ಆಕೆಯ ಗಂಡ ಬಂದು ಅಂಗಡಿಯ ಚಾರ್ಜ್ ವಹಿಸಿಕೊಂಡಾಗಲೇ ಡ್ರೈವರ್ ನೋಟ ಕಿತ್ತು ಬಾಳೆ ಹಣ್ಣೊಂದನ್ನು ಸುಲಿದನು. ಪೊಲೀಸ್ ವ್ಯಾನ್ ಹಾಗೂ ಅಂಬ್ಯುಲೆನ್ಸ್‌ನ ಕೂಗಿಗೆ ಜನರು ಗಾಬರಿಯಾಗಿದ್ದರು. ಕುತೂಹಲದಿಂದ ಆಕೆ ಸಡಿಲವಾದ ಸೆರಗನ್ನು ಹೆಗಲಮೇಲೊಗೆದು ಕುಂಟುತ್ತ ಹೆಜ್ಜೆ ಹಾಕಿದ್ದು, ಆಕೆಯ ಗಂಡನು ಮರಾಠಿಯಲ್ಲೇನೋ ಹೇಳಿದ್ದು, ಅರ್ಥೈಸದೆ ಡ್ರೈವರ್ ಜನರತ್ತ ಪಾದ ಬೆಳೆಸಿದನು. ಈಗ ಮಳೆ ನಿಂತರೂ ಹರಿವ ನೀರು ಮನಸೋ ಇಚ್ಛೆ ನುಗ್ಗುತಿದೆ. ಹೈವೆ ಮೇಲೆ ಬದಿಗೆ ನಿಂತ ಕ್ರೂಸರ್‌ನ ಕೆಳಗಿನ ಮಣ್ಣು ಕುಸಿದಿದ್ದರಿಂದ ವಾಹನ ಪಲ್ಟಿ ಹೊಡೆದು ಉರುಳಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಿದ್ಧಾರೂಢ ಗುರುನಾಥ ಕಟ್ಟಿಮನಿ ಕತೆ “ತೇರಾಮೈಲ್”

ಒಂದು ವಾರದಿಂದ ಶುರುವಾದ ಮಳೆ ಕುಂಭದ್ರೋಣ ಮಳೆಯಾಗಿ ಪರಿವರ್ತನೆ ಹೊಂದಿ ಬದಲಾವಣೆ ಕಾಣಿಸುತ್ತಿತ್ತು. ಈ ಅತೀವೃಷ್ಟಿಗೆ ರೈತಾಪಿ ಜನ ತತ್ತರಿಸಿ ಹೋಗಿದ್ದರು. ಎಮ್ ಎಚ್.-13 ಗೆ ಹೊರಟಿದ್ದ ಗೂಡ್ಸ್ ಲಾರಿಗಳು ಎನ್‌ಎಚ್-13 ಮುಖ್ಯ ರಸ್ತೆಯು ಕೆಟ್ಟು ಹೋಗಿದ್ದರಿಂದಲೇ ಸಾಲಾಗಿ ನಿಂತುಕೊಂಡಿದ್ದವು. ಸುಮಾರು ಒಂದು ಕಿಲೊಮೀಟರ್‌ನಷ್ಟು ಲಾರಿ, ಟೆಂಪೊ, ಬಸ್‌ಗಳು ದಾರಿಗಾಗಿ ಕಾದು ಸಾಲುಸಾಲಾಗಿ ನಿಂತಿದ್ದವು. ನಡುನಡುವೆ ಬೈಕಿನವರು ನಸುಳಿಕೊಂಡು ದಾರಿ ಕಂಡುಕೊಂಡರು. ಮಧ್ಯಾಹ್ನ ಒಂದು ಮುಕ್ಕಾಲು ಘಂಟೆಯಿಂದ ಸಾಯಂಕಾಲದವರೆಗೂ ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಹರಸಾಹಸಪಡುತ್ತಲೇ ಇದ್ದರು. ಮಳೆ ಇವರನ್ನು ಲೆಕ್ಕಿಸದೆ ತನ್ನ ಪಾಡಿಗೆ ತಾನು ಹುಯ್ಯುತ್ತಲೇ ಇತ್ತು. ಸಮೀಪದಲ್ಲೇ ಇರುವ ಧಾಬಾವೊಂದರಲ್ಲೇ ಡ್ರೈವರ್-ಕ್ಲೀನರ್‌ಗಳು, ಪ್ಯಾಸೆಂಜರ್‌ಗಳು, ಊಟ-ತಿಂಡಿ-ಚಹಾ ಸೇವಿಸುತ್ತಿದ್ದರು.

ಮಕ್ಕಳು ಅಳುವ, ತಾಯಿ ಗಿಲಗಂಚಿ ಅಲ್ಲಾಡಿಸಿ ಸಮಾಧಾನ ಪಡಿಸುವ ದೃಶ್ಯವು ಗೋಚರಿಸುತ್ತಿರುವಾಗಲೇ ಪಂಜಾಬಿನ ಓರ್ವ ಡ್ರೈವರ್ ಬಾಳೆ ಹಣ್ಣು ಮಾರುವ ಆ ಹೆಂಗಸನನ್ನು ರೆಪ್ಪೆ ಮಿಟುಕಿಸದೆ ನೋಡತೊಡಗಿದ್ದ. ಕ್ಲೀನರ್ ಇವನನ್ನು ನೋಡಿ ಗಾಬರಿಯಿಂದ ‘ಭಯ್ಯಾ ಲೇವ್ ಬೀಡಿʼ ಎಂದು ಹಸ್ತಕ್ಕಿಟ್ಟ. ಕೊಡೆಯನ್ನು ಕ್ಲೀನರ್ ಕೈಗೆ ಇಟ್ಟು ಕಡ್ಡಿಗೀರಿ ಬೀಡಿ ಹೊತ್ತಿಸಿ ಹಳೆವಾಹನ ಸ್ಟಾರ್ಟ್ ಆದಾಗ ಬರುವ ಹೊಗೆಯಂತೆ ಬುಸು ಬುಸು ಬಿಟ್ಟು ಆ ಹೆಂಗಸನ್ನೇ ನೋಡುತ್ತಿದ್ದ. ಚಾಯ್ ಲೆಕಾರೆ ಎಂದು ಕ್ಲೀನರ್‌ಗೆ ಆದೇಶಿಸಿದ. ಆ ಹೆಣ್ಣುಮಗಳು ತನ್ನ ವ್ಯಾಪಾರದಲ್ಲಿ ತಲ್ಲೀನನಾಗಿದ್ದಳು. ಫಲಿತ ಬಾಳೆಹಣ್ಣು ಕೆಂಪು ಮಿಶ್ರಿತ ಹಳದಿ ಹಾಗೂ ಹಸಿರು ವರ್ಣದಲ್ಲಿ ಆಕರ್ಷಣಿಯವಾಗಿದ್ದವು. ಕ್ಲೀನರ್, ಚಹಾ ತಂದು ಕೈಗೆ ಬಿಸಿ ಶಾಖ ತಾಗಿಸಿದರೂ, ಅರಿವಿಲ್ಲದೆ ಆಕೆಯತ್ತಲೇ ದೃಷ್ಟಿ ಕೇಂದ್ರಿಕರಿಸಿದ್ದ. ‘ಕ್ರೂಸರ್ ಪಡಲ’ ಎಂದು ಯಾರೋ ಕೂಗಿ ಓಡಿದರು.

‘ಕಾಯ್ ಝಾಲ?ʼ ಎಂದು ಪಕ್ಕದಲ್ಲಿ ನಿಂತ ವೃದ್ಧ ಪ್ರಶ್ನಿಸಿದ. ಎಲ್ಲರೂ ಚಿಟಿಪಿಟಿ ಮಳೆ ಲೆಕ್ಕಿಸದೆ ಉಣ್ಣೆ ಕುರಿಗಳಂತೆ ದೌಡಾಯಿಸಿದರು. ಏನೋ ಅಹಿತಕರ ಘಟನೆಯಾದಂತೆ ಓಡುತ್ತಿರುವ ಜನರನ್ನೋಡಿ ತಾನು ಕಾಲುಕಿತ್ತನು. ಈಗಲೂ ಡ್ರೈವರ್ ನೇತ್ರ ಆಕೆಯ ಮೇಲಿಂದ ವಿಚಲ ಆಗಿರಲಿಲ್ಲ. ಅವನಲ್ಲೇ ನಿಂತು ಆಕೆಯೂ ತಳ್ಳುವ ಗಾಡಿಯಿಂದ ಕೆಳಗಿಳಿದಳು. ಆಕೆಯತ್ತ ಚಲಿಸ ತೊಡಗಿ ಬೀಡಿ ಎಸೆದನು. ತಳ್ಳುವ ಗಾಡಿಯ ಪಕ್ಕ ಹೋಗಿ ನಿಂತು ಹತ್ತು ರೂಪಾಯಿ ಗಾಂಧಿ ನೋಟು ಕೊಟ್ಟ ಘಳಿಗೆ, ಅರ್ಥೈಸಿಕೊಂಡ ಆಕೆ ಹಸನ್ಮುಖಿಯಾಗಿ ಎರಡು ಬಾಳೆಹಣ್ಣು ಕೊಟ್ಟಳು. ಆಕೆಯನ್ನು ತಿನ್ನುವ ಹಾಗೆ ನೋಡುತ್ತಲೇ ಎರಡು ಕೈಗಳಿಂದ ಹಣ್ಣು ಸ್ವೀಕರಿಸಿ ಪಾದ ಎಣಿಸಿದ.

ಆಕೆಯ ಗಂಡ ಬಂದು ಅಂಗಡಿಯ ಚಾರ್ಜ್ ವಹಿಸಿಕೊಂಡಾಗಲೇ ಡ್ರೈವರ್ ನೋಟ ಕಿತ್ತು ಬಾಳೆ ಹಣ್ಣೊಂದನ್ನು ಸುಲಿದನು. ಪೊಲೀಸ್ ವ್ಯಾನ್ ಹಾಗೂ ಅಂಬ್ಯುಲೆನ್ಸ್‌ನ ಕೂಗಿಗೆ ಜನರು ಗಾಬರಿಯಾಗಿದ್ದರು. ಕುತೂಹಲದಿಂದ ಆಕೆ ಸಡಿಲವಾದ ಸೆರಗನ್ನು ಹೆಗಲಮೇಲೊಗೆದು ಕುಂಟುತ್ತ ಹೆಜ್ಜೆ ಹಾಕಿದ್ದು, ಆಕೆಯ ಗಂಡನು ಮರಾಠಿಯಲ್ಲೇನೋ ಹೇಳಿದ್ದು, ಅರ್ಥೈಸದೆ ಡ್ರೈವರ್ ಜನರತ್ತ ಪಾದ ಬೆಳೆಸಿದನು. ಈಗ ಮಳೆ ನಿಂತರೂ ಹರಿವ ನೀರು ಮನಸೋ ಇಚ್ಛೆ ನುಗ್ಗುತಿದೆ. ಹೈವೆ ಮೇಲೆ ಬದಿಗೆ ನಿಂತ ಕ್ರೂಸರ್‌ನ ಕೆಳಗಿನ ಮಣ್ಣು ಕುಸಿದಿದ್ದರಿಂದ ವಾಹನ ಪಲ್ಟಿ ಹೊಡೆದು ಉರುಳಿತ್ತು. ಅದರಲ್ಲಿರುವ ನಾಲ್ಕಾರು ಹೆಂಗಳೆಯರು ಸಹ ಗಾಯವಾಗಿ ಕಣ್ಣೀರು ಹಾಕಿ ಚೀರಾಟ, ರಂಪಾಟಗಳೇ ಭುಗಿಲೆದ್ದು, ಜನರೆಲ್ಲ ಕ್ರೂಜರ್‌ನಲ್ಲಿದ್ದವರಿಗೆ ಏನಾಯಿತೆಂದು ನೋಡುತ್ತಿದ್ದರೆ, ಡ್ರೈವರ್ ಮಾತ್ರ ಮೈಯೆಲ್ಲ ಕಣ್ಣಾಗಿಸಿಕೊಂಡು ಆಕೆಯನ್ನೇ ದುರುಗುಟ್ಟುಕೊಂಡೆ ನೋಡ ಹತ್ತಿದ್ದ.

ಅವಳಿಗೆ ಅರವತ್ತು ಅರವತ್ತೈದರ ಆಸುಪಾಸಿನ ವಯಸ್ಸು ಇವನು ಮೂವತ್ತರಿಂದ ಮೂವತ್ತೈದರ ಪ್ರಾಯ. ಕ್ಲೀನರ್‌ನಿಗೆ ಆಶ್ಚರ್ಯ ಎಂದೂ, ಎಲ್ಲಿಯೂ ಯಾವ ಹೆಂಗಸನ್ನು ಕಣ್ಣಿತ್ತಿ ನೋಡದವನು ಹೀಗೆಕೆ ಬಾಳೆಹಣ್ಣು ಮಾರುವವಳನ್ನು ಕಂಡು ಇಂದು ಹೀಗಾಡುತ್ತಿದ್ದಾನೆ,” ಎಂದು ತನ್ನೊಳಗೆ ತಾನೇ ವಿಚಾರಿಸುತ್ತಲೇ ಅವರಿಬ್ಬರನ್ನು ಗಮನಿಸುತ್ತಲೇ ಅಂಬುಲೆನ್ಸ್‌ನಲ್ಲಿ ಗಾಯಕ್ಕೊಳಗಾದವರನ್ನು ಸಾಗಿಸುತ್ತಿರುವುದನ್ನು ವೀಕ್ಷಿಸಿದನು.

ಮತ್ತೆ, ಮಳೆ-ಗಾಳಿ ಶುರುವಾಯಿತು. ಎಲ್ಲರೂ ಚದುರಿ ಹೋದರು. ಆ ಹೆಂಗಸಿನ ಹಿಂದೆ ತುಸು ದೂರದಲ್ಲಿಯೇ ಅವನೂ ಹಿಂಬಾಲಿಸಿದನು. ಅಂಗಡಿಗೆ ಸಮೀಸುತ್ತಿದ್ದಂತೆ, ಈತ ಮತ್ತೆ ಬೀಡಿ ಹಚ್ಚಿಕೊಂಡು, ಮೊಬೈಲ್‌ನಲ್ಲಿ ಮಾತನಾಡುವವರ ಹಾಗೆ ನಟಿಸಿ ಪತರಾಸ್ ಶೆಡ್ಡಿನ ಚಹಾದ ಅಂಗಡಿಯ ಆಸರೆ ಪಡೆದು ಆ ಹೆಂಗಸನ್ನೇ ತನ್ನ ಅಕ್ಷಿಪಟಲದಲ್ಲಿ ತುಂಬಿಕೊಳ್ಳತೊಡಗಿದನು.

ಅವಳಿಗೆ ಮಾತನಾಡಿಸುವ ಯತ್ನದಲ್ಲಿ ಯೋಚಿಸುವಾಗ ಆತ ಅರಿತುಕೊಂಡದ್ದು ಭಾಷೆಯ ಸಮಸ್ಯೆ. ರಾಷ್ಟ್ರಭಾಷೆಯೂ ಆಕೆಗೆ ಅರ್ಥವಾಗುವುದಿಲ್ಲ ಎಂಬುದು ಬಾಳೆಹಣ್ಣು ಖರೀದಿಸುವಾಗಲೇ ಹೌದು. ಮಳೆ-ತಂಗಾಳಿಯ ಕಾರುಬಾರು ಅತಿಯಾಗಿದ್ದರಿಂದ ಸೂರ್ಯ ಜಾರಿದ್ದು ಗೊತ್ತಾಗಲೇ ಇಲ್ಲ. ಜೆಸಿಬಿಯಿಂದ ರಸ್ತೆ ಸರಿಪಡಿಸಿ ಟ್ರಾಫಿಕ್ ಜಾಮ್‌ಗೆ ಪರಿಹಾರ ಕಂಡರೂ ಡ್ರೈವರ್ ಲಾರಿಯನ್ನು ಪಕ್ಕಕ್ಕೆ ಸರಿಸಿ ಧಾಬಾ ಮುಂದೆ ನಿಲ್ಲಿಸಿ ವಸ್ತಿ ಮಾಡುವ ನಿರ್ಧಾರವನ್ನು ಕ್ಲೀನರ್‌ನಿಗೆ ಸೂಚಿಸಿದ.

“ಸೊಲ್ಲಾಪೂರಕ್ಕೆ ಹೋಗಿ ತಂಗುವ ಬದಲು ಈ ತೇರಾಮೈಲ್‌ನಲ್ಲಿ ಏಕೆ?” ಎಂದು ಪ್ರಶ್ನಿಸಲು ಕ್ಲೀನರ್. ಇದು ಪ್ರಶಾಂತವಾದ ವಾತಾವರಣ ಇಲ್ಲಿಯೇ ಇರೋಣ” ಅಂದ ಡ್ರೈವರ್. ಭಯ್ಯಾ, ಅಲ್ಲಿ ಹೋದರೆ ಸರಕು-ಸಾಮಾನು ಇಳಿಸಿಕೊಳ್ಳುತ್ತಾರೆ. ನಾವು ಮರಳಿ ಬೇಗ ಹೋಗಬಹುದು – ಕ್ಲೀನರ್ “ಅಲ್ಲ್ಯಾದರೂ-ಇಲ್ಲ್ಯಾದರೂ ಮಲಗುವುದೇ ಇಲ್ಲೇ ಇರೋಣ: ಮುಂಜಾನೆದ್ದು ಹೋದರಾಯಿತು”- ಡ್ರೈವರ್.

ಕತ್ತಲು ಈ ಲೋಕವನ್ನೇ ನುಂಗಿ ಹಾಕಿದೆ ಎಂಬಂಥ ವಾತಾವರಣದಲ್ಲಿ ಬಾಟಲಿ ಹಿಡಿದು ಆ ಹೆಂಗಸು ನಡೆದ ದಾರಿಯಲ್ಲೇ ಸಾಗಿದ. ಕ್ಲೀನರ್ ಪ್ರಶ್ನೆ ಕೇಳದೆ ಬಾಟಲಿ ನೋಡಿ ಮೌನಿಯಾದ. ದೂರದೂರವಿರುವ ಮನೆಗಳ ನಡುವೆ ಆಕೆ ಗುಡಿಸಲನ್ನು ಸೇರಿಕೊಂಡಳು. ದೂರದಿಂದಲೇ ಆಕೆಯನ್ನು ಕಂಡು ಬಯಲಕಡಿಗೆ ಹೋದನು. ಸಮಯ ಎಂಟಾಗುತ್ತಲಿರುವಾಗ ಧಾಬಾದಲ್ಲಿ ಊಟಕ್ಕೆ ಕುಳಿತುಕೊಂಡರು. ಛಳಿ ಅತಿಯಾಗಿ, ಹೊರಗಡೆ ಯಾರು ಕಾಣುತ್ತಿರಲಿಲ್ಲ.

ದೂರದಲ್ಲೆಲ್ಲೋ ಒಂದೊಂದು ದೀಪ ಉರಿಯುತ್ತಿದ್ದು, ನಿರ್ಜನ ಪ್ರದೇಶ ಅದಾಗಿತ್ತು. ಊಟ ಮುಗಿಸಲು ಒಂದು ಮುಕ್ಕಾಲು ಘಂಟೆ ಕಾಲಹರಣ ಮಾಡಿ ಲಾರಿಯಲ್ಲಿ ಬಂದು ಮಲಗಿದರು. ಮಧ್ಯರಾತ್ರಿಯವರೆಗೂ ಡ್ರೈವರ್‌ನಿಗೆ ನಿದ್ದೆ ಬರಲಿಲ್ಲ. ಅಕ್ಕನ ಬಗ್ಗೆ ಯೋಚಿಸಿದ. ಅಮ್ಮನ ನೆನಪು ಕಾಡಿತು. ಅಪ್ಪನಿಗೆ ಘೋನಾಯಿಸಬೇಕೆಂದರೆ ರಾತ್ರಿಯಾಗಿದೆ. ಮನಸ್ಸು ಹೊಯ್ದಾಡುತ್ತಲೇ ಇತ್ತು. ಮೂತ್ರಿಗಾಗಿ ಕೆಳಗಿಳಿದ. ಆ ಹೆಂಗಸಿನ ಮನೆಯ ಕಡೆಗೆ ಚಲಿಸಿದ. ನಿರ್ಜನ ಪ್ರದೇಶವದು, ಬರೀ ಕತ್ತಲು. ದೂರದಲ್ಲೆಲ್ಲೋ ನಾಯಿಗಳ ಸದ್ದು. ಆ ಗುಡಿಸಲಿನಲ್ಲೊಂದು ಚಿಮಣಿ ಉರಿಯುತ್ತಿತ್ತು. ಗಂಡ-ಹೆಂಡತಿ ಇರ್ವರು ಒಬ್ಬರಿಗೊಬ್ಬರು ಬೆನ್ನು ಮಾಡಿ ಮಲಗಿದ್ದು, ಆಕೆಯ ಮುಖ ಕಾಣುತ್ತಿಲ್ಲ. ಗುಡಿಸಲಿನ ಮತ್ತೊಂದು ಭಾಗಕ್ಕೆ ಹೋಗಿ ಸಮೀಪದಿಂದ ಮುಖದರ್ಶನ ಪಡೆದು ಲಾರಿಯತ್ತ ಹಿಂತಿರುಗಿದನು. ಕ್ಲೀನರ್ ಕೆಳಗಿಳಿದು ಇವನು ಬರುವುದನ್ನೇ ನೋಡುತ್ತ ನಿಂತಿದ್ದು, ಇವನ ಕೈಯಲ್ಲಿರುವ ಬಾಟಲಿ ಕಂಡು ತುಟಿಪಿಟಕ್ಕೆನ್ನದೆ ಲಾರಿ ಹತ್ತಿದನು. ಇಬ್ಬರೂ ಮಲಗಿದ್ದು, ಸೂರ್ಯನ ಬಿಸಿಲರಶ್ಮಿಗಳು ಕಣ್ಣಿಗೆ ಇರಿದಾಗಲೇ ಎಚ್ಚರಗೊಂಡರು. ಮುಖಮಜ್ಜನ ಮಾಡಿದರೆ ಆ ಹೆಂಗಸು ಬುಟ್ಟಿಯಿಂದ ಬಾಳೆಹಣ್ಣು ತೆಗೆದು ಜೋಡಿಸಿಡುತ್ತ ಕುಳಿತಿದ್ದಳು.

(ಸಿದ್ಧಾರೂಢ ಗುರುನಾಥ ಕಟ್ಟಿಮನಿ)

ಚಹಾ ಕುಡಿಯುತ್ತಲೇ ಅವಳನ್ನು ನೋಡುತ್ತ, ಒಂದು ಹಣಿಗೆ ಬಾಳೆಹಣ್ಣು ಖರೀದಿಸಿ ಆಕೆಗೆ ಗೊತ್ತಾಗದಂತೆ ಆಕೆಯ ಫೋಟೊ ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡ. ಸೊಲ್ಲಾಪುರದತ್ತ ಲಾರಿ ತೆಗೆದುಕೊಂಡು ಹೊರಟರು. ಡ್ರೈವರ್, ಹಿನ್ನೋಟದ ಕನ್ನಡಿಯಲ್ಲೂ ಆಕೆಯನ್ನೇ ನೋಡುತ್ತಿದ್ದ. ಇದು ಆ ಹೆಂಗಸಿನ ಲಕ್ಷ್ಯಕ್ಕೆ ಬರಲೇ ಇಲ್ಲ. ಸೋಲ್ಲಾಪುರಕ್ಕೆ ಹೋದ ಮೇಲೆ ತನ್ನಪ್ಪನಿಗೆ ಫೋನಾಯಿಸಿದ. ಇಲ್ಲಿಗೆ ಬರಲು ಸೂಚಿಸಿದ. ನಿನ್ನ ಹೆಂಡತಿಗೆ ಗರ್ಭಮೋಚನವಾಗಿದೆ ಬರಲು ಆಗುವುದಿಲ್ಲ. ನೀನು ಬಾ ಮುಂದಿನ ವಾರ ಹೋಗೋಣ” ಎನ್ನುತಿರಲು ನಿರಾಶೆಗೊಳಗಾದನು.

ತಂದೆಯ ಮಾತಿನಂತೆ ಹರಿಯಾಣ ತಲುಪಿದ ನಂತರ ಹೈವೆಯಲ್ಲಿ ನಡೆದ ಘಟನೆಯನೆಲ್ಲ ವಿವರಿಸಿದ. ಎಲ್ಲರೂ ಗಾಬರಿಯಾದರು. ಮಗುವನ್ನು ಕಂಡು ಸಂತಸಪಟ್ಟು ಮರಳಿ ತೇರಾಮೈಲಿಗೆ ಹೋಗುವ ನಿರ್ಧಾರ ಮಾಡಿದನು. ಈತ ಹೇಳಿದ ಕತೆ ನಂಬದ ಅವರಪ್ಪ ಕುತೂಹಲದಿಂದ ಇವನೊಂದಿಗೆ ಹೊರಟನು. ಅವಳ ಫೋಟೊ ನೋಡಿ ಆಶ್ಚರ್ಯಗೊಂಡನು. ಇಡೀ ರಾತ್ರಿ ಪ್ರಯಾಣ ಮಾಡಿ ತೇರಾಮೈಲ್ ತಲುಪಿದರು. ಬಾಳೆಹಣ್ಣು ಮಾರುವ ಹೆಂಗಸು ಕಾಣಲಿಲ್ಲ. ಅವಳ ಗುಡಿಸಲಿನತ್ತ ನೋಡಿದರೆ ಯಾರು ಇಲ್ಲ. ಅಲ್ಲೋರ್ವ ಮುದುಕಿ ಕನ್ನಡದಲ್ಲೇನೋ ಹೇಳಿದಳು. ಅರ್ಥೈಸದೆ ಆಕೆ ಕೈ ಮಾಡಿದ ದಿಕ್ಕಿನೆಡೆಗೆ ಚಲಿಸಿದರು. ಅಲ್ಲೇನೋ ಕಾರ್ಯಕ್ರಮ ನಡೆದಿತ್ತು. ಅಸಂಖ್ಯ ಜನ ಅಲ್ಲಿ ನೆರೆದಿದ್ದರು.

ಹೆಂಗಳೆಯರ ದುಃಖದ ಆರ್ತನಾದ ಮುಗಿಲು ಮುಟ್ಟಿತ್ತು. ಕಟ್ಟಿಗೆ, ಸೀಮೆಎಣ್ಣೆ ಎತ್ತಿನಗಾಡಿಯಿಂದ ಇಳಿಸುತ್ತಿದ್ದರು. ಡ್ರೈವರ್ ಸುತ್ತೆಲ್ಲ ಹೆಂಗಸರಲ್ಲಿ ಆಕೆಯನ್ನೇ ಹುಡುಕಾಡಿದ, ಕಾಣಿಸಲಿಲ್ಲ. ಮತ್ತೆ ಮುಂದೆ ಚಲಿಸಿದ. ಆ ಬಾಳೆಹಣ್ಣು ಮಾರುವ ಹೆಂಗಸು ಹೆಣವಾಗಿ ಅಲಂಕಾರದಿಂದ ಕುಳಿತಿದ್ದಳು. ಒಮ್ಮೆಲೆ ಕುಸಿದು ಅಳತೊಡಗಿದನು. ಮಾ…….. ಅಂದನು. ಡ್ರೈವರ್‌ನ ತಂದೆಯೂ ಗಾಬರಿಯಿಂದ ತನ್ನ ಹೆಂಡತಿಯಂತಿರುವ ಆಕೆಯನ್ನು ಕಂಡು ಕಣ್ಣೀರಿಟ್ಟನು. ಜನರೆಲ್ಲ ಗಾಬರಿಯಾದರು. ಈರ್ವರು ಸಿಖ್ಖರು ಯಾಕೆ ಅಳುತ್ತಿದ್ದಾರೆ. ಅರ್ಥವಾಗದಿದ್ದಾಗ ಡ್ರೈವರ್ ಕಥೆ ಹೇಳಿದನು. ನನ್ನ ತಾಯಿಯೂ ಈಕೆಯಂತೆಯೇ ಇದ್ದಳು. ಆಕೆ ತೀರಿಕೊಂಡು ನಾಲ್ಕು ವರ್ಷವಾಯಿತು. ನಾನು ಕಂಡು ಗಾಬರಿಯಾಗಿ ನನ್ನಪ್ಪನನ್ನು ಕರೆದುಕೊಂಡು ಬಂದಿದ್ದೆನೆಂದು ಹೇಳಿದನು. ಮುದುಕಿಯೋರ್ವಳು ಜಗತ್ನ್ಯಾಗ ಒಬ್ಬರಂಗೆ ಏಳು ಜನ ಇರ್ತಾರಂತ ಅದು ಖರೆ ಅನ್ನಸ್ತಾದ ನೋಡ್ರಿ ಎಂದು ಸೆರಗಿನಿಂದ ಕಣ್ಣೀರೊರೆಸಿಕೊಂಡಳು. ಎಲ್ಲರೂ ಸೇರಿ ಶವಸಂಸ್ಕಾರದ ಕಾರ್ಯ ಮುಗಿಸಿದರು. ಮರಳಿ ಊರಿಗೆ ಹೋಗಬೇಕಿನ್ನು ಎನ್ನುವಾಗಲೇ ಡ್ರೈವರ್‌ನ ತಂದೆ ಹೃದಯಸ್ಥಂಭನದಿಂದ ತೀರಿಹೋದನು. ತನ್ನವರಿಗೆಲ್ಲ ಹೇಳಿ ತೇರಾಮೈಲ್‌ನಲ್ಲಿಯೇ ಶವಸಂಸ್ಕಾರ ಮುಗಿಸಿದನು. ತನ್ನ ತಂದೆ-ತಾಯಿಯ ನೆನಪಿಗಾಗಿ ಗುಡಿ ಕಟ್ಟಿಸಿ ಅವರ ಮೂರ್ತಿ ಪ್ರತಿಷ್ಠಾಪಿಸಿ, ಅಲ್ಲಿಯೇ ನೆಲೆಸಿ, ಕನ್ನಡಿಗನಾದನು.