ಮೊದಲನೇ ದಿನ ಕೆಲಸ ಮುಗಿಸಿದ ಮಣಿ ಸಂಪೂರ್ಣವಾಗಿ ಬೆವರಿನಿಂದ ಒದ್ದೆಯಾಗಿಹೋಗಿದ್ದ. ನಂತರ ಪಂಜರದ ಮೂಲಕ ನೆಲದ ಮೇಲಕ್ಕೆ ಬರುವಷ್ಟರಲ್ಲಿ ಸುಸ್ತಾದರೂ ಹೊಸ ಜಗತ್ತಿಗೆ ಬಂದಂತೆ ಆಹ್ಲಾದಕರವಾಗಿ ಕಾಣುತ್ತಿತ್ತು. ಈ ಗಣಿ ಕೆಲಸವನ್ನು ಖಂಡಿತ ಮಾಡಬಾರದು. ಓದು ಮುಂದುವರಿಸಿ ಡಿಗ್ರಿ ಮುಗಿಸಿ ಬೇರೆ ಯಾವುದಾದರು ಸರ್ಕಾರಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದುಕೊಳ್ಳುತ್ತ ಸೈಕಲ್ ತುಳಿಯುತ್ತಾ ಮನೆ ಕಡೆಗೆ ಹೊರಟ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ
ಅಧ್ಯಾಯ – 6
ಮಣಿ ಬೆಳಿಗ್ಗೆ ಎದ್ದು ಅವರಪ್ಪನಂತೆ ಕೆಲಸಕ್ಕೆ ತಯಾರಾಗುತ್ತಿದ್ದಾನೆ. ಕನಕ ಮಣಿಯನ್ನು ನೋಡುತ್ತಿದ್ದಂತೆ ಅವಳ ಗಂಡ ಸೆಲ್ವಮ್, ಮಣಿ ಮುಖದಲ್ಲಿ ಕಾಣಿಸಿಕೊಂಡ. ಕನಕ ಕಣ್ಣು ಮುಚ್ಚಿಕೊಂಡು, “ನನ್ನ ಮಗನನ್ನು ಸುರಕ್ಷಿತವಾಗಿ ನೋಡಿಕೊಳ್ಳಮ್ಮ ತಾಯಿ ಉದ್ದಂಡಮ್ಮಾಳ್” ಎಂದು ಎಲ್ಲರಿಗೂ ಕೇಳಿಸುವಂತೆಯೇ ಬೇಡಿಕೊಂಡಳು. ಮಣಿ, “ಅಮ್ಮ ಬೇಗ ಏಳು ಗಂಟೆ ಒಳಗೆ ಗಣಿ ಪಂಜರದ ಮುಂದೆ ಇರಬೇಕು” ಎಂದ, ಥೇಟ್ ಅವನ ತಂದೆಯ ರೀತಿಯಲ್ಲೇ. ಅಲಮೇಲು, “ಮಣಿ ನಾವು ಊರಿಗೆ ಹೋಗ್ತೀವಪ್ಪ. ಮಾವ ಒಬ್ಬರೇ ಏನು ಮಾಡಿಕೊಂಡರೊ ಏನೋ” ಎಂದಳು. ಮಣಿ, “ಅತ್ತೆ ನಾಲ್ಕೈದು ದಿನ ಇದ್ದೋಗಿ ಸಂಬಳ ಬರ್ಲಿ. ಬರೀ ಕೈಯಲ್ಲಿ ಹೇಗೋಗ್ತೀರ?” ಎಂದ. ಅಲಮೇಲು, “ಇರ್ಲಿ ಬಿಡಪ್ಪ. ಈಗತಾನೇ ನೀನು ಕೆಲಸಕ್ಕೆ ಸೇರಿದ್ದೀಯ” ಎನ್ನುತ್ತಿದ್ದಂತೆ, ಕನಕ, “ನೀನು ಸುಮ್ಮನೇ ಇರು ಅಲಮೇಲು. ಸುಶೀಲಾನ ಬರಿ ಕೈಯಲ್ಲಿ ಕಳಿಸುವುದಕ್ಕಾಗುತ್ತ? ಊರಿನಲ್ಲಿ ಜನ ಏನು ಅಂದುಕೊಳ್ತಾರೆ” ಎಂದಳು.
ಸುಶೀಲ, ಮಣಿಗೆ ಗ್ಲಾಸ್‌ನಲ್ಲಿ ಕುಡಿಯಲು ನೀರು ತಂದುಕೊಟ್ಟು ಮಣಿ ಅವಳ ಮುಖ ನೋಡಿದ. ಅವಳ ಮುಖದಲ್ಲಿ ಸೆಲ್ವಿ ಕಾಣಿಸಿಕೊಂಡು “ಏ ತಿರುಡಾ ಉಷಾರ್” ಎಂದಳು. ಮಣಿ ನೀರು ಕುಡಿದು ಗ್ಲಾಸನ್ನ ಕೆಳಗಿಟ್ಟು ಬಾಗಿಲಲ್ಲಿದ್ದ ಬೂಟುಗಳನ್ನು ತೆಗೆದುಕೊಂಡು ಮನೆ ಹೊರಕ್ಕೋಗಿ ಕಲ್ಲಿನ ಮೇಲೆ ಕುಳಿತುಕೊಂಡು ಹಾಕಿಕೊಳ್ಳುತ್ತಾ, “ಅಮ್ಮ ನಾನು ಬರ್ತೀನಿ. ಅತ್ತೆ ನೀವು ಈ ದಿನ ಹೋಗಬೇಡಿ” ಎನ್ನುತ್ತ ಅವರಪ್ಪನ ಸೈಕಲ್ ಹತ್ತಿಕೊಂಡು ಹೊರಟುಹೋದ. ಅಲಮೇಲು, “ಎಲ್ಲಾ ನಮ್ಮ ಅಣ್ಣನ ತರಾನೇ ಕಾಣಿಸ್ತಾನೆ ಮಣಿ” ಎಂದು ಭಾವುಕಳಾಗಿ ಕಣ್ಣು ಒರೆಸಿಕೊಂಡಳು.
***
ಮಣಿ ತನಗೆ ಬಂದಿದ್ದ ನೇಮಕ ಪತ್ರವನ್ನು ತೆಗೆದುಕೊಂಡು ಹೋಗಿ ಗಣಿ ಆಡಳಿತ ಕಛೇರಿಯಲ್ಲಿ ತೋರಿಸಿ, ತಾನು ಕೆಲಸ ಮಾಡುವ ಗಣಿಗೆ ಹೋಗಿ ಅಲ್ಲಿ ತನ್ನ ಹೆಸರು ನೋಂದಾಯಿಸಿ, ಬ್ಯಾಟರಿ, ಹೆಲ್ಮೆಟ್, ಬೆಲ್ಟ್ ಮತ್ತು ಬೂಟುಗಳನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿದ್ದನು. ನಂತರ ಯೂನಿಫಾರ್ಮ್ ಕೊಡುವ ಕಛೇರಿಗೆ ಹೋಗಿ ಯೂನಿಫಾರ್ಮ್ ಬಟ್ಟೆಗಳನ್ನು ತೆಗೆದುಕೊಂಡು ಬಂದಿದ್ದನು. ಮನೆ ಬಿಡುವ ಮುಂಚೆ ಅವನ ತಂದೆಯ ಫೋಟೋ ಮುಂದೆ ನಿಂತುಕೊಂಡು ಕೈಮುಗಿದು ನಂತರ ತಾಯಿ ಮತ್ತು ಅತ್ತೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡು ಸೈಕಲ್ ಹತ್ತಿ ಕೆಲಸಕ್ಕೆ ಹೊರಟಿದ್ದನು. ಮಣಿಯ ನಡವಳಿಕೆಯನ್ನು ನೋಡಿದ ಕನಕ ಮತ್ತು ಅಲಮೇಲು ಕಣ್ಣುಗಳು ತುಂಬಿ ಬಂದಿದ್ದವು. ಕನಕ, ಸೆಲ್ವಮ್ ಕೆಲಸಕ್ಕೆ ಹೋಗುವಾಗ ಹಿಂದೆ ಬಂದು ನಿಂತುಕೊಂಡು ನೋಡುವಂತೆ ಮಣಿ ಹೋಗುವಾಗ ನೋಡಲಿಲ್ಲ. ತಾನು ವಿಧವೆ ಎನ್ನುವ ವಿಷಯ ಅವಳ ಮನಸ್ಸು ಮತ್ತು ದೇಹದ ತುಂಬಾ ತುಂಬಿಕೊಂಡಿತ್ತು.
ಮಣಿ ಸೈಕಲ್ ತುಳಿಯುತ್ತಾ ಚಾಂಪಿಯನ್ ಗಣಿ ಅಂದರೆ ಅವನ ತಂದೆ ಕೆಲಸ ಮಾಡುತ್ತಿದ್ದ ಗಣಿಯ ಹತ್ತಿರಕ್ಕೆ ಹೋಗಿ ಸೆಕ್ಯೂರಿಟಿ ಮುಂದೆ ನಿಂತುಕೊಂಡು, “ವಣಕ್ಕಂ ಸರ್” ಎಂದ. ಸೆಕ್ಯೂರಿಟಿ ಮಣಿ ಹಾಕಿಕೊಂಡಿರುವ ಯೂನಿಫಾರ್ಮ್, ಬೆಲ್ಟ್, ಬೂಟು, ಬ್ಯಾಟರಿಯನ್ನು ನೋಡಿ “ಎಲ್ಲಾ ಸರಿಯಾಗಿದೆ. ನೀನು ಸೆಲ್ವಮ್ ಮಗನಾ?” ಎಂದಿದ್ದಕ್ಕೆ “ಹೌದು ಸರ್” ಎಂದ. “ಆಯಿತು ಒಳ್ಳೆಯದಾಗಲಿ. ಚೆನ್ನಾಗಿ ಕೆಲಸ ಮಾಡಿ ನಿಮ್ಮ ತಂದೆ ತರಹ ಒಳ್ಳೆ ಹೆಸರು ತೆಗೆದುಕೊಳ್ಳಬೇಕು” ಎಂದ. ಮಣಿ ಬಹಳ ವಿನಯವಾಗಿ ಆತನಿಗೆ ವಂದಿಸಿ ನೋಂದಣಿ ಪುಸ್ತಕದಲ್ಲಿ ತನ್ನ ಸಹಿ ಹಾಕಿ ಸೈಕಲ್ ಸ್ಟ್ಯಾಂಡ್ ಕಡೆಗೆ ಸೈಕಲ್‌ಅನ್ನು ತಳ್ಳಿಕೊಂಡು ಹೋಗಿ ನಿಲ್ಲಿಸಿ ಗಣಿ ಪಂಜರದ ಹತ್ತಿರಕ್ಕೆ ಬಂದು ಕಾರ್ಮಿಕರ ಜೊತೆಗೆ ಸಾಲಿನಲ್ಲಿ ನಿಂತುಕೊಂಡ.
ಅಂಡರ್‌ಗ್ರೌಂಡ್ ಕಾರ್ಮಿಕರು ಸಾಲಾಗಿ ಬಂದು ನಿಂತುಕೊಳ್ಳುತ್ತಿದ್ದರು. ಬಂದವರಲ್ಲಿ ಕೆಲವರು “ಯಾರು? ಸೆಲ್ವಮ್ ಮಗನಾ?” ಎನ್ನುತ್ತಾ ಕೈಕುಲಿಕಿ ಒಳ್ಳೇದಾಗಲಿ ಎಂದು ಅಭಿನಂದಿಸಿದರು. ಮಣಿಯನ್ನು ಮೊದಲಿಗೆ ಅಂಡರ್‌ಗ್ರೌಂಡ್ ಕೆಲಸಕ್ಕೆ ಹಾಕಿದ್ದರು. ಮಣಿ ಪಂಜರದ ಒಳಗೆ ಕಾರ್ಮಿಕರ ಜೊತೆಗೆ ಸೇರಿಕೊಂಡ. ಪಕ್ಕದಲ್ಲಿ ನಿಂತಿದ್ದಾತ “ಎಷ್ಟು ಓದಿದ್ದೀಯಾ?” ಎಂದಿದ್ದಕ್ಕೆ, ಮಣಿ, “ಸೆಕೆಂಡ್ ಪಿಯುಸಿ ಫೇಲ್” ಎಂದ. “ಹೌದಾ! ಸ್ವಲ್ಪ ದಿನ ಆದಮೇಲೆ ಸರ್ಫೇಸ್‌ನಲ್ಲಿ ಯಾವುದಾದರೂ ಕಚೇರಿಯಲ್ಲಿ ಕೆಲಸ ಹಾಕಿಕೊಡಿ ಅಂತ ಕೇಳಿಕೊ, ಕೊಡ್ತಾರೆ. ನಾವು ಹೇಗೊ ಏನೂ ಓದಿಲ್ಲ. ಅಂಡರ್‌ಗ್ರೌಂಡ್ ಕೆಲಸ ಮಾಡ್ತಾ ಇದ್ದೀವಿ. ನೀನು ಪಿಯುಸಿವರೆಗೂ ಓದಿದ್ದೀಯ” ಎಂದ. ಇನ್ನೊಬ್ಬ, “ಅಯ್ಯೊ ಎಷ್ಟು ಜನ ಓದಿದವರು ನಮ್ಮ ಜೊತೆಯಲ್ಲಿ ಅಂಡರ್‌ಗ್ರೌಂಡ್ ಕೆಲಸ ಮಾಡ್ತಾ ಇಲ್ಲ” ಎಂದ. ಅವರ ಮಾತುಗಳನ್ನು ಕೇಳಿದ ಮಣಿಗೆ ಸ್ವಲ್ಪ ಮೇಲರಿಮೆಯ ಜೊತೆಗೆ ಕೀಳರಿಮೆಯೂ ಕಾಣಿಸಿಕೊಂಡಿತು.
ಉಕ್ಕಿನ ಪಂಜರ ಮೇಲಿಂದ ಕೆಳಕ್ಕೆ ಇಳಿದುಹೋಗುವ ಸಮಯದಲ್ಲಿ ಪಾತಾಳಕ್ಕೆ ಇಳಿದುಹೋಗುವಂತಹ ಅನುಭವವಾಯಿತು. ಅಲ್ಲಲ್ಲಿ ರೈಲು ನಿಲ್ದಾಣಗಳಲ್ಲಿನ ಬೆಳಕು ಕಾಣಿಸುವುದರ ಜೊತೆಗೆ ತಣ್ಣನೇ ಗಾಳಿ ಬೀಸಿ ಬರುತ್ತಿತ್ತು. ಪಕ್ಕದಲ್ಲಿದ್ದಾತ “ಇದಕ್ಕೆ ಮುಂಚೆ ಯಾವಾಗಲಾದರೂ ಗಣಿ ಒಳಕ್ಕೆ ಇಳಿದಿದ್ದೀಯಾ?” ಎಂದ. ಮಣಿ, “ಇಲ್ಲ ಸರ್ ಇದೇ ಮೊದಲು” ಎಂದ. ಪಕ್ಕದಲ್ಲಿದ್ದಾತ “ಕಿವಿಗಳಿಗೆ ಹತ್ತಿ ಇಟ್ಟುಕೊಳ್ಳಬೇಕಾಗಿತ್ತು. ಬರುಬರುತ್ತಾ ಎಲ್ಲಾ ಸರಿಯೋಗುತ್ತೆ ಬಿಡು. ತಣ್ಣಗೆ ಗಾಳಿ ಬರ್ತಾ ಇದೆಯಲ್ಲ. ಅದು ಮೇಲಿಂದ ಕಂಪ್ರೆಸ್ಸರ್‌ಗಳ ಮೂಲಕ ಗಣಿಗಳ ಒಳಕ್ಕೆ ದೂಡುವ ಗಾಳಿ. ಇಲ್ಲ ಅಂದರೆ ನಾವು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಆಳಹೋದಷ್ಟು ಉಷ್ಣಾಂಶ ಜಾಸ್ತಿಯಾಗುತ್ತಾ ಹೋಗುತ್ತದೆ. ಶಿಲೆಗಳನ್ನು ಬರಿಕೈಯಲ್ಲಿ ಮುಟ್ಟುವುದಕ್ಕೆ ಆಗುವುದಿಲ್ಲ. ಮೂರು ಕಿ.ಮೀ.ಗಳ ಆಳದವರೆಗೂ ತಣ್ಣನೆ ಗಾಳಿ ಬರುತ್ತದೆ” ಎಂದ. ಎರಡು ಪಂಜರಗಳನ್ನು ಬದಲಾಯಿಸಿದ ಮೇಲೆ ಮೂರನೇ ಪಂಜರ ನಿಲ್ದಾಣದಲ್ಲಿ ನಿಂತುಕೊಂಡು ಜೊತೆಯಲ್ಲಿದ್ದವರು ಮಣಿಯನ್ನು ಒಂದು ಸುರಂಗದ ಒಳಕ್ಕೆ ಕರೆದುಕೊಂಡು ಹೊರಟರು.

ಆ ಸುರಂಗ ಸುಮಾರು 5 ರಿಂದ 6 ಅಡಿಗಳ ಅಗಲ ಮತ್ತು 6 ರಿಂದ 7 ಅಡಿಗಳ ಎತ್ತರವಿದೆ. ಎಲ್ಲೆಲ್ಲೂ ಕಲ್ಲು-ಮಣ್ಣು ಬಿದ್ದಿದೆ. ನೆಲದ ಮೇಲಿಂದ ವಿದ್ಯುತ್ ತಂತಿಗಳನ್ನು ಎಳೆದು ತರಲಾಗಿದ್ದು ಅಲ್ಲಲ್ಲಿ ವಿದ್ಯುತ್ ಬಲ್ಬ್‌ಗಳನ್ನು ಹಾಕಲಾಗಿದೆ. ಸುರಂಗ ತೋಡುತ್ತಿರುವ ಕೊನೆ ಹಂತದ ಸ್ಥಳವನ್ನು ತಲುಪಲಾಯಿತು. ಆಗಲೇ ಮಣಿಗೆ ಉಸಿರಾಡಲಾಗದಷ್ಟು ತೊಂದರೆಯಾಗಿ ಸುರಂಗದ ತುಂಬಾ ಸಾಕಷ್ಟು ಧೂಳು ಮತ್ತು ಅಲ್ಲಲ್ಲಿ ನೀರೂ ಜಿನುಗುತ್ತಿತ್ತು. ಆ ಸುರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಆಗಲೇ ಅಲ್ಲಿಗೆ ತಲುಪಿದ್ದರು. ಮೇಸ್ತ್ರಿ ಅಲ್ಲಿದ್ದ ಕಾರ್ಮಿಕರನ್ನು “ನೀವು ಕೆಲಸ ಶುರುಮಾಡಿ. ನಾನು ಇವರಿಗೆ ಒಂದಷ್ಟು ಸೂಚನೆಗಳನ್ನು ಕೊಡುವುದಿದೆ” ಎಂದರು.
ಮೇಸ್ತ್ರಿ, ಮಣಿಯನ್ನು ಸ್ವಲ್ಪ ದೂರಕ್ಕೆ ಕರೆದುಕೊಂಡು ಬಂದು “ನಿನ್ನ ಹೆಸರು ಮಣಿನಾ?” ಎಂದಿದ್ದೆ ಮಣಿ, “ಹೌದು! ಸರ್. ಆದರೆ ದಾಖಲೆಗಳಲ್ಲಿ ಸುಬ್ರಮಣಿ ಅಂತಿದೆ” ಎಂದ. ಮೇಸ್ತ್ರಿ, “ಆಯಿತು. ನೋಡು ಮಣಿ, ಗಣಿ ಕೆಲಸ ತುಂಬಾ ಕಷ್ಟ. ಜೊತೆಗೆ ತುಂಬಾ ಹುಷಾರಾಗಿರಬೇಕು. ಹೆಲ್ಮೆಟ್ ಯಾವಾಗಲೂ ಹಾಕಿಕೊಂಡೆ ಇರಬೇಕು. ತೆಗೆಯಬಾರದು. ತೆಗೆದರೆ ತಲೆಗೆ ಪೆಟ್ಟು ಬೀಳಬಹುದು. ಮೇಲೆ ಕೆಳಗೆ ನೋಡಿಕೊಂಡು ನಡೆಯಬೇಕು. ಕೆಲಸ ಮಾಡುವಾಗ ಧೂಳು ಜಾಸ್ತಿ ಇರುತ್ತೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡರೆ ಉಸಿರಾಡುವುದು ಕಷ್ಟ. ಕಟ್ಟಿಕೊಳ್ಳಲಿಲ್ಲ ಅಂದರೂ ಕಷ್ಟ. ಗಣಿಗಳಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಬೆಳಿಗ್ಗೆ ಚೆನ್ನಾಗಿ ತಿಂದು ಬುತ್ತಿಯನ್ನು ಕಟ್ಟಿಕೊಂಡು ಬರಬೇಕು. ಮಧ್ಯಾಹ್ನ ಇಲ್ಲಿಯೇ ತಿನ್ನಬಹುದು. ಕೆಲಸ ಮಾಡುವಾಗ ತುಂಬಾ ಸುಸ್ತಾಗಿಬಿಡುತ್ತೆ” ಎಂದ.
ಮತ್ತೆ “ನಿನಗೆ ಏನಾದರು ಸಂದೇಹ ಬಂದರೆ ನನ್ನನ್ನ ಕೇಳಬಹುದು. ಇಲ್ಲ ಅಂದರೆ ಇವರೆಲ್ಲ ಇದ್ದಾರೆ ಅವರನ್ನು ಕೇಳಬಹುದು. ಆಮೇಲೆ ಇನ್ನೊಂದು ವಿಷಯ ಕೆಲವು ದಿನಗಳು ಯಾರಿಗೂ ಹೇಳದೆ ಆಕಡೆ ಈಕಡೆ ಸುರಂಗಗಳಲ್ಲಿ ಹೋಗಿಬಿಡಬೇಡ. ತಪ್ಪಿಸಿಕೊಂಡು ಬಿಡ್ತೀಯ. ಕೆಲವು ದಿನಗಳಲ್ಲಿ ನಿನಗೆ ಗಣಿಗಳಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ತರಬೇತಿ ಕೊಡ್ತಾರೆ. ಆಗ ನಿನಗೆ ಎಲ್ಲಾ ಗೊತ್ತಾಗುತ್ತದೆ. ಈಗ ಹೋಗಿ ಕೆಲಸ ಮಾಡು” ಎಂದರು ಮೇಸ್ತ್ರಿ. ಮಣಿ ಎಲ್ಲವನ್ನೂ ಕೇಳಿದ ಮೇಲೆ ಕೆಲಸ ಮಾಡುತ್ತಿರುವವರ ಜೊತೆಗೆ ಸೇರಿಕೊಂಡ. ಒಬ್ಬ ಕಾರ್ಮಿಕ ಮಣಿ ಕೈಗೆ ಸಲಿಕೆ ಕೊಟ್ಟು “ಈ ಮಣ್ಣನ್ನೆಲ್ಲ ಎಳೆದು ಈಕಡೆ ಹಾಕು” ಎಂದ. ಕೈಗೆ ಸಲಿಕೆ ತೆಗೆದುಕೊಂಡ ಮಣಿ ಮಣ್ಣನ್ನು ಬಾಚತೊಡಗಿದ. ಮಣಿಗೆ ತನ್ನ ಬದುಕನ್ನೇ ಮಣ್ಣಿನಲ್ಲಿ ಬಾಚುತ್ತಿರುವಂತೆ ಕಾಣಿಸಿತು.
ಮೊದಲನೇ ದಿನ ಕೆಲಸ ಮುಗಿಸಿದ ಮಣಿ ಸಂಪೂರ್ಣವಾಗಿ ಬೆವರಿನಿಂದ ಒದ್ದೆಯಾಗಿಹೋಗಿದ್ದ. ನಂತರ ಪಂಜರದ ಮೂಲಕ ನೆಲದ ಮೇಲಕ್ಕೆ ಬರುವಷ್ಟರಲ್ಲಿ ಸುಸ್ತಾದರೂ ಹೊಸ ಜಗತ್ತಿಗೆ ಬಂದಂತೆ ಆಹ್ಲಾದಕರವಾಗಿ ಕಾಣುತ್ತಿತ್ತು. ಈ ಗಣಿ ಕೆಲಸವನ್ನು ಖಂಡಿತ ಮಾಡಬಾರದು. ಓದು ಮುಂದುವರಿಸಿ ಡಿಗ್ರಿ ಮುಗಿಸಿ ಬೇರೆ ಯಾವುದಾದರು ಸರ್ಕಾರಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದುಕೊಳ್ಳುತ್ತ ಸೈಕಲ್ ತುಳಿಯುತ್ತಾ ಮನೆ ಕಡೆಗೆ ಹೊರಟ. ಮನೆಗೆ ಬಂದಿದ್ದೆ ಬಟ್ಟೆ ಬಿಚ್ಚಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಮನೆ ಹೊರಗೆ ಕಲ್ಲುಬಂಡೆ ಮೇಲೆ ಕುಳಿತುಕೊಂಡು ಅವನ ತಾಯಿ ಮಾಡಿಕೊಟ್ಟ ಟೀ ಕುಡಿದ. ಕನಕ, “ಮಣಿ, ಮೊದಲನೇ ದಿನ ಕೆಲಸ ಹೇಗಿತ್ತಪ್ಪ?” ಎಂದಳು. ಮಣಿಗೆ ಏನು ಹೇಳಬೇಕೊ ಅರ್ಥವಾಗದೆ “ಚೆನ್ನಾಗಿತ್ತಮ್ಮ. ಆದರೆ ಗಣಿ ಒಳಗೆ ಕೆಲಸ ಮಾಡುವುದು ತುಂಬಾ ಕಷ್ಟಾನಮ್ಮ. ಪಾಪ! ನಮ್ಮಪ್ಪ ಅಷ್ಟು ವರ್ಷ ಅದು ಹೇಗೆ ಕೆಲಸ ಮಾಡ್ತಾ ಇದ್ದರೋ ಏನೋ?” ಎಂದ. ಕನಕ ಏನೂ ಹೇಳಲಿಲ್ಲ. ಮಣಿ ಮತ್ತೆ “ನಮ್ಮಪ್ಪನ್ನ ಎಲ್ಲರೂ ತುಂಬಾ ಒಳ್ಳೆಯವರು ನಿಮ್ಮಪ್ಪ ಅಂದರಮ್ಮ” ಎಂದ. ಆ ಮಾತು ಕೇಳಿದ ಕನಕ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡಿತು. ಅಲಮೇಲು ಪಕ್ಕದಲ್ಲೆ ಕುಳಿತಿದ್ದಳು.

ಮಣಿ ಕೆಲವು ಕ್ಷಣಗಳಾದ ಮೇಲೆ ಮತ್ತೆ, “ಅಮ್ಮ ನಾನು ಬೇಗನೆ ಈ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರಿಕೊಳ್ಳಬೇಕು” ಎಂದ. ಕನಕ, “ಹೌದು! ನೀನು ಈ ಕೆಲಸ ಮಾಡಿಕೊಂಡೆ ಚೆನ್ನಾಗಿ ಓದಿ ಬೇರೆ ಕೆಲಸಕ್ಕೆ ಸೇರಿಕೊಳ್ಳುವುದು ಒಳ್ಳೇದಪ್ಪ” ಎಂದಳು. ಅಷ್ಟರಲ್ಲಿ ಗೋವಿಂದ ಬಂದು, “ಮಾಪಿಳ್ಳೆ, ಹೇಗಿತ್ತು ಕೆಲಸ?” ಎಂದ. ಮಣಿ, “ಚೆನ್ನಾಗಿತ್ತು ಮಾವ” ಎಂದು ನಕ್ಕ. ಗೋವಿಂದ, “ಮಾಪಿಳ್ಳೆ. ನಾನೂ ಈಹೊತ್ತು ಕೆಲಸಕ್ಕೆ ಹೋಗಿಬಂದೆ. ನಿನ್ನೇನೆ ನನಗೆ ಪೆರುಮಾಳ್ ಸರ್ ಕಚೇರಿಗೆ ಕರೆದು ಕೆಲಸದ ಪತ್ರ ಕೊಟ್ಟರು. ಈಹೊತ್ತು ಮೊದಲನೆ ಶಿಫ್ಟ್ಗೋಗಿ ಬಂದೆ” ಎಂದ. ಮಣಿ, “ಹೌದಾ! ಮಾವ ಒಳ್ಳೆದಾಯಿತು. ನಿನ್ನ ಕಷ್ಟಗಳೆಲ್ಲ ಈ ಹೊತ್ತಿಗೆ ಮುಗಿಯಿತು ನೋಡು” ಎಂದು ಕೈಕುಲುಕಿದ. ಮನೆ ಒಳಗಿದ್ದ ಕನಕ ಹೊರಕ್ಕೆ ಓಡಿ ಬಂದು “ಗೋವಿಂದಣ್ಣ, ಹೋಗ್ಲಿ ಬಿಡಣ್ಣ. ದೇವರು ಒಳ್ಳೇದು ಮಾಡಿದ. ಪಾಪ! ನಿಮ್ಮ ಹೆಂಡತಿ ಧರಣಿ ಮೂರುನಾಲ್ಕು ವರ್ಷದಿಂದ ಬಹಳ ಕಷ್ಟ ಪಟ್ಟುಬಿಟ್ಟಳು” ಎಂದಳು. ಮಣಿ, “ಅಮ್ಮ ಇನ್ನೊಂದು ಸಲ ಟೀ ಮಾಡಮ್ಮ” ಎನ್ನುತ್ತಾ, ಮಣಿ ತನ್ನ ಜೇಬಿನಿಂದ ಒಂದು ಸಿಗರೇಟ್ ತೆಗೆದು ಗೋವಿಂದನಿಗೆ ರಹಸ್ಯವಾಗಿ ಕೊಟ್ಟ.
(ಹಿಂದಿನ ಕಂತು: ಮೊಗ್ಗಿನ ಜಡೆಯ ಹುಡುಗಿಯರು…)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

