ನಾನು ಒಡೆದು ಬಿದ್ದ ವೇಸಿನ ಚೂರನ್ನೆತ್ತಿ ಅದರತ್ತ ಬಲವಾಗಿ ಎಸೆದೆ. ಅದು ಗೋಡೆಗೆ ತಗುಲಿ ಗೋಡೆಯ ಕಣ್ಣಿಂದ ರಕ್ತ ಸೋರತೊಡಗಿತು. ತನ್ನ ಮೇಲೆ ಬೀಳಬಹುದಾಗಿದ್ದ ವೇಸಿನ ಏಟನ್ನು ಸರಕ್ಕನೆ ತಲೆತಿರುಗಿಸಿ ತಪ್ಪಿಸಿಕೊಂಡ ಅದೀಗ ಗಹಗಹಿಸಿ ನಗತೊಡಗಿತು. “ಇದಕ್ಕೇ ನಾ ನಿನ್ನ ಮುಟ್ಠಾಳ ಅಂದದ್ದು. ಹೀಗೆ ಸಣ್ಣ ಸಣ್ಣದಕ್ಕೂ ಓವರ್ ರಿಯಾಕ್ಟ್ ಮಾಡೋದನ್ನ ಮೊದಲು ನಿಲ್ಲಿಸು.” ಹಾಗನ್ನುತ್ತ ಅದು ಗೋಡೆಯಿಂದ ಹನಿಯುತ್ತಿದ್ದ ರಕ್ತವನ್ನು ವ್ಯವಧಾನದಿಂದ ನೆಕ್ಕಿ ಚಪ್ಪರಿಸಿ ಕಣ್ಣು ಮಿಟುಕಿಸಿತು. ನನಗೆ ಹೊಟ್ಟೆ ತೊಳಸಿ, ತಲೆ ಧಿಮ್ಮೆಂದಿತು. ಇದರ ಮಾತು ಕೇಳದ ಹೊರತು ಬಿಡುಗಡೆಯಿಲ್ಲವೇನೋ ಅನಿಸಿ ನಿಸ್ಸಹಾಯನಂತೆ ನಾನು ಗೋಡೆಗೆ ಒರಗಿ ಕುಳಿತು ಅದರತ್ತ ನೋಡಿದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಾಂತಿ ಅಪ್ಪಣ್ಣ ಕತೆ “ಬಾಹುಗಳು” ನಿಮ್ಮ ಓದಿಗೆ

ಬೆಳಗ್ಗೆ ಏಳುತ್ತಿರುವಂತೆಯೇ ನನಗೆ ಅದು ಕಾಣಿಸಿತು. ಅದು ನನ್ನ ಮಂಚದ ಎದುರಿನ ಮೇಜಿನ ಮೇಲೆ ಕುಳಿತು ನನ್ನನ್ನೇ ನೋಡುತ್ತಿತ್ತು. ಅದರ ಬಣ್ಣ ಯಾವುದೆಂದು ನಿಖರವಾಗಿ ಹೇಳಲು ಬರುತ್ತಿರಲಿಲ್ಲ. ಒಂದೋ ಅದು ಕಪ್ಪು, ಕಂದು, ಬೂದು, ಬಿಳಿ, ಹಳದಿ, ಕೆಂಪು, ನೀಲಿ ಹೀಗೆ ಹಲವು ಬಣ್ಣಗಳ ಚುಕ್ಕಿಗಳನ್ನು ಹೊಂದಿರಬೇಕು. ಇಲ್ಲಾ ಅದರ ಚರ್ಮ ಆಗಾಗ್ಗೆ ಬಣ್ಣ ಬಣ್ಣದ ಚುಕ್ಕಿಗಳನ್ನು ಹುಟ್ಟಿಸುತ್ತ, ಗ್ರಹಿಕೆಗೆ ನಿಲುಕುವ ಮೊದಲೇ ಕರಗಿಸುತ್ತಿರಬೇಕು! ಅದರ ಕಣ್ಣುಗಳು ತಿಳಿಹಸಿರಾಗಿ ಮಿನುಗುತ್ತ ಅತ್ಯಂತ ಸೌಮ್ಯವಾಗಿಯೂ ಸುಂದರವಾಗಿಯೂ ಇರುವಂತೆ ಕಾಣುತ್ತಿದ್ದವು. ಅದರ ತುಪ್ಪಳ ನೀಳವಾಗಿ, ನಯವಾಗಿ ಯಾರೋ ಅದನು ನಿತ್ಯ ನೀವಿ ಬಾಚಿ ಬಾಚಿ ಹೊಳಪುಗೊಳಿಸುತ್ತಿರಬೇಕು. ಅದಕ್ಕಾಗಿಯೇ ವಿಶೇಷ ಅಕ್ಕರೆವಹಿಸಿ ಆರೈಕೆ ಮಾಡುತ್ತಿರಬೇಕು ಎಂಬ ಸಂದೇಹವನ್ನು ಹುಟ್ಟು ಹಾಕುತ್ತಿತ್ತು. ಅದರ ಮೈಯಾದರೂ ಅಷ್ಟೇ! ಅದು ದಷ್ಟಪುಷ್ಟವಾಗಿ ತುಂಬಿಕೊಂಡು ಅದೇ ಸಮಯ ಅತ್ಯಂತ ನಾಜೂಕಾಗಿ ಹುರಿಗೊಳಿಸಿಟ್ಟಂತೆ ಕಾಣುತ್ತ ಏಕಕಾಲಕ್ಕೆ ಹೆಣ್ಣಿನಂತೆ ಸ್ಲೀಕ್ ಅಂಡ್ ಟೆಂಡರ್…. ಗಂಡಿನಂತೆ ಟಫ್ ಅಂಡ್ ಟೋನ್ಡ್ ಅನಿಸಿ ಅದು ಹೆಣ್ಣೆ ಗಂಡೇ ಅಂತ ಗೊತ್ತುಮಾಡುವುದೂ ಕಷ್ಟವೆನಿಸತೊಡಗಿತು. ಅದರ ಬಾಲ ತೆಪ್ಪಗೆ ಬದಿಯಲ್ಲಿ ಮಲಗಿರುವಂತೆ ಕಂಡರೂ ಅದು ಸಣ್ಣಗೆ ಮೇಲೆ ಕೆಳಗೆ ಆಡುತ್ತ ನಾನು ಕಾಣುವಷ್ಟು ಸೌಮ್ಯನಲ್ಲ, ಅಥವಾ ನಾನು ಸುಮ್ಮನೆ ಕುಳಿತಿರುವಂತೆ ಕಂಡರೂ ನನ್ನೊಳಗೆ ನಾ ಸದಾ ಎಚ್ಚರವಾಗೇ ಇರುತ್ತೇನೆ ಎಂಬರ್ಥದ ಸಂದೇಶವನ್ನು ಸೂಕ್ಷ್ಮವಾಗಿ ರವಾನಿಸುತ್ತಿದೆಯೆನಿಸಿತು. ಸಮಯ ಬಂದರೆ ಇದೇ ಬಾಲ ಹನುಮಂತನ ಬಾಲದಷ್ಟು ಉದ್ದ ಬೆಳೆದು, ಗಟ್ಟಿಯಾಗಿ ಕೊನೆಯಲ್ಲಿ ಉರುಳಾಗಿ, ಅಥವಾ ಸಹಸ್ರ ಉರುಳಾಗಿ ನನ್ನನ್ನು ಕೊಲ್ಲಬಹುದು ಅಂತಲೂ ಅನಿಸಿ ಬೆನ್ನುಮೂಳೆಯ ಆಳದಲಿ ಸಣ್ಣಗೆ ನಡುಗಿ ಕಾಲ್ಬೆರಳ ತುದಿತನಕ ಛಿಲ್ಲನೆ ಬೆವರಿತು. ನನ್ನೊಳಗೆ ಹಾದು ಹೋದ ಭಯದ ವಾಸನೆ ತನಗೆ ಸಿಕ್ಕಿತೆಂಬಂತೆ ಅದು ಮೂಗರಳಿಸಿ ಸುತ್ತ ನೋಡುತ್ತ ಮೆಲುವಾಗಿ ನಕ್ಕಿತು. ಅದರ ಮೀಸೆಗಳು ಹಿಂದೆ ಮಡಚಿಕೊಂಡು ಗುಲಾಬಿ ತುಟಿಗಳು ಹಿಗ್ಗುವುದನ್ನು ನಾನು ಕಣ್ಣಾರೆ ಕಂಡಾಗ ನನಗೆ ಹೀಗೂ ಉಂಟೆ!!!??? ಅನಿಸಿ ಹಲವು ಪ್ರಶ್ನೆಗಳು ಹಠಾತ್ತನೆ ತಲೆಯೆತ್ತಿದವು. ಇದೇನಿದು? ಇಷ್ಟು ದಿನ ಇದು ಇಲ್ಲೇ ಇತ್ತಾ? ಅಥವಾ ನಾನೇ ಸರಿಯಾಗಿ ಗ್ರಹಿಸದೇ ಬಿಟ್ಟುಬಿಟ್ಟೆನಾ? ಇದು ಅದೇನೇ ಆಗಿರಲಿ, ಇದನ್ನು ಇನ್ನಷ್ಟು ಹೊತ್ತು ಇಲ್ಲಿರಲು ಕೊಡಬಾರದು, ಇದರ ಅಚ್ಚುಕಟ್ಟುತನ.., ಶೀತಲ ಸೌಂದರ್ಯ, ನಿಗೂಢವೆನಿಸುವ ಚೆಲುವಾದ ಕಣ್ಣುಗಳು.., ಕೂತಿರುವ ಭಂಗಿಯಲಿರುವ ಆತ್ಮವಿಶ್ವಾಸ ಇದೆಲ್ಲ ನೋಡಿದರೆ ಇದರ ಮೇಲೆ ಮುದ್ದುಕ್ಕಿ ಬರುತ್ತಿಲ್ಲ. ಯಾವುದೋ ಅನ್ಯಗ್ರಹ ಪ್ರಾಣಿಯೇನೋ ಅನಿಸುತ್ತಿದೆ.

“ಹಚಾ..” ನಾನು ಅದನ್ನು ಓಡಿಸಿ ಮೇಲೇಳುವ ಯತ್ನ ಮಾಡಿದೆ. ಆದರೆ ಅದು ಒಂದಿಷ್ಟೂ ಆಚೀಚೆ ಸರಿಯದೆ ಮತ್ತೆ ಮೊದಲಿನಂತೆ ಸೌಮ್ಯವಾಗಿ ನಗುತ್ತ “ಹಲ್ಲೋ ಮಿಸ್ಟರ್, ಯಾಕೆ ಈ ಅಸಹನೆ ನಿಮಗೆ? ಬಿ ಕೂಲ್” ಅನ್ನುತ್ತ ಶೇಕ್‌ಹ್ಯಾಂಡ್ ಮಾಡುವಂತೆ ನನ್ನತ್ತ ಕೈ ಚಾಚಿತು. ‘ಇದು ಮಾತಾಡುತ್ತದೆಯೆ?’ ಗಾಬರಿಯಿಂದ ನನಗೆ ಗಂಟಲೊಣಗಿ, ಭಯದ ಸೆಳಕೊಂದು ಸಳಸಳನೆ ನರನಾಡಿಗಳಲಿ ಹರಿದು ನನ್ನನ್ನು ಹಣಿದು ಕೆಡವಿದಂತೆ ಅನಿಸಿ ನಾನು ಅದನ್ನು ಓಡಿಸಲು ಎತ್ತಿದ್ದ ಕೈಯನ್ನು ಸರಕ್ಕನೆ ಹಿಂದಕ್ಕೆಳೆದುಕೊಂಡೆ. ಜೊತೆಗೆ ನಿನ್ನೆ ಮೊನ್ನೆಯಿನ್ನೂ ಕೇಳಿದ್ದ ಘಟನೆಯೊಂದರ ನೆನಪಾಗಿ ಮೈ ರೋಮ ನವಿರೆದ್ದಿತು. ಅದು ಒಂದು ಜೋಡಿ ಕಬಂಧಬಾಹುಗಳ ಕಥೆ. ಅವು ನಮ್ಮ ನಡುವಿನ ಒಬ್ಬನನು ಕೊಂದಿದ್ದವು. ಅದರ ಸ್ವರೂಪ ಕಂಡವರು ಹೇಳ್ತಿದ್ದರು, ಅದು ಹಾಗೆ ದಿನವೂ ಹಲವಾರು ಜನರನ್ನ ಕೊಲ್ಲುತ್ತಲೇ ಇರುವುದಂತೆ. ಕೆಲವರನು ನೆಲಕ್ಕೆ ಬಡಿದು ನಿಷ್ಕ್ರಿಯರಾಗಿಸಿ ಬಿಡುವುದಂತೆ. ಅದಕ್ಕಿಂತ ವಿಶೇಷವೆಂದರೆ, ಅದು ನಮ್ಮ ನಡುವೆಯೇ ಅದೃಶ್ಯವಾಗಿ ಓಡಾಡುತ್ತ ಸಮಯ ಬಂದಾಗ ರೂಪ ತಳೆಯುವುದಂತೆ! ಇನ್ನೂ ಕೆಲವರು ಹೇಳ್ತಿದ್ದರು ಆ ಬಾಹುಗಳಿಗೆ ಅಂಟಿಕೊಂಡಂತೆ ಸಹಸ್ರ ರೆಂಬೆಗಳಿವೆಯಂತೆ. ಅವು ಯಾವಾಗ ಬೇಕಾದರೂ ಬಾಹುಗಳಾಗಿ ಬದಲಾಗಿ ಬಿಡುತ್ತವಂತೆ. ಯಾರು ಹೇಗೆ ತಪ್ಪಿಸಿಕೊಂಡರೂ ಅವರನ್ನು ಹಿಡಿದು ಹಾಕಬಲ್ಲಷ್ಟು ಚಾಣಾಕ್ಷತೆ ಅವುಗಳಿಗಿವೆಯಂತೆ. ಅದಷ್ಟೇ ಅಲ್ಲ ಇಂಥದ್ದೆಲ್ಲ ನಮ್ಮ ಕಣ್ಣೆದುರು ನಡೆದರೂ ನಾವು ಸುಮ್ಮನಿರಬೇಕಂತೆ. ಇಲ್ಲವಾದರೆ ಅದು ನಮ್ಮನ್ನೂ ಕೊಲ್ಲಬಹುದಂತೆ…. ಅಂತೆ ಅಂತೆ ಅಂತೆ ಅಂತೆ!!!! ಇದನ್ನೆಲ್ಲ ಕೇಳಿದಾಗ ನಂಗೆ ಇಷ್ಟು ಭಯವಾಗಿರಲಿಲ್ಲ. ಎಲ್ಲರೂ ಮನಸು ಮಾಡಿ ಕತ್ತಿ ಹಿರಿದು ಆ ಬಾಹುಗಳನ ತರಿದು ಹಾಕುವುದಪ್ಪ! ಅದು ಬಿಟ್ಟು ಭಯಪಡುವುದೇಕೆ ಅನಿಸಿತ್ತು. ಆದರೆ ಇವೊತ್ತು ಬೆಳಬೆಳಗೆಯೇ ನನ್ನೆದುರು ಬಂದು ಕುಳಿತಿರುವ ಈ ವಿಚಿತ್ರ ಜೀವಿಯನು ಕಾಣುವಾಗ ಭಯ ಟಿಸಿಲೊಡೆಯುತಿದೆ. ಇದೂ ಹಾಗೇನಾದರೂ ಒಂದು ವಿಸ್ಮಯವಿರಬಹುದೇ…. ಅಥವಾ……..

ನನ್ನೊಳಗೆ ಗೊಂದಲದ ಸಣ್ಣ ಕಿಡಿ ಹುಟ್ಟಿ ಬೆಂಕಿ ಚಿಗುರಿಸಿಕೊಂಡು ಹಿರಿದಾಗುತ್ತ ಸುಡುತ್ತ…. ಬೆಳೆಯತೊಡಗಿ ಕಡೆಗೆ ಸಿಟ್ಟಾಗಿ ಉರಿಯತೊಡಗಿತು. ಮೊದಲು ಇದನು ಇಲ್ಲಿಂದ ಓಡಿಸಬೇಕು ಅನಿಸಿ ನಾನು ಮಲಗಿದ್ದಲ್ಲಿಂದಲೇ ಕತ್ತು ಅತ್ತಿತ್ತ ಸರಿಸಿ ಕೈಗೇನಾದರೂ ಸಿಗಬಹುದೇ ನೋಡಿದೆ. ಅದು ನಾನು ಹುಡುಕಾಡುತ್ತಿರುವುದನು ನಸು ಉಡಾಫೆಯಿಂದಲೇ ಗಮನಿಸುತ್ತಿದೆಯೆಂಬುದು ನನ್ನ ಗಮನಕೂ ಬಂತು. ಅದಕ್ಕೆ ನಾನೇನಾದರೂ ಹಾನಿ ಮಾಡಬಹುದೆಂಬ ಅಂದಾಜಿದ್ದರೂ ಸಹಾ ಅದು ಹೀಗೆ ಇಷ್ಟೊಂದು ನಿರ್ಲಕ್ಷ್ಯದಿಂದ ಕುಳಿತಿರುವುದನ್ನು ಕಾಣುವಾಗ ನನಗೆ ಮತ್ತಷ್ಟು ಸಿಟ್ಟು ಬಂತು. ಸಿಟ್ಟಿನಿಂದ ನಾನು ನನ್ನ ದಿಂಬನ್ನೆತ್ತಿ ನೇರ ಅದರ ಮುಖಕ್ಕೇ ತಗುಲುವಂತೆ ಒಗೆದೆ. ಏಟು ತಿಂದ ಅದು ಪಣಂಗನೆ ಜಿಗಿದು ಟೇಬಲಿನ ಕೆಳಗೆ ಸರಿಯಿತು. ನನಗೆ ನಗು ಬಂತು. ಹ್ಹ ಎಂಥ ತಮಾಷೆ ನಡೆಯಿತು! ಯಕಶ್ಚಿತ್ ಒಂದು ತುಚ್ಛ ಪ್ರಾಣಿ, ಅದರ ಬಗ್ಗೆ ಒಂದೇ ನಿಮಿಷಕೆ ಎಷ್ಟೆಲ್ಲ ಯೋಚಿಸಿಬಿಟ್ಟೆ! ಒಂದು ಸಣ್ಣ ಏಟಿಗೆ ಹೆದರಿ ಫೇರಿಕಿತ್ತಿದೆ. ಇದಕ್ಕೆ ಹೆದರಿಬಿಟ್ಟೆನಲ್ಲ!

ನಾನು ಮಲಗಿದ್ದಲ್ಲಿಂದ ಎದ್ದು ಮೈ ಮುರಿದು ಇನ್ನೇನು ಹೊರಗೆ ಹೋಗಬೇಕೆನ್ನುವಾಗ ಅದು ಮಂಚದಡಿಯಿಂದ ನೆಗೆದು ಮೇಲೆ ಹತ್ತಿ ನನ್ನ ಬದಿಗೇ ಕುಳಿತಿತು. ‘ಹಾಳಾದ್ದು, ಹೋಗಿಲ್ವಾ ಇದು?’ ನನಗೆ ಸಿಡಿಮಿಡಿಯೂ ಗಾಬರಿಯೂ ಒಟ್ಟಿಗೇ ಉಬುಕಿ ಬಂತು. ಹೊಡೆಯುವುದೇ ಆದರೆ ಆ ತುಪ್ಪಳದ ದಿಂಬಿನಲಿ ಹೊಡೆಯುತ್ತಾರ್ಯೇ? ಆ ಪಿಂಗಾಣಿಯ ವೇಸ್‌ನಿಂದ ಹೊಡೆದಿದ್ದರೂ ಆಗಿರೋದು, ಆದರೆ ನಿನಗೆ ಭಯ! ಅದರ ಬೆಲೆ ಹೆಚ್ಚು. ಕೆಳಗೆ ಬಿದ್ದು ಒಡೆದರೆ ಲಾಸ್ ಆಗಬಹುದೆಂಬ ಭಯ! ಹೊಡೆಯಲೂ ಬೇಕು. ಅದೇ ಸಮಯ ನಿನ್ನ ಅಸ್ತ್ರಕ್ಕೂ ಏನೂ ಆಗಬಾರದು. ಹ್ಹ. ಅದು ಲೇವಡಿ ಮಾಡುವಂತೆ ನಕ್ಕಿತು. ಇದನ್ನು ನಿರ್ಲಕ್ಷಿಸುವುದರಲ್ಲಿ ಅರ್ಥವಿಲ್ಲ ಎನಿಸಿ ನಾನು ಸರಕ್ಕನೆ ತಿರುಗಿ ಹೂದಾನಿಯೆತ್ತಿ ಅದರ ತಲೆಮೇಲೆ ಹೊಡೆದೆ, ಪ್ಚ್‌… ಅದು ಮೂರು ಹೋಳಾಯ್ತು. ವಾರದ ಹಿಂದೆ ಕೊಂಡಿದ್ದ ಬೆಲೆಬಾಳುವ ಹೂದಾನಿಯಾಗಿತ್ತದು. ಪರಿಮಳ ಇಷ್ಟಪಟ್ಟು ಕೊಂಡಿದ್ದಳು. ಅದರಲ್ಲಿ ಚಿಕ್ಕಚಿಕ್ಕ ಸೇವಂತಿಗೆ ಹೂವಿರಿಸಿ ಗರಿಕೆ ಹುಲ್ಲನ್ನು ಇಟ್ಟು ಜೋಡಿಸಿದ್ದಳು. ಅದು ಹಾಗೆ ಒಡೆದು ಚೂರಾಗಿರುವುದನ್ನು ಕಂಡು ನನ್ನ ಹೃದಯವೇ ಒಡೆದಷ್ಟು ನೋವಾಯ್ತು. ಆದರೆ ಅದರ ತಲೆಗೆ ಖಂಡಿತ ಯಾವ ಏಟೂ ತಗುಲಿರಲಿಲ್ಲ. ಅದು ಮತ್ತೆ ಮೇಜಿನ ಮೇಲೆ ಹತ್ತಿ ಚಡಪಡಿಸುತ್ತ ಕುಳಿತ ನನ್ನತ್ತ ಗಂಭೀರವಾಗಿ ನೋಡುತ್ತ ಕುಳಿತಿತು. ಅದು ಹಾಗೆ ವಿನೋದವಾಗಿ ನನ್ನ ನೋಡುತ್ತಿರುವುದನ್ನು ಕಾಣುವಾಗ ನನಗೆ ಹಿಂದೊಮ್ಮೆ ಮಂಕನೊಬ್ಬ ಅಜ್ಜಿಯ ಮೂಗಿನ ಮೇಲೆ ಕೂತ ನೊಣ ಓಡಿಸಲು ಹೋಗಿ ಅಜ್ಜಿಯನೇ ಹೊಡೆದುಕೊಂದ ಕಥೆ ನೆನಪಾಯ್ತು. ಇದನ್ನು ಅಮ್ಮ ನಾನು ಸಣ್ಣವನಿದ್ದಾಗ ಹೇಳಿದ್ದಳು. ಅದಷ್ಟೇ ಅಲ್ಲ ಒಮ್ಮೆ ಸಿಂಹವೊಂದು ನೊಣವೊಂದರ ಜೊತೆ ಜಿದ್ದಿಗೆ ಬಿದ್ದು ಅದನ್ನು ಅಪ್ಪಳಿಸಿ ಅಪ್ಪಚ್ಚಿ ಮಾಡಿ ಕೊಲ್ಲಲಾರದೆ ತನ್ನ ಪಂಜದಿಂದ ತನ್ನದೇ ಮುಖ ಮೂತಿ ಗಾಯಗೊಳಿಸಿಕೊಂಡು ಸೋಲೊಪ್ಪಿಕೊಂಡ ಕಥೆಯೂ ನೆನಪಾಯ್ತು. ಬಹುಶಃ ಇದು ಎರಡನೇ ಕ್ಲಾಸಿನ ಪುಸ್ತಕದಲ್ಲಿದ್ದಿರಬೇಕು. ಈಗ ಎಷ್ಟೋ ವರ್ಷಗಳ ಬಳಿಕ ಹೀಗೊಂದು ಚಂದದ ಮುಂಜಾವಿನಲಿ ಅಪರೂಪದ ಈ ವಿಚಿತ್ರ ಅತಿಥಿಯ ಮುಂದೆ ಇದೆಲ್ಲ ನೆನಪಾಗುತ್ತಿದೆಯೆಂದರೆ ಈ ಅತಿಥಿಗೆ, ಇಲ್ಲ ಇಡೀ ಸನ್ನಿವೇಶಕೇ ಒಂದು ಅಮಾನುಷ ಶಕ್ತಿ ಇದೆಯೆಂದು ತೋರತೊಡಗಿತು. ಇದೆಲ್ಲದರಾಚೆ ಯಾವುದೇ ಭಯ ಬಿಗುಮಾನ ತೋರದೆ ಪಟ್ಟಾಗಿ ಕುಳಿತಿರುವ ಮಾತಾಡುವ ಜೀವಿ ಎಲ್ಲರನ್ನೂ ಬಿಟ್ಟು ನನ್ನ ಬಳಿ ಬಂದಿದೆಯೆಂದರೆ ಬಹುಶಃ ಯಾವುದೋ ಮಹದುದ್ದೇಶದಲೇ ನನ್ನನ್ನು ಭೇಟಿಯಾಗಿರಬೇಕೆನಿಸಿ ಇದನು ಇಲ್ಲಿಗೆ ಕೊನೆಗೊಳಿಸಬೇಕೆಂದು ನಾನು ನೇರವಾಗೇ ಕೊನೆಯ ಅಂಕಕ್ಕಿಳಿದೆ. “ನಿನಗೇನು ಬೇಕು? ಯಾರು ನೀನು?” ನನ್ನ ದನಿ ಗೊಗ್ಗರಾಗಿರುವುದು ನನ್ನ ಗಮನಕೆ ಬಂತು. ಕ್ಯಾಕರಿಸಿ ಗಂಟಲನು ಸರಿ ಪಡಿಸಿಕೊಂಡು ಕೂತೆ. ಇದನ್ನು ಊಹಿಸಿದ್ದೆನೆಂಬಂತೆ ಅದರ ಕಂಗಳು ಮೃದುವಾದವು. ಗುಲಾಬಿ ತುಟಿಗಳು ಮತ್ತೊಮ್ಮೆ ಸಣ್ಣಗೆ ಬಿರಿದು ಕಿರುನಗೆ ಚೆಲ್ಲಿದವು. ಆದರೆ ಅದು ನನ್ನ ಪ್ರಶ್ನೆಗೆ ತಟಕ್ಕನೆ ಉತ್ತರಿಸದೆ, ಕೈಯೆತ್ತಿ ಮೀಸೆ ಸವರಿಕೊಂಡು ತನ್ನ ಪಂಜವನೆತ್ತಿ ಮೆಲುವಾಗಿ ಹೂವಿನಂತೆ ಅರಳಿಸಿ ತನ್ನ ಬಿರುಸಾದ ಉಗುರಗಳನ್ನು ನನಗೆ ಪರಿಚಯಿಸಿತು. ಹೀಗೆ ಮಾಡುತ್ತ ಅದು ತನ್ನ ತಾಕತ್ತಿನ ಸಂಕ್ಷಿಪ್ತ ಸ್ವರೂಪ ದರ್ಶನ ಮಾಡಿಸುತ್ತಿದೆಯೆನಿಸಿ ಶತ್ರುವಿನಂತೆ ಕಾಣುತ್ತಿದ್ದ ಅದರ ಕಾರ್ಯವೈಖರಿಯ ಮೇಲೆ ಸಣ್ಣ ಅಸೂಯೆಯೋ ಮೆಚ್ಚುಗೆಯೋ ಏನೋ ಒಂದು ಮೂಡಿತು.

“ನಿನ್ನ ಮುಟ್ಠಾಳತನದಿಂದ ಹೊರಬಂದು ನಿನ್ನನ್ನು ಸುಧಾರಿಸಿಕೊಳ್ಳಲೇ ಬೇಕಾದ ಕಾಲ ಬಂದಿದೆಯೆಂದು ಹೇಳಿ ಹೋಗುವಾಂತ ಬಂದಿದ್ದೇನೆ,” ಅದು ನಿರ್ವಿಕಾರವಾಗಿ ಇಷ್ಟನ್ನು ಹೇಳಿ ಗಂಭೀರವಾಗಿ ಕುಳಿತಿತು. ಅದು ಕುಳಿತಿರುವ ಭಂಗಿ ಮತ್ತು ಅದು ಮಾತಾಡಿದ ರೀತಿ ಥೇಟ್ ನನ್ನ ಬಾಸ್‌ನನ್ನೇ ನೆನಪಿಸಿ ಒಂದು ಕ್ಷಣ ಅದೇ ಇದಾ ಅಥವಾ ಇದೇ ಅದಾ ಅನಿಸಿ ತಲೆ ಗೊಂದಲದಲ್ಲಿ ಗರ‍್ರನೆ ತಿರುಗತೊಡಗಿತು. ಮುಟ್ಠಾಳ! ಎಂಥಾ ಮಾತು! ನಿನ್ನೆ ಆಫೀಸಿನಲಿ ಬಾಸ್ ಅನ್ನೂ ಸೇರಿದಂತೆ ಕೆಲ ಗೆಳೆಯರೂ ಹೀಗೇ ಹೇಳಿದ್ದರು. ಆಗಿದ್ದಿಷ್ಟೇ! ಮೊನ್ನೆಮೊನ್ನೆಯಿನ್ನೂ ಒಬ್ಬ ಹುಡುಗ ಹೊಸತಾಗಿ ಕೆಲಸಕ್ಕೆ ಸೇರಿದ್ದ. ಅಕೌಂಟ್ಸ್ ಡಿಪಾರ್ಟ್‌ಮೆಂಟ್‌ಗೆ. ಅವೊತ್ತು ಅವನು ಫೈಲ್ ಪ್ರಸೆಂಟ್ ಮಾಡಿದಾಗ ತಾನೂ ಕಾರ್ಯನಿಮಿತ್ತ ಬಾಸ್‌ನ ಕ್ಯಾಬಿನ್ನಿನಲ್ಲೇ ಇದ್ದೆ. ಬಂದ ಹೊಸತರ ಗಡಿಬಿಡಿಯೋ, ಒತ್ತಡವೋ ಅಂತೂ ಅಕೌಂಟಿನಲ್ಲಿ ಸಣ್ಣ ತಪ್ಪಾಗಿಬಿಟ್ಟಿತ್ತು. ಬಾಸ್ ಮಹಾಶಯನಿಗೆ ಇಷ್ಟೇ ಸಾಕಿತ್ತು. ಅವನು ಆ ಹುಡುಗನಿಗೆ ಇಂಗ್ಲಿಷಿನಲಿ ಹಿಗ್ಗಾಮುಗ್ಗ ಬೈಯುತ್ತ, ನಡುನಡುವೆ ಕರೆಕ್ಷನ್ ಹೇಳುತ್ತ ಅವನ ತಲೆ ಬಿಸಿ ಮಾಡಿದ್ದ. ಈ ಹುಡುಗ ಎಲ್ಲವನೂ ಪ್ಯಾಲಿಮೋರೆಯಲ್ಲಿ ನಿಂತು ಕೇಳಿಸಿಕೊಂಡವನು ಹೊರಡುವ ಮುನ್ನ “ಕರೆಕ್ಷನ್ ಏನಂದ್ರು ಸರ್?” ಅಂತ ನನ್ನನ್ನು ಕೇಳಿಬಿಟ್ಟ. ನಾನು ತುಂಬ ಸಹಜವಾಗಿ “ಇರು ಹೇಳ್ತೀನಿ, ಸ್ವಲ್ಪ ಕೆಲಸ ಇದೆ ಇಲ್ಲಿ, ಮುಗಿಸ್ತೀನಿ” ಅಂದಿದ್ದೆ. ಹುಡುಗ ನಕ್ಕು ತಲೆಯಾಡಿಸಿ ಹೊರಡುವವನಿದ್ದ ಅಷ್ಟೇ! ಬಾಸ್ ಕೆಂಡಾಮಂಡಲನಾಗಿದ್ದ. “ಹೌ ಡೇ ಆರ್ ಯು ಟು ಸ್ಪೀಕ್ ಅ ಲ್ಯಾಂಗ್ವೇಜ್ ವಿಚ್ ಈಸ್ ನಾಟ್ ನೋನ್ ಟು ಮಿ! ಡೋಂಟು ಯು ಹ್ಯಾವ್ ಪಬ್ಲಿಕ್ ಡೀಸೆನ್ಸಿ? ಐ ವಿಲ್ ಫೈರ್ ಯು ಔಟ್ ಆಫ್ ಮೈ ಆಫೀಸ್” ಅಂತ ಶುರು ಮಾಡಿಬಿಟ್ಟ. ಹುಡುಗ ಕಂಗಾಲಾಗಿ ಬಾಸ್‌ನ ಮುಖ ನೋಡುತ್ತ.. ‘ಸ್ಸಾರಿ ಸರ್, ಸ್ಸಾರಿ ಸರ್ ವಿಲ್ ನಾಟ್ ರಿಪೀಟ್’ ಅಂದಿದ್ದು ನೋಡಿ ನಂಗೆ ನೆತ್ತಿಗೆ ಒತ್ತಡವೇರಿತ್ತು. “ಏ ತಮ್ಮ, ನೀನ್ಯಾಕೋ ಇದಕೆ ಸ್ಸಾರಿ ಕೇಳ್ತಿದೀಯ? ಏನಂಥ ಅಪರಾಧ ಆಯ್ತೂಂತ?” ಅಂದವನೇ ಸರಕ್ಕನೆ ಬಾಸ್ ಕಡೆ ತಿರುಗಿ “ನೀವ್ಯಾರ‍್ರೀ ಇದ್ನ ಕೇಳೋಕೆ? ಇದು ನಮ್ ರಾಜ್ಯಾರಿ, ನಿಮಗೆ ಕನ್ನಡ ಗೊತ್ತಿಲ್ಲಾಂದ್ರೆ ನೀವು ಕಲಿತ್ಕೊಳ್ಳೀ. ಇದು ಸೆಕ್ಯುಲರ್ ಕಂಟ್ರಿ. ನಮಗೆ ಫ್ರೀಡಂ ಆಫ್ ಎಕ್ಪ್ರೆಶನ್ ಇದೆ. ಭಾಷೆ ಅನ್ನೋದು ಹೃದಯಕ್ಕೆ ಹತ್ತಿರವಾದ್ದಂಥದ್ದು. ಇದ್ನ ತಪ್ಪೂಂದ್ರೆ ಹೇಗೆ? ಅದೂ ಅಲ್ದೆ ಅಷ್ಟು ಸಣ್ಣ ತಪ್ಪಿಗೆ ಅವ್ನಿಗೆ ಅಷ್ಟೊಂದು ಬಯ್ದಿದೀರ! ನಾವೇನು ನಿನ್ ಸರ್ವೆಂಟ್ಸಾ?” ನನ್ನ ಮುಖ ಕೆಂಪಾಗಿ ತುಟಿಗಳು ಅದುರುತ್ತಿದ್ದವು.

ನನ್ನ ಏರುದನಿ ಕೇಳಿ ಮಿಕ್ಕ ಸ್ಟಾಫ್‌ಗಳು ಕ್ಯಾಬಿನ್ನಿನತ್ತ ಬಂದಿದ್ದರು. ಪಕ್ಕದಲಿ ಆ ಹುಡುಗ, ‘ಸರ್ ಬಿಡಿ ಸರ್, ಬಿಡಿ ಸರ್, ಬೇಡ’ ಅಂತ ಗೋಗರೆಯುತ್ತಿದ್ದರೆ ನಾನು ಧಿಗ್ಗಧಿಗ್ಗ ಎಗರಾಡಿದ್ದೆ. “ಯು ವಿಲ್ ಬಿ ಫೈಯರ್ಡ್‌, ಯು ಸ್ಟುಪಿಡ್” ಬಾಸ್ ತಡೆಯಲಾರದೆ ಕಿರುಚಿದ್ದ. “ಮೈ ಫೂಟ್” ಎಂದು ಹೊರಬಂದವನನ್ನು ಗೆಳೆಯರು ತಡೆದಿದ್ದರು. “ಮುಠ್ಠಾಳನಂತೆ ಆಡಬೇಡ್ವೋ.., ಯಾಕೆ ಎಲ್ಲದಿಕೂ ಎಗರಾಡ್ತೀಯ. ಏನೋ ಅವನೊಂದು ಮಾತು ಹೆಚ್ಚೇ ಅಂದ ಬಿಡೂಂತ ಬಿಡೋದು ತಾನೆ? ಒಂದ್ವರ್ಷದಲಿ ಮೂರು ಕಡೆ ಕೆಲಸ ಚೇಂಜ್ ಮಾಡಿದ್ದೀಯ. ಹಿಂಗಾದ್ರೆ ಹೆಂಗೋ? ಫ್ಯಾಮಿಲಿ ನೋಡ್ಬೇಡ್ವಾ ನಾವು? ಸಮಾಧಾನ ತಗೊಳ್ಳೋ” ಅಂದಿದ್ದರು. ಅವರ ಕಡೆಗೆ ಒಂದು ನಿಕೃಷ್ಟ ನಗೆ ಎಸೆದು ಬಂದವನು ಸೀದ ಮನೆಯತ್ತ ಹೊರಟಿದ್ದೆ. ಆ ಕನ್ನಡವಿರೋಧಿ ಬಾಸ್‌ನ ವಿರುದ್ಧ ಏನಾದರೂ ಮಾಡಬೇಕು ಮತ್ತು ಏನು ಮಾಡಬೇಕು ಅನ್ನು ಪ್ಲ್ಯಾನೊಂದನ್ನು ಮನಸಿನಲೇ ಬಿಡಿಸಿಕೊಳ್ಳುತ್ತಾ ಮನೆ ಸೇರಿದಾಗ ಪರಿಮಳ ಶಾಪಿಂಗ್ ಹೋಗಲೆಂದು ಲಿಸ್ಟ್ ರೆಡಿ ಮಾಡ್ತಿದ್ದಳು. ಅವಳು ‘ಏನು ಬೇಗ ಬಂದದ್ದು’ ಅಂತ ಕೇಳಲಿಲ್ಲ. ವಿಷಯ ತಿಳಿದಿದ್ದರೆ ಅವಳೂ ಹೀಗೇ ಮುಟ್ಠಾಳ ಅಂತಿದ್ದಳೋ ಏನೋ! ಬಹುಶಃ ಇಲ್ಲ. ಯಾಕೆಂದರೆ ಅವಳು ನನ್ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಹಾಗೆ ನೋಡಿದರೆ ನನ್ನ ಈ ಹೋರಾಟ ಗುಣವನ್ನೇ ಅವಳು ಬಹುವಾಗಿ ಮೆಚ್ಚಿದವಳು. ಅಂಥದ್ದರಲ್ಲಿ ಇದು! ಈ ತುಚ್ಛ ಪ್ರಾಣಿ, ನನ್ನದೇ ಮನೆಯೊಳಗೆ, ನನ್ನೆದುರೇ ಕೂತು ನನಗೆ ಮುಠ್ಠಾಳ ಅನ್ನುತಿದೆಯೆಂದರೆ! ಮೈ ಗಾಡ್! ಇದನ್ನು ಇಷ್ಟೊಂದು ಮುಂದುವರಿಯಲು ಬಿಟ್ಟಿದ್ದು ಮುಟ್ಠಾಳತನವಲ್ಲದೆ ಮತ್ತೇನು?!

ನಾನು ಒಡೆದು ಬಿದ್ದ ವೇಸಿನ ಚೂರನ್ನೆತ್ತಿ ಅದರತ್ತ ಬಲವಾಗಿ ಎಸೆದೆ. ಅದು ಗೋಡೆಗೆ ತಗುಲಿ ಗೋಡೆಯ ಕಣ್ಣಿಂದ ರಕ್ತ ಸೋರತೊಡಗಿತು. ತನ್ನ ಮೇಲೆ ಬೀಳಬಹುದಾಗಿದ್ದ ವೇಸಿನ ಏಟನ್ನು ಸರಕ್ಕನೆ ತಲೆತಿರುಗಿಸಿ ತಪ್ಪಿಸಿಕೊಂಡ ಅದೀಗ ಗಹಗಹಿಸಿ ನಗತೊಡಗಿತು. “ಇದಕ್ಕೇ ನಾ ನಿನ್ನ ಮುಟ್ಠಾಳ ಅಂದದ್ದು. ಹೀಗೆ ಸಣ್ಣ ಸಣ್ಣದಕ್ಕೂ ಓವರ್ ರಿಯಾಕ್ಟ್ ಮಾಡೋದನ್ನ ಮೊದಲು ನಿಲ್ಲಿಸು.” ಹಾಗನ್ನುತ್ತ ಅದು ಗೋಡೆಯಿಂದ ಹನಿಯುತ್ತಿದ್ದ ರಕ್ತವನ್ನು ವ್ಯವಧಾನದಿಂದ ನೆಕ್ಕಿ ಚಪ್ಪರಿಸಿ ಕಣ್ಣು ಮಿಟುಕಿಸಿತು. ನನಗೆ ಹೊಟ್ಟೆ ತೊಳಸಿ, ತಲೆ ಧಿಮ್ಮೆಂದಿತು. ಇದರ ಮಾತು ಕೇಳದ ಹೊರತು ಬಿಡುಗಡೆಯಿಲ್ಲವೇನೋ ಅನಿಸಿ ನಿಸ್ಸಹಾಯನಂತೆ ನಾನು ಗೋಡೆಗೆ ಒರಗಿ ಕುಳಿತು ಅದರತ್ತ ನೋಡಿದೆ. ಅದು ಚಾಣಾಕ್ಷ ಜೀವಿ. ನನ್ನ ನೋಟ, ನಿಲುವು, ಬಾಡಿಲ್ಯಾಂಗ್ವೇಜ್ ಎಲ್ಲವನ್ನೂ ಕಣ್ಣಳತೆಯಲೇ ತೂಗಿ ಲೆಕ್ಕ ಹಾಕುತ್ತಿದೆಯೆಂದು ನನಗೆ ಅತೀವವಾಗಿ ಅನಿಸಿತು.

ಇದನ್ನು ನೀನು ಯಾವಾಗಲೋ ಮಾಡಬಹುದಿತ್ತು ಎಂಬರ್ಥದ ನೊಟವೊಂದನು ನನ್ನೆಡೆಗೆ ತೂರಿ ಅದು ಶುರು ಮಾಡಿತು.”ಇಲ್ಲಿ ಕೇಳು, ಸುಖವಾಗಿರಲು ನೀನು ಮಾಡಬೇಕಿರೋದು ಐದೇ ಐದು ಸಣ್ಣ ಕೆಲಸಗಳು ಅಷ್ಟೇ..” ಎಂದು ಅರೆಕ್ಷಣ ನಿಲ್ಲಿಸಿ ಮುಂದುವರೆಸಿತು.

“ನಂ1. ನಿನ್ನ ಕಣ್ಣುಗಳನ್ನ ನಿನ್ನ ಸ್ವಂತದ ಕೆಲಸಕೆ ಬಿಟ್ಟರೆ ಬೇರೇನಕ್ಕೂ ಬಳಸಬೇಡ. ಏನಾದರೂ ಕಂಡು ನಿನಗೆ ಬೇಸರವಾಗಿದೆಯೆಂದರೆ ಅದನ್ನ ಅವಶ್ಯ ಮರಳಿ ನೋಡಬೇಡ.

ನಂ2. ನಿನ್ನ ಕಿವಿಗಳನು ಆಗುವುದಾದರೆ ಮುಚ್ಚಿಬಿಡು. ಇಲ್ಲ ಅದರಲ್ಲಿ ಎರಡು ಭಾಗ ಮಾಡಿ, ನಿನಗೆ ಕೊಟ್ಟ ಸಲಹೆಗಳನ್ನ ಪಾಲಿಸುವುದಕೆ ಮಾತ್ರವೇ ಬಳಸು. ಮಧ್ಯರಾತ್ರಿ ಶಬ್ದಗಳು ಬಹುತೇಕ ಅಡಗಿದ ವೇಳೆಯಲಿ ಕಿವಿತೆರೆದು ಸುಮಧುರ ಸಂಗೀತ ಕೇಳುತ. ಈ ಟೆಕ್ನಿಕ್ ಅನ್ನು ನೀ ಜನಜಂಗುಳಿಯೊಳಗೂ ಬಳಸಬಹುದು. ಕಿವಿಗಳಿಗೆ ಇಯರ್ ಫೋನ್ ಹಾಕ್ಕೋಬಿಡು. ಆಗ ನಿನಗೆ ಅನಾವಶ್ಯಕ ಮಾತುಗಳು ಕೇಳಿಸುವುದಿಲ್ಲ. ನಿನ್ನಂಥವನಿಂದ ಇದ್ದಕ್ಕಿದ್ದಂತೇ ಹೀಗೆ ಅರೆಗಿವುಡಾಗುವುದು ಕಷ್ಟ. ಸ್ವಲ್ಪ ದಿನ ಹೋದರೆ ಅಭ್ಯಾಸವಾಗುತ್ತದೆ.

ನಂ3. ನಿನ್ನ ಕೈಗಳನು ನಿನ್ನ ಸ್ನಾನ ಪಾನ, ಹೆಂಡತಿ, ಮನೆ ಕುಟುಂಬದ ಕೆಲಸಗಳನು ಹೊರತುಪಡಿಸಿ ಆಫೀಸಿನಲಿ ನಿನಗೆ ಕೊಟ್ಟ ಕೆಲಸ ಮಾಡುವುದಕೆ ಮಾತ್ರ ಬಳಸು. ಉಳಿದವರ ಕೆಲಸಕೆ ಈ ಕೈಗಳನು ಬಳಸಬೇಡ.

ನಂ 4. ನಿನ್ನ ಬಾಯಿ ಭದ್ರ ಮಾಡು. ಅವರಿವರ ಸಮಸ್ಯೆಗಳಿಗೆ ಬಾಯಿ ಕೊಡುವುದನ್ನ ನಿಲ್ಲಿಸು. ನಿನಗೆ ಕೇಳಿದ ಸಭ್ಯ ಪ್ರಶ್ನೆಗೆ ಸಭ್ಯವಾಗಿ ಉತ್ತರಿಸಲು ಮತ್ತು ಹೌದೆಂದು ಹೇಳಲು ಬಳಸಿದರೇ ಸಾಕಾಗಬಹುದು. ಸುಮ್ಮನಿರಲಾರದೆ ಬಾಯಿ ನೊಂದರೆ ಹಾಡುಗಳನ್ನ ಗುನುಗು, ಇಲ್ಲ ಬಾಯಿಗೆ ಚ್ಯೂಯಿಂಗ್ ಗಮ್ ಹಾಕಿಕೋ. ಇದರಿಂದ ಬಾಯಿಯ ದುರ್ವಾಸನೆ ಕೂಡ ಕಡಿಮೆಯಾಗಿ, ಒಳ್ಳೆ ಫೇಶ್ಯಲ್ ಎರ್ಕ್ಸ್ರ್‌ಸ್ ಆಗುತ್ತೆ.

ಇನ್ನಿದು ಕೊನೇದು, ಮುಖ್ಯವಾದ್ದು. ಕೇಳು, ನಿನ್ನಮನಸನ್ನು ಹೆಪ್ಪುಗಟ್ಟಿಸು. ಎಲ್ಲೋ ಆಳದಲ್ಲಿ ಒಂದಿಷ್ಟು ನೀರಿದ್ದರೂ ನಡೆದೀತು. ಆದರೆ ಅಲ್ಲಿ ಏಳುವ ಯಾವ ಕಂಪನವೂ ಹೊರಗೆ ಕೇಳಿಸಬಾರದು. ನಿನ್ನ ಸಂವೇದನೆಗಳೇನಿದ್ದರೂ ನಿನ್ನೊಳಗೇ ಇರಬೇಕು. ನಿನ್ನ ಮನಸಿನ ಮೇಲೆ ದುಷ್ಟರು, ನಾಯಿ ಬೆಕ್ಕು ಕೋಳಿ ಎಲ್ಲ ನಡೆದಾಡುವಂತಿರಬೇಕು. ವಾಹನಗಳು ಕೂಡ ಓಡಾಡಬಹುದಾದಷ್ಟು ಗಟ್ಟಿ ಮತ್ತು ಶೀತಲವಾಗಿರಬೇಕು. ಅಲ್ಲಿ ಯಾವ ಅನವಶ್ಯಕ ಕನಸುಗಳು, ಕಸಗಳು ಬೆಳೆಯಬಾರದು… ಇಷ್ಟೇ!!!

ಇದನ್ನು ನಿರ್ಲಕ್ಷಿಸುವುದರಲ್ಲಿ ಅರ್ಥವಿಲ್ಲ ಎನಿಸಿ ನಾನು ಸರಕ್ಕನೆ ತಿರುಗಿ ಹೂದಾನಿಯೆತ್ತಿ ಅದರ ತಲೆಮೇಲೆ ಹೊಡೆದೆ, ಪ್ಚ್‌… ಅದು ಮೂರು ಹೋಳಾಯ್ತು. ವಾರದ ಹಿಂದೆ ಕೊಂಡಿದ್ದ ಬೆಲೆಬಾಳುವ ಹೂದಾನಿಯಾಗಿತ್ತದು. ಪರಿಮಳ ಇಷ್ಟಪಟ್ಟು ಕೊಂಡಿದ್ದಳು. ಅದರಲ್ಲಿ ಚಿಕ್ಕಚಿಕ್ಕ ಸೇವಂತಿಗೆ ಹೂವಿರಿಸಿ ಗರಿಕೆ ಹುಲ್ಲನ್ನು ಇಟ್ಟು ಜೋಡಿಸಿದ್ದಳು. ಅದು ಹಾಗೆ ಒಡೆದು ಚೂರಾಗಿರುವುದನ್ನು ಕಂಡು ನನ್ನ ಹೃದಯವೇ ಒಡೆದಷ್ಟು ನೋವಾಯ್ತು. ಆದರೆ ಅದರ ತಲೆಗೆ ಖಂಡಿತ ಯಾವ ಏಟೂ ತಗುಲಿರಲಿಲ್ಲ.

ಇಷ್ಟಿದ್ದರೆ ನೋಡು ನೀನು ಎಲ್ಲೋ ಹೋಗಿಬಿಡುತ್ತಿ. ಯಾಕೆ ಸುಮ್ಮನೆ ಎಲ್ಲ ವಿಷಯಗಳನ್ನೂ ಹೃದಯಕ್ಕೆ ಸೇರಿಸಿ ಹೊಲಿದುಕೊಂಡು ನೋಯುತ್ತೀಯ?”

ಇಷ್ಟು ಮಾತಾಡಿದ ಮೇಲೆ ಬಾಲ್ ಈಸ್ ಇನ್ ಯುವರ್ ಕೋರ್ಟ್‌ ಎಂಬಂತೆ ಅದು ಮೇಜಿನಮೇಲೆ ಇದ್ದ ಹಾಲಿನ ಗ್ಲಾಸಿನ ಮುಚ್ಚಳ ಸರಿಸಿ ಹಾಲಿಗೆ ಬಾಯಿಟ್ಟಿತು.

ಅದರ ಮಾತುಗಳು ಕಾದ ಎಣ್ಣೆಯಂತೆ ನನ್ನ ನೆತ್ತಿಯಮೇಲೆ ಇಳಿದವು.

“ಥತ್, ನಿನ್…. ನಿನ್ನಾ.., ಬರ್ತಿರೋ ಸಿಟ್ಟಲ್ಲಿ ನಿನ್ನೇನು ಮಾಡೋದೂಂತ ನಂಗೆ ತಿಳೀತಿಲ್ಲ… ನ್ಯಾಯಾಂದ್ರೆ ನ್ಯಾಯ ಇರ್ಬೇಕು. ನಂಗೆ ಅವ್ನ್ಯಾರ ಅಪ್ಪನೇ ಆಗಿರ್ಲಿ, ಅನ್ಯಾಯ ಮಾಡಿದ್ರೆ ನಾ ಕೇಳೋನೇ! ನಿನ್ ಈ ಹುಚ್ಚು ಅಡ್ವೈಸ್ ಕೇಳ್ಕೊಂಡು ಬದ್ಕ್‌ಬೇಕಾದ ದರಕಾರೇನೂ ನಂಗಿಲ್ಲ. ತೊಲಗಿಲ್ಲಿಂದ” ನಾನು ಹೆಚ್ಚು ಕಮ್ಮಿ ಕಿರುಚಿದೆ. ನನ್ನ ಮಾತಿಗೆ ಅದು ಯಾವ ಪ್ರತಿಕ್ರಿಯೆ ತೋರದೆ ಹಾಲು ಕುಡಿದು ಮುಗಿಸಿ ನಿಧಾನಕೆ ಅಲ್ಲಿಂದಿಳಿದು ನನ್ನ ಬಳಿ ಬಂತು. ಅದನ್ನೆತ್ತಿ ಕಾಲಲ್ಲಿ ಝಾಡಿಸಿ ಒದೆಯುವಾಂತ ಕಾಲೆತ್ತಿದರೆ ಅದೇ ಫಕ್ಕನೆ ನೆಗೆದು ನನ್ನ ಎದೆಯ ಮೇಲೆ ಕಾಲೂರಿತು. ಅದರ ಕಾಲುಗಳು ಹಗೂರಾಗಿ ನನ್ನ ಮೇಲೆ ಇಳಿದ ಮೇಲೆ. ಅದರ ಭಾರದ ಅರಿವು ನನಗೆ ನಿಲುಕಿ ಅದರ ಭಾರಕೆ ಕಣ್ಣು ಕತ್ತಲಿಟ್ಟಿತು. ನನ್ನ ಕಣ್ಣುಗಳನ್ನು ತೀಕ್ಷ್ಣವಾಗಿ ನೋಡುತ್ತ ಅದು ನನ್ನನ್ನು ಹಿಂದೆ ತಳ್ಳುತ್ತಿದ್ದರೆ ಆ ಕ್ಷಣ ನನಗೆ ಹೇಗೆ ತಪ್ಪಿಸಿಕೊಳ್ಳಬೇಕೆಂಬುದೇ ಹೊಳೆಯದೆ ನನ್ನ ಕೈ ಕಾಲುಗಳು ಮರಗಟ್ಟಿದವು. ಅದು ನಿಧನಿಧಾನವಾಗಿ ನನ್ನ ಆಕ್ರಮಿಸಿಕೊಳ್ಳುತ್ತಿರುವುದು ಅರಿವಾಗಿ ನಾನು ಬಿಡಿಸಿಕೊಳ್ಳಲು ಹೆಣಗಿದೆ. ಅದು ಹುಷ್ ಎಂದು ಬಾಯರಳಿಸಿ ಬೆದರಿಸಿ ನನ್ನ ತಲೆಯನ್ನು ಒರಟಾಗಿ ಒಂದು ಪಕ್ಕಕ್ಕೆ ತಿರುಗಿಸಿತು. ಅಷ್ಟರಲ್ಲಿ ನಾನು ಸಂಪೂರ್ಣವಾಗಿ ಅದರ ಪಾಶಕ್ಕೆ ಸಿಲುಕಿದ್ದೆ.
ಅಲ್ಲಿ ನಾ ಕಾಣುವುದೇನು!

ಅದೊಂದು ದೊಡ್ಡ ಬಹುದೊಡ್ಡ ಸಂತೆಯಾಗಿತ್ತು! ಅಲ್ಲಿ ಬಡವಾದ ದೇಹವುಳ್ಳ. ಕಣ್ಣಿಂದ ರಕ್ತ ಒಸರುತ್ತಿರುವ ಹಲವಾರು ಮಂದಿ ಅಲ್ಲಿ ಆಗಸವನ್ನು ನೊಡುತ್ತ ಏನೇನೋ ಹಳಹಳಿಸುತ್ತ ಕುಳಿತಿದ್ದರು. ಕೆಲವರ ಕೈ ಕಾಲುಗಳು ಊನವಾಗಿದ್ದವು. ಕೆಲವರ ಕಣ್ಣುಗಳಿನ್ನೂ ಹೊಳಪಿತ್ತು, ಆದರೆ ಅವರ ಕೈ ಕಾಲುಗಳನ್ನು ಕಟ್ಟಲಾಗಿತ್ತು. ಬಿಚ್ಚಲು ಹೋದವರ ಕಣ್ಣಿಗೆ ಈಟಿ ಚುಚ್ಚಲು ಅಲ್ಲೊಂದು ಮುಖವಾಡ ಕಟ್ಟಿಕೊಂಡ ಪಡೆಯೇ ಸಜ್ಜಾಗಿತ್ತು. ಅಲ್ಲೇ ಪಕ್ಕದಲಿ ಇನ್ನೂ ಬಂಧನಕೆ ಸಿಲುಕದ ಹೋರಾಟಗಾರರು ಗಂಟಲೊಣಗಿಸಿಕೊಂಡು ಹೋರಾಡುತ್ತಿದ್ದರು. ಕೆಲವರು ದೂರದಲ್ಲಿ ನಿಂತು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತ ಕಣಕ್ಕಿಳಿದು ಗುದ್ದಾಡುತ್ತಿರುವವರ ಕಂಡು ಸಂಭ್ರಮಿಸುತ್ತಿದ್ದರಲ್ಲ. ಕೆಲವರು ಗೆಲುವು ನಮ್ಮದೇ ಎಂದು ನಂಬಿ ಕೈ ಬಿಗಿದು ಕುಳಿತ್ತಿದ್ದರೆ ಕೆಲವರು ತಮ್ಮ ಪಕ್ಕ ಕುಳಿತವನ್ನನ್ನು ನಾಜೂಕಾಗಿ ಯುದ್ಧ ಕಣಕ್ಕೆ ತಳ್ಳಿ ಅವರ ಪರಿಪಾಟಲು ನೋಡಿ ಇದೊಂದು ಹಾಸ್ಯ ನಾಟಕವೇನೋ ಎಂಬಂತೆ ಬಿದ್ದು ಬಿದ್ದು ನಗುತ್ತ ಲೇವಡಿಯಾಡುತ್ತಿದ್ದರು. ಇವರೆಲ್ಲರನೂ ಮೀರಿದ ದೊಡ್ಡ ಗುಂಪೊಂದು ಈ ಯಾವುದಕೂ ಸ್ಪಂದಿಸದೆ ನಿರಾಳವಾಗಿ ಬಣ್ಣಗಳ ಆಟ ಆಡುತ್ತಿದ್ದರು. ಯಾರು ಯಾರನ್ನೋ ತಬ್ಬಿ, ಯಾರನ್ನೋ ತುಳಿದು, ಯಾರನ್ನೋ ಮುದ್ದಿಸಿ, ಯಾರಿಗೋ ಹೊಡೆದು… ಬಣ್ಣಗಳ ಆಟದಲ್ಲಿ ಇವೆಲ್ಲ ಸಣ್ಣ ಪ್ರಮಾದಗಳಷ್ಟೇ ಆಗಿ ಕ್ಷಮಿಸಲ್ಪಟ್ಟು ಆಟದ ರೋಚಕತೆ ಮುಂದುವರೆದೇ ಇತ್ತು. ಪಕ್ಕದಲಿ ಮತ್ತಷ್ಟು ಜನ ಗಾಳಿಪಟಗಳನ್ನು ಹಾರಿಸುತ್ತ ಒಬ್ಬರೊಬ್ಬನು ಆಟದಲ್ಲಿ ಮುಗಿಸುತ್ತ, ಕುಚೋದ್ಯದಲಿ ನಗುತ್ತ, ಅಸೂಯೆ ಪಡುತ್ತ ಸೋಲದೆ ಮತ್ತೆ ಮತ್ತೆ ಪಟ ಹಾರಿಸುತ್ತಿದ್ದರು. ಅಲ್ಲಿ ಹರಡಿದ್ದ ಅಸಂಖ್ಯಾತ ಎಳೆಯ ಕಣ್ಣುಗಳು ಇವನ್ನೆಲ್ಲ ಬೆರಗಿನಿಂದ ನೋಡುತ್ತ ಒಳಗಿಳಿಸಿಕೊಂಡು ನಾಳೆಗಳನು ನೇಯುತ್ತಿದ್ದವು. ಮತ್ತಲ್ಲೇ ಹಲವರು ಈ ಅಗಾಧ ಸಂತೆಯೊಳಗೆ ದಾರಿ ತಪ್ಪಿ ಎತ್ತ ಹೋಗುವುದೆಂದೇ ತಿಳಿಯದೆ ತಳ್ಳಾಡಲ್ಪಟ್ಟು, ಬೀದಿಯಲಿ ಬಿದ್ದಿದ್ದರು. ಕೆಲವರು ಅವರನ್ನು ತುಳಿಯುತ್ತ ಸಾಗಿದ್ದರೆ ಮತ್ತೆ ಕೆಲವರು ಅವರನ್ನು ದಾಳವಾಗಿಸಿಕೊಂಡು ಪಗಡೆಯಾಡುತ್ತಿದ್ದರು. ಅಲ್ಲೊಂದು ಅಟ್ಟಣಿಗೆಯಿತ್ತು. ನೋಡಿದರೆ ಅದರ ಮೆಟ್ಟಿಲುಗಳನ್ನು ಮನುಷ್ಯನ ಅಸ್ಥಿಪಂಜರದಿಂದ ಕಟ್ಟಲಾಗಿತ್ತು. ಸೋಜಿಗವೆಂದರೆ ಅದನ್ನು ಕಟ್ಟುತ್ತಿದ್ದವರೂ ಮನುಷ್ಯರೇ ಆಗಿದ್ದರು. ಅದರ ಮೇಲೆ ವಿಲಾಸವಾಗಿ ಕುಳಿತಿದ್ದವರಾದರೂ ಮನುಷ್ಯರೇ ಆಗಿದ್ದರು.

ಅದಲ್ಲದೆ ಆ ಸಂತೆಯಲಿ ನಾನು ಮೂರು ಮುಖ್ಯ ಸಂಗತಿಗಳನ್ನು ಕ್ಲೋಸ್‌ಅಪ್ ಶಾಟಿನಲಿ ನೋಡಿದೆ. ಅವರೆಲ್ಲ ನನ್ನ ಪರಿಚಯದವರೇ ಆಗಿದ್ದರು. ಒಬ್ಬ ಆ ಹುಡುಗ, ಆಫೀಸಿನವನು. ಅವನು ಬಾಸ್‌ನ ಕೈ ಕಾಲಿಗೆ ಬಿದ್ದು, ಅಪಾಲಜಿ ಕೇಳಿ ಏನೂ ಆಗಿಯೇ ಇಲ್ಲವೆಂಬಷ್ಟು ಸಹಜವಾಗಿ ಕೆಲಸದಲ್ಲಿ ಮುಂದುವರೆದಿದ್ದ. ಇನ್ನು ಇನ್ನೊಬ್ಬಾಕೆ ನನ್ನ ಹಿರಿಯ ಗೆಳೆಯನ ಮಡದಿ. ಸರಕಾರಿ ಕೆಲಸದಲ್ಲಿದ್ದ ಅವನು ಇನ್ನೇನು ಒಂದು ವಾರದಲ್ಲಿ ರಿಟೈರ್ ಆಗುವವನಿದ್ದ. ಸಧ್ಯಕೆ ಆರೋಗ್ಯ ತಪ್ಪಿ ತುಂಬ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲಿ ಅಡ್ಮಿಟ್ ಆಗಿದ್ದ. ಆತನ ಮಡದಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು, ‘ದೇವರೇ ನನ್ನ ಗಂಡನನು ಹೇಗಾದರೂ ಮಾಡಿ ಉಳಿಸಿಕೊಡು, ಇಲ್ಲ ಅವನು ಸಾಯುವುದೇ ನಿನ್ನ ಚಿತ್ತವಾದಲ್ಲಿ ಈ ವಾರದೊಳಗೇ ಅವರನ್ನ ಕರಕೊಂಡು ಬಿಡು; ನಮ್ಮ ಮಗನಿಗಾದರೂ ಕೆಲಸ ಸಿಗುತ್ತೆ.’

ಇನ್ನೊಂದು ನನ್ನ ಮಡದಿ ಪರಿಮಳ. ಅವಳು ನನ್ನ ಬಾಸ್‌ಅನ್ನು ಭೇಟಿಯಾಗಿ ನನ್ನನ್ನು ಮರಳಿ ಕೆಲಸಕ್ಕೆ ಕರೆಯುವಂತೆ ವಿನಂತಿಸಿದ್ದಳು. ಆ ಭರದಲ್ಲಿ ನಾನು ಎಷ್ಟು ಮುಗ್ಧ ಅಥವಾ ಮೂರ್ಖನೆಂದೂ, ನನ್ನನ್ನು ಕಟ್ಟಿಕೊಂಡು ಅವಳು ಪಾಡು ಪಡುತ್ತಿರುವಳೆಂದೂ ಬಣ್ಣಿಸಿ ಹೇಳಿದ್ದಳು. ಬಾಸ್ ಅವಳ ಮಾತುಗಳನ್ನು ಕರುಣೆಯಿಂದ ಕೇಳಿಸಿಕೊಳ್ಳುತ್ತಿರುವವನಂತೆ ಕುಳಿತು ಕಣ್ಣಂಚಿಂದ ಅವಳ ಮೊಲೆಗಳನ್ನೇ ನೋಡುತ್ತಿದ್ದ. ಇದು ಅವಳಿಗೆ ತಿಳಿಯುತ್ತಿದ್ದರೂ ಅವಳದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪಾಪದವಳಂತೆ ಕುಳಿತಿದ್ದಳು. ನಾನಂತೂ ಕೆಲಸ ಹೋದ ವಿಚಾರ ಅವಳಿಗೆ ಹೇಳಿರಲಿಲ್ಲ. ಅಂದರೆ ಅವಳಿಗೆ ನನ್ನ ಗೆಳೆಯ ರೋಹಿತನೇ ಹೇಳಿರಬೇಕು, ಇಲ್ಲವಾದರೆ ಅವನೇಕೆ ಅವಳನ್ನು ಬೈಕಿನಲಿ ಮನೆತನಕ ಡ್ರಾಪ್ ಮಾಡಿರುತ್ತಿದ್ದ? ಅವಳು ಬೈಕಿಳಿದು ಅವನ ಕೈ ಕುಲುಕಿದ್ದಳು. ಅವರಿಬ್ಬರೂ ಅದೇ ಭಂಗಿಯಲಿ ಸ್ವಲ್ಪ ಹೆಚ್ಚುಹೊತ್ತೇ ನಿಂತಿದ್ದರು. ಆಗ ಅವರ ಕಂಗಳು ಹೊಳೆಯುತ್ತಿದ್ದವು.
ಅದನ್ನೆಲ್ಲ ನೋಡುತ್ತ ನೋಡುತ್ತ ನನ್ನ ಕಂಗಳು ಮಂಜಾದವು.

“ಇದೆಲ್ಲ ಏನು?..” ನಾನು ಕನಲಿ ಕೇಳಿದೆ.

“ಇದು ವ್ಯವಸ್ಥೆ.” ಅದು ತನ್ನ ಪಂಜಗಳಿಂದ ನನ್ನ ತಲೆನೇವರಿಸಿತು.

“ಎಂಥಾ ದುಷ್ಟ ಮಾತು! ಈ ಅವ್ಯವಸ್ಥೆಯನು ವ್ಯವಸ್ಥೆಯೆನ್ನುತ್ತೀಯಲ್ಲ! ತಪ್ಪು…! ಬಿಡು, ನಾನು ಈ ಅವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಆ ಈಟಿಗರ ಗುಂಡಿಗೆಗೆ ಭರ್ಜಿಯಿಟ್ಟು ಕೊಲ್ಲಬೇಕು. ತಳ್ಳಾಚೆ.., ತಪ್ಪು ನಡೆಯುತಿದೆ ಇಲ್ಲಿ” ನಾನು ಬಡಬಡಿಸಿದೆ. ಬಿಡಿಸಿಕೊಳ್ಳಲು ಹೆಣಗಿದೆ. ಅದು ತನ್ನ ಹಿಡಿತ ಬಿಗಿಗೊಳಿಸಿ ಗಹಗಹಿಸಿತು. “ನಿನ್ನ ಸಮಸ್ಯೆ ಇದೇ. ನೀನು ಸರಿ ಮತ್ತು ತಪ್ಪು ವಿರುದ್ಧ ಪದಗಳೆಂದು ತಿಳಿದೀಯ, ಆದರೆ ಅವು ಸಮನಾರ್ಥಕ ಪದಗಳು.”

ಅದರ ಮಾತು ಕೇಳಿ ನನ್ನ ನೆತ್ತಿ ಬಿಸಿಯೇರಿ ಕಿವಿಯಲ್ಲಿ ನೆತ್ತರಾಡಿತು. ಅದು ನಗುತ್ತ ಮೀಸೆಯರಳಿಸಿ ನನ್ನ ಕಿವಿಯತ್ತ ಮುಖವಿಟ್ಟಿತು. ನಾನು ಜೀವದ ಬಲವೆಲ್ಲ ತೊಟ್ಟು ಅದನ್ನು ತಳ್ಳಿ ಓಡತೊಡಗಿದೆ. ಅದು ಹಠಾತ್ತನೆ ದೈತ್ಯವಾಗಿ ಬೆಳೆದು ಬೆನ್ನಟ್ಟಿತು. ಅರೆ! ಅದಕ್ಕೆ ರೆಕ್ಕೆ ಮೂಡಿ ಹಾರತೊಡಗಿತು. ಅದರ ಕಣ್ಣುಗಳಿಂದ ಬೆಂಕಿ ಉಕ್ಕುತ್ತ, ಕೊಕ್ಕುಗಳು ಮೂಡಿ ಹೊಳೆಯುತ್ತ, ಅದರ ರೆಕ್ಕೆ ಅಗಲವಾಗಿ ಆಗಸದಲಕ್ಕೂ ಚಾಚುವಂತೆ ಬೆಳೆಯತೊಡಗಿದವು.


ಆಗ ನೆನಪಾಯ್ತು. ಮೊನ್ನೆ ಆ ಬಾಹುಗಳ ನೇಣಿಗೆ ಬಲಿಯಾದವರನ್ನು ಕಂಡವರು ಹೇಳುತ್ತಿದ್ದರು. ಆಗಸದಗಲಕ್ಕೂ ಆ ಅದೃಶ್ಯ ಬಾಹುಗಳು ನೆರಳಿನಂತೆ ಹರಡಿವೆ. ಅದರಡಿಯಲ್ಲೇ ನಾವು ಬದುಕುತ್ತಿದೇವೆ. ಅದನ್ನೇ ನೆರಳೆಂದು ತಿಳಿದಿದ್ದೇವೆ!

*****

ಏಕತಾನತೆಯಿಂದ ಬಳಲುವುದಕ್ಕಿಂತ ಅದರಿಂದ ತಪ್ಪಿಸಿಕೊಳ್ಳುವುದು ಸಾವಿರ ಪಾಲು ಲೇಸು. ಬಹುಶಃ ಕಥನದ ಹುಟ್ಟು ಏಕತಾನತೆಯನ್ನು ಮುರಿಯಲೋಸುಗವೇ ಹುಟ್ಟಿಕೊಂಡಿದ್ದು ಅನಿಸುತ್ತದೆ. ಆದರೂ ಕಥನ ಅಷ್ಟಕ್ಕೇ ನಿಲ್ಲುವುದಿಲ್ಲ. ಕಂಡದ್ದು, ಕೇಳಿದ್ದು ಒಳಗೆ ಸೇರಿಕೊಂಡು ಏನೇನೋ ವ್ಯಾಪಾರ ನಡೆಸುತ್ತಿರುತ್ತವೆ. ಒಂದರೊಡನೊಂದು ಕಾದಾಡಿ ಮತ್ತೇನೋ ಸೃಷ್ಟಿಯಾಗುತ್ತಿರುತ್ತದೆ. ಅದರ ರೂಪವೂ ಮೆಟಮರ್ಫಸಿಸ್ಸಿಗೆ ಒಳಗಾಗುತ್ತಿರುತ್ತದೆ. ಅದಕ್ಕೊಂದು ಭಾಷೆಯ ಎರಕ ಹೊಯ್ಯಲು ನಡೆಸುವ ಪ್ರಕ್ರಿಯೆಯೇ ಬರವಣಿಗೆ ಅಂದುಕೊಂಡಿದ್ದೇನೆ. ಎಚ್ಚೆಸ್ಸಾರ್ ನನ್ನ ಮನಕ್ಕಿಳಿದಂತೆ ಗುರುತಿಸಿರುವಂತೆ ನನ್ನನ್ನು ಕಾಡುವುದು ಏಕತಾನತೆಯ ಜೊತೆಗೆ ಆವಿಗೆಯೊಳಗಿನ ಮಡಕೆಯ ಹಾಗೆ ಉರಿಕಾಣಿಸದೆ ಬೇಯಿಸುವ ದುಃಖ. ಕೊನೆಗೂ ಏಕತಾನವಾಗಿರುವುದು ಬದುಕೋ ಅಥವಾ ನಾವು ಬದುಕನ್ನು ತೆಗೆದುಕೊಳ್ಳುವ ಬಗೆಗಳೋ ಎನ್ನುವ ತಾತ್ವಿಕ ಪ್ರಶ್ನೆಗೆ ನಾನು ಅನೇಕ ಸಲ ಎದುರಾಗಿದ್ದೇನೆ.
ವಾಸ್ತವದ ಲೋಕವನ್ನು ಗ್ರಹಿಸುವ ಸರಿಯಾದ ಬಗೆ ಎಂಬುದೊಂದುಂಟೇ ಎನ್ನುವುದು ನನಗೆ ಕಾಡುವ ಪ್ರಶ್ನೆಯಾಗಿಯೇ ಉಳಿದಿದೆ. ಲೆಕ್ಕಾಚಾರದ ಬರವಣಿಗೆಯಲ್ಲಿ ನನಗೆ ತೊಡಗಲಾಗುವುದಿಲ್ಲ. ಮನುಷ್ಯನೊಬ್ಬ ಹೊರಗಿನ ಶತ್ರುವನ್ನು ಹೊರಗಷ್ಟೇ ಹೊರುತ್ತಿರುವುದಿಲ್ಲ. ಅವನ ಆಂತರ್ಯವೂ ಆ ಹೋರಾಟದಲ್ಲಿರುತ್ತದೆ. ಸಾಮಾನ್ಯ ಜಗಳಕ್ಕೂ ಬಾಹ್ಯಂತರಾಳಗಳಲ್ಲಿ ಘಟಿಸುವ ಕದನಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಇದರ ತಾತ್ತ್ವಿಕ ಜಿಜ್ಞಾಸೆಯಲ್ಲಿ ಹುಟ್ಟಿದ ಕತೆ ಬಾಹುಗಳು. ಅದರಲ್ಲೂ ವ್ಯವಸ್ಥೆಯಲ್ಲಿನ ಕೊಳಕುಗಳ ಬಗ್ಗೆ ಹೇಸುವ ಮನುಷ್ಯನೊಬ್ಬ ಈ ಪರಿಯ ಕದನದಲ್ಲಿ ತೊಡಗಿಕೊಳ್ಳುವ ವಸ್ತುವನ್ನು ಕಾಲ್ಪನಿಕ ಪ್ರಾಣಿಯ ಬಿಂಬವನ್ನು ಸೃಜಿಸಿ ವಿರ್ವಹಿಸಿದ ಕತೆಯಿದು. ಇಲ್ಲಿ ದುಡಿಸಿಕೊಂಡ ಪ್ರತೀಕವು ಭ್ರಷ್ಟತೆಯನ್ನೇ ಬದುಕುವವರನ್ನು ಎದುರಿಸಲು ಸಿದ್ಧತೆಗೆ ಒದಗುತ್ತದೆ. ಈ ಪ್ರಾಣಿ ಬಗೆಗಣ್ಣ ತಿರುಗಿಸಿ ಲೋಕದ ಅಸಹ್ಯ ವ್ಯಾಪಾರಗಳನ್ನೂ, ಮನುಷ್ಯ ಒಂದಿಲ್ಲೊಂದು ಬಗೆಯಲ್ಲಿ ಸಂಕೋಲೆಗಳಲ್ಲಿ ಬಂಧಿ ಎಂಬ ಕಟುವಾಸ್ತವವನ್ನೂ ತೋರಿಸುತ್ತದೆ.
ಒಂದು ಭಿನ್ನ ಕಥಾನಕವನ್ನಿಲ್ಲಿ ನಾನು ಪ್ರಯತ್ನಿಸಿದ್ದೇನೆ. ಇಲ್ಲಿ ಅವಾಸ್ತವವೂ ವಾಸ್ತವವೂ ಸರಿಯಾಗಿ ಕಲೆತು ತಮ್ಮ ಕಾರ್ಯ ನಿರ್ವಹಿಸಿದ್ದಾವೆ ಎಂದು ನಾನು ನಂಬಿದ್ದೇನೆ. ಅದರಿಂದಲೇ ಇದು ನನ್ನ ಮೆಚ್ಚಿನ ಕತೆ.