ಹೆಂಗ್ ಹೇಳ್ಲಿ
ಕಡಲ ತುಟಿಯಂಚಿನಿಂದ
ನಗೆ ಹೂವು ಅರಳಿದಂಗ ಹುಣ್ಣಿಮಿ ಚಂದ್ರ ಮೇಲೆದ್ದ
ಥೇಟ್…
ನಿನ್ನ ಮುಖ ಚಹರೆ ತುಂಬಿಕೊಂಡಿದ್ದ ಅಂತಾ ಹ್ಯಾಂಗ್ ಹೇಳ್ಲಿ….
ಇರುಳೆಲ್ಲ ಕನಸಲ್ಲಿ ನುಂಗಿ ನೀರ ಕುಡಿದವನು..
ಕುಡಿಹುಬ್ಬ ಬಳ್ಳಿಯಿಂದ
ಕಾಡಿಗಿಯಾಗಿ ಇಳದವನು…
ಹೊಕ್ಕುಳಲ್ಲಿ ಸಣ್ಣನ ತಣ್ಣನ
ನಡುಕ ತಂದವನು…
ಇಂದು…. ಥೇಟ್…
ಅಂಗಾತ ಬೆತ್ತಲೆ ಬಿದ್ದ
ಆಗಸದ ಅಂಚಿನಲ್ಲಿ
ಬೆಂಕಿಯುಂಡೆಯಾಗಿ ಮುಳಗಾಕತ್ತಾನ ಅಂತಾ ಹೆಂಗ್ ಹೇಳ್ಲಿ….
ಇನ್ನೇನು ಈ ವಸಂತ
ಧಿಕ್ಕಂತ ಮೈ ತುಂಬಿಕೊಂಡು
ಬಂದ್ ಕುಣಿತದ….
ಅಕಾಲಕ್ಕ ಹುಡುಗಿಯೊಬ್ಬಳು ಮೈ ನೆರದಂಗ..
ಏನು ಮಾಡೋದ್ ವಿಧಿ ಬರಹ
ನಾವ್ ಮೀರೊದಿಲ್ಲ… ಅಂತಾ ಹೆಂಗ್ ಹೇಳ್ಲಿ
.. ಮತ್ತ್…
ಆದ್ರೆ ನಮಗೆಲ್ಲಿ ಪುರಸೊತ್ತು..
ಅಂತಾ ತಿಳಿಸಿ ಅದಕ್ಕೆ ಹೆಂಗ್ ಹೇಳ್ಲಿ….
ಈ ವಸಂತ ಆ ಕಡಲು
ನಕ್ಷತ್ರ ತಾರೆಗಳ ಉರಿವ ಒಡಲು…
ಒತ್ತಟ್ಟಿಗಿರಲಿ….
ಬೆತ್ತಲೆ ಬಿದ್ದ ಹಗಲಿನಲ್ಲೇ
ಕಣ್ಣೆದುರಿನ ದಾರಿನ ಕಾಣಿಸೋದಿಲ್ಲ….
ಪ್ರೀತಿಸೋವಾಗ… ಅಂತಾ ಹೆಂಗ್ ಹೇಳ್ಲಿ…
ನಮ್ಮ ಇಷ್ಕನ ಬರ್ಕತ್ತು
ಬರೀ ನಮ್ಮ ಭೇಟಿಯಲ್ಲಿ ಇಲ್ಲಾ ಅಂತಾ ಈ ಲೋಕಕ್ಕೆ ತಿಳಿಸಿ ಹ್ಯಾಂಗ್ ಹೇಳ್ಲಿ
ಅವಳು ಆಜಾದಿನ ಹುಡುಗಿ….!
“ನಕಾಬು”ಗಳಲ್ಲಿ
ಹಿಡಿದು ಕಟ್ಟಲಾರಿರಿ ನೀವು
ಅವಳ ಕನಸುಗಳ…
ಬೇಡಿ ಕಳಚಿದ ಅವಳ ಬಾಹುಗಳ…
ಮುಡಿ ಹಿಡಿದು ಜಗ್ಗಿದರೂ
ಬಗ್ಗಿ ಬಡಿಯಲಾರಿರಿ…
ಅವಳ ಹೊಕ್ಕಳು ಹುರಿಯಲ್ಲಿ
ಬಿಡುಗಡೆಗೊಂಡ ನಿರಾಳ
ಉಸಿರುಗಳ….
ಲೋಕದ ಹುಟ್ಟಿನ ಟೀಕೆದಾರರೇ..
ಅವಳು ರುದ್ರಿ ಕಾಳ ಭದ್ರಿ..
ನಿಮ್ಮ ತಲೆಗಳ ಚೆಂಡಾಡಿದವಳು…
ಹಸಿ ಹಸಿ ರಕ್ತವನ್ನೇ ಕುಡಿದು ತೇಗಿದವಳು…
ಬಟ್ಟೆ ಕಳಚಿದಳೆಂದು ಬಿಳಿಚದಿರಿ…
ಹೊಟ್ಟೆ, ಹೊಕ್ಕಳು ಇನ್ನೇನೋ ಎವೆಯಿಕ್ಕಿ ಕದ್ದು ನೋಡಿದವರೇ..
ಇದೀಗ ಕಣ್ಣ್ ಬಿಟ್ಟೇ ನೋಡಿ..
ಅವಳು ಬಟ್ಟೆ ಕಳಚಿದರೂ
ನೀವು ಬೆತ್ತಲು….!
ಸಾಕಲ್ಲವೇ?
ಮತ್ತೊಮ್ಮೆ ಓದಿಕೊಳ್ಳಿ..
ಅವಳು ಆಜಾದಿನ ಹುಡುಗಿ…..
ಅವಳು ಕಳಚಿದ್ದು…
ಬರೀ ಬಟ್ಟೆಯಲ್ಲ….ನಿಮ್ಮ….
ಧರ್ಮದ “ಅಂಕುಶ”
ಪುರುಷತ್ವದ “ಅಹಂ ”
ಶತಮಾನಗಳ “ಬೇಡಿ ”
ಇನ್ನು…. ಇಷ್ಟ ಅಂದ್ರ್ ಇಷ್ಟೇ
ಬೆತ್ತಲಾದವನನ್ನು ಬೆತ್ತಲಾಗಿಯೇ
ಹೆತ್ತವಳ ಮುಂದೆ ನಿಮ್ಮದೆಂತ..
ಪೌರುಷ.. ಅಂತೀನಿ.
ದೇವರಾಜ್ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

