ಪರ್ಯಾಯಗಳನ್ನು ಹುಡುಕುವುದರಲ್ಲಿ‌ ನಾವು ನಿಸ್ಸೀಮರೇ ಆಗಿದ್ದೆವು. ಕೆಲವರು ಕಬ್ಬಿಣದ ರಾಡ್‌ನ ಒಂದು‌ ತುದಿಗೆ ವೈರ್ ಕಟ್ಟಿ ಮತ್ತೊಂದು ತುದಿಯನ್ನು ನೀರಲ್ಲಿ ಬಿಟ್ಟು ಪರ್ಯಾಯ ವಾಟರ್ ಹೀಟರ್ ಮಾಡಿಕೊಂಡರೆ ಮತ್ತೆ ಕೆಲವರು ಪೆನ್ಸಿಲ್‌ನ ತುದಿಗೆ ಸೂಪರ್ ಮ್ಯಾಕ್ಸ್ ಬ್ಲೇಡ್ ಸಿಕ್ಕಿಸಿ ಪರ್ಯಾಯ ರೆಡಿ ಶೇವರ್ ಮಾಡಿಕೊಂಡು ಬಿಡುತ್ತಿದ್ದರು. ಮುಂದುವರೆದು, ಐರನ್ ಬಾಕ್ಸನ್ನು ಕಾಯಿಸಿ ಅದರ ಮೇಲೆ ಮೊಟ್ಟೆ ಹೊಯ್ದು ಅದನ್ನು ಪರ್ಯಾಯ ಆಮ್ಲೆಟ್ ಪ್ಯಾನ್ ಮಾಡ ಹೊರಟ ಮಹನೀಯರೂ ಇದ್ದರು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಏಳನೆಯ ಬರಹ

ಅವು ನಮ್ಮ ಹನ್ನೆರಡನೆಯ ತರಗತಿಯ ದಿನಗಳು! ಅದೊಂದು ದಿನ ನಾವು ಎಂದಿನಂತೆ ಬ್ರೇಕ್ ಪೀರಿಯಡ್‌ನಲ್ಲಿ‌ ಡಾರ್ಮಿಟರಿಯ ಬಳಿ ಬಂದೆವು. ಬಂದವರು ಡಾರ್ಮಿಟರಿಯ ಹಿಂದೆಯೇ ಇದ್ದ ಹಲಸಿನ ಮರದಿಂದ ‌ಹಣ್ಣೊಂದನ್ನು ಕಿತ್ತು ತಂದಿದ್ದೆವು!

ಹೀಗೆ ಬ್ರೇಕ್ ಪೀರಿಯಡ್‌ನಲ್ಲಿ ಶಾಲಾ ಕಟ್ಟಡದ ಸಮೀಪವೇ ಇದ್ದ ಡಾರ್ಮಿಟರಿಗೆ ಬರುವುದು ಚಿಕ್ಕಂದಿನಿಂದಲೂ ನಮಗೆಲ್ಲ ರೂಢಿಯಾಗಿತ್ತೆನ್ನಬಹುದು.
ಚಿಕ್ಕಂದಿನಲ್ಲಾದರೆ ಬ್ರೇಕ್ ಪೀರಿಯಡ್‌ನಲ್ಲಿ ಡಾರ್ಮಿಟರಿಗೆ ಓಡಿ ಬಂದು ಟ್ರಂಕ್‌ನ ಒಳಗಿನ ಚಕ್ಕುಲಿ, ಕೋಡು ಬಳೆ, ಅವಲಕ್ಕಿಯಂತಹ ಕುರುಕಲುಗಳನ್ನು ಬಾಯಿಗೆ ಹಾಕಿಕೊಂಡು ಬಂದ ಒಂದೆರಡು ನಿಮಿಷಗಳಲ್ಲೇ ಬೇಗ ಬೇಗನೇ ತರಗತಿ ಕೋಣೆಗೆ ಹಿಂದಿರುಗುತ್ತಿದ್ದೆವು. ದೊಡ್ಡವರಾಗುತ್ತಾ ಒಂಭತ್ತು, ಹತ್ತನೇ ತರಗತಿಯ ವೇಳೆಗಾಗಲೇ ಈ ಕುರುಕಲು ಮೆಲ್ಲುವ ಅಭ್ಯಾಸ ಕಡಿಮೆಯಾಗಿತ್ತು. ಬದಲಿಗೆ, ಓಡುವವರಂತೆ ನಡೆದು ಬಂದು ಕನ್ನಡಿಯಲ್ಲಿ ಮುಖ‌‌ ನೋಡಿಕೊಂಡು ಅಗತ್ಯವೆನಿಸಿದರೆ ಕ್ರೀಮೋ, ಪೌಡರೋ ಹಾಕಿಕೊಂಡು, ತಲೆ ಬಾಚಿಕೊಂಡು ನಾಲ್ಕೈದು ನಿಮಿಷಗಳಲ್ಲಿ ಹಿಂದಿರುಗುತ್ತಿದ್ದೆವು.

ಈಗಲಾದರೋ ಹನ್ನೆರಡನೆಯ ತರಗತಿಯಲ್ಲಿ ಸಮಯದ ಬಂಧನದಿಂದ ಪಾರಾದವರಂತೆ ಆರಾಮಾವಾಗಿಯೇ ಡಾರ್ಮಿಟರಿಗೆ ಬಂದು ಐದತ್ತು ನಿಮಿಷಗಳ ಕಾಲ ಹರಟೆ ಹೊಡೆದು ಆರಾಮವಾಗಿಯೇ ತರಗತಿ ಕೋಣೆಗೆ ಹಿಂದಿರುಗುತ್ತಿದ್ದೆವು.

ಆದರೆ, ಈ ಹಲಸಿನ ಹಣ್ಣಿನ‌ ಸೀಸನ್‌ನಲ್ಲಿ ಮಾತ್ರ ನಮ್ಮ ಬ್ರೇಕ್ ಪೀರಿಯಡ್‌ನ ಹರಟೆಯ ಚಟುವಟಿಕೆಯಲ್ಲಿ ಕೊಂಚ ಬದಲಾವಣೆಯಾಗಿತ್ತು. ಬ್ರೇಕ್ ಪೀರಿಯಡ್‌ಗೆಂದು ಬಂದ ಕೂಡಲೇ ಯಾರಾದರೂ ಒಬ್ಬರು ಡಾರ್ಮಿಟರಿಯ ಹಿಂದೆ ಇದ್ದ ಹಲಸಿನ‌ ಮರ ಹತ್ತಿ, ಹಣ್ಣು ಕಿತ್ತು, ಡಾರ್ಮಿಟರಿಯ ಒಳ‌ತರುತ್ತಿದ್ದರು. ಅದನ್ನು ಎಲ್ಲರೂ ಸೇರಿ ಚಾಕುವಿನಿಂದ ಕೊಯ್ದು, ಗಬಗಬನೆ ತಿಂದು ತರಗತಿ ಕೋಣೆಗೆ ಮರಳುತ್ತಿದ್ದೆವು!

ಅದಾಗಲೇ ಹುಡುಗರಿಗಾಗಿ ಶಾಲಾ ಕ್ಯಾಂಪಸ್‌ನ ಎದುರಿನ ರಸ್ತೆಯ ಆಚೆ ಬದಿಯಲ್ಲಿ ಹೊಸ ಬಾಯ್ಸ್ ಡಾರ್ಮಿಟರಿಗಳು ಸಿದ್ಧಗೊಂಡಿದ್ದವು. ಹನ್ನೆರಡನೆಯ ತರಗತಿಯವರಾದ ನಮ್ಮನ್ನು ಹೊರತುಪಡಿಸಿ ಉಳಿದ ಎಲ್ಲಾ ಹುಡುಗರನ್ನು ಅಲ್ಲಿಗೆ ಶಿಫ್ಟ್ ಮಾಡಲಾಗಿತ್ತು. ಆದ್ದರಿಂದ ಹಲಸಿನ‌ ಮರಕ್ಕೆ ಪ್ರತಿಸ್ಪರ್ಧಿಗಳೇ ಇಲ್ಲದಾಗಿ‌ ಅದು‌ ನಮ್ಮದು ಮಾತ್ರವೇ ಆಗಿತ್ತು! ಹಾಗಾಗಿ ದಿನನಿತ್ಯ ಹಣ್ಣಿಗೆ ಕೊರತೆ ಇರಲಿಲ್ಲ.

ಜೊತೆಗೆ, ಆಗಿನ‌ ಕಾಲಕ್ಕೆ ಹಲಸು, ಮಾವು, ಸೀಬೆ, ನೇರಳೆ, ಚಕ್ಕೋತ ಎಂಬುವವೆಲ್ಲಾ ತೀರಾ ಸಾಮಾನ್ಯವಾಗಿ ಸಿಗುವಂತಹ ಹಣ್ಣುಗಳಾಗಿದ್ದು ಸೇಬು, ದ್ರಾಕ್ಷಿ, ಮೂಸಂಬಿಯಂತೆ ಮಾರಾಟಕ್ಕೂ ಯೋಗ್ಯ ಹಣ್ಣುಗಳಾಗಿರದೇ ವಿಶೇಷವಾದ ಗಮನವನ್ನೇನು ಸೆಳೆಯುತ್ತಿರಲಿಲ್ಲ!

ಹೀಗಿರಲಾಗಿ, ಅಂದೂ ಕೂಡ ಎಂದಿನಂತೆ ಹಣ್ಣನ್ನು ಕಿತ್ತು ತಂದಿದ್ದೆವು. ಸರಿ, ಹಣ್ಣನ್ನೇನೋ ಕಿತ್ತು ತಂದೆವು, ಆದರೆ ಅದನ್ನು ಕೊಯ್ಯಲು ಬೇಕಾಗಿದ್ದ ಹತಾರವೇ ಕೈಗೆ ಸಿಗಬಾರದೇ!?

ಇದ್ದ ಒಂದು ಚಾಕನ್ನೂ ಅದ್ಯಾರು ಅದೆಲ್ಲಿ ಇಟ್ಟಿದ್ದರೋ.

ಇಂತಹ ಕ್ಷಣದಲ್ಲಿ ಅಂಗಡಿಗೆ ಹೋಗಿ ಹೊಸ ಚಾಕುವನ್ನು ತರುವಂತಿಲ್ಲ. ಅಕ್ಕಪಕ್ಕದವರಲ್ಲಿ ಕೇಳಿ‌ ಪಡೆಯಲು ಅದೇನು ನಾಲ್ಕಾರು ಮನೆಗಳಿರುವ ವಠಾರವೂ ಅಲ್ಲ. ಬರಿಗೈಯಿಂದ ಕೊಯ್ಯುವುದೂ ಪ್ರಾಯೋಗಿಕವಾಗಿ ಸಾಧ್ಯವಿರಲಿಲ್ಲ. ಹಾಗಾಗಿ ಪರ್ಯಾಯ “ಫ್ರೂಟ್ ಕಟರ್” ಗಾಗಿ‌ ಹುಡುಕಾಡಿದೆವು!

ಹೀಗೆ ಪರ್ಯಾಯಗಳನ್ನು ಹುಡುಕುವುದರಲ್ಲಿ‌ ನಾವು ನಿಸ್ಸೀಮರೇ ಆಗಿದ್ದೆವು. ಕೆಲವರು ಕಬ್ಬಿಣದ ರಾಡ್‌ನ ಒಂದು‌ ತುದಿಗೆ ವೈರ್ ಕಟ್ಟಿ ಮತ್ತೊಂದು ತುದಿಯನ್ನು ನೀರಲ್ಲಿ ಬಿಟ್ಟು ಪರ್ಯಾಯ ವಾಟರ್ ಹೀಟರ್ ಮಾಡಿಕೊಂಡರೆ ಮತ್ತೆ ಕೆಲವರು ಪೆನ್ಸಿಲ್‌ನ ತುದಿಗೆ ಸೂಪರ್ ಮ್ಯಾಕ್ಸ್ ಬ್ಲೇಡ್ ಸಿಕ್ಕಿಸಿ ಪರ್ಯಾಯ ರೆಡಿ ಶೇವರ್ ಮಾಡಿಕೊಂಡು ಬಿಡುತ್ತಿದ್ದರು. ಮುಂದುವರೆದು, ಐರನ್ ಬಾಕ್ಸನ್ನು ಕಾಯಿಸಿ ಅದರ ಮೇಲೆ ಮೊಟ್ಟೆ ಹೊಯ್ದು ಅದನ್ನು ಪರ್ಯಾಯ ಆಮ್ಲೆಟ್ ಪ್ಯಾನ್ ಮಾಡ ಹೊರಟ ಮಹನೀಯರೂ ಇದ್ದರು.

ಹೀಗಿರಲಾಗಿ ನಮ್ಮ ಪರ್ಯಾಯ ಫ್ರೂಟ್ ಕಟರ್‌ನ ಹುಡುಕಾಟ ಯಶಸ್ಸು ಕಾಣದೆ ಇದ್ದೀತೆ!?

ಕ್ಷಣಮಾತ್ರದಲ್ಲಿ ಎಂಬಂತೆ ಡಾರ್ಮಿಟರಿಯ ಮೂಲೆಯಲ್ಲಿದ್ದ ಫ್ಯಾನ್ ಒಂದು‌ ನಮ್ಮ ಕಣ್ಣಿಗೆ ಬಿದ್ದು “ಫ್ರೂಟ್ ಕಟರ್” ನಂತೆಯೇ ಗೋಚರಿಸಲಾರಂಭಿಸಿತ್ತು!

ಸರಿ, ಆ ಫ್ಯಾನ್‌ನ ರೆಕ್ಕೆಗಳನ್ನು ಕಂಡಷ್ಟೇ ಬೇಗನೆ ಬಿಚ್ಚಿದ್ದಾಯ್ತು. ಅದರಲ್ಲಿನ ಒಂದು ರೆಕ್ಕೆ ನಮ್ಮ ಆ ಕ್ಷಣದ “ಜಾಕ್ ಫ್ರೂಟ್ ಕಟರ್” ಆಗಿ ಪರಿವರ್ತನೆಯಾಗಿದ್ದಾಯ್ತು! ಅದರ ಸಹಾಯದಿಂದ ಹಲಸಿನ ಹಣ್ಣನ್ನು ಕೊಚ್ಚಿ ತಿಂದದ್ದೂ ಆಯ್ತು. ಸಾಕ್ಷ್ಯ ನಾಶದಲ್ಲಿ ಪಳಗಿದ್ದ ಮಿತ್ರ ಮಹಾಶಯರುಗಳೆಲ್ಲಾ ಈ ನಮ್ಮ ಕಾರ್ಯ ಬೇರೆಯವರ, ವಿಶೇಷವಾಗಿ ಶಿಕ್ಷಕರ ಗಮನಕ್ಕೆ ಬಾರದಂತೆ ಅದನ್ನು ಒರೆಸಿ ಮಂಚದ ಕೆಳಗೆ ಕದ್ದಿಟ್ಟದ್ದೂ ಆಯ್ತು.

ಇಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲವೇನೋ…!

ಈ “ಜಾಕ್ ಫ್ರೂಟ್ ಕಟರ್” ಬಳಕೆ ನಮ್ಮ ನಿತ್ಯದ ಕಾಯಕವಾಯಿತು. ಆರಂಭದಲ್ಲಿದ್ದ ‘ಕಟರ್’ ಅನ್ನು ಒರೆಸಿಡುವ ಆಸಕ್ತಿ ಕ್ರಮೇಣ ಕಡಿಮೆಯಾಯಿತು.

ಅಷ್ಟೇ ಆಗಿದ್ದರೂ ಪರವಾಗಿರಲಿಲ್ಲವೇನೋ!

ಇನ್ನೂ ಮುಂದುವರೆದು, ಹಲಸಿನ ಹಣ್ಣಿನ ಮರದ ಬುಡಕ್ಕೇ ‘ಕಟರ್’ ಒಯ್ದು ಹಣ್ಣು ಕೊಚ್ಚಿ ತಿನ್ನುವ ರೂಢಿ ಜಾರಿಗೆ ಬಂತು. ಅದನ್ನೂ ಮೀರಿ ಬೇಕೆಂದಾಗ ಹಣ್ಣನ್ನು ಕೊಚ್ಚಿ ತಿಂದು, ಬುಡದಲ್ಲಿಯೇ ನಮ್ಮ ‘ಕಟರ್’ ಅನ್ನು ಬಿಟ್ಟು ಬರುವಂತಾಯಿತು!

ಹೀಗೆ ಬಿಟ್ಟು ಬಂದಿರುವಾಗಲೇ ಒಮ್ಮೆ ನಮ್ಮ ಶಾಲೆಯ ಮಾನ್ಯ ಪ್ರಾಂಶುಪಾಲರು ಆಕಸ್ಮಿಕವಾಗಿ ನಮ್ಮ ಡಾರ್ಮಿಟರಿಯ ಹಿಂಬದಿಗೆ ಹೋಗಿಬಿಡಬೇಕೆ! ಹೋದವರ ದಿವ್ಯ ದೃಷ್ಟಿಯೋ ‘ನಮ್ಮ ಹಲಸಿನ ಮರ’ದ ಬುಡದಲ್ಲಿದ್ದ ‘ಕಟರ್’ನೆಡೆಗೆ ಬೀಳಬೇಕೆ!

ದೃಷ್ಟಿ ಬಿದ್ದೊಡನೆ ಸಹಜವಾಗಿಯೇ ಸಿಡಿಮಿಡಿಗೊಳ್ಳುತ್ತಾ, ಅಷ್ಟೂ ದಿನಗಳ ಕಾಲ ನಮ್ಮ ಆಪ್ತ ಒಡನಾಡಿಯಂತಾಗಿದ್ದ “ಜಾಕ್ ಫ್ರೂಟ್ ಕಟರ್” ಅನ್ನು ‘ಸೀಝ್’ ಮಾಡಿಕೊಂಡು ಅವರ ಚೇಂಬರ್ ಗೆ ತೆಗೆದುಕೊಂಡು ಹೋಗಿ ನಮಗೂ ಬರುವಂತೆ ‘ಪ್ರೀತಿಯ ಆಹ್ವಾನ’ವಿತ್ತರು!

ನಾವಾದರೋ ‘ಕಸದಿಂದ ರಸ’ ಮಾಡಿದವರೆಂಬಂತೆ ಭಾವಿಸುತ್ತಾ, ಬಳಕೆಗೆ ಬಾರದ ಫ್ಯಾನ್‌ನ ರೆಕ್ಕೆಯೊಂದನ್ನು “ಜಾಕ್ ಫ್ರೂಟ್ ಕಟರ್” ಆಗಿ ಪರಿವರ್ತಿಸಿ ಬಳಸಿದ ಬುದ್ಧಿವಂತಿಕೆಗೆ ಪ್ರಶಂಸೆ ನಿರೀಕ್ಷಿಸಿದವರಂತೆ ಮಾತನಾಡ ಹೊರಟೆವು.

ಅವರೋ, ವಿರೋಧ ಪಕ್ಷದವರು‌ ಪ್ರತಿಭಟನೆ ಮಾಡುವಾಗ ಯಾರೋ ಸಣ್ಣದಾಗಿ‌ ಕಲ್ಲು‌ ತೂರಿದ್ದನ್ನೇ ನೆಪ ಮಾಡಿ ಆಡಳಿತ ಪಕ್ಷದವರು “ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ” ಎಂಬ ಹೆಸರಿನಲ್ಲಿ ದೇಶ ದ್ರೋಹದ ಕೇಸ್ ಜಡಿಯುವಂತೆ ಕಂಡು ಬಂದರು!

ನಾವು ಮಾಡಬಾರದ ಯಾವುದೋ ‘ಮಹಾ ಅಚಾತುರ್ಯ’ ವನ್ನು ಮಾಡಿರುವೆವೆಂದು ಪರಿಭಾವಿಸುತ್ತಾ, ಇಷ್ಟು ವರ್ಷವೆಲ್ಲಾ ‘ಇಂತಹ ಶಾಲೆಯಲ್ಲಿ ನಾವು ಕಲಿತದ್ದೇ ದಂಡ’ ಎಂದು ದೂರುತ್ತಾ, ಇದರ ಆಧಾರದಲ್ಲಿಯೇ ಮುಂದೆ ನಾವು ದೇಶದ ಆಸ್ತಿಯನ್ನೆಲ್ಲಾ ಲೂಟಿಗೆಯ್ಯುವ ದೊಡ್ಡ ‘ಡಾಕು’ಗಳಾಗುವೆವು ಎಂಬಂತೆ ಭವಿಷ್ಯ ನುಡಿಯುತ್ತಾ ‘ಆಂಗ್ಲ ಭಾಷಾ ನಿಘಂಟಿನಲ್ಲಿದ್ದ ಉತ್ತಮೋತ್ತಮ ಪದ’ಗಳನ್ನೆಲ್ಲಾ ನಮ್ಮ ಮೇಲೆ ಪ್ರಯೋಗಗೈದರು.

ನಾಲ್ಕು ವಾರಗಳ ಹಿಂದಷ್ಟೇ ಬಳಕೆಗೆ ಯೋಗ್ಯವಿಲ್ಲದೆ ಮೂಲೆ ಸೇರಿದ್ದ, ಹೆಚ್ಚೆಂದರೆ‌ ನಾಲ್ಕು ಐಸ್ ಕ್ಯಾಂಡಿಗಳಿಗೆ ಬೆಲೆ ಬಾಳಬಹುದಾಗಿದ್ದ ಫ್ಯಾನ್ ರೆಕ್ಕೆಯೊಂದು‌ ನಮ್ಮ ಪಾಲಿನ‌ “ಜಾಕ್ ಫ್ರೂಟ್ ಕಟರ್” ಆಗಿ ಬದಲಾಗುತ್ತಲೇ ಈಗ ಪ್ರಾಂಶುಪಾಲರ ಚೇಂಬರ್‌ನ ಟೇಬಲ್ ಮೇಲಿನ ಸ್ಥಾನವನ್ನು ಅಲಂಕರಿಸಿ, ಬ್ರಿಟಿಷ್ ಮ್ಯೂಸಿಯಂನಲ್ಲಿನ ಕೊಹಿನೂರ್ ವಜ್ರದ ರೇಂಜಿನ ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದನ್ನು ಕಂಡು ನಾವು ನಿಜಕ್ಕೂ ದಿಙ್ಮೂಢರಾದೆವು.

ಸರಿ, ಪ್ರತಿಯಾಗಿ ನಾವುಗಳು ಅಮಾಯಕ ಶಿಶುಗಳಂತೆ ಮುಖ ಭಾವ ಮಾಡಿ, ಅವರ ಸಕಲ ಅಮೃತೋಪನ್ಯಾಸವನ್ನು ಸಾವಧಾನದಿಂದ ಆಲಿಸುವವರಂತೆ ತೋರ್ಪಡಿಸಿಕೊಂಡು, ಕ್ಷಮೆ ಕೇಳಿ ರೂಮಿಗೆ ಮರಳಿದೆವು.

ಅಲ್ಲಿಗೆ ನಮ್ಮ “ಜಾಕ್ ಫ್ರೂಟ್ ಕಟರ್”ಗೂ ನಮಗೂ ಇದ್ದ ಸಂಬಂಧ ಮುಗಿಯಿತೆಂದುಕೊಂಡಿದ್ದೆವು!

ಆದರೆ, ಈ ಸಂಬಂಧ ಮುಗಿದಿರಲಿಲ್ಲವೆಂಬುದು ನಮಗೆ ಅರಿವಾಗಿದ್ದು ಮಾತ್ರ ಮಾನ್ಯ ಪ್ರಾಂಶುಪಾಲರು ನಾವು ಶಾಲೆ ಬಿಟ್ಟ‌ ನಂತರದಲ್ಲಿ ಟಿ.ಸಿ, ಮಾರ್ಕ್ಸ್ ಕಾರ್ಡ್‌ಗಳ ಜೊತೆಗೆ ‘ನೋ ಡ್ಯೂ ಸರ್ಟಿಫಿಕೇಟ್’ ನೀಡುವ ಮುನ್ನ ಆ ಕಾಲಕ್ಕೆ ತುಸು ಹೆಚ್ಚೇ ಎನ್ನಬಹುದಾದ ‘ಐವತ್ತು ರೂಪಾಯಿಗಳ’ ರಸೀದಿಯನ್ನು ನಮ್ಮ ಕೈಗೆ ನೀಡಿದಾಗಲೇ…!

ಹಾಗೆಂದು ನಮಗೆ ದಂಡ ಹಾಕಿದ್ದರೆಂದು ಭಾವಿಸಬೇಡಿ!

ಆ ರಸೀದಿಯಲ್ಲಿ,
“ದಾನಿಗಳಾದ ಶ್ರೀಯುತ…….. ರವರಿಂದ ಶಾಲಾ ಅಭಿವೃದ್ಧಿ ನಿಧಿಗೆ ಐವತ್ತು ರೂ.ಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸಿದೆ” ಎಂದಿರುವುದರೊಂದಿಗೆ ಸಣ್ಣ ಪ್ರಾಯದಲ್ಲೇ ಅಧಿಕೃತ ದಾನಿಗಳ ಪಟ್ಟವನ್ನು ನಮಗೆ ಕರುಣಿಸಿತ್ತು!