Advertisement
ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್‌ ಜಯಣ್ಣ ಬರಹ

ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್‌ ಜಯಣ್ಣ ಬರಹ

ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ ತೋರುತ್ತದೆ.
ಕನ್ನಡ ಭಾಷೆ ಮತ್ತು ಅದರ ಬಳಕೆಯ ಕುರಿತು ದರ್ಶನ್‌ ಜಯಣ್ಣ ಬರಹ

ಕವಿ ನಿಸಾರ್ ಅಹ್ಮದ್ ಅವರ ಒಂದು ಪದ್ಯ..
“ಕನ್ನಡವೆಂದರೆ ಬರಿ ನುಡಿಯಲ್ಲ
ಹಿರಿದಿದೆ ಅದರರ್ಥ
ಜಲವೆಂದರೆ ಕೇವಲ ನೀರಲ್ಲ
ಅದು ಪಾವನ ತೀರ್ಥ” ಅನ್ನುತ್ತದೆ.

ನಾವು ಹಲವು ಬಾರಿ ಕನ್ನಡದ ಕನ್ನಡಿಗನ ಮತ್ತು ಕರ್ನಾಟಕದ ಬಗ್ಗೆ ಮಾತನಾಡುವಾಗಲೆಲ್ಲ ಒಂದು ವಿಷಯವನ್ನ ಗೌಣವಾಗಿಸುತ್ತೇವೆ. ಅದೆಂದರೆ ಕರ್ನಾಟಕ ನಿಜವಾದ ಅರ್ಥದಲ್ಲಿ “one state, many worlds” ಎಂಬುದು. ಇಲ್ಲಿ ಅತ್ಯಂತ ಮಳೆಬರುವ ಆಗುಂಬೆ ಇದೆ, ನಿತ್ಯಹರಿದ್ವರ್ಣ ಕಾಡುಗಳಿವೆ, ಬರಿದಾದ ತಲಕಾಡಿದೆ, ಸದಾ ಮಂಜು ಬೀಳುವ ಊರುಗಳಿವೆ, ಬಯಲು ಸೀಮೆ, ಕುರುಚಲು ಕಾಡು, ಎಲ್ಲ ರೀತಿಯ ಕಾಡು ಪ್ರಾಣಿಗಳು, ಹಕ್ಕಿ- ಹುಳು ಸಂಕುಲ ಇತ್ಯಾದಿ. ನಮ್ಮಲ್ಲಿ ಭತ್ತ, ರಾಗಿ, ಜೋಳ, ಕಾಳು ಬೇಳೆ, ಸಿರಿ ಧಾನ್ಯಗಳು, ತರಕಾರಿ, ಹಣ್ಣು, ತೆಂಗು, ಅಡಿಕೆ, ಟೀ, ಕಾಫಿ, ವೆನಿಲ್ಲಾ ಎಲ್ಲವನ್ನೂ ಬೆಳೆವ ಗುಣವನ್ನು ಪ್ರಕೃತಿ ದಯಪಾಲಿಸಿದೆ. ಇಲ್ಲಿ ಹೊಳೆ, ನದಿ, ಸರೋವರ, ಜಲಪಾತ, ಬುಗ್ಗೆ, ಸಾಗರ ಎಲ್ಲ ಇದೆ. ನಮ್ಮಲ್ಲಿ ಪ್ರತಿಷ್ಠಿತ ವಿದ್ಯಾಲಯಗಳು, ಆಸ್ಪತ್ರೆ, ಕಾಲೇಜು, ಮಠಗಳು, UNESCO ಮಾನ್ಯತೆ ಪಡೆದ ಅತಿ ಹೆಚ್ಚು ಐತಿಹಾಸಿಕ ಭೌಗೋಳಿಕ ಪ್ರವಾಸಿ ತಾಣಗಳಿವೆ. ವೈಜ್ಞಾನಿಕ ಸಂಶೋಧನೆಗೆ, ಕಲಾ ತರಬೇತಿಗೆ, ಕರ ಕುಶಲಿಗೆ ತನ್ನ ಪರಿಣಿತಿಯನ್ನ ಹುರಿ ಮಾಡಿಕೊಳ್ಳಬಹುದಾದ ಸಂಸ್ಥೆಗಳಿವೆ.

ನಮ್ಮ ರಾಜ್ಯವೇ ಒಂದು ವಿಶ್ವ! ಇಲ್ಲಿ ಹಲವು ರೀತಿಯ ಕನ್ನಡವಲ್ಲದೆ, ಕರಾವಳಿಯಲಿ ತುಳು, ಕೊಂಕಣಿ, ಕುಂದಗನ್ನಡ, ಕರಡ, ಬ್ಯಾರಿ ಭಾಷೆಗಳು, ಕೊಡಗಿನ ಕೊಡವ, ಮಲೆನಾಡಿನ ಹವ್ಯಕ ಮತ್ತು ಕೆಲವು ಅರೆಕನ್ನಡ ಭಾಷೆಗಳು, ಬಯಲು ಮತ್ತು ಉತ್ತರ ಕರ್ನಾಟಕ ಸೀಮೆಯಲ್ಲಿ ಉರ್ದು, ಲಮಾಣಿ, ಸಿದ್ಧಿ, ಸೋಲಿಗ ಭಾಷೆಗಳು ಇನ್ನೂ ಹಲವು ನಮಗೆ ತಿಳಿಯದ, ಕೆಲವು ಪಂಗಡಗಳು ಮಾತ್ರ ಮಾತಾಡುವ ಭಾಷೆಗಳಿವೆ. ಭಾಷೆಯ ಜೊತೆಗೆ ಸಂಸ್ಕೃತಿ, ಉಡುಗೆ, ಅಡುಗೆ, ತೊಡುಗೆ, ಆಚಾರ ಎಲ್ಲವೂ ವೈವಿಧ್ಯಮಯ. ಭಾರತದ ಯಾವ ರಾಜ್ಯದಲ್ಲೂ ಇಂತಹ ಮಜಾ ಇರಲಾರದು. ನಮ್ಮ ಈ ಎಲ್ಲ ಭಾಷೆಗಳ ಜನರನ್ನ ನಮ್ಮ ಕನ್ನಡ ಬೆಸೆಯುವ ಕೆಲಸ ಮಾಡುತ್ತದೆ. ಇದರ ಪರಸ್ಪರ ಕೊಡು ಕೊಳ್ಳುವಿಕೆಯಿಂದ ಅರಿವಿನ ವಿಸ್ತಾರ ಸಾಗಿದೆ.

ನಮ್ಮ ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆಯ ಹೆಸರು ನನನ್ನು ಎಳವೆಯಲ್ಲಿ ಸ್ವಲ್ಪ ಕನ್ಫ್ಯೂಸ್ ಮಾಡಿತ್ತು. “ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ಅದು! ನಾನು ಇದು “ಕನ್ನಡ ಸಂಸ್ಕೃತಿ ಇಲಾಖೆ” ಇರಬೇಕಲ್ಲವೇ? ಅದೇಕೆ ಮತ್ತು ಇದೆ ಮಧ್ಯೆ ಎಂದು ಯೋಚಿಸುವಾಗ ನಮ್ಮ ಗುರುಗಳೊಬ್ಬರು “ನಮ್ಮದು ಹಲವು ಸಂಸ್ಕೃತಿಗಳ ನಾಡು, ಹಲವು ಭಾಷೆಗಳ ಬೀಡು” ಅಂದಿದ್ದರು. ಮೇಲೆ ಬರೆದ ಅಷ್ಟೂ ವಿಷಯ ವೈವಿಧ್ಯಗಳನ್ನು ಎಷ್ಟು ಚೆನ್ನಾಗಿ ಈ “ಮತ್ತು” ಮುತ್ತಾಗಿ ಪೋಣಿಸುತ್ತದೆ ಅನ್ನಿಸುವುದಿಲ್ಲವೇ? ಪ್ರತ್ಯೇಕತೆಯ ಈ ಯುಗದಲ್ಲಿ ನಮ್ಮಲ್ಲಿ ಎಲ್ಲವನ್ನು ನಮ್ಮದರಲ್ಲಿ ವಿಲೀನ ಮಾಡಿಕೊಳ್ಳುವ ಪ್ರಕ್ರಿಯೆಗಿಂತಾ ನಮ್ಮಲ್ಲೇ ಇದ್ದು “ಮತ್ತು ಮತ್ತು” ಬೆರೆತು ಒದಗುವುದು ಎಷ್ಟು ಸುಂದರ!

ಎಷ್ಟೋ ಬಾರಿ ನಾವು ಕನ್ನಡಿಗರು ಇದನ್ನು ಆರ್ಟಿಕ್ಯುಲೇಟ್ ಮಾಡುವಲ್ಲಿ, ನಾವೇ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ ಅನಿಸುವುದಿಲ್ಲವೇ? ಹೊರ ಭಾಷೆಯನ್ನು ಕಲಿಯುವ ಜೊತೆಗೆ ಅಥವಾ ಮೊದಲು ನಾವ್ಯಾಕೆ ನಮ್ಮಲ್ಲೇ ಇರುವ ಒಂದೆರಡು ಭಾಷೆಗಳನ್ನ ತಕ್ಕ ಮಟ್ಟಿಗೆ ಕಲಿಯಬಾರದು? ಇದರ ಅಕಾಡೆಮಿಗಳು ಅದರ ನೇತೃತ್ವ ಕೊಳ್ಳಬಹುದಲ್ಲ? ಹೀಗಾದಾಗ ಹೊರ ರಾಜ್ಯದವರಿಗೆ ಕನಿಷ್ಠ ನಮ್ಮಲ್ಲಿರುವ ವೈವಿಧ್ಯ ಮತ್ತು ಹೊಂದಾಣಿಕೆಯ ಹಿರಿತನ ಅರ್ಥವಾಗಬಹುದೇನೋ? ಕೆಲವೊಮ್ಮೆ ನಾವೂ ಅಂದರೆ ಕನ್ನಡಿಗರೂ (?) ನಮ್ಮ ಸಹೋದರ (ಸಹೋದರಿ) ಭಾಷೆಗಳನ್ನು “Taken for granted” ಮಾಡಿಕೊಂಡು ಬಿಡುತ್ತೇವಲ್ಲವೇ?

ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ (ಲಿಪಿ) ತೋರುತ್ತದೆ. ಗ್ರೀಕ್- ರೋಮನ್- ಈಜಿಪ್ಟ್‌ನ ಕೆಲವು ಕಡೆಗಳಲ್ಲಿ ನಮ್ಮಲ್ಲಿಯ ಭಾಷೆಯ ಲಿಪಿ, ಪುಸ್ತಕದ ಕೆಲವು ಹಾಳೆಗಳು ಮತ್ತು ನಾಣ್ಯಗಳು ಸಿಕ್ಕಿರುವುದನ್ನು ಮತ್ತು ನಮ್ಮ ಬೆಂಗಳೂರಿನಲ್ಲಿ ಅವರ ನಾಣ್ಯಗಳು ದೊರೆತಿರುವುದನ್ನು (ಸಂಪರ್ಕ, ವ್ಯಾಪಾರ) ಇತ್ತೀಚೆಗೆ ಹಲವು ಇತಿಹಾಸಕಾರರು ಬೆಳಕಿಗೆ ತಂದಿದ್ದಾರೆ. ಇಸ್ರೇಲ್‌ನಲ್ಲಿ ಹಲವು ಅತ್ಯಂತ ಹಳೆಯ ಭಾಷೆಗಳ ಲಿಪಿಯನ್ನು ಗೋಡೆಯ ಮೇಲೆ ಕೆತ್ತಿದ್ದಾರಂತೆ, ಅಲ್ಲಿ ಕನ್ನಡವೂ ಇದೆಯಂತೆ. ಎಷ್ಟಾದರೂ ಭಾರತದ ಅತ್ಯಂತ ಹಳೆಯ ನುಡಿಗಳಲ್ಲಿ ತಮಿಳಿನ ಜೊತೆ ಕನ್ನಡವೂ (2500 ವರ್ಷಕ್ಕೂ ಹಳೆಯ ಭಾಷೆ) ಒಂದಲ್ಲವೇ! ಇರಲೇಬೇಕಲ್ಲ ಮತ್ತೆ?

ಅದಷ್ಟೇ ಅಲ್ಲದೇ ನಮ್ಮ ಹಲವು ಬರಹಗಾರರ ಮಾತೃ ಭಾಷೆ ಕನ್ನಡೇತರವಾಗಿರುವುದು ನಮಗೆ ತಿಳಿದೇ ಇದೆ. ಮಾಸ್ತಿ ತಮಿಳು, ಅನಂತಮೂರ್ತಿ ತುಳು, ಕಾರಂತರು ಕೊಂಕಣಿ, ಗೋಕಾಕರು ಮರಾಠಿ, ಕಾರ್ನಾಡ ಕೊಂಕಣಿ, ಪು ತಿ ನ ತಮಿಳು, ಬೇಂದ್ರೆ ಮರಾಠಿ ಹೀಗೆ ಹಲವು ಉದಾಹರಣೆಗಳಿವೆಯಾದರೂ ಅವರ ಕೊಡುಗೆ ಕನ್ನಡಕ್ಕೆ ಧಾರಾಳವಾಗಿದೆ. ಕುವೆಂಪುರವರು ಒಂದು ಕಡೆ “ಯಾವ ಇತರೇ ಭಾಷೆಗಳ ಸಹಾಯವಿಲ್ಲದೆ ಸಂಸ್ಕೃತದ ಪಾರುಪತ್ಯೆ ಇಲ್ಲದೆಯೂ ಜಗತ್ತಿನ ಎಲ್ಲವನ್ನೂ ನುಡಿಯಲ್ಲಿ ರೂಪಿಸಿಕೊಳ್ಳುವ ಶಕ್ತಿ ಕನ್ನಡ ಭಾಷೆಗಿದೆ” ಎಂದಿದ್ದಾರೆ. ನಾವು ಹೇರಳವಾಗಿ ಸಂಸ್ಕೃತ ಬಳಸುತ್ತೇವೆಯಾದರೂ, ನಿಮ್ಮ ಕಾಲೇಜಿನ ಹಳೆಯ ಕನ್ನಡ ಪಂಡಿತರನ್ನು ಕೇಳಿ; ಅವರು ಈ ಮಾತನ್ನು ಪುಷ್ಠೀಕರಿಸುತ್ತಾರೆ. ನಮ್ಮಲ್ಲಿ ಪುಲಕೇಶಿಯಂತಹ, ಕೃಷ್ಣದೇವರಾಯರಂತಹಾ ಪರಾಕ್ರಮಿಗಳು, ಆಧುನಿಕ ಬೆಂಗಳೂರಿನ ಕೆಂಪೇಗೌಡರು (I & II) ಆಗಿ ಹೋಗಿದ್ದಾರೆ.

ಲೋಕವಿಖ್ಯಾತ ವಿಜ್ಞಾನಿಗಳು, ಭಾಸ್ಕರನಂತಹಾ ( Bhaskara II) ಗಣಿತ ಪರಿಣಿತರು, ಆಯುರ್ವೇದ ಪಂಡಿತರು, ವಿದ್ಯಾರಣ್ಯರಂತಾ ಗುರುಗಳು, ಹೊಸ ಉಪನಿಷದ್‌ಗಳನ್ನು ಸಾಮಾನ್ಯರಿಗೆ ಪರಿಚಯಿಸಿದ ಬಸವಾದಿ ಶರಣರು, ದಾಸರು ಆಗಿ ಹೋಗಿದ್ದಾರೆ, ಜಕ್ಕಣನಂತಹಾ ಶಿಲ್ಪಿ, ಪಂಪ, ರನ್ನ, ಜನ್ನ, ನಾರಾಯಣಪ್ಪರಂತಹಾ ಕವಿಗಳು, ರಂಗದ ಮೇಲೆ ಕುದುರೆ ಆನೆಯ ತಂದ ಗುಬ್ಬಿ ವೀರಣ್ಣನವರು… ಬಿಡಿ ಪಟ್ಟಿ ದೊಡ್ಡದಿದೆ ಮತ್ತು ಎಷ್ಟು ಬರೆದರೂ ಉಳಿದುಬಿಡಬಹುದಾದದ್ದು ಬಹಳಷ್ಟು ಇದೆ, ಆದರೆ ಹಾಗೆಂದು ಇವರನ್ನೆಲ್ಲ, ನಮ್ಮ ನಾಡಿನ ವೈವಿಧ್ಯವನ್ನೆಲ್ಲ, ಕೂಡಿ ಬಾಳುತ್ತಿರುವ ಬಾಳುವ ಸೊಗವನ್ನೆಲ್ಲ ಮರೆಯಬಾರದಲ್ಲ? ಅದಕ್ಕೆ ಒಕ್ಕಣೆಯಲ್ಲಿ “ಕನ್ನಡವೆಂಬ ಮರೆಗುಳಿ ಮನಸು” ಎಂದು ಶುರುಮಾಡಿದ್ದು.

ಕಡೆಯಲ್ಲಿ ಒಂದು ಮಾತು. ನಮ್ಮ ನಾಡಿನ ಅಪ್ರತಿಮ ವೀರ ನೃಪತುಂಗ ತನ್ನ ಕವಿರಾಜಮಾರ್ಗದಲ್ಲಿ ಒಂದು ಮಾತನ್ನು ಹೇಳಿದ್ದಾನೆಂದು ಹಲವರು ಹೇಳುವುದನ್ನು ಕೇಳಿರುತ್ತೀರಿ. ಅದು “ಕೂತೋದದೆ ಕಾವ್ಯ ರಚಿಸಬಲ್ಲ ಕುಶಲಮತಿಗಳ್ ಕನ್ನಡಿಗರ್” ಎಂಬುದು. ನಾವು ಅದನ್ನು ನಂಬಿಕೊಂಡು ಸೋಂಬೇರಿಗಳಾಗಿ ಕೂತೋದದೆ ಕಾಲಹರಣ ಮಾಡಬಾರದೆಂಬುದು ಎಲ್ಲರಂತೆ ನನ್ನ ಆಶಯ ಅಷ್ಟೇ.

About The Author

ದರ್ಶನ್ ಜಯಣ್ಣ

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. "ಪದ್ಯ ಸಿಕ್ಕಿತು"  (ಕವನ ಸಂಕಲನ) ಮತ್ತು ಅಪ್ಪನ ರ್‍ಯಾಲೀಸ್ ಸೈಕಲ್ (ಪ್ರಬಂಧ ಸಂಕಲನ) ಇವರ ಪ್ರಕಟಿತ ಕೃತಿಗಳು.

1 Comment

  1. ವೀರಭದ್ರಪ್ಪ

    ಕನ್ನಡ ಭಾಷೆಯ ಮೇಲಿನ ಗೌರವ, ಅದರ ಮೇಲೆ ಇರುವ ನಿಮ್ಮ ಕಾಳಜಿ ಮತ್ತು ಅದರ ವೈವಿಧ್ಯತೆಯನ್ನು ಜನಗಳಿಗೆ ತಿಳಿಸುವ ಪ್ರಯತ್ನ ಬಹಳ ವಿಶಿಷ್ಟವಾಗಿದೆ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ