‘ಒಂದು ಕವಿತೆ ಕೆಲಸ ಮಾಡುತ್ತಿದೆಯೆ ಎಂದು ತಿಳಿಯುವುದು ಹೇಗೆ’ ಎಂಬ ಕವಿತೆಯಲ್ಲಿ, ಇನ್ನೊಬ್ಬರ ಕವಿತೆ ಓದುವಿಕೆಯ ಮೌನವನ್ನು ಆಲಿಸುವ ಮೂಲಕ ಮಾತ್ರ ನಿಮ್ಮ ಮುಂದೆ ಇರುವ ಕವಿತೆ ನಿಜವಾಗಿಯೂ ಯಶಸ್ವಿಯಾಗುತ್ತದೆ. ಅಂತೆಯೇ ‘Harmony’ ಎಂಬ ಕವಿತೆಯಲ್ಲಿ “ವಸ್ತುಗಳು” ಮತ್ತು “ಪದಗಳಲ್ಲದವು” ಪ್ರಾಸದ ಸ್ಥಿತಿಗೆ ಮರಳಬೇಕು ಎಂದು ಸೂಚಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ಪೇಯ್ನ್ ದೇಶದ ಕ್ಯಾಟಲಾನ್ (Catalan) ಭಾಷಾ ಕವಿ
ಜೆಮ್ಮಾ ಗೋರ್ಗಾ-ರವರ (Gemma Gorga) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

2021-ರಲ್ಲಿ ಪ್ರಕಟವಾದ ಜೆಮ್ಮಾ ಗೋರ್ಗಾ-ರವರ ಕವನಗಳ ಇಂಗ್ಲಿಷ್ ಅನುವಾದದ ಸಂಕಲನವನ್ನು (Late to the House of Words) 2022-ರ ಅಂತರ್‌ರಾಷ್ಟ್ರೀಯ ಗ್ರಿಫಿನ್ ಕಾವ್ಯ ಪ್ರಶಸ್ತಿಗಾಗಿ (The Griffin Poetry Prize) ಶಾರ್ಟ್‌ಲಿಸ್ಟ್ ಮಾಡಲಾಯಿತು. ಪ್ರಶಸ್ತಿಯ ತೀರ್ಪುಗಾರರ ಸಮಿತಿಯ ಸದಸ್ಯರು ಜೆಮ್ಮಾ ಗೋರ್ಗಾ-ರವರ ಸಂಕಲನವನ್ನು ಹೊಗಳುತ್ತಾ ಹೀಗೆಂದರು:

“ಜೆಮ್ಮಾ ಗೋರ್ಗಾ ಅವರ Late to the House of Words ಕವನ ಸಂಗ್ರಹ ದೃಷ್ಟಿ ಮತ್ತು ದಾರ್ಶನಿಕ, ಭೌತಿಕ ಮತ್ತು ಆಧ್ಯಾತ್ಮಿಕತೆಯ ನಡುವೆ ತನ್ನದೇ ಆದ ಅಲೌಕಿಕ ಜೀವನೋಧಾರವನ್ನು ಮುಂಗಾಣುತ್ತದೆ. ಪೆನ್ಸಿಲ್-ನ್ನು ಕಡಿಯುತ್ತಾ “ಶಬ್ದದ ಅರೆಕುಳಿ ನರವನ್ನು ತಲುಪುವುದು” ಅಥವಾ “ಕಪ್ಪಿನೊಳಗೆ ಸಕ್ಕರೆ ಕರಗುತ್ತಾ, ಗಾಢವಾದ ದೇಹದೊಳಗೆ ಲಘುವಾದ ದೇಹವೊಂದು ಲಯಬದ್ಧವಾಗಿ ಕರಗುವುದನ್ನು” ಆಲಿಸುವುದು – ಇಂತಹ ಪ್ರತಿಮೆಗಳಿಂದ ಈ ಕವಿತೆಗಳು ವಸ್ತುಗಳನ್ನು ಮತ್ತು ದಿನನಿತ್ಯದ ಮುಖಾಮುಖಿಗಳ ಅನುಭವಗಳನ್ನು ಬೆಳಗುವ ಬೆರಗಿನ ಕ್ಷಣಗಳನ್ನಾಗಿ ಪರಿವರ್ತಿಸುತ್ತವೆ.”

ಗೊರ್ಗಾ ಅವರ ಅನೇಕ ಕವಿತೆಗಳು ಭಾಷೆಯ ಬಗ್ಗೆ ಯೋಚಿಸುತ್ತವೆ, ಉದಾಹರಣೆಗೆ, ‘ಒಂದು ಬಸವನಹುಳುವಿನ ಹುಟ್ಟು’ (Birth of a Bover Snail) ಎಂಬ ಕವಿತೆ, ಬಸವನಹುಳುವಿನ ರೂಪಾಂತರ ಮತ್ತು ಅದರ ಚಿಪ್ಪು ಗಟ್ಟಿಯಾಗುವುದನ್ನು “ವಾಸಿಸು” ಎಂಬ ಕ್ರಿಯಾಪದದಿಂದ “ಮನೆ” ಎಂಬ ನಾಮಪವಾಗಿ ಪರಿವರ್ತನೆಯಾಗುವುದಾಗಿ ಭಾಷೆಯ ಸಂದರ್ಭವನ್ನಿಟ್ಟುಕೊಂಡು ವರ್ಣಿಸುತ್ತದೆ. ಹಾಗೆಯೇ, ಹಲವಾರು ಕವಿತೆಗಳು ಕವಿತೆಯ ಬಗ್ಗೆ ಮತ್ತು ಮೌನದ ಜತೆ ಅದರ ಸಂಬಂಧದ ಬಗ್ಗೆ ಮಾತನಾಡುತ್ತವೆ. ಇದನ್ನು ‘ಕ್ಷೇತ್ರಕಾರ್ಯದ ಟಿಪ್ಪಣಿಪುಸ್ತಕ’ (Field Notebook), ‘ಜೇನಿನ ಜಾದೂ’ (The Magic of Honey), ಮತ್ತು ‘ಒಂದು ಕವಿತೆ ಕೆಲಸ ಮಾಡುತ್ತಿದೆಯೆ ಎಂದು ತಿಳಿಯುವುದು ಹೇಗೆ’ (How to Know if a Poem is Working) ಎಂಬ ಕವಿತೆಗಳಲ್ಲಿ ನೋಡಬಹುದು. ‘ಒಂದು ಕವಿತೆ ಕೆಲಸ ಮಾಡುತ್ತಿದೆಯೆ ಎಂದು ತಿಳಿಯುವುದು ಹೇಗೆ’ ಎಂಬ ಕವಿತೆಯಲ್ಲಿ, ಇನ್ನೊಬ್ಬರ ಕವಿತೆ ಓದುವಿಕೆಯ ಮೌನವನ್ನು ಆಲಿಸುವ ಮೂಲಕ ಮಾತ್ರ ನಿಮ್ಮ ಮುಂದೆ ಇರುವ ಕವಿತೆ ನಿಜವಾಗಿಯೂ ಯಶಸ್ವಿಯಾಗುತ್ತದೆ. ಅಂತೆಯೇ ‘Harmony’ ಎಂಬ ಕವಿತೆಯಲ್ಲಿ “ವಸ್ತುಗಳು” ಮತ್ತು “ಪದಗಳಲ್ಲದವು” ಪ್ರಾಸದ ಸ್ಥಿತಿಗೆ ಮರಳಬೇಕು ಎಂದು ಸೂಚಿಸುತ್ತದೆ. ಇಲ್ಲಿ ಭೌತಿಕ ಬ್ರಹ್ಮಾಂಡದ ಬಗ್ಗೆ ನಮ್ಮ ಗ್ರಹಿಕೆಯನ್ನು ಮರು-ಕ್ರಮಿಸಬೇಕೆಂದು ಕೂಡ ಸೂಚಿಸುತ್ತದೆ.

ಜೆಮ್ಮಾ ಗೋರ್ಗಾ-ರವರ ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿ ಎರಡು ಕವನಸಂಕಲನಗಳನ್ನು ಪ್ರಕಟಿಸಿದ ಶ್ಯಾರನ್ ಡೋಲಿನ್ (Sharon Dolin), ತಾನು ಗೋರ್ಗಾ-ರ ಕವನಗಳನ್ನು ಮೊದಲ ಬಾರಿಗೆ ಓದಿದ ಅನುಭವವನ್ನು ಹಂಚಿಕೊಳ್ಳುತ್ತಾರೆ: “ಜೆಮ್ಮಾ ಗೋರ್ಗಾ ಅವರ ಹಲವಾರು ಕವಿತೆಗಳನ್ನು ಆ್ಯನಾ ಕ್ರೋವ್ (Anna Crowe) ಅವರು ಅನುವಾದಿಸಿದ Six Catalan Poets ಎಂಬ ದ್ವಿಭಾಷಾ ಕವನ ಸಂಕಲನದಲ್ಲಿ ಮೊದಲ ಬಾರಿ ಓದಿದಾಗ ನಾನು ಮಾರುಹೋದೆ. ಇವರ ಕವಿತೆಗಳ ನಮ್ರತೆ ಮತ್ತು ಮಹತ್ವಾಕಾಂಕ್ಷೆಯನ್ನು ಕಂಡು ನಾನು ಚಕಿತಳಾದೆ: ಹೇಗೆ ಒಂದು ಕವಿತೆ ಸಾಂಸಾರಿಕದಿಂದ ಆಧ್ಯಾತ್ಮದ ಕಡೆಗೆ, ನಿರೂಪಣಾತ್ಮಕತೆಯಿಂದ ಭಾವಗೀತಾತ್ಮಕದ ಕಡೆಗೆ, ಒಂದು ಸಂಕ್ಷಿಪ್ತ ಪ್ರೇಮ ಪತ್ರದಿಂದ, ಪ್ರಾರ್ಥನೆಯಿಂದ, ತಾತ್ವಿಕ ಚಿಂತನೆಯ ಕಡೆಗೆ ಚಲಿಸುವಾಗ, ಯಾವಾಗಲೂ ಭಾಷೆಯ ಬಗ್ಗೆಯ ನಿಮಗ್ನತೆಯಲ್ಲಿ ಬೇರೂರಿರುತ್ತೆ.”

2013-ರಲ್ಲಿ ಪ್ರಕಟವಾದ Six Catalan Poets ಕವನ ಸಂಗ್ರಹವನ್ನು ಪರಿಚಯಿಸುತ್ತಾ, ಅದರ ಮುನ್ನುಡಿಯಲ್ಲಿ Pere Ballart-ಅವರು ಹೇಳುತ್ತಾರೆ, “‘ನಾನು ಕಾವ್ಯದಿಂದ ‘ಭಾವನೆ ಮತ್ತು ವಿಸ್ಮಯಳ ಮಿಶ್ರಣ’ವನ್ನು ಕೋರುತ್ತೇನೆ’ ಎಂದು ಒಮ್ಮೆ ಜೆಮ್ಮಾ ಗೋರ್ಗಾ ಹೇಳಿದರು ಹಾಗೂ ಇಲ್ಲಿಯವರೆಗೆ ಪ್ರಕಟವಾದ ಅವರ ನಾಲ್ಕು ಸಂಗ್ರಹಗಳಿಂದ ಓದುಗರು ಈ ಮಿಶ್ರಣವನ್ನೇ ನಿಖರವಾಗಿ ಪಡೆಯುತ್ತಾರೆ. ಮಧ್ಯಮ ಪುರುಷ ಏಕವಚನದ ‘ನೀನು’-ವಿನ ನಿರಂತರ ಮತ್ತು ಸ್ಪಷ್ಟವಾದ ಬಳಕೆ, ಕವಿತೆಯ ಅನುಭವದ ಚೌಕಟ್ಟಿನ ಪರಿಚಿತತೆ, ಮತ್ತು ಆಗಾಗ್ಗೆ ಬಾಲೋಚಿತ ಮತ್ತು ಸಾಂಸಾರಿಕ ಪ್ರತಿಮೆಗಳನ್ನು ಆಶ್ರಯಿಸುವ ಕಲ್ಪನೆ – ಇವೆಲ್ಲ ಭಾವನೆಯನ್ನು ಒದಗಿಸುತ್ತದೆ. ಮತ್ತೊಂದೆಡೆ, ವಸ್ತುಗಳು ಮತ್ತು ವಿವರಗಳಿಗೆ ಕವಿ ನೀಡುವ ಅಸಾಧಾರಣವಾದ, ಸೂಕ್ಷ್ಮವಾದ ಅವಗಾಹನೆಯಿಂದ ವಿಸ್ಮಯ ಉದ್ಭವಿಸುತ್ತದೆ. ಈ ಸಾಧಾರಣ, ದೈನಂದಿನ ವಿಷಯಗಳಿಂದ ಕವಿಯು ಕಾವ್ಯಾತ್ಮಕ ಸನ್ನಿವೇಶಗಳನ್ನು ರಚಿಸುತ್ತಾಳೆ; ಇವು ಕವಿಯ ಆತಂಕಗಳು ಮತ್ತು ಬಯಕೆಗಳಿಗೆ ಸೂಕ್ತವಾದ ವಾಹನವಾಗಿ, ಕವಿಯ ‘ನಾನು’-ವಿನಿಂದ ದೂರವಿಡಲ್ಪಡುತ್ತವೆ.”

ಸ್ಪೇಯ್ನ್ ದೇಶದ ಬಾರ್ಸೆಲೋನಾದಲ್ಲಿ 1968-ರಲ್ಲಿ ಜನಿಸಿದ ಜೆಮ್ಮಾ ಗೋರ್ಗಾ ಬಾರ್ಸೆಲೋನಾ ವಿಶ್ವವಿದ್ಯಾಲಯದಿಂದ ಫಿಲಾಲಜಿಯಲ್ಲಿ ಪಿಎಚ್‌.ಡಿ. ಪದವಿ ಪಡೆದರು. ಈಗ ಅವರು ಬಾರ್ಸೆಲೋನಾ ವಿಶ್ವವಿದ್ಯಾಲಯದಲ್ಲೇ ಮಧ್ಯಕಾಲೀನ ಮತ್ತು ನವಜಾಗೃತಿಯ ಸ್ಪ್ಯಾನಿಷ್ ಸಾಹಿತ್ಯದ (Medieval and Renaissance Spanish Literature) ಪ್ರಾಧ್ಯಾಪಕರಾಗಿದ್ದಾರೆ. ಇಲ್ಲಿಯವರೆಗೆ ಏಳು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ: Ocellania (Birdology, 1997), ಈ ಸಂಕಲನಕ್ಕಾಗಿ ಅವರಿಗೆ ಕಾವ್ಯಕ್ಕಾಗಿರುವ ರೋಸಾ ಲೆವೆರೋನಿ ಪ್ರಶಸ್ತಿಯನ್ನು (Rosa Leveroni Prize for poetry) ನೀಡಲಾಯಿತು; El desordre de les mans (The Hands’ Disorder, 2003); Instruments òptics (Optical Instruments, 2005); Llibre dels minuts (Book of Minutes, 2006), ಈ ಸಂಕಲನ 2006 ಸಾಲಿನ Miquel de Palol ಪ್ರಶಸ್ತಿಯನ್ನು ಗೆದ್ದುಕೊಂಡಿತು; ಛಾಯಾಗ್ರಾಹಕ ಜಾನ್ ರಾಮೆಲ್-ರ ಸಹಯೋಗದೊಂದಿಗೆ Diafragma (Diaphragm, 2012); Mur (Wall, 2015), ಈ ಸಂಕಲನಕ್ಕೆ ಕ್ಯಾಟಲಾನ್ ಕಾವ್ಯ ವಿಮರ್ಶಕರ ಪ್ರಶಸ್ತಿ ದೊರೆಯಿತು (Premi de la Crítica de Poesia Catalana); ಹಾಗೂ Viatge al centre (Journey to the centre, 2020). ಅವರು ಕ್ಯಾಟಲಾನ್ ಭಾಷೆಗೆ ಅನುವಾದಿಸಿದ ಖ್ಯಾತ ಮರಾಠಿ ಹಾಗೂ ಆಂಗ್ಲ ಭಾಷಾ ಕವಿ ದಿಲೀಪ್ ಚಿತ್ರೆ ಅವರ ಕವನಗಳ ಸಂಕಲನ Vint esmorzars cap a la mort (Twenty Breakfasts to Death) 2012-ರಲ್ಲಿ ಪ್ರಕಟವಾಯಿತು ಮತ್ತು ಎಡ್ವರ್ಡ್ ಹರ್ಷ್ ಅವರ ಕವನಗಳನ್ನು ಸಹ ಅನುವಾದಿಸಿ ಸಂಕಲನದ ರೂಪದಲ್ಲಿ ಪ್ರಕಟಿಸಿದ್ದಾರೆ. ಅವರು ಭಾರತದಲ್ಲಿ ಕಳೆದ ಸಮಯದ ಗದ್ಯ-ದಿನಚರಿಯ ಪುಸ್ತಕ Indi visible ಎಂಬ ಶೀರ್ಷಿಕೆಯಡಿಯಲ್ಲಿ 2018-ರಲ್ಲಿ ಪ್ರಕಟವಾಯಿತು. ಗೋರ್ಗಾ-ರವರ ಹಲವಾರು ಕವನಗಳು ಬಾಸ್ಕ್, ಇಂಗ್ಲಿಷ್, ಸ್ಲೋವಾಕಿಯನ್ ಮತ್ತು ಪೋಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ.

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಜೆಮ್ಮಾ ಗೋರ್ಗಾ-ರವರ ಹತ್ತು ಕವನಗಳಲ್ಲಿ ಮೊದಲ ಎರಡು ಕವನಗಳನ್ನು ಆ್ಯನಾ ಕ್ರೋವ್ (Anna Crowe) ಹಾಗೂ ಉಳಿದ ಎಂಟು ಕವನಗಳನ್ನು ಶ್ಯಾರನ್ ಡೋಲಿನ್ (Sharon Dolin) ಮೂಲ ಕ್ಯಾಟಲಾನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

*****


ದೀರ್ಘ ಪ್ರಯಾಣ
ಮೂಲ: Long Journey

ಹಳಿಗಳ ಉದ್ದಕ್ಕೂ ಓಡುತ್ತಿವೆ ಟ್ರೈನುಗಳು, ಕವಿತೆಗಳು.
ಹಗಲು ಹೊತ್ತು ಓಡುತ್ತವೆ ಅವು, ರಾತ್ರಿ ಹೊತ್ತು ಓಡುತ್ತವೆ.
ಸಣ್ಣ ಕಿಟಕಿಗಳು
ಬೆಳಕು ಉಸಿರಾಡಲಿಯೆಂದು –
ಪ್ರತಿ ಮೂರು ಸೆಕೆಂಡುಗಳಿಗೊಮ್ಮೆ,
ಮೂರು ಸೆಕೆಂಡುಗಳಿಗೊಮ್ಮೆ.
ಆ ವೇಗ ನಿನ್ನ ಕಿವಿಗಳೊಳಗೆ ಸುರುಳಿಕೊಳ್ಳುತ್ತೆ
ಮತ್ಸ್ಯಕನ್ಯೆಯ ಉದ್ದ ಬಾಲದ ಹಾಗೆ.
ಅಲ್ಲಿ ಮತ್ತೊಮ್ಮೆ ಕೇಳಿಸಲಿಯೆಂದು
ಒಂದು ಪದವನ್ನು ನುಂಗುವೆ ನೀನು.
ಪ್ಲಾಟ್ಫಾರ್ಮ್‌ನಿಂದ ಯಾರೊ ಕೈಬೀಸುತ್ತಾರೆ,
ಯಾರೋ, ಯಾರು.
ಅಟ್ಟದವರೆಗೆ ಸಾಮಾನು ಅಡಚಿದ ಗೂಡ್ಸ್ ಟ್ರೈನುಗಳು,
ಪಯಣಿಗರ ಟ್ರೈನುಗಳು,
ದನಗಳ ಲಾರಿಗಳನ್ನು ಎಳೆಯುವ ಟ್ರೈನುಗಳು,
ಸ್ಟ್ರೆಚರ್-ಗಳಿಂದ ತುಂಬಿದ ಟ್ರೈನುಗಳು,
ಗಡಿಪಾರಾದವರನ್ನು ಒಯ್ಯುವ ಟ್ರೈನುಗಳು.
ಯಾವ ಮುನ್ಸೂಚನೆಯೂ ಇಲ್ಲದೆ,
ಸುರಂಗ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತೆ.
ಬೇರುಗಳಿಂದ ಅಡಚಿದ ಸೂಟ್‌ಕೇಸುಗಳ ಹಾಗೆ
ಭಾರಿಯಾಗಿರುವ ನೆರಳುಗಳು ತತ್ತರಿಸುತ್ತವೆ,
ಮತ್ತೆ ಈ ಅಸಂಬದ್ಧ ಕವಿತೆ, ನನಗನಿಸಿದ ಪ್ರಕಾರ,
ದೂರಗಳ ಬಗ್ಗೆ ಮಾತನಾಡುತ್ತಾ,
ಹಳಿತಪ್ಪುತ್ತದೆ,


ಒಂದು ಪುಟ್ಟ ಕತೆ
ಮೂಲ: Little Story

ಕಿತ್ತಳೆ ಮರದ ಮಧುರ ಅಕ್ಷರಗಳ ಮಧ್ಯೆ ಆಕಸ್ಮಿಕವಾಗಿ ಕಂಡ
ಪದ್ಯವೊಂದರ ಮೊದಲ ಸಾಲನ್ನು ಹೇಳಿಬರೆಸಲು
ಜೇನ್ನೊಣವೊಂದು ನನ್ನ ತುಟಿಗಳ ಹತ್ತಿರ ಬರುತ್ತದೆ.
ಇದನ್ನು ಕಣ್ಣುಮುಚ್ಚಿ ಸ್ವೀಕರಿಸುವುದು ನನಗೆ ಸುಲಭದ
ವಿಷಯವಾಗಬೇಕಿತ್ತು, ಆದರೆ ಪವಾಡಗಳನ್ನು
ಹೇಗೆ ಸ್ವೀಕರಿಸುವುದೆಂದು
ಯಾರೂ ಎಂದೂ ನನಗೆ ತೋರಿಸಿರಲಿಲ್ಲ.
ಕೈಗಳನ್ನು ಚಾಚಿ ವಿಷದ ಸೇಬೊಂದನ್ನು
ಹೇಗೆ ಸ್ವೀಕರಿಸಬೇಕೆಂದು ಚೆನ್ನಾಗಿ ಗೊತ್ತಿದೆ ನನಗೆ,
ರಾತ್ರಿಯು ಮೆಲ್ಲನೆ ಕಚ್ಚಿ ಬಿಟ್ಟ
ಕಡುಗೆಂಪು ಗಾಯವನ್ನು ಮುಟ್ಟಿನೋಡಲು
ಹೇಗೆ ಕುತ್ತಿಗೆಯನ್ನು ಬಗ್ಗಿಸಬೇಕೆಂದು ಗೊತ್ತಿದೆ ನನಗೆ,
ಪ್ರತಿ ಕನ್ನಡಿಯ ಆಳದಲ್ಲೂ ಕ್ರೌರ್ಯ
ಹೇಗೆ ಶೇಖರಿಸುತ್ತದೆ ಎಂದು ಗೊತ್ತಿದೆ ನನಗೆ.
ಆದಾಗ್ಯೂ, ಯಾವ ಕೈಗಳಿಂದ
ಉಡುಗೊರೆಯೊಂದನ್ನು ಸ್ವೀಕರಿಸಬೇಕು?
ಆ ಅನಿರೀಕ್ಷಿತ ಉಡುಗೊರೆಯನ್ನು ಸ್ವೀಕರಿಸಲು
ಕೈಗಳನ್ನು ಹೇಗೆ ತೆರೆಯಬೇಕು?
ಮರುದಿನವೆಂದರೆ,
ಸಮಯ ಮೀರಿದ ಹಾಗೆಯೆ, ಯಾವಾಗಲೂ:
ಜೇನ್ನೊಣ ಮಾಯವಾಗಿದೆ,
ಯಾವ ಕಿತ್ತಳೆ ಮರದಲ್ಲೂ ಹೂವುಗಳು ಉಳಿದಿಲ್ಲ,
ಮತ್ತೆ ಸುಖಾಂತ್ಯವು ಹೇಗಿರುತ್ತದೆಂದು ತೋರಿಸಲು
ಅಕ್ಷರಗಳಿಗೆ ಜೋಡಿಕೊಳ್ಳಲು ಸರಿಯಾದ ಕ್ರಮ ಸಿಗುತ್ತಿಲ್ಲ.


ಬೇಸಿಗೆಯ ಅಂತ್ಯ
ಮೂಲ: Summer’s End

ತನ್ನ ಕರ್ತವ್ಯವನ್ನು ಪಾಲಿಸುತ್ತಾ
ಮೊದಲ ಎಲೆ
ಭೂಮಿಯ ಮೇಲೆ ಬೀಳುತ್ತೆ.

ಆ ಒಂದು ಕ್ಷಣ,
ಅದರ ಬಣ್ಣ
ತಾನೂ ಬೀಳಬೇಕೆಂಬುದನ್ನು
ಮರೆತುಬಿಡುತ್ತೆ,

ನಮ್ಮ ನೆಟ್ಟನೋಟದ
ಸಪೂರ ರೆಂಬೆಗೆ
ಅವುಚಿಕೊಳ್ಳುತ್ತಾ.


ಹುರುಳರಿಮೆ ಹಾಗೂ ಆರಯ್ಕೆಯರಿಮೆ
ಮೂಲ: Semantics and Nutrition

ಎಲೆಯೊಂದು ನೆಲಕ್ಕೆ ಬಿದ್ದು
ಅತಿ ಅಣ್ಣ ಅರ್ಥಗಳಾಗಿ ಕಳೆತುಹೋಗುತ್ತೆ –
ಪಸೆಯಾಗಿ, ವರ್ಣಕವಾಗಿ, ಎಲೆಗರಿಯಾಗಿ,
ಆಮ್ಲಜನಕವಾಗಿ, ಶಾಖವಾಗಿ, ಬೆಳಕಾಗಿ –
ಹೇಗೆ ಕೆಲವರು ತಮ್ಮ ಪೂರ್ಣಹೆಸರನ್ನು
ಅಪರಿಚಿತರಿಗೆ ಬಿಡಿಸಿ ಹೇಳುತ್ತಾರೋ, ಹಾಗೆ:
ಇಂ-ಗಾ-ಲ ಆ-ಮ್-ಲ.
ಬೀಳುವ ದಾರಿಯಲ್ಲಿ ಯಾವುದೂ ಕಳೆದುಹೋಗುವುದಿಲ್ಲ,
ರಾತ್ರಿಮಳೆಯ ಜತೆ ಅದರ ಮಾತುಕತೆಗಳಾಗಲಿ,
ಹಕ್ಕಿಗಳು ಹೇಳಿಕೊಟ್ಟ ಹಾರಾಟದ ಪಾಠಗಳಾಗಲಿ:
ಇವೆಲ್ಲ ಸಣ್ಣ ಸಣ್ಣ ಅಂಶಗಳಾಗಿ ಕಳೆತು ಹೋಗುತ್ತವೆ,
ಅಡವಿಯ ಮೌನ-ಬಾಯಿಗಳಾದ ತಾಳ್ಮೆಯ ಇರುವೆಗಳು
ಇವುಗಳನ್ನ ನೇರವಾಗಿ ಜೀರ್ಣಿಸಿಕೊಳ್ಳುತ್ತವೆ.
ಹಾಗೆಂದೇ, ಗಾಳಿಯ ಭಾಷೆ ಭೂಗರ್ಭದಲ್ಲೂ
ಮಾತಾಡಲ್ಪಡುತ್ತದೆ.
ಅದಕ್ಕೇ, ಹುಳಗಳು ರೆಕ್ಕೆಗಳ ತೊಟ್ಟು ಹಾರಲು
ಪ್ರಯತ್ನಿಸುತ್ತವೆ, ಚಿಟ್ಟೆಗಳಾಗಿ ಮಾರ್ಪಡುತ್ತವೆ.
ಎಲ್ಲವೂ ಭೌತದ್ರವ್ಯವೇ.
ಎಲ್ಲವೂ ಹಾರಾಟವಾಗಿ ರೂಪಾಂತರವಾಗುವುದು
ಒಂದು ಸಾಧಾರಣ ಎಲೆ ನೆಲಕ್ಕೆ ಬಿದ್ದಾಗ.


ಒಳ್ಳೆಯ ನಡತೆ
ಮೂಲ: Good Manners

ಆ ವರುಷದ ಬೇಸಿಗೆಯಲ್ಲಿ ಅವಳಿಗೆ ಏಳು ತುಂಬಿದಾಗ
ಅವಳಿಗೆ ಒಂದು ಮರದ ಪೆನ್ಸಿಲ್ ಬಾಕ್ಸ್ ಕೊಟ್ಟರು.
ಅದರೊಳಗೆ ಒಂದು ಪೆನ್ಸಿಲ್, ಒಂದು ಇರೇಜ಼ರ್.

ಪೆನ್ಸಿಲ್ ಯಾಕೆಂದರೆ, ಶಬ್ದದ ಅರೆಕುಳಿ ನರವನ್ನು
ತಲುಪುವವರೆಗೂ ಅದರ ಸೀಸವನ್ನು ಅವಳು
ಕಚ್ಚುತ್ತಿರಲಿಯೆಂದು.

ಇರೇಜ಼ರ್ ಯಾಕೆಂದರೆ, ಅವಳು ಶಬ್ದವನ್ನು
ಉಚ್ಚರಿಸುವ ಮುನ್ನವೇ ಅದನ್ನು ಅಳಿಸಿ
ಹಾಕಲಿಯೆಂದು.


ಎರಡನೆಯ ಗ್ರಾಮ್ಯಗೀತ
ಮೂಲ: Second Eclogue

ಭೂಗರ್ಭದಲ್ಲಿ ಚಂಡಮಾರುತವೊಂದು ರೂಪುಗೊಳ್ಳುತ್ತಿದೆ,
ಹಳ್ಳಿಯ ಕಡೆ ಮುನ್ನಡೆಯುತ್ತಿದೆ ಉರಗದಂತೆ ಅದು
ಬಣ್ಣ ಬದಲಾಯಿಸುತ್ತಾ,
ಎಲೆಗಳ, ಸಿಮೆಂಟಿನ, ಹಾಗೂ ಕಣ್ಮರೆಯಾದ ಹೆಜ್ಜೆಗಳ
ಕಲೆಗಳಲ್ಲಿ ಮರೆಸಿಕೊಳ್ಳುತ್ತಾ.
ಅದು ಹೊರಚಿಮ್ಮುವ ಕೆಲ ಕ್ಷಣಗಳ ಮುನ್ನ,
ಗುಲ್ಲು ಗದ್ದಲವೆಲ್ಲ ಕುಸಿದುಬೀಳುತ್ತವೆ ಹಾಗೂ
ಮಕ್ಕಳು ಅಸಾಧ್ಯವಾದ ಪ್ರಶ್ನೆಗಳನ್ನು ನುಂಗುತ್ತಾರೆ.
ನೀರಿನ ಭರವಸೆ ನಿಮಗೆ ಕೇಳಿಬರುತ್ತೆ
ವಿಷಸರ್ಪಗಳ ಹೊಲಸು ಹೊಟ್ಟೆಯಲ್ಲಿ.
ಈ ಅವಿಶ್ವಸನೀಯ ಶಾಂತತೆ.
ಬೆದೆಯೆದ್ದ ಬೆಕ್ಕಿನ ಹಾಗೆ ನಮ್ಮ
ಕಾಲುಗಳ ಸುತ್ತ ಸುತ್ತುತ್ತಿರುವ ಈ ಬೇಗೆ.
ಬೆದರಿಸುತ್ತೆ ಅದು
ಗೋಲದ ಕೇಂದ್ರದಲ್ಲಿ ಆಳುತ್ತಿರುವ ನಿಶ್ಚಲತೆ
ಬೆದರಿಸುವಂತೆ,
ಗಡಿಯಾರದ ಕೇಂದ್ರವನ್ನು ಆಳುತ್ತಿದೆ,
ಒಂದು ಜೋಡಿ ಕ್ರೋಷಕಡ್ಡಿಗಳ ಹಿಡಿದು
ಮುಂಚಿತವಾಗಿ ಹೊದಿಕೆಗಳನ್ನು, ಶವವಸ್ತ್ರಗಳನ್ನು
ಹೆಣೆಯುತ್ತಿರುವ ಸತ್ತ ತಾಸುಗಳನ್ನು
ರಂಜಿಸುತ್ತದೆ.


ಜೇನಿನ ಜಾದೂ
ಮೂಲ: The Magic of Honey

ಒಂದು ಲ್ಯಾವೆಂಡರ್ ಹೊದರಿನ
ತಳಮಳಿಸುವ ಅಂಚುಗಳಲ್ಲಿ
ತನ್ನನ್ನು ಹೊಂದಿಸಿಕೊಳ್ಳುವಾಗ,

ಹೂವುಗಳ ಭಾಷೆಯನ್ನು
ಜೇನಿನ ಭಾಷೆಯನ್ನಾಗಿ
ಅನುವಾದಿಸುತ್ತದೆ ಆ ಜೇನ್ನೊಣ.

ಪ್ರತಿದಿನ ಬೆಳಗ್ಗಿನ ಬ್ರೆಡ್ ಟೋಸ್ಟಿನಲ್ಲಿ,
ನಾವು ಓದುವೆವು
ನಾವು ಚಿಕ್ಕವರಿದ್ದಾಗ
ಓಡಾಡುತ್ತಿದ್ದ ಅಡವಿಯ
ಹೆಸರನ್ನು.


ಒಂದು ಕವಿತೆ ಕೆಲಸ ಮಾಡುತ್ತಿದೆಯೆ ಎಂದು ತಿಳಿಯುವುದು ಹೇಗೆ
ಮೂಲ: How to Know if a Poem is Working

ಒಂದು ಜಪಾನಿ ಮನೆಯನ್ನು ಕಲ್ಪಿಸಿಕೊಳ್ಳಿ:

ಕವಿತೆಯ ವಾಲ್‌ಪೇಪರ್-ನ
ಮೂಲಕ

ನಿಮ್ಮ ನೆರೆಮನೆಯವರ
ನಿಶ್ಶಬ್ದವನ್ನು ನೀವು ಆಲಿಸುವಂತಾಗಬೇಕು
ಈ ಕವಿತೆಯನ್ನು ಓದುತ್ತಿರುವಾಗ.


ಕ್ಷೇತ್ರಕಾರ್ಯದ ಟಿಪ್ಪಣಿಪುಸ್ತಕ
ಮೂಲ: Field Notebook

ತಾಪವು ಹಾಳೆಗಳನ್ನು ಹಿಗ್ಗಿಸುತ್ತೆ,
ಪದ್ಯದ ಸಾಲುಗಳು ಅವಸರವಸರವಾಗಿ
ಕಳಿತು, ಸಿಡಿದು, ಕೆಳಗೆ ಬಿದ್ದು,
ಕಳೆದುಹೋಗುತ್ತವೆ.

ಯಾರು ಅವುಗಳಿಗೆ
ಒದಗಿಸುವರು
ತಿಳುವಿನಂತಹ ದುಂಡನೆಯ, ಅಗಲವಾದ
ಬಾಯಿಯೊಂದನ್ನು –
ತ್ವರೆ ಮಾಡು …

೧೦
ಒಂದು ಬಸವನಹುಳುವಿನ ಹುಟ್ಟು
ಮೂಲ: Birth of a Bover Snail

ಪರಿಭ್ರಾಮಕ
ತಾಳ್ಮೆಯೊಂದಿಗೆ,
ಕೆಳಮಣ್ಣಿನ
ನಾಕ್ಷತ್ರಿಕ ಕತ್ತಲಲ್ಲಿ,
ಸುರುಳಿಯಾಕಾರಗಳಲ್ಲಿ
ತಿರುಪುಗಳಲ್ಲಿ
ಕನಸುಗಳ ಕಾಣುತ್ತಾ,
ಹದಿನೈದು ದಿನಗಳ ನಂತರ

‘ವಾಸಿಸು’ ಎಂಬ ಕ್ರಿಯಾಪದ
‘ಮನೆ’ ಎಂಬ ನಾಮಪದವಾಗಿ
ಗಟ್ಟಿಯಾಗುತ್ತದೆ.