ವೇಷ ತೆಗೆಯದೆ ಯುದ್ಧಕ್ಕೆ ಹೊರಡುವ ಉಪಾಧ್ಯಾಯರು, ರಾಮಣ್ಣನ ಮಾತುಕತೆ, ಮಹೇಂದ್ರನ ಚೇಷ್ಟೆ, ಅನಂತ ಪದ್ಮನಾಭರ ನಡುವಿನ ಜಗಳ, ಪಿ ಟಿ ಮಾಸ್ತರ್‌ರ ಗುಪ್ತ ಪ್ರೇಮ, ಮಕ್ಕಳ ಹೋರಾಟದ ಕೆಲವು ಭಾಗಗಳು ಎಲ್ಲವೂ ಇಲ್ಲಿ ಹೈಲೈಟು. ಹಾಗೆಂದು ಚಿತ್ರ ಹಾಸ್ಯಕ್ಕೆ ಸೀಮಿತಗೊಳ್ಳದೆ, ತಾನು ಹೇಳಬೇಕಾದ ಗಂಭೀರ ವಿಚಾರವನ್ನು ಭಾವಪೂರ್ಣವಾಗಿ ಹೇಳುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಸಿನಿಮಾದ ವಿಶ್ಲೇಷಣೆ

ದೇವರನ್ನು ಹುಡುಕುತ್ತಿದ್ದೆ
ಸಣ್ಣ ಮಗುವೊಂದು ಅಮ್ಮನ ಕಣ್ಣನ್ನೇ ದಿಟ್ಟಿಸುತಿತ್ತು
ದೇವರ ಹುಡುಕಲು ಹೋಗಿ ದೇವಬಳಗವೇ ಎದುರಾಯಿತು…..
-ಅನಾಮಿಕ

ಮಕ್ಕಳಲ್ಲಿ ದೇವರನ್ನು ಕಾಣುವುದು ನಮ್ಮ ಮಣ್ಣಿನ ಗುಣ. ಕಾರಣವಿಲ್ಲದಿಲ್ಲ. ಮಕ್ಕಳ ಮನಸ್ಸು, ಕಲ್ಮಶವೇ ಇಲ್ಲದ ನದಿಯಂತೆ, ಕಲೆಗಳೇ ಕುಳಿತುಕೊಳ್ಳದ ಶ್ವೇತ ವಸ್ತ್ರದಂತೆ, ಗಾಯಗೊಳ್ಳದ ಹಾದಿಯಂತೆ, ಮುಳ್ಳುಗಳು ಬೆಳೆಯದ ಕಾಕ್ಟಸ್‌ನಂತಿರುವುದೇ ಈ ಮಾತಿನ ಜನನಕ್ಕೆ ಕಾರಣ. ಮಾಂಸಖಂಡಗಳು ಬೆಳೆಯುತ್ತಿದ್ದಂತೆಯೇ, ಏರುವ ಅರಿಷಡ್ವರ್ಗಗಳು, ಒತ್ತಡ, ಬದುಕಿನ ಅಸ್ಥಿರತೆ ಇವೆಲ್ಲವುಗಳ ಸಂಗಮದಿಂದ ಮಗುವಿನೊಳಗೆ, ಮಾತು ಕೇಳದ ಮೃಗವೊಂದು ಮೂಡಿ ಮನುಷ್ಯರಾಗಲು ಆತ ಸದಾ ತನ್ನೊಳಗೆ ಪೈಪೋಟಿ ನಡೆಸುವಂತೆ ಮಾಡುತ್ತದೆ. ಈ ಬದಲಾವಣೆಗಳು ನೀಡುವ ಅಮಾನುಷ ಭಾವ, ಅಮಾನವೀಯ ಹೊದಿಕೆ, ಮನುಜನಿಗೆ ಮರಳಿ ಬಾಲ್ಯದ ಬಾಗಿಲು ತಟ್ಟುವಂತೆ ಸದಾ ಕುಮ್ಮಕ್ಕು ನೀಡುತ್ತಲೇ ಸಾಗುತ್ತದೆ. ಆದರೆ, ಕಾಲಗಳ ವಾಹನದಲ್ಲಿ ಹಿಂದಣ ನಡೆಯುವ ವ್ಯವಸ್ಥೆಯೇ ಅಲಭ್ಯ. ಹಾಗಾಗಿ, ಮಕ್ಕಳಾಗಿದ್ದಾಗಿನ ಸಮಯ, ಬದುಕು ಪ್ರತಿಯೊಬ್ಬರಿಗೂ ಹೇಳದೆ ನೀಡುವ ಅತ್ಯಮೂಲ್ಯ ಉಡುಗೊರೆ. ಯಾವ ಜಂಜಾಟಗಳ ಜಾಲವೇ ಇಲ್ಲದ ಆ ಸಮಯ ಆನಂದಮಯ. ಇಂತಹ ಹೂ ಅರಳುವ ಕಾಲದ ಬದುಕು, ಅವರ ಶಾಲೆ ಹಾಗೂ ಅದರ ಸುತ್ತಲೂ ನಡೆಯುವ ಒಂದಷ್ಟು ಗಂಭೀರ ವಿಚಾರಗಳನ್ನು ತಿಳಿಹಾಸ್ಯ ಮತ್ತು ಭಾವುಕತೆಯ ಲೇಪನದೊಂದಿಗೆ ಹೇಳುವ, ಮಕ್ಕಳೇ ಮುಖ್ಯ ಭೂಮಿಕೆಯಲ್ಲಿರುವ ಚಿತ್ರವೇ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’

ಅದು ಕಾಸರಗೋಡು. ಮಲಯಾಳಂ ಅಲ್ಲಿನ ಆಡಳಿತ ಭಾಷೆ. ಆದರೆ ಅಲ್ಲಿನ ಬಹುತೇಕ ಜನರ ಹೃದಯದ ಭಾಷೆ ಕನ್ನಡ. ಸರ್ಕಾರಿ ಶಾಲೆಯಲ್ಲಿಯೂ, ವಿಶೇಷತಃ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಕನ್ನಡದ ಉಸಿರಾಟವನ್ನೇ ಕಡಿತಗೊಳಿಸಲು ಅಲ್ಲಿನ ಸರ್ಕಾರಿ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸಿದರೂ ಊರ ಬಾಂಧವರ ಆಸ್ಥೆಯು ಶಾಲೆಯ ಧೀರೋದತ್ತ ಪಯಣಕ್ಕೆ ಕಾರಣವಾಗಿತ್ತು. ಶಾಲೆಗೆ ಬರುತ್ತಿದ್ದ ಹೆಚ್ಚಿನವರು ಕೆಳ ಮಧ್ಯಮ ವರ್ಗದವರೇ. ಆತ ಪ್ರವೀಣ. ‘ಮರಳಿ ಮನಸಾಗಿದೆ’ ಎಂಬ ಹಾಡಿಗೆ ಅನ್ವರ್ಥವೆಂಬಂತೆ, ಸಿಲ್ಕ್ ಬೋರ್ಡ್‌ನ ಘನ ಘೋರ ಟ್ರಾಫಿಕ್ಕಿನ ಶಾಪಕ್ಕೆ ಗುರಿಯಾದ ಬಿಟಿಎಸ್ ಬಸ್ಸಿನಂತೆ ಆತ 7 ನೇ ತರಗತಿಯಲ್ಲಿಯೇ ಬಾಕಿಯಾಗಿದ್ದಾನೆ. ಮಮ್ಮುಟ್ಟಿ, ಮಹೇಂದ್ರ ಇತ್ಯಾದಿ ಹುಡುಗರು ಅವನ ಸ್ನೇಹಿತರು. ಅವನದೊಂದು ಹಸಿ ಪ್ರೇಮವೂ ಇತ್ತು. ಅದೇ ಉಪಾಧ್ಯಾಯರ ಮಗಳು ಪಲ್ಲವಿಯ ಮೇಲೆ. ಮಲಯಾಳಂ ಹಾಡು ಪ್ರೈವೇಟ್ ಬಸ್ಸಿನಲ್ಲಿ ತೇಲಿ ಬರುತ್ತಿದ್ದರೆ, ಅವನ ಮನದ ಅಂಗಣದಲ್ಲಿ, ಅವಳದೇ ಹೆಜ್ಜೆ. ಹೀಗೆ ಶಾಲೆಯೊಂದು ಸೊಗಸಾಗಿ ನಡೆಯುತ್ತಿದ್ದರೆ, ಅಧಿಕಾರಗಳ ಕೆಂಗಣ್ಣು ಶಾಲೆಗೆ ಬಿದ್ದು ಅದು ಮುಚ್ಚುವಂತಾಗುತ್ತದೆ. ಇದರ ವಿರುದ್ಧ ಮಕ್ಕಳೆಲ್ಲಾ ಒಂದುಗೂಡಿ ಹೋರಾಟ ನಡೆಸಬೇಕೆಂದು ನಿರ್ಧರಿಸುತ್ತಾರೆ. ಆದರೆ ಆ ಹೋರಾಟಕ್ಕೊಂದು ದೊಡ್ಡ ಮುಖ ಬೇಕಿತ್ತು. ಆಗ ಅವರಿಗೆ ಪತ್ರಿಕೆಯಲ್ಲಿ ಕಂಡಿದ್ದು ಅನಂತ ಪದ್ಮನಾಭ ಎಂಬ ಮೈಸೂರಿನ ಸಾಮಾಜಿಕ ಹೋರಾಟಗಾರರ ಹೆಸರು.

ಆದರೆ ಇವರು ಕರೆದುಕೊಂಡು ಬರುವುದು ಅದೇ ಮೈಸೂರಿನ ಇನ್ನೊಂದು ಅನಂತ ಪದ್ಮನಾಭರನ್ನು. ಅವರಿಗೆ ಈ ಹೋರಾಟದ ಹಿಂದಿನ ಭಾವವಾಗಲಿ, ಅದರ ತುರ್ತು ಅಗತ್ಯತೆಗಳ ಮಹತ್ವವಾಗಲಿ ಪ್ರಾರಂಭದಲ್ಲಿ ಅರಿವಾಗುವುದಿಲ್ಲ. ಮಕ್ಕಳು ಸಹ ಈ ಸಂಘರ್ಷದಲ್ಲಿ ಆಸಕ್ತಿ ಕಳೆದುಕೊಂಡು ಭ್ರಮನಿರಸನಗೊಳ್ಳುತ್ತಾರೆ. ಆದರೆ, ಕೆಲವು ಕಿಡಿಗಳು ಒಂದುಗೂಡಿ ಅನಂತ ಪದ್ಮನಾಭರಲ್ಲಿ ಬೆಂಕಿಯ ಕೆನ್ನಾಲಿಗೆಯನ್ನು ಸೃಷ್ಟಿಸಲು ನಾಂದಿ ಹಾಡುತ್ತದೆ. ಪರಿಣಾಮ, ಅಧಿಕಾರಿಗಳ ವಿರೋಧಿ ನೀತಿಯ ಸದೆ ಬಡಿಯಲು ನಿಲ್ಲುತ್ತಾರೆ. ಕೊನೆಗೆ ನ್ಯಾಯಾಲಯದಲ್ಲಿ ಸಮರ್ಥ ವಾದವನ್ನು ಮಂಡಿಸಿ ಶಾಲೆಯ ಆತ್ಮ ಗೌರವವನ್ನು ಉಳಿಸುತ್ತಾರೆ. ಹೀಗೆ ತಮ್ಮ ಅಸ್ತಿತ್ವ, ಉಸಿರಾದ ಕನ್ನಡ ಹಾಗೂ ಯೋಚಿಸುವ ಭಾಷೆಯಲ್ಲಿ ಶಿಕ್ಷಣ ಒದಗಿಸುವ ಶಾಲೆಯ ಅಸ್ತಿತ್ವಕ್ಕೆ ಕೊಡಲಿಯೇಟು ತಾಕಿದಾಗ, ಅದರ ವಿರುದ್ಧ ಸ್ವಾಭಿಮಾನದ ಕದನ ನಡೆಸಿ ಗೆಲ್ಲುವಂತಹ ಕಥಾನಕವೇ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈʼ.

ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಮಕ್ಕಳ ಚಿತ್ರ ಬಂದಿದ್ದು 1960 ರಲ್ಲಿ, ಬಿ. ಆರ್. ಪಂತುಲು ಅವರ ‘ಮಕ್ಕಳ ರಾಜ್ಯ’. ಅನಂತರ ಹಲವು ಸಾಹಸಮಯ ಚಿತ್ರಗಳು ಬಂದವು. ‘ಸಿಂಹದ ಮರಿ ಸೈನ್ಯ’ ಅದರಲ್ಲಿ ಅಗ್ರಗಣ್ಯವಾದದ್ದು. ಅರ್ಜುನ್ ಸರ್ಜಾ ತಮ್ಮ ದೇಹದಾರ್ಢ್ಯತೆ, ಸಾಹಸ ಪ್ರದರ್ಶನಗಳ ಮೂಲಕ ಚಿತ್ರಕ್ಕೆ ವಿಶೇಷ ಮೆರುಗು ಹಚ್ಚಿದ್ದರು. ಸಾಮಾನ್ಯವಾಗಿ ಇಂತಹ ಚಿತ್ರಗಳಲ್ಲಿ ಮಕ್ಕಳೇ ಪ್ರಧಾನ ಭೂಮಿಕೆಯಲ್ಲಿದ್ದರೂ, ವಿಷ್ಣುವರ್ಧನ್, ಅಂಬರೀಷ್ ಮುಂತಾದ ನಾಯಕ ನಟರ ಪಾತ್ರವು ಇರುತಿತ್ತು, ಹೆಚ್ಚು ಜನರನ್ನು ಚಿತ್ರ ಮಂದಿರಕ್ಕೆ ಸೆಳೆಯಲು. ವರುಷಗಳು ಬದಲಾಗುತ್ತಿದ್ದಂತೆಯೇ ಮಕ್ಕಳ ಚಿತ್ರಗಳು ಲಾಭದಾಯಕವಲ್ಲವೆನಿಸಿ ವಿನಾಶದಂಚಿಗೆ ತೆರಳಿತ್ತು. ಆ ಹೊತ್ತಿನಲ್ಲಿ ಥೀಯೇಟರ್‌ಗೆ ಪಾದಾರ್ಪಣೆ ಮಾಡಿ, ಕರುನಾಡಿನ ಮೂಲೆ ಮೂಲೆಯ ಜನರನ್ನು, ಸೂಜಿಗಲ್ಲಿನಂತೆ ಸೆಳೆದ ಚಿತ್ರವೇ ‘ಸ ಹಿ ಪ್ರಾ ಶಾಲೆ ಕಾಸರಗೋಡು’.

ಈ ಚಿತ್ರದ ಭರಪೂರ ಯಶಸ್ಸಿಗೆ ಕಾರಣವೇ ಇದರೊಳಡಕಗೊಂಡಿರುವ ಶುದ್ಧ ನೈಜತೆ. ಪ್ರತಿ ದೃಶ್ಯಗಳು ಎಲ್ಲರ ಕಳೆದು ಹೋದ ಬಾಲ್ಯಕ್ಕೆ ಸೊಗಸಾಗಿ ಕರೆದುಕೊಂಡು ಹೋಗುವುದು ಇದರ ವಿಶಿಷ್ಟತೆ. ಪಲ್ಲವಿಯ ಮೇಲೆ ಪ್ರವೀಣನಿಗೆ ಮೂಡುವ ಹಸಿ ಒಲವು, ಅವನ ಚಡಪಡಿಕೆ ಎಲ್ಲವೂ ಬಾಲ್ಯದ ಅಂತ್ಯದಲ್ಲಿ ಮನಸಲ್ಲೇ ಹುಟ್ಟಿ ಅಲ್ಲಿಯೇ ನಿಧನಗೊಂಡ ಪ್ರೀತಿಯೆಂದು ಹೆಸರು ಪಡೆದ ಆಕರ್ಷಣೆಯ ನೆನಪು ನೀಡುತ್ತದೆ. ಬಡತನದ ಬದುಕು ನೀಡುವ ಆಸೆಗಳ ಆಗರ, ಅವುಗಳನ್ನು ಸಾಧಿಸಲು ಮಾಡುವ ಹವಣಿಕೆ, ಕಾಣುವ ಮುಗ್ಧ ಕನಸುಗಳು ಎಲ್ಲದರ ಪ್ರತಿರೂಪ ಮಮ್ಮುಟ್ಟಿ. ಇನ್ನು ಪ್ರತಿ ಊರಿನಲ್ಲಿರುವಂತೆ, ವಲಸೆ ಬಂದು ನೆಲೆಯಾದ ಮಹೇಂದ್ರನ ಚೇಷ್ಟೆಗಳು, ಶಹರದಿಂದ ವರ್ಗಾವಣೆಗೊಂಡ ಬುದ್ಧಿವಂತ ಹುಡುಗ ಹೀಗೆ ಹಲವು ದೃಶ್ಯಗಳು ನಮ್ಮದೇ ಬದುಕಿನ ಘಟ್ಟವೊಂದಕ್ಕೆ ಹಿಡಿದ ಕನ್ನಡಿ. ಇನ್ನು ಚಿತ್ರದ ಹೃದಯ ಕರಾವಳಿಯ ಭಾಗದ್ದಾದರಿಂದ ಹಾಸ್ಯದ ರಸಗವಳ ಇಲ್ಲಿ ಭರಪೂರ. ಅಸಂಬದ್ಧ ಮಾತು ಹರಿಸುವ ತಿಂಡಿಪೋತ ಭುಜಂಗ, ಅಡುಗೆ ಕೋಣೆಯಿಂದ ಯುದ್ಧಕ್ಕೆ ಹೊರಡುವ ಜಗತ್ತಿನ ಏಕೈಕ ವ್ಯಕ್ತಿ ರಾಘವ, ಕೋಪವೆಂಬ ಖಡ್ಗವನ್ನು ಸದಾ ಬಗಲಲ್ಲೇ ಹಿಡಿದು ಓಡುವ, ಯಕ್ಷಗಾನದ ಪಾತ್ರದಲ್ಲಿಯೇ ಶಾಲೆಗೆ ನುಗ್ಗಿ ತನ್ನ ಭುಜಬಲ ಪರಾಕ್ರಮವ ತೋರಿಸುವ ಉಪಾಧ್ಯಾಯರು, ಅಮಲಿನ ಕೃಪಾಕಟಾಕ್ಷದಿಂದ ರಂಜಿಸುವ ಸೆಬಾಸ್ಟಿಯನ್ ಹೀಗೆ ಬಹುಪಾಲು ಭಾಗ ನಗುವಿನ ಸಿಹಿ ಕಡಲು. ವೇಷ ತೆಗೆಯದೆ ಯುದ್ಧಕ್ಕೆ ಹೊರಡುವ ಉಪಾಧ್ಯಾಯರು, ರಾಮಣ್ಣನ ಮಾತುಕತೆ, ಮಹೇಂದ್ರನ ಚೇಷ್ಟೆ, ಅನಂತ ಪದ್ಮನಾಭರ ನಡುವಿನ ಜಗಳ, ಪಿ ಟಿ ಮಾಸ್ತರ್‌ರ ಗುಪ್ತ ಪ್ರೇಮ, ಮಕ್ಕಳ ಹೋರಾಟದ ಕೆಲವು ಭಾಗಗಳು ಎಲ್ಲವೂ ಇಲ್ಲಿ ಹೈಲೈಟು. ಹಾಗೆಂದು ಚಿತ್ರ ಹಾಸ್ಯಕ್ಕೆ ಸೀಮಿತಗೊಳ್ಳದೆ, ತಾನು ಹೇಳಬೇಕಾದ ಗಂಭೀರ ವಿಚಾರವನ್ನು ಭಾವಪೂರ್ಣವಾಗಿ ಹೇಳುತ್ತದೆ. ನ್ಯಾಯಾಲಯದಲ್ಲಿ ಕನ್ನಡ ಶಾಲೆಯ ಬಗ್ಗೆ ಅನಂತ ಪದ್ಮನಾಭ ಪಾತ್ರದಲ್ಲಿ ಮಾತನಾಡುತ್ತ ಅನಂತನಾಗ್ ಹೇಳುವ ವಿಚಾರಗಳು ಚಿಂತನಾರ್ಹ. ಅವರೇನು ಹೇಳುತ್ತಾರೆಂದರೆ “ಐಸಿಯು ನಲ್ಲಿ ಪೇಶೆಂಟುಗಳು ಇಲ್ಲವೆಂದು ಐಸಿಯುವನ್ನು ಮುಚ್ಚುತ್ತಾರೆಯೇ? ಅದೇ ತೆರನಾಗಿ ಕನ್ನಡ ಶಾಲೆಗೆ ಮಕ್ಕಳು ಬರುತ್ತಿಲ್ಲವೆಂದು ಶಾಲೆಯನ್ನು ಮುಚ್ಚಲು ಹೊರಟಿರುವುದು ನ್ಯಾಯ ಸಮ್ಮತವೇ? ಸರ್ಕಾರವೆಂದರೆ ಲಾಭವೊಂದೇ ಮೂಲ ಮಂತ್ರ ಎಂದು ಭಾವಿಸುವ ಕಂಪನಿಯಲ್ಲ. ತಾನು ಯೋಚಿಸುವ, ಕನಸು ಕಾಣುವ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ದೊರಕಬೇಕಾದದ್ದು ಅವರ ಮೂಲಭೂತ ಕರ್ತವ್ಯ” ಎಂದು. ಹೀಗೆ ಕನ್ನಡದ ವಿಶೇಷತಃ ಮಕ್ಕಳು ಯೋಚಿಸುವ, ಕನಸು ಕಾಣುವ ಭಾಷೆಯೆಂಬ ಪದಬಳಕೆ ಹಾಗೂ ಅದರಲ್ಲೇ ಶಿಕ್ಷಣ ಒದಗಿಸಬೇಕಾದ ಅವಶ್ಯಕತೆಯನ್ನು ಇಲ್ಲಿ ತೋರಿಸಿದ ಪರಿ ಅತ್ಯಮೋಘ. ಹೀಗೆ ಮಾತೃಭಾಷಾ ಶಿಕ್ಷಣದ ಮಹತ್ವ, ಸರಕಾರದ ಜವಾಬ್ದಾರಿಗಳು, ಭಾಷೆಯೊಂದರ ಬಳಕೆ ಹಾಗೂ ಉಳಿಕೆ, ಇವೆಲ್ಲಾ ವಿಚಾರಗಳನ್ನು ಹಿಡಿದು ತಿಳಿ ಹಾಸ್ಯವ ಲೇಪಿಸಿ ಹೇಳುವ ಚಿತ್ರವೇ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’.

ಚಿತ್ರದ ಅಂಗಗಳೆಂದರೆ ಇಲ್ಲಿನ ನಟರು. ಅನಂತ ಪದ್ಮನಾಭನಾಗಿ ನಟಿಸಿದ ಅನಂತನಾಗ್ ತನ್ನ ಉತ್ತರಾರ್ಧದಲ್ಲಿಯೂ ಯುವ ನಟರೇ ನಾಚುವಂತೆ ಮಿಂಚುತ್ತಾರೆ. ಇನ್ನವರ ಅಭಿನಯದ ಬಗ್ಗೆ ಮಾತನಾಡುವುದು ಭಾನಿಗೆ ಬೆಳಕಿನ ಬಗ್ಗೆ ಪಾಠ ಮಾಡಿದಂತೆಯೇ ಸರಿ. ಪಾತ್ರ ಪೋಷಣೆಯ ವಿಶ್ವ ವಿದ್ಯಾಲಯ ಅವರು. ಮಕ್ಕಳ ಪಾತ್ರದಲ್ಲಿ ಅಭಿನಯಿಸಿದ ರಂಜನ್, ಸಂಪತ್, ಮಹೇಂದ್ರಾದಿಯಾಗಿ ಎಲ್ಲರದೂ ನೈಜತೆಯ ಅಭಿವ್ಯಕ್ತಿ. ಪಲ್ಲವಿಯಾಗಿ ಸಪ್ತ ಪಾವೂರು ನಟನೆ, ಭವಿಷ್ಯದ ಉತ್ತಮ ನಾಯಕಿಯಾಗಿ ರೂಪುಗೊಳ್ಳುವ ಸಂಕೇತಿ. ಇನ್ನು ಪ್ರಕಾಶ್ ತುಮಿನಾಡು, ಪ್ರಮೋದ್ ಶೆಟ್ಟಿ, ರಾಧಾಕೃಷ್ಣ, ಶನಿಲ್ ಗುರು, ರಮೇಶ್ ಭಟ್ ಇವರೆಲ್ಲರೂ ನೀಡಿದ್ದು ನಗುವಿನ ಭರಪೂರ ಭೋಜನ. ಇನ್ನು ಚಿತ್ರದ ಎರಡು ಅಕ್ಷಿಗಳೆಂದರೆ ಸಂಗೀತ ಮತ್ತು ಛಾಯಾಗ್ರಾಹಣ. ವಾಸುಕಿ ವೈಭವ್ ಹಾಡುಗಳು, ಅಂದದ ತರುಣಿಗೆ ಚಂದದ ಶೃಂಗಾರ ವೈಭವ. ಕಲ್ಯಾಣ್ ಲೇಖನಿಯ ‘ಹೇ ಶಾರದೆಯೆoಬ’ ಇಹವ ಮರೆಸುವ ಪ್ರಾರ್ಥನೆ, ತ್ರಿಲೋಕ್ ಬರೆದ ‘ದಡ್ಡ ಪ್ರವೀಣ’ ಎಂಬ ತಿಳಿ ವ್ಯಂಗ್ಯ, ಅಸಹಾಯಕತೆಯ ವಿವರಿಸುವ ಸಾಲುಗಳು, ‘ಅರರೆ ಅವಳ ನಗುವ’ ಎಂಬ ಒಲವು ಚೆಲ್ಲಿದ ಬಣ್ಣದ ಕನಸಿನ ಚಿತ್ರಣ ಹಾಗೂ ಹಿಂಬಾಲಿಸುವಿಕೆ, ‘ಅಲೆಯೋ ಅಲೆಗೆ ಈಗ’ ಎಂಬ ವಿದಾಯದ ಬೇಸರ ಹೀಗೆ ಎಲ್ಲಾ ಮನಸೆಳೆವ ಕಾವ್ಯಮಯ ಸಾಲುಗಳಿಗೆ ಶೋಭೆ ತಂದಿದ್ದು ಸಂಗೀತದ ಪರಿಪೂರ್ಣ ಮಿಶ್ರಣ. ಇನ್ನು ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಕಣ್ಣುಗಳು ಕಳೆದುಹೋಗುವಂಥದ್ದು. ನದಿಯ ತಟದಲ್ಲಿ ಮಾತನಾಡುತ್ತಿರುವಾಗ ಆ ಕ್ಷಣಕ್ಕೆ ಭಂಗವಾಗದಂತೆ ಹಿಂದೆ ಸೇತುವೆಯ ಆಕ್ರಮಿಸಿಕೊಂಡ ರೈಲಿನ ಓಟವ ತೋರಿಸಿದ ಪರಿ, ಕರಾವಳಿಯ ವರ್ಣಿಸುವ ಹಾಡಿನಲ್ಲಿ ಬರುವ ಆಗಸದಿಂದ ಕಣ್ಣು ಹಾಯಿಸಿ ತೆಗೆದ ಚಿತ್ರಗಳು ಇಲ್ಲವೂ ಈ ಔತಣಕ್ಕೊಂದು ಸಿಹಿಯ ಸಂಕಲನ. Last but not the least, ರಿಷಭ್ ಶೆಟ್ಟಿಯವರ ಕಥನ ಹಾಗೂ ನಿರ್ದೇಶನ. ಇದು ತನ್ನ ನೈಜ ಜೀವನದಿಂದ ಪ್ರೇರಿತಗೊಂಡು ನಿರ್ಮಿಸಿದ ಕಲಾಕೃತಿ ಎಂದು ಅವರೇ ಸ್ಪಷ್ಟ ಪಡಿಸಿದ್ದರಿಂದ, ಈ ಪರಿಯ ನೈಜತೆಯ ಅಳವಡಿಕೆಗೆ ಅದೇ ಕಾರಣ ಎಂಬುದು ಒಪ್ಪಲೇ ಬೇಕಾದ ಸತ್ಯ. ಎಂದಿಗೂ ತನ್ನ ಬದುಕು ತನಗೆ ಪರದೆಯ ಮೇಲೆ ಕಂಡಾಗ ಜನರು ಕಥೆಯನ್ನು ಹೃದಯಾಂತರಾಳದಿಂದ ಅಪ್ಪಿಕೊಳ್ಳುತ್ತಾರೆ ಎಂಬುವುದಕ್ಕೆ ಈ ಚಿತ್ರವೇ ಒಂದು ಬಹುದೊಡ್ಡ ಉದಾಹರಣೆ.

ಮುಗಿಸುವ ಮುನ್ನ:
ಭಾಷೆಯೆಂಬುದು ವ್ಯಕ್ತಿಯೊಬ್ಬನ ಯೋಚನಾ ಲಹರಿಯ ಮೂಲ. ಮಕ್ಕಳಿಗೆ ತಾಯಿಯಂತೆಯೇ ಬದುಕಿಗೆ ಭಾಷೆ. ಪ್ರತಿ ಬಾಲ್ಯ ಅರಳಬೇಕಾದದ್ದು ಸ್ವಾತಂತ್ರ್ಯ ಹಾಗೂ ಸ್ವಂತಿಕೆಯಲ್ಲಿ. ಭಾಷೆಯೊಂದು ಬೇಲಿಯಾದರೆ, ಆ ಮುಗ್ಧ ಭಾವ ಕಮರಿ ಭಯವೇ ಬದುಕಾಗುತ್ತದೆ. ಸ್ಪರ್ಧಾತ್ಮಕತೆಯ ಬೆನ್ನು ಹತ್ತಿದರೆ ಸಾಕು,ಭಾಷೆಯೆoಬ ತಡೆಗೋಡೆಯ ದಾಟುವುದು ಅಸಾಧ್ಯವೇನಲ್ಲ ಎಂಬುದು ಅದೆಷ್ಟೋ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ಜಗದಗಲ ಖ್ಯಾತಿ ಪಡೆದವರಿಂದ ಸಾಬೀತಾಗಿದೆ. ಆದ್ದರಿಂದ, ಬಾಲ್ಯವೆಂಬ ಭಗವಂತನ ಕನಸಿನಿಂದ ಯಾವ ವಿಚಾರಗಳೂ ಬಣ್ಣಗಳನ್ನು ಕಸಿದುಕೊಳ್ಳದಿರಲಿ ಎಂಬುದೇ ಹರಕೆ-ಹಾರೈಕೆ……