ನಾನಿನ್ನು ಎದ್ದು ಆಕಳಿಸುತ್ತಾ ಕೂತಿರುವಾಗ ಈ ಹೆಣ್ಣು ಮಕ್ಕಳಿಗೆ ಏನಾಗಿದೆ? ಈ ಬದುಕು ಎಂದೂ ಕೂಡ ನಮಗೆ ಸುಸ್ತನ್ನೇ ದಯಪಾಲಿಸಿಯೇ ಇಲ್ಲವೇನೊ ಎನ್ನುವಂತೆ ಯಾಕಿಷ್ಟು ಕಳೆಕಳೆಯಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಹಬ್ಬದಂತೆ ಓಡಾಡುತ್ತಿದ್ದಾರೆ. ಈ ಹಬ್ಬದ ದಿನ ಒಬ್ಬೊಬ್ಬ ಹೆಣ್ಣು ಮಗಳು ನಡೆದಾಡುವ ಒಂದೊಂದು ತೇರೇನೊ ಅನಿಸುತ್ತದೆ. ಈ ಹಬ್ಬವನ್ನು, ಹಬ್ಬದ ಸಂಭ್ರಮವನ್ನು ಹೆಣ್ಣು ಮಕ್ಕಳು ವಶಪಡಿಸಿಕೊಂಡರಾ?
ಏನೆಲ್ಲದರ ನಡುವೆ ಬದುಕನ್ನೂ, ಆಗಾಗ ಬರುವ ಹಬ್ಬಗಳನ್ನೂ ಸಮನಾಗಿ ತೂಗಿಸಿಕೊಂಡು ಹೋಗುವ ಹೆಣ್ಣುಮಕ್ಕಳ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ

ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೆ
ತೌರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯ ತೊಡಿಸಿದರು..

ಕೆಎಸ್ಎನ್ ಅವರ ಈ ಹಾಡು ಕೇಳುವಾಗ ಮುಂದಿನ ಚರಣಕ್ಕೆ ಹೋಗುವ ಮುನ್ನ ಒಂದು ಮೌನ ಆವರಿಸುತ್ತದೆ. ಹಾಡು ನಿಲ್ಲಿಸುತ್ತೇನೆ. ಕಣ್ಣ ಮುಂದೆ ಮಲ್ಲಿಗೆ, ಬಳೆ, ಕುಂಕುಮ, ದಡೆಯ ಸೀರೆ, ಕೆನ್ನೆಗೆ ಲಘುವಾಗಿ ಬಳಿದುಕೊಂಡ ಅರಿಶಿಣ, ಕಾಲ್ಗೆಜ್ಜೆ, ನೀಟಾಗಿ ಬಾಚಿಕೊಂಡ ಬೈತಲೆ ಎಲ್ಲವೂ ಸಾಲು- ಸಾಲಾಗಿ ನೆನಪಾಗುತ್ತವೆ.

ಹಬ್ಬದ ಹಿಂದಿ‌ನ ದಿ‌ನ ತಡರಾತ್ರಿಯವರೆಗೂ ಅದೆನೇನೊ ತಯಾರಿ ಮಾಡುತ್ತಿದ್ದ ಅವ್ವ ನೆನಪಾಗುತ್ತಾಳೆ. ಅವಳ ಬಳೆಯ ಸದ್ದು ಆ ಮೌನ ರಾತ್ರಿಯಲ್ಲಿ ಒಂದು ಸಂಗೀತದಂತೆ ಕೇಳಿಸುತ್ತದೆ. ಬೆಳಗ್ಗೆ ನಾನು ಎದ್ದು ಆಚೆ ಬರುವಷ್ಟರಲ್ಲಿ ಅಕ್ಕ ತಲೆ ಸ್ನಾನ ಮಾಡಿ, ಅದಕ್ಕೊಂದು ಟವಲು ಬಿಗಿದುಕೊಂಡು ಸಣ್ಣ ಸಣ್ಣ ಹನಿಗಳನ್ನು ಅಲ್ಲಲ್ಲಿ ಸುರಿಸಿಕೊಳ್ಳುತ್ತಾ ಮನೆ ಮುಂದೆ ರಂಗೋಲಿ ಬಿಡಿಸುತ್ತಾಳೆ. ಅವಳ ಪುಟ್ಟ ಕಾಲ್ಗೆಜ್ಜೆಯ ಘಲ್ ಘಲ್ ಸದ್ದಿಗೆ ಹಬ್ಬದ ಬೆಳಗು ಚುರುಕಾಗಿ ಎದ್ದು ಕೂರುತ್ತದೆ.

ಮೊಬೈಲ್ ನಲ್ಲಿ ಟಣ್‌ನೆ ಸದ್ದು. ತೆಗೆದು ನೋಡಿದರೆ ಗೆಳತಿಯ ಫೋಟೊ. ಹೊಚ್ಚ ಹೊಸ ಧಿರಿಸಿನಲ್ಲಿ ಅವಳು ದೇವಿಯಂತೆ ಕಾಣುತ್ತಿದ್ದಾಳೆ. ಬೀದಿಯಲ್ಲಿ ಯಾರದೊ ಮನೆಯ ಪುಟಾಣಿ ಬಾಲೆ ಹಬ್ಬವನ್ನೇ ಮೈಗೆ ಧರಿಸಿಕೊಂಡು ಪುಟ್ಟ ದೇವತೆಯಂತೆ ಓಡಾಡುತ್ತಿದ್ದಾಳೆ. ತಂಗಿ ಓಡಿ ಬಂದು ‘ಅಣ್ಣಾ ನೋಡಿಲ್ಲಿ..’ ಎನ್ನುತ್ತಾ ತನ್ನ ಪುಟ್ಟ ಎರಡು ಅಂಗೈಗಳನ್ನು ತನ್ನ ಮುಂದಿಡುತ್ತಿದ್ದಾಳೆ. ಅವಳ ಕೈಯಲ್ಲಿ ಮೆಹಂದಿ ಚಿತ್ತಾರ. ಅವಳ ಕೈ ತುಂಬಾ ಮುಂಜಾನೆಯ ಮುಗಿಲು.

ಪಕ್ಕದ ಮನೆಯ ಆಂಟಿ ಹೊಸ ಸೀರೆಯಲ್ಲಿ ಆಗಲೇ ಎರಡು ಬಾರಿ ಆಚೆ ಬಂದು ಹೋದರು. ಎದುರು ಮನೆಯ ನೀಲಕ್ಕ ಆಗಲೇ ಅಡುಗೆ ಮನೆಯಲ್ಲಿ ನಿಂತು ಹಬ್ಬದ ಅಡುಗೆಯ ವಾಸನೆಯನ್ನು ಹೊರಗೆ ಕಳುಹಿಸುತ್ತಿದ್ದಾರೆ.

ನಾನಿನ್ನು ಎದ್ದು ಆಕಳಿಸುತ್ತಾ ಕೂತಿರುವಾಗ ಈ ಹೆಣ್ಣು ಮಕ್ಕಳಿಗೆ ಏನಾಗಿದೆ? ಈ ಬದುಕು ಎಂದೂ ಕೂಡ ನಮಗೆ ಸುಸ್ತನ್ನೇ ದಯಪಾಲಿಸಿಯೇ ಇಲ್ಲವೇನೊ ಎನ್ನುವಂತೆ ಯಾಕಿಷ್ಟು ಕಳೆಕಳೆಯಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಹಬ್ಬದಂತೆ ಓಡಾಡುತ್ತಿದ್ದಾರೆ. ಈ ಹಬ್ಬದ ದಿನ ಒಬ್ಬೊಬ್ಬ ಹೆಣ್ಣು ಮಗಳು ನಡೆದಾಡುವ ಒಂದೊಂದು ತೇರೇನೊ ಅನಿಸುತ್ತದೆ. ಈ ಹಬ್ಬವನ್ನು, ಹಬ್ಬದ ಸಂಭ್ರಮವನ್ನು ಹೆಣ್ಣು ಮಕ್ಕಳು ವಶಪಡಿಸಿಕೊಂಡರಾ?

ಹಬ್ಬ, ಬದುಕಿನ ಸಂಭ್ರಮದ ಆಚರಣೆ. ಈ ಬಾಳನ್ನು ಎಲ್ಲಾ ಮರೆತು ಸಂಭ್ರಮಿಸಲು ಇರುವ ದಿನ. ಹಬ್ಬದ ಹಿನ್ನೆಲೆ ಏನೇ ಇದ್ದರೂ ಅದರಲ್ಲಿ ಅಡಗಿರುವುದು ಒಂದೇ ಅದು ಸಂಭ್ರಮ.

ಈ ಸಂಭ್ರಮಕ್ಕೂ ಆ ಹೆಣ್ಣಿಗೂ ಏನೊ ಸಂಬಂಧ. ಅವಳು ಇರುವ ಕಡೆ ಲವಲವಿಕೆ ಇರುತ್ತದೆ. ನಗು ಇರುತ್ತದೆ. ಚುರುಕುತನ ಇರುತ್ತದೆ. ಅವಳಿರುವ ಕಡೆ ಅವ್ಯವಸ್ಥೆ ಎಂಬುದೇ ಇರುವುದಿಲ್ಲ. ಮಮತೆ, ಪ್ರೀತಿ, ಕಾಳಜಿ, ಸಹಕಾರ, ಸಮನ್ವಯ ಮತ್ತು ನೋವು ನುಂಗುವ, ಕಷ್ಟ ಸಹಿಸುವ, ಎಲ್ಲಾ ಮರೆಯುವ, ಬೇಕೆನಿಸಿದ್ದು ನೆನಪಿಡುವ ಗುಣ ಅವಳದು.

ಹೆಣ್ಣೆಂದರೆ ಹಬ್ಬ. ಹೆಣ್ಣೆಂದರೆ ಸಂಭ್ರಮ. ಅಮ್ಮನ ಜೊತೆ, ಸಹೋದರಿಯರ ಜೊತೆ, ಗೆಳತಿಯರ ಜೊತೆ, ಪ್ರೇಯಸಿಯ ಜೊತೆ, ಹೆಂಡತಿಯ ಜೊತೆ, ಮಗಳ ಜೊತೆ ಕಳೆಯುವ ಕ್ಷಣಗಳೆಲ್ಲವೂ ಹಬ್ಬದಂತವು. ಅವಳೇ ಒಂದು ಹಬ್ಬವಾಗಿರುವಾಗ ಇನ್ನೂ ಅವಳು ಮಾಡುವ ಹಬ್ಬಕ್ಕೆ ಅದೆಂತಹ ಸಿರಿಯು ಬರಬಹುದು. ಅವಳಿಲ್ಲದೆ ಯಾವ ಹಬ್ಬವೂ ನಡೆಯುವುದಿಲ್ಲ‌. ಯಾವ ಹಬ್ಬಕ್ಕೂ ಬಣ್ಣ ಬರುವುದಿಲ್ಲ‌.

ಕುಟುಂಬದಲ್ಲಿ ಯಾವುದೇ ಕಷ್ಟವಿದ್ದರೂ ಅವಳು ಆ ದಿನ ಅದನ್ನು ಖುಷಿಯಾಗಿ ಪರಿವರ್ತಿಸುತ್ತಾಳೆ. ನೋವನ್ನು ತೋರಣವಾಗಿ ನಗಿಸುತ್ತಾಳೆ. ಮನಸ್ತಾಪಗಳನ್ನು ದೀಪಕ್ಕೆ ಹಾಕಿ ಬೆಳಗಿಸುತ್ತಾಳೆ. ಬೇಸರವನ್ನು ಗುಡಿಸಿ ಆಚೆ ಚೆಲ್ಲುತ್ತಾಳೆ. ಕೋಪವನ್ನು ಒಲೆಗೆ ಬೆಂಕಿ ಹಚ್ಚುತ್ತಾಳೆ. ಮತ್ತು ದೇವಿಯಂತೆ ನಿಂತು ಮನೆಗೆ ಹಿಡಿದಿದ್ದ ಶಾಪ ಕಳೆದು ಹಾಕುತ್ತಾಳೆ. ಹಬ್ಬವನ್ನು ಒಂದು ನೆಪವಾಗಿ ಇವುಗಳೆಲ್ಲವನ್ನೂ ಸಾಧ್ಯಮಾಡುತ್ತಾಳೆ.

ಗಂಡು ಹಬ್ಬದ ಸಂಭ್ರಮದಲ್ಲಿ ಒಬ್ಬ ಪಾಲುದಾರ. ಅವನು ಹಬ್ಬ ಮತ್ತು ಮಾಮೂಲಿ ದಿನಗಳ ಅರಿವೆ ಇಲ್ಲದೆ ಇದ್ದು ಬಿಡುತ್ತಾನೆ. ಎಲ್ಲಾ ಅನುಕೂಲಗಳನ್ನು ಮಾಡಿ ಸುಮ್ಮನಿರುತ್ತಾನೆ. ಅವನಿಗೆ ಹಬ್ಬ ಎನ್ನುವುದು ಒಂದು ಹಬ್ಬವಷ್ಟೆ. ಪೂಜೆ, ಹಬ್ಬದ ಊಟ.. ಸಾಧ್ಯವಾದರೆ ಒಂದು ಜೊತೆ ಹೊಸ ಬಟ್ಟೆ ಇಷ್ಟೆ ಅವನದು. ಪುರಾಣ- ಇತಿಹಾಸಗಳಿಂದ ಹಿಡಿದು ಇಂದಿನ ಮಾರುಕಟ್ಟೆಯ ರಿವಾಜುಗಳು ಕೂಡ ಅವಳು ಮಾಡುವ ಹಬ್ಬದ ಬಗ್ಗೆ ಹೇಳುತ್ತವೆ.

ಆದರೆ ಹೆಣ್ಣಿನ ಹಬ್ಬ ಮೊದಲು ಅವಳ ಮನಸಿನಲ್ಲಾಗುತ್ತದೆ. ಅವಳಲ್ಲೊಂದು ಮುಗ್ಧತೆ ಇದೆ.‌ ಅದು ಮುಕ್ತವಾಗಿ ಸಂಭ್ರಮಿಸಲು ರಹದಾರಿ ಹಾಕುತ್ತದೆ. ನಿಮಗೆ ಗೊತ್ತಾ ಅವಳು ಹಬ್ಬದ ದಿನ ಬೇರೆ ದಿನಕ್ಕಿಂತ ತುಂಬಾ ಸುಂದರವಾಗಿ ಕಾಣುತ್ತಾಳೆ. ಅದು ಹಬ್ಬವೇ ಕರುಣಿಸಿದ ಸೌಂದರ್ಯ.

ದುಬಾರಿ ಸೀರೆಯಿಂದ ಹಿಡಿದು ಊಟಕ್ಕೆ ಯಾವ ತರಹದ ಉಪ್ಪಿನಕಾಯಿ ಇರಬೇಕು, ಯಾರನ್ನು ಕರೆಯಬೇಕು ಅನ್ನುವುದರಿಂದ ಹಿಡಿದು ಅಂದು ಹೊರಗೆ ಎಷ್ಟು ಚುಕ್ಕಿಗಳ ರಂಗೋಲಿ ಇಡಬೇಕು ಅನ್ನುವುದರಲ್ಲೂ ಅವಳು ಹಬ್ಬಗಳನ್ನು ಕಾಣುತ್ತಾಳೆ. ಹೆಣ್ಣು ಮಾಡುವ ಹಬ್ಬ; ಹಬ್ಬವೇ ಹಬ್ಬ ಮಾಡಿದಂತೆ.