ಸೋವಿಯತ್ ದೇಶಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಯುವಕರೆಲ್ಲ ಎರಡನೇ ಮಹಾಯುದ್ಧದ ನಂತರ ಜನಿಸಿದವರೇ ಆಗಿದ್ದರು. ಅವರಿಗೆ ೧೯೧೭ರ ಕ್ರಾಂತಿಯಾಗಲಿ, ೧೯೪೫ರಲ್ಲಿ ಕೊನೆಗೊಂಡ ಎರಡನೇ ಮಹಾಯುದ್ಧದ ಅನಾಹುತಗಳಾಗಲೀ ಅನುಭವಕ್ಕೆ ಬರಲು ಸಾಧ್ಯವೇ ಇಲ್ಲ. ಅವನ್ನೆಲ್ಲ ಅವರು ತಿಳಿದುಕೊಳ್ಳುವುದು ಹಿರಿಯರ ಅನುಭವದಿಂದ, ಯುದ್ಧದ ಅನಾಹುತವನ್ನು ನೆನಪಿಗೆ ತರುವ ವಸ್ತುಸಂಗ್ರಹಾಲಯಗಳಿಂದ ಮತ್ತು ಇತಿಹಾಸದ ಪುಟಗಳಿಂದ. ಬಹುಪಾಲು ಯುವಕರು ಇದನ್ನೆಲ್ಲ ಅರಿತರೂ ಐರೋಪ್ಯ ದೇಶಗಳ ಜನರ ಮತ್ತು ಅವರು ಬಳಸುವ ವಸ್ತುಗಳ ಸಂಪರ್ಕದಿಂದ ಅವರ ಮನಸ್ಸು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ವಾಲತೊಡಗಿತು. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೫೦ನೇ ಕಂತು ಇಲ್ಲಿದೆ.

೧೯೮೩ರಲ್ಲಿ ಸೋವಿಯತ್ ದೇಶದ ರಾಜಧಾನಿ ಮಾಸ್ಕೋದಲ್ಲಿ ೭೦ ಲಕ್ಷ ಜನಸಂಖ್ಯೆ ಇತ್ತು. ಐತಿಹಾಸಿಕ ಕಟ್ಟಡಗಳಿಂದ ಕೂಡಿದ ಆ ಸುಂದರ ನಗರದ ಹೃದಯಭಾಗದಲ್ಲಿ ಮಾಸ್ಕೋ ನದಿ ಪ್ರಶಾಂತವಾಗಿ ಹರಿಯುವ ರೀತಿ ಕಣ್ಮನ ಸೆಳೆಯುತ್ತಿತ್ತು. ಆ ನಗರದ ರಸ್ತೆಗಳಲ್ಲಿ ಹೋಗುತ್ತಿದ್ದರೆ ಬೆಂಗಳೂರಿನ ಕಬ್ಬನ್ ಪಾರ್ಕ್ ಒಳಗೆ ಹಾಯ್ದು ಹೋಗುವಂಥ ಅನುಭವ ಆಗುತ್ತಿತ್ತು. ಅಷ್ಟೊಂದು ಜನಸಂಖ್ಯೆಯುಳ್ಳ ಆ ಇಡೀ ನಗರವೇ ಒಂದು ಬೃಹತ್ ಉದ್ಯಾನವನದ ಹಾಗೆ ಅನಿಸಿತು. ಎಲ್ಲಿ ನೋಡಿದಲ್ಲಿ ಮರಗಿಡಬಳ್ಳಿಗಳಿಂದ ತುಂಬಿದ ರಸ್ತೆಗಳು ಮತ್ತು ಉದ್ಯಾನವನಗಳು ಕಂಗೊಳಿಸುವ ಕಾರಣದಿಂದ ಆ ನಗರ ಬೃಹತ್ ಕಟ್ಟಡಗಳಿಂದ ಕೂಡಿದ್ದರೂ ಕಾಂಕ್ರಿಟ್ ಜಂಗಲ್ ಅನಿಸದೆ ಶಾಂತಿ ನೆಮ್ಮದಿಯ ತಾಣದಂತೆ ಭಾಸವಾಗುತ್ತಿತ್ತು.
ಟ್ರಾಮ್, ಬಸ್ ಮತ್ತು ಅಂಡರ್ ಗ್ರೌಂಡ್ ಮೆಟ್ರೊಗಳು ಸಾರ್ವಜನಿಕ ಸಾರಿಗೆಯ ಮುಖ್ಯ ಸಾಧನಗಳಾಗಿದ್ದವು. ಅವುಗಳ ಸಮರ್ಪಕ ಸೇವೆಯಿಂದಾಗಿ ಎಲ್ಲಿಯೂ ಜನಸಂದಣಿ ಇರಲಿಲ್ಲ.
ಚೈಕಾ (ಕಡಲಹಕ್ಕಿ – ಸೀಗಲ್) ಹೆಸರಿನ ರಷ್ಯನ್ ಲಕ್ಸುರಿ ಕಾರುಗಳನ್ನು ಹೆಚ್ಚಾಗಿ ಸರ್ಕಾರಿ ಸಂಬಂಧದ ಕಾರ್ಯಗಳಿಗೆ ಬಳಸುತ್ತಿದ್ದರು. ನಮಗೆ ಎಲ್ಲೆಡೆ ಚೈಕಾ ಕಾರಿನ ವ್ಯವಸ್ಥೆ ಮಾಡಿದ್ದರು.
ನಾಗರಿಕರು ಖಾಸಗಿಯಾಗಿ ಕಾರು ಕೊಳ್ಳಲು ಬಹಳ ವರ್ಷಗಳ ವರೆಗೆ ಕಾಯಬೇಕಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದ ಕಾರಣ ಜನರಿಗೆ ಖಾಸಗಿ ಕಾರಿನ ಅವಶ್ಯಕತೆಯೂ ಇರಲಿಲ್ಲ. ‘ನಾನು ನಿವೃತ್ತಳಾಗುವ ಹೊತ್ತಿಗೆ ನನ್ನ ಸ್ವಂತ ಕಾರು ಕೊಳ್ಳುವ ಸಮಯ ಬರುವುದು’ ಎಂದು ನಮ್ಮ ಗೈಡ್ ಹೇಳಿದಳು.
ಅಲ್ಲಿನ ಬಸ್‌ಗಳಿಗೆ ಕಂಡಕ್ಟರ್ ಇರುತ್ತಿರಲಿಲ್ಲ. ಟಿಕೆಟ್ ರೇಟ್ ಪ್ರಕಾರ ಯಂತ್ರದಲ್ಲಿ ಕೊಪೆಕ್ಸ್ ಹಾಕಿ ಟಿಕೆಟ್ ಪಡೆಯಬೇಕಿತ್ತು. ನಮಗೆ ಎಲ್ಲ ಪ್ರಕಾರದ ಸಾರಿಗೆ ವ್ಯವಸ್ಥೆ ಅನುಭವ ಮಾಡಿಸುವ ಉದ್ದೇಶದಿಂದ ಬಸ್ಸಲ್ಲಿ ಕರೆದುಕೊಂಡು ಹೊರಟಿದ್ದರು. ಒಂದು ಸ್ಟಾಪಲ್ಲಿ ಒಬ್ಬ ಹೆಣ್ಣುಮಗಳು ಮಗುವಿನೊಂದಿಗೆ ಬಸ್ ಹತ್ತಿದಳು. ಬಾಗಿಲ ಅಕ್ಕಪಕ್ಕದಲ್ಲಿದ್ದ ಎಲ್ಲ ಪುರುಷರು ಅವಳಿಗೆ ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ಎದ್ದು ನಿಂತರು. ಅವಳು ಒಂದು ಕಡೆ ಕುಳಿತ ಮೇಲೆ ಕುಳಿತರು!
ಸೋವಿಯತ್ ಸರ್ಕಾರ ತನ್ನ ಅರ್ಥವ್ಯವಸ್ಥೆಯನ್ನು ಎಷ್ಟೊಂದು ಕಟ್ಟುನಿಟ್ಟಿನಿಂದ ಕಾಪಾಡಿಕೊಂಡು ಬರುತ್ತಿದ್ದೆ ಎಂಬ ವಾಸ್ತವದ ಅರಿವಾಗಿದ್ದರೆ ಅಲ್ಲಿನ ಯುವಕರು ವಿದೇಶಿ ವಸ್ತುಗಳ ಮೋಹಕ್ಕೆ ಬಲಿಯಾಗುತ್ತಿರಲಿಲ್ಲ. ಅಲ್ಲದೆ ಸೋವಿಯತ್ ದೇಶದ ಪತನವೂ ಆಗುತ್ತಿರಲಿಲ್ಲ. ಸೋವಿಯತ್ ದೇಶ ನಿರ್ಮಾಣದಲ್ಲಿ ಆದಂಥ ತ್ಯಾಗ ಬಲಿದಾನಗಳನ್ನು ಮುಂದಿನ ಜನಾಂಗ ಅರ್ಥ ಮಾಡಿಕೊಳ್ಳಲಿಲ್ಲ ಮತ್ತು ಅವರಿಗೆ ಅರ್ಥ ಮಾಡಿಸಿಕೊಡುವ ವಿಧಾನ ಕಾಟಾಚಾರದ್ದಾಗಿತ್ತು ಎಂದು ಅನಿಸುತ್ತಿದೆ.

 

ಅಲ್ಲಿನ ಬಸ್‌ಗಳಿಗೆ ಕಂಡಕ್ಟರ್ ಇರುತ್ತಿರಲಿಲ್ಲ. ಟಿಕೆಟ್ ರೇಟ್ ಪ್ರಕಾರ ಯಂತ್ರದಲ್ಲಿ ಕೊಪೆಕ್ಸ್ ಹಾಕಿ ಟಿಕೆಟ್ ಪಡೆಯಬೇಕಿತ್ತು. ನಮಗೆ ಎಲ್ಲ ಪ್ರಕಾರದ ಸಾರಿಗೆ ವ್ಯವಸ್ಥೆ ಅನುಭವ ಮಾಡಿಸುವ ಉದ್ದೇಶದಿಂದ ಬಸ್ಸಲ್ಲಿ ಕರೆದುಕೊಂಡು ಹೊರಟಿದ್ದರು.

ಒಂದು ಸ್ಟಾಪಲ್ಲಿ ಒಬ್ಬ ಹೆಣ್ಣುಮಗಳು ಮಗುವಿನೊಂದಿಗೆ ಬಸ್ ಹತ್ತಿದಳು. ಬಾಗಿಲ ಅಕ್ಕಪಕ್ಕದಲ್ಲಿದ್ದ ಎಲ್ಲ ಪುರುಷರು ಅವಳಿಗೆ ಸ್ಥಳಾವಕಾಶ ಕಲ್ಪಿಸುವುದಕ್ಕಾಗಿ ಎದ್ದು ನಿಂತರು. ಅವಳು ಒಂದು ಕಡೆ ಕುಳಿತ ಮೇಲೆ ಕುಳಿತರು!

ಝಾರ್ ದೊರೆಗಳ ಕಠಿಣ ಆಡಳಿತ ವ್ಯವಸ್ಥೆ. ನೆಪೊಲಿಯನ್ ಬೋನಾಪಾರ್ಟೆಯಂಥವರ ದಾಳಿಗಳು. ನಂತರ ಎರಡನೇ ಮಹಾಯುದ್ಧದ ಕ್ರೌರ್ಯ. ಹಿಟ್ಲರ್ ಕ್ರೌರ್ಯಕ್ಕೆ ಬಲಿಯಾದ ಎರಡು ಕೋಟಿ ಯುವಕರು. ಅದರಿಂದಾಗಿ ಹೆಣ್ಣು ಗಂಡಿನ ಮಧ್ಯದ ಸಮತೋಲನದಲ್ಲಾದ ವ್ಯತ್ಯಾಸ, ಯುದ್ಧದಿಂದಾಗಿ ಸಂಪನ್ಮೂಲಗಳ ನಾಶ, ಬಾಂಬುದಾಳಿಗೆ ಸಿಕ್ಕಿ ಕಲ್ಲುಮಣ್ಣಿನ ರಾಶಿಯಾದ ಬೃಹತ್ ಕಟ್ಟಡಗಳು, ಯುದ್ಧದ ಅನಾಹುತದಿಂದಾಗಿ ಎಲ್ಲ ರೀತಿಯ ಒತ್ತಡ ಮತ್ತು ಸಂಕಷ್ಟಕ್ಕೆ ಸಿಲುಕಿದ ಜನರು ಕಡಿಮೆ ತಿಂದು, ದಿನಕ್ಕೆ ೧೨ ಗಂಟೆಗಳಿಗೂ ಹೆಚ್ಚು ಕೆಲಸ ಮಾಡುತ್ತ. ದೇಶವನ್ನು ಮತ್ತೆ ಸುಸ್ಥಿತಿಗೆ ತಂದ ದುಡಿಯುವ ಜನರು, ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಿಸ್ತಿನಿಂದ ಕಾರ್ಯಮಗ್ನರಾಗುತ್ತ ಭಾರಿ ಹಾನಿಗೊಳಗಾದ ಸೋವಿಯತ್ ದೇಶವನ್ನು ಅಭಿವೃದ್ಧಿಪಡಿಸಿದ ರೀತಿ ಮಾದರಿಯಾಗಿದೆ. ಆದರೆ ಮುಂದಿನ ಜನಾಂಗ ಈ ತ್ಯಾಗದ ಮಹತ್ವ ಅರಿಯಲಿಲ್ಲವೆಂದು ಅನಿಸಿತು.

ಸೋವಿಯತ್ ಜನರು ಹಗಲು ರಾತ್ರಿ ಕ್ರಿಯಾಶೀಲರಾಗಿ ಮತ್ತೆ ಸೋವಿಯತ್ ದೇಶವನ್ನು ಮೊದಲಿನ ಸ್ಥಿತಿಗೆ ತಂದರು. ಸೋವಿಯತ್ ದೇಶ ಭಾರತಕ್ಕಿಂತ ೧೭ನೇ ಪಟ್ಟು ದೊಡ್ಡದಾಗಿತ್ತು. ಆ ಕಾಲದಲ್ಲಿ ಬಹಳವೆಂದರೆ ೨೮ ಕೋಟಿಯಷ್ಟಿದ್ದ ಜನರು ಮತ್ತೆ ಆ ದೇಶವನ್ನು ಸುಸ್ಥಿತಿಗೆ ತಂದಿರುವುದರಲ್ಲಿ ಸಮಾಜವಾದದ ಪ್ರೇರಣೆಯೆ ಮುಖ್ಯವಾಗಿದೆ.
ಲೆನಿನ್ ಮಾರ್ಗದರ್ಶನದಲ್ಲಿ ೧೯೧೭ರಲ್ಲಿ ನಡೆದ ಮಹಾ ಅಕ್ಟೋಬರ್ ಕ್ರಾಂತಿಯಲ್ಲಿ ಝಾರ್ ದೊರೆಗಳ ಆಡಳಿತದ ಅಂತ್ಯವಾಗಿ ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಸೋವಿಯತ್ ರಷ್ಯಾ ಮುಂದೆ ೧೫ ಗಣರಾಜ್ಯಗಳು ಸೇರಿ ಸಂಯುಕ್ತ ಸೋವಿಯತ್ ಸೋಸಿಯಲಿಸ್ಟ್ ರಿಪಬ್ಲಿಕ್ (ಯು.ಎಸ್.ಎಸ್.ಆರ್) ಆಯಿತು. ಹೀಗೆ ವಿಶ್ವದಲ್ಲಿ ಪ್ರಥಮ ಬಾರಿಗೆ ಲೆನಿನ್ ನೇತೃತ್ವದಲ್ಲಿ ದುಡಿಯುವ ಜನರ ಸರ್ಕಾರದ ಉದಯವಾಯಿತು. ಲೆನಿನ್ ದೂರದೃಷ್ಟಿಯ ಪಂಚವಾರ್ಷಿಕ ಯೋಜನೆಗಳ ಮೂಲಕ ಸೋವಿಯತ್ ದೇಶ ಅಭಿವೃದ್ಧಿ ಸಾಧಿಸಿ ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಯಿತು.

೧೯೨೪ರಲ್ಲಿ ಲೆನಿನ್ ನಿಧನರಾದರು. ಅವರ ೬ ವರ್ಷಗಳ ಆಡಳಿತ ಐತಿಹಾಸಿಕವಾಗಿತ್ತು. ನಂತರ ೧೯೩೯ರಿಂದ ೧೯೪೫ರ ವರೆಗೆ ಜರ್ಮನಿಯ ಫ್ಯಾಸಿಸ್ಟ್ (ನಾಜಿ) ಹಿಟ್ಲರ್‌ನ ಕ್ರೌರ್ಯದ ಸಂಕೇತವಾದ ಎರಡನೇ ಮಹಾಯುದ್ಧದಿಂದಾಗಿ ಸೋವಿಯತ್ ದೇಶ ಬಹಳ ಕಷ್ಟನಷ್ಟಗಳನ್ನು ಅನುಭವಿಸಬೇಕಾಯಿತು. ಆಗ ಸ್ಟಾಲಿನ್ ಯುದ್ಧ ಚಾತುರ್ಯದಿಂದಾಗಿ ಜರ್ಮನಿಯ ಫ್ಯಾಸಿಸ್ಟರನ್ನು ಸೋಲಿಸಿದರೂ ಜಗತ್ತು ಆ ಯುದ್ಧದಿಂದಾಗಿ ಬಹಳಷ್ಟು ರೀತಿಯಿಂದ ಹಾನಿಗೊಳಗಾಗಬೇಕಾಯಿತು. ಆ ಮಹಾಯುದ್ಧದಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ ಒಟ್ಟು ೫ ಕೋಟಿಗೂ ಹೆಚ್ಚು ಜನ ಸತ್ತರು. ಅವರಲ್ಲಿ ಸೋವಿಯತ್ ದೇಶದ ೨ ಕೋಟಿ ಯುವಕರೂ ಸೇರಿದ್ದರು. ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್ ಸೋವಿಯತ್ ದೇಶದ ಅನೇಕ ನಗರಗಳನ್ನು ಧ್ವಂಸ ಮಾಡಿದ್ದ. ಆದರೆ ಸೋವಿಯತ್ ಜನರು ಛಲದಿಂದ ಮತ್ತೆ ಆ ಧ್ವಂಸಗೊಂಡ ನಗರಗಳ ರಾಶಿಯಿಂದಲೇ ಫೀನಿಕ್ಸ್ ಹಾಗೆ ಹೊಸ ನಗರಗಳ ನಿರ್ಮಾಣ ಮಾಡಿದರು.

(ಚಳಿಗಾಲದಲ್ಲಿ ಬೆಳ್ಳಗಾದ ಕೆಂಪು ಚೌಕ)

ಸೋವಿಯತ್ ದೇಶ ತನ್ನ ಯುವಜನಾಂಗದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿತ್ತು. ಶತಪ್ರತಿಶತ ಸಾಕ್ಷರತೆಯನ್ನು ಸಾಧಿಸಿತು. ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆ ಮೂಲಕ ವಿಶ್ವದ ದುಡಿಯುವ ಜನರಲ್ಲಿ ಹೊಸ ಭರವಸೆ ಮೂಡಿಸಿತು. ಹೀಗೆ ಕಷ್ಟಕ್ಕೊಳಗಾದ ಜನಸಮುದಾಯ ಮತ್ತೆ ಜಗತ್ತಿನ ಮುಂದೆ ತಲೆಯೆತ್ತಿ ನಿಲ್ಲುವಂಥ ಸಾಧನೆ ಮಾಡಿತು. ಯುವಕರಲ್ಲಿ ಸಾಹಿತ್ಯ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅಭಿರುಚಿ ಹುಟ್ಟಿಸುವಲ್ಲಿ ಯಶಸ್ವಿಯಾಯಿತು. ದೇಶದ ೨ ಕೋಟಿಗೂ ಹೆಚ್ಚು ಜನರು ಸುಂದರ ಸಮಾಜದ ರಕ್ಷಣೆಗಾಗಿ ಹೋರಾಡಿ ಮಡಿದದ್ದು ಆ ಕಾಲದ ಜನರ ಮೇಲೆ ಆಳವಾದ ಪರಿಣಾಮ ಬೀರಿತ್ತು.
ಸೋವಿಯತ್ ಸೈನಿಕರು ಕೊನೆಗೂ ಫ್ಯಾಸಿಸ್ಟರ ಮೇಲೆ ವಿಜಯ ಸಾಧಿಸಿದ ಮೇಲೆ ಎರಡನೇ ಮಹಾಯುದ್ಧದ ಅಂತ್ಯವಾಯಿತು. ಆದರೆ ಎರಡನೇ ಮಹಾಯುದ್ಧದ ನಂತರ ಜನಿಸಿದ ಯುವಜನಾಂಗದಲ್ಲಿ ತಮ್ಮ ಹಿರಿಯರು ಮಾಡಿದ ತ್ಯಾಗದ ಬಗ್ಗೆ ಅಂಥ ಹೇಳಿಕೊಳ್ಳವ ಚೈತನ್ಯಪೂರ್ಣವಾದ ಆಸಕ್ತಿ ಕಾಣಿಸಲಿಲ್ಲ. ಗತಿತಾರ್ಕಿಕ ಭೌತಿಕವಾದದ ಬಗ್ಗೆ ಅವರು ಹೈಸ್ಕೂಲು, ಕಾಲೇಜುಗಳಲ್ಲಿ ಯಾಂತ್ರಿಕವಾಗಿ ಓದುತ್ತಿದ್ದರು.

ಮಾಸ್ಕೋದಲ್ಲಿ ಕೂಡ ಬಹಳಷ್ಟು ಹುತಾತ್ಮರ ಮೂರ್ತಿಗಳಿವೆ. ಯುದ್ಧಸ್ಮಾರಕಗಳಿವೆ. ಸ್ಫೂರ್ತಿದಾಯಕವಾದ ಸಾಹಿತಿಗಳ ಮೂರ್ತಿಗಳಿವೆ. ಮಹಾನ್ ಕ್ರಾಂತಿಕಾರಿಗಳ ಮೂರ್ತಿಗಳೂ ಇವೆ. ಆದರೆ ಕಂಡಕಂಡವರ ಮೂರ್ತಿಗಳಿಗೆ ಅಲ್ಲಿ ಅವಕಾಶವಿಲ್ಲ. ಪ್ರತಿಯೊಂದು ಮೂರ್ತಿ ನೋಡುಗರ ಮನದಲ್ಲಿ ಚೈತನ್ಯ ತುಂಬುವಂಥ ಹಿನ್ನೆಲೆಯನ್ನು ಹೊಂದಿರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ ದಿನಗಳೆದಂತೆ ಯುವಕರು ಇಂಥ ಪ್ರದೇಶಗಳಿಗೆ ಗೌರವ ಸಲ್ಲಿಸಲು ಮತ್ತು ತಮ್ಮ ಪೂರ್ವಜರ ತ್ಯಾಗದ ಕುರಿತು ನಿರ್ಮಿಸಲಾದ ಸಾಕ್ಷ್ಯ ಚಿತ್ರಗಳನ್ನು ಉಚಿತವಾಗಿ ತೋರಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯುವಜನಾಂಗ ಅದಾಗಲೇ ಕೊಳ್ಳುಬಾಕ ಸಂಸ್ಕೃತಿಯ ಕಡೆ ವಾಲುತ್ತಿದ್ದ ಕಾರಣ ಇವೆಲ್ಲ ಸಂಪ್ರದಾಯದ ರೂಪ ತಾಳತೊಡಗಿದವು. ಮದುವೆಯಾದ ಕೂಡಲೆ ವಧೂವರರು ಯುದ್ಧ ಸ್ಮಾರಕಕ್ಕೆ ಭೇಟಿ ಕೊಡುವ ಪರಂಪರೆ ಧಾರ್ಮಿಕ ಸಂಪ್ರದಾಯದ ಹಾಗೆ ಪರಿವರ್ತನೆಗೊಂಡಿತ್ತು. ಪರಂಪರೆ ಸಂಪ್ರದಾಯವಾದಾಗ ಆ ಪರಂಪರೆಗೆ ಸಂಬಂಧಿಸಿದ ಭಾವನೆಗಳು ನಾಟಕೀಯ ರೂಪ ತಾಳಿ ಯಾಂತ್ರಿಕವಾಗುತ್ತವೆ. ಇಂಥ ಸ್ಥಿತಿ ಎಲ್ಲ ಧರ್ಮಗಳಿಗೂ ಅನ್ವಯಿಸುವ ಹಾಗೆ ಕ್ರಾಂತಿಗೂ ಅನ್ವಯಿಸುತ್ತದೆ.

ಸೋವಿಯತ್ ದೇಶಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಯುವಕರೆಲ್ಲ ಎರಡನೇ ಮಹಾಯುದ್ಧದ ನಂತರ ಜನಿಸಿದವರೇ ಆಗಿದ್ದರು. ಅವರಿಗೆ ೧೯೧೭ರ ಕ್ರಾಂತಿಯಾಗಲಿ, ೧೯೪೫ರಲ್ಲಿ ಕೊನೆಗೊಂಡ ಎರಡನೇ ಮಹಾಯುದ್ಧದ ಅನಾಹುತಗಳಾಗಲೀ ಅನುಭವಕ್ಕೆ ಬರಲು ಸಾಧ್ಯವೇ ಇಲ್ಲ. ಅವನ್ನೆಲ್ಲ ಅವರು ತಿಳಿದುಕೊಳ್ಳುವುದು ಹಿರಿಯರ ಅನುಭವದಿಂದ, ಯುದ್ಧದ ಅನಾಹುತವನ್ನು ನೆನಪಿಗೆ ತರುವ ವಸ್ತುಸಂಗ್ರಹಾಲಯಗಳಿಂದ ಮತ್ತು ಇತಿಹಾಸದ ಪುಟಗಳಿಂದ. ಬಹುಪಾಲು ಯುವಕರು ಇದನ್ನೆಲ್ಲ ಅರಿತರೂ ಐರೋಪ್ಯ ದೇಶಗಳ ಜನರ ಮತ್ತು ಅವರು ಬಳಸುವ ವಸ್ತುಗಳ ಸಂಪರ್ಕದಿಂದ ಅವರ ಮನಸ್ಸು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ವಾಲತೊಡಗಿತು. ಐರೋಪ್ಯ ದೇಶಗಳ ಬಹುಪಾಲು ಜನರು ಮಾಸ್ಕೋ ರಾಜಧಾನಿ ನಗರದಲ್ಲಿ ಇಳಿದು ನಾಲ್ಕಾರು ದಿನ ಆರಾಮಾಗಿ ಕಳೆದು ಮುಂದೆ ತಮ್ಮ ತಮ್ಮ ದೇಶಗಳಿಗೆ ಪ್ರಯಾಣ ಮುಂದುವರಿಸುತ್ತಿದ್ದರು. ಆಧುನಿಕ ಬಳಕೆ ವಸ್ತುಗಳ ಜೊತೆ ಬರುವ ಈ ಪ್ರಯಾಣಿಕರು ಸೋವಿಯತ್ ಯುವಕರ ಮೇಲೆ ಸಹಜವಾಗಿಯೆ ಕೊಳ್ಳುಬಾಕ ಸಂಸ್ಕೃತಿಯ ಪ್ರಭಾವ ಬೀರುತ್ತಿದ್ದರು. ಅವರ ಜೀನ್ಸ್ ಪ್ಯಾಂಟ್, ಗಾಗಲ್, ಕ್ಯಾಮರಾ ಮುಂತಾದವುಗಳು ಯುವಕರಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದವು.

(ರಷ್ಯನ್ ಲಕ್ಸುರಿ ಚೈಕಾ ಕಾರು)

ವಿದೇಶಿ ಪ್ರವಾಸಿಗರಿಗಾಗಿ ಇರುವ ಸೋವಿಯತ್ ಪ್ರವಾಸೋದ್ಯಮದ “ಇನ್ ಟೂರಿಸ್ಟ್” ಇಲಾಖೆಯ ಬಸ್ಸುಗಳ ಮುಂದೆ ಯುವಕರು ವಿದೇಶಿ ಪ್ರವಾಸಿಗರ ಹಳೆ ಕ್ಯಾಮರಾ, ವಾಚ್, ಗಾಗಲ್, ಮತ್ತು ಹಳೆ ಜೀನ್ಸ್ ಪ್ಯಾಂಟ್ ಮುಂತಾದವುಗಳನ್ನು ಕೂಡ ಕೊಳ್ಳಲು ಹಾತೊರೆಯುತ್ತಿದ್ದರು. ವಿದೇಶಿಗರು ರೂಬಲ್‌ಗಾಗಿ ಅವುಗಳನ್ನು ಮಾರುತ್ತಿದ್ದರು. ಯುವಕರು ಹೆಚ್ಚಿನ ರೂಬಲ್ ಕೊಟ್ಟು ಖರೀದಿಸುತ್ತಿದ್ದರು. ಕರೆನ್ಸಿ ಎಕ್ಸ್ಚೇಂಜ್ ಶಾಪ್‌ಗಳಲ್ಲಿ ೧೦ ಡಾಲರ್‌ಗೆ ೯ ರೂಬಲ್ ಸಿಗುತ್ತಿತ್ತು. ಆದರೆ ಈ ಯುವಕರು ೧೦ ಡಾಲರ್‌ಗೆ ೩೦ ರೂಬಲ್ ಕೊಡುತ್ತಿದ್ದರು. ಹಾಗೆ ಸಂಗ್ರಹಿಸಿದ ಡಾಲರ್‌ಗಳಿಂದ ಬ್ಯುರೊಷ್ಕಿ ಶಾಪ್ (ಡಾಲರ್ ಶಾಪ್)ಗಳಲ್ಲಿ ಸಿಗುವ ವಿದೇಶಿ ವಸ್ತುಗಳನ್ನು ಕೊಳ್ಳುತ್ತಿದ್ದರು. ಬ್ಯುರೊಷ್ಕಿ ಶಾಪ್‌ಗಳಲ್ಲಿ ಅಮೆರಿಕ, ಇಂಗ್ಲಂಡ್, ಫ್ರಾನ್ಸ್ ಮೊದಲಾದ ಬಂಡವಾಳಶಾಹಿ ದೇಶಗಳ ಅತ್ಯಾಧುನಿಕ ವಸ್ತುಗಳನ್ನು ಮಾರಾಟಕ್ಕಿಟ್ಟಿರುತ್ತಿದ್ದರು. ಆದರೆ ಅಲ್ಲಿ ರೂಬಲ್ ಕರೆನ್ಸಿ ನಡೆಯುತ್ತಿರಲಿಲ್ಲ. ಡಾಲರ್ ಕೊಟ್ಟೇ ಖರೀದಿಸಬೇಕಿತ್ತು. ಆದ್ದರಿಂದ ಯುವಕರು ಮೂರುಪಟ್ಟು ಹೆಚ್ಚು ಹಣ ಕೊಟ್ಟು ಡಾಲರ್‌ಗಳನ್ನು ಪ್ರವಾಸಿಗರಿಂದ ಪಡೆದು ವಿದೇಶಿ ವಸ್ತುಗಳನ್ನು ಕೊಳ್ಳುತ್ತಿದ್ದರು. ಡಾಲರ್ ಶಾಪ್‌ನಲ್ಲಿ ಆಕರ್ಷಕ ವಿದೇಶಿ ವಸ್ತುಗಳನ್ನು ಕೊಳ್ಳುವ ಆಸೆಯಿಂದ ಕೆಲವು ಕಾಲೇಜು ವಿದ್ಯಾರ್ಥಿನಿಯರು ವಿದೇಶಿ ಪ್ರವಾಸಿಗರ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದರು.

ಸೋವಿಯತ್ ದೇಶ ತನ್ನ ಆರ್ಥಿಕ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿತ್ತು. ಯಾವುದೇ ವಸ್ತುವಿನ ಬೆಲೆ ೬೦ ವರ್ಷಗಳಿಂದ ಏರಿಕೆಯಾಗದಂತೆ ನೋಡಿಕೊಂಡಿತ್ತು. ಹಾಗೆ ಬೆಲೆಯನ್ನು ನಿಯಂತ್ರಿಸಬೇಕಾದರೆ ಬಂಡವಾಳಶಾಹಿ ದೇಶಗಳ ಹಾಗೆ ಪ್ರತಿವರ್ಷ ವಸ್ತುಗಳ ವಿನ್ಯಾಸ ಬದಲಾಯಿಸಲು ಸಾಧ್ಯವಿಲ್ಲದ ಮಾತು. ಅವರ ಝೆನಿತ್ ಕ್ಯಾಮರಾ, ವಾಚ್, ‘ರಷ್ಯನ್ ಬ್ಲೂ’ ಎಂದು ಪ್ರಸಿದ್ಧವಾಗಿದ್ದ ನೀಲಿ ಪರದೆಯ ಟಿ.ವಿ., ಬಟ್ಟೆಗಳ ವಿನ್ಯಾಸ ಮುಂತಾದವು ೬೦ ವರ್ಷಗಳಿಂದ ಬದಲಾಗಿದ್ದಿಲ್ಲ. ಆದರೆ ಅವೆಲ್ಲ ಉತ್ಕೃಷ್ಟ ಗುಣಮಟ್ಟದವುಗಳಾಗಿದ್ದು ಬಾಳಿಕೆ ಬರುವಂಥವುಗಳಾಗಿದ್ದವು. ಆದರೆ ಬಂಡವಾಳಶಾಹಿ ವಸ್ತುಗಳ ಮೋಹಕ ಮಾಟ ಸೋವಿಯತ್ ದೇಶದ ತರುಣ ತರುಣಿಯರಿಗೆ ಆಕರ್ಷಕವಾಯಿತು. ಇನ್ ಟೂರಿಸ್ಟ್ ಮತ್ತು ಬ್ಯುರೊಷ್ಕಿ ಶಾಪ್‌ಗಳು ಈ ಯುವಕರು ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಗಲು ಸಹಕಾರಿಯಾದವು.


ಯುವಕರು ಈ ರೀತಿಯಲ್ಲಿ ಬದಲಾಗತೊಡಗಿದಾಗ ಹಿರಿಯರು ವಿವಿಧ ಪ್ರಶಸ್ತಿಗಳನ್ನು ಪಡೆಯುವುದರಲ್ಲೇ ತಲ್ಲೀನರಾಗಿದ್ದರು. ಆ ಸಂದರ್ಭದಲ್ಲಿನ ಪ್ರಶಸ್ತಿಯ ಮೆಡಲ್‌ಗಳು ಅವರ ಎದೆತುಂಬ ಡ್ರೆಸ್ ಮೇಲೆ ರಾರಾಜಿಸುತ್ತಿದ್ದವು. ಕಿರಿಯರ ವಸ್ತುಮೋಹ, ಹಿರಿಯರ ಪ್ರಶಸ್ತಿ ಮೋಹ ಕಮ್ಯುನಿಸ್ಟ್ ಸಿದ್ಧಾಂತದ ಆಶಯಗಳಿಗೆ ವಿರುದ್ಧವಾಗಿತ್ತು. ಆಗ ಆಂದ್ರೊಪೊವ್ ಸೋವಿಯತ್ ದೇಶದ ಮುಖ್ಯಸ್ಥರಾಗಿದ್ದರು. ಅದಕ್ಕೂ ಮೊದಲು ಅವರು ಸೋವಿಯತ್ ದೇಶದ ಬೇಹುಗಾರಿಕೆ ಇಲಾಖೆಯಾದ ಕೆ.ಜಿ.ಬಿ.ಯ ಮುಖ್ಯಸ್ಥರಾಗಿದ್ದರು. ಯುವಕರ ಬಯಕೆಗಳಲ್ಲಿ ಆಗುತ್ತಿದ್ದ ಇಂಥ ಘಟನೆಗಳು ಅವರ ಗಮನಕ್ಕೆ ಬಂದಿರಲೇ ಬೇಕು.
ಈ ಪರಿಸ್ಥಿತಿಯ ಮುಂದಿನ ಪರಿಣಾಮವೇ ಗೊರ್ಬಚೆವ್ ಅವರ ಪೆರಸ್ತೊಯಿಕಾ ಮತ್ತು ಗ್ಲಾಸ್‌ನೊಸ್ತ ಆಗಿರಬೇಕು. ೧೯೮೩ರಲ್ಲಿ ಗೊರ್ಬಚೆವ್ ಹೆಸರು ಹೊರದೇಶದ ಯಾರಿಗೂ ಗೊತ್ತಿರಲಿಲ್ಲ. ಮುಂದೆ ಅವರು ಬಂಡವಾಳಶಾಹಿಗಳ ಬಲೆಗೆ ಬಿದ್ದಮೇಲೆ ಜಗತ್ತಿನ ಜನರಿಗೆ ಪರಿಚಿತರಾದರು.