Advertisement
ನಿದ್ದೆ ಮತ್ತು ಚಲನೆ; ಪಯಣ ಹೇಳುವ ಕಥೆ: ರಾಮ್‌ ಪ್ರಕಾಶ್‌ ರೈ ಕೆ. ಸರಣಿ

ನಿದ್ದೆ ಮತ್ತು ಚಲನೆ; ಪಯಣ ಹೇಳುವ ಕಥೆ: ರಾಮ್‌ ಪ್ರಕಾಶ್‌ ರೈ ಕೆ. ಸರಣಿ

ದೈವ ದರುಶನದ ನಂತರ ಜೇಮ್ಸ್ ತನ್ನ ಪತ್ನಿಯ ಕಾಲಿಗೆ ಮುಲಾಮು ಹಚ್ಚಿ ನೇವೇರಿಸುವ ದೃಶ್ಯ ಬರುತ್ತದೆ. ಅದನ್ನು ಸ್ನಾನ ಮುಗಿಸಿ ಬರುವ ಮಗ ನೋಡುತ್ತಾ ನಿಲ್ಲುತ್ತಾನೆ. ಗಂಡಸರ ತುಕ್ಕು ಹಿಡಿದ ಈಗೋಗಳಿಗೆ ಈ ದೃಶ್ಯ ಚಾಟಿ ಏಟಿನಂತೆ ಕಾಣುತ್ತದೆ. ಮುಂದೆ, ಜೇಮ್ಸ್ ಕಾಣೆಯಾಗಿ ಸುಂದರಂ ಆಗಿ ಬದಲಾದಾಗ, ಬಸ್ಸಿನಲ್ಲಿದ್ದ ಒಂದು ಪರಿವಾರ ಎರ್ನಾಕುಳಮ್ ನತ್ತ ಸಾಗುವ ಗಾಡಿಯ ಹತ್ತಿ ಹೋಗಿ ಬಿಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ನನ್ ಪಾಕಲ್ ನೆರತು ಮಾಯಕಮ್’ ಸಿನಿಮಾದ ವಿಶ್ಲೇಷಣೆ

Death is sinking into slumbers deep birth again is waking out of sleep

ಸುದೀರ್ಘ ನಿದ್ದೆಯೇ ಸಾವು, ನಿದ್ದೆಯಿಂದ ಮರಳಿ ಹೊರ ಬರುವುದೇ ಬದುಕು
-ತಿರುಕ್ಕುರಲ್

ಬದುಕೊಂದು ನಾಟಕ ರಂಗ. ವಿಧಿ ಅದರ ಸಾಹೇಬ. ಇಲ್ಲಿ ಎಲ್ಲರೂ ಪಾತ್ರಧಾರಿಗಳು. ಕಾಲವೆಂಬ ವೇದಿಕೆಯ ಮೇಲೆ, ಪರಿಸ್ಥಿತಿಗಳೆಂಬ ಬಣ್ಣ ಬಣ್ಣದ ಕಣ್ಣುಗಳು ಆಕ್ರಮಿಸಿದಾಗ, ಭಾವನೆಗಳು ಮೌನಕ್ಕೆ ರಾಜೀನಾಮೆ ನೀಡುತ್ತವೆ. ಕೆಲವು ಬಣ್ಣಗಳು ಕೊನೆವರೆಗೆ ಉಳಿಯುತ್ತದೆ, ಇನ್ನೂ ಕೆಲವನ್ನು ಹನಿಗಳು ನುಂಗುತ್ತವೆ. ಇಲ್ಲಿನ ದೃಶ್ಯಗಳಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಯಿದೆ. ಬಂದರೂ ಬರಬಹುದು, ಬಾರದೆಯೂ ಇರಬಹುದು ಊರು ತಲುಪಿಸುವ ಕೊನೆಯ ಬಸ್ಸು ಎಂಬಂತೆ, ತರುಣಿಯಂತಾಡುವ ಮಳೆಯ ಮನಸ್ಸಿನ ಲೆಕ್ಕಾಚಾರ ಹಾಕುವ ಹವಾಮಾನ ವರದಿಯ ತೆರನಾದದು ಈ ನಾಟಕ. ಎಲ್ಲಿ ಶುರು, ಎಲ್ಲಿ ಕೊನೆ ಈ ಸಂಚಾರ, ಉಹೂಂ ಎಲ್ಲವೂ ನಿಗೂಢ. ಯಾವ ಸಮಯಕ್ಕೆ ಪಾತ್ರ ರಂಗ ಪ್ರವೇಶಿಸಬೇಕು, ಯಾವಾಗ ನಿರ್ಗಮಿಸಬೇಕು ಇದೆಲ್ಲವ ನಿರ್ಧರಿಸುವ ರಂಗನಾಯಕ ಕಣ್ಣಿಗೆ ನಿಲುಕುವುದಿಲ್ಲ. ಇಲ್ಲಿ ರೈಲಿನ ಹೆಜ್ಜೆ ಸಪ್ಪಳ ಎದೆ ಬಿರಿದರೂ, ನಡುಗದೆ ನಿಲ್ಲುವ ಸ್ಟೇಷನ್ನುಗಳು ಒಂದೆಡೆಯಾದರೆ, ಅಲೆಗಳ ಜೊತೆಗೆ ಆಟ ಮುಗಿಸುವ ಮಳಲಿನ ಚೂರುಗಳು ಇನ್ನೊಂದೆಡೆ. ಭೂಮಿ ನಡೆಯುತ್ತಲೇ ಇರುತ್ತದೆ, ಸೂರ್ಯ ಸುಡುತ್ತಾನೆ. ಚಂದ್ರ ನಗುತ್ತಾನೆ. ಆದರೆ ಕೆಲವು ಬದುಕುಗಳು ಮಾತ್ರ ಇವರ ಸಂಗಡವಿರುವುದು ಹೆಚ್ಚು. ಇನ್ನೂ ಕೆಲವವು, ಟ್ರಕ್‌ಗಳು ಟೋಲ್ ಗೇಟ್ ದಾಟುವಂತೆ, ಚೂರು ಪಾರು ಸಮಯವ ಕಳೆದು ಎದ್ದು ಬಿದ್ದು ನಡೆದು ಬಿಡುತ್ತದೆ. ಇದು ಅನಿಶ್ಚಿತ ಸಂವತ್ಸರಗಳ ಸಂತೆ. ನಿನ್ನೆ ಗುಂಡು ಕಲ್ಲಿನ ಹಾಗಿದ್ದರು, ಇಂದು ಕಲ್ಲು ತಾಗಿ ಎಡವಿ, ಕಣ್ಮುಚ್ಚಿದ್ದಾರೆ ಎಂಬಂತಹ ಸಾಲುಗಳು ಇದಕ್ಕೆ ಹಿಡಿದ ಕನ್ನಡಿ. ಮೊನ್ನೆ ಮೊನ್ನೆ ನಮ್ಮ ಮನೆಯಲ್ಲಿ ಕೆಲಸಕ್ಕಿದ್ದ, ಈಗ ಅವನ ಮನೆಯಲ್ಲಿ ಕೆಲಸಕ್ಕೆ ಡಜನ್ ಆಳುಗಳು ಇದ್ದಾರಂತೆ, ಎಂಬುದು ಕೂಡ ಇಂತಹ ಉದಾಹರಣೆಗಳಿಗೆ ಸಲುವಂಥದ್ದು.

ಇಲ್ಲಿ ನಾಳೆಗಳು ನಿಗೂಢ, ತಿರುವಿನ ಹಿಂದೆ ಅವಿತಿರುವ ರಹಸ್ಯದಂತೆ. ಸಾಗರಗಳು ಸ್ತಬ್ದಗೊಳ್ಳಬಹುದು, ನದಿಯು ಹಿಂತಿರುಗಿ ಓಡಬಹುದು, ಮರಗಳು ಹೆಜ್ಜೆ ಹಾಕಬಹುದು, ಅವನು ಇವನಾಗಬಹುದು. ಒಟ್ಟಾರೆಯಾಗಿ ಏನೂ ಆಗಬಹುದು, ಏನೆಂದು ಇಲ್ಲಿ ಬಲ್ಲವನಿಲ್ಲ. ಇಲ್ಲೊಂದು ಇಂತಹುದೇ ಸನ್ನಿವೇಶ. ತಣ್ಣಗೆ ಮಲಗಿದ್ದ ಜೇಮ್ಸ್ ರೆಪ್ಪೆಗಳ ಬಾಗಿಲು ತೆಗೆಯುವುದು ಸುಂದರಂ ಆಗಿ. ಎರಡು ವ್ಯಕ್ತಿತ್ವಗಳು, ಒಂದು ದೇಹದೊಳಗೆ, ನಾಣ್ಯದ ಎರಡು ಮುಖಗಳಂತೆ. ಯಾಕೆ? ಹೀಗೇಕೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಅತ್ತ ಸಾಗುವ ದಾರಿಯನ್ನು, ಆ ಹಾದಿಗೆ ಅಲಂಕಾರವಾದ ಸಂಗತಿಗಳನ್ನು ಸೆರೆ ಹಿಡಿಯುತ್ತಾ ಸಾಗುವ ಛಾಯಾಗ್ರಾಹಕನ ತೆರನಾದ ಚಿತ್ರವೇ ಲಿಜೊ ಜೋಸ್ ಪೆಲಿಶೇರಿ ಅವರ ‘ನನ್ ಪಾಕಲ್ ನೆರತು ಮಾಯಕಮ್’.

ಅವನು ಜೇಮ್ಸ್. ತನ್ನ ಪತ್ನಿ ಪುತ್ರನ ಜೊತೆಗೂಡಿ ಸುತ್ತಲಿನ ಬಂಧುಗಳ ಬಳಗದೊಂದಿಗೆ ವೆಲಂಕಣಿಗೆ ದೇವರ ದರ್ಶನಕ್ಕೆ ಬಂದಿರುತ್ತಾನೆ. ಪತ್ನಿಯ ಮಂಡಿ ನೋವಿಗೊಂದು ಪರಿಹಾರವ ಕೇಳುವ ಸಲುವಾಗಿ ಅವನ ಪಯಣ. ಇತ್ತ ಕಾರ್ಯಗಳ ಪೂರೈಸಿ, ಲಾಡ್ಜ್‌ನ ಕೌಂಟರ್ ಬಳಿ, ಗೋಡೆ ಹಿಡಿದ ತಿರುಕ್ಕುರಲ್ ಮಾತನ್ನು ಅರ್ಥವಿಸಿಕೊಳ್ಳುತ್ತಾ ರೂಮಿನ ಚಾವಿಗಳನ್ನು ಹಿಂತಿರುಗಿಸಿ, ತನ್ನ ಕಡುಗೆಂಪು ವೈನಿನ ಬಣ್ಣದಲ್ಲಿ ಮುಳುಗಿದ ಕುಬ್ಜ ಬಸ್ಸಿನತ್ತ ಮರಳುತ್ತಾನೆ. ತಮಿಳುನಾಡಿನ ಕಿರಿಯ ರಸ್ತೆಗಳಲ್ಲಿ, ಬಯಲಿನ ತುಂಬಾ ನಲಿವ ಹಸಿರಿನ ನಗುವ ನೋಡುತ್ತಾ ಬಸ್ಸು ಕೇರಳದ ಗಮ್ಯ ದತ್ತ ಓಟ ಕೀಳುತ್ತದೆ. ಸ್ಪೀಕರಿನ ಗಂಟಲಿನಿಂದ ಹಾಡುಗಳು ರೈಲಿನ ಬೋಗಿಗಳಂತೆ ಒಂದರ ಹಿಂದೊಂದರಂತೆ ಬರುತ್ತಲೇ ಇದೆ. ಆಗ ಒಂದು ಗುಂಪು ಹಾಡಿಗೆ ನರ್ತಿಸಲು ಆರಂಭಿಸುತ್ತದೆ. ಜೇಮ್ಸ್‌ಗೆ ಇದು ಕಿರಿಕಿರಿ ಎನಿಸಿ, ಅವರ ಕುಣಿದಾಟವನ್ನು ನಿಲ್ಲಿಸುತ್ತಾನೆ. ಮುಂದೆ ಚಹಾ ವಿರಾಮದಲ್ಲಿ ಚಹಾಕ್ಕೆಷ್ಟು ಸಕ್ಕರೆ ಹಾಕಿದ್ದಾರೆ ಎಂದು ರೇಗುತ್ತಾನೆ. ಚಾಲಕನು ತೆಗೆದುಕೊಂಡ ಮೀನಿನ ಪದಾರ್ಥವೊಂದರ ಮೇಲೆ ಆತನ ಜಿಪುಣ ಬುದ್ಧಿಯು ಬಿದ್ದಾಗ, ಡ್ರೈವರ್ ಅದರ ಬಾಬತ್ತನ್ನು ತಾನೇ ಪಾವತಿಸಿ ಬರುತ್ತಾನೆ.

ಹೀಗೆ ಅವನಲ್ಲಿರುವ ಸಣ್ಣತನಗಳು ಇಲ್ಲಿ ಢಾಳಾಗಿ ಕಾಣಿಸುತ್ತವೆ. ಮುಂದೆ ಪಯಣ ಪಲ್ಲವಿ ಮುಗಿಸಿ, ಚರಣಕ್ಕೆ ಬಂದು ತಲುಪುತ್ತಲೇ, ಎಲ್ಲರೂ ನಿದ್ದೆ ಹೋಗುತ್ತಾರೆ. ಚಾಲಕನೂ ಕೂಡ ತೂಕಡಿಕೆಯ ಒಳ ಹೊಕ್ಕು, ಹೊರ ಬರುತ್ತಲೇ ಇರುತ್ತಾನೆ. ಬಸ್ಸಿನ ಗಾಜುಗಳು ಚಪ್ಪಾಳೆಯ ತಟ್ಟುವುದು ಕೇಳಿಸುತ್ತಿದೆ. ಅಲ್ಲೊಂದು ಹರಡಿದ ಗಿಡಗಳ ತೀರವ ತಲುಪುತ್ತಲೇ, ಥಟ್ಟನೇ ಜೇಮ್ಸ್ ವಾಹನ ನಿಲ್ಲಿಸಲು ಆಜ್ಞಾಪಿಸುತ್ತಾನೆ. ಬ್ರೇಕು ಒಳ ಸೇರುತ್ತಲೇ, ಹೊರಗಿಳಿವ ಜೇಮ್ಸ್ ಗಿಡಗಳ ನಡುವೆ ಸಾಗಿ ಮಾಯವಾಗುತ್ತಾನೆ. ಮುಂದೆ ಆತ ಅಲ್ಲಿನ ಹಳ್ಳಿಯ ಓಣಿಗಳ ದಾಟುತ್ತಾ ಸಾಗಿ ಮನೆಯೊಂದಕ್ಕೆ ಪ್ರವೇಶಿಸುತ್ತಾನೆ. ಅಲ್ಲೊಬ್ಬಳು ಅಜ್ಜಿ ಕಣ್ಣಿಗೆ ಕಪ್ಪು ಕನ್ನಡಕ ಹಾಕಿ, ಕಿವಿಯಲ್ಲಿ ಚಲನಚಿತ್ರವ ಅನುಭವಿಸುತ್ತಿರುತ್ತಾಳೆ. ಜೇಮ್ಸ್ ಬಟ್ಟೆಯ ಬದಲಾಯಿಸಿ, ಬಣ್ಣದ ಲುಂಗಿಯ ಉಟ್ಟು ಅಡುಗೆ ಮನೆಯ ಪ್ರವೇಶಿಸುವಾಗ, ಅಲ್ಲಿ ಮಲಗಿದ್ದ ಪೊನ್ ಕುಳಲಿ ಬಳಿ ಕಾಫಿ ಮಾಡಿ ತರುತ್ತೇನೆ ನೀನು ಮಲಗಿರು ಎಂದು ಹೇಳಿ ಸಾಗುತ್ತಾನೆ. ಆಗ ಅವಳಿಗೆ ಎರಡು ಸಂವತ್ಸರಗಳ ಹಿಂದೆ ಕಳೆದುಹೋದ ತನ್ನ ಗಂಡನ ನೆನಪಾಗುತ್ತದೆ. ಜೊತೆಗೆ ಮಲಗಿದ್ದ ಅಜ್ಜನೂ ಎದ್ದು ಅಡುಗೆ ಮನೆಯತ್ತ ಇಣುಕುತ್ತಾರೆ. ಎಲ್ಲಾ ವಸ್ತುಗಳು ಖಾಲಿಯಾಗಿದೆ, ತಾನು ಮಾರುಕಟ್ಟೆಗೆ ಹೋಗಿ ತೆಗೆದುಕೊಂಡು ಬರುತ್ತೇನೆ ಎಂದು ಹೊರಡುತ್ತಾನೆ ಜೇಮ್ಸ್ ಅಲ್ಲ ಅಲ್ಲ ಸುಂದರಂ. ಅವನು ಅಜ್ಜ ಅಜ್ಜಿಯ ಮಗ, ಪೊನ್ ಕುಳಲಿಯ ಕಳೆದು ಹೋದ ಪತಿ ಸುಂದರಂ ಆಗಿ ಬದಲಾಗಿರುತ್ತಾನೆ. ಅದಾಗಲೇ ಆತ ಮಲಯಾಳಂ ನಿಲ್ಲಿಸಿ, ತಮಿಳನ್ನು ಸಂವಹನ ಭಾಷೆಯಾಗಿ ಬದಲಾಯಿಸಿರುತ್ತಾನೆ. ಮುಂದೆ ಸಾಮಾಗ್ರಿಗಳ ತರಲೆಂದು ಮನೆಯ ಮುಂದೆ ನಿಲ್ಲಿಸಿದ ಬೈಕಿನ ಬೆನ್ನು ಹತ್ತಿ ಮಾರುಕಟ್ಟೆಯತ್ತ ಹೊರಡುತ್ತಾನೆ. ಇದನ್ನು ಕಂಡ ಸಂಬಂಧಿಗಳು, ನೆರೆಯವರು ಇವನನ್ನು ಹಿಡಿಯಲೆಂದು ಸೈಕಲ್ಲು ಹತ್ತಿ ಹಿಂಬಾಲಿಸುತ್ತಾರೆ. ಇತ್ತ ಜೇಮ್ಸ್‌ನನ್ನು ಹುಡುಕುತ್ತಿರುವ ಸಹ ಪಯಣಿಗರು, ಪತ್ನಿ ಮಕ್ಕಳು ಕೂಡ ಎದುರಾಗುತ್ತಾರೆ. ಆದರೆ, ಜೇಮ್ಸ್ ಯಾನೆ ಸುಂದರಂ ಅವರ ಗುರುತು ಹಿಡಿಯದೇ ಸಾಗುತ್ತಾನೆ. ಸೈಕಲ್ಲೂ ಅವನ ಬೆನ್ನ ಹಿಂದೆ ಬರುತ್ತದೆ. ಮುಂದೆ ಆತ ತನ್ನ ಕೃಷಿ ಭೂಮಿಯತ್ತ ಸಾಗಿ, ಅದನ್ನು ಗಮನಿಸಿ ಮಾರುಕಟ್ಟೆಯತ್ತ ಮುನ್ನಡೆಯುತ್ತಾನೆ. ಅಲ್ಲಿನ ಹರಟೆ ಕಟ್ಟೆಯಲ್ಲಿ ಜನರೊಂದಿಗೆ ಕಥೆಯನ್ನು ಹೇಳಿ ಸಂಭ್ರಮಿಸುತ್ತಾನೆ, ನರ್ತಿಸುತ್ತಾನೆ. ಅಲ್ಲಿನ ಜನರೆಲ್ಲಾ ತನ್ನ ಪರಿಚಯದವರೆಂದು ವರ್ತಿಸುವ ಜೇಮ್ಸ್ ಯಾರೆಂದು ದುಗುಡಗೊಳ್ಳುತ್ತಾರೆ.

ಇತ್ತ ಸುಂದರಂ ಮನೆಯ ಮುಂದೆ ಸಹ ಪಯಣಿಗರು, ಪತ್ನಿ ಮತ್ತು ಮಕ್ಕಳು ಕಾದು ಕುಳಿತಿರುತ್ತಾರೆ. ಅಪರಿಚತನನ್ನು ಒಳ ಬಿಟ್ಟಿದ್ದಕ್ಕೆ ಮತ್ತು ಆತನ ಅವಾಂತರಗಳಿಗೆ ಶಾಲೆ ಬಿಟ್ಟು ಬಂದ ಸುಂದರಂ ಮಗಳು ಕೋಪಗೊಳ್ಳುತ್ತಾಳೆ. ಮುಂದೆ ಕತ್ತಲಾಗುತ್ತಲೇ ಆತ ಮಾರುಕಟ್ಟೆಯಿಂದ ವಾಪಾಸಾಗುತ್ತಾನೆ. ಆಗ ಎಲ್ಲರೂ ಬಲವಂತದಿಂದ ಆತನನ್ನು ಮರಳಿ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಆಗ ಆತ, ‘ಇದು ನನ್ನೂರು, ನಾನು ಹುಟ್ಟಿ ಬೆಳೆದು ನಡೆದಾಡಿದ ಮಣ್ಣು. ನನ್ನ ಉಸಿರು ಸಂಚರಿಸಿದ ಈ ಸ್ಥಳವೇ ನನ್ನ ಬದುಕಿನ ಅಂತಿಮ ನಿಲ್ದಾಣ’ ಎಂದು ಅಲ್ಲಿಯೇ ದೇಹವನ್ನು ಮಣ್ಣಿಗೆ ತಾಕಿಸುತ್ತಾನೆ. ಜನರು ತಮ್ಮ ಬಲವಂತದ ಯತ್ನವನ್ನು ಬಿಡುತ್ತಾರೆ. ತಾನು ರಾತ್ರಿಯನ್ನು ಸುಂದರಂ ಮನೆಯಲ್ಲಿ ಕಳೆದು, ಮುಂಜಾನೆ ಕೋಳಿ ಕೂಗುವ ಮುನ್ನ ಎದ್ದು ಹಸುವಿನ ಹಾಲು ಕರೆಯುತ್ತಾನೆ. ಅದನ್ನು ಪಾತ್ರೆಯಲ್ಲಿ ಶೇಖರಿಸಿ, ಬೈಕಿನಲ್ಲಿ ಇಟ್ಟುಕೊಂಡು ಮನೆ ಮನೆಗೆ ಹಾಲು ರವಾನೆ ಮಾಡಲು ತೆಗೆದುಕೊಂಡು ಹೋಗುತ್ತಾನೆ. ಎಲ್ಲರ ಬಳಿ ಕೇಳುತ್ತಾನೆ, ಹಾಲು ಖರೀದಿಸಿ ಎಂದು. ಆದರೆ ಅದಾಗಲೇ ಸುಂದರಂ ನಾಪತ್ತೆ ಯಾಗಿ ವರುಷಗಳು ದಾಟಿರುವುದರಿಂದ, ಮತ್ತು ಈ ಮುಖ ಅಪರಿಚಿತವಾದ್ದರಿಂದ ಅವರೆಲ್ಲರೂ ಇವನ ಕೋರಿಕೆಯನ್ನು ತಿರಸ್ಕರಿಸಿ, ತಾವು ದಿನಂಪ್ರತಿ ಖರೀದಿಸುವ ವ್ಯಕ್ತಿಯಿಂದ ಹಾಲು ಕೊಳ್ಳುತ್ತಾರೆ. ಆಗ ತನ್ನ ಅಸ್ತಿತ್ವ ಹಾಗೂ ಪ್ರಸ್ತುತತೆಯ ಬಗ್ಗೆ ಸುಂದರಂ ಆತ್ಮವ ಹೊಂದಿರುವ ಜೇಮ್ಸ್‌ಗೆ ಮೊದಲ ಬಾರಿ ಅನುಮಾನ ಮೂಡುತ್ತದೆ. ಉಪಹಾರ ಗ್ರಹದಲ್ಲಿ ಚಹಾಕ್ಕೆ ಹೆಚ್ಚು ಸಿಹಿ ಹಾಕಿಸಿಕೊಳ್ಳುವ ಆತ, ಇಡ್ಲಿಗೆ ಚಟ್ನಿ ಹಾಕಿದ ಎಂದು ರೇಗುತ್ತಾನೆ. ಆದರೆ ಆತನಿಗೆ ಚಟ್ನಿ ಬೇಡವೆಂದು ತನಗೆಂತು ತಿಳಿವುದು ಎಂಬ ಕೆಲಸಗಾರನ ಮಾತು ತನ್ನಲ್ಲಿ ಹುಟ್ಟಿದ್ದ ಅನುಮಾನಕ್ಕೆ ಹಾರಲು ರೆಕ್ಕೆಯನ್ನು ನೀಡುತ್ತದೆ. ಈ ಮಣ್ಣು ತನ್ನನ್ನು ಮರೆತಿದೆ ಎಂಬ ನಿರ್ಣಯಕ್ಕೆ ಬರಲು ತೊಡಗುತ್ತಾನೆ.

ಮುಂದೆ ಕ್ಷೌರಿಕನ ಮಳಿಗೆಯಲ್ಲಿ ಕನ್ನಡಿಯ ಮುಂದೆ ತನ್ನನ್ನು ತಾನು ನೋಡುವಾಗ ತಾನು ಸುಂದರಮ್ ಅಲ್ಲವೇನೋ ಎಂಬ ಭಾವದ ಬೆಳಕು ಮೂಡುತ್ತದೆ. ಪರಿಣಾಮ, ಎಲ್ಲವನ್ನೂ ಕಳೆದುಕೊಂಡ ಭಾವ ಮೊಗದಲ್ಲಿ. ಮನೆಗೆ ವಾಪಸಾಗುತ್ತಾನೆ. ಊಟಕ್ಕೆ ಕುಳಿತುಕೊಳ್ಳುತ್ತಾನೆ. ಅವನ ಪ್ರಜ್ಞೆ ತಪ್ಪಿಸಿ ಕರೆದುಕೊಂಡು ಹೋಗಲೆಂದು ಸಹಪಯಣಿಗ ಪೊನ್ ಕುಳಲಿಗೆ ಮಾತ್ರೆಯೊಂದನ್ನು ಊಟದ ಜೊತೆ ನೀಡಲು ಕೊಟ್ಟಿರುತ್ತಾನೆ. ಆಕೆ ಆ ಕೆಲಸವ ಮಾಡಲು ನಿರಾಕರಿಸಿರುತ್ತಾಳೆ. ಮುಂದೆ ತನ್ನೊಂದಿಗೆ ಊಟಕ್ಕೆ ಕುಳಿತುಕೊಳ್ಳಲು ಮಗಳನ್ನು ಕರೆಯುತ್ತಾನೆ, ಅವಳ ಊಟ ಮಾಡಿಯಾಗಿದೆ ಎಂದಾಗ ಅವಳು ನನ್ನನ್ನು ಹೊರತುಪಡಿಸಿ, ಎಂದಿಗೂ ಊಟ ಮಾಡಿಲ್ಲ ಎಂದು ಬೇಸರಗೊಳ್ಳುತ್ತಾನೆ. ಕಾಗೆಗಳ ಕಿವಿಗಡಚುವ ಸದ್ದಿನ ಮಧ್ಯೆ ಊಟವ ಮುಗಿಸಿ ಮಲಗುತ್ತಾನೆ. ಜಗವೂ ಕೂಡ ತೂಕಡಿಸುತ್ತದೆ. ನಿದ್ದೆ ಮುಗಿಸಿ ಎದ್ದಾಗ, ಕನಸೊಂದು ಮುಗಿಸಿ ಎದ್ದಂತೆ ಸುಂದರಂ ಜೇಮ್ಸ್ ಆಗುತ್ತಾನೆ. ತನ್ನ ಬಣ್ಣದ ಲುಂಗಿಯ ಕಳಚಿ, ಶ್ವೇತ ಪಂಚೆಯ ಮರಳಿ ಧರಿಸುತ್ತಾನೆ. ಇತ್ತ ಪೊನ್ ಕುಳಲಿ ಆಗಷ್ಟೇ ಮರಳಿದ ಸುಂದರ ಕನಸೊಂದು ಕತ್ತಲಿನೊಳಗೆ ಮಾಯವಾಗುತ್ತಿರುವುದನ್ನು ನಿರ್ಭಾವುಕಳಾಗಿ ನೋಡುತ್ತಿರುತ್ತಾಳೆ. ಮುಂದೆ ಬಸ್ಸು ಓಟ ಕೀಳುತ್ತದೆ. ಸುಂದರಂನ ನಾಯಿ ಅದರ ಹಿಂದೆಯೇ ಹೆಜ್ಜೆ ಹಾಕುತ್ತದೆ.

ಈ ಕತೆಯೊಂದು ಬದುಕೆಂಬ ಕೇಕಿನ ಸಣ್ಣ ಪೀಸು. ಅದೆಷ್ಟೋ ಸೂಕ್ಷ್ಮ ಅಂಶಗಳನ್ನು ಭಾವ ಪೂರ್ಣವಾಗಿ ಇಲ್ಲಿ ಪೋಣಿಸಲಾಗಿದೆ. ತತ್ವವೂ ಇದೆ, ಮಿಥ್ಯೆಯೂ ಇದೆ. ನಗ್ನ ಸತ್ಯಗಳು ಹೊರ ಬೀಳುತ್ತವೆ. ನೋವು ನಲಿವು ಗೋಡೆಗಳ ನಡುವೆಯೇ ಉಳಿದು, ಹೊರ ಜಗತ್ತಿಗೆ ಕಾಣದಂತೆ ಬಿತ್ತರಗೊಳ್ಳುತ್ತದೆ. ಪ್ರಥಮವಾಗಿ, ದೈವ ದರುಶನದ ನಂತರ ಜೇಮ್ಸ್ ತನ್ನ ಪತ್ನಿಯ ಕಾಲಿಗೆ ಮುಲಾಮು ಹಚ್ಚಿ ನೇವೇರಿಸುವ ದೃಶ್ಯ ಬರುತ್ತದೆ. ಅದನ್ನು ಸ್ನಾನ ಮುಗಿಸಿ ಬರುವ ಮಗ ನೋಡುತ್ತಾ ನಿಲ್ಲುತ್ತಾನೆ. ಗಂಡಸರ ತುಕ್ಕು ಹಿಡಿದ ಈಗೋಗಳಿಗೆ ಈ ದೃಶ್ಯ ಚಾಟಿ ಏಟಿನಂತೆ ಕಾಣುತ್ತದೆ. ಮುಂದೆ, ಜೇಮ್ಸ್ ಕಾಣೆಯಾಗಿ ಸುಂದರಂ ಆಗಿ ಬದಲಾದಾಗ, ಬಸ್ಸಿನಲ್ಲಿದ್ದ ಒಂದು ಪರಿವಾರ ಎರ್ನಾಕುಳಮ್ ನತ್ತ ಸಾಗುವ ಗಾಡಿಯ ಹತ್ತಿ ಹೋಗಿ ಬಿಡುತ್ತದೆ. ನಾನು ಎಂಬ ಭಾವ ಮೇಲುಗೈ ಸಾಧಿಸಿದಾಗ ನಾವು ಎಂಬ ಭಾವ ನಶಿಸಿ ಹೋಗುತ್ತದೆ ಎಂಬುದನ್ನು ಈ ದೃಶ್ಯ ಪರೋಕ್ಷವಾಗಿ ಹೇಳುತ್ತದೆ.

ಮುಂದೆ ಸೂಕ್ಷ್ಮ ಸಂಗತಿಗಳ ವಿಚಾರಕ್ಕೆ ಬಂದರೆ, ಚಿತ್ರದ ಸೀನುಗಳು ಆರಂಭವಾಗುವುದು ಮತ್ತದೇ ತಿರುಕ್ಕುರಲ್ ಸಾಲಿನಂತೆ. ಮೊದಲ ದೃಶ್ಯ ಮುಗಿಯುವುದು ಲಾಡ್ಜ್‌ನಲ್ಲಿ ಮಲಗಿದವರನ್ನು ಎಬ್ಬಿಸುವುದರೊಂದಿಗೆ. ಮುಂದೆ ಜೇಮ್ಸ್ ಸುಂದರಂ ಆಗಿ ಬದಲಾದಾಗಲೂ ಬಸ್ಸಿನ ತುಂಬೆಲ್ಲಾ ನಿದ್ದೆಯೇ, ಮನೆಯತ್ತ ಸಾಗಿದರೆ ಅಲ್ಲಿಯೂ ನಿದ್ದೆ. ಅಂದರೆ ಇಲ್ಲಿ ಪ್ರತಿ ಏಳುವಿಕೆಯು ಹೊಸ ಬದಲಾವಣೆಗೆ ನಾಂದಿ ಹಾಡುತ್ತಿರುತ್ತದೆ. ಥೇಟು ನಿರ್ಜೀವ ವಸ್ತುವನ್ನು ಚೈತನ್ಯ ಅಪ್ಪಿಕೊಂಡಂತೆ. ಇನ್ನು ಮಲಗಿರುವ ಜೇಮ್ಸ್ ಸುಂದರಂ ಆಗುವುದನ್ನು ನಡುಗುವ ಗಾಜಿನ ಸದ್ದಿನ ಮೂಲಕ ತೋರಿಸಲಾಗಿದೆ. ಅಂದರೆ ಸುಂದರಂ ಆತ್ಮ ಜೇಮ್ಸ್ ದೇಹವ ಪ್ರವೇಶಿಸುವ ಸನ್ನಿವೇಶದ ಸಂದರ್ಭ. ಮುಂದೆ ಸುಂದರಂ ಜೇಮ್ಸ್ ಆಗುವ ಮುನ್ನವೂ ಅದೇ ಸದ್ದು ಕೇಳಿಸುತ್ತದೆ. ಇನ್ನು ಜೇಮ್ಸ್ ಹೆಚ್ಚಿನ ಸಿಹಿಯ ಚಹಾಕ್ಕೆ ಕೋಪಗೊಂಡಿದ್ದ. ತಮಿಳು ಹಾಡುಗಳ ಮೆಚ್ಚುತ್ತಿರಲಿಲ್ಲ. ಕುಣಿತವಂತೂ ಮಾರು ದೂರ. ಆದರೆ ಸುಂದರಂ ಆಗಿ ಸಿಹಿಯಿಲ್ಲದ ಚಹಾಕ್ಕೆ ಸಿಡುಕಿದ. ಪೇಟೆಯ ಮಧ್ಯೆ ಕುಣಿಯುತ್ತಾ ಕಳೆದುಹೋದ. ತಮಿಳು ಹಾಡುಗಳನ್ನು ಗುನುಗುತ್ತಿದ್ದ. ಹೀಗೆ ವ್ಯಕ್ತಿತ್ವಗಳೆರಡರ ಗುಣ ವೈವಿಧ್ಯ ಗಳ ನಡುವಿನ ಅಂತರವೂ ಇಲ್ಲಿ ದಾಖಲಾಗಿದೆ. ಇನ್ನು ಜೇಮ್ಸ್ ಸುಂದರಂ ಆಗಿ ನಡೆದು ಹೋಗುತ್ತಿರಬೇಕಾದರೆ ಆತ ಗಿಡಗಳ ನಡುವೆ ಮಾಸಿ ಹೋಗುತ್ತಾನೆ. ಮರಳ ಬೇಕಾದರೆ ಆತನ ನೆರಳು ಗೋಡೆಯ ಮೇಲೆ ಮೂಡುತ್ತದೆ. ಸುಂದರಂ ಕೊನೆಯ ಬಾರಿ ಮನೆಯಲ್ಲಿ ಊಟ ಸೇವಿಸಬೇಕಾದರೆ, ಕಾಗೆಗಳು ಕೂಗು ಹಾಕಲು ಆರಂಭಿಸುತ್ತದೆ. ಹಿಂದೂ ಆಚಾರಗಳಲ್ಲಿ, ಮರಣದ ನಂತರ ಆತನಿಗೆ ಇಡುವ ಆಹಾರವನ್ನು ಆತ್ಮವು ಕಾಗೆಯ ರೂಪದಲ್ಲಿ ಬಂದು ಸ್ವೀಕರಿಸುತ್ತದೆ ಎಂಬ ನಂಬಿಕೆಯಿದೆ. ಅಂದರೆ, ಕಳೆದು ಹೋದ ಸುಂದರಂನ ಆತ್ಮ, ಜೇಮ್ಸ್ ದೇಹದ ಮೂಲಕ ತನ್ನ ಉಳಿಕೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಿದೆ ಎಂದು ಅರ್ಥ. ಈ ಕಥಾನಕವು ಜೇಮ್ಸ್ ಮತ್ತು ಸುಂದರಂ ಎಂಬ ಎರಡು ವ್ಯಕ್ತಿತ್ವಗಳ ನಡುವಿನ ಕಥೆ ಎಂದು ಭಾಸವಾದರೂ, ಇದು ಅಮ್ಮ ಮಗನೊಬ್ಬನ ನಡುವಿನ ನಿಷ್ಕಲ್ಮಶ ಪ್ರೇಮಕ್ಕೆ ಇರುವ ರಹದಾರಿ. ಈ ಇಡೀ ಪಯಣದಲ್ಲಿ ಎಲ್ಲರೂ ನಿದ್ದೆ ಹೋದದ್ದು ಕಂಡರೂ, ಸುಂದರಂ ನ ತಾಯಿ ನಿದ್ದೆ ಹೋಗುವುದಿಲ್ಲ. ಅಷ್ಟೇ ಅಲ್ಲ, ಮಗನ ಆಗಮನ ಕ್ಷಣ ಮಾತ್ರದಲ್ಲಿ ಅವಳಿಗೆ ತಿಳಿದು ಬರುತ್ತದೆ. ಸದಾ ನಗುತ್ತಲೇ ಇದ್ದ ಆಕೆಯ, ಕತ್ತಲ ಕಣ್ಣುಗಳು ತೇವಗೊಳ್ಳುವುದು ಸುಂದರಂ ಮನೆಯಿಂದ ನಿರ್ಗಮಿಸುವಾಗ. ಜೇಮ್ಸ್- ಸುಂದರಂ ಗೊಂದಲ ಹೊರಗೆಷ್ಟೇ ಬಿಗಡಾಯಿಸಿದ್ದರೂ, ಏನೂ ಆಗದ ಪರಿಯಲ್ಲಿ ತಾಯಿ ಸುಂದರಂನನ್ನು ಮುದ್ದಿಸುತ್ತಿರುತ್ತಾಳೆ. ಆ ಮಮತೆಗೆಂದೇ ಆತ ತನ್ನ ನೆರಳನ್ನು ಅಲ್ಲಿಯೇ ಉಳಿಸಿ ಹೋಗಿಬಿಟ್ಟ. ಇನ್ನೊಂದು ನೆಲೆಗಟ್ಟಿನಲ್ಲಿ ಸುಂದರಂ ಪತ್ನಿಯೂ ಇಲ್ಲಿನ ಕೇಂದ್ರ ಬಿಂದು. ಜೇಮ್ಸ್ ತನ್ನ ಗಂಡನಂತಾಗಿದ್ದಾನೆ. ವರುಷಗಳ ನಂತರದ ಆಗಮನ. ಹಾಗೆಂದು ಖುಷಿ ಪಡುವಂತಿಲ್ಲ. ದೇಹಗಳು ಬೇರೆ ಬೇರೆ. ಆದರೆ ಸುಂದರಂ ನೆನಪುಗಳು ಕಾಡಿದ್ದು, ಕೊನೆಯಲ್ಲಿ ಮನೆ ನಿರ್ಗಮಿಸಿದಾಗ, ಮನಸು ಮೂಕವಾಗಿ ನಿಟ್ಟುಸಿರು ಬಿಟ್ಟಿದ್ದು ಎಲ್ಲವೂ ಆಕೆಯ ಅವಿಚ್ಛಿನ್ನ ಪ್ರೇಮದ ಸಂಕೇತಗಳು.

ಹೀಗೆ, ಬದುಕಿನ ಸುತ್ತಲೂ ಸುತ್ತುವ ಈ ಕಥಾನಕದಲ್ಲಿ ತಿರುಕ್ಕುರಲ್ ಮಾತನ್ನು ಅಡಿಪಾಯವಾಗಿಸಿ, ಎರಡು ವಿಭಿನ್ನ ವ್ಯಕ್ತಿತ್ವಗಳ ಅನಾವರಣ ಮಾಡುವ, ಅವುಗಳ ನೆಲೆಗಟ್ಟಿನಲ್ಲಿ ಬದುಕನ್ನು ಕಾಣುವ ಒಂದು ಅತ್ಯಮೋಘ ಪಯಣವೇ ‘ನನ್ ಪಾಕಲ್ ನೆರತು ಮಾಯಕಮ್’.

‘Cinematic Brilliance’ ಎಂಬ ವಾಕ್ಯಕ್ಕೆ ಅನ್ವರ್ಥವೇ ಈ ಚಿತ್ರ. ಬದುಕಿನ ಬಗ್ಗೆ ಸೂಕ್ಷ್ಮದರ್ಶಕವನ್ನೂ ಮೀರಿದ ವೀಕ್ಷಣೆಯ ಪರಿಣಾಮವಿದು. ಆ ಆಗಸಮುಖಿ ಕಲ್ಪನೆಗೆ ಮೋಡವಾಗಿ ಬಂದವರು ಮಮ್ಮುಟ್ಟಿ. ಎರಡು ವಿರುದ್ಧ ರುಚಿಗಳ ಪಾತ್ರಗಳು. ಅದೆಷ್ಟು ಸುಲಲಿತ ಪ್ರಸ್ತುತಿ ಅವರದ್ದು. ಅದೊಂದು ಪಂಚೆಯ ಬದಲಾವಣೆ. ಆಗ ಭಾಷೆ ಭಾವ ಎಲ್ಲವೂ ಹೊಸತು. ಈ ಅಭಿನಯಕ್ಕೆ ಪ್ರಶಸ್ತಿಗಳು ಬಂದರೆ, ಅವುಗಳಿಗೆ ಅದೊಂದು ಮೆರುಗು. ಇನ್ನೊಂದು ಗಮನ ಸೆಳೆದ ಪಾತ್ರ ಸುಂದರಂ ಪತ್ನಿಯದ್ದು. ಹೇಳಿಕೊಳ್ಳಲಾಗದ ಖುಷಿ, ಭರವಸೆ, ತಲ್ಲಣ, ತಳಮಳ ಎಲ್ಲವನ್ನೂ ಯಾವ ಭಾವದ ಕೊಂಬೆಗೂ ನಿಲುಕದೆ, ಮಾಮೂಲು ಗಾಳಿಯ ಚಲನೆಯಂತೆ ಅಭಿವ್ಯಕ್ತಗೊಳಿಸುವ ರಮ್ಯಾ ಪಾಂಡಿಯನ್ ನಟನೆ ಸಹಜ, ಸುಂದರ. ಇನ್ನು ಚಿತ್ರದ ಹಿನ್ನೆಲೆ ಸಂಗೀತ. ಇಲ್ಲಿ ಪಾತ್ರಗಳ ಚಲನೆ, ಭಾವಗಳು ಬಂಧಿಸಲ್ಪಟ್ಟಿರುವುದು ಹಿನ್ನೆಲೆಯಲ್ಲಿ ತೇಲಿ ಬರುವ ಹಾಡುಗಳಲ್ಲಿ, ಹಳೆಯ ಚಲನಚಿತ್ರಗಳ ಸಾಲುಗಳಲ್ಲಿ ಹಾಗೂ ನಾಟಕದ ದನಿಯಲ್ಲಿ. ಮಗ ಮರಳಿ ಬಂದು ತಾಯಿಯ ಮಡಿಲಲ್ಲಿ ಪವಡಿಸಿದಾಗ ‘ಎಲ್ಲಿ ನನ್ನ ಮಗ, ಅವನಿಗೇನಾಯಿತು’ ಎಂದು ಕೇಳುವ, ಆಗ ‘ನಿನ್ನ ಮಗ ನಿನ್ನೆದುರೇ ಇರುವನು’ ಎಂಬ ಉತ್ತರ ಕಪ್ಪು ಬಿಳುಪು ಟಿವಿಯಲ್ಲಿ ತೇಲಿ ಬರುತ್ತದೆ. ಊರಿನ ಗಲ್ಲಿಗಳಲ್ಲಿ ಜೇಮ್ಸ್ ತನ್ನ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುತ್ತಿರುವಾಗ ನಾಟಕದ ಹಿನ್ನೆಲೆಯನ್ನು ಅಳವಡಿಸಲಾಗಿದೆ. ಇನ್ನು ಆತ ಬೈಕ್ ತೆಗೆದುಕೊಂಡು ಹೋಗುವಾಗ, ಹಿಂದೆ ಜನರು ಅಟ್ಟಿಸಿಕೊಂಡು ಬರುವಾಗ ತರಾತುರಿಯ ವರ್ಣಿಸುವ ಹಿನ್ನೆಲೆಯ ಬಳಸಲಾಗಿದೆ. ಹೀಗೆ ಪಾತ್ರದ ಪ್ರಸ್ತುತ ಭಾವ, ಸನ್ನಿವೇಶಗಳ ಅನುಗುಣವಾಗಿ ಹಳೆಯ ಹಾಡುಗಳು, ನಾಟಕದ ಹಾರ್ಮೋನಿಯಂ ಬೀಟ್ಗಳು ಹಾಗೂ ಮಾತುಗಳನ್ನು ಹಿಂದೆ ಪೋಣಿಸಲಾಗಿದೆ. ಇನ್ನು ಥೇಣಿ ಈಶ್ವರ್ ಸೆರೆಹಿಡಿದದ್ದು ಬಣ್ಣ ಬಣ್ಣದ ರಂಗೋಲಿಗಳನ್ನು. ಕ್ಯಾನ್ವಾಸಿನ ಮೇಲೆ ಹೋಳಿಯಾಡುವ ದೃಶ್ಯಗಳು, ಅಕ್ಷರಶಃ ಕಾಮನಬಿಲ್ಲಿನಲ್ಲಿ ಅದ್ದಿ ತೆಗೆದಿರುವಂಥದ್ದು. ಮನೆಯಿರಲಿ, ಬಸ್ಸಿನ ಮುಂದೆ ಜನರ ತಳಮಳವಿರಲಿ ಎಲ್ಲವೂ ಲಾಂಗ್ ಶಾಟಿನ ಚಳಕಕ್ಕೆ ಸಿಲುಕಿ, ಆಯತದ ಆಯನದಲ್ಲಿ ಬಂಧಿಯಾಗಿ, ಸುಂದರವಾಗಿ ಮೂಡಿದೆ. A4 ಕಾಗದದಲ್ಲಿ ಬಿಡಿಸಿದ ಚಿತ್ರದಂತೆಯೇ ಎಂದರೆ ಅತಿಶಯೋಕ್ತಿಯಲ್ಲ. ಇನ್ನು ಸೂತ್ರಧಾರ ಲಿಜೊ ಜೋಸ್ ಪೆಲಿಶೇರಿ, ಇಂತಹ ಸೂಕ್ಷ್ಮ ಪರಿಕಲ್ಪನೆಯ ಕಟ್ಟುವಿಕೆಯನ್ನು ಸಾಧ್ಯಗೊಳಿಸಬಲ್ಲ ಅತೀ ವಿರಳವೆನ್ನಬಹುದಾದ ಪ್ರಸ್ತುತ ಕಾಲಮಾನದ ನಿರ್ದೇಶಕರಲ್ಲೊಬ್ಬರು. ಯಾಕೆಂದರೆ, ಇಲ್ಲಿನ ಯಾವ ಫ್ರೇಮ್‌ಗಳು ಕಥೆ ಹೇಳದೆ ಉಳಿಯುವುದಿಲ್ಲ. ಮಾತು, ಹಾಡು, ಹಿನ್ನೆಲೆ ಎಲ್ಲವೂ ಕಥಾನಕದ ಪಯಣಕ್ಕೊಂದು ಬೆಳಕು ಚೆಲ್ಲಿ ದಾರಿಯ ಸುಲಭಗೊಳಿಸುತ್ತದೆ. One of the brilliant craft of cine universe ಎಂದು ಅರೆಕ್ಷಣವೂ ಯೋಚಿಸದೆ ಕೊಂಡಾಡಬಹುದಾದ ದೃಶ್ಯಗಳ ಗುಚ್ಛವಿದು.

ಮುಗಿಸುವ ಮುನ್ನ:
ನಾಳೆಯೆಂಬುದು ಅಚ್ಚರಿಯ ಸಂತೆ. ಅಲ್ಲಿ ವಸ್ತುವೊಂದರ ಖರೀದಿಗೆಂದು ಹೋಗಿ, ಕೊನೆಯಲ್ಲಿ ತೆಗೆದುಕೊಂಡು ಹೋಗೋಣವೆಂದು ನಿರ್ಧರಿಸಿರುತ್ತೇವೆ. ಸುತ್ತಲೂ ಸುತ್ತಿ ಕೊನೆಗೆ ಬಂದು ನೋಡುವಾಗ, ಆ ವಸ್ತು ಖಾಲಿಯಾಗಿರುತ್ತದೆ. ಅಂದರೆ ಇಲ್ಲಿ ಎಲ್ಲವೂ ಕ್ಷಣಿಕ, ಸಮಯದ ಕೈಯಲ್ಲಿ ಸಿಲುಕಿದ ಗೊಂಬೆ. ಕಾಲ ಜಾರುತ್ತಿದ್ದಂತೆಯೇ, ದ್ರವ್ಯರಾಶಿಗಳು ಬದಲಾಗುತ್ತಲೇ ಸಾಗುತ್ತದೆ. ಆದ್ದರಿಂದ ನಮ್ಮೊಳಗಿನ ನಾವು ಖಾಲಿಯಾಗುವ ಮುನ್ನ, ಅಳಿಸಲಾಗದಷ್ಟು ನೆನಪುಗಳನ್ನು ತುಂಬಿಕೊಳ್ಳೋಣ, ಯಾಕೆಂದರೆ ನೆನಪುಗಳ, ಒಡನಾಟಗಳೆಂದರೆ ಕಾಲಗಳ ಮೀರಿದ ಚಿರಂತನ ಭಾವ…..

About The Author

ರಾಮ್ ಪ್ರಕಾಶ್ ರೈ ಕೆ.

ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು....  

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ