Advertisement
ನನ್ನ ಪುಟ್ಟ ಶಾಲೆ: ರೂಪಾ ರವೀಂದ್ರ ಜೋಶಿ ಸರಣಿ

ನನ್ನ ಪುಟ್ಟ ಶಾಲೆ: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮ ಗುರ್ಜಿ ಎಲ್ಲರ ಕೈ ಮೇಲೆ ಕಿತ್ತಳೆ ತೊಳೆ ಆಕಾರದ ಪೆಪ್ಪರಮಿಠಾಯಿ ಇಡುತ್ತಿದ್ದಂತೇ, ಅದು ಬುಳಕ್ಕನೆ ಬಾಯಿಗಿಳಿದು ಬಿಡುತ್ತಿತ್ತು. ನಾವೆಲ್ಲ ಅದನ್ನು ಕಡಿಯದೇ ದವಡೆಯಲ್ಲಿ ಅದುಮಿಟ್ಟುಕೊಂಡು ಮೆಲ್ಲಗೆ ರಸ ಹೀರಿ, ಹೀರಿ ಚಪ್ಪರಿಸುತ್ತಿದ್ದೆವು. ಅದು ಖಾಲಿಯಾಗುವ ತನಕ ಮಾತು ಕತೆ ಎಲ್ಲ ಬಂದ್… ನಮ್ಮಿಡೀ ದಿನದ ಸಂಭ್ರಮ, ಸಂತೋಷ ಆ ಪುಟ್ಟ ಮಿಠಾಯಿಗೋಸ್ಕರವೇ ಇರುತ್ತಿತ್ತೊ ಗೊತ್ತಿಲ್ಲ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಎರಡನೆಯ ಕಂತು

ಆಗೆಲ್ಲ ನಮ್ಮ ಹಳ್ಳಿಗಳಲ್ಲಿ ‘ಏಕೋಪಾಧ್ಯಾಯ ಶಾಲೆ’ ಗಳೇ ಇದ್ದವು. ಬಹುಶಃ ಪಟ್ಟಣದವರಿಗೆ ಈ ಪದ ಅಪರಿಚಿತ. ಹಾಗೇ ಈಗಿನ ತಲೆಮಾರಿನವರಿಗೂ ಇದು ಹೊಸದೆನ್ನಿಸೀತು. ಒಂದರಿಂದ ನಾಲ್ಕನೇ ತರಗತಿಯವರೆಗೆ ಇರುತ್ತಿದ್ದ ಆ ಶಾಲೆಯಲ್ಲಿ, ಎಲ್ಲ ತರಗತಿಯನ್ನೂ ಒಬ್ಬರೇ ಅಧ್ಯಾಪಕರು ನಿರ್ವಹಿಸಬೇಕಿತ್ತು. ಅದಕ್ಕೇ ಅದಕ್ಕೆ ಆ ಹೆಸರು ಬಂದಿರಬಹುದು. ಕಾಡ ಮಧ್ಯದಲ್ಲಿ ಕೆಂಪು ಹಂಚಿನ ಹೊದಿಕೆಯ, ಒಂದೇ ಒಂದು ಕೊಠಡಿಯ ನಮ್ಮ ಶಾಲೆ ನಮಗೆ ಬಹಳ ಭವ್ಯ ಕಟ್ಟಡದಂತೇ ಭಾಸವಾಗುತ್ತಿತ್ತು. ಕಾರಣವಿಷ್ಟೇ. ಅಡಿಕೆ ಸೋಗೆಯ ಮಾಡು, ಮಣ್ಣಿನ ಗೋಡೆ, ನೆಲವುಳ್ಳ ಮನೆಗಳನ್ನಷ್ಟೇ ನೋಡಿ ಅಭ್ಯಾಸವಿದ್ದ ನಮಗೆ ಆ ಸಿಮೆಂಟಿನ ನುಣುಪಾದ ಕೆಂಪು ನೆಲದ ಮೇಲೆ ಕಾಲಿಡುವುದೇ ಸಂಭ್ರಮವೆನ್ನಿಸುತ್ತಿತ್ತು. ಅಂಗಳದಿಂದ ಎರಡು ಮೆಟ್ಟಿಲು ಮೇಲೇರಿದರೆ, ಪುಟ್ಟ ವರಾಂಡ. ಅದು ದಾಟಿ ಒಳನಡೆದರೆ, ನಮ್ಮ ಶಾಲೆಯ ಏಕೈಕ ಕೊಠಡಿ. ಗೋಡೆಗೆ ಕರಿ ಬಣ್ಣ ಬಳಿದ ಚಿಕ್ಕ ಬೋರ್ಡು. ಅದರ ಪಕ್ಕ ನಮ್ಮ ಶಿಕ್ಷಕರ ಅಗಲವಾದ ಮರದ ಖುರ್ಚಿ ಹಾಗೂ ಮೇಜು. ಅವರಿಗೆ ಎದುರಾಗಿ ಎಲ್ಲ ತರಗತಿಯವರೂ ಕುಳಿತುಕೊಳ್ಳುವುದು. ಒಂದರಿಂದ ಮೂರನೇ ತರಗತಿಯವರೆಗಿನ ಮಕ್ಕಳು ಉದ್ದನೆಯ ಹಲಗೆಯ ಮೇಲೆ ಕೂರುವುದು. ನಾಲ್ಕನೆ ತರಗತಿಯವರಿಗೆ ಮಾತ್ರ ಬೆಂಚ್ ವ್ಯವಸ್ಥೆ ಇತ್ತು. ಒಂದು ತರಗತಿಯಲ್ಲಿ ಸಾಮಾನ್ಯವಾಗಿ ನಾಲ್ಕರಿಂದ ಐದು ವಿದ್ಯಾರ್ಥಿಗಳಷ್ಟೇ ಇರುತ್ತಿದ್ದರು. ಆಗೆಲ್ಲ ಶಿಕ್ಷಕರನ್ನು “ಗುರೂಜಿ” ಎಂದು ಕರೆಯುವ ಕ್ರಮವಿತ್ತು. ಅದು ಆಡು ಮಾತಿನಲ್ಲಿ “ಗುರ್ಜಿ” ಆಗಿತ್ತು.

ನಮ್ಮ ಗುರ್ಜಿ ಬಹಳ ಸಿಟ್ಟಿನವರಾಗಿದ್ದರು. ಸದಾ ತಮ್ಮ ಮೇಜಿನ ಮೇಲೆ ಸಪೂರ ಬೆತ್ತ ಇಟ್ಟುಕೊಂಡಿರುತ್ತಿದ್ದರು. ಅವರೊಮ್ಮೆ ಆ ಬೆತ್ತವನ್ನು ಮೇಜಿಗೆ ಬಡಿದರೆ ಸಾಕು, ಎಲ್ಲರೂ ಗಪ್ ಚಿಪ್. ಆಗೆಲ್ಲ ನಾಲ್ಕನೇ ತರಗತಿಯ ತನಕವೂ ಬರೀ ಪಾಟಿಯಲ್ಲೇ ಬರೆಯುವುದು ವಾಡಿಕೆ. ಮಗ್ಗಿ, ಕೋಷ್ಟಕ, ಪ್ರಶ್ನೋತ್ತರಗಳನ್ನೆಲ್ಲಾ ಕಂಠ ಪಾಠ ಮಾಡುವ ಪದ್ಧತಿ ಇತ್ತು. ಒಂದೋ ಎರಡೋ ಪಠ್ಯ ಪುಸ್ತಕಗಳಷ್ಟೇ. ನಮಗೆಲ್ಲಾ ಪರೀಕ್ಷೆ ಎಂದರೆ, ಪಾಟಿಯಲ್ಲಿ ಒಂದಷ್ಟು ಬರೆಯುವುದು ಮತ್ತೂ ಪಠ್ಯದಲ್ಲಿ ಓದಿ, ಗಟ್ಟಿ ಮಾಡಿದ್ದನ್ನು ಹೇಳಿ, ಅವರಿಗೊಪ್ಪಿಸುವುದು. ಇದನ್ನು “ತೋಂಡಿ ಪರೀಕ್ಷೆ” ಎಂದೇ ಕರೆಯುತ್ತಿದ್ದರು.

ನಮ್ಮ ಗುರೂಜಿ ದೊಡ್ಡ ಮಕ್ಕಳಿಗೆ ಪಾಠ ಮಾಡುವಾಗ, ಸಣ್ಣ ತರಗತಿಯವರಿಗೆ, “ಶುದ್ಧ ಬರಹ ಬರೀರಿ” ಎಂದು ಹೊರಗಿನ ವರಾಂಡಾದಲ್ಲಿ ಕೂರಿಸುತ್ತಿದ್ದರು. ಹೊರಗೆ ಕುಳಿತ ನಾವು ಅದೇನು ಬರೆಯುತ್ತಿದ್ದೆವೋ ದೇವರೇ ಬಲ್ಲ. ಅಕ್ಕ ಪಕ್ಕದವರ ಜೊತೆ ಪಿಸುದನಿಯಲ್ಲಿ ಶುರುವಾಗುವ ಮಾತು, ಕಿಸಿ ಕಿಸಿ, ಮುಸು ಮುಸು ನಗೆಯಾಗಿ ಬದಲಾಗಿ ಬಿಡುತ್ತಿತ್ತು. ಸಾಲದ್ದಕ್ಕೆ ಒಂದಿಬ್ಬರು ಮೂವರು “ಗುರ್ಜಿ, ಅಂವಾ ನನ್ ಕಡ್ಡಿ ಮುರಿದು ಹಾಕಿದಾ. ಅದು ನನ್ನ ಪಾಟಿ ತಗೊಂಡು ಅಳಿಚಿತು. ಅವರು ಗುದ್ದು ಮರಿಗೆ ಹಾಕ್ತಾ ಇದ್ರು”. ಹೀಗೆ ತರಹೇವಾರಿ ತಕರಾರುಗಳು ಗುರುಗಳನ್ನು ತಲುಪುತ್ತಿತ್ತು. ಕೊನೆಗೆ, ಅವರು ತಲೆಕೆಟ್ಟು, ಬೆತ್ತ ಝಳುಪಿಸುತ್ತ, ಚುಳುಕ್, ಚುಳುಕ್ ಎಂದು ಎಲ್ಲರ ಕುಂಡೆಯ ಮೇಲೂ ಒಂದೊಂದು ಬಿಗಿಯುವಲ್ಲಿಗೆ ಪರಿಸಮಾಪ್ತಿಯಾಗುತ್ತಿತ್ತು.

ಈ ಪಾಟೀ ಮೇಲೆ ಬರೆದದ್ದನ್ನು ಅಳಿಸಲು ಒಬ್ಬೊಬ್ಬರು ಒಂದೊಂದು ತಂತ್ರ ಬಳಸುತ್ತಿದ್ದರು. ಒಂದಿಷ್ಟು ಮಕ್ಕಳು ತುಪುಕ್ಕನೆ ಉಗುಳಿ, ವರೆಸಿ ಬಿಡುತ್ತಿದ್ದರೆ ಇನ್ನೊಂದಿಷ್ಟು ಜನ ಮೈ ಮೇಲಿನ ಬಟ್ಟೆಯನ್ನೆ ವರೆಸು ಬಟ್ಟೆ ಮಾಡಿ ಕೊಳ್ಳುತ್ತಿದ್ದರು. ಉಗುಳಿನಿಂದ ವರೆಸುವವರನ್ನು ಕಂಡರೆ, ನಮ್ಮ ಗುರ್ಜಿ ಕಣ್ಣು ಕೆಂಪು ಮಾಡಿಕೊಂಡು ರಪಕ್ಕನೆ ಇಂಚು ಪಟ್ಟಿಯಲ್ಲಿ ಹೊಡೆದು, “ಥೂ ದರಿದ್ರಗೆಟ್ಟವನೆ/ಳೆ. ನೀರ್ ಹಾಕಿ ಅಳಿಸಲಿಕ್ಕೆ ಏನು ಧಾಡಿ ನಿಂಗೆ?” ಎಂದು ಬೈಯ್ಯುತ್ತಿದ್ದರು. ಆದರೆ, ಕೆಲವು ಹುಡುಗರು ಎಷ್ಟು ಖಡ್ಡ (ಮೊಂಡು) ಎಂದರೆ, ಮುಚ್ಚು ಮರೆಯಲ್ಲಿ ಉಗುಳಿ, ಸರಕ್ಕನೆ ಒರೆಸಿ ಕುಳಿತುಬಿಡುತ್ತಿದ್ದರು. ನಮ್ಮನೇಲಿ ಈ ಉಗುಳಲ್ಲಿ ಒರೆಸೋದು ಹೋಗಲಿ, ಕೈಲಿ ಉಗುಳು ಮುಟ್ಟುವುದೂ ಮಹಾಪರಾಧ. ಆಯಿಯ ಶಿಕ್ಷಣ ಹಾಗಿತ್ತು. ನಾನಂತೂ ನನ್ನ ಅಂಗಿಯನ್ನೇ ಒರೆಸುವ ಅರಿವೆ ಮಾಡಿಕೊಳ್ಳುತ್ತಿದ್ದೆ. ಯಾರಾದರೂ ನೋಡುತ್ತಿದ್ದಾರೆ ಅಂತಾದಾಗ ಮಾತ್ರ, ನೀರು ಹಾಕಿ ಒರೆಸಿ, ‘ಸುಬಗತನ’ ಪ್ರದರ್ಶಿಸುತ್ತಿದ್ದೆ.

ಮಳೆಗಾಲದಲ್ಲಿ ನಮ್ಮ ದಾರಿಗುಂಟ ಅಕ್ಕ ಪಕ್ಕದಲ್ಲಿ ಒಂದು ವಿಧದ ಪುಟ್ಟ ಸಸ್ಯ ಬೆಳೆಯುತ್ತಿತ್ತು. ಆ ಗಿಡದ ನಸುಗೆಂಪು ದಂಟಿನ ತುಂಬ ನೀರು ತುಂಬಿಕೊಂಡು, ಒಳ್ಳೆ ನೀರಿನ ಕೊಳವೆಯಂತೆ ಇದ್ದು, ಚೂಟಿದರೆ, ಚಿಳ್ ಅಂತ ನೀರು ಹಾರುತ್ತಿತ್ತು. ಅದನ್ನು ನಮ್ಮಲ್ಲಿ “ನೀರಂಡೆ” ಗಿಡ ಅಂತಲೇ ಕರೆಯೋರು. ನಾವು ಅಂಥ ದಪ್ಪ ದಂಟುಗಳನ್ನು ಸಂಗ್ರಹಿಸಿಟ್ಟುಕೊಂಡು, ಪಾಟಿ ಅಳಿಸಲು ಬಳಸುತ್ತಿದ್ದೆವು. ಆಗೆಲ್ಲ ಎಲ್ಲರ ಅಂಗಿಗಳಿಗೂ ಕಿಸೆ ಇರುತ್ತಿತ್ತು. ಅದರ ತುಂಬ ಇಂಥದೇ ವಸ್ತುಗಳು. ಕಡ್ಡೀ ಚೂರು, ನೀರಂಡೆ ದಂಟು, ಮನೆಯಲ್ಲಿ ಅಪರೂಪಕ್ಕೆ ಮಾಡುವ ತಿಂಡಿ, ತಿನಿಸು ಇಂಥವನ್ನೆಲ್ಲಾ ಸಂಗ್ರಹಿಸುವ ಖಜಾನೆಯಂತಿತ್ತು ನಮ್ಮ ಕಿಸೆಗಳು.

ನಮ್ಮ ಶಾಲೆಯಲ್ಲಿದ್ದ ಒಂದು ವಸ್ತುವಿನ ಬಗ್ಗೆ ನನಗೆ ತುಂಬ ಕುತೂಹಲವಿತ್ತು. ಅದೆಂದರೆ, ಒಂದು ದೊಡ್ಡ ಪೆಟ್ಟಿಗೆ (ಅದು ಮರದ್ದಾಗಿತ್ತೋ, ಕಬ್ಬಿಣದ್ದಾಗಿತ್ತೋ ನೆನಪಿಲ್ಲ) ನನಗೆ ಅದನ್ನು ನೋಡಿದಾಗಲೆಲ್ಲಾ “ಏನೇನು ಇರಬಹುದು ಅದರಲ್ಲಿ?” ಎಂಬ ಕುತೂಹಲ ಉಂಟಾಗುತ್ತಿತ್ತು. ಗುರೂಜಿ ಒಮ್ಮೊಮ್ಮೆ ಅದರ ಮುಚ್ಚಳ ಎತ್ತಿ, ಶಾಲೆಗೆ ಸಂಬಂಧ ಪಟ್ಟ ಕಾಗದ ಪತ್ರಗಳನ್ನು ಇಡುತ್ತಿದ್ದರು. ಅದರ ಜೊತೆಯಲ್ಲಿದ್ದ ಒಂದಿಷ್ಟು ಬಣ್ಣ ಬಣ್ಣದ ಚಿತ್ರದ ಪುಸ್ತಕಗಳೂ, ಒಂದೆಡೆ ಬಣ್ಣದ ಮಣಿ ಪೋಣಿಸಿದ ಪಾಟಿಯೂ, ತೀರಾ ಅಪರೂಪಕ್ಕೆ ಅದರಿಂದ ಹೊರಬರುತ್ತಿದ್ದವು. ಆ ಮಣಿಗಳ ಸಹಾಯದಿಂದ, ಕೂಡುವುದು, ಕಳೆಯುವುದು ಹೇಗೆ ಅಂತ ಕಲಿಸುತ್ತಿದ್ದರು. ಪುಸ್ತಕದೊಳಗಿನ ಚಿತ್ರ ತೋರಿಸಿ, ಹಾಡು, ಕಥೆ ಹೇಳಿಕೊಡಲಾಗುತ್ತಿತ್ತು. ಆದರೆ, ಅದನ್ನು ಯಾವ ಕಾರಣಕ್ಕೂ ಮಕ್ಕಳ ಕೈಗೆ ಕೊಡುತ್ತಲೇ ಇರಲಿಲ್ಲ. ನನಗೆ, ಒಮ್ಮೆಯಾದರೂ ಆ ಪುಸ್ತಕ ಅಗಲಿಸಿ, ಕಣ್ಣುತುಂಬಿಕೊಳ್ಳಬೇಕೆಂದು ಆಸೆಯಾಗುತ್ತಿತ್ತು. ಅದು ಆಸೆಯಾಗಿಯೇ ಉಳಿದು ಬಿಟ್ಟಿತು ಬಿಡಿ.

ಈಗಿನಂತೆ ಆಗೆಲ್ಲ ಆಟಕ್ಕೊಂದು ನಿರ್ಧಿಷ್ಟ ಅವಧಿ ಅಂತ ಇರಲಿಲ್ಲ. ಶಾಲೆಗೆ ಮಾಸ್ತರ್ರನ್ನು ಯಾರಾದರೂ ಮಾತಾಡಿಸಲು ಬಂದರೆ, ಅವರಿಗೆ ಬಹಳಷ್ಟು ಬರೆಯುವ ಕೆಲಸವಿದ್ದರೆ, ಆಗೆಲ್ಲ ನಮ್ಮನ್ನು ಆಟಕ್ಕೆ ಬಿಡುತ್ತಿದ್ದರು. ಮತ್ತೆ, ದಿನಾ ಮಧ್ಯಾಹ್ನದ ನಂತರ, ತಾಸು ಎರಡು ತಾಸು ಆಟಕ್ಕೆ ಬಿಡುವುದಂತೂ ಇದ್ದೇ ಇತ್ತು. ಆಗೆಲ್ಲ ಗಂಡು ಮಕ್ಕಳು ಇಡೀ ಅಂಗಳದ ತುಂಬ ಓಡುತ್ತ, ಜಿಗಿದಾಡುತ್ತ, ಕುಸ್ತಿ ಹಿಡಿಯುತ್ತ, ಮರಕೋತಿಯಾಟವನ್ನೆಲ್ಲ ಆಡುತ್ತಿದ್ದರು. ನಾವು ಹೆಣ್ಣು ಮಕ್ಕಳು, ಕುಂಟಾಟ, ಬೆಟ್ಟೆ ಆಟ, “ಅಜ್ಜು ಗುಜ್ಜು ಮಲ್ಲಿಗೆ” ಆಟ ಎಲ್ಲ ಆಡುತ್ತಿದ್ದೆವು. ಅಷ್ಟರಲ್ಲೇ ಮನೆಯ ಸುದ್ದಿಯನ್ನು ಕೂಡಾ ಹರಟುತ್ತ ಕುಳಿತು ಬಿಡುತ್ತಿದ್ದೆವು. ನಮ್ಮದು ಗಂಡು, ಹೆಣ್ಣುಮಕ್ಕಳು ಕೂಡಿ ಕಲಿಯುವ ಶಾಲೆಯಾದರೂ, ಪ್ರತ್ಯೇಕವಾಗಿಯೇ ಇದ್ದು ಬಿಡುವ ಅಭ್ಯಾಸ. ಗಂಡು, ಹೆಣ್ಣು ಮಕ್ಕಳ ನಡುವೆ ಪರಸ್ಪರ ಸ್ನೇಹ, ಸಲಿಗೆ, ಮಾತಾಡುವುದು, ಕೂಡಿ ಆಡುವುದು ಯಾವುದೂ ಇರಲೇ ಇಲ್ಲ. ಅದು ಒಂದು ಥರದ ಅಲಿಖಿತ ನಿಯಮದಂತೆ ಪಾಲನೆಯಾಗುತ್ತಿತ್ತು. ಮತ್ತೆ ಶಾಲೆ ಮುಗಿಸಿ ಮನೆಗೆ ಬರುವಾಗಲೂ ಅಷ್ಟೇ. ಪ್ರತ್ಯೇಕ ಗುಂಪುಗಳಲ್ಲೇ ಬರುತ್ತಿದ್ದೆವು. ಆಗೆಲ್ಲ ಮನೆ ಪಾಠ (Home work) ಅಂತೆಲ್ಲ ಇರುತ್ತಿರಲಿಲ್ಲ. ಶಾಲೆಯಲ್ಲಿ ಏನು ಓದಿ ಬರೆಯುತ್ತೇವೋ ಅಷ್ಟೇ. ಮನೆಗೆ ಬಂದು ಪಾಟೀ ಚೀಲ ಒಂದೆಡೆ ಒಗೆದರೆ, ಮರುದಿನ ಶಾಲೆಗೆ ಹೋಗುವಾಗಲೇ ಅದರ ನೆನಪು.

ವರ್ಷದಲ್ಲಿ ಎರಡು ಹಬ್ಬಗಳನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಅದೆಂದರೆ, ಸ್ವಾತಂತ್ರ ದಿನಾಚರಣೆ ಮತ್ತೂ ಗಣರಾಜ್ಯೋತ್ಸವ. ಆದರೆ, ನಾವಾಗ ಅದನ್ನು ಆಗಸ್ಟ್ ೧೫, ಜನವರಿ ೨೬ ಎಂದೇ ಕರೆಯುತ್ತಿದ್ದೆವು. ನಮಗೆ ಅದರ ಮಹತ್ವ ಮತ್ತೂ ಹಿನ್ನೆಲೆಯ ಬಗ್ಗೆ ಎಳ್ಳು ಕಾಳಷ್ಟೂ ಗೊತ್ತಿರಲಿಲ್ಲ. ಶಿಕ್ಷಕರು ಕೂಡಾ ಅದರ ಬಗ್ಗೆ ತಿಳಿ ಹೇಳುವ ಸಾಹಸಕ್ಕಿಳಿಯುತ್ತಿರಲಿಲ್ಲ. ಅಂಕಿ, ಅಕ್ಷರ, ಮಗ್ಗಿ, ಬಳ್ಳಿಗಳೇ ಬ್ರಹ್ಮ ವಿದ್ಯೆಯಷ್ಟು ಜಠಿಲವೆನ್ನಿಸಿಕೊಳ್ಳುವ ಇಂಥ ಮಕ್ಕಳ ಜೊತೆ ಸುಮ್ಮನೆ ತಲೆಹೊಡೆದು ಕೊಳ್ಳುವ ಉಸಾಬರಿಯೇಕೆ? ಅಂತ ಅವರೂ ಸುಮ್ಮನಾಗಿಬಿಟ್ಟಿರಬೇಕು. ನಮಗೂ ಅದೆಲ್ಲ ಬೇಕಾಗಿರಲೇ ಇಲ್ಲ. ಅಂಥ ಪ್ರಶ್ನೆಗಳೂ ಏಳುತ್ತಿರಲಿಲ್ಲ ಬಿಡಿ… ಆ ದಿವಸದ ಆಚರಣೆಯ ಸಂಭ್ರಮದಲ್ಲಿ ಭಾಗಿಯಾಗುವುದರಲ್ಲೇ ನಾವೆಲ್ಲ ಪರಮ ಸಂತೋಷ ಕಾಣುತ್ತಿದ್ದೆವು. ಅವತ್ತಿನ ನಮ್ಮ ಸಂಭ್ರಮ ಹೇಳತೀರದ್ದು. ಆಗಸ್ಟ್ ತಿಂಗಳ ಆ ಭರ್ತಿ ಮಳೆಗಾಲದಲ್ಲಿ ಬೆಳಗ್ಗೆ ಬೇಗನೆದ್ದು, ಮಿಂದು, ಆಯಿಯ ವತ್ತಾಯಕ್ಕೆ ತಿಂಡಿ ತಿಂದ ಶಾಸ್ತ್ರಮಾಡಿ, ವಗೆದ ಬಟ್ಟೆ ತೊಟ್ಟು ಹೊರಟೇ ಬಿಡುತ್ತಿದ್ದೆವು. ಶಾಲೆಯ ಧ್ವಜದ ಕಟ್ಟೆ ಶೃಂಗರಿಸಲು, ಮನೆಯ ಅಂಗಳದಲ್ಲಾದ ವಿವಿಧ ಹೂಗಳನ್ನು ಕೊಯ್ದು ಬಾಳೆ ಎಲೆಯ ಕೊಟ್ಟೆಯಲ್ಲಿ ತುಂಬಿಕೊಂಡು ಹೋಗಲು ಎಂದೂ ಮರೆಯುತ್ತಿರಲಿಲ್ಲ. ಅಷ್ಟು ಹೂ ಸಾಕೆನ್ನಿಸದೇ, ದಾರಿಯ ಅಕ್ಕ ಪಕ್ಕ ಅರಳುವ ಮಲ್ಲಿಗೆಯ ಆಕಾರದ “ತಗ್ಗೀ ಹೂ” ಕೂಡಾ ಕೊಯ್ದುಕೊಳ್ಳುತ್ತಿದ್ದೆವು. ಅವತ್ತು ಪಾಟೀ ಚೀಲ ಇಲ್ಲದೇ ಶಾಲೆಗೆ ಹೋಗುವುದೂ ಕೂಡಾ ನಮ್ಮ ಸಂಭ್ರಮಕ್ಕೆ ಇಂಬುಕೊಡುತ್ತಿತ್ತು. ಆಗೆಲ್ಲ ನಮಗೆ ಸಮವಸ್ತ್ರವೆಂದರೇನೆಂದೇ ಗೊತ್ತಿರಲಿಲ್ಲ. ಇದ್ದ ಒಂದೆರಡು ಬಟ್ಟೆಯಲ್ಲೇ ಇಡೀ ವರ್ಷ ಕಳೆಯಬೇಕಾದ ಆ ಕಾಲದಲ್ಲಿ, ಇಂಥ “ವಸ್ತ್ರ ಸಂಹಿತೆ” ತಂದಿದ್ದರೆ, ಯಾರೂ ಮಕ್ಕಳನ್ನು ಶಾಲೆಗೇ ಕಳಿಸುತ್ತಿರಲಿಲ್ಲವೇನೋ.

ನಮ್ಮ ಶಾಲೆಯ ಆಗಸ್ಟ್ ೧೫ ಮತ್ತೂ ಜನವರಿ ೨೬ ಎರಡೂ ಹೆಚ್ಚೂ ಕಡಿಮೆ ಒಂದೇ ಥರ ಅಚರಿಸಲ್ಪಡುತ್ತಿತ್ತು. ನಾವೆಲ್ಲ ಶಾಲೆ ತಲುಪುವಷ್ಟರಲ್ಲಿ, ಗುರ್ಜಿ ಕೆಲ ವಿದ್ಯಾರ್ಥಿಗಳ ಸಹಾಯದಿಂದ ಧ್ವಜಕಟ್ಟೆಯ ಸುತ್ತ ಹೂವಿನ ಅಲಂಕಾರಕ್ಕೆ ತೊಡಗಿರುತ್ತಿದ್ದರು. ನಮ್ಮೆಲ್ಲರ ಕೈಯ್ಯಿಂದ ಹೂ ಪಡೆದು, ಅದರ ಅಲಂಕಾರ ಪೂರ್ಣಗೊಳ್ಳುತ್ತಿತ್ತು. ಅಲ್ಲಿಂದ ಧ್ವಜಾರೋಹಣ. ಆ ಧ್ವಜ ಏರಿಸಿದ ತಕ್ಷಣ ಬೀಳುವ ಹೂಗಳನ್ನು ನೋಡುವುದೆ ಒಂಥರಾ ರೋಮಾಂಚನ!! ಅಷ್ಟೇ ಖುಶಿಯಿಂದ ಚಪ್ಪಾಳೆ ತಟ್ಟುತ್ತಿದ್ದೆವು. ಅಲ್ಲಿಂದ “ಬೋಲೋ ಭಾರತ ಮಾತಾಕಿ ಜೈ” ಅಂತ ಜೋರಾಗಿ ಕೂಗಿ, ರಾಷ್ಟ್ರ ಗೀತೆ ಹಾಡಿಬಿಟ್ಟರೆ, ನಮ್ಮ ಆಚರಣೆ ಮುಗಿದಂತೆಯೇ. ನಮ್ಮ ಗುರ್ಜಿ ಎಲ್ಲರ ಕೈ ಮೇಲೆ ಕಿತ್ತಳೆ ತೊಳೆ ಆಕಾರದ ಪೆಪ್ಪರಮಿಠಾಯಿ ಇಡುತ್ತಿದ್ದಂತೇ, ಅದು ಬುಳಕ್ಕನೆ ಬಾಯಿಗಿಳಿದು ಬಿಡುತ್ತಿತ್ತು. ನಾವೆಲ್ಲ ಅದನ್ನು ಕಡಿಯದೇ ದವಡೆಯಲ್ಲಿ ಅದುಮಿಟ್ಟುಕೊಂಡು ಮೆಲ್ಲಗೆ ರಸ ಹೀರಿ, ಹೀರಿ ಚಪ್ಪರಿಸುತ್ತಿದ್ದೆವು. ಅದು ಖಾಲಿಯಾಗುವ ತನಕ ಮಾತು ಕತೆ ಎಲ್ಲ ಬಂದ್… ನಮ್ಮಿಡೀ ದಿನದ ಸಂಭ್ರಮ, ಸಂತೋಷ ಆ ಪುಟ್ಟ ಮಿಠಾಯಿಗೋಸ್ಕರವೇ ಇರುತ್ತಿತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ಬಾಲ್ಯದ ನೆನಪಾದಾಗೆಲ್ಲ, ಆ ಪೆಪ್ಪರ ಮಿಂಟ್‌ನ ರುಚಿ ಬಾಯನ್ನು ಆವರಿಸಿ, ಇವತ್ತಿಗೂ ಮುದ ನೀಡುವುದು, ಸುಳ್ಳಲ್ಲ.

ಮುಂದುವರಿಯುವುದು…
(ಹಿಂದಿನ ಕಂತು: ಚೆಂದದ ಬಾಲ್ಯ ಕಳೆದ ಅಂದದ ಮಲೆನಾಡು)

About The Author

ರೂಪಾ ರವೀಂದ್ರ ಜೋಶಿ

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು  (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.

2 Comments

  1. ಜಯಶ್ರೀ ರಾ ಮಂಗಳೂರು

    ತುಂಬಾ ಚೆಂದದ ಕಥೆ, ಬಾಲ್ಯವನ್ನು ನೆನಪಿಸುತ ಆ ದಿನಗಳು ಸರಪಳಿಯಂತೆ ನೆನಪಿನಂಗಳದಲ್ಲಿ ಹಾಯ್ದು ಹೋದವು.

    Reply
  2. ಸಿದ್ದಣ್ಣ. ಗದಗ.

    ಬಾಲ್ಯದ ಅದರಲ್ಲೂ ಮಲೆನಾಡಿನ ಶಾಲಾ ದಿನಗಳ ಸವಿ ನೆನಪುಗಳನ್ನು ಓಡುವದು ನಮಗೆ ಒಂದು ದೊಡ್ಡ ಖುಷಿ.ಇಂತಹ ಓದಿನ ಖುಷಿ ಹಂಚುತ್ತಿರುವ ತಮಗೆ ನಮ್ಮ ಧನ್ಯವಾದಗಳು 🙏🙏

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ