ಹಾಗೇ ಒಂದು ಜೊಂಪು ಹತ್ತಿತ್ತು. ಕನಸಿನಲ್ಲಿ ತನ್ನಲ್ಲಿ ಉಳಿದಿದ್ದ ಟಿಕೆಟ್ ಒಂದಕ್ಕೆ ಲಕ್ಷ ರೂಪಾಯಿಯ ಬಂಪರ್ ಬಂದ ಹಾಗೆ, ಅದರಿಂದ ಬಂದ ಹಣದಲ್ಲಿ ತಂಗಿಯ ಮದುವೆ, ತನಗೊಂದು ಮೂರು ಚಕ್ರದ ಸ್ಕೂಟರ್, ಸಣ್ಣದೊಂದು ಲಾಟರಿ ಟಿಕೆಟ್ ಮಾರುವ, ಸ್ಟೇಷನರಿ ಅಂಗಡಿ. ಅದರಿಂದ ಬರುವ ಆದಾಯ. ಅಲ್ಲಿ ಹುಡುಗನೊಬ್ಬನನ್ನು ಕೆಲಸಕ್ಕೆ ಇರಿಸಿ ತಾನು ಬಿ.ಕಾಂ. ಮುಂದುವರಿಸಿದ ಹಾಗೆ…… ಇನ್ನೂ ಒಂದಷ್ಟು ಸಿಹಿಗನಸುಗಳು ಬಿದ್ದು ಅವನ ಮದುವೆಯೂ ಆಗಿ ಹೋಗಿರುತ್ತಿತ್ತೇನೋ! ಆದರೆ ಅಷ್ಟರಲ್ಲಿ ಯಾರೋ ಭುಜ ಹಿಡಿದು ಅಲ್ಲಾಡಿಸಿದ ಹಾಗೆ ಆಗಿ ಎಚ್ಚರಗೊಂಡ.
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಬಂಪರ್ ಬಹುಮಾನ” ನಿಮ್ಮ ಓದಿಗೆ
ಬಲ ಮೋಟುಕಾಲನ್ನು ಎಳೆಯುತ್ತಾ, ದೊಡ್ಡ ಚೀಲವೊಂದನ್ನು ಸಂಭಾಳಿಸುತ್ತಾ ನಾಗರಾಜ ಕಷ್ಟಪಟ್ಟು ಬಸ್ ಹತ್ತಿದ ಯಶವಂತಪುರ ಬಸ್ ನಿಲ್ದಾಣದಲ್ಲಿ. ಆ ಬಸ್ಸು ಮಾರ್ಕೆಟ್‌ನಿಂದ ಬಂದದ್ದು ಹೆಸರಘಟ್ಟಕ್ಕೆ ಹೋಗುತ್ತಿತ್ತು. ಆ ದಿನಗಳಲ್ಲಿ ಅಷ್ಟು ಹೊತ್ತಿನಲ್ಲಿ ಮಾರ್ಕೆಟ್ ಕಡೆಗೆ ಹೋಗುವ ಬಸ್‌ಗಳು ರಶ್ ಆಗಿರುತ್ತಿತ್ತು. ಅಲ್ಲಿಂದ ಬರುತ್ತಿದ್ದವು ಸಾಕಷ್ಟು ಖಾಲಿ ಇರುತ್ತಿತ್ತು. ಹಾಗಾಗಿ ನಾಗರಾಜನಿಗೆ ಸೀಟು ಸಿಕ್ಕಿತು. ‘ಹುಶ್ಶಪ್ಪಾ’ ಎಂದು ಕುಳಿತುಕೊಂಡ. ಮನೆಯಿಂದ ಸುಮಾರು ಹತ್ತನ್ನೆರಡು ನಿಮಿಷ ನಡೆದು ಬಂದಿದ್ದ. ಐದು ನಿಮಿಷ ನಿಲುಗಡೆಯಲ್ಲಿ ಕಾದಿದ್ದ. ಜೊತೆಗಿದ್ದ ಚೀಲವೇನೋ ಭಾರವಿರಲಿಲ್ಲ. ಆಕಾರ ಮಾತ್ರ ದೊಡ್ಡದಿತ್ತು. ಗೋವರ್ಧನ, ಸೂರ್ಯೋದಯ ಮಿಲ್, ಗೊರಗುಂಟೆಪಾಳ್ಯ ದಾಟಿ ಪೀಣ್ಯ ಕೈಗಾರಿಕಾ ಪ್ರದೇಶದ ಬಳಿ ಇಳಿದ. “ಬೇಗ ಇಳಿಯಿರಿ” ಎನ್ನಬೇಕೆಂದಿದ್ದ ಕಂಡಕ್ಟರ್ ಇವನ ಅವಸ್ಥೆ ನೋಡಿ ಸುಮ್ಮನಾದ.
ಅಲ್ಲಿಂದ ಪುನಃ ಸುಮಾರು ಹತ್ತನ್ನೆರಡು ನಿಮಿಷ ನಡೆದು, ‘ಎಲೆಕ್ಟ್ರಾನಿಕ್ಸ್ ಡಿವೈಸಸ್’ ಎಂದು ಕಾಣುತ್ತಿದ್ದ ಬೋರ್ಡ್ ಬಳಿ ನಿಂತು, ಅಲ್ಲಿದ್ದ ನೇರಳೆ ಹಣ್ಣಿನ ಮರದ ಕೆಳಗಿದ್ದ ಕಲ್ಲೊಂದರ ಮೇಲೆ ಕುಳಿತು, ದಣಿವಾರಿಸಿಕೊಂಡು ಬ್ಯಾಗಿನೊಳಗಿಂದ ದೊಡ್ಡ ನೀರಿನ ಬಾಟಲಿ ತೆಗೆದು, ಸ್ವಲ್ಪ ನೀರು ಕುಡಿದು, ನಂತರ ಬ್ಯಾಗಿನಿಂದ ದೊಡ್ಡ ರಟ್ಟೊಂದನ್ನು ತೆಗೆದು, ಮರಕ್ಕೆ ಹೊಡೆದಿದ್ದ ದೊಡ್ಡ ಮೊಳೆಯೊಂದಕ್ಕೆ ನೇತು ಹಾಕಿ, ದೊಡ್ಡ ದೊಡ್ಡ ರಬ್ಬರ್ ಬ್ಯಾಂಡ್‌ಗಳನ್ನು ಅದಕ್ಕೆ ಸುತ್ತಿ ಸುಮಾರು ಎಂಟು ಹತ್ತು ತರಹದ ಲಾಟರಿ ಟಿಕೆಟ್‌ಗಳ ಬಂಡಲ್‌ಗಳನ್ನು ಅದಕ್ಕೆ ಸಿಕ್ಕಿಸಿದ. ನಾಳೆ ಡ್ರಾ ಇರುವುದನ್ನು ಮೇಲಿನ ಸಾಲಿನಲ್ಲಿರಿಸಿ, ನಂತರದ ದಿನಾಂಕಗಳಿಗೆ ಸರಿಯಾಗಿ ಕೆಳಗೆ ಸಿಕ್ಕಿಸಿದ. ಒಟ್ಟು ಮೂರು ಸಾಲಿನಲ್ಲಿ ಸುಮಾರು ಹದಿನೈದು ತರಹದ ಬೇರೆ ಬೇರೆ ರಾಜ್ಯದ ಲಾಟರಿ ಟಿಕೆಟ್‌ಗಳು.
ಅದು ಅನೇಕ ಸಣ್ಣ ಕೈಗಾರಿಕೆಗಳನ್ನು, ಕೆಲವು ಮಧ್ಯಮಗಾತ್ರದ ಕಂಪೆನಿಗಳನ್ನು, ಜೊತೆಗೆ ಹತ್ತಿರದಲ್ಲೇ ಇಸ್ರೋದ ಕೆಲವು ಕಚೇರಿಗಳನ್ನು ಹೊಂದಿದ್ದ ಪ್ರದೇಶ. ಸಣ್ಣ ಕೈಗಾರಿಕೆಗಳಲ್ಲಿ ಬಹಳಷ್ಟು ಜನ ಮೊದಲನೆಯ ಪಾಳಿಯಲ್ಲಿ ಅಂದರೆ ಸುಮಾರು ಆರರಿಂದ ಏಳು ಗಂಟೆಯೊಳಗೆ ಬಂದಿರುತ್ತಿದ್ದರು. ಜನರಲ್ ಶಿಫ್ಟ್‌ನವರು ಎಂಟರ ನಂತರ ಒಂಬತ್ತರ ಒಳಗೆ ಬರುವರು. ಹಾಗೆಯೇ ಕೇಂದ್ರದ ಕಚೇರಿಗಳ ಸಮಯ ಗೊತ್ತಿದ್ದದ್ದೇ. ನಾಗರಾಜ ಇಲ್ಲಿ ಬಂದು ಕೂರುವಷ್ಟರಲ್ಲಿ ಗಂಟೆ ಎಂಟು ದಾಟಿರುತ್ತಿತ್ತು. ಮನೆಯಲ್ಲಿ ಅವಸರವಸರದಿಂದ ತಿಂಡಿ ತಿಂದು, ಮಧ್ಯಾಹ್ನದ ಊಟಕ್ಕೆ ಡಬ್ಬಿ ತೆಗೆದುಕೊಂಡು, ನೀರಿನ ದೊಡ್ಡ ಬಾಟಲಿಯೊಂದನ್ನು, ಮುಖ್ಯವಾಗಿ ಲಾಟರಿ ಟಿಕೆಟ್ ಸಿಕ್ಕಿಸುವ ದೊಡ್ಡ ಕಾರ್ಡ್ ಬೋರ್ಡ್, ಟಿಕೆಟ್ ಬಂಡಲ್‌ಗಳ ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಬಂದು ಕೂತು ತನ್ನ ವ್ಯಾಪಾರ ಶುರು ಮಾಡುತ್ತಿದ್ದ.
ನಾಗರಾಜನ ತಂದೆ ರಾಮಸ್ವಾಮಿ ಹೊಸಕೋಟೆ ಹತ್ತಿರದ ಪಿಲ್ಲಗುಂಪ ಕೈಗಾರಿಕಾ ಪ್ರದೇಶದ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಅನೇಕ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಬಿಡಿ ಭಾಗಗಳನ್ನು ಪೂರೈಸುವ ಅನೇಕ ಸಣ್ಣ ಕೈಗಾರಿಕೆಗಳು ಇಲ್ಲಿ, ಎಲೆಕ್ಟ್ರಾನಿಕ್ ಸಿಟಿ ಬಳಿ, ರಾಜಾಜಿನಗರ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇದ್ದವು. ರಾಮಸ್ವಾಮಿ ಕೆಲಸ ಮಾಡುತ್ತಿದ್ದುದು ಅಂತಹ ಒಂದು ಕಂಪನಿ. ಅಲ್ಲಿ ತಯಾರಾಗುವ ಬಿಡಿ ಭಾಗಗಳು ಕೇಂದ್ರಸರ್ಕಾರದ ಉದ್ದಿಮೆಗೂ ಪೂರೈಕೆಯಾಗುತ್ತಿತ್ತು. ಅವರಿಗೆ ನಾಗರಾಜನೂ ಶ್ರೀಲಕ್ಷ್ಮಿಯೂ ಇಬ್ಬರೇ ಮಕ್ಕಳು. ದೊಡ್ಡವ ನಾಗರಾಜನಿಗೆ ಹುಟ್ಟಿನಿಂದಲೇ ಒಂದು ಕಾಲು ಊನ. ಸಣ್ಣವನಿದ್ದಾಗಲೇ ಬೆಂಗಳೂರಿನ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ತೋರಿಸಿ, ಅಲ್ಲಿನ ಡಾಕ್ಟರ್‌ಗಳು ಅದಕ್ಕೊಂದು ಹೆಸರು ಕೊಟ್ಟು, ಕಾಲಕ್ರಮೇಣ ಸರಿ ಹೋಗಬಹುದೆಂದು, ಆದರೂ ಪೂರ್ಣ ಪ್ರಮಾಣದಲ್ಲಿ ಸಹಜ ಸ್ಥಿತಿಗೆ ಬರಲಾಗದೆಂದು, ಕೆಲವು ವ್ಯಾಯಾಮಗಳನ್ನು ತೋರಿಸಿಕೊಟ್ಟು, ಕೆಲವು ತೈಲಗಳನ್ನು ಕೊಟ್ಟು ಉಪಯೋಗಿಸುವ ಬಗೆ ಹೇಳಿ ಕೈ ತೊಳೆದುಕೊಂಡಿದ್ದರು. ಸದ್ಯ ಎರಡನೆಯವಳು ಹೆಣ್ಣಾದ ಶ್ರೀಲಕ್ಷ್ಮಿ ಆರೋಗ್ಯವಾಗಿದ್ದುದರಿಂದ ರಾಮಸ್ವಾಮಿ ಗೌರಮ್ಮ ದಂಪತಿ ಸ್ವಲ್ಪ ನೆಮ್ಮದಿ ಕಂಡುಕೊಂಡಿದ್ದರು. ಮೊದಲು ರಾಮಸ್ವಾಮಿ ಕೆಲಸ ಮಾಡುತ್ತಿದ್ದ ಕಂಪನಿ ಪೀಣ್ಯದಲ್ಲೇ ಇದ್ದದ್ದು ಮ್ಯಾನೇಜ್ಮೆಂಟ್‌ನವರ ಕೆಲವು ಸಮಸ್ಯೆಗಳಿಂದಾಗಿ ಪಿಲ್ಲಗುಂಪ ಪ್ರದೇಶಕ್ಕೆ ವರ್ಗಾವಣೆಯಾಗಿತ್ತು. ಆಸಕ್ತಿ ಇದ್ದವರು, ಅನಿವಾರ್ಯವಿದ್ದವರು ಅಲ್ಲಿಗೆ ಹೊರಟರೆ, ಕೆಲವರು ಕೆಲಸ ಬಿಟ್ಟು ಬೇರೆ ಕಡೆ ಹುಡುಕಿಕೊಂಡರು. ಅನಿವಾರ್ಯವಾಗಿದ್ದ ಕೆಲವರಲ್ಲಿ ರಾಮಸ್ವಾಮಿಯೂ ಒಬ್ಬರು. ಯಶವಂತಪುರದ ಬಾಡಿಗೆ ಮನೆ ಅನೇಕ ಕಾರಣಗಳಿಂದ ಅನುಕೂಲಕರವಾಗಿದ್ದುದರಿಂದ ಮನೆ ಬದಲಾಯಿಸದೆ ಅವರು ಮಾತ್ರ ಬಸ್ ಪಾಸ್ ಮಾಡಿಸಿಕೊಂಡು ಓಡಾಡುತ್ತಿದ್ದರು. ನಾಗರಾಜ ಎರಡನೇ ವರ್ಷ ಬಿಕಾಂನಲ್ಲಿದ್ದ, ಶ್ರೀ ಲಕ್ಷ್ಮಿ ಎಸ್ ಎಸ್ ಎಲ್ ಸಿ ನಂತರ ಓದಲು ಆಸಕ್ತಿ ಇಲ್ಲದೆ ಟೈಲರಿಂಗ್ ಕಲಿಯುತ್ತಿದ್ದಳು. ಒಂದು ದಿನ ಎಂದಿನಂತೆ ಕೆಲಸಕ್ಕೆ ಹೊರಟ ರಾಮಸ್ವಾಮಿ ಬಸ್ ಇಳಿದು ಹೆದ್ದಾರಿ ದಾಟುವಾಗ ಲಾರಿ ಒಂದಕ್ಕೆ ಸಿಲುಕಿ ಮೃತಪಟ್ಟರು.
ಯೂನಿಯನ್ ಲೀಡರ್‌ಗಳು ಮ್ಯಾನೇಜ್ಮೆಂಟ್‌ನೊಂದಿಗೆ ಮಾತನಾಡಿ ಒಂದಷ್ಟು ಹಣ ಮನೆಗೆ ತಲುಪುವಂತೆ ಮಾಡಿದುದಲ್ಲದೆ ಮಗನಿಗೆ ಕೆಲಸ ಕೊಡಬೇಕೆಂದು ಒತ್ತಾಯಿಸಿ, ಕೊನೆಗೆ ಇಲ್ಲಿ ಸೂಕ್ತ ಕೆಲಸವಿಲ್ಲವೆಂದು, ಹೊಸದಾಗಿ ಬ್ರಾಂಚ್ ಆಗಿದ್ದ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಕೊಡಲು ಸಾಧ್ಯವೆಂದು, ಅದು ಯಶವಂತಪುರಕ್ಕೆ ಹತ್ತಿರವಾದ್ದರಿಂದ ಎಲ್ಲರಿಗೂ ಒಪ್ಪಿಗೆಯಾಗಿ, ನಾಗರಾಜ ಓದನ್ನು ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೆ ಸೇರಿಕೊಂಡ. ಕಾರ್ಖಾನೆಯಿಂದ ಸಿಕ್ಕಿದ್ದ ಇಡುಗಂಟನ್ನು ಬ್ಯಾಂಕಿನಲ್ಲಿರಿಸಿ ಶ್ರೀಲಕ್ಷ್ಮಿಯ ಮದುವೆಗೆ ಉಪಯೋಗಿಸಲು ನಿರ್ಧರಿಸಿದರು. ನಾಗರಾಜ ಕೆಲಸದಲ್ಲಿ ಚುರುಕಾಗಿದ್ದ. ಎತ್ತರದ ಸ್ಟೂಲ್ ಮೇಲೆ ಒಮ್ಮೆ ಕಷ್ಟಪಟ್ಟು ಹತ್ತಿ ಕುಳಿತರೆ ಮುಗಿಯಿತು, ಉಳಿದವರಿಗಿಂತ ಹೆಚ್ಚೇ ಕಾರ್ಯದಕ್ಷತೆಯಿಂದ ಕೆಲಸ ಮಾಡಿ ಸೈ ಎನಿಸಿಕೊಂಡ. ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಪ್ಯಾಕಿಂಗ್ ವಿಭಾಗದಲ್ಲಿ ಮೇಲ್ವಿಚಾರಕನಿಗೆ ಸಹಾಯಕನಾಗಿ ಕೆಲಸ ಮಾಡುವಂತಾಯಿತು. ಶ್ರೀಲಕ್ಷ್ಮಿಯು ಮನೆಯ ಸುತ್ತಮುತ್ತಲಿನ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಟೈಲರ್ ಆಗಿದ್ದಳು. ಸಂಬಂಧ ನೋಡಲು ಆರಂಭಿಸಿದ್ದರು. ಈ ವರ್ಷ ಮದುವೆ ಮಾಡಿಯೇ ಬಿಡಬೇಕೆಂದು ತಾಯಿ ಮಗ ನಿರ್ಧರಿಸಿದ್ದರು.
ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಹೊಸದಾಗಿ ಬಂದಿದ್ದ ಉತ್ತರ ಭಾರತದ ಅಧಿಕಾರಿಯೊಬ್ಬ ಯೂನಿಯನ್ ಲೀಡರ್‌ನನ್ನು ಹೀನಾಯವಾಗಿ ಮಾತನಾಡಿಸಿದನೆಂಬ ಕ್ಷುಲ್ಲಕ ಕಾರಣದಿಂದ ಶುರುವಾದ ಪ್ರೊಟೆಸ್ಟ್, ಬ್ಲ್ಯಾಕ್ ಬ್ಯಾಡ್ಜ್, ಟೂಲ್ ಡೌನ್ ಎಂದು ಮುಂದುವರೆದು ಕೊನೆಗೆ ಅನಿರ್ದಿಷ್ಟ ಕಾಲದ ಮುಷ್ಕರದ ರೂಪ ಪಡೆಯಿತು. ಇದರ ಜೊತೆಗೆ ಬೋನಸ್ ಹಾಗೂ ಅಗ್ರಿಮೆಂಟ್ ವಿಷಯಗಳು ತಳಕು ಹಾಕಿಕೊಂಡು ಮೂರು ಬ್ರಾಂಚ್‌ಗಳು ಲಾಕ್ ಡೌನ್ಗೆ ಒಳಗಾಯಿತು. ಹಿರಿಯ ಕಾರ್ಮಿಕರ ಬುದ್ಧಿವಾದ ತರುಣ ಬಿಸಿ ರಕ್ತದ ಕೆಂಬಾವುಟದ ಕಾರ್ಮಿಕ ನಾಯಕರಿಗೆ ಹಿಡಿಸದೇ ಸಂಪು ಮುಂದುವರೆಯಿತು. ಮೊದಮೊದಲು ಕಾರ್ಖಾನೆಯ ಮುಂದೆ ಹಾಕಿದ್ದ ಡೇರೆಯಲ್ಲಿ ಕುಳಿತು, ಬೆಳಿಗ್ಗೆ ಆಡಳಿತ ವರ್ಗದವರು ಬರುವಾಗ ಸಂಜೆ ಹೋಗುವಾಗ ಘೋಷಣೆ ಕೂಗಲು ಸಾಕಷ್ಟು ಜನ ಇರುತ್ತಿದ್ದರು. ಉಳಿದ ಸಮಯದಲ್ಲಿ ಕಾರ್ಡ್ಸ್ ಆಡಿಕೊಂಡು ಕಾಲ ಕಳೆಯುತ್ತಿದ್ದ ಅಲ್ಲಿದ್ದವರಿಗೆ ಮಧ್ಯಾಹ್ನಕ್ಕೆ ಯೂನಿಯನ್ ಹಣದಲ್ಲಿ ಊಟದ ರೂಪದಲ್ಲಿ ಏನಾದರೂ ಸಿಗುತ್ತಿತ್ತು. ಆದರೆ ದಿನ ಕಳೆದಂತೆ ಸಮಸ್ಯೆ ಹೆಚ್ಚಾಯಿತು. ಡೇರೆಯೊಳಗೆ ಕೇವಲ ಪದಾಧಿಕಾರಿಗಳು ಮತ್ತವರ ಬೆರಳೆಣಿಕೆಯ ಗೆಳೆಯರಷ್ಟೇ ಕುಳಿತಿರುತ್ತಿದ್ದರು. ಕೆಲವರು ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ನಾಲ್ಕು ತಿಂಗಳು ದಾಟಿದರೂ ಯಾವುದೇ ಪರಿಹಾರ ಕಾಣಲಿಲ್ಲ. ಎರಡೂ ಕಡೆಯ ವಾದ ಅವರವರ ಮೂಗಿನ ನೇರಕ್ಕೆ ಸರಿ ಅನಿಸುತ್ತಿತ್ತು. ಆದರೆ ಕೆಲವು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿ ಪಾತ್ರೆ ಪಡಗ, ಒಡವೆಗಳು ಮಾರ್ವಾಡಿ ಅಂಗಡಿ ಸೇರಿದವು.
ನಾಗರಾಜನೂ ಕೆಲವೊಮ್ಮೆ ಹೋಗಿ ಡೇರೆಯೊಳಗೆ ಕುಳಿತು ಬರುತ್ತಿದ್ದ. ಆದರೆ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಸಣ್ಣಪುಟ್ಟ ಉಳಿತಾಯಗಳು ಖಾಲಿಯಾಗಿ, ಮನೆ ಖರ್ಚಿಗೆ ತಂಗಿಯ ಹೊಲಿಗೆಯಿಂದ ಬಂದದ್ದೇ ಆಧಾರವಾಯಿತು. ಅಲ್ಲದೆ ನಾಗರಾಜ ಪ್ಯಾಕಿಂಗ್ ವಿಭಾಗದಲ್ಲಿದ್ದುದರಿಂದ ಅಂತಹುದೇ ಕೆಲಸ ಸಿಗುವುದು ಕಠಿಣ. ಎರಡನೇ ವರ್ಷದ ಬಿಕಾಂನಲ್ಲಿ ಕಾಲೇಜ್ ತೊರೆದಿದ್ದುದರಿಂದ, ಈಗಾಗಲೇ ಅನೇಕ ವರ್ಷಗಳಾಗಿದ್ದುದರಿಂದ ಅಕೌಂಟ್ಸ್‌ಗೆ ಸಂಬಂಧಪಟ್ಟ ಕೆಲಸವೂ ಸಿಗುತ್ತಿರಲಿಲ್ಲ. ಜೊತೆಗೆ ಕಾಲಿನ ಊನವೂ ಒಂದು ಪ್ರಮುಖ ಸಮಸ್ಯೆಯಾಗಿ ದಾರಿ ಕಾಣದಂತಾಗಿತ್ತು.
ನಾಗರಾಜನಿಗೆ ಇದ್ದದ್ದೇ ಬೆರಳೆಣಿಕೆಯಷ್ಟು ಗೆಳೆಯರು ಮನೆಯ ಬಳಿ. ಅವರಿಂದ ಸಾಲ ಪಡೆಯಲು ಬಿಗುಮಾನ. ಒಂದು ಸೋಮವಾರ ಬೆಳಿಗ್ಗೆ ಈಶ್ವರನ ದೇಗುಲಕ್ಕೆ ಹೋಗಿ ನಮಸ್ಕರಿಸಿ, ತನ್ನ ಬೇಡಿಕೆಗಳನ್ನು ಸಲ್ಲಿಸಿ ವಾಪಸ್ ಮನೆ ಕಡೆ ಹೊರಟಿದ್ದ. ಆಗ ಎದುರಿಗೆ ಕಂಡವನೇ ಲಾಟರಿ ನಾರಾಯಣಪ್ಪ. ಆಗ ಬೆಂಗಳೂರಿನಲ್ಲಿ ಅನೇಕ ರಾಜ್ಯಗಳ ಲಾಟರಿ ಟಿಕೆಟ್‌ಗಳು ಮಾರಾಟವಾಗುತ್ತಿದ್ದವು. ಸಾಕಷ್ಟು ಜನರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದರೆ, ಕೆಲವರಿಗೆ ಅದೇ ವ್ಯಸನವಾಗಿ ಹೋಗಿತ್ತು. ಆಗಿನ್ನು ಒಂದಂಕಿ ಲಾಟರಿ ಬಂದಿರಲಿಲ್ಲ. ಈ ನಾರಾಯಣಪ್ಪ ಎಲೆಕ್ಷನ್ ಸಮಯದಲ್ಲಿ ‘ಕೇಳಿರಿ ಮಿತ್ರರೇ ಹೇಳುವೆ ನಾನು, ಭಾರತ ಮಾತೆಯ ಚರಿತೆಯನು, ನಮ್ಮ ಭಾರತ ಮಾತೆಯ ಚರಿತೆಯನು’ ಎಂಬ ಲಾವಣಿ ಹಾಡುತ್ತಿದ್ದ. ತನಗೊಂದು ಸ್ವಂತ ಮನೆಯಿತ್ತು. ಹೆಂಡತಿ ಮಕ್ಕಳು ಇದ್ದರು. ಈಗ್ಗೆ ಒಂದು ವರ್ಷದಿಂದ ದೊಡ್ಡದೊಂದು ಕಾರ್ಡ್ ಬೋರ್ಡ್‌ಗೆ ಲಾಟರಿ ಟಿಕೆಟ್‌ಗಳನ್ನು ಸಿಕ್ಕಿಸಿಕೊಂಡು, ಅದನ್ನು ಸೈಕಲ್ಗೆ ತಗುಲಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ. ಸಾಕಷ್ಟು ವ್ಯಾಪಾರವೂ ಆಗುತ್ತಿತ್ತು.
ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಪ್ಯಾಕಿಂಗ್ ವಿಭಾಗದಲ್ಲಿ ಮೇಲ್ವಿಚಾರಕನಿಗೆ ಸಹಾಯಕನಾಗಿ ಕೆಲಸ ಮಾಡುವಂತಾಯಿತು. ಶ್ರೀಲಕ್ಷ್ಮಿಯು ಮನೆಯ ಸುತ್ತಮುತ್ತಲಿನ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಟೈಲರ್ ಆಗಿದ್ದಳು. ಸಂಬಂಧ ನೋಡಲು ಆರಂಭಿಸಿದ್ದರು. ಈ ವರ್ಷ ಮದುವೆ ಮಾಡಿಯೇ ಬಿಡಬೇಕೆಂದು ತಾಯಿ ಮಗ ನಿರ್ಧರಿಸಿದ್ದರು.
ಅಂತಹ ನಾರಾಯಣಪ್ಪ ದೇಗುಲದ ಎದುರು ಸೈಕಲ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿ ದೇವರಿಗೆ ಕೈ ಮುಗಿಯುತ್ತಾ ನಿಂತಿದ್ದಾಗಲೇ ದೇಗುಲದಿಂದ ಹೊರ ಬಿದ್ದ ನಾಗರಾಜನ ಕಣ್ಣಿಗೆ ಬಿದ್ದದ್ದು. ಆ ಒಂದು ಕ್ಷಣದಲ್ಲಿ ನಾಗರಾಜನ ಮನದೊಳಗೆ ಉಪಾಯ ಒಂದು ಹೊಳೆದಿತ್ತು. ನಾರಾಯಣಪ್ಪ ಕೆಲವು ನಿಮಿಷ ಕಣ್ಣು ಮುಚ್ಚಿಕೊಂಡು, ಕೈಜೋಡಿಸಿಕೊಂಡು, ತುಟಿ ಶಬ್ದ ಹೊರಗೆ ಬಾರದಂತೆ ಪಟಪಟ ಹೊಡೆದುಕೊಳ್ಳುತ್ತಾ ಧ್ಯಾನಿಸುತ್ತಿದ್ದ. ಅವನು ಕಣ್ಣುಬಿಟ್ಟಾಗ ಭಕ್ತನೋಪಾದಿಯಲ್ಲಿ ನಾಗರಾಜ ನಿಂತಿದ್ದ. ಇಬ್ಬರಿಗೂ ಮುಖ ಪರಿಚಯವಿತ್ತು. ನಾಗರಾಜನೂ ಅಪರೂಪಕ್ಕೆ ಟಿಕೆಟ್ ಕೊಂಡಿದ್ದರೆ, ನಾರಾಯಣಪ್ಪ ಇವನ ಅಂಗವೈಕಲ್ಯವನ್ನು ಗಮನಿಸಿ ಮನದೊಳಗೆ ಮರುಗಿದ್ದ. ನಾಗರಾಜನೇ “ಅಣ್ಣ ಒಂದೆರಡು ನಿಮಿಷ ಮಾತಾಡಬಹುದಾ” ಎಂದು ಕೇಳಿದಾಗ, ನಾರಾಯಣಪ್ಪ “ಏನ್ ಸಮಾಚಾರ” ಎಂದವನೇ “ಸರಿ ನಡಿ” ಎಂದು ಹತ್ತಿರದಲ್ಲಿ ಇದ್ದ ಸೂರಪ್ಪನ ಛತ್ರದ ಮುಂದಿದ್ದ ಅಶ್ವತ್ಥ ಕಟ್ಟೆಯ ಕಡೆ ಹೊರಟ. ಇಬ್ಬರು ಅಲ್ಲಿ ಕಟ್ಟೆಯ ಮೇಲೆ ಕುಳಿತು ಮಾತು ಮುಂದುವರೆಸಿದರು.
ಸಾರಾಂಶ ಇಷ್ಟೇ; ನಾಗರಾಜ ತನ್ನ ಫ್ಯಾಕ್ಟರಿ ಬಾಗಿಲು ಹಾಕಿರುವುದರಿಂದ ಜೀವನೋಪಾಯಕ್ಕಾಗಿ ಲಾಟರಿ ಟಿಕೆಟ್ ಮಾರಲು ನಿರ್ಧರಿಸಿರುವುದಾಗಿಯೂ ತನಗೆ ಸೈಕಲ್ ತುಳಿಯುವುದು ಕಷ್ಟವಾದ್ದರಿಂದ ಅಲ್ಲದೆ ಯಶವಂತಪುರದಲ್ಲಿ ಮಾರಲು ಸಂಕೋಚ ಇರುವುದರಿಂದ ಏನು ಮಾಡುವುದೆಂದು? ಹಾಗೆಯೇ ಟಿಕೆಟ್‌ಗಳನ್ನು ಎಲ್ಲಿಂದ ತರುವುದು? ಅದರ ವ್ಯಾಪಾರದ ಒಳ ಹೊರಗನ್ನು ತಿಳಿಸಬೇಕೆಂದು ಕೇಳಿದಾಗ, ನಾರಾಯಣಪ್ಪ ನಾಗರಾಜನನ್ನು ತನಗೊಬ್ಬ ಪ್ರತಿಸ್ಪರ್ಧಿ ಎಂದು ಪರಿಗಣಿಸದೆ ಬಹಳಷ್ಟು ಸಲಹೆ ಸೂಚನೆ ಮಾರ್ಗವನ್ನು ತೋರಿಸಿದ. ಅದರಂತೆ ಮೆಜೆಸ್ಟಿಕ್ ವೃತ್ತದ ಬಳಿ ಇರುವ ಹೋಲ್ಸೇಲ್ ಏಜೆನ್ಸಿಗಳಿಂದ ಟಿಕೆಟ್‌ಗಳನ್ನು ತರಬೇಕು ಅದಕ್ಕೆ ಶೇಕಡಾ ಎಪ್ಪತ್ತೈದರಷ್ಟು ಹಣ ಕೊಡಬೇಕು. ಟಿಕೆಟ್‌ಗಳ ಕೌಂಟರ್ ಫಾಯಿಲ್ ನಾವಿಟ್ಟುಕೊಂಡು ಟಿಕೆಟ್ ಮಾರಬೇಕು. ಸಣ್ಣ ಪುಟ್ಟ ಮೊತ್ತದ ಅಂದರೆ ಕೊನೆಯ ಮೂರು ನಾಲ್ಕು ನಂಬರ್‌ಗಳಿಗೂ ಬಹುಮಾನವಿರುವುದರಿಂದ ಇವರು ಮಾರಿದ ಟಿಕೆಟ್‌ಗಳಲ್ಲಿ ಅಂತಹ ಬಹುಮಾನಿತ ಟಿಕೆಟ್‌ಗಳಿದ್ದರೆ ಕೌಂಟರ್ ಫಾಯಿಲ್‌ಗೆ ಇಂತಿಷ್ಟು ಕಮಿಷನ್ ಸಿಗುತ್ತದೆ. ಅಲ್ಲದೆ ದೊಡ್ಡ ಬಹುಮಾನ ಬಂದರೆ ಹೆಚ್ಚಿನ ಕಮಿಷನ್. ಸಾಧ್ಯವಾದಷ್ಟು ಟಿಕೆಟ್ ಖಾಲಿ. ಆದರೆ ಅನುಕೂಲ ಅಥವಾ ಉಳಿದ ಟಿಕೆಟ್‌ಗಳಲ್ಲಿ ಯಾವುದಕ್ಕಾದರೂ ಬಹುಮಾನ -ಸಣ್ಣ ಪುಟ್ಟದಾದರೂ- ಬಂದರೆ ಆ ಹಣ ಇವರಿಗೆ. ಅಂತಹ ಟಿಕೆಟ್‌ಗಳನ್ನು ಮೂಲ ಏಜಂಟರ ಬಳಿ ಕೊಟ್ಟರೆ ಮುಂದಿನ ಸಲ ಟಿಕೆಟ್ ಕೊಳ್ಳುವಾಗ ಈ ಹಣ ಮುರಿದು ಉಳಿದ ಹಣ ಕೊಟ್ಟರೆ ಸಾಕು….. ಇತ್ಯಾದಿ. ಹೇಗೋ ಐನೂರು ಹೊಂದಿಸಿಕೊಂಡು ವ್ಯಾಪಾರ ಶುರು ಮಾಡಬಹುದು! ಆದರೆ ಎಲ್ಲಿ? ಹೇಗೆ? ಅದಕ್ಕೂ ನಾರಾಯಣಪ್ಪನೇ ದಾರಿ ತೋರಿಸಿದ. ಒಂದು ಕಾರ್ಡ್ ಬೋರ್ಡ್, ರಬ್ಬರ್ ಬ್ಯಾಂಡ್‌ಗಳನ್ನು ಕೊಡಿಸಿದ. ಅಲ್ಲದೇ ತನಗೆ ಪರಿಚಯದ ಕೆಲವರು ಸೈಕಲ್ ಮೇಲೆ ಹತ್ತಿರದ ಪ್ರದೇಶಗಳಿಗೂ ಹೋಗಿ ಮಾರುತ್ತಾರೆ. ನೀನು ಬೇಕಾದರೆ ಬಸ್‌ನಲ್ಲಿ ಹೋಗಿ ಪೀಣ್ಯಾದ ಹತ್ತಿರ ಎಲ್ಲಾದರೂ ಕುಳಿತುಕೊಂಡು ವ್ಯಾಪಾರ ಮಾಡು. ಮೊದಮೊದಲು ಸ್ವಲ್ಪ ಸ್ವಲ್ಪ ಟಿಕೆಟ್‌ಗಳನ್ನು, ಕೆಲವು ರಾಜ್ಯದವನ್ನು ಮಾತ್ರ ತೆಗೆದುಕೊ. ಅದರಲ್ಲೂ ಹೆಚ್ಚು ಮಾರಾಟವಾಗುವುದು ಯಾವುದೆಂಬುದನ್ನು ತಿಳಿಸಿಕೊಟ್ಟ. ಎಲ್ಲಕ್ಕಿಂತ ಮೊದಲು ಒಂದು ಸೀಲ್ ಮಾಡಿಸಿಕೊ, ಟಿಕೆಟ್ ಹಿಂದೆ ಸೀಲ್ ಹಾಕಬೇಕು. ಹೀಗೆ ಪಕ್ಕ ಶಿಷ್ಯನಂತೆ ಗುರು ಹೇಳಿದ ಮಾತುಗಳೆಲ್ಲವನ್ನು ಪರಾಂಬರಿಸಿದ. ಮನೆಯಲ್ಲಿ ಮೊದಲು ತಾಯಿ, ತಂಗಿ ಒಪ್ಪಲಿಲ್ಲ. ಕಣ್ಣೀರು ಹಾಕಿದರು. ಅವರನ್ನು ಒಪ್ಪಿಸಿ, ತಂಗಿ ಹೆಸರಲ್ಲಿ ‘ಶ್ರೀ ಲಕ್ಷ್ಮಿ ಲಕ್ಕಿ ಲಾಟರಿ’ ಎಂದು ಸೀಲ್ ಮಾಡಿಸಿಕೊಂಡು, ಈಗ್ಗೆ ಒಂದು ತಿಂಗಳಿಂದ ಈ ವ್ಯಾಪಾರ ಮಾಡುತ್ತಿದ್ದಾನೆ.
*****
ಮೊದಲನೆಯ ದಿನ ‘ಪರವಾಗಿಲ್ಲ’ ಎನ್ನುವಷ್ಟು ವ್ಯಾಪಾರವಾಯಿತು. ಆದರೆ ಕೆಲವರು ರಿಸಲ್ಟ್ ನೋಡಲು ಬಂದಾಗ ಇವನ ಬಳಿ ಆ ದಿನದ ಪೇಪರ್ ಇರಲಿಲ್ಲ. ಮಾರನೇ ದಿನ ಎಲ್ಲ ರಾಜ್ಯಗಳ ಲಾಟರಿ ಟಿಕೆಟ್ ರಿಸಲ್ಟ್ ನೋಡಲು -ಕನ್ನಡ ಪತ್ರಿಕೆಗಳಲ್ಲಿ ಹೆಚ್ಚು ಸಿಗುತ್ತಿರಲಿಲ್ಲವಾದುದರಿಂದ -ತಮಿಳು ಪೇಪರನ್ನು ಕೊಂಡು ತರಬೇಕಾಯಿತು. ಪುಣ್ಯಕ್ಕೆ ರಿಸಲ್ಟ್‌ಗಳು ಇಂಗ್ಲಿಷ್ನಲ್ಲಿದ್ದವು. ಯಾರಾದರೂ ಹೀಗೆ ರಿಸಲ್ಟ್ ನೋಡುವಾಗ, ಆ ಟಿಕೆಟ್‌ಗಳಿಗೆ ರೂಪಾಯಿ ಹತ್ತು, ಇಪ್ಪತ್ತರ ಬಹುಮಾನ ಬಂದಿದ್ದರೆ ಆ ಹಣವನ್ನು ಇವನೇ ಕೊಟ್ಟು ಟಿಕೆಟ್ ಇಟ್ಕೋಬೇಕು. ಕೆಲವರು ಅದರಲ್ಲಿ ಅರ್ಧಮೊತ್ತಕ್ಕೆ ಹೊಸ ಟಿಕೆಟ್ ಖರೀದಿಸುತ್ತಿದ್ದುದು ಇವನಿಗೆ ಅನುಕೂಲ. ಇವನ ಬಳಿ ಕೊಂಡ ಟಿಕೆಟ್‌ಗೆ ಬಹುಮಾನ ಬಂದಿದ್ದರೆ ಪುನಃ ಇವನ ಬಳಿಯೇ ಟಿಕೆಟ್ ಕೊಳ್ಳಲು ಬರುವವರು ಕೆಲವರು. ಒಟ್ಟಿನಲ್ಲಿ ಒಂದು ಮಟ್ಟಿಗೆ ವ್ಯಾಪಾರ ನಡೆಯುತ್ತಿತ್ತು. ಅದರಲ್ಲೂ ಕೆಲವು ಟಿಕೆಟ್‌ಗಳು ಉಳಿದು ಹೋಗಿ ಮಾರನೇ ಬೆಳಗ್ಗೆ ಪೇಪರ್ ತಂದು ರಿಸಲ್ಟ್ ನೋಡುವಾಗ, ಅವಕ್ಕೇನಾದರೂ ಬಹುಮಾನ ಬಂದಿದ್ದರೆ -ಅದು ಸಣ್ಣಪುಟ್ಟದಾದರೂ- ಇನ್ನಷ್ಟು ಟಿಕೆಟ್ ತರಲು, ಮಾರಲು ಉತ್ಸಾಹ ಬರುತ್ತಿತ್ತು. ತಾಯಿಗೂ ತಂಗಿಗೂ ಸ್ವಲ್ಪ ಭರವಸೆ ಬಂತು. ಅದರಲ್ಲೂ ತಂಗಿ ಒಮ್ಮೊಮ್ಮೆ ತಾನೇ ರಿಸಲ್ಟ್ ನೋಡಿ, ಅದಕ್ಕೆ ಏನಾದರೂ ಬಹುಮಾನ ಬಂದಿದ್ದರೆ ಮನೆಯಲ್ಲಿ ಸಂಭ್ರಮ! ಎರಡು ಮೂರು ದಿನಕ್ಕೊಮ್ಮೆ ಮೆಜೆಸ್ಟಿಕ್‌ಗೆ ಹೋಗಿ ಹಣದ ವ್ಯವಹಾರ ಮಾಡಿ ಟಿಕೆಟ್‌ಗಳನ್ನು ತರುತ್ತಿದ್ದ. ಸುತ್ತಮುತ್ತಲ ಫ್ಯಾಕ್ಟರಿಯವರು ಹೋಗುವಾಗ ಬರುವಾಗ, ಊಟದ ಸಮಯದಲ್ಲಿ ಬರುತ್ತಿದ್ದರು. ಒಂದು ದಿನ ಇದ್ದ ಹಾಗೆ ಇನ್ನೊಂದು ದಿನ ಇರುತ್ತಿರಲಿಲ್ಲ. ಅದಕ್ಕೆ ಅಲ್ಲವೇ ಲಾಟರಿ ಎನ್ನುವುದು!! ಈ ಮಧ್ಯೆ ಒಂದೆರಡು ಸಲ ತಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಬಳಿ ಹೋಗಿ ಬಂದಿದ್ದ. ಸಮಸ್ಯೆ ಇದ್ದಲ್ಲೇ ಇತ್ತು.
ಆ ಮರದಿಂದ ಇಪ್ಪತ್ತು ಅಡಿ ದೂರದಲ್ಲಿ ಇನ್ನೊಂದು ಮರದ ನೆರಳಿನಲ್ಲಿ ಒಂದು ಸಣ್ಣ ತಳ್ಳುವ ಗಾಡಿಯಲ್ಲಿ ಟೀ ಮಾರುವ ಮಲೆಯಾಳಿಯೊಬ್ಬರ ಪರಿಚಯವಾಯಿತು ನಾಗರಾಜನಿಗೆ. ಇವನು ಯಾವಾಗಲಾದರೂ ಒಮ್ಮೆ ಅಲ್ಲಿಗೆ ಹೋಗಿ ಟೀ ಕುಡಿಯುತ್ತಿದ್ದ. ಅವನ ಹೆಸರು ಕರುಣಾಕರನ್ ನಾಯರ್ ಎಂದು ತಿಳಿಯಿತು. ಅವನಿಗೂ ಟಿಕೆಟ್ ಕೊಳ್ಳುವ ‘ಚಟ’ ಇತ್ತು. ಈಗ ಕಡಿಮೆ ಮಾಡಿಕೊಂಡಿರುವನಂತೆ. ಕಳೆದ ವರ್ಷ ಹತ್ತು ಸಾವಿರ ರೂಪಾಯಿಯ ಬಹುಮಾನವೊಂದು ಕೇರಳ ರಾಜ್ಯ ಲಾಟರಿಯಲ್ಲಿ ಸಿಕ್ಕಿತ್ತಂತೆ. ಅವನೂ ಆಗಾಗ ಇವನಲ್ಲಿಗೆ ಬಂದು ಟಿಕೆಟ್ ಖರೀದಿಸುತ್ತಿದ್ದ. ಅಲ್ಲದೆ ಒಂದು ಸಲಹೆಯನ್ನು ನೀಡಿದ. ಸಾಧ್ಯವಾದಷ್ಟು ಕೊನೆಯಲ್ಲಿರುವ ಎರಡು ಸಂಖ್ಯೆ 90ರ ಮೇಲಿನದು ಇದ್ದರೆ ಒಳ್ಳೆಯದು. ಉದಾಹರಣೆಗೆ 91,92 ಹೀಗೆ. ಸಾಧ್ಯವಾದಷ್ಟು ಎರಡು ಸೊನ್ನೆಗಳು, ಸೊನ್ನೆ ಒಂದು ಸೊನ್ನೆ ಎರಡು ಹೀಗಿರುವುದು ಬೇಡವೇ ಬೇಡ. ಹೀಗೆ ಏನೇನೋ …… ನಾಗರಾಜನು ಪರಿಶೀಲಿಸಿದ. ಸ್ವಲ್ಪಮಟ್ಟಿಗೆ ನಾಯರ್ ಮಾತು ನಿಜವೂ ಆಗಿತ್ತು!
ಹೀಗೆ ಒಂದು ದಿನ ನಾಗರಾಜ ಕುಳಿತಿದ್ದ. ಮರದ ನೆರಳಿತ್ತು. ಆಚೀಚೆ ಬಿಸಿಲಿನ ಝಳ. ಗಾಳಿ ಬೀಸುತ್ತಿತ್ತು. ಅಷ್ಟು ಹೊತ್ತಿನಲ್ಲಿ ಜನರ ಓಡಾಟ ಕಡಿಮೆ. ಹಾಗೇ ಒಂದು ಜೊಂಪು ಹತ್ತಿತ್ತು. ಕನಸಿನಲ್ಲಿ ತನ್ನಲ್ಲಿ ಉಳಿದಿದ್ದ ಟಿಕೆಟ್ ಒಂದಕ್ಕೆ ಲಕ್ಷ ರೂಪಾಯಿಯ ಬಂಪರ್ ಬಂದ ಹಾಗೆ, ಅದರಿಂದ ಬಂದ ಹಣದಲ್ಲಿ ತಂಗಿಯ ಮದುವೆ, ತನಗೊಂದು ಮೂರು ಚಕ್ರದ ಸ್ಕೂಟರ್, ಸಣ್ಣದೊಂದು ಲಾಟರಿ ಟಿಕೆಟ್ ಮಾರುವ, ಸ್ಟೇಷನರಿ ಅಂಗಡಿ. ಅದರಿಂದ ಬರುವ ಆದಾಯ. ಅಲ್ಲಿ ಹುಡುಗನೊಬ್ಬನನ್ನು ಕೆಲಸಕ್ಕೆ ಇರಿಸಿ ತಾನು ಬಿ.ಕಾಂ. ಮುಂದುವರಿಸಿದ ಹಾಗೆ…… ಇನ್ನೂ ಒಂದಷ್ಟು ಸಿಹಿಗನಸುಗಳು ಬಿದ್ದು ಅವನ ಮದುವೆಯೂ ಆಗಿ ಹೋಗಿರುತ್ತಿತ್ತೇನೋ! ಆದರೆ ಅಷ್ಟರಲ್ಲಿ ಯಾರೋ ಭುಜ ಹಿಡಿದು ಅಲ್ಲಾಡಿಸಿದ ಹಾಗೆ ಆಗಿ ಎಚ್ಚರಗೊಂಡ. ಎದುರಿಗೆ ನಾಯರ್ ನಿಂತಿದ್ದ. “ಯಾಕ್ರೀ ಉಷಾರಿಲ್ವೇ” ಎಂದ. ಹಾಗೇನಿಲ್ಲ ಎನ್ನುತ್ತಾ ನಾಗರಾಜ ಬಾಟಲಿಯಿಂದ ನೀರು ಕೈಗೆ ಹನಿಸಿಕೊಂಡು ಮುಖಕ್ಕೆ ಚಿಮುಕಿಸಿಕೊಂಡ. ಆದರೆ ಆಗ ನಾಯರ್ ಹೇಳಿದ ಮಾತು ಇನ್ನಷ್ಟು ಯೋಚನೆಗೆ ತಳ್ಳಿತು.
ಹೌದು! ನಾಯರ್ ಹೇಳಿದ ಮಾತಿನ ಸಾರಾಂಶ ಇಷ್ಟೇ. ಇತ್ತೀಚಿಗೆ ಟಿಕೆಟ್ ಮಾರುವವರು ಹೆಚ್ಚಾಗಿ ಕಾಂಪಿಟಿಷನ್ ಜಾಸ್ತಿ ಆಗಿದೆ. ಕೆಲವರು ಹೆಚ್ಚು ಟಿಕೆಟ್ ಸೇಲ್ ಮಾಡುವ ಸಲುವಾಗಿ ಕೌಂಟರ್ ಫಾಯಿಲ್ ಸಮೇತ ಟಿಕೆಟ್‌ಗಳನ್ನು ಮಾರುತ್ತಿದ್ದಾರೆ. ಅಂತಹ ಟಿಕೆಟ್‌ಗೆ ಬಹುಮಾನ ಬಂದರೆ ಕೊಂಡವರಿಗೆ ಹೆಚ್ಚು ಹಣ ಸಿಗುತ್ತದೆ. ಮಾರಿದವರಿಗೆ ಲಾಭ ಕಡಿಮೆಯಾಗುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಶುರುವಾಗಿ ಈಗ ಅನಿವಾರ್ಯವಾಗುತ್ತಿದೆ. ರೆಗ್ಯುಲರ್ ಆಗಿ ಕೊಳ್ಳುವ ಕೆಲವರು ಅಂತಹವರ ಬಳಿಯೇ ಕೊಳ್ಳುತ್ತಾರೆ. ಬಹುಶಃ ಹಾಗಾಗಿ ಇವನಿಗೆ ಎರಡು ದಿನದಿಂದ ವ್ಯಾಪಾರ ಕಡಿಮೆಯಾಗಿದೆ..
ನಾಗರಾಜನಿಗೆ ತಲೆಕೆಟ್ಟು ಹೋಯಿತು. ಇದೇನಪ್ಪಾ ಹೊಸ ಸಮಸ್ಯೆ?! ಎರಡು ದಿನ ಹಾಗೆ ಮಾರಿದ. ಕೆಲವರು ಕೊಂಡರು. ಕೆಲವರು “ಯಾಕಪ್ಪ ಕೌಂಟರ್ ಫಾಯಿಲ್ ಕೊಡಲ್ವಾ” ಎಂದು ಕೇಳಿ ಅರೆಮನಸಿನಲ್ಲಿ ಕೊಂಡರು. ಕೆಲವರು ಹಾಗೆಯೇ ಹೋದರು. ತನಗೆ ಬೇರೆ ದಾರಿ ಇಲ್ಲ, ತಾನೂ ಉಳಿದವರಂತೆ ಮಾಡಬೇಕು ಎಂದು ಯೋಚಿಸುತ್ತ ಕುಳಿತಿದ್ದ. ಇದ್ದಕ್ಕಿದ್ದ ಹಾಗೆ ಎದುರಿಗೆ ನೆರಳೊಂದು ಬಿದ್ದ ಹಾಗೆ ಕಂಡು ದಿಟ್ಟಿಸಿದ. ಅಪರಿಚಿತರೊಬ್ಬರು ಮುಗುಳ್ನಗುತ್ತಾ ನಿಂತಿದ್ದರು. “ನನಗೆ ಟಿಕೆಟ್ ಬೇಡಪ್ಪ, ನನಗೆ ಗೊತ್ತು ನೀನು ಈ ಕಸುಬಿನವನಲ್ಲ. ಯಾವುದೋ ಅನಿವಾರ್ಯ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದೀಯಾ. ಯೋಚಿಸಬೇಡ ಸದ್ಯದಲ್ಲೇ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ, ಏಳಿಗೆಯೂ ಆಗುತ್ತದೆ. ಸಾಧ್ಯವಾದರೆ -ಇಲ್ಲೇ ಎಂಟು ಮೈಲಿ ದೂರದಲ್ಲಿ- ಬೋವಿನಕೆರೆ ಅಂತ ಒಂದು ಊರಿದೆ ಕೇಳಿದ್ದೀಯಾ” ಎಂದರು. ನಾಗರಾಜ ತಲೆ ಆಡಿಸಿದ. ಆ ಹೆಸರು ಎಲ್ಲೋ ಕೇಳಿದ ಹಾಗಿತ್ತು. “ಅಲ್ಲಿ ಒಂದು ಶಿವನ ದೇವಾಲಯ, ಶನಿದೇವರ ಗುಡಿ ಇದೆ ಒಮ್ಮೆ ಹೋಗಿ ಬಾ” ಎಂದು ಹೇಳಿ ನಗುತ್ತಾ ಕೊರಟೇ ಹೋದರು.
ನಾಗರಾಜನಿಗೆ ಕನಸೋ ನಿಜವೋ ತಿಳಿಯಲಿಲ್ಲ. ಉಳಿದ ಟಿಕೇಟ್‌ಗಳನ್ನು ಚೀಲಕ್ಕೆ ಸೇರಿಸಿ ಆ ದಿನ ಸ್ವಲ್ಪ ಬೇಗನೆ ಮನೆ ಸೇರಿದ. ಅವನನ್ನು ಕಂಡ ತಕ್ಷಣ ಅವನ ಅಮ್ಮ “ಅಯ್ಯೋ ಬಂದುಬಿಟ್ಟೆಯಾ, ಬರುವವನು ಇನ್ನರ್ಧ ಗಂಟೆ ಮುಂಚೆ ಬಂದಿದ್ರೆ?! ನಿನ್ನ ಫ್ರೆಂಡು ಉಮೇಶ ಬಂದಿದ್ದ, ಏನೋ ಫ್ಯಾಕ್ಟರಿ ವಿಷಯ ಮಾತಾಡಬೇಕಂತೆ, ನಾಳೆ ಸಿಗಬೇಕಂತೆ” ಎಂದರು. ಏನಿರಬಹುದು ಫ್ಯಾಕ್ಟರಿ ವಿಷಯ? ಆ ಅಪರಿಚಿತರು ಬೇರೆ ಆಸೆ ಹುಟ್ಟಿಸಿದ್ದರು. ರಾತ್ರಿ ಹೇಗೋ ಕಳೆದು ಬೆಳಿಗ್ಗೆ ಬಸ್ ಹಿಡಿದು ಮಲ್ಲೇಶ್ವರದಲ್ಲಿದ್ದ ಉಮೇಶನ ಮನೆಗೆ ಹೋದ. ಅವನು ಮನೆಯಲ್ಲೇ ಇದ್ದ. ಅವನು ನೇರವಾಗಿ ವಿಷಯ ವಿವರಿಸಿದ. ಇವರು ಆನ್ಸಿಲೆರಿಯಾಗಿ ಕೆಲಸ ಮಾಡುವ ಕಂಪನಿಗಳನ್ನು ತಮ್ಮಲ್ಲಿ ವಿಲೀನಗೊಳಿಸಿಕೊಳ್ಳಲು ಕೇಂದ್ರ ಸರಕಾರದ ಉದ್ದಿಮೆಯೊಂದು ಇಲ್ಲಿನ ಆಡಳಿತ ವರ್ಗದ ಜೊತೆ ಮಾತುಕತೆ ನಡೆಸುತ್ತಿದೆ. ಬಹಳಷ್ಟು ಟರ್ಮ್ಸ್ ಅಂಡ್ ಕಂಡಿಷನ್ಸ್ ಒಪ್ಪಲಾಗಿದೆ. ಇನ್ನೊಂದೆರಡು ಸುತ್ತಿನ ಮಾತುಕತೆಯ ನಂತರ ವಿಲೀನ ಪ್ರಕ್ರಿಯೆ ಶುರುವಾಗುತ್ತದೆ. ಅದಕ್ಕೆ ಮೊದಲು ಇಲ್ಲಿನ ಕಾರ್ಮಿಕ ಸಂಘಟನೆಗಳನ್ನು ಬರ್ಕಾಸ್ತುಗೊಳಿಸಿ ಅವರಲ್ಲಿ ಈಗ ಚಾಲ್ತಿಯಲ್ಲಿರುವ ಸಂಘಟನೆಯ ಸದಸ್ಯರಾಗಬೇಕಾಗುತ್ತದೆ, ಅದೂ ಒಂದು ವರ್ಷದ ನಂತರ. ಒಟ್ಟಿನಲ್ಲಿ ಇನ್ನು ಒಂದು ತಿಂಗಳಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ನಾವೆಲ್ಲಾ ಕೇಂದ್ರ ಸರ್ಕಾರದ ಉದ್ದಿಮೆಯ ಕೆಲಸಗಾರರಾಗುತ್ತೇವೆ. ಸಂಬಳ, ಸಾರಿಗೆ, ಭತ್ಯೆ, ಸಮವಸ್ತ್ರ ಎಲ್ಲವೂ ಬದಲಾಗುತ್ತದೆ. ಮ್ಯಾನೇಜ್ಮೆಂಟ್‌ನಲ್ಲಿರುವ ನನ್ನ ಸಂಬಂಧಿ ಒಬ್ಬರಿಂದ ಈ ವಿಷಯ ತಿಳಿಯಿತು. ಎಂದು ಒಂದೇ ಉಸಿರಿಗೆ ಹೇಳಿ, ಭಾವೋದ್ವೇಗ ತಡೆಯಲಾರದೆ ನಾಗರಾಜನನ್ನು ಅಪ್ಪಿಕೊಂಡ. ನಾಗರಾಜನ ಸಂತೋಷಕ್ಕೆ ಪಾರವೇ ಇಲ್ಲ. ಸಣ್ಣ ಅಳುಕೊಂದು ಕಾಡಿತು. ಕೇಳಿಯೇ ಬಿಟ್ಟ ತನ್ನ ಕಾಲಿನ ಊನದ ಬಗ್ಗೆ. ನಮ್ಮಂತಹವರನ್ನು ಸೇರಿಸಿಕೊಳ್ಳುತ್ತಾರಾ ಎಂದು. ಉಮೇಶ ಹೇಳಿದ “ಅವರಲ್ಲಿ ಈಗಾಗಲೇ ನಿನ್ನಂತಹವರು ಅನೇಕರು ಕೆಲಸ ಮಾಡುತ್ತಿದ್ದಾರೆ, ಹಾಗಾಗಿ ನಿನಗೆ ಇನ್ನಷ್ಟು ಸೂಕ್ತ ಕೆಲಸ ಕೊಡುತ್ತಾರೆ” ಎಂದಾಗ ನಿಜಕ್ಕೂ ಕಣ್ಣಿಂದ ಹನಿಗಳು ಉದುರಿದವು. ನಿಜವಾದ ಬಂಪರ್ ಲಾಟರಿ ಎಂದರೆ ಇದೇ ಅಲ್ಲವೇ ಎಂದುಕೊಂಡ. ಬೇಗ ಈ ವಿಷಯ ತಂಗಿಗೆ, ಅಮ್ಮನಿಗೆ ಹೇಳಬೇಕೆಂದು ಬಸ್ಸಿಗೆ ಕಾಯದೆ ಅಪರೂಪಕ್ಕೆ ಆಟೋ ನಿಲ್ಲಿಸಿದ. ಹಾಗೆಯೇ ಮನದಲ್ಲಿ ಬೋವಿನಕೆರೆಗೆ ಹೋಗಿ ಶಿವ ದೇವಾಲಯ ಹಾಗೂ ಶನಿದೇವರ ಗುಡಿಗೆ ಭೇಟಿ ನೀಡಬೇಕು ಎಂದು ನಿರ್ಧರಿಸಿದ.
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
Wonderful narration of the details of the downtrodden class of persons, their difficulties and limited aspirations. The end is open and very appropriate.
ಧನ್ಯವಾದಗಳು ತಮ್ಮ ಅಭಿಪ್ರಾಯಕ್ಕೆ
Very nice feel good story! In fact my father when he moved to Bangalore a century ago had a similar experience. As he narrated ” A silvan on good shed road gave him a pair of scales and asked him to start fire wood business” Rest is history, he became a hardworking successful builder, put seven children through college, got us all married to good families and I never saw him perturbed and had never taken any loans in life! So I can relate to Narayanappa, Nagaraja’s friend!!
Thanks for your comments