ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿರುವ ದೇಶ ಮೆಕ್ಸಿಕೋ. ರಾಷ್ಟ್ರದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳು ಕಂಡುಬರುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ವಿಶ್ವದ ಅತ್ಯಂತ ಚಿಕ್ಕ ಜ್ವಾಲಾಮುಖಿಯೂ ಇರುವುದು ಮೆಕ್ಸಿಕೋದಲ್ಲಿ. ಪ್ಯೂಬ್ಲಾ ಸಮೀಪದಲ್ಲಿರುವ ಕ್ಯುಕ್ಸ್ಕೊಮೇಟ್ ಜ್ವಾಲಾಮುಖಿಯ ಎತ್ತರ ಕೇವಲ 43 ಅಡಿ. ಇದು ಈಗ ನಿಷ್ಕ್ರಿಯವಾಗಿದೆ. 1910ರಲ್ಲಿ ಮೆಕ್ಸಿಕೋದಲ್ಲಿ ಕ್ರಾಂತಿ ನಡೆದಿತ್ತು. ಇದರ ಪರಿಣಾಮವನ್ನು ಈಗಿನ ಕಾಲಘಟ್ಟದಲ್ಲಿಯೂ ಕಾಣುವುದಕ್ಕೆ ಸಾಧ್ಯವಿದೆ. ಮೆಕ್ಸಿಕೋದಲ್ಲಿರುವ ಪ್ಯೂಬ್ಲಾ ಪ್ರದೇಶವು ಐತಿಹಾಸಿಕ ಮಹತ್ವವನ್ನು ಗಳಿಸಿಕೊಂಡಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಮೆಕ್ಸಿಕೋ ದೇಶದ ಕುರಿತ ಬರಹ ನಿಮ್ಮ ಓದಿಗೆ
ಮೆಕ್ಸಿಕನ್ ಸಂಸ್ಕೃತಿ ಅಮೇರಿಕಾದ ಪ್ರಭಾವಕ್ಕೆ ಒಳಗಾಗಿದೆ. ಉತ್ತರ ಅಮೇರಿಕಾ ಖಂಡದಲ್ಲಿರುವ ಈ ರಾಷ್ಟ್ರಕ್ಕೆ ಅಮೇರಿಕಾ ಸಂಪರ್ಕ ಹೊಸದೇನಲ್ಲ. ಮೆಕ್ಸಿಕೋದ ಜನರು ಅಧಿಕ ಸಂಖ್ಯೆಯಲ್ಲಿ ಅಮೇರಿಕಾಕ್ಕೆ ವಲಸೆ ಹೋಗಿದ್ದರು. ಹೀಗೆ ಹೋದವರಲ್ಲಿ ಕೆಲವರು ಅಮೇರಿಕಾದಲ್ಲಿಯೇ ನೆಲೆನಿಂತರೆ, ಇನ್ನೂ ಕೆಲವರು ಮೆಕ್ಸಿಕೋಗೆ ಹಿಂದಿರುಗಿದರು. ಹೀಗೆ ದೇಶಕ್ಕೆ ಮರಳಿದವರ ಮೂಲಕವೇ ಅಮೇರಿಕನ್ ಜೀವನ ವಿಧಾನ ಮೆಕ್ಸಿಕೋ ಬದುಕಿನ ಪ್ರಮುಖ ಭಾಗವಾದದ್ದು. ಮೆಕ್ಸಿಕೋ ಸಂಸ್ಕೃತಿಯ ಸ್ವರೂಪ ರೂಪುಗೊಂಡದ್ದು ಹೀಗೆ. ಇದು ಮೆಕ್ಸಿಕೋದ ಪಾಲಿಗೆ ವರದಾನವಾಗಿದೆ. ಜೊತೆಗೆ ಎದುರಿಸಬೇಕಾದ ಸವಾಲೂ ಆಗಿದೆ. ಮೆಕ್ಸಿಕೋ ದೇಶದ ಜನರ ಜೀವನ ವಿಧಾನವನ್ನು ಹಲವು ಅಂಶಗಳು ಪ್ರಭಾವಿಸಿವೆ. ಸಾಮಾಜಿಕ- ಆರ್ಥಿಕ ಮಟ್ಟ, ಜನಾಂಗ, ಪ್ರದೇಶ, ಲಿಂಗ ಈ ಸಂಗತಿಗಳ ಕಾರಣದಿಂದಾಗಿ ಮೆಕ್ಸಿಕೋ ದೈನಂದಿನ ಜೀವನವು ವೈವಿಧ್ಯಮಯವಾಗಿದೆ. ಬೇರೆ ಬೇರೆ ರೀತಿಯಲ್ಲಿ ಬದುಕುತ್ತಾ ಸುಖ ಕಂಡುಕೊಳ್ಳುವ ಜನರು ಇಲ್ಲಿದ್ದಾರೆ. ಯುಕಾಟಾನ್‌ನ ಕಾಡಿನಲ್ಲಿ ಬದುಕುತ್ತಿರುವ ಮಾಯನ್ ಸಮುದಾಯಕ್ಕೆ ಸೇರಿದ ಒಬ್ಬ ಕೃಷಿಕರು ತಮ್ಮ ಬದುಕಿನ ರೀತಿಯಲ್ಲಿ ಖುಷಿ ಕಂಡುಕೊಳ್ಳುತ್ತಾರೆ. ನಗರ ಪ್ರದೇಶದಲ್ಲಿ ವೈದ್ಯರಾಗಿರುವವರು ತಮ್ಮ ಜೀವನಶೈಲಿಗೆ ತೃಪ್ತಿ ಪಟ್ಟುಕೊಳ್ಳುತ್ತಾರೆ. ಇಬ್ಬರ ಬದುಕಿನ ಆಸಕ್ತಿ, ಅನುಭವ ಭಿನ್ನವಾಗಿದ್ದರೂ ಆನಂದದಾಯಕವಾಗಿ ಜೀವನ ಸಾಗಿಸುವ ಉದ್ದೇಶ ಇಬ್ಬರಲ್ಲಿಯೂ ಇರುತ್ತದೆ. ಅನ್ಯ ಸಂಸ್ಕೃತಿಯ ಪ್ರಭಾವಕ್ಕೆ ಅತೀವವಾಗಿ ಸಿಲುಕಿಕೊಂಡ ದೇಶವೊಂದು ತನ್ನ ಅಸ್ತಿತ್ವವನ್ನು ಹಂತಹಂತವಾಗಿ ಕಳೆದುಕೊಳ್ಳುವ ಅರಿವು ಮೆಕ್ಸಿಕೋ ದೇಶಕ್ಕಿದೆ. ತನಗಿಂತ ಹೊರತಾದ ಸಂಸ್ಕೃತಿಯ ಅತಿಯಾದ ಅವಲಂಬನೆಯನ್ನು ಬಿಟ್ಟು ಮುಂದುವರಿಯುವುದರ ಕಡೆಗೆ ಅದು ಈಗ ಗಮನ ಕೊಡುತ್ತಿದೆ.
ಮೆಕ್ಸಿಕೋದ ಬಹುತೇಕ ಮಧ್ಯಮ ಮತ್ತು ಮೇಲ್ವರ್ಗದ ಮಹಿಳೆಯರು ಇಂದು ಉದ್ಯೋಗದಲ್ಲಿದ್ದಾರೆ. ಮನೆಗೆಲಸಗಳ ಕಡೆಗೇ ಸಂಪೂರ್ಣ ಗಮನಹರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮನೆಯ ಗಂಡುಮಕ್ಕಳೂ ಸಹ ಮನೆಯೊಳಗಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವಂತಹ ಕೆಲಸಗಳನ್ನೂ ಸಹ ಮನೆಯ ಗಂಡಸರೇ ನಿಭಾಯಿಸುತ್ತಿದ್ದಾರೆ. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಗಂಡ ಹೆಂಡತಿ ಇಬ್ಬರೂ ಹಂಚಿಕೊಳ್ಳುತ್ತಿದ್ದಾರೆ. ಆದರೆ ಬಡವರ್ಗದ ಮಹಿಳೆಯರ ಸ್ಥಿತಿಗತಿಯಲ್ಲಿ ಹೆಚ್ಚಿನ ಸುಧಾರಣೆಗಳು ಕಂಡುಬಂದಿಲ್ಲ. ಮನೆಯೊಳಗಿನ ಕೆಲಸಗಳೇನಿದ್ದರೂ ಮಹಿಳೆಯರಿಗಷ್ಟೇ ಮೀಸಲು ಎಂಬ ಮನೋಭಾವ ಹಾಗೆಯೇ ಉಳಿದುಕೊಂಡಿದೆ. ಧರ್ಮಪ್ರಜ್ಞೆಯ ಆಧಾರದಲ್ಲಿ ಪುರುಷ ಪಾರಮ್ಯವನ್ನು ಮುಂದಿಡುವ ಗಂಡಸರೂ ಇದ್ದಾರೆ. ಮಹಿಳೆಯರು ಯಾವತ್ತೂ ತಮಗೆ ವಿಧೇಯರಾಗಿರಬೇಕು ಎಂದು ಬಯಸುವವರಿದ್ದಾರೆ. ಮಹಿಳೆಯರ ಮೇಲಿನ ಹಿಂಸೆ ಮತ್ತು ತಾರತಮ್ಯ ಕಡಿಮೆಯಾಗಿದೆ ನಿಜ. ಆದರೆ ಕೊನೆಗೊಂಡಿಲ್ಲ. ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ನಂಬಿಕೆ ಇರದ ಕಾರಣ ಕೌಟುಂಬಿಕ ಹಿಂಸಾಚಾರದ ಘಟನೆಗಳು ನಾಲ್ಕು ಗೋಡೆಗಳಿಂದಾಚೆಗೆ ಬರುವುದೇ ಇಲ್ಲ. ಇದರಿಂದಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಸಂಭವ ತಪ್ಪಿಹೋಗುತ್ತದೆ.
ಕುಟುಂಬ ವ್ಯವಸ್ಥೆಗೆ ಮೆಕ್ಸಿಕನ್ ಸಮಾಜದಲ್ಲಿ ಪ್ರಾಧಾನ್ಯತೆಯಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಸಹ ಕುಟುಂಬ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ. ವ್ಯಕ್ತಿಯ ಸ್ಥಿತಿ ಮತ್ತು ವ್ಯಕ್ತಿಗೆ ದೊರೆಯುವ ಅವಕಾಶಗಳು ಕೌಟುಂಬಿಕ ಸಂಬಂಧಗಳಿಂದ ಪ್ರೇರೇಪಿತವಾಗಿರುತ್ತವೆ. ಮೆಕ್ಸಿಕನ್ ಕುಟುಂಬ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ, ಅವಿಭಕ್ತ ಕುಟುಂಬಗಳು ಈಗಲೂ ಅಸ್ತಿತ್ವದಲ್ಲಿವೆ. ಮೂರು ಅಥವಾ ಅದಕ್ಕಿಂತಲೂ ಹೆಚ್ಚು ತಲೆಮಾರುಗಳು ಒಂದೇ ಮನೆಯಲ್ಲಿ ವಾಸಿಸುವುದನ್ನು ಕಾಣಬಹುದು. ವಿಶೇಷವೆಂದರೆ ಈ ಮಾದರಿಯ ಕುಟುಂಬ ವ್ಯವಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ಮುಖ್ಯವಾಗಿ ಆರ್ಥಿಕ ಅನುಕೂಲದ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಮೆಕ್ಸಿಕನ್ನರು ಒಪ್ಪಿಕೊಂಡಿದ್ದಾರೆ. ಜೊತೆಗೆ ಸಾಂಪ್ರದಾಯಿಕವಾಗಿರುವ ಮನಃಸ್ಥಿತಿಯೂ ಸಹ ಅವರನ್ನು ಈ ನೆಲೆಯಲ್ಲಿ ಬದುಕುವುದಕ್ಕೆ ಪ್ರೇರೇಪಿಸಿದೆ. ಅವಿಭಕ್ತ ಕುಟುಂಬ ವ್ಯವಸ್ಥೆಗೆ ಒಳಪಡದೇ ಬದುಕುವ ಜನರೂ ಕೂಡಾ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಹೀಗೆ ಕುಟುಂಬ ಸಂಬಂಧ ಬಿಗಿಯಾಗಿರುವ ಕಾರಣಕ್ಕೇ ಮೆಕ್ಸಿಕನ್ ಕುಟುಂಬ ಸದಸ್ಯರ ಮಧ್ಯೆ ಯಾವುದೇ ರೀತಿಯ ಅಂತರ ಕಂಡುಬರುವುದಿಲ್ಲ. ಪಾರ್ಟಿಗಳಿಗೆ ಮೊಮ್ಮಕ್ಕಳ ಜೊತೆಗೆ ಅಜ್ಜ ಅಜ್ಜಿಯರೂ ಹೋಗುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ವಯಸ್ಸಾದವರು ಹೋದಾಗ ಹದಿಹರೆಯದವರು, ಚಿಕ್ಕ ಮಕ್ಕಳು ಅವರಿಗೆ ಸಾಥ್ ನೀಡುತ್ತಾರೆ. ಕುಟುಂಬ ಸದಸ್ಯರೆಲ್ಲರೂ ಜೊತೆ ಸೇರಿಕೊಂಡು ಸಂಭ್ರಮಿಸುವುದೇ ಪ್ರಮುಖ ಉದ್ದೇಶವಾಗಿರುತ್ತದೆ. ಬೇರೆ ಯಾವುದೇ ರೀತಿಯ ಭಿನ್ನತೆಗೆ ಅವಕಾಶ ಇರುವುದಿಲ್ಲ.
ಬಹುತೇಕ ಕುಟುಂಬಗಳು ಅದ್ಧೂರಿಯಾಗಿ ಮದುವೆ ಕಾರ್ಯಕ್ರಮವನ್ನು ನಡೆಸುತ್ತವೆ. ಬಡ ಕುಟುಂಬಗಳೂ ಸಹ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಾಲ ಮಾಡಿಯಾದರೂ ಸಹ ಆಡಂಬರದ ಮದುವೆಗೇ ಹೆಚ್ಚು ಒತ್ತು ನೀಡುತ್ತಾರೆ. ಕ್ವೆನ್ಸಿಯನೇರ ಎನ್ನುವುದು ಮೆಕ್ಸಿಕೋ ಕುಟುಂಬದಲ್ಲಿ ಕಂಡುಬರುವ ವಿಶಿಷ್ಟ ಆಚರಣೆಯಾಗಿದೆ. ಹುಡುಗಿಯೊಬ್ಬಳ ಹದಿಹರೆಯವನ್ನು ಸಂಭ್ರಮಿಸುವ ಆಚರಣೆ ಇದಾಗಿದೆ. ಹುಡುಗಿಗೆ ಹದಿನೈದು ವರ್ಷ ಪ್ರಾಯವಾದಾಗ ಈ ಆಚರಣೆ ನಡೆಸಲಾಗುತ್ತದೆ.
ಆರ್ಥಿಕತೆ ಮತ್ತು ಸಾಮಾಜಿಕತೆಯ ಆಧಾರದಲ್ಲಿ ಮೆಕ್ಸಿಕನ್ ದೇಶವು ಒಡೆದುಹೋಗಿದೆ. ಇದು ದೇಶದ ಪ್ರಮುಖ ಸಮಸ್ಯೆಯೂ ಆಗಿದೆ. ಇಡಿಯ ಸಮಾಜವನ್ನು ಆದಾಯ ಮತ್ತು ಶೈಕ್ಷಣಿಕ ಮಟ್ಟದ ಆಧಾರದಲ್ಲಿ ವಿಂಗಡಿಸಲಾಗಿದೆ. ವ್ಯಕ್ತಿಗೆ ಸ್ಥಾನಮಾನ ದೊರಕುವುದು ಈ ಎರಡು ಅಂಶಗಳ ಆಧಾರದಲ್ಲಿ. ಮಧ್ಯಮ ವರ್ಗದ ಜನರು ನಗರಗಳಲ್ಲಿ ನೆಲೆ ಕಂಡುಕೊಳ್ಳಲು ಪಡಬಾರದ ಪಾಡು ಅನುಭವಿಸುತ್ತಿದ್ದಾರೆ. ಶ್ರೀಮಂತರಾದ ಸುಶಿಕ್ಷಿತ ಜನರು ಸಮಾಜದ ಮೇಲ್‌ಸ್ತರದಲ್ಲಿ ಗುರುತಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಅವಕಾಶಗಳು, ಸ್ಥಾನಮಾನಗಳು ಅವರ ಪಾಲಾಗುತ್ತಿವೆ. ಇದು ನಿಜಕ್ಕೂ ಕಳವಳದ ಸಂಗತಿ. ತಾರತಮ್ಯವನ್ನು ಆಧರಿಸಿಕೊಂಡ ಸಾಮಾಜಿಕ ವ್ಯವಸ್ಥೆ ವ್ಯಕ್ತಿ ಮತ್ತು ದೇಶದ ಬೆಳವಣಿಗೆಯನ್ನು ತಡೆಯುತ್ತದೆ ಎನ್ನುವುದನ್ನು ಮೆಕ್ಸಿಕೋದ ಕೆಲವು ಜನರು ಇನ್ನೂ ಅರ್ಥಮಾಡಿಕೊಂಡಿಲ್ಲ. ಗ್ರಾಮೀಣ ಭಾಗದಲ್ಲಿ ಬಡತನದ ಪ್ರಮಾಣ ಅಧಿಕವಾಗಿದೆ. ಹಳ್ಳಿಗಳಲ್ಲಿ ಜನರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಅನೇಕ ಜನರಿಗೆ ಉಳಿದುಕೊಳ್ಳುವುದಕ್ಕೆ ತುಂಡು ಭೂಮಿಯೂ ಇಲ್ಲದಂತಾಗಿದೆ.
ಶಾಶ್ವತವಾದ ನೆಲೆಯಿಲ್ಲದ ಮತ್ತು ಸ್ವಂತ ಜಮೀನಿಲ್ಲದ ಬಡ ಜನರು ಬದುಕನ್ನು ನಡೆಸುವುದಕ್ಕಾಗಿ ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ. ದಿನಗೂಲಿಯ ಬಲದಿಂದ ಅವರ ಬದುಕಿನ ಬಂಡಿ ನಿಧಾನಕ್ಕೆ ಸಾಗುತ್ತಿದೆ. ಹೀಗೆ ಶ್ರಮಿಕರಿಗೆ ದೊರಕುವ ದಿನಗೂಲಿಯು ತೀರಾ ಕಡಿಮೆ. ಒಂದು ಕುಟುಂಬ ಮೂಲಭೂತ ಸೌಲಭ್ಯಗಳನ್ನು ಹೊಂದಿಕೊಂಡು ಬದುಕುವುದಕ್ಕೆ ಬೇಕಾದಷ್ಟು ಹಣ ಸಂಪಾದನೆ ಆಗುತ್ತಿಲ್ಲ. ಆದರೆ ದೇಶದ ಕೆಲವು ಭಾಗಗಳಲ್ಲಿ ಕೃಷಿಕರಾಗಿರುವವರೂ ಸಹ ಉನ್ನತವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಕೃಷಿಯನ್ನೇ ನಂಬಿಕೊಂಡಿದ್ದರೂ ಇವರ ಬದುಕು ಬೆಳವಣಿಗೆ ಕಾಣುವುದಕ್ಕೆ ಪ್ರಮುಖ ಕಾರಣವಿದೆ. ಆಧುನಿಕ ಮಾದರಿಯ ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೃಷಿಯ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಮಧ್ಯಮ ವರ್ಗದ ಜನರೂ ಸಹ ಕೃಷಿಯನ್ನೇ ಅವಲಂಬಿಸಿದ್ದಾರೆ. ಅತ್ತ ಆರಕ್ಕೆ ಏರದ, ಇತ್ತ ಮೂರಕ್ಕೆ ಇಳಿಯದ ಮಧ್ಯಮ ಸ್ಥಿತಿಯ ಬದುಕನ್ನು ಇವರು ನಡೆಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಬದುಕುತ್ತಿರುವ ಬಹುತೇಕ ಜನರ ಹಣಕಾಸಿನ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಯೇ ಹೆಚ್ಚು. ಹೀಗೆ ಬಡವರಾಗಿ ಗುರುತಿಸಿಕೊಂಡಿರುವವರಲ್ಲಿ ಸರ್ಕಾರಿ ನೌಕರರೂ ಇದ್ದಾರೆ. ಸ್ಕ್ವಾಟರ್ ವಸಾಹತುಗಳಲ್ಲಿ ನೆಲೆ ಕಂಡುಕೊಂಡವರ ಸಂಖ್ಯೆ ಅಧಿಕ. ಮೂಲಭೂತ ಸೇವೆಗಳ ಕೊರತೆ ಜನರನ್ನು ಕಾಡುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಶ್ರೀಮಂತ ವರ್ಗದ ಜನರ ಜೀವನ ವಿಧಾನವಿದೆ. ನಗರ ಜೀವನದ ಸೌಕರ್ಯಗಳನ್ನು ಆನಂದಿಸುವ ಇವರು ದೇಶದ ಎಲ್ಲಾ ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ.
ಮೆಕ್ಸಿಕನ್ ಪಾಕಪದ್ಧತಿಯು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ಆದರೆ ಇಡಿಯ ಮೆಕ್ಸಿಕನ್ ಆಹಾರ ಪದ್ಧತಿಯಲ್ಲಿ ಮೂರು ಆಹಾರಗಳ ಬಳಕೆ ಇದ್ದೇ ಇರುತ್ತದೆ. ಮೆಕ್ಕೆಜೋಳ, ಸ್ಕ್ವಾಶ್ ಹಣ್ಣು ಮತ್ತು ಬೀನ್ಸ್ ಈ ಮೂರು ಆಹಾರ ಪದಾರ್ಥಗಳ ಬಳಕೆ ಎಲ್ಲಾ ಪ್ರದೇಶಗಳಲ್ಲಿಯೂ ಇದೆ. ಈ ಮೂರು ಆಹಾರ ಪದಾರ್ಥಗಳನ್ನು ಉಪಯೋಗಿಸುವುದು ಮೆಕ್ಸಿಕೋದ ಸಾಂಪ್ರದಾಯಿಕ ಶೈಲಿಯಾಗಿದೆ. ಮೆಕ್ಸಿಕನ್ ಪಾಕಪದ್ಧತಿಯು ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಅವಕಾಡೋ ಹಣ್ಣುಗಳ ಬಳಕೆ ಮೆಕ್ಸಿಕನ್ ಆಹಾರ ತಯಾರಿಯಲ್ಲಿ ಪ್ರಾಮುಖ್ಯತೆ ಗಳಿಸಿದೆ. ಮಸಾಲೆ ಪದಾರ್ಥಗಳನ್ನು ಹಿತಮಿತವಾಗಿ ಬಳಸುತ್ತಾರೆ. ಚೀಸ್, ಪನ್ನೀರ್, ಕೆಂಪು ಮಾಂಸ ಮೊದಲಾದವುಗಳನ್ನು ಅಧಿಕವಾಗಿ ಬಳಸುವುದು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಕ್ಕೆ ಸೇರಿದ ಜನರು. ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಈ ಮೂರು ಆಹಾರಗಳೇ ಪ್ರಮುಖ ಕಾರಣ ಎನ್ನುವುದು ಮೆಕ್ಸಿಕನ್ ಆಹಾರ ತಜ್ಞರ ಅಭಿಪ್ರಾಯವಾಗಿದೆ. ಬಡವರು ಅಪರೂಪಕ್ಕೊಮ್ಮೆ ಇಂತಹ ಆಹಾರಗಳನ್ನು ಸೇವಿಸುತ್ತಾರೆ. ಅಗ್ಗದ ಬೆಲೆಗೆ ದೊರಕುವ ಕಡಿಮೆ ಗುಣಮಟ್ಟದ ಈ ಆಹಾರ ಅವರ ಹೊಟ್ಟೆ ಸೇರುತ್ತದೆ. ಮೆಕ್ಕೆಜೋಳದಿಂದ ತಯಾರಿಸಲಾದ ಟೋರ್ಟಿಲ್ಲಾ ಎನ್ನುವುದನ್ನು ಉಳಿದ ಪ್ರಮುಖ ಭಕ್ಷ್ಯಗಳ ನಂತರದ ಸ್ಥಾನದಲ್ಲಿರುವ ಭಕ್ಷ್ಯವಾಗಿದೆ. ಇದು ಪ್ರಸಿದ್ಧವಾಗಿರುವುದು ತನ್ನ ಸುವಾಸನೆಗೆ. ಸುಟ್ಟ ಜೋಳದಿಂದ ಇದನ್ನು ತಯಾರಿಸುವ ಕಾರಣ ಎಲ್ಲರನ್ನೂ ಆಕರ್ಷಿಸಬಲ್ಲ ಸುಗಂಧ ಇದಕ್ಕಿರುತ್ತದೆ. ಮಧ್ಯ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ ಕಂಡುಬರುವ ವಿಶಿಷ್ಟ ಆಹಾರವೆಂದರೆ ಬೇಯಿಸಿದ ಚಿಲ್ಲಿ ಸಾಸ್. ಇದನ್ನು ಮೋಲ್ ಎಂದು ಕರೆಯಲಾಗುತ್ತದೆ. ಈ ಮೋಲ್‌ಗಳಲ್ಲಿ ಪಾಸಿಲ್ಲಾ, ಗುವಾಜಿಲ್ಲೋ, ಚಿಪಾಟ್ಲ, ಆಂಚೊ ಮೊದಲಾದವುಗಳು ಪ್ರಸಿದ್ಧವಾಗಿವೆ. ಹೆಚ್ಚಾಗಿ ಕೋಳಿ ಮಾಂಸದ ಜೊತೆಗೆ ಚಿಲ್ಲಿ ಸಾಸ್ ನೀಡಲಾಗುತ್ತದೆ. ಟರ್ಕಿ ಕೋಳಿ ಮಾಂಸ, ಹಂದಿ ಮಾಂಸ, ಗೋವಿನ ಮಾಂಸದ ಜೊತೆಗೂ ಸಾಸ್ ನೀಡುವ ಪದ್ಧತಿಯಿದೆ. ಚಿಲ್ಲಿ ಸಾಸ್ ಅನ್ನು ಟೋರ್ಟಿಲ್ಲಾ ಮೇಲೆ ಸುರಿದರೆ ಅದು ಎನ್ಮೋಲಾಡಾಸ್ ಎನ್ನುವ ವಿಶಿಷ್ಟ ಬಗೆಯ ಖಾದ್ಯವಾಗುತ್ತದೆ. ಮೆಕ್ಸಿಕೋದ ಜನರು ಸ್ವಾತಂತ್ರ್ಯ ದಿನದಂದು ಸೇವಿಸುವ ವಿಶಿಷ್ಟವಾದ ಭಕ್ಷ್ಯವಿದೆ. ಚಿಲ್ಸ್ ಎನ್ ನೊಗಾಡಾ ಎನ್ನುವುದು ಈ ವಿಶಿಷ್ಟ ಆಹಾರದ ಹೆಸರು. ಮುಚ್ಚಿದ ಹೂರಣದ ಮೇಲೆ ಕಡಲೆ ಬೀಜದ ಸಾಸ್, ಹಾಲಿನ ಕೆನೆಯನ್ನು ಸುರಿದು, ದಾಳಿಂಬೆ ಬೀಜಗಳನ್ನು ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಚೆಲ್ಲಲಾಗಿರುತ್ತದೆ. ಹೀಗೆ ತಯಾರಾದ ಭಕ್ಷ್ಯವು ಹಸಿರು, ಬಿಳಿ ಮತ್ತು ಕೆಂಪು ಬಣ್ಣಗಳಿಂದ ಕೂಡಿ, ಆಕರ್ಷಕವಾಗಿ ಕಾಣಿಸುತ್ತಿರುತ್ತದೆ. ಮೆಕ್ಸಿಕೋ ಸ್ವಾತಂತ್ರ್ಯ ಪಡೆದ ಬಳಿಕ ಅಲ್ಲಿಯ ಸಂನ್ಯಾಸಿಗಳು ಈ ಖಾದ್ಯವನ್ನು ತಯಾರಿಸಿದ್ದಾರೆ. ಅವರು ಪ್ರೇರಣೆ ಪಡೆದದ್ದು ಮೆಕ್ಸಿಕೋ ಧ್ವಜದಲ್ಲಿರುವ ಬಣ್ಣಗಳಿಂದ ಎನ್ನುವ ಐತಿಹ್ಯವಿದೆ. ಇದನ್ನು ಸಮರ್ಥಿಸುವಂತೆ ಮೆಕ್ಸಿಕೋ ಧ್ವಜದಲ್ಲಿಯೂ ಹಸಿರು, ಬಿಳಿ ಮತ್ತು ಕೆಂಪು ಬಣ್ಣಗಳು ಪ್ರಮುಖವಾಗಿವೆ.
ಪಾಶ್ಚಾತ್ಯ ರಾಷ್ಟ್ರಗಳಿಗೆ ಚಾಕೋಲೇಟನ್ನು ಪರಿಚಯಿಸಿದ ಕೀರ್ತಿ ಮೆಕ್ಸಿಕೋಗೆ ಸಲ್ಲುತ್ತದೆ. ಇದು ಮೊದಲು ತಯಾರಾದದ್ದು ಓಕ್ಸಾಕಾ ಪ್ರದೇಶದಲ್ಲಿ. ಇದು ಮೆಕ್ಸಿಕೋದ ಪ್ರಮುಖ ಆಹಾರ ಎನಿಸಿಕೊಂಡಿದೆ. ಚಾಕೋಲೇಟ್‌ಗಳನ್ನು ರಫ್ತು ಮಾಡುವುದರಲ್ಲಿಯೂ ಮುಂಚೂಣಿಯಲ್ಲಿದೆ ಮೆಕ್ಸಿಕೋ. ಎಂಚಿಲಾಡಾಸ್, ಕಾರ್ನ್‌ಮೀಲ್ ಟ್ಯಾಮೆಲ್ಸ್, ಬರ್ರಿಟೊ, ಟ್ಯಾಕೋಸ್, ಟೋರ್ಟಾಸ್, ಕ್ವೆಸಡಿಲ್ಲಾ, ಪೊಜೋಲ್ ಮೊದಲಾದವು ಮೆಕ್ಸಿಕೋದ ಇತರ ಜನಪ್ರಿಯ ಭಕ್ಷ್ಯಗಳು. ಕರಾವಳಿ ಪ್ರದೇಶಗಳಲ್ಲಿ ಸಮುದ್ರಾಹಾರಗಳು ಪ್ರಸಿದ್ಧವಾಗಿವೆ. ಪಲ್ಪೋ, ಚಿಲ್ಪಾಚೋಲ್, ಸಿವಿಚೆ ಇವುಗಳನ್ನು ಈ ನೆಲೆಯಲ್ಲಿ ಹೆಸರಿಸಬಹುದು. ಓಕ್ಸಾಕಾ ರಾಜ್ಯದಲ್ಲಿ ಚಾಪುಲಿನ್ ಎನ್ನುವುದು ಪ್ರಸಿದ್ಧ ಕುರುಕಲು ತಿಂಡಿಯಾಗಿದೆ. ಮಿಡತೆಗಳನ್ನು ಹುರಿದು, ಮಸಾಲೆ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಡುಲ್ಸೆ ಡಿ ಲೆಚೆ ಎನ್ನುವುದು ಮೆಕ್ಸಿಕೋದ ಪ್ರಮುಖ ಸಿಹಿತಿಂಡಿಯಾಗಿದೆ. ಇದನ್ನು ಕ್ಯಾಜೆಟಾ ಅಥವಾ ಲೆಚೆ ಕ್ವೆಮಾಡಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಪ್ಯಾಲೆಟಾಸ್, ಫ್ಲೌಟಾಸ್ ಮೊದಲಾದವುಗಳು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಮೆಚ್ಚುಗೆಯಾಗಬಲ್ಲ ಆಹಾರಗಳಾಗಿವೆ. ಟ್ಯಾಕೋಸ್ ಅಲ್ ಪಾಸ್ಟರ್ ಎನ್ನುವುದು ಮೆಕ್ಸಿಕೋದ ಜನಪ್ರಿಯ ಖಾದ್ಯವಾಗಿದೆ. ಇದು ಪರಿಚಯವಾದದ್ದು ಲೆಬನಾನ್ ವಲಸಿಗರ ಮೂಲಕ. ಒಟ್ಟೋಮನ್ ಸಾಮ್ರಾಜ್ಯ ಪತನಗೊಂಡ ಬಳಿಕ ಕಲಹ ಆರಂಭವಾಯಿತು. ಈ ಸಂದರ್ಭದಲ್ಲಿ ಲೆಬನಾನ್ ಪ್ರದೇಶದಿಂದ ಪಲಾಯನಗೈದ ಜನರು ಮಾಂಸವನ್ನು ಬೇಯಿಸುವ ತಂತ್ರವನ್ನು ಕಂಡುಹಿಡಿದರು. ಅದನ್ನು ಮೆಕ್ಸಿಕೋಗೆ ಪರಿಚಯಿಸಿದರು. ಹೀಗೆ ಮೆಕ್ಸಿಕೋಗೆ ಬಂದ ಟ್ಯಾಕೋಸ್ ಇಂದು ಬಹುತೇಕರು ಇಷ್ಟಪಡುವ ಆಹಾರವಾಗಿದೆ. ಜಮೈಕಾ, ಹೊರ್ಚಾಟಾ ಮತ್ತು ಅಗ್ವಾಸ್ ಫ್ರೆಸ್ಕಾಸ್ ಇವುಗಳು ಮೆಕ್ಸಿಕೋದಲ್ಲಿ ದೊರಕುವ ಜನಪ್ರಿಯ ಪಾನೀಯಗಳು. ಇವುಗಳಲ್ಲಿ ಜಮೈಕಾ ತಯಾರಾಗುವುದು ರೋಸೆಲ್ ಹೂವುಗಳಿಂದ. ಗಾಢ ಕೆಂಪು ಬಣ್ಣದಲ್ಲಿರುವ ಈ ಪಾನೀಯ ಬಹುಜನರಿಗೆ ಅಚ್ಚುಮೆಚ್ಚು. ಹೊರ್ಚಾಟಾ ಎನ್ನುವುದು ಅಕ್ಕಿ, ಹಾಲು ಮತ್ತು ಸಕ್ಕರೆ ಇವುಗಳನ್ನು ಸೇರಿಸಿ ತಯಾರಿಸಿದ ಪಾನೀಯ. ಅಗ್ವಾಸ್ ಫ್ರೆಸ್ಕಾಸ್ ಪಾನೀಯದ ರುಚಿಯು ಹೆಚ್ಚು ಕಡಿಮೆ ಕಲ್ಲಂಗಡಿ ಹಣ್ಣಿನ ರಸದಂತೆಯೇ ಇರುತ್ತದೆ. ಅಟೋಲ್ ಎನ್ನುವ ಜನಪ್ರಿಯ ಪಾನೀಯವು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಜನರ ಬಾಯಿಗೆ ರುಚಿ ನೀಡುತ್ತದೆ. ಕೋಕಾ ಕೋಲಾ ಮೆಕ್ಸಿಕನ್ನರ ನೆಚ್ಚಿನ ಪಾನೀಯವಾಗಿದೆ. ಉಳಿದ ದೇಶದವರಿಗಿಂತ ಹೆಚ್ಚು ಇಲ್ಲಿಯ ಜನರು ಕೋಕಾ ಕೋಲಾ ಕುಡಿಯುತ್ತಾರೆ. ದಿನಕ್ಕೆ ಎರಡು ಲೀಟರ್‌ಗಳಿಗಿಂತಲೂ ಹೆಚ್ಚು ಕೋಕಾ ಕೋಲಾ ಕುಡಿಯುವವರು ಇಲ್ಲಿದ್ದಾರೆ.
ಅಪಾರ ಸಂಖ್ಯೆಯ ಡೈನೋಸಾರ್‌ಗಳನ್ನು ಕೊಲ್ಲುವ ಮೂಲಕ ಡೈನೋಸಾರ್‌ಗಳ ಸಂತತಿಯನ್ನು ನಾಶಪಡಿಸಿದ್ದು ಚಿಕ್ಸುಲಬ್ ಇಂಪ್ಯಾಕ್ಟರ್ ಹೆಸರಿನ ಧೂಮಕೇತು ಎನ್ನುವ ಅಭಿಪ್ರಾಯವನ್ನು ಒಂದು ಅಧ್ಯಯನ ಸಾಬೀತುಪಡಿಸಿದೆ. ಈ ಧೂಮಕೇತು ಪತನವಾದದ್ದು ಮೆಕ್ಸಿಕೋದಲ್ಲಿ. ಪ್ಯೂಬ್ಲೋ ಪ್ರದೇಶದಲ್ಲಿ ಈಗಲೂ ಸಹ ಕೆಲವು ಕುಳಿಗಳು ಕಂಡುಬರುತ್ತವೆ. ಧೂಮಕೇತುವಿನ ಪತನದಿಂದಲೇ ಇವುಗಳು ಸೃಷ್ಟಿಯಾಗಿವೆ ಎನ್ನುವ ಊಹೆಯಿದೆ. ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿರುವ ದೇಶ ಮೆಕ್ಸಿಕೋ. ರಾಷ್ಟ್ರದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳು ಕಂಡುಬರುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ವಿಶ್ವದ ಅತ್ಯಂತ ಚಿಕ್ಕ ಜ್ವಾಲಾಮುಖಿಯೂ ಇರುವುದು ಮೆಕ್ಸಿಕೋದಲ್ಲಿ. ಪ್ಯೂಬ್ಲಾ ಸಮೀಪದಲ್ಲಿರುವ ಕ್ಯುಕ್ಸ್ಕೊಮೇಟ್ ಜ್ವಾಲಾಮುಖಿಯ ಎತ್ತರ ಕೇವಲ 43 ಅಡಿ. ಇದು ಈಗ ನಿಷ್ಕ್ರಿಯವಾಗಿದೆ. 1910ರಲ್ಲಿ ಮೆಕ್ಸಿಕೋದಲ್ಲಿ ಕ್ರಾಂತಿ ನಡೆದಿತ್ತು. ಇದರ ಪರಿಣಾಮವನ್ನು ಈಗಿನ ಕಾಲಘಟ್ಟದಲ್ಲಿಯೂ ಕಾಣುವುದಕ್ಕೆ ಸಾಧ್ಯವಿದೆ. ಮೆಕ್ಸಿಕೋದಲ್ಲಿರುವ ಪ್ಯೂಬ್ಲಾ ಪ್ರದೇಶವು ಐತಿಹಾಸಿಕ ಮಹತ್ವವನ್ನು ಗಳಿಸಿಕೊಂಡಿದೆ. ಇಲ್ಲಿನ ಕೆಲವು ಕಟ್ಟಡಗಳಲ್ಲಿ ರಂಧ್ರಗಳಿವೆ. ಈ ರಂಧ್ರಗಳು ರೂಪುಗೊಂಡದ್ದು ಮೆಕ್ಸಿಕೋ ಕ್ರಾಂತಿಯ ಸಂದರ್ಭದಲ್ಲಿ. ಕ್ರಾಂತಿಕಾರಿಗಳು ಇದ್ದ ಕಟ್ಟಡಕ್ಕೆ, ಮನೆಗಳಿಗೆ ಶೂಟ್ ಮಾಡಿದ ಕಾರಣ ಬುಲೆಟ್‌ನಿಂದ ಉಂಟಾದ ರಂಧ್ರಗಳು ಈಗಲೂ ಉಳಿದುಕೊಂಡಿವೆ.
ಮೆಕ್ಸಿಕೋ ನಗರವು ಮೆಕ್ಸಿಕೋ ದೇಶದ ರಾಜಧಾನಿಯಾಗಿದೆ. ಈ ನಗರವು ನಿರ್ಮಾಣಗೊಂಡಿರುವುದು ಬರಿದಾಗಿರುವ ಸರೋವರದ ಮೇಲೆ. ಈ ಕಾರಣದಿಂದಾಗಿ ಇದು ನಿರಂತರ ಮುಳುಗಡೆಗೆ ಈಡಾಗುತ್ತಿದೆ. ನಗರದ ನೆಲವು ವರ್ಷಕ್ಕೆ ಹನ್ನೆರಡು ಸೆಂಟಿಮೀಟರ್‌ಗಳಷ್ಟು ಮುಳುಗುತ್ತಿದೆ. ಇದು ನಿಜಕ್ಕೂ ಮೆಕ್ಸಿಕೋ ಜನರ ಪಾಲಿಗೆ ಆತಂಕಕಾರಿ ಸಂಗತಿ. ಮೇ 5ರಂದು ನಡೆಯುವ ಸಿಂಕೊ ಡೆ ಮಯೊ ಎನ್ನುವುದು ಮೆಕ್ಸಿಕೋದ ಸ್ವಾತಂತ್ರ್ಯ ದಿನಾಚರಣೆ ಎಂದು ಬಹುತೇಕ ಜನರು ಭಾವಿಸಿದ್ದಾರೆ. ಆದರೆ ವಾಸ್ತವವಾಗಿ ಮೆಕ್ಸಿಕೋ ಸ್ವಾತಂತ್ರ್ಯ ಪಡೆದದ್ದು ಸ್ಪೇನ್ ದೇಶದಿಂದ; ಸೆಪ್ಟೆಂಬರ್ 16ರಂದು. ಮೇ 5 ಪ್ಯೂಬ್ಲಾ ಕದನ ನಡೆದ ದಿನವಾಗಿದೆ. ಈ ಕದನ ನಡೆದದ್ದು ಫ್ರೆಂಚರ ವಿರುದ್ಧ. ಇದರಲ್ಲಿ ಮೆಕ್ಸಿಕೋದ ಸೈನ್ಯವು ಫ್ರೆಂಚ್ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ಇದರಿಂದಾಗಿ ಪ್ಯೂಬ್ಲಾ ರಾಜ್ಯಕ್ಕೆ ಮಾತ್ರವೇ ಸ್ವಾತಂತ್ರ್ಯ ದೊರಕಿತ್ತು. ಸಂಪೂರ್ಣ ದೇಶ ಸ್ವತಂತ್ರಗೊಂಡದ್ದು ಸೆಪ್ಟೆಂಬರ್ 16ರಂದು. ಸ್ವಾತಂತ್ರ್ಯ ಪಡೆದದ್ದು ಸ್ಪ್ಯಾನಿಷರಿಂದ ಎನ್ನುವುದು ಸ್ಪಷ್ಟ. ಆದ್ದರಿಂದ ಈ ದಿನವೇ ಮೆಕ್ಸಿಕೋದ ಸ್ವಾತಂತ್ರ್ಯ ದಿನವಾಗಿದೆ.
ಮೆಕ್ಸಿಕೋ ಭಾಷಾ ಸಮೃದ್ಧವಾದ ದೇಶ. ಅರವತ್ತೆಂಟು ಭಾಷೆಗಳು ಮಾನ್ಯತೆ ಪಡೆದ ಭಾಷೆಗಳಾಗಿವೆ. ಇವುಗಳಲ್ಲಿ 63 ಭಾಷೆಗಳು ಸ್ಥಳೀಯ ಭಾಷೆಗಳು. ಮೆಕ್ಸಿಕೋದಲ್ಲಿ 12.75 ಕೋಟಿ ಜನರಿದ್ದಾರೆ. ಇವರಲ್ಲಿ 11 ಕೋಟಿಗೂ ಹೆಚ್ಚು ಜನರು ಸ್ಪ್ಯಾನಿಷ್ ಭಾಷೆ ಮಾತನಾಡುತ್ತಾರೆ. ಪ್ರಪಂಚದಲ್ಲಿಯೇ ಅತೀ ಹೆಚ್ಚು ಸ್ಪ್ಯಾನಿಷ್ ಮಾತನಾಡುವ ಜನರಿರುವುದು ಇಲ್ಲಿಯೇ. ಈ ದೇಶದ ಮೆಕ್ಸಿಕೋ ನಗರವು ವಿಶ್ವದ ಅತೀ ಹೆಚ್ಚು ಸ್ಪ್ಯಾನಿಷ್ ಮಾತನಾಡುವ ನಗರ ಎನಿಸಿಕೊಂಡಿದೆ. ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದರ ಕಡೆಗೆ ಮೆಕ್ಸಿಕೋ ಸರ್ಕಾರ ಮತ್ತು ಅಲ್ಲಿಯ ಭಾಷಾಪ್ರೇಮಿಗಳು ಈಗ ಗಮನ ಹರಿಸುತ್ತಿದ್ದಾರೆ.
ಫುಟ್‌ಬಾಲ್ ಕ್ರೀಡೆಯ ಹೆಸರು ಕೇಳಿದ ತಕ್ಷಣ ವಯಸ್ಸು, ಪ್ರದೇಶ ಇತ್ಯಾದಿಗಳ ಭೇದವಿಲ್ಲದೆ ಮೆಕ್ಸಿಕೋದ ಎಲ್ಲರೂ ಉತ್ಸಾಹಕ್ಕೆ ಒಳಗಾಗುತ್ತಾರೆ. ಲ್ಯಾಟಿನ್ ಅಮೇರಿಕಾದ ಹೆಚ್ಚಿನ ಜನರು ಫುಟ್‌ಬಾಲ್ ಪ್ರಿಯರು. ಮೆಕ್ಸಿಕನ್ನರೂ ಸಹ ಇದೇ ರೀತಿಯಲ್ಲಿದ್ದಾರೆ. 1970 ಮತ್ತು 1986ರಲ್ಲಿ ಮೆಕ್ಸಿಕೋ ತಂಡವು ವಿಶ್ವಕಪ್ ಫೈನಲ್ ಆಯೋಜಿಸಿದೆ. ಫ್ರೆಂಚರ ಅಧೀನದಲ್ಲಿದ್ದಾಗ ಮೆಕ್ಸಿಕನ್ನರು ಗೂಳಿ ಕಾಳಗದ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದರು. ಗೂಳಿ ಕಾಳಗದಲ್ಲಿ ಮ್ಯಾಟಡೋರ್ ಇರುತ್ತಾರೆ. ಇವರು ಗೂಳಿಯ ಜೊತೆಗೆ ಸೆಣಸಾಡುವ ವ್ಯಕ್ತಿ. ಹೀಗೆ ಸೆಣಸಾಡುವವರು ಸ್ಪೇನ್ ದೇಶದವರಾಗಿರಲಿ ಅಥವಾ ಮೆಕ್ಸಿಕೋದವರಾಗಿರಲಿ, ಸೇರಿದ ಜನರಿಗೆ ಅದು ಮುಖ್ಯವಾಗಿರಲಿಲ್ಲ. ಯಾರೇ ಇದ್ದರೂ ಹುರಿದುಂಬಿಸುತ್ತಿದ್ದರು. ಬೇಸ್‌ಬಾಲ್, ಬಾಕ್ಸಿಂಗ್ ಕ್ರೀಡೆಗಳೂ ಸಹ ಇಲ್ಲಿ ಜನಪ್ರಿಯ. 1968ರಲ್ಲಿ ಒಲಿಂಪಿಕ್ ಆತಿಥ್ಯ ವಹಿಸಿತು ಮೆಕ್ಸಿಕೋ. ಈ ಮೂಲಕ ಒಲಿಂಪಿಕ್ ಆಯೋಜಿಸಿದ ಮೊದಲ ಅಭಿವೃದ್ಧಿಶೀಲ ರಾಷ್ಟ್ರ ಎನಿಸಿಕೊಂಡಿತು. ಆದರೆ ಈ ಒಲಿಂಪಿಕ್ ಕ್ರೀಡಾಕೂಟ ಮೆಕ್ಸಿಕೋಗೆ ಕೆಟ್ಟ ಹೆಸರನ್ನು ತಂದಿತು. ವೆಚ್ಚ ನಿರೀಕ್ಷೆಗಿಂತ ವಿಪರೀತ ಹೆಚ್ಚಾಗಿತ್ತು. ಹಿಂಸಾಚಾರ ನಡೆಯಿತು. ಹಿಂಸಾರೂಪದ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕೆ ಮೆಕ್ಸಿಕೋ ಸೈನ್ಯ ಬರಬೇಕಾಯಿತು. ನೂರಾರು ಪ್ರತಿಭಟನಾಕಾರು ಪ್ರಾಣ ಕಳೆದುಕೊಂಡರು. ಮೆಕ್ಸಿಕೋದಲ್ಲಿ ಸರ್ಫಿಂಗ್ ಕ್ರೀಡೆಗೆ ಹೆಸರುವಾಸಿಯಾಗಿದೆ. ಸರ್ಫಿಂಗ್‌ನಲ್ಲಿ ಆಸಕ್ತರಾಗಿರುವ ಜನರು ಇಲ್ಲಿಯ ಪಶ್ಚಿಮ ಕರಾವಳಿಯಲ್ಲಿ ಕಂಡುಬರುತ್ತಾರೆ. ಓಕ್ಸಾಕನ್ ಕರಾವಳಿ ಪ್ರದೇಶವು ಸರ್ಫಿಂಗ್‌ಗೆ ಹೆಸರುವಾಸಿಯಾಗಿದೆ.
ಅಮೇರಿಕಾ ಖಂಡದ ಮೊದಲ ಮುದ್ರಣಾಲಯ ಸ್ಥಾಪನೆಯಾದದ್ದು ಮೆಕ್ಸಿಕೋದಲ್ಲಿ. ಇಲ್ಲಿರುವ ಕಾಸಾ ಡೆ ಲಾ ಪ್ರೈಮೆರಾ ಇಂಪ್ರೆಂಟಾ ಡಿ ಅಮೇರಿಕಾ ಎನ್ನುವುದು ಅಟ್ಲಾಂಟಿಕ್‌ನ ಈ ಭಾಗದ ಮೊದಲ ಮುದ್ರಣಾಲಯ ಎನಿಸಿಕೊಂಡಿದೆ. ಬಣ್ಣದ ದೂರದರ್ಶನವನ್ನು ಕಂಡುಹಿಡಿದದ್ದು ಮೆಕ್ಸಿಕೋದಲ್ಲಿ. ಇಲ್ಲಿಯ ಇಂಜಿನಿಯರ್ ಆಗಿದ್ದ ಗಿಲ್ಲೆರ್ಮೊ ಗೊನ್ಜಾಲೆಜ್ ಕ್ಯಾಮರೆನಾ ಅವರು 1963ರಲ್ಲಿ ದೂರದರ್ಶನಕ್ಕೆ ಬಣ್ಣ ನೀಡಿದವರು. ಇವರ ಪ್ರಯತ್ನದ ಫಲವಾಗಿ ಮಕ್ಕಳಿಗಾಗಿ ಮೀಸಲಾಗಿದ್ದ ಪ್ಯಾರೈಸೊ ಇನ್ಫಾಂಟಿಲ್ ಎನ್ನುವ ದೂರದರ್ಶನ ಕಾರ್ಯಕ್ರಮ ಮೊದಲಿಗೆ ಬಣ್ಣದಲ್ಲಿ ಪ್ರಸಾರವಾಯಿತು. ಮಧ್ಯ ಮತ್ತು ಉತ್ತರ ಅಮೇರಿಕಾದ ವಿಶ್ವವಿದ್ಯಾನಿಲಯಗಳ ಪೈಕಿ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ ಇರುವುದು ಮೆಕ್ಸಿಕೋದಲ್ಲಿ. ಇಲ್ಲಿಯ ರಾಯಲ್ ಆ್ಯಂಡ್ ಪಾಂಟಿಫಿಕಲ್ ವಿಶ್ವವಿದ್ಯಾನಿಲಯವು ಸ್ಥಾಪನೆಯಾದದ್ದು 1551ರಲ್ಲಿ. ಈಗ ಇದು ಮೆಕ್ಸಿಕೋ ವಿಶ್ವವಿದ್ಯಾನಿಲಯ ಎಂಬ ಹೊಸ ಹೆಸರನ್ನು ಗಳಿಸಿಕೊಂಡಿದೆ. ವಿಶ್ವದ ಅತೀ ದೊಡ್ಡ ಪಿರಮಿಡ್ ಇರುವುದು ಮೆಕ್ಸಿಕೋದಲ್ಲಿ. ಚೋಲುಲಾದಲ್ಲಿರುವ ಗ್ರೇಟ್ ಪಿರಮಿಡ್ ಈಜಿಪ್ಟ್ನ ಪಿರಮಿಡ್‌ಗಿಂತಲೂ ಬೃಹತ್ ಗಾತ್ರದ್ದಾಗಿದೆ. ಆದರೆ ಇದು ಹೆಚ್ಚು ಪ್ರಾಚೀನತೆಯನ್ನು ಹೊಂದಿಲ್ಲ. ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳ ಪೈಕಿ ಅತೀ ದೊಡ್ಡ ಫುಟ್‌ಬಾಲ್ ಕ್ರೀಡಾಂಗಣ ಹೊಂದಿರುವ ದೇಶ ಮೆಕ್ಸಿಕೋ. ಇಲ್ಲಿಯ ಅಜ್ಟೆಕಾ ಕ್ರೀಡಾಂಗಣವು ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ 35 ತಾಣಗಳು ಇರುವುದು ಮೆಕ್ಸಿಕೋ ದೇಶದಲ್ಲಿ. ಇವುಗಳಲ್ಲಿ ಪ್ರಾಚೀನ ಪಿರಮಿಡ್‌ಗಳಿವೆ. ವಸಾಹತುಶಾಹಿ ಕಾಲಘಟ್ಟದ ಪಟ್ಟಣಗಳಿವೆ. ನೈಸರ್ಗಿಕವಾದ ಉದ್ಯಾನವನಗಳಿವೆ. ಇವುಗಳೆಲ್ಲವೂ ಜನರನ್ನು ಆಕರ್ಷಿಸುವಲ್ಲಿ ಸಶಕ್ತವಾಗಿವೆ.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.