Advertisement
ಕೆ.ಎನ್.ಲಾವಣ್ಯ ಪ್ರಭಾ ಬರೆದ ನಾಲ್ಕು ಕವಿತೆಗಳು

ಕೆ.ಎನ್.ಲಾವಣ್ಯ ಪ್ರಭಾ ಬರೆದ ನಾಲ್ಕು ಕವಿತೆಗಳು

೧. ನೀನಿಲ್ಲಿ ಬಂದು ಹೋದೆ

ರಾತ್ರಿ ಸುದೀರ್ಘವೆನಿಸಿದಾಗಲೆಲ್ಲಾ
ನಿದ್ದೆಯಿಂದೆದ್ದು ಕುಳಿತು ಬರೆಯುತ್ತಿರುವೆ
ನಿನ್ನನ್ನು ಕುರಿತೇ..

ನೀನಲ್ಲಿ ಮಾಗಿಯ ಕೊರೆವ
ಚಳಿಯಲ್ಲಿ ಬೆಚ್ಚಗೆ ಹೊಚ್ಚಿ
ಮಲಗಿರಬಹುದೇ?
ಕನಸುಗಳಲ್ಲಿ ಅಲೆಯುತ್ತಿರಬಹುದೇ
ಕವಿತೆಯೊಳಗಿರುವ ನನ್ನನ್ನು
ಹುಡುಕಿಕೊಂಡೇ..?
ಅಥವಾ ಇದೇ ಹೊತ್ತಿಗೆ
ನೀನೂ ಎದ್ದು ಕುಳಿತು
ಯಾವ ಕವಿತೆಯ ಸಾಲುಗಳನ್ನೋ
ಗುನುಗುತ್ತಾ ನನ್ನನ್ನು
ಕಲ್ಪಿಸಿಕೊಳ್ಳುತ್ತಿರಬಹುದೇ?

ನೀನು ಯಾರಾದರೂ ಆಗಿರು
ಯಾವ ಊರು ದೇಶದಲ್ಲಾದರೂ ಇರು
ಯಾವುದೇ ಬಣ್ಣ ಭಾಷೆಯವನಾಗಿರು
ನಾವೆಂದೂ ಒಮ್ಮೆಯೂ
ಭೇಟಿಯಾಗದಿದ್ದರೂ
ಪರಸ್ಪರ ಮಾತಿಲ್ಲದಿದ್ದರೂ
ಹೀಗೆ..  ಈ ರಾತ್ರಿಯಲ್ಲಿ ಎದ್ದು ಕುಳಿತು
ನಿನ್ನನ್ನೇ ಧ್ಯಾನಿಸುತ್ತಾ ಬರೆಯುತ್ತಿರುವ
ಸಾಲುಗಳನ್ನೇ ಅಲ್ಲಿ ಇದೇ ಹೊತ್ತಲ್ಲೇ
ನಿದ್ದೆ ತೊರೆದು ನೀನು
ಎದೆಯಾಳಕ್ಕಿಳಿಸಿಕೊಂಡು
ಧ್ಯಾನಿಸುತ್ತಿರುವ ಈ ಕವಿತೆ
ಅಪರಿಚಿತ ಕ್ಷಣಗಳಲ್ಲೂ ನಮ್ಮಿಬ್ಬರನ್ನೂ
ಭೇಟಿಯಾಗಿಸಿ ಒಂದಾಗಿಸಿರುವುದೆಂದೇ
ಭಾವಿಸಿ ಮತ್ತೆ ಮತ್ತೆ
ಬರೆಯುತ್ತಲೇ ಸನಿಹವಾಗಿಸುತ್ತೇನೆ
ಈ ಘಳಿಗೆಯನ್ನು
ಹೀಗೆ…

ಈಗ…ಈಗಷ್ಟೇ
ನನ್ನ ರೂಮಿನ ಕಿಟಕಿಯ ನೀಲಿ ಪರದೆ
ಒಮ್ಮೆ ಸಣ್ಣಗೆ ಅಲುಗಾಡಿದ್ದು
ಗಮನಿಸುತ್ತಿರುವೆ..
ಅರೇ…
ನೀನಿಲ್ಲಿ ಕ್ಷಣ ಬಂದು ಹೋದೆ !

ನನ್ನೀ ಕೊರಳಿನ ಮುತ್ತಿನ ಹಾರ
ಮೆಲ್ಲಗೆ ಸರಿದಾಡುತ್ತಿದೆ….

೨. ಗಾಢ ಪ್ರೇಮಿಗಳು

ಬಿಸಿಲ ಬೇಗೆ ತಣಿಸುವಂತೆ
ಈ ಮುಸ್ಸಂಜೆ ಮಳೆ
ಹನಿದು ನಿಂತಾಗ
ಒಳಗಿನ್ನಷ್ಟು ಧಗೆ ಹೆಚ್ಚಿ
ಹೊರಗಿನ ಕತ್ತಲೆಗೊರಗಿ
ಕೂತಿದ್ದೇನೆ.

ಇಲ್ಲಿ ಕತ್ತಲಾದಾಗ
ಅಮೆರಿಕೆಯಲ್ಲಿ ಬೆಳಗು
ಸೂರ್ಯ ಮುಳುಗುವುದು
ಹುಟ್ಟುವುದು ನಾವೇ ಹೆಣೆದ ಕತೆ
ಇಲ್ಲಿ ನೀನಿಲ್ಲದಿದ್ದರೂ ಅಲ್ಲೆಲ್ಲೋ
ನೀನಿದ್ದೀ ಎಂಬುದಂತೂ ಸತ್ಯ.

ಬೆಳಕಿನ ದಡಬಡ ಧಾವಂತ
ಅಸ್ಪಷ್ಟ ಆತಂಕದಲ್ಲೂ
ಮಾತಾಡಿ ನಕ್ಕು
ಒಮ್ಮೆ ಹನಿಗಣ್ಣಾಗಿ
ಮತ್ತೊಮ್ಮೆ ಹುಸಿಮುನಿದ
ಇವಳೆದೆಯ ನೋವನ್ನು
ಕಂಡೂ ಕಾಣದಂತೆ
ನಿರ್ಲಕ್ಷ್ಯದಿಂದ ಸೀದಾ ನೀನೆದ್ದು
ಹೋದ ಮಾತಿಲ್ಲದ ರಾತ್ರಿಯ
ನೀರವ ಮೌನದಲ್ಲಿ ಅದೆಷ್ಟು
ಕವಿತೆಗಳ ಹುಟ್ಟು!

ಬೆಳಕು ಭ್ರಮೆ… ಕತ್ತಲೆ ಸತ್ಯ
ನಿನ್ನದೇ ನುಡಿ ಅನುರಣಿಸುತ್ತಿದೆ
ಬೆಳಕಿನಲ್ಲಿ ನನ್ನ ಸೆಳೆದ
ನಿನ್ನ ಚಹರೆ ಮತ್ತು
ನಿನ್ನದೇ ಗೈರುಹಾಜರಿಯ ಕತ್ತಲಲ್ಲಿ
ಹೊಳೆದ ನನ್ನ ಕವಿತೆಗಳು
ಒಂದೇ ಮಾತನು ಹೇಳುತಿವೆ…

ತೊರೆದು ಹೋದವನು ಲೋಕ
ಸುತ್ತಿ ದಣಿದು ಬಂದು
ಮತ್ತದೇ ಮತ್ತಿನಲಿ
ತೊದಲುತ್ತಾ ಕನವರಿಸುತ್ತಿರುವ
ಹೆಸರು ನನ್ನದೇ ಎಂದು
ಖಚಿತವಾದ ಮೇಲೆ
ಸೇತುವೆಯೇ ಅಸಾಧ್ಯವಾದ
ಎರಡೂ ತೀರದಲ್ಲಿ ನಿಂತ
ನಮ್ಮಿಬ್ಬರಿಗೂ ಇರುವ ಆಸರೆ
ನದಿಯೊಂದೇ.

“ಸಣ್ಣದೊಂದು ವಿರಹ
ಮತ್ತು ವಿಷಾದ ಇದ್ದಾಗ
ಪ್ರೇಮ ಗಾಢವಾಗುತ್ತದೆ”
ಖ್ಯಾತ ಕವಿಯೊಬ್ಬರ ಉವಾಚ

ಅನಿಸುತ್ತಿದೆ ನನಗೆ…
ಈಗ ನಿಜಕ್ಕೂ
ನಾವಿಬ್ಬರೂ ಗಾಢ ಪ್ರೇಮಿಗಳು

೩. ಹಳದಿ ಹೂವಿನ ಮರ

ನಾಲ್ಕು ಹೆಜ್ಜೆ ಹಿಂದಿಟ್ಟು ಹೊಸ್ತಿಲೊಳಗೇ
ನಿಂತಿದ್ದವಳೀಗ ಕದಲುತ್ತಿದ್ದಾಳೆ ಇಂಚಿಂಚೇ..
ಎಣೆಯಿಲ್ಲದ ಬೆಳಕ ಸೆಳೆತಕ್ಕೆ
ಹತ್ತು ಹೆಜ್ಜೆಯಾದರೂ ಮುಂದಿರಿಸುವ
ಸಾಹಸ ಈಗವಳದು.

ಸೀರೆ ನೆರಿಗೆಗಳ ಬಳುಕಿಸಿ
ಮುಂದಡಿಯಿಟ್ಟ ಕಾಲ್ಗೆಜ್ಜೆ ಸದ್ದೀಗ
ಹೊಸ್ತಿಲ ದಾಟಿ ಅಂಗಳದ ರಂಗೋಲಿ ಸವರಿ
ರಸ್ತೆಗಿಳಿದು ಮುಂದೆ ಸಾಗಿ
ಸೀದಾ ತನ್ನ ಮನೆಯ ಬೀದಿ ತಿರುವಲ್ಲೇ
ಬಂದು ನಿಂತಿದ್ದಾಳೆ!

ಮೂರು ದಾರಿಗಳು ಸೇರುವ
ಈ ತಿರುವಿನ ಬದಿಯಲ್ಲೇ
ಬೇಸಿಗೆಯ ದಿನಗಳಲ್ಲಿ ಕಣ್ಣು ಕೋರೈಸುವ
ಮೈಪೂರಾ ಹಳದಿ ಹೂಗಳ ಹೊತ್ತ
ಬಂಗಾರ ಬಣ್ಣದ ಬೆಳಕ ಮರವನ್ನು
ನಿತ್ಯ ತನ್ನ  ಬಾಲ್ಕನಿಯಲ್ಲಿ ನಿಂತೇ
ಆಕೆ  ಕಣ್ತುಂಬಿಸಿಕೊಳ್ಳುವುದನು
ನೀವೊಮ್ಮೆ ನೋಡಲೇಬೇಕು

ಮಿರಿಮಿರಿ ಮಿಂಚುವ  ಹಳದಿ ಹೂವಿನ
ಮರದಡಿಯೇ ನಿಂತು ತನ್ಮಯತೆಯಿಂದ
ದಿಟ್ಟಿಸುತ್ತಿದ್ದಾಳೆ ಮರವನ್ನೇ…
ಧ್ಯಾನಿಸುತ್ತಿದ್ದಾಳೆ ಅವನನ್ನೇ….
ಅವಾ ಬಂದು ನಿಂತು ನಕ್ಕು ಹೋದ
ಘಳಿಗೆಗಳನ್ನೇ….

ಪ್ರೇಮದ ಮತ್ತಿನಲ್ಲಿದ್ದ ಅವಳ ಕಂಗಳ
ಚುಂಬಕ ನೋಟಕ್ಕೆ ಕಂಪಿಸುವ ಮರದ
ಗೊಂಚಲಿಂದ ಒಂದೊಂದೇ
ಹಳದಿ ಹೂಗಳುದುರಿ
ಅವಳ ನೆತ್ತಿ ಹಣೆ ಗಲ್ಲ ಕೊರಳ
ತಡವಿ ಮುದ್ದಿಸುತ್ತಾ
ಮರದ ನೆರಳಿನ ತೋಳತೆಕ್ಕೆಯಲ್ಲಿ
ಅರಳುತ್ತಿದೆ ಹೀಗೆ… ಹೊಸ ಕವಿತೆ
ಎಲ್ಲೋ ಹೇಗೋ ತಂಪಾಗಿ ಕುಳಿತೇ
ಬೇಸಿಗೆಯ ಬಿರುಬಿಸಿಲಲೂ
ಆತ ಬರೆಯುತ್ತಿರಬಹುದೇ
ಅಪರೂಪದ ಪ್ರೇಮ ಕಥೆ?

೪. ಪ್ರೇಮ

ಪ್ರೇಮ
ಪ್ರೇಮಿಗಳಿಬ್ಬರ
ಸಮಯ ಸಂಸಾರ ಸಾಧನೆಗಳ
ತ್ಯಾಗ ಕೇಳುತ್ತದೆ
ಪ್ರೇಮಿಸುತ್ತಿದ್ದೀರೆಂಬುದಕ್ಕೆ
ಪದೆ ಪದೆ
ಸಾಕ್ಷಿ ಕೇಳಿ ಕೆಣಕಿ ಕಾಡುತ್ತದೆ

ಪ್ರೇಮ
ಪ್ರೇಮದ
ಅಮಲೇರಿಸಿಕೊಂಡವರನು
ಜಗತ್ತಿನೆದುರು
ಖುಲ್ಲಂಖುಲ್ಲಾ
ಬೆತ್ತಲು ನಿಲ್ಲಲು
ಬೆದರಿಕೆಯೊಡ್ಡುತ್ತದೆ

ಪ್ರೇಮ
ಪ್ರೇಮದಲ್ಲಿರುವವರು
ಪರಸ್ಪರ ತಮ್ಮ ಕಣ್ಣೆರಡೂ
ಕಟ್ಟಿಕೊಂಡು ಕತ್ತಲಲ್ಲಿ
ಮಿಂಚುಹುಳವನ್ನು ಹಿಡಿಯುವಂತೆ
ಆದೇಶಿಸುತ್ತದೆ

ಪ್ರೇಮ
ಹುಚ್ಚು ಸಾಹಸಗಳಿಗೆ ಹಚ್ಚಿ
ಜೀವ ದಣಿಸುತ್ತದೆ
ಲೋಕ ಹಚ್ಚುವ
ಖಾಯಂ ಹುಚ್ಚರೆಂಬ
ಹಣೆಪಟ್ಟಿಗೆ ಅಣಿಗೊಳಿಸುತ್ತದೆ

ಇಷ್ಟೆಲ್ಲದರ ನಡುವೆಯೂ
ಪ್ರೇಮ
ಎರಡು ಹೃದಯಗಳನ್ನು
ನೋವು ನಲಿವಿನಗ್ಗಿಷ್ಟಿಕೆಯಲ್ಲಿ
ಬೇಯಿಸಿ ಬಾಗಿಸಿ
ಪುಟಕ್ಕಿಟ್ಟ
ಬಂಗಾರವಾಗಿಸುತ್ತದೆ

ಪ್ರೇಮ
ಪ್ರೇಮವನ್ನು ಕೂಡಿಸಿ
ಧ್ವೇಷವನ್ನು ಕಳೆಯಿಸಿ
ಇಬ್ಬರನ್ನೊಂದಾಗಿಸಿ
ಅದ್ವೈತವಾಗುತ್ತದೆ

ಪ್ರೇಮ
ಪ್ರೇಮಿಗಳನ್ನು
ಇತಿಹಾಸದ ಪುಟಗಳಲ್ಲಿ
ಅಮರರಾದವರ ಕೆಲವೇ
ಕೆಲವರ ಪಟ್ಟಿಗೆ ಸೇರಿಸಿ
ದಾಖಲೆಯಾಗಿಸುತ್ತದೆ

ಪ್ರೇಮ
ಕವಿಗೊಲಿದು
ಗಜಲ್, ಶಾಯರಿ, ಕವಿತೆ
ಖಂಡಕಾವ್ಯ ಮಹಾಕಾವ್ಯ
ದ್ವಿಪದಿ ತ್ರಿಪದಿ ಚೌಪದಿ….
ಅಷ್ಟಪದಿಯ ಕಬಂಧ
ಬಾಹುಗಳನ್ನು ಚಾಚಿಕೊಂಡೇ
ಸಹಸ್ರಪದಿಯಾಗಿ
ಪ್ರೇಮಿಗಳ ಹೃದಯದೂರಿನ
ದಾರಿ ಹೆದ್ದಾರಿ ಒಳದಾರಿ
ಗಲ್ಲಿಗಲ್ಲಿಗಳಲ್ಲಿ
ತರಹೇವಾರಿ ರೂಪ ತಾಳಿ
ನಿರಂತರ ಚಲಿಸುತ್ತಲೇ
ಪ್ರೇಮ ಬದುಕುತ್ತದೆ
ಮತ್ತು
ಬದುಕಿಸುತ್ತದೆ
ಪ್ರೇಮಿಗಳಿಬ್ಬರನ್ನೂ ಶಾಶ್ವತವಾಗಿ.

 

About The Author

ಕೆ. ಎನ್. ಲಾವಣ್ಯ ಪ್ರಭಾ

ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್.  ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ.  "ಹುಟ್ಟಲಿರುವ ನಾಳೆಗಾಗಿ", "ಗೋಡೆಗಿಡ", "ನದಿ ಧ್ಯಾನದಲ್ಲಿದೆ" (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು "ಸ್ಪರ್ಶ ಶಿಲೆ" ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ‌ ಹವ್ಯಾಸಗಳು.

1 Comment

  1. ಲಾವಣ್ಯ ಪ್ರಭಾ

    ಧನ್ಯವಾದಗಳು

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ