ಇಲ್ಲೂ ಒಂದು ವಿಸೇಸ ಐತೆ. ಇಡೀ ಮಧುಗಿರಿ ತಾಲೂಕಿನಾಗೆ ಮಧುಗಿರಿ ಟೌನ್ ನಾಗೆ ಮಾತ್ರವೇ ಸರ್ಕಾರಿ ಹೈಸ್ಕೂಲು ಇದ್ದಿದ್ದು. ಪ್ರವೀಟು ಇಸ್ಕೂಲ್‌ಗಳು ಹೋಬಳಿ ಕೇಂದ್ರ ಕೊಡಿಗೇನಹಳ್ಳೀನಾಗೂ ಸೇರಿ ಐದಾರು ಇದ್ವು ಆಟೇಯಾ. ಅಂಗಾಗಿ ಚಿಕ್ಕಮಾಲೂರು ಹೈಸ್ಕೂಲು ವಿಶೇಷವಾಗಿತ್ತು. ಅದ್ರಾಗೂ ಆ ವರ್ಸ ಇಡೀ ತುಮಕೂರು ಜಿಲ್ಲೇನಾಗೆ ಅದೊಂದೇ ಹೈಸ್ಕೂಲು ಮಂಜೂರಾಗಿದ್ದು ಅನ್ನೋದು ಇನ್ನೊಂದು ಕೋಡು ಸಿಗಿಸಿತ್ತು. ಇನ್ನಾ ಏಸೊಂದು ಕೆಲ್ಸಾ ಮಾಡವ್ರೆ. ಅಧಿಕಾರದಲ್ಲಿದ್ದಾಗ ಮಾಡಿದ್ದು ಇವು. ಇದು ಬುಟ್ಟು ಸ್ವಂತವಾಗಿ ಮಾಡವ್ರೆ. ಒಟ್ನಾಗೆ ಕಷ್ಟಕ್ಕೆ ಮರುಗೋ ಜೀವ ಅದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ ಬರಹ ಇಲ್ಲಿದೆ

ಅಪ್ಪ‌ ರಾಜಕೀಯವನ್ನು ಬರೇ ಅಧಿಕಾರಕ್ಕೇಂತ ಅಂದ್ಕೊಳ್ಳದೆ ಜನಗೋಳಿಗೂ ಏನಾರಾ ಸಾಯಾ ಮಾಡಾಣಾ, ಊರು ಮುಂದ್ಕೆ ತರಾಣಾ ಅಂತ್ಲೇ ಯೋಸ್ನೆ ಮಾಡ್ತಿದ್ರು. ಊರಿನ ಗ್ರಾಮ ಪಂಚಾಯ್ತಿಗೆ ಮೊದಲ್ನೇ ಕಿತ ಎಲೆಕ್ಷನ್ನು ನಡೆಯಾ ಅಂಗೆ ಮಾಡಿದ್ದು ಜನ್ರಿಗೆ ಧೈರ್ಯ ತುಂಬ್ತು. ಅದೂವರ್ಗೆ ಪಾಳೇಗಾರಿಕೆ ತರ ಅವುರ್ಗೆ ಯಾರು ಬೇಕೋ‌ ಅವುರ್ಗೆ ಸದಸ್ಯರನ್ನ ಮಾಡ್ಕೊಂಡು ಅಧಿಕಾರ ಕೈಯಾಗೆ ಇಟ್ಕೊಂಡಿರ್ತಿದ್ರು. ಅಪ್ಪ ಎಲ್ಲ ಜನುರ್ನೂ ಅದ್ರಾಗೂ ಹಿಂದುಳಿದ ವರ್ಗದೋರ್ನ ಗುಡ್ಡೆ ಹಾಕ್ಕೊಂಡು ರಾಜಕೀಯ ಶುರು ಮಾಡಿದ್ದು. ಮಾದಿಗರು, ನಾಯಕರು, ಉಪ್ಪಾರ್ರು ಅವ್ರೂ ಇವ್ರೂ ಕಣ್ ಬಿಟ್ರು.

ಮೊದುಲ್ನೇ ಹೆಜ್ಜೇಲೆ ಒಂದು ಸೀಟು ಅಂದ್ರೆ ಅಪ್ಪ ಮಾತ್ರ ಗೆದ್ದು ಬಂದ್ರು. 13 ಜನದಾಗೆ ಅವ್ರು 12 ಗೆದ್ದಿದ್ದರು. ಆಗ ಹೆದುರ್ಸಿ ಬೆದುರ್ಸಿ ಅವ್ಮಾನ ಮಾಡಾಕೆ ನೋಡೀರೂ ಎದುರ್ದೆ ತಿರ್ಗಾ ಇನ್ನೊಂದು ಕಿತ ಎಲೆಕ್ಷನ್ನಾಗೆ ನಿಂತು ಗೆದ್ರು. ಈ ದಪ ಉಲ್ಟಾ ಆಯ್ತು. ಅಪ್ಪ 12 ಜನ ಗೆಲ್ಲುಸ್ಕೊಂಡ್ರೆ ಅವ್ರು 1 ಗೆದ್ರು.

ತಳಸಮುದಾಯಕ್ಕೆ ಅಧಿಕಾರ ಸಿಕ್ಕಿದ್ದು

ಇಲ್ಲಿ ಮುಖ್ಯವಾಗಿ ಆಗಿದ್ದು, ತಳಸಮುದಾಯದವರಿಗೂ ಅಧಿಕಾರ ಸಿಕ್ಕಾ ಅಂಗೆ ಆಯ್ತು. ಅಲ್ಲಿಂದಾಚ್ಗೆ ಊರಿನ ರಾಜಕೀಯ ಬದಲಾಯ್ತು. ಎಲ್ರೂ ಓ ನಾವೂ ಎಲೆಕ್ಷನ್ನಾಗೆ ನಿಂತ್ಕಾಬೌದು, ಗೆದೀಬೌದು ಅನ್ನೋ ಹುಮ್ಮಸ್ಸು ಬಂತು. ಯಾರ್ಗೇನೂ ಎದುರ್ಕೊಣಾ ಕೆಲ್ಸಾ ಇಲ್ಲ.‌ ನಮ್ದೇ ಜಾಸ್ತಿ ವೋಟು ಅವ್ವೆ ಅನ್ನೋ ರಾಜಕೀಯದ ಯೋಸ್ನೆ ಎಚ್ಕೊಂಡು, ಬುದ್ಧಿ ಚಿಗುರ್ಕೊಣ್ತು. ಆಗಿನ್ನೂ ಸರ್ಕಾರದಾಗೆ ಮೀಸಲಾತಿ ಅಂಬೋದು ಬಂದಿರ್ಲಿಲ್ಲ. ಆಗ್ಲೇಯಾ ಅಪ್ಪ ಅವುರ್ನೇ ನಿಲ್ಸಿ ಗೆಲ್ಸಿ ಗುಂಪು ಮಾಡಿದ್ರು. ಅವ್ರ್ನೇ ಬೆಳುಸ್ತಿದ್ರು. ಆಮ್ಯಾಕೇಯಾ ಸದಸ್ಯರಾಗೋಕೂ ಮೀಸಲಾತಿ, ಅಂಗೇ ಅಧ್ಯಕ್ಷರಾಗೋಕೂ ಮೀಸಲಾತಿ ಬಂತು.

ಮೊದುಲ್ನೇ ಸತಿ ಅಧ್ಯಕ್ಷರಾಗಿದ್ಕೆ ಅಪ್ಪುಂಗೆ ಸ್ಯಾನೆ ಖುಷಿ ಆಯ್ತು. ಆ ಖುಷೀಲೆ ಮಧುಗಿರಿ ಶಾಸಕರಾಗಿದ್ದ ತಮ್ಮ ಸ್ನೇಹಿತರಾದ ಗಂಗಹನುಮಯ್ಯನವರ್ನ ಅಂಗೇ ಅಲ್ಲಿನ ಎಂ ಪಿ ಆಗಿದ್ದ ನಮ್ಮ ನಂಟರು ಪ್ರಸನ್ನಕುಮಾರ್ ಅವುರ್ನ ಕಾಣಾಕೆ ಹೋದ್ರು. ನಮ್ಮೂರ್ಗೆ ಏನಾರಾ‌ ಒಳ್ಳೆದಾಗಂಗೆ ಕೆಲ್ಸ ಮಾಡ್ಬೇಕು. ನಾನು ಕೆಲ್ಸ ಮಾಡಾಕೆ ರೆಡಿ ಇವ್ನಿ ಅಂತ ಯೋಳಿ ಬಂದ್ರು. ಅವ್ರೂ ಆಯ್ತು, ನೀವು ಓಡಾಡಾಕೆ ರೆಡಿ ಇದ್ರೆ, ನಿಜ್ವಾಗ್ಲೂ ಕೆಲ್ಸಾ ಮಾಡಾಕೆ ಸಿದ್ದ ಅಂದ್ರೆ ಏನಾರಾ ಮಾಡಾಣೇಳಿ ಅಂದಿದ್ಕೆ ಖುಷಿಯಾಗಿ, ಏನೇನು ಯೋಜನೆ ಅವ್ವೆ ಅಂತ‌ ಮೊದ್ಲು ತಿಳ್ಕಳಾಕೆ ಸುರು ಮಾಡುದ್ರು.

ಊರಿಗೆ‌ ಮೊದಲ್ನೇ ಸಲ ಕೊಳಾಯಿ ಬಂದದ್ದು

ಅದೇ ಟೇಮಿನಾಗೆ ಸರ್ಕಾರ ಎನ್ ಆರ್ ಡಬ್ಲ್ಯೂ ಎಸ್ ಯೋಜನೆ ತಂತು.‌ (national rural water supply)ಆಗೆಲ್ಲಾ ಊರ್ನಾಗೆ ಮಂದಿ ಸೈಕಲ್ನಾಗೆ ಇಲ್ಲಾಂತಂದ್ರೆ, ಕೋಲಿಗೆ ಹಗ್ಗ ಕಟ್ಟಿ ಹೆಗಲ ಮ್ಯಾಗೆ ಆಕಡೀಕ್ಕೊಂದು ಈಕಡೀಕ್ಕೊಂದು ಬಿಂದಿಗೆ ತಗಲಾಕ್ಕೊಂಡು ಉಪ್ಪು ನೀರ್ನ ಬಾವೀನಾಗ್ ಸೇದ್ಕೊಂಡೋ, ಕೆರೆ ತಾವ್ಳಿಂದ ತಂದ್ಕೊಂಡೋ ಮಾಡ್ಬೇಕಿತ್ತು. ಸೀ ನೀರ್ ಬಾವಿ ಬ್ಯಾರೆ ಇತ್ತು. ಬೋರ್ ಹಾಕ್ಸಿ ಕೊಳಾಯಿನಾಗೆ ನೀರು ಬಿಡ್ತೀವಿ ಅಂಬ್ತ ಸರ್ಕಾರದೋರು ಯೋಜನೆ ತಂದ್ರು. ಆದ್ರೆ ಅಲ್ಲೊಂದು ಪಾಯಿಂಟ್ ಹಾಕೀರು. ಇದ್ನೆಲ್ಲಾ ಮಾಡಾಕೆ ಏಸು ಖರ್ಚು ಆಗ್ತೈತೋ ಅದ್ರಾಗೆ ಹತ್ತು ಪರ್ಸೆಂಟು ಪಂಚಾಯ್ತಿಯಿಂದ ಕಟ್ಟೀರೆ ಉಳಿದಿದ್ದ ತೊಂಬತ್ತು ಪರ್ಸೆಂಟು ಸರ್ಕಾರ ಹಾಕ್ತೈತೆ ಅಂತ ಯೋಳೀರು. ಆದ್ರೆ ಅದ್ಕೆ ಎಂಟೊ ಒಂಬತ್ತೋ ಸಾವ್ರ ಕಟ್ಟಬೇಕಿತ್ತೋ.‌ ಪಂಚಾಯ್ತೀನಾಗೆ‌ ಎಲ್ಲಿಂದ ಬಂದಾತು ಕಾಸು? ಸರಿ ಊರಿಗೆ‌ ಎಂಗಾನಾ ಮಾಡಿ ಕೊಳಾಯಿ ಹಾಕ್ಸೀರೆ ಜನ ತಂಪೊತ್ತಲ್ಲಿ‌ ನೆನೀತಾರೆ ಅಂಬ್ತಾವಾ‌ ತಾತನ ಹೆಸ್ರಾಗೆ ಅಪ್ಪಾನೇ ಸರ್ಕಾರಕ್ಕೆ ಪಂಚಾಯ್ತಿ ಬದ್ಲಿ ಕಟ್ಟುದ್ರು. ಉಳಿಕೆ ದುಡ್ಡಾ‌ ಸರ್ಕಾರ ಹಾಕ್ತು. ನಮ್ಮ‌ ಮನೆ‌ ನ್ಯಾರುಕ್ಕೆ‌ ಬೋರ್ ಹಾಕಿದ್ರು. ಯಾಕೇಂದ್ರೆ ಅದು ಊರಿನ ನಡುಮಧ್ಯೆ ಆಗ್ತಿತ್ತು. ಅದಾದ್ ಮ್ಯಾಗೆ ಮಾದಿಗರ ಹಟ್ಯಾಗೆ ಎರಡು ಕಡೆ, ನಾಯಕರ ಹಟ್ಯಾಗೆ ಒಂದೆರಡು ಕಡೆ, ಉಳಿದಂಗೆ ಎರಡು ಕಡೆ ಪೈಪು ಲೈನು ಹಾಕ್ಸಿ, ಕೊಳಾಯಿ ಹಾಕಿದ್ರು. ಜನಾ ಕುಶೀಲೆ ನಲ್ಯಾಗಿಂದ ನೀರು ಹಿಡ್ಕಣಾರು. ಇದ್ರಾಗೆ ಇನ್ನೊಂದು ಮುಖ್ಯ ಇಸ್ಯಾ ಅಂದ್ರೆ, ಇಡೀ ಮಧುಗಿರಿ ತಾಲ್ಲೂಕಾಗೆ ಈ ಯೋಜನೇನಾಗೆ ನಮ್ ಹಳ್ಳೀನೇಯಾ ನಲ್ಲಿ ನೀರು ಪಡ್ಕಂಡ ಮೊದುಲ್ನೆ ಊರು ಅಂಬೋದು ಅಪ್ಪಂಗೆ ಕೋಡು. ಇಡೀ ತುಮಕೂರು ಜಿಲ್ಲೇನಾಗೆ ಎಂಟೋ ಒಂಬತ್ತೋ ಹಳ್ಳಿಗಳ್ಗೆ ಒಟ್ಟಿಗೇ ಬಂತೂಂತ ಕಾಣ್ತದೆ.

ಓಪನ್ ಕಾರಲ್ಲಿ ಮದುವೆ ಮೆರವಣಿಗೆ

ಇದೇನೂ ಊರ ಉದ್ಧಾರದ ಸುದ್ದಿ ಅಲ್ಲ.‌ ಆದ್ರೂ ಇದ್ರ ಸಂದೀನಾಗೆ ನಡೆದಿದ್ದು. ಆಗ ಅಪ್ಪ ವಿ ಎಸ್ ಎಸ್ ಎನ್ ಅಧ್ಯಕ್ಷರಾಗಿದ್ರು.‌ ಪಂಚಾಯ್ತಿ ಮೆಂಬ್ರೂ ಆಗಿದ್ದರು. ಅದೇ ಟೇಮಿನಾಗೆ ಮದ್ವೇನೂ ಆಯ್ತು.‌ ಆಗಾಗ್ಲೇ ದೊಡ್ಡ ಮನುಸ್ಯರು ಅನ್ನುಸ್ಕಂಡಿದ್ರಲ್ಲ, ಜನುರ್ಗೂ ಸಾಯಾ ಮಾಡ್ಕಂಡು ಪ್ರೀತಿ ಸಂಪಾದ್ಸಿದ್ರು. ಮಧುಗಿರೀನಾಗೆ ಶಂಕರ್ ಸ್ಟುಡಿಯೋ ಇತ್ತು. ಪ್ರೇಮಕುಮಾರ್ ಅಂಬೋರು ನಡುಸ್ತಿದ್ರು. ಅವ್ರೇ ಅಪ್ಪನ ಮದ್ವೇಗೆ ಫೋಟೊ ತೆಗೆದವ್ರು. ಆಗೆಲ್ಲಾ ಅದುರ್ದು ಆಟೊಂದು ಕಾರ್ಬಾರಿರ್ನಿಲ್ಲ. ಮೂರು ಕಾಲಿನ ಸ್ಟ್ಯಾಂಡ್ ಇಕ್ಕಂಡು ಮ್ಯಾಗೆ ಕರೆ ಬಟ್ಟೆ ಗುಬುರಾಕ್ಕೊಂಡು ಫೋಟೋ ಹೊಡೀಬೇಕಿತ್ತು.‌ ಆವಪ್ಪ ಅಪ್ಪುಂಗೆ ನಿಮ್ಮ ಮದ್ವೇನಾಗೆ ಮೆರೋಣಿಗೆ ಮಾಮೂಲಿ ಇರಾದ್ ಬ್ಯಾಡ. ಓಪನ್ ಕಾರು ಕರಿಸಾಮಿ ಅಂತ ಐಡಿಯಾ ಯೋಳ್ದ. ಅಪ್ಪನೂ ಹೂ ಅಂದ ಮ್ಯಾಗೆ ಅವ್ರೇ ಓಪನ್‌ ಕಾರು ಕರಿಸಿದ್ರಂತೆ. ನಮ್ಮಮ್ಮನ ಊರು ಕುರೂಡೀನಾಗೂ ಆಮ್ಯಾಕೆ ನಮ್ಮ ಚಿಕ್ಕ್ಮಾಲೂರ್ನಾಗೂ ಮೆರೋಣಿಗೆ ಬೋ ಪೊಗದಸ್ತಾಗಿತ್ತಂತೆ. ಯಾರೂ ಕಂಡಿರ್ದಿದ್ದ ತರ ಆಯ್ತು ಅಂತ ಎಲ್ಲಾರ ಬಾಯಾಗೂ ಸ್ಯಾನೆ ದಿನ ಅದೇ ಮಾತಂತೆ.

ಈ ಸುದ್ದೀ ಇಲ್ಲೀಗ್ಯಾಕೆ ಬತ್ತೂಂತ ಯೋಳ್ತಿವ್ನಿ. ಅಪ್ಪುಂಗೆ ಇದು ನೆಪ್ಪೇ ಇಲ್ಲ. ಅವ್ರೂ ಯೋಳ್ನಿಲ್ಲ. ನಾನೂ ಮೂರು ದಿನುದ್ ಮುಂಚೆ ಮಧುಗಿರೀಗೆ ಕಮಲಾ ಹಂಪನಾ ಅವರ ಬದುಕು ಬಗ್ಗೆ ಭಾಷಣ ಮಾಡಾಕೆ ಹೋಗಿದ್ದೆ. ಅಲ್ಲಿ ಪ್ರೇಮಕುಮಾರ್ ಅವ್ರು ಸಿಕ್ಕಿದ್ರು. ಅವ್ರೇ ಇಸ್ಯಾ ಎಲ್ಲಾ ಯೋಳಿದ್ರು. ತಕ್ಷನ ತಡೀ ಅತ್ಲಾಗೆ ಇದೊಂದು ವಿಸೇಸ ಸುದ್ದಿ. ಇದ್ರ ಸಂದ್ಯಾಗೇ ತೂರ್ಸಾಮಾ ಅಂತ ಯೋಳ್ಬಿಟ್ಟೆ ಆಟೇಯಾ.

ಬೋರ್ವೆಲ್ ತಂದದ್ದು

ಮದುವೆಯಾಗಿ ಒಂದೊರ್ಸಾ ಆಗಿತ್ತು. ಆಗ ಬೇಸಾಯದಾಗೆ ಜನುರ್ಗೆ ನೀರಿನ ಪರದಾಟ ಸ್ಯಾನೆ ಇತ್ತು. ಆಗೆಲ್ಲಾ ಮೊದ್ಲು ಬಾವಿ ತೋಡ್ಸಿ, ಅದ್ರಾಗೆ ಬೋರ್ ಹಾಕ್ಸಬೇಕಿತ್ತು. ಕಾಸು ಸೊಲ್ಪ ಜಾಸ್ತೀನೆ ತಕಂತಿದ್ರು. ಬಡಬಗ್ಗರಿಗೆ ಬೋ ಸಂಕಟ ಇತ್ತು. ಇತ್ಲಾಗೆ ಬೋರ್ ಕೊರುಸ್ದೆ ನೀರು ಸಿಗಾಕಿಲ್ಲಾ, ಅತ್ಲಾಗೆ ಬೋರ್ ಕೊರ್ಸಾಕೆ ಕಾಸು ಕೈಯಾಗಿಲ್ಲ, ಸಾಲಾ ಸೋಲ ಮಾಡ್ಕಂಡು ತಲೆ ಮ್ಯಾಕೆ ಕೈ ಹೊತ್ತು ಕುಂತ್ಕಣಾ ಅಂಗಾಗಿತ್ತು. ಅಪ್ಪ ಅವುರ್ಗೆ ಸಾಯಾ ಮಾಡಾಕೆ ತಾವೇ ಒಂದು ಬೋರ್ ತರಾಣಾ ಅಂತ ಕೊಯಮತ್ತೂರಿಗೆ ಹೋದ್ರು. ನಾಕು ದಿನ ಅಲ್ಲೇ ಇದ್ದು ಬೋರ್ ರೆಡಿ ಮಾಡ್ಸಕಂಡು ಬಂದ್ರು.‌ ಬಡುವುರ್ಗೆ ಕಡಿಮೆ ರೈಟ್ನಾಗೆ ಬೋರ್ ಹಾಕ್ಸಾಕೆ ನಿಂತ್ರು. ಆಗೆಲ್ಲಾ ನೀರಿನ ಪಸೆ ಸೆಂದಾಕಿತ್ತು. ಎಂಬತ್ತು ತೊಂಬತ್ತು ಅಡೀಗೆಲ್ಲಾ ಘನವಾಗಿ ಸಿಕ್ತಿತ್ತು. ಅಬ್ಬಬ್ಬಾ ಅಂದ್ರೆ ಒನ್ನೊಂದು ಸತಿ ನೂರಿಪ್ಪತ್ತು ಅಡೀಗಂಟ ಓಗ್ ಬೇಕಿತ್ತು. ನಾಕೈದೊರ್ಸಾ ಅಂಗೇ ಸುತ್ತ‌ಮುತ್ತಲ ಊರಾಗೆಲ್ಲ ಬೋರ್ ಹಾಕ್ಕೊಟ್ಟ್ರು. ತೀರಾ ಬಡವರು ಸಾಲಾ ಯೋಳ್ತಿದ್ರು. ಆಮ್ಯಾಕೆ ತೀರುಸ್ತಾನೆ ಇರಲಿಲ್ಲ. ಕೈಲಾಗ್ದೇ ತೀರುಸ್ದಿರೋರು ಸೊಲ್ಪಾದ್ರೆ, ಆದ್ರೂವೇ ಕೈಯೆತ್ತಿದೋರೂ ಸ್ಯಾನೆ ಮಂದಿ ಇದ್ರು. ‌ಕೈಯಿಂದ ಕಾಸಾಕ್ಕಂಡು ಅಂಗೇ ವಸಿ ದಿನ ನಡುಸುದ್ರು. ಕಡೀಕ್ಕೆ ಸುಸ್ತಾಗಿ‌ ನಿಲ್ಲುಸ್ ಬುಟ್ರು.

ಮಿಡ್ವೈಫ಼್ ಕ್ವಾಟ್ರಸ್ಸು

ಊರಾಗೆ ಮಂದೀಗೆ ಸಣ್ಣಾಪುಟ್ಟಾ ಖಾಯಿಲೆ ಕಸಾಲೇಗೆ, ಬಿಮ್ಮನ್ಸೆ ಆದ(ಬಸಿರಿ) ಹೆಂಗುಸ್ರಿಗೆ, ಬಾಣ್ತೀರ್ಗೆ ಔಷಧಿ ಕೊಡಾಕೆ ಈ ಮಿಡ್ವೈಫ಼ುಗಳು ಇರ್ತಿದ್ರು. ಒಂದು ಸಣ್ಣ ಬಾಡಿಗೆ ಮನೆ ಇಡ್ಕಂಡು ಇಲ್ಲೇ ಇರೋರು ಕೆಲುವ್ರು. ಬ್ಯಾರೆ ಊರಿಂದ ಓಡಾಡೋರೂ ಕೆಲುವ್ರು ಇದ್ರು. ಆಗ ಗವಿಯಮ್ಮ ಅಂಬೋರು ಮಿಡ್ವೈಫ಼ಾಗಿದ್ರು. ಆಗ ಸರ್ಕಾರದಿಂದ ಅವುರ್ಗೆ ಕ್ವಾಟ್ರಸ್ಸು ಮಂಜೂರು ಮಾಡಿಸಿ, ಕಟ್ಟುಸ್ ಕೊಟ್ರು.‌ ಆವಾಗಿಂದ ಮಿಡ್ ಪೈಪುಗಳು(ಜನರ ಬಾಯಾಗೆ ಇಂಗೇಯಾ) ಊರ್ನಾಗೇ ಇರ್ತಿದ್ರು.

ವೃದ್ಧಾಪ್ಯ – ವಿಧವಾ ವೇತನ

ಸರ್ಕಾರದಾಗೆ ಇದೊಂದು ಸ್ಕೀಮು ಐತೇಂತ ಗೊತ್ತಾಯ್ತು. ಊರಾಗ್ಳ ಮುದುಕ್ರು (ಅರವತ್ತೊರ್ಸಾ ಆದವ್ರು), ವಿಧವೇರ (ಗಂಡ ಸತ್ತ ಮುಂಡೇರು ಅಂತ ಜನ್ರು ಆಡ್ಕಂತಿದ್ರು) ಪಟ್ಟೀ ಮಾಡ್ಕಂಡು ಸರ್ಕಾರದಿಂದ ಮಂಜೂರು ಮಾಡುಸ್ಕೊಂಡು ಬಂದ್ರು. ಎಂ ಪಿ ಪ್ರಸನ್ನಕುಮಾರ್ ಅವುರ್ನ ಕರ್ಸಿ, ದೋಡ್ಡ ಫ಼ಂಕ್ಸನ್ ಮಾಡಿ ವೃದ್ಧಾಪ್ಯ ವೇತನ, ವಿಧವಾ ವೇತನ ಕೊಡಿಸಿದ್ರು.

ರೇಷನ್ ಡಿಪೋ ತಂದಿದ್ದು

ಜನುರ್ಗೆ ನ್ಯಾಯಬೆಲೆ ಅಂಗಡಿ ಬೇಕಿತ್ತು. ಸರ್ಕಾರದೋರು ಕೊಡಾ ಅಕ್ಕಿ, ರಾಗಿ, ಸಕ್ಕರೆ, ಬೇಳೆ ಹಂಚಾಕೆ ಒಂದು ನ್ಯಾಯಬೆಲೆ ಅಂಗಡಿ ಮಂಜೂರು ಮಾಡ್ಸಿದ್ರು. ಬಡವುರ್ಗೆಲ್ಲಾ ಬಿ ಪಿ ಎಲ್ ಕಾರ್ಡು ಮಾಡ್ಸಾಕೆ ಸಾಯಾ ಮಾಡಿದ್ರು. ಕಾರ್ಡು ಇರೋರ್ಗೆಲ್ಲ ರೇಶನ್ ಸಿಕ್ತಿತ್ತು.

ಜನತಾ ಮನೆ

ಆಗ ಸರ್ಕಾರ ಬಡುವುರ್ಗೆ ನಿವೇಶನ ಕೊಡಾಕೇಂತ ರೂಲೀಸ್ (ರೂಲ್ಸ್) ತಂದಿತ್ತು. ಜಾತಿ ಪಾತಿ ನೋಡ್ದೆ, ಸ್ಯಾನೆ ಬಡುವುರ್ದೊಂದು ಪಟ್ಟೀ ಮಾಡಿ ಸುಮಾರು ಜನುರ್ಗೆ ನಿವೇಶನ ಸಿಗಾ ಅಂಗೆ ಮಾಡುದ್ರು. ಆಮ್ಯಾಕೆ ಅದ್ರಾಗೂ ಕಷ್ಟ ಇರೋರ್ಗೆ ಸುಮಾರು ಜನುಕ್ಕೆ ಸರ್ಕಾರದಿಂದ ಜನತಾ ಮನೆ ಯೋಜನೇನಾಗೆ ಮನೇ‌ ಕಟ್ಸಾಕೆ ಹಣ ಕೊಡಿಸಿದ್ರು.

ತಾಳಿ ಭಾಗ್ಯ

ಒಂದೆರಡು ಮೂರೊರ್ಸಾ ಇದುನ್ನ ನಡುಸ್ಕಂಡು ಬಂದ್ರು. ಊರಾಗ್ಳ ಬಡುವ್ರು ಮದ್ವೆ ಮಾಡಾಕೆ ಸಾಯಾ ಕ್ಯೋಳುದ್ರೆ, ಒಂದು ಜೊತಿ ಬಟ್ಟೆ ಒಂದು ಬಂಗಾರುದ್ ತಾಳೀ ಬೊಟ್ಟು ಮಾಡುಸ್ಕೊಡ್ತಿದ್ರು. ಆವಾಗ ಒಂದು ತೊಲ ಬಂಗಾರ ಅಂದ್ರೆ ಬರೇ ನೂರರವತ್ತು ರೂಪಾಯಂತೆ. ಇಪ್ಪತ್ತೈದು ರೂಪಾಯಿಗೆ ಒಂದು ತಾಳೀ ಬೊಟ್ಟು. ಬಂಗಾರ ಜಾಸ್ತಿ ರೈಟು ಆದ್ ಮ್ಯಾಕೆ ನಿಲ್ಲುಸುದ್ರು. ಇಲ್ಲೂ ಮುಖ್ಯ ಇಸ್ಯ ಐತೆ. ಅಪ್ಪುನ್ ತಾವೇನೂ ಸೂರೆ ಹೋಗೋಷ್ಟು ಕಾಸಿರಲಿಲ್ಲ. ಇವೆಲ್ಲಾ ಕೆಲುಸುಗ್ಳ ಕಷ್ಟ ಪಟ್ಟು, ಸಾಲಾ ಮಾಡ್ಕಂಡು ಮಾಡ್ತಿದ್ರು. ಬಡುವುರ ಕಂಡ್ರೆ ಪಿರೂತಿ.

ನಮ್ಮಮ್ಮುಂಗೆ ಒಂದೇ ಒಂದು ಒಡವೇನೂ ಮಾಡಿಸಲಿಲ್ಲ. ನಮ್ ತಾತ (ಅಮ್ಮನ ಅಪ್ಪ) ಮದ್ವೇನಾಗೆ ಮಗುಳ್ಗೆ ಕೊಟ್ಟಿದ್ದೆಷ್ಟೋ ಅಷ್ಟೇ. ಬಡುವ್ರ ತಾಳೀ ಇಸ್ಯದಾಗೆ ಅಮ್ಮನೂ ಖುಷೀಲೆ ಒಪ್ಪಿಕಂಡಿದ್ರು. ಆದ್ರೂ ಮನಸಾಗೆ ಆಸೇ ಇರ್ತೈತಲ್ಲ. ಆಗಾಗ ಸರ ಮಾಡ್ಸಾಕೆ ಕೇಳೋರು. ಅಪ್ಪನೂ ಸುಮ್ಕೆ ಹೂ, ಮುಂದಿನ ಕಿತ ಕಬ್ಬು ಮಾರ್ದಾಗ ನೋಡಾಣಾ, ಬತ್ತ ಬಂದಾಗ ನೋಡಾಣಾ ಅಂತ ಮುಂದ್ ಮುಂದ್ಕೆ ಹಾಕ್ಕಂಡೇ ಬಂದ್ರು. ನಮ್ಮಮ್ಮನೂ ಆಸೆ ಬಿಟ್ರು.

ಸರ್ಕಾರಿ ಹೈಸ್ಕೂಲು ಬಂದಿದ್ದು

ಊರಾಗೆ ಮಿಡ್ಲ್ ಇಸ್ಕೂಲ್ ಮಾತ್ರ ಇತ್ತು.‌ ಹೈಸ್ಕೂಲು ಇಲ್ದೆ ಏಸೋ ಜನ ಇಸ್ಕೂಲ್ ಬಿಟ್ಟಿದ್ರು. ಒಂದು ಹೈಸ್ಕೂಲು ಮಾಡುಸ್ಲೇಬೇಕು ನಾನು ಪಂಚಾಯ್ತಿ ಅಧ್ಯಕ್ಷನಾದಾಗ ಅಂತ ಬೋ ಓಡಾಡಿದ್ರು. ಆಗ ಪ್ರಸನ್ನ ಕುಮಾರ್ ಅವ್ರು, ಶಿಕ್ಷಣ ಮಂತ್ರಿಗಳಾಗಿದ್ದ ನಾಗಮ್ಮ ಕೇಶವಮೂರ್ತಿ ಅವರ ಹತ್ರ ಅಪ್ಪುನ್ನ ಕರ್ಕೊಂಡು ಹೋದ್ರು. ಅವುರ್ಗೂ ಸ್ಯಾನೆ ಖುಷೀ ಆಯ್ತು.‌ ನೋಡಪ್ಪಾ ನೀನು ಸರ್ಕಾರಿ ಇಸ್ಕೂಲ್ ಕೇಳಿದ್ದು ಒಳ್ಳೆದಾಯ್ತು. ಅಲ್ಪಸಂಖ್ಯಾತರು ಏನಾರಾ ಪ್ರವೀಟು (ಪ್ರೈವೇಟ್) ಇಸ್ಕೂಲ್ ಶುರು ಮಾಡೀರೆ ಬೋ ಕಷ್ಟ. ಅವ್ರು ಶುರು ಮಾಡಾಗಂಟ ಸುಮ್ಕಿದ್ದು, ವಸಿ ದೊಡ್ದಾದ ಮ್ಯಾಕೆ ಬಲಾಡ್ಯ ಜಾತಿಯೋರು ಬಂದು ಸೇರ್ಕಂತಾರೆ ಅಂತ ಆಗ ತಾನೆ ಆಗಿದ್ದ ಒಂದೆರಡು ಉದಾಹರಣೆ ಯೋಳಿದ್ರು. ಸರ್ಕಾರಿ ಇಸ್ಕೂಲ್ ಆದ್ರೆ ಈ ತಾಪತ್ರಯ ಇರಲ್ಲ ಅಂತ ಯೋಳಿದ್ರು. ನಾಗಮ್ಮನೋರೂ ಅಲ್ಪಸಂಖ್ಯಾತರಲ್ವೇ? ಅನುಭವ ಪಾಠ ಕಲಿಸಿತ್ತು. ಅಪ್ಪನೂ ಅದನ್ನು ಅನುಭವಿಸಿದ್ರು.

ಆಗ ಇಸ್ಕೂಲ್ ಮಂಜೂರು ಆಗ್ಬೇಕಾದ್ರೆ ಐದೆಕರೆ ಜಮೀನು ಇಸ್ಕೂಲ್ ಹೆಸ್ರಾಗೆ ಮಾಡ್ಬೇಕಿತ್ತು. ಇದು ಸರ್ಕಾರದ ಕಂಡೀಷನ್ನು. ಆಗ ಅಪ್ಪನೇ ಪಂಚಾಯ್ತಿ ಅಧ್ಯಕ್ಷರು. ಗ್ರಾಮಠಾಣ ಜಾಗ್ವಾ (ಗೋಮಾಳದ ಜಾಗ) ಇಸ್ಕೂಲ್‌ಗೆ ಮಾಡಾಕೆ ನೋಡಿದ್ರು. ಆದ್ರೆ ಕೆಲವು ಪಟ್ಟಭದ್ರರು ಆ ಜಾಗ್ವಾ ಅನುಭವಿಸ್ತಿದ್ರು. ಅವ್ರು ಇದುಕ್ಕೆ ಕಲ್ಲು ಹಾಕಾಕೆ ನೋಡಿದ್ರು. ಆದ್ರೆ ನಾಗಮ್ಮನೋರು ಅವತ್ತಿನ ಡಿ ಸಿ ಆರ್ಯಮಿತ್ರ ಅವುರ್ಗೆ ಕಂಡೀಸನ್ನಾಗಿ ಯೋಳಿದ್ರಿಂದ, ಅಪ್ಪ ಹೋಗಿ ಕೇಳಿದ್ ತಕ್ಸಣ, ಯೋಚ್ನೆ ಮಾಡ್ಬೇಡಿ, ಮಿನಿಸ್ಟ್ರು ಯೋಳವ್ರೆ ನಾನೆಲ್ಲಾ ಬಂದೋಬಸ್ತು ಮಾಡ್ತೀನಿ ಅಂತ ಐದೆಕರೆ ಜಾಗ್ವ ಇಸ್ಕೂಲ್ ಹೆಸ್ರಾಗೆ ಮಾಡ್ಸಿದ್ರು. ನೀವು ಈ ವರ್ಸವೇ ಇಸ್ಕೂಲ್ ಶುರು ಮಾಡೀ ಅಂತ್ಲೂ ಯೋಳಿದ್ರು. ಮಂತ್ರಿಗಳಾಗಿದ್ರೂ ಸರಳವಾಗಿದ್ದ, ಜನುರ ಕಷ್ಟ ಸುಖಕ್ಕೆ ಮರುಗ್ತಿದ್ದ ನಾಗಮ್ಮನೋರ ಇಸ್ಯಾ ಏಟು ಯೋಳಿದ್ರೂ ಅಪ್ಪುಂಗೆ ಸಮಾಧಾನ್ವಿಲ್ಲ.‌ ನಾನೂ ಸಣ್ಣುಡುಗಿ.‌ ಅವ್ರು ಯೋಳಿದ್ದು ಕ್ಯೋಳೂತ್ಲೇ ಬೆಳೆದಿದ್ದು. ನಾಗಮ್ಮನೋರು ಅಂದ್ರೆ‌ ನಂಗೂವೆ ಸ್ಯಾನೆ ಪ್ರೀತಿ ಬಂದಿತ್ತು. ಜನುಗ್ಳೆಲ್ಲಾ ಅವ್ರು ಇಸ್ಕೂಲ್ ಓಪನ್ ಮಾಡಾಕೆ ಬರ್ತಾರೆ ಅಂತ ಕಾದ್ಕಂಡಿದ್ರು. ಆದ್ರೆ ಅವುರ್ಗೆ ಬ್ಯಾರೆ ಕೆಲ್ಸ ಬಿದ್ದು ಬರ್ನಿಲ್ಲ. ಆರ್ಯಮಿತ್ರ ಅವ್ರು ಬಂದಿದ್ದ್ರು. ಜೊತೀಗೆ ಪ್ರಸನ್ನಕುಮಾರ್ ‌ಬಂದಿದ್ರು.‌ ಮೊದ್ಲು ಮಿಡ್ಲ್ ಇಸ್ಕೂಲ್‌ನಾಗೆ ಒಂದು ರೂಮು ಬಿಟ್ಟುಕೊಟ್ಟು, ಪಂಚಾಯ್ತಿ ಆಫ಼ೀಸ್ನಾಗೆ ವಸಿ ಜಾಗ ಬಿಟ್ಟುಕೊಟ್ಟು ಹೈಸ್ಕೂಲು ಶುರು ಮಾಡಿದ್ದು.

ಆಮ್ಯಾಕೆ ಸರ್ಕಾರ ಎರಡು ರೂಮು ಕಟ್ಟಿಸ್ಕೊಟ್ಟು ಸ್ವತಂತ್ರವಾಗಿ ಸುರು ಆಯ್ತು‌. ಆಗ ಅಪ್ಪ ಓಪನ್ ಮಾಡಾಕೆ ಬೇಕಾಗಿದ್ದ ಪೀಠೋಪಕರಣ್ವ ಕಾಸು ಹೊಂಚಿ ತಾವೇ ಕೊಡಿಸಿದ್ರು. ಇಂಗೆ ನಮ್ಮೂರ್ನಾಗೆ ಹೈಸ್ಕೂಲು ಸ್ಯಾನೆ ಕಷ್ಟದಿಂದ ಬಂತು.

ಇಲ್ಲೂ ಒಂದು ವಿಸೇಸ ಐತೆ. ಇಡೀ ಮಧುಗಿರಿ ತಾಲೂಕಿನಾಗೆ ಮಧುಗಿರಿ ಟೌನ್ ನಾಗೆ ಮಾತ್ರವೇ ಸರ್ಕಾರಿ ಹೈಸ್ಕೂಲು ಇದ್ದಿದ್ದು. ಪ್ರವೀಟು ಇಸ್ಕೂಲ್‌ಗಳು ಹೋಬಳಿ ಕೇಂದ್ರ ಕೊಡಿಗೇನಹಳ್ಳೀನಾಗೂ ಸೇರಿ ಐದಾರು ಇದ್ವು ಆಟೇಯಾ. ಅಂಗಾಗಿ ಚಿಕ್ಕಮಾಲೂರು ಹೈಸ್ಕೂಲು ವಿಶೇಷವಾಗಿತ್ತು. ಅದ್ರಾಗೂ ಆ ವರ್ಸ ಇಡೀ ತುಮಕೂರು ಜಿಲ್ಲೇನಾಗೆ ಅದೊಂದೇ ಹೈಸ್ಕೂಲು ಮಂಜೂರಾಗಿದ್ದು ಅನ್ನೋದು ಇನ್ನೊಂದು ಕೋಡು ಸಿಗಿಸಿತ್ತು. ಇನ್ನಾ ಏಸೊಂದು ಕೆಲ್ಸಾ ಮಾಡವ್ರೆ. ಅಧಿಕಾರದಲ್ಲಿದ್ದಾಗ ಮಾಡಿದ್ದು ಇವು. ಇದು ಬುಟ್ಟು ಸ್ವಂತವಾಗಿ ಮಾಡವ್ರೆ. ಒಟ್ನಾಗೆ ಕಷ್ಟಕ್ಕೆ ಮರುಗೋ ಜೀವ ಅದು.

ಈಟೊತ್ಗೆ ಅಪ್ಪ ತಾಲೂಕಿನ ರಾಜಕೀಯದಾಗೂ ಎಸ್ರು ತಕಂಡ್ರು. ಮುಖ್ಯ ವಿಷಯಗಳಾಗೆ ತೀರ್ಮಾನ ತಕಳಾ ಮಂದೀನಾಗೆ ಅಪ್ಪನೂ ಜಾಗ ಗಿಟ್ಟುಸ್ಕಂಡ್ರು. ಊರಿನ ಅಭಿವೃದ್ಧಿಗೆ ಇದೂ ಒಂತರಾ ಉಪ್ಯೋಗ ಆತು. ಜಗಳಗಳಲ್ಲಿ ಈ ಗುಂಪು ಶಾಂತಿ ಸಂಧಾನ್ವೂ ಮಾಡ್ತಿತ್ತು. ಯಾವುದೇ ಪ್ರಮುಖ ರಾಜಕೀಯ ಬದಲಾವಣೆನಾಗೆ, ಸಂಘ ಸಂಸ್ಥೆಗಳ ವಿಷಯದಾಗೆ ಮುಖ್ಯ ಪಾತ್ರ ಇರ್ತಿತ್ತು. ಇದ್ರಾಗೆ ಸ್ಯಾನೆ‌ ಮಂದಿ ರೆಡ್ಡಿಗಳು ಇದ್ರು. ಅವ್ರ ನಡ್ವೆ ಅಪ್ಪ ಒಬ್ರೆ ಅಲ್ಪಸಂಖ್ಯಾತರು. ಇವ್ರೆಲ್ಲಾ ಸೇರ್ಕಂಡು ಯಾವ್ದಾನಾ ತೀರ್ಮಾನ ತಕಾಬೇಕಾದ್ರೆ ಕೂಡಿ ಇಚಾರ ಮಾಡ್ತಿದ್ರು.

ಇದುಕ್ಕೆಲ್ಲಾ ಸಾತ್ ಕೊಟ್ಟಿದ್ದು, ಅಪ್ಪುಂಗೆ ಇದ್ದ ಜ್ಞಾನ, ಓದಿ ತಿಳ್ಕಣಾ ಬುದ್ಧಿ, ಉತ್ಸಾಹ, ಕಾನೂನು ಬದ್ಧವಾಗಿ ನಡ್ಕಂತಿದ್ದಿದ್ದು, ಊರಿನ್ ಮ್ಯಾಗ್ಳ ಪ್ರೀತಿ, ಜನುರ್ ಮ್ಯಾಗಿನ ಕಾಳಜಿಗಳು.