Advertisement
ಫೋಟೋದಲ್ಲಿ ಬಂಧಿಯಾದ ಸೆಲ್ವಂ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಫೋಟೋದಲ್ಲಿ ಬಂಧಿಯಾದ ಸೆಲ್ವಂ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಶಿಲಾಸ್ಫೋಟವಾದಾಗ ಬಹುಶಃ ನೀರಿನ ಮಟ್ಟ ಒಮ್ಮೆಲೆ ಮೇಲಕ್ಕೆ ಬಂದು ಮತ್ತೆ ಕೆಳಕ್ಕೆ ಹೋದಾಗ ಮೂವರೂ ಕಳ್ಳರನ್ನು ನೀರಿನ ಅಲೆಗಳು ಸುರಂಗಗಳಲ್ಲಿ ಎಲ್ಲೋ ಆಳಕ್ಕೆ ಎಳೆದುಕೊಂಡು ಹೋಗಿರಬೇಕು. ಆಗ ಅವರ ದೇಹಗಳು ಎಲ್ಲೋ ಆಳದ ಸುರಂಗಗಳಲ್ಲಿ ಇಲ್ಲ ಸ್ಟೋಪ್‌ಗಳಲ್ಲಿ ಶಿಲೆಗಳ ಮಧ್ಯೆ ಸಿಕ್ಕಿಕೊಂಡಿರಬೇಕು ಎಂದು ಊಹಿಸಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

ಎಷ್ಟೊತ್ತು ಅವನು ಹಾಗೇ ಬಿದ್ದಿದ್ದನೊ ಕೊನೆಗೆ ಪ್ರಜ್ಞೆ ಬಂದು ಸುತ್ತಲೂ ಕಣ್ಣುಬಿಟ್ಟು ನೋಡಿದ? ಸುತ್ತಲೂ ಕತ್ತಲು. ನಿಧಾನವಾಗಿ ಮತ್ತೆ ಮತ್ತೆ ನೋಡಿದ. ಅಲ್ಲೊಂದು ಇಲ್ಲೊಂದು ದೀಪಗಳು ಉರಿಯುತ್ತಿರುವುದು ಕಾಣಿಸಿದವು. ತಾನು ಎಲ್ಲಿದ್ದೀನಿ ಎನ್ನುವುದು ಅವನಿಗೆ ಅರ್ಥವಾಗಲಿಲ್ಲ. ಸುಮಾರು ಹೊತ್ತಾದ ಮೇಲೆ ಕಮ್ಯೂನಿಟಿ ಹಾಲ್ ಪಡಸಾಲೆಯಲ್ಲಿ ಇರುವುದು ಗೊತ್ತಾಯಿತು. ದಡಕ್ಕನೇ ಮೆದುಳಿಗೆ ರಕ್ತ ಸಂಚಲನೆಗೊಂಡು ತನ್ನ ಮೂವರು ಗೆಳೆಯರು ಗಣಿ ಒಳಗೆ ಇರುವುದು ಜ್ಞಾಪಕಕ್ಕೆ ಬಂದುಬಿಟ್ಟಿತು. ಎದ್ದುಬಿದ್ದು ಓಡಿಹೋಗಿ ಎಲ್ಲೋ ನಿಂತಿದ್ದ ಆಟೋ ತೆಗೆದುಕೊಂಡು ಹಳೆ ಗಣಿ ಕಡೆಗೆ ಓಡಿಸಿಕೊಂಡು ಹೋದ. ತಾನು ಎಲ್ಲಿಗೆ ಹೋಗುತ್ತಿದ್ದೇನೆ? ಯಾವ ರಸ್ತೆಯಲ್ಲಿ ಹೋಗುತ್ತಿದ್ದೇನೆ ಒಂದೂ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಆಟೋ ನಿಲ್ಲಿಸಿ ಎರಡೂ ಕೆನ್ನೆಗಳನ್ನು ಎರಡೂ ಕೈಗಳಲ್ಲಿ ಹೊಡೆದುಕೊಂಡ. ನಂತರ ತಲೆಗೆ ಹೊಡೆದುಕೊಂಡು ಆಲೋಚಿಸಿದ. ತಾನು ಇರುವ ಸ್ಥಳ ನಿಧಾನವಾಗಿ ಅವನ ತಲೆಯೊಳಕ್ಕೆ ಬಂದು ಕಣ್ಣುಗಳಲ್ಲಿ ಕಾಣಿಸಿಕೊಂಡಿತು. ಈಗ ಹಳೆ ಗಣಿಯ ಕಡೆಗೆ ಆಟೋ ಜೋರಾಗಿ ಓಡಿಸಿದ. ಅವನ ಗೆಳೆಯರು ಗಣಿಯ ಒಳಗಿಂದ ಅವನ ಹೆಸರಿಡಿದು ಜೋರಾಗಿ ಕೂಗಿಕೊಳ್ಳುತ್ತಿರುವಂತೆ ಕೇಳಿಸುತ್ತಿತ್ತು.

ಕೊನೆಗೆ ಅವನ ಆಟೋ ಕತ್ತಲಲ್ಲಿ ಅವನು ಹೋಗಬೇಕಾದ ಸ್ಥಳಕ್ಕೆ ಹೋಗಿ ನಿಂತುಕೊಂಡಿತು. ಗಣಿ ಹತ್ತಿರಕ್ಕೆ ಹೋಗಿ ಮರಕ್ಕೆ ಹಗ್ಗ ಬಿಗಿದುಕಟ್ಟಿ ಗಣಿ ಒಳಕ್ಕೆ ಹಗ್ಗ ಬಿಟ್ಟು ಸದ್ದು ಮಾಡತೊಡಗಿದ. ಚಿನ್ನದ ಅದಿರಿನ ಗೋಣಿ ಚೀಲಗಳಾಗಲಿ, ನಿನ್ನೆ ರಾತ್ರಿ ಇಳಿದವರಾಗಲಿ ಮೇಲಕ್ಕೆ ಬರಲಿಲ್ಲ. ಮೇಲಿದ್ದವನಿಗೆ ಭಯವಾಗಿ ಗಣಿ ಒಳಕ್ಕೆ ಬ್ಯಾಟರಿ ಹಾಕಿ ನೋಡಿದ. ಜೋರಾಗಿ ಕೂಗಿದ. ಯಾವ ಸದ್ದೂ ಬರಲಿಲ್ಲ. ಸಣ್ಣ ಕಲ್ಲುಗಳನ್ನು ಒಳಕ್ಕೆ ಹಾಕಿದಾಗ ಅವು ಟಣ್.. ಟಣ್.. ಎಂದು ಸದ್ದು ಮಾಡುತ್ತಾಹೋಗಿ ನೀರಿನಲ್ಲಿ ಬಿದ್ದವು. ಬೆಳಕು ಮೂಡುವವರೆಗೂ ಗಣಿ ಮುಂದೆ ರೋದನೆ ಮಾಡತೊಡಗಿದ. ಅತ್ತೂ ಕರೆದು ನೋಡಿದ. ಕೊನೆಗೆ ತಡೆಯಲಾರದೆ ಅಳುತ್ತಾ ಅವನ ಮೂರೂ ಗೆಳೆಯರ ಹೆಸರುಗಳನ್ನು ಕೂಗುತ್ತ.. “ಲೋ ಈ ಒಂದು ಸಲ ಮೇಲಕ್ಕೆ ಹತ್ತಿ ಬಂದುಬಿಡ್ರೊ. ನನ್ನ ಜನ್ಮದಲ್ಲಿ ಮತ್ತೇ ನಾನು ಎಂದಿಗೂ ಈ ಕಡೆಗೆ ಬರುವುದಿಲ್ಲ.. ಈ ಕೆಲಸಾನೂ ಮಾಡುವುದಿಲ್ಲ.. ನಿಮ್ಮನ್ನು ಬರುವುದಕ್ಕೂ ಬಿಡುವುದಿಲ್ಲ.. ತಾಯಿ ಉದ್ದಂಡಮ್ಮಾ.. ಅಮ್ಮಾ.. ಒಂದು ಸಲ ನನ್ನ ಗೆಳೆಯರನ್ನ ಮೇಲಕ್ಕೆ ಬರುವಂತೆ ಮಾಡಿಬಿಡಮ್ಮ..” ಎಂದು ಗೋಳಾಡಿದ. ಆದರೆ ಚಿನ್ನದ ಅದಿರಿರುವ ಗೋಣಿ ಚೀಲಗಳಾಗಲಿ, ಗೆಳೆಯರಾಗಲಿ ಕೊನೆಗೂ ಮೇಲಕ್ಕೆ ಬರಲೇ ಇಲ್ಲ. ಇಡೀ ರಾತ್ರಿಯಲ್ಲ ಅತ್ತೂ ಅತ್ತೂ ಶಕ್ತಿ ಕಳೆದುಕೊಂಡ ಅವನು ಈಗ ಸುಮ್ಮನೇ ಗಣಿ ಹತ್ತಿರ ಕುಳಿತುಕೊಂಡು ಆಕಾಶದ ಕಡೆಗೆ ನೋಡಿದ. ಗಾಢಾಂಧಕಾರವಾದ ಕತ್ತಲನ್ನುಬಿಟ್ಟರೆ ಅವನಿಗೆ ಏನೂ ಕಾಣಿಸುತ್ತಿಲ್ಲ.

ಪೂರ್ವದಲ್ಲಿ ಮೂಡುತ್ತಿರುವ ಬೆಳಕು ಭೂಮಿಯ ಮೇಲಿನ ಕತ್ತಲನ್ನು ಇನ್ನೇನು ಓಡಿಸಲು ಬಂದೇಬಿಟ್ಟಿತು. ಕಳ್ಳ ಹಗ್ಗವನ್ನು ಅಲ್ಲೇ ಬಿಟ್ಟು ಆಟೋ ಓಡಿಸಿಕೊಂಡು ಕ್ಯಾಂಪ್ ಮನೆಗಳ ಕಡೆಗೆ ಹೋದ. ಹೋದವನು ಕಮ್ಯೂನಿಟಿ ಹಾಲ್‌ನ ಪಡಸಾಲೆಯಲ್ಲಿ ಕುಳಿತು ಅಳುತ್ತಾ ರೋದಿಸತೊಡಗಿದ. ಯಾರೂ ಏನೇ ಕೇಳಿದರೂ ಒಂದೇ ಉತ್ತರ. ಅಳು. ಕೊನೆಗೆ ವಿಷಯ ತಿಳಿದ ಹಿರಿಯರೊಬ್ಬರು ಬಂದು ಎಲ್ಲರನ್ನೂ ದೂರ ಕಳಿಸಿ ಪಕ್ಕದಲ್ಲಿ ಕುಳಿತುಕೊಂಡು ಸಾವಧಾನವಾಗಿ ಕೇಳಿದರು. ಕೊನೆಗೂ ಕಳ್ಳ ಒತ್ತಡ ತಡೆದುಕೊಳ್ಳಲಾರದೆ ನಡೆದ ವಿಷಯವನ್ನೆಲ್ಲ ಹೇಳಿಬಿಟ್ಟ.

ಕ್ಯಾಂಪ್‌ನ ಇಬ್ಬರು ಮುಖ್ಯಸ್ಥರು ಕಳ್ಳನನ್ನು ಕರೆದುಕೊಂಡು ಮಾರಿಕುಪ್ಪಮ್ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ವಿಷಯವನ್ನು ಸಂಪೂರ್ಣವಾಗಿ ಕೇಳಿ ಎಫ್.ಐ.ಆರ್. ದಾಖಲಿಸಿಕೊಂಡ ಮೇಲೆ ಎಲ್ಲರೂ ಸೇರಿ ಮೂವರು ಯುವಕರು ಇಳಿದಿದ್ದ ಹಳೆ ಗಣಿ ಹತ್ತಿರಕ್ಕೆ ಹೋದರು. ಮರಕ್ಕೆ ಕಟ್ಟಿದ್ದ ಹಗ್ಗ ಹಾಗೇ ಇತ್ತು. ಆಟೋ ಬಂದು ಹೋಗಿದ್ದ ಚಕ್ರಗಳ ಗುರುತು ಎಲ್ಲವೂ ಹಾಗೇ ಇದ್ದವು. ತಕ್ಷಣವೇ ಅಲ್ಲಿ ಪೊಲೀಸರನ್ನು ಕಾವಲು ಹಾಕಲಾಯಿತು. ಆಟೋದವನನ್ನು ಪೊಲೀಸರು ಬಂಧಿಸಿ ನ್ಯಾಯಮೂರ್ತಿಗಳ ಮುಂದೆ ಹಾಜರುಪಡಿಸಿದರು. ನ್ಯಾಯಮೂರ್ತಿಗಳು ಅವನನ್ನು ಒಂದು ವಾರದ ಕಾಲ ಪೊಲೀಸ್ ವಶಕ್ಕೆ ನೀಡಿ ತನಿಖೆ ನಡೆಸುವಂತೆ ಆಜ್ಞೆ ಮಾಡಿದರು. ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿ ನಾಪತ್ತೆಯಾದ ಮೂರೂ ಯುವಕರ ಮನೆಗಳವರು ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟರು.

ಆ ಮೂರು ಕುಟುಂಬಗಳಲ್ಲಿ ಸೆಲ್ವಿ ಮತ್ತು ಮಣಿ ಕುಟುಂಬವೂ ಇತ್ತು. ಮಣಿ ಮತ್ತು ಸೆಲ್ವಿ ಪೊಲೀಸ್ ಠಾಣೆಗೆ ಬಂದು ನಮ್ಮ ಮಗ ಕಾರ್ತಿಕ್ ನಿನ್ನೆಯಿಂದ ಕಾಣಿಸುತ್ತಿಲ್ಲ ಎಂದು ದೂರು ಕೊಟ್ಟರು. ಕಳ್ಳ, ಪೊಲೀಸರಿಗೆ ಎಲ್ಲಾ ವಿವರಗಳನ್ನು ನೀಡಿ ಅದು ಮರುದಿನ ಬೆಳಿಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ದೀರ್ಘವಾದ ವರದಿಗಳು ಪ್ರಕಟಣೆಯಾಗಿದ್ದವು. ಒಂದು ವಾರಕ್ಕಿಂತ ಹೆಚ್ಚು ಕಾಲ ಆ ಹಳೆ ಗಣಿ ಸುತ್ತಲೂ ಜನರು ಹಗಲೂ ರಾತ್ರಿ ಎನ್ನದೇ ಸುತ್ತುವರಿದು ಆತಂಕ ಮತ್ತು ಕುತೂಹಲದಿಂದ ಕಾಯುತ್ತಿದ್ದರು. ವಿಶೇಷವಾಗಿ ಗಣಿಗಳ ಒಳಗೆ ಇಳಿದಿದ್ದ ಆ ಮೂವರೂ ಯುವಕರ ಕುಟುಂಬಗಳು ಹಗಲೂ ರಾತ್ರಿ ಎನ್ನದೇ ರೋದಿಸುತ್ತಾ ಅಂಗಲಾಚುತ್ತಾ ಬಿಸಿಲು, ಚಳಿಯಲ್ಲಿ ಭೀತಿಗೆ ಒಳಗಾಗಿ ಕುಳಿತಿದ್ದವು. ಪೊಲೀಸರು ತಜ್ಞ ಈಜುಗಾರರನ್ನು ಎರಡು ದಿನಗಳು ಕಾಲ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಗಣಿ ಒಳಕ್ಕೆ ಹಗ್ಗಗಳ ಮೂಲಕ ಇಳಿಸಿ ಹುಡುಕಿಸಿ ನೋಡಿದರು. ಆದರೆ ಯಾವುದೇ ಲಾಭವಾಗಲಿಲ್ಲ. ನೀರಿನಲ್ಲಿ ಕೆಟ್ಟವಾಸನೆ ಬರುತ್ತಿರುವುದಾಗಿ ಈಜುಗಾರರು ತಿಳಿಸಿದರು.

ಶಿಲಾಸ್ಫೋಟವಾದಾಗ ಬಹುಶಃ ನೀರಿನ ಮಟ್ಟ ಒಮ್ಮೆಲೆ ಮೇಲಕ್ಕೆ ಬಂದು ಮತ್ತೆ ಕೆಳಕ್ಕೆ ಹೋದಾಗ ಮೂವರೂ ಕಳ್ಳರನ್ನು ನೀರಿನ ಅಲೆಗಳು ಸುರಂಗಗಳಲ್ಲಿ ಎಲ್ಲೋ ಆಳಕ್ಕೆ ಎಳೆದುಕೊಂಡು ಹೋಗಿರಬೇಕು. ಆಗ ಅವರ ದೇಹಗಳು ಎಲ್ಲೋ ಆಳದ ಸುರಂಗಗಳಲ್ಲಿ ಇಲ್ಲ ಸ್ಟೋಪ್‌ಗಳಲ್ಲಿ ಶಿಲೆಗಳ ಮಧ್ಯೆ ಸಿಕ್ಕಿಕೊಂಡಿರಬೇಕು ಎಂದು ಊಹಿಸಲಾಯಿತು.

ಮಗನನ್ನು ಕಳೆದುಕೊಂಡ ಮಣಿ ಮತ್ತು ಸೆಲ್ವಿಗೆ ಏನು ಮಾಡಬೇಕೊ ಒಂದೂ ಅರ್ಥವಾಗಲಿಲ್ಲ. ದಿನಾ ಬೆಳಿಗ್ಗೆ ಗಣಿಯ ಹತ್ತಿರಕ್ಕೆ ಹೋಗಿ ಕುಳಿತುಕೊಂಡು ಅಳುವುದು, ಸಾಯಂಕಾಲ ಮನೆಗೆ ಹಿಂದಿರುಗಿ ಬರುವುದು ಇದೇ ಕೆಲಸ ನಡೆಯುತ್ತಿತ್ತು. ದೇವರು ನಮಗ್ಯಾಕೆ ಇಂತಹ ಕಷ್ಟಗಳನ್ನೇ ಕೊಡುತ್ತಾನೆ ಎಂದು ಇಬ್ಬರೂ ಕುಳಿತುಕೊಂಡು ರಾತ್ರಿಯೆಲ್ಲ ಅಳುತ್ತಿದ್ದರು. ಜೊತೆಗೆ ವಯಸ್ಸಾದ ಕನಕ ದೇವರು ನನ್ನನ್ನು ಬೇಗನೆ ಕರೆದುಕೊಂಡುಬಿಟ್ಟರೆ ಸಾಕಪ್ಪ ಎಂದು ರೋದನೆ ಮಾಡುತ್ತಿದ್ದಳು. ಮೊದಲು ಸೆಲ್ವಮ್ ಶಿಲಾಸ್ಫೋಟದಿಂದ ಗಣಿಯ ಒಳಗೆ ಸತ್ತಿದ್ದು, ಈಗ ಕಾರ್ತಿಕ್ ಈ ರೀತಿಯಾಗಿ ಪ್ರಾಣ ಕಳೆದುಕೊಂಡಿದ್ದನ್ನು ನೆನೆದುಕೊಂಡರೆ ನನ್ನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗುತ್ತದೆ ಎನ್ನುತ್ತಿದ್ದ ಕನಕ ಮನೆಯ ಮೂಲೆಯಲ್ಲಿ ಕುಳಿತುಕೊಂಡು ಅಳುತ್ತಿದ್ದಳು. ಮಣಿಗೆ, ಸೆಲ್ವಿ ಮತ್ತು ತಾಯಿ ಕನಕಳನ್ನು ಹೇಗೆ ಸಮಾಧಾನ ಪಡಿಸುವುದೋ ಅರ್ಥವಾಗಲಿಲ್ಲ. ಎಲ್ಲರೂ ದುಃಖದಿಂದ ಕುಗ್ಗಿಹೋಗಿದ್ದರು. ಸಧ್ಯಕ್ಕೆ ಕೋಮಲಳನ್ನಾದರೂ ಈ ನರಕಸದೃಶ ನಗರದಿಂದ ದೂರಕ್ಕೆ ಕೊಟ್ಟು ಮದುವೆ ಮಾಡಿಬಿಟ್ಟೆವಲ್ಲ ಎಂಬುದಾಗಿ ಮೂವರೂ ಮಾತನಾಡಿಕೊಂಡರು.

ಇಷ್ಟಕ್ಕೂ ಈ ಹುಡುಗ ಇಂತಹ ಕೆಲಸ ಮಾಡಿಬಿಟ್ಟನಲ್ಲ? ಇವನಿಗೆ ನಾವು ಏನು ಕಡಿಮೆ ಮಾಡಿದ್ದೆವು? ಗಣಿಗಳ ಒಳಗೆ ಇಳಿದು ಚಿನ್ನದ ಅದಿರನ್ನು ಕಳ್ಳತನ ಮಾಡುವಂತಹ ಕಷ್ಟವಾದರೂ ಏನಿತ್ತು ಇವನಿಗೆ? ಸೆಲ್ವಿ ಮತ್ತು ಮಣಿಗೆ ಒಂದೂ ಅರ್ಥವಾಗಲಿಲ್ಲ. ಈಗಲೂ ಅವರಿಬ್ಬರಿಗೆ ಕಾರ್ತಿಕ್ ಕಳ್ಳತನ ಮಾಡಲು ಗಣಿಯ ಒಳಗೆ ಇಳಿದಂತೆ ಅನಿಸಲಿಲ್ಲ. ಯಾರಾದರು ಕೊಲೆ ಮಾಡಿ ಗಣಿಯ ಒಳಕ್ಕೆ ಬಿಸಾಕಿದರೆ ಎನ್ನುವ ಅನುಮಾನವು ಬರದೇ ಇರಲಿಲ್ಲ. ಅಂತಹ ಶತ್ರುಗಳು ಕೂಡ ನಮಗೆ ಯಾರೂ ಇಲ್ಲವಲ್ಲ. ಕೊನೆಗೂ ಆಟೋದವನು ಹೇಳಿರುವುದು ನಿಜವೇ ಇರಬೇಕು. ಇದೆಲ್ಲ ಕೆಟ್ಟ ಹುಡುಗರ ಸಹವಾಸ ಎಂದುಕೊಂಡರು. ನಾವೂ ಕೂಡ ಅವನ ಮೇಲೆ ಸರಿಯಾಗಿ ಗಮನ ಇಡಲಿಲ್ಲ ಎಂದು ಮಾತನಾಡಿಕೊಂಡರು. ಒಟ್ಟಿನಲ್ಲಿ ಅವರ ಕುಟುಂಬ ಕನಸಿನಲ್ಲೂ ಕೂಡು ಏನು ಬಯಸಲಿಲ್ಲವೊ ಅದು ನಡೆದುಹೋಗಿತ್ತು.

ಹದಿನೈದು ದಿನಗಳಾದ ಮೇಲೆ ಪತ್ರಿಕೆಗಳಲ್ಲಿ ಒಂದು ಸುದ್ದಿ ಪ್ರಕಟವಾಯಿತು. ಆ ಸುದ್ದಿ ಗಣಿ ಆಡಳಿತ ಮತ್ತು ಕೆಜಿಎಫ್ ಪೊಲೀಸ್ ಅದೀಕ್ಷಕರು ಜಂಟಿಯಾಗಿ ನೀಡಿದ ಸುದ್ದಿಯಾಗಿತ್ತು: “ಹದಿನೈದು ದಿನಗಳ ಹಿಂದೆ ಚಿನ್ನದ ಅದಿರನ್ನು ಕಳ್ಳತನ ಮಾಡಲು ಒಂದು ಹಳೆ ಗಣಿ ಒಳಕ್ಕೆ ಇಳಿದ ಮೂವರು ಯುವಕರು ದೇಹಗಳನ್ನು ಹೊರ ತೆಗೆಯಲು ಪೊಲೀಸರು ಮತ್ತು ಈಜುಗಾರರಿಂದ ಸಾಧ್ಯವಾಗಲಿಲ್ಲ. ಆ ಮೂವರನ್ನು ಗಣಿ ಒಳಕ್ಕೆ ಇಳಿಸಿದ್ದ ಆರೋಪಿ ಇದನ್ನು ಪೊಲೀಸರಿಗೆ ಖುದ್ದಾಗಿ ತಿಳಿಸಿದ್ದಾನೆ. ಆತ ತಿಳಿಸಿರುವ ವಿಷಯಗಳನ್ನು ಪರಿಶೀಲನೆ ಮಾಡಿ ನೋಡಿದಾಗ ಪುರಾವೆಗಳ ಜೊತೆಗೆ ಎಲ್ಲವೂ ಸರಿ ಎಂದು ತಿಳಿಯುತ್ತದೆ. ಹದಿನೈದು ದಿನಗಳ ಹಿಂದೆ ಸಂಭವಿಸಿದ ದೊಡ್ಡ ಶಿಲಾಸ್ಫೋಟದಿಂದ ಮೂವರು ಯುವಕರು ನೀರಿನಲ್ಲಿ ಮುಳುಗಿಹೋಗಿರಬೇಕು! ಇಲ್ಲ ಸುರಂಗಗಳ ಬಿರುಕುಗಳಲ್ಲಿ ಎಲ್ಲೋ ಸಿಕ್ಕಿಕೊಂಡಿರಬೇಕು…!” ಇತ್ಯಾದಿ.

ಮಣಿ ಪತ್ರಿಕೆಯಲ್ಲಿನ ಸುದ್ದಿಯನ್ನು ಓದಿ ಕಣ್ಣೀರು ಹಾಕಿಕೊಂಡ. ಸೆಲ್ವಿ, ಮಣಿ ಪಕ್ಕದಲ್ಲಿ ಕುಳಿತುಕೊಂಡು ರೋದಿಸುತ್ತಿದ್ದರೆ, ಅಜ್ಜಿ ಕನಕ ಮನೆಯ ಸೂರಿನ ಕಡೆಗೆ ನೋಡಿ ಕೈಗಳನ್ನು ಮೇಲಕ್ಕೆತ್ತಿ ಹೊಟ್ಟೆ ಮೇಲೆ ಹೊಡೆದುಕೊಳ್ಳತೊಡಗಿದಳು. ಗೋಡೆಯ ಮೇಲಿರುವ ಸೆಲ್ವಮ್ ಮಾತ್ರ ಫೋಟೋದಲ್ಲಿ ತಣ್ಣಗೆ ಇರುವಂತೆ ಕಾಣಿಸುತ್ತಿದ್ದಾನೆ. ದಿನಗಳು ಕಳೆದಂತೆ ಗಣಿಗಳಲ್ಲಿ ಸರ್ವೇಸಾಮಾನ್ಯವಾಗಿ ನಡೆಯುವ ಘಟನೆಗಳಲ್ಲಿ ಇದೂ ಒಂದು ಘಟನೆಯಾಗಿ ನಿಧಾನವಾಗಿ ಆಳದ ಕತ್ತಲ ಗಣಿಗಳ ಇತಿಹಾಸದಲ್ಲಿ ಸೇರಿಹೋಯಿತು. ಪೊಲೀಸರು ಆ ಕೇಸನ್ನು ಅಲ್ಲಿಗೆ ಮುಗಿಸಿ ಅದನ್ನು ಹಳೆ ಫೈಲುಗಳಲ್ಲಿ ಜೋಡಿಸಿಟ್ಟರು.

(ಹಿಂದಿನ ಕಂತು: ಚಿನ್ನ ಬಂತೂ… ಪ್ರಾಣ ಹೋಯ್ತೂ..!)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ