ್ಯ ಚೋಪ್ರಾ ಬಸ್ಟ್ ಅನ್ನು ಒಂದು ಪಾರ್ಕ್‌ಲ್ಲಿ ನಮ್ಮ ಗೈಡ್ ತೋರಿಸಿದ. ಜಂಗ್‌ಫ್ರೋ-ಅಲೆಟ್ ಹಿಮಶಿಖರದ ಮೇಲೆ ಅದೇ ಸಿನಿಮಾದ ಶಾರುಖ್ ಖಾನ್ ಮತ್ತು ಕಾಜೋಲ್ ಚಿತ್ರದ ಮುಂದೆ ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಸಾರಿಗೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಆದಾಯ ಬರುತ್ತದೆ. ಎಲ್ಲವೂ ದುಬಾರಿಯಾಗಿದ್ದು ಒಂದು ಕುಟುಂಬಕ್ಕೆ ತಿಂಗಳಿಗೆ ಸರಾಸರಿ 4000-8000 ಸ್ವಿಸ್ ಫ್ರಾಂಕ್ಸ್ ಬೇಕಾಗುತ್ತದೆಯಂತೆ. ನಿರುದ್ಯೋಗ ಕೇವಲ 2-3% ಇದ್ದು ಹಿಂದಿನ ಸಂಬಳದ 80% ನಿರುದ್ಯೋಗ ಭತ್ಯ ದೊರಕುತ್ತದೆ. ದೇಶದಲ್ಲಿ 25% ವಿದೇಶಿಗರಿದ್ದಾರೆ.

ಜಗತ್ತಿನ ಕಪ್ಪು ಹಣ ಬಚ್ಟಿಟ್ಟುಕೊಂಡಿರುವ ಕಳಂಕ

ದೀರ್ಘ ಕಾಲದಿಂದಲೂ ಸ್ವಿಟ್ಜರ್ಲೆಂಡ್ ತಟಸ್ಥತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವತೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಜಗತ್ತಿನ ಎಲ್ಲಾ ದೊಡ್ಡ ಬ್ಯಾಂಕ್‌ಗಳ ಮುಖ್ಯಕೇಂದ್ರಗಳು ಇಲ್ಲಿ ನೆಲೆಗೊಂಡಿದ್ದು ಸ್ವಿಸ್ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರ ಅಭಿವೃದ್ಧಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್ ಎರಡು ವಿಶ್ವ ಮಹಾಯುದ್ಧಗಳಲ್ಲಿ ಪಾಲ್ಗೊಳ್ಳಲಿಲ್ಲ, ಯುರೋಪಿಯನ್ ಒಕ್ಕೂಟದ ಸದಸ್ಯತ್ವವನ್ನೂ ಪಡೆದುಕೊಳ್ಳಲಿಲ್ಲ ಮತ್ತು 2002 ರವರೆಗೂ ವಿಶ್ವಸಂಸ್ಥೆಯ ಸದಸ್ಯತ್ವವನ್ನು ತೆಗೆದುಕೊಂಡಿರಲಿಲ್ಲ. ಪ್ರಸ್ತುತ ವಿದೇಶಗಳ (ಆಫ್‌ಶೋರ್ ಫಂಡ್) ಸುಮಾರು 28% ನಿಧಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಇದೆ ಎನ್ನಲಾಗಿದೆ. ಯು.ಕೆ.ಗೆ ಸೇರಿದ 379 ಬಿಲಿಯನ್ ಸ್ವಿಸ್ ಫ್ರಾಂಕ್ಸ್, ಯು.ಎಸ್.ನ 168 ಬಿಲಿಯನ್ ಸ್ವಿಸ್ ಫ್ರಾಂಕ್ಸ್ ಇದ್ದು ಇಂಡಿಯಾ 44ನೇ ಸ್ಥಾನದಲ್ಲಿದೆ. ಇದು 2021ಕ್ಕೆ ಸುಮಾರು 3.83 ಬಿಲಿಯನ್ ಸ್ವಿಸ್ ಫ್ರಾಂಕ್ಸ್ ಆಗಿದ್ದು ಕಳೆದ 14 ವರ್ಷಗಳಲ್ಲಿ ಅತಿ ಹೆಚ್ಚಿನ ಕಪ್ಪು ಹಣವಾಗಿದೆ. ಒಟ್ಟು 104 ದೇಶಗಳ ರಾಜಕಾರಣಿಗಳು, ರಾಜರು, ಉದ್ಯಮಿಗಳು, ವ್ಯಾಪಾರಿಗಳು, ಕಳ್ಳರು, ಸಿನಿಮಾದವರು, ಆಟಗಾರರು ಎಲ್ಲಾ ರೀತಿಯ ಜನರ ಒಟ್ಟು 2,020.60 ಯು.ಎಸ್. ಬಿಲಿಯನ್ ಡಾಲರ್‌ಗಳನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ. ಭಾರತೀಯರು ಸ್ವಿಸ್ ಬ್ಯಾಂಕ್ಸ್ ಸೇರಿ ವಿದೇಶಿ ಬ್ಯಾಂಕ್‌ಗಳಲ್ಲಿ ಒಟ್ಟು ಸುಮಾರು 10.6-11.4 ಟ್ರಿಲಿಯನ್ ಯು.ಎಸ್. ಡಾಲರ್ಸ್‌! ಹಣವನ್ನು ಇಟ್ಟಿರುವುದಾಗಿ ಹೇಳಲಾಗುತ್ತದೆ.

(ಸ್ವಿಸ್ ನ್ಯಾಷನಲ್ ಬ್ಯಾಂಕ್ ಕಟ್ಟಡ)

ಇಷ್ಟಕ್ಕೂ ಸ್ವಿಸ್ ಬ್ಯಾಂಕ್‌ನಲ್ಲಿ ಅಥವಾ ಇತರ ದೇಶಗಳ ಬ್ಯಾಂಕ್‌ಗಳಲ್ಲಿ ಹಣವನ್ನು ಯಾವ ರೂಪದಲ್ಲಿ ಇಡಲಾಗಿದೆ! ಎನ್ನುವ ಪ್ರಶ್ನೆಗಳಿಗೆ ಯಾರಲ್ಲೂ ನಿಖರವಾದ ಉತ್ತರಗಳಿಲ್ಲ! ಹಣವನ್ನು ಲಿಕ್ವಡೇಟ್ ಮಾಡಿ ಚಿನ್ನ, ವಜ್ರಗಳು, ಪ್ಲಾಟಿನಂ ಅಥವಾ ಕರೆನ್ಸಿ ಹೀಗೆ ಯಾವ ರೂಪದಲ್ಲಿ ಇಡಲಾಗಿದೆ ಎನ್ನುವುದು ರಹಸ್ಯದ ವಿಷಯವಾಗಿದೆ. ಜೊತೆಗೆ ಯಾವುದೇ ಬ್ಯಾಂಕ್/ದೇಶ ಕಪ್ಪು ಹಣದ ವಿವರಗಳನ್ನು ಕೇಳಿದರೂ ನೀಡುವುದಿಲ್ಲ. ಹಣ ಇಡುವವರು ಯಾವ ರೀತಿಯಲ್ಲಿ ಅಕೌಂಟ್ ತೆಗೆಯುತ್ತಾರೆ ಮತ್ತು ಹಣವನ್ನು ಹಿಂದಕ್ಕೆ ಪಡೆಯುತ್ತಾರೆ ಎನ್ನುವುದು ಕೂಡ ರಹಸ್ಯವೆ ಆಗಿದೆ.


ನಮ್ಮ ಪ್ರಧಾನ ಮಂತ್ರಿಗಳು ಸ್ವಿಸ್ ಬ್ಯಾಂಕ್‌ನಲ್ಲಿರುವ ದೇಶದ ಕಪ್ಪು ಹಣವನ್ನು ಹಿಂದಕ್ಕೆ ತರುವುದಾಗಿ ಹೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ, ಬದಲಿಗೆ ಹೆಚ್ಚಾಗಿದೆ. ಒಕ್ಕೂಟ ವ್ಯವಸ್ಥೆಯ ಸ್ವಿಟ್ಜರ್ಲೆಂಡ್ ದೇಶ ಜಗತ್ತಿನ ಕಳ್ಳರ ಕಪ್ಪು ಹಣವನ್ನೆಲ್ಲ ಬಚ್ಟಿಟ್ಟುಕೊಂಡಿರುವ ಕಳಂಕವನ್ನು ಹೊತ್ತುಕೊಂಡಿದೆ. ಸ್ವಿಸ್ ಬ್ಯಾಂಕ್ ಮಾತ್ರ ಕಪ್ಪು ಹಣವನ್ನು ಬಚ್ಚಿಟ್ಟುಕೊಂಡಿಲ್ಲ. ಅನೇಕ ದೇಶಗಳ ಬ್ಯಾಂಕ್‌ಗಳು ಅದೇ ಕೆಲಸವನ್ನು ಮಾಡುತ್ತಿವೆ. ಯು.ಎಸ್. ಹಾಂಗ್‌ಕಾಂಗ್, ಸಿಂಗಾಪುರ, ಜರ್ಮನಿ, ದುಬೈ ದೇಶಗಳು ಸ್ವಿಸ್ ದೇಶದ ನಂತರದ ಸಾಲಿನಲ್ಲಿವೆ. ಸ್ವಿಟ್ಜರ್ಲೆಂಡ್‌ನಲ್ಲಿ ಇತರ ದೇಶಗಳ 93 ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅಂದರೆ ಜಗತ್ತಿನ ಹಣವಂತರೆಲ್ಲ ಕಪ್ಪು ಜನರೇ ಆಗಿಬಿಟ್ಟಿದ್ದಾರೆ?