Advertisement
ನನ್ನಜ್ಜಿ ಬದುಕಿರುವುದು ಅವಳ ಹಾಡುಗಳಲ್ಲಿ: ಅನನ್ಯ ತುಷಿರಾ ಬರಹ

ನನ್ನಜ್ಜಿ ಬದುಕಿರುವುದು ಅವಳ ಹಾಡುಗಳಲ್ಲಿ: ಅನನ್ಯ ತುಷಿರಾ ಬರಹ

ಎಷ್ಟೋ ಬಾರಿ ಸಣ್ಣ ಪುಟ್ಟ ಸಂಗತಿಗಳಿಗೆ ಸೋತು ಹೋದಂತಾಗುತ್ತದೆ. ಏರಿ ನಿಂತ ಎತ್ತರ ಸುಲಭಕ್ಕೆ ದಕ್ಕಿಲ್ಲವಾದರೂ ನಿಭಾಯಿಸುವಲ್ಲಿ ಅಲುಗಾಡಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ಬೆಳಕು ಕಾಣುವುದು ನನ್ನಜ್ಜಿಯ ಬದುಕಿನಿಂದ. ಅವಳ ಹಾಡುಗಳಿಂದ. ಬದುಕು ಕಟ್ಟುವ ಹೊತ್ತಿಗೆ ಸಂಗಾತಿಯ ಸಾವು ಕಂಡೂ ಕೂಡ ಬದುಕ ಹಾಡು ಕಟ್ಟಿದವಳು ನನ್ನಜ್ಜಿ. ‘ನನ್ನಜ್ಜಿಯ ಜೀವನವನ್ನೂ, ಜನಪದ ಹಾಡುಗಳನ್ನೂ ಬಿಡಿಸಿ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ನನ್ನಿಂದ’ ಎನ್ನುವಷ್ಟು ಆ ಪದಗಳು ಅವಳ ಹಾದಿಯಲ್ಲಿ ಬೆರೆತು ಹೋಗಿವೆ.
ಚಿಕ್ಕಂದಿನಲ್ಲೇ ತಮ್ಮ ಗಂಡನನ್ನು ಕಳೆದುಕೊಂಡರೂ ಬದುಕನ್ನು ಧೈರ್ಯವಾಗಿ ಎದುರಿಸಿ, ಹಾಡುವ ಹಾಡುಗಳಲ್ಲಿ ಹಳೆಯ ನೆನಪುಗಳನ್ನು ತಂದು, ಬದುಕನ್ನು ಚಂದವಾಗಿಸಿ ಬದುಕಿದ ತಮ್ಮ ಅಜ್ಜಿಯ ಕುರಿತು ಅನನ್ಯ ತುಷಿರಾ ಬರಹ ನಿಮ್ಮ ಓದಿಗೆ

 ತುಂಬ ಬೇಸರ, ಖುಷಿ ಏನೇ ಆದರೂ ಮನಸು ಒಳಗೋ, ಹೊರಗೋ ಒಟ್ಟಿನಲ್ಲಿ ರಾಗವೊಂದನ್ನು  ಗುನುಗಿಕೊಳ್ಳುತ್ತದೆ. ಅರಿವಿಲ್ಲದೇ ದುಗುಡವಾದರೆ ಹಗುರಾಗುತ್ತದೆ, ಖುಷಿಯಾದರೆ ಹಬ್ಬುತ್ತದೆ. ವಿಶೇಷ ಅಂದರೆ ಈ ನೆಮ್ಮದಿ ಅರಸಲು ನಮಗೆ ಅಕ್ಷರ ಜ್ಞಾನವೇ ಬೇಕಿಲ್ಲ.  ಅಕ್ಷರದಾಸರೆ ಇಲ್ಲದೆಯೂ ಎಷ್ಟೊಂದು ಸಣ್ಣ ಸಣ್ಣ ಎಳೆಗಳಲ್ಲಿ ಹರಡಿ ಸಮೃದ್ಧವಾಗಿರುವ   ನಮ್ಮ ನೆಲದ ಜನಪದ ಸತ್ವ ನಮ್ಮ ದಿನನಿತ್ಯದ ಬದುಕಿನಲ್ಲಿ ಹೀಗೆ ಹಾಸುಹೊಕ್ಕಾಗಿ ಬಿಟ್ಟಿದೆ.  ಏನೊಂದು ಅಕ್ಷರ ಕಲಿಯದೆಯೂ ನಮ್ಮ ಹಿರಿಯರು ಅಂಥದೊಂದು ಲೋಕವನ್ನೇ  ಸೃಷ್ಟಿಸಿಕೊಟ್ಟಿದ್ದಾರೆ. ಅದು ಜನರ ಬದುಕಿನ ಪಾಠ, ಜನರ  ಅನುಭವದ   ಪದ.
ಜನಪದ ಜಗತ್ತಿನಲ್ಲಿ  ಬೇರೆ  ಕಲೆಗಳದ್ದು ಒಂದು ತೂಕವಾದರೆ, ಜನಪದ ಹಾಡುಗಳದ್ದೇ ಒಂದು ತೂಕ. ಹುಟ್ಟು ಸಾವು, ಖುಷಿ ಬೇಸರ, ಅಳುವು ನಗುವು, ಸೋಲು ಗೆಲುವು, ಸಂಭ್ರಮ  ಸೂತಕ  ಎಲ್ಲ ವೈರುಧ್ಯಗಳನ್ನೂ ಆಪ್ತವಾಗಿ ಬಾಚಿ ತನ್ನದೇ ನೆಲೆಯಲ್ಲಿ ಸಂಭ್ರಮಿಸುವ, ಸಂತೈಸುವ ವಿಶಿಷ್ಟ ತಾಕತ್ತು ಈ ಜನಪದ ಹಾಡುಗಳದ್ದು. ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಜನಪದೀಯ ಶೈಲಿ ಇನ್ನೂ ಸೊಗಸೆನ್ನಿಸುವಂಥದು. ನಮ್ಮ ಬಯಲಿನ ಈ ಜನಪದೀಯ ಸೊಗಡು ಮೊದಲ ಬಾರಿ ನಾನು ಕಂಡದ್ದು ನನ್ನಜ್ಜಿಯ ಹಾಡುಗಳಲ್ಲಿ.
ಎಷ್ಟೋ ಬಾರಿ ಸಣ್ಣ ಪುಟ್ಟ ಸಂಗತಿಗಳಿಗೆ ಸೋತು ಹೋದಂತಾಗುತ್ತದೆ. ಏರಿ ನಿಂತ ಎತ್ತರ ಸುಲಭಕ್ಕೆ ದಕ್ಕಿಲ್ಲವಾದರೂ ನಿಭಾಯಿಸುವಲ್ಲಿ ಅಲುಗಾಡಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರವಾಗಿ  ಒಂದು ಬೆಳಕು ಕಾಣುವುದು ನನ್ನಜ್ಜಿಯ ಬದುಕಿನಿಂದ. ಅವಳ ಹಾಡುಗಳಿಂದ. ಬದುಕು ಕಟ್ಟುವ ಹೊತ್ತಿಗೆ ಸಂಗಾತಿಯ ಸಾವು ಕಂಡೂ ಕೂಡ ಬದುಕ ಹಾಡು ಕಟ್ಟಿದವಳು ನನ್ನಜ್ಜಿ.   ‘ನನ್ನಜ್ಜಿಯ ಜೀವನವನ್ನೂ, ಜನಪದ ಹಾಡುಗಳನ್ನೂ ಬಿಡಿಸಿ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ನನ್ನಿಂದ’ ಎನ್ನುವಷ್ಟು ಆ ಪದಗಳು ಅವಳ ಹಾದಿಯಲ್ಲಿ ಬೆರೆತು ಹೋಗಿವೆ.
ಅಜ್ಜಿಯನ್ನು  ನಾವು ಆಯಿ ಅಂತಲೇ ಕರೆದಿದ್ದು. ಅವರು ನಮ್ಮಮ್ಮನ ಅಮ್ಮ. ಹೆಸರು ಶ್ರೀಮತಿ ಬಸವ್ವ ಯಲ್ಲಪ್ಪ ಮಾಲಗತ್ತಿ. ತವರು ಬಿಜಾಪುರ. ಆರೇಳು ಮಕ್ಕಳ ತುಂಬು ಕುಟುಂಬದಿಂದ ಹದಿನಾಲ್ಕು ಹದಿನೈದನೇ ವಯಸ್ಸಿಗೇ ಮದುವೆಯಾಗಿ ಮುದ್ದೇಬಿಹಾಳದ ಮಾಲಗತ್ತಿ ಮನೆತನಕ್ಕೆ ಬಂದವಳು. ಹಾಗೆ ಅಜ್ಜಿ ಮದುವೆಯಾಗಿ ಬಂದದ್ದು ಕೂಡ ಒಂದು ಕೂಡು ಕುಟುಂಬಕ್ಕೆ.
ನನ್ನಜ್ಜ ಯಲ್ಲಪ್ಪ ಮಾಲಗತ್ತಿ ಆ ಕಾಲದಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದವರು. ಮುದ್ದೇಬಿಹಾಳದ  ಆಸುಪಾಸಿನ ಹಳ್ಳಿಗಳಲ್ಲಿ ಕೆಲಸ ಮಾಡಿದವರು. ಕೆಲಸದ ನಿಮಿತ್ತ ಹೊರ ಊರಿನಲ್ಲಿದ್ದಾಗಲೇ ಚೇಳು ಕಚ್ಚಿದ ಕಾರಣಕ್ಕೆ ತುಂಬ ಚಿಕ್ಕ ವಯಸ್ಸಿನಲ್ಲೇ ವಿಧಿವಶರಾದರು. ಹೀಗೆ ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಾಗ, ಬಹುಶಃ ಅಜ್ಜಿಗೆ 22-23 ವರ್ಷ ವಯಸ್ಸಿರಬೇಕು. ಕೊನೆಯ ಮಗನನ್ನು ಹೊಟ್ಟೆಯಲ್ಲಿಕೊಂಡೇ ಗಂಡನ ಸಾವನ್ನು ಎದುರಿಸಿದ ಗಟ್ಟಿಗಿತ್ತಿ  ನನ್ನಜ್ಜಿ.
ನಾಲ್ಕು ಮಕ್ಕಳನ್ನ ಹೊತ್ತು ದಿಕ್ಕುಗಾಣದೇ ನಿಂತ ಅಜ್ಜಿಗೆ ಆಸರೆಯಾದದ್ದು  ಅದೇ ಕೂಡು ಕುಟುಂಬ. ಅಮ್ಮನ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಅಜ್ಜಿಯ ನೆರಳಾಗಿ ನಿಂತು, ಅವಳ ಬದುಕನ್ನು  ಗಟ್ಟಿ ಮಾಡಿದರು.  ಅಲ್ಲಿ ನನ್ನಮ್ಮನ ಅಜ್ಜಿ ಮುಂದೆ ನಿಂತು ಇಡೀ ಕುಟುಂಬವನ್ನು ನಡೆಸಿದರೆಂದೂ, ಅವರ ಮಾತು ಬಲು ಕಟ್ಟುನಿಟ್ಟು ಎಂದೂ, ಎಲ್ಲ ಹದಿನೈದೂ ಮೊಮ್ಮಕ್ಕಳನ್ನೂ ಹಕ್ಕಿಯಂತೆ ಕಟ್ಟಿಕೊಂಡು ಆ ಅಜ್ಜಿ ತಿರುಗುತ್ತಿತ್ತೆಂದೂ ನನ್ನಮ್ಮ, ಅಜ್ಜಿ ಹೇಳುವುದನ್ನು ನಾವು ಕೇಳಿದ್ದೇವೆ.
 (ಹಾಗೆ ಹೇಳುವುದಾದರೆ ಎಷ್ಟೋ ವರ್ಷಗಳ ಕಾಲ ನಾವು ಚಿಕ್ಕಜ್ಜಿ ಅಂದರೆ ಪಾರ್ವತಿ ಆಯಿಯನ್ನೇ ಅಮ್ಮನ ಸ್ವಂತ ಅಮ್ಮ ಎಂದೇ ತಿಳಿದಿದ್ದೆವು. ನನ್ನಮ್ಮ ಮತ್ತು ಸೋದರ ಮಾವಂದಿರೆಲ್ಲ ಅಜ್ಜಿಯನ್ನು ‘ಅವ್ವ’ ಎನ್ನದೇ  ‘ದೊಡ್ಡವ್ವ’ ಎಂದು ಕರೆಯುವುದೂ ಅದಕ್ಕೆ ಕಾರಣವಾಗಿತ್ತು. ಇಂಥ ಕೂಡು ಕುಟುಂಬದ ಈ ಗಟ್ಟಿ ಬಂಧಗಳು ಇವತ್ತಿಗೆ ತುಂಬ ಅಪರೂಪವೇ.)
 ಅಜ್ಜಿ ಅಂದಾಗ ನನಗೆ ನೆನಪಾಗುವುದು ಯಾವತ್ತೂ ಗಟ್ಟಿ ಧೈರ್ಯ, ಖಡಕ್ಕು ಧ್ವನಿ, ದಿಟ್ಟ ಮಾತು, ಬೆನ್ನಲ್ಲೇ  ಅವಳ ಹಾಡಿನ ಗುನುಗು. ಯಾವ ಮುಲಾಜೂ ಇಲ್ಲದೇ ಅನ್ನಿಸಿದ್ದನ್ನು ತಟ್ಟನೇ ಹೇಳಿಬಿಡುವ ಸ್ವಭಾವ ಅವಳದ್ದು. ನಿರ್ಭಾವುಕತನವಲ್ಲ.  ಆದರೆ ಗಟ್ಟಿ ಮನಸು. ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿದಷ್ಟೇ ಸಹಜವಾಗಿ  ತಪ್ಪು ಕಂಡಾಗ ಒಂದೇ ಏಟಿನ ಮಾತು ಅವಳದ್ದು.
ಅಜ್ಜಿ ಎಂದರೆ ಹಾಡು ಎಂದೆ. ಅವಳ ಜೊತೆ ಜೀವನದುದ್ದಕ್ಕೂ ಬೆಸೆದು ಬಂದದ್ದದು. ಅವಳ ಗಟ್ಟಿ ಧ್ವನಿಯ ಹಾಡಿನಲ್ಲಿ ಅದೆಷ್ಟು ಅರ್ಥಗಳು ಹೊರಹೊಮ್ಮುತ್ತಿದ್ದವೋ. ನೂರಾರು ಹಾಡುಗಳು ಅವಳ ನಾಲಿಗೆಯ ತುದಿಯ ಮೇಲೆ. ಹಸೆ ಹೊಯ್ಯುವ ಹಾಡು, ಸುರಗಿ ಸುತ್ತುವ ಹಾಡು, ಎಣ್ಣೆ ಮೀಯಿಸುವ ಹಾಡು, ಹೆಣ್ಣು ಒಪ್ಪಿಸುವ ಹಾಡು, ಮನೆ ತುಂಬಿಸಿಕೊಳ್ಳುವ ಹಾಡು, ಸೋಬಾನ ಹಾಡು, ಜೋಗುಳ ಹಾಡು, ಮಂಗಳಾರತಿ ಪದಗಳು, ಬೀಸುವ ಪದ, ಕುಟ್ಟುವ ಪದ, ಹಂತಿ ಪದ ಹೀಗೆ ಹಾಡು ಅನವರತ. ಕೊನೆಗೆ ಅವಳ ಬದುಕಿನ ಪಾಡೂ ಅವಳ ಧ್ವನಿಯಲ್ಲಿ ಹಾಡಾಗಿತ್ತು.
‘ಆಯಿ ಹಾಡಾ ಹಾಡು ಬೆ’ ಅಂದಾಗಲೆಲ್ಲ ನಮಗೆ ಆ ಹಾಡನ್ನೇ ಮೊದಲು ಕೇಳಬೇಕಿತ್ತು, ಅವಳಿಗೂ ಅದೇ ಹಾಡು ಬೇಕಿತ್ತು ಎನ್ನುವುದು ಗೊತ್ತಿದ್ದೂ,
‘ಯಾವ್ದು ಹಾಡ್ಲೆವಾ?’ ಅನ್ನಬೇಕು ಅವಳು.
‘ಮಾಸ್ತರ ಅಂದರ… ಹಾಡ ಬೇ’ ಅನ್ನಬೇಕು  ನಾವು.
ಗಂಟಲು ಸರಿ ಮಾಡಿ, ಹಾಡು ಶುರುವಾಗುತ್ತಿತ್ತು..
ಮಾಸ್ತರ ಅಂದರ ಶಾಂತಿಯ ಗುಣದವರ
ಸತ್ಯ ನಡೆದ ಮೋಕ್ಷ ಪಡೆದ ಮಾಸ್ತರಿವರ||
ಹಾಡು ಶುರುವಾಯಿತೆಂದರೆ ಆಚೆ ಓಣಿಯ ಜನರೂ ಬಂದು ಸೇರಬೇಕು ಅಂಥ ಧ್ವನಿ. ಎಷ್ಟೋ ಬಾರಿ ದಾರಿಯಲ್ಲಿ ಹೋಗುವವರು ನಮ್ಮನೆ ಮುಂದೆ ನಿಂತು, ಕಟ್ಟೆ  ಮೇಲೆ ಕೂತು ಅವಳ ಹಾಡು ಕೇಳಿ ಹೋಗುತ್ತಿದ್ದುದೂ ಉಂಟು.
‘ಬೀಸುಕಲ್ಲನ್ಯಾಗ ಜ್ವಾಳಾ ಬೀಸಗೊಂತ ನಿಮ್ಮ ಅಜ್ಜನ ಮ್ಯಾಗ ಹಾಡಾ ಹಾಡಾಕತ್ತರ ನಿಮ್ಮ ಅಜ್ಜಾ, ಯೇ ಖೋಡಿ, ಹಂಗೆಲ್ಲ ನನ್ನ ಮ್ಯಾಗ ಹಾಡಾ  ಕಟ್ಟಿ ಹಾಡಿದ್ರ ಮಂದಿ ಏನಂದಾರು ಅಂತ ನಗತಿದ್ದ’ ಅಂತ ಹೇಳುತ್ತಾ ಅಜ್ಜಿಯ  ಮುಖ ಅರಳುತ್ತಿತ್ತು. ‘ಆದರ ನಿಮ್ಮಜ್ಜಗ ನಾ ಹಾಡದ್ರ ಭಾಳಂದ್ರ ಭಾಳ ಖುಷಿ ಆತಿತ್ತು’ ಅಂತಾ ಹೇಳೋದು ಮಾತ್ರ ಅಜ್ಜಿ ಮರೆಯುತ್ತಿರಲಿಲ್ಲ. ಹಾಗೇ ಹಾಡು ಮುಂದುವರೆಯುತ್ತಿದ್ದರೆ ಅದು ಅಜ್ಜನ ಸುತ್ತಲೇ. ಆದರೆ ಮುಂದಿನ ಸಾಲುಗಳಲ್ಲಿ ಇಳಿಯುವ ವೇಳೆಗೆ ಅಜ್ಜಿ ಭಾವುಕಳಾಗುತ್ತಿದ್ದಳು. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಸಂಕಟಗಳೆಲ್ಲ ಅಲ್ಲಿ ಜಿನುಗುತ್ತಿದ್ದವು.
ಕ್ವಾಟಿಯ ರುಂಬಾಲ ಗೂಟಕ ಸಿಗಸವರ
ಮಾತಿಗೋಗವರ ಮನೀ ಅರಸ| ನಿಮ ಮಾತ
ಮರಕಳಿಸಿ ನೆನಪ ಬರತಾವ||
ಆಗಲೇ ಹೇಳಿದಂತೆ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅಜ್ಜ ಇದ್ದುದರಲ್ಲಿ ಶಿಸ್ತಿನ ಸಿಪಾಯಿಯಂತೆ. ಸ್ವಾತಂತ್ರ್ಯ ಹೋರಾಟದಲ್ಲೂ ಓಡಾಡಿದ್ದರಂತೆ. ಮನೆಯಿಂದ ಹೊರಗೆ  ಹೋಗುವಾಗ ರುಂಬಾಲು ಸುತ್ತಿಕೊಂಡೇ ಹೋಗುವ ರೂಢಿ ಅವರದ್ದು. ಮನೆಗೆ ಬಂದು ಸುತ್ತಿದ್ದ ರುಂಬಾಲು ಗೂಟಕ್ಕೆ ಸಿಗಿಸಿ, ಮಾತಿಗಿಳಿಯುವ ಅಜ್ಜನ ಮಾತುಗಳನ್ನು ಇವತ್ತೂ ಹಾಡಿನಲ್ಲೇ ಅನುಭವಿಸುತ್ತಿರುವಂತೆ ಕಾಣುತ್ತಿದ್ದಳು ಅಜ್ಜಿ.
ಹಸರ ಕುಪ್ಪಸದ ಮ್ಯಾಲ ಹಗಲೆಲ್ಲ ನಿಮ್ಮ ಕಣ್ಣ
ಹರಿಯಂದರ ಹ್ಯಾಂಗ ಹರಿಯಲಿ| ನಿಮ್ಮ ನೆನಪ
ಮರಿಯಂದರ ಹ್ಯಾಂಗ ಮರಿಯಲಿ||  ಮಾಸ್ತರಿವರ
ಆ ಕಾಲದಲ್ಲೂ ತನ್ನ ಮತ್ತು ಪತಿಯ ಮಧ್ಯದ ಪ್ರೀತಿಯನ್ನು ಧೈರ್ಯವಾಗಿ ಶಬ್ದಗಳಲ್ಲಿ ಹೊಸೆದುದನ್ನು ನೋಡುತ್ತಿದ್ದರೆ ನಮಗೆ ನಿಜಕ್ಕೂ ಅಚ್ಚರಿಯೇ. ಹಾಗೆ ಪ್ರೀತಿಸಿದ ಅಜ್ಜ ಅಕಾಲದಲ್ಲಿ ಹೊರಟರೆ ಅವಳ ಮುಂದಿನ ಆಯ್ಕೆ ಏನಾಗಿದ್ದೀತು!
ಬದುಕಿನ ಒಂದು ಹಂತದಲ್ಲಿ ಈಗನ್ನಿಸುತ್ತದೆ ಅಜ್ಜ ತನ್ನೊಂದಿಗೆ ಕಳೆದ ಆ ಸೀಮಿತ ಕಾಲದ ಕ್ಷಣಗಳನ್ನು ತನ್ನೊಂದಿಗೆ ಹಾಗೇ ಹಿಡಿದಿಟ್ಟುಕೊಳ್ಳುವ ಅವಳ ಹಂಬಲ ಆ ಸಾಲುಗಳಲ್ಲಿ ಇರುತ್ತಿತ್ತು ಅನ್ನುವುದು.
  ಕಾಯಾಗಿ ಕಚ್ಚಲಿಲ್ಲ ಹೂವಾಗಿ ಮುಡಿಲಿಲ್ಲ
  ಇನ್ನೊಂದು ಗಳಿಗಿ ಇರಲಿಲ್ಲ | ಪತಿದೇವ
  ಮಾಯಾಗಿ ಹೋದಿ ಮರೀಲ್ಹ್ಯಾಂಗ ||ಮಾಸ್ತರಿವರ
ತುಂಬ ಚಿಕ್ಕ ವಯಸ್ಸಿನಲ್ಲಿ ಏನನ್ನೂ ಅನುಭವಿಸದೇ,  ಎಲ್ಲವನ್ನು ಬಿಟ್ಟು ನಡೆದ ಅಜ್ಜ ತನ್ನೊಂದಿಗೆ ಇನ್ನೂ ತುಂಬ ದಿನ ಇರಬೇಕಿತ್ತು  ಎನ್ನುವ ಸಂಕಟ, ಆ ನೆನಪುಗಳಿಂದ ಎದ್ದು ನಡೆಯಲು ಅವಳಿಂದ ಸಾಧ್ಯವೇ ಆಗದೇ ಅವಳ ಹಾಡಾಗುತ್ತಿತ್ತು. ಪದದಲ್ಲಿಯೇ ಪ್ರಶ್ನಿಸುತ್ತ ಅದೊಂದು ಸಮಾಧಾನದ ಆಕ್ರೋಶದಂತೆ ಭಾಸವಾಗುತ್ತಿತ್ತು.
ಇದ್ದುದರಲ್ಲಿಯೇ ಅಷ್ಟಿಷ್ಟು ಬಡತನದ ಮೇಲ್ಪದರಿನಲ್ಲಿದ್ದ  ಅಜ್ಜನ ಮನೆ ಆ ಕಾಲಕ್ಕೆ ಆ ಓಣಿಗೆ ದೊಡ್ಡ ಮನೆ. ಅಜ್ಜನ ಕಾಲಕ್ಕೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಅದನ್ನು ಕಟ್ಟಲಾಗಿತ್ತೋ ಗೊತ್ತಿಲ್ಲ. ನಾವು ನೋಡುವ ಹೊತ್ತಿಗೆ ಅಜ್ಜನ ಮನೆ ತುಂಬ ದೊಡ್ಡ ಮನೆ. ಕಟ್ಟಿರುವ ಕೋಣೆಗಳಿಗಿಂತ ಖಾಲಿ ಇರುವ ಜಾಗ ಹೆಚ್ಚು. ಅಲ್ಲಿ ಬಸರೀ ಗಿಡ, ಅದರ ಸುತ್ತ ಕಟ್ಟೆ, ಅದರ ತಂಪು  ತಂಪು ನೆರಳು,  ಅದರಲ್ಲಿ ಬಂದು ಗೂಡು ಕಟ್ಟುವ ಪಕ್ಷಿಗಳು, ಗೋಡೆ ಜಿಗಿದು ಬರುವ ಕೋತಿಗಳು, ಕೂಡಲು ಆಟವಾಡಲು ಅಷ್ಟುದ್ದದ ಕಟ್ಟೆ, ನೀರಿನ ದೊಡ್ಡ ಟ್ಯಾಂಕು.. ನಾವು ಮೊಮ್ಮಕ್ಕಳಿಗೆಲ್ಲ ಅದು ತುಂಬ ಇಷ್ಟದ ಸ್ಥಳ. ಅಂಥ ದೊಡ್ಡ ಮನೆ ಕಟ್ಟಲು ಬಹುಶಃ ಅಜ್ಜನ ಕಾಲಕ್ಕೇ ಅಡಿಪಾಯ ಹಾಕಿ ಕಟ್ಟಡ ಶುರು ಮಾಡಿದ್ದಿರಬಹುದು. ಅದಕೆಂದೇ ಅಜ್ಜಿ ಹಾಡುತ್ತಿದ್ದಳು..
ಮಹಲವ ಕಟ್ಟಸ್ಯಾರ ಮ್ಯಾಲಕ ನೋಡ್ಯಾರ
ಮಹಲ ಮುಗೀತನ ಇರಲಿಲ್ಲ | ನನ ರಾಯ
ಬಿಟ್ಟ ಹ್ವಾದಿ ಬಿಸಲಾಗ || ಮಾಸ್ತರಿವರ
  ಈ ಸಾಲುಗಳು ಬರುವ ಹೊತ್ತಿಗೆ ಕನ್ನಡಕ ತೆಗೆದು ಕಣ್ಣೊರೆಸುತ್ತಿದ್ದಳು.  ಬದುಕಿನ ತಂಪು ಅನುಭವಕ್ಕೆ ಬರುವ ಮೊದಲೇ ಅರ್ಧ ದಾರಿಯಲ್ಲೇ ಎದ್ದು ನಡೆದ ತನ್ನವನು ಬಿಟ್ಟು ಹೋದ ಅರ್ಧದ ಕೆಲಸಗಳನ್ನೆಲ್ಲ ಪೂರೈಸಲೇಬೇಕಾದ ಅನಿವಾರ್ಯತೆ ಅವಳ ಮುಂದೆ. ಅಜ್ಜನ ಬಗ್ಗೆ ಅವಳಲ್ಲಿ ದುಃಖ, ಉತ್ತರವಿಲ್ಲದ ಸಿಟ್ಟು, ಅಸಹಾಯಕ ಪ್ರಶ್ನೆ.
ಆದರೂ ಮಕ್ಕಳ ಏಳಿಗೆಯಲ್ಲಿ ಆ  ಅನುಪಸ್ಥಿತಿಯನ್ನು ಮೀರಿ ನಿಲ್ಲಲು ಪ್ರಯತ್ನಿಸಿದವಳು. ಮುಂದೆ ಹೇಳುತ್ತಿದ್ದಳು.

(ಸಾಂದರ್ಭಿಕ ಚಿತ್ರ)

 ‘ನಿಮ್ಮ ಸಣ್ಣ  ಮುತ್ಯಾ, ನಿಮ್ಮ ಪಾರ್ವತೀ ಆಯಿ ನನ್ನ ಮಕ್ಕಳಿಗಿ ಎಲ್ಲ ಆಗಿ ನಿಂತ್ರವಾ. ನಾ ಬರೇ ಹೊಲದ ಕೆಲಸಾ ಮಾಡಕ್ಕಿ. ದನಾ ದುಡದಂಗ ದುಡೀತಿದ್ವಿ. ಹದಿನೈದೂ ಮಕ್ಕಳಿಗೀ ಹೊಟ್ಟೀಗಿ ಮಾಡಿ ಹಾಕದಾಕಿ ನಿಮ್ಮ ಪಾರ್ವತ್ಯಾಯಿ. ಮುಂಜಾನಿ ಒಂದ ಹೊತ್ತಿಗೆ ಸಂಜೀ  ಹೊತ್ತಿಗೆ 50-60 ರೊಟ್ಟೀ ಬಡೀತಿದ್ಲು. ಮುಂಜಾನಿ ರೊಟ್ಟಿ ಸಂಜಿಕ ಖಾಲಿ. ಒಂದಿನಾ ಬ್ಯಾಸರ ಮಾಡ್ಕೋತಿದ್ದಿಲ್ಲ ತಾಯಿ. ಇನ್ನೊಂದ ಕಡಿ ನಿಮ್ಮ ದೊಡ್ಡ ಆಯಿ  ಹದಿನೈದೂ ಮಕ್ಕಳನ್ನೂ ಕೋಳಿ ಮರಿ ಹಂಗ ಕಟಗೊಂಡು ಕಾಯ್ದಳು. ಅವರಿಂದ ನಂದು, ನನ್ನ ಮಕ್ಕಳದು ಬದುಕು ಗಟ್ಟ್ಯಾತು. ತಂಪೊತ್ತನ್ಯಾಗ ನೆನೀಬೇಕು ಅವರನ್ನ. ಹಂಗಂತ ಹೇಳೇ ಇವತ್ತ ನಿಮ್ಮ ಮಾವದೇರೆಲ್ಲ ಇಟ ದೊಡ್ಡ ದೊಡ್ಡ ಜಾಗಾದಾಗ ಕುಂತಾರ. ಮಾಡದವರಿಗೆ ನೆನಸಬೇಕವಾ, ಇಲ್ಲಂದ್ರ ಶಿವಾ ಮೆಚ್ಚ್ಯಾನೇನು..’
ಹಾಗೊಂದು ಕೃತಜ್ಞತಾ ಭಾವ ತೋರುತ್ತಲೇ, ಮಕ್ಕಳು ಇವತ್ತು ದೊಡ್ಡ ದೊಡ್ಡ ಅಧಿಕಾರಿಗಳಾಗಿ ಬೆಳೆದು ನಿಂತಿರುವದನ್ನು ನೋಡಿ ಹೆಮ್ಮೆ ಪಡುತ್ತಲೇ, ಹಾಡುತ್ತಲಿದ್ದಳು.
ಬೇಲಿಲ್ಲದ ಹೊಲದಾಗ ಬೆಳದಾವ ಮಕ್ಕಳು
ಹುಲಿಹುಲಿಯಾಗಿ ನಿಂತಾವ| ಪತಿದೇವ
ಮಾಲಕರಾಗಿ ಮಹಲೀಗಿ || ಮಾಸ್ತರಿವರ
ಎಲ್ಲವನ್ನು ಎಲ್ಲರನ್ನೂ ಒಳಗೊಳ್ಳುವನೆಂದು ಶಿವಪರಮಾತ್ಮನನ್ನು ನಂಬುತ್ತಿದ್ದ ಅಜ್ಜಿ  ತನ್ನ ಬದುಕನ್ನು ಅರ್ಧಕ್ಕೆ ಕಿತ್ತುಕೊಂಡ ಬಗ್ಗೆ ಸಿಟ್ಟಾಗುತ್ತಿದ್ದಳು. ತನ್ನ ಹಾಡಿನಿಂದಲೇ ಶಿವನನ್ನೂ ದೂರುತ್ತಿದ್ದಳು..
ಶಿವ ಶಿವ ಅಂದರ ಶಿವ ಯಾರೀಗೊಳ್ಯವಾ
ಶಿವ ನನ್ನ ಪಾಲಿಗಿ ದುಸಮಾನ| ಆಗ್ಯಾನು
ಪತಿದೇವನೊಯ್ದಾ ಹಗಲಾಗ|| ಮಾಸ್ತರಿವರ
ಹೀಗೆ ಅವಳ ಹಾದಿಯ ಬಹು ದೊಡ್ಡ ಹಾಡಿದು. ಈ ಹಾಡಿನಲ್ಲಿ ಅಜ್ಜಿ  ತನ್ನ ಬದುಕನ್ನೇ ಪೋಣಿಸಿಬಿಟ್ಟಿದ್ದಾಳೆನ್ನಿಸುತ್ತಿತ್ತು.
ಇನ್ನು ಅಜ್ಜಿ ಇರುವ ಎಲ್ಲ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ‘ಐಯ್ಯ ಬಸವತ್ತೀ, ಬಸವ್ವೆವ್ವ ಒಂದ್ ಹಾಡಲಾ, ಏಸು ದಿನಾ ಆಯ್ತು ನಿನ್ನ ಹಾಡಾ ಕೇಳಿ’ ಎನ್ನುವ ಬೇಡಿಕೆಗಳು ಸಾಮಾನ್ಯವಾಗಿರುತ್ತಿದ್ದವು.
ಆಯಾ ಸನ್ನಿವೇಶಕ್ಕೆ ಹೊಂದಿಕೊಂಡು ಮರುಕ್ಷಣವೇ ಹಾಡು ಪುಟಿಯುತ್ತಿತ್ತು. (ಅವು ಅವಳು ತನ್ನ ಹಿರಿಯರಿಂದ ಕಲಿತಿರಬಹುದು, ಕೆಲವೊಂದು ಸ್ವಂತ ಕಟ್ಟಿ ಹಾಡಿರಬಹುದು)
ಮಗುವಿನ ನಾಮಕರಣದ  ಸಂದರ್ಭದಲ್ಲಿ,
‘ಮಲ್ಲಿಗೀ ಹೂಗಳ ಚೆಲ್ಲುತ ಬರುವಾಗ
ಕಲ್ಯಾಣ ದೇಶದ ಕಡಿಯವರ |ಬರುವಾಗ
ಹಂಪಿ ವಿರೂಪಾಕ್ಷನ ತೂಗಿರೇ ನೀವು ತೂಗಿರೇ’
ಹೆಣ್ಣು ನೋಡಲು ಬಂದಾಗ,
‘ಹೆಣ್ಣು ಗಂಡಿಗೊಂದು ವರವಿರಲಿ,
ನೀ ವಸ್ತ್ರ ಒಡವಿ ಮಾತಾಡ
ನಾಳೆ ನಾಡದ ಬಂದು ಮನಿ  ನೋಡ,
ನಿನ ಮನಸಿಗಿ ಬಂದರ ಹೆಣ್ಣು ಕೊಡ..
ದಸರಿ ಹಬ್ಬಕ ಬರವರ ನಾವು
ಬಳದು ಬಣ್ಣ ತರವರ
ಹಣ್ಣ ಕಾಯಿ ಉಡಿಯಾಗ ಹಾಕವರ
ನಾವು ಹೆಣ್ಣ ಮುಂದ ಮಾಡಿಕೊಂಡ  ಹೋಗವರ
ನಿಶ್ಚಿತಾರ್ಥದ ಸಮಯದಲ್ಲಿ,
‘ಅಕ್ಕಿಯ ಹಸೆಗೊಳ ಎತ್ತ ಹೊಯ್ಯಲಿ ತಾಯಿ
ಇಪ್ಪತ್ತಂಕಣದ ಪಡಸಾಲ್ಯ| ಚಂದಿರ ಸಾಲಿ
ಗ್ಯಾನಿಟ್ಟ ಹೊಯ್ಯ ಹಸಿಗೋಳ || ಸೋಬಾನ’
ಮದುವೆಯ ಶಾಸ್ತ್ರದಲ್ಲಿ ಎಣ್ಣೆ ಇಡುವಾಗ,
‘ದೇವರಿಗಿ  ನೇಯಣ್ಣಿ, ದಿಂಡರಿಗೀ ನೇಯಣ್ಣಿ
ಮನಿಯ ಮಲ್ಲಯ್ಯಗ ಮೊದಲೆಣ್ಣಿ
ಹರ  ಹರ  ನಮ ಶಿವಗ ನೇಯಣ್ಣಿ.’
ಮಾಂಗಲ್ಯಧಾರಣೆ ಮುಗಿದ ಮೇಲೆ,
‘ಹರಹರ ಕಂಠಿ ಸರ ಹಾಕುವೆ ಜೋಮಾಲಿ ಸರ
ಅಳಿಯರಿಗಿ ಕೊಟ್ಟಾರ ಐದಂಕಣ ಮಹಲ
ಕೊಟ್ಟರವರಳಿಯರಿಗೆ ವರವ ಪೋಚಗೊಳ’
ಮದುವೆಯ ಕೊನೆಯ ಶಾಸ್ತ್ರವಾಗಿ ಹೆಣ್ಣು ಒಪ್ಪಿಸಿಕೊಡುವಾಗ,
‘ಹತ್ತು ತಿಂಗಳು ನಿನ್ನ ಹೊತಗೊಂಡು ತಿರುಗೇನ
ಹಂಬಲಿಸಿ ನಿನ್ನ ಹಡದೇನ| ಚಿತ್ರದ ಗೊಂಬಿ
ಅತ್ತೇರಿಗೊಪ್ಪಿಸಿ ಕೊಡಲ್ಯಾನ್ಗ||
ಕರ್ಪೂರ ಗುಡ್ಡಕ ಬೆಂಕಿಯ ಕೊಟ್ಟಂಗ
ಅವರಪ್ಪನ ಹೊಟ್ಟೀ ತಳಮಳಿಸಿ|
ಸುಣ್ಣದ ಭಟ್ಟ್ಯಾಗ ತಣ್ಣೀರ ಹೊಯ್ದಂಗ
ಅವರಣ್ಣನ ಹೊಟ್ಟೀ ತಳಮಳಿಸಿ||’
ಹೆಣ್ಣು ಒಪ್ಪಿಸುವ ಈ ಹಾಡನ್ನು ಮದುವೆಯ ಮಂಟಪದಲ್ಲಿ ಕೊನೆಯ ಶಾಸ್ತ್ರವಾಗಿ ಅಜ್ಜಿ  ಹಾಡುತ್ತಿದ್ದರೆ ಎಂಥವರ ಕಣ್ಣಲ್ಲೂ ನೀರು.
ಮನೆ ತುಂಬಿಸುವ ಕಾರ್ಯಕ್ರಮದಲ್ಲಿ ಅಣ್ಣ ಮುಂದೆ ಭವಿಷ್ಯದಲ್ಲಿ ತನ್ನ ಮಗನಿಗೆ ಹೆಣ್ಣು ಕೊಡುವುದಾಗಿ ಮಾತು ಕೊಟ್ಟರೆ ಮಾತ್ರ  ಮನೆಯ ತಲಬಾಗಿಲ ಒಳಗೆ ಬಿಡುವುದಾಗಿ ಹಠ ಹಿಡಿದು ನಿಲ್ಲುವ ತಂಗಿಯ ಈ ಹಾಡು ಸೊಗಸಾದ ಸಂಭಾಷಣೆ ರೂಪದಲ್ಲಿದ್ದು ಗಮನ ಸೆಳೆಯುತ್ತಿತ್ತು.
‘ಎಂಟ ಎತ್ತನೂ ಕೊಡುವೆ
ಗಂಟ ಮಾನ್ಯವ ಕೊಡುವೆ
ಎಂಟೊರಸಿನ ಕಂದನ ಕೊಡಲಾರೆನ ತಂಗಿ
ಬಾಗಿಲ ಬಿಡು ಬೇಗ||
ಎಂಟ ಎತ್ತನೂ ಒಲ್ಲೇ
ಮೇಲೆ ಮಾಡೇವ ಒಲ್ಲೆ
ಭಾಗ್ಯದ ಲಕ್ಷ್ಮಿಯಂಥ ಮಗಳ ಕೊಡಬೇಕಣ್ಣ
ಬಾಗಿಲು ಬಿಡುವೇನ’
ಮನೆತುಂಬಿಸಿದ ನಂತರ,
‘ಹನ್ನೆರಡು ವರುಷವ ತುಪ್ಪುಂಡ ಕಣಕದ ಕಲ್ಲ
ಕನ್ನಿ ಮದುಮಗಳ ಇವ ಮೆಚ್ಚ ರಾಜವ | ಮದುಮಗನ
ಇಂದ್ಹಾಕಿದ ಬ್ರಹ್ಮ ಗಂಟ ಎಂದೆಂದಿಗೂ ಬಿಡದಂಗ ಸೋಬಾನ’
ಸೀಮಂತದ ಸಂದರ್ಭದಲ್ಲಿ,
‘ಕಾಲನಂದುಗಿ ಕೈಯಲಿ ಕಂಕಣ
ನಲಾಟೀ ಚಂದ್ರ ನಟ್ಟಿರುಳ
ಕಳೆಯ ಕಾಂತುಳ ಕಮಲದ ಮುಖಿಯ
ಒಳಗೆ ಮುತ್ತಿನ ವಾಲಿಗಳ
ಚೆಲುವಿಕಿ ನತ್ತೊಂದ್ ನಡುವಿಗಿ ಇಟ್ಟು
ಥಳಾ ಥಳಾ ತಾ ಹೊಳಿಯುವಳ,
ಚಂದ್ರಕಾಳೀ ಸೀರಿ ಚಂದುಳ ಮಗ್ಗಿ
ತಂದೀ ತಾಯಿ ಕಳುವ್ಯಾರ
ವಾರಿಕೊಪ್ಪ ಹೂವಾ ಬುಗುಡಿ
ಅತ್ತೀ ಮಾವ ಕಳುವ್ಯಾರ
ಹತ್ತ ಹೊನ್ನಿನ ಕೆತ್ತಿ ಮಾಡಿಸಿದ
ಮಂಗಳ ಸೂತರೊಂದು ಕುವ್ವಾಡ..’
ಮುಂದೆ ಕೂಸಿನ ಆರೈಕೆ, ಬೀಸುವ, ಕುಟ್ಟುವ ಸಂದರ್ಭಗಳಲ್ಲಂತೂ  ದಂಡಿ ದಂಡಿ ಹಾಡುಗಳು.
‘ಅಣ್ಣ ತಮ್ಮರು ನೀವು ಜೋಡೀಲೇ ನಿಂದರಬ್ಯಾಡ್ರಿ
ಮಂದೀಯ ನೆದರ ನಿಮ ಮ್ಯಾಲಿ| ನನ ಕೂಸ
ತಮ್ಮಗ ತೋಳ ಮರಿ ಮಾಡೋ||’
‘ಮಲ್ಲಯ್ಯನ ಗುಡಿ ಮುಂದ ಮಲ್ಲಿಗೀ ಗಿಡ ಹುಟ್ಟಿ
ಸೆರಗ ತಾಕಿದರ ಉದುರ್ಯಾವ | ನನ ಮಗಳ
ಸೆರಗೊಡ್ಡಿ ಬೇಡ ಫಲಗೊಳು ||’
‘ಹಾಡ್ಯಾಡಿ ಬೀಸೀನಿ ಹವಳ ಬಣ್ಣದ ಗೋಧಿ
ಬೀಜಕ ತಗದೀನಿ ಬಿಳಿಜ್ವಾಳಾ | ನನ ತಮ್ಮಾ
ಚಾಜಕ ಇಟ್ಟೀನಿ ನನ ಮಗಳ||’
‘ಅತ್ತರ ಆಡೀಕಿ ನಕ್ಕರ ಚಾಡೀಕಿ
ಝಾಡಿಸಿ ನಡದರ ಜನ ಹರಡಿ| ನನ್ನವ್ವ
ನೀವ್ಹ್ಯಾಂಗ ನಡದೀರಿ ನನಗ ಹೇಳ||’

ಹೀಗೆ ಇವು ಕೊನೆಮೊದಲಿಲ್ಲದ ಹಾಡುಗಳು.

ಇಂಥ ಹಾಡಾಗಿ ಬದುಕಿದ ನನ್ನಜ್ಜಿ ಅಜ್ಜನ ರುಂಬಾಲು ಹಿಡಿದು ಹೊರಟು ವರುಷವೇ ಆಯ್ತು. ಆದರೆ ಇವತ್ತು ನನ್ನಮ್ಮ ಹಾಡುವ ಅವಳದೇ ಹಾಡುಗಳಲ್ಲಿ, ಮೊಮ್ಮಕ್ಕಳ ಗುನುಗುವಿಕೆಯಲ್ಲಿ ಅವಳಿನ್ನೂ ಹಾಡಾಗಿಯೇ ಇದ್ದಾಳೆ. ಅವಳ ಹಾಡುಗಳಿಗೆ ಕೊನೆಯ ಗಂಟೆಂಬುದಿಲ್ಲ. ಅದು ಜನ-ಪದ ಅಷ್ಟೇ.

About The Author

ಅನನ್ಯ ತುಷಿರಾ (ಸವಿತಾ ಆರ್. ಇನಾಮದಾರ)

ಸವಿತಾ ಆರ್. ಇನಾಮದಾರ ಮೂಲತಃ  ಬಿಜಾಪುರ (ವಿಜಯಪುರ) ಜಿಲ್ಲೆಯ ತಾಳೀಕೋಟೆಯವರು. ಆರು ವರ್ಷಗಳ ಕಾಲ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ ಸಧ್ಯ ಪ್ರಸ್ತುತ  ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನನ್ಯ ನಿನಾದ (ಕವನ ಸಂಕಲನ), ಅರ್ಧ ನೆನಪು ಅರ್ಧ ಕನಸು (ಕಥಾ ಸಂಕಲನ), ಹನಿ ಮಳೆಯ ಮಣ್ಣ ಕಂಪು (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು. ಬರಹಕ್ಕೂ ಹೆಚ್ಚು ಪ್ರೀತಿ ಓದಿನ ಮೇಲೆ. ಸುಮ್ಮನೆ ಹೊರಟು ಬಿಡುವ ಪ್ರವಾಸ, ಪ್ರಕೃತಿಯ ಮಡಿಲು, ಫೋಟೋಗ್ರಫಿ, ಪೆನ್ಸಿಲ್ ಸ್ಕೆಚ್ ಇವರ ಆಸಕ್ತಿಗಳು.

1 Comment

  1. ಎಸ್. ಪಿ. ಗದಗ.

    ಅಜ್ಜಿಯ ಬದುಕಿನ ಬಗೆಗಿನ ತುಂಬ ಆಪ್ತವಾದ ಬರಹ. ಅಜ್ಜಿಯ ಜಾನಪದ ಹಾಡುಗಳು ಅರ್ಥಪೂರ್ಣ. ಈ ಮೂಲಕ ಅವರು ಬಾಳಿದ ಸುಂದರ ಬದುಕನ್ನು ಪರಿಚಯ ಮಾಡಿಸಿದ್ದು ಹೆಮ್ಮೆಯ ವಿಷಯ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ