ಹೋದ ವಾರ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ಚುನಾವಣೆ ನಡೆದು ಆಗ ಆಡಳಿತ ನಡೆಸುತ್ತಿದ್ದ ಲೇಬರ್ ಪಕ್ಷ ಸೋತು, ಬಹುಮತ ಪಡೆದ ಲಿಬೆರಲ್ ಪಕ್ಷ ಅಧಿಕಾರಕ್ಕೆ ಬಂತು. ಹೊಸದಾಗಿ ತಮ್ಮ ಸರಕಾರವನ್ನು ರಚಿಸುತ್ತಾ, ಸಂಪುಟ ಸಚಿವರನ್ನು ಆಯ್ಕೆ ಮಾಡಿದ್ದ ಹೊಸ ಮುಖ್ಯಮಂತ್ರಿ ಡೇವಿಡ್ ಕ್ರಿಸ್ಟಫಲಿ ನಿನ್ನೆ ನಡೆದ ಸಮಾರಂಭದಲ್ಲಿ ಹಾಜರಿದ್ದರು. ಜೊತೆಗೆ ಒಂದಿಬ್ಬರು ಮಂತ್ರಿಗಳು, ಕೇಂದ್ರ ವಿರೋಧಪಕ್ಷದ ನಾಯಕರು, ನಗರಪಾಲಿಕೆ ಮೇಯರ್, ಎಂಪಿಗಳು ಎಂಬಂತೆ ರಾಜಕಾರಣಿಗಳ ದೊಡ್ಡ ತಂಡವೇ ಬಂದಿತ್ತು. ಮಾಮೂಲಿನಂತೆ ಎಲ್ಲರೂ ಸ್ಟೇಜ್ ಮೇಲೆ ಭಾರತೀಯ ಸಮುದಾಯವನ್ನು ಕೊಂಡಾಡಿ, ಅದರ ಬಹುಸಂಸ್ಕೃತಿಗಳ ಮಹತ್ವವನ್ನು ಗುರುತಿಸಿ ‘ದಿವಾಲಿ’ ಹಬ್ಬ ಅದೆಷ್ಟು ಚೆನ್ನ ಎಂದು ಹೊಗಳಿ ಶಾಲು ಹೊದಿಸಿಕೊಂಡು ಹೋದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ದೀಪಾವಳಿ ಹಬ್ಬ ಜೋರಾಗಿ ನಡೆದಿದೆ. ಬೆಳಕು-ಕತ್ತಲೆ ಮಾಯೆ ರಂಗೋಲಿಗಳ ಬಿಡಿಸಿ ಅಣಕವಾಡುತ್ತಿದೆ. ಈ ಬಾರಿ ಆಸ್ಟ್ರೇಲಿಯಾ-ಕನ್ನಡಿಗರಿಗೆ ದೀಪಾವಳಿಗೆಂದು ಯಾವ ಬಣ್ಣದ ಉಡುಪು ಹಾಕಿಕೊಳ್ಳೋದು ಅನ್ನೋ ಪ್ರಶ್ನೆ ಕಷ್ಟವಾಗಿಲ್ಲ. ಕರ್ನಾಟಕ ಬಾವುಟದ ಬಣ್ಣಗಳು, ಹಳದಿ ಮತ್ತು ಕೆಂಪು, ಅನೇಕರ ಆಯ್ಕೆಯಾಗಿದೆ. ಹೀಗಾಗಿದ್ದು ನಿನ್ನೆಯಷ್ಟೇ ಆರಂಭವಾಗಿರುವ ಕರ್ನಾಟಕ ರಾಜ್ಯೋತ್ಸವದ ಆಚರಣೆ ಈ ಬಾರಿ ದೀಪಾವಳಿ ಹಬ್ಬದ ಜೊತೆ ಸೇರಿದ್ದರಿಂದ. ಆಸ್ಟ್ರೇಲಿಯಾದ ದೇಸಿ ಕನ್ನಡಿಗರು ಒಬ್ಬರಿಗೊಬ್ಬರು ರಾಜ್ಯೋತ್ಸವದ ಶುಭಾಶಯವನ್ನು ಹೇಳುತ್ತಾ ವಾರಾಂತ್ಯದಲ್ಲಿ ಏರ್ಪಾಡಾಗಿರುವ ದೀಪಾವಳಿ ಇವೆಂಟ್‌ಗಳಲ್ಲಿ ಹಾಜರಿ ಹಾಕುತ್ತಿದ್ದಾರೆ. ದೇಶವಿಡೀ ನೂರಾರು ಕಡೆ ಸತತ ಶುಕ್ರವಾರ, ಶನಿವಾರ, ಭಾನುವಾರಗಳಂದು ಈ ‘ದಿವಾಲಿ’ ಇವೆಂಟ್‌ಗಳು ಭರ್ಜರಿಯಿಂದ ನಡೆಯುತ್ತಿವೆ. ಹೀಗೆ ತಂತಮ್ಮ ಪ್ರಾಂತೀಯ ಭಾಷೆಗಳನ್ನು ಪಕ್ಕಕ್ಕಿಟ್ಟು ಒಗ್ಗಟ್ಟಿನಿಂದ ಭಾರತೀಯರೆಲ್ಲರೂ ಸೇರುವುದು ಬಹುಶಃ ಭಾರತ ಸ್ವಾತಂತ್ರ್ಯ ದಿನಾಚರಣೆ ಮತ್ತು ದೀಪಾವಳಿಗೆ ಇರಬೇಕು. ದೀಪಾವಳಿ ಹಿಂದೂಧರ್ಮದವರಿಗೆ ಮುಖ್ಯವಾದರೂ ವಿದೇಶಗಳಲ್ಲಿ ಅದು ಸಾಂಘಿಕ ಸಮುದಾಯ ಆಚರಣೆಯಾಗಿ ರೂಪುಗೊಂಡಿದೆ. ಇದಕ್ಕೆ ಸ್ಥಳೀಯ ಸರಕಾರಗಳ, ನಗರಪಾಲಿಕೆಗಳ ಆರ್ಥಿಕ ಬೆಂಬಲ ಮತ್ತು ಸಹಕಾರವಿದೆ.
ಬೇರೆಲ್ಲಾ ಭಾರತೀಯ ಸಮುದಾಯ ಸಂಸ್ಥೆಗಳೊಡನೆ ಒಂದಾಗಿ ಸೇರಿ ಭರ್ಜರಿಯಿಂದ ದೀಪಾವಳಿ ಇವೆಂಟ್ ನಡೆಸಿದ್ದ ಸುಸ್ತಿನಿಂದ ಚೇತರಿಸಿಕೊಳ್ಳುವ ಕನ್ನಡ ಸಂಘಗಳು ನವೆಂಬರ್ ತಿಂಗಳ ವಾರಾಂತ್ಯಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ನಡೆಸುತ್ತವೆ. ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್, ಅಡಿಲೈಡ್, ಪೆರ್ತ್ ಮುಂತಾದ ಮುಖ್ಯ ಕೇಂದ್ರ ನಗರಗಳ ದೀಪಾವಳಿ ಇವೆಂಟ್‌ಗಳಿಗೆ ಕರ್ನಾಟಕದಿಂದ ಹಾಡುಗಾರರು, ಚಲನಚಿತ್ರ ಕಲಾವಿದರು ಬರುತ್ತಾರೆ. ಇವೆಂಟ್‌ಗೆ ದುಡ್ಡು ಕೊಟ್ಟು ಬರುವ ಕನ್ನಡಿಗರಿಗೆ ಯಥೇಚ್ಛ ಮನರಂಜನೆ ಸಿಗುತ್ತದೆ. ಅಪರೂಪಕ್ಕೊಮ್ಮೆ ಸಾಹಿತಿಗಳನ್ನೂ ಕರೆಸುತ್ತಾರೆ.
ಸರಿ, ಮತ್ತೆ ದೀಪಾವಳಿಗೆ ಬರುತ್ತೀನಿ. ನಿನ್ನೆ ಶುಕ್ರವಾರ ಬ್ರಿಸ್ಬೇನ್ ನಗರಪಾಲಿಕೆ ಟೌನ್ ಹಾಲ್ ಮುಂದೆ ಇರುವ ಕಿಂಗ್ ಜಾರ್ಜ್ ಚೌಕಟ್ಟಿನಲ್ಲಿ ನಡೆದ ದೀಪಾವಳಿ ಇವೆಂಟ್‌ಗೆ ಹೋಗಿದ್ದೆ. ಇದನ್ನು ಫೆಡರೇಶನ್ ಆಫ್ ಇಂಡಿಯನ್ ಕಮ್ಯೂನಿಟೀಸ್ ಆಫ್ ಕ್ವೀನ್ಸ್ಲ್ಯಾಂಡ್ (FICQ) ಏರ್ಪಡಿಸಿತ್ತು. ನಮ್ಮ ರಾಣಿರಾಜ್ಯದ ಹಲವಾರು ಭಾಷಾಧಾರಿತ ಸಂಸ್ಥೆಗಳು ಈ ಒಕ್ಕೂಟದ ಸದಸ್ಯರು .FICQ ಗೆ ರಾಜ್ಯ ಸರಕಾರ ಮತ್ತು ಬ್ರಿಸ್ಬೇನ್ ನಗರಪಾಲಿಕೆಯಿಂದ ಹಣಸಹಾಯ ಸಿಗುತ್ತದೆ. ಇವರು ಏರ್ಪಡಿಸುವ ದೀಪಾವಳಿ ಇವೆಂಟ್ ವರ್ಷದಿಂದ ವರ್ಷಕ್ಕೆ ಸುಧಾರಿಸುತ್ತಿದೆ.
ಹೋದ ವಾರ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ಚುನಾವಣೆ ನಡೆದು ಆಗ ಆಡಳಿತ ನಡೆಸುತ್ತಿದ್ದ ಲೇಬರ್ ಪಕ್ಷ ಸೋತು, ಬಹುಮತ ಪಡೆದ ಲಿಬೆರಲ್ ಪಕ್ಷ ಅಧಿಕಾರಕ್ಕೆ ಬಂತು. ಹೊಸದಾಗಿ ತಮ್ಮ ಸರಕಾರವನ್ನು ರಚಿಸುತ್ತಾ, ಸಂಪುಟ ಸಚಿವರನ್ನು ಆಯ್ಕೆ ಮಾಡಿದ್ದ ಹೊಸ ಮುಖ್ಯಮಂತ್ರಿ ಡೇವಿಡ್ ಕ್ರಿಸ್ಟಫಲಿ ನಿನ್ನೆ ನಡೆದ ಸಮಾರಂಭದಲ್ಲಿ ಹಾಜರಿದ್ದರು. ಜೊತೆಗೆ ಒಂದಿಬ್ಬರು ಮಂತ್ರಿಗಳು, ಕೇಂದ್ರ ವಿರೋಧಪಕ್ಷದ ನಾಯಕರು, ನಗರಪಾಲಿಕೆ ಮೇಯರ್, ಎಂಪಿಗಳು ಎಂಬಂತೆ ರಾಜಕಾರಣಿಗಳ ದೊಡ್ಡ ತಂಡವೇ ಬಂದಿತ್ತು. ಮಾಮೂಲಿನಂತೆ ಎಲ್ಲರೂ ಸ್ಟೇಜ್ ಮೇಲೆ ಭಾರತೀಯ ಸಮುದಾಯವನ್ನು ಕೊಂಡಾಡಿ, ಅದರ ಬಹುಸಂಸ್ಕೃತಿಗಳ ಮಹತ್ವವನ್ನು ಗುರುತಿಸಿ ‘ದಿವಾಲಿ’ ಹಬ್ಬ ಅದೆಷ್ಟು ಚೆನ್ನ ಎಂದು ಹೊಗಳಿ ಶಾಲು ಹೊದಿಸಿಕೊಂಡು ಹೋದರು. ಕಾರ್ಯಕ್ರಮದ ಪೂರ್ತಿ ಅನೇಕಾನೇಕ ನೃತ್ಯಗಳು, ಅಲ್ಲೊಂದು ಇಲ್ಲೊಂದು ಹಾಡು ಇತ್ತು.
ನಮ್ಮ ಪುಣ್ಯಕ್ಕೆ ಈ ಬಾರಿ ಸ್ವಲ್ಪ ಬೇಗನೆ ಹೋಗಿದ್ದರಿಂದ ಕೂರಲು ಖುರ್ಚಿ ಸಿಕ್ಕಿತ್ತು. ಒಬ್ಬರು ಖುರ್ಚಿ ಕಾಯ್ದುಕೊಂಡಿದ್ದು ಇನ್ನೊಬ್ಬರು ಹೋಗಿ ಒಂದಷ್ಟು ತಿಂಡಿ, ಕಬ್ಬಿನಹಾಲು ಕೊಂಡುತಂದು ಮೆಲ್ಲುತ್ತಾ ನೃತ್ಯಗಳನ್ನು ನೋಡಿ ಬಂದೆವು. ಈ ಬಾರಿಯ ವಿಶೇಷ ಅಂದರೆ ಕತ್ತಲಾಗುವಾಗ ಶುಕ್ರವಾರದ ಕಚೇರಿ ಕೆಲಸ ಮುಗಿಸಿ ಭಾರಿ ಜನ ಸೇರಿದ್ದು. ಆಚೆಕಡೆ ಇದ್ದ ವಿಐಪಿ ಸ್ಟೇಜ್‌ನಲ್ಲಿ ಅತಿಥಿಗಳನ್ನು ಬರಮಾಡಿಕೊಂಡು FICQ ಸದಸ್ಯರು ಅವರನ್ನು ನಮ್ಮ ಕಡೆ ಇದ್ದ ಮುಖ್ಯ ಸ್ಟೇಜ್‌ಗೆ ಚಿಕ್ಕ ಮೆರವಣಿಗೆಯಲ್ಲಿ ತಂದರು. ಇದರ ಜೊತೆಗೆ ಕೇರಳ ತಂಡದ ಚಂಡೆವಾದ್ಯದ ಮೇಳ. ಬಾಲಿವುಡ್ ಡಾನ್ಸ್‌ಗಳ ಸಮುದ್ರದಲ್ಲಿ ಈ ಮೇಳ, ಮೂರ್ನಾಲ್ಕು ಶಾಸ್ತ್ರೀಯ ನೃತ್ಯಗಳು, ಒಂದೆರೆಡು ಬಾಂಗ್ರಾ ಮತ್ತು ಮಲೆಯಾಳಿ ಹೆಂಗಸರ ಓಣಂ ಹಬ್ಬದ ಲಘು ನೃತ್ಯ ಚೆನ್ನಾಗಿತ್ತು.
ಈ ಇನ್ನೊಂದು ವಿಶೇಷದ ಬಗ್ಗೆ ಹೇಳಬೇಕು. ಇದೆ ಆಗಸ್ಟ್ ತಿಂಗಳಲ್ಲಿ ಆಗಿನ ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರವು (ಲೇಬರ್ ಪಕ್ಷ) ರಾಜ್ಯದ ಪೂರ್ತಿ ಸಾರ್ವಜನಿಕ ಸಾರಿಗೆ ವಾಹನಗಳ ಟಿಕೆಟ್ ಕೇವಲ ಐವತ್ತು ಸೆಂಟ್‌ಗೆ ಇಳಿಸಿತ್ತು. ಕಾರಣ ಬೆಲೆಯೇರಿಕೆ, ಆರ್ಥಿಕ ಉಬ್ಬರ, ದಿನನಿತ್ಯ ಜೀವನದ ಖರ್ಚು ವಿಪರೀತವಾಗಿ ಜನ ಕಂಗೆಟ್ಟಿದ್ದರು. ಈ ಹಣದುಬ್ಬರ ಬಿಸಿಯನ್ನು ಕಡಿಮೆ ಮಾಡಲು ವಿದ್ಯುಚ್ಛಕ್ತಿ ಖರ್ಚಿಗೆ ಒಂದೇ ಒಂದು ಬಾರಿ ಸ್ವಲ್ಪ ರಿಯಾಯ್ತಿ, ಸಾರ್ವಜನಿಕ ಸಾರಿಗೆಯಲ್ಲಿ ವಿನಾಯ್ತಿ ಸಿಕ್ಕಿತು. ದಿನವೂ ಬಸ್, ಟ್ರೈನ್, ferry, ಟ್ರಾಮ್‌ಗಳಲ್ಲಿ ಪಯಣಿಸುವವರಿಗೆ ಈ ಐವತ್ತು ಸೆಂಟ್ ಟಿಕೆಟ್ ತಂದ ಖುಷಿ ಸಮುದ್ರದಷ್ಟು! ಉದಾಹರಣೆಗೆ, ನನ್ನ ಕೆಲವರು ಸಹೋದ್ಯೋಗಿಗಳು ಪ್ರಯಾಣದ ಖರ್ಚು, ಕಾರ್ ಪಾರ್ಕ್ ಫೀಸ್ ಕಡಿಮೆ ಮಾಡಿಕೊಳ್ಳಲು ದಿನವೂ ಕಾರ್ ಪೂಲ್ ಮಾಡುತ್ತಿದ್ದರು. ೫೦ ಸೆಂಟ್ ಜಾರಿಗೆ ಬಂದ ಮೇಲೆ ಬಸ್ ಮತ್ತು ಟ್ರೈನ್‌ನಲ್ಲಿ ಓಡಾಡುತ್ತಿದ್ದಾರೆ.
ಬೇರೆ ಊರುಗಳಲ್ಲಿ ಇರಬಹುದಾದ ವ್ಯವಸ್ಥೆಯಂತೆ ನಮ್ಮ ರಾಣಿರಾಜ್ಯದಲ್ಲಿ GO card ಎನ್ನುವುದಿದೆ. Queensland Translink ಸಾರಿಗೆ ಸಂಸ್ಥೆಯಿಂದ ಈ smart ಕಾರ್ಡ್ ಕೊಂಡು ಅದಕ್ಕೆ ಒಂದಷ್ಟು ಹಣ ಜಮಾಯಿಸಬೇಕು. ನಂತರ Translink ವಾಹನ ಹತ್ತುವ ಮೊದಲು ಅಲ್ಲಿರುವ ಟಚ್ ಯಂತ್ರಕ್ಕೆ ಈ ಕಾರ್ಡ್ ತಾಗಿಸಿದರೆ ಅಲ್ಲಿ ನಮ್ಮ ಪ್ರಯಾಣದ ಆರಂಭದ ಝೋನ್ ದಾಖಲಾಗುತ್ತದೆ. ನಮಗೆಲ್ಲಿ ಬೇಕೋ ಅಲ್ಲಿ ಇಳಿದು ಮತ್ತೆ ಅಲ್ಲಿರುವ ಟಚ್ ಯಂತ್ರಕ್ಕೆ GO card ತಾಗಿಸಬೇಕು. ಆಗ ಪ್ರಯಾಣವು ಪೂರ್ತಿಯಾದ ಲೆಕ್ಕ ಮತ್ತು ಆ ಸ್ಥಳದ ಝೋನ್ ಪ್ರಕಾರ ಟಿಕೆಟ್ ಬೆಲೆ ನಿಗದಿಯಾಗಿ ಅದು ನಮ್ಮ ಕಾರ್ಡ್‌ನಿಂದ ಪಾವತಿಯಾಗಿರುತ್ತದೆ. ಟಿಕೆಟ್ ಬೆಲೆ ಮತ್ತು ನಮ್ಮ ಕಾರ್ಡ್‌ನಲ್ಲಿ ಉಳಿದಿರುವ ಹಣ ಎರಡೂ ಆ ಯಂತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ಅವಶ್ಯಕತೆಯನ್ನು ಆಧರಿಸಿ ಕಾರ್ಡಿಗೆ ಹಣ ತುಂಬುತ್ತಾ ಹೋಗಬಹುದು. ಈ ಕಾರ್ಡ್ ಇಲ್ಲದೆ ನೇರವಾಗಿ ಟಿಕೆಟ್ ಕೊಂಡರೆ ಸ್ವಲ್ಪ ದುಬಾರಿ. ಹಾಗಾಗಿ ನಾವೆಲ್ಲರೂ ಈ GO card ಇಟ್ಟುಕೊಂಡಿದ್ದೀವಿ.
ನಿನ್ನೆ ನಾನು ಕಿಂಗ್ ಜಾರ್ಜ್ ಚೌಕಟ್ಟು ತಲುಪಲು ಟ್ರೈನ್ ಹತ್ತಿ ಮೊದಲ ಬಾರಿ ಆಗಸ್ಟ್‌ನಿಂದ ಚಲಾವಣೆಯಲ್ಲಿದ್ದ ೫೦ ಸೆಂಟ್ ಟಿಕೆಟ್ ಲಾಭ ಪಡೆದೆ. ಹೋಗು-ಬರುವ (return ಅನ್ನುತ್ತಾರೆ) ಪ್ರಯಾಣಕ್ಕೆ ಸುಮಾರು ಒಂಭತ್ತು ಡಾಲರ್ ಆಗುವ ಬದಲು ಕೇವಲ ಒಂದೇ ಒಂದು ಡಾಲರ್ ಕೊಟ್ಟಿದ್ದು ಬಾಳಾ ಖುಷಿಯಾಯ್ತು. ಹೀಗೆ ಅಪರೂಪಕ್ಕೆ ಸಾರ್ವಜನಿಕ ಸಾರಿಗೆಯನ್ನು ಬಳಸುವ ನನಗೇ ಇಷ್ಟು ಖುಷಿಯಾದರೆ ದಿನವೂ ಶಾಲೆಗೆ, ಕೆಲಸಕ್ಕೆ, ತಮ್ಮಿತರ ಕೆಲಸಗಳಿಗೆ ಓಡಾಡುವ ಮಂದಿಗೆ ಅದೆಷ್ಟು ಉಳಿತಾಯವಾಗುತ್ತಿದೆ!
ಈ ರೀತಿಯ ೫೦ ಸೆಂಟ್ ಟಿಕೆಟ್ ವ್ಯವಸ್ಥೆಯಿಂದ ಸರಕಾರಕ್ಕೆ ನಷ್ಟವಾಗಿಲ್ಲ, ಇದರಿಂದ ಹಣದುಬ್ಬರವು ಸ್ವಲ್ಪ ಇಳಿದಿದೆ, ಎನ್ನುವುದು ಈಗಷ್ಟೇ ಬೆಳಕಿಗೆ ಬಂದಿದೆ. ಈ ವಿಷಯ ಚುನಾವಣೆಗೂ ಮೊದಲು, ಹೋದ ತಿಂಗಳೇ ಬೆಳಕಿಗೆ ಬಂದು ರಾಜ್ಯದ ಜನತೆಗೆ ಇದು ಒಳಿತು ಎನ್ನುವುದು ಮನದಟ್ಟಾಗಿದ್ದರೆ ಆಗಿದ್ದ ಲೇಬರ್ ಪಕ್ಷವೇ ಚುನಾವಣೆಯಲ್ಲಿ ಗೆಲ್ಲುತ್ತಿತ್ತು ಅನ್ನೋದು ನಮ್ಮ ಅಂಬೋಣ. ಏನು ಮಾಡುವುದು, ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗಾಗಿದೆ. ಈಗ ಆರಿಸಿ ಬಂದಿರುವ ಹೊಸ ಸರಕಾರ ‘ನಾವು ರಾಜ್ಯದಲ್ಲಿ ಹೆಚ್ಚಾಗಿರುವ ಯೂತ್ ಕ್ರೈಂ ತಡೆಗಟ್ಟುತ್ತೀವಿ’ ಎನ್ನುವ ಭಾಷೆಯ ಮೇಲೆ ಗೆದ್ದಿದ್ದು. ವಯಸ್ಕರಂತೆ ಅಪರಾಧ ಮಾಡಿದರೆ ವಯಸ್ಕರಂತೆ ಶಿಕ್ಷೆ (adult crime adult time) ಅನ್ನೋದು ಈ ಪಕ್ಷ ಉಪಯೋಗಿಸಿದ ಚುನಾವಣಾ ಪ್ರಣಾಳಿಕೆ. ಇದನ್ನು ಪ್ರಶ್ನಿಸಿ ಅನೇಕರು ಈ ಮನೋಭಾವ ತಪ್ಪು ಎಂದಿದ್ದಾರೆ. ಹೈಸ್ಕೂಲ್ ಮಕ್ಕಳು ಕಿಡಿಗೇಡಿತನ ಮಾಡಿ ಅವರನ್ನು ಬಂಧಿಸಿ ಅವರಿಗೆ ವಯಸ್ಕರಂತೆ ಶಿಕ್ಷೆ ಕೊಡುವುದರಿಂದ ನಮ್ಮ ರಾಜ್ಯದಲ್ಲಿ ಮಕ್ಕಳ ಹಕ್ಕುಗಳನ್ನು ನಿರ್ಲಕ್ಷಿಸಿ ಉಲ್ಲಂಘಿಸಿದಂತಾಗುತ್ತದೆ. ಹಾಗೆ ಶಿಕ್ಷೆಗೊಳಗಾದ ಮಕ್ಕಳು ಅಪರಾಧಿತನವನ್ನು ಬೆಳೆಸಿಕೊಂಡು ನಿಜವಾಗಿಯೂ ಅಪರಾಧ ಮಾಡುತ್ತಾರೆ. ಇದೊಂದು ವಿಷವರ್ತುಲವಾಗುತ್ತದೆ ಎಂದು ಹೇಳಿದ್ದರೂ ಒಟ್ಟಾರೆ ರಾಜ್ಯಮಟ್ಟದಲ್ಲಿ ಮತದಾರರು ಅದೇ ಪಕ್ಷವನ್ನು ಗೆಲ್ಲಿಸಿದ್ದಾರೆ. ಈ ನೀತಿರೀತಿಗಳು ಹೇಗೆ, ಎಲ್ಲಿಗೆ, ಯಾವ ರೀತಿಯಲ್ಲಿ ಮೈದಾಳುವುದೋ ಗೊತ್ತಿಲ್ಲ.
ದೀಪಾವಳಿಯ ಬೆಳಕು-ಕತ್ತಲೆ ಮಾಯೆಯ ಮುಸುಕು ಎಲ್ಲರನ್ನೂ ಆವರಿಸಿ ಆಡಿಸುತ್ತಿದೆ. ಕೈಹಿಡಿದು ನಡೆಯೋಣವಂತೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.