ಶುಮಾಶೆರ್ ಹೇಳುವುದೇನೆಂದರೆ, ನಾವು ಮನುಷ್ಯರು ಪ್ರತಿಯೊಬ್ಬ ವ್ಯಕ್ತಿಗೂ ಸುಲಭವಾಗುವಂತೆ ಅವರ ಜೀವನ ಗುಣಮಟ್ಟ ವೃದ್ಧಿಸುವುದಕ್ಕೆ ಅನೂಕೂಲವಾಗುವಂತೆ ತಳಮಟ್ಟದಲ್ಲಿ ಪುಟ್ಟಪುಟ್ಟ ಮತ್ತು ಅನೇಕ ಬಹುತ್ವಗಳನ್ನು ಒಳಗೊಂಡ ತಾಂತ್ರಿಕತೆಗಳನ್ನು, ಕ್ರಮಗಳನ್ನು ಒಗ್ಗಿಸಿಕೊಳ್ಳಬೇಕು. ‘ದೊಡ್ಡದು’ ಅಥವಾ ಹಿರಿದು ಮುಖ್ಯ ಎನ್ನುವ ಆಲೋಚನಾಪರಿಯನ್ನು ಬದಲಿಸಿಕೊಳ್ಳಬೇಕು. ಅಂದರೆ ದೊಡ್ಡಮಟ್ಟದ ಅಭಿವೃದ್ಧಿಗಿಂತಲೂ ಸಣ್ಣ ಮಟ್ಟದ ಸ್ಥಳೀಯ ಅಭಿವೃದ್ಧಿ ಯೋಜನೆಗಳು ಜನರಿಗೆ ಹೆಚ್ಚು ಪ್ರಯೋಜನಕಾರಿ. ಇದೇ ಮಾತನ್ನು ಮಹಾತ್ಮ ಗಾಂಧಿ ಅವರೂ ಹೇಳಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ವಸಂತ ಬಾಗಿಲಿಗೆ ಬಂದು ಕದ ತಟ್ಟುತ್ತಿದೆ. ಈ ವಾರ ಒಂದಷ್ಟು ಮಳೆ ಬಿದ್ದು ಭೂಮಿ ತಂಪಾಗಿ ನೆಲ ಹದವಾಗಿದೆ. ನೆಲದ ಮಣ್ಣಲ್ಲಿ ಕಾವೇರುತ್ತಿದೆ ಅಂದರೆ ತರಕಾರಿ ಗಿಡಗಳ ಹೊಸ ಬೀಜಗಳನ್ನು ಬಿತ್ತುವುದು. ಮತ್ತು ಈಗಾಗಲೆ ಪುಟ್ಟಪುಟ್ಟ seedling ಟ್ರೇ ಗಳಲ್ಲಿ ಬಿತ್ತಿದ್ದ ಬೀಜಗಳು ಮೊಳಕೆಯೊಡೆಡಿದ್ದು ಆ ಎಳೆಗಿಡಗಳನ್ನು ಮಣ್ಣಿಗೆ ಸ್ಥಳಾಂತರಿಸುವುದು. ನಮ್ಮ ಕೈತೋಟ ಗುಂಪಿನ ಸದಸ್ಯರು ಎರಡೂ ಕೆಲಸಗಳಲ್ಲಿ ನಿರತರಾಗಿದ್ದಾರೆ. ಮೂರು ವಾರಾಂತ್ಯಗಳ ಹಿಂದೆ ನಡೆದ ಭೇಟಿಯಲ್ಲಿ ತಾವು ಸಂರಕ್ಷಿಸಿರುವ ಬೀಜಗಳ, ಬೆಳೆಸಿರುವ ಸಸಿಗಳ ಹಂಚಿಕೆ ಆಯ್ತು.
ನಮ್ಮನೆಯ ವಯಸ್ಸಾಗುತ್ತಿರುವ ನಿಂಬೆ ಮರದ ತುಂಬೆಲ್ಲಾ ಹೊಸಚಿಗುರು ಮತ್ತು ಹೂ ರಾಶಿ. ಆ ಕಡೆ ಪಕ್ಕದಲ್ಲಿ ಬೇಲಿಗುಂಟ ಹಬ್ಬಿರುವ ಚೈನೀಸ್ ಜಾಜಿ ಹೂ ಮತ್ತು ಮೊಗ್ಗುಗಳ ಚೆಲುವು, ಸುಗಂಧ. ಚೆನ್ನಾಗಿ ಬಿಸಿಲು ಬೀಳುವ ಕಡೆ ನೆಟ್ಟಿರುವ ಕಬ್ಬು ಉದ್ದಕ್ಕೆ ಬೆಳೆಯುತ್ತಿದೆ. ಇದರ ಒತ್ತಾಸೆ ಅದರ ಪಕ್ಕದಲ್ಲಿರುವ ಮೆಣಸಿನಕಾಯಿ ಗಿಡಕ್ಕೆ ಕಷ್ಟ ತಂದಿದೆ. ಆ ಪುಟಾಣಿ ಗಿಡ ಬಾಡುತ್ತಿದೆ. ಅದನ್ನು ಸ್ಥಳಾಂತರಿಸಬೇಕೆಂದರೆ ಸುತ್ತಲೂ ಇರುವ ಬೇರೆ ಗಿಡಗಳಿಗೆ ಧಕ್ಕೆಯಾಗುತ್ತದೆ. ಈ ಇಬ್ಬಂದಿಯಿಂದ ಕಬ್ಬು ಬೇಕೊ ಇಲ್ಲಾ ಮೆಣಸಿನಕಾಯಿಗಿಡ ಬೇಕೊ ಎನ್ನುವ ಪ್ರಶ್ನೆ ಎದ್ದಿದೆ.
ಒಮ್ಮೊಮ್ಮೆ ಇಂತಹ ಪ್ರಶ್ನೆಗಳು ತತ್ವಜ್ಞಾನಕ್ಕೂ, ದಾರ್ಶನಿಕತೆಗೂ ಇಲ್ಲವೆ ತಾರ್ಕಿಕ ಚರ್ಚೆಗೂ ತಳುಕು ಹಾಕಿಕೊಂಡು ಬಿಡುತ್ತವೆ. ಜೀವನದಲ್ಲಿ ಯಾವುದು ಮುಖ್ಯ ಎನ್ನುವ ಜಿಜ್ಞಾಸೆ. ಇದಕ್ಕೂ ಮೆಣಸಿನಕಾಯಿ ಗಿಡಕ್ಕೂ ಎತ್ತಣ ಸಂಬಂಧ ಎನಿಸಬಹುದು.

(ಇ ಎಫ್ ಶುಮಾಶೆರ್)
ನಿಮಗೆ Small Is Beautiful ಎನ್ನುವ ಪುಸ್ತಕದ ಬಗ್ಗೆ ತಿಳಿದಿರಬಹುದು. ಈ ಪುಸ್ತಕದ ಲೇಖಕ ಇ ಎಫ್ ಶುಮಾಶೆರ್. ೧೯೭೩ರಲ್ಲಿ ಪ್ರಕಟವಾದ ಈ ಪುಸ್ತಕವನ್ನು ನಾನು ಕೊಂಡು ಓದಿದ್ದು ೧೯೯೦ರ ದಶಕದಲ್ಲಿ. ಆ ಕಾಲದಲ್ಲಿ ನಾನು ಬೆಂಗಳೂರಿನ ಬ್ರಿಗೇಡ್ ರಸ್ತೆಯ ಒಂದು ಸಣ್ಣ ಓಣಿಯ ತುದಿಯಲ್ಲಿ ಇದ್ದ Select Bookhouse ಗೆ ತುಂಬಾ ಹೋಗುತ್ತಿದ್ದೆ. ಮೂರ್ತಿ ಅವರು ಸ್ಥಾಪಿಸಿ ನಡೆಸುತ್ತಿದ್ದ ಈ ಅಂಗಡಿಯ ಪರಿಚಯವಾದದ್ದು ಆಕಸ್ಮಿಕವಾಗಿ. ಹೇಗೆಂದರೆ, ಫೋಟೋಗ್ರಫಿ ಗೀಳಿದ್ದ ನನಗೆ ಅದು ಹೇಗೊ ಶ್ರೇಷ್ಠ ಫೋಟೋಗ್ರಾಫರ್ ಆದ ಶ್ರೀ ಅಲ್ಲಮ ಪ್ರಭು ಅವರ ಪರಿಚಯವಾಗಿತ್ತು. ಅತ್ಯುತ್ತಮ ನಿಸರ್ಗ-ಛಾಯಾಚಿತ್ರ ಪರಿಣಿತರಾದ ಅಲ್ಲಮ ಪ್ರಭು ಅಪ್ಪಟ ಕನ್ನಡಿಗರು. ಇವರ ಪ್ರಭು ಫೋಟೋಸ್ ಸ್ಟುಡಿಯೋ-ಮನೆ ಮತ್ತು Select Bookhouse ಅಕ್ಕಪಕ್ಕದಲ್ಲಿತ್ತು. ಫೋಟೋಗ್ರಫಿ ಲೆಸೆನ್ಸ್ ಗೆಂದು ಸ್ಟುಡಿಯೋಗೆ ಹೋದಾಗ ಕಣ್ಣಿಗೆ ಬಿದ್ದ ಪುಸ್ತಕದಂಗಡಿ ಕೈಬೀಸಿ ಕರೆದಿತ್ತು. ಫೋಟೋಗ್ರಫಿ ಪಾಠ-ಕಲಿಕೆ ಕೈಬಿಟ್ಟು ಪುಸ್ತಕಗಳ ಮಧ್ಯೆ ಕೂತು ಗಂಟೆಗಟ್ಟಲೆ ಕಳೆದುಹೋಗುವುದು ಪರಿಪಾಠವಾಯ್ತು. ಹಾಗೊಮ್ಮೆ ಕೈಸೇರಿದ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಪುಸ್ತಕವನ್ನು ಅಂಗಡಿಯಲ್ಲೇ ಕೂತು ಓದುತ್ತಾ ಹಾಗೆ ಆ ಪ್ರಬಂಧಗಳಲ್ಲಿದ್ದ ವಿಷಯಗಳ ಬಗ್ಗೆ ಮೂರ್ತಿ ಅವರ ಜೊತೆ ಮಾತನಾಡಿದ್ದು ಇನ್ನೂ ನೆನಪಿದೆ. ಅಂದ ಹಾಗೆ ೨೦೨೩ರಲ್ಲಿ ಅನೇಕರು ಈ ಪುಸ್ತಕದ ೫೦ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಇಪ್ಪತ್ತನೇ ಶತಮಾನದ ಅತ್ಯಂತ ಪ್ರಮುಖ ವಿಚಾರಗಳಲ್ಲಿ ಇ ಎಫ್ ಶುಮಾಶೆರ್ ಆಲೋಚನೆಗಳು ಸೇರಿವೆ. ಆತ ಹೇಳಿದ ಹಲವಾರು ವಿಷಯಗಳು ಈಗ ಕಾರ್ಯರೂಪಕ್ಕೆ ಬಂದಿವೆ. ಉದಾಹರಣೆಗೆ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (Sustainable Development Goals).
ಈ ಪುಸ್ತಕದಲ್ಲಿರುವ ಪ್ರಬಂಧಗಳಲ್ಲಿ ಹಲವಾರು ಜಿಜ್ಞಾಸೆಗಳ ಚರ್ಚೆಯಾಗುತ್ತದೆ. ಶುಮಾಶೆರ್ ಹೇಳುವುದೇನೆಂದರೆ, ನಾವು ಮನುಷ್ಯರು ಪ್ರತಿಯೊಬ್ಬ ವ್ಯಕ್ತಿಗೂ ಸುಲಭವಾಗುವಂತೆ ಅವರ ಜೀವನ ಗುಣಮಟ್ಟ ವೃದ್ಧಿಸುವುದಕ್ಕೆ ಅನೂಕೂಲವಾಗುವಂತೆ ತಳಮಟ್ಟದಲ್ಲಿ ಪುಟ್ಟಪುಟ್ಟ ಮತ್ತು ಅನೇಕ ಬಹುತ್ವಗಳನ್ನು ಒಳಗೊಂಡ ತಾಂತ್ರಿಕತೆಗಳನ್ನು, ಕ್ರಮಗಳನ್ನು ಒಗ್ಗಿಸಿಕೊಳ್ಳಬೇಕು. ‘ದೊಡ್ಡದು’ ಅಥವಾ ಹಿರಿದು ಮುಖ್ಯ ಎನ್ನುವ ಆಲೋಚನಾಪರಿಯನ್ನು ಬದಲಿಸಿಕೊಳ್ಳಬೇಕು. ಅಂದರೆ ದೊಡ್ಡಮಟ್ಟದ ಅಭಿವೃದ್ಧಿಗಿಂತಲೂ ಸಣ್ಣ ಮಟ್ಟದ ಸ್ಥಳೀಯ ಅಭಿವೃದ್ಧಿ ಯೋಜನೆಗಳು ಜನರಿಗೆ ಹೆಚ್ಚು ಪ್ರಯೋಜನಕಾರಿ. ಇದೇ ಮಾತನ್ನು ಮಹಾತ್ಮ ಗಾಂಧಿ ಅವರೂ ಹೇಳಿದ್ದರು.
ಸರಿ, ವಾಪಸ್ ನನ್ನ ಜಿಜ್ಞಾಸೆಗೆ ಬರುತ್ತೀನಿ – ಕಬ್ಬು ಮುಖ್ಯವೋ ಇಲ್ಲಾ ಮೆಣಸಿನಕಾಯಿ ಗಿಡ ಮುಖ್ಯವೋ? ದೊಡ್ಡದು Vs ಸಣ್ಣದು. ಇದು ಆಕಾರಕ್ಕೆ, ಗಾತ್ರಕ್ಕೆ ಅನ್ವಯವಾಗುತ್ತದೆಯೇ ಹೊರತು ಅದಕ್ಕೂ ಮುಂದೆ ಸಾಗಿ ನನ್ನ ಜೀವನದ ಗುಣಮಟ್ಟವನ್ನು ಯಾವುದು ಹೆಚ್ಚಿಸುತ್ತದೆ ಎನ್ನುವ ಪ್ರಶ್ನೆಯ ಅವಲೋಕನ ಮಾಡಬೇಕು. ಎರಡರಲ್ಲಿ ಒಂದರ ಆಯ್ಕೆ ಪ್ರಶ್ನೆ ಬಂದಾಗ ನಾನು ಕಬ್ಬಿನ ಗಿಡವನ್ನೇ (ಹುಲ್ಲು) ಆರಿಸಿಕೊಂಡೆ. ಏಕೆಂದರೆ ನಮ್ಮ ಬ್ರಿಸ್ಬೇನ್ ನಗರದಲ್ಲಿ ತಿನ್ನಲು ಕಬ್ಬು ಸಿಗುವುದು ಕಷ್ಟ. ಕಬ್ಬಿನಹಾಲು ಸಿಗುತ್ತದೆ, ಆದರೆ ಬಲು ದುಬಾರಿ. ಅದೂ ಸಾಲದೇ ನಮ್ಮನೆಯಿಂದ ಅರ್ಧ ಗಂಟೆ ಪ್ರಯಾಣಿಸಿದರೆ ಕಬ್ಬಿನಹಾಲು ಕೊಳ್ಳಲು ಸಾಧ್ಯ.
ಇದನ್ನೆಲ್ಲಾ ಅವಲೋಕಿಸಿದರೆ, ನಮ್ಮನೆಯಲ್ಲಿ ಸಾವಯವ ಪದ್ಧತಿಯಲ್ಲಿ ರಾಸಾಯನಿಕಗಳಿಲ್ಲದೆ ಮೊದಲಬಾರಿ ಚೆನ್ನಾಗಿ ಕಬ್ಬು ಬೆಳೆಯುತ್ತಿರುವುದು ನನ್ನ ವೈಯಕ್ತಿಕ ಸಂತೋಷದ ಮಟ್ಟವನ್ನು ಹೆಚ್ಚಿಸಿದೆ. ಇದು ಆರೋಗ್ಯಕ್ಕೆ ಮುಖ್ಯ. ಇನ್ನು ಮೆಣಸಿನಕಾಯಿ ವಿಷಯಕ್ಕೆ ಬಂದರೆ ಮೆಣಸಿನಕಾಯಿ ಎಲ್ಲೆಲ್ಲೂ ಸಿಗುತ್ತದೆ. ಕೊರತೆಯಿಲ್ಲ. ನಮ್ಮ ಕೈತೋಟ ಗುಂಪಿನ ಸದಸ್ಯರಿಗೆ ಅವರು ಬೆಳೆಯುವ ಮೆಣಸಿನಕಾಯಿ ವಿಪುಲತೆ ಬಗ್ಗೆ ಚಿಂತೆ. ಅವರುಗಳು ಖಾರ ತಿನ್ನುವುದು ಇಲ್ಲ ಎಂದಾದ ಮೇಲೆ ಅಷ್ಟೊಂದು ಚಿಲ್ಲೀಸ್ ಅವರಲ್ಲಿ ಆತಂಕ, ಚಿಂತೆ ಹುಟ್ಟಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮಗೆ ನಗು ಬರಬಹುದು ಆದರೆ, ನನ್ನ ಮಟ್ಟದಲ್ಲಿ ಹೀಗೆ ತರ್ಕ ಓಡುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ತರಗತಿಯಲ್ಲಿ ಮಾತನಾಡುವಾಗ ನಿಜವಾಗಿಯೂ ಈ ಉದಾಹರಣೆಗಳು ಉಪಯೋಗಕ್ಕೆ ಬರುತ್ತವೆ.
ಮತ್ತೊಂದು ಜಿಜ್ಞಾಸೆಯ ಬಗ್ಗೆ ಇಲ್ಲಿ ಬರೆಯಲೇ ಬೇಕು. ಏಕೆಂದರೆ ಅದು ಆಸ್ಟ್ರೇಲಿಯನ್ನರಿಗೆಲ್ಲಾ ಸೇರಿದ್ದು, ಬಹು ದೊಡ್ಡ ವಿಷಯ. ಅದೇನೆಂದರೆ ಈಗ ಆಸ್ಟ್ರೇಲಿಯಾದಲ್ಲಿ, ನಮ್ಮ ರಾಣಿರಾಜ್ಯದಲ್ಲಿ Magpie swooping season. ಬೇರೆ ದೇಶಗಳಲ್ಲಿ ಇಂತಹುದೊಂದು ದೊಡ್ಡದಾದ ರಾಷ್ಟ್ರೀಯಮಟ್ಟದ ಬಹಳ ಗಹನವಾದ ವಿಷಯ ಇದೆಯೋ ಇಲ್ಲವೋ ನಾಕಾಣೆ. ನಮ್ಮಲ್ಲಂತೂ ಇದೆ, ನೋಡಿ.
ಏನಿದು Magpie swooping season ಅಂತೀರಾ. ಆಗಸ್ಟ್ ತಿಂಗಳಿಂದ ನವೆಂಬರ್ ತಿಂಗಳವರೆಗೆ magpie ಹಕ್ಕಿಗಳ breeding ಸೀಸನ್. ಇವು ಗಾತ್ರದಲ್ಲಿ ಕಾಗೆಯಂತೆ, ಕಪ್ಪು ಮೈಯಲ್ಲಿ ಬಿಳಿಬಣ್ಣದ ಪಟ್ಟೆಗಳು. ಇವು ಸರ್ವಾಂತರ್ಯಾಮಿ ಹಕ್ಕಿಗಳು. ಮನುಷ್ಯರ ನಗರ, ಪಟ್ಟಣ, ಹಳ್ಳಿ ಎನ್ನುವ ಸರಹದ್ದುಗಳು ಇವಕ್ಕೆ ಹಿಡಿಸುವುದಿಲ್ಲ. ನಗರ ಮಧ್ಯದಲ್ಲಿರುವ ಒಂದು ಮರದಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡುವಾಗ ಅಕ್ಕಪಕ್ಕ ಯಾರಾದರೂ ಸುಳಿದಾಡಿದರೆ ಇವಕ್ಕೆ ಎಲ್ಲಿಲ್ಲದ ಕೋಪ ಬರುತ್ತದೆ. ತಮ್ಮ ಸುಖಸಂಸಾರಕ್ಕೆ ತಾಪತ್ರಯ ಬಂತು ಎಂದೆನಿಸಿದರೆ magpie ಹಕ್ಕಿ ಹಾರಿಬಂದು (swooping) ನಮ್ಮ ತಲೆಮೇಲೆ ಕುಟುಕುತ್ತದೆ. ಹಾರಿಬರುವ ರಭಸಕ್ಕೆ ಅದರ ರೆಕ್ಕೆ ತಾಕಿದರೂ ನಮಗೆ ನೋವಾಗುತ್ತದೆ. ನನಗೆ ಇದರ ಅನುಭವ ಚೆನ್ನಾಗಿ ಆಗಿದೆ. ಕೆಲವರಿಗೆ ಅವರ ಮುಖಕ್ಕೆ, ಕಣ್ಣುಗಳಿಗೆ ಗಾಯವಾಗುತ್ತದೆ. ಹಾಗೆಂದು ನಾವು magpie ಬಗ್ಗೆ ಕೋಪ ಮಾಡಿಕೊಳ್ಳುವುದೇ? ಗೂಡು ಕಟ್ಟುವುದು, ಮೊಟ್ಟೆ ಇಟ್ಟು ಸಂತಾನ ಬೆಳೆಸುವುದು ಹಕ್ಕಿಗಳ ಆಜನ್ಮ ಹಕ್ಕು.
ಹೀಗಾಗಿ ಸರಕಾರಗಳು ಹೇಳುತ್ತವೆ, Magpie swooping season ನಲ್ಲಿ ಮರಗಳ ಬಳಿ ಹೋದರೆ ದೊಡ್ಡ ಹ್ಯಾಟ್ ಧರಿಸಿ, ಕಣ್ಣುಗಳಿಗೆ ತಂಪು ಕನ್ನಡಕ ಹಾಕಿಕೊಳ್ಳಿ. ಛತ್ರಿ ಹಿಡಿದು ಹೋಗಿ. ಸೈಕಲ್ ತುಳಿಯುತ್ತಿದ್ದರೆ magpie ಕಂಡಕೂಡಲೇ ಸೈಕಲ್ ನಿಂದ ಇಳಿದು ಸಾವಧಾನವಾಗಿ ತಲೆಬಗ್ಗಿಸಿಕೊಂಡು ನಡೆಯಿರಿ. Magpie Defence Zone ಎಂದು ಗುರುತುಮಾಡಿರುವ ಸ್ಥಳಗಳಲ್ಲಿ ಒಬ್ಬೊಬ್ಬರೇ ನಡೆದಾಡುವುದಕ್ಕಿಂತಲೂ ಚಿಕ್ಕಗುಂಪುಗಳಲ್ಲಿ ಹೋಗಿ. ಮಕ್ಕಳಿದ್ದರೆ ಅವರನ್ನು ನಿಮ್ಮಗಳ ಮಧ್ಯೆ ಇರಿಸಿಕೊಂಡು ನಡೆದಾಡಿ. ಎಳೆಮಕ್ಕಳಿರುವ pram ತಳ್ಳುತ್ತಾ ನಿಮ್ಮ ಮೊಬೈಲ್ ಫೋನ್‌ನಲ್ಲಿ ಕಳೆದುಹೋಗದೆ, ಮಗುವಿನ ರಕ್ಷಣೆ ಮಾಡಿಕೊಳ್ಳಿ. ಮುಖ್ಯವಾಗಿ ಸಾಧ್ಯವಾದರೆ Magpie Defence Zone ಹತ್ತಿರ ಹೋಗಲೇಬೇಡಿ. ಒಂದೊಮ್ಮೆ magpie ಹಕ್ಕಿ ತಲೆಮೇಲೆ ಹಾರಿಬಂತು ಎಂದಾಗ ತಲೆಹರಟೆ ಮಾಡದೆ, ಗಲಾಟೆ ಮಾಡದೆ ಶಾಂತಿಯಿಂದ ಜಾಗ ಖಾಲಿಮಾಡಿ.
ಆಸ್ಟ್ರೇಲಿಯಾದಲ್ಲಿ ಎಷ್ಟೋ ಜನರಿಗೆ ಈ ವಿಷಯ ಇನ್ನೂ ತಿಳಿದಿಲ್ಲ. ತಲೆಮೇಲೆ ಬಂದು magpie ನಿಂದ ಕುಕ್ಕಿಸಿಕೊಂಡವರ ಸಂಖ್ಯೆ ಬೇಕಾದಷ್ಟಿದೆ. Magpie ಮರಿ ಮಾಡುವ ಸೀಸನ್ ಬಗ್ಗೆ ತಿಳಿಯದವರು ಹಕ್ಕಿ ಬಂದು ತಲೆ ಮೇಲೆ ಹಾರಿದಾಗ ಗಾಬರಿಗೊಂಡು ಕಿರುಚಾಡಿ ಅರಚಾಡಿ ಕೈ ಬೀಸುವುದು, ಕಲ್ಲು ಹೊಡೆಯುವುದು, ಜನ ಸೇರುವುದು ಮಾಡುತ್ತಾರೆ. ಕೆಲ ಹೆಂಗಸರು, ಮಕ್ಕಳು ಅಳುತ್ತಾರೆ. ಇದೆಲ್ಲಾ ತಪ್ಪಬೇಕೆಂದರೆ ಪಕ್ಷಿಗಳಿಗಿರುವ ಹಕ್ಕುಗಳನ್ನು ಅರಿತು ಗೌರವಿಸಬೇಕು. ಅವುಗಳ ಜೀವನ ಗುಣಮಟ್ಟವನ್ನೂ ಕಾಪಾಡಬೇಕು. ನಮ್ಮಂತೆಯೇ ಪಕ್ಷಿಪ್ರಾಣಿಗಳು ನಿರ್ಭಯದಿಂದ ಮುಕ್ತವಾಗಿ ಓಡಾಡುವುದು, ಜೀವಿಸುವುದು ಅವುಗಳ ಜನ್ಮಸಿದ್ಧ ಹಕ್ಕು. ಅದು ಪ್ರಕೃತಿ ನಿಯಮ ಕೂಡ. ಅದಕ್ಕೆ ವಿರುದ್ಧವಾಗಿ ನಡೆದರೆ ನಮ್ಮ ಸುಸ್ಥಿರತೆಯೆ ಅಲ್ಲಾಡುತ್ತದೆ.
ಆದರೆ ನಮ್ಮಲ್ಲಿ ಎಷ್ಟು ಮಂದಿ ಹಾಗೆ ಪ್ರಾಣಿಪಕ್ಷಿಗಳನ್ನು ಗೌರವಿಸುತ್ತಾರೆ ಎನ್ನುವುದು ಅತ್ಯಂತ ಕ್ಲಿಷ್ಟವಾದ ಜಿಜ್ಞಾಸೆ. ನಮ್ಮ ಬಹಳ ಸಣ್ಣಗಿನ ವೈಯಕ್ತಿಕ ನಿರ್ಧಾರಗಳು ಎಷ್ಟೋ ಪ್ರಾಣಿಪಕ್ಷಿಗಳ ಹಿತರಕ್ಷಣೆ ಮಾಡುತ್ತವೆ. ಇದರಿಂದ ನಮ್ಮನ್ನು ನಾವೇ ಗೌರವಿಸಿಕೊಂಡಂತೆ ಆಗುತ್ತದೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.