‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ ಭಾಗವನ್ನು ನಿರೂಪಿಸುವ ಅಜ್ಜಿ ಕೂಡ ಎಲ್ಲೆಗಳ ದಾಟದವಳು. ತನ್ನ ಸ್ವಂತ ವ್ಯಕ್ತಿತ್ವ, ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಹಟಮಾರಿ, ಹಾಗೆ ನೋಡಿದರೆ ಗಂಡಾಳ್ವಿಕೆ, ಕುಟುಂಬದೊಳಗಿನ ಕ್ರೌರ್ಯ ಇವೆಲ್ಲವುಗಳ ನಿರಂತರತೆಯ ನಡುವೆ ಹೆಣ್ಣು ಕೇವಲ ಗುಲಾಮಳಲ್ಲವೆನ್ನುವುದನ್ನು ಕತೆಯು ಪ್ರತಿಪಾದಿಸುತ್ತದೆ. ಎಲ್ಲವನ್ನೂ ಸಹಿಸಿಕೊಂಡ ದೊಡ್ಡಮ್ಮ ಅದೇ ಊರಿನ ಸಾಬನೊಬ್ಬನನ್ನು ಮದುವೆಯಾಗಿ ಅವನಿಂದ ಮಗುವನ್ನು ಪಡೆಯುತ್ತಾಳೆ.
ಶ್ರುತಿ ಬಿ.ಆರ್.‌ ಕಥಾಸಂಕಲನ “ಎಲ್ಲೆಗಳ ದಾಟಿದವಳು” ಕೃತಿಗೆ ಡಾ. ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ ಇಲ್ಲಿದೆ

ಒಟ್ಟಾರೆ ಕನ್ನಡ ಕಥಾ ಸಾಹಿತ್ಯವೂ ಹಾಗೂ ಅದರ ಭಾಗವಾಗಿ ಮಹಿಳಾ ಕಥಾ ಸಾಹಿತ್ಯವೂ ವಸ್ತುವಿನ ವಿಷಯದಲ್ಲಿ ತನ್ನದೇ ಆಯ್ಕೆಯ ಒಂದು ಸೀಮಿತ ಅನುಭವ ಲೋಕವನ್ನು ಅವಲಂಬಿಸಿದೆ ಎಂದು ಹೇಳಬಹುದಾಗಿದೆ. ಈ ಹೇಳಿಕೆಯು ನೇತ್ಯಾತ್ಮಕವಲ್ಲ. ಪ್ರತಿಭಾವಂತ ಲೇಖಕಿಯರು ಮನೆ, ಕುಟುಂಬ ಕೌಟುಂಬಿಕ ಸಂಬಂಧಗಳು ಇವುಗಳ ಬಗ್ಗೆ ಬರೆಯುವುದು ಅವರ ಆಯ್ಕೆಯಾಗಿದೆ. ಸುಮಂಗಲಾರಂಥ ಸೂಕ್ಷ್ಮ ಮನಸ್ಸಿನ ಲೇಖಕಿಯರು ಇತ್ತೀಚಿನ ಸಾಮಾಜಿಕ ಸಂದರ್ಭವಾದ ಮಾಹಿತಿ ತಂತ್ರಜ್ಞಾನ, ಜಾಗತೀಕರಣದ ಭಾಗವಾಗಿ ಬಂದಿರುವ ಮಾರುಕಟ್ಟೆ ಸಂಬಂಧಿಸಿದ ಉದ್ಯೋಗಗಳನ್ನು ಹೊಂದಿರುವ ದಂಪತಿಗಳ ಬಗ್ಗೆ ಬರೆಯುವಾಗ ಕೂಡ ಕೌಟುಂಬಿಕ ಚೌಕಟ್ಟು ಪ್ರಧಾನವಾಗಿಯೇ ಮುಂದುವರೆಯುತ್ತದೆ. ಈ ಬಗೆಯ ಕತೆಗಳನ್ನು ಸಶಕ್ತವಾಗಿ ಬರೆದ ನೇಮಿಚಂದ್ರರೂ ಈ ಚೌಕಟ್ಟನ್ನು ಮುಖ್ಯ ನೆಲೆಯಾಗಿ ಬಳಸಿಕೊಳ್ಳುತ್ತಾರೆ. ಇದಕ್ಕೆ ಕಾರಣಗಳನ್ನು ಹುಡುಕಲು ಇಲ್ಲಿ ಹೋಗುವುದಿಲ್ಲ. ಪ್ರಾಯಶಃ ನಮ್ಮ ಸಮಾಜದಲ್ಲಿ ಆಧುನಿಕತೆಯಾಗಲಿ, ಜಾಗತೀಕರಣವಾಗಲಿ ಇಲ್ಲಿಯವರೆಗೂ “ಅನಾಮಧೇಯ cosmopolitan” ಸಂದರ್ಭಗಳನ್ನು ನಿರ್ಮಿಸಿಲ್ಲ. ಅಥವಾ ಆ ಮಟ್ಟಿಗೆ ಇಲ್ಲಿ ಸಂಪ್ರದಾಯ ಮತ್ತು ಆಧುನಿಕ ಬದಲಾವಣೆಗಳು ಮಿಶ್ರಗೊಂಡಿರುವ ಸಂಕರ ಸಮಾಜವೇ ನಮ್ಮದು ಆಗಿರುವುದು ವಾಸ್ತವವಾಗಿದೆ.

(ಶ್ರುತಿ ಬಿ.ಆರ್.‌)

ಈ ದೀರ್ಘವಾದ ಪ್ರಸ್ತಾವನೆಗೆ ಕಾರಣವೆಂದರೆ ಶ್ರುತಿ ಬಿ. ಆರ್. ಅವರ ಸಣ್ಣಕತೆಗಳು ಮೇಲೆ ವಿವರಿಸಿದ ಸೀಮಿತ ಅನುಭವಲೋಕದಲ್ಲಿಯೇ ವ್ಯವಹರಿಸುತ್ತವೆ. ತುಂಬಾ ವಿಭಿನ್ನವಾದ ಅನುಭವಗಳನ್ನು ಶೋಧಿಸ ಹೊರಡುವುದಿಲ್ಲ. ಈ ಕತೆಗಳ ಸಾಧನೆಯೆಂದರೆ ಈ ಚೌಕಟ್ಟಿನ ಒಳಗೆ ಅವು ಸೂಕ್ಷ್ಮತೆ, ಜೀವಪರವಾದ ಆಶಯಗಳನ್ನು ಅಭಿವ್ಯಕ್ತಿಸುತ್ತವೆ. ಉದಾಹರಣೆಗೆ ಈ ಸಂಕಲನದ ಮೊದಲ ಕತೆ ‘ದೇವರು ಬಂತು’ ಈ ಬಗೆಯದಾಗಿದೆ. ನಿರೂಪಕಿಯ ಗೆಳತಿ ಯಾರನ್ನೋ ನಂಬಿ ತನ್ನಲ್ಲಿದ್ದ ಹಣವನ್ನು ಇನ್ನೊಬ್ಬರಿಗೆ ಕೊಟ್ಟಿದ್ದಾಳೆ. ಆ ವ್ಯಕ್ತಿ ಅದನ್ನು ವ್ಯವಹಾರದಲ್ಲಿ ಹೂಡಿ ಪ್ರತಿ ತಿಂಗಳು ಹೆಚ್ಚಿನ ಹಣವನ್ನು ಸಂದಾಯ ಮಾಡುತ್ತಾನೆ. ಆದರೆ ಮೊದಲಿಗೆ ನಿರೂಪಕಿ ಹೇಳುವಂತೆ ಮಧ್ಯಮ ವರ್ಗದ ಸಣ್ಣ ಆಶೆಗಳನ್ನು ಈ ವ್ಯವಸ್ಥೆ ಪೂರೈಸುತ್ತದೆ. ಆದರೆ ಹಣವನ್ನು ಕಳೆದುಕೊಂಡ ಮೇಲಿನ ಸ್ಥಿತಿ ನಿರ್ವಹಿಸಲು ಅಸಾಧ್ಯವಾಗಿ ಕೊನೆಗೆ ದೇವರು ಮೈಮೇಲೆ ಬರುವವರ ಸಹಾಯ ಕೇಳಿ ಹೋಗುತ್ತಾರೆ. ಅಲ್ಲಿಯ ಭಯ ಹುಟ್ಟಿಸುವ ವಾತಾವರಣ ಇವುಗಳನ್ನು ಶ್ರುತಿ ಪ್ರಭಾವಿಯಾಗಿ ಸೃಷ್ಟಿಸುತ್ತಾರೆ. ಆ ದೇವರ ‘ಮಾಧ್ಯಮ’ವಾದ ಹೆಣ್ಣುಮಗಳು ದುಡ್ಡು ಕೇಳಲು ಹೆದರಿಸಿದಾಗ ಇಬ್ಬರು ಹೊರ ಬರುತ್ತಾರೆ. ಸೂಕ್ಷ್ಮವಾಗಿ ಇಂಥ ಆಚರಣೆಗಳು ದುಡ್ಡಿನ ವ್ಯವಹಾರವಾಗುವುದು ಕತೆಯಲ್ಲಿ ಸೂಚಿತವಾಗುತ್ತದೆ. ಆದರೆ ಕತೆಯು ಒಂದು ಘಟನೆಯ ವರ್ಣನೆಯ ಮಟ್ಟದಲ್ಲಿ ಉಳಿದುಬಿಡುತ್ತದೆ. ಆಳಕ್ಕೆ ಇಳಿಯುವುದಿಲ್ಲ. ತೀವ್ರವಾದ ವ್ಯಂಗ್ಯದ ಮಟ್ಟಕ್ಕೆ ತಲುಪುವುದಿಲ್ಲ.

ಆದರೆ ‘ದ್ಯಾವಮ್ಮನೂ ಸತ್ಯನಾರಾಯಣನೂ’ ಕತೆಯು ತೀರಾ ಸಾಮಾನ್ಯವಾಗಿ ಆರಂಭವಾದರೂ ಅದರಲ್ಲಿ ಬರುವ ತಿರುವಿನಿಂದಾಗಿ ಮನುಷ್ಯ ಸ್ವಭಾವ ಹಾಗೂ ಸಂಬಂಧಗಳ ಸಂಕೀರ್ಣತೆಯನ್ನು ವಿಶ್ಲೇಷಿಸುತ್ತದೆ. ದ್ಯಾವಮ್ಮನ ವಾದವೆಂದರೆ ಕೋವಿಡ್ ಕಾಲದಲ್ಲಿ ನಾಯಿಗಳಿಗೆ ಯಾರೂ ತಂಗಳನ್ನವನ್ನು ಹಾಕುವುದಿಲ್ಲ. ಆದ್ದರಿಂದ ಅವಳೂ ದಿನವೂ ಬಿರಿಯಾನಿ ಮಾಡಿಕೊಂಡುಬಂದು ಸತ್ಯನಾರಾಯಣನ ಮನೆಯ ಹತ್ತಿರ ಬೀದಿಯಲ್ಲಿ ಅದನ್ನು ಹಾಕಿ ಹೋಗುತ್ತಾಳೆ. ಇದರಿಂದ ವ್ಯಗ್ರನಾದ ಸತ್ಯನಾರಾಯಣ ಅವಳ ಜೊತೆ ಜಗಳ, ಅವಳ ಮೇಲೆ ದೂರು ಇವನ್ನೆಲ್ಲ ಪ್ರಯೋಗಿಸಿದರೂ ಅವಳು ಜಗ್ಗುವುದಿಲ್ಲ. ಆದರೆ ಅವನಿಗೆ ಜ್ವರ ಬಂದು ಅವನ ಮನೆಯ ಬಾಗಿಲು, ಗೇಟ್ ತೆರೆಯದಿದ್ದಾಗ ಅವಳು ಅವನ ಬಗ್ಗೆ ಅನುಕಂಪ ತೋರಿಸುತ್ತಾಳೆ, ಸಹಾಯ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಕೋವಿಡ್‌ನಿಂದಾಗಿ ಅವನ ಮನೆಯ ದಾರಿ ಬಂದಾಗುತ್ತದೆ. ಈ ಕತೆಯಲ್ಲಿ ತೀವ್ರತೆಯಿಲ್ಲದಿದ್ದರೂ ಮನುಷ್ಯ ಭಾವನೆಗಳ ಅನಿರೀಕ್ಷಿತ ಮಗ್ಗಲುಗಳನ್ನು ಸಂಕ್ಷಿಪ್ತವಾಗಿ ಸೂಚಿಸುತ್ತದೆ. ಅಲ್ಲದೆ ಭಾರತದ ಅತಿದೊಡ್ಡ ಗೀಳಾದ ವೆಜ್- ನಾನ್ ವೆಜ್ ವಿದ್ಯಮಾನವು ಇಲ್ಲಿ ವ್ಯಂಗ್ಯಕ್ಕೆ ಗುರಿಯಾಗಿದೆ. ಈ ವಿದ್ಯಮಾನವು ಮನುಷ್ಯರ ಅಂತಃಕರಣಕ್ಕೆ ತೊಡಕಾಗುವುದನ್ನು ಕತೆಯು ಸೂಚಿಸುತ್ತದೆ. ಶ್ರುತಿಯವರ ಕತೆಗಳು ಮಿತವ್ಯಯದ ಕಲೆಗಾರಿಕೆಯನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತವೆ. ಗಾತ್ರ ಹಾಗೂ ವಿಸ್ತಾರದಲ್ಲಿ ಎಲ್ಲಾ ಕತೆಗಳು ಸಣ್ಣ ಕತೆಗಳಾಗಿರುವುದಕ್ಕೆ ಇದೇ ಕಾರಣವಾಗಿರಬಹುದು.

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ ಭಾಗವನ್ನು ನಿರೂಪಿಸುವ ಅಜ್ಜಿ ಕೂಡ ಎಲ್ಲೆಗಳ ದಾಟದವಳು. ತನ್ನ ಸ್ವಂತ ವ್ಯಕ್ತಿತ್ವ, ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಹಟಮಾರಿ, ಹಾಗೆ ನೋಡಿದರೆ ಗಂಡಾಳ್ವಿಕೆ, ಕುಟುಂಬದೊಳಗಿನ ಕ್ರೌರ್ಯ ಇವೆಲ್ಲವುಗಳ ನಿರಂತರತೆಯ ನಡುವೆ ಹೆಣ್ಣು ಕೇವಲ ಗುಲಾಮಳಲ್ಲವೆನ್ನುವುದನ್ನು ಕತೆಯು ಪ್ರತಿಪಾದಿಸುತ್ತದೆ. ಎಲ್ಲವನ್ನೂ ಸಹಿಸಿಕೊಂಡ ದೊಡ್ಡಮ್ಮ ಅದೇ ಊರಿನ ಸಾಬನೊಬ್ಬನನ್ನು ಮದುವೆಯಾಗಿ ಅವನಿಂದ ಮಗುವನ್ನು ಪಡೆಯುತ್ತಾಳೆ. ಇದು ಅನಿರೀಕ್ಷಿತವಾದರೂ ಕತೆಯಲ್ಲಿ ಅವಾಸ್ತವ ಎನ್ನಿಸದಿರುವುದು ಕತೆಯ ಯಶಸ್ಸಿನ ಕಾರಣವಾಗಿದೆ. ಮೆಲೋಡ್ರಮೇಟಿಕ್ ಆಗುವ ಅಪಾಯವಿರುವ ಕತೆಯ ವಸ್ತುವು ಶ್ರುತಿಯವರ ಮೆಲುದನಿಯ ಶೈಲಿಯಿಂದಾಗಿ ಶಕ್ತಿಶಾಲಿಯಾಗಿ ಕತೆಯಲ್ಲಿ ಹೊರಹೊಮ್ಮುತ್ತದೆ.

“ನಾನು ಬೂಬಮ್ಮ ಆಗಿದೀನಿ, ಶಿವ ತೋರ್ಸಿದ ದಾರಿಲ್ಲೆ ನಡೆದಿದಿನಿ” ಎಂದು ದೊಡ್ಡಮ್ಮ ಹೇಳುವುದು ಕತೆಯ ಚರಮ ವಾಕ್ಯವಾಗಿದೆ. ದೊಡ್ಡಮ್ಮನ ಕತೆ ಹೇಳಿದ ಅಜ್ಜಿ ಅವಳ ಪರವಾಗಿ ಹೇಳುವ ಮಾತುಗಳು ಕತೆಗೆ ಮುಖ್ಯವಾಗಿವೆ. ಒಂದು ತೆಳುವಾದ ಭಾವುಕತೆಯ ಆವರಣವಿದ್ದರೂ ಈ ಕತೆಯು ಹಿಂದಿನ ಕಾಲದ ಸಾಂಪ್ರದಾಯಿಕ ಕುಟುಂಬದ ಕಟ್ಟುಪಾಡುಗಳ ನಡುವೆ ತನ್ನದೇ ಬಂಡಾಯ ಹೂಡುವ ಹೆಣ್ಣಿನ ಕತೆಯಾಗಿದೆ.

(ಡಾ. ರಾಜೇಂದ್ರ ಚೆನ್ನಿ)

‘ಶಕುನದ ಹಕ್ಕಿ’ ಗೂಡಿನ ಹಕ್ಕಿಗಳನ್ನು ರೂಪಕವಾಗಿ ಬಳಸಿಕೊಳ್ಳುವುದರಲ್ಲಿ ಅಷ್ಟೇನು ಯಶಸ್ವಿಯಾಗಿಲ್ಲ. ಅದನ್ನು ಬಲವಂತವಾಗಿ ಕತೆಗೆ ಜೋಡಿಸಲಾಗಿದೆ ಎನ್ನಿಸುತ್ತದೆ. ‘ಅನಾಮಧೇಯ’ ಕತೆಯಲ್ಲಿಯ ಘಟನೆಗಳು ಕೂಡ ಅನಿರೀಕ್ಷಿತವಲ್ಲ, ಅಲ್ಲದೆ ಪತ್ರಗಳ ಮೂಲಕ ಮದುವೆ ಸಂಬಂಧವನ್ನು ಹಾಳುಗೆಡವುವುದು ಹೊಸದಾದ ವಸ್ತುವಲ್ಲ. ಆದರೆ ಇಲ್ಲಿ ತನ್ನ ಅಣ್ಣನ ಮಾತುಗಳಿಂದ ಮೋಸಹೋಗಿ ಇಂಥ ದುಷ್ಟ ಕೆಲಸಕ್ಕೆ ಭಾಗಿಯಾದವಳು ಕೂಡ ತನ್ನ ಸ್ವಾರ್ಥಕ್ಕಾಗಿ ಅಲ್ಲ, ತನ್ನ ಮುಗ್ಧತನದಿಂದ ಎನ್ನುವುದು ಕತೆಗೆ ಹೊಸ ತಿರುವನ್ನು ಕೊಡುತ್ತದೆ. ಈ ಕತೆಗಳಲ್ಲಿ ಇಷ್ಟವಾಗುವುದು ಶ್ರುತಿಯವರ ಸೃಜನಶೀಲ ಮನಸ್ಸು ಮನುಷ್ಯ ಜೀವಿಗಳನ್ನು ಹೀಗೆ ಉದಾರವಾಗಿ ನೋಡುವ ಗುಣ. ಇದು ಕತೆಗಾರಿಕೆಗೆ ಒಮ್ಮೊಮ್ಮೆ ಸವಾಲು ಆಗುತ್ತದೆ. ಭಾವುಕತೆಯ ಮೇಲೆ ನಿಯಂತ್ರಣ ಕಳೆದು ಹೋಗಬಹುದು. ‘ದರಕಾಸ್ತು’ ಕತೆಯ ಕತೆಗಾರ್ತಿ ಹೊರಜಗತ್ತನ್ನು ಸೂಕ್ಷ್ಮವಾಗಿ ನೋಡಬಲ್ಲರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಭೂಮಿಯನ್ನು ನೆಚ್ಚಿಕೊಂಡವನ ಅಸಹಾಯಕತೆಯ ಕತೆ ಇದಾಗಿದೆ.

“ಧಾರೆ” ಗಟ್ಟಿಯಾದ ಕತೆ. ಕತೆಗಾರ್ತಿಗೆ ಇರಬೇಕಾದ ವಸ್ತುನಿಷ್ಟತೆ ಸಾವಧಾನದಿಂದ ಒಬ್ಬಳು ಹೆಣ್ಣಿನ ದುಃಖವನ್ನು ಇಲ್ಲಿ ವಿವರಿಸಲಾಗಿದೆ. ಎಲ್ಲಿಯೂ ಭಾವುಕತೆಯ ಸುಳಿವಿಲ್ಲ. ಅಪ್ರಾಮಾಣಿಕವಾದ, ಕೆಲಸಕ್ಕೆ ಬಾರದ ಗಂಡನು ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿಯಾಗಿರುವುದರ ನೋವು, ಅವಮಾನ ಇವೆಲ್ಲ ಪ್ರಭಾವಿಯಾಗಿ ಬಂದಿವೆ.

ಒಟ್ಟಾರೆಯಾಗಿ ಇಲ್ಲಿಯ ಕತೆಗಳು ಕತೆಗಾರ್ತಿಯ ಸಾಧ್ಯತೆಗಳನ್ನು ಸಮರ್ಥವಾಗಿ ತೋರಿಸುತ್ತವೆ. ಹಾಗೆಯೇ ಸೀಮಿತತೆಯನ್ನು ಕೂಡ. ಇವು ಶ್ರೇಷ್ಠ ಕತೆಗಳೆಂದು ಹೇಳಿ ದಾರಿತಪ್ಪಿಸುವುದಿಲ್ಲ. ಸಲ್ಲದ ಆಶೀರ್ವಾದದ ಮಾತುಗಳನ್ನು ಹೇಳುವುದಿಲ್ಲ. ನಿರ್ಭಿಡೆಯಾಗಿ ಅನುಭವದ ಆಳಕ್ಕಿಳಿದು ಬರೆದರೆ ಶ್ರುತಿ ಒಬ್ಬ ಸಮರ್ಥ ಕತೆಗಾರ್ತಿಯಾಗಬಲ್ಲರು ಎನ್ನುವುದರ ಬಗ್ಗೆಯೂ ನನಗೆ ಸಂಶಯವಿಲ್ಲ.

(ಕೃತಿ: ಎಲ್ಲೆಗಳ ದಾಟಿದವಳು (ಕಥಾ ಸಂಕಲನ), ಲೇಖಕರು: ಶ್ರುತಿ ಬಿ.ಆರ್., ಪ್ರಕಾಶಕರು: ಜೀರುಂಡೆ ಪುಸ್ತಕ, ಬೆಲೆ: 110/-)