ಅಲ್ಲಿಂದ ತಿರುಗಿ ಬರುವಾಗ, ಭೆಟ್ಟಿಯಾದವರೆಲ್ಲ ಮಾತಾಡಿಸಿದರು. ಮಾವನ ಭಕ್ತರು ಇವರೆಲ್ಲ. ಮಾವ ಈ ಊರಿನ ಕುಲದೇವತೆಗಳಲ್ಲಿ ಒಬ್ಬ. ಊರ ಜನರೆಲ್ಲ ಒಂದು ರೀತಿಯಿಂದ ಅವನಿಗೆ ಋಣಿ. ಮದುವೆ-ಮುಂಜಿವೆ, ಸಾವು-ಹುಟ್ಟು, ದಾನ-ದಕ್ಷಿಣೆ, ಜಾತ್ರೆ, ಕುಸ್ತೀ ಕಣ, ಚುನಾವಣೆ, ಅಧಿಕಾರಿಗಳಿಗೆ ಕೋಳೀ ಪಾರ್ಟಿ ಎಲ್ಲವೂ ಮಾವ-ದತ್ತವೇ. ಈ ಮಂದಿಯ ಒಂದೊಂದು ಉಸುರಿನ ಮೇಲೂ ಮಾವನ ಋಣದ ಅನೇಕ ಆರ‍್ಸಿಸಿ ಭವನಗಳು ನಿರ್ಮಾಣಗೊಂಡಿವೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕತೆ “ಮಾವ” ನಿಮ್ಮ ಈ ಭಾನುವಾರದ ಓದಿಗೆ
ಈ ಪಟ್ಟಣದಲ್ಲಿ ಅಧ್ಯಾಪಕ ವೃತ್ತಿಗೆ ಸೇರಿದಾಗಿನಿಂದ ನನ್ನ ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚಾಗಿ, ನನ್ನ ಹಳ್ಳಿಯ ಸಂಪರ್ಕವೇ ಕಳಚಿ ಹೋದಂತಾಗಿದೆ. ಅಕ್ಕ, ಅವಳ ಮಕ್ಕಳು ವರ್ಷಕ್ಕೊಮ್ಮೆ ಮುರುಘಾಮಠದ ಜಾತ್ರೆಗೆ ಬಂದಾಗ ಇಲ್ಲಿಗೆ ಬಂದು ಹೋಗುತ್ತಾರೆ. ಮಾವ ಮಾತ್ರ ಪ್ರತಿ ಮಂಗಳವಾರ ಸಂತೆಗೆ ಬಂದಾಗ ಮನೆ ಕಡೆ ಬಂದು ಹೋಗುತ್ತಾನೆ. ತಂದೆ ಸತ್ತರೂ ಸೋದರಮಾವ ಇರಬೇಕಂತೆ. ಈ ಮಾವ ನಿಜವಾಗಿಯೂ ನನ್ನ ಪಾಲಿನ ದುಃಖಗಳಿಗೆ ಹೆಗಲು ಕೊಟ್ಟಿದ್ದರಿಂದಲೇ ನಾನೂ ಒಬ್ಬ ಮನುಷ್ಯ ಅನಿಸಿಕೊಂಡಿದ್ದು. ಮಾವ ನನಗೆ ಮಾಡದ ಸಹಾಯವಿಲ್ಲ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರೂ, ಆ ಅನಾಥಭಾವ ಬರದಂತೆ ನನ್ನನ್ನೂ ನನ್ನ ತಾಯಿಯನ್ನೂ ನೋಡಿಕೊಂಡ ಈ ಮಾವ ನನಗಿಂತ ಆರೇಳು ವರ್ಷವಷ್ಟೇ ದೊಡ್ಡವ. ತುಂಬ ಉದಾರಿ. ದೊಡ್ಡ ಮನಸ್ಸು.
ಇಲ್ಲಿಂದ ಆರು ಮೈಲು ದೂರದಲ್ಲಿ ಮಾವನ ಹಳ್ಳಿ. ಅವ್ವನ ತವರೂರು. ನಾನು ಹೋದರೆ ಮನೆಯಲ್ಲಿ ಅವರಿಗೆಲ್ಲ ಹಬ್ಬ. ಊರಿನ ಜನರಿಗೆಲ್ಲ ಅಭಿಮಾನ. ನನ್ನ ಮಾವನಂತೂ ‘ನನ್ನ ಅಳಿಯ ಪ್ರೊಫೆಸರ್’ ಎಂದು ಮೀಸೆಯ ಮೇಲೆ ಕೈ ಹಾಕಿ, ಇಲ್ಲಿ ಸಂತೆಗೆ ಬಂದವರೆದುರು ಹೇಳುವುದನ್ನು ಕೇಳಿದಾಗ ನನಗೇಕೋ ಸಂಕೋಚವೆನಿಸುತ್ತಿತ್ತು.
ಶನಿವಾರ ದಿನ ಕಡೆಯ ಬಸ್ಸಿಗೆ ಕರಡೀಗುಡ್ಡಕ್ಕೆ ಹೋದೆ, ಅಲ್ಲಿಂದ ಮೂರು ಮೈಲು ನಡೆದು, ಕಲ್ಲು-ಮುಳ್ಳುಗಳನ್ನು ತುಳಿದು ಊರನ್ನು ಸಮೀಪಿಸಿದೆ. ನೇರವಾಗಿ ಬಸ್ ಬರಲು ದಾರಿ ಇರದ್ದರಿಂದಲೇ ಶಿಕ್ಷಣ, ಪ್ರಗತಿಗಳ ಸಂಪರ್ಕ ಇರದೆ ಈ ಜನ ಕಗ್ಗರಾಗಿದ್ದಾರೆ, ಹುಂಬರಾಗಿದ್ದಾರೆ. ಊರಿನ ತುಂಬ ಬಡಿದಾಡುವ, ಕಡಿದಾಡುವ ಜನರೇ ತುಂಬಿದ್ದಾರೆ. ಏನು ಧಾಡಿ ಇವರಿಗೆ, ದಾರಿ ಯಾಕೆ ಮಾಡಿಸಿಕೊಳ್ಳಬಾರದು ಎಂದು ಶಪಿಸುತ್ತ ಹೊರಟಿದ್ದೆ. “ಶರಣರೀಽ ಎಪ್ಪಾ, ಈಗ ಬಂದ್ರ್ಯಾ…?” ಎಂದ ಧ್ವನಿ ನನ್ನನ್ನು ತಡೆಯಿತು. ನೋಡಿದೆ. ಹೊಲೆಯರ ಬಸ್ಯಾ ಊರ ಮುಂದಿನ ಹೊಲದ ವಾರಿಯ, ಎರೆಯ ಹಕ್ಕಲದಲ್ಲಿ ಸೇಂಗಾ ಕಾಯುತ್ತ ಕುಳಿತಿದ್ದ. ಊರ ಮುಂದಿನ ಹೊಲ ಎಷ್ಟು ಅನುಕೂಲವೋ ಅಷ್ಟೇ ಅನನುಕೂಲ. ಯಾವಾಗಲೂ ಒಂದು ಆಳು ಕಾಯುತ್ತ ಇರಬೇಕಾಗುತ್ತದೆ. ಭಿಡೆ-ಮುರವತ್ತುಗಳಿಗೂ ಸೋಲಬೇಕಾಗುತ್ತದೆ. “ಶರಣಪಾ ಬಸ್ಯಾ, ಏನು ನೀ, ಆರಾಮದೀಯಾ?” ಎಂದೆ. “ಹ್ಞೂಂನ್ರಿ ಯಪ್ಪಾ, ನಿಮ್ಮ ದಯದಿಂದ ಎಲ್ಲಾ ಬೇಸಿ ಐತ್ರಿ. ಈ ಸರ್ತೆಯರ ಒಂದ್ಯಾಡ್ ದಿನ ಇದ್ದ ಹೋಗ್ರಿಯಪ್ಪಾ,” ಎಂದ ಕಳಕಳಿಯಿಂದ. ಈ ನಿರ್ವ್ಯಾಜ ಪ್ರೀತಿಯ ಆಮಂತ್ರಣ ಮನಸ್ಸು ತುಂಬಿತು. “ಹ್ಞೂ. ಇದ್ದ ಹೋಗತೇನಿ.” ಎನ್ನುತ್ತ ಸಾಗಿದೆ. ಕೈ ಮುಗಿದು ನಿಂತಿದ್ದ ಬಸ್ಯಾನ ಮೂರ್ತಿ ಕಣ್ಣಿನಲ್ಲಿ ತುಂಬಿತ್ತು.
ಹಳ್ಳ ದಾಟಿ ಆಚೆ ದಂಡೆಗೆ ನಿಂತೆ. ಕೈ ಕಾಲು ತೊಳೆದುಕೊಂಡೆ. ನನ್ನ ಬಾಲ್ಯದಲ್ಲಿ ಇಲ್ಲಿ ದಿನಾ ಬಂದದ್ದು, ಈಚಲ ಹಣ್ಣು ಹರಿದು ತಿಂದದ್ದು, ಜಾಲಿಯ ಮುಳ್ಳು ತುಳಿದು ಅದನ್ನು ಜಾಲಿಯ ಮುಳ್ಳಿನಿಂದಲೇ ತೆಗೆದುಕೊಂಡದ್ದು, ಎರೆ ರಾಡಿಯಲ್ಲಿ ಮೊಳಕಾಲು ತನಕ ಕಾಲು ಸಿಗಿಬಿದ್ದದ್ದು, ಹೊನ್ನಾರಿ ಹೂ ಹರಿದು ದನ ಕಾಯುವ ಹುಡಿಗೆಯರಿಗೆ ಕೊಟ್ಟಿದ್ದು, ಮನೆ ಕಟ್ಟಿ ಬೇವಿನ ಗಿಡದ ಕೆಳಗೆ ಆಡಿದ್ದು, ಬಸ್ಯಾನ ಮಗಳು ಸ್ವಲ್ಪ ದೂರದಲ್ಲೇ ನಿಂತು ನಮ್ಮ ಆಟ ನೋಡಿದ್ದು, ಶಿವಳ್ಳಿ ಹನುಮಂತನಿಂದ ರೊಟ್ಟೀ ಕಲ್ಲ್ಯಾ, ಶಾನುಭೋಗರ ಶ್ರೀನಿವಾಸ ಮತ್ತು ನಾನು ಒದೆತ ತಿಂದಿದ್ದು, ತೇಗೂರ ಮೂಗಪ್ಪ, ಸಣ್ಣೀಮನಿ ಎಲ್ಲಪ್ಪನ ಕೂಡ ಶಾಲೆ ತಪ್ಪಿಸಿ ಹಳ್ಳದ ಗುಂಟ ಹೋಗಿ, ಸಂಜೆ ಆದ ನಂತರದ ತನಕ ಕಾದು, ಅಲ್ಪ ಸ್ವಲ್ಪ ಕೂಡಿಬಿದ್ದಿದ್ದ ನೀರಾ ಕುಡಿದದ್ದು, ಗೊಬ್ಬಿಗಳನ್ನು ಒಡೆದದ್ದು, ಸಿಂದೀ ಹೇರಿಕೊಂಡು ಬರುತ್ತಿದ್ದ ಒಂಟೆಗಳನ್ನು ನೋಡಿ ಒಂದು ಮಹಾ ಅದ್ಭುತ ಪ್ರಾಣಿಯನ್ನು ಕಂಡಂತೆ ಬೆರಗಾಗಿ ನಿಲ್ಲುತ್ತಿದ್ದದ್ದು, ಅಜ್ಜನ ಚಹದ ಅಂಗಡಿಯಲ್ಲಿ ಹುರಿಯುತ್ತಿದ್ದ ಕಡಲೆ ಪುಟಾಣಿಯನ್ನು ಕಿಸೆ ತುಂಬ ಹಾಕಿಕೊಂಡು, ಅಮ್ಮನಿಂದ ಬೆಲ್ಲ ಇಸಕೊಂಡು ತಿನ್ನುತ್ತ ಪತ್ರೀ ಭಾವಿ ಕಡೆಗೆ ಅಡ್ಡಾಡಲು ಹೋಗುತ್ತಿದ್ದದ್ದು, ಕಡೇಮನಿ ರಾಮ್ಯಾ ಗರಡೀ ಮನೆಯಲ್ಲಿ ಎಳೆದು ಹೊಡೆದದ್ದು… ಛೀ, ಈ ಹಾಳು ನೆನಪುಗಳು ಸಣ್ಣಗೆ ಬೆಳತನಕ ಬೀರು ಕುಡಿದಂತೆ. ಮುಖಕ್ಕೆ ಛಲ್ಲನೆ ಮತ್ತೊಮ್ಮೆ ನೀರು ಚಿಮ್ಮಿಕೊಂಡು ಎದ್ದೆ. ಆಗಲೇ ಮಬ್ಬುಗತ್ತಲಾಗಿತ್ತು. ಊರಿನ ದನಗಳೆಲ್ಲ ಮನೆ ಸೇರುತ್ತಿದ್ದವು. ನಮ್ಮೂರಿನ ಧೂಳಿನ ಸೌಂದರ್ಯದಲ್ಲಿಯೂ ಒಂದು ಮೋಹವಿದೆ, ಮೋಡಿಯಿದೆ.
ಮಾವ ಅಂಗಡಿಯಲ್ಲಿ ಕುಳಿತಿದ್ದ, ಮಾತಾಡಿಸಿದ. ಅಂಗಡಿಯಲ್ಲಿ ಬಹಳ ಗದ್ದಲವಿತ್ತು. ಒಳಗೆ ಹೋಗಿ ಅಕ್ಕನ್ನ ಮಾತಾಡಿಸಿ, ಹೊರಗೆ ಬಂದೆ. “ಈ ಸರ್ತೆ ಒಂದೆರಡು ದಿನ ಇದ್ದೇ ಹೋಗು,” ಎಂದ ಮಾವ. ಈ ಮಾವ ನನಗೆ, ನಾನು ಮಾವನಿಗೆ ಭವ್ಯರು. ಊರಿನ ಮಂದಿಯೆಲ್ಲ ಪ್ರತಿದಿನದಂತೆ ಅಂಗಡಿಯ ಬಾಜೂಕಿನ ಕೋಣೆಯಲ್ಲಿ ಕೂಡಹತ್ತಿದರು. ಅಕ್ಕನನ್ನು ಅಂಗಡಿಯಲ್ಲಿ ಕೂಡ್ರಿಸಿ ಮಾವನೂ ಬಂದ. ಎಲ್ಲರ ಮುಖದ ಮೇಲೂ ಆಶ್ಚರ್ಯ, ಅದ್ಭುತ, ಆನಂದದ ತೆಪ್ಪಗಳು ತೇಲುತ್ತಿದ್ದವು. ಎಲ್ಲರೂ ನೂರಾಯೆಂಟು ಪ್ರಶ್ನೆ ಕೇಳುವವರು. ಕುರ್ಚಿ ಇಟ್ಟಿದ್ದರೂ ಅವರೆಲ್ಲರ ಕೂಡ ಕೆಳಗೆ ಗುಡಾರದ ಮೇಲೇ ಲೋಡಿಗೆ ಒರಗಿ ನಾನೂ ಕುಳಿತೆ. ಅದರಿಂದ ಅವರಿಗೆ ಇನ್ನೂ ಆನಂದ.
ರಾತ್ರಿ ಎಂಟಕ್ಕೆ ಮಾವನ ಮಗ ಗುರುಪುತ್ರ ಬಂದು ‘ಊಟಕ್ಕೆ ಬಾ’ ಎಂದು ಕರೆದಾಗ, ಎಲ್ಲರನ್ನೂ ಕಳಿಸಿ ಮಾವ, “ನೀ ಉಣ್ಣ ಹೋಗು. ನಾ ಅಟ ಅಂಗಡ್ಯಾಗ ಕುಂತ ಆಮ್ಯಾಲೆ ಉಣತೇನಿ” ಅಂದ. ಅವನು ಅಂಗಡಿಯಲ್ಲಿ ಕೂತ. ಅಕ್ಕ ಊಟಕ್ಕೆ ನೀಡಲು ಒಳಗೆ ಬಂದಳು.
ಪಡಸಾಲೆಯಲ್ಲಿ ಕುಳಿತಿದ್ದ ಕೆಲಸದ ಮುದುಕಿಯನ್ನು ಮಾತಾಡಿಸಿದೆ. ಎಷ್ಟೋ ವರ್ಷಗಳಿಂದ ತನಗೆ ಯಾರೂ ಸಂಬಂಧಿಕರಿಲ್ಲದ ಈ ಅಮ್ಮ ನಮ್ಮ ಮನೆಯ ಒಬ್ಬ ಸದಸ್ಯಳಾಗಿಯೇ ಆತ್ಮೀಯಳಾಗಿ ಬೆಳೆದಿದ್ದಾಳೆ.
ಅಡಿಗೆಮನೆಗೆ ಬಂದು, “ಅಕ್ಕಾ, ಹೆಂಗದೀ?” ಎಂದೆ. “ಹಿಂಗದೇನಿ ನೋಡಲ್ಲ…” ಅಂದಳು. ಅಕ್ಕನ ಮುಖ ಒಲೆಯ ಮುಂದೆ ಕುಳಿತಿದ್ದರಿಂದ ಉರಿಯ ಬೆಳಕಿಗೆ ಕೆಂಪಾಗಿತ್ತೇನೊ ಅನ್ನಿಸಿತು. ಹುಡುಗರೆಲ್ಲ ಉಂಡು ಮಲಗಿದ್ದರು. “ಇನ್ನಽ ಮಾವನ ಊಟ ಯಾವಾಗ?” ಅಂದೆ. “ಅವರೇನ, ಚಿತ್ತೀ ಮಳಿ ಇದ್ದಂಗ,” ಅನ್ನುತ್ತ ಅಕ್ಕ ಅನ್ನಕ್ಕೆ ಕೆನೆಮೊಸರು ಹಾಕಿದಳು. ಕೆನೆಮೊಸರು ನನಗೆ ಪ್ರೀತಿ ಎಂದು, 2-3 ವರ್ಷಕ್ಕೊಮ್ಮೆ ಬರುವ ನನ್ನ ಇಚ್ಛೆಗಳನ್ನೂ ಈ ಅಕ್ಕ ನೆನಪಿಟ್ಟಿದ್ದಾಳಲ್ಲ ಎಂದು ಅಭಿಮಾನವೆನ್ನಿಸಿತು.
ಊಟ ಮಾಡಿ, ಡರಕಿ ಹೊಡೆಯುತ್ತ ಹೊರಗೆ ಬಂದೆ. ಮಾವನ ಕಿರಾಣಿ ಅಂಗಡಿಯ ಗದ್ದಲ ಕಡಿಮೆಯಾಗಿತ್ತು. ಹೊಲೆಯರ ಬಸ್ಯಾ ಚುಟ್ಟಾ ಸೇದುತ್ತ ಒಂದು ದಂಡೆಗೆ ಫಡಕುಗಳ ಹತ್ತಿರ ಕೂತಿದ್ದ. “ನೀ ದಣದೀ, ಹೋಗಿ ಮಲಕೊಂಡು ಬಿಡು,” ಎನ್ನುತ್ತ ಮಾವ ಎಲೆ, ಅಡಿಕೆ, ಯಾಲಕ್ಕಿ, ಸುಣ್ಣ ಒಂದು ಬಸಿಯಲ್ಲಿ ಇಟ್ಟು ಕೊಟ್ಟ. ಅದನ್ನು ಹಿಡಿದುಕೊಂಡೇ ಹೊರಗಿನ ಕೋಣೆಗೆ ಬಂದೆ. ಚಿಮಣಿ ಇನ್ನೂ ಉರಿಯುತ್ತಿತ್ತು. ಒಂದೇ ಫಡಕು ತೆರೆದಿತ್ತು. ಅದನ್ನು ತಿರುವು ಮುರುವು ಮಾಡಿ, ಚಿಲಕ ಒಳಗೆ ಮಾಡಿ ಮುಚ್ಚಿಕೊಂಡೆ. ಬರುವಾಗ ತಂದಿದ್ದ ಕಾದಂಬರಿಯೊಂದನ್ನು ಓದಬೇಕೆಂದೆ. ಆಗಲಿಲ್ಲ. ಎಲೆ ಅಡಿಕೆ ತಿನ್ನುತ್ತ ದಣಿದ ಮೈಗೆ ಚಿಮಣಿ ಬೆಳಕು ನಿಶೆ ಏರಿಸಿದಂತಾಯಿತು. ಶಹರದ ವಿದ್ಯುತ್ ದೀಪಗಳಿಗಿಂತ ಈ ಚಿಮಣಿ ಬೆಳಕು ಮಾದಕ. ಇದರ ಮಧು ಬೆಳಕು ಬೇಕಾದಷ್ಟನ್ನೇ ತೋರಿಸಿ, ಕುತೂಹಲವನ್ನು ಉಳಿಸಿಟ್ಟು ಬದುಕಿನ ಸೌಂದರ್ಯಕ್ಕೆ ಮನವೊಲಿಸುತ್ತದೆ; ವಿದ್ಯುತ್ ದೀಪ ಬೇಡವಾದದ್ದನ್ನೂ ತೋರಿಸುತ್ತದೆ. ಮನಸ್ಸು ಅದರಲ್ಲಿ ತಲ್ಲೀನವಾಗುವುದಿಲ್ಲ. ಮುಕ್ತವಾಗಿ ಯೋಚಿಸಲೂ ಶಕ್ಯವಾಗುವುದಿಲ್ಲ.
ಆಕಳಿಸುತ್ತಿದ್ದಂತೆಯೇ ತೇಲುಗಣ್ಣುಗಳು ಜೋಲಿ ಹೊಡೆಯುತ್ತ ಮುಚ್ಚಿಕೊಳ್ಳತೊಡಗಿದವು. ಇಂಥ ಛೆಂದದ ನಿದ್ರೆ ಎಷ್ಟೋ ದಿನಗಳ ನಂತರ ಬಂದಿತ್ತು. ಮನಸ್ಸು ತುಂಬಿತು, ಮಲಗಿದೆ.
ಬೆಳಗ್ಗೆ ಎಚ್ಚರಾದಾಗ ಅಂಗಳ ಕಸ ಹೊಡೆದು ಅಕ್ಕ ನೀರು ಛಳಿ ಹೊಡೆಯುತ್ತಿದ್ದಳು. ಬಾಗಿಲು ಪೂಜೆ ಮಾಡಿ, ಊದಿನಕಡ್ಡಿ ಬೆಳಗಿ, ಅಂಗಡಿಯಲ್ಲಿ ಬಂದು ಕೂತಳು. ನನ್ನ ಕೋಣೆಯ ಫಡಕುಗಳ ಸಂದಿಯಿಂದ ನೋಡುತ್ತ ಕಣ್ಣು ಬಿಟ್ಟುಕೊಂಡು ಸುಮ್ಮನೇ ಮಲಗಿದ್ದೆ. ನಂತರ ಎದ್ದು ಮುಖದ ಮೇಲೆ ನೀರಾಡಿಸಿಕೊಂಡು, ಹಳ್ಳದ ಕಡೆ ಹೋಗಿ ಬರುವೆನೆಂದು ಅಕ್ಕನಿಗೆ ಹೇಳಿ ಹೊರಟೆ. ಮಾವ ಇನ್ನೂ ಒಳಗೆ ಮಲಗಿದ್ದ.
ಯಾವಾಗಲೂ ನೀರು ತುಂಬಿ ಹರಿಯುವ ನಮ್ಮೂರಿನ ಹಳ್ಳದ ದಂಡೆಗೆ ಹೋಗಿ, ಬಹಿರ್ವಿಧಿಗಳನ್ನು ಮುಗಿಸಿಕೊಂಡು ಬರುವ ಆನಂದವೇ ವಿಶಿಷ್ಟ. ಸುಮ್ಮನೇ ಚರಿಗೆ ಹಿಡಿದುಕೊಂಡು ಊರ ಮುಂದಿನ ಹೊಲಕ್ಕೆ ಹೋಗುತ್ತಾರೆ ಈ ಮಂದಿ. ಸ್ವಲ್ಪ ದೂರ ಹೋಗಿ ಸ್ವಾಭಾವಿಕ ಆನಂದಪಡುವುದೇ ಇವರಿಗೆ ಗೊತ್ತಿಲ್ಲ. ಲಂಡಕ್ಯಾನ ಹಳ್ಳದ ಕಡೆಗೆ ಹೊರಟೆ. ದುರ್ಗೀ ಗುಡಿಗೆ ಹೊಂದಿ ಎರಡನೇ ಮನೆಯೇ ಬಸ್ಯಾನದು. ಮುದುಕ ಇಷ್ಟೊತ್ತಿನಲ್ಲಿ ಏನು ಮಾಡುತ್ತಿರಬೇಕು? ಈಗ ಆ ಕಡೆಗೆ ಹೋಗುವುದೇ ಬೇಡ, ಎನ್ನುತ್ತಲೇ ಸಹಜವಾಗಿ ಆ ಕಡೆ ತಿರುಗಿದೆ. ಬಾಗಿಲಲ್ಲಿ ಒಬ್ಬ ಹುಡುಗಿ ಅಂಗಳ ಸಾರಿಸುತ್ತಿದ್ದಳು. ಯಾರೀಕೆ? ಬಸ್ಯಾನ ಮನೆಯಲ್ಲಿ ಇದ್ದವರೇ ಮೂರು ಜನ. ಅವನ ಹೆಂಡತಿ ಸತ್ತ ನಂತರ ಈಗ ಬಸ್ಯಾ ಮತ್ತು ಅವನ ಮಗಳು. ಬಹುಶಃ ಮಗಳೇ ಇರಬೇಕು. ನಾನು ದೂರದಿಂದಲೇ ಹೊರಟೆ. ಊರ ಜನರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಲಂಡಕ್ಯಾನ ಸರುವು ಸ್ವಲ್ಪ ದೂರವೆನಿಸಿದರೂ ಪ್ರಶಾಂತ ಸುಂದರ ಸ್ಥಳ. ಹಳ್ಳದ ಮೇಲಿನ ಸಿಂದೀ ಗಿಡಗಳ ನಡುವೆ ಹಕ್ಕಿಗಳ ಸಂಗಡ ಏಕಾಕಿಯಾಗಿ ನಾನು ಏನು ಬೇಕಾದರೂ ಮಾಡಬಹುದು. ಸ್ವಲ್ಪ ಹೊತ್ತಾಯಿತೆಂದರೆ ದನ ಕಾಯುವ ಹುಡುಗರು ಇತ್ತ ಕಡೆ ಬರುತ್ತಾರೆ.
ಅಲ್ಲಿಂದ ತಿರುಗಿ ಬರುವಾಗ, ಭೆಟ್ಟಿಯಾದವರೆಲ್ಲ ಮಾತಾಡಿಸಿದರು. ಮಾವನ ಭಕ್ತರು ಇವರೆಲ್ಲ. ಮಾವ ಈ ಊರಿನ ಕುಲದೇವತೆಗಳಲ್ಲಿ ಒಬ್ಬ. ಊರ ಜನರೆಲ್ಲ ಒಂದು ರೀತಿಯಿಂದ ಅವನಿಗೆ ಋಣಿ. ಮದುವೆ-ಮುಂಜಿವೆ, ಸಾವು-ಹುಟ್ಟು, ದಾನ-ದಕ್ಷಿಣೆ, ಜಾತ್ರೆ, ಕುಸ್ತೀ ಕಣ, ಚುನಾವಣೆ, ಅಧಿಕಾರಿಗಳಿಗೆ ಕೋಳೀ ಪಾರ್ಟಿ ಎಲ್ಲವೂ ಮಾವ-ದತ್ತವೇ. ಈ ಮಂದಿಯ ಒಂದೊಂದು ಉಸುರಿನ ಮೇಲೂ ಮಾವನ ಋಣದ ಅನೇಕ ಆರ‍್ಸಿಸಿ ಭವನಗಳು ನಿರ್ಮಾಣಗೊಂಡಿವೆ.
ಬರುವಾಗ ನೋಡಿದೆ, ಬಸ್ಯಾ ಬಾಗಿಲಲ್ಲಿ ಎಕ್ಕೆ ಎಲೆ ಸೇದುತ್ತಿದ್ದ. ಅವನನ್ನು ಮಾತಾಡಿಸದೇ ಹಾಗೇ ಹೋಗುವುದಾಗಲಿಲ್ಲ. ಗೊಂಗಡಿ ಹಾಸಿದ. ಕುಳಿತುಕೊಂಡೆ. ಬಸ್ಯಾ ಗೂರುತ್ತ ತನ್ನ ದುಃಖದಲ್ಲಿ ಮಾವ ಸಹಾಯ ಮಾಡಿದ್ದನ್ನು ಹೇಳಿದ. ಹೆಂಡತಿ ಸತ್ತಾಗ, ತನ್ನ ಹೊಲ ಒತ್ತೆ ಇಡುವ ಪ್ರಸಂಗ ಬಂದಾಗ ಅವರಿವರಿಗೆ ಕೊಡುವುದೇನು ಎಂದು ಮಾವನೇ ಇಟ್ಟುಕೊಂಡು ರೊಕ್ಕ ಕೊಟ್ಟಿದ್ದು, ಹೋದ ವರ್ಷದ ಕಾಮನ ಹಬ್ಬದ ಮರುದಿನ ಕಿಡಿ ಸಿಡಿದು, ಬಸ್ಯಾನ ಗುಡಿಸಲಿಗೆ ಬೆಂಕಿ ಬಿದ್ದು, ಅವನ ಮರ್ಯಾದೆ ಬಟಾಬಯಲಾದಾಗ ಮಾವನೇ ಆ ಮರ್ಯಾದೆಯನ್ನು ಉಳಿಸಿ ಕಾಪಾಡಿದ್ದು, ಹೊಸದಾಗಿ ಗಟ್ಟಿ ಮನೆ ಮಾಡಿದ್ದು- ಒಂದೊಂದನ್ನೂ ಹೇಳುವಾಗ ಬಸ್ಯಾನ ಗುಳಿಬಿದ್ದ ಕಣ್ಣುಗಳಿಂದ ಕೃತಜ್ಞತೆಯ ಮಿಂಚು ಸೂಸುತ್ತಿತ್ತು.
ನೇರವಾಗಿ ಬಸ್ ಬರಲು ದಾರಿ ಇರದ್ದರಿಂದಲೇ ಶಿಕ್ಷಣ, ಪ್ರಗತಿಗಳ ಸಂಪರ್ಕ ಇರದೆ ಈ ಜನ ಕಗ್ಗರಾಗಿದ್ದಾರೆ, ಹುಂಬರಾಗಿದ್ದಾರೆ. ಊರಿನ ತುಂಬ ಬಡಿದಾಡುವ, ಕಡಿದಾಡುವ ಜನರೇ ತುಂಬಿದ್ದಾರೆ. ಏನು ಧಾಡಿ ಇವರಿಗೆ, ದಾರಿ ಯಾಕೆ ಮಾಡಿಸಿಕೊಳ್ಳಬಾರದು ಎಂದು ಶಪಿಸುತ್ತ ಹೊರಟಿದ್ದೆ. “ಶರಣರೀಽ ಎಪ್ಪಾ, ಈಗ ಬಂದ್ರ್ಯಾ…?” ಎಂದ ಧ್ವನಿ ನನ್ನನ್ನು ತಡೆಯಿತು. ನೋಡಿದೆ.
ಒಮ್ಮೆ ಬಾಗಿಲ ಸಂದಿಯಿಂದ ಇಣಿಕಿದ ಹುಡುಗಿ ಅವನ ಮಗಳೇ ಇರಬೇಕು. ಬಸ್ಯಾನೇ ಕರೆದು, “ಸಾಂವಕ್ಕಾ, ನೋಡು ನಿನ್ನ ಶಾರಽದ ಸಾಹೇಬರು ಬಂದಾರು,” ಅಂದ. “ಅವರಿಗೇನು ಕೊಡೋದು? ನಮ್ಮಂಥವರ ಮನ್ಯಾಗ ಅವರು ಚಾ ಸೈತ ಕುಡ್ಯಾಕಿಲ್ಲ,” ಎನ್ನುತ್ತ ಬಾಗಿಲ ನಡುವೆ ನಿಂತ ಸಾಂವಕ್ಕನನ್ನು ಕಣ್ಣುಕಣ್ಣು ಬಿಟ್ಟು ನೋಡಿದೆ. ಎಲಾ ಇವಳ! ಐದಾರು ವರ್ಷದ ಹಿಂದೆ ನಾನು ನೋಡಿದ್ದ ಆ ಬಡಕಾಟಿ ಹುಡುಗಿ ಇವಳೇ ಏನು? ಗಲ್ಲದ ಗುಳಿಗಳನ್ನು ನೋಡಲಾಗದೇ ನಾನೇ ನಾಚಿ ಮುಖ ಕೆಳಗೆ ಮಾಡಿದೆ. “ಸಾವಕರ‍್ರು ಹೆಂಗದೀರಿ…? ನಮ್ಮಂಥವರ ನೆನಪು ಹೆಂಗಾಕ್ಕತಿ ನಿಮಗ? ಮುಂಜೇನೆ ನೋಡೀನೂ ಹಂಗಽ ಹೋದ್ರಿ?” ಎಂದಳು. ನಾನು ಏನು ಹೇಳಬೇಕೋ ತಿಳಿಯಲಿಲ್ಲ. “ಇಲ್ಲ. ಸ್ವಲ್ಪ ಹೊರಕಡಿಗೆ ಹೊರಟಿದ್ದೆ. ಬರೂವಾಗ ಬಂದ್ರಾತ ಅಂತ ಬರಲಿಲ್ಲ.” ಎಂದೆ. “ನಿನ್ನೆ ಚೆಂಜೀಮುಂದ ತಡಾ ಆಗಿ ಬಂದ್ರೆಂತ?” ಅಂದಳು. “ಹೌದು, ನಿನ್ನೆ ಚೆಂಜೀಮುಂದ ಬಂದ್ರು,” ಬಸ್ಯಾ ಅಂದ. “ಇನ್ನಽ ಎಷ್ಟ ದಿನಾ ಇರ್ತೀರಿ?” ಎಂದಳು. “ನಾಳೆ ಮುಂಜೇನಿ ಹೊಕ್ಕೇನಿ,” ಎಂದೆ. “ಮಧ್ಯಾಣದಾಗ ಊಟಾ ಗೀಟಾ ಮಾಡಿ ಇಕಾಡೆ ಬರ್ರೆಲಾ,” ಎಂದು ತನ್ನ ದಪ್ಪ ತುಟಿಗಳನ್ನು ಮುಂದೆ ಮಾಡಿ ಹೇಳಿದ್ದನ್ನು ನೋಡಿ, ‘ಎಲಾ ಇವಳ, ಏನ ಧೈರ್ಯಾ ಇವಳಿಗೆ! ಇದು ಹಾಡುಹಗಲೇ ಆಮಂತ್ರಣ,’ ಅಂದುಕೊಂಡೆ. ಬಸ್ಯಾ ತಲೆಯೆತ್ತದೇ ಸುಮ್ಮನೇ ಬೇರೆ ಎಕ್ಕೆ ಎಲೆ ಸುತ್ತುತ್ತಿದ್ದ. ಅನಾಯಾಸವಾಗಿ “ಹ್ಞೂ, ಬರ್ತೇನಿ,” ಎಂದವನೇ ಹೊರಟುಬಿಟ್ಟೆ. ಅವಳ ದಪ್ಪ ದೊಡ್ಡ ತುಟಿಗಳ ನಡುವೆ ಕಂಡ ಎರಡು ದೊಡ್ಡ ಹಲ್ಲುಗಳು ನನ್ನನ್ನು ಹರಿದು ತಿನ್ನುವಂತೆ ನಕ್ಕಿದ್ದವು.
ಸಾಂವಕ್ಕ ನನಗಿಂತ ಏಳೆಂಟು ವರ್ಷ ಸಣ್ಣವಳೇ ಇರಬೇಕು. ಮಾವನ ಅಂಗಡಿಗೆ ಬಂದು ಕಾಳು ಹಾಕಿ, ಕಿರಾಣಿ ಒಯ್ಯುವಾಗ ಎಷ್ಟೋ ಸಲ ಇವಳನ್ನು ನೋಡಿದ್ದೆ. ಎರಡೂ ಕೈಯಿಂದ ಸೋರುವ ಸುಂಬಳ ಒರೆಸಿಕೊಳ್ಳುತ್ತ, ಲಂಗಕ್ಕೆ ತಿಕ್ಕುತ್ತ ತಮ್ಮ ಅಪ್ಪನಿಗೆ ಚುಟ್ಟಾನೋ, ಎಲೆ ಅಡಿಕೀನೋ, ಮನೆಗೆ ಒಳ್ಳೆಣ್ಣೆ ಉಳ್ಳಾಗಡ್ಡೀನೋ ಒಯ್ಯುವಾಗ ಈ ದರಿದ್ರ ಸೊಳಕೀ ಹುಡುಗಿಯನ್ನು ನೋಡುವುದೇ ಅಸಹ್ಯ. ಆದರೆ ಈಗ ಈ ರತಿಯನ್ನು ನೋಡದವನೇ ದರಿದ್ರ ಅನ್ನಿಸಿತು.
ಅಕ್ಕ ಅವಲಕ್ಕಿ ಮತ್ತು ಬಿಸಿ ಬಿಸಿ ತಾಲೀಪಟ್ಟಿಗಳನ್ನು ಮಾಡಿಕೊಟ್ಟಳು. ತಿಂದು ಚಹ ಕುಡಿದೆ. ಮಾವ ಇನ್ನೂ ಎದ್ದಿರಲಿಲ್ಲ. ಮುಂಜಾನೆಯ ಗಿರಾಕಿಗಳು ಸುರುವಾಗಿದ್ದವು. ಮುದುಕಮ್ಮ ಅಂಗಡಿಯಲ್ಲಿದ್ದಳು. ನನ್ನ ಕೋಣೆಗೆ ಬಂದು ಓದಬೇಕೆಂದೆ. ಆಗಲಿಲ್ಲ. ಮುಂಜಾವಿನ ಸೂರ‍್ಯ ಮೈ ಹೊಕ್ಕಂತೆ ಆಗಿತ್ತು. ಮತ್ತೆ ಸಾಂವಕ್ಕನ ನೆನಪು.
ಕೂಡಲಾಗಲಿಲ್ಲ. ಹೊರಗೆ ಹೋಗಬೇಕೆಂದೆ. ಮಾವನ ಮಕ್ಕಳೆಲ್ಲ ಬಂದವು. ಅವರನ್ನು ಕರೆದುಕೊಂಡು ಊರ ತುಂಬ ಸುತ್ತಾಡಿದೆ. ಪೋಸ್ಟಾಫೀಸಿನ ಶೀನಂಭಟ್ಟರು, ಗೌಡರ ಬಸ್ಯಾ, ಅಗಸೀಮನಿ ನರಗ, ಗೂಳಪ್ಪಾರ ಚೆನ್ನ್ಯಾ, ಕೋಯಪ್ಪನವರ ಮಲ್ಲವ್ವ, ಬೇವಿನಗಿಡದ ಸಂಗಣ್ಣ, ಗಡಾದ ಮಾದ್ಯಾ, ಬಸವನಗುಡಿ ದುಂಡಮ್ಮ ಒಬ್ಬೊಬ್ಬರೂ ಎಷ್ಟೊಂದು ಪ್ರೀತಿಯಿಂದ ಮಾತಾಡಿಸಿದರು. ನಾನು ಅವರೆಲ್ಲರ ಅಭಿಮಾನಧನ. ‘ಎಷ್ಟ ದಿನಕ್ಕ ಬಂದೆಲ್ಲ,’ ‘ನಿನ್ನ ಪಗಾರ ಎಷ್ಟು?’ ‘ತಿಂಗಳಾ ಆಽರ ನೂಽರ?’ ‘ನಿನ್ನ ನಸೀಬಾನಽ ದೊಡ್ಡದು!’ – ಎಲ್ಲರ ಆ ಬಾಯಲ್ಲಿ ಪ್ರಶಂಸೆಯ ಶಬ್ದಗಳು. ರವಿವಾರವಿದ್ದುದರಿಂದ ಕುಲಕರ್ಣಿ ಮಾಸ್ತರರೂ ಸಿಕ್ಕರು. ಮತ್ತೆ ಮನೆಯ ಕಡೆಗೆ ಬಂದೆವು. ತಾನೇ ಕಲಿಸಿ ನನ್ನನ್ನು ದೊಡ್ಡವನನ್ನಾಗಿ ಮಾಡಿದೆ ಎಂಬ ದೃಢವಾದ ನಂಬಿಕೆ ಈ ಮಾಸ್ತರರಿಗೆ ಈಗಲೂ ಇದೆ.
ಮಾವ ಅಂಗಡಿಯಲ್ಲಿ ಕೂತಿದ್ದ. ಅಲ್ಲೇ ಕೂತೆವು. ಹುಡುಗರು ಆಡಲು ಹೋದರು. ಮತ್ತೊಮ್ಮೆ ಎಲ್ಲರಿಗೂ ಚಹ ಬಂತು. ಸ್ವಲ್ಪ ಹೊತ್ತಿನ ನಂತರ ಮಾಸ್ತರರರು ಹೋದರು. ಅಂಗಡಿಯಲ್ಲಿ ಗಿರಾಕಿಗಳ ಕೂಡ ನಗುನಗುತ್ತ, ಚೇಷ್ಟೆ ಮಾಡುತ್ತ ಎಲ್ಲರನ್ನೂ ಮಾವ ಪ್ರೀತಿಯಿಂದ ಕಾಣುತ್ತಾನೆ. ಈ ಮಾವನಿಂದ ಬಹಳಷ್ಟು ಕಲಿಯುವುದಿದೆ. ವ್ಯಕ್ತಿತ್ವ ಹೀಗೇ ಬೆಳೆಯಬೇಕು ಅಂದುಕೊಂಡೆ.
ಸುಮಾರು ಹನ್ನೊಂದು ಹನ್ನೊಂದೂವರೆ ಗಂಟೆಯಾಗಿತ್ತು. ಹಸಿವೆಯಾಗಿರಲಿಲ್ಲ. ಕೋಣೆಗೆ ಬಂದು ಓದುತ್ತ ಕೂಡಬೇಕೆಂದೆ. ಬೇಡ, ಹಳ್ಳದ ಕಡೆಗೆ ಹೋಗಿ ಬಸ್ಯಾನ ಹೊಲದಲ್ಲಿ ಮಾವಿನ ಮರಗಳ ನೆರಳಲ್ಲಿ ಕೂತು ಆರಾಮವಾಗಿ ಓದಬಹುದು… ಎದ್ದು ಹೊರಟೆ.
ಬಸ್ಯಾ ಹೊಲದಲ್ಲಿದ್ದ. “ಬರ‍್ರಿ ಧಣ್ಯಾರಽ,” ಅಂತ ಪ್ರೀತಿಯಿಂದ ನಕ್ಕ. ಅವನ ಕೂಡ ಹೊಲದಲ್ಲೆಲ್ಲ ಸುತ್ತಾಡಿ ಮಾವಿನ ಮರದಡಿಗೆ ಬಂದು ಕುಳಿತೆ. ಸುಮ್ಮನೇ ಮಲಗಬೇಕನ್ನಿಸಿತು. ಓದುವುದು ಇಡೀ ಜೀವನ ಇದೆ. ಇಂಥ ಸ್ಥಳ, ಸುಖನಿದ್ರೆ ಎಲ್ಲಿಯಾದರೂ ಸಿಕ್ಕೀತೆ? ಹಾಗೇ ಸ್ವಲ್ಪ ಹೊತ್ತು ಒರಗಿದೆ. ಮಂಪರು. ನೊರಜುಗಳ ಕಾಟ ವಿಪರೀತವಾಯಿತು. ಎದ್ದೆ. ಎದುರಿಗೆ ಬಸ್ಯಾನಿಗೆ ರೊಟ್ಟಿ ಹಚ್ಚಿ ಕೊಡುತ್ತ ಸಾಂವಕ್ಕ ಕುಳಿತಿದ್ದಳು. ಅವಳ ಬೆನ್ನು ನನ್ನ ಕಡೆಗಿತ್ತು. ಯಾವ ಶಿಲ್ಪಿ ಕಡೆದಿರಬೇಕು ಇವಳನ್ನು… ಎಲ್ಲ ತುಂಬಿ ಬಂದಿದೆ, ಕೂಡಿ ಬಂದಿದೆ ಅನ್ನಿಸಿತು. ಖುಶಿಯಾಯಿತು. ಸಾಂವಕ್ಕ ಒಮ್ಮೆ ಹೊರಳಿದಳು, ನಾನು ಕುಳಿತದ್ದು ನೋಡಿ ನಗುತ್ತ, “ಧಣ್ಯಾರಽ, ನನ್ನ ರೊಟ್ಟೀ ತಿಂತೀರೇನುಽ?” ಅಂದಳು. ನನ್ನ ಬಾಯಿಯನ್ನು ಅವಳು ಮುಚ್ಚಿಬಿಟ್ಟ ಹಾಗಾಗಿದೆ… ದಿನಾಲು ವಿದ್ಯಾರ್ಥಿಗಳೆದುರು ಇಷ್ಟು ಮಾತಾಡುವ, ಮಾತಾಡುವುದೇ ಧಂಧೆಯಾದ ನಾನು ಇಲ್ಲೇಕೆ ಮೌನವಾಗಿರುವೆ? ಇವಳ ಬಾಯಿ, ಇವಳ ಮಾತು, ಇವಳ ನಗೆ ನನ್ನದು, ನನ್ನದಾಗಬೇಕು ಅನ್ನಿಸಿತು. “ಬ್ಯಾಡ ಸಾಂವಕ್ಕ, ಮನ್ಯಾಗ ಮಾವ ದಾರೀ ನೋಡತಿರತಾನ.” ಅಂದೆ. “ಉಂಡ ಮ್ಯಾಲ ಮನೀ ಕಡೆ ಬರ‍್ರೆಲ್ಲಾ…” ನಾನು ಆ ಮಾತಿಗೆ ಉತ್ತರ ಕೊಡಲಿಲ್ಲ. ಇದು ಸುಮ್ಮನೇ ಹೇಳಿದ ಮಾತಲ್ಲ. ಬೆಳಗ್ಗೆಯೂ ಹೇಳಿದ್ದಳು. ಈಗ ಮತ್ತೆ ನೆನಪಿಸಿ ಬಾ ಎಂದಿದ್ದಾಳೆ. ಬಸ್ಯಾ ತನ್ನದೇನೂ ಸಂಬಂಧವಿಲ್ಲ ಎನ್ನುವಂತೆ ಸುಮ್ಮನಿದ್ದಾನೆ.
ಸಾಂವಕ್ಕ ನಗುತ್ತಲೇ ಇದ್ದಳು. ಯಾವಾಗಲೂ ನಗೆ. ಆ ನಗೆಯ ತೆರೆತೆರೆಯ ಮೇಲೆ ತೇಲುತ್ತ ಮನೆಗೆ ಬಂದೆ. ಮಾವನ ಕೂಡ ಊಟ ಮಾಡಿದೆ. ಸ್ವಲ್ಪ ಹೊತ್ತು ಮಲಗೋಣ ಅಂದುಕೊಂಡೆ. ಆಗಲಿಲ್ಲ. ಕಣ್ಣೆದುರು ಪುಸ್ತಕ ಹರವಿದೆ. ಸಾಂವಕ್ಕ ಬಾ ಎಂದಿದ್ದಾಳೆ. ಹೋಗಬೇಕೆ? ಈ ಮಧ್ಯಾಹ್ನದಲ್ಲಿ ಅವಳ ಮನೆಗೆ ಹೋದರೆ ನೋಡಿದವರಾದರೂ ಏನು ಅಂದಾರು? ರಾತ್ರಿ ಅಥವಾ ಮಬ್ಬುಗತ್ತಲಾದ ಕೂಡಲೇ ಹೋಗಿ ಬರುವುದೇ ಸರಿ. ಆದರೆ… ಅವಳ ಮನೆಗೆ ಹೋಗಲೇಬೇಕೆ? ಸುಮ್ಮನೇ ಹೋಗಿ ಬರುವುದರಲ್ಲಿ ಏನು ತಪ್ಪಿದೆ? ಪಾಪ, ಬಾ ಎಂದಿದ್ದಾಳೆ. ಐದು-ಹತ್ತು ನಿಮಿಷ ಅವಳ ಕೂಡ ಮಾತಾಡಿದರೂ ಅವಳಿಗೆ ಆನಂದವಾಗುತ್ತಿದ್ದರೆ ಆ ಸಂತೋಷವನ್ನು ನಾನು ಅವಳಿಗೆ ನೀಡಬಾರದೇಕೆ? ಸಮೀಪ ಕೂತರೂ, ಮಾತಾಡಿದರೂ ಸಾಕು, ಎದೆ ಮಿಡಿಯುತ್ತದೆ ಸಾಂವಕ್ಕನಂಥ ಹೆಣ್ಣಿದ್ದರೆ…
ನಿದ್ದೆ ಹತ್ತಿದ್ದೇ ನೆನಪಿಲ್ಲ. ಎದ್ದಾಗ ಸಂಜೆ ಐದು ಗಂಟೆಯಾಗಿತ್ತು. ಪುಸ್ತಕ ಬೋರಲಾಗಿ ಬಿದ್ದಿತ್ತು. ಗುರುಪುತ್ರ ಬಂದು, “ಚಾಕ್ಕ ಅವ್ವಾ ಕರೀತಾಳ,” ಅಂದ. ಎದ್ದು ಹೋಗಿ ಮುಖ ತೊಳೆದುಕೊಂಡು, ಮೇಲೆ ವಗ್ಗರಣಿ ಹಾಕಿಸಿಕೊಂಡು ಚುರಮರಿ ತಿಂದು, ಗಂಗಾಳ ತುಂಬ ಚಹ ಕುಡಿದೆ. ತೃಪ್ತಿಯೆನ್ನಿಸಿತು. ಎದ್ದು ಬಂದು ಅಂಗಡಿಯಲ್ಲಿ ಕುಳಿತೆ. ಮತ್ತೆ ಊರಿನ ಮಂದಿ. ಮಾತಾಡಿಸುವವರು. ಬೆರಗಾಗಿ ನನ್ನನ್ನೇ ನೋಡುವ ಗಿರಾಕಿಗಳು. ಬಾವಿಮನಿ ಹುಸನಮ್ಮ ಹಣ್ಣು ಹಣ್ಣು ಮುದುಕಿ. ಹತ್ತಿರ ಕೂತು, ನನ್ನನ್ನು ಮುಟ್ಟಿ, ಲಟಿಕೆ ಮುರಿದು, ದೃಷ್ಟಿ ಹತ್ತದಿರಲಿ ಎಂದಳು. ಮಾವ, “ನೋಡಬೇ ಎಮ್ಮಾ, ನಿನ್ನ ಮೊಮ್ಮಗಾ ದೊಡ್ಡ ಸಾಯ್ಬ ಆಗ್ಯಾನ ಈಗ.” ಎಂದು ಮೀಸೆಯ ಮೇಲೆ ಕೈ ಹಾಕಿದ. ಮುದುಕಿ ಒಳಗೆ ಹೋಗಿ, ಅಕ್ಕನ್ನ ಮಾತಾಡಿಸಿ, “ಒಂದ್ಯಾಡ್ಡ ದಿನ ಇದ್ದ ಹೋಗಪಾ,” ಎಂದು ನನಗೆ ಹೇಳಿ ಹೋದಳು.
ಮಬ್ಬು ಕಾವಳ. ಅಕ್ಕ ಲಾಟನ್ನು ಹಚ್ಚಿ ತಂದಿಟ್ಟಳು. ನನ್ನ ಕೋಣೆಯಲ್ಲಿಯ ಚಿಮಣಿಯಲ್ಲಿ ಎಣ್ಣೆ ತೀರಿತ್ತು. ಅದರಲ್ಲಿ ಎಣ್ಣೆ ಹಾಕಿದಳು. ಕಾಜು ಒರೆಸಿ, ಒಂದು ಗುಬ್ಬೀ ಲಾಟನ್ನನ್ನೂ ಹಚ್ಚಿ ಇಟ್ಟಳು. ಈ ದೀಪ ನನಗೆ ಬಹಳ ಹಿತವೆನ್ನಿಸಿತು. ಅರೆ ಎಚ್ಚರದ ಆನಂದ ನೀಡುವ ಈ ಬೆಳಕು ನಿರಂತರ ಬೇಕು. ಕಾಡಿಗೆಯನ್ನು ಕಾರುವ ಚಿಮಣಿ ಆರಿಸಿಬಿಟ್ಟೆ. ಮೇಲೆ ಜೋತಾಡುವ ಗುಬ್ಬೀ ಲಾಟನ್ನಿನ ಹೊಯ್ದಾಟದ ನೆರಳು ಗೋಡೆಯ ಮೇಲೆ. ಧುತ್ತೆಂದು ಸಾಂವಕ್ಕ ಕಣ್ಣ ಮುಂದೇ ನಿಂತಂತಾಯಿತು. ನೋಡಿದೆ. ಕಿರಾಣಿ ಅಂಗಡಿಯ ಫಡಕುಗಳಿಗೆ ಅಂಟಿಕೊಂಡೇ ನಿಂತಿದ್ದಳು ಸಾಂವಕ್ಕ. ಬಹುಶಃ ಏನಾದರೂ ಸಾಮಾನು ಒಯ್ಯಲು ಬಂದಿರಬಹುದು. ಮಾವ ಮಾಪಿನಿಂದ ಎತ್ತರಿಸಿ ಎಣ್ಣೆ ಹಾಕುತ್ತಿದ್ದ. ಬೆಲ್ಲ ತೂಗಿ ಅವಳ ಉಡಿಯಲ್ಲಿ ಸುರುವಿದ. ಎದೆಯನ್ನು ಸೆರಗಿನಿಂದ ಬಿಗಿಯಾಗಿ ಮುಚ್ಚಿಕೊಂಡು, ಎಳೆನಗು ನಗುತ್ತ ನಿಂತಿದ್ದ ಅವಳನ್ನು ಮಾತಾಡಿಸಿ ಮಾವ, “ನನ್ನ ಅಳ್ಯಾನ್ನ ನೋಡೀಯೇನ ಸಾಂವೀ?” ಎಂದ. ನಾನು ಎದ್ದವನೇ ಹೊರಗೆ ಬಂದೆ. ನನ್ನನ್ನು ನೋಡಿ ಇನ್ನಷ್ಟು ನಾಚಿಗೆಮುಳ್ಳಾದಳು. ಮಾವನ ಮಾತಿಗೆ ಉತ್ತರವಾಗಿ, ನನ್ನ ಕಡೆ ಒಮ್ಮೆ ನೋಡಿ, ಸುಮ್ಮನೆ ನಕ್ಕಳು. ನನಗೆ ಕೆಟ್ಟೆನಿಸಿತು. ಪಾಪ, ಮಧ್ಯಾಹ್ನ ಬಾ ಎಂದಿದ್ದಳು. ದಾರಿ ನೋಡಿರಬೇಕು. ನಾನು ಬರದ್ದಕ್ಕೆ ಸೊರಗಿದ ಹಾಗೆ ಕಾಣುತ್ತಿದ್ದಾಳೆ. ನನಗೆ ತೃಪ್ತಿಯಾಗಲಿ ಬಿಡಲಿ, ಇನ್ನೊಬ್ಬರಿಗೆ ತೃಪ್ತಿಯಾಗುವಂತೆ ನಡೆದುಕೊಂಡರೂ ಸಾರ್ಥಕತೆಯ ಅನುಭವವಾಗುವುದಿಲ್ಲವೆ? ನಾನು ತಪ್ಪು ಮಾಡಿದೆ. ಒಂದು ಹತ್ತು ನಿಮಿಷದ ಮಟ್ಟಿಗಾದರೂ ಇಳಿಹೊತ್ತಿನಕಿಂತ ಮುಂಚೆ ಹೋಗಿ ಬರಬೇಕಿತ್ತು. ನನ್ನನ್ನೇ ಶಪಿಸಿಕೊಂಡೆ. ಸಾಂವಕ್ಕ ಏನೂ ಮಾತಾಡದೇ ನನಗೆ ಬಹಳಷ್ಟು ಹೇಳಿದ್ದಳು.
ಅವಳು ಹೊರಟು ಹೋದ ಮೇಲೆ ಕೋಣೆಯೊಳಕ್ಕೆ ಬಂದೆ. ಕೂಡುವುದಾಗಲಿಲ್ಲ. ಅಗಸಿಯ ಕಡೆಗೆ ಅಡ್ಡಾಡುತ್ತ ಹೋದೆ. ನರಗಜ್ಜ, ಜಿಡ್ಡೀಮನಿ ನಿಂಗಪ್ಪ, ಆರ‍್ಯಾರ ಬಸಪ್ಪ ದತ್ತಾತ್ರೇಯ ಗುಡಿ ಮುಂದೆ ಚಿಲಮಿ ಹಚ್ಚಿಕೊಂಡು ಪಾಳೆಯ ಪ್ರಕಾರ ಜುರಿ ಎಳೆಯುತ್ತ ಕುಳಿತಿದ್ದರು. ಅವರ ಕೂಡ ಸ್ವಲ್ಪ ಹರಟೆ ಹೊಡೆದು, ನಡ ಬಿಗಿದಂತಾಗಿ, ಸಾಲೆಯ ಹಿಂದಿನ ಕಳ್ಳಿಯ ಸಾಲಿನಲ್ಲಿ ಉಚ್ಚೆ ಹೊಯ್ದೆ. ಸಾಂವಕ್ಕನ ಬಾಗಿಲಲ್ಲಿ ಜೋತುಬಿದ್ದ ಗುಬ್ಬೀ ಲಾಟನ್ನು ಕಾಣಿಸಿತು. ಹೋಗಿಬಿಡಲೇ ಅನ್ನಿಸಿತು. ಬೇಡ, ಇವರೆಲ್ಲ ಏನು ಅಂದುಕೊಂಡಾರು? ಮನೆಗೆ ತಿರುಗಿ ಬಂದೆ.
“ನೀ ಊಟಾ ಮಾಡಿಬಿಡು. ನನಗ ತಡಾ ಆಕ್ಕತಿ,” ಅಂದ ಮಾವ. ಊಟ ಮುಗಿಸಿ ಎಲೆ-ಅಡಿಕೆ ಹಾಕುತ್ತ ನನ್ನ ಕೋಣೆಗೆ ಬಂದೆ. ಸಂಜೆಯ ಗಿರಾಕಿಗಳ ಗದ್ದಲ ಮುಗಿದು ಈಗ ಆಗೊಂದು ಈಗೊಂದು ಕಳ್ಳಗಿರಾಕಿ ಬರುತ್ತಿದ್ದವು. ಊರೆಲ್ಲ ನಿಸ್ತಬ್ಧವಾಗತೊಡಗಿತ್ತು. ರಾತ್ರಿಯ 9-9|| ಅಂದರೆ ಹಳ್ಳಿಯವರಿಗೆ ಮಧ್ಯರಾತ್ರಿ. ಮಾವ ಎದ್ದು ಊಟಕ್ಕೆ ಹೋದ. ಅಕ್ಕ ಅಂಗಡಿಯಲ್ಲಿ ಕುಳಿತಿದ್ದಳು. ನಾನು ನನ್ನ ಕೋಣೆಯ ಫಡಕು ಹಾಕಿಕೊಂಡೆ.
ಓದಲು ವ್ಯರ್ಥ ಪ್ರಯತ್ನ ಮಾಡಿದೆ. ಅಕ್ಷರ ಅಕ್ಷರದ ನಡುವೆ ಸಾಂವಕ್ಕನ ದಪ್ಪನೆಯ, ದೊಡ್ಡ ತುಟಿಗಳ ನಡುವಿನ ಆ ಎರಡು ದೊಡ್ಡ ಹಲ್ಲುಗಳ ನಗೆ, ಸೆರಗಿನಿಂದ ಬಿಗಿದು ಮುಚ್ಚಿದ ಅವಳ ಎದೆ. ಹೋಗಬೇಕು. ಸ್ವಲ್ಪ ಹೊತ್ತು ಅವಳ ಕೂಡ ಕೂತು ಬಂದರೂ ಅದು ಒಂದು ನಿಮಿರುವ ಅನುಭವ. ಮಾವ, ಅಕ್ಕ ಅಂಗಡಿ ಬಂದುಮಾಡಿ ಮಲಗಿದ ನಂತರ ಹೋಗಬೇಕು. ಸಾಂವಕ್ಕ ತಪ್ಪು ತಿಳಿಯಲಿಕ್ಕಿಲ್ಲ. ಅವಳೇ ಬಾ ಎಂದಿದ್ದಾಳೆ. ನಾನು ಅವಳಲ್ಲಿಗೆ ಹೋಗದಿದ್ದರೇನೇ ಅವಳಿಗೆ ದುಃಖವಾಗುತ್ತದೆ. ಲಾಟನ್ನನ್ನು ಇನ್ನೂ ಸಣ್ಣದು ಮಾಡಿದೆ. ಕಣ್ಣಿನ ತುಂಬ ಏನೇನೂ ಕಾಣದ ಮಬ್ಬು ಛಾಯೆ. ಮತ್ತಿನ ಮಾಯೆ.
ಅಂಗಡಿ ಮುಚ್ಚಿ, ಕೀಲಿ ಹಾಕಿದ ಸಪ್ಪಳ. ಒಳಗೆ ಅಗಳಿ ಜಡಿದು ಕೀಲಿ ಹಾಕಿರಬೇಕು ಮಾವ. ಹೊರಗೆ ಯಾವುದೋ ನಾಯಿಯ ಬೊಗಳುವಿಕೆ. ಹಾಗೇ ಸ್ವಲ್ಪ ಹೊತ್ತು ಒರಗಿಯೇ ಇದ್ದೆ. ಸಾವಕಾಶ ನನ್ನ ಕೋಣೆಯ ಫಡಕು ತೆಗೆದು, ಹೊರಗೆ ಬಂದು, ಮತ್ತೆ ಹಾಗೆಯೇ ಹಾಕಿದೆ. ಕೊರಳಿಗೆ ಮಫ್ಲರ್ ಸುತ್ತಿಕೊಂಡು ಕಟ್ಟೆ ಇಳಿದೆ. ದ್ಯಾಮವ್ವನ ಗುಡಿ ಮುಂದಿನ ನಾಯಿ ಒಮ್ಮೆ ಒದರಿತು. ನಾನು ಮೆಲ್ಲನೆ ಮುಂದೆ ಹೋಗಿ ಸಾಲೆಯ ಮುಂದೆ ನಿಂತೆ. ಹಿತವಾದ ಕಾತರತೆ ಮೈತುಂಬ ಅಡರಿತ್ತು.
ಬಾಗಿಲು ಹಾಕಿತ್ತು. ಒಳಗೂ ಕತ್ತಲೆ. ಪಾಪ, ದಣಿದು ಮಲಗಿರಬೇಕು. ಮುದುಕನೂ ಮಲಗಿರಬೇಕು. ಈಗ ಸಾಂವಕ್ಕನನ್ನು ಹೇಗೆ ಎಬ್ಬಿಸುವುದು? ಅವಳ ಮನೆಯ ಮುಂದಿನ ಹುಣಿಸೆಮರದಲ್ಲಿಯ ತೊಗಲುಬಾವಲಿಗಳು ಒಮ್ಮೆ ಪಟಪಟ ರೆಕ್ಕೆ ಬಡಿದವು. ಒಂದೈದು ನಿಮಿಷ ಏನೂ ತೋಚದೇ ಹೊರಗಿನ ಕಟ್ಟೆಯ ಮೇಲೆ ಕುಳಿತೆ. ಒಳಗೆ ಬಳೆಗಳ ಸಪ್ಪಳ. ಹಾಗಾದರೆ ಮುಂದಿನ ಕೋಣೆಯಲ್ಲಿಯೇ ಸಾಂವಕ್ಕ ಮಲಗಿದ್ದಾಳೆ. ಧೈರ್ಯದಿಂದ ಎದ್ದವನೇ, ಹವುರಗೆ ಬಾಗಿಲು ಬಡಿದು, ಸಾವಕಾಶ, “ಸಾಂವಕ್ಕಾ…” ಅಂದೆ. ಒಮ್ಮೆಲೇ ಗಡಬಡಿಸಿ ಎದ್ದಂತೆ ಬಳೆ ಸಪ್ಪಳ. ಮತ್ತೆ, “ಸಾಂವಕ್ಕಾ… ನಾನು” ಎಂದೆ. ಎದೆ ಡವಡವ ಬಡಿದುಕೊಳ್ಳತೊಡಗಿತ್ತು. ಈ ಕಳ್ಳತನದಲ್ಲಿ ಎಂಥ ಮಧುರ ಯಾತನೆಯ ಸುಖವಿರುತ್ತದೆ! ಕಡ್ಡೀ ಕೊರೆದ ಸಪ್ಪಳ. ಹೌದು, ಚಿಮಣಿ ಹಚ್ಚಿರಬೇಕು. ಸ್ವಲ್ಪ ಬೆಳಕು ಕಾಣಿಸುತ್ತದೆ. ಬಳೆ ಸಪ್ಪಳ ಹತ್ತಿರ ಬಂತು. ನನ್ನನ್ನು ಆ ಬಳೆಗಳ ವೃತ್ತದಲ್ಲಿಯೇ ಹಿಚುಕಿದಂತೆ, ಬಿಸಿನೀರ ಬುಗ್ಗೆಯಲ್ಲಿ ಚಳಿಗಾಲದಲ್ಲಿ ಸ್ನಾನ ಮಾಡಿದಂತೆ. ಮೈತುಂಬ ನವಿರು. ಅಗಳಿ ಸರಿಸಿ, ಕರ್ರ್ ಎಂದು ಹವುರಗೆ ಬಾಗಿಲು ತೆರೆಯಿತು. ಸರಕ್ಕನೆ ಒಳಗೆ ಬಂದು ಬಾಗಿಲು ಮುಚ್ಚಿಕೊಂಡೆ.
ಸಾಂವಕ್ಕನ ಎದೆಯ ಮೇಲೆ ಸೆರಗಿರಲಿಲ್ಲ. ಕಚ್ಚೆ ಸಿಕ್ಕಿಸಿಕೊಳ್ಳುತ್ತ ಮಾವ ಹೊರಸಿನ ಹತ್ತಿರ ನಿಂತು ದುರುಗುಟ್ಟಿ ನನ್ನನ್ನೇ ನೋಡುತ್ತಿದ್ದ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ