Advertisement
ಅರ್ಥವಾಗದ ವಯಸ್ಸು ಏನೆಲ್ಲ ಮಾಡಿಸುತ್ತದೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಅರ್ಥವಾಗದ ವಯಸ್ಸು ಏನೆಲ್ಲ ಮಾಡಿಸುತ್ತದೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಅಯ್ಯಪ್ಪ ಮತ್ತೆ ಹೊರಕ್ಕೆ ಬಂದು ಕಲ್ಲು ಬಂಡೆಯ ಮೇಲೆ ಕುಳಿತುಕೊಂಡು ಅಂಗೈಯಿಂದ ಜೋರಾಗಿ ಕಲ್ಲು ಬಂಡೆಗೆ ಹೊಡೆದು ಕೈಕೈ ಹಿಸುಕಿಕೊಂಡರು. ರಾತ್ರಿ ಊಟದ ಸಮಯವಾಗಿ ವಿಜಯ ಊಟದ ತಟ್ಟೆ ಮತ್ತು ನೀರು ಅಯ್ಯಪ್ಪನಿಗೆ ತಂದುಕೊಟ್ಟು ಬಾಗಿಲು ಮುಂದೆ ಕೆಳಗಡೆ ಕುಳಿತುಕೊಂಡಳು. ಅಯ್ಯಪ್ಪ ಊಟ ಮಾಡುತ್ತ, “ಈ ಹುಡುಗಿ ಕಾಲೇಜ್ ಓದು ಮುಗಿದಂತೆಯೇ. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಇದುವರೆಗೂ ಯಾರೂ ಓದಿರಲಿಲ್ಲ. ಈ ಹುಡುಗಿಯನ್ನಾದರೂ ಚೆನ್ನಾಗಿ ಓದಿಸೋಣ ಅಂದುಕೊಂಡಿದ್ದೆ” ಎಂದರು. ಸುಮಾರು ಹೊತ್ತು ಅವರಿಬ್ಬರೂ ಅಲ್ಲೇ ಕತ್ತಲಲ್ಲಿ ಕುಳಿತಿದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

ಅಧ್ಯಾಯ – 7

ಮನೆಯಲ್ಲಿ ಸೆಲ್ವಿಯ ತಾಯಿ ವಿಜಯ ಮಾತ್ರ ಇದ್ದರು. ವಿಜಯ, ಸೆಲ್ವಿ ಮುಖ ಬಾಡಿರುವುದು ಮತ್ತು ಗೆಳತಿಯರು ಜೊತೆಗೆ ಬಂದಿರುವುದನ್ನು ನೋಡಿ “ಏನೇ ಏನಾಯಿತು? ಮು…? ಅದಕ್ಕೆ ಇಬ್ಬರು ಗೆಳತಿಯರನ್ನು ಜೊತೆಗೆ ಕರ್ಕೊಂಡು ಬರಬೇಕಾ? ಈ ಕಾಲದ ಹುಡುಗಿಯರಿಗೆ ಎಂಥಹ ಭಯಾನಪ್ಪ?” ಎಂದಳು. ಮೂವರೂ ಮುಖಗಳನ್ನ ಕೆಳಕ್ಕೆ ಹಾಕಿಕೊಂಡು ಅಳತೊಡಗಿದರು. ವಿಜಯ, “ಇದೇನೇ ಮೂವರು ಒಟ್ಟಾಗಿ ಹೋಲ್‌ಸೇಲಾಗಿ ಅಳ್ತಾ ಇದ್ದೀರಾ? ಯಾರಾದರು ಹುಡುಗರು ಏನಾದರೂ ಮಾಡಿದರಾ?” ಕೇಳಿದಳು. ಕೊನೆಗೆ ಸೆಲ್ವಿ “ಅಮ್ಮ ನನಗೆ ಎರಡು ತಿಂಗಳಾಗಿದೆ” ಎಂದಳು. ವಿಜಯ, “ಏನೂ ಅಂದಳು?” ಸೆಲ್ವಿ ಮತ್ತೆ ಅದೇ ಮಾತು ಹೇಳಿದಳು. ಆ ಮಾತು ಕೇಳಿದ ವಿಜಯ ಕಣ್ಣುಗಳು ಮಬ್ಬುಕಟ್ಟಿ ತಲೆ ಸುತ್ತಿ ಕೆಳಕ್ಕೆ ಕುಸಿದು ಕುಳಿತುಬಿಟ್ಟಳು. ಅಷ್ಟರಲ್ಲಿ ಅಯ್ಯಪ್ಪ ಬಾಗಿಲಿನಿಂದ ಇಣಿಕಿನೋಡಿ ಏನೋ ಹೆಣ್ಣುಮಕ್ಕಳ ಸಮಾಚಾರ ಎಂದುಕೊಂಡು, “ವಿಜಯ ನನಗೊಂದು ಲೋಟಾ ಟೀ ಕೊಡು” ಎಂದ. ವಿಜಯ ತಡವರಿಸಿಕೊಂಡು ಟೀ ಮಾಡತೊಡಗಿದಳು. ಇಬ್ಬರು ಹೆಣ್ಣಮಕ್ಕಳು ಹೊರಕ್ಕೆ ಬಂದು “ನಾವು ಬರ್ತೀವಿ ಅಂಕಲ್” ಎಂದು ಮುಖಗಳನ್ನು ತೋರಿಸದೆ ಹೊರಟುಹೋದರು. ವಿಜಯ, ಅಯ್ಯಪ್ಪನಿಗೆ ಟೀ ತಂದುಕೊಟ್ಟು ಮತ್ತೆ ಮನೆ ಒಳಕ್ಕೆ ಬಂದು ಸೆಲ್ವಿ ಹೊಟ್ಟೆಯನ್ನು ಮುಟ್ಟಿನೋಡಿ ಸೆರಗಿನಿಂದ ಮುಖ ಮುಚ್ಚಿಕೊಂಡು ವಿಷಯ ತಡೆದುಕೊಳ್ಳಲಾರದೇ “ರೀ ಸ್ವಲ್ಪ ಒಳಕ್ಕೆ ಬನ್ನಿ” ಎಂದಳು.

ಅಯ್ಯಪ್ಪ, “ಇರೇ ಸ್ವಲ್ಪ ಹೊತ್ತು. ಟೀ ಕುಡಿಯ್ತಾ ಇದ್ದೀನಿ” ಎಂದು ಅಲ್ಲೇ ಕುಳಿತು ಟೀ ಕುಡಿಯುತ್ತಿದ್ದರು. ವಿಜಯ ಅಳುವುದನ್ನು ಕೇಳಿಸಿಕೊಂಡ ಅಯ್ಯಪ್ಪ, “ಯಾಕೆ ಏನಾಯಿತು?” ಎಂದು ಮನೆ ಒಳಕ್ಕೆ ಎದ್ದು ಬಂದರು. ಸೆಲ್ವಿ ಮತ್ತು ವಿಜಯ ಇಬ್ಬರೂ ಅಳುತ್ತಿದ್ದಾರೆ. ಅಯ್ಯಪ್ಪ, “ಏನಾಯಿತು ಅಂತ ಮೊದಲಿಗೆ ಹೇಳಿ. ಆಮೇಲೆ ಅತ್ತರಾಯಿತು” ಎಂದ. ವಿಜಯ, “ನೀವು ನೋಡಿದರೆ ಕಾರ್ಮಿಕ ಮುಖಂಡರು. ನಿಮ್ಮ ಮಗಳು ಏನು ಮಾಡಿಕೊಂಡು ಬಂದಿದ್ದಾಳೆ ನೋಡಿ?” ಎಂದಳು. ಅಯ್ಯಪ್ಪ, “ಏನಮ್ಮ ಸೆಲ್ವಿ ಏನು ವಿಷಯ?” ಎಂದರು. ವಿಜಯ ಅಳುತ್ತಾ “ಅವಳು ಏನಂತ ಹೇಳ್ತಾಳೆ? ಎರಡು ತಿಂಗಳು ಬಸಿರಿಯಾಗಿ ಬಂದಿದ್ದಾಳೆ” ಎಂದಳು. ಅಯ್ಯಪ್ಪನಿಗೆ ಅರ್ಥವಾಗದೆ “ಏನೂ?” ಎಂದ. ವಿಜಯ ಅದೇ ಮಾತನ್ನು ಮತ್ತೇ ಹೇಳಿದಳು. ಈಗ ಅಯ್ಯಪ್ಪನಿಗೆ ತಲೆ ಸುತ್ತಿಬಂದಂತಾಗಿ “ಸೆಲ್ವಿ ನಿಮ್ಮಮ್ಮ ಹೇಳ್ತಾ ಇರುವುದು ನಿಜಾನಾ?” ಎಂದ. ಸೆಲ್ವಿ ಅಳತೊಡಗಿದಳು. ಅಯ್ಯಪ್ಪ ದುರುಗುಟ್ಟಿ ನೋಡಿ “ಮೇಲಕ್ಕೆ ಏಳು. ಎದ್ದು ನಿಂತುಕೊ” ಎಂದ. ಸೆಲ್ವಿ ಎದ್ದು ನಿಂತುಕೊಂಡಳು. ಸೆಲ್ವಿ ಎದ್ದು ನಿಂತುಕೊಂಡಿದ್ದೆ ತಡ. ಅಯ್ಯಪ್ಪ ಕೈಬೀಸಿ ಕೆನ್ನೆಗೆ ಒಂದು ಏಟು ಕೊಟ್ಟ. ಸೆಲ್ವಿ ಮಡಿಕೆಗಳ ಒಳಕ್ಕೆ ತೂರಿಕೊಂಡು ಹೋಗಿ ಮೂಲೆಯಲ್ಲಿ ಬಿದ್ದಳು. ವಿಜಯ, “ಅಯ್ಯೊ ಹೊಟ್ಟೆಯಲ್ಲಿದ್ದಾಳೆ ಅವಳನ್ನು ಯಾಕೆ ಹೊಡೆದಿರಿ?” ಎಂದು ಅವಳನ್ನು ಹಿಡಿದು ಮೇಲಕ್ಕೆ ಎತ್ತಿದಳು. ಸುಮಾರು ಹೊತ್ತು ಯಾರೂ ಮಾತನಾಡಲಿಲ್ಲ.

ಮನೆ ಹೊರಕ್ಕೆ ಬಂದ ಅಯ್ಯಪ್ಪ ಹೊರಗಡೆ ಕಲ್ಲು ಬಂಡೆಯ ಮೇಲೆ ಕತ್ತಲಾಗುವವರೆಗೂ ಒಬ್ಬರೇ ಕುಳಿತುಕೊಂಡಿದ್ದರು. ದೂರ ದೂರದಲ್ಲಿ ವಿದ್ಯುತ್ ದೀಪಗಳು ಮಬ್ಬುಮಬ್ಬಾಗಿ ಉರಿಯುತ್ತಿವೆ. ವಿಜಯ ನಿಧಾನವಾಗಿ ಅಯ್ಯಪ್ಪನ ಹತ್ತಿರಕ್ಕೆ ಬಂದು ಕಲ್ಲಿನ ಪಕ್ಕದಲ್ಲಿ ಬಾಗಿಲು ಹತ್ತಿರ ಕುಳಿತುಕೊಂಡಳು. ಅಯ್ಯಪ್ಪ, “ಸೆಲ್ವಿಗೆ ಊಟ ಕೊಟ್ಟಿಯ?” ಎಂದ. ವಿಜಯ, “ಕೊಟ್ಟೆ. ಅವಳು ತಿನ್ನಲಿಲ್ಲ” ಎಂದಳು. ಅಯ್ಯಪ್ಪ ಎದ್ದು ಮನೆ ಒಳಕ್ಕೆ ಬಂದು “ವಿಜಯ ಕೊಡು ಊಟ” ಎಂದಿದ್ದೆ ವಿಜಯ ಊಟದ ತಟ್ಟೆ ತಂದು ಕೊಟ್ಟಳು. ಅಯ್ಯಪ್ಪ ಸೆಲ್ವಿ ತಲೆ ಸವರುತ್ತ ಕೆನ್ನೆಯನ್ನು ವಿದ್ಯುತ್ ದೀಪದ ಬೆಳಕಿನಲ್ಲಿ ನೋಡಿದರು. ದೊಡ್ಡದೊಡ್ಡ ಬೆರಳುಗಳು ಬರೆಗಳಾಕಿದಂತೆ ಕೆನ್ನೆಯ ಮೇಲೆ ಹಾಗೇ ಬಿದ್ದಿವೆ. ಅಯ್ಯಪ್ಪ, “ಸೆಲ್ವಿ, ಹೆಣ್ಣು ದೇವತೆಯಂತೆ ಇರಬೇಕಮ್ಮ. ಗಂಡು ಅನ್ನುವುದು ನಾಯಿ. ಸುಮ್ಮನೇ ಊಟ ಮಾಡು. ಆ ಮೇಲೆ ಯೋಚನೆ ಮಾಡೋಣ” ಎಂದಿದ್ದೆ ಸೆಲ್ವಿ ಮೌನವಾಗಿ ತಿನ್ನತೊಡಗಿದಳು.

ಅಯ್ಯಪ್ಪ ಮತ್ತೆ ಹೊರಕ್ಕೆ ಬಂದು ಕಲ್ಲು ಬಂಡೆಯ ಮೇಲೆ ಕುಳಿತುಕೊಂಡು ಅಂಗೈಯಿಂದ ಜೋರಾಗಿ ಕಲ್ಲು ಬಂಡೆಗೆ ಹೊಡೆದು ಕೈಕೈ ಹಿಸುಕಿಕೊಂಡರು. ರಾತ್ರಿ ಊಟದ ಸಮಯವಾಗಿ ವಿಜಯ ಊಟದ ತಟ್ಟೆ ಮತ್ತು ನೀರು ಅಯ್ಯಪ್ಪನಿಗೆ ತಂದುಕೊಟ್ಟು ಬಾಗಿಲು ಮುಂದೆ ಕೆಳಗಡೆ ಕುಳಿತುಕೊಂಡಳು. ಅಯ್ಯಪ್ಪ ಊಟ ಮಾಡುತ್ತ, “ಈ ಹುಡುಗಿ ಕಾಲೇಜ್ ಓದು ಮುಗಿದಂತೆಯೇ. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಇದುವರೆಗೂ ಯಾರೂ ಓದಿರಲಿಲ್ಲ. ಈ ಹುಡುಗಿಯನ್ನಾದರೂ ಚೆನ್ನಾಗಿ ಓದಿಸೋಣ ಅಂದುಕೊಂಡಿದ್ದೆ” ಎಂದರು. ಸುಮಾರು ಹೊತ್ತು ಅವರಿಬ್ಬರೂ ಅಲ್ಲೇ ಕತ್ತಲಲ್ಲಿ ಕುಳಿತಿದ್ದರು.

ಅಯ್ಯಪ್ಪನಿಗೆ ಊಟ ಮಾಡಿದ್ದಾಗಲಿ, ಕೈತೊಳೆದುಕೊಂಡಿದ್ದಾಗಲಿ ಒಂದೂ ಗೊತ್ತಾಗಲಿಲ್ಲ. ಸುತ್ತಮತ್ತಲಿನ ಮನೆಗಳ ಜನರು ಏನೇನೂ ಮಾತನಾಡಿಕೊಳ್ತಾರೊ ಏನೋ. ಇವರಿಗೆಲ್ಲ ಮುಖ ತೋರಿಸುವುದು ಹೇಗೆ? ಎಂದು ವಿಜಯ ಯೋಚಿಸುತ್ತಿದ್ದಳು. ಅಯ್ಯಪ್ಪ, ವಿಷಯ ಗೊತ್ತಾದರೆ ಕಾರ್ಮಿಕರು ನನಗೆ ಮರ್ಯಾದೆ ಕೊಡ್ತಾರಾ? ಯಾರಿಗೂ ತಿಳಿಯದೇ ಅಬಾರ್ಶನ್ ಮಾಡಿಸಿಬಿಟ್ಟರೆ ಹೇಗೆ? ಛೀ ಛೀ ಒಂದು ಮಗುವನ್ನು ಸಾಯಿಸಿದ ಪಾಪ ನಮ್ಮ ಕುಟುಂಬಕ್ಕೆ ಸುತ್ತಿಕೊಳ್ಳಬಾರದು! ಅಂತಹ ಪರಿಸ್ಥಿತಿ ಬಂದರೆ ಕಾರ್ಮಿಕ ಮುಖಂಡನ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಡೋಣ! ಗಂಡು ಹುಡುಗರು ಮರ್ಯಾದೆಯಾಗಿದ್ದಾರೆ. ಈ ಹುಡುಗಿಗೆ ಏನು ಬಂತು? ಕೊನೆಗೆ ಹುಃ ಆಗಿದ್ದು ಆಗಲಿ. ಎಲ್ಲದಕ್ಕೂ ಒಂದು ದಾರಿ ಇದ್ದೆ ಇರುತ್ತೆ, ಎಂದುಕೊಂಡರು.

ಅಯ್ಯಪ್ಪ ಮತ್ತು ವಿಜಯ ಮಾತನಾಡದೆ ಮನೆ ಒಳಗಡೆ ಹೋಗಿ ಕುಳಿತುಕೊಂಡರು. ಅಷ್ಟರಲ್ಲಿ ಅವರ ಮಗ ರಾಜಾ ಬಂದ. ರಾಜಾ ಮುನ್ಸಿಪಲ್ ಬಾಯ್ಸ್ ಪ್ರೌಢ ಶಾಲೆಯಲ್ಲಿ 1ಂನೇ ತರಗತಿ ಓದುತ್ತಿದ್ದು ರಾತ್ರಿ ಟ್ಯೂಶನ್‌ಗೆ ಹೋಗಿ ಬಂದಿದ್ದ. ಅಯ್ಯಪ್ಪ, “ವಿಜಯ ರಾಜುಗೆ ಊಟ ಕೊಡು. ರಾಜು ನೀನು ಊಟ ಮಾಡಿದ ಮೇಲೆ ನಿಮ್ಮ ಅಕ್ಕನ ಫ್ರೆಂಡ್ಸ್ ಇದ್ದಾರಲ್ಲ ರಾಜಿ, ಪಾರ್ವತಿ ಅವರ ಮನೆಗಳಿಗೆ ಹೋಗಿ ಅವರಿಬ್ಬರನ್ನೂ ಕರೆದುಕೊಂಡು ಬಾ” ಎಂದರು. ರಾಜು, “ಆಯಿತಪ್ಪ” ಎಂದು ಊಟ ಮಾಡಿ ಹುಡುಗಿಯರನ್ನು ಕರೆದುಕೊಂಡು ಬರಲು ಹೊರಟ. ವಿಜಯ, “ಯಾರಾದರು ಏನಾದರು ಕೇಳಿದರೆ ಏನೂ ಇಲ್ಲ ಅಂತೇಳು” ಎಂದಳು. ರಾಜು, ಪಾರ್ವತಿ ಮತ್ತು ರಾಜಿಯನ್ನು ಕರೆದುಕೊಂಡು ಬಂದ. ಪಾರ್ವತಿ, ರಾಜಿ ಇಬ್ಬರೂ ಭಯದಿಂದಲೇ ಮನೆ ಒಳಕ್ಕೆ ಬಂದರು. ಅಯ್ಯಪ್ಪ, “ರಾಜು ಬಾಗಿಲು ಮುಚ್ಚು” ಎಂದಿದ್ದೆ, ರಾಜು ಬಾಗಿಲು ಮುಚ್ಚಿದ. ಅಯ್ಯಪ್ಪ “ಏನೂ ಭಯಾ ಪಡಬೇಡಿ ಕುಳಿತುಕೊಳ್ಳಿ. ಊಟ ಆಯಿತಾ?” ಎಂದರು. “ಆಯಿತು ಅಂಕಲ್” ಎಂದರು. ಅಯ್ಯಪ್ಪ, “ಸೆಲ್ವಿ ವಿಷಯ ಗೊತ್ತು ತಾನೆ?” ಕೇಳಿದ. ಇಬ್ಬರೂ ಮುಖ ಮುಖ ನೋಡಿಕೊಂಡು ಗೊತ್ತು ಅಂಕಲ್” ಎಂದು ತಲೆ ಬಗ್ಗಿಸಿಕೊಂಡರು.

ಅಯ್ಯಪ್ಪ, “ಯಾರಮ್ಮ ಆ ಹುಡುಗ?” ಕೇಳಿದ. ರಾಜಿ, “ಮಣಿ, ಅಂತ ಅಂಕಲ್. ಸೆಕೆಂಡ್ ಪಿಯುಸಿ ಆರ್ಟ್ಸ್ ಫೇಲಾಗಿದ್ದಾನೆ” ಎಂದಳು. ಅಯ್ಯಪ್ಪ “ಯಾವ ಲೈನು?” ಕೇಳಿದ. ರಾಜಿ, “ಮಾರಿಕುಪ್ಪಂ ಸೌಥ್ ಗಿಲ್ಬರ್ಟ್ ಲೈನ್” ಹೇಳಿದಳು. ಅಯ್ಯಪ್ಪ, “ಅವರಪ್ಪನ ಹೆಸರು ಗೊತ್ತ?” ಕೇಳಿದ. ಪಾರ್ವತಿ, “ಅಂಕಲ್, ಎರಡುಮೂರು ತಿಂಗಳಿಂದೆ ಚಾಂಪಿಯನ್ ಗಣಿಯಲ್ಲಿ ಐದು ಜನ ಕಾರ್ಮಿಕರು ಸತ್ತೋದರಲ್ಲ. ಅದರಲ್ಲಿ ಸೆಲ್ವಮ್ ಅಂತ ಇದ್ದರಲ್ಲ ಅವರ ಮಗ” ಎಂದಳು. ಅಯ್ಯಪ್ಪ, “ಓ ಸೆಲ್ವಮ್ ಮಗನಾ ಇವನು? ನಾನೇ ಓಡಾಡಿ ಅವನಿಗೆ ಕೆಲಸ ಕೊಡಿಸಿದನಲ್ಲಮ್ಮ. ನೋಡು ಎಂಥಹ ಕೆಲಸ ಆಯಿತು? ವಿಧಿ ಅನ್ನುವುದು ಯಾವಯಾವ ರೂಪದಲ್ಲಿ ಹೇಗೇಗೆ ಸುತ್ತಿಕೊಂಡು ಬರುತ್ತೋ ನೋಡಿ. ಆಯಿತು ನೀವು ಹೋಗರಮ್ಮ. ರಾಜು ಅಕ್ಕಂದಿರನ್ನು ಅವರ ಮನೆಗಳಿಗೆ ಬಿಟ್ಟು ಬಾ” ಎಂದ ಅಯ್ಯಪ್ಪ. ವಿಜಯ, “ರಾಜಿ, ಪಾರ್ವತಿ, ಸದ್ಯಕ್ಕೆ ಯಾರಿಗೂ ಏನೂ ಹೇಳುವುದಕ್ಕೆ ಹೋಗಬೇಡಿ” ಎಂದಳು. ಅಯ್ಯಪ್ಪ, “ಇನ್ನು ಏನು ಉಳಿದಿದೆ ವಿಷಯ ಹೇಳದೇ ಇರುವುದಕ್ಕೆ?” ಎಂದರು. ವಿಜಯ, “ನಿಮಗೆ ಗೊತ್ತಾಗುವುದಿಲ್ಲ ಸುಮ್ಮನಿರ‍್ರಿ. ನಾನು ಹೇಳಿದ್ದು ಜ್ಞಾಪಕ ಇದೇ ತಾನೇ” ಎಂದಳು. ಇಬ್ಬರೂ, “ಆಂಟಿ ಯಾರಿಗೂ ಹೇಳುವುದಿಲ್ಲ” ಎಂದು ಹೇಳಿ ಹೊರಟುಹೋದರು.

ಅವರು ಹೋದ ಮೇಲೆ ವಿಜಯ, ಸೆಲ್ವಿ ಕಡೆಗೆ ನೋಡಿ “ಆ ಹುಡುಗಿಯರಿಗೆ ಇರೊ ಬುದ್ಧಿ ನಿನಗೆ ಇಲ್ಲದೆಹೋಯಿತು ನೋಡು. ನಾವು ಹೇಗೆ ತಲೆ ಎತ್ತಿಕೊಂಡು ತಿರುಗುವುದು. ನಿಮ್ಮಪ್ಪ ಕಾರ್ಮಿಕರ ಮುಖಂಡ ಬೇರೆ. ಎಲ್ಲಾ ಮಣ್ಣುಪಾಲು ಮಾಡಿಬಿಟ್ಟೆ” ಎಂದಳು. ಅಯ್ಯಪ್ಪ ಮತ್ತೆ ಎದ್ದು ಹೊರಗೋಗಿ ಕತ್ತಲಲ್ಲಿ ಕಲ್ಲುಬಂಡೆ ಮೇಲೆ ಕುಳಿತುಕೊಂಡರು. ವಿಜಯ ಒಳಗೊಳಗೆ ಅಳುತ್ತಿದ್ದಳು. ರಾಜುಗೆ ಎಲ್ಲವೂ ಅರ್ಥವಾಗಿತ್ತು. ಎಷ್ಟೋ ಹೊತ್ತಾದ ಮೇಲೆ ಅಯ್ಯಪ್ಪ ಮತ್ತೆ ಮನೆ ಒಳಕ್ಕೆ ಬಂದು ಮಂಚದ ಮೇಲೆ ಮಲಗಿಕೊಂಡ. ಈ ಗಣಿ ಕ್ಯಾಂಪ್‌ಗಳಲ್ಲಿರುವ ಜನರ ಬದುಕು ಮನೆಯ ಹೊರಗಡೆ ಇರುವ ಕಲ್ಲುಬಂಡೆಗಳ ಮೇಲೆ ಅರ್ಧ ಕಳೆದರೆ ಇನ್ನರ್ಧ ಮನೆಗಳ ಒಳಗೆ ಕುಳಿತುಕೊಂಡೊ ನಿಂತುಕೊಂಡೊ ಕಳೆಯುತ್ತದೆ. ಅಯ್ಯಪ್ಪನಿಗೆ ನಿದ್ದೆ ಬರಲಿಲ್ಲ. ಸೆಲ್ವಿ ಮತ್ತು ವಿಜಯ ಗೋಡೆಗೆ ಒರಗಿಕೊಂಡು ಕುಳಿತಿದ್ದರು. ರಾಜು ಅಪ್ಪನ ಮಂಚದ ಕೆಳಗೆ ಅರ್ಧ ಹೊರಗೆ ಅರ್ಧ ಮಲಗಿಕೊಂಡಿದ್ದನು. ಅರ್ಧ ರಾತ್ರಿಯಾದ ಮೇಲೆ ಎಲ್ಲರೂ ಮಲಗಿಕೊಂಡಿದ್ದರು. ಸೆಲ್ವಿಯ ಕಣ್ಣೀರು ಅವಳ ತಲೆದಿಂಬೆಲ್ಲ ನೆನೆದುಹೋಗಿತ್ತು.

ಅಯ್ಯಪ್ಪ, ಮರುದಿನ ಪಕ್ಕದಲ್ಲಿಯೇ ಇದ್ದ ತನ್ನ ದೊಡ್ಡಮಗ, ಸೊಸೆ ಮತ್ತು ಬೆಮೆಲ್ ಕ್ವಾಟ್ರಸ್‌ನಲ್ಲಿದ್ದ ಚಿಕ್ಕ ಮಗನನ್ನು ಕರೆಸಿ ಎಲ್ಲವನ್ನೂ ತಿಳಿಸಿದ. ಚಿಕ್ಕ ಮಗ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ದೊಡ್ಡ ಮಗನಿಗೆ ಸೆಲ್ವಿ ಮಾಡಿರುವ ವಿಷಯ ಕೇಳಿದ್ದೆ ಇವಳನ್ನು ಕೊಂದುಬಿಡಬೇಕು ಎಂದು ಸೆಲ್ವಿಗೆ ಹೊಡೆಯಲು ಹೋಗಿದ್ದಲ್ಲದೆ ಜೋರಾಗಿ ಕೂಗಾಡಿದ. ಸೊಸೆ ಅವನನ್ನು ತಡೆಹಿಡಿದು ಸಮಾಧಾನ ಮಾಡಿದಳು. ಸೆಲ್ವಿಯ ಬಗ್ಗೆ ಸೊಸೆಗೆ ತುಂಬಾ ಪ್ರೀತಿ ಇದ್ದು ಅವಳು ತೀರಾ ನೊಂದುಕೊಂಡಳು. ಎಲ್ಲರೂ ಚರ್ಚೆ ಮಾಡಿ ಕೊನೆಗೆ ಸೆಲ್ವಿಯನ್ನು ಮಣಿಗೆ ಮದುವೆ ಮಾಡಿಕೊಡಲು ತೀರ್ಮಾನ ತೆಗೆದುಕೊಂಡರು.

(ಹಿಂದಿನ ಕಂತು: ಒಳಗೊಂದು ಪರಿಸ್ಥಿತಿ.. ಹೊರಗೊಂದು ಪರಿಸ್ಥಿತಿ)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ