ಎಲ್ಲರಿಗು ಪರಮಶ್ರೇಷ್ಟರಾಗುವುದು ಸಾಧ್ಯವಿಲ್ಲ ಆದರೆ ಶ್ರೇಷ್ಟರಾಗುವುದು ಖಂಡಿತ ಸಾಧ್ಯವಿದೆ ಎಂದು ನನ್ನ ನಂಬಿಕೆ. ನಿಮಗೆ ನಾಯಿಯ ಬಗ್ಗೆ ಭಯ ಅಥವಾ ಅನಾದರ ಅಥವಾ ಮತ್ತೇನೋ ಇದ್ದರೂ ನಾಯಿಯೊಂದನ್ನು ಹತ್ತಿರದಿಂದ ನೋಡಲು ಶುರು ಮಾಡಿದಾಗ ಅದು ಖಂಡಿತ ದೂರವಾಗಿ ಶುದ್ಧವಾದ ಅಂತಃಕರಣವೊಂದು ಹುಟ್ಟುತ್ತದೆ. ಇದಕ್ಕೆ ನಾನೇ ಉದಾಹರಣೆ. ನಾನೊಬ್ಬಳು ನಾಯಿಪ್ರೇಮಿಯಾಗುತ್ತೇನೆ, ಆಗಬಲ್ಲೆ ಎಂದು ನಾನು ಯಾವತ್ತು ಯೋಚಿಸಿರಲಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಎಂಟನೆಯ ಕಂತು

ಮೊನ್ನೆ ಪ್ರಸಿದ್ಧ ಉದ್ಯಮಿಗಳಾಗಿದ್ದ ರತನ್ ಟಾಟಾ ತೀರಿಕೊಂಡರೆಂಬ ಸುದ್ದಿ ಕೇಳಿದಾಗ ಬಹಳ ಆತ್ಮೀಯವಾದವರೊಬ್ಬರನ್ನು ಕಳೆದುಕೊಂಡಷ್ಟು ದುಃಖವಾಯಿತು. ರತನ್ ಟಾಟಾ ಕೇವಲ ಉದ್ಯಮಿಯಾಗಿದ್ದರೆ ಹೀಗೆ ಇಡೀ ದೇಶದ ಜನತೆಗೆ ಹತ್ತಿರವಾಗುತ್ತಿರಲಿಲ್ಲವೇನೋ.. ಮನೆಯವರೇ ನಮ್ಮನ್ನು ಬಿಟ್ಟು ಹೋದರು ಎಂಬಂತೆ ಸಂಕಟ ಪಡಲು ಕಾರಣ ಅವರ ಮಾನವೀಯ ಕೆಲಸಗಳು. ಅದರಲ್ಲೂ ತೀರಾ ಇತ್ತೀಚಿಗೆ ಬೀದಿ ನಾಯಿಗಳಿಗೋಸ್ಕರ ಆಸ್ಪತ್ರೆಯೊಂದನ್ನು ತೆರೆಯಬೇಕು ಎಂಬ ಅವರ ಮನಸ್ಸಿನ ಮಾತು ಅಂತಹ ಇಳಿ ವಯಸ್ಸಿನಲ್ಲಿಯು ಉದಾತ್ತ ಕಾರ್ಯಗಳಿಗಾಗಿ ಹಂಬಲಿಸುತ್ತಿದ್ದ ಅವರ ಮಹಾನ್ ವ್ಯಕ್ತಿತ್ವಕ್ಕೆ ಸಾಕ್ಷಿಯಾದಂತಿತ್ತು. ರತನ್ ಟಾಟಾರವರ ಪ್ರಾಣಿಪ್ರೀತಿ ಅವರು ಹಾಕುತ್ತಿದ್ದ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಮಳೆಗಾಲದಲ್ಲಿ ಕಾರುಗಳ ಅಡಿಯಲ್ಲಿ ರಕ್ಷಣೆ ಪಡೆಯುವ ನಾಯಿ, ಬೆಕ್ಕುಗಳ ಮೇಲೆ ಗಮನ ಇರಲಿ ಎಂದೆಲ್ಲ ಅವರು ಹೇಳಿದಾಗ ಅವರ ಮೇಲಿನ ಗೌರವ, ಅಭಿಮಾನಕ್ಕಾಗಿಯಾದರೂ ಅನಾಥವಾಗಿ ರಸ್ತೆಯಲ್ಲಿ ಅಲೆಯುವ ಈ ಪ್ರಾಣಿಗಳ ಮೇಲೆ ಕರುಣೆ ತೋರಿಸಿದವರು ಹಲವರು. ಅವರ ಅಂತಿಮ ದರ್ಶನದ ಸಮಯದಲ್ಲಿ ಅವರ ಮೆಚ್ಚಿನ ನಾಯಿ ಟೀಟೋ ಅವರನ್ನು ಕೊನೆಯ ಬಾರಿ ನೋಡಲೆಂದು ಬಂದಿದ್ದನ್ನು ನೋಡಿದಾಗ ಕಣ್ಣು ಒದ್ದೆಯಾಗಿತ್ತು.

ನಾಯಿಪ್ರೇಮವನ್ನು ಗಳಿಸಿದವನು ಬಹಳ ಶ್ರೀಮಂತ ಎಂದು ಇಂಗ್ಲೀಷಿನಲ್ಲಿ ಗಾದೆಯೊಂದಿದೆ. ಹಣ ಗಳಿಸಿ ಶ್ರೀಮಂತರಾಗಲು ಬಹಳ ಸಮಯ, ಸಹನೆ, ಪರಿಶ್ರಮ ಬೇಕು. ಆದರೆ ನಾಯಿಪ್ರೇಮವನ್ನು ಗಳಿಸಿ ಶ್ರೀಮಂತರಾಗುವುದು ಬಹಳ ಸುಲಭ. ರೇಲ್ವೇ ಸ್ಟೇಷನ್ನಿನಲ್ಲಿ ಓಡಾಡುತ್ತಿರುವ ನಾಯಿಯೊಂದಕ್ಕೆ ಬಿಸ್ಕೆಟ್ ಹಾಕಿದರೆ ಸಾಕು ಟ್ರೇನ್ ಬರುವವರೆಗು ಹಿಂದೆಯಿಂದಲೇ ಓಡಾಡುತ್ತಿರುತ್ತದೆ. ಮನೆಯ ಮುಂದಿನ ಬೀದಿನಾಯಿಗೆ ತಂಗಳನ್ನ ಹಾಕಿದರೆ ಸಾಕು ಮತ್ತೆ ಮತ್ತೆ ಗೇಟ್ ಬಳಿ ಬಂದು ನಿಂತು ಪ್ರೀತಿಯಿಂದ ನೋಡುತ್ತ ಬಾಲ ಅಲ್ಲಾಡಿಸುತ್ತದೆ. ನಾವು ಭಾರತೀಯರ ನಾಯಿಪ್ರೇಮದ ವ್ಯಾಖ್ಯಾನವು, ಅಮೇರಿಕದವರ ನಾಯಿಪ್ರೇಮದ ವ್ಯಾಖ್ಯಾನವು ಸಂಪೂರ್ಣ ಭಿನ್ನ. ಬೀದಿ ನಾಯಿಗಳನ್ನು ನೋಡುತ್ತ ಬೆಳೆದ ನಮಗೆ ಅವುಗಳ ಪ್ರೀತಿಯ ಪರಿ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಗಾಡಿಗಳಿಗೆ ಬೆನ್ನತ್ತುವ, ಮಧ್ಯರಾತ್ರಿಯಲ್ಲಿ ಬೊಗಳಿ ನಿದ್ದೆ ಕೆಡಿಸುವ, ಗುಂಪು ಕಟ್ಟಿಕೊಂಡು ಆಕ್ರಮಣ ಮಾಡುವ ಬೀದಿ ನಾಯಿಗಳನ್ನು ನಾವು ಕೆಲವೊಮ್ಮೆ ಹಾಸ್ಯಾಸ್ಪದವಾಗಿ ನೋಡುತ್ತ ಇನ್ನು ಕೆಲವೊಮ್ಮೆ ಹೆದರಿಕೆಯಲ್ಲಿ ಅವುಗಳಿಂದ ದೂರ ಓಡುತ್ತೇವೆ. ನಾಯಿಯೆಂದರೆ ತೀರಾ ನಿಕೃಷ್ಟ ಎಂದು ಅನಾದಿ ಕಾಲದಿಂದ ನಮ್ಮ ತಲೆಗಳಲ್ಲಿ ಗಾದೆ ಮಾತುಗಳ ಮೂಲಕ, ಆಡು ಮಾತುಗಳ ಮೂಲಕ ತುಂಬಲಾಗಿದೆ. ಆದ್ದರಿಂದ ನಾಯಿಪ್ರೇಮದ ಪರಿಕಲ್ಪನೆ ಅಷ್ಟು ಸುಲಭವಾಗಿ ತಲೆಗೆ ಹೋಗುವುದಿಲ್ಲ. ನಾಯಿಯೊಂದು ಚಿಕ್ಕ ವಯಸ್ಸಿನಲ್ಲಿ ನಮ್ಮನ್ನ ಅಥವಾ ನಮ್ಮ ಮನೆಯವರನ್ನ ಕಚ್ಚಿ ಬಿಟ್ಟ ಕಹಿ ಅನುಭವವೊಂದು ಮನಸ್ಸಿನಲ್ಲೇ ಉಳಿದು ಎಲ್ಲ ನಾಯಿಗಳು ಕಚ್ಚುತ್ತವೆ ಎನ್ನುವ ಹಾಗೆಯೇ ಅವುಗಳಿಂದ ದೂರ ಓಡುತ್ತೇವೆ.

ಇತ್ತೀಚಿನ ದಿನಗಳಲ್ಲಿ ಇದೆಲ್ಲ ಬದಲಾಗುತ್ತಿದೆ. ಅಮೇರಿಕಾದಲ್ಲಷ್ಟೇ ಅಲ್ಲ, ಭಾರತದಲ್ಲಿಯು ಜನ ನಾಯಿಗಳನ್ನು ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು ಇನ್ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ನೋಡುವಾಗ ಖುಷಿಯಾಗುತ್ತದೆ. ಮೊದಲಿನ ಹಾಗೆ ಬೀದಿ ನಾಯಿಗಳ ಬಾಲಕ್ಕೆ ಪಟಾಕಿ ಹಚ್ಚಿ ಮೋಜು ನೋಡುವುದು ಕಡಿಮೆಯಾಗಿ ಸ್ವಯಂಸೇವಕರು ಅವುಗಳಿಗೆ ಊಟವನ್ನು ಕೊಡುವುದನ್ನೆಲ್ಲ ನೋಡಿದಾಗ ಹೃದಯ ತುಂಬಿ ಬರುತ್ತದೆ. ಹುಲ್ಲಾಗು ಬೆಟ್ಟದಡಿ ಅಂಕಣದಲ್ಲಿ ಧಾರವಾಡದ ಸೋಮಶೇಖರ್ ಎನ್ನುವವರ ಬಗ್ಗೆ ಬರೆದಿದ್ದೆ. ಯಾವುದೇ ನಾಯಿಗೆ ಅನಾರೋಗ್ಯ, ಏಟು ಅಥವಾ ಅಪಘಾತವಾದರೆ ಅಲ್ಲಿಗೆ ಹೋಗಿ ಆ ನಾಯಿಯನ್ನು ಕರೆತಂದು ಆರೈಕೆ ಮಾಡುವ ಇವರು ಹೆಚ್ಚು ಸದ್ದಿಲ್ಲದೇ ತಮ್ಮ ಕೈಲಾದ ಪ್ರಾಣಿಸೇವೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನಾಯಿಯೊಂದನ್ನು ಸಾಕಿ ಅದರ ಆರೈಕೆ ಮಾಡುವುದು ನಮ್ಮ ಸ್ವಂತ ಮಕ್ಕಳನ್ನು ನೋಡಿಕೊಂಡ ಹಾಗೆ. ಹೀಗೆ ರಸ್ತೆಯಲ್ಲಿ ಅನಾಥವಾಗಿರುವ, ದಿಕ್ಕೆಟ್ಟು ಕಂಗೆಟ್ಟಿರುವ ಪ್ರಾಣಿಗಳಿಗೆ ಆಧಾರವಾಗುವುದು ಅನಾಥ ಮಕ್ಕಳನ್ನು ಪ್ರೀತಿಸಿದ ಹಾಗೆ. ಮೊದಲನೆಯದು ಶ್ರೇಷ್ಟ, ಎರಡನೇಯದ್ದು ಪರಮಶ್ರೇಷ್ಟ.

ಎಲ್ಲರಿಗು ಪರಮಶ್ರೇಷ್ಟರಾಗುವುದು ಸಾಧ್ಯವಿಲ್ಲ ಆದರೆ ಶ್ರೇಷ್ಟರಾಗುವುದು ಖಂಡಿತ ಸಾಧ್ಯವಿದೆ ಎಂದು ನನ್ನ ನಂಬಿಕೆ. ನಿಮಗೆ ನಾಯಿಯ ಬಗ್ಗೆ ಭಯ ಅಥವಾ ಅನಾದರ ಅಥವಾ ಮತ್ತೇನೋ ಇದ್ದರೂ ನಾಯಿಯೊಂದನ್ನು ಹತ್ತಿರದಿಂದ ನೋಡಲು ಶುರು ಮಾಡಿದಾಗ ಅದು ಖಂಡಿತ ದೂರವಾಗಿ ಶುದ್ಧವಾದ ಅಂತಃಕರಣವೊಂದು ಹುಟ್ಟುತ್ತದೆ. ಇದಕ್ಕೆ ನಾನೇ ಉದಾಹರಣೆ. ನಾನೊಬ್ಬಳು ನಾಯಿಪ್ರೇಮಿಯಾಗುತ್ತೇನೆ, ಆಗಬಲ್ಲೆ ಎಂದು ನಾನು ಯಾವತ್ತು ಯೋಚಿಸಿರಲಿಲ್ಲ. ಒಂದು ವೇಳೆ ಯಾರಾದರು ಹಾಗೆ ಹೇಳಿದ್ದರೆ ಹಾಗಾಗಲು ಸಾಧ್ಯವಿಲ್ಲ ಎಂದೇ ವಾದಿಸುತ್ತಿದ್ದೆ. ಆದರೆ ಕೂರಾ ಬಂದ ಒಂದೇ ವಾರದಲ್ಲಿ ನಾನು ಅವನನ್ನು ನನಗೇ ಗೊತ್ತಿಲ್ಲದ ಹಾಗೆ ಪ್ರೀತಿಸತೊಡಗಿದ್ದೆ. ತನ್ನ ನಾಲ್ಕು ಕಾಲುಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ನನ್ನ ಹೃದಯದೊಳಗೆ ಯಾವಾಗ ಬಂದನೋ.. ಈಗ ಹೃದಯದ ತುಂಬ ಅವನೇ ತುಂಬಿಕೊಂಡಿದ್ದಾನೆ. ನಾಯಿಯೊಂದನ್ನು ಸಾಕಬೇಕು ಆದರೆ ಹೇಗೆ ಶುರು ಮಾಡುವುದು, ಮನೆಯಲ್ಲಿರುವವರಿಗೆ ಅದರ ಬಗ್ಗೆ ಭಯವಿದೆ ಎಂದು ಕೇಳುವ ಕೆಲವರಿಗೆ ನಾನು ಹೇಳುವ ಮಾತೆಂದರೆ ಒಂದು ಪುಟಾಣಿ ಪಪ್ಪಿಯಿಂದ ಶುರು ಮಾಡಿ. ಅದಕ್ಕು ಸಹ ನಿಮ್ಮ ಒಡನಾಟ ಸುಲಭವಾಗುತ್ತದೆ.

ಸ್ವಪ್ರೇಮವೆಂದರೆ ನಮ್ಮ ಲೋಪದೋಷಗಳು, ತಪ್ಪುಗಳು ಏನೇ ಇದ್ದರೂ ಮುಕ್ತವಾಗಿ ಸ್ವೀಕರಿಸುವುದು. ನಾವು ಪರಿಪೂರ್ಣರಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ನಾವು ಹೇಗಿದ್ದೆವೋ ಹಾಗೆ ಯಾವುದೋ ಸಂಕೋಚ, ಅಸಹ್ಯ, ತಿರಸ್ಕಾರಗಳಿಲ್ಲದೇ ಬದುಕುವುದು. ಹಿಂದೆ ಮಾಡಿದ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುವುದು ಮತ್ತು ಇದಾವುದು ನನ್ನ ತೂಕವನ್ನು ಕಡಿಮೆ ಮಾಡುವುದಿಲ್ಲ ಎಂಬ ಸಂಗತಿಯ ಅರಿವು. ಹಿಂದೇನಾಯಿತು, ಮುಂದೇನಾಗಲಿದೆ ಎಂದು ಚಿಂತಿಸದೇ ಈ ಕ್ಷಣದಲ್ಲಿ ಬದುಕುವುದು. ಇನ್ನೊಬ್ಬರನ್ನು ಕ್ಷಮಿಸುವುದನ್ನು ಕಲಿಸುತ್ತದೆ ಸ್ವಪ್ರೇಮ. ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಸ್ವಪ್ರೇಮದ ಈ ಎಲ್ಲವನ್ನು ನಾಯಿಯೊಂದು ನಮ್ಮ ಮೇಲೆ ತೋರಿಸುತ್ತದೆ. ನಮ್ಮ ಕುಂದುಕೊರತೆಗಳು ಏನೇ ಇರಲಿ ಅದಾವುದನ್ನು ಲೆಕ್ಕಿಸದೇ ನಮ್ಮನ್ನು ಪ್ರೀತಿಸುತ್ತದೆ. ನಾವು ಕೊಲೆಯನ್ನೇ ಮಾಡಿರಲಿ, ಅದು ಲೆಕ್ಕಕ್ಕಿಲ್ಲ ಅದಕ್ಕೆ. ನಮ್ಮ ಹಿಂದೆ ಬಾಲ ಅಲ್ಲಾಡಿಸಿಕೊಂಡು ಬರುತ್ತದೆ. ಹತ್ತು ನಿಮಿಷಗಳ ಹಿಂದೆ ಹಿಗ್ಗಾಮುಗ್ಗಾ ಬೈದಿದ್ದರು ಅದನ್ನು ತಲೆಯಲ್ಲಿ ಇಟ್ಟುಕೊಳ್ಳದೇ ಮತ್ತೆ ಪ್ರೀತಿಯಿಂದ ನೆಕ್ಕಲು ಬರುತ್ತದೆ. ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಬೇರೆ ಯಾರೂ ನಮ್ಮನ್ನು ಪ್ರೀತಿಸಲಾರರು ಎಂದು ಹೇಳುತ್ತಾರೆ. ಆದರೆ ನಾಯಿ? ನಮ್ಮನ್ನೇ ತನ್ನ ಪ್ರಪಂಚ ಎಂದುಕೊಂಡು ನಮಗಿಂತ ಹೆಚ್ಚಾಗಿ ನಮ್ಮನ್ನು ಪ್ರೀತಿಸುತ್ತದೆ.

ಇದೆಲ್ಲವನ್ನು ನಾನು ನನ್ನ ಸ್ವಾನುಭವದಿಂದ ಹೇಳುತ್ತಿದ್ದೇನೆ. ಕೂರಾ ಬಂದ ಮೇಲೆಯೇ ನನಗೆ ಸ್ವಪ್ರೇಮದ ನಿಜವಾದ ಅರ್ಥ ಹೊಳೆದದ್ದು. ಅಲ್ಲಿಯವರೆಗೆ ಅದು ಚಾಟ್ ಜಿಪಿಟಿ ಕೊಡುವ ಏಳೆಂಟು ಅಂಶಗಳ ವ್ಯಾಖ್ಯಾನವಷ್ಟೇ. ನನ್ನಷ್ಟೇ ನನ್ನನ್ನು ಪ್ರೀತಿಸುವ ನಾಯಿ ಪ್ರೀತಿಯನ್ನು ಪಡೆದಿರುವ ನಾನು ಸಮ್ ಒನ್ ಸ್ಪೆಷಲ್ ಎಂದು ಹೇಳಿದರೆ ಉತ್ಪ್ರೇಕ್ಷೆಯೇನಲ್ಲ. ನಾಯಿಪ್ರೇಮಿಗಳಾಗಿದ್ದ ರತನ್ ಟಾಟಾ ಮತ್ತು ನಾನು ಈ ವಿಷಯದಲ್ಲಿ ಒಂದೇ ಎಂದುಕೊಂಡಾಗ ಎದೆಯುಬ್ಬುತ್ತದೆ. ಮಾತು ಬರದೇ ಹೋದರೂ ಕೂರಾ ನನ್ನ ಮೇಲೆ ತೋರಿಸುವ ಅನಿಯಮಿತ ಪ್ರೀತಿಗೆ ನಾನು ಋಣಿ. ಅಡುಗೆ ಮಾಡುತ್ತ ಅಥವಾ ಆಫೀಸಿನ ಕೆಲಸದಲ್ಲಿ ಮೈ ಮರೆತಿರುವಾಗ ದೂರದಲ್ಲಿ ಕೂತಿರುವ ಕೂರಾನ ಮೇಲೆ ಅಕಸ್ಮಾತ್ತಾಗಿ ದೃಷ್ಟಿ ಹೋಗುತ್ತದೆ. ಬಹಳಷ್ಟು ಸಲ ನಮ್ಮಿಬ್ಬರ ಕಣ್ಣುಗಳು ಸಂಧಿಸುತ್ತವೆ. ಕಣ್ಣಲ್ಲೇ ಪ್ರೀತಿಯನ್ನು ತುಂಬಿಕೊಂಡು ಅದೆಷ್ಟು ನಲ್ಮೆಯಿಂದ ನೋಡುತ್ತಿರುತ್ತಾನೆಂದರೆ ಅವನ ಎಲ್ಲಾ ತುಂಟಾಟಗಳನ್ನು ಸಹಿಸಿಕೊಂಡಿದ್ದಕ್ಕೂ, ಅವನ ಸೇವೆ ಮಾಡಿದ್ದಕ್ಕೂ ಸಾರ್ಥಕ ಎನ್ನಿಸಿ ಬಿಡುತ್ತದೆ. ಇಷ್ಟು ಪರಿಶುದ್ಧ ಪ್ರೀತಿಯನ್ನು ನಾನು ಕಂಡೇ ಇರಲಿಲ್ಲ ಎಂದು ಹೇಳಿದರೆ ಟೂ ಮಚ್ ಆಗಲಾರದೇನೋ.. ಅದೊಂದು ಅನುಭೂತಿ. ಅನುಭವಿಸಿಯೇ ತೀರಬೇಕು.

(ಹಿಂದಿನ ಕಂತು: ಏನ್ರೀ ಸಂಜಮ್ಮಾ ನಿಮ್ದು ಯಾವ ಜಾತಿಯ ನಾಯಿ?)