ಹಳ್ಳಿಗರ ಅಭ್ಯುದಯಕ್ಕಾಗಿ ಅವರ ಮನಸ್ಸು ತುಡಿಯುತ್ತಲೇ ಇರುತ್ತದೆ. ವಿವಿಧ ಕ್ಷೇತ್ರತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಲಂಡನ್‌ಗೆ ಕರೆಯಿಸಿಕೊಳ್ಳುವ ಅವರ ಆಸಕ್ತಿ ಅಗಾಧವಾದುದು. ಬಸವ ಪ್ರಣೀತ ಸ್ವಾಮಿಗಳನ್ನು, ವಚನ ಸಾಹಿತ್ಯ ಪರಿಣತರನ್ನು, ತಾವೇ ಮೂರೂವರೆ ದಶಕಗಳ ಹಿಂದೆ ಸ್ಥಾಪಿಸಿದ ಬಸವ ಅಂತರ‍್ರಾಷ್ಟ್ರೀಯ ಸಂಶೋಧನಾ ಕೇಂದ್ರಕ್ಕೆ ಆಹ್ವಾನಿಸಿ ಲಂಡನ್‌ನಲ್ಲಿ ಬಸವತತ್ತ್ವ ಪ್ರಸಾರ ಮಾಡುವ ಅವರ ಬಯಕೆ ಅದಮ್ಯವಾದುದು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 90ನೇ ಕಂತು ನಿಮ್ಮ ಓದಿಗೆ

ಲಂಡನ್ ನಿವಾಸಿ ಎಸ್. ಮಹಾದೇವಯ್ಯ ಅವರ ಬದುಕು ನಿರಂತರ ಪರಿಶ್ರಮದಿಂದ ಕೂಡಿದೆ. ಅವರು ಬಾಲ್ಯದಲ್ಲಿ ಅತೀವ ಬಡತನವನ್ನೂ ನಂತರದಲ್ಲಿ ಶ್ರೀಮಂತಿಕೆಯನ್ನೂ ಕಂಡವರು. ಕೆರೆಯ ನೀರು ಕೆರೆಗೆ ಚೆಲ್ಲುವ ಹಾಗೆ ಅವರು ಸತತ ಪ್ರಯತ್ನದಿಂದ ಸಮಾಜದ ಮೂಲಕ ಪಡೆದದ್ದನ್ನು ಸಮಾಜದಲ್ಲಿ ಸತ್ಪಾತ್ರಕ್ಕಾಗಿ ಬಳಸುತ್ತಿದ್ದಾರೆ. ಬೆಂಗಳೂರು ನಗರದಿಂದ ಕೇವಲ 15 ಕಿಲೊ ಮೀಟರ್ ದೂರದಲ್ಲಿರುವ ತಮ್ಮ ಗ್ರಾಮವಾದ ಕನ್ನಲ್ಲಿಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉನ್ನತಿಗಾಗಿ ಕಾರ್ಯೋನ್ಮುಖರಾಗಿದ್ದಾರೆ. ಅದಕ್ಕಾಗಿ ದೂರದ ಲಂಡನ್ನಿನಿಂದ ಭಾರತಕ್ಕೆ ಬರುತ್ತಲೇ ಇರುತ್ತಾರೆ. ಅಲ್ಲದೆ ಲಂಡನ್ನಲ್ಲೇ ಇದ್ದು ಮಾರ್ಗದರ್ಶನ ಮಾಡುತ್ತಿರುತ್ತಾರೆ. ಐದೂವರೆ ದಶಕಗಳಿಂದ ಲಂಡನ್ ನಿವಾಸಿಯಾಗಿದ್ದರೂ ಅವರ ಮನಸ್ಸು ನೆಟ್ಟಿರುವುದು ಕನ್ನಲ್ಲಿ ಗ್ರಾಮದಲ್ಲೇ.

ಮಹಾದೇವಯ್ಯನವರ ತಂದೆ ಸಾವಂದಯ್ಯನವರಿಗೆ ಆರು ಮಂದಿ ಹೆಣ್ಣುಮಕ್ಕಳು ಮತ್ತು ಐದು ಮಂದಿ ಗಂಡುಮಕ್ಕಳು. 1938ನೇ ಜನವರಿ 19ರಂದು ಮಹಾದೇವಯ್ಯ ಜನಿಸಿದರು. ತಾಯಿಯ ವಾತ್ಸಲ್ಯದ ನೆನಪು ಕೂಡ ಇರದಷ್ಟು ಚಿಕ್ಕ ವಯಸ್ಸಿನಲ್ಲೇ ತಾಯಿ ಸಿದ್ಧಬಸಮ್ಮ ಅವರನ್ನು ಮಹಾದೇವಯ್ಯನವರು ಕಳೆದುಕೊಂಡರು! ತಂದೆ ಸಾವಂದಯ್ಯನವರು ಹುಣಸಮಾರನಹಳ್ಳಿಯಲ್ಲಿನ ಮಠವೊಂದರಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಮಹಾದೇವಯ್ಯ ಮತ್ತು ಇನ್ನೊಬ್ಬ ಮಗನನ್ನು ಬಿಟ್ಟರು.

ತಂದೆ ಸಾವಂದಯ್ಯ ವೀಳ್ಯದೆಲೆಯ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಮಾರಾಟ ಮಾಡಿ ಬಂದ ಅಲ್ಪ ಹಣದಿಂದ ಬಹಳ ಕಷ್ಟಪಟ್ಟು 11 ಮಕ್ಕಳನ್ನು ಸಾಕುತ್ತಿದ್ದರು. ಅವರ ತಂದೆ ವೀರಯ್ಯನವರಿಗೆ ಮಗನ ಕಷ್ಟ ನೋಡಲಿಕ್ಕಾಗದೆ ಒಂದು ಚಿಕ್ಕ ವೀಳ್ಯದೆಲೆ ತೋಟವನ್ನು ಕೊಂಡು ಕೊಟ್ಟರು. ಹೀಗೆ ಸಾವಂದಯ್ಯನವರು ಕಷ್ಟಪಟ್ಟು ಬೆಳೆಯುತ್ತ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ, ಪಟೇಲರಾಗಿ ಜನಸೇವೆ ಮಾಡಿದರು.

ಮಹಾದೇವಯ್ಯನವರು ಕಷ್ಟಪಟ್ಟು ಓದಿದರು. ಕೊನೆಗೆ ಕೊಯಮತ್ತೂರಲ್ಲಿ ಎಂ.ಎಸ್ಸಿ. (ಸೋಷಿಯಲ್ ಸೈನ್ಸ್ ಅಂಡ್ ಅಗ್ರಿಕಲ್ಚರಲ್ ಕೆಮಿಸ್ಟ್ರಿ) ಪದವಿ ಪಡೆದರು. ವಿವಿಧ ಕಡೆಗಳಲ್ಲಿ ಸೇವೆಸಲ್ಲಿಸಿದ ಮಹಾದೇವಯ್ಯನವರು 1968ರಲ್ಲಿ ಲಂಡನ್‌ಗೆ ತೆರಳಲು ನಿರ್ಧರಿಸಿದರು. ಮದುವೆಯಾಗಿ ಹೋಗುವುದಾದರೆ ಹಣದ ವ್ಯವಸ್ಥೆ ಮಾಡುವುದಾಗಿ ತಂದೆ ತಿಳಿಸಿದರು. ತಂಗಿಯಂದಿರ ಮದುವೆ ಆಗುವವರೆಗೆ ಮದುವೆ ಆಗಬಾರದು ಎಂದು ಮಹಾದೇವಯ್ಯ ನಿರ್ಧರಿಸಿದರು. ಸ್ವಲ್ಪ ಹಣ ಕೂಡಿಸಿ ವಿಮಾನ ಟಿಕೆಟ್‌ಗೆ ಬೇಕಾದಷ್ಟು ಹಣವನ್ನು ಗೆಳೆಯರಿಂದ ಸಂಗ್ರಹಿಸಿ ಹೊರಟೇ ಬಿಟ್ಟರು. ಅಲ್ಲಿ ಹೋದ ನಂತರ ಜೀವನ ನಿರ್ವಹಣೆಗೆ ಕಷ್ಟಪಟ್ಟರು. ಕೊನೆಗೆ ಅಲ್ಲಿನ ಪ್ರಖ್ಯಾತ ರಾಯಲ್ ಫ್ರಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಬಯೊಕೆಮಿಸ್ಟ್ ಆಗಿ ಸೇವೆ ಸಲ್ಲಿಸತೊಡಗಿದರು. ನಂತರ ಸೀನಿಯರ್ ಬಯೊಕೆಮಿಸ್ಟ್ ಆದರು. 32 ವರ್ಷಗಳವರೆಗೆ ಈ ಸೇವೆ ಮುಂದುವರಿಯಿತು. ಅವರು ರಾತ್ರಿ ಪಾಳಿಯಲ್ಲೂ ಹೆಚ್ಚಿನ ಕೆಲಸ ಮಾಡಿ ಬಂದ ಹಣದಿಂದ ಸಮಾಜಸೇವೆ ಮಾಡುತ್ತಿದ್ದರು! ಲಂಡನ್‌ನಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆದರೆ ಸಾಮಾಜಿಕ ಕಾರ್ಯಗಳಲ್ಲಿ ಅವರಿಗೆ ನಿವೃತ್ತಿ ಎಂಬುದಿಲ್ಲ.

ಮಹಾದೇವಯ್ಯನವರು ಸ್ಥಿತಪ್ರಜ್ಞೆಗಿಂತಲೂ ಸ್ಥಿತಿಪ್ರಜ್ಞೆಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಅವರು ಹಾಗೇ ಬದುಕಿದ್ದಾರೆ. ಹಾಗೆ ಬದುಕುತ್ತ ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಬಸವ ಸೇವೆ ಮತ್ತು ಆ ಮೂಲಕ ಸಮಾಜಸೇವೆ ಅವರಿಗೆ ರಕ್ತಗತವಾಗಿದೆ. ಅವರು ಮಾಡುವ ಸಮಾಜಸೇವೆಗಳ ಕಡೆಗೆ ಗಮನ ಹರಿಸಿದರೆ ಒಬ್ಬ ವ್ಯಕ್ತಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಆಶ್ವರ್ಯಚಕಿತರಾಗುವುದು ಸಹಜವಾದುದು.

ಸೂಕ್ಷ್ಮ ಮನಸ್ಸಿನ ಮಹಾದೇವಯ್ಯನವರು ಮನುಷ್ಯರ ಗುಣಸ್ವಭಾವಗಳ ವಿಮರ್ಶೆ ಮಾಡುವುದರಲ್ಲೂ ನಿಸ್ಸೀಮರು. ತಾವು ತಿಳಿದುಕೊಂಡಂತೆ ಇರದ ಜನರ ಬಗ್ಗೆ ಬೇಸರ ವ್ಯಕ್ತಪಡಿಸಿದರೂ ಅವರನ್ನು ಸಮಾಜಸೇವೆಯಲ್ಲಿ ತೊಡಗಿಸುವ ಕನಸು ಕಾಣುವವರು.

ಲಂಡನ್‌ನಲ್ಲಿ ತಾವು ಸ್ಥಾಪಿಸಿದ ಅಂತರ‍್ರಾಷ್ಟ್ರೀಯ ಬಸವ ಕೇಂದ್ರಕ್ಕೆ ರಾಜ್ಯ ಸರ್ಕಾರ ಅಷ್ಟೊಂದು ಸ್ಪಂದಿಸಲಿಲ್ಲ ಎಂಬ ನೋವು ಅವರಿಗಿದೆ. ಏಕವ್ಯಕ್ತಿ ಸಂಸ್ಥೆಯಂತಿರುವ ಅವರು, ಬಸವತತ್ತ್ವ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಕೋಟಿ ಖರ್ಚು ಮಾಡಿದರೂ ತೃಪ್ತಿ ಇಲ್ಲ. ಇನ್ನೂ ಸೇವೆ ಮಾಡಬೇಕೆಂಬ ಹಂಬಲ ಅವರದು. ಕನ್ನಲ್ಲಿ ಮತ್ತು ಲಂಡನ್ ಮಧ್ಯೆ ಸೇತುವೆಯಂತೆ ಇರುವ ಅವರು ಪೂರ್ವ ಮತ್ತು ಪಶ್ಚಿಮಗಳ ಸಂಗಮವಾಗಿದ್ದಾರೆ.

ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಮುಂತಾದ ಮಾನವ ಅಭ್ಯುದಯದ ಚಿಂತನಾ ಕ್ರಮಗಳನ್ನು ಅವರು ಹೊಂದಿದ್ದಾರೆ. ಬಸವಾದಿ ಶರಣರ ಮಹೋನ್ನತ ಜೀವನದ ಪ್ರತೀಕವಾಗಿರುವ ವಚನಗಳು, ಕೋಮುಸೌಹಾರ್ದ ಸಂಕೇತವಾದ ಭಕ್ತಿಪಂಥ, ಶಿಶುನಾಳ ಷರೀಫರು ಮೊದಲಾದ ಅನುಭಾವಿ ಕವಿಗಳು, ತಮ್ಮ ಬದುಕಿನ ಕೇಂದ್ರಸ್ಥಾನವಾದ ಕನ್ನಲಿ ಗ್ರಾಮ ಮತ್ತು ಅಲ್ಲಿಯ ಜನಜೀವನ ಅವರ ಮೇಲೆ ಆಳವಾದ ಪ್ರಭಾವ ಬೀರಿವೆ. ಆ ಹಳ್ಳಿಗರ ಅಭ್ಯುದಯಕ್ಕಾಗಿ ಅವರ ಮನಸ್ಸು ತುಡಿಯುತ್ತಲೇ ಇರುತ್ತದೆ. ವಿವಿಧ ಕ್ಷೇತ್ರತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಲಂಡನ್‌ಗೆ ಕರೆಯಿಸಿಕೊಳ್ಳುವ ಅವರ ಆಸಕ್ತಿ ಅಗಾಧವಾದುದು. ಬಸವ ಪ್ರಣೀತ ಸ್ವಾಮಿಗಳನ್ನು, ವಚನ ಸಾಹಿತ್ಯ ಪರಿಣತರನ್ನು, ತಾವೇ ಮೂರೂವರೆ ದಶಕಗಳ ಹಿಂದೆ ಸ್ಥಾಪಿಸಿದ ಬಸವ ಅಂತರ‍್ರಾಷ್ಟ್ರೀಯ ಸಂಶೋಧನಾ ಕೇಂದ್ರಕ್ಕೆ ಆಹ್ವಾನಿಸಿ ಲಂಡನ್‌ನಲ್ಲಿ ಬಸವತತ್ತ್ವ ಪ್ರಸಾರ ಮಾಡುವ ಅವರ ಬಯಕೆ ಅದಮ್ಯವಾದುದು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಅನೇಕ ಭಾರತೀಯರ ಬಗ್ಗೆ ಅವರಿಗೆ ಬೇಸರವಿದೆ. “ಅವರ ತಲೆ ತೆಂಗಿನ ಕಾಯಿಯಂತೆ” ಎಂದು ಅವರು ತಮಾಷೆ ಮಾಡುತ್ತಾರೆ. “ಭಾರತೀಯರ ಬಣ್ಣ ತೆಂಗಿನಕಾಯಿಯಂತೆ ಇದ್ದರೂ ಮೆದುಳು ಕೊಬ್ಬರಿಯಂತೆ” ಎಂದು ಹೇಳುತ್ತಾರೆ. ಅವರು ನೋಡಲು ಭಾರತೀಯರಾಗಿದ್ದರೂ ಮನಸ್ಥಿತಿ ಬಿಳಿಯರದು ಎಂದು ಅವರು ವಿಷಾದ ವ್ಯಕ್ತಪಡಿಸುವ ಕ್ರಮ ಇದಾಗಿದೆ. ವರ್ಣಭೇದದ ವಿರುದ್ಧ ಅವರು ಲಂಡನ್‌ನಲ್ಲಿ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿದರು. ಅ ಮೂಲಕ ವರ್ಣಭೇದದ ವಿರುದ್ಧ ಜನಜಾಗೃತಿ ಮೂಡಿಸಲು ಶ್ರಮಿಸಿದರು. ಪಾಕಿಸ್ತಾನ ಮೂಲದ ಪ್ರಿಯಮಿತ್ರ ಹುಸೇನ್ ಅಖ್ತರ್ ಮುಂತಾದ ಗೆಳೆಯರು ಮಹಾದೇವಯ್ಯನವರ ಇಂಥ ಎಲ್ಲ ಸಾಮಾಜಿಕ ಪ್ರಜ್ಞೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಅವರ ಸಂಘಟನಾ ಸಾಮರ್ಥ್ಯದ ಪ್ರತೀಕವಾಗಿದೆ.

1997ರಲ್ಲಿ ಇಂಗ್ಲೆಂಡ್‌ನ 17 ಸ್ಥಳಗಳಲ್ಲಿ “ಭಕ್ತಿ ಮೂವ್‌ಮೆಂಟ್ ಇನ್ ಇಂಡಿಯಾ” ಅಡಿಯಲ್ಲಿ ಶರಣರು, ದಾಸರು ಮತ್ತು ಅನುಭಾವಿ ಕವಿಗಳು ಮುಂತಾದ ದಾರ್ಶನಿಕರ ಸಮಾಜೋ ಧಾರ್ಮಿಕ ಚಳವಳಿಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಹಾದೇವಯ್ಯನವರು ಹಮ್ಮಿಕೊಂಡಿದ್ದು ಐತಿಹಾಸಿಕವಾಗಿದೆ. ತೆರೆದ ಮನಸ್ಸಿನ ಮಹಾದೇವಯ್ಯನವರು ಸೂಫಿಗಳ ಸಾಹಿತ್ಯ, ಸಂಗೀತ ಮತ್ತು ಜೀವನವಿಧಾನವನ್ನು ಮೆಚ್ಚಿಕೊಂಡವರಾಗಿದ್ದಾರೆ. ಅವರು ಮೂವತ್ತಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರ‍್ರಾಷ್ಟ್ರೀಯ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.
ಮಹಾದೇವಯ್ಯನವರು ಒಂದು ಸಲ ಭಾರತಕ್ಕೆ ಬಂದಾಗ, ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿನ ನನ್ನ ಮನೆಗೆ ಬಂದಿದ್ದರು. ಅವತ್ತು ನಾವು ಬಸವ ದರ್ಶನದ ಕುರಿತು ಬಹಳಷ್ಟು ಚರ್ಚೆ ಮಾಡಿದೆವು. ತದನಂತರ ಅವರು ಲಂಡನ್‌ನಿಂದ ಬೆಂಗಳೂರಿಗೆ ಬಂದಾಗ ಅನೇಕ ಸಲ ಭೇಟಿಯಾಗಿ ಚರ್ಚಿಸಿದ್ದೇವೆ. ಭಾರತೀಯ ಜಾತಿಪದ್ಧತಿಯ ಬಗ್ಗೆ ಅವರಿಗೆ ತೀವ್ರವಾದ ಬೇಸರವಿದೆ. ಜಾತ್ಯತೀತ ಭಾರತ ಅವರ ಕನಸಾಗಿದೆ.

ಒಂದು ಸಲ ನಾನು 13ನೇ ಶತಮಾನದ ಮ್ಯಾಗ್ನಾಕಾರ್ಟಾ ಕುರಿತು ಅವರ ಕೂಡ ಚರ್ಚಿಸಿದೆ. ಮ್ಯಾಗ್ನಾಕಾರ್ಟಾ ಒಪ್ಪಂದ ಆಗಿದ್ದು ಇಂಗ್ಲಂಡಿನ ಕಿಂಗ್ ಜಾರ್ಜ್ ಮತ್ತು ಪಾಳೆಯಗಾರರ ಮಧ್ಯೆ… ಆ ಒಪ್ಪಂದದಲ್ಲಿ ರಾಜನ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು. ಜಗತ್ತಿನಲ್ಲಿ ಮೊದಲ ಬಾರಿಗೆ ಹೀಗೆ ರಾಜನ ಹಕ್ಕುಗಳನ್ನು ಮೊಟಕುಗೊಳಿಸುವ ಘಟನೆ ನಡೆಯಿತು. ಆದರೆ ಅದರ ಲಾಭ ಪಾಳೆಯಗಾರರಿಗೆ ಆಯಿತಲ್ಲದೆ ಜನಸಾಮಾನ್ಯರಿಗೆ ಆಗಲಿಲ್ಲ. ಆದರೂ ‘ಮ್ಯಾಗ್ನಾಕಾರ್ಟಾ ಜಗತ್ತಿನ ಎಲ್ಲ ಸಂವಿಧಾನಗಳ ತಾಯಿ’ ಎಂದು ಹೇಳುತ್ತಾರೆ. ಅದು ಹೇಗೆ ಸಾಧ್ಯ? ವಚನಗಳೇ ಜಗತ್ತಿನ ಸಂವಿಧಾನಗಳ ತಾಯಿ. ಏಕೆಂದರೆ 12ನೇ ಶತಮಾನದಲ್ಲೇ ಶರಣರು ಸಮಾಜದ ಕಟ್ಟಕಡೆಯ ಮನುಷ್ಯನನ್ನು ಮೊಟ್ಟ ಮೊದಲು ಗುರುತಿಸಿ ಅವನ ಹಕ್ಕುಗಳ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದಾಗ ಅವರು ಬಹಳ ಸಂತಸಪಟ್ಟರು. ಲಂಡನ್‌ಗೆ ಹೋದಮೇಲೆ ಮ್ಯಾಗ್ನಾಕಾರ್ಟಾ ಪುಸ್ತಕ ಕಳಿಸಿದರು. ಲಂಡನ್‌ಗೆ ಆರು ತಿಂಗಳು ಬಂದು ಅದನ್ನು ಅನುವಾದಿಸಬೇಕು ಮತ್ತು ಇತರ ಕೆಲ ದಾಖಲೆಗಳನ್ನು ವ್ಯವಸ್ಥಿತಗೊಳಿಸಬೇಕು ಎಂದು ಮುಂತಾಗಿ ತಿಳಿಸಿದರು. ಅಷ್ಟು ದಿನಗಳವರೆಗೆ ನಾನು ಮನೆ ಬಿಟ್ಟು ಲಂಡನ್‌ಗೆ ಹೋಗುವ ಪರಿಸ್ಥಿತಿ ಇರಲಿಲ್ಲ. ಆ ವಿಚಾರ ಅಲ್ಲಿಗೇ ನಿಂತಿತು.

ಸಾವಂದಯ್ಯ ಟ್ರಸ್ಟ್ ಮತ್ತು ಸಿದ್ದಬಸಮ್ಮ – ರೇವಮ್ಮ ಟ್ರಸ್ಟ್ ಮೂಲಕ ಕನ್ನಲ್ಲಿ ಗ್ರಾಮದ ಅಭ್ಯುದಯಕ್ಕೆ ಅವರು ಶ್ರಮಿಸುತ್ತಿದ್ದಾರೆ. ಅವರು ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ “ಪ್ರಗತಿಪರ ಚಿಂತಕ” ಪ್ರಶಸ್ತಿ ಮತ್ತು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿನಲ್ಲಿ “ಸಿದ್ಧಗಂಗಾ ಸಿರಿ” ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ.

ಕನ್ನಲ್ಲಿಯಲ್ಲಿ ನಾಟಕ ಶಾಲೆಯ ಸ್ಥಾಪನೆಗಾಗಿ ಮತ್ತು ಬಯಲು ರಂಗಮುಂದಿರ ಮುಂತಾದವುಗಳಿಗಾಗಿ ಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಕನ್ನಲ್ಲಿ ಸರ್ಕಾರಿ ಶಾಲೆಗೆ 5 ಲಕ್ಷ ರೂಪಾಯಿಗಳಲ್ಲಿ ಕಂಪ್ಯೂಟರ್ ಕೋಣೆ ಕಟ್ಟಿಸಿಕೊಟ್ಟಿದ್ದಾರೆ. ಕನ್ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ 20 ಲಕ್ಷ ಠೇವಣಿ ಇಟ್ಟು ಅವರ ಸುಂದರ ಭವಿಷ್ಯಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಕನ್ನಲ್ಲಿಯಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನನಗೂ ಅತಿಥಿಯಾಗಿ ಕರೆದಿದ್ದರು. ಆ ಗ್ರಾಮದಲ್ಲಿ ಅದೊಂದು ಐತಿಹಾಸಿಕ ಕಾರ್ಯಕ್ರಮವಾಗಿತ್ತು.

ಕರ್ನಾಟಕ ಸರ್ಕಾರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅವರಿಗೆ ಆತ್ಮೀಯರೆಲ್ಲ “ಲಂಡನ್ ಮಹಾದೇವಯ್ಯ” ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಮಹಾದೇವಯ್ಯನವರು ನೂರ್ಕಾಲ ಬಾಳುತ್ತ ಸಮಾಜಕ್ಕೆ ಮಾರ್ಗದರ್ಶಿಯಾಗಿರಲಿ.