“ಆರಂಭದಲ್ಲಿ ನಾನು ಧ್ವನಿಯಿಂದ ವಿಶೇಷವಾಗಿ ಆಕರ್ಷಿತನಾಗಿದ್ದೆ, ಆದ್ದರಿಂದ ನನ್ನ ಆರಂಭಿಕ ಕವಿತೆಗಳು ಧ್ವನಿಗೆ ಹತ್ತಿರವಾಗಿದ್ದ ಮೂರ್ತ ಕವನಗಳಾಗಿದ್ದವು. ಈ ರೂಪದಲ್ಲಿ ನನಗೆ ಮುಖ್ಯವಾದ ವಿಷಯಗಳ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ನಂತರ ನಾನು ಅರಿತುಕೊಂಡೆ. ನಿಧಾನವಾಗಿ ನನ್ನ ಶೈಲಿಯನ್ನು ಹೆಚ್ಚು ನಿರೂಪಣಾ ಕಾವ್ಯದ ಕಡೆಗೆ ಬದಲಾಯಿಸಿದೆ. ಹೀಗೆ, ನಾನು ನನ್ನ ಬಾಲ್ಯದ ಬಗ್ಗೆ ಬರೆಯಲು ಪ್ರಾರಂಭಿಸಿದೆ, ಮತ್ತು ಕೊನೆಗೂ ಪ್ರೇಮ ಕಾವ್ಯ ಮತ್ತು ಶೃಂಗಾರ ಕಾವ್ಯಗಳನ್ನು ಬರೆಯಲು ನನ್ನಿಂದ ಸಾಧ್ಯವಾಯಿತು.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ಲೊವೀನಿಯಾ ದೇಶದ ಕವಿ ಪೀಟರ್ ಸೆಮೊಲಿಕ್-ರವರ (Peter Semolič) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಪೀಟರ್ ಸೆಮೊಲಿಕ್-ರವರು ತಮ್ಮ ಪೀಳಿಗೆಯ ಸ್ಲೊವೀನಿಯಾ ದೇಶದ ಕವಿಗಳ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದ ಕವಿಯಾಗಿದ್ದೂ, “ಹೊಸ ಸರಳತೆ” (The New Simplicity) ಎಂದು ಕರೆಯಲ್ಪಡುವ ಹೊಸ ಕಾವ್ಯ ಪ್ರವೃತ್ತಿಯನ್ನು ಪ್ರಾರಂಭಿಸಿದ ಕವಿ ಇವರು ಎಂದು ಸೆಮೊಲಿಕ್-ರನ್ನು ಸ್ಲೊವೀನಿಯನ್ ಸಾಹಿತ್ಯ ವಿಮರ್ಶಕರು ಹೆಸರಿಸುತ್ತಾರೆ. ಅವರ ಪಾರದರ್ಶಕ ಮತ್ತು ಅರ್ಥವಾಗಲು ಸುಲಭವಾದ ಕವಿತೆಗಳು ಸಾಮಾನ್ಯವಾಗಿ ಮೇಲ್ನೋಟದಲ್ಲಿ ಸರಳ ಪ್ರತಿಮೆಗಳನ್ನು ಒಳಗೊಂಡಿರುತ್ತವೆ, ಅದೇ ವೇಳೆ ಆ ಪ್ರತಿಮೆಗಳು ಬಲವಾದ ಭಾವನೆಗಳು, ಆಳವಾದ ಅರ್ಥ ಅಥವಾ ಬುದ್ಧಿವಂತಿಕೆಯ ಸುಳಿಯಲ್ಲಿ ತ್ವರಿತವಾಗಿ ತಮ್ಮನ್ನು ತೆರೆದುಕೊಳ್ಳುತ್ತದೆ. ಅವರ ಕಾವ್ಯದ ಹರಿವು ಒಂದು ದೊಡ್ಡ ನದಿಯನ್ನು ನೆನಪಿಗೆ ತರುತ್ತದೆ – ಶಾಂತ, ಮೇಲ್ನೋಟಕ್ಕೆ ಅಚಲಿತ, ಆದರೆ ನಂಬಿಕೆಗೂ ಮೀರಿ ಪ್ರಬಲವಾಗಿರುತ್ತದೆ. ಇದೆಲ್ಲವೂ ಇತರ ಸ್ಲೊವೀನಿಯನ್ ಕವಿಗಳ ಮೇಲೆ ದೊಡ್ಡ ಪ್ರಭಾವ ಬೀರುವಂತೆ ಮಾಡಿದೆ. ಜೀವನದ ಪವಾಡ ಮತ್ತು ತನ್ನೊಳಗಿನ ಮತ್ತು ಹೊರಗಿನ ನಿಗೂಢತೆಗಳನ್ನು ಎದುರಿಸುತ್ತಿರುವಾಗಲೂ, ಈ ಕವಿ ಕುತೂಹಲಭರಿತ, ಸೂಕ್ಷ್ಮಸಂವೇದನೆಯ ಮತ್ತು ಎಲ್ಲವನ್ನೂ ಬೆರಗಿನಿಂದ ನೋಡುವ ಮಗುವಾಗಿಯೇ ಉಳಿದಿದ್ದಾರೆ. ಓದುಗರು ಮತ್ತು ವಿಮರ್ಶಕರು ಅವರ ಕವನಗಳನ್ನು ಯಾವಾಗಲೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಪಿಟರ್ ಸೆಮೊಲಿಕ್ ಅವರು ತಮ್ಮ ಕಾವ್ಯಪ್ರಯಾಣದ ಆರಂಭಿಕ ದಿನಗಳು ಹಾಗೂ ನಂತರದ ತಿರುವುಗಳ ಬಗ್ಗೆ ಮಾತಾಡಿದರು: “ಆರಂಭದಲ್ಲಿ ನಾನು ಧ್ವನಿಯಿಂದ ವಿಶೇಷವಾಗಿ ಆಕರ್ಷಿತನಾಗಿದ್ದೆ, ಆದ್ದರಿಂದ ನನ್ನ ಆರಂಭಿಕ ಕವಿತೆಗಳು ಧ್ವನಿಗೆ ಹತ್ತಿರವಾಗಿದ್ದ ಮೂರ್ತ ಕವನಗಳಾಗಿದ್ದವು. ಈ ರೂಪದಲ್ಲಿ ನನಗೆ ಮುಖ್ಯವಾದ ವಿಷಯಗಳ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ನಂತರ ನಾನು ಅರಿತುಕೊಂಡೆ. ನಿಧಾನವಾಗಿ ನನ್ನ ಶೈಲಿಯನ್ನು ಹೆಚ್ಚು ನಿರೂಪಣಾ ಕಾವ್ಯದ ಕಡೆಗೆ ಬದಲಾಯಿಸಿದೆ. ಹೀಗೆ, ನಾನು ನನ್ನ ಬಾಲ್ಯದ ಬಗ್ಗೆ ಬರೆಯಲು ಪ್ರಾರಂಭಿಸಿದೆ, ಮತ್ತು ಕೊನೆಗೂ ಪ್ರೇಮ ಕಾವ್ಯ ಮತ್ತು ಶೃಂಗಾರ ಕಾವ್ಯಗಳನ್ನು ಬರೆಯಲು ನನ್ನಿಂದ ಸಾಧ್ಯವಾಯಿತು. ಇತ್ತೀಚಿನ ದಿನಗಳಲ್ಲಿ ನಾನು ಗದ್ಯ-ಕಾವ್ಯದ ಶೈಲಿಯಿಂದ ಪ್ರಭಾವಿತನಾಗಿದ್ದೇನೆ ಮತ್ತು ಆಧುನಿಕ ಜಗತ್ತಿನಲ್ಲಿ ಹಿಂಸೆಯ ಬಗ್ಗೆ ಬರೆಯುತ್ತಿದ್ದೇನೆ. ನನ್ನ ಇತ್ತೀಚಿನ ಕವನಗಳು ಹೆಚ್ಚು ಕಡಿಮೆ ಈ ಗದ್ಯ-ಕಾವ್ಯ ಶೈಲಿಯಲ್ಲಿ ಬರೆಯಲ್ಪಟ್ಟಿವೆ ಮತ್ತು ಅವು ವಿವಿಧ ರೀತಿಯ ಹಿಂಸೆಯ ಬಗ್ಗೆ ಮಾತನಾಡುತ್ತವೆ: ವೈಯಕ್ತಿಕ ಹಿಂಸೆಯಿಂದ ಹಿಡಿದು ರಾಜಕೀಯ ಹಿಂಸೆಯವರೆಗೆ. 1996-ರಲ್ಲಿ ಪ್ರಕಟವಾದ ನನ್ನ ಮೂರನೆಯ ಕವನ ಸಂಕಲನ, A House Made of Words, ನನ್ನ ಕಾವ್ಯಪ್ರಯಾಣದ ಒಂದು ಪ್ರಮುಖ ಮೈಲಿಗಲ್ಲು ಎಂದು ನಾನು ಪರಿಗಣಿಸುತ್ತೇನೆ; ಏಕೆಂದರೆ ಅಲ್ಲಿ ನಾನು ನನ್ನದೇ ಆದ ಶೈಲಿಯನ್ನು ಕಂಡುಕೊಂಡೆ. ಈ ಸಂಕಲನವು ಸ್ಲೊವೀನಿಯಾದಲ್ಲಿ ಕಾವ್ಯಕ್ಕಾಗಿರುವ ಅತಿ ಮುಖ್ಯ ಪ್ರಶಸ್ತಿಯಾದ ಜೆಂಕೊ ಕವನ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಹಾಗೂ ನಂತರದ ದಿನಗಳಲ್ಲಿ ಈ ಸಂಕಲನ ಆ ಕಾಲದ ಯುವ ಸ್ಲೊವೀನಿಯನ್ ಕಾವ್ಯದ ಮೇಲೆ ಗಮನಾರ್ಹ ಪ್ರಭಾವ ಬೀರಿತು.”

ಲ್ಯುಬ್ಲಿಯಾನಾ ನಗರದಲ್ಲಿ (Ljubljana) 1967-ರಲ್ಲಿ ಜನಿಸಿದ ಪೀಟರ್ ಸೆಮೊಲಿಕ್, ಲ್ಯುಬ್ಲಿಯಾನಾ ವಿಶ್ವವಿದ್ಯಾಲಯದಲ್ಲಿ General Linguistics ಮತ್ತು Cultural Studies ವಿಷಯಗಳನ್ನು ಅಧ್ಯಯನ ಮಾಡಿದರು. ಹದಿನೈದಕ್ಕಿಂತಲೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ ಇವರು, ಸ್ಲೊವೀನಿಯಾದ ಎರಡು ಶ್ರೇಷ್ಠ ಪ್ರಶಸ್ತಿಗಳಾದ ಜೆಂಕೊ ಕವನ ಪ್ರಶಸ್ತಿ (Jenko Poetry Prize) ಮತ್ತು ಸಾಹಿತ್ಯ ಮತ್ತು ಕಲೆಗಳಿಗಾಗಿರುವ ರಾಷ್ಟ್ರೀಯ ಪ್ರೆಸೆರೆನ್ ಪ್ರಶಸ್ತಿಗಳನ್ನು (Prešeren Prize) ಪಡೆದಿದ್ದಾರೆ. 1998-ರಲ್ಲಿ ಅವರಿಗೆ ಅಂತರರಾಷ್ಟ್ರೀಯ ವಿಲೆನಿಕಾ ಕ್ರಿಸ್ಟಲ್ ಪ್ರಶಸ್ತಿ (Vilenica Crystal Award) ಮತ್ತು 2016-ರಲ್ಲಿ ಒಂದು ದಶಕದ ಅತ್ಯುತ್ತಮ ಕಾವ್ಯಾತ್ಮಕ ಕೆಲಸಕ್ಕಾಗಿ Velenjica – čaša nesmrtnosti award-ನ್ನು ನೀಡಲಾಯಿತು. ಅವರ ಕವನಗಳನ್ನು ಇಟಾಲಿಯನ್, ಫ್ರೆಂಚ್, ಸ್ಪ್ಯಾನಿಷ್, ಇಂಗ್ಲಿಷ್, ಜರ್ಮನ್, ಫಿನ್ನಿಶ್, ಪೋಲಿಷ್, ಹಂಗೇರಿಯನ್, ಬಲ್ಗೇರಿಯನ್, ಮೆಸಿಡೋನಿಯನ್ ಮತ್ತು ಸರ್ಬಿಯನ್ ಭಾಷೆಗಳಿಗೆ ಅನುವಾದಿಸಲಾಗಿದೆ. ಪೀಟರ್ ಸೆಮೊಲಿಕ್-ರವರು ನಾಟಕಗಳು, ಮಕ್ಕಳ ಸಾಹಿತ್ಯ ಹಾಗೂ ಪ್ರಬಂಧಗಳನ್ನು ಸಹ ಬರೆಯುತ್ತಾರೆ ಮತ್ತು ಇಂಗ್ಲಿಷ್, ಫ್ರೆಂಚ್, ಸರ್ಬಿಯನ್ ಮತ್ತು ಕ್ರೊಯೇಷಿಯನ್ ಭಾಷೆಗಳಿಂದ ಸ್ಲೊವೀನಿಯನ್ ಭಾಷೆಗೆ ಸಾಹಿತ್ಯ ಕೃತಿಗಳನ್ನು ಅನುವಾದಿಸುತ್ತಾರೆ. ಅವರು ಸ್ಲೊವೀನಿಯಾದ ಮೊದಲ ಆನ್‌ಲೈನ್ ಕಾವ್ಯ ಪತ್ರಿಕೆ ‘ಪೊಯೆಸಿಸ್‌’-ನ (Poiesis) ಸಹ-ಸಂಸ್ಥಾಪಕ ಮತ್ತು ಸಹ ಸಂಪಾದಕರಾಗಿದ್ದಾರೆ.

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಪೀಟರ್ ಸೆಮೊಲಿಕ್-ರ ಎಂಟು ಕವನಗಳಲ್ಲಿ ಮೊದಲ ಎರಡು ಕವನಗಳನ್ನು ಆ್ಯನಾ ಜೆಲ್ನಿಕರ್ (Ana Jelnikar) ಹಾಗೂ ನಂತರದ ಆರು ಕವನಗಳನ್ನು ಆ್ಯನಾ ಜೆಲ್ನಿಕರ ಹಾಗೂ ಕೆಲಿ ಲೆನಾಕ್ಸ್ ಆ್ಯಲನ್ (Ana Jelnikar and Kelly Lenox Allan) ಜಂಟಿಯಾಗಿ ಮೂಲ ಸ್ಲೊವೀನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.


ಸಂದೇಶ
ಮೂಲ: Message

ಒಂದಾನೊಂದು ದಿನ ಭವಿಷ್ಯದಲ್ಲಿ
ಈ ಭೂಮಿ ಕೇವಲ ರೈತಜನರಿಂದ ತುಂಬಿರುವುದು.
ಅವರು ಕುದುರೆಗಾಡಿಗಳಲ್ಲಿ ತಿರುಗುವರು,
ಕಾಯಿಪಲ್ಯಗಳನ್ನು ತಿನ್ನುವರು.
ಬಿಳಿಯ ರಸ್ತೆಗಳ ಬದಿಯಲ್ಲಿ ಪಶುಗಳು
ಶಾಂತವಾಗಿ ಹುಲ್ಲು ಮೇಯುತ್ತಿರುವವು
ಇಲ್ಲಾ, ಪಾಪ್ಲರ್ ಮರಗಳ ನೆರಳಲ್ಲಿ ಕೂತು
ಮೆಲುಕು ಹಾಕುತ್ತಿರುವವು.

ಸಂಜೆಯ ಹೊತ್ತು, ಹಳ್ಳಿಯ ಜನರು
ಒಬ್ಬ ಬಿಳಿಗೂದಲಿನ ಕಲಾಕಾರನ ಸುತ್ತ ಕೂರುವರು
ಧ್ಯಾನದಲ್ಲಿ ಆಳವಾಗಿ ಮುಳುಗುವರು.
ಕಲ್ಪನಾತೀತ ದೂರಗಳಿಂದ
ಅವರ ಪ್ರಜ್ಞೆಗಳೊಳಗೆ ಅತಿ ಸುಂದರ ಕಾವ್ಯಕ್ಕಿಂತಲೂ
ಸುಂದರವಾದ ಚಿತ್ರಗಳನ್ನು ಅವನು ಕಳುಹಿಸುವನು.

ಇದು ಆದರ್ಶಲೋಕವೇನಲ್ಲ.
ಯುವಕರು ಕಿಮೊನೊ ತರಹದ
ಬಿಳಿ ಅರಿವೆಗಳನ್ನು ತೊಡುವರು.
ಹುಲ್ಲು ಬಯಲುಗಳಲ್ಲಿ ಕೂರುವರು
ಆಗ, ಹತ್ತಿರದಲ್ಲಿರುವ ಹಟ್ಟಿಯಿಂದ ಇನ್ನೂ ರತಿನಿದ್ರೆಯ
ತೂಕಡಿಕೆಯಲ್ಲೇ ಹೊರಬರುವೆ ನಾನು,
ಅವರನ್ನು ನೋಡಿ ಕೈಬೀಸುವೆನು.

ಆಗ ಅವರ ಸಾವು
ಯಾವುದೆ ಎಲೆ ಅಥವಾ ಹೂವಿನ ಸಾವಿಗಿಂತಲೂ
ಶಾಂತವಾಗಿರುವುದು.


ದೇವರ ಬಗ್ಗೆ
ಮೂಲ: On God

ನನಗನಿಸುತ್ತೆ ದೇವರು ಹಸಿರುಬಣ್ಣದಂವ,
ಅವನು ಹುಲ್ಲುಗಳಲ್ಲಿ ಮಲಗುತ್ತಾನೆಂದು.
ಚಿಟ್ಟೆಗಳು ಬಂದು ಅವನ ಬೆನ್ನ ಮೇಲೆ
ಕೂತು ದಣಿವಾರಿಸಿಕೊಳ್ಳುತ್ತಾವೆಂದು.

ನನಗನಿಸುತ್ತೆ ದೇವರು ಈ ಲೋಕದ
ಹುಲ್ಲುಗಳಲ್ಲೆಲ್ಲಾ ಇದ್ದಾನೆಂದು.
ನಾವದರ ಮೇಲೆ ಬರಿಗಾಲಲ್ಲಿ
ನಡೆದಾಗ,

ಅದೇ ಪ್ರಾರ್ಥನೆ.


ಅಪ್ಪಾ
ಮೂಲ: Father

ನಿನ್ನೆ ರಾತ್ರಿ
ನಿನ್ನ ಬಗ್ಗೆ ಕನಸ ಕಂಡೆ, ಅಪ್ಪಾ,
ನೀನು
ನನ್ನ ಕನಸಿನಲಿ ಬಂದೆ
ಜಿಂಕೆಯ ಹಾಗೆ,
ನಿಂತೆ ನೀನಲ್ಲಿ
ಹಸಿರುಹುಲ್ಲಿನ ದಿಬ್ಬದ ಪಕ್ಕದಲ್ಲಿ.

ನಿನ್ನ ಕರೆದೆ ನಾನು
ನಿನ್ನ ಹೆಸರು ಹಿಡಿದು,
‘ಅಪ್ಪಾ’ ಎಂದು,
ನಿನ್ನ ಕರೆದೆ ನಾನು
ಆ ಪದವ ಉಚ್ಛರಿಸಿ: ಅಪ್ಪಾ.
ನಾ ಹೇಳಿದೆ:

ಇಲ್ಲಿ ನೋಡು,
ನನ್ನ ಕಣ್ಣುಗಳು
ಬೆಟ್ಟದ ತೊರೆಯ
ಬದಿಯಲ್ಲಿರುವ
ಎರಡು ತೊಯ್ದ ಹೂವುಗಳು.
ಬಾ,
ನಿನ್ನ ಬೆಚ್ಚಗಿನ
ಜಿಂಕೆ ನಾಲಿಗೆ
ನನ್ನ ಕಣ್ಣುಗಳ ಮೇಲೆ
ಬಿದ್ದ ಇಬ್ಬನಿಯ
ಇಂಗಿಸಲಿ.

ನೀನಲ್ಲೇ ನಿಂತೆ
ಬೇರೊಂದು ಲೋಕದಲ್ಲಿ
ನಿಂತಂತೆ,
ಬೇರೊಂದು ಕನಸಿನಲ್ಲಿ
ಬಿದ್ದಂತೆ,
ಹುಲ್ಲು ಕವಿದ
ದಿಬ್ಬದ ಮೇಲೆ.

ನಿನ್ನ ಮಹಾ
ಕವಲ್ಗೊಂಬುಗಳನ್ನು
ಅಲುಗಾಡಿಸಿ,
ಮಾಯವಾದೆ ನೀನು
ಯಾರದ್ದೂ ಕನಸಲ್ಲದ
ಬಿಳಿ ಮೋಡದೊಳಗೆ.


ಸೂರಿಲ್ಲದ ಕವಿ ತನ್ನ ಪ್ರೇಯಸಿಗೆ ಬರೆಯುತ್ತಾನೆ
ಮೂಲ: Homeless Poet Writing to his Love

ಪದಗಳ ಮನೆಯೊಂದ ಕಟ್ಟುವೆ ನಮಗಾಗಿ ನಾನು.
ನಾಮಪದಗಳೇ ಇಟ್ಟಿಗೆಗಳು
ಕ್ರಿಯಾಪದಗಳೇ ಬಾಗಿಲುಗಳು

ವಿಶೇಷಣಗಳಿಂದ ಅಲಂಕರಿಸುವೆವು ನಾವು
ಜನ್ನಲ ಕಟ್ಟೆಗಳನ್ನು,
ಹೂಕುಂಡಗಳಿಟ್ಟಂತೆ.

ನಿರ್ಮಲ ನಿಶ್ಶಬ್ಧತೆಯಲ್ಲಿ ಮಲಗುವೆವು ನಾವು
ನಮ್ಮ ಪ್ರೇಮದ ಚಪ್ಪರದಡಿಯಲ್ಲಿ.
ನಿರ್ಮಲ ನಿಶ್ಶಬ್ಧತೆಯಲ್ಲಿ.

ನಮ್ಮ ಮನೆ ಬಹಳ ಸುಂದರವಾಗಿರುತ್ತೆ
ಬಲು ನಾಜೂಕಾಗಿರುತ್ತೆ, ಅದಕ್ಕೆ
ಅಪಾಯವನ್ನುಂಟು ಮಾಡೆವು ನಾವು ಪದದುಬ್ಬರದಿಂದ.

ನಾವು ಮಾತನಾಡುವುದಾದರೆ,
ಹೆಸರಿಡುವೆವು ನಮ್ಮ ಕಣ್ಣಿಗಷ್ಟೇ
ಕಾಣುವ ವಸ್ತುಗಳಿಗೆ.

ಯಾಕೆಂದರೆ ಒಂದೊಂದು ಕ್ರಿಯಾಪದವೂ
ಅಡಿಪಾಯವನ್ನ ಅಲುಗಾಡಿಸಿ
ನೆಲಸಮ ಮಾಡಬಹುದು.

ಎಂದೇ, ಸದ್ದು ಬೇಡ, ನನ್ನ ಒಲವೇ,
ಸದ್ದು ಬೇಡ, ನಮ್ಮ ಮನೆಯ
ಸುಂದರ ನಾಳೆಗಾಗಿ.


ಮತ್ತೊಮ್ಮೆ ಯೋಚಿಸಿ ನೋಡಿದಾಗ
ಮೂಲ: On Second Thoughts

ಮತ್ತೊಮ್ಮೆ ಯೋಚಿಸಿ ನೋಡಿದಾಗ ನನಗನಿಸಿದ್ದು
ನಾನೆಂದೂ ನಿಸರ್ಗದ ಕೂಸಾಗಿರಲಿಲ್ಲ.
ಕೊಡತಿಹುಳಗಳನ್ನು ಹೆಲಿಕಾಪ್ಟರ್-ಗಳು ಎಂದು
ಶಾರ್ಕ್ ಮೀನಿನ ಚೂಪಾದ ಈಜುರೆಕ್ಕೆಯನ್ನು ಪೆರಿಸ್ಕೋಪ್ ಎಂದು
ಕಲ್ಪಿಸಿಕೊಳ್ಳುತ್ತಿದ್ದೆ ನಾನು.

ಮತ್ತೊಮ್ಮೆ ಯೋಚಿಸಿ ನೋಡಿದಾಗ ನನಗನಿಸಿದ್ದು,
‘ಕೌಬಾಯ್’ ಚಲನಚಿತ್ರಗಳಲ್ಲಿ ಕಂಡು ಬರುವ
ಕೌಬಾಯ್-ಗಳು ಹಾಗೂ ಆದಿವಾಸಿ ಅಮೇರಿಕನ್ನರು
ಬಹುಶಃ ನಿಜ ಮನುಜರು ಅಂತ ಅನಿಸದಿದ್ದರೂ,
ದಿನಾ ಬೆಳಗ್ಗೆ ಅದೇ ಹೊತ್ತಿಗೆ
ಅದೇ ದಾರಿಯಲ್ಲಿ ನಮ್ಮ ಮನೆಯ ಹಾಯ್ದು
ನಮ್ಮೂರಿನ ಮಾರುಕಟ್ಟೆಗೆ ಹಾಲು ಒಯ್ಯುತ್ತಿದ್ದ
ಗೌಳಿಗರಿಗಿಂತಲೂ ನಿಸ್ಸಂಶಯವಾಗಿ
ನನಗೆ ಹೆಚ್ಚು ಮುಖ್ಯವಾಗಿದ್ದರು.

ಮತ್ತೊಮ್ಮೆ ಯೋಚಿಸಿ ನೋಡಿದಾಗ ನನಗನಿಸಿದ್ದು,
ಬೆಳಗ್ಗೆ ಏಳು ಗಂಟೆಗೆ ಟಿ.ವಿ.-ಯಲ್ಲಿ
ಪ್ರಸಾರವಾಗುತ್ತಿದ್ದ ‘ಕಾರ್ಟೂನ್ ಶೋ’
ನಮ್ಮ ಊರು ಮೊರೋಸ್ಟ್-ನ ಮೇಲೆ ಸಿಡಿದಿದ್ದ
ಯಾವುದೇ ಪ್ರಚಂಡವಾದ ಚಂಡಮಾರುತಕ್ಕಿಂತಲೂ
ನೂರು ಪಟ್ಟು ಹೆಚ್ಚು ರೋಮಾಂಚಕಾರಿಯಾಗಿರುತ್ತಿತ್ತು.

ಮತ್ತೊಮ್ಮೆ ಯೋಚಿಸಿ ನೋಡಿದಾಗ ನನಗನಿಸಿದ್ದು,
ಎಷ್ಟೋ ವರ್ಷಗಳ ಕಾಲ
ಶ್ಯಾಮಶ್ವೇತವರ್ಣದ ಸೂರ್ಯಾಸ್ತವೊಂದೇ
ಅಸಲಾದ ಸೂರ್ಯಾಸ್ತವಾಗಿರುತ್ತಿತ್ತು ನನಗೆ.


ಸಾಲುಗಳು
ಮೂಲ: Lines

ಒಂದು ಇಡೀ ದಿನ ಕಳೆದೆ ಊರು ಸುತ್ತುತ್ತಾ,
ಪಾರಿವಾಳಗಳ ಜತೆ ಕಲೆತು ಹರಟುತ್ತಾ.
ಮೇಲೆ ನೀಲಿ ಆಕಾಶದಲ್ಲಿ ವಿಮಾನದ
ಎರಡು ಹೊಗೆರೇಖೆಗಳು ಬಿಡಿಸಿಕೊಂಡವು.
ಕಂಪ್ಯೂಟರ್ ಸ್ಕ್ರೀನಿನ ಶೂನ್ಯದಲ್ಲಿ
ಒಂದು ಬಹುವರ್ಣದ ಪುಷ್ಪ
ಗಿರ್ರನೆ ತಿರುಗುತ್ತಿದೆ –
ಪವಾಡಗಳ ಪುಷ್ಪ ಅದು.
ನಾನೀಗಲೂ ಕೈಯಿಂದಲೇ ಬರೆಯುವೆನು,
ಒಂದು ಹಳೆಯ ನೋಟ್‌ಬುಕ್ಕಿನಲ್ಲಿ.
ಅದರಲ್ಲಿರುವ ಕ್ಯಾಲೆಂಡರ್ ನನ್ನನ್ನು
ಕಳೆದ ಶತಮಾನಕ್ಕೆ ಕೊಂಡೊಯ್ಯುತ್ತದೆ.
ಒಂದಾನೊಂದು ದಿನ – ಬೇಗ ಬರದಿರಲಿ ಆ ದಿನ –
ಅಪರಿಚಿತನೊಬ್ಬ ನನಗೆ ಹೇಳುವನು
ನಾನು ಕಳೆದ ಶತಮಾನದ ಮನುಷ್ಯನೆಂದು,
ಒಬ್ಬ ಗತಕಾಲದ ಕವಿ ನಾನು.
ಒಂದು ಸಣ್ಣನೆಯ ಕಂಪನ:
ವಿಮಾನದ ಹೊಗೆರೇಖೆಗಳು ಪೂರ್ತಿ ಮಾಯವಾಗಿವೆ.
ಪ್ರಿಮೋರ್ಸ್ಕಾ*ದ ಕಡಲತೀರದಿಂದ ಒಣ ಥಂಡಿ ಗಾಳಿ
ಜೋರಾಗಿ ಬೀಸಿ ಬರುತ್ತಿದೆ,
ಹಳೆಯ ಸೇಬಿನ ಮರವನ್ನು ಅಲುಗಾಡಿಸುತ್ತಿದೆ.
ಹೂವರಳಿಕೆ ಇನ್ನೇನು ಕೊನೆಯಾಗುವುದು,
ಕಾಯೊಡೆಯಲು ಇನ್ನೂ ಸ್ವಲ್ಪ ಸಮಯವಿದೆ.
ಈ ಪಾರಿವಾಳಗಳು ಏನು ಮಾಡುತ್ತಿವೆ?
ಮಲಗಲು ಹೋಗುತ್ತಿವೆಯೆ?
ಕಳಪೆಯಾಗಿ ಬರೆದ ಸಾಲೊಂದನ್ನು ಹೊಡೆದುಹಾಕಿ
ಹೊಸ ಸಾಲೊಂದನ್ನು ಬರೆಯುವೆ:
ವರುಷ ವರುಷಗಳವರೆಗೆ ಕ್ರಿಮ್ ಬೆಟ್ಟದ*
ಕಪ್ಪು ನೆರಳ್‌ಚಿತ್ರ ನನ್ನ ಕ್ಷಿತಿಜವಾಗಿತ್ತು.
ಈಗ ಮೋಡವೊಂದು ಅದರ ಮೇಲೆ ಈಜಿಕೊಂಡು ಹೋಗುತ್ತಿದೆ,
ಸೂರ್ಯಾಸ್ತದ ರಂಗೇರಿ ಕೆಂಪಾಗಿದೆ.
ಸಂಜೆಯ ಬೆಳಕು ಕಿಟಕಿಯಿಂದ ತೇಲಿ ಬರುತ್ತಿದೆ,
ಈ ಸಾಲುಗಳ ಮೇಲೆ ಇಳಿದು
ಅವುಗಳನ್ನು ನವಿರಾಗಿಸುತ್ತದೆ.

Primorska: ಸ್ಲೊವೀನಿಯಾ ದೇಶದ ಕರಾವಳಿ ಪ್ರಾಂತ
Mt Krim: ಸ್ಲೊವೀನಿಯಾ ದೇಶದ ರಾಜಧಾನಿ ಲೂಬಿಯಾನಾ-ದ ದಕ್ಷಿಣ ಭಾಗದಲ್ಲಿರುವ ಬೆಟ್ಟ


ಬರೆದಿಡುವುದು
ಮೂಲ: Writing it down

ನೀನು ನಿನ್ನ ಬಸ್ಸಿಗಾಗಿ ಕಾಯುತ್ತಿರುವಾಗ,
ಬೇರೆ ಬಸ್ಸುಗಳೆಲ್ಲವೂ ಮೊದಲು ಬರುವುದು,
ಕೆಲವು ಒಂದಕ್ಕಿಂತ ಹೆಚ್ಚು ಸಲ,
ನಿನ್ನ ಬಸ್ಸಿಗಿಂತ ಮೊದಲು,
ನಿನ್ನದು ಯಾವಾಗಲೂ ಕೊನೆಗೆ ಬರುವುದು.
ಇದು ಯಾವಾಗಲೂ ಹೀಗೇ ಎಂಬುದು ನಿಜವಲ್ಲ,
ಆದರೆ ಸುಮಾರು ಸಲ ಹೀಗಾಗುವುದರಿಂದ
ನಿನ್ನ ಸಿನಿಕತನ ಅಳಿಸಿಹೋಗಿ,
ಏನಾಗುತ್ತಿದೆಯೆಂದು ಅರಿಯುವ ಮುಂಚೆಯೇ,
ಹಠಾತ್ತನೆ ನೀನು ಸೂರ್ಯನ, ಚಂದ್ರನ, ಹಾಗೂ
ಗ್ರಹಗಳ ಕಾಂತಿವೃತ್ತಗಳನ್ನು ಪರಿಶೀಲಿಸುತ್ತಿರುವೆ;
ಮಾಟ ಹಾಕಿ ನೋಡುವೆ;
ಬೀದಿದೀಪದ ಮಸುಕಾದ ಬೆಳಕಿನಲ್ಲಿ
ನಿನ್ನ ಆಯುಷ್ಯರೇಖೆಯಿಂದ ಹೊಮ್ಮುವ ಅಸಂಖ್ಯ
ಕೂದಲೆಳೆಯ ರೇಖೆಗಳ ಜಾಡುಹಿಡಿದು ಹೊರಡುವೆ.

ನಾನು ನಡುಗುವೆ – ಕವಿತೆ ಬರೆಯದ ಇಷ್ಟೊಂದು ವರುಷಗಳಲ್ಲಿ
ನಾನು ಕವಿತೆಗಳ ಕಟ್ಟುತ್ತಿರಲಿಲ್ಲವೆಂಬ ಮಾತು ನಿಜವಲ್ಲ.
ನನ್ನ ತಲೆಯಲ್ಲಿ ರಚಿಸುತ್ತಿದ್ದೆ,
ಕೆಲವು ಗದ್ಯದಲ್ಲಿ, ಕೆಲವು ಛಂದದಲ್ಲಿ,
ಪದ್ಯಗಳು,
ಒಂದೊಂದೂ ಮತ್ತೂ ಕಿರಿದಾಗಿ,
ಒಂದೊಂದೂ ಮತ್ತೂ ಬರಿದಾಗಿ,
ಅಪಾರದರ್ಶಕವಾಗಿ, ಇನ್ನೂ ಕರಾಳವಾಗಿ,
ವಾಮಾಚಾರದ ಮಂತ್ರಗಳಿಗೆ ಇನ್ನೂ ಹತ್ತಿರವಾಗಿ.
ಬರೆದ ಬಹುತೇಕ ಪದ್ಯಗಳು ಕೂಡಲೆ ಮರೆತುಹೋದವು,
ಇನ್ನೂ ಕೆಲವು ಕೆಲ ದಿನ ಉಳಿದವು,
ಆದರೆ ಕೆಲವು ನನ್ನ ಮೆದುಳಿನೊಳಗೆ ಮೊಳೆಹೊಡೆದಂತೆ ನಾಟಿಕೊಂಡವು,
ನನ್ನ ಆಲೊಚನೆಗಳಿಗೆ ಇನ್ನೂ ಬಲವಾಗಿ ಒತ್ತಿಕೊಂಡವು,
ನನ್ನ ಕಾರ್ಯಗಳನ್ನು ನಿರ್ದೇಶಿಸತೊಡಗಿದವು.
ವಿಶೇಷವೇನೂ ಇಲ್ಲ –
ನಾನು ಪ್ರತಿದಿನ ಮಾಡುವ ಕಾರ್ಯಗಳ ಹಾಗೆ,
ಬೂಟುಗಳಿಗೆ ಲೇಸ್‌ ಕಟ್ಟುವ ಪರಿ,
ಆಕಳಿಸುವ ಪರಿ, ಹಣೆಯನ್ನು ತುರಿಸಿಕೊಳ್ಳುವ ಪರಿ,
ಕೈಕುಲುಕುವಾಗ ಅಂಗೈಯನ್ನು ತಿರುಗಿಸುವ ಪರಿ,
ಕೂರುವಾಗ ಕಾಲ ಮೇಲೆ ಕಾಲು ಹಾಕುವ ಪರಿ.
ವಿಶೇಷವೇನೂ ಇಲ್ಲ ಇವುಗಳಲ್ಲಿ.
ಆದರೆ, ಪ್ರತಿಯೊಂದು ಅಂಗಸನ್ನೆಯಲ್ಲೂ
ತನ್ನ ಮೇಲೆಯೇ ಮಾಟಮಾಡಿಸಿಕೊಂಡ
ಒಬ್ಬ ಕ್ರೂರ, ವಿಕಾರ ಮಾಟಗಾರನಂತಿರುವ
ಒಬ್ಬ ಅಪರಿಚಿತನನ್ನು ಮತ್ತೆ ಕಂಡೆ.

ನನ್ನಲ್ಲುಳಿದ ತಾಕತ್ತಿನ ಕೊನೆಯ ಹನಿಗಳನ್ನು
ಕೂಡಿಸಿಕೊಳ್ಳುವೆ ಒಂದು ದಿನ.
ನನ್ನ ಬೂಟಿನ ತುದಿಯಿಂದ
ಕಾಗದದ ಹಾಳೆಯಂತೆ ಬಿಳಿಯಾಗಿರುವ
ಹಿಮದ ಮೇಲೆ ನನ್ನ ಹೆಸರನ್ನು ಬರೆಯುವೆ.
ಮೂಢನಂಬಿಕೆಯ ಪಿಶಾಚಿಯನ್ನು ಹೊರಗೋಡಿಸುವೆ.


ಫುಜೀನ ನಗರದ ಚೌಕಗಳು
ಮೂಲ: The Squares of Fužine

ಫುಜೀನ ನಗರದ ಚೌಕಗಳು –
ಪೂರ್ವದಲ್ಲಿ ರಾತ್ರಿ ಕಂದುತ್ತಿರುವಾಗ
ನಿಶ್ಶಬ್ದತೆಯ ಓಯಸಿಸ್-ಗಳು,
ಶಾಂತತೆಯ ಓಯಸಿಸ್-ಗಳು.

ಫುಜೀನ ನಗರದ ಚೌಕಗಳು –
ಮುಂಜಾನೆಯ ಮೊದಲ ಬೆಳಕಿನಲ್ಲಿ
ಕಾಣುವ ನಸು ಬಣ್ಣದ ಹೂವುಗಳು.

ಫುಜೀನ ನಗರದ ಚೌಕಗಳು –
ಮುಂಬೆಳಗಿನ ಕೆಲಸಗಾರರ ಹಾಗೂ
ತಡರಾತ್ರಿಯ ಪ್ರೇಮಿಗಳ ನಿರ್ಜನ ರಸ್ತೆಗಳು.

ಫುಜೀನ ನಗರದ ಚೌಕಗಳು –
ಅವಸರದ ನಿರ್ಗಮನ ಹಾಗೂ
ನಿಧಾನದ, ಬಹುಶಃ ಗುಪ್ತ, ಆಗಮನ.

ಫುಜೀನ ನಗರದ ಚೌಕಗಳ ಮೇಲೆ
ದೂರದ ಆಲ್ಪ್ಸ್ ಪರ್ವತಶ್ರೇಣಿಯಿಂದ
ಬೀಸುತ್ತಿರುವ ಮಂದ ಗಾಳಿ,

ಚದುರಿ ಬಿದ್ದಿರುವ ದಿನಪತ್ರಿಕೆಗಳ ಹಾಳೆಗಳನ್ನ
ಒರೆದುನೋಡುತ್ತಿದೆ.

Fužine: ಸ್ಲೊವೀನಿಯಾ ದೇಶದ ರಾಜಧಾನಿ ಲ್ಯುಬ್ಲಿಯಾನಾ-ದ ದಕ್ಷಿಣಪೂರ್ವ ಭಾಗದಲ್ಲಿರುವ ನಗರ