ಗಂಡು ಮತ್ತು ಹೆಣ್ಣಿನ ಮನೆಯ ಒಂದು ಗೋಡೆಯ ಮೇಲೆ ಹಸೆ ಕಲಾವಿದರು ಚಿತ್ತಾರ ಬಿಡಿಸಿ ಗಂಡು ಮತ್ತು ಹೆಣ್ಣಿನ ಹೆಸರು ಬರೆದಿರುತ್ತಾರೆ. ಇದನ್ನು ಹಸೆಗೋಡೆ ಎನ್ನುತ್ತಾರೆ. ಚಪ್ಪರದ ದಿನ, ಮದುವೆ ಮಂಟಪಕ್ಕೆ ಹೊರಡಿಸುವ ಮೊದಲು, ಮದುವೆಯ ನಂತರ ಮದುಮಕ್ಕಳನ್ನು ಈ ಗೋಡೆಯ ಕೆಳಗೆ ಕೂರಿಸಿ ಬಂಧುಗಳೆಲ್ಲರೂ ಅಕ್ಷತೆ ಹಾಕಿ ಹರಸುತ್ತಾರೆ. ಈ ಹಸೆ ಚಿತ್ತಾರವು ಮದುವೆಯ ಸವಿನೆನಪಾಗಿ ಶಾಶ್ವತವಾಗಿ ಆ ಮನೆಯ ಗೋಡೆಯ ಮೇಲೆ ಉಳಿದಿರುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಲೆನಾಡಿನ ಮದುವೆ ಸಂಭ್ರಮಗಳ ಕುರಿತ ಬರಹ ನಿಮ್ಮ ಓದಿಗೆ
ಏಪ್ರಿಲ್ ಮತ್ತು ಮೇ ತಿಂಗಳು ಬಂತೆಂದರೆ ಬೇಸಿಗೆ ರಜೆಯ ಜೊತೆ ಜೊತೆಗೆ ಮದುವೆಮನೆಗಳ ಕಾಲಮಾನವಿದು. ದಿನಕ್ಕೊಂದರಂತೆ ಹೋದರೂ ಸಾಲು ಸಾಲು ಮದುವೆಗಳಿವೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಮದುವೆಗಳಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ಆಧುನಿಕತೆಯ ಪ್ರಭಾವ ನಮ್ಮ ಜೀವನಶೈಲಿಯ ಮೇಲೆ ಆದಂತೆ ಮದುವೆಗಳ ಮೇಲೂ ಅಗಾಧವಾಗಿದೆ. ಹಿಂದೆ ಮದುವೆಗಳು ಹಿರಿಯರ ನೇತೃತ್ವದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಸ್ತ್ರಬದ್ಧವಾಗಿ ನಡೆಯುತ್ತಿದ್ದವು. ಇಂದು ಸಂಪ್ರದಾಯಗಳಿಗಿಂತ ಆಡಂಬರ ಮತ್ತು ಅಲಂಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ನಮ್ಮದಲ್ಲದ ಆಚರಣೆಗಳು, ಫೋಟೋ, ವಿಡಿಯೋ ಶೂಟ್‌ಗಳ ಭರಾಟೆಯಲ್ಲಿ ನೆಲದ ಸಂಸ್ಕೃತಿ ಮರೆಯಾಗುತ್ತಿದೆ. ಹಾಗಾದರೆ ಮಲೆನಾಡಿನ ಮದುವೆಮನೆಗಳ ವಿಶೇಷತೆಗಳೇನು ತಿಳಿಯೋಣ ಬನ್ನಿ.
ಒಪ್ಪು ವೀಳ್ಯ ಮತ್ತು ಹಾದಿ ನಿಮಿತ್ತ
ಗಂಡಿಗೊಂದು ಹೆಣ್ಣು ಗೊತ್ತಾದ ನಂತರ ಗಂಡಿನ ಕಡೆಯವರು ಅಡಿಕೆ, ವೀಳ್ಯದೆಲೆ, ಹೂ ಹಣ್ಣು, ಅರಿಶಿನ ಕುಂಕುಮದೊಂದಿಗೆ ಹೆಣ್ಣಿನ ಮನೆಗೆ ಹೋಗಿ ಹೆಣ್ಣು ನೋಡುವ ಶಾಸ್ತ್ರ ಮಾಡುತ್ತಾರೆ. ಹೋಗುವ ಮೊದಲು ಹಾದಿನಿಮಿತ್ತ ನೋಡುತ್ತಾರೆ. ಹಾದಿನಿಮಿತ್ತಗಳು ಶುಭವಾಗಿರುವುದು ಬಹಳ ಮುಖ್ಯ. ಹೆಣ್ಣು ಇಷ್ಟವಾದರೆ ಒಪ್ಪು ವೀಳ್ಯಕ್ಕೆ ಬರುವುದಾಗಿ ತಿಳಿಸಿ ಹಿಂದಿರುಗುತ್ತಾರೆ. ಒಂದು ನಿಶ್ಚಿತ ದಿನದಂದು ಹೆಣ್ಣಿನ ಮನೆಯವರು ಕೈ ಹಣತೆ ಹಚ್ಚಿ ಗಂಡಿನ ಕಡೆಯವರಿಗಾಗಿ ಕಾಯುತ್ತಿರುತ್ತಾರೆ. ಈ ದಿನ ಗಂಡಿನ ಕಡೆಯ ಮುಖ್ಯ ಬಂಧುಗಳು ಹೆಣ್ಣಿನ ಮನೆಗೆ ಬಂದು ವರದಕ್ಷಿಣೆ (ಹಿಂದೆ ಇದ್ದ ಪದ್ಧತಿ) ಹಾಗೂ ವಧುವಿಗೆ ಹಾಕಬೇಕಾದ ಒಡವೆ, ವಸ್ತುಗಳ ಕುರಿತು ಮಾತುಕತೆ ನಡೆಸುತ್ತಾರೆ. ಎರಡೂ ಕಡೆಯವರು ಒಂದು ಒಪ್ಪಂದಕ್ಕೆ ಬರುತ್ತಾರೆ.
ಗಂಡು-ಹೆಣ್ಣಿನ ಜಾತಕ ನೋಡುವುದು ಬಹಳ ಪ್ರಧಾನವಾದ ಪದ್ಧತಿ. ಜಾತಕ ಕೂಡಿ ಬರಬೇಕು. ಒಂದು ವೇಳೆ ಬರದಿದ್ದರೆ ಎರಡೂ ಕಡೆಯವರ ಇಷ್ಟ ದೈವದ ಸನ್ನಿಧಿಯಲ್ಲಿ ಪ್ರಸಾದ ತೆಗೆಸಿ ನೋಡುತ್ತಾರೆ. ನಿರೀಕ್ಷಿತ ಫಲ ದೊರೆತರೆ ಮುಂದಿನ ತಯಾರಿ ನಡೆಯುತ್ತದೆ. ಗಂಡಿನ ತಂದೆ ತಮ್ಮ ಒಪ್ಪಿಗೆಯನ್ನು ಒಪ್ಪು ವೀಳ್ಯ ಸ್ವೀಕರಿಸಿ ಸೂಚಿಸುತ್ತಾರೆ. ಒಪ್ಪು ವೀಳ್ಯ ಸ್ವೀಕರಿಸಿದ ನಂತರ ಆ ಹೆಣ್ಣನ್ನು ಬೇರೆಯವರಿಗೆ ಕೊಡುವಂತಿಲ್ಲ.
ಹೂ ಮುಡಿಸುವ ಶಾಸ್ತ್ರ
ನಿಶ್ಚಿತವಾದ ಶುಭದಿನದಂದು ಹೂ ಮುಡಿಸುವ ಶಾಸ್ತ್ರ ನಡೆಸುತ್ತಾರೆ. ಗಂಡಿನ ಮನೆಯಿಂದ ಕುಕ್ಕೆ(ಶುಭವಸ್ತುಗಳನ್ನು ತುಂಬಿಸಲಾದ ಬುಟ್ಟಿ ) ವಾದ್ಯಗಳ ಸಮೇತ ಒಂದು ಸಣ್ಣ ದಿಬ್ಬಣದಷ್ಟು ಜನರು ಹೆಣ್ಣಿನ ಮನೆಗೆ ಹೋಗಿ ಹೆಣ್ಣಿಗೆ ಹೂವು ಮುಡಿಸುತ್ತಾರೆ. ಇದೇ ದಿನ ಜೋಯಿಸರಿಂದ ಲಗ್ನಪತ್ರಿಕೆಯನ್ನು ಬರೆಸಲಾಗುತ್ತದೆ. ಇದನ್ನು ನಿಶ್ಚಯ ಮನೆ ಶಾಸ್ತ್ರ ಎಂದೂ ಕರೆಯಲಾಗುತ್ತದೆ.
ಕೋರೂಟ
ಇದು ಮಲೆನಾಡಿನ ಒಂದು ವಿಶಿಷ್ಟವಾದ ಸಂಪ್ರದಾಯ. ಮದುವೆಗೆ ಇನ್ನೇನು ಎಂಟು ದಿನಗಳು ಇವೆ ಎನ್ನುವಾಗ ಗಂಡು ಮತ್ತು ಹೆಣ್ಣಿನ ಹತ್ತಿರದ ಸಂಬಂಧಿಕರು ತಮ್ಮ ಮನೆಗಳಿಗೆ ಅವರನ್ನು ಕರೆತಂದು ವಿಶೇಷ ಅಡುಗೆ ಮಾಡಿ ಊಟ ಹಾಕುತ್ತಾರೆ. ಉಡುಗೊರೆ ಕೊಟ್ಟು ಕಳಿಸುತ್ತಾರೆ. ಮದುವೆಯ ಕಳೆ ಅದಾಗಲೇ ಮದುಮಕ್ಕಳ ಮೊಗದಲ್ಲಿ ಕಾಣತೊಡಗುತ್ತದೆ.

ಚಪ್ಪರದೂಟ
ಮದುವೆಯ ಹಿಂದಿನ ದಿನ ಗಂಡು ಮತ್ತು ಹೆಣ್ಣಿನ ಮನೆಗಳಲ್ಲಿ ಹನ್ನೆರಡು ಕಂಬಗಳನ್ನು ನೆಟ್ಟು, ಜಂದರಿಗೆ ಸೋಗೆ ಎಂಬ ಹಸಿರೆಲೆಗಳನ್ನು ಹೊದಿಸಿ ಚಪ್ಪರ ಹಾಕುತ್ತಾರೆ. ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಸೀಮೆಯ ಮಡಿವಾಳರು ಬಂದು ಚಪ್ಪರದ ಕೆಳಛಾವಣಿಯನ್ನು ಬಿಳಿವಸ್ತ್ರದಿಂದ ಮುಚ್ಚುವ ಮೇಲ್ಕಟ್ಟನ್ನು ಕಟ್ಟಿಕೊಡುತ್ತಾರೆ. ನಂತರ ಮದುಮಗಳಿಂದ ಭತ್ತ ಕುಟ್ಟಿಸುವ ಶಾಸ್ತ್ರವಿರುತ್ತದೆ. ದೇವತಾಕಾರ್ಯಗಳು ಜರಗುತ್ತವೆ. ದೇವರೂಟ (ತೀರಿದ ಹಿರಿಯರಿಗೆ ಎಡೆ ಹಾಕುವುದು) ಇದಕ್ಕಾಗಿ ಹೊಸ ಗಡಿಗೆಯಲ್ಲಿ ಹೊಸ ನೀರು ತರುತ್ತಾರೆ. ಮದುಮಗಳು ಬಾವಿಗೆ ಪೂಜೆ ಸಲ್ಲಿಸಬೇಕು. ಕೊಟ್ಟಿಗೆಯ ಗೋವುಗಳಿಗೆ ಅಕ್ಕಿ ತಿನ್ನಿಸಿ, ಪೂಜಿಸಬೇಕು. ಮುತ್ತೈದೆಯರು ಉಡಿ ತುಂಬಿಕೊಂಡು ಪ್ರತಿಯೊಂದು ಶಾಸ್ತ್ರದಲ್ಲಿ ಸೋಬಾನೆ ಹಾಡುತ್ತಾರೆ. ಮದುವೆಗೆ ಬಂದ ಬಂಧುಗಳಿಗೆಲ್ಲಾ ಸಿಹಿ ಊಟವಿರುತ್ತದೆ.
ಕುಕ್ಕೆ ತುಂಬಿಸುವುದು
ಚಪ್ಪರದ ದಿನ ಮದುವೆ ಮಂಟಪಕ್ಕೆ ಒಯ್ಯುವ ವಸ್ತುಗಳನ್ನು ಜೋಡಿಸಿಡಲಾಗುತ್ತದೆ. ಹಿರಿಯ ಮುತ್ತೈದೆಯರು ಸೋಬಾನೆ ಹಾಡುತ್ತ ಅಲಂಕಾರಿಕ ಬುಟ್ಟಿಗಳಿಗೆ ವಸ್ತುಗಳನ್ನು ಹಾಕಿಡುತ್ತಾರೆ. ಇದನ್ನು ಕುಕ್ಕೆ ತುಂಬಿಸುವುದು ಎನ್ನುತ್ತಾರೆ. ಕಳಸದ ಬಟ್ಟಲುಗಳಿಗೆ ಧಾರೆಯ ಕಾಲಕ್ಕೆ ಬೇಕಾದ ವಿವಿಧ ವಸ್ತುಗಳನ್ನು ತುಂಬಿಡುತ್ತಾರೆ. ಹನ್ನೆರಡು ಬೇರೆಬೇರೆ ಗಾತ್ರದ ಕುಂಭಗಳಿಗೆ ಬಗೆ ಬಗೆಯ ಪದಾರ್ಥಗಳನ್ನು ತುಂಬುತ್ತಾರೆ. ಧಾರೆ ಮಂಟಪದ ಸುತ್ತಲೂ ಬಣ್ಣಬಣ್ಣದ ಗಡಿಗೆಗಳನ್ನು ಸಾಲಾಗಿ ಜೋಡಿಸಿಡುತ್ತಾರೆ.
ಅರಿಶಿಣ ಎಣ್ಣೆ ಶಾಸ್ತ್ರ ಮತ್ತು ಬಿನ್ನಾಣ ಶಾಸ್ತ್ರ
ಮದುವೆ ದಿನದ ಬೆಳಗಿನ ಜಾವ ಮದುಮಗ/ಮದುಮಗಳ ಕೊರಳಿಗೆ ಹತ್ತಿರದ ಬಂಧುಗಳು ತಮ್ಮ ಕೊರಳಿನ ಚಿನ್ನದ ಸರಗಳನ್ನು ಪ್ರೀತಿಯಿಂದ ಹಾಕುವ ವಾಡಿಕೆ ಇದೆ. ಮದುಮಕ್ಕಳ ಕೈ ಮತ್ತು ಕಾಲಿನ ಬೆರಳುಗಳಿಗೆ ಮಿಂಚುಂಗುರವನ್ನು ಹಾಕುತ್ತಾರೆ. ನಂತರ ಹಾಲುಗಂಬಗಳನ್ನು ತಂದು ತುಳಸೀಕಟ್ಟೆಯ ಬಲಭಾಗದಲ್ಲಿ ನೆಡುತ್ತಾರೆ. ಕ್ಷೌರಿಕರನ್ನು ಕರೆಸಿ, ಮದುಮಗ/ಮದುಮಗಳಿಗೆ ಉಗುರು ತೆಗೆಯುವ ಶಾಸ್ತ್ರ ಮಾಡಿ, ಕ್ಷೌರಿಕರಿಗೆ ವೀಳ್ಯದೆಲೆ, ಅಕ್ಕಿ ನೀಡುತ್ತಾರೆ. ಇದನ್ನು ಬಿನ್ನಾಣ ಶಾಸ್ತ್ರವೆಂದೂ ಕರೆಯುತ್ತಾರೆ. ನಂತರ ಮದುಮಕ್ಕಳಿಗೆ ಅರಿಶಿಣ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಾರೆ.
ಮದುಮಕ್ಕಳ ಅಲಂಕಾರ
ಮದುಮಗನನ್ನು ಮಣೆಯ ಮೇಲೆ ನಿಲ್ಲಿಸಿ ಹೊಸ ಪಂಚೆಯ ಕಚ್ಚೆಪಂಚೆ ಹಾಕುತ್ತಾರೆ. ಅಂಗಿ ಕೋಟು ತೊಡಿಸುತ್ತಾರೆ. ತಲೆಗೆ ಜರಿಪೇಟ ಹಾಕಿ ಬಾಸಿಂಗ ತೊಡಿಸುತ್ತಾರೆ. ಕೊರಳಿಗೆ ಬಗೆಬಗೆಯ ಚಿನ್ನದ ಸರಗಳನ್ನು ಹಾಕುತ್ತಾರೆ.
ಹಸೆಶಾಸ್ತ್ರ
ಗಂಡು ಮತ್ತು ಹೆಣ್ಣಿನ ಮನೆಯ ಒಂದು ಗೋಡೆಯ ಮೇಲೆ ಹಸೆ ಕಲಾವಿದರು ಚಿತ್ತಾರ ಬಿಡಿಸಿ ಗಂಡು ಮತ್ತು ಹೆಣ್ಣಿನ ಹೆಸರು ಬರೆದಿರುತ್ತಾರೆ. ಇದನ್ನು ಹಸೆಗೋಡೆ ಎನ್ನುತ್ತಾರೆ. ಚಪ್ಪರದ ದಿನ, ಮದುವೆ ಮಂಟಪಕ್ಕೆ ಹೊರಡಿಸುವ ಮೊದಲು, ಮದುವೆಯ ನಂತರ ಮದುಮಕ್ಕಳನ್ನು ಈ ಗೋಡೆಯ ಕೆಳಗೆ ಕೂರಿಸಿ ಬಂಧುಗಳೆಲ್ಲರೂ ಅಕ್ಷತೆ ಹಾಕಿ ಹರಸುತ್ತಾರೆ. ಈ ಹಸೆ ಚಿತ್ತಾರವು ಮದುವೆಯ ಸವಿನೆನಪಾಗಿ ಶಾಶ್ವತವಾಗಿ ಆ ಮನೆಯ ಗೋಡೆಯ ಮೇಲೆ ಉಳಿದಿರುತ್ತದೆ.
ಹಸೆಶಾಸ್ತ್ರದ ನಂತರ ವಾದ್ಯ ಸಮೇತ ಹೆಣ್ಣಿನ ಮನೆಗೆ ದಿಬ್ಬಣ ಹೊರಡುತ್ತದೆ. ಹಿಂದೆ ಹೆಣ್ಣಿನ ಮನೆಯಲ್ಲಿಯೇ ಧಾರೆಯೆರೆದು ಕೊಡುವ ಪದ್ಧತಿ ಇತ್ತು. ದಿಬ್ಬಣದ ಮುಂಭಾಗದಲ್ಲಿ ಮುತ್ತೈದೆಯರು ಕುಕ್ಕೆ ಹೊತ್ತು, ಕಳಸದ ಬಟ್ಟಲು ಹಿಡಿದು ಮದುಮಗನೊಂದಿಗೆ ಹೆಣ್ಣಿನ ಮನೆಯವರನ್ನು ಎದುರುಗೊಳ್ಳುತ್ತಾರೆ. ಮದುಮಗನ ಕಾಲು ತೊಳೆದು ಮಂಟಪಕ್ಕೆ ಬರಮಾಡಿಕೊಳ್ಳಲಾಗುತ್ತದೆ.
ಹಸೆ ತೂಗುವ ಶಾಸ್ತ್ರ
ಹೆಣ್ಣಿಗೆ ಅಲಂಕರಿಸುವ ಮುನ್ನ ನಡೆಯುವ ಶಾಸ್ತ್ರವಿದು. ತೆಂಗಿನಕಾಯಿ, ಬಾಳೆಹಣ್ಣು, ಮಾವಿನ ತುಂಡೆ ಮತ್ತಿತರ ಮಂಗಳದ್ರವ್ಯಗಳನ್ನು ಒಂದು ಹೊಸ ಜಮಖಾನೆಯಲ್ಲಿಟ್ಟು ಅದರ ನಾಲ್ಕು ಮೂಲೆಗಳನ್ನು ಹೆಣ್ಣು ಸೇರಿಕೊಂಡಂತೆ ಒಟ್ಟು ಐದು ಜನರು ಸೇರಿ ತೂಗಬೇಕು. ನಂತರ ಹೆಣ್ಣು ಅದಕ್ಕೆ ನಮಸ್ಕರಿಸಿ, ಅದರ ಮೇಲೆ ಕೂತು ಅಲಂಕಾರ ಮಾಡಿಸಿಕೊಳ್ಳಬೇಕು. ಧಾರೆ ಸೀರೆ, ರವಿಕೆ ತೊಡಿಸಿ ಜಡೆಗೆ ಜಡೆ ಬಂಗಾರ ತೊಡಿಸುವರು. ಕೊರಳಿಗೆ ಮೋಹನಮಾಲೆ, ಕಾಲಿಗೆ ಗೆಜ್ಜೆ, ಬೆರಳಿಗೆ ಉಂಗುರ ಹಾಕುತ್ತಾರೆ. ಹಣೆಗೆ ಬಾಸಿಂಗ ಕಟ್ಟಿ, ಮಡಿಲು ತುಂಬಿಸುತ್ತಾರೆ.
ಧಾರೆ
ಧಾರೆ ಮುಹೂರ್ತ ಹತ್ತಿರವಾದಾಗ ಮದುಮಗನನ್ನು ಧಾರೆ ಮಂಟಪಕ್ಕೆ ಕರೆತಂದು ಮೆಟ್ಟಕ್ಕಿ ಸಿಬ್ಬಲದ ಮೇಲೆ ನಿಲ್ಲಿಸುತ್ತಾರೆ. ಧಾರೆ ಮುಗಿದ ನಂತರ ಹೆಣ್ಣು, ಗಂಡಿನ ಪಾದ ತೊಳೆಯುವ ಶಾಸ್ತ್ರ, ಹಸೆ ಗೋಡೆಯ ಹತ್ತಿರ ಕೂರಿಸಿ ಅಕ್ಷತೆ ಹಾಕುವ ಶಾಸ್ತ್ರವಿರುತ್ತದೆ. ದಿಬ್ಬಣ ವರನ ಮನೆಗೆ ಹೋಗುವ ಮೊದಲು ಬಂಧುಬಳಗದವರಿಗೆ ಎಲೆ ಅಡಿಕೆ ಹಂಚುತ್ತಾರೆ. ಹೆಣ್ಣನ್ನು ಗಂಡಿಗೊಪ್ಪಿಸುವ ಶಾಸ್ತ್ರ ನಡೆಯುತ್ತದೆ. ಬಂಧುಬಳಗ, ತಂದೆ ತಾಯಿಯರನ್ನು ಅಗಲಿ ಹೋಗುವ ನೋವು, ತಡೆದರೂ ತುಂಬಿ ಬರುವ ಕಂಬನಿಯಿಂದ ಭಾವುಕವಾದ ಕ್ಷಣವೊಂದು ಸೃಷ್ಟಿಯಾಗುತ್ತದೆ. ಹುಟ್ಟಿದ ಮನೆಯ ಮುದ್ದು ಮಗಳು ಕೊಟ್ಟ ಮನೆ ಬೆಳಗುವ ಸೊಸೆಯಾಗಿ ಹೊರಡುತ್ತಾಳೆ.
ವರನ ಮನೆಯ ಶಾಸ್ತ್ರ
ಮದುಮಕ್ಕಳ ನಡುವೆ ಪರಸ್ಪರ ಸಂಕೋಚ ಕಡಿಮೆಯಾಗಿ ಸಲುಗೆ ಬೆಳೆಯುವ ದೃಷ್ಟಿಯಿಂದ ಕೆಲವು ಶಾಸ್ತ್ರಗಳನ್ನು ಮಾಡಿಸುತ್ತಾರೆ. ಒಂದು ಪಾತ್ರೆಯಲ್ಲಿ ಅಕ್ಕಿ ತುಂಬಿ ಅದರಲ್ಲಿ ಚಿನ್ನದ ಉಂಗುರ ಹಾಕಿ ನವದಂಪತಿಗಳಿಗೆ ಹುಡುಕಲು ಸ್ಪರ್ಧೆ ನಡೆಸುತ್ತಾರೆ. ಇಬ್ಬರಲ್ಲಿ ಯಾರು ಮೊದಲು ಹುಡುಕುತ್ತಾರೋ ಅವರು ಗೆಲ್ಲುತ್ತಾರೆ. ಓಕುಳಿ ಎರೆಚಿಕೊಳ್ಳುವ ಆಟವಾಡಿಸುತ್ತಾರೆ. ಇವೆಲ್ಲವೂ ಮದುವೆ ಮನೆಯಂಗಳದಲ್ಲಿ ನವಚೈತನ್ಯ ಮೂಡಿಸುತ್ತವೆ.

ಕುಂಭ ನೀರು ಹೊರಿಸುವ ಶಾಸ್ತ್ರ
ಮದುವೆ ಮರುದಿವಸದ ಮುಂಜಾನೆ ನವವಧು ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವುದು, ಸಸಿಗಳಿಗೆ ನೀರು ಹಾಕುವುದು ಮಾಡಿಸುತ್ತಾರೆ. ಮನೆಯ ಬಾವಿಯಿಂದ ಕುಂಭದಲ್ಲಿ ನೀರು ಹೊತ್ತು ತರುವುದು ವಿಶೇಷವಾಗಿರುತ್ತದೆ.
ಹೀಗೆ ಮಲೆನಾಡಿನ ಮನೆಯಂಗಳದಲ್ಲಿ ಮದುವೆಮನೆ ಹತ್ತು ಹಲವು ಸರಣಿ ಶಾಸ್ತ್ರಗಳೊಂದಿಗೆ ವಿಶಿಷ್ಟವಾಗಿ ನಡೆದು ಎಲ್ಲರ ಮನಸ್ಸಿಗೆ ಮುದ ನೀಡಿ ಸವಿ ನೆನಪಾಗಿ ಉಳಿದುಬಿಡುತ್ತದೆ. ಇಂದಿಗೂ ಹಲವು ಕುಟುಂಬಗಳಲ್ಲಿ ಹಿರಿಯ ಮಹಿಳೆಯರು ಯಾವ ಶಾಸ್ತ್ರವೂ ಲೋಪವಾಗದಂತೆ ಮುತುವರ್ಜಿಯಿಂದ ತಾವೇ ಮುಂದೆ ನಿಂತು ಮಾಡಿಸುವುದನ್ನು ಕಾಣುತ್ತೇವೆ. ನಾನು ನೋಡಿದ ಮದುವೆಗಳು,ಸ್ವ ತಃ ನಮ್ಮ ಮದುವೆ ಹಾಗೂ ಹಿರಿಯರಿಂದ
ಕೇಳಿ ತಿಳಿದು ಇಷ್ಟು ಮಾಹಿತಿ ನೀಡಿದ್ದೇನೆ. ಮಲೆನಾಡಿನ ನೆಲದ ಸಂಸ್ಕೃತಿಯ ಬೇರಿನಂತಿರುವ ಇಂತಹ ಆಚರಣೆಗಳು ಉಳಿದು ಬೆಳಗಲಿ ಎಂಬುದೇ ಆಶಯ.

