
ಪೂರ್ವಾಂಗನೆ ಪಶ್ಚಿಮಾಂಗನೆಗೆ ಬಣ್ಣಗಳ ಕುರಿತು ಕವಿ ಜಿ.ಎಸ್ ಎಸ್ ಹೇಳುತ್ತಾರಲ್ಲ… ಕಣ್ಣಿನಲ್ಲಿ ಕಪ್ಪು ವರ್ಣದ ಭಾಗ ಇಲ್ಲದೆ ಇದ್ದಿದ್ದರೆ ಹತ್ತಿಯ ನಡುವೆ ಕಪ್ಪು ಬೀಜಗಳು ಇಲ್ಲದೆ ಇದ್ದಿದ್ದರೆ, ಕಪ್ಪಾದ ಕತ್ತಲು ಇಲ್ಲದೆ ಇದ್ದಿದ್ದರೆ, ಕಪ್ಪು ಮೋಡ ಕವಿದು ಮಳೆ ಬಾರದೆ ಇದ್ದಿದ್ದರೆ ಮನುಷ್ಯ ಸುಖವಾಗಿ ಎಲ್ಲಿರುತ್ತಿದ್ದ? ಕಪ್ಪು ಕೇಶರಾಶಿ ಇಲ್ಲದೆ ಇದ್ದರೆ ಹೇಗೆ ಸುಂದರವಾಗಿ ಕಾಣುತ್ತಿದ್ದ? ಕಪ್ಪು ಬಣ್ಣವನ್ನು ವ್ಯಕ್ತಿತ್ವ ಗುರುತಿಸುವಲ್ಲಿ ಇರಬೇಕೇ ಹೊರತು ಬದುಕಿನ ಪರಿಭಾಷೆಗಳಲ್ಲಿ ಒಡಮೂಡುವ ಪರಿಪ್ರೇಕ್ಷಗಳಿಂದಲ್ಲ ಎನ್ನುವುದೆ ನನ್ನ ಅನಿಸಿಕೆ. ಹಾಗಂತ ನಾವು ಕಪ್ಪುಬಿಳುಪಿಗರಾಗಬೇಕೆ ಅದೂ ಇಲ್ಲ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾಲ್ಕನೆಯ ಬರಹ ನಿಮ್ಮ ಓದಿಗೆ
‘ಬಣ್ಣ’ ಎಂದಾಗ “ಬಣ್ಣಾ… ನನ್ನ ಒಲವಿನ ಬಣ್ಣ…” ಹಾಡು ನೆನಪಿಗೆ ಬರುತ್ತದೆ ಹಾಡು ನೆನಪಿಗೆ ಬರುತ್ತಿದ್ದಂತೆ ಅದರ ಸ್ವರವೂ ಹಾಡಿಗೆ ನಟಿಸಿದ ತಾರೆಯರು ನೆನಪಿಗೆ ಬಾರದೆ ಇರುವರೆ..? ಬಂದೇ ಬರುತ್ತಾರೆ ಸರಿ….! ಈ ಬಣ್ಣ ಎಂದರೆ ಬರೆ ಪದವಲ್ಲ. ಹಾಗಿದ್ದರೆ ಬಣ್ಣ ಎಂದರೆ ಕಲರ್ ಮಾತ್ರವೆ? ಖಂಡಿತಾ ಇಲ್ಲ. ಬಣ್ಣದ ಪ್ರಪಂಚ, ವರ್ಣಮಯ ಜಗತ್ತು ಎಂದೆಲ್ಲಾ ಕರೆಯುತ್ತಾರಲ್ಲ ಹಾಗಿದ್ರೆ ಈ ಜಗತ್ತಿನಲ್ಲಿ ಬರಿಯ ವರ್ಣಗಳು ಅಂದರೆ ನೋಟಕ್ಕೆ ಸಿಗುವ ವಿವಿಧ ಶೇಡ್‌ನ ಬಣ್ಣ ಮಾತ್ರ ಸಿಗುತ್ತದೆಯಾ? ಇಲ್ಲ ಖಂಡಿತಾ ಇಲ್ಲ ಅದರ ಜೊತೆಗೆ ನಾನಾ ರೀತಿಯ ವ್ಯಕ್ತಿಗಳು ಅವರ ‘ವ್ಯಕ್ತಿ ವೈಚಿತ್ರ್ಯ’, ‘ಉಕ್ತಿವೈಚಿತ್ರ್ಯ’ ಎಲ್ಲವೂ ಸಿಗುತ್ತವೆ. ಅದಕ್ಕೆ ಅಲ್ವೆ ಹೆಚ್ಚು ಉಲ್ಟ ಸೀದಾ ಮಾತನಾಡುವವರನ್ನು ಬಣ್ಣ ಬದಲಾಯಿಸುವ ‘ಊಸರವಳ್ಳಿ’ ಎನ್ನುವುದು. ತಾವು ಬಯಸಿದ್ದು ಬೇಕೆಂದಾಗ ಎಂಥ ಕೀಲೆಣ್ಣೆ ಹಚ್ಚಲೂ ಸಿದ್ಧರಿರುತ್ತಾರೆ ಸಮಯಕ್ಕೆ ತಕ್ಕಹಾಗೆ ಬದಲಾಗುತ್ತಾರೆ ಈ ಎಲ್ಇಡಿ ಬಲ್ಬುಗಳು ಬದಲಾಗುತ್ತವಲ್ಲ ಹಾಗೆ ಅದರ ಸ್ವಿಚ್ ಅನ್ನು ನಾವು ನಿಯಂತ್ರಿಸುತ್ತೇವಲ್ಲಾ ಹಾಗೆ ನಮ್ಮನ್ನು ನಿಯಂತ್ರಿಸುವವನು ಒಬ್ಬ ಇರುತ್ತಾನೆ.
ಶೃಂಗಾರ, ಹಾಸ್ಯ, ಕರುಣಾ, ರೌದ್ರ, ಶಾಂತಿ, ದಯೆ, ದ್ವೇಷ, ಅಸೂಯೆ, ಪ್ರೀತಿ, ಕರುಣೆ ಇವೆಲ್ಲಾ (ಭಾರತೀಯ ಕಾವ್ಯಮೀಮಾಂಸೆಯಲ್ಲಿ ಒಂದೊಂದು ರಸಕ್ಕೂ ಬಣ್ಣಗಳನ್ನು ಹೇಳಿದೆ) ಬದುಕಿನ ಬಣ್ಣವೆಂದೆ ಬಣ್ಣಿಸುವುದಾದರೆ ‘ಉದರ ನಿಮಿತ್ತಂ ಬಹುಕೃತ ವೇಷಂ’ ಎನ್ನುವಂತೆ ಹೊಟ್ಟೆ ಪಾಡಿಗಾಗಿ ನಾನಾ ರೀತಿಯ ಬಣ್ಣಗಳನ್ನು ಅಥವಾ ವೇಷಗಳನ್ನು ಧರಿಸುತ್ತಾರಲ್ಲಾ ಅದೂ ಬಣ್ಣವೆ. ಆದರೆ ಆ ಬಣ್ಣವನ್ನು ಕಳಚುವುದೆ ಇಲ್ಲ ಹೆಚ್ಚಿನವರು. ಈ ಮೆಡಲ್‌ಗಳೆಲ್ಲ ಒಂದೇ ಅವುಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ ಅದ್ದಿದಾಗ ತಮ್ಮ ಸ್ಟ್ಯಾಂಡರ್ಡ್ಅನ್ನು ಬದಲಿಸಿಕೊಳ್ಳುತ್ತವಲ್ಲ ಹಾಗೆ ಬಣ್ಣ ವೇಷಧಾರಿಗಳು ಇದ್ದು ಬಿಡುತ್ತಾರೆ. ಏನೇ ಆಗಲಿ ಗುಣದಲ್ಲಿ ಮಾತಿನಲ್ಲಿ ನಮ್ಮ ಸಮಾಧಾನಕ್ಕಾದರೂ ಶುಭ್ರ ಬಿಳಿ ಬಟ್ಟೆ ತೊಡುವವರಾಗ ಬೇಕು! ‘ಬಣ್ಣ’ ಎಂದರೆ ಹುಡುಗಿಯರು ಎಂಬ ಅರ್ಥವೂ ಇದೆ. ಒಬ್ಬರಿಗಿಂತ ಒಬ್ಬರು ವಿಭಿನ್ನ ಎಂದಷ್ಟೆ! ಆದರೆ ಬಣ್ಣ ಬದಲಿಸುತ್ತಾರೆ ಎಂಬುದನ್ನು ಹುಡುಗಿಯರಿಗೆ ಮಾತ್ರ ಆರೋಪಿಸಿದರೆ ಖಂಡಿತಾ ಒಪ್ಪಲಾಗದು. ನಮ್ಮ ವಾರ್ಡ್‌ರೋಬ್‌ಗಳಲ್ಲಿ ಬಿಳಿಯ ಬಣ್ಣಕ್ಕೂ ಸ್ಥಳ ಅರ್ಥಾತ್ ನಮ್ಮ ಮನಸ್ಸಿನಲ್ಲಿ ಒಂದಷ್ಟು ಜಾಗ ಕೊಡೋಣ!
ನಮ್ಮನ್ನು ಬಣ್ಣಗಳ ಹಿನ್ನೆಲೆಯಿಂದ ವ್ಯಾಖ್ಯಾನಿಸುವುದಾದರೆ ‘ಇದಮಿತ್ಥಂ’ ಎಂದು ಹೇಳಲಾಗದ ಬಣ್ಣಗಳು ನಾವು. ನಿಜ ಬಹುವರ್ಣಿಯರು ನಾವು ಇದೇ ಕಾರಣಕ್ಕೆ ನಮ್ಮವ್ಯಕ್ತಿತ್ವವೂ ಒಬ್ಬೊಬ್ಬರಿಂದ ಒಂದೊಂದು ತೆರನಾಗಿ ವರ್ಣಿಸಲ್ಪಡುತ್ತದೆ. ನಾವು ಹೇಗಿರಬೇಕಪ್ಪಾ ಎಂದರೆ ನಮ್ಮ ಒಳಹುಗಳು ಗಾಢ ಬಣ್ಣದಲ್ಲಿದ್ದು ಮೇಲ್ಬಟ್ಟೆ ತಿಳಿಯಾಗಿರಬೇಕು.
ಚಂದ ಕಾಣಿಸುವ ಬಣ್ಣಗಳೆಲ್ಲಾ ಖಾರವಾಗಿಯೇ ಇರುತ್ತವೆ. ಗಿಳಿ ಹೆಚ್ಚು ಮೆಣಸಿನಕಾಯಿಯನ್ನೆ ತಿನ್ನುವುದು ಆದರೆ ಅದರ ಕಲರ್ ನೋಡಿದ್ದೀರ ಎಷ್ಟು ಗಾಢ ಹಸಿರು ಅದಕ್ಕೆ ಗಿಳಿ ಬಣ್ಣ ಎಂದೇ ಕರೆಯುವುದಿಲ್ಲವೆ? ನವಿಲು ಹಾವನ್ನು ತಿಂದರೂ ಎಷ್ಟು ಅನನ್ಯ ಬಣ್ಣ ಹೊಂದಿದೆ. ಒಂದು ವಿಷ್ಯದ ಬಗ್ಗೆ ಯೋಚನೆ ಮಾಡಿದ್ದೀರ? ನಾವು ಮನುಷ್ಯರು ವೇಸ್ಟ್ ಬಾಡಿಸ್; ನಮಗೆ ಒಂದು ಬಣ್ಣ ಗುರುತಿಸಕ್ಕೆ ಹೆಸರಿಡಕ್ಕೆ ಬರಲ್ಲ ಲೈಟ್, ಡಾರ್ಕ್, ಇಂಗ್ಲಿಷ್ ಕಲರ್ಸ್ ಎಂದಷ್ಟೆ ಹೇಳಿ ಪ್ರಕೃತಿಯ ಸಹಾಯ ಪಡೆಯುತ್ತೇವೆ. ಆಕಾಶ ನೀಲಿ, ಸಾಗರ ಹಸಿರು, ಸಾಗರ ನೀಲಿ ಬಾನ್ನೀಲಿಯ ತುಂಬಾ ಲೆಮನ್ ಯೆಲ್ಲೋ, ಬಾಟಲ್ ಗ್ರೀನ್, ಆನಿಯನ್ ಪಿಂಕ್, ನೇರಳೇ ಬಣ್ಣ, ಗಿಳಿ ಹಸಿರು, ನವಿಲು ಬಣ್ಣ, ನೀಲಮೇಘಶ್ಯಾಮ, ಕೆನೆಬಣ್ಣ ಇತ್ಯಾದಿನಮ್ಮ ಬಣ್ಣಗಳ ಹೆಸರಿಗೆ ಪ್ರಕೃತಿಯೇ ಬೇಕು. ಬಣ್ಣಗಳಲ್ಲಿ ಬಿಳಿ ಶ್ರೇಷ್ಟ ಕಪ್ಪು ಕನಿಷ್ಟ ಅನ್ನುವ ಹಂತಕ್ಕೆ ನಾವು ನಮ್ಮ ಮನಃಸ್ಥಿತಿಯನ್ನು ಒಗ್ಗಿಸಿಕೊಂಡಿದ್ದೇವೆ ಎಂಥಾ ಮೂರ್ಖರು ನೋಡಿ! ಬಣ್ಣಗಳ ವಿಶ್ಲೇಷಕರ ಪ್ರಕಾರ ಕಪ್ಪು ಸ್ವಾಭಿಮಾನದ ಬಣ್ಣ; ಅದನ್ನು ಹೆಚ್ಚಾಗಿ ಇಷ್ಟಪಡುವವರೂ ಇದ್ದಾರೆ.

ಪೂರ್ವಾಂಗನೆ ಪಶ್ಚಿಮಾಂಗನೆಗೆ ಬಣ್ಣಗಳ ಕುರಿತು ಕವಿ ಜಿ.ಎಸ್ ಎಸ್ ಹೇಳುತ್ತಾರಲ್ಲ… ಕಣ್ಣಿನಲ್ಲಿ ಕಪ್ಪು ವರ್ಣದ ಭಾಗ ಇಲ್ಲದೆ ಇದ್ದಿದ್ದರೆ ಹತ್ತಿಯ ನಡುವೆ ಕಪ್ಪು ಬೀಜಗಳು ಇಲ್ಲದೆ ಇದ್ದಿದ್ದರೆ, ಕಪ್ಪಾದ ಕತ್ತಲು ಇಲ್ಲದೆ ಇದ್ದಿದ್ದರೆ, ಕಪ್ಪು ಮೋಡ ಕವಿದು ಮಳೆ ಬಾರದೆ ಇದ್ದಿದ್ದರೆ ಮನುಷ್ಯ ಸುಖವಾಗಿ ಎಲ್ಲಿರುತ್ತಿದ್ದ? ಕಪ್ಪು ಕೇಶರಾಶಿ ಇಲ್ಲದೆ ಇದ್ದರೆ ಹೇಗೆ ಸುಂದರವಾಗಿ ಕಾಣುತ್ತಿದ್ದ? ಕಪ್ಪು ಬಣ್ಣವನ್ನು ವ್ಯಕ್ತಿತ್ವ ಗುರುತಿಸುವಲ್ಲಿ ಇರಬೇಕೇ ಹೊರತು ಬದುಕಿನ ಪರಿಭಾಷೆಗಳಲ್ಲಿ ಒಡಮೂಡುವ ಪರಿಪ್ರೇಕ್ಷಗಳಿಂದಲ್ಲ ಎನ್ನುವುದೆ ನನ್ನ ಅನಿಸಿಕೆ. ಹಾಗಂತ ನಾವು ಕಪ್ಪುಬಿಳುಪಿಗರಾಗಬೇಕೆ ಅದೂ ಇಲ್ಲ!
ಹಲವು ಕ್ಷೇತ್ರಗಳಲ್ಲಿ ಬದುಕುವ ಜನರು ಅವರದೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಣ್ಣಗಳನ್ನು ಬಳಸುತ್ತಾರೆ. ಉದಾಹರಣೆಗೆ ಪತ್ರಕರ್ತರು ‘ಹಳದಿ ಪತ್ರಿಕೋದ್ಯಮ’ ಎನ್ನುತ್ತಾರೆ, ಪರಿಸರವಾದಿಗಳು ಅಳಿವಿನಂಚಿನಲ್ಲಿರುವ ಸಸ್ಯಪ್ರಬೇಧಗಳನ್ನೋ ಕೀಟಗಳನ್ನೋ ಕಂಡು ‘ಕೆಂಪು ಪಟ್ಟಿ’ಯಲ್ಲಿವೆ ಎನ್ನಬಹುದು. ಹವಾಮಾನತಜ್ಞರು ‘ಎಲ್ಲೋ, ಗ್ರೀನ್, ರೆಡ್ ‘ಅಲರ್ಟ್‌ಗಳು ಎನ್ನಬಹುದು, ಕಂಟ್ರ್ಯಾಕ್ಟರ್ ಸರಿ ಕೆಲ ಮಾಡಿಲ್ಲ ಎಂದರೆ ಕಪ್ಪು ಪಟ್ಟಿಗೆ ಸೇರಿದ್ದಾರೆ ಎನ್ನಬಹುದು. ಎಲ್ಲೋ, ಗ್ರೀನ್, ರೆಡ್ ಕಲರ್ ದೀಪಗಳನ್ನು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸೂಚನೆಗಳಾಗಿ ಉಪಯೋಗಿಸಲ್ಪಡುತ್ತವೆ. ಅಂದ ಮೇಲೆ ಅವು ನಮ್ಮ ಸುಭಗತೆಗಲ್ಲವೆ?.. ಬಣ್ಣಗಳು ಎಲ್ಲಿಲ್ಲ ಹೇಳಿ!
ನಾವು ಯಾವಾಗಲು ಸುಖ ಬಣ್ಣಗಳನ್ನು ಬಯಸುತ್ತೇವೆ. ಉದಾಹರಣೆಗೆ ನಮಗೆ ಕಪ್ಪು ಕೆಡುಕು ಎಂದಾದರೆ ಕರಾಟೆಯವರು ಕಪ್ಪು ಬೆಲ್ಟ್ ಪಡೆದವರಿಗೆ ಹೆಚ್ಚು ಮಾನ್ಯತೆ ಕೊಡುತ್ತಾರೆ. ಕಪ್ಪು ಬೆಲ್ಟ್ ಪಡೆಯಬೇಕೆಂದರೆ ಆ ಕರಾಟೆ ಪಟು ಅಷ್ಟು ಶ್ರಮ ಹಾಕಿರಬೇಕು. ಮತ್ತೆ ಕಪ್ಪನ್ನು ವಿರುದ್ಧತೆಗೆ ಹೇಳುವುದಾದರೆ ಪ್ರಕೃತಿ ಮನುಷ್ಯನ ಕೈಗೆ ಸಿಕ್ಕು ನಲುಗಿ ತನ್ನ ನಿಜ ಬಣ್ಣವನ್ನು ಕಳೆದುಕೊಳ್ಳುತ್ತಿದೆ. ಕಾಡ್ಗಿಚ್ಚಿನಿಂದ ಭಸ್ಮವಾದ ಅರಣ್ಯ, ನೀರಿಲ್ಲದೆ ಬತ್ತಿದ ಕೆರೆಯಂಗಳದ ಬಣ್ಣ, ಗುಡ್ಡಕುಸಿತ ಉಂಟಾಗಿ ಭೂಮಿ ತಾಯ ಪಾರ್ಶ್ವವೇ ಕುಸಿದು ತೊಟ್ಟ ಬಟ್ಟೆ ಕಳಚಿತೇನೋ ಅನ್ನಿಸುತ್ತಲ್ಲಾ ಇದು ಸರಿನಾ? ಮನುಷ್ಯ ಆಸೆಬುರುಕ ತನ್ನ ಬದುಕಿನ ಸುಖ ಎಂಬ ತೆವಲನ್ನು ತೀರಿಸಿಕೊಳ್ಳಲು ಪ್ರಕೃತಿಯ ನಿಜ ಬಣ್ಣವನ್ನು ಹಾಳುಮಾಡುತ್ತಿದ್ದಾನಲ್ಲ ಇದು ಸರಿಯೇ?
ಬಾಯಿ ಇಟ್ರೆ ಬಣ್ಣ ಗೇಡು ಬಿಡಿ! ಮನುಷ್ಯ ಒಂದೊಂದಲ್ಲ ಅವಾಂತರಗಳನ್ನು ಮಾಡೋದು? ಈ ನಿಟ್ಟಿನಲ್ಲಿ ಸಿದ್ದೇಶ್ವರ ಸ್ವಾಮೀಜಿಗಳು ನೆನಪಾಗಬೇಕು ಸನ್ಯಾಸಿ ಎಂದು ಮೆರೆಯಲಿಲ್ಲ, ಜೇಬಿಲ್ಲದ ವಸ್ತ್ರಗಳನ್ನೆ ತೊಡುತ್ತಿದ್ದರು. ಕಡೆಗೆ ಒಂದು ಸ್ಮಾರಕವೂ ಬೇಡ ಎಂದು ನಿರ್ಗಮಿಸಿದರಲ್ಲ ಇದಲ್ವೆ ನಿಜವಾದ ಬದುಕ ಬಣ್ಣ!
ಏಳುಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎನ್ನುತ್ತೇವೆ ಆದರೆ ನಾವಾಗುವುದಿಲ್ಲ. ಹೇಳುವುದು ಒಂದು ಮಾಡುವುದು ಇನ್ನೊಂದು. ನವರಾತ್ರಿಯ ಸಂದರ್ಭದಲ್ಲಿ ದುರ್ಗೆಯರನ್ನು ನವ ಬಣ್ಣಗಳಿಂದ ಆರಾಧಿಸಬೇಕು. ಆದರೆ ದೇವಿಗೆ ಆ ಬಣ್ಣ ಆರೋಪಿಸಿ ನಾವೇ ಆ ಬಣ್ಣಗಳನ್ನು ತೊಟ್ಟು ಸೆಲ್ಫಿ, ಸ್ಟೇಟಸ್, ಫೇಸ್ಬುಕ್ ಎಂದು ವಿಜೃಂಭಿಸುತ್ತೇವೆ. ನಮ್ಮ ಧರ್ಮಗಳಲ್ಲಿ ಎಲ್ಲಾ ಬಣ್ಣಕ್ಕೂ ಮಾನ್ಯತೆ ನೀಡಿದೆ. ಕೇಸರಿ ಹನುಮಾನನ ಕಲರ್, ಹಸಿರು ಮಸೀದಿಗಳ ಬಾವುಟದ ಕಲರ್, ಮದುವೆಯಲ್ಲಿ ಬಿಳಿ ಸಾವಲ್ಲಿ ಕಪ್ಪು; ಇದು ಕ್ರಿಶ್ಚಿಯನ್ನರ ಬಣ್ಣಗಳ ವಿಭಜನೆ.
ಒಂದು ಮಾತ್ರ ಸತ್ಯ; ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಪ್ರಕೃತಿಯ ಬಣ್ಣಗಳ ಜೊತೆಗೆ ಕೃತಕ ಬಣ್ಣಗಳಲ್ಲೂ ಬದುಕುತ್ತಾನೆ. ಮಗು ಜ್ವಾಲೆಯ ನೀಲಿ ಕೆಸರಿ ಬಣ್ಣ ನೋಡಿ ಅದನ್ನು ಹಿಡಿಯ ಹೋಗುತ್ತದೆ… ಸುಡುತ್ತದೆ ಎಂದಾದ ಮೇಲೆ ಬಿಡುತ್ತದೆ. ಅಭಿಜಾತ ಬಣ್ಣಮೋಹಿಹೆಣ್ಣು ಇನ್ನೂ ಚಕ್ಕದಿರುವಾಗಲೆ ಪೌಡರ್ ಬಳಿದುಕೊಂಡು ತುಟಿಬಣ್ಣವನ್ನು ಕಣ್ಣಿಗೆ ಹಚ್ಚಿಕೊಳ್ಳುತ್ತಲೇ ಇರುತ್ತದೆ. ದೊಡ್ಡವಳಾಗುತ್ತಲೇ ಯಾವುದು ಎಷ್ಟಿರಬೇಕು ಎನ್ನುವ ಮಿತಿ ಅವಳಿಗೆ ತಿಳಿಯುತ್ತದೆ. ಮಿತಿಗೆ ಬಾರದಿದ್ದರೆ ಕೆಡುಮುಖದ ಸಂಚನೆ ಅನುಭವಿಸುತ್ತದೆ. ಆಗತಾನೆ ಶಾಲೆಗೆ ಸೇರಿದ ಮಕ್ಕಳು ಆಕರ್ಷಿತರಾಗುವುದು ವರ್ಣರಂಜಿತ ಪುಸ್ತಕಗಳು, ಬಣ್ಣದ ಪೆಪರ್, ಪೆನ್ಸಿಲ್ ಪೆನ್ನುಗಳಿಂದ… ಹಾಗಾಗಿ ಈ ಬಣ್ಣಗಳು ಉತ್ಸಾಹದ ಸಂಕೇತಗಳು ಎಂದಾಯಿತಲ್ಲ. ಇದಕ್ಕೆ ವಿರುದ್ಧವಾಗಿ ನಿರುತ್ಸಾಹಕ್ಕೂ ಇದೆ ಬಣ್ಣಗಳನ್ನು ತೆಗೆದುಕೊಳ್ಳಬಹುದು. ಚಿತ್ರ ನಾವು ಬರೆಯೋದು ಸ್ವಾಮಿ.. ಅಂದರೆ ಹೇಗ್ ಬೇಕಾದ್ರು ಬದಲಿಸಬಹುದು. ಆದರೆ ಬದುಕು ಏನ್ ಮಾಡ್ತೀರಿ? ಒಂದ್ಸರ್ತಿ ಅಚ್ಚಾಗ್ಬಿಟ್ರೆ ಹಸಿಮಣ್ಣಿನ ಮೇಲೆ ಮಡಕೆಯಾಗಿ, ಮಡಕೆ ಒಡೆದುಹೋದ್ರೂ ಅದೆ ಚೆನ್ನಾಗಿದ್ದೂ ಅದೆ ಅದೇ ಮಡಕೆನ ಏನು ಮಾಡಿದ್ದರು ರಿಪೇರಿ ಮಾಡಕ್ಕಾಗಲ್ಲ. ಮಡಿಕೆ ಹೊಸದು ಮಾಡಿಕೊಳ್ಳಬಹುದು. ಹಳೆಯದರಲ್ಲಿ ಬಣ್ಣ ಏನೋ ಚನ್ನಾಗೆ ಬರಬಹುದು. ಆದರೆ ಮೊದಲೆ ತೂತ್ ಆಗಿದ್ದರೆ ಏನ್ ಮಾಡಕ್ಕಾಗುತ್ತೆ.. ಹಾಗೆ ಬದುಕು ಅಲ್ವ! “ಹತಾಶೆಗೂ ಹದವಾದ ಆರ್ದ್ರವಾದ ಹೃದ್ಯವಾದ ಸಹ್ಯ ಬಣ್ಣಕೊಟ್ಟು ಬಣ್ಣದೊಳಗಿನ ಮನದ ಬಣ್ಣಕೆ ಚಿಂತನೆಯ ಲೇಪ” ಎನ್ನುವ ಕವಿಯ ಸಾಲುಗಳು ಇಲ್ಲಿ ಬಹಳ ಕಾಡುತ್ತವೆ.
ನಾವು ಹೇಗೆ ಬಂದರೂ ಈ ಬಣ್ಣ ನಮ್ ನೆರಳು ಉದಾಹಣೆಗೆ ಆ ಕಲರ್ ಈ ಕಲರ್ ಬೇಡ ನೈಜ ಕಲರ್ ಬೇಕು ಎನ್ನುವ ನಮಗೆ ನಮ್ಮ ಮಗ್ಗದವರು ವ್ಯರ್ಥ ಹೂಪಕಳೆಗಳನ್ನು ಬಳಸಿ ವಸ್ತ್ರವೊಂದನ್ನು ನೇಯ್ದು ಕೊಡುತ್ತಾರೆ. ಉಡುಪಿನಲ್ಲಿ ನೈಸರ್ಗಿಕ ಬಣ್ಣ ಬಯಸುವ ನಮ್ಮ ಮನಸ್ಸು ತನ್ನಂತರ್ಗತದಲ್ಲಿಯೂ ನೈಜವಾಗಿರಬೇಕು ಎಂದೇಕೆ ಬಯಸುವುದಿಲ್ಲ. ನಮ್ಮ ಬಾವುಟ ಒಳಗೊಂಡ ಕೇಸರಿ, ಬಿಳಿ, ಹಸಿರು, ನೀಲಿ ಬಣ್ಣಗಳು ಆದರ್ಶವನ್ನು ಹೇಳಿಕೊಡುತ್ತವೆ ಎಂದು ಎಲ್ಲಿಯೂ ಹೇಳುವುದೇ ಇಲ್ಲ. ಸಂಕೇತಿಸುತ್ತವೆ ಸಂಕೇತಿಸುತ್ತವೆ ಎಂದಷ್ಟೇ ಹೇಳಿ ಕೇವಲ ಸಂಕೇತವಾಗಿಸಿದ್ದೇವೆ.
ಪ್ರಕೃತಿಯಲ್ಲಿ ಬಣ್ಣ ಒಳ್ಳೆಯದು; ಆಹಾರದಲ್ಲಿ ಬಣ್ಣ ಒಳ್ಳೆಯದಲ್ಲ. ನಮ್ಮ ನೈಸರ್ಗಿಕ ಆಹಾರ ಪದಾರ್ಥದಲ್ಲಿಯೇ ಕಲರ್ ಇದೆ ಅದಕ್ಕೆ ಕೆನೆಬಣ್ಣ, ಅರಿಶಿನ, ಮಸ್ಟರ್ಡ್ ಎಲ್ಲೊ, ಪಿಸ್ತ ಗ್ರಿನ್, ಟೊಮ್ಯಾಟೊ ರೆಡ್ ಎನ್ನುವುದು. ಈ ಆಹಾರ ಎಂದಾಗ ಜೋಕ್ ನೆನಪಾಗುತ್ತದೆ. ಅದೇನೆಂದರೆ ವಿದೇಶಿಗನೊಬ್ಬ ನಮ್ಮ ಚಿತ್ರಾನ್ನ ನೋಡಿ ಭಾರತೀಯ ಮಹಿಳೆಗೆ ಎಷ್ಟು ತಾಳ್ಮೆ ಇದೆ ಒಂದೊಂದೆ ಅನ್ನದ ಅಗುಳು ಹಿಡಿದು ಬಣ್ಣ ಹಚ್ಚಿದ್ದಾಳಲ್ಲ ಎನ್ನುತ್ತಾನೆ. ಅದೊಂದು ಪ್ರಶಂಸೆ ಪಡುವುದು. ಅವನಿಗೆ ಗೊತ್ತಿಲ್ಲ ಪಾಪ ಅರಿಶಿನ ಹಾಕಿ ಅನ್ನವನ್ನೆ ಮತ್ತೆ ಮತ್ತೆ ಮೇಲೆ ಕೆಳಗೆ ಮಾಡಿದರೆ ಎಲ್ಲವೂ ಅರಿಶಿಣ ಬಣ್ಣ ಪಡೆಯುತ್ತವೆ ಎಂದು. ಇರಲಿ ಇಲ್ಲಿ ತರ್ಕ ಮಾಡಿದರೆ ಅನ್ನದ ಬಣ್ಣ ಹಳದಿ ಎನ್ನುವುದಲ್ಲ ಆ ವಿದೇಶಿಗ ಭಾರತೀಯ ಮಹಿಳೆಗೆ ಎಷ್ಟು ತಾಳ್ಮೆ ಇದೆ ಎಂದು ಹೇಳುವುದೇ ನಿಜವಾದ ಬಣ್ಣವಲ್ಲವೇ? ನವಿಲು, ನವಿಲುಗರಿ ಕೊಳಲು, ಜೇನಮಡಿಕೆ, ಮೊಸರಕುಡಿಕೆ, ಹೂ, ಎಲೆ, ನಕ್ಷತ್ರ ಮೋಡದ ಜೀವಸೆಲೆಯ ಬಣ್ಣ… ಎಲ್ಲವೂ ಬಣ್ಣದ ವಿವಿಧ ಮಜಲುಗಳು.

ಕಪ್ಪು ಮೋಡ ತರಿಸುವ ಮಳೆಯ ಬಣ್ಣ ಬಿಳಿ. ಅದರಲ್ಲಿಯೂ ಸ್ವಾತಿ ಮಳೆ ನೀರನ್ನು ಮಣ್ಣಿನ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ೧೦ ಭಾಗ ಸಾಧಾರಣ ನೀರಿಗೆ ೧ ಭಾಗ ಈ ಮಳೆ ನೀರನ್ನು ಸೇರಿಸಿ ಬೆಳೆಗಳಿಗೆ ಸಿಂಪಡಿಸಿದರೆ ಕೀಟಭಾದೆ ನಿಯಂತ್ರಣಕ್ಕೆ ಬರುತ್ತದೆ ಎಂಬ ಮಾತು ಇದೆ. ಹಾಗೆ ನೇರವಾಗಿ ಬರುವ ಮಳೆ ನೀರನ್ನು ಸಂಗ್ರಹಿಸಿ ಹತ್ತಿಬಟ್ಟೆಯಲ್ಲಿ ಶೋಧಿಸಿ ಔಷಧಿಯಂತೆ ಬೇಕಾದಾಗ ಅಂದರೆ ಸುಟ್ಟಗಾಯಗಳಿಗೆ, ಗಾಯಗಳಿಗೆ, ಕಿವಿನೋವಿಗೆ ಬಿಂದು ಬಿಂದುಗಳಾಗಿ ಉಪಯೋಗಿಸುವ ಜಾಣ್ಮೆ ಜಾನಪದರಲ್ಲಿತ್ತು. ನೋವು ನಿವಾರಕ ಹಾಗು ನಂಜುನಿವಾರಕ ಗುಣ ಈ ಮಳೆ ನೀರಿಗೆ ಇರುತ್ತದೆ ಎಂಬ ಕಾರಣವನ್ನವರು ಕೊಡುತ್ತಿದ್ದರು. ಇತ್ತೀಚಿಗೆ ಈ ಸ್ವಾತಿ ಮಳೆ ನೀರು ನೀರಿನ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆಗಳಾಗಬೇಕೆಂಬ ಮಾತುಗಳೂ ಕೇಳಿಬರುತ್ತಿದೆ.
ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ
ಎಂಬ ಹಂಸಲೇಖರವರ ಗೀತೆಯ ಸಾಲಿನಂತೆ ತಣಿಸುವ ಗುಣ ಈ ಮಳೆಗೆ ಇದೆಯಂತೆ ಅಂದರೆ ಹೊಟ್ಟೆಯನ್ನು ತಣಿಸುವ ಸಿಹಿಮಜ್ಜಿಗೆ ಔಷಧಕ್ಕೆ ಕೆಲವೊಮ್ಮೆ ಬೇಕಾಗುವ ಹುಳಿಮಜ್ಜಿಗೆ ಒಟ್ಟಂದದಲಿ ಒಳ್ಳೆಯ ಮಜ್ಜಿಗೆಗೆ ಸ್ವಾತಿಮಳೆ ಇದ್ದರೆ ಚೆನ್ನ ಎಂಬ ಮಾತಿವೆ. ಅಂದರೆ ಸ್ವಾತಿ ಮಳೆನೀರನ್ನು ಹಾಲಿಗೆ ಹಾಕಿದರೆ ಹೆಪ್ಪಾಗಿ ಹೊಸಮಜ್ಜಿಗೆಯಾಗುತ್ತದೆ ಎಂಬ ಅನುಭವದ ಮಾತೂ ನಮ್ಮ ಹಿರಿಯರಲ್ಲಿವೆ.
ಅದೇ ಪ್ರಕೃತಿಯ ಸೂರ್ಯ ಚಂದಿರ ಎಲ್ಲಾ ಬಣ್ಣ ಬದಲಿಸ್ತಾರೆ. ಚಂದ್ರನಿಗಿಂತಲು ಸೂರ್ಯ…. ಬೆಳಗ್ಗೆ ಕೆಂಪಾಗಿದ್ದೆ ಉದಯ, ಸಂಜೆ ಕೆಂಪಾಗಿದ್ದೆ ಅಸ್ತ ಎನ್ನುತ್ತಾರೆ. ಮನುಷ್ಯನೂ ಹುಟಿದ್ದಾಗ ಕೆಂಪಾಗಿ ಇರ್ತಾನೆ. ಬಣ್ಣ ಬದಲಿಕೆ ವಿದ್ಯೆಕಲಿಕೆಯಲ್ಲಿ ಬುದ್ದಿ ಕಲಿಕೆಯಲ್ಲಾಗುತ್ತದೆ.
ಬಣ್ಣಗಳು ವಿವಿಧ ಬಣಗಳಾಗಬಾರದು ಅಷ್ಟೇ…… ಬಣ್ಣಗಳು ಸುಖವಾಗಿರಬೇಕು. ಎಲ್ಲಿ ನಮ್ಮ ಆರೋಗ್ಯದಲ್ಲಿ ನಮ್ಮ ರಕ್ತಕಡುಕೆಂಪು ಆಗಿಲ್ಲವಾದರೆ ರಕ್ತಹೀನತೆ ಎನ್ನುತ್ತಾರೆ. ಮುಟ್ಟಿನ ರಕ್ತ ಕಂದು ಬಣ್ಣದ್ದಾಗಿದ್ದರೆ ಥೈರಾಯ್ಡ್ ಸಮಸ್ಯೆ ಎನ್ನುತ್ತಾರೆ. ನಾಲಗೆ ಹಳದಿಯಾದರೆ, ನೀಲಿಕಟ್ಟಿದರೆ ಕಣ್ಣು ಬಿಳುಚಿಕೊಂಡರೆ ಬೇರೆ ಬೇರೆ ಕಾಯಿಲೆಗಳನ್ನು ಆರೋಪಿಸಿ ಹೇಳುತ್ತಾರೆ. ತರಕಾರಿಗಳನ್ನು ಹಳದಿ, ಹಸಿರು, ಕೆಂಪು ತರಕಾರಿಗಳು ಎನ್ನುವುದಿಲ್ಲವೆ? ಇಷ್ಟವಾದ ಕಲರಿನ ತರಕಾರಿ ತಿನ್ನುತ್ತೇವೆ. ಆರೋಗ್ಯಕರವಾದ ಬಿಳಿಯ ಮೂಲಂಗಿ ವಾಸನೆ ಎಂದು ವರ್ಜಿಸುತ್ತೇವೆ. ನೋಡಿ ಮನುಷ್ಯ ಎಷ್ಟು ಸೆಲೆಕ್ಟಿವ್ ಎಂದು.
ಬಣ್ಣದ ಚಿಂತನೆ ಇಲ್ಲಿಗೇ ಮುಗಿಯದು. ಅಡುಗೆ ಮಾಡುವಾಗ ಹೊಂಬಣ್ಣ ಬರುವವರೆಗೆ ಹುರಿಯಿರಿ, ಕರಿಯಿರಿ ಎನ್ನುತ್ತಾರೆ. ಅದು ಚಿನ್ನವನ್ನೇ ಸಂಕೇತಿಸುತ್ತದೆಯಲ್ಲಾ ಅದು ಶ್ರೇಷ್ಟವೆ? ಎಷ್ಟೇ ಪ್ರಾಮುಖ್ಯತೆಯನ್ನು ನಾವು ಚಿನ್ನ ಕೊಟ್ಟರೂ ನಮ್ಮ ಅನ್ನದ ಬಣ್ಣ ಬಿಳಿ .ಅನ್ನವೇ ಬ್ರಹ್ಮ ಎನ್ನುವುದಿಲ್ಲವೆ? ಚಿನ್ನದರೇಖನ್ನು ಬಳಸಿ ಔಷಧ ತಯಾರಿಸಿದರೂ ಅದನ್ನು ಕೊಡುವದು ಬಿಳಿಯ ಬೆಳ್ಳಿಯಲ್ಲಿ. ಸುತ್ತಿಬಳಸಿ ಬಿಳಿ ಬಣ್ಣ ಶ್ರೇಷ್ಟ ಎನ್ನುವುದಾದರೂ ಬಿಳಿಯ ಬಣ್ಣ ಏಳು ಬಣ್ಣವಾಗುವುದು ಏಳು ಬಣ್ಣಗಳಿಂದಲೇ. ಆ ಬಣ್ಣ ಕಾಣಲು ಅಸುನೀಗಿದ ಬೆಳಕಲ್ಲೂ ಕಪ್ಪನ್ನು ಬಗೆದು ಒಗೆಯಲೇಕೇಬೇಕು. ಅಸಿತ ಬಣ್ಣ ಎಸೆಯಲೇಬೇಕು ಬಿಳಿ ಬಣ್ಣ ಪಡೆಯಲೇಬೇಕು.
ಒಟ್ಟಾರೆ ಈ ಬದುಕು ಬಣ್ಣದ ಸಂತೆ. ಅಗತ್ಯ ಬಣ್ಣಗಳು ಮನಸೇರಬೇಕು. ಸಂತೆಯ ಬಣ್ಣಗಳು ಕೆಲವು ಹೇಗೆ ಮೋಹಕವಾಗಿ ಕಂಡು ಪರಾಮರ್ಶಿಸಿದಾಗ ಹೇಗೆ ತನ್ನ ಗುಟ್ಟನ್ನು ಬಿಡುತ್ತವೆಯೋ ಅಂತೆಯೇ ಬದುಕಿನ ಸಮತೆಯ ಬಣ್ಣಗಳು ಬಹಳ ಮೋಹಕ, ರಂಜಕವಾಗಿದ್ದರೂ ಕಾಲಕಳೆದಂತೆ ಮಾಸುತ್ತವೆ. ನೈಜವಾಗುತ್ತವೆ.. ಹಾಗಾಗಿ ಎಲ್ಲ ಬಣ್ಣಕ್ಕೂ ಮಾರುಹೋಗದ ಬಣ್ಣ ಕಳೆಯದ ಸಹಜತೆಗೆ ಒಗ್ಗಿಕೊಳ್ಳೋಣವೇ!
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.