ಈ ಆಟೋ ಹೀಗೇ ಓಡುತ್ತಲೇ ಇರಲಿ, ಮನೆ ಬರುವುದೇ ಬೇಡ ಎಂದು ಪ್ರಾರ್ಥಿಸುತ್ತಾ ಕುಳಿತವನಿಗೆ ಅಲ್ಲೂ ನಿರಾಶೆಯೇ ಕಾದಿತ್ತು. ಮೀಟರ್ ನೋಡದೆ ನೂರರ ನೋಟು ಆಟೋದವನ ಕೈಗೆ ತುರುಕಿದವನಿಗೆ ಮನದ ಮೂಲೆಯಲ್ಲೆಲ್ಲೋ ಆಸೆಯ ಬೆಳಕು. ಮಗಳೀಗಾಗಲೇ ಬಂದಿರುತ್ತಾಳೆ. ತಾನು ಅವಳನ್ನಪ್ಪಿ ತನ್ನ ಪ್ರೀತಿಯ ಋಣ ತೀರಿಸಲು ಕೇಳಿಕೊಳ್ಳಬೇಕು. ಸರಿಯಾಗಿ ಅರ್ಥೈಸಿದರೆ ಖಂಡಿತಾ ಕೇಳುತ್ತಾಳೆ ಎಷ್ಟೆಂದರೂ ನನ್ನ ಪ್ರೀತಿಯ ಮಗಳಲ್ಲವೇ ನೋಡಿಯೇ ಬಿಡುತ್ತೇನೆ… ನನ್ನೆಲ್ಲಾ ವಾತ್ಸಲ್ಯ, ಪ್ರೀತಿಯನ್ನು ಪಣಕ್ಕಿಟ್ಟರೆ ಸೋಲುವವಳು ಅವಳೇ ಎಂದುಕೊಂಡೇ ಮನೆಯೊಳಗೆ ಬಂದ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಶುಭಾ ಎ. ಆರ್. ಕತೆ “ಲಿರ್” ನಿಮ್ಮ ಓದಿಗೆ
ಟೇಬಲ್ಲಿನ ಮೇಲೆ ರಾಜು ತಂದಿಟ್ಟಿದ್ದ ಕಾಫಿ ಮೊದಲು ಕೆನೆಗಟ್ಟಿ ನಂತರ ಇನ್ನು ಇದ್ದ ಹಾಗೇ ಇರುವುದರಲ್ಲಿ ಸುಖವಿಲ್ಲವೆನಿಸಿ ತೆಪ್ಪಗೆ ತಣ್ಣಗಾಗಿತ್ತು. ಶ್ರೀನಿವಾಸ ಕಲ್ಲಿನಂತೆ ಕುಳಿತೇ ಇದ್ದ. ಸುತ್ತಮುತ್ತ ನಡೆಯುತ್ತಿದ್ದ ಎಲ್ಲ ವ್ಯವಹಾರಗಳಿಗೆ, ಸದ್ದುಗದ್ದಲಗಳಿಗೆ ಅವನ ಮನ ಕದವಿಕ್ಕಿಬಿಟ್ಟಿದ್ದರಿಂದ ಕಣ್ಣುಗಳು ಕುರುಡಾದಂತೆ, ಕಿವಿಗಳು ಏಕಾಏಕಿ ಕಿವುಡಾದಂತೆ ನಾಲಿಗೆ ಮಾತು ಕಳೆದುಕೊಂಡಂತೆ ಸ್ತಬ್ದವಾಗಿಬಿಟ್ಟಿದ್ದವು. ಬೆಳಗಾಗ ಎದ್ದು ಅದು ಹೇಗೋ ತನ್ನ ಮನದ ದುಗುಡ ವಸೂಗೆ ಗೊತ್ತಾಗದಂತೆ ಎಲ್ಲ ಕೆಲಸ ಮುಗಿಸಿ ತಿಂಡಿಯ ಶಾಸ್ತ್ರ ಮುಗಿಸಿ ಆಫೀಸಿಗೆಂದು ರಸ್ತೆಗಿಳಿಯುವವರೆಗೂ ಉಸಿರು ಕಟ್ಟಿದವನಂತಿದ್ದವನು ಬೈಕೇರುತ್ತಲೆ ತಪ್ಪಿಸಿಕೊಂಡವನಂತೆ ದೀರ್ಘವಾಗಿ ಉಸಿರುಬಿಟ್ಟ.
ತಲೆಯಲ್ಲಿ ಮತ್ತದೇ ಗುಂಗಿ ಹುಳು ಕೊರೆಯಲಾರಂಭಿಸಿತು. “ಥತ್ ಬೇವಾರ್ಸಿ ನನ್ಮಗನೆ ಬೈಕಲ್ಲಿ ಕೂತು ನಿದ್ದೆ ಮಾಡ್ತಾ ಇದ್ದೀಯೇನೋ?.. ಇವತ್ತೆಲ್ಲೋ ದೇವರ ಮಕಾ ನೋಡಿ ಎದ್ದಿದ್ದೀಯ ಅನಿಸತ್ತೆ ಉಳ್ಕೊಂಡೆ. ಸ್ವಲ್ಪ ಕಣ್ಣುಬಿಟ್ಕೊಂಡು ಗಾಡಿ ಓಡಿಸು” ಎಂದು ಎದುರಿಗೆ ಬಂದ ಬಿ.ಎಮ್.ಟಿ.ಸಿ ಡ್ರೈವರ್ ಒರಟಾಗಿ ಉಗಿದಾಗಲೇ ಶ್ರೀನಿವಾಸನಿಗೆ ಇನ್ನೇನು ಕೂದಲೆಳೆ ಅಂತರದಲ್ಲಿ ತಾನು ಬಸ್ಸಿನ ಮೂತಿಗಪ್ಪಳಿಸಿ ನೆಲಕ್ಕೊರಗುವುದನ್ನು ತಪ್ಪಿಸಿಕೊಂಡಿದ್ದರ ಅರಿವಾದದ್ದು. ತನಗಾಗೇ ಬದುಕುತ್ತಿರುವಂತ ವಸೂ, ಈಗಷ್ಟೇ ಅರಳಿದ ಹೂವಿನಂತ ಮಗಳು ಸರಯೂಳ ಮೊಗ ಕಣ್ಮುಂದೆ ತೇಲಿದಂತಾಗಿ ತಲೆ ಕೊಡವಿ ಜಾಗರೂಕತೆಯಿಂದ ಆಕ್ಸೆಲರೇಟರ್ ಕೊಟ್ಟ. ಕೆಲಸ ಮಾಡುವ ಮನಸ್ಥಿತಿಯಂತೂ ಖಂಡಿತ ಇರಲಿಲ್ಲವಾಗಿ ಒಂದರ್ಧ ದಿನದ ರಜೆ ಗೀಚಿದವನು ಎಲ್ಲಿಗೆ ಹೋಗಬೇಕು ಏನು ಮಾಡಬೇಕೆಂದು ತಿಳಿಯದೆ ಅಲ್ಲೇ ತನ್ನ ಕುರ್ಚಿಗಂಟಿ ಕುಳಿತುಬಿಟ್ಟ. ಎಂದಿನಂತೆ ಒಬ್ಬೊಬ್ಬರಾಗಿ ಬಂದು ಕೆಲಸ ಪ್ರಾರಂಭಿಸಿದ ಅವನ ಸಹೋದ್ಯೋಗಿಗಳು ಅವನ ಈ ಪರಿ ನೋಡಿ ಅವರವರ ನೋವು ಏನಿರುತ್ತದೊ ನಾವೇಕೆ ಕೆದಕಬೇಕೆಂದೋ ಅಥವಾ ಏನಾದರಿರಲಿ ನಮಗೇಕೆಂಬ ನಿರ್ಲಕ್ಷ್ಯದಿಂದಲೋ ಹಾಯ್, ಹಲೋಗಳಿಗಷ್ಟೇ ಮಾತು ಸೀಮಿತಗೊಳಿಸಿ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರು. ಶ್ರೀನಿವಾಸನ ಆಪ್ತ ಮಿತ್ರ ಪ್ರದೀಪ ಮಾತ್ರಾ “ಯಾಕೋ ಏನು ಸಮಾಚಾರ? ಎನೋ ಸೀರಿಯಸ್ಸಾದದ್ದು ನಡೆದಿರೋ ಹಾಗಿದೆ?”ಎಂದು ಕೇಳಿದ. ಶ್ರೀನಿವಾಸ “ಪ್ರದೀ ನನ್ನ ಮಗಳು …” ಎಂದು ಗದ್ಗದಿತನಾದ.
ಪ್ರದೀಪ ಗಾಬರಿಯಾದ. “ಏನಾಯಿತೊ ಸರಯೂಗೆ?”
ಶ್ರೀನಿವಾಸ ನಗಲಾರದೆ ನಕ್ಕ. “ಅವಳಿಗೇನಾಗಿಲ್ಲ ಪ್ರದೀ. ಮುಂದೆ ಆಗಲಿದೆ ಅವಳಿಗೂ ನಮಗೂ…”
“ಅಂತಾದ್ದೇನೊ? ಒಗಟಾಗಿ ಮಾತಾಡಬೇಡ” ಪ್ರದೀಪ ಆತ್ಮೀಯವಾಗಿ ಕೇಳಿದ. “ನನ್ನ ಮಗಳು ನಂಗೊಂದು ಹೋಮ್ ವರ್ಕ್ ಕೊಟ್ಟಿದ್ಲು ಪ್ರದೀ ಲಿರ್ ಅನ್ನೋ ಪದದ ಬಗ್ಗೆ ತಿಳ್ಕೋ ಪಪ್ಪಾ ಅಂತ. ಲಿರ್ ಅಂದ್ರೇನು ಗೊತ್ತಾ ನಿಂಗೆ?” ಪ್ರದೀಪ ಹೌದೋ ಅಲ್ಲವೋ ಎನ್ನುವಂತೆ ಕಣ್ಣಿನಲ್ಲೆ ಉತ್ತರಿಸಿದ. ಅತ್ತ ಗಮನವೀಯುವ ಮನಸ್ಥಿತಿಯಲ್ಲಿಲ್ಲದ ಶ್ರೀನಿವಾಸ ಅತ್ತಿತ್ತ ನೋಡಿ ಇಲ್ಲಿ ಬೇಡ ನಿನ್ನ ಕೆಲಸ ಮುಗಿಸು ಕ್ಯಾಂಟೀನಿನಲ್ಲಿ ಮಾತಾಡೋಣ”ಎಂದ. ಪ್ರದೀಪನೂ ಶ್ರೀನಿವಾಸನಿಗೆ ಸರಯೂಳ ಬಗ್ಗೆ ತನಗೆ ಗೊತ್ತಿರುವುದನ್ನು ಹೇಳಿ ಹಗುರಾಗಲು ಕಾಯುತ್ತಿದ್ದವನು ಹೂಂಗುಟ್ಟಿದ.
ಶ್ರೀನಿವಾಸ ಮತ್ತೆ ಕುಳಿತಲ್ಲೇ ಕಳೆದು ಹೋದ. ಎರಡಕ್ಷರದ ಆ ಪದ ಲಿರ್ ಅವನನ್ನು ಭೂತದಂತೆ ಕಾಡಹತ್ತಿತು. ಜೇಬಿನಲ್ಲಿದ್ದ ಮೊಬೈಲ್ ಗುರುಗುಟ್ಟಿತು. ನೋಡಿದರೆ ಸರಯೂ. ಮಾತಾಡುವ ಮನಸ್ಸಿಲ್ಲದೆ ರೆಜೆಕ್ಟ್ ಬಟನ್ ಒತ್ತಿ ಮತ್ತೆ ಜೇಬಿಗೆ ಸೇರಿಸುವಾಗ ಕೈಗೇನೋ ತಗುಲಿದಂತಾಯಿತು. ನೋಡಿದರೆ ಪುಟ್ಟ ಎನ್ವಲಪ್. ಕೌತುಕದಿಂದಲೇ ಬಿಡಿಸಿದರೆ ತಿಳಿ ಗುಲಾಬಿ ಬಣ್ಣದ ಕಾಗದದಲ್ಲಿ ಸರಯೂಳ ಮುದ್ದಾದ ಅಕ್ಷರಗಳು.
ಪಪ್ಪ ನೆನ್ನೆ ನಾನೊಂದು ಪ್ರಶ್ನೆ ಕೇಳಿದ್ದೆ. ಬಹುಶಃ ಉತ್ತರ ಸಿಕ್ಕಿರಲಾರದು ಅನಿಸತ್ತೆ. ನನಗೆ ಗೊತ್ತು ನೀನು ನಿನ್ನ ಫ್ರೆಂಡ್ಸ್‌ನ ಕೇಳಿರ್ತೀಯ, ಡಿಕ್ಷನರಿ ಹುಡುಕಾಡಿರ್ತೀಯ ಕೊನೆಗೆ ಗೂಗಲ್‌ನಲ್ಲಿ ಕೂಡ ಸರ್ಚ್ ಮಾಡಿರ್ತೀಯ. ಈ ಪದ ಅಲ್ಲೆಲ್ಲು ಇಲ್ಲ ಪಪ್ಪ. ಗೂಗಲ್‌ನಲ್ಲಿ ಲಿರ್ ಅಂತ ಕೊಟ್ರೆ ಲೋಕಲ್ ಇಂಟರ್ನೆಟ್ ರಿಜಿಸ್ಟ್ರಿ ಅಂತ ಬಂದಿರ್ಬೇಕಲ್ಲ? ಲಿರ್ ಅನ್ನೊದು ನಾವುಗಳು ಮಾಡಿಕೊಂಡ ಸಂಕೇತ. ಇರಲಿ ಈ ಪದದ ಅರ್ಥ ಹೇಳೋ ಮೊದಲು ನಾನು ನಿನಗೆ ಇನ್ನೂ ಕೆಲವು ವಿಷಯಗಳನ್ನ ತಿಳಿಸಬೇಕು. ನಿನಗೆ ನೇರವಾಗಿ ಹೇಳೋಣ ಅಂದ್ರೆ ಮನೆಯಲ್ಲಿ ಅಮ್ಮ ಇರ್ತಾಳೆ. ನಿಂಗೇ ಗೊತ್ತಿರೋ ಹಾಗೆ ಅವಳು ಕೆಲವೊಂದು ವಿಷಯಗಳಲ್ಲಿ ತುಂಬಾ ಟ್ರೆಡಿಷನಲ್.(ಬಟ್ ಶಿ ಈಸ್ ಮೈ ಗುಡ್ ಓಲ್ಡ್ ಮದರ್ ಅನ್ದ್ ಐ ಲವ್ ಹರ್) ನನ್ನ ಬದುಕಿನ ಬಗ್ಗೆ ನಾನು ತೆಗೆದುಕೊಂಡಿರೋ ನಿರ್ಧಾರಾನ ಅಮ್ಮ ಎಂದಿಗೂ ಒಪ್ಪಲ್ಲ. ಆದರೆ ಐ ಹ್ಯಾವ್ ಡಿಸೈಡೆಡ್ ಪಪ್ಪ.
ನಾನು ಸ್ಯಾಮ್‌ನ ಪ್ರೀತಿಸ್ತಿದೀನಿ ಅವನನ್ನೇ ಮದುವೆಯಾಗಬೇಕೂಂತ ನಿರ್ಧಾರ ಮಾಡಿದೀನಿ ಅನ್ನೋ ವಿಚಾರ ನಿಂಗೆ ಅಮ್ಮಂಗೆ ಗೊತ್ತೇ ಇದೆ. ನೀವಿಬ್ರೂ ಖುಶಿಯಾಗೇ ಒಪ್ಪಿಕೊಂಡಿದ್ದೀರಿ ಪಪ್ಪ. ಅವನ ಜಾತಿ ಅದು ಇದೂಂತ ಅಮ್ಮ ರಾಗ ತೆಗೆದಾಗ ನೀನು ಮಗಳ ಸುಖ ಸಂತೋಷದ ಮುಂದೆ ಅವೆಲ್ಲಾ ತೀರಾ ಗೌಣ. ಅದೂ ಅಲ್ಲದೆ ಈ ಕಾಲದಲ್ಲಿ ಜಾತಿ ಗೀತಿ ಅಂತ ಯಾರೂ ನೋಡೋದೂ ಇಲ್ಲ. ಅವರವರ ಬದುಕು ಅವರವರಿಗೆ ಸುಮ್ನೆ ಇಶ್ಯೂ ಮಾಡಿ ಸರೂಗೆ ಬೇಜಾರು ಮಾಡಬೇಡ ಅಂತ ತಿಳುವಳಿಕೆ ಹೇಳಿ ಸಮಾಧಾನ ಮಾಡಿದ್ದು ನಂಗೆ ಗೊತ್ತು ಪಪ್ಪ. ಈ ವಿಚಾರದಲ್ಲಿ ರಿಯಲಿ ಐ ಯಾಮ್ ರಿಯಲಿ ಲಕಿ. ಸ್ಯಾಮ್ ಕೂಡಾ ಹಾಗೇ ಅಂತಾನೆ.
ಸೀದಾ ವಿಷಯಕ್ಕೆ ಬರಬೇಕೂಂದ್ರೆ ನಾನು ಸ್ಯಾಮ್ ಇಷ್ಟ ಪಟ್ಟು ಮದ್ವೆ ಮಾಡಿಕೊಳ್ಳೋ ನಿರ್ಧಾರ ಏನೋ ಮಾಡಿಬಿಟ್ವಿ. ಆದರೆ ನಾವಿಬ್ಬರೂ ಇನ್ನೂ ಒಬ್ಬರ ಬಗ್ಗೆ ಒಬ್ಬರು ತುಂಬಾ ತಿಳಿದುಕೊಳ್ಳಬೇಕು, ನಮ್ಮ ಮಧ್ಯೆ ಹೊಂದಾಣಿಕೆ ಆಗುತ್ತೋ ಇಲ್ಲವೋ ಅಂತಾ ಪ್ರಾಕ್ಟಿಕಲ್ ಆಗಿ ನೋಡಿ ಆಮೇಲೆ ಆ ವಿಷಯದಲ್ಲಿ ಮುಂದುವರೆಯೋಣ ಅನಿಸ್ತಾ ಇದೆ. ಆತುರ ಪಟ್ಟು ಮದುವೆಯಲ್ಲಿ ಕಮಿಟ್ ಆಗಿ ಆಮೇಲೆ ರಿಗ್ರೆಟ್ ಮಾಡೋದಕ್ಕಿಂತಾ ಇದೇ ವಾಸಿ ಅನಿಸ್ತಾ ಇದೆ. ಏನಂತಿ ಪಪ್ಪ?” ತನ್ನನ್ನು ಒಂದು ಮಾತು ಕೇಳಬೇಕಿನಿಸಿತಲ್ಲ ಇವಳಿಗೆ. ಪರಿಸ್ಥಿತಿ ಇನ್ನೂ ಕೈ ಮೀರಿ ಹೋಗಿಲ್ಲವೆಂದು ಶ್ರೀನಿವಾಸ ನೆಮ್ಮದಿಯ ಒಂದು ಉಸಿರು ಬಿಡಲು ಹೋದವನು ಲಿರ್ ಶಬ್ದದ ನೆನೆಪಾಗಿ ಹಾಗೇ ತಡೆದ. “ನಾನು ಸ್ವತಂತ್ರವಾಗಿ ನನ್ನ ಜೀವನದ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು ಎಲ್ಲದಕ್ಕೂ ಬೇರೆಯವರ ಒಪಿನಿಯನ್‌ಗಾಗಿ ಕಾಯಬಾರದು ಅಂತಾ ನಾನು ಚಿಕ್ಕವಳಿದ್ದಾಗಿನಿಂದ ನೀನೇ ಹೇಳುತ್ತಿದ್ದೆಯಲ್ಲ ಪಪ್ಪ. ನನ್ನ ಲೈಫಿನ ಈ ಟರ್ನಿಂಗ್ ಪಾಯಿಂಟಿನಲ್ಲಿ ನಾನೊಂದು ನಿರ್ಧಾರ ತಗೊಂಡಿದ್ದೀನಿ. ಅದೇ ಲಿರ್. ಇದಕ್ಕೆ ಸ್ಯಾಮ್ ಕೂಡಾ ಒಪ್ಪಿಕೊಂಡಿದಾನೆ. ಇನ್ನೂ ನಿನ್ನನ್ನ ಸತಾಯಿಸಲ್ಲ ಪಪ್ಪ ನಮ್ಮ ಭಾಷೇಲಿ ಲಿರ್ ಅನ್ನೋದು ಲಿವ್ ಇನ್ ರಿಲೆಷನ್ ಶಿಪ್‌ನ ಶಾರ್ಟ್ ಫಾರ್ಮ್. ಹಾಗಂದ್ರೇನಂತ ಬಿಡಿಸಿ ಹೇಳೋದೇನೂ ಬೇಡ ಅನಿಸತ್ತೆ ಪಪ್ಪ.
ಒಂದಾರು ತಿಂಗಳು ಅಥವಾ ಒಂದು ವರ್ಷ ನಾವಿಬ್ರೂ ಒಟ್ಟಿಗೇ ಬಾಳೋದು. ಆಮೇಲೂ ನಾವು ಚೆನ್ನಾಗಿರ್ತೀವಿ ಅಂತ ಕನ್ಫರ್ಮ್ ಆದ್ರೆ ಮದುವೆ ಆಗೋದು ಇಲ್ಲದಿದ್ರೆ ನನ್ನ ದಾರಿ ನನಗೆ ಅವನ ದಾರಿ ಅವನಿಗೆ.
ಈ ವಿಚಾರ ನಿನಗೆ ಸುಲಭವಾಗಿ ಡೈಜೆಸ್ಟ್ ಆಗಲ್ಲ ಅಂತ ಗೊತ್ತು ಪಪ್ಪ. ಆದ್ರೆ ದಿಸ್ ಇಸ್ ಮೈ ಲೈಫ್ ಅಂಡ್ ಐ ಮಸ್ಟ್ ಡಿಸೈಡ್ ಇಟ್ ಪಪ್ಪ. ಹರ್ಟ್ ಮಾಡಿಕೋಬೇಡ. ಈಗಿನ ಕಾಲದಲ್ಲಿ ಇದೆಲ್ಲಾ ತುಂಬಾನೆ ಕಾಮನ್. ಅಮ್ಮನಂತೂ ರಂಪ ಮಾಡಿಬಿಡ್ತಾಳೆ. ಸದ್ಯಕ್ಕೆ ಅವಳಿಗೆ ಈ ವಿಚಾರ ತಿಳಿಸೋದು ಬೇಡ. ನಾನು ಒಂದಾರು ತಿಂಗಳ ಮಟ್ಟಿಗೆ ಹೈದರಾಬಾದಿಗೆ ಪ್ರಾಜೆಕ್ಟ್ ವರ್ಕ್‌ಗಾಗಿ ಹೋಗ್ತಾ ಇದೀನಿ ನಮ್ಮ ಕಂಪನಿ ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಿರತ್ತೆ ಜೊತೆಗೆ ನನ್ನ ಇಬ್ಬರು ಫ್ರೆಂಡ್ಸ್ (ಹುಡುಗಿಯರು) ಬರ್ತಾ ಇದ್ದಾರೆ .ಇವತ್ತು ರಾತ್ರಿಯೇ ಹೋಗಬೇಕು ಅಂತ ನಾನು ಅಮ್ಮನಿಗೆ ಬೆಳಿಗ್ಗೆಯೇ ಹೇಳಿದೀನಿ. ನೀನೂ ಸದ್ಯಕ್ಕೆ ಈ ಬಗ್ಗೆ ಮಾತಾಡಬೇಡ ಪಪ್ಪ. ಸಮಯ ಸಂದರ್ಭ ನೋಡ್ಕೊಂಡು ಆಮೇಲೆ ನಿಧಾನವಾಗಿ ಅವಳಿಗೆ ವಿಚಾರ ತಿಳಿಸು. ನಾನು ತಪ್ಪು ಮಾಡ್ತಾ ಇದ್ದೀನಿ ಅಂತ ನನಗೆ ಖಂಡಿತಾ ಅನಿಸ್ತಿಲ್ಲ. ನನ್ನ ಬೇಕಾದಷ್ಟು ಫ್ರೆಂಡ್ಸ್ ಹೀಗೇ ಇದ್ದಾರೆ. ಒಂದಿಬ್ಬರು ಜೋಡಿಗಳು ಆಮೇಲೆ ಮದುವೆಯಾಗಿ ಸುಖವಾಗೂ ಇದ್ದಾರೆ.
ಒಳ್ಳೇದಾಗಲೆಂದು ಹರಸಿ ಕಳಿಸು ಪಪ್ಪ. ಸಂಜೆ ಮನೆಯಲ್ಲಿ ಸಿಗ್ತೀನಿ. ಹತ್ತು ಗಂಟೆಗೆ ಟ್ರೈನ್. ಹಾ ಪಪ್ಪ ನಾವಿಬ್ರೂ ನಿಜಕ್ಕೂ ಹೈದರಾಬಾದಿಗೆ ಹೋಗ್ತಾ ಇದ್ದೀವಿ. ಅಲ್ಲೇ ಕೆಲಸವೂ ಸಿಕ್ಕಿದೆ. ಈ ಊರಲ್ಲಿದ್ರೆ ಸ್ವಲ್ಪ ಕಷ್ಟ ಆಗತ್ತೆ ಅದಿಕ್ಕೇ ಈ ನಿರ್ಧಾರ. ನಿನ್ನ ನಂಬಿಕೆಗೆ ದ್ರೋಹ ಮಾಡಿದೆ ಅಂತಾ ಅನಿಸಿದರೆ ಕ್ಷಮಿಸು ಪಪ್ಪ.”
ನಂಬಿಕೆಗೆ ದ್ರೋಹವಾ? ಸರೂ ನೀನು ಕೈಗೂಸಾಗಿದ್ದಾಗ ನಿನ್ನ ಪುಟ್ಟ ಪುಟ್ಟ ಚೆಂಗುಲಾಬಿ ಬಣ್ಣದ ಪಾದಗಳನ್ನು ನಾನು ಮುದ್ದಿನಿಂದ ಹಣೆಗೊತ್ತಿಕೊಳ್ಳುತ್ತಿದ್ದೆ, ಎದೆಗೊತ್ತಿಕೊಳ್ಳುತ್ತಿದ್ದೆ. ಆಗೆಲ್ಲಾ ನಿನ್ನಮ್ಮ ಜಾಸ್ತಿ ಮುದ್ದು ಬೇಡ ಕೊನೆಗೊಮ್ಮೆ ನಿಜಕ್ಕೂ ಒದ್ದರೆ ಕಷ್ಟ ಎಂದು ಹಾಸ್ಯ ಮಾಡುತ್ತಿದ್ದಳು. ಅವಳ ಮಾತೇ ನಿಜವಾಗಿ ಹೋಯ್ತಲ್ಲಮ್ಮ. ನೀನಿಂದು ನಿಜಕ್ಕೂ ನನ್ನ ಎದೆಗೆ ಒದ್ದು ಹೋಗುತ್ತಿದ್ದೀಯ ಎಂದು ಶ್ರೀನಿವಾಸ ಮನದಲ್ಲೇ ನರಳಿದ. ಪ್ರದೀಪ ಭುಜ ಹಿಡಿದು ಅಲುಗಾಡಿಸಿದಾಗಲೇ ಬೆಚ್ಚಿದವನು ಮೂಕ ಬಸವನಂತೆ ಕ್ಯಾಂಟೀನಿಗೆ ನಡೆದ. ಮೂಲೆಯ ಟೇಬಲ್ ಖಾಲಿ ಇದ್ದು ಶಕ್ತಿ ಕಳೆದುಕೊಂಡವನಂತೆ ಕುಕ್ಕರಿಸಿದ. ಪ್ರದೀಪ ಏನನ್ನೂ ಕೇಳದೆ ಎರಡು ಪ್ಲೇಟ್ ಮೀಲ್ಸ್ ತಂದ. ಶ್ರೀನಿವಾಸ ಬಾಯ್ತೆರೆಯುವಷ್ಟರಲ್ಲಿ ಅತ್ತಿತ್ತ ನೋಡಿದ ಪ್ರದೀಪ ತನ್ನ ಮೊಬೈಲ್ ತೆರೆದು ಬೆರಳಾಡಿಸಿ ಅವನ ಮುಖದ ಮುಂದೆ ಹಿಡಿದ. ಸರಯೂ ನೀಲಿ ಜರ್ಕಿನ್ ತೊಟ್ಟ ಸ್ಯಾಮ್‌ನ ಕೊರಳನ್ನು ಹಿಂದಿನಿಂದ ಬಳಸಿ ಅವನ ಭುಜದ ಮೇಲೆ ಗದ್ದವೂರಿ ನಗುತ್ತಿದ್ದಳು. ಫೋಟೋದ ಕೆಳಗೊಂದು ಕ್ಯಾಪ್ಷನ್! ‘ವಿ ಆರ್ ಗೋಯಿಂಗ್ ಫಾರ್ ಲಿರ್! ನೀಡ್ ಯುವರ್ ವಿಷಸ್’
ಶ್ರೀನಿವಾಸನಿಗೆ ಕಣ್ಣು ಕತ್ತಲಿಟ್ಟಿತು. ಮಾನಾಪಮಾನಗಳಿಗೆ ಅಂಜಿ ಸಾಧು ಹಸುವಿನಂತೆ ಬದುಕುತ್ತಿರುವ ತನಗೆ ಇದ್ಯಾವ ಜನ್ಮದ ಪಾಪದ ಫಲವಾಗಿ ಈ ಮಗಳು ಹುಟ್ಟಿದಳೋ ಎನಿಸಿತು. “ಈ ಫೋಟೋ ಎಲ್ಲಿ ಸಿಕ್ಕಿತೋ ಪ್ರದೀಪ?” ತೊದಲಿದ.
‘ಫೇಸ್ ಬುಕ್‌ನಲ್ಲಿ ಶ್ರೀ. ಇದಕ್ಕೆ ಬಹಳ ಲೈಕುಗಳೂ ಬಂದಿವೆ. ಎನೋ ಇದೆಲ್ಲಾ? ಅವನ ಜೊತೆ ಎಲ್ಲಿಗೆ ಹೋಗ್ತಿದ್ದಾಳೆ ನಿನ್ನ ಮಗಳು? ಏನಾಗ್ತಾ ಇದೆ ನಿನ್ನ ಮನೇಲಿ? ಈ ಲಿರ್? ಲಿವ್ ಇನ್ ರಿಲೇಶನ್ ತಾನೆ?’ ಪ್ರದೀಪ ಕನಿಕರದಿಂದ ಕೇಳಿದ. ಶ್ರೀನಿವಾಸನಿಗೆ ಫೇಸ್ ಬುಕ್ ಬಗ್ಗೆ ತಿಳುವಳಿಕೆ ಇಲ್ಲವೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು.
“ನನ್ ಮಗಳು ಮತ್ತು ಅವಳ ಜೊತೆ ಇರೋ ಆ ಹುಡುಗ ಇಬ್ರು ಮದುವೆಗೆ ಮುಂಚೇನೆ ಒಂದಷ್ಟು ದಿನ ಒಟ್ಟಿಗೆ ಬಾಳಿ ನೋಡಿ ಆಮೇಲೆ ಮದುವೆಯಾಗಬೇಕೋ ಬೇಡವೋ ಎಂದು ತೀರ್ಮಾನ ಮಾಡ್ತಾರಂತೆ ಪ್ರದೀ. ಅವಳಾಗಲೇ ಎಲ್ಲಾ ನಿರ್ಧಾರ ಮಾಡಿ ಹೊರಟಾಗಿದೆ. ನಿಂತು ಮಾಡಿದ ಮದುವೆಗಳೇ ಉಳಿಯದ ಈ ಕಾಲದಲ್ಲಿ ಇಂತಹ ಸಂಬಂಧಗಳು ಉಳಿಯುತ್ತವೇನೋ? ಒಂದಷ್ಟು ದಿನ ಜೊತೆಗಿದ್ದು ಆಮೇಲೆ ಅವನೋ ಇವಳೋ ಯಾವುದೋ ಕಾರಣಕ್ಕೆ ದೂರವಾದ್ರೆ ಆಮೇಲೆ ಇವಳ ಬದುಕೇನಾಗುತ್ತದೋ? ದುಡಿಯುವ ಯೋಗ್ಯತೆಯೊಂದಿದ್ದರೆ ಸಾಕೇನು ಸಮಾಜದಲ್ಲಿ? ಮಾನ ಮರ್ಯಾದೆಗಂಜಿ ಬದುಕ್ತಾ ಇರೋ ಜನ ನಾವು” ಶ್ರೀನಿವಾಸನ ಧ್ವನಿಯಲ್ಲಿ ಜೀವವಿರಲಿಲ್ಲ. ಗೆಳೆಯನೆದುರು ಹೇಳಿಕೊಂಡು ಕೊಂಚ ಹಗುರಾದವನು ಬಂದದ್ದೆಲ್ಲಾ ಎದುರಿಸಲೇ ಬೇಕಲ್ಲ ತಪ್ಪಿಸಿಕೊಳ್ಳಲಾಗದೆಂದು ತನ್ನನ್ನು ತಾನೇ ಸಂತೈಸಿಕೊಳ್ಳುತ್ತಾ ಮತ್ತರ್ಧ ದಿನಕ್ಕೆ ರಜೆ ಬರೆದು ಈ ವಿಷಯ ಇನ್ಯಾರಿಂದಲೋ ವಸೂಗೆ ಗೊತ್ತಾಗುವ ಮುನ್ನ ತಾನೇ ತಿಳಿಸಿ ಸಮಾಧಾನಿಸುವುದು ಉಚಿತ ಎಂದುಕೊಂಡು ತಟ್ಟೆ ಪಕ್ಕಕ್ಕೆ ಸರಿಸಿ ಎದ್ದ. ತಲೆ ಇಷ್ಟು ಕೆಟ್ಟಿರುವಾಗ ಯಾವ ಕಾರಣಕ್ಕೂ ಬೈಕ್ ಬೇಡ ಎಂದ ಪ್ರದೀಪನ ಮಾತಿನ್ನೇಕೆ ಅಲ್ಲಗಳೆದು ನೋವನ್ನುಂಟುಮಾಡಬೇಕೆಂದು ಆಟೋದಲ್ಲಿ ಮನೆ ದಾರಿ ಹಿಡಿದವನಿಗೆ ಅಲ್ಲಾ ಈ ಪ್ರದೀಪನಿಗೆ ಲಿರ್ ಅಂದ್ರೇನೂಂತ ಹೇಗೆ ಗೊತ್ತು? ಬಹುಶಃ ನಾನೇ ಏನೂ ತಿಳಿಯದ ಗೂಸ್ಲು ಪಾರ್ಟಿ ಇರಬೇಕು. ಮಗಳೇ ನಾಮ ಎಳೆಯಲು ಹೊರಟಿದ್ದಾಳಲ್ಲ ಎನಿಸಿ ತನ್ನ ಬಗ್ಗೆ ತಾನೇ ಕನಿಕರಿಸಿಕೊಂಡ. ಇತ್ತ ಪ್ರದೀಪನಿಗೂ ಸಮಾಧಾನವಿರಲಿಲ್ಲ. ಎದೆಯುದ್ದ ಬೆಳೆದು ನಿಂತ ಮಗಳು ನೆನಪಾಗಿ ಅವನೆದೆಯಲ್ಲೂ ಅವ್ಯಕ್ತ ಭಯವೊಂದು ಮೂಡಿ ಚಡಪಡಿಸುತ್ತಲೇ ಕೆಲಸದಲ್ಲಿ ತೊಡಗಿಕೊಂಡ.
ಆಟೋ ಮುಂದೋಡುತ್ತಲೆ ಇತ್ತು. ಬಲಿಯ ಕುರಿಯಂತೆ ಕೂತಿದ್ದ ಶ್ರೀನಿವಾಸನಿಗೆ ಮಗಳ ಮುಖ ಮತ್ತೆ ಕಣ್ಣೆದುರು ತೇಲಿ ಬಂತು. ನೀ ಕೊಟ್ಟ ಹೋಮ್ ವರ್ಕ್ ನೆನ್ನೆ ರಾತ್ರೆಯೇ ಮಾಡಿ ಮುಗಿಸಿಬಿಟ್ಟಿದ್ದೇನೆ ಮಗಳೆ. ನಿನ್ನಪ್ಪ ಅಷ್ಟು ದಡ್ಡನಲ್ಲ ಎಂದು ವಿಷಾದದಿಂದ ನಿಟ್ಟುಸಿರುಬಿಟ್ಟ. ಹಿಂದಿನ ರಾತ್ರಿ ಅವಳು ಹೇಳಿದಂತೆ ಡಿಕ್ಷನರಿ, ಗೂಗಲ್ ಎಲ್ಲದರಲ್ಲೂ ಹಣಕಿಕ್ಕಿ ಸೋತು ಮಲಗಿದವನಿಗೆ ಮಧ್ಯ ರಾತ್ರೆ ಇದ್ದಕ್ಕಿದ್ದಂತೇ ಎಚ್ಚರವಾಗಿ ನಿದ್ದೆ ಬಾರದಾದಾಗ ಲಿರ್ ಎಂಬ ಪದ ಗುಂಗಿ ಹುಳದಂತೆ ಕೊರೆಯತೊಡಗಿ ಬಾಲ್ಕನಿಯಲ್ಲಿ ಅಡ್ಡಾಡುತ್ತಾ ಯೋಚಿಸುತ್ತಿದ್ದವನ ಮೆದುಳಿನ ಯಾವುದೋ ನೆನೆಪಿನ ಕೋಶಕ್ಕೆ ಹಾಕಿದ್ದ ಬೀಗ ಟಕ್ಕೆಂದು ತೆರೆದುಕೊಂಡು ಎಲ್ಲಾ ನಿಚ್ಚಳವಾಗಿತ್ತು. ಲಿವ್ ಇನ್ ರಿಲೇಶನ್ ಶಿಪ್! ಲಿರ್? ಯಾವುದೋ ಮ್ಯಾಗಜೀನ್‌ನಲ್ಲಿ ಬಂದಿದ್ದ ಆರ್ಟಿಕಲ್ ಓದಿದ್ದು, ಅದರ ಬಗ್ಗೆ ವಸೂಗೆ ಹೇಳಿದಾಗ ಅವಳು ಅಚ್ಚರಿ, ಅಪನಂಬಿಕೆಗಳಿಂದ ಕಣ್ಣು ಬಾಯಿ ಅಗಲಿಸಿದ್ದು ಎಲ್ಲಾ ನೆನಪಾಗಿತ್ತು. ಸರೂ ಯಾಕೆ ಈ ಬಗ್ಗೆ ಮಾತಾಡಿದಳು? ಅವಳೇನಾದರೂ… ಶ್ರೀನಿವಾಸನಿಗೆ ಆಗಲೇ ಮೈ ಬೆವರೊಡೆಯಲಾರಂಭಿಸಿತ್ತು.
ಕಾರಣವಿಲ್ಲದೆ ಯಾವುದರ ಬಗ್ಗೆಯೂ ಮಾತಾಡದ ಮಗಳು ಈ ಬಗ್ಗೆ ಮಾತಾಡಿರಬೇಕಾದರೆ ತನ್ನ ಅನುಮಾನ ನಿಜವೇ ಆಗಿರಬೇಕೆಂದು ಅವನಿಗಾಗಲೇ ಖಾತ್ರಿಯಾಗತೊಡಗಿತ್ತು. ದೇವರೇ ತನ್ನ ಅನುಮಾನ ಸುಳ್ಳಾಗಲಿ, ಇಂತಹುದೆಲ್ಲಾ ತೀರಾ ಹೈ ಸೊಸೈಟಿಯ ಜನಗಳಿಗೆ, ನಮ್ಮಂತ ಮಿಡಲ್ ಕ್ಲಾಸಿನವರಿಗಲ್ಲ ಎಂದು ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದ್ದರೂ ಆಗದೆ ಮಲಗಿರುವ ಮಗಳನ್ನೆಬ್ಬಿಸಿ ಕೇಳಿಯೇ ಬಿಡೋಣ ಎಂದು ಹೊರಟವನನ್ನು ವಿವೇಚನೆ ತಡೆದಿತ್ತು. ಯಾರಿಗೆ ಗೊತ್ತು ಅವಳ ಪರಿಚಯದವರು ಯಾರಾದರೂ ಹೀಗೆ ಮಾಡಿ ಅದರ ಬಗ್ಗೆ ಕೇಳಿರಬಹುದು. ತಾನಾಗಿ ಕೇಳಿ ಪಪ್ಪಾ ನೀವು ನನ್ನ ಬಗ್ಗೆ ಹೀಗೆ ಯೋಚಿಸಿದಿರಾ? ಎಂದು ಬಿಟ್ಟರೆ? ನಾಳೆ ಸಂಜೆವರೆಗೂ ಕಾದು ನೋಡೋಣ ಗೊತ್ತಾಗದಿದ್ದರೆ ತಾನೇ ತಿಳಿಸುತ್ತಾಳೆ ಎಂದು ಮತ್ತೆ ಮಲಗಲು ಪ್ರಯತ್ನಿಸಿದ್ದ. ಬೆಳಿಗ್ಗೆ ಮಗಳ ಮುಖ, ಅವಳ ಅಲಂಕಾರ, ಗಡಿಬಿಡಿ ನೋಡಿ ಮತ್ತೆ ಲಿರ್ ನೆನಪಾಗಿತ್ತು. ಮಗಳ ಕಣ್ಣಲ್ಲಿ ತಾನು ಮುಂಚೆ ಕಾಣುತ್ತಿದ್ದ ಮುಗ್ಧತೆ ಮಾಯವಾಗಿ ಕೊನೆಗೆ ಮಗಳೇ ಮಾಯವಾಗಿ ಇನ್ನಾವುದೋ ಅಪರಿಚಿತ ಹೆಣ್ಣು ತನ್ನೆದುರಿನಲ್ಲಿರುವಂತೆ ಭಾಸವಾಗುತ್ತಲೇ ತನ್ನ ಅನುಮಾನ ನೂರಕ್ಕೆ ನೂರರಷ್ಟು ಸತ್ಯವಾಗುವ ದಾರಿಯಲ್ಲಿದೆ ಎಂದು ಅವನಿಗೆ ಅರ್ಥವಾಗಿಹೋಗಿತ್ತು. ಇದೇ ತೊಳಲಾಟದಲ್ಲಿ ಆಫೀಸಿಗೆ ಬಂದವನಿಗೆ ಮಗಳ ಪತ್ರ ಸರಿಯಾಗಿ ಏಟು ಕೊಟ್ಟಿತ್ತು.
ಈ ಆಟೋ ಹೀಗೇ ಓಡುತ್ತಲೇ ಇರಲಿ, ಮನೆ ಬರುವುದೇ ಬೇಡ ಎಂದು ಪ್ರಾರ್ಥಿಸುತ್ತಾ ಕುಳಿತವನಿಗೆ ಅಲ್ಲೂ ನಿರಾಶೆಯೇ ಕಾದಿತ್ತು. ಮೀಟರ್ ನೋಡದೆ ನೂರರ ನೋಟು ಆಟೋದವನ ಕೈಗೆ ತುರುಕಿದವನಿಗೆ ಮನದ ಮೂಲೆಯಲ್ಲೆಲ್ಲೋ ಆಸೆಯ ಬೆಳಕು. ಮಗಳೀಗಾಗಲೇ ಬಂದಿರುತ್ತಾಳೆ. ತಾನು ಅವಳನ್ನಪ್ಪಿ ತನ್ನ ಪ್ರೀತಿಯ ಋಣ ತೀರಿಸಲು ಕೇಳಿಕೊಳ್ಳಬೇಕು. ಸರಿಯಾಗಿ ಅರ್ಥೈಸಿದರೆ ಖಂಡಿತಾ ಕೇಳುತ್ತಾಳೆ ಎಷ್ಟೆಂದರೂ ನನ್ನ ಪ್ರೀತಿಯ ಮಗಳಲ್ಲವೇ ನೋಡಿಯೇ ಬಿಡುತ್ತೇನೆ… ನನ್ನೆಲ್ಲಾ ವಾತ್ಸಲ್ಯ, ಪ್ರೀತಿಯನ್ನು ಪಣಕ್ಕಿಟ್ಟರೆ ಸೋಲುವವಳು ಅವಳೇ ಎಂದುಕೊಂಡೇ ಮನೆಯೊಳಗೆ ಬಂದ. ವಸುಧಾ ಅಡಿಗೆಮನೆಯಲ್ಲಿ ಮಗಳಿಗೆಂದು ಮೈಸೂರ್ ಪಾಕ್, ಕೋಡುಬಳೆ ಮಾಡಿ ಡಬ್ಬಿಗೆ ಹಾಕುತ್ತಿದ್ದವಳು ಮಗಳು ಹೀಗೆ ಸಡನ್ನಾಗಿ ಪ್ರಾಜೆಕ್ಟ್ ವರ್ಕೆಂದು ಹೋಗುತ್ತಿರುವ ಬಗ್ಗೆ ಅಸಮಧಾನ ತೋರಿದರೂ ಅವಳ ಮಾತಲ್ಲಿ ಮಗಳ ಪ್ರತಿಭೆಯ ಬಗ್ಗೆ ಹೆಮ್ಮೆಯು ಇಣುಕಿತ್ತು. ಗಂಡ ಇಂದು ಬೇಗ ಬಂದದ್ದಕ್ಕೆ ಅಚ್ಚರಿ ಸೂಸಿದ ವಸೂ ಸಡಗರದಿಂದ ಪ್ಲೇಟಿನಲ್ಲಿ ಒಂದೆರಡು ಮೈಸೂರು ಪಾಕಿನ ತುಂಡುಗಳು ನಾಲ್ಕು ಕೋಡುಬಳೆಗಳನ್ನು ಹಾಕಿಕೊಂಡು ಸೀದಾ ಸರಯೂಳ ರೂಮಿಗೇ ಬಂದವಳು ಶ್ರೀನಿವಾಸನ ಮುಂದಿಟ್ಟಳು. ಶ್ರೀನಿವಾಸ ಮಗಳ ಮುಖ ನೋಡಿದ. ಆಕೆ ತೀರಾ ಸಹಜವಾಗಿ ಪಕ್ಕದಲ್ಲಿ ಕುಳಿತು ಮೈಸೂರು ಪಾಕು ಮುರಿದು ಬಾಯಿಗಿಟ್ಟಳು. ಶ್ರಿನಿವಾಸನಿಗೆ ಬಿಸಿ ತುಪ್ಪ ಸುರಿದಂತಾಯಿತು.
‘ನೀನು ಹೋಗಲೆ ಬೇಕೆ?’ ಎಂದು ಆರ್ತವಾಗಿ ಕೇಳಿದ. ಸರೂ ಕ್ಷಣ ಅವನನ್ನೇ ದಿಟ್ಟಿಸಿದವಳು ‘ಯಾಕೆ ಪಪ್ಪಾ ನಿನಗೆಲ್ಲಾ ಹೇಳಿದ್ದೀನಲ್ಲಾ?’ ಎಂದಳು.
ಮಗಳು ಕೆಲವು ತಿಂಗಳು ದೂರ ಹೋಗುವುದಕ್ಕೇ ಹೀಗೆ ಕಂಗಾಲಾಗಿ ಕುಳಿತರೆ ನಾಳೆ ಅವಳ ಮದುವೆಯಾಗಿ ಗಂಡನ ಮನೆಗೆ ಹೋದರೆ ಹೇಗಿರುತ್ತಾರಿವರು. ಸರಯೂ ಹೊರಟ ಮೇಲೆ ಒಂದಷ್ಟು ಬುದ್ಧಿ ಹೇಳಬೇಕು ಎಂದುಕೊಂಡ ವಸೂ ಹೊಸ ಜಾಗೆಯಲ್ಲಿ ಹೀಗಿರಬೇಕು ಹಾಗಿರಬೇಕು ಎನ್ನುವ ಒಂದು ದೊಡ್ಡ ಪಟ್ಟಿಯನ್ನೇ ಮಗಳಿಗೆ ಕೊಡಲಾರಂಭಿಸಿದಳು. ಅಮ್ಮನ ಎಲ್ಲ ಮಾತಿಗೂ ಮುಂಚಿನಂತೆ ವಾದಿಸದೆ ಸರಿಯೆಂದು ತಲೆಯಾಡಿಸುತ್ತಿರುವ ಮಗಳನ್ನೊಮ್ಮೆ, ಅವಳ ಕೈಯಲ್ಲಿ ಬಲವಂತವಾಗಿ ತಿಂಡಿಯ ಡಬ್ಬಿ ತುರುಕುತ್ತಿರುವ ವಸೂಳನ್ನೊಮ್ಮೆ ನೋಡುತ್ತಾ ಶ್ರೀನಿವಾಸ ನಾಲಗೆ ಸತ್ತವನಂತೆ ಕುಳಿತೇ ಬಿಟ್ಟ. ಪದೆ ಪದೆ ಮೊಬೈಲ್‌ನಲ್ಲಿ ಕಣ್ಣಾಡಿಸುತ್ತಿದ್ದ ಮಗಳ ಕಣ್ಣುಗಳಲ್ಲಿ ಅಭಿಸಾರಿಕೆಯ ಭಾವ ಕಂಡಂತಾಗಿ ಗಟ್ಟಿಯಾಗಿ ಕಣ್ಣು ಮುಚ್ಚಿದ.
ಶುಭಾ ಎ. ಆರ್.
ಬದಲಾಗುತ್ತಿರುವ ಕಾಲಘಟ್ಟ ಮತ್ತು ಮೌಲ್ಯಗಳ ಹಿನ್ನಲೆಯಲ್ಲಿ ಸಂಸ್ಕೃತಿ, ಸಮಾಜ, ಗೌರವ ಎಂದು ಜೀವನವಿಡೀ ಹೋರಾಟ ಮಾಡುವ ತಂದೆ-ತಾಯಿಯರು , ಬೆಳೆಬೆಳೆದಂತೆ ಅದನ್ನೆಲ್ಲಾ ಆಧುನಿಕತೆಯ ಸೋಗಿನಲ್ಲಿ ಗಾಳಿಗೆ ತೂರಿ ತಮ್ಮ ದಾರಿ ತಾವು ಹಿಡಿಯುವ ಮಕ್ಕಳು ಈ ಹಿನ್ನಲೆಯಲ್ಲಿ ಬರೆದ ಕಥೆ ಲಿರ್. ಇದು ನನಗೆ ಇಷ್ಟವಾದ ಕಥೆಯೂ ಹೌದು. ಮಗಳಿಗೆ ತಾವು ಕೊಟ್ಟ ಸ್ವಾತಂತ್ರ್ಯವೇ ಮುಳುವಾಯಿತೇ ಎನ್ನುವುದು ಸದಾ ಕಾಡುವ ಪ್ರಶ್ನೆಯಾಗಿ ಉಳಿದುಬಿಡುತ್ತದೆ ಇಲ್ಲಿ. ಇನ್ನು ಮಗಳು ತಾನು ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿ ಎಂದು ನಂಬಿದ್ದರೂ ಅದನ್ನು ಮನ ಬಿಚ್ಚಿ ತಾಯಿಗೆ ಹೇಳಲಾರಳು. ತಂದೆಯ ಗಟ್ಟಿಗತನ ತಾಯಿಗಿಲ್ಲವೆಂಬ ಅವಳ ನಂಬಿಕೆ, ತಂದೆಯನ್ನು ಒಳಗೊಳಗೇ ಕೊಲ್ಲುತ್ತಿರುವ ಆತಂಕ –ವಿಷಾದಗಳ ಅರಿವೇ ಇಲ್ಲದಂತೆ ಮಗಳು ತನ್ನ ದಾರಿ ತಾನು ಹಿಡಿದು ಹೋಗುವಾಗ ಅಸಹಾಯಕತೆಯಿಂದ ನೋಡುತ್ತಾ ನಿಲ್ಲುವ ತಂದೆ, ಮುಗ್ಧ ತಾಯಿಯ ಹಿನ್ನಲೆಯಲ್ಲಿ ಈ ಕಥೆ ನನಗೆ ಬಹಳ ಇಷ್ಟವಾದುದು. ಆಧುನಿಕ ಜಗತ್ತಿನ ಮೌಲ್ಯಗಳೆನಿಸಿಕೊಳ್ಳುವ ಪದಗಳನ್ನು ಒಪ್ಪುವುದು ನನ್ನ ತಲೆಮಾರಿನವರಿಗೆ ಅಥವಾ ನನ್ನಂಥವರಿಗೆ ಬಹಳವೇ ಕಷ್ಟ… ಆದರೆ ಇಂತಹಾ ಸಂದರ್ಭಗಳು ಬಂದಾಗ ಅದನ್ನು ಎದುರಿಸಲು ಸದಾ ಸಿದ್ಧರಿರಬೇಕು. ಈ ಹಿನ್ನೆಲೆಯಲ್ಲಿ ಲಿರ್ ಕಥೆ ನನಗೆ ಇಷ್ಟವಾಗುತ್ತದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಉತ್ತಮ ಕತೆ…